ನಿನ್ನ ನಿತ್ಯಾನಂದದಾಚೆಗೆ ತಳ್ಳದಿರು ನೀನೆನ್ನನು
ನಿನ್ನ ಪಾದವನಲ್ಲದೀತನು ಬೇರೆ ಏನೂ ಕಾಣನು
ಮೃತ್ಯು ಬಂದೆನ್ನೆದುರು ಹುಬ್ಬನು ಗಂಟು ಹಾಕುತಲಿರುವನು
ಹೇಳು ತಾಯೀ, ಏನು ಹೇಳಲಿ? ಅವನು ಬಾಗಿಲೊಳಿರುವನು.

ನಿನ್ನ ನಾಮವನೊಂದ ನಂಬುತ ನಾನು ಭವಸಾಗರದೊಳು
ನನ್ನ ದೋಣಿಯ ತೇಲಿಬಿಡುವೀ ಬಯಕೆಯಿದ್ದಿತು ಎದೆಯೊಳು
ತೀರವಿಲ್ಲದಪಾರಕತ್ತಲ ಮೊರೆಮೊರೆವ ಮುನ್ನೀರೊಳು
ಒಮ್ಮೆಗೇ ಕೈ ಬಿಡುವೆ ಎಂಬುದ ಕನಸಿನಲ್ಲೂ ಕಾಣೆನು.

ನಿನ್ನ ತಾರಕ ನಾಮವನು ನೆನೆದಿಲ್ಲಿ ಮುಳುಮುಳುಗೇಳುವೆ
ಹಗಲು ಇರುಳೂ ನಿನ್ನ ನೆನೆದರು ತೀರದಾಗಿದೆ ವೇದನೆ
ನಾನು ಈ ಸಲ ಮುಳುಗಿ ಸತ್ತರೆ, ನಾಳೆ ನಿನ್ನಯ ಹೆಸರನು
ಮತ್ತೆ ಯಾರೂ ಜಪಿಸರೆಂಬುದ ಮರೆಯದಿರು ಈಗಾದರೂ.