ನಮ್ಮಾಳು ನಿಂಗನು ತೋಟವನಗೆಯಲು
ನೋಡಿಯು ಬೈಯದೆ ಸುಮ್ಮನೆ ಇರುವೆ;
ಆದರೆ ನಾನಂತೆ ಮಾಡಲು ಹೋಗಲು
ಬೈಯುವೆ ಏತಕೆ ಹೇಳಮ್ಮಾ?

ಹಣ್ಣನು ಕೀಳಲು ಸೀಬೆಯ ಮರವನು
ನಿಂಗನು ಹತ್ತಲು ಮಾತಾಡದಿರುವೆ;
ಆದರೆ ನಾನದನಡರಲು ಹೋಗಲು
ಬೈಯುವೆ ಹೊಡೆಯುವೆ ಏಕಮ್ಮಾ?

ಕಾಲೆಲ್ಲ ಕೆಸರಾಗ, ಮೈಯೆಲ್ಲ ಮಣ್ಣಾಗಿ
ನಿಂಗನು ಬಂದರೆ ಮಾತಾಡದಿರುವೆ;
ನಾ ಮಾತ್ರ ಅಂಗಳಕ್ಕಿಳಿಯಲು ಕೆಸರೆಂದು
ಗುದ್ದುವೆ ಏತಕೆ ಹೇಳಮ್ಮಾ!

ಮಳೆ ಬಂದು ನೀರೆಲ್ಲ ಗಳಗಳ ಹರಿಯಲು
ನಿಂಗನು ಬರುವನು ಗದ್ದೆಯ ಹೂಡಿ;
ನಾ ಮಾತ್ರ ಹನಿಗಳ ಹಿಡಿಯಲು ಹೋಗಲು
‘ಶೀತವೊ ಬೇಡೆಂಬೆ’ ಏಕಮ್ಮಾ?

ನಿಂಗನು ಏನೇನು ಮಾಡಿದರೆಲ್ಲವ
ಬೈಯದೆ ಸುಮ್ಮನೆ ಮನ್ನಿಸುತಿರುವೆ;
ನಾನಾದರವುಗಳ ಮಾಡಲು ಹೋದರೆ
‘ಪೋಕರಿ’ ಎನ್ನುವೆ ಏಕಮ್ಮಾ?

ಅಂಗಿಯ ತೋಪಿಯ ಬಳೆಗಳ ಒಂಟಿಗ
ಳೆಲ್ಲವ ನಿಂಗಗೆ ಕೊಡುವೆನು ಅಮ್ಮಾ:
ಮೂರ್ತಿಯತನವಿದು ನನಗಿನ್ನು ಬೇಡಮ್ಮ;
ನಿಂಗನ ಹುದ್ದೆಯೆ ಸುಖವಮ್ಮಾ!

ನಾನಿನ್ನು ನಿಂಗ, ನಿಂಗನೆ ಮೂರ್ತಿ;
ನಿನ್ನನು ನಾನಿನ್ನು ‘ನಾಗಮ್ಮ’ ಎನ್ನುವೆ!
ಮುಂದಿನ್ನು ನಿಂಗನೆ ನಿನ್ನಯ ಕೈದಿಯು,
ನಾ ನಾಳೆ ನಮ್ಮಾಳು ನಿಂಗಾಗುವೆ! —

ನಿಂಗಾ! ನಿಂಗಾ! ನಾ ನಿಂಗಾ !
ಇನ್‌ ಮೇಲೆ ನಾ ನಿಂಗಾ !