ಬೆಳೆದು ನಿಂತ ಮರಕ್ಕೆ ಬೇಲಿ ಕಟ್ಟುವ ಬಯಕೆ
ಈ ಕೆಲವು ಜನಕೆ !
ಗಿಡವಾದಾಗ ಇರಲಿಲ್ಲ ಬೇಲಿಯ ಹಂಗು, ಮರವಾಗಿ
ಬೆಳೆವಾಗಲೂ ಅಷ್ಟೆ.
ಶಾಖೋಪಶಾಖೆಗಳ ಚಾಚಿ ಬಿಳಲನು ಬೀಸಿ
ನಿಂತಾಗಲೂ ದಾರಿಯ ಜನಕೆ ನೆರಳು ; ತಂಪು ; ಗೌರವ.

ಈಗ ಇದಕ್ಕೆ ಕಟ್ಟತೊಡಗಿದ್ದಾರೆ ಸುತ್ತುಬೇಲಿ.
ಕೊಂಬೆಕೊಂಬೆಗೂ ತೂಗುಬಿಟ್ಟಿದ್ದಾರೆ ಗುಡಿಯ ಗಂಟೆ !
ಬೇಲಿ ಹೊರಗಡೆ ಬೋರ್ಡು :
‘ಈ ಆಲದ ಮರವೇ ಕಲ್ಪವೃಕ್ಷ
ಇದರ ಒಂದೊಂದು ಎಲೆಯೂ ಮಂತ್ರ
ಹಣ್ಣೆಲ್ಲವೂ ಅಮೃತ
ಇದನಲ್ಲ ಎಂಬ ಪರವಾದಿ ಯಾರಿದ್ದಾನು
ಆ ಅವನೇ ನಾಸ್ತಿಕ.’

ಮಹಾ ವಟವೃಕ್ಷಕ್ಕೆ ಬೇಲಿ ಕಟ್ಟುವ ಬಯಕೆ
ಈ ಜನಕ್ಕೆ !
ಸದಾ ಮೇಲೆದ್ದ ಈ ಮರಕ್ಕೆ ಅನ್ನಿಸಬಹುದು :
‘ಏನೋ ನಡೆಯುತಿದೆಯಲ್ಲ ಬುಡದ ಸುತ್ತ !’
ಒಂದು ಸಲ ಎಚ್ಚತ್ತು ಮೈಕೊಡವಿತೋ
ಉದುರಿ ಬೀಳುವುದು ಖಂಡಿತ ಈ ಬೇಲಿಗೆದ್ದಲ ಹುತ್ತ !