ಪ್ರವೇಶ

ಭಾರದ ದೇಶದ ಸಾಧುಸಂತರ ನಾಡು ಋಷಿಗಳ ಬೀಡು, ಅನಾದಿಕಾಲದಿಂದಲೂ ಜ್ಞಾನಿಗಳು ಮತ್ತು ಮುನಿಗಳು ಕಾಲಕಾಲಕ್ಕೆ ಬಂದು, ತಮ್ಮ ಕರ್ತೃತ್ವ ಶಕ್ತಿಯಿಂದ ಸಮಾಜವನ್ನು ಮುನ್ನಡೆಸಿದ್ದಾರೆ.ಜನಾಂಗಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಮಹಾಪುರುಷರು ಜನಸಾಮಾನ್ಯರಂತೆ ಜನಿಸಿ ಬಂದು ಅಸಾಮಾನ್ಯರಾಗಿ ಬೆಳೆದಿದಾರೆ. ಅಗ್ರಮಾನ್ಯರಾಗಿ ಬೆಳಗಿದ್ದಾರೆ ಧಣಿವರಿಯದ ದುಡಿಮೆ, ಅವಿರತ ಪರಿಶ್ರಮ, ಅಪಾರಶೃದ್ಧೆ, ಅಪ್ಪಟ ಪ್ರಮಾಣಿಕತೆಗಳಿಂದ ಸಾಧಕ ಯೋಧರಾಗಿದ್ದಾರೆ ಹಲವರು ಸಿದ್ಧಿಪುರುಷರೂ ಯೋಗಿವರ್ಯರೂ, ಕೆಲವರು ಕಾರಣಿಕ ಪುರುಷರು ಆಗಿ ಹೋಗಿದ್ದಾರೆ, ನಿರಂತರ ಸಾಧನೆಯಿಂದ ಮಾನವನು ಮಹಾಮಾನವನಾಗುವುದು, ಮಹಾಮಾನವನು ದೇವಮಾನವನಾಗುವ ದಾರಿಯನ್ನು ವಿಶ್ವಕ್ಕೆ ತೋರಿಸಿ ಕೊಟಟಿದ್ದಾರೆ. ಅಂತಹ ಮಹಾತ್ಮ ಭವ್ಯ ಬದುಕು ಸರ್ವರಗೂ ಆದರ್ಶಪ್ರಾಯವಾಗಿದೆ. ಈ ಪರಂಪರೆಯಲ್ಲಿ ಮರೇಗುದ್ದಿ ಶ್ರೀ ಮಠದ ನಿರಂಜನ ಮೂರ್ತಿಗಳೂ ಬರುತ್ತಾರೆ ಅಂತಹ ಮಹಾಪುರುಷರು –

ಲೋಕದಂತೆ ಬಾರರು
ಲೋಕದಂತೆ ಇರರು
ಲೋಕದಂತೆ ಹೋಗರು ನೋಡಯ್ಯ
ಪುಣ್ಯದಂತೆ ಬಪ್ಪರು
ಜ್ಞಾನದಂತೆ ಇಪ್ಪರು
ಮುಕ್ತಿಯಂತೆ ಹೋಹರು ನೋಡಯ್ಯ
ಉರಿಲಿಂಗದೇವಾ ನಿಮ್ಮಶರಣರು
ಉಮಾಪಶೀತರಾಗಿ ಉಪಮಿಸಬಾರದು

ಎಂಬ ಶಿವಶರಣ ಉರಿಲಿಂಗ ದೇವರ ವಚ ಪ್ರಸಾದವಾಣಿಯಾಗಿದೆ. ಈ ವಚನಕ್ಕೆ ಸಮ್ಯಕ್ ಸಾಕ್ಷಿಯಾಗಿ ಬಾಳಿ ಬೆಳಗಿದವರು, ಜಗತ್ತನ್ನು ಬೆಳಕಿನತ್ತ ಮುನ್ನಡೆಸಿದವರು ಮರೇಗುದ್ದಿಯ ಅಡವಿಸಿದ್ದೇಶ್ವರ ಮಠದಪರಮಪೂಜ್ಯ ಮಡಿವಾಳೇಶ್ವರರು.

ಮಠಗಳು

ಕನ್ನಡ ನಾಡಿನಲ್ಲಿ ಮಠಗಳಿಗೆ ಪರಂಪರೆ ಇದ್ದರೂ: ತೀರ ಪ್ರಾಚೀನವಾದ ಇತಿಹಾಸವಿಲ್ಲ. ನಮ್ಮ ನಾಡಿನ ಅತೀ ಪ್ರಾಚೀನ ಸಂಸ್ಥೆಗಳೆಂದರೆ ದೇವಾಲಯಗಳೇ ಆಗಿವೆ. ಲಿಂಗಾಯುತ ಮಠಗಳಿಗೆ ಹನ್ನೆರಡನೆಯ ಶತಮಾನಕ್ಕಿಂತಲೂ ಮೊದಲು ಪ್ರತ್ಯೇಕವಾದ ಅಸ್ತಿತ್ವವಿರಲಿಲ್ಲ ಬಸವಾದಿ ಪ್ರಮಥರ ಕಾಲದಲ್ಲಿ ಮಠಗಳು ದೇವಾಲಯದ ಭಾಗವಾಗಿಯೇ ಇದ್ದವು. ಆಯಾ ದೇವಾಲಯಗಳ ಸ್ಥಾನಪರೆ’ ಅಥವಾ ಅರ್ಚಕರ ಆಶ್ರಯ ತಾಣಗಳಾಗಿದ್ದವು. ದೇವಾಲಯದ ಆಸ್ತಿಯೇ ಮಠದ ಆಸ್ತಿಯಾಗಿತ್ತು. ಮರವು ದೇವಾಲಯದ ಅವಿಭಾಜ್ಯ ಅಂಗವಾಗಿರುವುದರಿಂದ ಮಠವೆಂದು ಕರೆಯುವ ರೂಢಿ ಬೆಳೆದು ಬಂದಿತೆಂದು ತಿಳಿದುಬರುತ್ತದೆ. “ಶ್ರೀ ಮಠಗಳು, ಮಠಾಧಿಪತಿಗಳು ಲೌಕಿಕ, ಪಾರಮಾರ್ಥಿಕ ವಿದ್ಯೆಯನ್ನು ಕೊಡಬಲ್ಲ ‘ಗುರುಗಳೂ’ ಶಿಷ್ಯರಿಗೆ ರೋಗ ಬಂದರೆ, ಚಿಕಿತ್ಸೆ ನೀಡಬಲ್ಲ ‘ವೈದ್ಯರೂ’ ಆಗಿದ್ದರು. ದೈನಂದಿನ ಬದುಕಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾರ್ಗದರ್ಶಕರೂ ಆಗಿರುತ್ತಿದ್ದರು. ಜ್ಯೋತಿಷಿಗಳೂ, ಕವಿಗಳೂ, ಪರಮತಪಸ್ವಿಗಳೂ ತ್ರಿಕಾಲಜ್ಞಾನಿಗಳೂ ಇದ್ದುದರಿಂದ ಭಕ್ತರಿಗೆ ಅವರ ಮೇಲೆ ಅತಿಶಯ ಶೃದ್ಧೆ ಹಾಗೂ ಗೌರವಾದರಗಳು ಇದ್ದುದು ಸಜಹವೆ. ಅವರ ಜೀವನವು ಜ್ಯೋತಿಯಂತೆ ಪ್ರಕಾಶವೂ, ತ್ಯಾಗದಿಂದ ಕೂಡಿದ್ದಾಗಿರುತ್ತದೆ. ಅವರ ವೇಷವು ‘ಶಾಂತಿ’ ಯ ಮತ್ತು ‘ವಿರಕ್ತಿ’ಯ ಸಂಕೇತವು ಆಗಿದೆ. ಸಮಾಜಸೇವೆ, ಧರ್ಮೋಪದೇಶ, ನೀತಿಯ ಉಪದೇಶ ಹಿರಿಯರ ಮಾರ್ಗಾಚರಣೆ ಅವರ ಗುರುಗಳಾಗಿದ್ದವು” ಎಂದಿರುವ ಶ್ರೀ ಎನ್ ಡಿ, ಬಗರಿಯವರ ಮತುಗಳು (ಮಡಿವಾಳೇಶ್ವರ ಚರಿತೆ’ ಮುನ್ನಿಡಿ) ಶ್ರೀ ಮಠಗಳ ಹಾಗೂ ಮಠಾಧೀಶರ ಚಟುವಟಿಕೆಗಳನ್ನು ಸೊಗಸಾಗಿ ಪರಿಚಯಿಸುತ್ತವೆ. ಈ ಮೇಲೆ ಪ್ರಸ್ತಾಪಿಸಿದ ಎಲ್ಲ ಕಾರ್ಯಗಳನ್ನು ಅಳವಡಿಸಿಕೊಂಡು, ಅವುಗಳನ್ನು ಅನುಷ್ಟಾನಗೊಳಿಸಿರುವುದು ಮರೇಗುದ್ದಿಯ ಅಡವಿಸಿದ್ದೇಶ್ವರ ಮಠವಾಗಿದೆ.

ಮರೇಗುದ್ದಿಯ ಅಡವಿಸಿದ್ಧೇಶ್ವರ ಮಠವು ಒಂದು ವಿರಕ್ತಮಠವಾಗಿದ್ದು ಅಂಕಲಗಿ ಅಡವಿಸಿದ್ಧೇಶ್ವರ ಮಠದ ಪರಂಪರೆ ಸೇರಿದ್ದಾಗಿದೆ. ಹದಿನೆಂಟನೆಯ ಶತಮಾನದಲ್ಲಿ ಬಾಳಿ ಬೆಳಗಿದ ಶ್ರೀ ಮಡಿವಾಳೇಶ್ವರ ಸ್ವಾಮಿಗಳಿಂದ ಮರೇಗುದ್ದಿಯ ಶ್ರೀ ಮಠವು ಸಂಸ್ಥಾಪನೆಗೊಂಡಿದೆ. ಶ್ರೀಯುತರು ಅಂಕಲಗಿ ಅಡವಿಸಿದ್ಧೇಶ್ವರಸ್ವಾಮಿಗಳಿಂದ ಅನುಗ್ರಹಿತರಾಗಿ: ಅವರ ಪ್ರೇರಣೆಯಿಂದ ಮರೇಗುದ್ದಿಯಲ್ಲಿ ಮಠವನ್ನು ಆರಂಭಿಸಿದವರು ಮರೇಗುದ್ದಿ ಮಠದ ಪರಂಪರೆಯನ್ನು ಅರಿತುಕೊಳ್ಳಬೇಕೆಂದರೆ ಮೊದಲು ಅಂಕಲಗಿ ಅಡವಿಸಿದ್ಧೇಶ್ವರ ಮಠದ ಪರಂಪರೆಯನ್ನು ತಿಳಿಯುವುದು ಅವಶ್ಯಕವಾಗಿದೆ.

ಅಂಕಲಗಿ ಅಡವಿಸಿದ್ಧೇಶ್ವರರು

“ಹಿಂದಣ ಹೆಜ್ಜೆಯ ನೋಡದೆ ಮುಂದೆ ಅಡಿ ಇಡಲಾಗದು” ಎಂಬ ಆಶಯ ಅಲ್ಲಮ ಪ್ರಭುಗಳು ವನಚದಂತೆ ಅಂಕಲಗಿ ಶ್ರೀ ಮಠದ ಇತಿಹಾಸದ ಪಕ್ಷಿನೋಟವಿನ್ನಿಲ್ಲಿ ನೋಡಬಹುದು. ಅಂಕಲಗಿ ಶ್ರೀ ಮಠದ ಮೂಲ ಪುರುಷರೆಂದರೆ ಪವಾಡ ಪುರುಷರು, ಮಹಾಮಹಿಮಾ ಪುರುಷರು, ಯತಿಕುಲತಿಲಕರೆಂದೆ ಜನಮಾನಸದಲ್ಲಿ ನೆಲೆ ನಿಂತಿರುವ ಅಡವಿಸದ್ಧೇಶ್ವರರು ಹನ್ನೆರಡನೆಯ ಶತಮಾನದ ಮಹಾಜ್ಞಾನಿಗಳಾದ ಚೆನ್ನಬಸವಣ್ಣನವರ ಜೊತೆಗೆ ‘ರೇಚಯ್ಯ’ನೆಂಬ ಹೆಸರಿನಿಂದ ವೀಳ್ಯದೆಲೆ ವಿತರಿಸುವ ಕಾಯಕವನ್ನು ಕೈಗೊಂಡಿದ್ದ ಶಿವಶರಣರು ಆ ರೇಚಯ್ಯನವರೆ ಅಡವಿಸಿದ್ಧೇಶ್ವರರೆಂಬ ಪ್ರತೀತಿಯಿದೆ. ರೇಚಯ್ಯನವರು ಅಡವಿಸಿದ್ಧೇಶ್ವರ ಹೆಸರಿನಿಂದ ದೇಶದ ತುಂಬ ಸಂಚರಿಸಿದರು. ಮೃತ್ಯವನ್ನು ಗೆದ್ದ ಮೃತ್ಯಂಜಯರು!ಏಳು ನೂರು ವರುಷಗಳ ಕಾಲದ ಬದುಕಿನ ಮಹಿಮಾನ್ನತರು’ ಇತ್ಯಾದಿ ವದಂತಿಗಳು ಹಲವು ಐತಿಹ್ಯಗಳು ಶ್ರೀಯುತರ ಸುತ್ತ ಹರಡಿ ನಿಂತಿವೆ. ಇಂದಿನ ಪ್ರಗತಿಪರ ವೈಚಾರಿಕ ವೈಜ್ಞಾನಿಕ ಯುಗದಲ್ಲಿ ಇಂತಹ ನಂಬಿಕೆಗಳಿಗೆ ಆಸ್ಪದವಿಲ್ಲ. ಭೌತಿಕ ಶರೀರಕ್ಕೆ ಮಿತಿಯಿದ್ದೇ ಇರುತ್ತದೆ. ಆದ್ದರಿಂದ ಚೆನ್ನಬಸವಣ್ಣನವರ ಜೊತೆಗಿದ್ದ ಶಿವಶರಣರ ರೇಚಯ್ಯನವರೆ ಬೇರೆ: ೧೮೦೬ ರಿಂದ ೧೮೫೬ರ ಕಾಲವಧಿಯಲ್ಲಿ ಜೀವಿಸಿದ್ದ ರೇಚಯ್ಯನವರೇ ಬೇರೆ. ಎರಡೂ ಹೆಸರುಗಳು ಒಂದೇ ಆಗಿದ್ದರಿಂದ ಇಬ್ಬರೂ ಯೋಗಿವರ್ಯರು, ಋಷಿಗಳಾಗಿರುವುದರಿಂದ, ಇಬ್ಬರೂ ಒಬ್ಬರೆ ಎಂದು ತಿಳಿದಿರುವ ಸಾಧ್ಯತೆ ಹೆಚ್ಚಾಗಿದೆ. ಸದ್ಯ ನಾವಲ್ಲಿ ಕ್ರಿ. ಶ. ೧೮೦೬ರಿಂದ ೧೮೫೬ ಅವಧಿಯಲ್ಲಿ ಬಾಳಿ ಬೆಳಗಿದ, , ಭಕ್ತರಿಗೆ ಸನ್ಮಾರ್ಗ ತೋರಿಸಿದ ಪುಣ್ಯಪುರುಷರ ಕುರಿತಾಗಿ ಅರಿಯುವುದಾಗಿದೆ.

ಅಡಿವೆಪ್ಪನವರು ‘ರೇಚಪ್ಪ’ನವರೆಂಬ ಅಭಿನಾಮವನ್ನು ಹೊತ್ತುಕೊಂಡು ಕುಂದರನಾಡಿಗೆ ಆಗಮಿಸುವ ಮುಂಚೆ ಎಲ್ಲಿದ್ದರು? ಏನು ಮಾಡುತ್ತಿದ್ದರು? ಎಲ್ಲಿಂದ ಬಂದರು? ಯಾವಾಗ ಬಂದರು? ಯಾವ ಕಾರಣಕ್ಕಾಗಿ ಬಂದರು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಗಳು ಲಭಿಸುವುದಿಲ್ಲ. ಕುಂದರನಾಡಿಗೆ ಬಂದ ಮೇಲೆ ಏಸೋ ವರುಷಗಳವರೆಗೆ ಅನಾಮಧೇಯರಾಗಿ ಅಜ್ಞಾತರಾಗಿಯೇ ಉಳಿದಿದ್ದರು. ತಮ್ಮ ಸಾಧನೆ ಮತ್ತು ಸಿಧ್ಧಿಗಳ ಮೂಲಕ ಸಮಾಜಕ್ಕೆ ಮತ್ತು ಜನರಿಗೆ ಚಿರಪರಿಚಿತರಾದರು. ಕ್ರಿ. ಶ. ೧೮೦೯ರ ಸುಮಾರಿಗೆ ಕುಂದರನಾಡಿನ ಗೋಕಾಕ ತಾಲೂಕಿನಕುಂದರಿಗಿ ಗ್ರಾಮದ ಮಾರ್ಕಂಡೇಯ ನದಿಯ ದಡದಲ್ಲಿರುವ ಹುಣಿಸಿಮರದ ಹೊದರಿನಲ್ಲಿ ಕಾಣಿಸಿದರು. ಅವರ ಆಗಮನದ ಕುರಿತಾಗಿ ಯಾವ ವಿವರಗಳು ಸಿಗುವುದಿಲ್ಲ. ಪೂರ್ವಾಪದರಗಳೂ ತಿಳಿದು ಬರುವುದಿಲ್ಲ. ಕುಂದರಗಿಯಲ್ಲಿ ನೆಲೆ ನಿಂತಿರುವ ಸಂಗತಿಯನ್ನು ನಮ್ಮ ಜಾನಪದ ಕವಿಗಳು ದಾಖಲಿಸಿದ್ದು ಹೀಗಿದೆ.

“ಹುಣಸೆಯ ಹೊದರಾಗ
ಹೊಳಿದಂಡಿ ಗವಿಯಾಗ.., ಬಿದಿರ
ಮಳೆಯಾಗ; ಕೋಲೆನ್ನ ಕೋಲ | ಕೋಲ ಕೋಲ ||”

ಎಂದು ಕೋಲಾಟದ ಪದದಲ್ಲಿ ಸೆರೆ ಹಿಡಿದಿರುವ ಗಮನಾರ್ಹವಾಗಿದೆ.

ದನ ಕಾಯುವ ಹುಡಗರ ಮುಖಾಂತರ ರೇಚಯ್ಯನವರ ಇರುವಿಕೆ ಊಜ ಜನರ ಗಮನಕ್ಕೆ ಬರುವಂತಾಯ್ತ. ಸಾಧು – ಸಾತ್ವಿಕ – ಸತ್ಪುರುಷ, ಯೋಗಿವರನೀತನೆಂದು ಜನ ಸಮುದಾಯ ಗುರುತಿಸಿತು. ಗವಿಯಲ್ಲಿ ಅಖಂಡ ಹನ್ನೆರಡು ವರುಷ ವಾಸ ಮಾಡಿದ್ದರಂತೆ! ಒಂದು ಪಟ್ಟ ಮುಗಿದ ಮೇಲೆ (ಹನ್ನೆರಡು ವರುಷ ಕಳೆದ ಮೇಲೆ) ಒಂದು ಮಳೆಗಾಲದ್ಲಿ ಭಾರಿ ಮಳೆ ಸುರಿದ ಹಳ್ಳ – ಕೊಳ್ಲಗಳೆಲ್ಲ ತುಂಬಿ ಹರಿದು ಮಾರ್ಕಂಡೆಯ ನದಿಗೆ ಭಯಂಕರ ಮಹಾಪೂರ ಬಂದು, ಎರಡು ದಡಗಳು, ಕೊಚ್ಚಿ ಹೋದವು ಸಾಧು ಮಹಾರಾಜ ವಾಸಿಸುತ್ತಿದ್ದ ಗವಿಯಲ್ಲಿ ನೀರು ತುಂಬಿಕೊಂಡಿತಂತೆ! ಮುಂದೆ ಅಲ್ಲಿರುವುದು ಅಸಾಧ್ಯವಾಗಿ ಹೋಯ್ತು. ಸ ೧೮೧೮ರ ನಂತರ ಗವಿಯನ್ನು ತೊರೆದು ಗುಡಿಸಿಲದಲ್ಲಿ ವಾಸ ಮಾಡತೊಡಗಿದರು. ಜನರು ಇವರನ್ನು ಭೆಟ್ಟಿಯಾಗಿ ನಿಮ್ಮ ಹೆಸರೇನೆಂದು ಕೇಳಿದರೆ; “ಗುಡ್ಡದಾಗ ಇದ್ದರೆ ಗುಡ್ಡದಪ್ಪ, ಅಡವಿಯಾಗ ಇದ್ದರೆ ಅಡವಿಯಪ್ಪ, ಎಂದು ಹೇಳುತ್ತಿದ್ದರಂತೆ. ಮತ್ತೇನಾದರೂ ವಿಚಾರಿಸಿದರೆ, “ಸಾಧು ಸನ್ಯಾಸಿಗಳಿಗೆ ಯಾವ ಊರು – ಕೇರಿ ಇಂದು ಈ ಊರು, ನಾಳೆ ಮುಂದಿನೂರು” ಎಂದು ಸಾಗ ಹಾಕುತ್ತಿದ್ದರಂತೆ.

ಕಷ್ಟದಲ್ಲಿದ್ದವರಿಗೆ ನೆರವಾಗುವ, ತೊಂದರೆಯಲ್ಲಿ ಸಿಕ್ಕವರಿಗೆ ಸಹಾಯ ಮಾಡುವ ಜನಾನುರಾಗಿ ವ್ಯಕ್ತಿತ್ವಾಗಿತ್ತು. ದಿನಗಳೆದಂತೆ ಜನರು ಅಡಿವೆಪ್ಪನವರ ಹತ್ತಿರ ಬಂದು, ತಮ್ಮ ನೋವು ತೊಂದರೆಗಳನ್ನು ತೋಡಿಕೊಂಡಾಗ; ಅವುಗಳಿಗೆ ಪರಿಹಾರ ಸೂಚಿಸುತ್ತಿದ್ದರಂತೆ. ಕುಂದರಗಿ ನಾಡಿನ ಜನತೆಯಲ್ಲದೆ ಗೋಕಾವಿ, ಬಾಗೇನಾಡಿನ ಜನರೂ ಸಹ ಅಡಿವೆಪ್ಪನವರ ಬಳಿಗೆ ಬಂದರು. ವರುಷಗಳು ಉರುಳಿದಂತೆ ಸುತ್ತಮುತ್ತಿನ ಹಾಗೂ ದೂರ – ದೂರಿನ ಜನರು ಬರತೊಡಗಿದರು. ”ಅಡಿವೆಪ್ಪನವರು ಬೇಡಿದ್ದನ್ನು ಕೊಡವವರು, ಸರ್ವರೋಗಗಳಿಗೂ ಸಿದ್ಧ ಔಷಧಿ ನಿಡುವ ವೈದ್ಯರು” ಎಂಬ ನಂಬಿಕೆ ಬೆಳೆಯಿತು. ಹೀಗಾಗಿ ಅಡವಿಸಿದ್ಧೇಶ್ವರರು ನಿಂತ ನೆಲವೇ ಪುಣ್ಯಕ್ಷೇತ್ರವಾಯಿತು. ಜಲವೇ ಪಾವನ ತೀರ್ಥವಾಗಿ ಪರಿಣಮಿಸಿತು. ಜನಮಾನಸದಲ್ಲಿ ಭಕ್ತಿ ಬೆಳೆದಂತೆ ಇವರ ಹತ್ತಿರ ಬರುವವರ ಸಂಖ್ಯೆಯು ಅಧಿಕವಾಗುತ್ತ ಹೋಯಿತು. ತಮ್ಮನ್ನು ಕಾಣಲು ಬಂದವರಿಗೆಲ್ಲ ನಿತ್ಯ ದಾಸೋಹದ ವ್ಯವಸ್ಥೆ ಮಾಡಿಸಿದರು. ವರುಷಗಳು ಉರುಳಿದಂತೆ ದಾಸೋಹದ ಕಾರ್ಯವು ವೃದ್ಧಿಸುತ್ತಾ ಹೋಯಿತು. ಭಕ್ತರಿಂದ ಬಂದುದನ್ನೇ ಭಕ್ತರಿಗೆ ಬಡಿಸಿದರು. ”ಶ್ರೀಯುತರು ಸೊಮ್ಮು ಶಿವಂಗೆ ಸಲ್ಲಿತ್ತು” ಎಂಬ ವಿನೀತ ಭಾವ ಅಡಿವೆಪ್ಪನವರದಾಗಿತ್ತು. ಶ್ರೀಯುತರು ತಮ್ಮ ಜೀವಿತಾವಧಿಯಲ್ಲಿ ಮಠಕ್ಕಾಗಿ ಆದಾಯದ ಮೂಲವೆಂದು ’ಭೂಮಿ – ಸೀಮಿ’ಯನ್ನು ಪಡೆಯಲಿಲ್ಲ. ಇಂದಿಂಗೆ ನಾಳಿಂಗೆಂದು ಕೂಡಿಸಿ ಇಡಲಿಲ್ಲ. ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ದಂತೆ ದಾಸೋಹಗೈದರು. ನಿಜವಾದ ಅರ್ಥದಲ್ಲಿ ಶರಣ ಜೀವಿಯಾಗಿ ಬಾಳಿದರು.

ಭಕ್ತರ ಬಳದ ಅಪಾರವಾಗಿ ಬೆಳೆಯಿತು. ಗುಡಿಸಲುಗಳು ಕಿರಿದಾದಂತೆ: ಭಕ್ತ ಸಮೂಹವೇ ಮುಂದಾಗಿ ಬೃಹತ್ ಕಟ್ಟಡಗಳನ್ನು ನಿರ್ಮಿಸಿದರು. ಸಿದ್ಧೇಶ್ವರ ಗುಡಿ, ಹುಗ್ಗಿ ಮನೆ, ಅಂಬಲಿ ಮನೆ, ಅರಮನೆ, ಗೋಶಾಲೆ ಮೊದಲಾದ ಭವ್ಯ ಕಟ್ಟಡಗಳು ತಲೆಯೆತ್ತಿದವು. ಸುವಿಶಾಲವಾದ ಮಠದ ಇಮಾರತಿಯು ನಿರ್ಮಾಣಗೊಂಡಿತು. ಸಾವಿರಾರು ಭಕ್ತರು ಹಲವಾರು ವರುಷಗಳ ನಿರಂತರ ಪರಿಶ್ರಮದಿಂದ ಭವ್ಯ ಹಾಗೂ ಬೃಹತ್ತಾದ ಮೂರು ಅಂತಸ್ತುಗಳ ಶ್ರೀಮಠವು ರೂಪುಗೊಂಡಿತು. ಮಠದ ಕಟ್ಟಡಕ್ಕಾಗಿ ಸಾಗುವಾನಿ, ತೇಗು, ಮತ್ತಿ ಹೊನ್ನೊ ಮೊದಲಾದ ಬೆಲೆಯುಳ್ಳ ಮತ್ತು ಬಾಳಿಕೆ ಬರುವ ಕಟ್ಟಿಗೆಯನ್ನು ಬಳಸೊಕೊಳ್ಳಲಾಗಿದೆ. ಜನಪದರು ಈ ವಿಷಯವನ್ನು ತಮ್ಮದೇಆದ ರೀತಿಯಲ್ಲಿ ವಿವರಿಸಿದ್ದಾರೆ.

“ತೇಗೂರು ಹಳವಿಗೆ ಕಳುವ್ಯಾರೊಂದಿಳೇವ

ಸಾಗವಾನಿ ಬರಬೇಕ, ಅಡವಿಸ್ವಾಮಿ
ಸಾಧು ನಿನ್ನ ಮಠವ ಮಟ್ಟಾಕ
ಮತ್ತು
ತಂದಿ ನಿನ್ನ ಮಠವ ಕಟ್ಟಾಕ
ಕೆತ್ತಿ ಮಾಡ್ಯಾರ ಗರುಡಗಂಡ
ಕಂಬಕ ಆಕಂಬ ನಿಂತಾವ
ತಂದಿ ನಿನ್ನ ಮಠದಾಗ

ಇಂದೂ ಕೂಡ ಅಂಕಲಗಿ ಅಡವಿಸಿದ್ಧೇಶ್ವರ ಮಠದಲ್ಲಿ ತೇಗು – ಸಾಗವಾನಿ ಕಟ್ಟಿಗೆಯ ಭಾರಿ ಕಟ್ಟಡಗಳನ್ನು ಕಾಣಬಹುದಾಗಿದೆ. ಕಟ್ಟಿಗೆಯ ಮೇಲಿರುವ ಕೆತ್ತನೆ ಕೆಲಸ ಚಿತ್ತಾಕರ್ಷಕವಾಗಿದೆ.

ಅಡವಿಸಿದ್ಧೇಶ್ವರ ಶರಣಜೀವಿಗಳಾಗಿ, ಪ್ರಸಾರ ವಿತರಕರಾಗಿ, ಸರ್ವರಿಗೆ ಒಳತನ್ನೇ ಹಾರೈಸಿದರು. ಸರ್ವರನ್ನೂ ಸಮಾನರಾಗಿ ಕಂಡವರು. “ಸಮಾನತೆಯ ಹೆಗ್ಗುರುತಾಗಿ ಇಂದಿಗೂ ಕುಂದರನಾಡಿನ ಪ್ರತಿ ಹಳ್ಳಿಯವರು ತಾವು ಬೆಳೆದ ಫಸಲಿನ ಕೆಲಭಾಗವನ್ನು ತಪ್ಪದೇ ಒಪ್ಪಿಸುವರು. ಸ್ವಾಮಿಯ ಕಾರ್ಯದಲ್ಲಿ ಸ್ತ್ರೀ – ಪುರುಷರು ಭೇದ ಮರೆತು ಉಪದೇಶ ಪಡೆದರು. ತಾವು ಸ್ವತಃ ಬೋಧಿಸದೇ, ನಡೆಯಿಂದ ನುಡಗಲಿಸದರು” ಎಂಬ ಮಾತು ಔಚಿತ್ಯಪೂರ್ಣವಾಗಿದೆ.

ಅಂತ್ಯ

ಅಡವಿಸಿದ್ಧೇಶ್ವರರು ತಮ್ಮ ಅಂತ್ಯ ಸಮೀಪಿಸಿದ್ದನ್ನು ಮನಗಂಡು “ಸಿದ್ದರಾಮ’ರನ್ನು ಉತ್ತರಾಧಿಕಾರಿಯನ್ನಾಗಿ ನಿಯುಕ್ತಗೊಳಿಸಿದರು. ತಮ್ಮ ಜೀವಿತದ ಕೊನೆಯ ಅವಸ್ತೆಯಲ್ಲಿ ಮರಿದೇವರಾದ ’ಸಿದ್ರಾಮ’ರನ್ನು ಗವಿಯಲ್ಲಿ ಕರೆಯಿಸಿಕೊಂಡು, ತಮ್ಮ ನಿರ್ಗಮನವನ್ನು ಸೂಚಿಸಿ, ಮುಂದೆ ಮಾಡಬೇಕಾದ ಕಾರ್ಯವನ್ನು ವಿವರಿಸಿ, ಧ್ಯಾನದಲ್ಲಿ ತಲ್ಲೀನರಾಗಿ ಭಾವ ಸಮಾಧಿಗೆ ಸಂದರು. ಅದೆ ಸ್ಥಿತಿಯಲ್ಲಿಯೇ ದೇಹ ತ್ಯಜಿಸಿದರು. ‘ಶರಣರಿಗೆ ಮರಣವೇ ಮಹಾನವಮಿ’ಯೆನ್ನುವಂತೆ ಪ್ರಸಾದಕಾಯ ತ್ಯಜಿಸಿ, ಲಿಂಗದೊಳಗಾದರು. ಅಂಕಲಗಿ ಶ್ರೀ ಮಠದಲ್ಲಿ ಸಮಾಧಿಯಾಯ್ತು. ಅದನ್ನು ಇಂದಿಗೂ ಭಕ್ತರು ಗೌರವಾದರಗಲಿಂದ ಅರಾಧಿಸುತ್ತಿದ್ದಾರೆ. ವರುಷಕ್ಕೊಮ್ಮೆ ಅದ್ಧುರಿಯ ಜಾತ್ರೆಯಾಗುತ್ತದೆ. ಅಡವಿಸಿದ್ಧೇಶ್ವರರ ತರುವಾಯ ನಾಲ್ಕು ಪೀಠಾಧಿಪತಿಗಳಾಗಿ ಮಠಾಧೀಶರು ಆಗಿ ಹೋದರು. ಅಂದಿನ ಪರಂಪರೆ ಇಂದಿಗೂ ಮುಂದುವರೆದಿದೆ. ಈ ಮಠಕ್ಕೆ ಸುಮಾರು ಎರಡು ನೂರು ವರುಷಗಳ ಭವ್ಯ ಇತಿಹಾಸವಿದೆ. ತನ್ನದೇ ಆದ ವಿಶಿಷ್ಟ ಪರಂಪರೆಯಿದೆ.

ಅಂಕಲಗಿ ಅಡವಿಸಿದ್ಧೇಶ್ವರ ಪ್ರಭಾವಕ್ಕೆ ಒಳಗಾದವರೂ ಅಸಂಖ್ಯರು. ಅವರಲ್ಲಿ, ತವಗದ ಬಾಳಯ್ಯನವರು, ತಲಿಕಟ್ಟಿನ ಶ್ರೀ ನಿರುಪಾಧಿ, ಮುಧೋಳ ತಾಲೂಕಿನ ಯಡವಳ್ಳಿಯ ಶ್ರೀ ರುದ್ರಯ್ಯ ಮತ್ತು ಮರೇಗುದ್ದಿಯ ಮಡಿವಾಳಯ್ಯ ಶರಣರು ಪ್ರಮುಖರು. ಇವರೆಲ್ಲರೂ ಶ್ರೀ ಅಡವಿಸಿದ್ಧೇಶ್ವರರ ಸೇವೆ ಮಾಡಿ ಪ್ರಖ್ಯಾತರಾಗಿದ್ದಾರೆ.

ಮರೇಗುದ್ದಿ ಮಡಿವಾಳೇಶ್ವರರು

ಮಡಿವಾಳೇಶ್ವರರು ಅಂಕಲಗಿ ಅಡವಿಸಿದ್ಧೇಶ್ವರ ಕೃಪೆಗೆ ಪಾತ್ರರಾಗಿ ಮರೇಗುದ್ಧಿಯಲ್ಲಿ ಶ್ರೀ ಅಡವಿಸಿದ್ಧೇಶ್ವರ ಮಠದ ಸ್ಥಾಪನೆಗೆ ಕಾರಣೀಪುರುಷರಾದವರು. ಇವರು ಮೂಲತಃ ಪ್ರಾಪಂಚಿಕರು. ಮದುವೆಯಾಗಿ ಗ್ರಹಸ್ಥರಾಗಿ ಬಾಳಿದವರು ಸಂಸಾರ ನಡೆಸಿ, ಎರಡು ಮಕ್ಕಳ ತಂದೆಯಾದ ನಂತರ ಜೀವನದಲ್ಲಿ ವಿರಕ್ತಿ ಮೂಡಿತು. ಅಡವಿಸಿದ್ದರ ಪ್ರಖ್ಯಾತಿಯನ್ನೆ ಕೇಳಿ ಮರೇಗುದ್ದಿಯಿಂದ ಅಂಕಲಗಿ ಮಠಕ್ಕೆ ಆಗಮಿಸುತ್ತಾರೆ. (ಮಡಿವಾಳೇಶ್ವರರು ಈ ಮುಂಚೆ ಹಲವಾರು ಬಾರಿ ಅಂಕಲಗಿ ಮಠಕ್ಕೆ ಬಂದಿದ್ದು; ಅಡವಿಸಿದ್ಧೇಶ್ವರರಿಂದ ಪ್ರಭಾವಿತರಾಗಿದ್ದಿರಬಹುದು. ಏಕೆಂದರೆ ತಮ್ಮ ಎರಡನೆಯ ಮಗನಿಗೆ “ಅಡವೀಶ’’ನೆಂಬ ನಾಮಕರಣವನ್ನು ಮಾಡಿದ್ದನ್ನು ನೋಡಿದರೆ; ಅದರ ಅರ್ಥ ಸ್ಪಷ್ಟವಾಗುತ್ತದೆ. ಅಡವಿಸಿದ್ಧೇಶ್ವರರಿಂದ ತುಂಬ ಪ್ರಭಾವಿತರಾದದ್ದರಿಂದಲೇ ತಮ್ಮ ಮಗನಿಗೆ ಅವರ ಹೆಸರನ್ನಿಡಲು ಪ್ರೇರಣೆಯಾಗಿರುವ ಸಾಧ್ಯತೆಯಿದೆ) ಅಂತೂ ಮಡಿವಾಳೇಶ್ವರರಿಗೆ ವೈರಾಗ್ಯಯುಂಟಾಗಿ ಅಂಕಲಗಿಗೆ ಬರುತ್ತಾರೆ. ಅಲ್ಲಿ ಅಡವಿಸಿದ್ಧೇಶ್ವರರ ಸೇವೆಯಲ್ಲಿ ಕಾರ್ಯತತ್ಪರಾಗುತ್ತಾರೆ. ಹಲವು ವರುಷಗಳ ಕಾಲ ಸೇವಾ ಕೈಕಾರ್ಯ ಕೈಗೊಂಡ ಬಳಿಕ ಮರೇಗುದ್ದಿಯ ಮಡಿವಾಳೇಶ್ವರರು ಅಂಕಲಗಿ ಅಡವಿಸಿದ್ಧೇಶ್ವರರಿಂದ ಅನುಗ್ರಹಿತರಾಗುತ್ತಾರೆ. ಯತಿಗಳಾಗಿ ಆಶ್ರಮದ ನಿವಾಸಿಗಳಾಗುತ್ತಾರೆ. ಮಡಿವಾಳೇಶ್ವರರು ಯತಿಯಾಶ್ರಮ ಪಡೆದು ಶ್ರೀ ಗುರುಗಳಿಂದ ಆಶೀರ್ವಾದ ರೂಪವಾಗಿ ದೊರೆತ ಮೂರು ವಿಭೂತಿ ಘಟ್ಟಿಗಳು, ಅಂಬಲಿಯ ಪಾತ್ರೆ ಹಾಗೂ ಬೆತ್ತ ಪಡೆದುಕೊಂಡು ಶ್ರೀ ಗುರುಗಳು ಆಜ್ಞೆಯ ಮೇರೆಗೆ ಜಮಖಂಡಿ ಸಮೀಪದ ಮರೇಗುದ್ದಿ ಗ್ರಾಮಕ್ಕೆ ಆಗಮಿಸುತ್ತಾರೆ. ಮರೇಗುದ್ದಿಯ ಭಕ್ತಶಿರೋಮಣಿ ಮಹಾ ದಾಸೋಹಿಗಳಾದ ‘ಪರಪ ರಾಮಗೊಂಡ’ ನೆಂಬುವವರು ಪೂಜ್ಯರಿಗೆ ತನ್ನ ೨೦೪ನೆಯ ಸರ್ವೇ ನಂಬರಿನ ಭೂಮಿಯನ್ನು ಧಾರೆಯೆರೆದು ನೀಡುತ್ತಾನೆ. ದಾನವಾಗಿ ಪಡೆದ ರಾಮಗೊಂಡ ಮನೆತನದ ಭೂಮಿಯಲ್ಲಿ ಮಡಿವಾಳೇಶ್ವರರು ಶ್ರೀ ಮಠವನ್ನು ಸ್ಥಾಪಿಸುತ್ತಾರೆ. ಅಡವಿಸಿದ್ಧೇಶ್ವರರು ಕರುಣಿಸಿದ ಮೂರು ವಿಭೂತಿ ಘಟ್ಟಿಗಳನ್ನಿಟ್ಟು ಗದ್ದುಗೆಯನ್ನು ಸ್ಥಾಪಿಸಿ, ಅಂಬಲಿಯ ಪಾತ್ರೆಯನ್ನು ದಾಸೋಹ ನಡೆಯುವಲ್ಲಿ ಭೂಅಂತರ್ಗತವಾಗಿ ಇರಿಸುತ್ತಾರೆ. ಅವರ ಹಸ್ತದಲ್ಲಿ ವಿರಾಜಿಸಿದ ಕೃಪಾ ರೂಪದ ಬೆತ್ತವು ಇಂದಿಗೂ ಕೂಡ ಮಠಾಧೀಶರು ಕೈಯಲ್ಲಿ ಕಂಗೊಳಿಸುತ್ತಿದೆ. ಮಡಿವಾಳೇಶ್ವರರಿಂದ ಮರೇಗುದ್ದಿ ಗ್ರಾಮಕ್ಕೊಂದು ಐತಿಹಾಸಿಕ ಮಹತ್ವ ಪ್ರಾಪ್ತವಾಯಿತು.

ಮರೇಗುದ್ದಿ

ಮರೇಗುದ್ದಿಯು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿರುವ ಪುಟ್ಟ ಗ್ರಾಮ ಸುಮಾರು ಐದು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಸಣ್ಣ ಊರಾಗಿದೆ. ಜಮುಖಂಡಿಯಿಂದ ಹನ್ನೆರಡು ಕಿಲೋಮೀಟರ ದೂರದಲ್ಲಿರುವ ಇರುವ ಮರೇಗುದ್ದಿಯಲ್ಲಿ ನಾಲ್ಕು ಮಠಗಳಿವೆ. ಮುಧೋಳ ಜಮುಖಂಡಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೀಳಗಿಗೆ ಸಾಗುವ ಮುಖ್ಯ ರಸ್ತೆಗೆ ಮರೇಗುದ್ದಿ ಗ್ರಾಮವು ಹೊಂದಿಕೊಂಡಿದೆ. ಮರೇಗುದ್ದಿಯ ವೈಶಿಷ್ಟ್ಯವೆಂದರೆ ಗ್ರಾಮದ ನಾಲ್ಕು ದಿಕ್ಕಿಗೆ ನಾಲ್ಕು ಮಠಗಳಿಗೆ. ಪೂರ್ವದಲ್ಲಿ ಷಡಕ್ಷರಿ ಪಶ್ಚಿಮಕ್ಕೆ ಮಹಾಂತಮಠ ಇದು ಇತ್ತಿಚೆಗೆ ಸಿದ್ಧವಾಗಿದೆ. ಉತ್ತರಕ್ಕೆ ಅಡವಿಸಿದ್ಧೇಶ್ವರ ಮಸಠ ಹಾಗೂ ದಕ್ಷಿಣಕ್ಕೆ ದಿಗಂಬರಿ ಮಠವಿದೆ.

ಮರೇಗುದ್ದಿಯು ತಾಲೂಕು ಕೇಂದ್ರವಾದ ಜಮಖಂಡಿಯಿಂದ ೧೨ಕಿ. ಮೀ. ಜಿಲ್ಲಾ ಕೇಂದ್ರ ಬಾಗಲಕೋಟೆಯಿಂದ ೮ ಕಿ. ಮೀ ಮುಧೋಳದಿಂದ ೧೪ಕಿ. ಮೀ ಮತ್ತು ಬೀಳಗಿಯಿಂದ ೪೦ ಕಿ. ಮೀ ಮುಧೋಳದಿಂದ ೧೪ ಕಿ. ಮೀ ಮತ್ತು ಬೀಳಗಿಯಿಂದ ೪೦ ಕಿ. ಮೀ ದೂರದಲ್ಲಿದೆ. ಬಾಗಲಕೋಟೆ ಬೀಳಗಿ ಜಮಖಂಡಿ ಮಾರ್ಗ ಮಧ್ಯದಲ್ಲಿ ಹಸಿರು ಗದ್ದೆಗಳ ನಡುವೆ ಮರೇಗುದ್ದಿ ಮೈಚಾಚಿದೆ. ಸುತ್ತಮುತ್ತಲು ಹಚ್ಚ ಹಸಿರಿನ ಗುಡ್ಡಗಳಿವೆ. ಘಟಪ್ರಭಾ ನದಿಯ ನೀರಿನ ಕಾಲುವೆಯಿಂದಾಗಿ ಹಸಿರು ಮುಕ್ಕಳಿಸುವ ಗದ್ದಗಳು ‘ಸಮೃದ್ಧಿ’ಯ ಸಂಕೇತವಾಗಿದೆ. ಪ್ರಾಕೃತಿಯ ಸೌಂದರ್ಯದಿಂದ ತುಂಬ ಆಪ್ಯಾಯಮಾನವಾದ ಕೃಷ್ಣಾ ಕೊಳ್ಳದ ವ್ಯಾಪ್ತಿಯೊಳಗೆ ಈ ಭಾಗವು ಸಮಾವೇಶಗೊಳ್ಳುತ್ತದೆ. ಇಂಥ ಭೌತಿಕ ಸಮೃದ್ಧಿ ಮತ್ತು ನಿಸರ್ಗ ಸೌಂದರ್ಯದಿಂದಾಗಿ ಧರ್ಮ ಶಿಕ್ಷಣ ಸಂಸ್ಕೃತಿ, ವ್ಯಾಪಾರ ಕ್ಷೇತ್ರದಲ್ಲಿ ತನ್ನದೇ ಆದ ಕೊಡುವೆ ನೀಡುವಂತಾಗಿದೆ. ಸ್ಥಾವರವು ಜಂಗಮವಾಗಿ ಚಲನಶೀಲ ಸಂಸ್ಕೃತಿಗೆ ಕಾರಣವಾಗಿರುವ ಅಂಕಲಗಿ ಅಡವಿಸಿದ್ಧೇಶ್ವರ ಪರಂಪರೆಯ ಮರೇಗುದ್ದಿಯ ಅಡವಿಸಿದ್ಧೇಶ್ವರ ಮಠವು ಮರೇಗುದ್ದಿಯ ಉತ್ತರ ದಿಕ್ಕಿನಲ್ಲಿದ್ದು ಉತ್ತರೋತ್ತವಾಗಿ ಅಭಿವೃದ್ಧಿ ಹೊಂದುತ್ತಲಿದೆ.

ಮರೇಗುದ್ದಿ ಅಡವಿಸಿದ್ಧೇಶ್ವರ ಮಠ

ಮಡಿವಾಳೇಶ್ವರ ಶ್ರೀಗಳು ತಮ್ಮ ಶ್ರೀ ಗುರುವಿನ ಹೆಸರಿನಲ್ಲಿಯೇ ತಾವು ಸ್ಥಾಪಿಸಿದ ಶ್ರೀ ಮಠವನ್ನು ಮುನ್ನಡೆಸಿದರು. ಗುರು ಕರುಣೆಯೇ ಹರಕರುಣೆಗೆ ದಾರಿ ಮಾಡಿಕೊಟ್ಟಿತು. ಗುರುವಿನ ಹೆಸರನ್ನು ಚಿರಸ್ಮಾಯಿಗೊಳಿಸಲು ಅವರ ಹೆಸರನ್ನಿರಿಸಿದರು. ಅಂಕಲಗಿ ಶ್ರೀ ಮಠದಲ್ಲಿ ನಡೆಯುವ ಚಟುವಟಿಕೆಗಳೆಲ್ಲವೂ ಮರೆಗುದ್ದಿಯಲ್ಲಿಯೂ ಚಾಚು ತಪ್ಪದೆ ನಡೆಯುತ್ತವೆ. ಇದೊಂದು ವಿರಕ್ತ ವರ್ಗಕ್ಕೆ ಸೇರಿದ ಮಠವಾಗಿದೆ.

ಮರೇಗುದ್ದಿ ಮಠಕ್ಕೆ ಸುಮಾರು ಎರಡು ನೂರು ವರುಷಗಳ ಇತಿಹಾಸಿವಿದೆ. ಐದು ಎಕರೆಯಲ್ಲಿ ಮಠದ ಆವರಣವಿದೆ. ಆ ಆವರಣದಲ್ಲಿ ಕಾಳಿಕಾದೇವಿಯ ಗುಡಿ ಮತ್ತು ಶ್ರಿ ವೀರಭದ್ರೇಶ್ವರ ಗುಡಿಗಳಿವೆ. ಇವೆರಡೂ ಗುಡಿಗಳ ನಡುವೆ ನಾಲ್ಕನೆಯ ಪೀಠಾಧಿಪತಿಗಳಾಗಿದ್ದ ಶ್ರೀ ಗುರುಪಾದೇಶ್ವರ ಸ್ವಾಮಿಗಳು ಗದ್ದುಗೆಯಿಂದ ಈ ಮೂರು ಸ್ಥಳಗಳು ಗರ್ಭಗ್ರಹದಂತಿದ್ದು ಒಂದಕ್ಕೊಂದು ಹೊಂದಿಕೊಂಡಿವೆ. ಈ ಮೂರು ಗುಡಿಗಳಿಗೂ ಸಾಮಾನ್ಯವಾದ ಒಂದೇಮುಖಮಂಟಪವಿದೆ. ಸಂಪೂರ್ಣ ಬಿಳಿಕಲ್ಲಿನಿಂದ ನಿರ್ಮಾಣವಾದ ಈ ದೇವಾಲಯ ಉತ್ತರಾಭಿಮುಖವಾಗಿದೆ. ದೇವಾಲಯದ ಮುಂಭಾಗದಲ್ಲಿ ಪೂರ್ವಾಭಿಮುಖವಾಗಿ ಶ್ರೀ ಮಡಿವಾಳೇಶ್ವರ ಸ್ವಾಮಿಗಳ, ಪರಯ್ಯಸ್ವಾಮಿಗಳ ಮತ್ತು ರಾಚಯ್ಯಸ್ವಾಮಿಗಳ ಗದ್ದುಗೆಗಳು ಶೋಭಾಯಮಾನವಾಗಿವೆ. ಗದ್ದುಗೆಗಳು ಮುಂಭಾಗದಲ್ಲಿ ಪಶ್ವಿಮಾಭಿಮುಖವಾಗಿ ಸ್ವಾಮಿಗಳ ಶ್ರೀ ಮಠವಿದೆ. ಮೂರು ಕೋಣೆಗಳಿಗಿರುವ ಮಠದ ನೆಲಾವರಣದಲ್ಲಿ ಪೂಜಾ ಸ್ಥಾನವಿದೆ. ಇತ್ತಿಚಿಗೆ ಮಠದ ಮೊದಲಂತಸ್ತಾಗಿ ಮೂರು ಕೋಣೆಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಒಂದು ಕೋಣೇ ಗ್ರಂಥಾಲಯವಾಗಿದೆ. ಮಠದ ಮುಂಭಾಗದಲ್ಲಿ ಪಶ್ವಿಮ ಭಾಗಕ್ಕೆ ದಾಸೋಹದ ಮನೆಯಿದೆ. ಅದಕ್ಕೆ ಹೊಂದಿಕೊಂಡತೆ ದಕ್ಷಿಣ ಬಾಗದಲ್ಲಿ ಒಂದು ಭಾವಿಯಿದೆ. ದೇವಾಲಯದ ನೈರುತ್ಯ ದಿಕ್ಕಿನಲ್ಲಿ ತೇರಿನ ಗೃಹವು ನೂತನವಾಗಿ ನಿರ್ಮಾಣಗೊಂಡಿದೆ. ಈ ರಥದ ಮನೆಯಿಂದ ಸುಮಾರು ನೂರು ಮೀಟರ್ ಅಂತರದಲ್ಲಿ ಪಾದಗಟ್ಟಿಯಿದೆ. ಇನ್ನುಳಿದ ಸುಮಾರು ಎರಡು ಎಕರೆ ಜಮೀನಿನಲ್ಲಿ ವ್ಯವಸಾಯವನ್ನು ಕೈಗೊಳ್ಳಲಾಗಿದೆ.

ಶ್ರೀ ಮಡಿವಾಳೇಶ್ವರರು

ಶ್ರೀ ಮಡಿವಾಳೇಶ್ವರರು ಮುರುಘಾರ್ಯ ಮತ್ತು ದಾನಮ್ಮ ಪುಣ್ಯದಂಪತಿಗಳ ಉದರಲ್ಲಿ ಕ್ರಿ. ಶ. ೧೭೯೦ರಲ್ಲಿ ಜನಿಸಿದರು. ಕಲ್ಯಾಣಮಠದ ಪೂಜ್ಯಶ್ರೀಗಳಿಂದ ನಾಮಕರಣಗೊಂಡವರು. ಮದುವೆಯಾಗಿ ಸಂಸಾರಿಯಾಗಿದ್ದು ಎರಡು ಮಕ್ಕಳನ್ನು ಪಡೆದು ಲೌಕಿಕ ಜೀನವ ನಡೆಸಿದರು. ಪ್ರಾಪಂಚಿಕ ಬದುಕಿನಲ್ಲಿ ನಿರಾಸಕ್ತರಾಗಿ ವಿರಕ್ತಿ ಹೊಂದಿ, ಸ್ವಾಮಿತ್ವನ್ನು ಸಂಪಾಸಿದವರು. ಅಂಕಲಗಿ ಅಡವಿಸಿದ್ಧೇಶ್ವರರಿಂದ ಅನುಗ್ರಹಿತರಾಗಿ, ಅವರು ಕರುಣಿಸಿದ ವಿಭೂತಿಗಟ್ಟಿ, ಅಂಬಲಿಪಾತ್ರ, ಬೆತ್ತ ಪಡೆದು ಮರೇಗುದ್ದಿಗೆ ಬಂದು, ಶ್ರೀ ಮಠವನ್ನು ಸ್ಥಾಪನೆ ಮಾಡಿ; ವಿರಕ್ತ ಪರಂಪರೆಗೆ ನಾಂದಿ ಹಾಡಿದ ಸಂಗತಿಯನ್ನು ಈಗಾಗಲೇ ನೋಡಿಯಾಗಿದೆ. ಮಡಿವಾಳೇಶ್ವರ ಸ್ವಾಮಿಗಳನ್ನು ‘ಗುಡ್ಡದಪ್ಪ’ ಎಂದು ಜನರು ಕರೆಯುತ್ತಿರುವುದಾಗಿ ತಿಳಿದುಬರುತ್ತದೆ. ಮಡಿವಾಳೇಶ್ವರ ಸ್ವಾಮಿಗಳು, ಸಂಸಾರ ತ್ಯಜಿಸಿ ಸನ್ಯಾಸ ಸ್ವೀಕರಿಸಿದ ಮೇಲೆ ಗಡ್ಡ ಮತ್ತು ಜಡೆಗಳನ್ನು ಬಿಟ್ಟಿದ್ದರು. ಭಾರತೀಯ ಪರಂಪರೆಯಲ್ಲಿ ಯತಿಯಾಶ್ರಮಿಗಳಾದ ಮೇಲೆ ಗಡ್ಡ ಮತ್ತು ಜಠಾಧಾರಿಯಾಗಿರುವುದು ಗೌರವದ ಪ್ರತೀಕವಾಗಿದೆ. ಸನ್ಯಸತ್ವದ ಸಂಕೇತವಾಗಿದೆ. ಮಡಿವಾಳೇಶ್ವರರು ಗಡ್ಡ ಬಿಟ್ಟಿರುವುದರಿಂದ ‘ಗಡ್ಡದಪ್ಪ’ರೆಂದು ಜನರು ಕರೆಯುತ್ತಿದ್ದರಂತೆ. ಸ್ವಾಮಿಗಳನ್ನು ಅಪ್ಪ, ಅಪ್ಪನವರು ಎಂದು ಕರೆಯುವ ವಾಡಿಕೆಯಿದೆ. ಗಡ್ಡ ಬಿಟ್ಟಿರುವುದರಿಂದ ‘ಗಡ್ಡದಪ್ಪ’ ಎಂದು ಕರೆದಿರುವುದು ಸಹಜವಾಗಿದೆ.

ಶ್ರೀ ಮಡಿವಾಳೇಶ್ವರರು ತಮ್ಮಸಂಕಲ್ಪದಂತೆ ಧಾರ್ಮಿಕ ಸಾಂಸ್ಕೃತಿಯ ಚಟುವಟಿಕೆಗಳನ್ನು ಶ್ರೀಮಠದಲ್ಲಿ ನಡೆಸುತ್ತ ಬಂದರು ನಿತ್ಯ ದಾಸೋಹದ ವ್ಯವಸ್ಥೆ ಮಾಡಿದರು. ಅಂದಿನಿಂದ ‘ಅಂಬಲಿ’ಯ ಪರಂಪರೆ ಶ್ರೀ ಮಠದಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಇಂದಿಗೂ ಕೂಡಮುಂದುವರೆದಿದೆ. ಯಾರೇ ಬಂದರೂ ಯಾವ ಹೊತ್ತಿನಲ್ಲಿಯೇ ಬಂದರೂ ಶ್ರೀ ಮಠದಲ್ಲಿ ಭಕ್ತರಿಗೆ ಬಿಸಿ – ಬಿಸಿ ಅಂಬಲಿ ಸದಾಸಿದ್ಧವಾಗಿರುತ್ತದೆ. ಇದು ಈ ಲೇಖಕನ ಅನುಭವಕ್ಕೂ ಬಂದ ಸಂಗತಿಯಾಗಿದೆ.

ಮರೇಗುದ್ದಿ ಮಡಿವಾಳೇಶ್ವರರು ಸಿದ್ಧಿಪುರುಷರೆಂಬ ನಂಬಿಗೆ ಜನಮನದಲ್ಲಿ ಬಲವಾಗಿ ಮೂಡಿತು. ಸಮಾಜೋಪಯೋಗಿ ಚಟಿವಟಿಕೆಗಳು ಅಂದಿನ ಜನಸಮುದಾಯವನ್ನು ಆಕರ್ಷಿಸಿದವು. ಶ್ರೀಗಳಿಂದ ನಡೆದುವೆನ್ನಲಾದ ಪವಾಡಗಳು ಶ್ರೀಮಠಕ್ಕೆ ಹೆಚ್ಚಿನ ಗೌರವ ಮತ್ತು ಮರ್ಯಾದೆಯನ್ನು ತಂದುಕೊಟ್ಟವು.

ಶ್ರೀ ಮಠಕ್ಕೆ ಪ್ರಾಪ್ತವಾದ ಹಕ್ಕುಗಳು (ಮಾನ – ಮರ್ಯಾದೆ)

ಶ್ರೀಗಳಿಂದ ನಡೆದ ಅಘಟಿತ ಘಟನೆಗಳು ಪೂಜ್ಯರಿಗೆ ಅಲೌಕಿಕ ವ್ಯಕ್ತಿತ್ವನ್ನು ದಯಪಾಲಿಸಿದವು. ವ್ಯಕ್ತಿಯೋರ್ವ ಬೆಳೆದು ನಿಂತಾದ ಸಾಮಾನ್ಯ ಕಾರ್ಯಗಳು ಅಸಾಮಾನ್ಯವೆನಿಸಿ ಕೊಳ್ಳುತ್ತವೆ. ಇನ್ನು ಅಸಾಮಾನ್ಯವಾದ ಘಟನೆಗಳನ್ನು ಜನರು ಪವಾಡಗಳೆಂದೇ ನಂಬುವುದು ಕಥೆ ಕಟ್ಟಿ ದಂತಕಥೆಗೊಳಿಸಿ ಪ್ರಚಾರಗೊಳಿಸುವುದು ಜನಪದರಲ್ಲಿ ಸರ್ವೇಸಾಮಾನ್ಯವಾದ ಸಂಗತಿಯಾಗಿದೆ.

ಮಡಿವಾಳೇಶ್ವರರು ಮಾಡಿದ ಪವಾಡಗಳು

ಗ್ರಾಮದಿಂದ ಗ್ರಾಮಕ್ಕೆ ಶ್ರೀಗಳು ಭಿಕ್ಷೆಗಾಗಿ ಸಂಚಾರ ಕೈಗೊಂಡಾಗ ಹಲವು ಪವಾಡಗಳು ನಡೆದುವಂತೆ. ಮಹಾಲಿಂಗಪುರದ ಜಿಪುಣಾಗ್ರೇಸರ ನೀಲಪ್ಪ; ಶ್ರೀಗಳಿಗೆ ಕೊಟ್ಟ ಮಾತು ನಡೆಸದಿದ್ದಾಗ ಅವನ ಪತ್ನಿಯ ಗರ್ಭ ಕರಿಗಿ ಹೋಗಿದ್ದು, ಮಣ್ಣು ಹೆಂಟೆಯನ್ನು ಬೆಲ್ಲದ ಫೆಂಟಿಯಾಗಿ ಪರಿವರ್ತಿಸಿದ್ದು, ಮುಧೋಳ ಸಂಸ್ಥಾನಿಕರ ರೋಗವನ್ನು ನಿವಾರಿಸಿದ್ದು, ಬಬಲಾದಿ ಸದಾಶಿವ ಮಹಾರಾಜರು ಪ್ರಸಾದವಾಗಿ ನೀಡಿದ ಸುರೆಯನ್ನು ಅಂಬಲಿಯಾಗಿಸಿ, ಸೇವಿಸಿದ್ದು; ಅನ್ನ ಪ್ರಸಾದ ಅಕ್ಷಯಗೊಳಿಸಿದ್ದು ಮುಂತಾದ ಪವಾಡಗಳು ಭಕ್ತರ ಮನೋಮಂದಿರದಲ್ಲಿ ನೆಲೆಸಿ, ರಂಜನೀಯವಾಗಿ ಚಲಾವಣೆಯಲ್ಲಿವೆ. ಇಂಥ ಪವಾಡಗಳು ಆಧುನಿಕ ವಿಜ್ಞಾನಕ್ಕೆ ಸವಾಲಾಗಿದೆ. ಇವುಗಳನ್ನು ಯಥವತ್ತಾಗಿ ಸ್ವೀಕರಿಸದೆ; ಇದರ ಹಿಂದಿರುವ ತತ್ವವನ್ನು ಅರ್ಥೈಸಿಕೊಳ್ಳಬೇಕಾಗಿದೆ.

ಪವಾಡಗಳು

ಅಥಣಿ ತಾಲೂಕಿನ ಶೇಗುಣಸಿ, ಜಮಖಂಡಿ ತಾಲೂಕಿನ ಕೊಣ್ಣೂರು, ಮರೇಗುದ್ದಿ ಗ್ರಾಮದ ಪಿಷ್ಟದ (ಹಿಟ್ಟಿನ) ಹಕ್ಕು, ಕೋಲೂರು ಗ್ರಾಮದ ಶ್ರೀ ಕುಮಾರಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ರಥದಲ್ಲಿ ಕೂಡುವ ಗೌರವ, ಜಾತ್ರಾ ಸಮುದಾಯದಿಂದ ಮಾನಮರ್ಯಾದೆ ಸ್ವೀಕರಿಸುವ ಹಕ್ಕು, ದಾಸ್ಯಾಳದ ಬನ್ನಿ ಮುಡಿಯುವ ಹಕ್ಕುಗಳು, ಶ್ರೀ ಮಡಿವಾಳೇಶ್ವರರ ಕಾರಣಿಕ ವ್ಯಕ್ತಿತ್ವದಿಂದಾಗಿಯೇ ಮರೇಗುದ್ದಿಯ ಮಠಕ್ಕೆ ವರವಾಗಿ ಪರಿಣಮಿಸಿದವು. ಮರೇಗುದ್ದಿ ಮಠದಲ್ಲಿ ಯುಗಾದಿ ಪ್ರತಿಪದದ ದಿವಸ (ಬಿತ್ತನೆಗೆ ಧಾನ್ಯ ವಿತರಿಸುವ) ಕೊಡುವ ಪದ್ದತಿಯು ನಡೆದು ಬಂದಿದೆ ಮಡಿವಾಳೇಶ್ವರರಿಂದ ಆರಂಭಗೊಂಡ ಈ ಪದ್ದತಿಯು ಮುಂದೆ ಬಂದ ಮಠಾಧಿಪತಿಗಳಿಂದಲೂ ನಿರಂತರವಾಗಿ ಮುಂದುವರೆದಿದೆ. ಕಾರ್ತಿಕ ಶುದ್ಧ ಪಂಚಮಿಯಲ್ಲಿ ಜಾತ್ರಾ, ಧಾರ್ಮಿಕ ಕಾರ್ಯಕ್ರಮಗಳ, ನಿತ್ಯದಾಸೋಹ ಸಂಪ್ರದಾಯವೂ ಅನೂಚಾನವಾಗಿ ಸಾಗಿ ಬಂದಿದೆ. ಇತ್ತೀಚೆಗೆ ಜಾತ್ರಾದಿ ಕಾರ್ಯಕ್ರಮಗಳನ್ನು ಪೌಷ್ಟಶುದ್ಧ ದಶಮಿಗೆ ಬದಲಾಯಿಸಿದ್ದಾರೆ.

ಐಕ್ಯ

ಶರಣಸ್ಥಲದಿ ಪ್ರಖ್ಯಾತರಾದ ಅನೇಕ ಶಿವಶರಣರಲ್ಲಿ ರೇಚಯ್ಯನವರೂ ಒಬ್ಬರು ಹನ್ನೆರಡನೆಯ ಶತಮಾನದಲ್ಲಿದ್ದ ಚೆನ್ನಬಸವಣ್ಣನವರ ಅನುಯಾಯಿ ರೇಚಯ್ಯ’ನವರು ಓರ್ವರಾದರೆ, ಅಂಕಲಗಿ ಅಡವಿಸಿದ್ಧೇಶ್ವರ ಮಠದ ಸಂಸ್ಥಾಪದರಾದ ರೇಚಯ್ಯನವರು ಮತ್ತೋರ್ವರು, ಮರೇಗುದ್ದಿ ಶ್ರೀ ಮಠದ ಆದಿಕರ್ತೃವಾದ ಮಡಿವಾಳೇಶ್ವರರು ‘ರೇಚಯ್ಯ’ನವರೆಂಬ ಹೆಸರಿಂದ ಚಿರಪರಿಚಿತಾಗಿದ್ದರು. ಇವರು ತುಂಬ ಬಾಳನ್ನು ಬದುಕಿದವರು. ಅಖಂಡ ಒಂದು ನೂರು ವರುಷ ಬಾಳಿ ಶತಾಯುಷಿಗಳಾದವರು. ತಮ್ಮ ಅಂತಿಮ ಅವಸ್ಥೆಯಲ್ಲಿ ತಾವು ಕೈಗೊಂಡ ಶ್ರೀಮಠದ ಚಟುವಟಿಕೆಗಳು ಮುಂದೆ ಸಾಂಗೋಪಸಾಂಗವಾಗಿ ಸಾಗಲು, ಸರಾಗವಾಗಿ ನಡೆದುಕೊಂಡು ಹೋಗುವಂತೆ ಅನುವು ಮಾಡಲೆಂದು ತಮ್ಮ ಉತ್ತರಾಧಿಕಾರಿಯನ್ನು ಆರಿಸಿಕೊಂಡರು. ಪರಯ್ಯನವರನ್ನು ಶ್ರೀಮಠಕ್ಕೆ `ಮರಿ’ಯನ್ನಾಗಿ’ ನಿಶ್ಚಯಿಸಿದರು. ಮುಂದೆ ಶ್ರೀ ಪರಯ್ಯಸ್ವಾಮಿಗಳಿಗೆ ಶಾಸ್ತ್ರೋಕ್ತವಾಗಿ ಪೀಠಾರೋಹಣ ಸಮಾರಂಭವನ್ನು ಏರ್ಪಡಿಸಿ, ಮಠಾಧೀಶರನ್ನಾಗಿ ಮಾಡಿ; ಎಲ್ಲ ಅಧಿಕಾರಗಳನ್ನು ಬಿಟ್ಟುಕೊಟ್ಟರು, ಧಾರ್ಮಿಕ, ಸಾಮಾಜಿಕ ಜನೋಪಯೋಗಿ ಚಟುವಟಿಕೆಗಳನ್ನು ಚಾಚೂ ತಪ್ಪದೇ ಮುನ್ನಡೆಸುವಂತೆ ಪ್ರಮಾಣ ಮಾಡಿಸಿಕೊಂಡು ನಿರಾಳರಾದರು. ತಮ್ಮ ತರುವಾಯ ಶ್ರೀ ಮಠದ ಚಟುವಟಿಕೆಗಳೆಲ್ಲ ನಿತ್ಯನಿರಂತರ ಸಾಗುವ ಭರವಸೆ ದೊರೆತ ಮೇಲೆ, ನಿಶ್ಚಂತರಾಗಿ ಲಿಂಗಾನುಸಂಧಾನದಲ್ಲಿ ಲೀನರಾಗಿ ಲಿಂಗೈಕ್ಯರಾದರು. ಶರಣಸ್ಥಲದ ಅನುಭಾವಿ ಐಕ್ಯಸ್ಥಲ ತಲುಪಿ: ಭೌತಿಕ ದೇಹವನ್ನು ತ್ಯಜಿಸಿದರು. ಪರಯ್ಯಸ್ವಾಮಿಗಳು ಅಧಿಕಾರ ಸ್ವೀಕರಿಸಿದರು.

ಪರಯ್ಯ ಸ್ವಾಮಿಗಳು (ಕ್ರಿ. ಶ. ೧೮೮೫ – ೧೯೧೮)

ಶ್ರೀ ಮಡಿವಾಳೇಶ್ವರ ಸ್ವಾಮಿಗಳು ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ತಮ್ಮ ಗುರುಗಳು ಆರಂಭಿಸಿದ ಎಲ್ಲ ಆಚರಣೆಗಳು, ಉತ್ಸವಗಳನ್ನು ಚಾಚೂ ತಪ್ಪಿಸಿದಮತೆ, ಅನುಸರಿಸಿದರು. ಪರಂಪರಾಗತ ಚಟುವಟಿಕೆಗಳೆಲ್ಲವೂ ಎಂದಿನಂತೆ ನಡೆದವು. ಇವರ ಕಾಲದಲ್ಲಿ ಹಲವು ಪವಾಡಗಳು ಜರುಗಿರುವ ಪ್ರತೀತಿಯಿದೆ. ಮೆಳ್ಳಿಗೇರಿ ಗ್ರಾಮದ ಸತ್ಯಪ್ಪ ಮಾಚಪ್ಪನವರ ಮನೆತನದ ವಂಶದ ಮುಂದುವರಿಕೆಯು ಶ್ರೀಗಳ ಅನುಗ್ರಹದಿಂದಾಯಿತು. ಈ ರೀತಿ ಹಲವಾರು ಪವಾಡ ನಡೆದುದ್ದನ್ನು ಜನರು ವಿವರಿಸುತ್ತಾರೆ. ಮುಂದೆ ತಮ್ಮ ಮಠದ ಸಾಂಪ್ರಾದಾಯಕ್ಕನುಸಾರವಾಗಿ ಮಠಾಧಿಪತಿಗಳೆ ತಮ್ಮ ಮಠದ ಉತ್ತರಾಧಿಕಾರಿಯನ್ನರಿಸುವ ಪದ್ಧತಿಯಂತೆ ಶ್ರೀ ರಾಚಯ್ಯಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಗಳನ್ನಾಗಿ ಆರಿಸಿಕೊಂಡರು.

ರಾಚಯ್ಯ ಸ್ವಾಮಿಗಳು (ಕ್ರಿ. ಶ. ೧೯೦೮ ರಿಂದ ೧೯೨೪)

ಶ್ರೀ ಪರಶಿವಯ್ಯ ಸ್ವಾಮಿಗಳು ತಮ್ಮಅಂತ್ಯಾವಸ್ಥೆಯಲ್ಲಿ ರಾಚಯ್ಯ ಸ್ವಾಮಿಗಳಿಗೆ ಮಠಾಧಿಪತ್ಯವಹಿಸಿಕೊಟ್ಟು ಮುಕ್ತರಾದರು. ರಾಚಯ್ಯಸ್ವಾಮಿಗಳು ಪೀಠಾದಿಪತಿಗಳಾಗಿ ಕೆಲವು ವರುಷಗಳಲ್ಲಿ ಪರಯ್ಯಸ್ವಾಮಿಗಳು ಲಿಂಗೈಕ್ಯರಾದರು. ಮುಂದೆ ಶ್ರೀ ರಾಚಯ್ಯಸ್ವಾಮಿಗಳು ಶ್ರೀ ಮಠದ ಪೂರ್ವ ಪರಂಪರೆಯನ್ನೇ ಮುಂದುವರೆಸಿಕೊಂಡು ಬಂದರು. ಇವರ ಅವಧಿಯಲ್ಲಿ ಮಹತ್ವವೆನ್ನಿಸುವ ಘಟನೆಗಲು ಜರುಗಿರುವಂತೆ ಕಂಡು ಬರುವುದಿಲ್ಲ. ಶ್ರೀ ಮಠದ ಎರಡನೆಯ ಮತ್ತು ಮೂರನೆಯ ಮಠಾಧಿಪತಿಗಳಾಧ ಪರಯ್ಯ ಸ್ವಾಮಿಗಳು ಮತ್ತು ರಾಚಯ್ಯಸ್ವಾಮಿಗಳು ಅವಧಿಯಲ್ಲಿ ವಿಶೇಷವೆನ್ನಿಸುವ ಘಟನೆಗಳಾಗಲಿ, ಐತಿಹಾಸಿಕವೆನ್ನವಹುದಾದ ಸಂಗತಿಗಳವುವು ಜರುಗಿಲ್ಲ. ಹೀಗಾಗಿ ಈರ್ವರೂ ಪೂಜ್ಯರು ಬದುಕಿನ ಕುರಿತಾಗಿ ಹೆಚ್ಚಿನ ಮಾಹಿತಿಗಳಿಂದ ಉಳಿದು ಬಂದಿಲ್ಲ. ರಾಚಯ್ಯಸ್ವಾಮಿಗಳು ಗುರುಪಾದೇಶ್ವರರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಆರಿಸಿದರು.

ಗುರುಪಾದ ಸ್ವಾಮಿಗಳು(ಕ್ರಿ. ಶ. ೧೯೧೩ರಿಂದ ೧೯೭೪)

ಶ್ರೀ ರಾಚಯ್ಯಸ್ವಾಮಿಗಳು ಶ್ರೀ ಮಠದ ಪೂರ್ವ ಪದ್ಧತಿಯನ್ನೇ ಅನುಸರಿಸಿಕೊಂಡು ಬಂದು; ಉತ್ತರಾಧಿಕಾರಿಗಳ ಆಯ್ಕೆಯಲ್ಲಿಯೂ ಚಾಚೂ ತಪ್ಪದೇ ಪಾಲಿಸಿದರು. ಶ್ರೀ ಮಠದ ಶಿಷ್ಯ ಸಮುದಾಯ ಭಕ್ತವೃಂದ ಮತ್ತು ಶಿಶುಮಕ್ಕಳನ್ನುಬರಮಾಡಿಕೊಂಡರು. ಶ್ರೀಗುರುಪಾದಯ್ಯ ಸ್ವಾಮಿಗಳು ಮಸ್ತಕಕ್ಕೆ ಹಸ್ತಸ್ಪರ್ಶ ಮಾಡಿ ತಮ್ಮ ಉತ್ತರಾಧಿಕಾರಿಗಳೆಂದು ಅಧಿಕೃತವಾಗಿ ಪ್ರಕಟಿಸಿದರು. ಅಂಕಲಗಿಯ ಶ್ರೀ ಅಡವಿಸಿದ್ಧೇಶ್ವರ ಮಠಕ್ಕೆ ಹೋಗಿ ಶ್ರೀ ಗುರುಪಾದಯ್ಯ ಸ್ವಾಮಿಗಳನ್ನು ಮಠಾಧೀಶರನ್ನಾಗಿ ಮಾಡಿಕೊಂಡು ಬರಬೇಕೆಂದು ಅಪ್ಪಣೆ ಕೊಡಿಸಿ ಲಿಂಗೈಕ್ಯರಾದರು. ಶ್ರೀ ರಾಚಯ್ಯಸ್ವಾಮಿಗಳು ತಮ್ಮ ಉತ್ತರಾಧಿಕಾರಿಗಳೆಂದು ಗುರುಪಾದಯ್ಯನವರನ್ನು ಘೋಷಿಸುವ ಸಂದರ್ಭದಲ್ಲಿ ಮರೇಗುದ್ದಿಯ ಗುರುಲಿಂಗಪ್ಪ ಕೆರೂರು, ಸಿದ್ಧಾಪುರದ ರಾಮಪ್ಪ ಅಳ್ಳಿಮಟ್ಟಿ, ಗಿರಿಸಾಗರದ ನಿಂಗಪ್ಪ ಕೊಣ್ಣೂರು, ಬೂದಿಹಾಳದ ಮಲ್ಲಪ್ಪ ಕೊಣ್ಣೂರು ಮೊದಲಾದವರು ಸಮ್ಯಕ್ ಸಾಕ್ಷಿಯಾಗಿದ್ದರಂತೆ

ಶ್ರೀ ರಾಚಯ್ಯಸ್ವಾಮಿಗಳು ಅಪ್ಪಣೆಯ ಅನುಸಾರವಾಗಿ ಶ್ರೀ ಗುರುಪಾದಯ್ಯ ಸ್ವಾಮಿಗಳನ್ನು ಶ್ರೀ ಮಠದ ಅಧಿಕಾರಿಗಳನ್ನಾಗಿ ನಿಯುಕ್ತಗೊಳಿಸಿಕೊಂಡು ಬರಲು ಅಂಕಲಗಿ ಮಠಕ್ಕೆ ತೆರಳಿದವರಲ್ಲಿ ಮಲ್ಲಯ್ಯ ಸಂಬಾಳ, ಮಲ್ಲಪ್ಪ ಮಗದುಮ್, ರಾಮಗೊಂಡ ಮತ್ತು ಹಲವಾರು ಭಕ್ತರಿದ್ದು ಐತಿಹಾಸಿಕ ಘಟನೆಯನ್ನು ಸಾಕ್ಷೀಕರಿಸಿದ್ದಾರೆ. ಆ ಕಾಲದಲ್ಲಿ ಅಂಕಲಗಿ ಅಡವಿಸಿದ್ಧೇಶ್ವರ ಮಠದಲ್ಲಿ ಅರ್ಚಕರಾದ ನಾಗಯ್ಯ ಬೊ ಅಂಕಲಿಮಟ ಉಪಸ್ಥಿತರಿದ್ದರು. ಅಂಕಲಗಿ ಮಠದಲ್ಲಿ ಅಧಿಕಾರ ದೀಕ್ಷೆ ಪಡೆದುಕೊಂಡು ಬಂದ ಮೇಲೆ ಮರೇಗುದ್ದಿಯಲ್ಲಿ ಶ್ರೀ ಗುರುಪಾದೇಶ್ವರ ಸ್ವಾಮೀಜಿಯವರ ಪೀಠಾರೋಹಣ ಸಮಾರಂಭವು ಆದ್ಧೂರಿಯಾಗಿ ನೆರವೇರಿತು. ಮರೇಗುದ್ದಿಯ ಅಪ್ಪಣ ದಡ್ಡಿ, ಸಾತಿರಪ್ಪ ವಾರದ, ರಾಮಪ್ಪ ದಡ್ಡಿ, ಶಿವಪ್ಪ ಮುಂಗಲಿ ಇನ್ನೂ ಅನೇಕರ ಮುಂದಾಳುತನದಲ್ಲಿ ಪಟ್ಟಾಧಿಕಾರ ಮಹೋತ್ಸವವು ವೈಭವದಿಂದ ಜರುಗಿತು. ಶ್ರೀ ಗುರುಪಾದೇಶ್ವರ ಮಹಾಸ್ವಾಮಿಗಳು ಶ್ರೀ ಮರೇಗುದದಿ ವಿರಕ್ತಮಠದ ನಾಲ್ಕನೆಯ ಪೀಠಾಧಿಪತಿಗಳಾದರು.

ಶ್ರೀ ಗುರುಪಾದಯ್ಯ ಸ್ವಾಮಿಗಳು ಮರೇಗುದ್ದಿ ಅಡವಿಸಿದ್ದೇಶ್ವರ ಮಠದ ನೂತನ ಮಠಾಧೀಶರಾಗಿ ಶ್ರೀಮಠದ ಹಕ್ಕು – ಬಾಧ್ಯತೆಗಳನ್ನು ಸಂಪ್ರದಾಯ ಆಚರಣೆಗಳನ್ನು ಜಾತ್ರೆ, ಉತ್ಸವ, ಶಿವರಾತ್ರಿ, ಶ್ರಾವಣ, ನವರಾತ್ರಿ ಯುಗಾದಿಯ ಕಾರ್ಯಕ್ರಮಗಳನ್ನು ವೈಭವದಿಂದ ನಡೆಸುತ್ತಾ ಬಂದರು. ಅಂದಿನ ಸಡಗರ ಸಂಭ್ರಮವನ್ನು ಕಾಯ್ದುಕೊಂಡು ಕಾಲಕ್ಕೆ ತಕ್ಕಂತೆ ಹೊಸತನವನ್ನು ಅಳವಡಿಸಿದರು. ಎರಡು ಮತ್ತು ಮೂರನೆಯ ಮಠಾಧೀಶರ ಕಾಲದಲ್ಲಿ ತುಸು ಮಸುಕಾಗಿದ್ದ ಸಡಗರಕ್ಕೆ ಗತವೈಭವನ್ನು ಮರಳಿ ತಂದುಕೊಟ್ಟರು. ರೈತಾಪಿ ಜನಾಂಗಕ್ಕೆ ಅನಕೂಲವಾಗುವ ವಿದಾಯಕ ಚಟುವಟಿಕೆಗಳನ್ನು ಜಾರಿಗೆ ತಂದರು. ಕ್ರಿ. ಶ. ೧೯೩೩ರಲ್ಲಿ ಬಸವಪುರಾಣ ಮತ್ತು ಪಟ್ಟಚರಮೂರ್ತಿಗಳಿಂದ ಶೋಭಿತವಾದ ಹನ್ನೊಂದು ಮಂಟಪೋತ್ಸವವನ್ನು ವಿಜೃಂಭಣೆಯಿಂದ ಜರುಗುವಂತೆ ಹಿನ್ನೆಲೆಯಾಗಿದ್ದಯ ಏರ್ಪಾಡು ಮಾಡಿದರು. ಮುಂದೆ ೧೯೪೧ರಲ್ಲಿ ಮರೇಗುದ್ದಿಯ ಪಕ್ಕದ ಗ್ರಾಮವಾದ ಕೊಣ್ಣೂರಿನ ಭಕ್ತನಾದ ಈರಪ್ಪ ಸೀಪರಮಪ್ಪನವರು ಶ್ರೀ ಗುರುಪಾದಯ್ಯ ಸ್ವಾಮಿಗಳ ಮೇಣೆಯ ಉತ್ಸವ ಏರ್ಪಡಿಸಿದ್ದರು. ಶ್ರೀ ಗುರುಪಾದಯ್ಯ ಸ್ವಾಮಿಗಳು ಮಠಾಧಿತತ್ವ ಹಾಗೂ ಅವರ ಅಧಿಕಾರತ್ಯದಲ್ಲಿ ಜಾತ್ರೆ ಉತ್ಸವ, ರಥೋತ್ಸವ ಮತ್ತು ಇನ್ನಿತರ ಸಾಂಪ್ರದಾಯಿಕ ಚಟುವಟಿಕೆಗಳನ್ನು ಶ್ರೀಮಠದ ಪರಂಪರೆಯಂತೆ ಮುನ್ನಡೆಸಿದರು. ಶಿವಯೋಗಿಮಂದಿರದ ಪ್ರಕಟವಾಗುವ ಸುಕುಮಾರ ತ್ರೈಮಾಸಿಕ ಪತ್ರಿಕೆಯಲ್ಲಿ ಇವರೆಲ್ಲ ಸಂಗತಿಗಳು ದಾಖಲುಗೊಂಡಿವೆ. ಹುಬ್ಬಳ್ಳಿಯ ಜಡಿಸಿದ್ದಾ ಆಶ್ರಮದ ಸ್ವಾಮಿ ಶಂಕರಾನಂದ ವಿರಚಿತ, ‘ಮಹಾಕಾವ್ಯ’ ವಿಚಾರ’ದಲ್ಲಿಯೂ ಶ್ರೀಗುರು ಪಾದೇಶ್ವರ ಕುರಿತಾಗಿ ಮತ್ತು ಶ್ರೀಮಠದ ಚಟುವಟಿಕೆಗಳ ಕುರಿತಾಗಿ ಟಿಪ್ಪಣಿಯಿದೆ.

ಶ್ರಿ ಮಠಾಧೀಶರು ರಚಿಸಿರುವ ಶ್ರೀ ಮಡಿವಾಳೇಶ್ವರದ ಚರಿತದ ‘‘ಪ್ರಾಸಂಗಿಕಾಂಗದಲ್ಲಿ’ ಸಂಕ್ಷಿಪ್ತವಾದ ವಿವರಗಳಿವೆ. ಇದೇ ಪೂಜ್ಯರು ಬರೆದಿರುವ ‘ಶ್ರೀಗುರು ಗುರುಪಾದೇಶ್ವರ ಚಿದ್ವಿಲಾಸದಲ್ಲಿ ಶ್ರೀಗಳ ಜೀವನ ಸಾಧನೆ ಸಿದ್ಧಿಯ ದಾಖಲುಗೊಂಡಿದೆ. ಪದ್ಯರೂಪದಲ್ಲಿ ಮೂಡಿಬಂದ ಚಾರಿತ್ರಿಕ ಕಾವ್ಯವಿದು. ಶ್ರೀ ಶಿವಾನಂದ ಗಿರಗಾಂವಿಯವರು ಬರೆದಿರುವ ‘‘ಶ್ರೀ ಗುರುಪಾದೇಶ್ವರ ವಿಲಾಸ’ ವೆಂಬ ನಾಟಕವು ಕೂಡ ಶ್ರೀ ಗುರುಪಾದಯ್ಯಸ್ವಾಮಿಗಳು ಬದಕನ್ನು ಚಿತ್ರಿಸುವ ಕೃತಿಯಾಗಿದೆ.

ಜೀರ್ಣೋದ್ಧಾರ ಕಾರ್ಯ

ಮರೇಗುದ್ದಿ ಮಠದಲ್ಲಿ ಲಿಂಗ ಪೂಜಾ ವಾಸಸ್ಥಾನ ಮಂದಿರದ ಮುಂದಿನ ಬದಿಯ ಎರಡೂ ಬಂಧುರವಾದ ಗೋಡೆಗಳು ಶ್ರೀಗುರುಪಾದಯ್ಯ ಸ್ವಾಮಿಗಳು ಅಧಿಕಾರವಾಧಿಯಲ್ಲಿ ಸಿದ್ಧವಾಗಿವೆ. ಬೀಳಗಿ ತಾಲೂಕಿನ ‘ಜಾನಮಟ್ಟಿ’ ಗ್ರಾಮದ ನಂದಿಮೂರ್ತಿಯ ಪ್ರತಿಷ್ಟಾಪನೆಯಾಗಿ ಮುಂದೆ ಗ್ರಾಮದೇವಿಮಂದಿರ ತೋಳಮಟ್ಟಿಯ ಮಾರುತಿ ಮಂದಿರ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಗ್ರಾಮದೇವಿ ಮಂದಿರ ಮತ್ತು ಗೋಕಾಕ್ ತಾಲೂಕಿನ ಹಳಯರಗುದ್ರಿಯ ಮಹಾದೇವ ಮಂದಿರ, ಜಮಖಂಡಿ ತಾಲೂಕಿನ ಯಲ್ಲಟ್ಟಿ ಗ್ರಾಮದ ಸಂಗಮೇಶ್ವರ ದೇವರ ಪ್ರತಿಷ್ಟಾಪನೆ ಪೂಜ್ಯರು ಶ್ರೀ ಗುರುಪಾದೇಶ್ವರ ಮಾರ್ಗದರ್ಶನದಂತೆ ಸಿದ್ದವಾದವು. ಇದೇ ಪರಮಪೂಜ್ಯ ಅಮೃತಹಸ್ತದಿಂದ ಅನಾವರಣಗೊಂಡವು. ಇವಲ್ಲದೆ ಇನ್ನೂ ಹಲವಾರು ಮಠಮಂದಿರ ಗ್ರಾಮದೇವತೆಗಳ ಗುಡಿ – ಗುಂಡಾರಗಳು ಜೀರ್ಣೋದ್ದಾರದ ಕಾರ್ಯಕ್ರಮಗಳು ಗುರುಪಾದಯ್ಯ ಸ್ವಾಮೀಜಿಯವರು ಸಿದ್ಧಿಪುರುಷರಾಗಿದ್ದ ಅವರಿಗೆ ‘ವಾಕ್‌ಸಿದ್ದಿ’ ನಂಬಿಗೆ ಜನಮದಲ್ಲಿ ಇಂಬುಗೊಂಡಿತ್ತು. ಆದ್ದರಿಂದ ಜನಸಮುದಾಯ ತುಂಬ ಭಕ್ತಿ ಗೌರವಾದರಗಳಿಂದ ನಡೆದುಕೊಳ್ಳುತ್ತಿದ್ದ ಸಂಗತಿ ತಿಳಿದುಬರುತ್ತದೆ.

ಪವಾಡಗಳು ಶ್ರೀಗಳ ಲೀಲೆಗಳು

ಶರಣ ಧರ್ಮ ಪ್ರಸಾರಕ್ಕಾಗಿ ಶ್ರೀಮಠದ ಬಸವಪುರಾಣ ಪ್ರಾರಂಭಿಸಿದಾಗ ಉಂಟಾದ ಎರಡು ತೊಂದರೆಗಳನ್ನು ಪೂಜ್ಯ ಶ್ರಿಗಳು ಲೀಲಾಜಾಲವಾಗಿ ನಿವಾರಿಸಿದಂತೆ. ಭಕ್ತ ಸಮೂಹರೊಡನೆ ಶ್ರೀಶೈಲ ಮಲ್ಲಿಕಾರ್ಜುನದರ್ಶನಾರ್ಥವಾಗಿ ಪಾದಯಾತ್ರೆ ಕೈಗೊಂಡಾಗ ಪ್ರಾಕೃತಿಕವಾಗಿ ಎಂದು ಸಮಸ್ಯೆಗಳನ್ನು ತಮ್ಮ ದೂರದೃಷ್ಟಿಯಿಂದ ನಿವಾರಣೆ ಮಾಡಿದ್ದು, ಶಿಷ್ಯ ಸಮೂಹ ದೊಡಗೂಡಿ ವಜ್ರಮಟ್ಟಿ, ಮಳಲಿ, ತೇರದಾಳ ಮುಂತಾದ ಗ್ರಾಮಗಳಲ್ಲಿ ಶಿಷ್ಯರ ಮನೆಯಲ್ಲಿ ತಯಾರಿಸಿದ ಪ್ರಸಾದ ಕೊರತೆಯಾಗುವ ಸಂದೇಹ ವ್ಯಕ್ತಪಡಿಸಿದಾಗ; ತಾವು ಪ್ರಸಾದ ವಿತರಿಸಲು ಸೂಚಿಸಿದಾಗ ೧೫ ರಿಂದ ೨೦ ಜನರಿಗಾಗಬಹುದಾದ ಪ್ರಸಾದವು ೪೦ ರಿಂದ ೫೦ ಜನ ಸ್ವೀಕರಿಸಿದ ‘ಅಕ್ಷಯ ಪ್ರಸಾದ ಮಹಿಮೆ’ ಅಪೂರ್ವವಾಗಿದೆ. ಭಾವುಕ ಭಕ್ತ ಜನರಿಗೆ ರೋಮಾಂಚವನ್ನುಂಟು ಮಾಡುವ ಸಂಗತಿಗಳಿವು.

ಎಣ್ಣೆ ತೀರಿದಾಗ ಕತ್ತಲದಾರಿಯಲ್ಲಿ ಕ್ರಮಿಸುವಾಗ ಕಂದೀಲಿಗೆ ನೀರು ಹಾಕಿ ಉರಿಸಿದ ಪ್ರಸಂಗ, ನಾಗರಹಾವಿಗೆಹಾಲು ಕುಡಿಸಿದ ಸಂದರ್ಭ, ಸುನಗ ಮತ್ತು ಅಲಗುಂಡಿ ಗ್ರಾಮಗಳಲ್ಲಿ ಮೋಡ ತಡೆದು ಮಳೆ ತರಿಸಿದ ಸಂದರ್ಭಗು, ಹಲವು ರೋಗಗಳನ್ನು ನಿವಾರಿಸಿದ ಸಂಗತಿಗಳು, ಮಕ್ಕಳ ಭಾಗ್ಯವಿಲ್ಲದ ದಂಪತಿಗಳಿಗೆ ಸಂತಾನಭಾಗ್ಯ ಕರುಣಿಸಿದ್ದು ಮುಂತಾದ ಪವಾಡಗಳು ಶ್ರೀಗಳಿಂದಾದ ಲೀಲೆಗಳು ಜನಮನದಲ್ಲಿ ಭಾರಿ ಪ್ರಚಾರದಲ್ಲಿವೆ. ಇವುಗಳನ್ನು ಯಥಾವತ್ತಾಗಿ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಪವಾಡಗಳ ಹಿಂದೆ ಅಡಗಿರುವ ರಹಸ್ಯವನ್ನು ಬೇಧಿಸಬೇಕಾಗಿದೆ. ಆಗ ಸತ್ಯದ ದರುಶನವಾಗುತ್ತದೆ. ಸಾಂಕೇತಿಕತೆಯನ್ನು ಅರ್ಥೈಸಿಕೊಳ್ಳಬೇಕಾಗಿದೆ. ಸಂಕೇತ – ಪ್ರತಿಮೆ – ರೂಪಗಳ ಹಿಂದಿರುವ ತತ್ವವನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ.

ಆಗ ವಾಸ್ತವಕ್ಕೆ ಮುಖಾಮುಖಿಯಾಗಬಹುದಾಗಿದೆ. ‘ಪವಾಡ’ ಅಥವಾ ‘ಲೀಲೆ’ಗಳ ಹಿಂದೆ ಯಾವುದೋ ರಹಸ್ಯ ಅಡಗಿರುವಂತಿದೆ. ಮಾನವರಿಗೆ ಮನುಷ್ಯ ಸಹಜ ಕ್ರಿಗೆಗಳಿಗಿಂತ ಅತೀಮಾನುಷ ಕ್ರಿಯೆಗಳಿಗೆ, ಕಾರಣಿಕ ವ್ಯಕ್ತಿತ್ವದ ಕುರಿತಾಗಿ ಸದಾ ಸೆಳೆತವಿರುತ್ತದೆ. ಅದಕ್ಕಾಗಿ ಮಹಾಪುರುಷರ ಸುತ್ತ ಪವಾಡಗಳ ಹಂದರ ನಿರ್ಮಾಣಗೊಳ್ಳುತ್ತಿರುತ್ತದೆ. ನಮ್ಮ ತರ್ಕಕ್ಕೆ ನಿಲುಕದ್ದನ್ನು, ವಿಚಾರ ಸರಣಿಗೆ ಸಿಲುಕದಿರುವುದನ್ನು ಪವಾಡವೆಂದು ಹೇಳಿ ಕೈತೊಳೆದುಕೊಂಡು ಬಿಡುತ್ತೇವೆ. ಪುರಾಣಗಳಲ್ಲಿ ಅಭಿವ್ಯಕ್ತಿಗೊಳ್ಳುವ ಪವಾಡಗಳು ಕಾವ್ಯದಲ್ಲಿ ಮೈದಳೆದಿರುವ ಲೀಲೆಗಳು ಕೇವಲ ಕವಿ ಸಮಯಗಳಿ ಕಾವ್ಯ ಪರಿಕರಗಳೇ? ಇಲ್ಲವಾದರೆ ಅವು ಏನು?ಎಂಬುದರ ಕುರಿತಾಗಿ ಗಂಭೀರವಾದ ಅಧ್ಯಯನದ ಅವಶ್ಯಕತೆಯಿದೆ.