(ಒಂದುಕಾಲಕ್ಕೆ ಅರಲ್ ಸಮುದ್ರವಾಗಿದ್ದ ಪ್ರದೇಶ ಈಗ ಮರುಭೂಮಿ)

ಮರುಭೂಮಿಗಳು ಚಲಿಸುತ್ತವೆ ನಿಮಗೆ ಗೊತ್ತೆ? ಅಮೀಬಾ ಚಲನೆಯ ಹಾಗೆ ಯಾವ ದಿಕ್ಕಿಗೆ ಬೇಕಿದ್ದರೂ ಅವು ಮೈಚಾಚಿ ತಮ್ಮನ್ನು ತಾವೇ ವಿಸ್ತರಿಸಿಕೊಳ್ಳುತ್ತವೆ. ರಾಜಸ್ತಾನದ ಮರುಭೂಮಿ ದಿಲ್ಲಿಯತ್ತ ವರ್ಷಕ್ಕೆ ಹನ್ನೆರಡು ಕಿಲೊಮೀಟರ್ ವೇಗದಲ್ಲಿ ಚಲಿಸುತ್ತಿದೆ. ನಾನ್‍ವೆಜ್ ಹೊಟೆಲ್‍ಗಳ ಸಂಖ್ಯೆ ಹೆಚ್ಚುತ್ತ ಹೋದಂತೆ ಈಗ ಅದರ ವೇಗ ಇಮ್ಮಡಿಯಾಗಿರಬಹುದು. ಕರ್ನಾಟಕದಲ್ಲಿ ದೇಶದ ಎರಡನೆಯ ಅತಿ ದೊಡ್ಡ ಮರುಭೂಮಿ ಸೃಷ್ಟಿಯಾಗುತ್ತಿದೆ ಅವುಗಳನ್ನು ಹತ್ತಿಕ್ಕುವುದು ಹೇಗೆ? ನಮ್ಮ ನೆರೆಯಲ್ಲೇ ಹೊಸದೊಂದು ಮರುಭೂಮಿ ಸೃಷ್ಟಿಯಾಗದಂತೆ ಪ್ರತಿಬಂಧಿಸುವುದು ಹೇಗೆ? ಮರುಭೂಮಿ ನಮ್ಮೂರಿನ ಆಸುಪಾಸಿನಲ್ಲೇ ಇರಬಹುದು. ಅದನ್ನು ಗುರುತಿಸುವುದು ಹೇಗೆ?

ಮರುಭೂಮಿ ಎಂದರೆ ಶಾಶ್ವತ ಬರಗಾಲ. ಮುಖ್ಯವಾಗಿ ಬದುಕಲು ಬೇಕಾದ ನೀರೇ ಇಲ್ಲದ ತಾಣ. ಅರ್ಥಾತ್   ಅದು ಜೀವವಿರೋಧಿ ತಾಣ. ಮರುಭೂಮಿ ಎಂದರೆ ಹಗಲು ಭಾರೀ ಸೆಕೆ, ರಾತ್ರಿ ತೀರಾ ಚಳಿ. ಹಾಗಾಗಿ ಅಲ್ಲಿ ಗಿಡಮರಗಳು ಇರುವುದಿಲ್ಲ, ಹುಲ್ಲು-ಕಳೆ ಇರುವುದಿಲ್ಲ. ಪಶುಪಕ್ಷಿಗಳು, ಕೀಟಪಾಚಿಗಳು, ಶಿಲೀಂಧ್ರಗಳು ಯಾವುದೂ ಇರುವುದಿಲ್ಲ. ಅದು ನಿರ್ಜೀವ ಪರಿಸರವೇ ಆಗಿರುತ್ತದೆ. ಅದು ಭೂಮಿಯ ಮೇಲಿನ ಅತಿ ದೊಡ್ಡ ಪರಿಸರ ಸಮಸ್ಯೆಯ ತಾಣ.

ಭೂಮಿಯ ಬಲುದೀರ್ಘ ಚರಿತ್ರೆಯಲ್ಲಿ ಕೆಲವು ಪ್ರದೇಶಗಳಲ್ಲಿ ಭೂಮಿ ತಂತಾನೇ ಮರುಭೂಮಿ ಆಗಿದ್ದಿದೆ. ಮತ್ತೆ ತಂತಾನೆ ಕ್ರಮೇಣ ಸಹಜ ಭೂಮಿ ಆಗಿದ್ದೂ ಇದೆ. ಆದರೆ ಮನುಷ್ಯ ಅವತರಿಸಿದ ನಂತರ ಮರುಭೂಮಿಗಳ ವಿಸ್ತಾರ ಹೆಚ್ಚುತ್ತಿದೆ. ಚಿಕ್ಕದೊಡ್ಡ ಹೊಸ ಹೊಸ ಮರುಭೂಮಿಗಳೂ ಸೃಷ್ಟಿಯಾಗುತ್ತಿವೆ. ಮರುಭೂಮಿ ಎಂದರೆ ಬಡತನದ ಸಂಕೇತ, ಸಂಕಷ್ಟಗಳ ಸಂಕೇತ. ಅದರ ಪರಿಣಾಮ ದೂರದ ನಗರಗಳ ಮೇಲೂ ಆಗುತ್ತದೆ. ಆದ್ದರಿಂದ ಮರುಭೂಮಿ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು.

ಮರುಭೂಮಿ ಹೇಗೆ ಸೃಷ್ಟಿಯಾಗುತ್ತದೆ?

ಮರುಭೂಮಿ ಸೃಷ್ಟಿ ಎಂದರೆ ಅದು ನಿಧಾನವಾಗಿ ನಡೆಯುವ ಕ್ರಿಯೆ. ಗೊತ್ತೇ ಆಗುವುದಿಲ್ಲ. ಮುಖ್ಯವಾಗಿ ಕಡಿಮೆ ಮಳೆಬೀಳುವ ಒಣಭೂಮಿಯಲ್ಲಿ ಅದು ಆರಂಭವಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಏನೆಂದರೆ ದನ-ಕುರಿಗಳನ್ನು ಮೇಯಿಸುವುದು, ಕಟ್ಟಿಗೆ ಕಡಿಯುವುದು, ನೀರಿಲ್ಲವೆಂದು ಕೊಳವೆ ಬಾವಿ ಕೊರೆಸುವುದು. ಅಗತ್ಯಕ್ಕಿಂತ ಹೆಚ್ಚು ನೀರನ್ನು ಮೇಲೆತ್ತುವುದು. ಇವನ್ನು ನಿರಂತರವಾಗಿ ಮಾಡುತ್ತಿದ್ದರೆ, ಹೊಸ ಚಿಗುರು ಬರುವುದು ಕಡಿಮೆಯಾಗುತ್ತದೆ. ಗಾಳಿಯಲ್ಲಿ ತೇವಾಂಶ ಕಡಿಮೆಯಾಗುತ್ತದೆ. ನೆಲ ಒಣಗಿ ದೂಳು ಹೆಚ್ಚುತ್ತದೆ. ಕ್ರಮೇಣ ಪರಿಸರ ಹೆಚ್ಚು ಹೆಚ್ಚು ಶುಷ್ಕವಾಗುತ್ತ ಹೋಗುತ್ತದೆ. ಮಳೆ ಬಿದ್ದರೂ ಮಣ್ಣೆಲ್ಲ ತೊಳೆದು ಹೋಗಿ, ಸಾರವಿಲ್ಲದ ಭೂಮಿ ತ್ವರಿತವಾಗಿ ಒಣಗುತ್ತದೆ. ಮರಳುಗಾಡು ಸೃಷ್ಟಿಯಾಗುತ್ತದೆ.

ಒಮ್ಮೆ ಈ ಕ್ರಿಯೆ ಆರಂಭವಾದರೆ ಅದು ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿ ಮಾಡುತ್ತ ಹೋಗುತ್ತದೆ. ನೀರಿನ ಮೂಲ ಕಡಿಮೆಯಾಗುತ್ತ ಹೋದರೆ ಉದ್ಯೋಗಾವಕಾಶ ಕಡಿಮೆಯಾಗುತ್ತ ಹೋಗುತ್ತದೆ. ಕಟ್ಟಿಗೆ ಕಡಿಯುವುದು ಮತ್ತು ಮೇಕೆ ಮೇಯಿಸುವುದೇ ಬದುಕಿನ ಪ್ರಮುಖ ಆಸರೆಯಾಗುತ್ತದೆ. ಮರುಭೂಮೀಕರಣ ತೀವ್ರವಾಗುತ್ತದೆ. ಕೆರೆಕುಂಟೆಗಳು, ಹಳ್ಳತೊರೆಗಳೇ ಮುಂತಾದ ಜಲಮೂಲಗಳು ಬತ್ತುತ್ತವೆ. ಕೊನೆಗೆ ಬಡವರೂ ಊರು ತೊರೆದು ನಗರಗಳ ಕೊಳೆಗೇರಿಗಳಿಗೆ ಬರುತ್ತಾರೆ. ಸಮಸ್ಯೆ ಇಲ್ಲಿಯೂ ಹೆಚ್ಚುತ್ತದೆ.

ಇಂಥ ಮರುಭೂಮೀಕರಣ ಎಲ್ಲೆಲ್ಲಿ ನಡೆಯುತ್ತಿದೆ?

ಮುಖ್ಯವಾಗಿ ಬಡ, ಹಿಂದುಳಿದ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮರುಭೂಮಿ ವಿಸ್ತೀರ್ಣ ಹೆಚ್ಚು ಹೆಚ್ಚಾಗುತ್ತಿದೆ. ಆಫ್ರಿಕದ ಸಹೇಲ್ ಪ್ರಾಂತದಲ್ಲಿ ಸಹಾರಾ ಮರುಭೂಮಿ ವಿಸ್ತರಿಸುತ್ತಿದೆ. ಅಫ್ಘಾನಿಸ್ತಾನ್, ಕಝಾಖ್‍ಸ್ತಾನ್, ಮೊಂಗೋಲಿಯಾ, ಭಾರತದಂಥ ರಾಷ್ಟ್ರಗಳ ಹಿಂದುಳಿದ ಜಿಲ್ಲೆಗಳಲ್ಲೂ ಶುಷ್ಕ ಪ್ರಾಂತಗಳ ವಿಸ್ತೀರ್ಣ ಹೆಚ್ಚುತ್ತದೆ. ರಾಜಸ್ತಾನದಲ್ಲಿ ಮರುಭೂಮಿ ವಿಸ್ತರಿಸುತ್ತ ಗುಜರಾತ, ಮಧ್ಯಪ್ರದೇಶಗಳತ್ತ ಮೈಚಾಚುತ್ತಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರ ಕರ್ನಾಟಕದಲ್ಲೂ ಮರುಭೂಮೀಕರಣ ಪ್ರಕ್ರಿಯೆ ತೀವ್ರವಾಗುತ್ತಿದೆ. ನಿಮಗೆ ಗೊತ್ತೆ, ರಾಜಸ್ತಾನದ ಥಾರ್ ಮರುಭೂಮಿಯನ್ನು ಬಿಟ್ಟರೆ ಭಾರತದ ಎರಡನೇ ಅತಿ ದೊಡ್ಡ ಮರುಭೂಮಿ ಕರ್ನಾಟಕದಲ್ಲಿ ರೂಪುಗೊಳ್ಳುತ್ತಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗುತ್ತ ಶುಷ್ಕತೆ ಹೆಚ್ಚುತ್ತ ಹೋದಹಾಗೆಲ್ಲ ಅದು ‘ಮರುಭೂಮಿ ಸದೃಶ’ ನಾಡು ಎನ್ನಿಸಿಕೊಳ್ಳುತ್ತದೆ. ಗುಲಬರ್ಗಾ, ರಾಯಚೂರು, ವಿಜಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಈ ಬಗೆಯ ಶುಷ್ಕ ಪ್ರಾಂತದ ವಿಸ್ತೀರ್ಣ ಹೆಚ್ಚುತ್ತಿದೆ; ಅಂತರ್ಜಲ ಮಟ್ಟ ಕೆಳಕ್ಕಿಳಿಯುತ್ತಿದೆ. ಮರುಭೂಮಿಯ ವಿಸ್ತೀರ್ಣ ಹೆಚ್ಚುತ್ತ ಹೋದಂತೆ ಗ್ರಾಮಗಳು ಖಾಲಿಯಾಗುತ್ತಿವೆ.

ಸರಿಪಡಿಸುವುದು ಹೇಗೆ?

ಅದು ತೀರ ನಿಧಾನ ಕ್ರಿಯೆ. ಆದರೆ ಭಾರೀ ಹಣ ಸುರಿಯಬೇಕು. ಮೊದಲು ಮರುಭೂಮಿ ವಿಸ್ತರಣೆಯನ್ನು ತಡೆಗಟ್ಟಬೇಕು. ಬಿಸಿಗಾಳಿಯ ಮೂಲಕವೇ ಮರಳುಗಾಡು ಶೀಘ್ರವಾಗಿ ವಿಸ್ತರಿಸುತ್ತದೆ. ಒಣಗಿದ ಮರಳುಕಣಗಳು ಗಾಳಿಗೆ ಕುಪ್ಪಳಿಸುತ್ತ ಸಾಗುತ್ತವೆ. ಅಂಥ ಸಾಗಾಟವನ್ನು ಮೊದಲು ತಡೆಯಬೇಕು. ಅದಕ್ಕಾಗಿ ‘ಮರಳುಬೇಲಿ’ ಅರ್ಥಾತ್ ಮರಳಿನದೇ ಸಾಲುದಿಬ್ಬಗಳನ್ನು ರಚಿಸಬೇಕು. ಅದರ ಪಕ್ಕದಲ್ಲಿ ಕಂದಕವನ್ನು ನಿರ್ಮಿಸಬೇಕು. ಅದೇವೇಳೆಗೆ ಬಿಸಿಲನ್ನು ತಡೆಯಬಲ್ಲ ಸಸ್ಯಗಳನ್ನು (ಉದಾ: ಬಳ್ಳಾರಿ ಜಾಲಿ) ಸಾಲುಸಾಲಾಗಿ ಬೆಳೆಸಬೇಕು. ಅದಕ್ಕೆ ‘ಗಾಳಿಗೋಡೆ’ ಎನ್ನುತ್ತಾರೆ. ಅದೇವೇಳೆಗೆ ಮಣ್ಣು ತೊಳೆದು ಹೋಗದ ಹಾಗೆ ಕಂಟೂರ್ ಕಟ್ಟೆಗಳನ್ನು ನಿರ್ಮಿಸಬೇಕು. ಕಟ್ಟೆಗುಂಟ ಕಿರುಸಸ್ಯಗಳನ್ನು (ಉದಾ: ಕತ್ತಾಳೆ) ಬೆಳೆಸಬೇಕು. ಅದಕ್ಕೆ ಆಸರೆಪಟ್ಟಿ (ಶೆಲ್ಟರ್ ಬೆಲ್ಟ್) ಎನ್ನುತ್ತಾರೆ. ಆಮೇಲೆ ಸಾರವಿಲ್ಲದ ಮಣ್ಣಿನಲ್ಲೂ ಬೆಳೆಯಬಲ್ಲ ಗಿಡಮರಗಳನ್ನು ಬೆಳೆಸಬೇಕು. ಈ ನಡುವೆ ಅಲ್ಲಿ ಮೇಕೆ ಮೇಯದ ಹಾಗೆ, ಬೆಂಕಿ ಬಾರದ ಹಾಗೆ ಎಚ್ಚರಿಕೆ ವಹಿಸಬೇಕು. ಅಪರೂಪಕ್ಕೆ ಬಿದ್ದ ಮಳೆನೀರು ಅಲ್ಲಲ್ಲೇ ಇಂಗುವ ಹಾಗೆ ಹಳ್ಳಗುಂಡಿಗಳನ್ನು ನಿರ್ಮಿಸಬೇಕು. ಮತ್ತೆ ಮತ್ತೆ ಅದೇ ಸ್ಥಳಕ್ಕೆ ಮರುಭೇಟಿ ಕೊಟ್ಟು ಹಳ್ಳಗಳು ಮರಳಿನಿಂದ ಮುಚ್ಚಿ ಹೋಗಿದ್ದರೆ ತೆರವು ಮಾಡಬೇಕು. ಗಿಡಗಳು ಸತ್ತಿದ್ದರೆ ಮತ್ತೆ ಮಳೆ ಬರುವ ಋತುವಿನಲ್ಲಿ ಹೊಸ ಗಿಡಗಳನ್ನು ಹಚ್ಚಬೇಕು.

ಇದು ಮರಳುಗಾಡಿನ ಚಲನೆಯನ್ನು ತಡೆಗಟ್ಟುವ ಕೆಲಸ. ಅಲ್ಲಿ ಹಸಿರಿನ ನಿರ್ಮಾಣ ಮಾಡಬೇಕೆಂದರೆ ನೆಲದಲ್ಲಿ ಸಾರಸೃಷ್ಟಿ ಮಾಡಬೇಕು. ಅಂದರೆ ಮಣ್ಣಿನ ಸಾರವನ್ನು ಹೆಚ್ಚಿಸಬೇಕು. ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರೀಕರಿಸಬಲ್ಲ ದ್ವಿದಳ ಧಾನ್ಯಗಳ ಬಿತ್ತನೆ ಮಾಡಬೇಕು. ಹುಲ್ಲು ಬೆಳೆಯುವಂತೆ ತೃಣಧಾನ್ಯದ ಬೀಜಗಳನ್ನು ಬಿತ್ತನೆ ಮಾಡಬೇಕು. ಮುಂಜಾನೆ ಇಬ್ಬನಿ ಸಂಗ್ರಹವಾಗುವಂತೆ, ಕಿರುಸಸ್ಯಗಳ, ಕ್ರಿಮಿ ಕೀಟಗಳ ಸಂಖ್ಯೆ ಹೆಚ್ಚುವಂತೆ ಮಾಡಬೇಕು. ಒಟ್ಟಾರೆಯಾಗಿ ಅಲ್ಲಿ ಕ್ರಮೇಣ ಜೀವಿವೈವಿಧ್ಯ ಹೆಚ್ಚುವಂಥ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು.

ಇದಕ್ಕೆಲ್ಲ ಹಣ ಬೇಕು, ಪ್ರಜಾಪ್ರಭುತ್ವದ ಕಠೋರ ವಾಸ್ತವ ಏನೆಂದರೆ, ಮರುಭೂಮಿ ಸದೃಶ ತಾಣಗಳಲ್ಲಿ, ಜನಸಾಂದ್ರತೆ ಕಡಿಮೆ ಇರುವಲ್ಲಿ ಸರಕಾರ ಹೆಚ್ಚು ಹಣ ಹೂಡುವುದಿಲ್ಲ. ಹಣ ಹೂಡಿದರೂ ಪ್ರಗತಿಯನ್ನು ವೀಕ್ಷಿಸಬೇಕಾದ ಅಧಿಕಾರಿಗಳಿಗೆ ಬದ್ಧತೆ, ಪ್ರಾಮಾಣಿಕತೆ ಜಾಸ್ತಿ ಇರಬೇಕಾಗುತ್ತದೆ.

ಅಂದಹಾಗೆ, ಮರುಭೂಮಿ ಎಂದರೆ ರಾಜಸ್ತಾನದ ಮರಳುಗಾಡನ್ನೇ ಕಲ್ಪಿಸಿಕೊಳ್ಳಬೇಕಿಲ್ಲ. ನಮ್ಮ ನಮ್ಮ ಊರುಗಳಲ್ಲೂ ಬರಗಾಲ ನಾನಾ ರೂಪಗಳಲ್ಲಿ ನಿಧಾನವಾಗಿ ಹೆಜ್ಜೆ ಇಡುತ್ತ ಅದು ತನ್ನ ನೆಂಟನನ್ನು ಕರೆತರಬಹದು. ಚಿಕ್ಕ ಪ್ರಮಾಣದಲ್ಲಿ ಕೋಲಾರದಲ್ಲಿ, ಚಿಕ್ಕಮಗಳೂರಿನಲ್ಲಿ, ಗಣಿಗಾರಿಕೆ ನಡೆದಲ್ಲಿ, ಬೆಂಗಳೂರಿನ ಸರಹದ್ದುಗಳಲ್ಲಿ, ಕರಾವಳಿಯ ಅಂಚಿನಲ್ಲಿ ಕೂಡ ಮರುಭೂಮಿ ವಿಸ್ತರಣೆ ಆರಂಭವಾಗಿರಬಹುದು. ಈಚಿನ ವರ್ಷಗಳಲ್ಲಿ ವಿಶ್ವಬ್ಯಾಂಕ್‍ನಿಂದ ಇಂಥ ಉದ್ದೇಶಗಳಿಗೆ ಸಾಕಷ್ಟು ಹಣ ಹರಿದು ಬರುತ್ತಿದೆ. ನಮ್ಮಲ್ಲೂ ಹಿಂದುಳಿದ ಜಿಲ್ಲೆಗಳ ಪಂಚಾಯ್ತಿಗಳಿಗೆ ಈ ಬಾಬಿಗೆಂದೇ ಹಣ ಬಟವಡೆ ಆಗುತ್ತಿರುತ್ತದೆ. ನರೇಗಾದಂಥ ಯೋಜನೆಗಳ ಮೂಲಕವೂ ಶುಷ್ಕತೆಯನ್ನು ತಡೆಯುವ ಕೆಲಸಗಳನ್ನು ಕೈಗೊಳ್ಳಬಹುದು. ಹೀಗೆ ಮಾಡುವ ಮೂಲಕ ‘ಅಗೋಚರ ಮರುಭೂಮಿ’ಗಳನ್ನು ಆರಂಭದಲ್ಲೇ ಚಿವುಟಬಹುದು.

ಏನಿದು ‘ಅಗೋಚರ ಮರುಭೂಮಿ’ ಅಂದರೆ?

ಮೇಲ್ನೋಟಕ್ಕೆ ಅವು ಕಾಣಿಸುವುದಿಲ್ಲ. ಉದಾಹರಣೆಗೆ, ನಿಮ್ಮ ಊರಿನ ನದಿ ಅಥವಾ ಕೆರೆಯಲ್ಲಿ ನೀರು ತುಂಬಿದ್ದರೂ ಕೂಡ ಅದರಲ್ಲಿ ಅನಾದಿಕಾಲದಿಂದ ವಾಸಿಸುತ್ತಿದ್ದ ಮೀನು, ಕಪ್ಪೆ, ಆಮೆ ಮುಂತಾದ ಜಲಚರಗಳು ಕಾಣೆಯಾಗಿರಬಹುದು. ಆಫ್ರಿಕನ್ ಕ್ಯಾಟ್‍ಫಿಶ್‍ನಂಥ ಏಕಜಾತಿಯ ಮೀನು ಸಂಗೋಪನೆ ನಡೆದಿದ್ದರೆ ಅದೂ ಒಂದುರೀತಿಯ ‘ಜಲಮರುಭೂಮಿ’ ಎಂತಲೇ ಹೇಳಬಹುದು.

ಅತಿಯಾದ ನೀರಾವರಿ ಇದ್ದಲ್ಲಿ ‘ಒದ್ದೆ ಮರುಭೂಮಿ’ ಸೃಷ್ಟಿಯಾಗುತ್ತದೆ. ಅಲ್ಲಿ ಜವುಳು ಜಾಸ್ತಿಯಾಗಿ ಯಾವ ಬೆಳೆಯನ್ನು ಕೂಡ ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಕರ್ನಾಟಕದ ಸುಮಾರು ಎಲ್ಲ ದೊಡ್ಡ ನೀರಾವರಿ ಯೋಜನೆಗಳಲ್ಲೂ ಅತಿ ಜವುಳಿನಿಂದ ಲಕ್ಷಾಂತರ ಹೆಕ್ಟೇರ್ ಕೃಷಿಭೂಮಿ ನಿರುಪಯುಕ್ತವಾಗುತ್ತಿದೆ.

ಹಿಂದೆ ನಾನಾ ಬಗೆಯ ಗಿಡಮರಗಳಿದ್ದ ತಾಣದಲ್ಲಿ ಈಗ ಏಕಜಾತಿಯ ನೀಲಗಿರಿ, ಸರ್ವೆ ಅಥವಾ ಅಕೇಶಿಯಾದಂಥ ತೋಪುಗಳಿದ್ದರೆ ಅದನ್ನು ‘ಹಸುರು ಮರುಭೂಮಿ’ ಎನ್ನಬಹುದು. ಅಲ್ಲಿ ಬೇರೆ ಯಾವ ಜೀವಿ ವೈವಿಧ್ಯ ಇರಲಾರದು. ಓತಿಕ್ಯಾತ, ಹಾವುರಾಣಿ, ಅಳಿಲು, ಮುಂಗುಸಿ, ಹಕ್ಕಿಪಕ್ಷಿಗಳು ವಾಸ ಮಾಡಲಾರವು.

ಗಣಿಗಾರಿಕೆ ನಡೆದಲ್ಲೆಲ್ಲ ಸುತ್ತಲಿನ ಗಿಡಮರಗಳೆಲ್ಲ ನಾಶವಾಗಿ, ಮಣ್ಣೆಲ್ಲ ಮುಚ್ಚಿಹೋಗಿ ಎಲ್ಲಿ ನೋಡಿದಲ್ಲಿ ಕಲ್ಲುಪುಡಿ, ಮರಳುರಾಶಿಯೇ ಕಾಣಬಹುದು. ಅದರ ವಿಸ್ತೀರ್ಣ ಸುತ್ತೆಲ್ಲ ಹೆಚ್ಚುತ್ತ ಸ್ಥಳೀಯ ಮಟ್ಟದಲ್ಲಿ ಮರುಭೂಮಿ ಸದೃಶ ಪರಿಸರ ನಿರ್ಮಾಣವಾಗಬಹುದು.

ಮೇಕೆ, ಜಾನುವಾರುಗಳ ಮುಕ್ತ ಓಡಾಟದಿಂದಾಗಿ ಆ ಪ್ರದೇಶದ ಮೂಲ ಜೀವಿವೈವಿಧ್ಯವೆಲ್ಲ ನಾಶವಾಗಿ ಅಲ್ಲಿ ಬರೀ ಲಂಟಾನಾ, ಯುಪಟೋರಿಯಂ ಮತ್ತು ಕಾಂಗ್ರೆಸ್ ಕಳೆ ಬೆಳೆದಿರಬಹುದು. ನೋಡಲು ಹಸುರಾಗಿ ಕಂಡರೂ ಅದು ಇನ್ನೊಂದು ರೀತಿಯ ಹಸುರು ಮರುಭೂಮಿಯೇ ಆಗಿರುತ್ತದೆ.

ಕಡಲತೀರದಲ್ಲಿ ಕಾಂಡ್ಲಗಿಡಗಳೆಲ್ಲ ನಾಪತ್ತೆಯಾಗಿ ಕ್ರಮೇಣ ಮರಳು ದಿಬ್ಬಗಳು ವಿಸ್ತರಿಸುತ್ತ ಒಳನಾಡಿನತ್ತ ಬರುತ್ತದೆ. ಅದರ ಚಲನೆಯನ್ನು ತಡೆಗಟ್ಟದಿದ್ದರೆ ಮರಳುದಿಬ್ಬದ ವಿಸ್ತರಣೆ ಹೆಚ್ಚುತ್ತ ಹೋಗುತ್ತದೆ. ಮರುಭೂಮಿಯ ವಿಸ್ತರಣೆಯನ್ನು ತಡೆಯಲು ಕೈಗೊಳ್ಳಬೇಕಾದ ಉಪಕ್ರಮಗಳನ್ನು ಇಲ್ಲೂ ಆರಂಭಿಸಬೇಕಾಗುತ್ತದೆ.

ಜಾಗತಿಕ ಮಟ್ಟದಲ್ಲಿ ಬರಗಾಲ ತಡೆಗೆ, ಮರುಭೂಮಿ ತಡೆಗೆ ಏನೇನು ಕಾರ್ಯಯೋಜನೆಗಳಿವೆ?

ವಿಶ್ವಸಂಸ್ಥೆಯ ಸದಸ್ಯ ದೇಶಗಳೆಲ್ಲ ಸೇರಿ ‘ಮರುಭೂಮಿತಡೆ ಹೋರಾಟ ಒಪ್ಪಂದ’ (ಯುಎನ್‍ಸಿಸಿಡಿ) ಮಾಡಿಕೊಂಡಿವೆ. ಶ್ರೀಮಂತ ದೇಶಗಳಿಂದ ವಂತಿಗೆ ಪಡೆದು ಬಡದೇಶಗಳಲ್ಲಿ ಮರುಭೂಮಿ ವಿಸ್ತರಣೆಯನ್ನು ತಡೆಯುವ ಅನೇಕ ಯೋಜನೆಗಳನ್ನು ಈ ಒಪ್ಪಂದದಡಿ ಹಮ್ಮಿಕೊಳ್ಳಲಾಗಿದೆ. ಆಫ್ರಿಕದ ನೈಗರ್, ಚಾಡ್, ಇಥಿಯೋಪಿಯಾ ಮುಂತಾದ ದೇಶಗಳಲ್ಲಿ ಕೆಲವು ಮಾದರಿ ‘ಮರುಭೂಮಿ ತಡೆ’ ಕೆಲಸಗಳು ನಡೆದಿವೆ.

ಮರುಭೂಮಿಯನ್ನು ಹತ್ತಿಕ್ಕಿದ ಯಶಸ್ವಿ ಉದಾಹರಣೆಗಳಿವೆಯೆ?

ಎಲ್ಲೋ ತೀರ ಅಪರೂಪಕ್ಕೆ ತೀರ ಚಿಕ್ಕ ಭಾಗದಲ್ಲಿ ಹಣವನ್ನು ನೀರಿನಂತೆ ಹರಿಸಿ ಮರುಭೂಮಿಯನ್ನು ಹತ್ತಿಕ್ಕಿ ಅಲ್ಲಿ ಹಸುರು ಚಿಗುರಿಸಲಾಗಿದೆ. ಅರಬ್ ರಾಷ್ಟ್ರಗಳಲ್ಲಿ ಕೆಲವೆಡೆ ದಟ್ಟ ಮರುಭೂಮಿಯ ನಡುವೆಯೂ ಆಳ ಕೊಳವೆ ಬಾವಿ ಕೊರೆದು ನೀರುಕ್ಕಿಸಿ ದಟ್ಟ ಹಸುರನ್ನು ಬೆಳೆಸಲಾಗಿದೆ. ಇಸ್ರೇಲಿಗೆ ಯಹೂದ್ಯರು ಹೊಸದಾಗಿ ಹೋದಾಗ ಅಲ್ಲಿನ ನೆಲ ಸಾವಿರಾರು ವರ್ಷಗಳಿಂದ ಬಂಜರಾಗಿ, ಮರುಭೂಮಿಯಾಗಿ ಮಲಗಿತ್ತು. ಅದÀನ್ನು ಅತ್ಯಂತ ವ್ಯವಸ್ಥಿತವಾಗಿ ಉಪಚರಿಸಿ ಹತ್ತೇ ವರ್ಷಗಳಲ್ಲಿ ಆಹಾರ ಪದಾರ್ಥಗಳನ್ನು ರಫ್ತು ಮಾಡುವಷ್ಟು ಪ್ರಮಾಣದಲ್ಲಿ ಬೆಳೆದದ್ದು ಈ ಕಾಲದ ಸಾಹಸವೆಂದೇ ಬಣ್ಣಿಸಲಾಗುತ್ತದೆ. ಆದರೆ ಅಂಥ ಸಾಧನೆಗೆ ನೆರವಾದ ಜೋರ್ಡಾನ್ ನದಿಯೇ ಈಗ ಸಮುದ್ರಕ್ಕೆ ತಲುಪಲಾರದೆ ಬತ್ತಿ ಬತ್ತಿ ಅಪರೂಪಕ್ಕೆ ಹರಿಯುತ್ತಿದೆ.

ಮರುಭೂಮಿ ತಡೆಗೆ ನಾವೇನು ಮಾಡಬಹುದು?

ಮರುಭೂಮಿ ವಿಸ್ತರಣೆ ಎಂಬುದು ಜಾಗತಿಕ ಮಟ್ಟದ ಸಮಸ್ಯೆಯೇ ಆಗಿದ್ದರೂ ಅದಕ್ಕೆ ಉತ್ತರ ನಮ್ಮ ನಮ್ಮ ಊರುಗಳಲ್ಲೇ ಇರುತ್ತದೆ. ನಮಗೆ ಅರಿವೇ ಇಲ್ಲದಂತೆ ನಮ್ಮಲ್ಲಿ ಮರುಭೂಮಿಯ ಅನೇಕ ಆರಂಭಿಕ ಲಕ್ಷಣಗಳು ಕಾಣುತ್ತಿರುತ್ತವೆ. ಗಿಡಮರಗಳ ಸಂಖ್ಯೆ ಕಡಿಮೆ ಆಗುತ್ತಿದೆ; ಮಟನ್ ಬೆಲೆ ಹೆಚ್ಚಾಗಿರುವುದರಿಂದ ಮೇಕೆ ಮೇಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಎಲ್ಲಿ ನೋಡಿದರೂ ಮೇಕೆಗಳು. ಅವು ತಿನ್ನದ ಮುಳ್ಳುಕಂಟಿ, ಲಂಟಾನಾ ಮುಂತಾದ ಸಸ್ಯಗಳು ಮಾತ್ರ ಉಳಿದುಕೊಂಡಿರುವುದನ್ನು ಕಾಣುತ್ತೇವೆ. ಜೀವಿವೈವಿಧ್ಯ ಕಡಿಮೆಯಾಗುತ್ತಿದೆ. ಕೆರೆಗಳಲ್ಲಿ ಹೂಳು ತುಂಬಿ ನೀರಿಗೆ ನೆಲೆಯೇ ಇಲ್ಲದಂತಾಗುತ್ತಿದೆ. ಕೊಳವೆ ಬಾವಿಗಳು ಆಳಕ್ಕೆ ಇನ್ನೂ ಆಳಕ್ಕೆ ಹೋಗುತ್ತಿವೆ. ಸೆಕೆ ಹೆಚ್ಚುತ್ತಿದೆ. .. … ಇವೆಲ್ಲ ಸಮಸ್ಯೆಗಳ ನಿವಾರಣೆಗೆ ಹೊರಗಿನ ತಜ್ಞರೇನೂ ಬೇಕಾಗಿಲ್ಲ. ಉಪಾಯಗಳು ನಮಗೆ ಗೊತ್ತಿವೆ. ಅವು ಜಾರಿಗೆ ಬರುವಂತೆ ಮಾಡಬೇಕಿದೆ.

ಮೇಕೆ ಮೇಯಿಸುವುದನ್ನು ಮೊದಲು ತಡೆಗಟ್ಟಿ. ಅವು ಮೇಯುತ್ತಿದ್ದರೆ ಗುಡ್ಡಬೆಟ್ಟಗಳಲ್ಲಿ ಯಾವ ಸಸ್ಯವೂ ತಾನಾಗಿ ಬೆಳೆಯಲಾರವು. ಅದರ ಬದಲು ಕುರಿ ಸಾಕಣೆ ಮೇಲು; ಏಕೆಂದರೆ ಅವು ಸಸ್ಯಗಳ ಚಿಗುರುಗಳನ್ನು ತಿನ್ನುವುದಿಲ್ಲ. ಮೇಕೆ ಸಾಕುವುದೇ ಆದರೆ ಅವುಗಳನ್ನು ಕಟ್ಟಿ ಮೇಯಿಸುವಂತೆ ಸಲಹೆ ಮಾಡಿ.

  • ಕೆರೆ ಕಟ್ಟೆಗಳಲ್ಲಿ ಮಳೆನೀರಿನ ಸಂಗ್ರಹಣೆ ಹೆಚ್ಚುವಂತೆ ಕ್ರಮ ಕೈಗೊಳ್ಳಲು ಪಂಚಾಯ್ತಿಯನ್ನು ಆಗ್ರಹಿಸಿ.
  • ನಿಮ್ಮ ಊರಿನಲ್ಲಿ ಹಿಂದೆ ಯಾವ ಯಾವ ಸಸ್ಯಗಳು, ಔಷಧ ಮೂಲಿಕೆಗಳು, ದೊಡ್ಡ ಮರಗಳು ಇದ್ದವು ಎಂಬುದನ್ನು ಹಿರಿಯರನ್ನು ಕೇಳಿ ಪಟ್ಟಿ ಮಾಡಿ. ಅರಣ್ಯ ಇಲಾಖೆಯ ನೆರವಿನಿಂದ ಆ ಸಸ್ಯಗಳನ್ನೆಲ್ಲ ಮತ್ತೆ ಬೆಳೆಸಬಲ್ಲ ನರ್ಸರಿಯನ್ನು ಆರಂಭಿಸಿ. ಮಳೆಗಾಲದ ಆರಂಭದಲ್ಲಿ ಅವುಗಳನ್ನು ಕಂದಾಯ ಭೂಮಿಯಲ್ಲಿ ಗೋಮಾಳದಲ್ಲಿ ಬೆಳೆಸೋಣವೆಂದು ಊರಿನ ಜನರನ್ನು ಪ್ರೇರೇಪಿಸಿ.
  • ಪಂಚಾಯ್ತಿಯಲ್ಲಿ ‘ಉದ್ಯೋಗ ಖಾತ್ರಿ ಯೋಜನೆ’ಗೆ ಎಷ್ಟು ಹಣ ಬರುತ್ತಿದೆ, ಹೇಗೆ ವಿನಿಯೋಗವಾಗುತ್ತಿದೆ ಎಂಬುದನ್ನು ನೀವು ಆಯ್ಕೆ ಮಾಡಿ ಕಳಿಸಿದ ಪ್ರತಿನಿಧಿಗೆ ಕೇಳುತ್ತಿರಿ. ಬರನಿರೋಧಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ಯಾವುಯಾವುದಕ್ಕೆ ಹಣ ಬಳಕೆಯಾಗಿದೆ ಎಂಬುದನ್ನು ಕೇಳುವ ಹಕ್ಕು ನಿಮಗೂ ಇದೆ. ಕಂಟೂರ್ ಕಟ್ಟೆ ನಿರ್ಮಾಣಕ್ಕೆ, ಹೂಳು ತೆಗೆಯಲಿಕ್ಕೆ, ಗಿಡಮರಗಳನ್ನು ಬೆಳೆಸಲಿಕ್ಕೆ, ಮೂಲಿಕಾ ವನಗಳ ನಿರ್ಮಾಣಕ್ಕೆ ಅದರಲ್ಲಿ ಅವಕಾಶಗಳಿವೆ.

 ಬರನಿರೋಧಕ ಕೆಲಸಗಳಲ್ಲಿ ವಿದ್ಯಾರ್ಥಿ, ಯುವಜನರ ಪಾತ್ರ ಏನು?

ಈ ಮೊದಲು ಹೇಳಿದ ಅನೇಕ ಕೆಲಸಗಳಿಗೆ ಮಕ್ಕಳೇ ದಾರಿದೀಪವಾಗಬಹುದು. ಊರಿನ ಸುತ್ತ ಕಣ್ಮರೆಯಾಗಿರುವ, ಅಪರೂಪವಾಗುತ್ತಿರುವ ಸಸ್ಯಗಳ ಪಟ್ಟಿಯನ್ನು , ವನ್ಯಜೀವಿಗಳ ಪಟ್ಟಿಯನ್ನು ಅವರೇ ತಯಾರಿಸಲಿ.

ಕಳೆದ ಹತ್ತು ವರ್ಷಗಳಲ್ಲಿ ಊರಿನ ಸುತ್ತ ಕೊಳವೆ ಬಾವಿಗಳ ಸಂಖ್ಯೆ ಎಷ್ಟು ಹೆಚ್ಚಾಗಿದೆ, ಅಂತರ್ಜಲ ಮಟ್ಟ ಎಷ್ಟು ಆಳಕ್ಕಿಳಿದಿದೆ ಎಂಬ ಮಾಹಿತಿ ಸಂಗ್ರಹಿಸಿ ಆಲೇಖ ಸಿದ್ಧಪಡಿಸಿ.

ಊರಿನ ಸುತ್ತ ಒಂದು ಜೀವಿವೈವಿಧ್ಯ ಪ್ರವಾಸ ಕೈಗೊಳ್ಳಿ. ಊರ ಹಿರಿಯರೂ ನಿಮ್ಮ ಜೊತೆ ಇರಲಿ. ಯಾವ ಅನಪೇಕ್ಷಿತ ಸಸ್ಯಗಳ ಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ದಾಖಲಿಸಿ. ನೆಲದ ತೇವಾಂಶವನ್ನು ಹೀರಿ ತೆಗೆಯುವ ನೀಲಗಿರಿ, ಸರ್ವೆಗಿಡಗಳು ಕೃಷಿಭೂಮಿಯನ್ನು ಹೇಗೆ ಆಕ್ರಮಿಸುತ್ತಿವೆ ಎಂಬುದನ್ನು ದಾಖಲಿಸಿ.

ಕಳೆದ ಹತ್ತು ವರ್ಷಗಳ ಮಳೆ ಪ್ರಮಾಣದ ಏರಿಳಿತವನ್ನು ದಾಖಲಿಸಿ. ಮಳೆ ಪ್ರಮಾಣ ಅಳೆಯಲು ನಾವೇ ತೀರ ಸರಳವಾದ ಸಾಧನವನ್ನು ನಿರ್ಮಿಸಬಹುದು. ಅದಕ್ಕೆ ಬೇಕಿರುವುದು ತೆರೆದ ಬಾಯಿಯ (ಯಾವುದೇ ಗಾತ್ರದ) ಒಂದು ಪಾತ್ರೆ ಮತ್ತು ಅಳತೆಪಟ್ಟಿ ಅಷ್ಟೆ.

ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಶಾಲೆಗೆ ಆಮಂತ್ರಿಸಿ. ನಿಮ್ಮ ಊರಿನ ಜೀವಿವೈವಿಧ್ಯ ಸ್ಥಿತಿಗತಿ ಕುರಿತಂತೆ ಮಾಹಿತಿ ನೀಡಲು ಹೇಳಿ. ಹೇಳಬೇಕಾದುದು ಅವರ ಕರ್ತವ್ಯ. ಅದನ್ನವರು ನಿರಾಕರಿಸುವಂತಿಲ್ಲ.

ಗ್ರಾಮ ಪಂಚಾಯ್ತಿಯ ಮುಖ್ಯಸ್ಥರನ್ನು ಶಾಲೆಗೆ ಆಮಂತ್ರಿಸಿ. ನಿಮ್ಮ ಊರಿನ ಒಟ್ಟಾರೆ ಜೀವಸಂಪತ್ತನ್ನು ಉಳಿಸಿಕೊಳ್ಳಲು ಅವರು ಹಮ್ಮಿಕೊಂಡಿರುವ ಯೋಜನೆಗಳ ಕುರಿತು ಉಪನ್ಯಾಸ ನೀಡಲು ಹೇಳಿ. ಅದು ಅವರ ಕರ್ತವ್ಯ.

ನಿಮ್ಮ ಊರಿನ ಕೆರೆಗಳಲ್ಲಿ ಹೂಳು ತುಂಬಿದ್ದರೆ, ಮರ ಕಡಿಯುವ, ಮರಳು ಸಾಗಣೆಯ, ಗಣಿಗಾರಿಕೆಯ ಹಾವಳಿ ಹೆಚ್ಚಾಗಿದ್ದರೆ ಅದರ ಬಗ್ಗೆ ಪಂಚಾಯ್ತಿ ಕಚೇರಿಯ ಎದುರು ಒಂದು ಪ್ರತಿಭಟನಾ ಮೆರವಣಿಗೆ ಮಾಡಿ.

ನೆನಪಿಡಿ, ಮರುಭೂಮಿಯನ್ನು ಹತ್ತಿಕ್ಕುವುದೆಂದರೆ ಜನಪ್ರತಿನಿಧಿಗಳ, ಅಧಿಕಾರಿಗಳ ಕರ್ತವ್ಯಲೋಪವನ್ನು ಹತ್ತಿಕ್ಕುವುದು, ಭ್ರಷ್ಟಾಚಾರವನ್ನು ಹತ್ತಿಕ್ಕುವುದು, ದುರಾಸೆಯನ್ನು ಹತ್ತಿಕ್ಕುವುದು ಕೂಡ ಹೌದು.