ಮಧ್ಯಕಾಲೀನ ಮಲೆನಾಡಿನ ಭಾಗಗಳಲ್ಲಿ ಸ್ಥಾನಿಕ ಆಳುವ ಮನೆತನಗಳು ರೂಪುಗೊಂಡ ಹಾಗೇ ಆ ಕಾಲದ ರಾಜ್ಯ ವ್ಯವಸ್ಥೆಗೇ ವಿಶಿಷ್ಟವಾಗಿದ್ದ ಸಾಂಸ್ಕೃತಿಕ ಅಂಶಗಳೂ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ. ಅಂದರೆ ರಾಜ್ಯ ಎನ್ನುವುದು ಕೇವಲ ರಾಜಕೀಯ ವ್ಯವಸ್ಥೆಯಾಗಿರದೇ ಒಂದು ಸಾಂಸ್ಕೃತಿಕ ನಿರ್ಮಾಣವೂ ಆಗಿತ್ತು. ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಇಂಥ ಸಾಂಸ್ಕೃತಿಕ ಅಂಶಗಳನ್ನು ಪ್ರಾದೇಶಿಕ ಮಟ್ಟದ ಆಳ್ವಿಕೆಯಲ್ಲೂ ಅಂತರ್ಗತ ಮಾಡಿಕೊಳ್ಳುತ್ತ, ಪುನರುತ್ಪಾದಿಸುತ್ತ ಸ್ಥಾನಿಕ ಮನೆತನಗಳು ತಮ್ಮ ಪ್ರಭುತ್ವದ ಕಲ್ಪನೆಯನ್ನು ರೂಪಿಸಿಕೊಂಡವು. ಇಂಥ ಸಾಂಸ್ಕೃತಿಕ ಅಂಶಗಳಲ್ಲಿ ಕೆಲ ಸಾಮಾನ್ಯ ಅಂಶಗಳನ್ನು ಈ ಕೆಳಗಿನಂತೆ ಗುರುತಿಸಬಹುದು.

೧. ವಂಶಾವಳಿಯ ರಚನೆ

೨. ಶಾಸನ ಲೇಖನ

೩. ಪ್ರಾದೇಶಿಕ ಭೂಗೋಲವನ್ನು ಒಂದು ವ್ಯಾಪಕವಾದ ಸಾಂಸ್ಕೃತಿಕ ಭೂಗೋಲದಲ್ಲಿ ಗುರುತಿಸುವುದು.

೪. ಪ್ರಾದೇಶಿಕ ಸಮಾಜವನ್ನು ವರ್ಣ ಮತ್ತು ಜಾತಿ ಸಮಾಜ ಕಲ್ಪನೆಯಲ್ಲಿ ಗ್ರಹಿಸುವುದು.

೫. ಪ್ರಾದೇಶಿಕ ಪೂಜಾ ಸಂಪ್ರದಾಯಗಳ ಹಾಗೂ ದೇವತೆಗಳ ಸಂಸ್ಕೃತೀಕರಣ ಹಾಗೂ ಮತ ಧರ್ಮಗಳ ಸಂಘಟನೆಯೊಳಗೆ ಅವುಗಳನ್ನು ವ್ಯವಸ್ಥೆಗೊಳಿಸುವುದು.

೬. ಒಂದು ಶಾಸ್ತ್ರೀಯ ಕಲೆ ಮತ್ತು ವಾಸ್ತುಶಿಲ್ಪವನ್ನು ಆಯಾ ಪ್ರದೇಶದಲ್ಲಿ ಅಳವಡಿಸುವುದು.

ಈ ಮೇಲಿನ ಸಾಂಸ್ಕೃತಿಕ ಪ್ರಕ್ರಿಯೆ ಈ ಭಾಗದ ಎಲ್ಲಾ ಸ್ಥಾನಿಕ ಆಳ್ವಿಕೆಗಳಲ್ಲೂ ಒಂದೇ ರೀತಿ ಕಂಡುಬರುವುದಿಲ್ಲ. ಆಯಾ ಪ್ರದೇಶದ ಸಾಮಾಜಿಕ ವೈಶಿಷ್ಟ್ಯ ಹಾಗೂ ರಾಜ್ಯ ನಿರ್ಮಾಣದ ಸ್ವರೂಪವನ್ನು ಅನುಸರಿಸಿ ಈ ಮೇಲಿನ ಅಂಶಗಳು ವ್ಯತ್ಯಾಸವಾಗುತ್ತವೆ. ಹಾಗಾಗಿ ಈ ಮೇಲಿನ ಅಂಶಗಳನ್ನು ರಾಜ್ಯ ಸಂಸ್ಕೃತಿಯ ‘ಮಾದರಿಗಳು’ ಎಂದು ಗುರುತಿಸಿ ಈ ಮಾದರಿಯನ್ನು ನಿರ್ದಿಷ್ಟವಾಗಿ ಒಂದು ಆಳ್ವಿಕೆಯಲ್ಲಿ ಹೇಗೆ ಪುನರುತ್ಪಾದಿಸಲಾಯಿತು ಹಾಗೂ ಅದನ್ನು ಪ್ರಭಾವಿಸಿದ ಸ್ಥಾನಿಕ ವೈಶಿಷ್ಟ್ಯಗಳೇನು ಎಂದು ಗುರುತಿಸುತ್ತ ಅಧ್ಯಯನ ನಡೆಸಬೇಕಾಗುತ್ತದೆ.

ಈ ಮೇಲಿನ ಸಾಂಸ್ಕೃತಿಕ ಮಾದರಿಗಳು ಈ ಪ್ರದೇಶದ ಪ್ರಾರಂಭಿಕ ಮಧ್ಯಕಾಲದ ಅರಸೊತ್ತಿಗೆಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಅಂದರೆ ಈ ಮಾದರಿಗಳನ್ನು ತೀರ ವ್ಯವಸ್ಥಿತವಾಗಿ ತಮ್ಮ ಸಂದರ್ಭದಲ್ಲಿ ರಚಿಸಿಕೊಳ್ಳುವ ಪ್ರಕ್ರಿಯೆಯನ್ನು ಈ ಪ್ರಾರಂಭಿಕ ಮಧ್ಯಕಾಲದ ಸ್ಥಾನಿಕ ಆಳ್ವಿಕೆಗಳಲ್ಲಿ ಕಾಣುತ್ತೇವೆ. ವಿಜಯನಗರ ಪೂರ್ವದ ಸ್ಥಾನಿಕ ಪ್ರಭುತ್ವದ ನಿರ್ಮಾಣಕ್ಕೂ, ವಿಜಯನಗರೋತ್ತರ ಕಾಲದ ನಿರ್ಮಾಣಕ್ಕೂ ಮಧ್ಯೆ ಇರಬಹುದಾದ ರಾಜಕೀಯ ವ್ಯತ್ಯಾಸಗಳೂ ಇಲ್ಲಿ ಪ್ರಧಾನ ಪಾತ್ರ ವಹಿಸಿವೆ. ಹಾಗಾಗಿ ವಿಜಯನಗರೋತ್ತರದ ಪ್ರಭುತ್ವಗಳಲ್ಲಿ ಅಷ್ಟು ವ್ಯವಸ್ಥಿತವಾಗಿ ಈ ಮೇಲಿನ ಸಾಂಸ್ಕೃತಿಕ ಮಾದರಿಗಳ ನಿರ್ಮಾಣ ಕಂಡುಬರುವುದಿಲ್ಲ. ಉದಾಹರಣೆಗೆ ವಂಶಾವಳಿಯ ರಚನೆ, ಶಾಸನ ಲೇಖನ, ಸಾಂಸ್ಕೃತಿಕ ಭೂಗೋಲದ ಕಲ್ಪನೆ ಮುಂತಾದವುಗಳನ್ನು ನಾವು ವಿಜಯನಗರೋತ್ತರ ಪ್ರಭುತ್ವಗಳಲ್ಲಿ ವ್ಯವಸ್ಥಿತವಾಗಿ ಕಾಣುವುದಿಲ್ಲ. ಆದರೆ ಉಳಿದ ಸಾಂಸ್ಕೃತಿಕ ಅಂಶಗಳು ಇಡೀ ಮಧ್ಯಕಾಲದಲ್ಲೂ ರಾಜ್ಯ ಸಂಸ್ಕೃತಿಯ ಭಾಗಗಳಾಗಿ ಇದ್ದವು.

೧. ವಂಶಾವಳಿಯ ರಚನೆ

ಈ ಸ್ಥಾನಿಕ ವಂಶಗಳ ಮೊದಲಿನ ರಾಜರ ಹೆಸರುಗಳು ಅಚ್ಚ ಪ್ರಾದೇಶಿಕ ಹಿನ್ನೆಲೆಯವಾಗಿವೆ. ಕೆಲವೊಮ್ಮೆ ಕೊನೆಯವರೆಗೂ ಕೆಲ ಹೆಸರುಗಳು ಮುಂದುವರೆದುಕೊಂಡು ಬರುತ್ತವೆ. ಮಾಟೂರು ವಂಶದವರು ತಮ್ಮನ್ನು ಬ್ರಹ್ಮಕ್ಷತ್ರಿಯರೆಂದು ಗುರುತಿಸಿಕೊಂಡರೂ ದೋಶಿ, ಮಾಚಿ, ಅಲಯ್ಯ ಮುಂತಾದ ಹೆಸರುಗಳ ಜೊತೆಗೇ ಜಯಸಿಂಹ, ಸತ್ಯಾಶ್ರಯ ಮುಂತಾದವುಗಳ ಪ್ರಯೋಗವೂ ಕಂಡುಬರುತ್ತದೆ. ಅದರಂತೇ ಆಸಂದಿ ಅರಸರ ವೈಜರಸ, ನಾಕ, ಬರ್ಮ ಮುಂತಾದ ಹೆಸರುಗಳು, ಹಾರುವ ಬೆಲುಹೂರು ಕದಂಬರ ಜೂಜ, ದುದ್ದ ಎಂಬ ಹೆಸರುಗಳು, ಉದ್ರಿಯ ಅರಸರ ಎಕ್ಕಲ ಎಂಬ ಹೆಸರುಗಳ ಪ್ರಾಧಾನ್ಯತೆ ಮರೆಯಾಗುವುದಿಲ್ಲ. ಇದರ ಜೊತೆಗೇ ಈ ವಂಶಗಳು ತಮ್ಮ ಮೂಲವನ್ನು ಕರ್ನಾಟಕದ ಈ ಭಾಗದ ಸುಪ್ರಸಿದ್ಧ ಮನೆತನಗಳೊಂದಿಗೆ ಗುರುತಿಸಿಕೊಳ್ಳುತ್ತವೆ. ಉದ್ರಿಯ ಅರಸರು, ಆಸಂದಿಯ ಅರಸರು ಗಂಗರ ಮೂಲವನ್ನು ಗುರುತಿಸಿದರೆ, ಹಾರುವ ಬೆಲುಹೂರು, ಬಂದಳಿಕೆ ಮುಂತಾದ ಮನೆತನಗಳು ಕದಂಬರವರೆಗೆ ತಮ್ಮ ಮೂಲವನ್ನು ಗುರುತಿಸುತ್ತವೆ. ಈ ಮೂಲಕ ಸೂರ್ಯ, ಚಂದ್ರವಂಶಗಳಿಗೆ ತಮ್ಮ ಮೂಲವನ್ನು ಸೇರಿಸುತ್ತಾರೆ. ಮಲೆನಾಡಿನ ಮೂಲೆಯಲ್ಲಿ ತಲೆಯೆತ್ತಿದ ಸಾಂತರರು ತಮ್ಮ ವಂಶಾವಳಿಯನ್ನು ಜೈನ ಪುರಾಣ ಪುರುಷ ಜಿನಸೇನನಿಂದ ಪ್ರಾರಂಭಿಸುತ್ತಾರೆ. ಆದರೆ ಈ ‘ಸಾಂತರ’ ಎಂಬ ಶಬ್ದ ಹಾಗೂ ವೀರ, ಬ್ರಹ್ಮ ಮುಂತಾದ ಹೆಸರುಗಳ ಕನ್ನಡ ರೂಪಗಳಾದ ಬೀರ, ಬೊಮ್ಮ ಮುಂತಾದವು ಈ ಮನೆತನದ ಪ್ರಾದೇಶಿಕ ರೂಪವನ್ನು ಪ್ರಕಟಪಡಿಸುತ್ತವೆ. ಹೊಸಗುಂದದ ಅರಸರು ತಮ್ಮದೇ ಆದ ಬೀರ, ಬೊಮ್ಮ ಎಂಬ ಹೆಸರುಗಳನ್ನು ತಮ್ಮ ಆಳ್ವಿಕೆಯ ಅಂತ್ಯಭಾಗದಲ್ಲಿ ಒಂದು ವಂಶಾವಳಿಯಲ್ಲಿ ಸಂಸ್ಕೃತೀಕರಿಸಿ ಇಡುವ ಪ್ರಯತ್ನವನ್ನು ಮಾಡಿದರೂ ಅದು ಫಲಿಸಲಿಲ್ಲ.

ಈ ರಾಜರು ತಾವು ‘ಕ್ಷತ್ರಿಯರು’ ಎಂದು ಗುರುತಿಸಿಕೊಳ್ಳುವುದನ್ನು ಕೆಲ ಸಂದರ್ಭಗಳಲ್ಲಿ ಗಮನಿಸಬಹುದು. ಸುಪ್ರಸಿದ್ಧ ಆಳುವ ವಂಶಗಳ ಜೊತೆ ವಂಶಾವಳಿಯನ್ನು ಜೋಡಿಸಿಕೊಳ್ಳಲಿಕ್ಕೆ ಆಗದ ಮಾಟೂರು ವಂಶದವರು ತಮ್ಮನ್ನು ‘ಬ್ರಹ್ಮಕ್ಷತ್ರಿಯರು’ ಹಾಗೂ ಅಹಿಚ್ಚತ್ರದಿಂದ ಬಂದವರು ಎಂದು ಕರೆದುಕೊಳ್ಳುತ್ತಾರೆ. ಅದೇ ರೀತಿ ಕೊಂಗಾಳ್ವರು ಕೂಡ ‘ಕ್ಷತ್ರಿಯ ಶಿಖಾಮಣಿ’ಗಳೆಂಬ ಬಿರುದು ಧರಿಸುತ್ತಾರೆ.

ವಿಜಯನಗರೋತ್ತರ ಆಳ್ವಿಕೆಗಳಲ್ಲಿ ಗುತ್ತಿ, ಅರಗ ಮುಂತಾದವು ಆಡಳಿತ ಕೇಂದ್ರಗಳಾಗಿದ್ದು ಅವು ಅರಸು ಮೆನತನದ ಆಳ್ವಿಕೆಗಳಾಗಿರಲಿಲ್ಲ. ಆದರೆ ತರೀಕೆರೆ ನಾಯಕರು ಆಳುವ ವಂಶವಾಗಿದ್ದು ‘ಅಮರ ಮಾಗಣೆ’ ವ್ಯವಸ್ಥೆಯಿಂದ ಗುರುತಿಸಲ್ಪಟ್ಟವರಾಗಿದ್ದರು. ಆ ಕಾಲದ ಅರಸು ವಂಶಗಳಿಗೆ ಸಂಸ್ಕೃತ ಪುರಾಣ ಮೂಲಗಳಿಗಿಂತ, ಕೆಲ ಪ್ರಾದೇಶಿಕ ಜಾನಪದ ಮಾದರಿಗಳು ಪ್ರಧಾನವಾಗುತ್ತವೆ. ವಿಜಯನಗರ ರಾಜರ ಮಾನ್ಯತೆ ಇವರ ವಂಶ ಕಥನದಲ್ಲಿ ತೀರ ನಿರ್ಣಾಯಕವಾಗಿದ್ದು, ಈ ಕಾಲದ ನಾಯಕ ವಂಶಾವಳಿಗಳಲ್ಲಿ ಈ ಮೇಲಿನ ಅಂಶಗಳು ಪ್ರಾಧಾನ್ಯತೆ ವಹಿಸುವುದನ್ನು ಸಾಮಾನ್ಯವಾಗಿ ಕಾಣಬಹುದು.

೨. ಶಾಸನ ಲೇಖನ

ಶಾಸನಗಳು ದಾನ, ವೀರತ್ವ ಮುಂತಾದ ವಿಷಯಗಳ ದಾಖಲೆಗಳಾದರೂ, ಅವುಗಳು ಒಂದು ಪ್ರಭುತ್ವ ಕಲ್ಪನೆಯನ್ನು ನಿರ್ಮಿಸಿಕೊಡುವಲ್ಲಿ ಮಹತ್ವದ ಪಾತ್ರವಹಿಸಿದ್ದವು. ಒಂದು ವಿಶ್ವಾತ್ಮಕವಾದ ಪ್ರಭುತ್ವ ಕಲ್ಪನೆಯನ್ನು ಪ್ರಾದೇಶಿಕ ಸಂದರ್ಭಕ್ಕೆ ಅವು ನೀಡುತ್ತವೆ. ಅವುಗಳಲ್ಲಿ ಚಕ್ರವರ್ತಿಯಿಂದ, ಈ ಸ್ಥಾನಿಕ ಆಳರಸರ ಮನೆತನದವರೆಗಿನ ಶ್ರೇಣೀಕರಣ, ಬಿರುದು ಬಾವಲಿಗಳು, ಲಾಂಛನಗಳು, ಆಳುವ ಸೀಮೆ, ರಾಜರ ಶ್ರೇಷ್ಟ ಗುಣಗಳು ಮುಂತಾದ ವಿವರಗಳು ಮಾರ್ಗ ಸಂಪ್ರದಾಯದ ಕಲ್ಪನೆಯ ಪ್ರಕಾರ ಇರುತ್ತವೆ. ಈ ರೀತಿ ಈ ಶಾಸನಗಳು ಆಯಾ ರಾಜ ಮನೆತನಗಳನ್ನು ಪ್ರಭುತ್ವದ ಸಂದರ್ಭದಲ್ಲಿ ಇಟ್ಟು ಅವುಗಳ ಮಾನ್ಯತೆಯನ್ನು ಸಾರುತ್ತವೆ. ಈ ಶಾಸನಗಳನ್ನು ಆ ಕಾಲದ ಮಾರ್ಗ ಕಾವ್ಯದಲ್ಲಿ ಪರಿಣತರಾದ ಕವಿಗಳು, ಪಂಡಿತರು ರಚಿಸುತ್ತಿದ್ದರು.

೩. ಸಾಂಸ್ಕೃತಿಕ ಭೂಗೋಲದ ರಚನೆ

ಮಧ್ಯಕಾಲೀನ ಭಾರತದಲ್ಲಿ ವಿವಿಧ ಪುರಾಣಗಳು ಹಾಗೂ ಕಾವ್ಯಗಳು ಪುರಾಣ ಪುರುಷರನ್ನೂ, ಘಟನೆಗಳನ್ನೂ ಭೂಗೋಲದ ಜೊತೆಗೆ ಹೆಣೆದು ಒಂದು ಸಾಂಸ್ಕೃತಿಕ ಭೂಗೋಲವನ್ನು ರಚಿಸಿದವು. ಅದೇ ರೀತಿ ಈ ಪ್ರಾದೇಶಿಕ ಆಳುವ ಮನೆತನಗಳೂ ತಾವು ಆಳುವ ಭಾಗಗಳನ್ನು ಪುರಾಣ ಕಲ್ಪನೆಗಳ ಜೊತೆಗೆ ಹೊಂದಿಸಿಕೊಂಡರು. ಸಾಂತರರು ಹೊಂಬುಚವನ್ನು ‘ಉತ್ತರ ಮಧುರೆ’ ಎಂದು ಗುರುತಿಸಿದ್ದರೆ, ಹಾರುವ ಬೆಲುಹೂರ ಕದಂಬರು ‘ಬನವಾಸಿ’ ಎಂಬ ಸ್ಥಳ ನಾಮವನ್ನು ನಮ್ಮ ಸ್ಥಳಕ್ಕೆ ಹೊಂದಿಸಿಕೊಂಡರು. ಇನ್ನೂ ಹಲವು ಸಂದರ್ಭಗಳಲ್ಲಿ ಸ್ಥಾನಿಕ ಸ್ಥಳನಾಮವನ್ನು ಸಂಸ್ಕೃತೀಕರಿಸಿ ಬಾಂಧವಪುರ (ಬಂದಳಿಕೆ), ಉದ್ಧರೆ (ಉದ್ರಿ) ಪೊಂಬುರ್ಚ (ಹೊಂಬುಚ) ಬೆಳಗುವರ್ತಿ (ಬೆಳಗುತ್ತಿ) ಮುಂತಾಗಿ ಪರಿವರ್ತಿಸಿದ್ದನ್ನು ನೋಡಬಹುದು. ಉದ್ರಿ, ಬಂದಳಿಕೆ ಮುಂತಾದ ಮನೆತನಗಳ ಶಾಸನಗಳಲ್ಲಿ ಆಯಾ ಪ್ರದೇಶಗಳನ್ನು ಕುಂತಳ ಹಾಗೂ ಬನವಾಸಿ ದೇಶಗಳಲ್ಲಿ ಗುರುತಿಸಿ, ತೀರ ಕಾವ್ಯಮಯವಾದ ಉತ್ಪ್ರೇಕ್ಷೆಯಿಂದ ಭೌಗೋಲಿಕ ವರ್ಣನೆಯನ್ನು ನೀಡಿರುವುದನ್ನು ಕಾಣಬಹುದು.

೪. ವರ್ಣ ಸಮಾಜದ ಕಲ್ಪನೆ

ಪ್ರಾರಂಭಿಕ ಮಧ್ಯಕಾಲದ ಶಾಸನಗಳಲ್ಲಿ ಈ ಪ್ರದೇಶದ ವಿವಿಧ ನಗರ ಮತ್ತು ಕೃಷಿ ಸಮಾಜಗಳ ಜಾತಿ ವ್ಯವಸ್ಥೆಯ ರಚನೆಯ ಕುರಿತು ಅಷ್ಟಾಗಿ ತಿಳಿದು ಬರುವುದಿಲ್ಲ. ಆದರೆ ಈ ಕಾಲದಲ್ಲಿ ವ್ಯಾಪಕವಾದ ಅಗ್ರಹಾರ ದಾನಗಳು ಕಂಡುಬರುತ್ತವೆ. ಈ ದಾನಗಳನ್ನು ಸ್ಥಾನಿಕ ಅರಸು ಮನೆತನಗಳು ನೀಡಿದ ಉದಾಹರಣೆಗಳಿವೆ. ಬಹುಶಃ ಈ ಸ್ಥಾನಿಕ ಮನೆತನಗಳ ಉಗಮಕ್ಕೂ ಪೂರ್ವಭಾವಿಯಾಗಿ ಈ ಪ್ರದೇಶದಲ್ಲಿ ಬ್ರಾಹ್ಮಣರನ್ನು ನೆಲೆಗೊಳಿಸುವ ಪ್ರಕ್ರಿಯೆಯ ಶಾತವಾಹನ ಕಾಲದಿಂದಲೂ ನಡೆದುಬಂದಿದೆ. ೧೦-೧೧ನೇ ಶತಮಾನದ ನಂತರ ಈ ಪ್ರದೇಶದಲ್ಲಿ ಮೂರ್ತಿಪೂಜೆಯನ್ನಾಧರಿಸಿದ ಆಗಮಿಕ ಬ್ರಾಹ್ಮಣ ಸಂಸ್ಕೃತಿಯ ಪೋಷಣೆ ವ್ಯಾಪಕವಾಗಿ ನಡೆಯಿತು. ಬಂದಳಿಕೆ, ಉದ್ರಿ, ಹೆಚ್ಚೆ, ಸಾಂತರ, ಹಾರುವ ಬೆಲುಹೂರು ಕದಂಬರು ಮುಂತಾದ ಅರಸು ಮನೆತನಗಳು ಅಗ್ರಹಾರಗಳ ದಾನ ಹಾಗೂ ಪೋಷಣೆಯನ್ನು ನಡೆಸಿಕೊಂಡು ಬಂದವು.

ಈ ಕಾಲದಲ್ಲಿ ಬ್ರಾಹ್ಮಣ ವರ್ಣದ ನಿರ್ಮಾಣ ಅಗ್ರಹಾರಗಳ ಸೀಮೆಯನ್ನು ದಾಟಿ ವ್ಯಾಪಿಸಿತು. ಉದಾಹರಣೆಗೆ ಈ ಕಾಲದ ದೇವಾಲಯ ಸಂಸ್ಕೃತಿಯಲ್ಲಿ ಈ ಬ್ರಾಹ್ಮಣಿಕೆ ಬೇರೂರಿತು. ಹಾಗಾಗಿ ಮೂಲತಃ ಕಾಳಾಮುಖ ಶೈವರಿಂದ ಪೂಜೆಗೊಳಪಟ್ಟ ಶೈವ ದೇವಾಲಯಗಳು ಬ್ರಾಹ್ಮಣ ಆಗಮಿಕ ಪೂಜೆ ಹಾಗೂ ಶಿಕ್ಷಣವನ್ನು ಪೋಷಿಸಿದವು. ಈ ಕಾಲದ ಜೈನರಲ್ಲೂ ಬ್ರಾಹ್ಮಣ ವರ್ಣ ಬೆಳೆದು ಬಂದಿತು. ಕುಪ್ಪಟೂರಿನಲ್ಲಿ ‘ಬ್ರಹ್ಮ ಜಿನಾಲಯ’ ಅಸ್ತಿತ್ವದಲ್ಲಿ ಬಂದಿತು ಹಾಗೂ ಬಂದಳಿಕೆಯ ಜೈನ ಶಾಸನಗಳಲ್ಲಿ ‘ಚಾತುರ್ವರ್ಣ ಶ್ರಮಣ ಸಂಘ’ಗಳ ಉಲ್ಲೇಖ ಬರುತ್ತದೆ. ಹಾಗಾಗಿ ಒಂದು ಹೊಸ ರೀತಿಯ ‘ಬ್ರಾಹ್ಮಣ’ ವರ್ಣ ಇಲ್ಲಿ ಆಕಾರ ತಳೆದ ಸೂಚನೆಗಳು ಶಾಸನಗಳಲ್ಲಿ ವ್ಯಕ್ತವಾಗುತ್ತವೆ.

ಅದೇ ರೀತಿ ಈ ಸ್ಥಾನಿಕ ಆಳುವ ಮನೆತನಗಳು ತಮ್ಮ ವಂಶಾವಳಿಯನ್ನು ಕಟ್ಟಿಕೊಳ್ಳುತ್ತ ತಮ್ಮನ್ನು ಕ್ಷತ್ರಿಯರೆಂದು ಗುರುತಿಸಿಕೊಳ್ಳುವುದನ್ನೂ ಮಾಟೂರು, ಕೊಂಗಾಳ್ವ ಮುಂತಾದ ಅರಸರಿಗೆ ಸಂಬಂಧಿಸಿದಂತೆ ಕಾಣಬಹುದು. ಮಾಟೂರು ವಂಶದ ಅರಸರು ‘ಬ್ರಹ್ಮಕ್ಷತ್ರಿಯ’ರೆಂದು ಕರೆದುಕೊಳ್ಳುವುದರ ಮೂಲಕ ತಾವು ಮೂಲತಃ ಬ್ರಾಹ್ಮಣರಾಗಿದ್ದು ‘ಕ್ಷತ್ರಿಯ’ ವೃತ್ತಿಯನ್ನು ಆಧರಿಸಿದ ವಿಷಯವನ್ನು ಸಾರಿಕೊಳ್ಳುತ್ತಾರೆ.

ಈ ಕಾಲದ ವ್ಯಾಪಾರವನ್ನು ಆಧರಿಸಿದ ವಣಿಕ ಸಮಾಜದವರೂ ‘ವೈಶ್ಯ’ ಎಂಬ ಚೌಕಟ್ಟಿನೊಳಗೆ ಕೆಲವೊಮ್ಮೆ ಗುರುತಿಸಿಕೊಳ್ಳುತ್ತಾರೆ. ಈ ಕುರಿತು ಆಳವಾದ ಅಧ್ಯಯನ ನಡೆದಾಗ ಇನ್ನೂ ಸ್ಪಷ್ಟ ಗ್ರಹಿಕೆ ಸಾಧ್ಯವಾಗಬಹುದಾದರೂ ದೇವಾಲಯದ ‘ಆಗಮಿಕ ಬ್ರಾಹ್ಮಣ’ ಸಂಸ್ಕೃತಿಯ ಜೊತೆಗೇ ವರ್ಣಕಲ್ಪನೆ ರಾಜ್ಯ ಸಂಸ್ಕೃತಿಯ ಒಂದು ಲಕ್ಷಣವಾಗಿ ಬೆಳೆದು ಬಂದಿರುವುದರಲ್ಲಿ ಸಂಶಯವಿಲ್ಲ.

ಆದರೆ ವರ್ಣಕಲ್ಪನೆಯನ್ನು ತೀರ ಸರಳವಾಗಿ ನಾವು ಈ ಪ್ರಾದೇಶಿಕ ಸಮಾಜಗಳಿಗೆ ಹೊಂದಿಸುವಂತೆಯೂ ಇಲ್ಲ. ಉದಾಹರಣೆಗೆ ಈ ಕಾಲದಲ್ಲಿ ನಿರ್ಮಾಣವಾದ ವಿಭಿನ್ನ ಜಾತಿಗಳೆಲ್ಲವನ್ನೂ ಕಡ್ಡಾಯವಾಗಿ ನಾಲ್ಕು ವರ್ಣಗಳ ವ್ಯವಸ್ಥೆಯಲ್ಲಿ ಗುರುತಿಸಲಾಗಿತ್ತೆ ಎಂಬುದು ಸಂಶಯಾಸ್ಪದ. ಜೊತೆಗೇ ಆಳ್ವಿಕೆಯ ಮಾನ್ಯತೆಗೆ ‘ವರ್ಣ ಕಲ್ಪನೆ’ ಎಷ್ಟು ಅನಿವಾರ್ಯವಾಗಿತ್ತು ಎಂಬುದೂ ತಿಳಿದು ಬರುವುದಿಲ್ಲ. ಹೊಸಗುಂದದ ಅರಸರು ಅಗ್ರಹಾರಗಳ ದಾನಗಳನ್ನು ಮಾಡಲಿಲ್ಲ ಮಾತ್ರವಲ್ಲ, ಒಂದು ಅಗ್ರಹಾರದ ಮೇಲೆ ದಾಳಿ ನಡೆಸಿದ್ದ ಉಲ್ಲೇಖವೂ ಇದೆ. ಅದೇ ರೀತಿ ಈ ಕಾಲದ ಸ್ಥಾನಿಕ ಅರಸರು ಅಗ್ರಹಾರಗಳ ಮೇಲೆ ದಾಳಿ ನಡೆಸಿದ ಇನ್ನೂ ಕೆಲ ಉದಾಹರಣೆಗಳೂ ಇವೆ.

ಈ ಕಾಲದಲ್ಲಿ ಪ್ರಾಬಲ್ಯ ಹಾಗೂ ಪ್ರತಿಷ್ಠೆಯನ್ನು ಗಳಿಸುತ್ತಿದ್ದ ಅನೇಕ ಪ್ರಾದೇಶಿಕ ಜಾತಿಗಳು ಸಂಸ್ಕೃತದ ಪುರಾಣ ಹಾಗೂ ಧರ್ಮಶಾಸ್ತ್ರಗಳ ಸುಪ್ರಸಿದ್ಧ ಜಾತಿಗಳ ಜೊತೆ ತಮ್ಮನ್ನು ಗುರುತಿಸಿಕೊಳ್ಳುವ ಪ್ರಕ್ರಿಯೆ ಶಾಸನಗಳಲ್ಲಿ ಸ್ಪಷ್ಟವಾಗೇ ಕಾಣಿಸುತ್ತದೆ. ಉದಾಹರಣೆಗೆ ಇಲ್ಲಿನ ಭಿಲ್ಲರು ತಾವು ‘ಕಿರಾತಾನ್ವಯರು’, ‘ದ್ರೋಣನ ಶಿಷ್ಯರು’ (ಏಕಲವ್ಯನ ಕುಲದವರು) ಎಂದು ಸಾರಿಕೊಳ್ಳುತ್ತಾರೆ. ಅದೇ ರೀತಿ ಸಂತೆಬೆನ್ನೂರಿನ ನಾಯಕರು ‘ವಾಲ್ಮೀಕಿ ವರ್ಣಾಶ್ರಮ ಭಾಸ್ಕರ’ ಎಂದು ತಮ್ಮ ‘ಬೇಡ’ ಕುಲವನ್ನು ‘ವಾಲ್ಮೀಕಿ ವರ್ಣ’ಕ್ಕೆ ಗುರುತಿಸಿಕೊಂಡಿದ್ದರು. ಈ ಉದಾಹರಣೆಗಳು ಸೂಚಿಸುವಂತೆ ಪ್ರಾದೇಶಿಕ ಜಾತಿಯೊಂದು ಈ ಪೌರಾಣಿಕ ವರ್ಣ/ಜಾತಿಗಳ ಜೊತೆ ಗುರುತಿಸಿಕೊಳ್ಳುವುದನ್ನು ತಮ್ಮ ಹೆಗ್ಗಳಿಕೆಯನ್ನಾಗಿ ಭಾವಿಸಿದ್ದವು. ಹಾಗೂ ತಮ್ಮ ಶೂದ್ರತ್ವವನ್ನು ಮೀರಿ ಸುಪ್ರಸಿದ್ಧರಾದ ಪೌರಾಣಿಕ ವ್ಯಕ್ತಿಗಳನ್ನು ಇವರು ಆಯ್ಕೆ ಮಾಡಿಕೊಂಡದ್ದೂ ಗಮನಾರ್ಹ.

೫. ಪೂಜಾ ಸಂಪ್ರದಾಯಗಳ ಸಂಸ್ಕೃತೀಕರಣ ಹಾಗೂ ಮತ ಧರ್ಮಗಳ ಪೋಷಣೆ

ಈಗಾಗಲೇ ಉಲ್ಲೇಖಿಸಿದಂತೆ ಮಧ್ಯಕಾಲದಲ್ಲಿ ಪೂಜಾ ಸಂಪ್ರದಾಯಗಳು ಹಾಗೂ ಅವುಗಳನ್ನು ಅಳವಡಿಸಿಕೊಂಡ ವಿಭಿನ್ನ ಮತಪಂಥಗಳು ರಾಜ್ಯ ಸಂಸ್ಕೃತಿಯಲ್ಲಿ ತೀರ ನಿರ್ಣಾಯಕ ಪಾತ್ರವನ್ನು ವಹಿಸಿದವು. ಪ್ರಾರಂಭಿಕ ಮಧ್ಯಕಾಲದಲ್ಲಿ ಶೈವ ಸಂಪ್ರದಾಯ ಹಾಗೂ ಜೈನ ಮತಗಳು ಪ್ರಧಾನವಾಗಿದ್ದವು. ಕೊಂಗಾಳ್ವರು, ಹಾಗೂ ಸಾಂತರರು ಜೈನ ಮತಕ್ಕೇ ಹೆಚ್ಚಿನ ಪೋಷಣೆ ನೀಡಿದ್ದರೂ ಬಂದಳಿಕೆ, ಉದ್ರಿ, ಹೆಚ್ಚೆ ಮುಂತಾದ ಅರಸರು ಶೈವ ಕಾಳಾಮುಖ ಸಂಪ್ರದಾಯದ ದೇವಾಲಯಗಳಿಗೆ ಆಶ್ರಯ ನೀಡಿದರು. ಈ ಅರಸರಲ್ಲದೇ ಇದಕ್ಕೂ ಹೊರತಾಗಿ ಆಳುವ ವರ್ಗದವರು ಹಾಗೂ ಪ್ರತಿಷ್ಠಿತರು ತಮ್ಮ ಸಂಸ್ಕೃತಿಯ ಒಂದು ಅಂಗವಾಗಿ ಇಂಥ ಆಶ್ರಯಗಳನ್ನು ನೀಡಿದರು. ಉದ್ರಿಯ ಅರಸು ಮನೆತನದ ಸ್ತ್ರೀಯರು, ಬಂದಳಿಕೆ ಅರಸರ ಸಾಮಂತ ವಂಶದವರು ಜೈನ ಮತವನ್ನು ಪೋಷಿಸಿದ್ದರು. ಹೀಗೆ ಶೈವ-ಶೈವ ದೇವಾಲಯಗಳ ಪೋಷಣೆಯನ್ನು ಸಾಮಾನ್ಯವಾಗಿ ಈ ಕಾಲದ ಆಳುವ ವರ್ಗದವರು ಮಾಡಿದ್ದು ಕಂಡುಬರುತ್ತದೆ.

ಈ ಎರಡೂ ಮತಗಳೂ ಭಕ್ತಿ ಮತ್ತು ಪೂಜೆಯ ಸಂಪ್ರದಾಯಗಳಾಗಿಯೇ ಮಹತ್ವ ಗಳಿಸಿದ್ದವು. ಜೈನರು ಪೂಜಾ ಸಂಸ್ಕೃತಿಯಲ್ಲಿ ಶ್ರದ್ಧೆ ಹೊಂದಿದ ಜನರನ್ನು ತಮ್ಮ ಯಕ್ಷ – ಯಕ್ಷಿಣಿ ಕಲ್ಪನೆಯಿಂದ ಒಳಗೊಂಡರು. ಜೊತೆಗೇ ಈ ಕಾಲದ ಜೈನ ಮುನಿಗಳು ಮಂತ್ರ, ತಂತ್ರ, ಯಂತ್ರ ಹಾಗೂ ಬೇರು-ನಾರುಗಳ ಮೂಲಕ ರೋಗಗಳಿಗೆ, ಮನೋವಿಕಾರಗಳಿಗೆ ಚಿಕಿತ್ಸೆ ನಡೆಸಿ ಭೂತ-ಪ್ರೇತ ಮುಂತಾದ ಶಕ್ತಿಗಳನ್ನು ಉಚ್ಛಾಟಿಸುವವರಾಗಿ ಜನಸಾಮಾನ್ಯರಲ್ಲಿ ಮಹತ್ವಗಳಿಸಿದ್ದುದು ಶಾಸನಗಳಿಂದ ತಿಳಿದು ಬರುತ್ತದೆ. ಪ್ರಾದೇಶಿಕ ಮಾತೃದೇವತಾರಾಧನೆಯನ್ನು ಜೈನರು ‘ಯಕ್ಷಿಣಿ’ ಪೂಜೆಯಿಂದ ಒಳಗೊಂಡಿದ್ದು ಬಹುಶಃ ನಿರ್ಣಾಯಕವಾಯಿತು. ಹೊಂಬುಚದ ಹಾಗೂ ಅಂಗಡಿಯ ಜೈನ ನೆಲೆಗಳು ‘ಪದ್ಮಾವತಿ’ ದೇವಿಯಿಂದಾಗಿ ಮಹತ್ವ ಗಳಿಸಿದ್ದವು.

ಈ ಕಾಲದ ಶೈವ ಸಂಪ್ರದಾಯವು ಈ ಕಾಲದ ರಾಜ್ಯದಲ್ಲಿ ಹಾಗೂ ೧೧-೧೨ನೇ ಶತಮಾನದ ನಗರೀಕರಣ ಪ್ರಕ್ರಿಯೆಯಲ್ಲಿ ಪ್ರತಿಷ್ಠಿತ ವರ್ಗವಾಗಿ ತಲೆ ಎತ್ತುತ್ತಿದ್ದ ಅನೇಕ ಪ್ರಾದೇಶಿಕ ಜಾತಿಗಳಿಗೆ ಒಂದು ಧಾರ್ಮಿಕ ಪ್ರತಿಷ್ಠೆಯನ್ನೂ ಒದಗಿಸಿತು. ಬೇರೆ ಬೇರೆ ವೃತ್ತಿ ಸಮೂಹಗಳು, ವ್ಯಕ್ತಿಗಳು ತಮ್ಮ ದೇವತೆಗಳನ್ನು ಶಿವನೊಂದಿಗೆ ಗುರುತಿಸಿ, ತಮ್ಮ ಜಾತಿಯ ಅಥವಾ ವ್ಯಕ್ತಿಗತ ಹೆಸರುಗಳನ್ನು ಶಿವನಿಗೆ ನೀಡಿ ದೇವಾಲಯಗಳನ್ನು ಕಟ್ಟಿಸುವ ಪ್ರಕ್ರಿಯೆಯನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಈ ಪ್ರಕ್ರಿಯೆಯಲ್ಲಿ ಸ್ಥಾನಿಕ ಸಮಾಜದ ದೇವತೆಗಳು ಸಂಸ್ಕೃತೀಕೃತವಾಗಿ, ಶಿವರೂಪವನ್ನು ಧರಿಸಿ, ಆಗಮಶಾಸ್ತ್ರೀಯ ಸಂಸ್ಕೃತಿಯ ತೆಕ್ಕೆಯೊಳಗೆ ಬಂದವು. ಹೀಗೆ ನಾವು ಬಿಲ್ಲೇಶ್ವರ, ಕಮ್ಮಟೇಶ್ವರ, ತೆಲ್ಲಿಗೇಶ್ವರ, ನಖರೇಶ್ವರ, ಗವರೇಶ್ವರ, ಬಂಟೇಶ್ವರ ಮುಂತಾದ ವೃತ್ತಿ ಹಿನ್ನೆಲೆಯ ದೇವತೆಗಳನ್ನು ಕಾಣುತ್ತೇವೆ. ಬೊಜ್ಜ, ಬೊಮ್ಮ, ಆಲ, ಗುಂಡ, ಮಂಜ, ಕೇತ, ಮಾಚ ಮುಂತಾದ ಪ್ರಾದೇಶಿಕ ಕನ್ನಡ ಹೆಸರುಗಳ ಈಶ್ವರ ದೇವತೆಗಳೂ ಪ್ರಸಿದ್ಧಿಗೆ ಬಂದವು. ಇಂಥ ದೇವಾಲಯಗಳು ಕಾಳಾಮುಖ ಶೈವ ಪಂಥದ ಮಠದ ಸಂಘಟನೆಯೊಳಗಡೆ ತರಲ್ಪಟ್ಟವು. ಒಂದು ವ್ಯಾಪಕವಾದ ಶೈವ ಸಿದ್ಧಾಂತ ಮತ್ತು ಶೈವಾಗಮ ಸಂಪ್ರದಾಯವು ಕಾಳಾಮುಖರು ಹಾಗೂ ಶೈವ ಬ್ರಾಹ್ಮಣರ ಮೂಲಕ ಈ ಪ್ರದೇಶದಲ್ಲಿಯೂ ರೂಢವಾಯಿತು.

ದೇವಾಲಯಗಳು ಈ ಕಾಲದ ವಸತಿನೆಲೆಗಳಲ್ಲಿ ತೀರ ಅತ್ಯಗತ್ಯವಾದ ಸಾಂಸ್ಕೃತಿಕ ಅಂಶಗಳಾಗಿದ್ದವು. ಅದರಲ್ಲೂ ಈ ಪ್ರಾದೇಶಿಕ ಅರಸು ಮನೆತನಗಳು ನೆಲೆಯೂರಿದ ರಾಜಧಾನಿಗಳಲ್ಲಿ ಕಲ್ಲಿನಲ್ಲಿ ಕಟ್ಟಿಸಿದ ದೇವಾಲಯಗಳು ಹಾಗೂ ಅವುಗಳ ದಾನ ಶಾಸನಗಳು ಪ್ರಭುತ್ವದ ಒಂದು ಲಕ್ಷಣವೊ ಎಂಬಂತೇ ಕಾಣಿಸಿಕೊಳ್ಳುತ್ತವೆ. ಅವುಗಳನ್ನು ರಾಜರೇ ಕಟ್ಟಿಸಬೇಕೆಂದಿಲ್ಲ. ಆದರೆ ಈ ಆಳುವ ಮನೆತನಗಳು ನೆಲೆಯೂರಿದ ಸ್ಥಲದಲ್ಲಿ ಇವರಿಂದಲೇ ಅವುಗಳಿಗೆ ದಾನ ಹಾಗೂ ಪೋಷಣೆ ಸಿಗುತ್ತಿದ್ದವು. ಇಂಥ ದೇವಾಲಯಗಳ ಶಾಸನಗಳಲ್ಲಿಯೇ ಈ ಸ್ಥಾನಿಕ ಆಳುವ ಮನೆತನಗಳ ಕುರಿತಾದ ಐತಿಹಾಸಿಕ ವಿವರಗಳು ಸಿಗುತ್ತವೆ ಎಂಬುದು ಇಲ್ಲಿ ಮಹತ್ವದ ವಿಷಯ. ಬಂದಳಿಕೆಯಲ್ಲಿ ಒಂದು ಜೈನ ದೇವಾಲಯ ಮೂರು ತ್ರಿಕೂಟ ದೇವಾಲಯಗಳು ನಾಲ್ಕು ಇತರ ಶೈವ ಹಾಗೂ ಶಾಕ್ತ ದೇವಾಲಯಗಳು ಇದ್ದವು. ಉದ್ರಿಯಲ್ಲಿ ಮೂರು ಶಿವಾಲಯಗಳು, ಎರಡು ಜಿನಾಲಯಗಳು ಒಂದು ವೈಷ್ಣವ ಆಲಯ ನಿರ್ಮಾಣವಾದವು. ಹುಂಚದಲ್ಲಿ ನಾಲ್ಕು ಬಸದಿಗಳು ನಿರ್ಮಾಣವಾದವು. ಇವೆಲ್ಲಕ್ಕಿಂತ ಅಸಂದಿಯ ಒಂದು ಶಾಸನದ ಪ್ರಕಾರ ಇಲ್ಲಿ ೧೩ ದೇವಾಲಯಗಳು ಇದ್ದವು. ಈ ದೇವಾಲಯದ ದಾನದ ಕಾರ್ಯದಲ್ಲಿ ಸ್ಥಾನಿಕ ಆಳುವ ವರ್ಗದವರು ಹಾಗೂ ಈ ದೇವಾಲಯಗಳನ್ನು ಪ್ರತಿನಿಧಿಸುವ ಕಾಳಾಮುಖರು ಅಥವಾ ಜೈನ ಮುನಿಗಳು ಒಂದೆಡೆ ಸೇರುವ ಅವಕಾಶ ನಿರ್ಮಾಣವಾಗುತ್ತಿತ್ತು.

ವಿಜಯನಗರೋತ್ತರ ರಾಜ್ಯಗಳಲ್ಲಿ ಆಗಮ ಸಂಪ್ರದಾಯದ ಪ್ರಭಾವ ಇಷ್ಟು ಸ್ಪಷ್ಟವಾಗಿ ಕಾಣಿಸಿಕೊಳ್ಳುವುದಿಲ್ಲ. ಜೊತೆಗೇ ಪೂಜಾರಾಧನೆಯ ಸಂಪ್ರದಾಯಗಳಲ್ಲೂ ಸಾಕಷ್ಟು ಏಳುಬೀಳುಗಳು ಉಂಟಾಗಿದ್ದವು. ೧೪ನೇ ಶತಮಾನದ ನಂತರ ಶೈವ ಮತ್ತು ಜೈನ ಸಂಪ್ರದಾಯಗಳ ಸ್ಥಾನವನ್ನು ವೈಷ್ಣವ ಸಂಪ್ರದಾಯ ಆಕ್ರಮಿಸತೊಡಗಿತು. ಅದರಲ್ಲೂ ಶ್ರೀ ವೈಷ್ಣವ ಸಂಪ್ರದಾಯವು ವೆಂಕಟೇಶ್ವರ ಮತ್ತು ರಂಗನಾಥ ಎಂಬ ವಿಷ್ಣುವಿನ ಎರಡು ರೂಪಗಳ ಮೂಲಕ ಕರ್ನಾಟಕದ ಒಳನಾಡಿನಲ್ಲಿ ಪ್ರಚಲಿತದಲ್ಲಿ ಬಂದಿತು. ವಿಜಯನಗರ ಕಾಲದಲ್ಲಿ ಗುಡ್ಡಗಾಡಿನ ಬುಡಕಟ್ಟುಗಳ ಹಿನ್ನೆಲೆಯನ್ನು ಹೊಂದಿದ ನಾಯಕ ಮನೆತನಗಳು ಈ ಮೇಲಿನ ದೇವತೆಗಳನ್ನು ಪೂಜಿಸಿದ್ದು ಕಂಡುಬರುತ್ತದೆ. ಜೊತೆಗೇ ಹನುಮಂತನೂ ಒಂದು ಮಹತ್ವದ ದೇವತೆಯಾಗಿ ಮಾದ್ವ ಸಂಪ್ರದಾಯದಿಂದ ಪ್ರಸಿದ್ಧಿಗಳಿಸಿದನು. ತರೀಕೆರೆ ನಾಯಕರು ಇಂಥ ದೇವತೆಗಳನ್ನು ಕುಲದೈವಗಳನ್ನಾಗಿ ಪೂಜಿಸಿದ್ದು ಕಂಡುಬರುತ್ತದೆ. ಶೈವ ಸಂಪ್ರದಾಯವು ಈ ಕಾಲದಲ್ಲೂ ಮಲೆನಾಡಿನ ಭಾಗಗಳಲ್ಲಿ ಮುಂದುವರೆದುಕೊಂಡು ಬಂದಿದ್ದು ಕಂಡುಬರುತ್ತದೆ. ಆದರೆ ಆ ಕಾಲದಲ್ಲಿ ಪೂಜೆಗೊಳಪಟ್ಟ ಶೈವ ದೇವತೆಗಳು ಬೇರೆಯೇ ಆಗಿದ್ದವು. ಅವೆಂದರೆ ವೀರಭದ್ರ, ಮೈಲಾರ, ಮಲ್ಲಿಕಾರ್ಜುನ ಮುಂತಾದವು. ಮಲೆನಾಡಿನ ಭಾಗದಲ್ಲಿ ರಾಮೇಶ್ವರ ದೇವತೆ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿತ್ತು. ಜೈನ ಮತವು ದಟ್ಟ ಮಲೆನಾಡಿನ ಭಾಗದಲ್ಲಿನ ಆಳುವ ಮನೆತನಗಳಲ್ಲಿ ಈ ಕಾಲದಲ್ಲೂ ಪ್ರಾಮುಖ್ಯತೆ ಉಳಿಸಿಕೊಂಡಿತ್ತು.

ಸುಮಾರು ೧೩ನೇ ಶತಮಾನದಿಂದ ಈ ಪ್ರದೇಶದಲ್ಲಿ ವೀರಶೈವ ಸಂಪ್ರದಾಯವು ಪ್ರಸಾರವಾಯಿತು. ಹೊಸಗುಂದದ ಕೋಟಿನಾಯ್ಕನನ್ನು ಮಾಹೇಶ್ವರ ಗಣಾವತಾರ ಎಂದು ೧೩ನೇ ಶತಮಾನದ ಅಂತ್ಯಭಾಗದಲ್ಲಿನ ಶಾಸನವೊಂದರಲ್ಲಿ ಕರೆಯಲಾಗಿದೆ. ಅದಕ್ಕೂ ಸ್ವಲ್ಪ ಮೊದಲೇ ಕಲಿಸೆಯ ಅಳಿಯ ಬೀರರಸನು ಸೊನ್ನಲಿಗೆಯ ಅಭಿನವ ಕಪಿಲಸಿದ್ಧ ಮಲ್ಲಿಕಾರ್ಜುನ ದೇವರಿಗೆ ದಾನ ನೀಡಿದ ಉಲ್ಲೇಖವಿದೆ. ೧೬ನೇ ಶತಮಾನದ ನಂತರ ಕೆಳದಿ ಅರಸರು ಈ ವೀರಶೈವ ಸಂಪ್ರದಾಯವನ್ನು ವಿಶೇಷವಾಗಿ ಪೋಷಿಸಿದ್ದು ಕಂಡುಬರುತ್ತದೆ. ೧೫-೧೬ ನೇ ಶತಮಾನದ ನಂತರ ಈ ಬದಲಾವಣೆಯ ಜೊತೆಗೇ ವೀರಭದ್ರ ದೇವತೆಯೂ ಜನಪ್ರಿಯವಾಯಿತು. ಕೊಡಗಿನ ಹಾಲೇರಿ ವಂಶಸ್ಥರೂ ಕೂಡ ಈ ಸಂಪ್ರದಾಯದ ಹಿನ್ನೆಲೆಯವರಾಗಿದ್ದರು.

ಈ ಕಾಲದ ಹರಿದಾಸ ಸಂಪ್ರದಾಯವು ಮಲೆನಾಡಿನ ಮೂಲೆಯಾದ ಆರಗದಲ್ಲಿ ಪೋಷಣೆಗೊಳಪಟ್ಟಿದ್ದು ಮತ್ತೊಂದು ವಿಶೇಷವಾಗಿದೆ. ಈ ಸಂಬಂಧಿಸಿ ವಿಠಲ ಎಂಬ ದೇವತೆ ವೆಂಕಟೇಶ್ವರ ಹಾಗೂ ರಂಗನಾಥರೊಂದಿಗೆ ಮಹತ್ವಗಳಿಸಿತು. ವಿಠಲನಿಗೆ ಸಂಬಂಧಿಸಿ ಈ ಪ್ರದೇಶದಲ್ಲಿ ತೀರ ಪ್ರಾಚೀನ ಉಲ್ಲೇಖವು ತಾರೆ ಗ್ರಾಮದ ಹೊಸಗುಂದದ ಕೋಟಿನಾಯ್ಕನ ಶಾಸನದಲ್ಲಿ ಕಾಣಿಸಿಕೊಳ್ಳುತ್ತದೆ. ೧೬ನೇ ಶತಮಾನದ ಸುಮಾರಿಗೆ ಕರ್ನಾಟಕದ ಈ ಭಾಗಕ್ಕೂ ಆಂಧ್ರ ಹಾಗೂ ಮಹಾರಾಷ್ಟ್ರದ ಭಾಗಗಳಿಗೂ ಇದ್ದ ಸಾಂಸ್ಕೃತಿಕ ಸಂಬಂಧ ಆರಗದ ಹರಿದಾಸ ಪರಂಪರೆಯಲ್ಲಿ ವ್ಯಕ್ತವಾಗಿದೆ. ಪುರಂದರದಾಸರ ಊರಿಗೆ ಸಂಬಂಧಿಸಿ ಮಂಡಿಸಲಾಗುವ ವಾದ ವಿವಾದಗಳು ಏನೇ ಇರಲಿ, ಆರಗ ರಾಜ್ಯದಲ್ಲಿ ಹರಿದಾಸ ಪರಂಪರೆಗೆ ವಿಶೇಷ ಪೋಷಣೆ ಸಿಕ್ಕಿದ್ದಂತೂ ಹೌದು.

ಈ ರೀತಿ ಭಾರತದ ಉಪಖಂಡದ ಬೇರೆ ಬೇರೆ ಭಾಗಗಳ ಜೊತೆಗೆ ಈ ಪ್ರದೇಶವನ್ನು ಸಾಂಸ್ಕೃತಿಕವಾಗಿ ಜೋಡಿಸಿ ರಾಜ್ಯದ ಸಾಂಸ್ಕೃತಿಕ ಮಾದರಿಗಳನ್ನು ಪ್ರಾದೇಶಿಕ ಸಂದರ್ಭದಲ್ಲಿ ಪುನರುತ್ಪಾದಿಸುವಲ್ಲಿ ಮತಧರ್ಮಗಳು ಪ್ರಧಾನ ಪಾತ್ರವಹಿಸಿದ್ದು ಕಂಡುಬರುತ್ತದೆ.

೬. ದೇವಾಲಯ ವಾಸ್ತು ಮತ್ತು ಶಿಲ್ಪಕಲೆ

ಬಹುಶಃ ಈ ಮೇಲೆ ಚರ್ಚಿಸಲಾದ ಸಾಂಸ್ಕೃತಿಕ ಅಂಶಗಳ ಮೂರ್ತ ಅಭಿವ್ಯಕ್ತಿಗಳೆಂದರೆ ದೇವಾಲಯ ವಾಸ್ತು ಮತ್ತು ಶಿಲ್ಪಕಲೆಗಳು. ದೇವಾಲಯ ನಿರ್ಮಾಣ ಹಾಗೂ ಮೂರ್ತಿಗಳನ್ನು ರಚಿಸುವುದು ಆಗಮ ಪೂಜಾ ಸಂಪ್ರದಾಯದ ಒಂದು ಅಂಗವಾಗಿದೆ. ಈ ಕೆಲಸಗಳನ್ನು ಕಲ್ಕುಟಿಕರು, ಶಿಲ್ಪಿಗಳು, ರೂವಾರಿಗಳು ಮುಂತಾದ ವೃತ್ತಿಪರರೇ ನಡೆಸಿದರೂ, ಆಯಾ ಮತಪಂಥಗಳ ಆಗಮ ನಿರ್ದೇಶನ ಹಾಗೂ ಪರಿಕಲ್ಪನೆಯೂ ಅಷ್ಟೇ ನಿರ್ಣಾಯಕವಾಗಿ ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪಗಳನ್ನು ಪ್ರಭಾವಿಸಿದೆ. ಅದರಲ್ಲೂ ಪ್ರಾರಂಭಿಕ ಮಧ್ಯಕಾಲದಲ್ಲಿ ೧೧-೧೨ನೇ ಶತಮಾನದವರೆಗೆ ಈ ಆಗಮ ನಿರ್ದೇಶನ ತೀರ ಗಾಢವಾಗಿ ಕಾಣಿಸಿಕೊಳ್ಳುತ್ತದೆ. ಕಾಳಾಮುಖ ಹಾಗೂ ಜೈನ ಮುನಿಗಳು ಇಂಥ ವಾಸ್ತುಶಾಸ್ತ್ರ, ಮೂರ್ತಿಶಾಸ್ತ್ರಗಳ ಜ್ಞಾನವನ್ನು ಹೊಂದಿದ್ದು ಶಿಲ್ಪಿಗಳಿಗೆ ನಿರ್ದೇಶನವನ್ನು ನೀಡುತ್ತಿದ್ದರು. ಕ್ರಮೇಣವಾಗಿ ಶಿಲ್ಪಿಗಳು ಈ ಆಗಮಶಾಸ್ತ್ರವನ್ನು ಅಂತರ್ಗತ ಮಾಡಿಕೊಂಡು ಕರ್ನಾಟಕದ ವಾಸ್ತುಶೈಲಿಯೊಂದನ್ನು ರೂಪಿಸಿದರು. ಅದನ್ನು ಸ್ಥೂಲವಾಗಿ ಚಾಲುಕ್ಯ ಶೈಲಿ ೭ನೇ ಶತಮಾನದಿಂದ ೧೩ನೇ ಶತಮಾನದವರೆಗೂ ಕರ್ನಾಟಕದಲ್ಲಿ ಪ್ರಚಲಿತದಲ್ಲಿ ಇತ್ತು. ಈ ಶೈಲಿಯಲ್ಲೇ ೧೧-೧೨ನೇ ಶತಮಾನದಲ್ಲಿ ವಿಭಿನ್ನ ಪ್ರಾದೇಶಿಕ ರೂಪಗಳು ಆವಿಷ್ಕಾರವಾದವು. ಹೊಯ್ಸಳರ ಪ್ರದೇಶದಲ್ಲಿ ಇಂಥ ಒಂದು ವಿಶಿಷ್ಟ ಶೈಲಿಯನ್ನು ಕಾಣುತ್ತೇವೆ.

ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪ ಕಲೆಯು ಮಧ್ಯಕಾಲೀನ ರಾಜ್ಯ ನಿರ್ಮಾಣ ಹಾಗೂ ವಿಸ್ತರಣೆಯ ಒಂದು ಸೂಚಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಬಾದಾಮಿ ಚಾಲುಕ್ಯರ ಕಾಲದ ನಂತರ ಈ ಶೈಲಿಯಲ್ಲಿ ಆದ ಬೆಳವಣಿಗೆಗಳನ್ನೆಲ್ಲ ಮಲೆನಾಡಿನ ಭಾಗದಲ್ಲೂ ನೋಡಬಹುದು. ಕ್ರಿ.ಶ. ೮ನೇ ಶತಮಾನದ ಸುಮಾರಿಗೇ ಮಲೆನಾಡಿನ ಮೂಲೆಯಾದ ಹೊಂಬುಚದಲ್ಲಿ ಚಾಲುಕ್ಯ ಶೈಲಿ ಕಾಣಿಸಿಕೊಳ್ಳುತ್ತದೆ. ಕ್ರಿ.ಶ. ೧೦ನೇ ಶತಮಾನದ ಪ್ರಾರಂಭದಿಂದ ಈ ಶೈಲಿಯ ರಾಷ್ಟ್ರಕೂಟರ ಕಾಲದ ಬೆಳವಣಿಗೆಯನ್ನು ಅಂತಗರ್ತಮಾಡಿಕೊಂಡ ಸ್ಮಾರಕಗಳು ನಮಗೆ ಹೊಂಬುಚದಲ್ಲಿ ಸಿಗುತ್ತವೆ. ೧೧ನೇ ಶತಮಾನದ ನಂತರ ಎಷ್ಟು ವ್ಯಾಪಕವಾಗಿ ಕಲ್ಲಿನ ದೇವಾಲಯಗಳ ನಿರ್ಮಾಣ ಈ ಪ್ರದೇಶದಲ್ಲಿ ನಡೆಯಿತೆಂದರೆ ಪ್ರತೀ ಪ್ರಮುಖ ವಸತಿ ನೆಲೆಗಳಲ್ಲೂ ಅವು ತಲೆ ಎತ್ತಿದವು. ಸ್ಥಾನಿಕ ಅರಸು ಮನೆತನಗಳಿಗೆ ಇಂಥ ದೇವಾಲಯಗಳ ನಿರ್ಮಾಣ ಹಾಗೂ ಮತ ಪಂಥಗಳ ಪೋಷಣೆ ರಾಜತ್ವದ ಒಂದು ಲಕ್ಷಣವಾಗಿ ಮಹತ್ವಗಳಿಸಿತ್ತು ಎಂಬುದು ಈ ಸಂಗ್ರಹದಲ್ಲಿನ ಅಧ್ಯಯನಗಳಿಂದ ವ್ಯಕ್ತವಾಗುತ್ತದೆ.

ಆಯಾ ಸ್ಥಾನಿಕ ಆಳ್ವಿಕೆಗಳಲ್ಲಿ ಒಂದು ಸಾಮ್ರಾಜ್ಯದ ಮಾದರಿಗಳನ್ನು ಪುನರುತ್ಪಾದಿಸುವ ಜೊತೆಗೇ ತಮ್ಮದೇ ಆದ ಸಂದರ್ಭಕ್ಕೆ ಅದನ್ನು ಅಳವಡಿಸಿಕೊಳ್ಳುವ ಕ್ರಿಯೆಯನ್ನು ವಾಸ್ತುಶಿಲ್ಪ ಮೂರ್ತಿಶಿಲ್ಪಗಳಲ್ಲಿ ನೋಡಬಹುದು. ದೇವಾಲಯಗಳಲ್ಲೂ ವಿಭಿನ್ನ ಕಲಾವಂತಿಕೆಯ ಶ್ರೇಣಿಗಳಿದ್ದವು. ಈ ಶ್ರೇಣೀಕರಣ ಮಧ್ಯಕಾಲೀನ ರಾಜ್ಯಗಳ ಅಧಿಕಾರ ಶ್ರೇಣೀಕರಣಕ್ಕೆ ಹೋಲುತ್ತದೆ. ದೇವಾಲಯಗಳಲ್ಲಿ ಈ ಶ್ರೇಣೀಕರಣ ಆಯಾ ಸಂಸ್ಥೆಗಳ ಅಧಿಕಾರ ಭೌತಿಕ ಸಾಮರ್ಥ್ಯ, ಪ್ರತಿಷ್ಠೆ, ದೇವಾಲಯಗಳ ಶಾಸ್ತ್ರ ಬದ್ಧತೆ ಹಾಗೂ ಕಲಾತ್ಮಕತೆಗಳಲ್ಲಿ ವ್ಯಕ್ತವಾಗಿದೆ. ತೀರ ಉನ್ನತ ಶ್ರೇಣಿಯ ದೇವಾಲಯಗಳು ಒಂದು ವ್ಯಾಪಕವಾದ ಹಾಗೂ ಶಾಸ್ತ್ರೀಯವಾದ ಮಾರ್ಗ ಕಲಾಶೈಲಿಯಲ್ಲಿ ನಿರ್ಮಾಣವಾದವು. ಈ ಮಾರ್ಗಕಲಾಶೈಲಿ ವಿಮಾನ ಹಾಗೂ ಮಂಟಪಗಳ ರಚನೆಯಲ್ಲಿ ವ್ಯಕ್ತವಾಗುತ್ತದೆ. ಇಂಥ ನಿರ್ಮಿತಿಗಳು ಸ್ಥಾನಿಕ ಆಳುವ ಅಂಶಗಳ ರಾಜಧಾನಿಗಳಲ್ಲಿ ಕೂಡ ತಲೆ ಎತ್ತಿದ್ದರೂ, ಇವುಗಳ ಅತೀ ಉತ್ಕೃಷ್ಟ ಮಾದರಿಗಳು ಈ ಆಳುವ ವಂಶಗಳಿಗಿಂತಲೂ ಉನ್ನತ ಹಂತದ ರಾಜ್ಯಾಧಿಕಾರಿಗಳಿಂದ ಇಂಥ ಸ್ಥಳಗಳ ಹೊರಗೇ ನಿರ್ಮಾಣವಾದುದೂ ಆಸಕ್ತಿಯ ವಿಷಯವಾಗಿದೆ. ಉದಾಹರಣೆಗೆ ಈ ಪ್ರದೇಶದಲ್ಲಿ ಇಂಥ ಅತ್ಯುತ್ಕೃಷ್ಟ ಮಾದರಿಗಳು ಬಳ್ಳಿಗಾಮೆ, ಕುಪ್ಪಟೂರು, ಬೇಳೂರು ಹಳೆಬೀಡು ಮುಂತಾದ ಸ್ಥಳಗಳಲ್ಲಿ ಇದೆಯೇ ಹೊರತೂ ಸ್ಥಾನಿಕ ಆಳರಸರ ರಾಜಧಾನಿಗಳಲ್ಲಿಲ್ಲ. ಸ್ಥಾನಿಕ ಆಳ್ವಿಕೆಯ ಕೇಂದ್ರಗಳಾದ ಬಂದಳಿಕೆ, ಉದ್ರಿ, ನಾಡಕಳಸಿ, ಹೊಸಗುಂದ, ಹೊಂಬುಚ, ಆಸಂದಿ ಮುಂತಾದ ಸ್ಥಳಗಳಲ್ಲಿ ಈ ಉತ್ಕೃಷ್ಟ ಮಾದರಿಗಳ ವಿಭಿನ್ನ ಕೆಳಹಂತದ ನಿರ್ಮಿತಿಗಳು ಇವೆ. ಈ ರೀತಿ ಈ ಸ್ಥಾನಿಕ ಆಳುವ ವಂಶಗಳ ಪ್ರತಿಷ್ಠೆಯು ದೇವಾಲಯ ವಾಸ್ತುವಿನ ಸಂದರ್ಭದಲ್ಲಿ ಒಂದು ಸಾಮ್ರಾಜ್ಯದ ಪ್ರತಿಷ್ಠೆಯ ಅಧೀನತೆಯಲ್ಲಿ ವ್ಯಕ್ತವಾಗುವುದು ಮಧ್ಯಕಾಲೀನ ರಾಜ್ಯಗಳ ಭೌತಿಕ ಅಧಿಕಾರಕ್ಕೆ ಪೂರಕವಾಗಿಯೇ ಇದೆ.

ಸ್ಥಾನಿಕ ಆಳುವ ಮನೆತನಗಳು ವಿಭಿನ್ನ ಮಟ್ಟದಲ್ಲಿ ಸಾಮ್ರಾಜ್ಯದ ಮಾದರಿಗಳನ್ನು ಸಾಧಿಸಿದವು. ಬಂದಳಿಕೆಯ ತ್ರಿಮೂರ್ತಿ ದೇವಾಲಯ, ಹುಂಚದ ಬಸದಿಗಳು ಬಹುಶಃ ಇವುಗಳಲ್ಲಿ ಅತೀ ಮೇಲ್ಮಟ್ಟದ ಸಾಧನೆಗಳಾಗಿವೆ. ಇವಕ್ಕೂ ಕೆಳ ಹಂತದಲ್ಲಿ ವ್ಯಕ್ತವಾಗುವ ವಾಸ್ತು ನಿರ್ಮಿತಿಗಳನ್ನು ನಾಡ ಕಳಸಿ, ಹೊಸಗುಂದ, ಉದ್ರಿ, ಆಸಂದಿ ಮುಂತಾದೆಡೆಗಳಲ್ಲಿ ನೋಡ ಬಹುದು. ಇಲ್ಲಿನ ದೇವಾಲಯಗಳಿಗೆ ಅಲಂಕಾರರಹಿತವಾದ ಗೋಡೆಗಳು, ಪಿರಾಮಿಡ್‌ ಆಕೃತಿಯ ಶಿಖರಗಳು, ಗೂಢ ಮಂಟಪಗಳು ಅಥವಾ ಕಕ್ಷಾಸನಗಳನ್ನು ಒಳಗೊಂಡ ಸಣ್ಣ ಪ್ರಮಾಣದ ಸಭಾ ಮಂಟಪಗಳು ಇರುತ್ತವೆ. ಇವುಗಳಿಗೆ ಕುಸುರಿ ಕೆಲಸದ ಅಲಂಕರಣಗಳು ಇರುವುದಿಲ್ಲ. ಆದರೆ ಕೆಲ ದೇವಾಲಯಗಳಲ್ಲಿ ನುಣುಪಾಗಿ ಮಾಡಿದ ಘಂಟಾಕೃತಿಯ ಕಂಭಗಳು ಇರುತ್ತವೆ. ಇವು ಚಾಲುಕ್ಯ ವಾಸ್ತು ಕಲೆಯಲ್ಲಿ ಸ್ಥಾನಿಕ ಆಶ್ರಯದಾತರ ರಚನೆಗಳಲ್ಲೇ ಉತ್ತಮ ಮಟ್ಟದವು ಎಂಬುದಂತೂ ಸ್ಪಷ್ಟ.

ವಿಜಯನಗರ ಕಾಲದ ಪ್ರಾರಂಭದಲ್ಲಿ ಈ ಮೇಲಿನ ಶಾಸ್ತ್ರೀಯ ಶೈಲಿ ಬಹುತೇಕ ಕಣ್ಮರೆಯಾಯಿತು. ಬಹುಶಃ ಮಲೆನಾಡಿನ ಭಾಗದಲ್ಲಿ ಮಾತ್ರ ಅದು ಮುಂದೆ ಕೆಳದಿ ಆಳ್ವಿಕೆಯ ಅಂತ್ಯದವರೆಗೂ ವಿಜಯನಗರ ಶೈಲಿಯಿಂದ ಪ್ರಭಾವಿತವಾಗಿ ಸಾಕಷ್ಟು ಬದಲಾಗಿ ಮುಂದುವರಿಯಿತು. ಆದರೂ ವಿಜಯನಗರ ಕಾಲದ ನಂತರ ಸ್ಥಾನಿಕ ಆಳುವ ಮನೆತನಗಳು ಹಾಗೂ ಪ್ರತಿಷ್ಠಿತ ವರ್ಗ ಶಾಸ್ತ್ರಬದ್ಧ ಶೈಲಿಯ ವಾಸ್ತುಗಳನ್ನು ಈ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದು ತೀರ ಕಡಿಮೆ. ನಿರ್ಮಾಣವಾದ ವಾಸ್ತುಗಳಲ್ಲೂ ವಿಜಯನಗರ ಶೈಲಿಯ ತೀರ ಕೆಳಮಟ್ಟದ ಅನುಕರಣೆಗಳು ಮಾತ್ರ ಕಂಡುಬರುತ್ತವೆ. ಈ ದೃಷ್ಟಿಯಿಂದ ಆರಗದ ಸ್ಮಾರಕಗಳು ಕುತೂಹಲಕಾರಿಯಾಗಿವೆ. ಆರಗದಲ್ಲಿ ೧೪ನೇ ಶತಮಾನದಿಂದ ದೇವಾಲಯಗಳ ನಿರ್ಮಾಣ ಪ್ರಾರಂಭವಾಯಿತು. ಇಲ್ಲಿನ ಕಲಾನಾಥ ದೇವಾಲಯದ ಇಳಿಜಾರಾದ ಕಲ್ಲಿನ ಮಾಡುಗಳು, ಮಲೆನಾಡಿನ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಚಾಲುಕ್ಯ ಶೈಲಿಯನ್ನು ಪರಿಷ್ಕರಿಸಿ ಮಾಡಿಕೊಂಡ ಬದಲಾವಣೆಗಳಾಗಿವೆ.

ಒಂದು ಸಾಮ್ರಾಜ್ಯದ ವಾಸ್ತುಶೈಲಿ ಆ ಸಾಮ್ರಾಜ್ಯದ ಅಧೀನತೆಗೆ ಒಳಪಟ್ಟ ಸ್ಥಾನಿಕ ಆಳ್ವಿಕೆಗಳಲ್ಲೂ ಪ್ರಚಲಿತದಲ್ಲಿ ಬರುವ ಸಂಗತಿ ಮಲೆನಾಡಿನ ಭಾಗದ ವಾಸ್ತುಶಿಲ್ಪದಲ್ಲಿ ವ್ಯಕ್ತವಾಗುತ್ತದೆ. ದಕ್ಷಿಣ ಕರ್ನಾಟಕದ ಮಲೆನಾಡಿನ ಚೆಂಗಾಳ್ವ, ಕೊಂಗಾಳ್ವ ಮುಂತಾದ ಮನೆತನಗಳ ವಾಸ್ತುಗಳ ದ್ರಾವಿಡ ಶೈಲಿಯವಾಗಿದ್ದು ಹೊಯ್ಸಳರು ಚಾಲುಕ್ಯರ ಸಾಮಂತರಾಗಿ ಬೆಳೆದಂತೆಲ್ಲ ಚಾಲುಕ್ಯ ಶೈಲಿ ಈ ಪ್ರದೇಶದಲ್ಲೆಲ್ಲ ಪ್ರಚಲಿತದಲ್ಲಿ ಬಂದಿತು. ವಿಜಯನಗರ ಕಾಲದಲ್ಲಿ ವಿಜಯನಗರದ ರಾಯರು ಪಾಂಡ್ಯನಾಡಿನ ದ್ರಾವಿಡ ಶೈಲಿಯನ್ನು ವಿಜಯನಗರದಲ್ಲಿ ಪೋಷಿಸಿದರು. ೧೬-೧೭ನೇ ಶತಮಾನದ ನಂತರ ವಿಜಯನಗರದ ಅಧೀನತೆಯಲ್ಲಿ ಆಳ್ವಿಕೆ ನಡೆಸಿದ ಸ್ಥಾನಿಕ ಪಾಳೆಯ ಪಟ್ಟುಗಳಲ್ಲಿ ವಿಜಯನಗರದ ಶೈಲಿಯೇ ಪ್ರಚಲಿತದಲ್ಲಿ ಬರುವುದು ಕಂಡುಬರುತ್ತದೆ. ಆದರೆ ದಟ್ಟ ಮಲೆನಾಡಿನ ಪ್ರದೇಶದಲ್ಲಿ ಇಂಥ ಸಂಪ್ರದಾಯಗಳನ್ನೆಲ್ಲ ಉಳಿಸಿಕೊಂಡು ಸಂಮಿಶ್ರಣ ಮಾಡುತ್ತ ಬಳಸುವ ರೂಢಿ ಕಂಡು ಬರುತ್ತದೆ. ನಾಯಕರ ಕಾಲದಲ್ಲಿ ಇಂಡೋಇಸ್ಲಾಮಿಕ್ ಶೈಲಿಯ ಸಂಮಿಶ್ರಣ ಕೂಡ ಈ ಕಾರಣದಿಂದ ಮಲೆನಾಡಿನ ಭಾಗದ ದೇವಾಲಯಗಳಲ್ಲಿ ಪ್ರಸ್ತುತತೆ ಪಡೆಯುತ್ತದೆ.

ಇಲ್ಲಿಯವರೆಗೆ ಚರ್ಚಿಸಲಾದ ಒಂದು ಸಾಮ್ರಾಜ್ಯದ ಸಾಂಸ್ಕೃತಿಕ ಮಾದರಿಗಳು. ಪ್ರಾದೇಶಿಕವಾರಿ ಪುನರುತ್ಪಾದಿತವಾಗುವಾಗ ಸ್ಥಾನಿಕ ಆಳುವ ಮನೆತನಗಳನ್ನೇ ಕೇಂದ್ರದಲ್ಲಿರಿಸಿ ನೋಡುವುದು ತಪ್ಪಾಗುತ್ತದೆ. ಏಕೆಂದರೆ ಈ ಸ್ಥಾನಿಕ ಆಳ್ವಿಕೆಗಳೂ ಈ ಮೇಲಿನ ಸಾಂಸ್ಕೃತಿಕ ಪ್ರಕ್ರಿಯೆಯ ಒಂದು ಭಾಗವಾಗಿ ಅದರ ಒಂದು ರಾಜಕೀಯ ಮುಖವಾಗಿ ಅಭಿವ್ಯಕ್ತವಾಗುತ್ತವೆ. ಇಂಥ ಸ್ಥಾನಿಕ ರಾಜಕೀಯ ಒಂದು ಸಾಂಸ್ಕೃತಿಕ ಅಭಿವ್ಯಕ್ತಿಯೂ ಆಗಿ ಪ್ರಾದೇಶಿಕ ಸಮಾಜದಲ್ಲಿ ಪ್ರಸ್ತುತತೆ ಪಡೆಯುತ್ತದೆ. ವಂಶಾವಳಿ, ಶಾಸನ ಲೇಖನ ಮುಂತಾದವು ಇಂಥ ಆಳುವ ಮನೆತನಗಳಿಗೇ ವಿಶಿಷ್ಟವಾದ ಅಭಿವ್ಯಕ್ತಗಳಾಗಿದ್ದರೆ, ಮತಧರ್ಮಗಳ ಪೋಷಣೆ, ಕಲೆ ವಾಸ್ತು ಶಿಲ್ಪ ನಿರ್ಮಾಣ ಇವು ಒಂದು ಸಾಮ್ರಾಜ್ಯದ ಪ್ರತಿಷ್ಠಿತ ಸಮಾಜದ ಅಭಿವ್ಯಕ್ತಿಯಾಗಿದ್ದು ಸ್ಥಾನಿಕ ಮನೆತನಗಳೂ ಅದನ್ನು ತಮ್ಮ ಪ್ರತಿಷ್ಠೆಯ ಸಂಕೇತಗಳನ್ನಾಗಿ ಅಭಿವ್ಯಕ್ತಿಸಿದ್ದು ಕಂಡುಬರುತ್ತದೆ. ಅಂದರೆ ಒಂದು ವ್ಯಾಪಕವಾದ ಸಾಮಾಜಿಕ ಸಾಂಸ್ಕೃತಿಕ ಪ್ರಕ್ರಿಯೆಯೊಳಗೆ ಇಟ್ಟು ಮಧ್ಯಕಾಲದ ರಾಜ್ಯ ನಿರ್ಮಾಣ ಹಾಗೂ ವಿಸ್ತರಣೆಯನ್ನು ನೋಡಿದಾಗ ಮಾತ್ರ ಈ ಮೇಲಿನ ಮಾದರಿಗಳ ಮಹತ್ವವನ್ನು ಗುರುತಿಸಬಹುದು.