ಚರ್ನೋಬಿಲ್ ಅಣುಸ್ಥಾವರ ದುರಂತ ಯಾರಿಗೆ ಗೊತ್ತಿಲ್ಲ!  ಐತಿಹಾಸಿಕ ಪ್ರಸಿದ್ಧ ಈ ದುರಂತ ಪ್ರದೇಶವನ್ನು ನೋಡಲು ಪ್ರತಿವರ್ಷ ಹೋಗುವ ಪ್ರವಾಸಿಗರ ಸಂಖ್ಯೆ ೨೦ಲಕ್ಷ.  ಅದೇ ರೀತಿ ಹಿರೋಷಿಮಾ, ನಾಗಸಾಕಿಯನ್ನು ವೀಕ್ಷಿಸುವವರ ಸಂಖ್ಯೆ ವಾರ್ಷಿಕ ೧೦ಕೋಟಿ.  ನಯಾಗರಾ ಜಲಪಾತದ ಸಮೀಪವಿರುವ ಲವ್‌ಕೆನಾಲ್ ರಾಸಾಯನಿಕ ದುರಂತ ಪ್ರದೇಶಕ್ಕೆ ಅಮೇರಿಕಾ ಸರ್ಕಾರ ನಿರ್ಬಂಧ ಹೇರಿದೆ.  ಆದರೂ ಅಲ್ಲಿಗೆ ನೋಡಲೆಂದೇ ಹೋಗುವವರು ವಾರ್ಷಿಕ ಎರಡು ಲಕ್ಷ ಜನ.

ಅಲ್ಲೇನಿದೆ?  ಅವರೆಲ್ಲಾ ಅದನ್ನು ನೋಡಿ ಏನು ಮಾಡುತ್ತಾರೆ?  ತಿಳಿದುಕೊಳ್ಳುವುದು ಏನನ್ನು?  ಸಿಗುವ ಸಂತೋಷ ಯಾವುದು?  ನೆಮ್ಮದಿ ಯಾವುದು?  ಹೀಗೆ ನಿಮ್ಮ ಏನೆಲ್ಲಾ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಸಿಗದೇ ಇರಬಹುದು.  ಆದರೂ ಅಲ್ಲಿಗೆ ಅವರು ಪ್ರವಾಸ ಹೋಗುತ್ತಾರೆ.  ಒಂದು ತರಹ ಹಾರರ್ ಸಿನಿಮಾ ನೋಡುವ ವೀಕ್ಷಕರಂತೆ ಇವರೂ ಸಹ.

ಯುರೋಪಿನ ಗ್ರೇಲೈನ್ ಒಂದು ಪುಟ್ಟ ದ್ವೀಪ.  ಅಲ್ಲಿ ಜನರಿಗಿಂತ ಜ್ವಾಲಾಮುಖಿಗಳೇ ಹೆಚ್ಚಿವೆ ಎಂಬುದು ರೂಢಿಮಾತು.  ಇತ್ತೀಚೆಗೆ ಅಲ್ಲಿರುವ ಏಷ್ಯೂಟಲ್ ಜ್ವಾಲಾಮುಖಿಗೆ ಜೀವ ಬಂತು.  ಜನ ಮಧ್ಯರಾತ್ರಿ ಎರಡು ಗಂಟೆಗೆ ಎದ್ದು ಜೀವ ಉಳಿಸಿಕೊಳ್ಳಲು ಓಡತೊಡಗಿದರು.  ಅದರಿಂದ ಎದ್ದ ಹೊಗೆಯಿಂದಾಗಿ ವಿಮಾನಗಳೆಲ್ಲಾ ರದ್ದಾದವು.  ಪ್ರವಾಸಿಗರಿಗೆ, ಪ್ರಯಾಣಿಕರಿಗೆ ಅಸೌಕರ್ಯ ಉಂಟಾಯಿತು.  ದ್ವೀಪದಲ್ಲಿ ಹಾಹಾಕಾರವೆದ್ದಿತು.  ಇದೆಲ್ಲಾ ಸಮಸ್ಯೆಗಳಿಂದ ಇಡೀ ದ್ವೀಪದ ಆರ್ಥಿಕಸ್ಥಿತಿ ಹದಗೆಟ್ಟಿತು.  ಸಾಲ ಕೇಳಿದರೂ ಯಾವ ದೇಶವೂ ಕೊಡಲು ಸಿದ್ಧರಿರಲಿಲ್ಲ.  ಆದರೆ ಕೆಲವೇ ದಿನಗಳಲ್ಲಿ ಪರಿಸ್ಥಿತಿ ತಿರುವುಮುರುವು.  ಆರ್ಭಟ ತಣ್ಣಗಾದ ಜ್ವಾಲಾಮುಖಿಯನ್ನು ನೋಡಲು ಪ್ರವಾಸೋದ್ಯಮ ಇಲಾಖೆಗೆ ಬಿಡುವಿಲ್ಲದ ಕೆಲಸ.  ಏಷ್ಯೂಟಲ್‌ನ ಸುತ್ತಮುತ್ತಲೂ ಹೋಗಲು ಅವಕಾಶವಿರಲಿಲ್ಲ.  ಆದರೆ……  ಫೀಮಾವೋರ್ಡುಹಲ್ಸ್‌ಗೆ ಹೋಗಲು ತೊಂದರೆ ಇರಲಿಲ್ಲ.  ಮೊದಲು ಜ್ವಾಲಾಮುಖಿಯ ಬಳಿಯಿರುವ ಹಿಮನದಿಯ ಮೂಲಕ ಅನೇಕರು ಜ್ವಾಲಾಮುಖಿಯ ಸಮೀಪದವರೆಗೂ ಹೋಗಲು ತಯಾರಾದರು.  ಸುಮಾರು ಒಂದು ಕಿಲೋಮೀಟರ್ ಹತ್ತಿರದವರೆಗೂ ಪ್ರವಾಸಿಗರನ್ನು ಕರೆದೊಯ್ಯಲು ಸಾಧ್ಯವಾಯಿತು.  ಜಗತ್ತಿನಾದ್ಯಂತ ವಿವಿಧ ದೇಶಗಳಿಂದ ಬಂದ ಪ್ರವಾಸಿಗರೂ ಅಲ್ಲಿದ್ದರು. ಹಾಗೇ ದ್ವೀಪವಾಸಿಗಳೂ ಇದ್ದರು.  ಭೂಮಿಯಾಳದಿಂದ ಶಕ್ತಿ ಹೊರಹೊಮ್ಮುವಿಕೆಯನ್ನು, ಅದರಿಂದಾಗುವ ಪರಿಸರ ಪಲ್ಲಟವನ್ನು ನೋಡುವುದೇ ಅವರ ಗುರಿ.  ಇದೊಂದು ಜೀವಿತಾವಧಿಯ ಅತ್ಯುತ್ತಮ ಅನುಭವವೆಂದು ಅವರಲ್ಲನೇಕರು ದಾಖಲಿಸಿದರು.  ದ್ವೀಪದ ಪ್ರವಾಸದ ವ್ಯವಸ್ಥಾಪಕರಾದ ಗುಡ್ರನ್ ಹೀಗೆ ವಿಶೇಷ ಪ್ರವಾಸದ ನೆನಪುಗಳನ್ನು ಬಿಚ್ಚಿಡುತ್ತಾರೆ.  ಇಂದು ಆ ದ್ವೀಪವು ಮತ್ತೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಿದೆ.

ಇದನ್ನೇ ಕರಾಳ ಪ್ರವಾಸ, ಕರಾಳ ಪರಿಸರ ಅಧ್ಯಯನ ಎಂದೆಲ್ಲಾ ಕರೆಯಲಾಗುತ್ತದೆ.  ಭೀಕರ ಪರಿಸರ ದುರಂತ ನಡೆದ ಪ್ರದೇಶಗಳ ವೀಕ್ಷಣೆ, ಅದರ ಇಂದಿನ ಸ್ಥಿತಿ, ದುರಂತದ ಮೊದಲಿನ ಸ್ಥಿತಿ, ಕಾಲಕ್ರಮೇಣ ಆಗುವ ಬದಲಾವಣೆ,  ಪರಿಸರ, ಸಮಾಜ, ದೈನಂದಿನ ಬದುಕಿನಲ್ಲಿ ಆಗುವ ಪರಿಣಾಮ ಇವೆಲ್ಲಾ ಪರಿಗಣಿಸಲಾಗುತ್ತದೆ.  ಪ್ರವಾಸಿಗಳಲ್ಲಿ ಕೇವಲ ಸಾಮಾನ್ಯರು, ವಿಜ್ಞಾನಿಗಳು, ಸಮಾಜಶಾಸ್ತ್ರಜ್ಞರು, ಹವಾಮಾನ ತಜ್ಞರು, ತೀವ್ರ ಪರಿಸರವಾದಿಗಳು ಹೀಗೆ ಯಾರೆಲ್ಲಾ ಇರಬಹುದು.

ಜಪಾನಿನ ಬಿಂಗೋ ಹೇಳುತ್ತಾರೆ. ತೀವ್ರ ಅಪಾಯಕಾರಿ ಪ್ರದೇಶಗಳಿಗೆ ಹೋಗುವುದಿಲ್ಲ.  ಹೋಗುವುದು ಐತಿಹಾಸಿಕ ತಾಣಗಳಿಗೆ, ಸುರಕ್ಷಿತವಾದ ಜಾಗಗಳಿಗೆ.  ಕಾರಣ ಆರೋಗ್ಯ ಏರುಪೇರು ಅಥವಾ ಕಠಿಣ ಶ್ರಮ ವಹಿಸುವುದು ಕಷ್ಟ.  ಆಕೆ ಪೋಲೆಂಡ್‌ನ ಅಸಿವಿಚ್‌ನಲ್ಲಿರುವ ಜರ್ಮನ್ ಯಾತನಾ ಶಿಬಿರಗಳಿಗೆ ಭೇಟಿ ನೀಡಿದ್ದಾರೆ.  ಅಂದಿನ ಬೀಭತ್ಸ ಕೃತ್ಯಗಳನ್ನು ಕಣ್ಣಿನಲ್ಲಿ ತುಂಬಿಕೊಳ್ಳುವ, ಹೃದಯಪೂರ್ವಕ ಅಶ್ರುತರ್ಪಣ ನೀಡುವ ಹಂಬಲ.  ಇದಕ್ಕಾಗಿ ಆಕೆ ಎರಡು ವರ್ಷಗಳಿಂದ ಪ್ರತಿ ಸಣ್ಣ ವಿವರಗಳನ್ನೂ ಬಿಡದೇ ಕಲೆ ಹಾಕಿದ್ದಾಳೆ.  ಅದನ್ನು ಗುರುತಿಸಿದ್ದಾಳೆ.  ಅಲ್ಲಿ ಹೋದಾಗ ಅದೇ ಪ್ರದೇಶವನ್ನು ನೋಡಿದ್ದಾಳೆ.  ಕನ್ನಡದ ಲೇಖಕರಾದ ನೇಮಿಚಂದ್ರರವರ ಪ್ರವಾಸಕಥನಗಳಾದ ಯಾದೇ ವಶೇಮ್, ಮನುರವರ ಪ್ರಾಚೀನ ಈಜಿಪ್ತ್ ಇವೆಲ್ಲಾ ಹೀಗೆ ಪೂರ್ವತಯಾರಿ ಮಾಡಿಕೊಂಡು ಹೋದ ಪರಿಸರ ಪ್ರವಾಸಗಳು.

ಕೆನಡಾದ ಸ್ಯೂ ಸೇಂಟ್‌ರವರು ಈ ರೀತಿಯ ಹತ್ತಕ್ಕೂ ಹೆಚ್ಚು ಪ್ರವಾಸಗಳನ್ನು ಮಾಡಿದ್ದಾರೆ.  ಕರಾಳ, ದುರಂತ ಪ್ರದೇಶಗಳ ಪ್ರವಾಸವು ರೋಮಾಂಚನ ನೀಡುತ್ತದೆ.  ಇತಿಹಾಸದ ಉತ್ಖನನ, ಹೊಸನೋಟ, ಆ ಮೂಲಕ ಇಂದಿನ ಪರಿಸರ ಪರಿಸ್ಥಿತಿಯ ಅವಲೋಕನ ಎನ್ನುತ್ತಾರೆ.

೧೯೮೬ರ ಏಪ್ರಿಲ್ ೨೬ರಲ್ಲಿ ಚರ್ನೋಬಿಲ್‌ನ ಅಣುಸ್ಥಾವರ ನಂಬರ್-೪ ಸ್ಫೋಟಗೊಂಡಿತು.  ವಿಕಿರಣದ ವ್ಯಾಪ್ತಿ ನಾಲ್ಕಾರು ಕಿಲೋಮೀಟರ್‌ಗಳಲ್ಲಿ ತೀವ್ರವಾಗಿದ್ದರೆ, ಸುಮಾರು ೩೦ಕಿಲೋಮೀಟರ್‌ಗಳವರೆಗೆ ಹಬ್ಬಿತ್ತು.  ಲಕ್ಷಾಂತರ ಜನರು ಮನೆಗಳನ್ನು ತೊರೆದು ಹೋದರು.  ಆ ದುರಂತದಿಂದಾದ ಅನಾಹುತ ಇನ್ನೂ ಮುಂದುವರೆಯುತ್ತಿದೆ.  ಇಂಗ್ಲೆಂಡ್‌ನ ಬೀಟಾ ಅಂಡರ್‌ಸನ್ ಹೇಳುತ್ತಾರೆ. ಇಂದು ಜನರೇ ಇಲ್ಲದ ಆ ಪ್ರದೇಶ ಹೇಗಿದೆ? ಪ್ರಕೃತಿ ಹೇಗೆ ತನ್ನ ಸಮತೋಲನ ಮಾಡಿಕೊಳ್ಳುತ್ತಿದೆ? ಅಲ್ಲಿನ ಪರಿಸರದ ಪಿಸುಮಾತುಗಳು ಯಾವುವು?  ಹೀಗೆ ನೂರಾರು ಪ್ರಶ್ನೆಗಳನ್ನು ಮನದಲ್ಲಿಟ್ಟುಕೊಂಡು ಹೋಗಿದ್ದೆ.  ಮನುಷ್ಯರ ಅತ್ಯಂತ ಹೇಯಕೃತ್ಯಗಳ ಪರಿಣಾಮದ ಸಾಕ್ಷಿ ಅದು.  ಎಂದೆಂದೂ ಅಳಿಸದು ಅವರ ಮಾತಿನಲ್ಲಿ ಗಾಢವಾದ ವಿಷಾದವಿತ್ತು.

ಚರ್ನೋಬಿಲ್ ದುರಂತ ಪ್ರದೇಶಕ್ಕೆ ನೇರ ಪ್ರವೇಶ ಸಿಗದು.  ಸುಮಾರು ೩೦ ಕಿಲೋಮೀಟರ್ ಅಂತರದವರೆಗೆ ಹೋಗಲು ಸಾಧ್ಯ.  ಚರ್ನೋಬಿಲ್ ಪಟ್ಟಣ ಸಂಪೂರ್ಣ ಜನವಸತಿಯಿಂದ ಮುಕ್ತವಾಗಿಲ್ಲ.  ಪ್ರೀಪ್ಯಾತ್ ಹಳ್ಳಿ ಮಾತ್ರ ಖಾಲಿ ಖಾಲಿ.  ದೆವ್ವಗಳ ವಾಸಸ್ಥಾನ.  ಅಲ್ಲಿರುವ ಅರೆಬಿದ್ದ ಕಟ್ಟಡಗಳೆಲ್ಲಾ ಸಮಾಧಿಗಳನ್ನು ನೆನಪಿಸುತ್ತದೆ.  ಅಲ್ಲಿನ ಆಸ್ಪತ್ರೆ, ಶಾಲೆ, ಮೈದಾನ, ಪೋಲೀಸ್ ಸ್ಟೇಷನ್, ವಸತಿ ಸಮುಚ್ಛಯ, ನಾಟಕ ಮಂದಿರ, ಕ್ರೀಡಾಂಗಣಗಳಿಗೆ ಕರೆದೊಯ್ದಿದ್ದರು.  ಆಟದ ಮೈದಾನದಲ್ಲಿ ಕಾಡು ಬೆಳೆದಿದೆ.  ಮನುಷ್ಯತ್ವವು ಸಮಾಧಿಯೊಳಗಿನ ಕೂಗು.  ಪ್ರಕೃತಿಯು ಅಲ್ಲಿ ಚಿಗುರುತ್ತಾ ಹೊಸ ಕವಿತೆಯನ್ನು ಹಾಡುತ್ತಿದೆ.  ಪ್ರೀಪ್ಯಾತ್ ಅತ್ಯಂತ ಸುಂದರ ಪ್ರದೇಶ.  ಇಂದು ಅಲ್ಲಿ ಜನವಸತಿ ಇರದ ಕಾರಣ ಅದೊಂದು ಮೌನ ಸುಂದರಿಯಂತೆ ಕಂಡಿತು.  ಅಲ್ಲಿಯ ಪ್ರತಿ ಪ್ರದೇಶದಲ್ಲೂ ಅಂದು ಹೇಗಿತ್ತೋ ಹಾಗೇ ಆ ಪ್ರದೇಶವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.  ಅಂಗನವಾಡಿಯಲ್ಲಿ ಮಕ್ಕಳ ಆಟದ ವಸ್ತುಗಳೆಲ್ಲಾ ಹಾಗೇ ಬಿದ್ದಿವೆ.  ಮನೆಗಳಲ್ಲಿ ಅಡುಗೆಮನೆ ಪಾತ್ರೆಗಳು, ಬೆಡ್‌ರೂಂ ಹ್ಯಾಂಗರ್‌ಗಳು ತುಕ್ಕು ಹಿಡಿದು ಹಾಗೇ ಕುಳಿತಿವೆ.  ಇವೆಲ್ಲಾ ವಿಕಿರಣಕ್ಕೆ ಒಳಪಟ್ಟ ಕಾರಣ ಒಯ್ಯಲು ಯಾರೂ ಬಂದಿಲ್ಲ.

ದುರಂತ ಅಣುಸ್ಥಾವರದವರೆಗೆ ಕರೆದೊಯ್ಯುವುದಿಲ್ಲ.  ದೂರದಿಂದಲೇ ಅದನ್ನು ತೋರಿಸಲಾಗುತ್ತದೆ.  ಅದರಲ್ಲಿನ್ನೂ ವಿಕಿರಣ ಇದೆ.  ಅಲ್ಲಿನ ನೆಲ ಸ್ಮಾರಕಗಳನ್ನು ಮುಟ್ಟಿ ನೋಡಬೇಕೆಂಬ ಹಂಬಲ ಈಡೇರಲಿಲ್ಲ.  ಹೀಗಾಗಿ ಮತ್ತೆ ಮತ್ತೆ ಅಲ್ಲಿಗೆ ಹೋಗಬೇಕೆಂಬುದು ಅಂಡರಸನ್ ಆಸೆ.

ಅಲ್ಲೀಗ ಮರಗಿಡಗಳೊಂದಿಗೆ ವಿವಿಧ ರೀತಿಯ ಹಕ್ಕಿಗಳು, ಕೀಟಗಳು, ಚಿಟ್ಟೆ ಪತಂಗಗಳು ಕಾಣಿಸುತ್ತವೆ.  ಮನುಷ್ಯರಿಲ್ಲದೆ ಬಿಕೋ ಎನ್ನುತ್ತಿದ್ದರೂ ಜೀವಿ ಪರಿಸರ ಅದಕ್ಕೆ ಹೊಂದಿಕೊಂಡಿದೆ.  ನೋಡುವ ನಮಗೆ ಮಾತ್ರಾ ದುರಂತದ ಹಿನ್ನೆಲೆಯಿಂದಾಗಿ ವಿಷಾದ ಮೂಡುತ್ತದೆ ಎನ್ನುವ ಅಭಿಪ್ರಾಯ ಅವರದು.

ಜನರು ಸಿಂಗಪೂರ್, ಸ್ವಿಟ್ಜರ್ಲೆಂಡ್‌ಗಳನ್ನು ಬಿಟ್ಟು ಇರಾಕ್‌ಗೆ ಅಥವಾ ಇಥಿಯೋಪಿಯಾಗೆ ಏಕೆ ಭೇಟಿ ಕೊಡುತ್ತಾರೆ ಎಂಬ ವಿಶ್ಲೇಷಣೆ ಮಾಡಿದರೆ ಜನರ ಮನೋಭಾವದ ಪರಿಚಯವಾಗುತ್ತದೆ.

ಅನೇಕರಿಗೆ ಮರಣದ ಬಗೆಗಿನ ಕುತೂಹಲ, ಅದ್ಭುತ ಅನುಭವದ ಹುಡುಕಾಟ, ಹೊಸದಾರಿಯಲ್ಲಿ ಸಾಗುವ ತವಕ.  ಪ್ರಕೃತಿಯ ಪ್ರಾಬಲ್ಯವನ್ನು ಅಳೆವ ಹಮ್ಮು, ದುರಂತದ ಹಿಂದಿನ ಕಾರಣ, ಉತ್ಖನನ ಮಾಡುವ ಪತ್ತೇದಾರಿಕೆ-ಹೀಗೆ ಏನೆಲ್ಲಾ ಭಾವಗಳು ಕಾಣಿಸುತ್ತವೆ.  ಭಯ, ಭಕ್ತಿ, ಭಾವುಕತೆಗಳು, ದೇವಸ್ಥಾನ, ಜಲಪಾತಗಳ ವೀಕ್ಷಣೆಗೆ ಕಾರಣವಾದರೆ ಕರಾಳ ದುರಂತಗಳ ವೀಕ್ಷಣೆಗೆ ಕುತೂಹಲ-ಪ್ರಶ್ನೆಗಳೇ ಕಾರಣವಾಗಿರುತ್ತವೆ.  ಇದಕ್ಕಾಗಿಯೇ ಜನ ಮುಗಿಬಿದ್ದು ಜಲಿಯನ್‌ವಾಲಾಬಾಗ್, ಗ್ರೌಂಡ್‌ಜೀರೋ, ಟೈಟಾನಿಕ್ ಅಥವಾ ಸುನಾಮಿ ಪ್ರದೇಶಗಳಿಗೆ ಭೇಟಿ ನೀಡುತ್ತಿರುತ್ತಾರೆ.

ಪ್ರತಿಯೊಬ್ಬರೂ ಕರಾಳ ದುರಂತ ಪ್ರವಾಸ ಮಾಡಿರುತ್ತಾರೆ.  ರಾಜೀವ್‌ಗಾಂಧಿ ಸತ್ತ ಸ್ಥಳವಿರಬಹುದು, ಪಂಜಾಬ್‌ನ ಸುವರ್ಣ ದೇಗುಲವಿರಬಹುದು, ಆಪ್ಘಾನಿಸ್ಥಾನದ ಬುದ್ಧನ ಜಾಗವಿರಬಹುದು.  ಆಯಾ ಜಾಗಕ್ಕೆ ಹೋದಾಗ ಅಲ್ಲಿನ ಮೌನ, ವಸ್ತುಗಳು, ನೆಲ, ಗೋಡೆ, ಛಾವಣಿ, ಕಿಟಕಿಗಳೂ ಸಹ ನಿಮಗೆ ಕಥೆ ಹೇಳಿದಂತೆ ಭಾಸವಾಗುತ್ತದೆ.  ಭಯೋತ್ಪಾದಕ ಕೃತ್ಯಗಳೆಲ್ಲಾ ಮುಗಿದ ಮೇಲೆ ಮುಂಬೈನ ತಾಜ್ ಹೋಟೆಲ್ಲಿಗೆ ಭೇಟಿಯಿತ್ತ ವಿಲಾಸ್‌ರಾವ್ ದೇಶಮುಖ್ ಹಾಗೂ ರಾಂಗೋಪಾಲ್‌ವರ್ಮಾರವರಂತೆ ದುರಂತಗಳನ್ನು ಆಗುತ್ತಿರುವಾಗಲೇ ಇಣುಕುವುದು, ಆಗುತ್ತಿರುವಂತೆ ಭೇಟಿ ನೀಡುವುದು ಸಹ ಮನುಷ್ಯ ಕುತೂಹಲ ವಿಷಯಾಸಕ್ತಿ.  ದೃಷ್ಟಿಕೋನ ವಿಶಾಲವಾಗಿರಬೇಕೆಂಬುದು ಅಗತ್ಯ.  ಮಾನವೀಯತೆಯ ಕೊಲೆ, ನೋವಿನ ಕಾವ್ಯವನ್ನು ಉಸುರುವ ಆ ಜಾಗಗಳಿಗೆ ಹೃದಯದ ಪ್ರತಿಸ್ಪಂದನದ ಅಗತ್ಯವಿದೆ.

ಭಾರತದಲ್ಲಿ ಇಂತಹ ಸ್ಥಳಗಳು ಈಗ ನೂರಾರು.  ಸುನಾಮಿ ಪೀಡಿತ ಕೇರಳ ಸಮುದ್ರ ತೀರದ ಹಳ್ಳಿಗಳು, ಎಂಡೋಸಲ್ಫಾನ್‌ನಿಂದ ಹಾನಿಗೊಳಗಾದ ಪಡ್ರೆಯ ಪ್ರದೇಶ, ಕೋಮು ಪ್ರದೇಶವಾದ ಬಾಬಾಬುಡನ್‌ಗಿರಿ, ವೀರಪ್ಪನ್ ಆಳಿದ ಮಲೆಮಹದೇಶ್ವರ ಅರಣ್ಯ ಪ್ರದೇಶ. ಇತ್ತೀಚೆಗೆ ಯೆಲ್ಲಾಪುರದಲ್ಲಿರುವ ಬೀಸ್ಗೋಡು ಗಣಿ ಪ್ರದೇಶಕ್ಕೆ ಹೋದಾಗ, ದೊಡ್ಡ ದೊಡ್ಡ ಪ್ರಪಾತಗಳಲ್ಲಿ ತುಂಬಿಕೊಂಡಿರುವ ನೀರು ಅದ್ಭುತವಾಗಿತ್ತು. ರಾಜ್‌ಕುಮಾರ್ ಅಭಿಮಾನಿ ಸಂಘದ ಸದಸ್ಯರು ರಾಜ್‌ಕುಮಾರ್‌ನನ್ನು ಬಂಧಿಸಿ ಇಟ್ಟಿದ್ದ ಜಾಗಗಳನ್ನು ಮತ್ತೆ ನೋಡಲು ಹೋಗಿದ್ದು ಸುದ್ದಿಯಾಗಿತ್ತು.

೨೦ವರ್ಷಗಳ ಕಾಲ ೬,೦೦೦ ಚದರ ಕಿಲೋಮೀಟರ್ ವ್ಯಾಪ್ತಿಯ ಕಾಡನ್ನು ಆಳಿದ್ದ ಕಾಡುಗಳ್ಳ ವೀರಪ್ಪನ್, ೧೮೪ ಜನರನ್ನು ಕೊಂದಿದ್ದ ನರಹಂತಕ ವೀರಪ್ಪನ್, ೨೦೦ಕ್ಕೂ ಹೆಚ್ಚು ಆನೆಗಳನ್ನು ಕೇವಲ ದಂತಕ್ಕೋಸ್ಕರ ಕೊಂದಿದ್ದ ವೀರಪ್ಪನ್, ೫೦೦ ಕೋಟಿ ರೂಪಾಯಿ ಬೆಲೆಬಾಳುವ ರಕ್ತಚಂದನ, ಶ್ರೀಗಂಧದ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡಿದ್ದ ವೀರಪ್ಪನ್  ಇಂದಿಗೂ ಅಲ್ಲಿನ ಹಳ್ಳಿಗಳಲ್ಲಿ ಆರಾಧ್ಯ ದೈವ.  ಭಯ ಹುಟ್ಟಿಸುವ, ಛಳಿ ನಡುಕ ಉಂಟುಮಾಡುವ ಭೂತ ಭಯೋತ್ಪಾದಕ.  ಅವನು ಕೊಲೆಯಾದರೂ ಅಲ್ಲಿನ ಪ್ರದೇಶಕ್ಕೆ ಭೇಟಿ ನೀಡಿದಾಗ ದಿಢೀರ್ ಎದುರು ಬಂದರೆ ಎಂಬ ಅನೂಹ್ಯ ಯೋಚನೆಯೊಂದು ಧುತ್ತನೆ ಎದುರಾಗಿ ಬೆವರು ತರುತ್ತದೆ.  ವೀರಪ್ಪನ್ ಕುರಿತ ದಂತಕಥೆಗಳು, ಅಡಗುತಾಣಗಳು, ಪಲಾಯನದ ಹಾದಿಗಳು, ವಾಸವಿದ್ದ ಮನೆಗಳು, ಆನೆ, ಮನುಷ್ಯ, ಮರಗಳನ್ನು ಕೊಂದ ಜಾಗಗಳನ್ನು ತೋರಿಸುವ ಪ್ರವಾಸ ಯೋಜನೆ ಜನಪ್ರಿಯವಾಗುತ್ತಿದೆ.  ಇದು ಭಯೋತ್ಪಾದನಾ ಪ್ರವಾಸವಲ್ಲ.  ಪರಿಸರ ಅಧ್ಯಯನ ಪ್ರವಾಸ.  ಹಿಂದೆ ಹೇಗಿತ್ತು, ದುರಂತದಲ್ಲಿ ಏನೇನಾಯ್ತು, ಈಗ ಹೇಗಿದೆ ಎಂದು ತೋರಿಸುವ ಕೆಲಸವಿದು ಎನ್ನುತ್ತಾರೆ ನಿರ್ದೇಶಕರಾದ ಕೆ. ವಿಶ್ವನಾಥರೆಡ್ಡಿ.  ನೆನಪಿಸಿಕೊಳ್ಳಿ, ಕೃಪಾಕರ-ಸೇನಾನಿಯಂತಹ ಪ್ರಖ್ಯಾತ ಪರಿಸರ ಅಧ್ಯಯನಕಾರರು ವೀರಪ್ಪನ್ ಕೈಯಲ್ಲಿ ಬಂಧಿಯಾಗಿದ್ದರು.  ಅವನೊಂದಿಗಿರುವಷ್ಟು ದಿನವೂ ಅವನ ಮಾನಸಿಕ ಸ್ಥಿತಿಯ ಪರಿಶೀಲನೆ, ಕಾಡಿನೊಂದಿಗಿನ ಅವನ ಸಂಬಂಧ, ನಡವಳಿಕೆ.  ಅದು ತಮ್ಮ ಮೇಲೆ, ಇತರ ಸಾಮಾನ್ಯರ ಮೇಲೆ ಉಂಟುಮಾಡುವ ಪರಿಣಾಮ ಇದನ್ನೆಲ್ಲಾ ದಾಖಲಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ.  ಇಲ್ಲಿ ಮನುಷ್ಯ ಮತ್ತು ಪರಿಸರ, ಮನುಷ್ಯ ಮತ್ತು ಇತರ ಜೀವಿಗಳು ಹಾಗೂ ಮನುಷ್ಯ ಮತ್ತು ಮನುಷ್ಯರ ನಡುವಿನ ಅನೇಕ ವಿಚಾರಗಳು ಅನಾವರಣಗೊಳ್ಳುತ್ತಾ ಹೋಗುತ್ತದೆ.  ಈ ಹಿನ್ನೆಲೆಯಲ್ಲಿ ನೋಡಿದಾಗಲೂ ವೀರಪ್ಪನ್ ಕಾಡಿನ ಜೀವಿಯಾಗಿಯೇ ಉಳಿದು, ಬದುಕಿದ ರೀತಿ, ಅಲ್ಲಿನ ದಟ್ಟಕಾಡನ್ನು ನೋಡಿ ಅದನ್ನು ನೆನಪಿಸಿಕೊಳ್ಳುವಾಗ ಉಂಟಾಗುವ ಭಾವ ರೋಮಾಂಚನವನ್ನುಂಟುಮಾಡುತ್ತದೆ.

ಭೋಪಾಲ್ ದುರಂತ ಪ್ರದೇಶಕ್ಕೆ ಭೇಟಿ, ಗುಜರಾತ್‌ನ ಗೋಧ್ರಾಕ್ಕೆ ಭೇಟಿ, ಮೊನ್ನೆ ಮೊನ್ನೆ ಕೊಲ್ಕೊತ್ತಾದಲ್ಲಿ ರೈಲಿಗೆ ಸಿಕ್ಕು ಏಳು ಆನೆಗಳು ಸತ್ತ ಸ್ಥಳಕ್ಕೆ ಹೋಗಿರಬಹುದು.  ಈ ದುರಂತಗಳೆಲ್ಲ ಸದಾ ಕಾಡುವ ನೆನಪುಗಳು.  ದುರಂತಕ್ಕಿಂತಲೂ ನೆನಪುಗಳು ನೀಡುವ ಹಿಂಸೆ, ವಿಚಿತ್ರ ತಾಕಲಾಟಗಳು ಅಧಿಕ, ನಿರಂತರ ಭಾವೋದ್ರೇಕಪೂರಿತ, ಪ್ರಬಲ ಪರಿಣಾಮಕಾರಿ.  ಇವೆಲ್ಲಾ ಭಯಭಕ್ತಿ, ಆಶ್ಚರ್ಯ, ರುದ್ರರಮಣೀಯತೆಯನ್ನೂ ಮೀರಿದ ಮಾನಸಿಕ ಸ್ಥಿತಿಯನ್ನು ತಲುಪಿಸುತ್ತದೆ.  ಕೇವಲ ಸ್ಥಾಯಿಭಾವದಿಂದ ಇತಿಹಾಸ, ವರ್ತಮಾನ ಹಾಗೂ ಭವಿಷ್ಯದ ಕಾಲಗಳಲ್ಲಿ ಸಂಚರಿಸುವಂತೆ ಮಾಡುತ್ತದೆ.  ಅಂದು ಹುಲಿ ಕೊಂದವ ಧೀರ, ಶೂರ.  ಇಂದು ಅಪರಾಧಿ.  ಮುಂದೆ ಘೋರಪಾತಕಿ.  ಇದು ದುರಂತ ಪರಿಸರ ತೋರಿಸುವ ಪರಿಸ್ಥಿತಿ.

ನೀವು ಮನಸ್ಸಂತೋಷಕ್ಕೋಸ್ಕರ ಹಿನ್ನೀರಿನ ಪ್ರದೇಶಕ್ಕೆ ಪಿಕ್‌ನಿಕ್ ಬಂದಿದ್ದೀರಾದರೆ ಅಲ್ಲಿ ಮುಳುಗಡೆಯಾದ ಬದುಕಿನ ಚಿತ್ರಣ ಕಾಡದೇ ಇರದು.  ಶರಾವತಿ ಹಿನ್ನೀರು, ವಾರಾಹಿ ಯೋಜನೆ, ತುಂಗಾ ಯೋಜನೆ ಅಥವಾ ಕೃಷ್ಣಾ ನದಿಯಲ್ಲಿ ಮುಳುಗಡೆಯಾದ ಬಾಗಲಕೋm, ಕಾವೇರಿಯಿಂದ ಆಗಾಗ ಮೇಲೆದ್ದು ಬರುವ ದೇವಸ್ಥಾನಗಳೆಲ್ಲಾ ಅಲ್ಲಿ ಮುಳುಗಿಹೋದ ಜನರ, ಜೀವಿಗಳ, ಅರಣ್ಯದ ಕಥೆಯನ್ನು ಹೇಳುತ್ತವೆ.  ಸಂತ್ರಸ್ತರ ಅಳಲನ್ನು ತೋಡಿಕೊಳ್ಳುತ್ತಿರುತ್ತವೆ.  ಹೊಸ ಬದುಕನ್ನು ಅರಸಿ ಹೊರಟ ಜನರ-ಜೀವಿಗಳ ಬವಣೆಯನ್ನು ಬಿಚ್ಚಿಡುತ್ತಿರುತ್ತವೆ.  ಪುನರ್‌ವಸತಿ ಸಿಗದ ಪಾಡನ್ನು ವಿವರಿಸುತ್ತದೆ.  ಮಳೆಯಿಂದ ಅನಾಹುತಕ್ಕೀಡಾದ ಉತ್ತರ ಕರ್ನಾಟಕದ ಚಿತ್ರಣವನ್ನು ನೋಡಲು ಇಂದಿಗೂ ದೇಶವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.  ತಮ್ಮ ಅಭಿಪ್ರಾಯಗಳನ್ನು, ವಿಚಾರಗಳನ್ನು ಬರೆಯುತ್ತಿರುತ್ತಾರೆ.  ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಇದರ ಅಧ್ಯಯನವನ್ನೇ ಕೈಗೊಂಡಿದೆ.  ಪರಿಸರ ಹಾನಿಯ ಚಿತ್ರಣವನ್ನು ಅನಾವರಣಗೊಳಿಸಿದೆ.  ಹೊಸ ರೋಗಗಳು, ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲು ಉಂಟಾಗುವ ಸಮಸ್ಯೆಗಳು, ಬದಲಾದ ಜೀವನ ವಿಧಾನ, ಕೃಷಿ, ಸಾಂಸ್ಕೃತಿಕ ಬಿಕ್ಕಟ್ಟುಗಳನ್ನೆಲ್ಲಾ ಆ ಅಧ್ಯಯನ ವಿವರಿಸುತ್ತದೆ.

ದುರಂತಗಳಿಗೆ ಸಿಲುಕಿದ ಮನುಷ್ಯರ ಅಧ್ಯಯನವೂ ಒಂದು ಪರಿಸರ ಅಧ್ಯಯನವೇ ಆಗಿದೆ.  ಅಂದಿನ ಗಾಢ ಬದುಕನ್ನು-ಪರಿಸರದೊಂದಿಗಿನ ತಾದ್ಯಾತ್ಮಕತೆಯನ್ನು ನೆನಸಿಕೊಳ್ಳುತ್ತಾ, ಕೊರಗುತ್ತಾ, ಮರುಗುತ್ತಾ ಬದುಕುತ್ತಿರುವ ಅನೇಕ ಕುಟುಂಬಗಳ ಬದುಕೇ ದಾಖಲಾತಿಗೆ ಯೋಗ್ಯವಾದುದಾಗಿರುತ್ತದೆ.

ಪರಿಸರದ ಇತಿಹಾಸ ಹೇಳುವ ಕಥೆಗಳು ಮುಂದಿನ ಪರಿಸರಸಂಬಂಧಿ ವಿಚಾರಗಳಿಗೆ ಬುನಾದಿಯಾಗಿರಬಹುದು ಅಥವಾ ಎಚ್ಚರಿಕೆಯಾಗಿರಬಹುದು.  ಗಮನಿಸಿ ನೋಡಬೇಕಾದ್ದು ಮುಖ್ಯ.