ಇಂದಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಒಂದು ಗ್ರಾಮವಾಗಿ ಭಗ್ನಾವಶೇಷಗಳಿಂದ ಕೂಡಿದ ಬಂದಳಿಕೆಯು ಹಿಂದಿನ ಬನವಾಸಿ ೧೨೦೦೦ದ ನಾಗರಖಂಡ ೭೦ರ ರಾಜಧಾನಿಯಾಗಿತ್ತು. ಇದನ್ನಾಳಿದ ಅರಸರನ್ನು ಬಂದಳಿಕೆ ಅರಸರು, ನಾಗರಖಂಡದ ಅರಸರು ಎಂದೆಲ್ಲ ಕರೆದಿದ್ದಾರೆ.

ಆಕರಗಳು

ಒಂದು ನಾಡಿನ ಇತಿಹಾಸ ರಚನೆಗೆ ಪ್ರಾಚ್ಯವಸ್ತುಗಳು ಹಾಗೂ ಸಾಹಿತ್ಯ ಬಹುದೊಡ್ಡ ಆಕರಗಳಾಗಿವೆ. ಶಾಸನಗಳು, ಸ್ಮಾರಕಗಳು, ದೇವಾಲಯಗಳು, ನಾಣ್ಯಗಳು ಪ್ರಾಚ್ಯವಸ್ತು ವಿಭಾಗದಲ್ಲಿಯೂ ಪುರಾಣ, ಕಾವ್ಯ, ಜನಪದ ಸಾಹಿತ್ಯ ಮುಂತಾದುವು ಸಾಹಿತ್ಯ ವಿಭಾಗದಲ್ಲಿಯೂ ಪ್ರಮುಖ ಆಕರಗಳಾಗಿ ನಿಂತಿವೆ. ಲೇಖಕರ ಮಹಾಪ್ರಬಂಧ ಈ ಎಲ್ಲದರ ನೆರವು ಪಡೆದಿದೆ.

[1]

ಶಾಸನಗಳು

ನಾಗರಖಂಡದ ಚರಿತ್ರೆಗೆ ಶಾಸನಗಳೇ ಪ್ರಮುಖ ಆಧಾರಗಳು. ಈ ನಾಡಿನ ವ್ಯಾಪ್ತಿಯಲ್ಲಿ ಉಪಲಬ್ಧ ಸುಮಾರು ೩೩೫ ಶಾಸನಗಳನ್ನು ಹಾಗೂ ಹೊರಗಿನ ಸುಮಾರು ೫೫ಕ್ಕೂ ಮಿಕ್ಕಿ ಶಾಸನಗಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಈ ಕಂಪಣದ ಒಂದು ಗ್ರಾಮವಾದ ಮಳವಳ್ಳಿಯಲ್ಲಿ ಈ ನಾಡಿನ ಅತ್ಯಂತ ಪ್ರಾಚೀನವಾದ ಸುಪ್ರಸಿದ್ಧ ಪ್ರಾಕೃತ ಶಾಸನವಿದೆ. ಇದರ ಕಾಲ ಕ್ರಿ.ಶ. ೧೫೦[2] ಈ ಮಹಾಪ್ರಬಂಧಕ್ಕೆ ಬಳಸಿಕೊಂಡ ಕೊನೆಯ ಶಾಸನ ಈ ಕಂಪಣದ ಒಂದು ಗ್ರಾಮವಾದ ಗಿಣಿವಾಲದ್ದು. ವಿಜಯನಗರ ಅರಸ ವೀರ ಸದಾಶಿವರಾಯನ ಈ ಶಾಸನದ ಕಾಲ ಕ್ರಿ.ಶ. ೧೫೫೨.[3]

ನಾಗರಖಂಡದ ಶಾಸನಗಳಲ್ಲಿ ಅರ್ಧಕ್ಕೂ ಹೆಚ್ಚಿನವು ದಾನಶಾಸನಗಳು. ಉಳಿದವು ವೀರ, ಆತ್ಮಬಲಿ, ಮಹಾಸತಿ, ನಿಷಧಿ, ಗೋಸಾಸ ಮುಂತಾದುವು. ಇವುಗಳಲ್ಲಿ ಅಲ್ಪ ಹಾಗೂ ಹೆಚ್ಚು ತೃಟಿತಗಳೂ ಎರಡು ಪಂಕ್ತಿಗಳ ಕಿರುಶಾಸನಗಳೂ ನೂರು ಪಂಕ್ತಿಗೂ ಮಿಕ್ಕಿದ ಸುದೀರ್ಘ ಶಾಸನಗಳೂ ಸೇರಿಕೊಂಡಿವೆ.

ಸ್ಮಾರಕಗಳು ಹಾಗೂ ದೇವಾಲಯಗಳು

ಇತಿಹಾಸ ರಚನೆಯಲ್ಲಿ ಸ್ಮಾರಕಗಳ ಕೊಡುಗೆ ಗಮನಾರ್ಹವಾದದ್ದು. ಶಾಸನ ಹಾಗೂ ಸಾಹಿತ್ಯಗಳಲ್ಲಿ ದೊರೆಯಲಾರದ ಎಷ್ಟೋ ವಿವರಗಳನ್ನು ಇವು ಒದಗಿಸಿ ಕೊಡಬಲ್ಲವು. ಸ್ಮಾರಕಗಳು ಅಲಿಖಿವಾದಾಗಲೂ ತಮ್ಮಲ್ಲಿಯ ಕಲಾಕೌಶಲ್ಯದಿಂದ ಹೆಚ್ಚಿನ ವಿವರಗಳನ್ನು ನೀಡಬಲ್ಲ ಸಾಮರ್ಥ್ಯ ಹೊಂದಿರುತ್ತವೆ. ಮಳವಳ್ಳಿ, ಚಿಕ್ಕೇರೂರುಗಳಲ್ಲಿರುವ ಮಹಾಸತಿ ಕಲ್ಲುಗಳು ಈ ಮಾಲೆಗೆ ನಿದರ್ಶನವಾಗಿವೆ. ಇವು ಒಂದು ನಟವರ ಇನ್ನೊಂದು ಕುಂಬಾರ ಮನೆತನಕ್ಕೆ ಸೇರಿದವು ಆಗಿವೆ.

ದೇವಾಲಯಗಳನ್ನು ಸ್ಮಾರಕಗಳಲ್ಲಿಯೇ ಪರಿಗಣಿಸಲಾಗುತ್ತದೆ. ನಾಗರಖಂಡದಲ್ಲಿ ಶಾಸನೋಕ್ತ ದೇವಾಲಯಗಳು ೮೩ ಇವೆ. ಅನುಕ್ತ ದೇವಾಲಯಗಳೂ ಸಾಕಷ್ಟು ಇವೆ. ದೇವಾಲಯಗಳಲ್ಲಿಯ ವಿಗ್ರಹಗಳಲ್ಲದೆ ಪ್ರತಿ ಊರುಗಳಲ್ಲಿ ಚದುರಿಕೊಂಡಿರುವ ವಿಗ್ರಹಗಳಿಗೆ ಲೆಕ್ಕವೇ ಇಲ್ಲ. ಇವುಗಳ ಅಧ್ಯಯನ ಆ ಕಾಲದ ಜನಜೀವನದ ರೀತಿ, ನೀತಿ, ಕಲಾಕೌಶಲ್ಯ ಮುಂತಾದ ವಿಷಯಗಳ ಪರಿಚಯ ಮಾಡಿಕೊಡುತ್ತವೆ.

ಸಾಹಿತ್ಯ

ನಾಗರು ಮತ್ತು ನಾಗರಖಂಡದ ಚರಿತ್ರೆಗೆ ವೇದ ಪುರಾಣ ಮುಂತಾದ ಆರ್ಷಸಾಹಿತ್ಯವಲ್ಲದೆ ಕಲ್ಹಣನ ‘ರಾಜತರಂಗಿಣಿ’ಯಂಥ ಸಂಸ್ಕೃತ ಕಾವ್ಯಗಳೂ ಕೆಲವು ಕನ್ನಡ ಕಾವ್ಯಗ್ರಂಥಗಳೂ, ಇತಿಹಾಸ ಮತ್ತು ಧರ್ಮ ಕುರಿತಂತೆ ಇಂಗ್ಲೀಷ ಗ್ರಂಥಗಳೂ ಕೊಡುಗೆ ಇತ್ತಿವೆ. ಇಲ್ಲಿ ಅನೇಕ ಶಾಸನ ಕವಿಗಳೂ, ಏಕಾಂತ ರಾಮಯ್ಯನಂಥ ವಚನಕಾರ, ಸರ್ವಜ್ಞನಂಥ ಜನಪದ ಕವಿ ಆಗಿ ಹೋಗಿದ್ದಾರೆ. ಜನಪದ ಕಾವ್ಯವೊಂದು ಬಿಜ್ಜಮಹಾದೇವಿ ಚರಿತ್ರೆಗೆ ಆಧಾರ ಒದಗಿಸಿದೆ. ವಿದೇಶಿ ಪ್ರವಾಸಿಗರ ಬರಹಗಳೂ ಸಂದರ್ಭಾನುಸಾರ ಬಳಕೆಯಾಗಿವೆ.

ಬಂದಳಿಕೆ (ನಾಗರಖಂಡ) ಕುರಿತ ಅಧ್ಯಯನಗಳು

ಬಂದಳಿಕೆ ಅರಸರನ್ನೇ ವಿಷಯವಾಗಿಟ್ಟುಕೊಂಡು ಇದುವರೆಗೆ ಹೇಳಿಕೊಳ್ಳುವಂಥ ಯಾವುದೇ ಸ್ವತಂತ್ರ ಕೃತಿಗಳೂ ಪ್ರಕಟವಾಗಿರುವುದಿಲ್ಲ. ಶಿರಾಳಕೊಪ್ಪದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಎಸ್. ಭೀಮಪ್ಪನವರು ‘ಪುಣ್ಯಕ್ಷೇತ್ರ ಬಂದಳಿಕೆ’ ಎಂಬ ಪರಿಚಯಾತ್ಮಕ ಕಿರುಪುಸ್ತಕವನ್ನು ೧೯೭೩ರಲ್ಲಿ ಪ್ರಕಟಿಸಿದ್ದಾರೆ. ಇದು ಸಂಶೋಧನಾ ಕೃತಿಯಲ್ಲ.

ಬಿ.ಎಲ್. ರೈಸರ ಮೈಸೂರ ಎಂಡ ಕೂರ್ಗ ಪ್ರಾಮ ಇನ್‌ಸ್ಕ್ರಿಪನ್ಸಹಾಗೂ ಜಿ.ಎಂ. ಮೊರೇಸ್ರವರ ‘ಕದಂಬ ಕುಲ’ ಕೃತಿಗಳಲ್ಲಿ ನಾಗರಖಂಡದ ಬಂದಳಿಕೆ ಅರಸರ ಪ್ರಸ್ತಾಪವಿದೆ. ಇವು ಸಂಶೋಧನಾತ್ಮಕ ಕೃತಿಗಳಾಗಿದ್ದರೂ ಇವುಗಳ ಮುಖ್ಯ ವಿಷಯ ಬಂದಳಿಕೆಯಲ್ಲ. ಆದ್ದರಿಂದ ಸಮಗ್ರ ಕೃತಿಯಲ್ಲಿ ಕೇವಲ ೪, ೬ ಪುಟಗಳು ಬಂದಳಿಕೆಗೆ ಮೀಸಲಾಗಿವೆ. ಪರಿಮಿತ ಶಾಸನಗಳನ್ನು ಬಳಸಿಕೊಂಡು ಈ ಲೇಖನಗಳು ಸಿದ್ಧವಾಗಿರುವುದರಿಂದ ಅಲ್ಲಿಂದೀಚೆಗೆ ಹೊಸ ಶಾಸನಗಳನೇಕ ಬೆಳಕಿಗೆ ಬಂದಿರುವುದರಿಂದ ಹೊಸ ಹೊಸ ಸಂಶೋಧನೆಗಳು ಆಗಿರುವುದರಿಂದ ಅಂದಿನ ಇವರ ಹೇಳಿಕೆಗಳು ಪರಿಷ್ಕಾರಗೊಳ್ಳಬೇಕಾಗುತ್ತದೆ. ಆದರೆ ಈ ವಿಷಯ ಕುರಿತು ಪ್ರಾರಂಭದಲ್ಲಿ ಅಧಿಕೃತವಾಗಿ ಪ್ರಸ್ತಾಪ ಮಾಡಿದ ಶ್ರೇಯಸ್ಸು ಈ ಕೃತಿಗಳಿಗೆ ಸಲ್ಲುತ್ತದೆ.

ಹಯವದನರಾವ್ ಅವರ ‘ಮೈಸೂರ ಗೆಝೆಟಿಯರ್’ ದಲ್ಲಿ ಈ ವಿಷಯದ ಹಾಗೂ ಈ ಪ್ರದೇಶದ ಪ್ರೇಕ್ಷಣೀಯ ಸ್ಥಳಗಳ ಪರಿಚಯ ಮೂಡಿ ಬಂದಿದೆ.

ಒಬ್ಬಿಬ್ಬರು ವಿದ್ವಾಂಸರು ತಮ್ಮ ಕೃತಿಗಳಲ್ಲಿ ಸಾಂದರ್ಭಿಕವಾಗಿ ಮಾತ್ರ ನಾಗರಖಂಡ ಪ್ರದೇಶವನ್ನು ಅದರ ರಾಜಧಾನಿಯನ್ನು ಗುರುತಿಸುವ ಪ್ರಯತ್ನಗಳನ್ನು ಮಾಡಿರುತ್ತಾರೆ.[4] ಇವೂ ಸಹ ನಿರ್ದಿಷ್ಟವಾದುವು ಆಗಿರುವುದಿಲ್ಲ.

ಡಾ. ಭೋಜರಾಜ ಪಾಟೀಲರ ‘ನಾಗರಖಂಡ ೭೦, ಒಂದು ಅಧ್ಯಯನ ಎಂಬ ಪ್ರಕಟಿತ ಪಿ.ಎಚ್.ಡಿ. ಮಹಾಪ್ರಬಂಧವೊಂದೇ ಈ ದಿಶೆಯಲ್ಲಿ ಮಾಡಲಾದ ಗಂಭೀರ ಅಧ್ಯಯನದ ಸಂಶೋಧನಾತ್ಮಕ ಗ್ರಂಥವಾಗಿದೆ. ಇದರಲ್ಲಿ ನಾಗರಖಂಡ ಹೆಸರಿನ ಬಗೆಗೂ ನಾಗಜನಾಂಗದ ಬಗೆಗೂ ವಿವರಗಳು ಇರುವುದಲ್ಲದೆ ಕ್ರಿಸ್ತಶಕ ಪ್ರಾರಂಭದಿಂದ ವಿಜಯನಗರ ಕಾಲದವರೆಗಿನ ನಾಗರಖಂಡ ಚರಿತ್ರೆ ಬೆಳಕಿಗೆ ಬಂದಿದೆ.

ನಾಗರಖಂಡದ ಕಿರುಪರಿಚಯ

ನಾಗರಖಂಡದ ರಾಜಕೀಯ ಚರಿತ್ರೆಗೆ ಹಿನ್ನೆಲೆಯಾಗಿ ಈ ಕಂಪಣದ ಕಿರುಪರಿಚಯ ಅವಶ್ಯವೆನ್ನಿಸುವುದರಿಂದ ಅದನ್ನಿಲ್ಲಿ ಮಾಡಲಾಗಿದೆ.

ಪ್ರಾಚೀನ ಕರ್ನಾಟಕದ ಆಡಳಿತ ವಿಭಾಗದಲ್ಲಿ ಒಂದು ಕಂಪಣವು ನಾಗರಬಂಡ. ವಿಶಾಲ ಕುಂತಳದೇಶದ ಹಲವು ಮಂಡಲಗಳಲ್ಲಿ ವಿಖ್ಯಾತಿ ವೆತ್ತ ಬನವಾಸಿ ೧೨೦೦೦ ದಲ್ಲಿ ಪ್ರಸ್ತುತ ಕಂಪಣ ಸಮಾವೇಶವಾಗಿತ್ತು. (ನಕಾಶೆ ನೋಡಿ)

ವಿಜಯನಗರ ಸಾಮ್ರಾಜ್ಯ ಪ್ರಾರಂಭ ಪೂರ್ವದಲ್ಲಿ ಬನವಾಸಿ ಮಂಡಲದಲ್ಲಿಯ ೧೮ ಕಂಪಣಗಳನ್ನೊಳಗೊಂಡು ಗುತ್ತಿ (ಚಂದ್ರಗುತ್ತಿ)ಯು ಒಂದು ಪ್ರತ್ಯೇಕ ಆಡಳಿತ ವಿಭಾಗವಾಗಿ ರೂಪುಗೊಂಡಿತ್ತು. ಆಗ ನಾಗರಖಂಡ ಕಂಪಣ ಇದರಲ್ಲಿ ಒಂದಾಗಿದ್ದಿತ್ತು.

ಇಂದಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು, ಹಾನಗಲ್ಲ ತಾಲ್ಲೂಕುಗಳು ಸಂಧಿಸುವಲ್ಲಿಯ ಪ್ರದೇಶದಲ್ಲಿ ನಾಗರಖಂಡ ಕಂಪಣವನ್ನು ಗುರುತಿಸಬಹುದು. ನಾಗರಖಂಡ ಕಂಪಣ ಪ್ರಾಚೀನ ಕಾವ್ಯ ಹಾಗೂ ಶಾಸನಗಳಲ್ಲಿ ಉಲ್ಲೇಖಗೊಂಡಿದೆ.

ಕುಪಟೂರಿನ ಒಂದು ಶಾಸನವು ನಾಗರಖಂಡವನ್ನು ಮೌರ್ಯ ಚಂದ್ರಗುಪ್ತನು ಪರಿಪಾಲಿಸುತ್ತಿದ್ದನೆಂದು ಹೇಳುತ್ತದೆ.[5]ಇದರಿಂದ ನಾಗರಖಂಡವು ಕ್ರಿ.ಪೂ. ೩ ಇಲ್ಲವೆ ೨ನೆಯ ಶತಮಾನದಲ್ಲಿಯೇ ಅಸ್ತಿತ್ವದಲ್ಲಿದಂತೆ ಕಂಡು ಬರುತ್ತದೆ. ಆದರೆ ಈ ಶಾಸನದ ಕಾಲ ಕ್ರಿ.ಶ. ೧೩೪೦.

ಈ ಕಂಪಣವನ್ನು ಖಚಿತವಾಗಿ ಉಲ್ಲೇಖಿಸುವ ಪ್ರಾಚೀನ ಶಾಸನ ಬಳ್ಳಿಗಾವೆಯದು.[6]ಇದರ ಕಾಲ ಕ್ರಿ.ಶ. ೬೮೫. ಈ ಶಾಸನೋಕ್ತ ಸೇಂದ್ರಕ ಅರಸನಾದ ಪೊಗಿಲ್ಲಿಯು ‘ನಾಯರ್ಖಂಡ’ ಮತ್ತು ‘ಜಿಡಗೂರು’ ಕಂಪಣಗಳನ್ನು ಏಕಕಾಲಕ್ಕೆ ಬಳ್ಳಿಗಾವೆಯಿಂದ ಆಳುತ್ತಿದ್ದನು. ಆದ್ದರಿಂದ ಬಾದಾಮಿ ಚಾಲುಕ್ಯರ ಕಾಲದಿಂದ ಈ ಕಂಪಣ ಅಸ್ತಿತ್ವದಲ್ಲಿದ್ದುದು ನಿರ್ವಿವಾದ. ಆದರೆ ಇದಕ್ಕೂ ಪೂರ್ವದಲ್ಲಿಯೇ ಈ ಕಂಪಣ ಊರ್ಜಿತವಾಗಿತ್ತೆಂದು ನಂಬಲರ್ಹ ಆಧಾರಗಳೂ ಇವೆ.

ಶಾತವಾಹನರು ೩ನೆಯ ಶತಮಾನದಲ್ಲಿ ಅಸ್ತಂಗತರಾದಾಗ ಕರ್ನಾಟಕದ ಪಶ್ಚಿಮ ಭಾಗದಲ್ಲಿ ಬನವಾಸಿಯನ್ನು ಅವರ ಸಾಮಂತರೇ ಆದ ಚುಟುಗಳು ಆಳಿದರೆ ಅವರ ಸೀಮೆಗೆ ಹೊಂದಿಕೊಂಡಿದ್ದ ಸೇಂದ್ರಕ ವಿಷಯವನ್ನು ಸೇಂದ್ರಕರು ಆಳುತ್ತಿದ್ದರು.[7]ಇದರಲ್ಲಿ ನಾಗರಖಂಡ, ಜಿಡುಗೂರುಗಳು ಸೇರ್ಪಡೆಯಾಗಿದ್ದುದನ್ನು ಬಳ್ಳಿಗಾವೆ ಶಾಸನ ಹೇಳಿದೆ. ‘ಭುಜಗೇಂದ್ರಾನ್ವಯ’ ರೆಂದು ನಿಚ್ಚಳವಾಗಿ ಹೇಳಿಕೊಳ್ಳುವ ಸೇಂದ್ರಕರು ನಾಗವಂಶಜರು. ಇವರು ೩ನೆಯ ಶತಮಾನದಿಂದ ಆಳುತ್ತಿದ್ದುದಾಗಿ ತಿಳಿದು ಬಂದಿರುವುದರಿಂದ ಇವರ ಕಾಲಕ್ಕೆ ನಾಗರಖಂಡ ಕಂಪಣ ಊರ್ಜಿತವಾಗಿರಬಹುದಾಗಿದೆ.

ನಾಗರಖಂಡದ ಉಲ್ಲೇಖಗಳು

ಕನ್ನಡ ಮತ್ತು ಸಂಸ್ಕೃತ ಗ್ರಂಥಗಳಲ್ಲಿ ‘ನಾಗರಖಂಡ’ ವಿರಳವಾಗಿ ಉಲ್ಲೇಖಗೊಂಡಿದೆ. ಅಲ್ಲಿ ಪ್ರದೇಶವಾಚಕವಾಗಿಯೂ ಇತರರ್ಥಗಳಲ್ಲಿಯೂ ಇದು ಬಳಕೆಯಾಗಿದೆ.

ನಾಗರಖಂಡ ಪ್ರದೇಶಕವಾಚಕವಾಗಿ ನಿರ್ದಿಷ್ಟ ಬಳಕೆಯಾಗಿರುವ ಪ್ರಕಟಿತ ಕಾವ್ಯವೆಂದರೆ ‘ಅಬ್ಬಲೂರು ಚರಿತ್ರೆ’. ಕ್ರಿ.ಶ. ೧೬೫೦ರಲ್ಲಿ ಕವಿ ಶಾಂತ ನಿರಂಜನ ಈ ಕೃತಿ ರಚಿಸಿದ್ದಾನೆ. ಇದರ ಸಂಧಿ ೨, ಪದ್ಯ ೨೦ ರಲ್ಲಿ ‘ನಾಗರಖಂಡ ದೇಶ’ ವೆಂದು ಸ್ಪಷ್ಟ ಉಲ್ಲೇಖವಿದೆ. ಹಾಗೂ ಇದು ಪ್ರಸ್ತುತ ನಾಗರಖಂಡಕ್ಕೆ ಅನ್ವಯವಾಗುತ್ತದೆ.

ಕೊಡೆಕಲ್ ರಾಚಪ್ಪಯ್ಯ ಕವಿಯ ಅಪ್ರಕಟಿತ ಕೃತಿ ‘ಮಾಯಾ ಸಾಂಗತ್ಯ’ ದಲ್ಲಿಯೂ ‘ನಾಗರಖಂಡ’ ದೇಶವಾಚಕವಾಗಿಯೂ ಇದಕ್ಕೆ ಸಂಬಂಧಿಸಿದಂತೆಯೂ ಬಳಕೆಯಾಗಿದೆ.[8]

ಕರ್ನಾಟಕದಲ್ಲಿ ಕದಂಬ ಸಾಮ್ರಾಜ್ಯ ಸ್ಥಾಪನೆಯಾಗುವ ಪೂರ್ವದಲ್ಲಿ ಬನವಾಸಿ ಹಾಗೂ ಬಳ್ಳಿಗಾವೆ ಪ್ರದೇಶದಲ್ಲಿ ಅನೇಕ ಚಿಕ್ಕಪುಟ್ಟ ನಾಗಾರಾಜ್ಯಗಳು ಇದ್ದುದಾಗಿ ಕಂಡುಬರುತ್ತದೆ.[9]ಚುಟುಗಳು, ಸೇಂದ್ರಕರು, ಸೇನವಾರರು, ಸಿಂಧರು, ಜಿಮೂತವಾಹನರು ನಾಗವಂಶೀಯರೇ ಆಗಿದ್ದರು. ಇಂಥ ನಾಗವಂಶೀಯರ ಸ್ವತ್ತಿನಲ್ಲಿದ್ದ ಭೂಭಾಗವೆ ‘ನಾಗರಖಂಡ’. ಇದನ್ನಾಳಿದ ಸೇಂದ್ರಕರು ನಿಶ್ಚಯಾರ್ಥದಲ್ಲಿ ನಾಗವಂಶೀಯರೆ ಆಗಿದ್ದರು.

ನಾಗರಖಂಡ ೨೦ ರ ಮೇರೆಗಳು

೧. ಉತ್ತರಕ್ಕೆ ಪಾನುಂಗಲ ೫೦೦, ಈಶಾನ್ಯಕ್ಕೆ, ಬಾಸೂರು ೧೪೦ (ಇವು ಕ್ರಮವಾಗಿ ಹಾನಗಲ್ಲ ಹಾಗೂ ಬ್ಯಾಡಗಿ ತಾಲೂಕುಗಳ ದಕ್ಷಿಣಕ್ಕಿವೆ.)

೨. ಪೂರ್ವಕ್ಕೆ ಮುಳಗುಂದ ೧೨, ಸತ್ತಳಿಗೆ ೭೦ (ಇವು ಹಿರೇಕೆರೂರು ತಾಲೂಕಿನ ಉತ್ತರಕ್ಕಿವೆ).

೩. ದಕ್ಷಿಣಕ್ಕೆ ಬಳ್ಳಿಗಾವೆ ಪ್ರದೇಶ, ನೈಋತ್ಯಕ್ಕೆ ಜಿಡ್ಡುಳಿಗೆ ೭೦ (ಇವು ಶಿಕಾರಿಪುರ ತಾಲೂಕಿನ ಉತ್ತರದಲ್ಲಿವೆ).

೪. ಪಶ್ಚಿಮಕ್ಕೆ ಎಡೆನಾಡು ೭೦, ವಾಯುವ್ಯಕ್ಕೆ ವರದಾನದಿ. (ಇದು ಸೊರಬ ತಾಲೂಕ ಉತ್ತರ, ಪಶ್ಚಿಮ ಮೇರೆಯಾಗಿದೆ).

ನಾಗರಖಂಡ ೨೦ ರ ಶಾಸನೋಕ್ತ ಪರಿಚಿತ ಗ್ರಾಮಗಳು

ಹಾನಗಲ್ಲ ತಾಲೂಕ ೧. ತಿಳುವಳ್ಳಿ. ೨. ಕಿರವಾಡಿ.
ಹಿರೇಕೆರೂರ ತಾಲೂಕ ೩. ಎಮ್ಮಿಗನೂರು. ೪. ಕಚವಿ. ೫. ಮಡಲೂರು. ೬. ಸಾತೇನಹಳ್ಳಿ ೭. ಚಿಕ್ಕ ಹಾಗೂ ಹಿರೇ ಕೊಣತಿಗಳು. ೮. ಮುದ್ದಿನ ಕೊಪ್ಪ, ೯. ಹಂಸಬಾವಿ ೧೦. ಮತ್ತೀಹಳ್ಳಿ. ೧೧. ಅಬಲೂರು. ೧೨. ಚಕ್ಕೇರೂರು. ೧೩. ಚಿಕ್ಕಮಾಗಡಿ ೧೪. ಗೊಡಚಿಕೊಂಡ
ಶಿಕಾರಿಪುರ ತಾಲೂಕ ೧೫. ಮಲ್ಲೇನಹಳ್ಳಿ ೧೬. ಮಳವಳ್ಳಿ ೧೭. ಕರ್ನೆಲ್ಲಿ ೧೮. ಮಾಯಿತಮ್ಮನ ಮಚಡಿ ೧೯. ಬಿಳಕಿ ೨೦. ಕಣಸೋಗೆ ೨೧. ಚಿಕ್ಕಮಾಗಡಿ ೨೨. ಅಗ್ರಹಾರ ಮಚಡಿ ೨೩. ಬಂದಳಿಕೆ ೨೪. ಸೀರಿಹಳ್ಳಿ ೨೫. ಮುತ್ತಳ್ಳಿ.
ಸೊರಬ ತಾಲೂಕ ೨೬. ಹಿರೇಮಾಗಡಿ ೨೭. ತೆವರತೆಪ್ಪ ೨೮. ಆನವಟ್ಟಿ ೨೯. ಕುಪಟೂರು ೩೦. ಕೋಟೆಕೊಪ್ಪ ೩೧. ಅಗಸನಹಳ್ಳಿ ೩೨. ತೊರೆವಂದ ೩೩. ದಡ್ಡೀಕೊಪ್ಪ ೩೪. ಮೂಡಿ ೩೫. ಬೆಣಗೇರಿ ೩೬. ಕುಣಿತೆಪ್ಪ ೪೦. ಬಾರಂಗಿ ೪೧. ದಂಡಗಿಹಳ್ಳಿ ೪೨. ತಳವೆ ೪೩. ಲಕ್ಕುವಳ್ಳಿ ೪೪. ಹುರಳಿ ೪೫. ನೇರಲಿಗೆ ೪೬. ಹಿರೇಚೌಟಿ ೪೭. ಚಿಕ್ಕಚೌಟಿ ೪೮. ಮಲ್ಲಾಪುರ ೪೯. ಗಂಗವಳ್ಳಿ
ಶಾಸನೋಕ್ತ ಅಪರಿಚಿತ ಗ್ರಾಮಗಳು ೫೦. ಮರುವಸೆ     ೫೧. ಮುತಿಗನಹಳ್ಳಿ ೫೨. ಕುಂದಂಗಿ ೫೩. ಭಾತಿ ೫೪. ಹಾರುವದೆಪ್ಪ   ೫೫. ಮೂರಿಗನಹಳ್ಳಿ ೫೬. ಎಕ್ಕಟೆ    ೫೭. ಮದನಾಗಬಳಿ ೫೮. ಕೊಡಂಗೆಯೂರು

ರಾಜಕೀಯ ಚರಿತ್ರೆ

ಯಾವುದೊಂದು ಕಂಪಣದ ರಾಜಕೀಯ ಚರಿತ್ರೆ ಗಮನಿಸಿದರೆ ಅದರ ಉನ್ನತ ಸ್ಥರದಲ್ಲಿ ಚಕ್ರವರ್ತಿಗಳ, ಮಧ್ಯಮ ಸ್ಥರದಲ್ಲಿ ಮಹಾಮಂಡಳೇಶ್ವರರ ಪ್ರಥಮ ಸ್ಥರದಲ್ಲಿ ಕಂಪಣದ ಮಂಡಳೇಶ್ವರ (ನಾಳ್ಗಾವುಂಡುರ) ಆಡಳಿತ ನಡೆದಿರುವುದು ಸುಸ್ಪಷ್ಟವಾಗಿ ಕಂಡು ಬರುತ್ತದೆ. ಇದನ್ನೇ ಸಾಮ್ರಾಜ್ಯಮಟ್ಟ, ಮಂಡಲಮಟ್ಟ, ಕಂಪಣಮಟ್ಟ ಎಂದು ಹೆಸರಿಸಬಹುದು. ಇದರಲ್ಲಿ ಪ್ರಥಮಸ್ಥರದ ನಾಳ್ಗಾವುಂಡರೆ ಕಂಪಣ ಮಟ್ಟದ ಪ್ರತ್ಯಕ್ಷ ಆಡಳಿತಗಾರರು.

ನಾಗರಖಂಡವನ್ನು ಸಾಮ್ರಾಟರ ಮಟ್ಟದಲ್ಲಿ ಕರ್ನಾಟಕವನ್ನಾಳಿದ ಕದಂಬರಿಂದ ವಿಜಯನಗರದವರೆಗಿನ ಚಕ್ರವರ್ತಿಗಳು, ಮಂಡಲಮಟ್ಟದಲ್ಲಿ ಚುಟುಗಳು, ಸೇಂದ್ರಕರು, ಸೇನವಾರರು, ಮಾಟೂರು ಹಾಗೂ ಚಲ್ಲಕೇತನವಂಶೀಯರು ಮಹಾಮಂಡಳೇಶ್ವರರು ರಾಜಕೀಯ ಮಾಡಿದರು. ಇವರಲ್ಲಿ ಸೇಂದ್ರಕರು ಮಾತ್ರ ನಾಗರಖಂಡವನ್ನು ನೇರವಾಗಿಯೂ ಆಳಿದರು.

ನಾಗರಖಂಡ ಕಂಪಣದ ರಾಜಕೀಯ ಚರಿತ್ರೆಯನ್ನು ಎರಡು ಘಟ್ಟಗಳಲ್ಲಿ ನೋಡಬೇಕಿದೆ. ಕ್ರಿ.ಶ. ೬೮೫ ರಿಂದ ಕ್ರಿ.ಶ. ೯೮೬ ರವರೆಗೆ ಪ್ರಥಮ ಘಟ್ಟ. ಈ ಗಡುವಿನಲ್ಲಿ ವಿವಿಧ ಅರಸುಮನೆತನಗಳ ಆಡಳಿತಕ್ಕೆ ಈ ಕಂಪಣ ಒಳಗಾಗಿದೆ. ಇವರ ಚರಿತ್ರೆಯಾದರೊ ಒಂದು ಕ್ರಮದಲ್ಲಿ ನಿರಂತರವಾಗಿ ಪ್ರಾಪ್ತವಾಗಿರುವುದಿಲ್ಲ. ದ್ವಿತೀಯ ಘಟ್ಟದಲ್ಲಿ ಬಂದಳಿಕೆ ಕದಂಬ ವಂಶದ ಚರಿತ್ರೆ ೧೪೪೨ರವರೆಗೂ ಸಾಗಿ ಬರುತ್ತದೆ. ಇದರ ಮುಕ್ತಾಯದಲ್ಲಿ ಕದಂಬ ವಂಶದವರಲ್ಲದ ಒಬ್ಬಿಬ್ಬರು ಕಾಣಿಸಿಕೊಳ್ಳುತ್ತಾರೆ.

ಪ್ರಥಮ ಘಟ್ಟದ ಅರಸರು

ಪೊಗಿಲ್ಲಿ            (ಕ್ರಿ.ಶ. ೬೮೫)
(ಅನಾಮಧೇಯ) (ಕ್ರಿ.ಶ. ೭೦೦)
ಮಾದೋರ ಅಲಮಾರ (ಕ್ರಿ.ಶ. ೭೬೦)
ಆದಿಗಾವುಂಡ (ಕ್ರಿ,ಶ.೭೬೦-೭೯೦ ರ ಮದ್ಯ)
ಪೀಗ (ಕ್ರಿ.ಶ. ೭೯೩-೮೧೪)
ನಾಗಾರ್ಜುನ (ಕ್ರಿ.ಶ. ೯೦೨)
ಜಕ್ಕಿಯಬ್ಬೆ (ಕ್ರಿ.ಶ. ೯೧೨-೯೧೮)
ಮಾರಸಿಂಗ (ಕ್ರಿ.ಶ. ೯೨೯)
ಎರಚಟ್ಟ            (ಕ್ರಿ.ಶ. ೯೫೦)
ಎರೆಯ   (ಕ್ರಿ.ಶ. ೯೫೭-೯೬೦)

ಮೇಲೆ ಕಾಣಿಸಿದ ೧೦ ಜನ ಅರಸರಲ್ಲಿ ಪೊಗಿಲ್ಲಿ, ನಾಗಾರ್ಜುನ, ಜಕ್ಕಿಯಬ್ಬೆ ಮಾತ್ರ ಉಲ್ಲೇಖಾರ್ಹರಾಗಿದ್ದಾರೆ.

ಪೊಗಿಲ್ಲಿ : ನಾಗರಖಂಡದ ಪ್ರಥಮ ಉಪಲಬ್ಧ ದೊರೆ.[10] ಇವನು ಸೇಂದ್ರಕ ಅರಸನಾಗಿರುವುದು ವಿಶೇಷ. ಇವರದೊಂದು ವಂಶ ನಾಗರಖಂಡವನ್ನು ನೇರವಾಗಿ ಆಳುತ್ತಿದ್ದಿತ್ತೆಂಬುದಕ್ಕೆ ಇವನೇ ಆಧಾರ. ಬಾದಾಮಿ ಚಾಳುಕ್ಯ ಚಕ್ರವರ್ತಿ ವಿನಯಾದಿತ್ಯನಿಗೆ ಮಾಂಡಲಿಕನಾಗಿ ಬಳ್ಳಿಗಾವೆಯಿಂದ ಇದನ್ನೂ ಜಿಡಗೂಡು ಕಂಪಣವನ್ನೂ ಪರಿಪಾಲಿಸಿದನು.

ನಾಗಾರ್ಜುನ : (ಕ್ರಿ.ಶ. ೯೦೨) ಪೀಗನ ಅನಂತರದಲ್ಲಿ ಒಂದು ಶತಮಾನ ಕಳೆದ ಮೇಲೆ ನಾಗಾರ್ಜುನ ಕಂಡುಬರುತ್ತಾನೆ.[11]ಈತ ಶಂತರ ವಂಶಕ್ಕೆ ಸೇರಿದವನೂ ಜೈನಧರ್ಮೀಯನೂ ಆಗಿದ್ದನು.

ರಾಷ್ಟ್ರಕೂಟ ಎರಡನೆಯ ಕೃಷ್ಣನ ಮಹಾಮಂಡಳೇಶ್ವರನಾದ ಚಲ್ಲಕೇತನ ವಂಶದ ಲೋಕಟೆಯರಸ ಈ ಕಾಲದಲ್ಲಿ ಬನವಾಸಿ ಮಂಡಲ ಆಳುತ್ತಿದ್ದ. ಇವನ ಪೆರ್ಗಡೆ ಬಿಟ್ಟಯ್ಯ ಬಂದಳಿಕೆಯಲ್ಲಿ ಬಸದಿಯೊಂದನ್ನು ನಿರ್ಮಿಸಿದ ಅದಕ್ಕೆ ಲೋಕಟೆಯರಸ ನಾಗರಖಂಡದ ದಂಡಪಳ್ಳಿ ಗ್ರಾಮವನ್ನು ದತ್ತಿಯಾಗಿಕೊಟ್ಟನು. ಚಲ್ಲಕೇತನವಂಶದ ಕಲಿವಿಟ್ಟರಸನ ಬೆಸನ ಪರಿಪಾಲಿಸುವಲ್ಲಿ ನಾಗಾರ್ಜುನ ವೀರಮರಣ ಹೊಂದಿದನು. ರಾಷ್ಟ್ರಕೂಟದ ೨ನೆಯ ಕೃಷ್ಣನಿಗೆ ಅನೇಕ ಯುದ್ಧಗಳಲ್ಲಿ ಈತ ನೆರವಾಗಿದ್ದನು.[12]

ಜಕ್ಕಿಯಬ್ಬೆ : (ಕ್ರಿ.ಶ. ೯೧೨-೯೧೮) ನಾಗರಖಂಡವನ್ನಾಳಿದ ಏಕೈಕ ಮಹಿಳೆ. ಇವಳು ನಾಗಾರ್ಜುನನ ರಾಣಿ. ಉತ್ತಮ ಪ್ರಭುಶಕ್ತಿಯುಳ್ಳವಳೂ ಜಿನಭಕ್ತಳೂ ಆದ ಜಕ್ಕಯಬ್ಬೆ ದೇಹಕ್ಕಾದ ವ್ಯಾಧಿಯನ್ನು ತಡೆಯಲಾಗದೆ ಬಂದಣಿಕೆಯ ತೀರ್ಥದಲ್ಲಿ ಸಮಾಧಿ ಮರಣದಿಂದ ಮುಕ್ತಿ ಹೊಂದಿದಳು.[13]

ಎರಡನೆಯ ಘಟ್ಟದಲ್ಲಿ ಬಂದಳಿಕೆ ಕದಂಬ ಅರಸರ ಆಡಳಿತ ಪ್ರಾರಂಭವಾಗುತ್ತದೆ. ಇಲ್ಲಿಯವರೆಗೆ ಕರ್ನಾಟಕದ ಒಳಗೂ ಹೊರಗೂ ಒಟ್ಟು ೧೩ ಕದಂಬ ಶಾಖೆಗಳು ಆಡಳಿತ ನಡೆಸಿದ್ದುದು ಬೆಳಕಿಗೆ ಬಂದಿದೆ. ಇವರಲ್ಲಿ ಬಂದಳಿಕೆ ಕದಂಬರದು ಸುದೀರ್ಘ ಶಾಖೆಯಾಗಿದೆ. ಇವರಿಗೆ ನಾಗರಖಂಡ ಕದಂಬರೆಂದೂ ಪರ್ಯಾಯ ನಾಮ. ಇವರ ವಂಶಾವಳಿ ನಿರೂಪಿಸುವಲ್ಲಿ ಬೆಣ್ಣಿಗೇರಿ.[14] ಬಂದಳಿಕೆ,[15]ಚಿಕ್ಕಮಾಗಡಿ[16] ಶಾಸನಗಳು ಪ್ರಮುಖವಾಗಿವೆ.

01_270_MAM-KUH

ಬಂದಳಿಕೆ ಕದಂಬ ವಂಶಾವಳಿಯಲ್ಲಿ ಎರಡು ಹಂತಗಳಿವೆ. ಪೌರಾಣಿಕ ಪುರುಷನಿಂದಾರಂಭಿಸಿ ಮೈಲನವರೆಗೆ ಒಂದು ಹಂತ. ಬೋಡಯ್ಯನಿಂದ ಮುಂದೆ ೨ನೆಯ ಹಂತ. ಮೊದಲ ಹಂತ ಬಂದಳಿಕೆಯ ಏಕೈಕ ಶಾಸನದಲ್ಲಿಯೂ ೨ನೆಯ ಹಂತ ಹಲವಾರು ಶಾಸನಗಳಲ್ಲಿಯೂ ಕಂಡುಬರುತ್ತದೆ. ಸೋಯಿದೇವನ ಪುತ್ರ ಬೊಪ್ಪದೇವನಿಂದ ಮುಂದಿನವರ ಹೆಸರುಗಳು ಬಿಡಿಬಿಡಿಯಾಗಿ ಕಂಡು ಬಂದಿವೆ. ಇವೆಲ್ಲವನ್ನೂ ಕ್ರೋಢೀಕರಿಸಿ ವಂಶಾವಳಿಯ ಒಂದು ಒಟ್ಟು ನೋಟ ಕೊಡಲು ಮೇಲೆ ಪ್ರಯತ್ನಿಸಲಾಗಿದೆ.

ಕೀತಿವರ್ಮ ಮತ್ತು ಆಯ್ತವರ್ಮ : ರಾಜಮನೆತನಗಳು ತಮ್ಮ ವಂಶಾವಳಿ ಆರಂಭವನ್ನು ಪುರಾಣ ಪ್ರಸಿದ್ಧರಾದ ವ್ಯಕ್ತಿಗಳಿಂದ ಹೇಳಿಕೊಳ್ಳುವ ಒಂದು ಸಂಪ್ರದಾಯವಿದೆ. ಬಂದಳಿಕೆ ಕದಂಬರು ಈ ಸಂಪ್ರದಾಯಕ್ಕೆ ಸೇರಿಕೊಂಡಿದ್ದಾರೆ. ಮಹಾಭಾರತದ ಪ್ರಸಿದ್ಧ ನಾಯಕರಲ್ಲಿ ಓರ್ವನಾದ ಅಶ್ವತ್ಥಾಮನಿಗೆ ಸೋಮನೃಪನೆಂಬ ಓರ್ವಶಿಷ್ಯ. ಈತನಿಗೆ ಮೆಚ್ಚಿ ಅಶ್ಚತ್ಥಾಮ ಸೋಮಾನ್ವಯಕ್ಕೆ ‘ಕಳಚುರಿ’ ಎಂಬ ಹೆಸರಿತ್ತನು. ಇದೇ ನೃಪನು ಸಂತಾನವನ್ನಪೇಕ್ಷಿಸಿ ಗುಡು ಅಶ್ವತ್ಥಾಮನೊಂದಿಗೆ ಶಿವನನ್ನು ಪೂಜಿಸಿದನು. ಪರಶಿವನು ಸಂಪ್ರೀತನಾಗಿ ಸೋಮನೃಪನಿಗೆ ಕೀರ್ತಿವರ್ಮ ಅಯ್ತವರ್ಮರೆಂಬ ಈರ್ವರು ಪುತ್ರರನ್ನೂ ಸಕಲ ಸೌಭಾಗ್ಯಗಳೊಂದಿಗೆ ರಾಜ್ಯವನ್ನೂ ದಯಪಾಲಿಸಿದನು. ಸೋಮನೃಪನು ತಾನಾಗಿ ಉದುರಿದ ಕದಂಬ ಪುಷ್ಪಗಳಿಂದ ಶಿವನನ್ನು ಪೂಜಿಸಿದ ಕಾರಣ ಈ ವಂಶಕ್ಕೆ ‘ಕದಂಬ’ಎಂದು ಹೆಸರಾಯಿತು. ಮುಂದೆ ಅಯ್ತವರ್ಮನಿಗೆ ಶಾಂತನೃಪ ಸುತನಾದನು. ಶಾಂತನ ಪುತ್ರ ಮೈಲಭೂಪ. ಇವನ ಪಶ್ಚಾತ್ ಹಲವರು ಅರಸರು ಆಗಿ ಹೋದರು ಎಂದು ಶಾಸನ ಹೇಳಿಬಿಡುತ್ತದೆ. [17]

ಬಂದಳಿಕೆ ಶಾಸನ ಕೊಡುವ ಈ ವಂಶಾವಳಿ ಬನವಾಸಿ ಮೂಲ ಕದಂಬ ವಂಶಾವಳಿಗಿಂತ ಸಂಪೂರ್ಣ ಭಿನ್ನವಾಗಿದೆ. ತ್ರಿಣೇತ್ರ ಕದಂಬ, ಮಯೂರವರ್ಮರ ಹೆಸರನ್ನೇ ಈ ಶಾಸನ ಎತ್ತುವುದಿಲ್ಲ. ಆದರೆ ನಾಮಾತ್ಯದಲ್ಲಿ ‘ವರ್ಮ’ ಎಂಬುದನ್ನು ಮಾತ್ರ ಉಳಿಸಿಕೊಂಡಿದೆ. ಇದೊಂದು ಆಶ್ಚರ್ಯಕರ ವಂಶಾವಳಿ. ಕಳಚೂರ್ಯರದೆ ಇನ್ನೊಂದು ಮನೆತನ ಕದಂಬರದೆಂದು ಹೇಳುವುದೆ ಈ ಶಾಸನದ ಮೂಲೋದ್ದೇಶ.

ಈ ಪೌರಾಣಿಕ ವಂಶಾವಳಿ ಒಂದು ಕಲ್ಪನೆಯಾಗಿರುವುದರಿಂದ ಅದು ಮನ್ನಣೆ ಕಳೆದುಕೊಳ್ಳುತ್ತದೆ. ಆದ್ದರಿಂದ ಬಂದಳಿಕೆ ಅರಸರ ನಿಜವಾದ ಇತಿಹಾಸ ಕ್ರಿ.ಶ. ೬೮೫ರಿಂದ ಸೇಂದ್ರಕ ಅರಸ ಪೊಗಿಲ್ಲಿಯಿಂದ ಪ್ರಾರಂಭವಾಗುತ್ತದೆ. ಇಲ್ಲಿಯ ಮೊದಲ ಘಟ್ಟದ ಅರಸರನ್ನು ಹೊರತುಪಡಿಸಿದರೆ ಕದಂಬ ಅರಸರ ಚರಿತ್ರೆ ಕ್ರಿ.ಶ. ೯೮೬ರಿಂದ ಪ್ರಾರಂಭವಾಗುತ್ತದೆ. ಹಾಗೂ ಕ್ರಿ.ಶ. ೧೪೪೨ರಲ್ಲಿ ಬರುವ ಬೈಚರಸನೊಂದಿಗೆ ಮುಕ್ತಾಯ ಹೊಂದುತ್ತದೆ.

ಬಂದಳಿಕೆ ಕದಂಬ ಅರಸರ ಬಿರುದಾವಳಿ

ಬಂದಳಿಕೆ ಕದಂಬರು ಬನವಾಸಿಯ ಆದಿ ಕದಂಬರ ವಂಶದವರೆ ಆದ್ದರಿಂದ ‘ಜಯಂತಿ ಮಧುಕೇಶ್ವರದೇವ’ ಎಂಬುದನ್ನು ಬಿರುದಾವಳಿಯಲ್ಲಿ ಸೇರಿಸಿಕೊಂಡಿದ್ದಾರೆ. ಶಾತವಾಹನರೂ ಆದಿ ಕದಂಬರೂ ಅರ್ಚಿಸಿದ ತಾಳಗುಂದ ಪ್ರಣವೇರ್ಶವರ ದೇವರು ರಾಜಧಾನಿಗೆ ಹೊಂದಿಕೊಂಡೆ ಇದ್ದದ್ದರಿಂದ ‘ಶ್ರೀ ಪ್ರಣವೇಶ್ವರ ದೇವರ ಲಭ್ಧ ಪ್ರಸಾದ’ ಎಂಬುದು ಮಳವಳ್ಳಿ ಹಾಗೂ ಮಾಯತಮ್ಮನ ಮುಂಚಡಿ ಶಾಸನಗಳ ಬಿರುದಾವಳಿಗಳಲ್ಲಿ ಕಂಡುಬರುತ್ತದೆ. ಹಾಗೆಯೇ ‘ಚತುರ್ಭುಜದೇವಿ ಲಬ್ಧವರ ಪ್ರಸಾಧಂ’ ಎಂಬುದು ಮಾತ್ರ ಎಲ್ಲಾ ಬಿರುದಾವಳಿಗಳಲ್ಲಿ ಸಾಮಾನ್ಯವಾಗಿದೆ. ಈ ದೇವಿ ಬಂದಳಿಕೆಯಲ್ಲಿ ಈಗ ಬನಶಂಕರಿ ಎಂದು ಕರೆಯಲಾಗುತ್ತಿರುವ (ಬಳಾರಿ?) ಗ್ರಾಮ ದೇವತೆಯಾಗಿರಬಹುದಾಗಿದೆ. ಬಂದಳಿಕೆ ಅರಸರಿಗೆ ಇವಳು ಕುಲದೇವತೆಯಾಗಿರುವ ಸಂಭವವಿದೆ. ಕದಂಬರ ಲಾಂಛನ ಸಿಂಹ. ಬಿರುದಾವಳಿಗಳಲ್ಲಿ ಇದು ಸಹ ಉಕ್ತವಾಗುತ್ತದೆ.

ನಾಗರಖಂಡದ ಪ್ರಖ್ಯಾತ ದೊರೆ ಸೋಯಿದೇವನಿಗಿರುವ ಬಿರುದಾವಳಿಗಳನ್ನು ಇಲ್ಲಿ ನೋಡಬಹುದಾಗಿದೆ.

“ಸ್ವಸ್ತಿ ಸಮಧಿಗತ ಪಂಚಮಹಾಶಬ್ಧ ಮ…………….. ಪುರವರಾಧೀಶ್ವರ ಜಯಂತೀ ಮದುಕೇಶ್ವರದೇವ ಲಬ್ಧ ವರಪ್ರಸಾದ, ಮ್ರಿಗಮದಾಮೋದ ತ್ರಿಯಕ್ಷ………….. ನಗರಾಧಿಷ್ಠಿತ ಲಲಾಟಲೋಚನ ಚತರ್ಭುಜ ಜಗದ್ವಿದಿತಾಷ್ಟಾದಶಾಶ್ವಮೇಧ ದೀಕ್ಷಿತ, ಹಿಮ………… ಖರ ಸಂಸ್ಥಾಪಿತ ಸ್ಠಟಿಕ ಶಿಲಾಸ್ತಂಭ ಬದ್ಧ, ಮದಗಜೇಂದ್ರ, ಮಹಾಮಹಿಮಾಭಿರಾಮ, ಕಾದಂಬ ಮಯೂರವರ್ಮ ಮಹಾಮಹೀಪಾಳ ಕುಳಭೂಷಣ, ಪೆರ್ಮಡಿತೂರ್ಯ ನಿರ್ಘೋಷಣ ಶಾ……………….ನ ಮಾನೋತ್ತುಂಗ, ಸಿಂಹಲಾಂಛನ ದತ್ತಾರ್ಥಿ ಕಾಂಚನ ಸಮರಜಯ ಕಾರಣ ಕಾದಂಬರಾಬಿ………… ಡ ಪ್ರತಾಪ ಮಾರ್ತಂಡ ಮಂಡಳಿಕ ಗಂಡ ಬಂಗಾಅ ನಿತ್ಯ ಖಿಳ ನಾಮಾವಳಿ ವಿರಾಜಿ………. ಮಹಾಮಂಡಳೇಶ್ವರಂ ಸೋಯಿದೇವ ರಸರುಂ………… [18] ಮಳವಳ್ಳಿ ಶಾಸನದಿಂದ”[19]

“ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಮಂಡಳಿಕಂ ವಿಜೆಯಂ ಲಕ್ಷ್ಮೀಕಾಂತ ಚಂಡರಿಪುನೃಪತಿ ಮಾರ್ತಂಡ ಕದನಕ್ಕೊಳ್ಗಂಡಂ…….. ಚತುರ್ಭುಜಾದೇವಿ ಲಬ್ದವರ ಪ್ರಸಾದಂ, ಭಗವತಿಯಂಕಕಾರಂ ಶ್ರೀ ಪ್ರಣಮೇರ್ಶವರ ದೇವ ಲಬ್ಧವರಪ್ರಸಾದ, ಬಂದಣಿಕೆಯ ಪುರವರಾಧೀಶ್ವರಂ……… “

ಮಾಯಿತಮ್ಮನ ಮುಚಡಿ ಶಾಸನದಲ್ಲಿ ‘ಬಂದಣಿಕೆ’ ಯ ಬದಲು ಅದರದೇ ಸಂಸ್ಕೃತ ರೂಪ ‘ಬಾನ್ದವ ಪುರಾಧೀಶ್ವರ’ ಎಂದು ಉಲ್ಲೇಖಿತವಾಗಿದೆ.[20]

ಬಂದಳಿಕೆ ಕದಂಬ ಅರಸರು

ನಾಗರಖಂಡದಲ್ಲಿ ಕದಂಬರ ಅರಸೊತ್ತಿಗೆ ಆರಂಭಿಸಿದವನು ಈಗ ತಿಳಿದುಬಂದಂತೆ ಬೋಡಯ್ಯ. ಈತನ ಕಾಲದ ರಾಜಕೀಯ ಸನ್ನಿವೇಶ ನೋಡಬೇಕು. ಕಲ್ಯಾಣ ಚಾಲುಕ್ಯ ಪ್ರಥಮ ದೊರೆ ತೈಲ (ಕ್ರಿ.ಶ. ೯೭೩-೯೯೭) ನು ಉತ್ತರದಲ್ಲಿ ಹಾನಗಲ್ಲು ಕದಂಬ ವಂಶದ ಮೂಲ ಪುರುಷ ಚಟ್ಟ (ಕ್ರಿ.ಶ. ೯೭೨-೧೦೧೫) ನು ಬನವಸೆಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ ನಾಗರಖಂಡವನ್ನು ಬೋಡಯ್ಯ (ಕ್ರಿ.ಶ. ೯೮೯) ರಲ್ಲಿ ಆಳುತ್ತಿದ್ದನು.[21] ಬೋಡಯ್ಯನ ತಂದೆ ಅಯ್ಯಣಯ್ಯ, ಈತ ನಾಗರಖಂಡ………….. ಆಳಿದ ಬಗೆಗೆ ದಾಖಲೆಗಳು ಲಭ್ಯವಾಗಿರುವುದಿಲ್ಲ.

ಕದಂಬರ ಆಳ್ವಿಕೆ ಆರಂಭದಲ್ಲಿಯೇ ಮುಗ್ಗರಿಸಿದಂತಿದೆ. ಬೋಡಯ್ಯನ ಅನಂತರ ಸತ್ತರರ ನಾಗಾರ್ಜುನ (ಕ್ರಿ.ಶ. ೯೯೫-೧೦೧೫) [22] ಸುಮಾರು ೨೦ ವರ್ಷ ಕಾಲ ನಾಗರಖಂಡವನ್ನು ಆಳಿದನು. ಪುನಃ ಬೋಡಯ್ಯನ ಮಗ ಅಯನಯ ಕಂಪಣವನ್ನು ವಶಪಡಿಸಿಕೊಂಡು (ಕ್ರಿ.ಶ. ೧೦೧೫) ಕದಂಬರ ಆಡಳಿತ ಮುಂದುವರರಿಸಿದನು. [23]

ಬ್ರಹ್ಮರಸ : (ಕ್ರಿ.ಶ. ೧೦೨೯-೧೦೭೯) ನಾಗರಖಂಡದ ೨-೩ ಶಾಸನಗಳ ಪ್ರಕಾರ ಈತನಿಂದಲೇ ಬಂದಳಿಕೆ ಕದಂಬವಂಶ ಪ್ರಾರಂಭವಾಯಿತು. ಈತನ ಕಾಲದಲ್ಲಿ ಕ.ಚ. ೬ನೆಯ ವಿಕ್ರಮಾದಿತ್ಯನ ತಂದೆ ೧ನೇ ಸೋಮೇಶ್ವರ ನಾಗರಖಂಡ ರಾಜಧಾನಿ ಬಂದಳಿಕೆಗೆ ಕ್ರಿ.ಶ. ೧೦೫೦ ರಲ್ಲಿ ಬಂದು ಹೋದದ್ದಾಗಿ ತಿಳಿದು ಬರುತ್ತದೆ.[24]ವಿಕ್ರಮಾದಿತ್ಯನು ಅಣ್ಣ ಸೋಮೇಶ್ವರನೊಂದಿಗೆ ಹೋರಾಡುವಾಗ ತಮ್ಮರಸನ ನೆರವು ಪಡೆದಿರುಲು ಸಾಕು. ಆದ್ದರಿಂದಲೇ ಎಂಬಂತೆ ಬಮ್ಮರಸನನ್ನು ಬನವಾಸಿ ಮಂಡಲಕ್ಕೆ ಮಹಾಸಾಮಂತಾಧಿಪತಿಯನ್ನಾಗಿ ನಿಯಮಿಸಿದ್ದಾನೆ.[25]ಬಮ್ಮರಸ ಸುಮಾರು ೫೦ ವರ್ಷಕಾಲ ನಾಗರಖಂಡವನ್ನು ಪರಿಪಾಲಿಸಿದನು. ಬಂದಳೀಕೆಯ ಈ ಬಮ್ಮರಸರನನ್ನು ಕೆಲವು ತಪ್ಪಾಗಿ ಕಳಚೂರ್ಯ ಬಿಜ್ಜಳನ ಅಳಿಯನೆಂದು ಭಾವಿಸಿದ್ದಾನೆ. ಬಿಜ್ಜಳನಿಗೂ ಇವನಿಗೂ ೧ ಶತಮಾನದ ಅಂತರವಿದೆ.

 

[1]ಡಾ.ಭೋಜರಾಜ ಪಾಟೀಲ. ‘ನಾಗರಖಂಡ ೭೦, ಒಂದು ಅಧ್ಯಯನ’ ಮಹಾಪ್ರಬಂಧ.

[2]ಎ.ಕ. (ಎಪಿಗ್ರಾಫಿಯಾ ಕರ್ನಾಟಿಕಾ, ರೈಸ ಸಂಪಾದಿತ( ಸಂ೭, ಶಿಕಾ ೨೬೩ ಮಳವಳ್ಳಿ ಕ್ರಿ.ಶ. ೧೫೦

[3]ಎ.ಕ. ಸಂ೮, ಸೊ ರ್ಳು ಗಿಣಿವಾಲ ಕ್ರಿ.ಶ. ೧೫೫೨.

[4]ಜೆ.ಎಂ.ನಾಗಯ್ಯ ಆರನೆಯ ವಿಕ್ರಮಾದಿತ್ಯನ ಶಾಸನಗಳು ೧೯೮೭.

[5]ಎ.ಕ. ಸಂ. ೮ ಸೊ ೨೬೩ ಕುಪಟೂರು ಕ್ರಿ.ಶ. ೧೩೪.

[6]ಎ.ಕ.ಸಂ. ೭ ಶಿಕಾ ೧೫೪ ಬಳ್ಳಿಗಾವೆ ಕ್ರಿ.ಶ. ೬೮೫.

[7]ಮೈ. ಆ.ರಿ. (ಮೈಸೂರು ಅರ್ಕಿಯಾಲಾಜಿಕಲ್ ರಿಪೋರ್ಟ್) ೧೯,೯, ಪುಟ ೫೦.

[8]ಕಲಬುರ್ಗಿ ಎಂ.ಎಂ. ಮಾರ್ಗ ಸಂ. ೧ ಪುಟ ೨೦೨ ೨೦೩

[9]ಮೈಗೆ, (ಮೈಸೂರು ಗೆಝೆಟಿಯರ್) ಸಂ ೨ ಪುಟ, ೪೯೭ ಮತ್ತು ನೋಡಿ ಇಂ ತ್ಸಿ. ೧೪ ೧೩ ೮*

[10]ಎ.ಕ.ಸಂ. ೭, ಶಿಕಾ ೧೫೪ ಬಳ್ಳಿಗಾವೆ ಕ್ರಿ.ಶ. ೬೮೫.

[11]ಅರ್ಕಿಯಾಲಾಜಿಕಲ್ ಸರ್ವೆ ಆಫ್ ಮೈಸೂರು ಎನ್ಯುವಲ್ ರಿಪೋರ್ಟ್ಸ್ ಸ.ಮೈ.ಎ.ರಿ.ಸಂ.೩ ೧೯೧೨. ಪುಟಗಳು ೧೪೫-೧೪೯.

[12]ಮಿರ್ಜಿ ಅಣ್ಣಾರಾಯರು ‘ಜೈನಧರ್ಮ’ ಪುಟ ೧೧೪.

[13]ಎ.ಕ.ಸಂ. ೭ ಶಿಕಾ ೨೧೯, ಬಂದಳಿಕೆ, ಕ್ರಿ.ಶ. ೯೧೮.

[14]ಎ.ಕ.ಸಂ. ೮ ಸೊ ೩೪೯ ಬೆಣ್ಣೇಗೆರೆ ಕ್ರಿ.ಶ. ೧೧೬೦.

[15]ಎ.ಕ.ಸಂ. ಶಿಕಾ ೨೪೨ ಬಂದಳಿಕೆ ಕ್ರಿ.ಶ. ೧೧೬೩.

[16]ಎ.ಕ.ಸಂ. ೭ ಶಿಕಾ ೧೯೭ ಚಿಕ್ಕ ಮಾಗಡಿ ಕ್ರಿ.ಶ. ೧೧೮೨.

[17]ಎ.ಕ.ಸಂ. ೭ ಶಿಕಾ.೨೩೬ ಬಂದಳಿಕೆ ಕ್ರಿ.ಶ. ೧೧೭೪.

[18]ಎ.ಕ.ಸು೮ ಸಂ. ೩೪೬. ಬೆಣ್ಣಿಗೇರಿ.

[19]ಎ.ಕ. ಸು ೮ ಸಂ-೨೪೭. ಮಳವಳ್ಳಿ ಕ್ರಿ.ಶ. ೧೧೪೭.

[20]ಎ.ಕ.ಸಂ.೭ ಶಿಕಾ ೨೭೭. ಮಾ.ಮುಚಡಿ ಕ್ರಿ.ಶ. ೧೧೬೫.

[21]ಎ.ಕ. ಸಂ.೮ ಸೊ-೪೧೩ ಹಿರೇಮಾಗಡಿ ಕ್ರಿ.ಶ. ೯೮೬.

[22]ಎಇಂ. (ಎಫಿಗ್ರಾಫಿಯಾ ಇಂಡಿಕಾ) ೩೩ ಪುಟ: ೧೩೧-೧೩೩ ಹಿರೇಕೆರೂರು (ತಾ) ಚಿಕ್ಕೇರೂರು ಕ್ರಿ.ಶ. ೯೯೫.

[23]ಎ.ಕ. ಸಂ. ೮ ಸೊ-೩೮೦ ಎಲೆವಾಳ, ಕ್ರಿ.ಶ. ೧೦೧೫.

[24]ಬಿ.ಎಲ್. ರೈಸ ಮೈಸೂರು ಎಂಡ ಕೂರ್ಗ ಪುಟ-೭೫.

[25]ಎ.ಕ.ಶಿಕಾ-೧೨೪ ಬಳ್ಳಿಗಾವಿ ಕ್ರಿ.ಶ. ೧೦೭೭.