ಗಂಧರ್ವರದೋ ಬಂದಿರುವರಿದೋ
ನಮ್ಮ ಹೂದೋಟಕೆ ನೋಡಮ್ಮಾ!
ಬಣ್ಣ ಬಣ್ಣದಾ ಕಣ್ಣು ಕಣ್ಣಿನಾ
ಸಿಂಗಾರ ಮಾಡಿಕೊಂಡಿಹರಮ್ಮಾ!
— ಅದೋ ನೋಡು ನೋಡಮ್ಮಾ !

ಮುಗುಳು ನಗುವರು! ಮಗುಳೆ ನೆಗೆವರು !
ಮಂದಾನಿಲಣ್ಣಗೆ ಬಾಗುವರು!
— ಅಗೋ ತಲೆದೂಗುವರು!
ನೋಡುವ ಕಣ್ಣಿಗೆ ಸವಿಯುವ ಹೃದಯಕೆ
ಹೊನ್ನಿನ ರಂಗನು ಮೆತ್ತುವರು!
ಮುತ್ತುಗಳೊತ್ತುವರು!

ಚಿಮ್ಮಿ ಚಿಮ್ಮಿ ಕುಣಿದಾಡುತ್ತಾ
ಕರೆವರೆನ್ನನೂ ಸನ್ನೆಮಾಡುತ್ತಾ. —
ಕೇಳದೋ ಕೇಳಮ್ಮಾ,
ಅವರ ಮೌನದಲಿ ನೂರು ತುತೂರಿಯ
ಮಹಾ ಪಿತೂರಿಗಳಿವೆಯಮ್ಮಾ !
— ಅದೊ ಕೇಳು ಕೇಳಮ್ಮಾ !

ಕೆಲರು ಹಳದಿಯಲಿ, ಕೆಲರು ನೀಲಿಯಲಿ,
ಕೆಲರು ಮಿಂದಿಹರು ಕೆಂಪಿನಲಿ!
ಎಲ್ಲ ಕೆನ್ನೆಯರ ಗಲ್ಲ ಕೆನ್ನೆಯಲಿ
ನಲ್ಲ ಮುತ್ತಿಹವು ಪೆಂಪಿನಲಿ!
ತಾಯಿಯಕ್ಕರೆಯ ಬಿಗಿದ ತಕ್ಕೆಯನು
ತಬ್ಬಿಕೊಂಡು ಬಂದಿರುವರಮ್ಮಾ !
ಸವಿಯ ಸೆರೆಗೆ ಬದಲಾಗಿ ಮುಕ್ತಿಯನು
ಒಪ್ಪಿ ಅಪ್ಪಿ ತಂದಿರುವರಮ್ಮಾ !
— ಗಿಡದ ಹೂವಾಗುವೆನು ನಾನಮ್ಮಾ !
— ನನ್ನ ಬಿಡು ಬೇಗನಮ್ಮಾ !

ಗಂಧರ್ವರದೋ ಬಂದಿರುವರಿದೋ
ನಮ್ಮ ಹೋದೋಟಕೆ ನೋಡಮ್ಮಾ!
ಬಣ್ಣ ಬಣ್ಣದಾ ಕಣ್ಣು ಕಣ್ಣಿನಾ
ಸಿಂಗಾರ ಮಾಡಿಕೊಂಡಿಹರಮ್ಮಾ!
— ಅದೊ ನೋಡು ನೋಡಮ್ಮಾ !