ಹೊಲದಲ್ಲಿ ಮರ ಬೆಳೆಸಿ ಭೂಮಿ ಉಳಿಸುವ ಕೃಷಿ ಅರಣ್ಯಗಳ ಬಗೆಗೆ ಮಹಾರಾಷ್ಟ್ರ ಕೊಲ್ಲಾಪುರದ  ಆಜರಾ, ಕೋವಾಡ್, ಗಡ್‌ಹಿಂಗ್ಲಜ್, ನೇಸರಿ ಪ್ರದೇಶದ ಹಳ್ಳಿಗಳಲ್ಲಿ ಒಂದು ಅನನ್ಯ ಪ್ರಾತ್ಯಕ್ಷಿಕೆಯಿದೆ. ಅಡವಿಯ ತವರಾದ ಪಶ್ಚಿಮ ಘಟ್ಟದ ಗುಡ್ಡಗಳು ಇಲ್ಲಿನ ಕೃಷಿ ಭೂಮಿ. ಒಂದು ಕಾಲಕ್ಕೆ  ನೈಸರ್ಗಿಕ ಸಹಜ ಕಾಡಿರುವ ನೆಲೆ, ಈಗ ಭತ್ತ, ಜೋಳ, ರಾಗಿ ಮುಂತಾದ ಬೆಳೆ. ಇಲ್ಲಿನ ಹೊಲದ ಮೇಲೆ ನಿಂತು ಒಂದು ವೈಮಾನಿಕ ಚಿತ್ರ ಪಡೆದರೆ ಈಗ ಇದೊಂದು ಕಾಡು ಎಂದು ತಕ್ಷಣ  ಹೇಳಬಹುದು. ಕೃಷಿ ನೆಲದಲ್ಲಿ ಎಕರೆಗೆ ಕನಿಷ್ಟ ೫೦-೬೦ ಗಿಡ ಮರಗಳ ಸಮೃದ್ಧಿ. ಬದುಕಿನ ಉದ್ದಕ್ಕೂ ಹಸುರು ಸಾಲು. ಸಾವಿರ ಸಾವಿರ ಎಕರೆ ವಿಸ್ತಾರಕ್ಕೂ  ಹಬ್ಬಿದ ಮರ ಬೆಳೆ. ಹೊಲದ ನೆರಳಲ್ಲಿ ನಿಂತ  ಬೆಳೆಗಳು ಮರ ಉಳಿಸಿ ಕೃಷಿ ಬೆಳೆಸುವ ಸಾಧ್ಯತೆ ಸಾರುತ್ತವೆ. 

ನಂದಿ, ಹುನಾಲು, ಮತ್ತಿ, ಇಪ್ಪೆ, ಬೂರಲು, ಬಿದಿರು, ಶಮೆ ಬಿದಿರು, ನೀಲಗಿರಿ, ಗೇರು, ಅತ್ತಿ, ಬಿಳಿಮತ್ತಿ ಮರಗಳು ವಿಶೇಷ. ಹೆಮ್ಮರಗಳಿಲ್ಲ, ಅಬ್ಬಬ್ಬಾ  ಎಂದರೆ  ೩೦-೪೦ ವರ್ಷ ಪ್ರಾಯದ ಮರಗಳು ಹೆಚ್ಚು. ಇವುಗಳ ಸೊಪ್ಪು, ಟೊಂಗೆಗಳು ಗೊಬ್ಬರ, ಉರುವಲಿಗಾಗಿ ಬಳಕೆ. ನೈಸರ್ಗಿಕ ಹುಲ್ಲು ಧಾರಾಳ. ಕೃಷಿ ಮೇವು ಜತೆಗಿರುವದರಿಂದ ಎಮ್ಮೆ ಸಾಕಣೆ ಉಪ ವೃತ್ತಿ. ಮೇವಿನ ದಾಸ್ತಾನು ಮಾಡುವುದು, ಮರಗಳನ್ನು ಪೋಷಿಸುವದನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿ ಹೊಲವೂ ಕೃಷಿ ಪಾಠ ಶಾಲೆ.  ಇಲ್ಲಿ ೪-೫ ಎಕರೆ ಹಿಡುವಳಿಯವರೇ ಅಧಿಕ. ಇರುವ ನೆಲದ ಸತ್ವ ರಕ್ಷಣೆಗೆ ಇಳಿಜಾರಿಗೆ ಅಡ್ಡ ಬದು ನಿರ್ಮಿಸಿ ಮರ ಉಳಿಸುವ ಉಪಾಯ  ಪ್ರಕೃತಿಯೇ  ಕಲಿಸಿದೆ.  ವಾರ್ಷಿಕ ೧೯೦೦-೨೩೦೦ ಮಿಲಿ ಮೀಟರ್ ಮಳೆ ಸುರಿಯುವ ಗುಡ್ಡಗಾಡಿನಲ್ಲಿ ಮಣ್ಣು ಸವಕಳಿ ಸಹಜ. ನೇಗಿಲು ಉಳುಮೆಗೆ ತೊಂದರೆಯೆಂದು  ಹೊಲದ ನಡುವಿನ  ಗಿಡಗಳನ್ನು ಕಡಿಯುವದು, ಬದುವಿನ ಮರಗಳನ್ನು  ಹಾಗೇ  ಉಳಿಸುವ ಪರಿಪಾಠ. ಏರಿದ ಜನಸಂಖ್ಯೆ, ಕೈಗಾರಿಕೆಗಳು ಈಗ ನಾಲ್ಕು ದಶಕಗಳ ಹಿಂದೆ ಇಲ್ಲಿನ ಹೆಮ್ಮರಗಳನ್ನು ನುಂಗಿದ್ದವು. ಗುಡ್ಡಗಾಡಿನ ಭೂಮಿ ಕೃಷಿಗೆ ನೀಡುವಾಗ ಸರಕಾರ ಮರ ತನ್ನ ಸಂಪತ್ತು ಎಂದು ಕಡಿದು  ಮಾರಾಟ ಮಾಡಿತು!  ಈಗ  ಕೃಷಿಕರ ಸಂರಕ್ಷಣೆಯಿಂದ  ಎದ್ದ ಹೊಸ ಗಿಡಗಳಿವು. ಇಲ್ಲಿ ಬಹುತೇಕ ಕೃಷಿಕರು ಚಿಕ್ಕ ಹಿಡುವಳಿದಾರರು, ಟ್ರ್ಯಾಕ್ಟರ್‌ಗಿಂತ ಎತ್ತುಗಳ ಬಳಕೆ ಜಾಸ್ತಿ. ಕೃಷಿ ನೆಚ್ಚಿಕೊಂಡ ತಲೆಮಾರಿಗೆ ಗಿಡ ಗೆಳೆತನ. ಸಾಂಪ್ರದಾಯಿಕ ಕೃಷಿ ನೆಲದಲ್ಲಿ  ಆಹಾರ ಬೆಳೆಗಿಂತ ಕಾಡು ಇಲ್ಲಿನ ಪ್ರಮುಖ ಆದ್ಯತೆಯೇ ಎಂಬಷ್ಟು  ಅನುಮಾನ.

ಹೊಲದಿಂದ ಹಳ್ಳಿ ಒಂದೆರಡು ಕಿಲೋ ಮೀಟರ್ ದೂರ. ಆದರೂ ನಿತ್ಯ ನೆಲದ ಸೆಳೆತ ಜಾಸ್ತಿ.

ಮಳೆಯಾಶ್ರಿತ ಕೃಷಿಯ ಇಲ್ಲಿ ಮಳೆಗಾಲದ ಬೆಳೆ ತೆಗೆದ ಬಳಿಕ   ಎಲ್ಲೆಡೆಯಂತೆ ಕೃಷಿ ಭೂಮಿ ಬೋಳು ಬಯಲಾಗಿ ಖಾಲಿಯಾಗುವದಿಲ್ಲ! ಗೇರು, ಮಾವು  ಬೇಸಿಗೆ ಹೆಚ್ಚುವರಿ ಆದಾಯ. ನೀಲಗಿರಿ, ಶಮೆ ಬಿದಿರುಗಳಂತೂ ಬಹು ಬೇಡಿಕೆ ಉತ್ಪನ್ನ, ಸುಲಭ ನಿರ್ವಹಣೆಯಲ್ಲಿ ಗಿಡ ಬೆಳೆದ ಲಾಭ  ಗುರುತಿಸಿ ಉಪಯುಕ್ತ ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸಲು  ಗಮನ. 

 “ಜೂನ್ ಮಳೆ ಆರಂಭದ ಕಾಲಕ್ಕೆ ನಮ್ಮಲ್ಲಿನ ವಾರದ ಸಂತೆಗಳಿಗೆ ಬರಬೇಕು, ನೀಲಗಿರಿ, ಸಾಗವಾನಿ, ಬಿದಿರು, ಮಾವಿನ ಸಸಿಗಳ ಮಾರಾಟ ನಡೆಯುತ್ತದೆ, ಪ್ರೀತಿಯಿಂದ ಗಿಡ ಖರೀದಿಸಿ ರೈತರು ಬದುವಿನಲ್ಲಿ ಬೆಳೆಸುತ್ತಾರೆ” ನೇಸರಿ ಹಳ್ಳಿಗ ವಿನೋದ್ ಪಾಟೀಲ್ ಹೇಳುತ್ತಾರೆ. ಇತ್ತೀಚಿಗೆ  ಇಲ್ಲಿನ ಕೃಷಿ ಅರಣ್ಯದಲ್ಲಿ  ಮರ, ಹಣ್ಣು ಹಂಪಲಿನ ಆದಾಯಕ್ಕೆ ರೈತರ ಗಮನ ಹೆಚ್ಚುತ್ತಿದೆ. ನೈಸರ್ಗಿಕ ಗಿಡಗಳ ಪೋಷಣೆಯೂ ಸಾಧ್ಯವಾಗಿರುವದರಿಂದ ಕೃಷಿ ಅರಣ್ಯ ಜೀವ ವೈವಿಧ್ಯದ ನೆಲೆಯಾಗಿ ರೂಪುಗೊಂಡಿದೆ.

ವಿಚಿತ್ರವೆಂದರೆ ಬೆಳಗಾವಿಯಿಂದ ಕೇವಲ ೧೫ ಕಿಲೋ ಮೀಟರ್ ದೂರದ ಮಹಾರಾಷ್ಟ್ರದ ಗುಡ್ಡಗಳಲ್ಲಿ  ಕಾಣುವ ಚಿತ್ರಗಳು ನಮ್ಮ ಕನ್ನಡದ ನೆಲದ ಬಯಲು ಭೂಮಿಯಲ್ಲಿ ವ್ಯಕ್ತವಾಗಿಲ್ಲ. ಕರಿಜಾಲಿ, ಬೇವಿನ ಮರಗಳು ವಿರಳವಾಗಿರುವದನ್ನು ಬಿಟ್ಟರೆ ನಮ್ಮಲ್ಲಿ ಬೇರೆ ವಿಶೇಷಗಳಿಲ್ಲ. ಅದರಲ್ಲಿಯೂ ನೀರಾವರಿ ಕ್ಷೇತ್ರಗಳಲ್ಲಂತೂ  ಕಬ್ಬು, ಭತ್ತ ಬಿಟ್ಟರೆ ಬೇರೆ ಬೆಳೆಗೆ  ಆಸ್ಪದವಿಲ್ಲ  ಎಂದು  ನಿರ್ಧಾರ ಮಾಡಿದ್ದೇವೆ! ಮಳೆ ಆಶ್ರಿತ ಪ್ರದೇಶದ ಜನ ಹೊಲದಲ್ಲಿ ಮರ ಪ್ರೀತಿಸುವದಕ್ಕೂ, ನೀರಾವರಿ ಪ್ರದೇಶದ ನಿರ್ಧಾರಗಳಿಗೂ ವ್ಯತ್ಯಾಸವಿದೆ.  ಒಂದು ಕಾಲದಲ್ಲಿ  ಹಿರಿಯಜ್ಜನ ಕೃಷಿಯಂತೆ ಮರ ಉಳಿಸಿದವರೂ  ಹೊಲಕ್ಕೆ ನೀರು ಬಂದ ಬಳಿಕ ಮರ ಕಡಿದ ಉದಾಹರಣೆಗಳಿವೆ. ನಮ್ಮ  ರಾಯಚೂರಿನ ಸಿಂಧನೂರು ಪ್ರದೇಶಗಳು ನೀರಾವರಿಯಾದ ಬಳಿಕ ಅಲ್ಲಿನ ಬೇವಿನ ಮರಗಳು ದೊಡ್ಡ ಪ್ರಮಾಣದಲ್ಲಿ ಸಾವನ್ನಪ್ಪಿವೆ. ಅಳಿದುಳಿದ ಮರಗಳ ನೆರಳು ಭತ್ತದ ಇಳುವರಿಗೆ ಪರಿಣಾಮ  ಬೀರುತ್ತದೆಂದು   ಸ್ವತಃ ರೈತರೇ ನಾಶ ಮಾಡಿದ್ದಾರೆ. ನೀರು ಬಂದ ಬಳಿಕ ಮರ ಕಡಿದ ಚಿತ್ರಗಳು ಮಹಾರಾಷ್ಟ್ರದ ಈ ಪ್ರಾಂತ್ಯದಲ್ಲಿಯೂ ಇದೆ. ಇಲ್ಲಿ ಕಬ್ಬಿನ ಕೃಷಿ ಹೆಚ್ಚಿದ ಜಾಗದಲ್ಲಿ ನೀಲಗಿರಿ ಬಿಟ್ಟರೆ ಬೇರೆ ಮರಗಳು ನಮಗೆ ಕಾಣುವುದಿಲ್ಲ. 

ಕೃಷಿ ಅರಣ್ಯ ಅಭಿವೃದ್ಧಿಯನ್ನು ತಾಜಾ ವಿಜ್ಞಾನದ ಶೋಧವೆಂದು ಟೆಕ್ನಿಕಲ್ ಮಾಹಿತಿ ಹಂಚುವ ಶೂರ ವಿಜ್ಞಾನಿಗಳನ್ನು ಹಲವು ದಶಕಗಳಿಂದ ನೋಡುತ್ತಿದ್ದೇವೆ. ಆದರೆ ಕೃಷಿ ವಿಜ್ಞಾನ, ತಂತ್ರಜ್ಞಾನ, ನೀರಾವರಿ ಸುದಾರಣೆ ಬಳಿಕ  ಮರ ಪ್ರೀತಿಸುವ ಪರಿಸರ ಜ್ಞಾನ  ಏಕೆ ಹಿಂದೆ ಸರಿಯುತ್ತಿದೆ? ಯೋಚಿಸಬೇಕಾಗಿದೆ. ನೆಲ ಜಲ ಸಂರಕ್ಷಣೆಯ ಪ್ರತಿ ಹಂತದಲ್ಲಿಯೂ ಮರ ಬೆಳೆಸುವ ಕಾರ್ಯಕ್ಕೆ  ಮಹತ್ವ ನೀಡಲಾಗುತ್ತದೆ, ಜಲ ಸಂರಕ್ಷಣೆಯ  ಸರಕಾರೀ ಯೋಜನೆಗಳಲ್ಲಿಯೂ  ಗಿಡ ನೆಡಲು ಒತ್ತು ನೀಡಲಾಗುತ್ತದೆ. ಇಷ್ಟೆಲ್ಲ ಸರಕಾರೀ ಜಾಗೃತಿ ಇದ್ದಾಗ್ಯೂ ನೀರಾವರಿ ಕ್ಷೇತ್ರಗಳಲ್ಲಿ ಮಾತ್ರ ನೀರು ಮೂಲ ಹೆಚ್ಚಿಸುವ ಕಾಡು ಬೆಳೆಸುವ ಕಾಳಜಿ ಯಾವತ್ತೂ ವ್ಯಕ್ತವಾಗುವುದಿಲ್ಲ. ಇಂತಹ ನೆಲೆಯಲ್ಲಿ ಬೆಳೆಯುವ ಸಸ್ಯಗಳ ಬಗೆಗೆ ಮಾಹಿತಿ ಹಂಚುವ ಕೆಲಸ ಪರಿಣಾಮಕಾರಿಯಾಗಿಲ್ಲ.  ಬೆಳೆ ರೋಗಕ್ಕೆ  ಇಂತಹ ರಾಸಾಯನಿಕ ಸಿಂಪಡಿಸಬೇಕು, ಇಂತಹ ಗೊಬ್ಬರದಲ್ಲಿ ಪವಾಡವಿದೆ ಎಂದು ಎಂದು  ನೂರಾರು ಜಾಹೀರಾತು ಫಲಕಗಳು  ಇಲ್ಲಿ  ನಮಗೆ  ಸಿಗುತ್ತವೆ. ಆದರೆ  ಮರ ಬೆಳೆಸಲು ರೈತರಿಗೆ ಪ್ರೇರಣೆ ಮೂಡಿಸುವ ಒಂದು ಸಂದೇಶ ಕೂಡಾ ಕಾಣುವದಿಲ್ಲ. ಅಷ್ಟಕ್ಕೂ ಮರ ಬೆಳೆಸಲು  ಮಹಾರಾಷ್ಟ್ರದ ಈ ಪ್ರದೇಶಗಳಲ್ಲಿ  ರೈತ ಜ್ಞಾನ ಹೆಚ್ಚು ಕೆಲಸ ಮಾಡಿದೆ. ಅದನ್ನು ಕಲಿತು ಹಂಚುವ ಕೆಲಸ ಮಾಡಬೇಕಾಗಿದೆ. ಅಲ್ಲಿಯೂ ಕೃಷಿ ತಂತ್ರಜ್ಞಾನ ಬಂದಲ್ಲಿ ಮರಗಳು ಉರುಳಿವೆ! ನಮ್ಮ ಕರ್ನಾಟಕದ  ಮಲೆನಾಡಿನಲ್ಲಿ  ರೈತರ ಹೊಲಗಳಲ್ಲಿನ ಮರಗಳು ಕಡಿದು ಖಾಲಿಯಾಗಿವೆ, ನಾಟಾ ನೀಡುವ ಮರಗಳ ಕೊರತೆಯಾಗಿದೆ. ಮಹಾರಾಷ್ಟ್ರದ ಹೊಲದ ಮರಗಳು ಈಗ ಕರ್ನಾಟಕದ ಸಾಮಿಲ್‌ಗೆ ಬರಲು ಆರಂಭಿಸಿವೆ. ಮರಾಠಿ ಕೃಷಿ ಭೂಮಿಯ ಮರದ ವ್ಯವಹಾರ ನಾಟಾ ವರ್ತಕರ ಹೊಸ  ಆಕರ್ಷಣೆಯಾಗಿದೆ.

ಮರ ಕಡಿಯುವ ವಿದ್ಯೆ ಬೇಗ ಕಲಿಯುವ ನಾವು ಬೆಳೆಸುವ ದಾರಿಯಲ್ಲ ಏಕೆ ಸಾಗುತ್ತಿಲ್ಲ? ನೀರು, ಮಣ್ಣಿಗೆ ಶಕ್ತಿ ನೀಡುವ ಮರಗಳನ್ನು ಮರೆತು ಕೃಷಿ ಅಭಿವೃದ್ಧಿ  ಸರ್ವಥಾ ಸಾಧ್ಯವಿಲ್ಲ.

ಮರ ಬೆಳೆಸಿ ಕೃಷಿ ಬೆಳೆಸುವ ವಿದ್ಯೆ  ಕಲಿತ ನೆರೆಯ  ಮರಾಠಿ ರೈತ ಅನುಭವಗಳು ಕನ್ನಡ ನೆಲಕ್ಕೆ ತುರ್ತಾಗಿ ಬೇಕಾಗಿದೆ. ಕೃಷಿಯಲ್ಲಿ  ಪರಸ್ಪರ ಕೊಡುಕೊಳ್ಳುವ ಸಂಗತಿಗಳು ತುಂಭಾ ಇವೆ. ನಮಗೀಗ ಮರಾಠಿ ಎಂದರೆ ಫಕ್ಕನೆ  ನಡು ರಾತ್ರಿಯಲ್ಲೂ ಕನ್ನಡ ಹೋರಾಟ ಮಾತ್ರ ನೆನಪಾಗುತ್ತದೆ!. ಸಣ್ಣ ಕೃಷಿಕರ ಅಭ್ಯದಯದ ದೊಡ್ಡ ಪಾಠಗಳನ್ನು  ಕೂಡಾ ನಾವು  ಕಲಿಯುವುದಿದೆ.