ಅಧಿಕಾರ ಹಸ್ತಾಂತರ

ಶ್ರೀ ಗುರು ಗುರುಪಾದೇಶ್ವರರು ತಮ್ಮ ದೇಹ ಶಿಥಿಲಗೊಂಡಿರುವುದನ್ನು ಗಮನಿಸಿ, ಸೂಕ್ತ ಉತ್ತರಾಧಿಕಾರಿಗಳ ಹುಡುಕಾಟದಲ್ಲಿದ್ದಾಗ ಬಾಲ ನಿರುಪಾದಯ್ಯ’ನ ಮೇಲೆ ಗರುಡದೃಷ್ಟಿ ಬಿತ್ತು. ಅರಸುವ ಬಳ್ಳಿ ಕೈಗೆಟಕಿದಂತಾಯ್ತು. ನಿರುಪಾದಯ್ಯನವರನ್ನು ಐದನೆಯ ಪೀಠಾಧಿಪತಿಯನ್ನಾಗಿ ಆರಿಸಿದರು. ಮತ್ತೆ ಅವರನ್ನೇ ತಮ್ಮ ‘ಉತ್ತರಾಧಿಕಾರಿ’ಯೆಂದು ಘೋಷಿಸಿದರು. ನಿರುಪಾಧೀಶರ ಕಾವ್ಯನಾಮದಿಂದ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿರುವ ಶ್ರೀ ಮು.ನಿ.ಪ್ರ ನಿರುಪಾಧಿ ಮಹಾಸ್ವಾಮಿಗಳು ತಮ್ಮ ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಂದ ನಾಡಿನ ಗಮನ ಸೆಳೆದಿದ್ದಾರೆ.

ಶ್ರೀ ನಿರುಪಾಧಿ ಸ್ವಾಮಿಗಳು (ನಿರುಪಾಧೀಶರು ಕ್ರಿ. ಶ. ೧೯೪೨)

ಜಮಖಂಡಿ ತಾಲೂಕಿನ ಮರೇಗುದ್ದಿಯ ಶ್ರೀ ಶಿವಲಿಂಗಯ್ಯ ಮತ್ತು ಶ್ರೀಮತಿ ನೀಲಮ್ಮ ಎಂಬ ವೀರಮಹೇಶ್ವರ ಮನೆತನದ ಪುಣ್ಯ ದಂಪತಿಗಳ ನಾಲ್ಕನೆಯ ಮಗುವಾಗಿ ೨೫.೦೫.೧೯೪೨ ರಂದು ಮೂಡಿಬಂದರು. ಕೃಷಿ ಕುಟುಂಬ, ತುಂಬ ಬಡತನ, ತಂದೆ – ತಾಯಿಗಳಿಬ್ಬರೂ ಕನ್ನಡ ಏಳನೆಯ ತರಗತಿಯವರೆಗೆ ಶಿಕ್ಷಣವನ್ನು ಪಡೆದಿದ್ದ ಸುಸಂಸ್ಕೃತರು. ಹೀಗಾಗಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಲಭಿಸುವಂತಾಯಿತು. ಬಾಲಕ ನಿರುಪಾದಯ್ಯನಿಗೆ ಬಾಲ್ಯದಲ್ಲಿ ಮನೆಯೇ ಮೊದಲ ಪಾಠಶಾಲೆಯಾಗಿ, ಜನನಿ ತಾನೇ ಮೊದಲ ಗುರುವಾಗಿದ್ದರು. ಅವ್ವ ನೀಲವ್ವನ ತವರು ಮನೆಯ ಬಿಜಾಪುರ ಜಿಲ್ಲೆಯ ಕಾಖಂಡಕಿ ಗ್ರಾಮ. ತಾಯಿಯ ತಾಯಿ(ಅಜ್ಜಿ) ರುದ್ರಮ್ಮನವರ ಹತ್ತಿರ ಕಾಖಂಡಕಿಯಲ್ಲಿ ಬಾಲಕ ನಿರುಪಾದಯ್ಯನವರ ಅಕ್ಷರಾಭ್ಯಾಸ ಆರಂಭವಾಯಿತು. ೧೯೪೮ ರಿಂದ ೧೯೫೫ ರ ವರೆಗೆ ಪ್ರಾಥಮಿಕ ಶಿಕ್ಷಣ ಕಾಖಂಡಕಿ ಸರ್ಕಾರಿ ಶಾಲೆಯಲ್ಲಿ ನಡೆಯಿತು.

ಮರೇಗುದ್ದಿ ಅಡವಿಸಿದ್ಧೇಶ್ವರ ಮಠದ ಪೂಜ್ಯ ಶ್ರಿ ಗುರುಪಾದೇಶ್ವರ ಸ್ವಾಮಿಗಳ ಆರೋಗ್ಯ ವಿಷಮಿಸಿತು. ಶ್ರೀ ಮಠದ ಭಿಕ್ಷಾ ಕಾರ್ಯಕ್ಕೆ ನಿರುಪಾದಯ್ಯನವರನ್ನು ನಿಯಮಿಸಲಾಯಿತು. ಮುಂದೆ ೧೯೫೨ ರಲ್ಲಿ ಹುಬ್ಬಳ್ಳಿ ಜಡಿಸಿದ್ಧಾಶ್ರಮದ ಶಂಕರಾನಂದ ಪರಮಹಂಸರು ಅಕಸ್ಮಾತ್ ಮರೇಗುದ್ದಿಯ ಮಠಕ್ಕೆ ದಯ ಮಾಡಿಸಿದ್ದರು. ಸರ್ವಭಕ್ತರ ಹಾಗೂ ಹುಬ್ಬಳ್ಳಿ ಪೂಜ್ಯ ಶ್ರೀಗಳವರ ಸಮ್ಮುಖದಲ್ಲಿ ನಿರುಪಾಧ್ಯಯನವರನ್ನು ತಮ್ಮ ಉತ್ತರಾಧಿಕಾರಿಗಳೆಂದು ಶ್ರೀ ಗುರು ಗರುಪಾದೇಶ್ವರ ಸ್ವಾಮಿಗಳು ಘೋಷಿಸಿದರು. ಸೂಚನೆಯಾದ ದಿನದಿಂದಲೇ ನಿರುಪಾದಯ್ಯ ಶ್ರೀಮಠದ ವಟುವಾದ. ಗುರುಗಳು ಶಿಷ್ಯನ ಶಿಕ್ಷಣದ ಜವಾಬ್ದಾರಿ ಹೊತ್ತರು.

ಮುಧೋಳದ ಕಿಂಗ್ ಜಾರ್ಜ್‌ಪ್ರೌಢ ಶಾಲೆಯಲ್ಲಿ ೧೯೫೫ ರಿಂಧ ೧೯೫೯ ರವರೆಗೆ ಹೈಸ್ಕೂಲು ಶಿಕ್ಷಣ ಪಡೆದರು. ೧೯೫೯ ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದರು. ಮರೇಗುದ್ದಿ ಮಠದ ವ್ಯಾಜ್ಯ ತಾರಕಕ್ಕೇರಿತ್ತು. ಬರಗಾಲದ ಬವಣೆಯಿಂದಾಗಿ ಮತ್ತು ಗುರುಗಳ ಆರೋಗ್ಯ ತೀವ್ರವಾಗಿ ಕುಸಿದಿದ್ದ ಪರಿಣಾಮವಾಗಿ ಮುಂದೆ ಓದುವುದನ್ನು ನಿಲ್ಲಿಸಬೇಕಾಯಿತು. ೧೯೬೧ ರಲ್ಲಿ ಎರಡು ವರ್ಷಗಳ ಬಳಿಕ ಗುರುಗಳ ಆರೋಗ್ಯ ಚೇತರಿಸಿದ ಮೇಲೆ, ಅವರ ಅಪ್ಪಣೆಯ ಮೇರೆಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಕಾಶಿಗೆ ಪ್ರಯಾಣ ಬೆಳೇಸಿದರು. ಕಾಶಿಯ ಜಂಗಮವಾಡಿ ಮಠದಲ್ಲಿರುವ ಶ್ರೀ ವಿಶ್ವಾರಾಧ್ಯ ಗುರುಕುಲದಲ್ಲಿ ವಟುಗಳ ಪ್ರಸಾದಕ್ಕೆ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ವಿಶ್ವಾರಾಧ್ಯ ಗುರುಕುಲದ ಪರಿಸರ ಮತ್ತು ‘ಆಂಗ್ಲೋ – ಬೆಂಗಾಲಿ’ ಕಾಲೇಜಿನ ಶಿಸ್ತಿನ ಶಿಕ್ಷಣ ನಿರುಪಾದಯ್ಯನವರ ಜೀವನದಲ್ಲಿ ಅಮೂಲಾಗ್ರ ಬದಲಾವಣೆಯನ್ನುಂಟು ಮಾಡಿತು. ಹೊಸ ಚೈತನ್ಯದ ಶೆಲೆಯನ್ನೇ ತಂದಿತು. ಸತತಾಧ್ಯಯನದಿಂದಾಗಿ ಜ್ಞಾನದ ಕ್ಷಿತಿಜ ವಿಸ್ತಾರಗೊಳ್ಳತೊಡಗಿತು. ಅದರ ಫಲವಾಗಿ ೧೯೬೩ ರಲ್ಲಿ ‘ಮಲೆನಾಡು’ ಪತ್ರಿಕೆಯಲ್ಲಿ ‘ನಿಷ್ಪತ್ತಿ’ ಯೆಂಬ ಮೊಟ್ಟಮೊದಲ ಲೇಖನ ಪ್ರಕಟವಾಯಿತು.

ಗುರುಗಳಾದ ಶ್ರೀ ಗುರುಪಾದೇಶ್ವರ ಸ್ವಾಮಿಯವರ ಆರೋಗ್ಯ ಮತ್ತೊಮ್ಮೆ ಕುಸಿದು ಹೋದ ಕಾರಣವಾಗಿ ೧೯೬೪ ರಲ್ಲಿ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮರಳಿ ಮರೆಗುದ್ದಿಗೆ ವಾಪಸ್ಸಾದರು. ಇಂಟರ್‌ತರಗತಿಯಲ್ಲಿ ಓದುತ್ತಿದ್ದ ನಿರುಪಾದಯ್ಯನವರ ಅಧ್ಯಯನ ನಿಂತುಬಿಟ್ಟಿತು. ಶ್ರೀ ಅಡವಿಸಿದ್ದೇಶ್ವರ ಮಠದ ವ್ಯಾಜ್ಯ ವಿಪರೀತಕ್ಕೆ ಎಡೆ ಮಾಡಿತ್ತು. ಬರಗಾಲದ ಬವಣೆ, ಆರ್ಥಿಕ ದುಸ್ಥಿತಿ ಒಂದೆಡೆ, ಶ್ರೀಮಠದಲ್ಲಿ ನಡೆಸಬೇಕಾದ ದಾಸೋಹ, ಧಾರ್ಮಿಕ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಪಾರಂಪರಿಕ ಆಚರಣೆ ಮತ್ತು ಉತ್ಸವಗಳು ಒಟ್ಟಾಗಿ ಎದುರಾದವು. ಇವೆಲ್ಲವನ್ನು ಅಚ್ಚುಕಟ್ಟಾಗಿ ನಡೆಸಬೇಕಾದ ಜವಾಬ್ದಾರಿ ಸ್ವೀಕರಿಸಿದರು. ಹಂತಹಂತವಾಗಿ ನಿಭಾಯಿಸಿ, ಪ್ರತಿಯೊಂದಕ್ಕೂ ಪರಿಹಾರ ಕಂಡುಕೊಂಡರು.

ಪೀಠಾರೋಹಣ

ಗುರುಗಳಾದ ಶ್ರೀ ಗುರುಪಾದೇಶ್ವರ ಸ್ವಾಮಿಗಳ ಸಂಕಲ್ಪದಂತೆ ಮತ್ತು ಶ್ರೀ ಮಢದ ಭಕ್ತರ ಸದಾಶಯಕ್ಕನುಗುಣವಾಗಿ ೧೭.೧೨.೧೯೬೫ ರಲ್ಲಿ ನಿರುಪಾದಯ್ಯನವರು ಮರೇಗುದ್ದಿ ಅಡವಿಸಿದ್ಧೇಶ್ವರ ಮಠದ ಪಂಚಮಿ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿದರು. ಅಂಕಲಗಿ ಅಡವಿಸಿದ್ಧೇಶ್ವರರಿಂದ ಕೊಡುಗೆಯಾಗಿ ಬಂದ ‘ಬೆತ್ತ’ವನ್ನು ಮಠಾಧಿಕಾರದ ಸಾಂಕೇತಿಕವಾಗಿ ಪಡೆದರು. ಹುಬ್ಬಳ್ಳಿ ಜಡಿಸಿದ್ಧಾಶ್ರಮದ ಶ್ರೀ ಶಿವಾನಂದಸ್ವಾಮಿಗಳ ಸಮ್ಮುಖದಲ್ಲಿ ಸರಳ ಮತ್ತು ನಿರಾಡಂಬರವಾಗಿ ನಿರಂಜನ ಪಟ್ಟಾಧಿಕಾರ ಸಮಾರಂಭವು ನಡೆಯಿತು.

ಪೀಠಾಧಿಕಾರದ ಬಳಿಕ ಗುರುಗಳ ಸೂಚನೆಯಂತೆ ೧೯೬೫ರಿಂದ ೧೯೬೮ರ ವರೆಗೆ ಹುಬ್ಬಳ್ಳಿಯ ಶಾಂತಾಶ್ರಮದಲ್ಲಿ ಅಧ್ಯಯನ ಕೈಗೊಂಡರು. ಕೈವಲ್ಯ ಪದ್ಧತಿ, ಪರಮಾನುಭವ ಬೋಧೆ, ವಿವೇಕ ಚಿಂತಾಮಣಿ ಮುಂತಾದ ನಿಜಗುಣ ಶಿವಯೋಗಿಗಳ ಸಾಹಿತ್ಯವನ್ನು ಶಿವಪುತ್ರ ಸ್ವಾಮಿಗಳ ಮೂಲಕ ಅಧ್ಯಯನ ಮಾಡಿದರು. ಹುಬ್ಬಳ್ಳಿಯಿಂದ ಮರೇಗುದ್ದಿಗೆ ಮರಳಿ ಬಂದರು. ತಮ್ಮ ಮಠದ ಸಮಸ್ಯೆಗಳ ಬಲೆಯಲ್ಲಿ ಸಿಲುಕಿದರೂ ಸ್ವಧ್ಯಯನ ಮುಂದುವರೆಸಿದರು. ಪ್ರಯಾಗದ ‘ಹಿಂದಿರತ್ನ’ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವುದರೊಂದಿಗೆ; ೧೯೬೯ರಲ್ಲಿ ಸುವರ್ಣ ಪದಕದ ಗೌರವಕ್ಕೆ ಪ್ರಾಪ್ತರಾದರು.

ಕನ್ನಡ, ಹಿಂದಿ, ಸಂಸ್ಕೃತ ಭಾಷೆಯಲ್ಲಿ ಮೌಲಿಕ ಗ್ರಂಥಗಳ ಅಧ್ಯಯನಗೈದರು. ವಚನ ವಾಙ್ಞಯ, ಶರಣ ಸಾಹಿತ್ಯ ಸಂಸ್ಕೃತಿಯ ಗ್ರಂಥಗಳನ್ನು ಅಧ್ಯಯನಿಸಿದರು. ಶಾಸ್ತ್ರ, ಪುರಾಣಗಳ ಚಿಂತನ – ಮಂಥನ ಮುಂದುವರೆಸಿದರು. ಆರ್ಯರ್ವೇದ ವೈದ್ಯಕೀಯಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ವನಸ್ಪತಿಗಳ ವಿಷಯವಾಗಿಯೂ ಸ್ವಾಧ್ಯಾಯಕೈಗೊಂಡರು. ಶಾಸ್ತ್ರಗಳ ಶಾಸ್ತ್ರೀಯ ಅಧ್ಯಯನದ ಜೊತೆಗೆ ಸಂಗೀತದಲ್ಲಿಯೂ ಆಸಕ್ತಿಯಿತ್ತು. ಶಾಸ್ತ್ರದ ಜಿಜ್ಞಾಸೆಯೊಂದಿಗೆ ಸಂಗೀತಕಲೆ ಮೇಳಯಿಸಿದ್ದರಿಂದ ಪುರಾಣ ಪ್ರವಚನಕ್ಕೆ ವಿಶೇಷವಾದ ಕಳೆಕಟ್ಟಿತು. ಹತ್ತು ಹಲವು ಗ್ರಾಮಗಳಲ್ಲಿ ಪ್ರವಚನ ನೀಡಿದರು. ೧೯೭೩ರಲ್ಲಿ‘ರಸಗೀತೆ’ಯೆಂಬ ಹಿಂದಿ ಭಾಷೆಯಲ್ಲಿ ಖಂಡಕಾವ್ಯ ರಚಿಸಿದರು. ೧೯೭೪ರಲ್ಲಿ ಮರೇಗುದ್ದಿ ಮಠದ ಸಂಸ್ಥಾಪಕರಾದ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ಕುರಿತಾಗಿ ‘ಮಡಿವಾಳೇಶ್ವರ ಪುರಾಣ’ ರಚನೆ ಮಾಡಿದರು.

ಗುರುಗಳ ಅಗಲಿಕೆ

ನಿರುಪಾಧೀಶರು ಶ್ರೀ ಮಠದ ಭಿಕ್ಷೆಗಾಗಿ ಊರಿಂದೂರಿಗೆ ಸಂಚರಿಸುತ್ತಿದ್ದರು. ಹೀಗೆ ಸಂಚರಿಸುತ್ತ ಮಳಲಿ ಗ್ರಾಮಕ್ಕೆ ಬಂದಾಗ ಗುರುಗಣ ನಿರ್ಗಮನದ ಕುರಿತಾಗಿ ಸ್ವಪ್ನ ಸೂಚನೆ ಆಯಿತು. ಬುಧವಾರ ದಿನಂಕ ೦೨. ೦೧. ೧೯೭೪ ಮಂಟೂರು ಗ್ರಾಮದಿಂದ ಮಳಲಿಗೆ ಆಗಮಿಸಿದರು. ಅಂದು ರಾತ್ರಿ ಶ್ರೀ ಮಡಿವಾಳೇಶ್ವರ ಪುರಾಣದ ಕೊನೆ ಅಧ್ಯಾಯದ ಬರವಣಿಗೆಯನ್ನು ಪೂರಯಸಿ; ನಿದ್ರೆ ಹೋದರು. ಅಂದೇ ರಾತ್ರಿ ಬೆಳಗಿನ ಜಾವ ಬ್ರಾಹ್ಮೀ ಕಾಲದಲ್ಲಿ ಶ್ರೀ ಗುರು ಗುರುಪಾದೇಶ್ವರರು ಕನಸಿನಲ್ಲಿ ಬಂದು ನಿರುಪಾಧೀಶರಿಗೆ ಸಮಾಧಿ ಸ್ಥಳವನ್ನು ನಿರ್ದೇಶಿಸಿ; ಅವರಿಂದಲೇ ಸಮಾಧಿಯನ್ನು ತೋರಿಸಿದರಂತೆ. (ಶ್ರೀಗುರು ಗುರುಪಾದೇಶ್ವರ ಚಿದ್ವಿಲಾಸ, ಪು. ೧೦೦, ಪದ್ಯ೩೨ – ೩೩)

ಬೆಳಗಿನ ಜಾವ ಈ ಸ್ವಪ್ನ ದರ್ಶನವಾಯಿತು. ಅಂದೆ ೦೨.೦೧.೧೯೭೪ರಂದು ಮಧ್ಯಾಹ್ನ ಶ್ರೀ ಗುರುಪಾದೇಶ್ವರರು ಹೃದಯ ಸ್ತಂಭದಿಂದಾಗಿ ಲಿಂಕೈಕ್ಯರಾದರು. ಗುರುಶಿಷ್ಯರಲ್ಲಿ ಅಂತಹ ತಾದಾತ್ಮ್ಯ ಗುರುಗಳು ಅಂತ್ಯಕ್ರಿಯೆಯನ್ನು ವಿಧಿ – ವಿಧಾನಗಳ ಅನುಸಾರವಾಗಿ ನೆರವೇರಿಸಿದರು.

ಗುರುಗಳ ಅಗಲಿಕೆ ಬಳಿಕೆ ಶ್ರೀಮಠದ ವ್ಯಾಜ್ಯ ಉಲ್ಪಣಗೊಂಡು ತಾರಕ್ಕೇರಿತು. ಹೈಕೋರ್ಟು – ಸುರ್ಪ್ರೀಕೋರ್ಟಗಳು ಮೆಟ್ಟಲೇರಿತು. ಅದಕ್ಕಾಗಿ ನಿತ್ಯ ತಿರುಗಾಟ ಉಪವಾಸ, ವನವಾಸ, ಮಾನಸಿಕ ಒತ್ತಡ್ಡ ಚಿತ್ತಕ್ಷೋಭೆ, ಮೇಲಾಗಿ ಆರ್ಥಿಕ ದುಸ್ಥಿತಿ ಎಲ್ಲವೂ ಒಮ್ಮೆಲೆ ಬಂದೆರಗಿದವು ಎಲ್ಲವನ್ನು ಸಂಯಮದಿಂದ ನಿಭಾಯಿಸಿದರು.

೧೯೭೪ರಲ್ಲಿ ಶ್ರೀ ಮಠದ ಪರವಾಗಿ ತೀರ್ಪು ಬರದೆ, ವಿರುದ್ಧವಾಗಿ ಬಂದುದರಿಂದ ಮನಸ್ಸು ಘಾಸಿಗೊಂಡಿತು. ನಿರುಪಾಧೀಶರು ಪೀಠ ತ್ಯಾಗದ ಕುರಿತಾಗಿ ಯೋಚಿಸಿದರು. ಸ್ವಾಮಿಗಳು ನಿರ್ಧಾರ ತಿಳಿದ ವಿಜಾಪುರದ ಖ್ಯಾತ ನ್ಯಾಯವಾದಿ ಶ್ರೀ ಪಿ. ಎಸ್. ಪಾಟೀಲ ವಕೀಲರ ಮನವೊಲಿಸಿ ನಿರ್ಧಾರ ಸಫಲರಾದರು.

ಕೋರ್ಟಿನ ವ್ಯಾಜ್ಯ ಮುಂದುವರೆದಿತ್ತು. ೧೯೭೫ ರಿಂದ ೧೯೮೧ರವರೆಗೆ ಬೀಳಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಗಣೇಶ ಚೌಥಿಯ ನಿಮಿತ್ತ ಪ್ರವಚನ ನೀಡಿದರು. ೧೯೮೨ರಲ್ಲಿ ಸೊನ್ನ ಗ್ರಾಮದಲ್ಲಿಯೇ ನಿಂತು ‘ಗಣೇಶ ಪುರಾಣ’ವನ್ನು ರಚನೆ ಮಡಿದರು.

ಅಡವೀಶ ಪ್ರಕಾಶನ

ತ್ರಿಭಾಷಾ ಪಂಡಿತರು ಅಶುಕವಿಗಳಾದ ಶ್ರೀ ನಿರುಪಾಧಿಸ್ವಾಮಿಗಳು ‘ನಿರುಪಾಧಿಶ’ ಕಾವ್ಯನಾಮದಲ್ಲಿ ಪುರಾಣ, ಚರಿತ್ರೆ, ಕಾವ್ಯ, ವಚನ, ಲೇಖನ ಕೃತಿಗಳನ್ನು ಬರೆಯುತ್ತ ಬಂದರು. ತಾವು ಬರೆದ ಸಾಹಿತ್ಯವನ್ನು ಪ್ರಕಟಿಸಲೆಂದು ‘ಅಡವೀಶ ಪ್ರಕಾಶನ; ಸಂಸ್ಥೇಯನ್ನು ಕ್ರಿ. ಶ. ೧೯೭೭ರಲ್ಲಿ ಮರೇಗುದ್ದಿಯಲ್ಲಿ ಹುಟ್ಟುಹಾಕಿದರು. ಮರೇಗುದ್ದಿ ಶ್ರೀ ಮಡಿವಾಳೇಶ್ವರ ಚರಿತ್ರೆ, ಗಣೇಶ ಪುರಾಣ, ಶ್ರೀ ಗುರು ಗುರುಪಾದೇಶ್ವರ ಚಿದ್ವಿಲಾಸ, ಲಿಂಗನಾಯಕನಹಳ್ಳಿಯ ಚನ್ನವೀರ ವಿಲಾಸ ಮುಂತಾದ ಪುರಾಣಗಳ ಪ್ರಕಟವಾದವು. ಆಧುನಿಕ ಪುರಾಣ ಪ್ರಪಂಚದಲ್ಲಿ ಶ್ರೀ ನಿರುಪಾಧೀಶರ ಕಾವ್ಯಗಳಿಗೆ ವಿಶಿಷ್ಟ ಸ್ಥಾನಮಾನಗಳು ಪ್ರಾಪ್ತವಾಗಿವೆ. ಐತಿಹಾಸಿಕ ವ್ಯಕ್ತಿಗಳನ್ನು ಸಾಹಿತ್ಯದಲ್ಲಿ ದಾಖಲುಗೊಳಿಸುವ ಮೂಲಕ ಚಿರಸ್ಥಾಯಿಗೊಳಿಸಿದರು. ಶ್ರೀಮಠದ ಇತಿಹಾಸವನ್ನು ಕಟ್ಟಿಕೊಡುವುದರ ಮೂಲಕ ಅಂದಂದಿನ ಜನಾಂಗದ ಜೀವನ ವಿಧಾನವನ್ನು ಪುನಃರಚಿಸಿದರು. ಶ್ರೀಮಠದ ಪರಂಪರೆಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟರು. ಚಿನ್ಮೂರ್ತಿ, ವಚನಶತಕ, ವಚನಾಂಕುರ (ಭಾಗ ೧ರಿಂದ ೩), ವಚನ ಪಲ್ಲವಿ (ಭಾಗ೧ ರಿಂದ ೩ರವರೆಗೆ), ಅಡವಿಸಿದ್ದನ ಅಂಚೆ, ನಿರುಪಾಧೀಶನ ಚೌಪದಿ ಮುಂತದ ವಚನ ಸಂಕಲನಗಳು ನಿರುಪಾಧೀಶರಿಂದ ಪ್ರಕಟನೆಗೊಂಡವು. ಪೂಜ್ಯ ಜಚನಿಯವರ ತರುವಾಯ ಸಂಖ್ಯೆ ಮತ್ತು ಸತ್ತ್ವದಲ್ಲಿ ಮೌಲಿಕ ವಚನ ರಚನೆಮಾಡಿದ ರಚನೆ ಮಾಡಿದ ಶ್ರೇಯಸ್ಸು ಪೂಜ್ಯ ನಿರುಪಾಧೀಸರಿಗೆ ಸಲ್ಲುತ್ತದೆ. ಸಮಕಾಲೀನ ಸಂಗತಿಗಳು, ವಿಶ್ವದ ವಿದ್ಯಮಾನಗಳು, ಜಾಗತಿಕ ಆಗು – ಹೋಗುಗಳನ್ನು ತಮ್ಮ ವಚನಗಳಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಮೂಢನಂವಿಕೆಗಳ ನಿವಾರಣೆ, ಶಿಕ್ಷಣ ಕ್ಷೇತ್ರದ ಕುಸಿತ, ರಾಜಕೀಯ ಅಧೋಗತಿಯ ಕುರಿತು ವಚನಗಳಲ್ಲಿ ತಮ್ಮದೇ ಅದ ರೀತಿಯಲ್ಲಿ ಸ್ಪಂದಿಸಿದ್ದಾರೆ. ಸಮಾಜ ಸುಧಾರಕನ ಕಾಳಜಿಯ ಇವರ ವಚನಗಳ ರಚನೆಯ ಹಿಂದಿದೆ “ಪೂಜ್ಯರಿಗೆ ಭಾವದ ಮೂಲಕ, ಲೋಕದ ವಿಷಯಗಳನ್ನು ಗ್ರಹಿಸಿ, ಅಭಿವ್ಯಕ್ತಿಗೊಳಿಸುವ ವಿಶೆಷ ಕ್ರಮ ಸಿದ್ದಿಸಿದೆ. ಆದ್ದರಿಂದ ಸ್ವಾಮೀಜಿಯವರ ಸಮಗ್ರ ವಚನಗಳಲ್ಲಿ ಇಂದಿನ “ಯುಗದ ಮನಸ್ಸು” ಅಭಿವ್ಯಕ್ತಿಗೊಂಡಿದೆ. ವಸ್ತುವನ್ನು ಕಂಡ ತಕ್ಷಣ ಅಭಿವ್ಯಕ್ತಿಗೊಳಿಸುವ ಅಂತರ್ ದೃಷ್ಟಿಯಲ್ಲಿ ವಸ್ತುವಿನ ಸತ್ಯವನ್ನು ಗ್ರಹಿಸುವ ವಿಧಾನವನ್ನು ತಿಳಿಯುತ್ತೇವೆ. ಅವರ ವಚನಗಳು ಹೆಚ್ಚಾಗಿ ಸಂಚಾರ ಸಮಯದಲ್ಲಿಯೇ ರಚನೆಗೊಂಡಿದ್ದು ವಿಶೇಷ. ಆದ್ದರಿಂದಲೇ ಇರಬಹುದು. ಶ್ರೀಗಳು ಸಂಚರಿಸಿದ ಪರಿಸರದ ಭಾಷೆ ಅವರ ವಚನಗಳಲ್ಲಿ ಅರಳಿದೆ” (ಪ್ರೊ. ಮಲ್ಲಿಕಾರ್ಜುನ ಯಾಳವಾರ – ಜಲದೊಳಗಣ ಕಿಚ್ಚು. ಪು. ೩೧) ಎಂಬ ಮಾತುಗಳು ನಿರುಪಾಧೀಶರ ವಚನ ಸಾಹಿತ್ಯದ ವಿಶೇಷತೆಯನ್ನು ಸೂಚಿಸುತ್ತವೆ.

‘ಚಿನ್ಮಯ ಜ್ಞಾನಿ ಚನ್ನಬಸವಿಜಯ’ವು ರಸಕಾವ್ಯವಾಗಿ ಮೂಡಿಬಂದಿದೆ. ಮಹಾಮಾನವತುವಾದಿ ‘ಸಂಗನಬಸವವಿಜಯ’ವು ಹೊಸ ಶತಮಾನದ ಹೊಸ್ತಿಲಲ್ಲಿ ಮೂಡಿಬಂದಿರುವ ಮಹಾಕಾವ್ಯವಾಗಿದೆ. ಸಮಾಜ ಸುಧಾರಕ ಬಸವಣ್ಣನ ಭವ್ಯ ವ್ಯಕ್ತಿತ್ವ, ಸಮಾಜೋಧಾರ್ಮಿಕ ಆಂಧೋಲನ, ಕಾಯಕ ಮತ್ತು ದಾಸೋಹದ ಮಹತ್ವ, ಹೊಸ ಸಮಾಜದ ಪರಿಕಲ್ಪನೆ ಮುಂತಾದವು ಸಂಗನ ಬಸವ ವಿಜಯದಲ್ಲಿ ಸೊಗಸಾಗಿ ಬಂದಿದೆ. ಹೊಸ ಶತಮಾನದ ಆಶಯಗಳು, ಜಾಗತೀಕರಣದ ಒತ್ತಣ, ಸಮಕಾಲೀನ ತಲ್ಲಣ, ರೈತಾಪಿ ಜನಾಂಗದ ಕಳವಳ, ಕನ್ನಡ ಭಾಷೆಗೆ ಬಂದೊದಗಿದ ಆಪತ್ತು, ಇವುಗಳನ್ನೆಲ್ಲ ಪರಿಹರಿಸಿಕೊಳ್ಳಬಹುದಾದ ಮಾರ್ಗೋಪಾಯಗಳನ್ನು ಕಾವ್ಯದಲ್ಲಿ ಚಿತ್ರಿಸಿದ್ದಾರೆ. ಶೈಕ್ಷಣಿಕ ಸುಧಾರಣೆ, ಸ್ತ್ರೀ – ಸಮಾನತೆ, ಸಮಾಜಿಕ ಕಾಳಜಿ, ಜನಪರ ನಿಲುವು, ಸಮಾಜಪರ ಒಲವು ಪ್ರಸ್ತುತ ಕಾವ್ಯದಲ್ಲಿದ್ದು, ಸಂಗನಬಸವ ವಿಜಯವು ತನ್ನ ಯುವವನ್ನು ಸಮರ್ಥವಾಗಿ ಮರುಸೃಷ್ಟಿಸಿದೆ.

ರಸಗೀತೆ, ಸಪ್ತತೀರ್ಥ ಮತ್ತು ಅಷ್ಟದಲ ಇವು ನಿರುಪಾಧೀಶರು ಹಿಂದಿ ಭಾಷೆಯಲ್ಲಿ ರಚಿಸಿರುವ ಕೃತಿಗಳಾಗಿವೆ. ‘ಪದ – ಪದಾರ್ಥ’ವು ವೈಚಾರಿಕ ಲೇಖನಗಳ ಸಂಚಯವಾದರೆ, ಸಂಪಾದನೆಯ ‘ಸುಮನಸೌರಭ’ವು ಸಂಪಾದನಾ ಗ್ರಂಥವಾಗಿ ಗಮನ ಸೆಳೆಯುತ್ತದೆ.

‘ಆತ್ಮದ ಅಂಚೆಯು’ ಶ್ರೀಯುತರು ಆತ್ಮಚರಿತ್ರೆಯಾಗಿದೆ. ಇದರಲ್ಲಿ ಸುಮಾರು ೫೦ ವರುಷಗಳ ಬಯಲುನಾಡಿನ ಜನ – ಜೀವನ ಚಿತ್ರಣಗೊಂಡಿದೆ. ಶ್ರೀಮಠದ ಇತಿಹಾಸದ ಜೊತೆಗೆ ಮಠಾಧೀಶರ ಸಾಧನೆ, ಸಾಮಾಜಿಕ, ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳು, ಸಂಪ್ರದಾಯಗಳು, ಅಚರಣೆ ಉತ್ಸವಗಳು, ಸಾಹಸಜೀವಯ ಸಾಹಸಗಾಥೆಯು ಸಮಾವೇಶಗೊಂಡಿದೆ.

ಗೆಲುವನೆಂಬ ಭಾಷೆ, ತ್ರಿವೇಣಿ, ತಲೆಕೆಟ್ಟು, ನಿರುಪಾಧೀಶ್ವರ ಅಪರಾಧ ಸ್ತೋತ್ರಮುಂತಾದವುಗಳು ಸಂಕಿರಣ ಗ್ರಂಥಗಳಾಗಿವೆ.

ನಿರುಪಾಧೀಶರನದು ದಯತ್ಯ ಪ್ರತಿಭೆ, ನಿರಂತರ ಬರವಣಿಗೆಯವರದು ಗದುಗಿನ ಜಗದ್ಗುರು ಡಾ. ತೋಂಟರ್ದಾ ಮಹಾಸ್ವಾಮಿಗಳು ಜೀವನ ಸಾಹಿತ್ಯ ಶ್ರೀಮಠದ ಸಾಧನೆ ಮೊದಲಾದವುಗಳನ್ನು ಒಳಗೊಂಡ ಮಹಾಕಾವ್ಯ ‘ಬಯಲ್ಲೋಲ್ಲಾಸ’ವು ಪ್ರಕಟನೆಗೆ ಸಿದ್ಧವಾಗಿದೆ. ಪೂಜ್ಯಶ್ರೀಗಳ ಕುರಿತಾಗಿ ರಚಿಸಿರುವ ತ್ರಿಪದಿ ಛಂದಸ್ಸಿನ ಕಾವ್ಯ – ‘ಕತ್ತಲುಂಡ ಬೆಳಕು’ ತೋಂಟದ ಶ್ರೀಗಳ ಬದುಕನ್ನು ಅನಾವರಣಗೊಳಿಸುವ ಗ್ರಂಥವು ೨೦೦೭ರಲ್ಲಿಯೇ ಪ್ರಕಟವಾಗಿದೆ. ಮುಂಡರಗಿಯ ಪರಮಪೂಜ್ಯ ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳಭವ್ಯ, ಬದುಕು, ದಿವ್ಯಸಾಧನೆ ಶ್ರೀ ಮಠದ ವೈಶಿಷ್ಟ್ಯತೆಗಳನ್ನು ‘ಬಯಲಾಳ’ಕೃತಿಯ್ಲಲಿ ಸಮರ್ಥವಾಗಿ ನಿರೂಪಿಸಿದ್ದಾರೆ.

ಪೂಜ್ಯರು ಕಾರಯತ್ರಿ ಪ್ರತಿಭೆ ಮತ್ತು ಭಾವಯಿತ್ರಿ ಪ್ರತಿಭೆ ಎರಡೂ ಅನಾದೃಶ್ಯವಾದವುಗಳು ಸಾಹಿತ್ಯ, ಕೃಷಿ, ನಿರಂತರವಾದುದು. ಬಯಲಾಳ, ಬಲ್ಲೋಲ್ಲಾಸಗಳ ಬಳಿಕ ಇದೀಗ ಬಾಗಲಕೋಟ ಚರಂತಿಮಠದ ಪೂಜ್ಯರಾದ ಪ್ರಭು ಮಹಾಸ್ವಾಮಿಗಳು ಹಾಗೂ ನಿಡಸೋಸಿಯ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳವರ ಜನನ – ಬಾಲ್ಯ – ಶಿಕ್ಷಣ, ಪಟುದೀಕ್ಷೆ, ವ್ಯಾಸಂಗ, ಸಮಾಜಸುಧಾರಣೆ, ಪ್ರಗತಿಪರ ನಿಲುವು, ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಮಗ್ರವಾಗಿ ‘ನಿರಾಳ’ದಲ್ಲಿ ಚಿತ್ರಸಿದ್ದಾರೆ. ತ್ರಿಪದಿ, ಷಟ್ಪದಿ ಛಂದಸ್ಸಿನಲ್ಲಿ ಈವರೆಗಿನ ಕಾವ್ಯ ಕಟ್ಟಿದ್ದರೆ ನಿರಾಳವು ರಗಳೆಯಲ್ಲಿದ್ದು; ಮಹಾಕವಿ ಹರಿಹರನ ಓಜಸ್ಸು ಮತ್ತು ಕಾಂತಿಯನ್ನು ನೆನಪಿಸುತ್ತದೆ. ಯುಗವೊಂದರ ಇತಿಹಾಸವನ್ನು ಸಮಕಾಲೀನ ಸಮಾಜದ ಚಟುವಟಿಕೆಗಳನ್ನು ಸಮರ್ಥವಾಗಿ ದಾಖಲಿಸಿದ ‘ನಿರಾಳ’ವು ಮಹಾಕಾವ್ಯದ ಪಟ್ಟಕ್ಕೂ ಭಾಜನೆವಾಗಿದೆ.

ಆಶುಕವಿಗಳು, ಬಹುಭಾಷಾ ವಿಶಾರದರಾದ ಶ್ರೀಗಳು ವಚನ ತ್ರಿಪದಿ, ಚೌಪದಿ, ಶತಕ ರಗಳೆ, ಷಟ್ಪದಿ, ಮೊದಲಾದ ವೈವಿಧ್ಯಮಯವಾದ ಛಂದಸ್ಸು, ಪ್ರಯೋಗಿಸಿ, ಸಾಹಿತ್ಯ ಸೃಷ್ಟಿಸಿದ್ದಾರೆ.

ಪಂಡಿತ ಮತ್ತು ಪಾಮರರನ್ನು ಏಕಕಾಲಕ್ಕೆ ತಲುಪಿದ ಅನುಪಮ ಸಾಹಿತಿಗಳಿವರು ಪುರಾಣ, ಚರಿತ್ರೆ, ವಿಮರ್ಶೆ, ಸಂಪಾಧನೆ ಜೀವನ ಚರಿತ್ರೆ, ವೈಚಾರಿಕ ಸಾಹಿತ್ಯ ಖಂಡಕಾವ್ಯ ಮಹಾಕಾವ್ಯದವರೆಗೆ ವಿವಿಧ ಸಾಹಿತ್ಯ ರೂಪಗಳಲ್ಲಿ ಸತ್ವಯುತ ಕೃತಿಗಳನ್ನು ರಚಿಸಿ, ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ.

ನಿರುಪಾಧೀಶ್ವರ ಸಾಹಿತ್ಯದ ಕುರಿತಾಗಿ ಡಾ. ಗುರುಪಾದ ಮರೇಗುದ್ದಿಯವರು ಸಂಪಾದಿಸಿದ ನಿರುಪಾಧೀಶ್ವರ ವಚನ ಸಂಗ್ರಹ’, ಡಾ. ಅಶೋಕ ನರೋಡೆಯವರ ವಿಮರ್ಶಾಗ್ರಂಥ – ‘ಪರಾಮರ್ಶೆ’ ಇದೆ ಲೇಖಕರು ಸಂಪಾದಿಸಿದ ‘ಸಮಲೋಕನ’ ಪ್ರೊ. ಮಲ್ಲಿಕಾರ್ಜುನ ಯಾಲವಾರ ಅವರ – ಜಲದೊಳಗಣ ಕಿಚ್ಚು’ ಮುಂತಾದ ಪುಸ್ತಕಗಳು ಪ್ರಕಟವಾಗಿವೆ ನಿರುಪಾಧೀಶರ ಸಂಗನಬಸವ ವಿಜಯ ಮಹಾಕಾವ್ಯ ಕುರಿತಾಗಿ ವಿಚಾರ ಸಂಕಿರಣ ಜರುಗಿದ್ದು; ಅದರಲ್ಲಿ ಮಂಡತವಾದ ಪ್ರಬಂಧಗಳೆಲ್ಲವನ್ನು ಸಂಕಲಿಸಿ ‘ಸಮಾಲೋಕನ’ ಗ್ರಂಥವು ಸಂಪಾದನೆಗೊಂಡಿದೆ. ನಿರುಪಾಧೀಶರಿಗೆ ಅರವತ್ತೈದು ವರುಷ ತುಂಬಿದ ಸಂದರ್ಭದಲ್ಲಿ ಅಪೂರ್ವವೆನ್ನಬಹುದಾದ ಅಭಿನಂದನ ಸಮಾರಂಭ ಮುಧೋಳದಲ್ಲಿ ಅದ್ದೂರಿಯಾಗಿ ಸಂಘಟನೆಯಾಗಿತ್ತು. ಡಾ. ವಿ.ಕೆ. ಹಿರೇಮಠ ಪ್ರಧಾನ ಸಂಪಾಧಕರಾಗಿ. ಡಾ. ಅಶೋಕ ನರೋಡೆ ಮತ್ತು ಡಾ. ವಿಜಯಕುಯಮಾರ ಕಟಗಿಹಳ್ಳಿಮಠ ಸಂಪಾದಿಸಿದ ‘ನಿರುಪಾಧಿ’ ಅಭಿನಂದನ ಗ್ರಂಥವು ಕ್ರಿ.ಶ. ೨೦೦೬ ರಲ್ಲಿ ಅರ್ಪಣೆಯಾಗಿದೆ.

ಈವರೆಗೆ ಪ್ರಸ್ತಾಪಿಸಿದ ಪುಸ್ತಕಗಳೆಲ್ಲವೂಐ ‘ಮರೇಗುದ್ದಿಯ ಅಡವೀಸ ಪ್ರಕಾಶನ’ದಿಂದಲೇ ಬೆಳಕು ಕಂಡಿದೆ ಶಿವಾನಂದ ಗಿರಗಾಂವಿಯವರು ಬರೆದ ‘ಮಡಿವಾಳೇಶ್ವರ ಮಹಿಮೆ’ (ನಾಟಕ) ವಿಶ್ವೇಶ್ವರ ದೇವರು ರಚಿಸಿರುವ – ‘ಅಡವಿಸಿದ್ಧೇಶ್ವರನ ಸ್ತವನ ಶತಕ ಜೆ. ಸಿ. ದೇಶಪಾಂಡೆಯವರು ಸಂಪಾದಿಸಿರುವ – ‘ಗೀತಮಂಗಲ’ ಬೂದಿಸ್ವಾಮಿ ಮಠದ ಪೂಜ್ಯಶ್ರೀ ಕುಮಾರದೆವರು ರಚಿಸಿರುವ ‘ಸ್ತೋತ್ರ ಕಂದ ಪದ್ಯ’ ಮುಂತಾದವುಗಳು ಕೂಡ ‘ಅಡವೀಶ ಪ್ರಕಾಶನ’ದಿಂದ ಪ್ರಕಟವಾಗಿದೆ. ತಮ್ಮ ಕೃತಿಗಳ ಜೊತೆಗೆ ಬೇರೆಯವರ ಪುಸ್ತಕಗಳನ್ನು ತಮ್ಮ ಪ್ರಕಾಶನದಿಂದ ಪ್ರಕಟಿಸಿರುವುದು ಪ್ರಶಂಸನೀಯ ಅಂಶವಾಗಿದೆ.

ಓರ್ವ ನಿರಂಜನ ಮೂರ್ತಿಯ ಕಾರ್ಯವನ್ನು ಹಾಗೂ ಕರ್ತ್ವತ್ವ ಶಕ್ತಿಯನ್ನು ಮತ್ತೋರ್ವ ನಿರಂಜನ ಮೂರ್ತಿಯೆ ಗುರುತಿಸಲು ಸಾಧ್ಯವಾಗುತ್ತದೆಯೆಂಬ ಮಾತಿದೆ. ಇಬ್ಬರು ಪೂಜ್ಯರ ಮಾತುಗಳಲ್ಲಿ ವ್ಯಕ್ತಿತ್ವ ಮತ್ತು ಸಾಹಿತ್ಯ ಅನಾವರಣಗೊಂಡಿದೆ. ಬಾಗಲಕೋಟದ ಪರಮಪೂಜ್ಯ ಶ್ರೀಪ್ರಭುಮಹಾಸ್ವಾಮಿಗಳು – “ರಸ್ತೆ ಹಾಗೂ ವಾಹನಗಳು ಇಲ್ಲದ ಕಾಲ, ಆದರೆ ಕುದುರೆ ಎತ್ತಿನಗಾಡಿ ಇವು ಸಿಗದೆ ಇದ್ದರೆ ಕಾಲುನಡಿಗೆಯೇ ಮಠಾಧಿಪತಿಗಳಿಗೆ ಗತಿ. ಹಳ್ಳಿಯಲ್ಲಿ ಒಂದೆರಡು ದಿನ ಪ್ರವಚನ, ಭಕ್ತರೆ ಕೊಟ್ಟ ಪ್ರಸಾದ ಸ್ವೀಕರಿಸಿ, ಒಂದೊಂದು ದಿನ ಉಪವಾಸ, ಇವೆಲ್ಲ ಸಾಧಕ ಬಾಧಕಗಳ ನಡುವೆಯೆ ಮಠದ ಜೀರ್ಣೊದ್ದಾರ, ಸಾಹಿತ್ಯ ಧರ್ಮ ಚಿಂತನೆಗಳನ್ನು ಮುಂಣದುವರೆಸಿಕೊಂಡು ಬಂದ ಮಠಗಳಲ್ಲಿ ಮರೇಗುದ್ದಿ ಮಠವು ಮಹತ್ವದ್ದು. ಶ್ರೀ ನಿರುಪಾಧೀಸರನ್ನು ಕಮಡಾಗ, ನೊಡುಗರಿಗೆ ಇವರು ಸ್ವಾಮಿಗಳೇ? ಎಂಬ ಸಂದೇಹ ಬರುತ್ತದೆ. ಹಿಂದೆ ಸ್ವಾಮಿಗಳು ಹೇಗೆ ಇದ್ದರು ಎಂದು ತಿಳಿದುಕೊಳ್ಳಬೇಕಾದರೆ, ಇಂದಿನ ಮರೇಗುದ್ದಿ ಶ್ರೀಗಳ ವೇಷ – ಭೂಷಣವೇ ನಿದರ್ಶನವಾಗುತ್ತದೆ. ವೇಷ – ಹೇಗಿದ್ದರೇನು? ಭಾವ, ನಡೆ, ನುಡಿ ಒಂದಿದ್ದರೆ ಸಾಕು, ಮುಖದಲ್ಲಿ ಮೀಸೆ, ತಲೆಯಲ್ಲಿ ಧರ್ಮ ಸಾಹಿತ್ಯ ಜನ ಪರಿವರ್ತನೆಯ ಚಿಂತನೆಗಳು” (ಜ್ಞಾನದ ಹಣತೆ ‘ನಿರುಪಾದಿ’ಯಲ್ಲಿ) ಎಂಬ ಮಾತುಗಳು ನಿರುಪಾಧೀಶರ ವ್ಯಕ್ತಿತ್ವವನ್ನು ಸೊಗಸಾಗಿ ಅನಾವರಣಗೊಳಿಸುತ್ತದೆ.

“ನಿರುಪಾಧೀಶರು ವೈವಿದ್ಯಪೂರ್ಣ ಕೃತಿಗಳ ಸಮೃದ್ಧ ಸಾಹಿತ್ಯ ನಿರ್ಮಾಪಕರೆಂದೇ ಹೇಳಬೇಕು. ಅವರು ರಚಿಸಿದ ಪುರಾಣ ಮತ್ತು ವಚನಗಳಲ್ಲಿ ಕವಿದೃಷ್ಟಿಯ ಸೂಕ್ಷ್ಮಾವಲೋಕನ ಕಣ್ಣಿಗೆ ಗೋಚರವಾಗದಿರದು. ಅವೆಲ್ಲವೂ ಪ್ರಾಸಾದಿಕ ಕವಿದೃಷ್ಟಿಯ ಸೂಕ್ಷ್ಮಾವಲೋಕನ ಕಣ್ಣಿಗೆ ಗೋಚರವಾಗದಿರದು. ಅವೆಲ್ಲವೂ ಪ್ರಾಸಾಧಿಕ ಗುಣದಿಂದ ಕೂಡಿರುವ ಕೃತಿಗಳಾಗಿವೆ. ಸಾಮಾಜಿಕ ಕಳಕಳಿ, ಧಾರ್ಮಿಕ ಜಾಗೃತಿ ಭ್ರಷ್ಟತೆಯ ಬಗೆಗಿನ ಸಾತ್ವಿಕ ಆಕ್ರೋಶ, ಕೃತ್ರಿಮತೆಯ ಕೃತಿಗಳಲ್ಲಿ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವದ ಅಭಾವ ಕಂಡು ಬಂದರೂ ಇತ್ತಿಚಿನಕೃತಿಗಳಲ್ಲಿ ವೈಚಾರಿಕ ವಿಶ್ಲೇಷಣೆ ಮೈದುಂಬಿಕೊಳ್ಳತ್ತಿದೆ. ಸಂಗನಬಸವ ವಿಜಯ ಕಾವ್ಯದುದ್ದಕ್ಕೂ ಶ್ರೀಗಳವರ ಆಧ್ಯಾತ್ಮಿಕ ದೃಷ್ಟಿ, ವಿವಿಧ ಸಿದ್ಧಾಂತಗಳ ತಲಸ್ಪರ್ಶಿ ಮತ್ತು ತೌಲನಿಕ ಅಧ್ಯಯನ, ಸೃಜನಾತ್ಮಕ ಪ್ರತಿಭೆ, ಜನಕಲ್ಯಾಣ ಆಶಯಗಳು ಗಮನ ಸೆಳೆಯುತ್ತವೆ” (ನನ್ನ ದೃಷ್ಟಿಯಲ್ಲಿ ನಿರುಪಾಧೀಶರ) ಎಂಬ ಪೂಜ್ಯ ಸಿದ್ಧರಾಮಸ್ವಾಮಿಗಳವರ ಮಾತುಗಳು ನಿರುಪಾಧೀಶರ ಸಾಹಿತ್ಯಕ್ಕೆ ಬರೆದ ಭಾಷ್ಯವಾಗಿದೆ.

ಶ್ರೀ ಮಠದ ಉತ್ಸವಗಳು

ಶ್ರಾವಣಮಾಸದ ಪ್ರವಚನ ಶಿವರಾತ್ರಿಯ ಉಪವಾಸ; ಜಂಗಮ ತೃಪ್ತಿ ಜಾತ್ರೆಯಲ್ಲಿ ರಥೋತ್ಸವ ಮತ್ತು ರಾಚೋಟೇಶ್ವರ ಉತ್ಸವ ಎರಡೂ ಸೇರಿ ಪೌಷ್ಯಶುದ್ಧ ದಶಮಿಗೆ ಶ್ರೀ ಗುರುಗಳ ಪುಣ್ಯಾರಾಧನೆಯ ನಿಮಿತ್ಯವಾಗಿ ವರ್ಷಂಪ್ರತಿ ಜರುಗುತ್ತವೆ. ಪೌಷ್ಯಶುದ್ಧನವಮಿಯಂದು ನಿರಂಜನ ಜಂಗಮನ ಪಾದಪೂಜೆ, ಶಿವಭಜನೆ ನಡೆದು ದಶಮಿಯಂದು ಮಠಾದಿಪತಿಗಳ ಆರೋಹಣದೊಂದಿಗೆ ಅದ್ಧೂರಿಯಾಗಿ ರಥೋತ್ಸವ ಸಾಗುವುದು. ಗೌರವಸ್ವೀಕರಿಸುವುದು. ಸಾಂಪ್ರಾದಾಯಿಕವಾಗಿ ನಡೆದುಕೊಂಡು ಬಂದಿರುವ ಶ್ರೀ ಮಠದ ಪರಂಪರೆಯಾಗಿದೆ. ರಥದ ಉತ್ಸವದ ಪೂರ್ವಭಾವಿಯಾಗಿ ನಾಲ್ಕು ದಿವಸ ಮುಂಚೆ ಪಾಲಕಿ ಉತ್ಸವ ನಡೆಯುವುದು. ತೇರಿನ ಮರುದಿವಸ ಕುಸ್ತಿ ಪಂದ್ಯಾಟಗಳನ್ನು ಸಂಘಟಿಸಲಾಗುವುದ. ಜಾತ್ರೆಯಲ್ಲಿ ಆಟ – ಬಯಲಾಟ – ಸಣ್ನಾಟ, ಪಾರಿಜಾತ, ಸಂಗ್ಯಾಬಾಳ್ಯಾ ಮುಂತಾದ ಜಾನಪದ ರಂಗಭೂಮಿಯ ಕಲೆಗಳು ಪ್ರದರ್ಶನಗೊಳ್ಳುವವು. ಇವಲ್ಲದೆ ಹೆಮರಡ್ಡಿ ಮಲ್ಲಮ್ಮ, ದೀಪಾವಳಿ, ಸತ್ಯವಾನ ಸಾವಿತ್ರಿ, ರೇಣಕಾ ಮಹಾತ್ಮೆ, ರಾಧಾನಾಟ ಮುಂತಾದ ಕಂಪನಿ ನಾಟಕ ಪ್ರದರ್ಶನಗಳು ನಡೆಯುವುದುಂಟು, ಶಿವಭಜನೆ, ಗೀಗೀ ಮೇಳ, ಲಾವಣಿ ಹಾಡು, ಏಕತಾರಿಪದಗಳು ಇತ್ಯಾದಿ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳುತ್ತವೆ. ಮರೇಗುದ್ದಿಯ ಸ್ಥಳೀಯರಿಗೆ ಮತ್ತು ಸುತ್ತಮುತ್ತಲಿರುವರಿಗೆ ಭಕ್ತಿ – ಶೃದ್ಧೆಯ ಮತ್ತು ಆರಾಧನೆಯ ಕೇಂದ್ರವಾಗಿದೆ. ಜಾನಪದ ಆಚರಣೆಗಳು, ಶುದ್ಧ ದೇಶೀಯ ಕಲಾ ಪ್ರದರ್ಶನಕ್ಕೆ ಪ್ರಶಸ್ತವಾದ ವೇದಿಕೆಯಾಗಿ ಪರಿಣಮಿಸುತ್ತದೆ. ಜಾತ್ರ – ಉತ್ಸವಗಳು ಮರೇಗುದ್ದಿ ಅಡವಿ ಸಿದ್ಧೇಶ್ವರರ ಅಪ್ಪಣೆಯಂತೆ, ಶ್ರೀಮಠದ ಸದ್ಭಕ್ತರ ಇಚ್ಛಯನುಸಾರವಾಗಿ ಜರುಗುವುದುಂಟು.

ವರ್ಷಂಪ್ರತಿ ಪುರುಷರ ತೇರನ್ನು ಎಳೆಯುವುದು ನಡೆದುಕೊಂಡು ಬಂದಿರುವ ವಾಡಿಕೆ. ಆದರೆ ಶ್ರೀಗುರು ಗುರುಪಾದೇಶ್ವರ ಸ್ವಾಮಿಗಳು ಲಿಂಗೈಕ್ಯರಾದ ಮೇಲೆ, ಕುಡುಕರ ಕಾಡ ಸಾಲದ ಭಾದೆ, ಆರ್ಥಿಕ ಹಿನ್ನೆಡೆ, ಬರಗಾಲದ ಬವಣೆ, ಮೇಲಿಂದ ಮೇಲೆ ಮುದ್ದತ್ತು ತೇರು ನಿಲ್ಲಿಸುವ ಚಿಂತೆ, ದುರಾಲೋಚನೆ. ಭಕ್ತರಿಗೆ ಎಂದಿನಂತೆ ರಥ ಎಳೆಯುವ ಆತುರ! ಒಂದು ವರುಷ ಹೆಣ್ಣುಮಕ್ಕಳ ತೇರು ಎಳೆದದ್ದು ಸ್ಮರಣಾರ್ಥ ಘಟನೆಯಾಗಿದೆ. ಮಹಿಳೆಯರೆ ರಥವೆಳೆದು ಜಾತ್ರೆ ನಡೆಸಿರುವುದು ಮರೇಗುದ್ಧಿ ಮಠದ ಇತಿಹಾಸಲ್ಲಿಯೇ ಸುವರ್ಣಾಕ್ಷರಲದಲ್ಲಿ ಬರೆದಿಡುವ ಸಂಗತಿಯಾಗಿದೆ.

ಮಾಘಮಾಸದಲ್ಲಿ ‘ಡೊಳ್ಳಿನ ಸೇವೆ’ ನಡೆಯುತ್ತದೆ. ೧೯೭೮ರಲ್ಲಿ ೧೦೮ ಡೊಳ್ಳಿನ ಮೇಳಗಳ ಸಮಾವೇಶ ಮತ್ತು ಪ್ರದರ್ಶನ ಅದ್ದೂರಿಯಾಗಿತ್ತು. ಹಿರೇಆಲಗುಂಡಿಯ ಶ್ರೀ ಹಣುಮಂತಗೌಡ ಬಿರಾದಾರ ಪಾಟೀಲ ಅವರ ಪರಿಶ್ರಮದಿಂದಾಗಿ ಸತತ ಮೂರು ವರುಷ ‘ಡೊಳ್ಳಿನ ಸೇವೆ’ ನಡೆದಿರುವುದು ವಿಶೇಷವಾಗಿದೆ.

ನಿರುಪಾಧೀಶರ ಸಲಹೆ ಮತ್ತು ಸೂಚನೆಯ ಮೇರೆಗೆ ಚಮಕೇರಿ, ಕುಲ್ಹಳ್ಳಿ ಹಾಗೂ ಗಲಗಲಿಗಳಲ್ಲಿ ರಥೋತ್ಸವದ ಪರಂಪರೆಗೆ ನಾಂದಿಯಾಯಿತು.

ಶ್ರೀಮಠದ ಸಾಂಪ್ರದಾಯಿಕ ಆಚರಣೆಗಳು

ಶಿವರಾತ್ರಿಯಂದು ಜಾಗರಣೆ, ಶಿವಾನುಭವ, ಲಿಂಗಪೂಜೆ, ಜಂಗಮ ಪ್ರಸಾದ ವ್ಯವಸ್ಥೆಯಿರುತ್ತದೆ. ವಿಯದಶಮಿಯಂದು ‘ಬನ್ನಿ ಮುಡಿ’ಯುವ ವಿಶೇಷ ಕಾರ್ಯಕ್ರಮವಿರುತ್ತದೆ. ಶ್ರಾವಣಮಾಸದಲ್ಲಿ ಪುರಾಣ ಪ್ರವಚನ, ಶಿವಭಜನೆಗಳಿರುತ್ತವೆ. ಯುಗಾದಿ ಪಾಡ್ಯದಂದು ಹೊಸ ವರುಷದ ಶುಭಾಶಯಗಳು, ರೈತಾಪಿ ಜನಂಗದೊಡನೆ ಕುಶಲೋಪರಿ, ಬೀಜ ವಿತರಿಸುವ ಕಾರ್ಯಕ್ರಮ. ನವಮಿಗೆ ಜಟಾಭೀಷೇಕ ನಡೆಯುತ್ತದೆ. ಶ್ರೀ ಗುರುಪಾದೇಶ್ವರ ಸ್ವಾಮಿಗಳು ಪುಣ್ಯಾರಾಧನೆ ದ್ವಾದಶಿಯಲ್ಲಿ ಪೌಷ್ಯಶುದ್ಧ ದಶಮಿಗೆ ರಥೋತ್ಸವ ನಡೆದು ಮರುದಿನ ದ್ವಾದಶಿಯಂದು ಜಾತ್ರೆಯಲ್ಲಿ ಸಾಮೂಹಿಕ ಪ್ರಸಾದ ವಿತರಣೆಯ ಸಾಂಪ್ರದಾಯಿಕವಾಗಿ ನಡೆಯುತ್ತದೆ.

ಶ್ರೀಮಠದ ಪಾರಂಪರಿಕ ಹಕ್ಕುಗಳು

ಶ್ರೀ ಮಠದ ಪಾರಂಪರಿಕ ಹಕ್ಕುಗಳು ಸಾಂಪ್ರದಾಯಿಕ ವಿಶೇಷ ಸ್ಥಾನಮಾನಗಳನ್ನು ತಿಳಿಸುತ್ತದೆ. ಹಕ್ಕುಗಳು ಆಯಾಮಠದ ಘನತೆಯನ್ನು ಹೆಚ್ಚಿಸಿ, ಜನಮಾಸದಲ್ಲಿ ಮನೋಮುದ್ರೆಯನ್ನು ಒತ್ತುತ್ತವೆ. ಆಯಾ ಗ್ರಾಮಸ್ಥರಿಗೆ ಇದು ಹೆಮ್ಮೆಯ ಸಂಗಾತಿಯಾಗುತ್ತದೆ. ಬನ್ನಿ ಮುಡಿಯುವುದು.

ವಿಜಾಪುರ ತಾಲೂಕಿನ ದಾಶ್ಯಾಳ ಗ್ರಾಮದಲ್ಲಿ ವಿಜಯದಶಮಿಯಂದು ಬನ್ನಿ ಮುಡಿಯುವ ಹಕ್ಕು ಶ್ರೀ ಮಠಕ್ಕೆ ಹಕ್ಕಾಗಿ ಲಭಿಸಿದೆ.

ಜಾತ್ರಾ ಮಹೋತ್ಸವದ ಗೌರವ

ಬೀಳಗಿ ತಾಲೂಕಿನ ಕೋಲೂರು ಗ್ರಾಮದಲ್ಲಿ ಅಧಿಕ ಮಾಸದ ಗೌರಿ ಹುಣ್ಣಿಮೆಯ ದಿನಸ ಜರುಗು ಗುಂಡಪ್ಪಸ್ವಾಮಿ (ಕುಮಾರಸ್ವಾಮಿ) ಜಾತ್ರೆಯಲ್ಲಿ ತೇರು ಎಳೆಯುವಾಗ ರಥದ ಬಲಭಾಗದಲ್ಲಿರುವ ಆಸನದಲ್ಲಿ ವಿರಾಜಮಾನವಾಗುವ ಗೌರವ ಪ್ರಾಪ್ತವಾಗುತ್ತದೆ.

ಹಿಟ್ಟಿನ ಕಾಯಕ

ಮರೇಗುದ್ದಿ, ಕೊಣ್ಣೂರು (ಜಮಖಂಡಿ ತಾಲೂಕಿನ ಗ್ರಾಮ) ಶೇಗುಣಸಿ (ಅಥಣಿ ತಾಲೂಕಿನ ಗ್ರಾಮ) ಗಳಲ್ಲಿ ಹಿಟ್ಟಿನ ಕಾಯಕ, ದಾಸೋಹದ ಕಾಯಕ ಇತ್ಯಾದಿ ಹಕ್ಕುಗಳು ದೊರೆತಿವೆ.

ಭೀಕ್ಷಾಟನಾ ಕಾಯಕ

ಶ್ರೀಮಠದ ದಾಸೋಹಕ್ಕಾಗಿ ಮತ್ತು ಶ್ರೀ ಮಠದಿಂದ ನಡೆಸುತ್ತಿರುವ ಉಚಿತ ಪ್ರಸಾದ ನಿಲಯದಲ್ಲಿರುವ ಬಡ ವಿದ್ಯಾರ್ಥಿಗಳ ದಾಸೋಹಕ್ಕಾಗಿ ಸುಗ್ಗಿಯಲ್ಲಿ ರೈತರಿಂದ ದವಸ ಧಾನ್ಯಗಳನ್ನು ಸ್ವೀಕರಿಸುವ ಹಕ್ಕು ಕೆಲ ಗ್ರಾಮದಲ್ಲಿ ಲಭಿಸಿದೆ. ಮರೇಗುದ್ದಿ, ಸಿದ್ಧಾಪುರ, ಮಂಟೂರು, ಮುಗಳಖೋಡ, ಮಳಲಿ ಬೆಳಗಲಿ ಮುಂತಾದ ಹಳ್ಳಿಗಳು ಪ್ರಮುಖವಾಗಿವೆ. ಸುಗ್ಗಿಯ ಸಂದರ್ಭದಲ್ಲಿ ರೈತಾಪಿ ಜನಾಂಗ ತಾವು ಬೆಳೆದಿರುವ ದವಸ ಧಾನ್ಯಗಳನ್ನು ಶ್ರೀಗಳಿಗೆ ಅರ್ಪಿಸಿ, ಅವರ ಆಶಿರ್ವಾದ ಪಡೆದು ಚೀಲ ತುಂಬುವ ರಾಶಿಯನ್ನು ಮನೆಗೆ ತರುವ ಕಾಯಕವು ಸಡಗರದಿಂದ ನಡೆಯುತ್ತದೆ.

ಸಾಮೂಹಿಕ ವಿವಾಹಗಳು

ಯಲ್ಲಟ್ಟಿಯ ನಿರುಪಾಧೀಶಮಠದಲ್ಲಿ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಧರ್ಮಾರ್ಥ ಲಗ್ನಗಳನ್ನು ಏರ್ಪಡಿಸಲಾಗುತ್ತಲಿದೆ. ಬಡತನ ಬೇಗೆಯಲ್ಲಿ ಬೆಂದು ಬಸವಳಿದ ಕನ್ಯಾಪಿತೃಗಳಿಗೆ ಹಾಗೂ ಮದುವೆಗೆಂದೆ ಖರ್ಚ ಮಾಡಲು ಆರ್ಥಿಕವಾಗಿ ಸ್ಥಿತಿವಂತರಲ್ಲದ ಕಡುಬಡವರಿಗೆ ಉಪಯೋಗವಾಗಲೆಂದು ಉಚಿತ ಸಾಮೂಹಿಕ ವಿವಾಹಗಳನ್ನು ನೆರವೇರಿಸುವ ಸಂಕಲ್ಪವನ್ನು ಶ್ರೀಗಳು ಮಾಡಿದರು. ಭಕ್ತರ ಉದಾರ ನೆರವಿನಿಂದ ಮತ್ತು ಸಾರ್ವಜನಿಕರ ಪಂಗಡ ಬೇಧ – ಭಾವವಿಲ್ಲದೆ ಯಾರೂ ಬೇಕಾದರೂ ಮದುವೆಯಾಗಬಹುದಾಗಿದೆ. ೧೯೯೩ ನಡೆದುಕೊಂಡು ಬಂದಿತ್ತು. ೨೦೦೪ರ ನಂತರ ಇದು ಸ್ಥಗಿತಗೊಂಡಿದೆ. ಭಕ್ತರು ಬಯಸಿದರೆ ಮತ್ತೆ ಆರಂಭಿಸುವುದಾಗಿ ಶ್ರೀಗಳು ವಿವರಿಸುತ್ತಾರೆ.

ಶೈಕ್ಷಣಿಕ ಚಟುವಟಿಕೆಗಳು

ಶ್ರೀ ಮಠಗಳು ಅನ್ನ ದಾಸೋಹದ ಜೊತೆಗೆ ಉತ್ತರ ಕರ್ನಾಟಕದಲ್ಲಿರುವ ಗುರು ಮನೆಗಳು ಅಕ್ಷದ ದಾಸೋಹದ ಕಾರ್ಯವನ್ನು ಒಂದು ವೃತದಂತೆ ನಡೆಸಿಕೊಂಡು ಬಂದಿವೆ. ಮರೇಗುದ್ಧಿಯಲ್ಲಿ ಏಳನೆಯ ತರಗತಿಯ ತರುವಾಯ ಹಳ್ಳಿಯ ಮಕ್ಕಳು ತಾಲೂಕು ಸ್ಥಳಗಳಿಗೆ ಹೋಗಿ ಕಲಿಯುವುದು ಅಸಾಧ್ಯವಾಗಿತ್ತು. ನಿರುಪಾಧೀಶರು ೧೯೮೩ರಲ್ಲಿ ಅಡವಿಸಿದ್ಧೇಶ್ವರ ಪ್ರೌಢ ಶಾಲೆಯನ್ನು ಪ್ರಾರಂಭಿಸಿದರು. ಪ್ರೌಢ ಶಾಲೆಯ ಜೊತೆಗೆ ಬಡಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯವನ್ನು ಆರಂಭಿಸಿದರು. ಶ್ರೀ ಮಠಕ್ಕೆ ವಿಶೇಷ ಆರ್ಥಿಕ ಮೂಲಗಳಿಲ್ಲದಿದ್ದರೂ ಭಿಕ್ಷಾಟತನದ ಮೂಲಕವಾಗಿ ಪ್ರಸಾದ ನಿಲಯ ನಡೆಸುತ್ತಿರುವುದು ಗಮನಾರ್ಹ ಸಂಗತಿಯಗಿದೆ. ೧೯೯೭ರಲ್ಲಿ ‘ಶ್ರೀ ಅಡವಿಸಿದ್ಧೇಶ್ವರ ವಿದ್ಯಾಪೀಠ ಟ್ರಸ್ಟ್’ನ್ನು ಹುಟ್ಟು ಹಾಕಿ ಅದರ ಜವಾಬ್ದರಿಯನ್ನು ನೀಡಲಾಯ್ತು. ಜಾನಮಟ್ಟಿಯಲ್ಲಿ ಕನ್ನಡ ಮಾಧ್ಯಮದ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಲಾಗುತ್ತದೆ.

ಮುಧೋಳ ತಾಲೂಕಿನ ಹಿರೇಅಲಿಗುಂಡಿಯಲ್ಲಿ ಶ್ರೀಹ. ಬ. ಬ ಪಾಟೀಲ ಸ್ಥಾಪಿಸಿದ ಶ್ರೀ ಮಾರುತಿ ವಿದ್ಯಾ ಸಂಸ್ಥೆಯ ಅಂತರ್ಗತ‘ನಿರುಪಾಧಿ’ ಆಶ್ರಮ ಹಾಗೂ ಅಂತರ್ಗತವಾದ ವಿದ್ಯಾಲಯವನ್ನು ಶ್ರೀ ಅಡವಿ ಸಿದ್ಧೇಶ್ವರ ವಿದ್ಯಾಪೀಟಕ್ಕೆ ಮರಳಿ ಹಸ್ತಾಂತರಿಸಿದ್ದು, ಗಮನಾರ್ಹವಾಗಿದೆ. ಮರೇಗುದ್ಧಿಯಲ್ಲಿ ಶಿಕ್ಷಣ ಸಂಸ್ಥೆಯಾಗಿಯೇ ಐದು ಎಕರೆ ಜಮೀನಿದೆ. ಸೊನ್ನದ ಶ್ರೀಮಂತ ದೇಸಾಯಿ, ಮರೇಗುದದಿಯ ಮಲ್ಲಪ್ಪ ರಾಮಗೊಂಡ, ರಾಮಪ್ಪ, ಕಾಮರೆಡ್ಡಿ, ಮಲ್ಲಪ್ಪ ಕಾಮರೆಡ್ಡಿ, ಸಹೋದರರು ಉದಾರವಾಗಿ ಕೊಡ ಮಾಡಿದ ದಾನದ ಜಮೀನಿನಲ್ಲಿ ಪ್ರೌಢ ಶಾಲೆಯ ಭವ್ಯ ಬಿಲ್ಡಿಂಗ್ ತಲೆಯೆತ್ತಿ ನಿಂತಿದೆ.

ಶ್ರೀಮಠದ ವ್ಯಾಜ್ಯಕ್ಕೆ ತೆರೆ

ಮರೇಗುದ್ದಿಯ ಮಟದ ವ್ಯಾಜ್ಯ ಅಂತ್ಯ ಕಾಣದೆ ಮತ್ತೆ ಮತ್ತೆ ದುತ್ತನೆ ಎದುರಾಗುತ್ತ ಬಂದಿತ್ತು. ‘ಹೋದೆಯಾ ಪಿಶಾಚಿ ಎಂದರೆ, ಬಂದೆ ಗವಾಕ್ಷಿಯಲ್ಲಿ’ ಎಂಬಂತಾಗಿತ್ತು. ಶ್ರೀ ಮಠದ ವಿರುದ್ಧವಾಗಿ ತೀರ್ಪು ಬಂದಾಗ, ವಿರೋಧಿಗಳ ಉಪಟಳ ತಡೆಯಲಾರದೆ ನಿರುಪಾಧೀಶರು ಪಿಠವನ್ನೇ ತೊರೆಯಲು ನಿರ್ಧರಿಸಿದ್ದರು. ಆತ್ಮೀಯರ ಒತ್ತಾಯ, ಸದ್ಭಕ್ತರ ಮೊರೆ, ವಿಜಾಪುರ ಪಾಟೀಲ ವಕೀಲರ ಭರವಸೆಯ ಮೇಲೆ ನಿರ್ಧಾರ ಬದಲಿಸಿದ್ದರು. ಮುಂದೆ ಸುಧೀರ್ಘವಾಗಿ ನ್ಯಾಯಾಲಯದ ಕಲಾಪಗಳು ಜರುಗಿ ಎಲ್ಲ ವ್ಯಾಜ್ಯಗಳು ಶ್ರೀ ಮಠದ ಪರವಾಗಿ ಬಂದವು. ಸುಪ್ರೀಮ್ ಕೋರ್ಟಿನ ತೀರ್ಪು ಕೂಡ ನಿರುಪಾಧೀಶರ ಪರವಾಗಿಬಂತು. ಪೂಜ್ಯರ ಸುದೀರ್ಘ ಹೋರಾಟಕ್ಕೆ ಅಂತಿಮವಾಗಿ ಜಯ ಲಭಿಸಿದಂತಾಯ್ತು. ನಿರುಪಾಧೀಶರು ನಿರಾಳವಾದರು.

ಪೀಠ ಹಸ್ತಾಂತರ

ಏನೆಲ್ಲಾ ಹೋರಾಠ ಮಾಡಿ, ಎಷ್ಟೆಲ್ಲಾ, ಕಷ್ಟಪಟಟು ನ್ಯಾಯಲಯದಿಂದ ವಿಜಯ ಶಾಲಿಯಾಗಿದ್ದರೂ; ಶ್ರೀಗಳು ಅದನ್ನು ಸಂಭ್ರಮದಿಂದ ಅನುಭವಿಸಲಿಲ್ಲ. ಪೂಝ್ಯರು ತಮ್ಮ ಉತ್ತರಾಧಿಕಾರಿಯನ್ನಾಗಿ, ‘ಗುರುಪಾದಯ್ಯ’ನವರನ್ನು ಆರಿಸಿದ್ದರು. ಅವರ ಅದ್ಯಯನಕ್ಕೆ ವ್ಯವಸ್ಥೆ ಮಾಡಿಸಿದರು. ನಾವಲಗಿ, ಶಿವಯೋಗ ಮಂದಿರ, ಮೂರು ಸಾವಿರ ಮಠ, ಮುಂಡರಗಿಯಲ್ಲಿ ಗುರುಪಾದದೇವರು ತಮ್ಮ ಅಧ್ಯಯನವನ್ನು ಪೂರೈಸಿದರು. ಅಡವಿಸಿದ್ಧೇಶ್ವರ ಮಠದ ಮುಂದಿರುವ ಶಿಲಾ ಮಂಟಪದ ಉದ್ಘಾಟನಾಸಮಾರಂಭವು ೨೬. ೧೧. ೨೦೦೧ರಲ್ಲಿ ಜರುಗಿತು. ಅದೇ ಸಮಾರಂಭದಲ್ಲಿ ನುತನ ಶ್ರೀಗಳಿಗೆ ಪೀಠಾರೋಹಣ, ಅಧಿಕಾರ ಹಸ್ತಾಂತರವು ವಿಧಿವತ್ತಾಗಿ ಜರುಗಿತು. ಅಂಕಲಗಿ ಮುಂಡರಗಿ, ಜಮಖಂಡಿ, ಬಾಲೆಹೊಸೂರು, ಹಂದಿಗುಂದ, ಚಿಮ್ಮಡ ಮುಂತಾದ ಮಠಗಳ ನಿರಂಜನ ಮೂರ್ತಿಗಳ ಸಮ್ಮುಖದಲ್ಲಿ ಅನುಗ್ರಹ ಮತ್ತು ಪಟ್ಟಾಧಿಕಾರ ಮಹೋತ್ಸವವು ಸರಳ – ಸುಂದರವಾಗಿ ಜರುಗಿತು. ಶ್ರೀಮಠದ ಸರ್ವ ಅಧಿಕಾರವನ್ನು ಶ್ರೀ ಗುರುಪಾದೇಶ್ವರ ಸ್ವಾಮಿಗಳಿಗೆ ಬಿಟ್ಟು ಕೊಟ್ಟು ನಿರುಪಾಧೀಶರು ಎಂದಿನಂತೆ ಸರಳ ಬದುಕನ್ನು ನಡೆಸಿದ್ದಾರೆ. ಅಧ್ಯಯನ ಬರವಣಿಗೆ ಭಕ್ತರಿಗೆ ಮಾರ್ಗದರ್ಶನ ಮಾಡುತ್ತ ನಿರುಪಾಧೀಶರು ನಿರಾಳವಾಗಿದ್ದಾರೆ.

“ಅನಂತ ಕಷ್ಟ ಕೋಟಲೆಗಳ ಚಿಲುಮೆಯಲ್ಲಿ ಪುಟ್ಟ ಕಿಟ್ಟ ಚಿನ್ನದಂತೆ ಅಪಂರಂಜಿಯಾಗಿ ನಿರುಪಾಧೀಶರು ಹೊರ ಬಂದಿದ್ದಾರೆ. ಹಾಗೆಯೇ ನಾಡವರಿಗೆ ದಾರಿದೀಪವಾಗಿದ್ದಾರೆ. ಶ್ರೀಗಳು ೨೦೦೧ರಲ್ಲಿ ತಮ್ಮ ಅಧಿಕಾರ ಹಸ್ತಾಂತರಿಸಿ ನಿಜಾರ್ಥದಲ್ಲಿ ನಿರಾಭಾರಿಯಾಗಿದ್ದಾರೆ. ಇದೇ ಸಮಯದಲ್ಲಿ ಶ್ರೀ ಮಠದ ವ್ಯಾಜ್ಯವೂ ಮುಗಿದು ಶ್ರೀಗಳ ಪರ ನಿರ್ಣಯ ಬಂದಿದ್ದರಿಂದ ಶ್ರೀ ನಿರುಪಾಧೀಶರು ನಿರಾಳವಾಗಿದ್ದಾರೆ” ಎಂಬ ಮಾತುಗಳು ಮೌಲಿಕವಾಗಿವೆ. ಪೂಜ್ಯ ನಿರುಪಾಧೀಶರ ನಿಜ ನಿಲುವನ್ನು ಅನಾವರಣಗೊಳಿಸುತ್ತದೆ.

ಪೂಜ್ಯ ಗುರುಪಾದೇಶ್ವರ ಶ್ರೀಗಳ ಕೂಡ ಜನಾನುರಾಗಿಯಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಸಂಪಾದಿಸಿದ್ದಾರೆ. ಸಾಹಿತ್ಯ ಸಂಗೀತದಲ್ಲಿ ಆಸಕ್ತಿಯುಳ್ಳವರು, ಮರೇಗುದ್ದಿ ಮಠದ ಭವ್ಯ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಜ್ಞಾನ ದಾಸೋಹ(ಪ್ರವಚನ) ಅಕ್ಷರ ದಾಸೋಹ (ಶಿಕ್ಷಣ ಪ್ರಸಾರ) ಹಾಗೂ ಪ್ರಸಾದ (ನಿತ್ಯ ದಾಸೋಹ)ಮಾರನ್ನು ತ್ರಿಕರ್ಣಪೂರ್ವಕವಾಗಿ ಮುನ್ನಡೆಸಿದ್ದಾರೆ.

ಮರೇಗುದ್ದಿ ಶ್ರೀ ಮಠದ ಶಾಖಾ ಮಠಗಳು

ಮರೇಗುದ್ದಿಯ ಅಡವಿಸಿದ್ಧೇಶ್ವರ ಮಠಕ್ಕೆ ಹಲವು ಶಾಖಾಮಠಗಳಿವೆ. ಬೀಳಗಿ ತಾಲೂಕಿನ ಜಾನಮಟ್ಟಿ, ಜಮುಖಂಡು ತಾಲೂಕಿನ ಯಲ್ಲಟ್ಟಿ ಮಠಗಳು ಪೂರ್ಣ ಪ್ರಮಾನವಾಗಿದ್ದು ಸುಸಜ್ಜಿತವಾಗಿವೆ.

ಮುಧೋಳ ತಾಲೂಕಿನಲ್ಲಿ ಕುಳಲಿ, ಮುಗಳಖೋಡ, ಚಿಚಖಂಡಿ, ಹಿರೇಅಲಗುಂಡಿ ಗ್ರಾಮಗಳಲ್ಲಿವೆ. ಜಮಖಂಡಿ ತಾಲೂಕಿನಲ್ಲಿ ಯಲ್ಲಟ್ಟಿ, ಸಿದ್ಧಾಪುರ ಹಾಗೂ ನಾವಲಗಿಗಳಲ್ಲಿ ಮತ್ತು ಬೀಳಗಿ ತಾಲೂಕಿನ ಜಾನಮಟ್ಟಿಯಲ್ಲಿ ಶಾಖಾ ಮಠಗಳಿವೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ‘ಯುರಗುದರಿ’ ಯಲ್ಲಿ ಶಾಖಾ ಮಠವಿದೆ.

ಇವುಗಳಲ್ಲಿ ಯಲ್ಲಟ್ಟಿ, ಜಾನಮಟ್ಟಿ, ನಾವಲಗಿ ಮತ್ತು ಚಿಚಖಂಡಿಗಳಲ್ಲಿ ಮಠಗಳು ಭಕ್ತರ ಉದಾರ ನೆರವಿನಿಂದ ನಿರ್ಮಾಣಗೊಂಡು ಭಕ್ತರ ಸೇವೆಗೆ, ಸಮಾಜಿಕ ಚಟುವಟಿಕೆಗಳಿಗೆ ಸಜ್ಜುಗೊಂಡಿವೆ. ಉಳಿದೆಡೆ ಬಲಯ ಸ್ಥಳಗಳಿವೆ.

ಗುರುವಂಶ ಪರಂಪರೆ

01_256_MAMP-KUH

ಸಮಾರೋಪ

ಮರೇಗುದ್ದಿಯಂತಹ ಗ್ರಾಮೀಣ ಪರಸರದಲ್ಲಿದ್ದು, ಮೌನಲೋಕದ ಮಹಾತಪಸ್ವಿಯಂತೆ ಶ್ರೀ ಮಠವಿದೆ. ಸಾಹಿತ್ಯ, ಶಿಕ್ಷಣ, ಧರ್ಮ, ಸಂಸ್ಕೃತಿಗಳ ಪರಿಮಳವನ್ನು ಬೀರುತ್ತ ಬಂದಿದೆ. ಎಲೆಮರೆಯ ಪರಿಪಕ್ವ ಫಲದಂತೆ, ಮಾಗಿದ ತನಿವಣ್ಣಿನ ಸಾಹಿತ್ಯ ಸೃಷ್ಟಿಸಿದ ಶ್ರೀಗಳ ಕುರಿತಾಗಿ ಗೌರವ ಮೂಡುತ್ತದೆ. ಆಡಂಬರದ ದೊಂಬರಾಟಗಳ ನಡುವೆಯೂ ಇಂಥ ಸದ್ದು ಗದ್ದಲವಿಲ್ಲದೆ ಮಾಡಿದ ಸಾಧನೆ ಅನುಪಮವಾಗಿದೆ. ಭಕ್ತರು ತಮ್ಮ ವ್ಯಕ್ತಿಗತ ಕೌಟುಂಬಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರವನ್ನು ಮಾರ್ಗದರ್ಶನ ಮೂಡಿಸುವ ಪರಂಪರೆ ಶ್ರೀ ಮಠದಲ್ಲಿದೆ.

ಕನ್ನಡ ನಾಡಿನ ನೂರಾರು ಮಠಗಳಲ್ಲಿ ಒಂದೆಂಬಂತೆ ಮರೇಗುದ್ದಿ ಮಠವಿದ್ದರೂ ಕೂಡ, ಅದರ ವಿಶೇಷತೆ ಬೇರೆಯದೆ ಆಗಿದೆ. ಜನರ ಕಷ್ಟಗಳನ್ನು ಪರಿಹರಿಸುತ್ತ ಸಾಮಾಜದ ಸ್ವಾಸ್ಥ್ಯಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಲಿದೆ. ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಚಟಿವಟಿಕೆಗಳಿಗೆ ಕೇಂದ್ರಬಿಂದುವಾಗಿದೆ. ಸುಮಾರು ಎರಡು ನೂರು ವರುಷಗಳಿಂದಲೂ ಭಕ್ತರ ಆಶಾಕಿರಣವಾಗಿದೆ.