ಬೊಪ್ಪರಸ : (ಕ್ರಿ.ಶ. ೧೦೭೮-೧೧೩೮) ಬಮ್ಮರಸ-ಚಟ್ಟಲದೇವಿಯರ ಪುತ್ರನಾದ ಈತ ಸುಮಾರು ೬೦ ವರ್ಷಗಳಷ್ಟು ಸುದೀರ್ಘ ಕಾಲ ನಾಗರಖಂಡವನ್ನಾಳಿದನು. ಹಾನಗಲ್ಲ ಕದಂಬ ದೊರೆ ಶಾಂತಿವರ್ಮ ತನ್ನ ಪುತ್ರಿ ಶ್ರೀದೇವಿ (ಸಿರಿಯಾದೇವಿ) ಯನ್ನು ಇವನಿಗೆ ಕೊಟ್ಟು ಬಾಂಧವ್ಯ ಬೆಳೆಸಿದನು.[1]

ಇವನ ಕಾಲದಲ್ಲಿ ಹೊಯ್ಸಳರು ದಕ್ಷಿಣದಲ್ಲಿ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯತೊಡಗಿದ್ದರು. ಈ ಕಾರಣದಿಂದಾಗಿ ಹೊಯ್ಸಳರಿಗೂ ಚಾಲುಕ್ಯರಿಗೂ ಗಡಿಗಳಲ್ಲಿ ಆಗಾಗ ಕಾಳಗಗಳು ನಡೆಯುತ್ತಿದ್ದವು. ಹೊಯ್ಸಳರು ಬನವಾಸಿಯ ಮೇಲೆ ದೃಷ್ಟಿಯಿಟ್ಟಿದ್ದರು. ಬನವಾಸಿ ಹಾನಗಲ್ಲ ಕದಂಬರ ವಶದಲ್ಲಿತ್ತು. ಆದ್ದರಿಂದ ನಾಗರಖಂಡದ ಮೇಲೂ ಚಾಲುಕ್ಯರು ಸದಾ ಗಮನವಿಡುತ್ತಿದ್ದರು.

ಬೊಪ್ಪರಸನ ಕಾಲದಲ್ಲಿ ಅನೇಕ ಚಿಕ್ಕಪುಟ್ಟ ಕಾಳಗಗಳು ಕಂಪಣದಲ್ಲಿ ನಡೆದಿವೆ. ಬೊಪ್ಪರಸನ ಅಳಿಯಂದಿರೇ ಆದ ಹಾನಗಲ್ಲ ಕದಂಬರ ೨ನೆಯ ತೈಲಪ ೧೦೮೪ ರಲ್ಲಿ ಹಾಗೂ ಕೀರ್ತಿವರ್ಮ ೧೧೧೬ರಲ್ಲಿ ಈ ಕಂಪಣದ ಗ್ರಾಮಗಳ ಮೇಲೆ ದಾಳಿ ಮಾಡಿದರು.

ಸೋವಿದೇವ : (ಕ್ರಿ.ಶ. ೧೧೩೯-೧೧೭೭) ನಾಗರಖಂಡ ಕದಂಬವಂಶದ ದೊರೆಗಳಲ್ಲಿ ಅತ್ಯಂತ ಪ್ರಖ್ಯಾತನಾದವ ಸೋಯಿದೇವ. ಬೊಪ್ಪರಸ ಸಿರಿಯಾದೇವಿಯರ ಪುತ್ರನಾದ ಈತನು ಸು. ೩೮ ವರ್ಷ ಕಾಲದ ರಾಜಕೀಯ ಜೀವನದಲ್ಲಿ ಚಾಲುಕ್ಯ ಭೂಲೋಕಮಲ್ಲ ಸೋಮೇಶ್ವರ ಮತ್ತು ೨ನೆಯ ಜಗದೇಕಮಲ್ಲರಂಥ ಈರ್ವರು ಚಾಳುಕ್ಯ ಚಕ್ರವರ್ತಿಗಳನ್ನು, ಬಿಜ್ಜಳ ರಾಯಮುರಾರಿ ಸೋವಿದೇವ, ಸಂಕಮರಂಥ ಮೂವರು ಕಳಚೂರ್ಯ ಚಕ್ರವರ್ತಿಗಳ ಆಡಳಿತವನ್ನು ಕಂಡ ಅಪರೂಪದ ಮಂಡಳೇಶ್ವರನು.

ರಾಜಕೀಯ ಸ್ಥಿತ್ಯಂತರಗಳ ಅತ್ಯಮತ ಮಹತ್ವದ ಕಾಲದಲ್ಲಿ ಸೋವಿದೇವ ರಾಜ್ಯವಾಳಿದನು. ಇವನ ಆಳ್ವಿಕೆಯ ಪ್ರಾರಂಭ ಕಾಲದಲ್ಲಿ ಹೊಯ್ಸಳರಿಗೂ ಚಾಲುಕ್ಯ ನಿಷ್ಠ ಹಾನಗಲ್ಲ ಕದಂಬರಿಗೂ ವೈರತ್ವ ಬೆಳೆದಿತ್ತು. ಇಂಥ ಹಿನ್ನೆಲೆಯಲ್ಲಿ ನಾಗರಖಂಡದ ಗ್ರಾಮಗಳಲ್ಲಿ ಹೊಯ್ಸಳರ ಸೈನಿಕರು ನುಗ್ಗಿ ತುರುಗಳನ್ನು ಅಪಹರಿಸುತ್ತಿದ್ದುದು ಸಾಮಾನ್ಯವಾಗಿತ್ತು. ಹೊಯ್ಸಳ ವಿಷ್ಣುವರ್ಧನನು ಗಂಗವಾಡಿ, ನೊಳಂಬವಾಡಿ, ತಲಕಾಡುಕೋಟೆ, ಉಚ್ಚಂಗಿ, ಬನವಾಸಿಕೋಟೆ, ಹಾನಗಲ್ಲಗಳನ್ನು ಮುತ್ತಿ ವಿಜಯ ಸಾಧಿಸಿದ್ದನು.[2]ಬನವಾಸಿಯಲ್ಲಿ ಹೊಯ್ಸಳರ ರಾಜಪ್ರತಿನಿಧಿಯಾಗಿ ಮುಧುಕರಸನು ಆಡಳಿತ ನಡೆಸುತ್ತಿದ್ದನು.

ಇದೇ ಕಾಲದಲ್ಲಿ ಕಲ್ಯಾಣ ಚಾಳುಕ್ಯರ ಆಳ್ವಿಕೆ ಅಂತ್ಯವಾಗಿ, ಕಳಚೂರ್ಯರದು ಪ್ರಾರಂಭವಾದಾಗ ಹಾನಗಲ್ಲು ಕದಂಬರು ಈ ಬದಲಾವಣೆಯನ್ನು ಕೂಡಲೇ ಒಪ್ಪಿಕೊಂಡಂತೆ ಕಂಡು ಬರುವುದಿಲ್ಲ. ಆದ್ದರಿಂದ ಬಿಜ್ಜಳ ಬನವಾಸಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಕದಂಬರ ಮೇಲೆ ಯುದ್ಧ ಮಾಡಬೇಕಾಗಿ ಬಂದಿತು.[3]ಬಿಜ್ಜಳನಿಗೆ ಚಾಲುಕ್ಯ ಸಿಂಹಾಸನ ದೊರಕಿಸಿಕೊಡುವಲ್ಲಿ ಅಳಿಯ ಬಮ್ಮರಸನಂತೆ ದಂಡನಾಯಕ ರೇಚರಸನೂ ಕಾರಣನಾಗಿದ್ದನು.[4]ರೇಚರಸ ೧೪೨ರಲ್ಲಿಯೇ ಬನವಾಸಿಗೆ ರಾಜಪ್ರತಿನಿಧಿಯಾಗಿದ್ದನು. ಆದ್ದರಿಂದ ಬನವಾಸಿ ಮಂಡಲದ ಎಲ್ಲ ಸಾವಂತ ಅರಸರ ಬಲಾಬಲಗಳ ಪರಿಚಯ ಬಿಜ್ಜಳ ಹಾಗೂ ಅವನ ಈ ವಿಧೇಯ ದಂಡನಾಯಕರಿಗೆ ಚೆನ್ನಾಗಿದ್ದಿತು. ಹಾನಗಲ್ಲು ಕದಂಬರ ಮೇಲೆ ಹಿಡಿತ ಸಾಧಿಸಲು ಇವರು ಅದೇ ವಂಶದ ನಾಗರಖಂಡದ ಸೋಯಿದೇವನನ್ನು ಆರಿಸಿಗೊಂಡರು. ಹಾನಗಲ್ಲು ಕದಂಬರ ವಿರುದ್ಧ ಇವನನ್ನು ಎತ್ತಿಕಟ್ಟಿ ಸ್ವತಂತ್ರನಾಗಲು ಪ್ರಚೋದಿಸಿದುದಕ್ಕೆ ೧೧೪೪ರ ದಾಖಲೆಗಳು ಆಧಾರ ಒದಗಿಸುತ್ತವೆ.[5]

ಕಳಚೂರ್ಯ ಬಿಜ್ಜಳ-ಸೋವಿದೇವರ ಮಧ್ಯ ಮಧುರ ಬಾಂಧವ್ಯ ಬೆಳೆದು ಸೋಯಿದೇವನನ್ನು ಬನವಾಸಿಗೆ ಮಹಾಮಂಡಳೇಶ್ವರನನ್ನಾಗಿ ನಿಯಮಿಸಿದನು.[6] ರಾಯಮುರಾರಿ ಸೋವಿದೇವನ ಕಾಲದಲ್ಲಿ ಈ ಬಾಂಧವ್ಯ ಇನ್ನಷ್ಟು ಗಟ್ಟಿಗೊಂಡಿತು. ಕಳಚೂರ್ಯರು ನಾಗರಖಂಡ ಕದಂಬರನ್ನು ತಮ್ಮ ವಂಶದ ಒಂದು ಕುಡಿಯೆಂದೇ ಭಾವಿಸಿದರು. ಈ ಹಿಂದೆ ಪ್ರಸ್ತಾಪಿಸಲಾದ ಬಂದಳಿಕೆಯ ವಂಶಾವಳಿ ಕೊಡುವ ಶಾಸನ ಇದಕ್ಕೆ ಆಧಾರವಾಗಿದೆ.

ಸೋವಿದೇವನ ಕಾಲದಲ್ಲಿಯೇ ಬಿಜ್ಜಳ ಬಳ್ಳಿಗಾವೆಗೆ ಆಗಮಿಸಿದ್ದನು. ಆಗ ಉಪಸ್ಥಿತರಿದ್ದ ಮಂಡಳೇಶ್ವರರಲ್ಲಿ ಸೋವಿದೇವನೂ ಓರ್ವನು.[7]ಅಬಲೂರಿನಲ್ಲಿ ಏಕಾಂತರಾಮಯ್ಯನ ಶಿರಸ್ಯದಿವ್ಯ ಈ ಕಾಲದಲ್ಲಿಯೇ ಜರುಗಿತು. ಆದ್ದರಿಂದ ಬಿಜ್ಜಳ ಅಬಲೂರಿಗೆ ಭೆಟ್ಟಿಕೊಟ್ಟು ಬಳ್ಳಿಗಾವೆಗೆ ಬಂದಂತಿದೆ.

ಹೊಯ್ಸಳರ ಮಾಂಡಳಿಕರಾಗಿದ್ದ ಚಂಗಾಳ್ವರ ಮೇಲೆ ಸೋವಿದೇವ ದಾಳಿ ಮಾಡಿ ಚಂಗಾಳ್ವ ಅರಸನನ್ನು ಪರಾಭವಗೊಳಿಸಿ ಬಂಧಿಸಿದನು.[8]ಈ ಕಾಳಗದಲ್ಲಿ ತೋರಿದ ಪರಾಕ್ರಮ ಅವನಿಗೆ ಕದಂಬರುದ್ರ, ಮಂಡಳಿಕಬೈರವ ಮುಂತಾದ ಬಿರುದುಗಳನ್ನು ತಂದುಕೊಟ್ಟಿರಲು ಸಾಕು.

ಕ್ರಿ.ಶ. ೧೧೭೭ರ ಒಂದು ದಾಖಲೆ ಗುತ್ತಿ ಮಲ್ಲಿದೇವನ ರಾಣಿ ಪದುಮಲದೇವಿ ಸೋಯಿದೇವನನ್ನು ವಿರೋಧಿಸಿ ಕುಪಟೂರನ್ನು ಸೊರೆಗೈದು ದನಗಳನ್ನು ಒಯ್ದಳೆಂದು ತಿಳಿಸುತ್ತದೆ.೩೩

ಸೋಯಿದೇವನು ಬನವಾಸಿ ಮಂಡಲಕ್ಕೆ ಚಕ್ರವರ್ತಿ ಪ್ರತಿನಿಧಿಗಳಾಗಿ ಆಗಮಿಸಿದ ರೇಚರಸ, ಬರ್ಮರಸ, ಮಹದೇವರಸ, ಕಸಪಯ್ಯ, ಮಾಯಿದೇವ, ಪದ್ಮರಸರಂತಹ ಮಹಾನ್ ದಂಡನಾಯಕ ಸಹವಾಸ ಮಾಡಿದ್ದಾನೆ.

ಓರ್ವ ಸ್ವತಂತ್ರ ರಾಜನಿಗಿರಬೇಕಾದ ಅರ್ಹತೆಗಳೆಲ್ಲವೂ ಸೋಯಿದೇವನಲ್ಲಿದ್ದವು ಎಂದರೆ ಅತಿಶಯೋಕ್ತಿಯಾಗಲಾರದು.

ಬೊಪ್ಪದೇವ : (ಕ್ರಿ.ಶ. ೧೭೯-೧೧೮೯) ಈತನ ಕಾಲದಲ್ಲಿ ಕುತೂಹಲಕರ ಘಟನೆಯೊಂದು ಜರುಗಿತು.

ನಾಗರಖಂಡ-೭೦ ರ ಬಳಿಯ ಬಾಡ ಚಿಕ್ಕಮಾಗಡಿಯಲ್ಲಿ ಸಾಮಂತ ಶಂಕರ ಶಾಂತಿನಾಥ ಜಿನಾಲಯ ನಿರ್ಮಿಸಿದನು. ಅದರ ಪೂಜಾ ಸಮಾರಂಭಕ್ಕೆಂದು ಹೊಯ್ಸಳ ೨ನೆಯ ವೀರಬಲ್ಲಾಳ ಸ್ವತಃ ತನ್ನ ಪರಿವಾರ ಹಾಗೂ ಸೈನ್ಯದೊಂದಿಗೆ ಹೊರಟುಬಂದು ಸಮೀಪದ ತಾಳಗುಂದದಲ್ಲಿ ಬೀಡುಬಿಟ್ಟನು. ಅತ್ತ ಕಲ್ಯಾಣದಿಂದ ಕಳಚೂರ್ಯ ಆಹವಮಲ್ಲನೂ ಸೈನ್ಯಸಮೇತ ಆಗಮಿಸಿ ಈಗಿನ ರಾಣೆಬೆನ್ನೂರು ತಾಲೂಕ ಮುದೆನೂರಲ್ಲಿ ಬೀಡುಬಿಟ್ಟನು. ಆದರೆ ಪೂಜಾ ಸಮಾರಂಭಕ್ಕೆಂದು ಬಂದಳಿಕೆಯಲ್ಲಿಯೇ ಇದ್ದ ತನ್ನ ದಂಡನಾಯಕ ರೇಚಿದೇವರಸನನ್ನು ಕಳಿಸಿದನು. [9]

ಪರಸ್ಪರ ವೈರತ್ವವುಳ್ಳ ಎರಡು ರಾಜಮನೆತನಗಳು ಒಂದೇ ಕಾರ್ಯಕ್ರಮಕ್ಕೆಂದು ಆಗಮಿಸಿದ್ದು ಈರ್ವರ ಸೈನ್ಯಗಳೂ ಸಮೀಪದಲ್ಲಿ ಬೀಡು ಬಿಟ್ಟದ್ದೂ ಅಪೂರ್ವ ಐತಿಹಾಸಿಕ ಸಂಗತಿಯೆನಿಸದಿರಲಾರದು.

ಈ ಘಟನೆ ಕುರಿತು ಮೊರೇಸ್ರು ‘ಕದಂಬಕುಲ’ ದಲ್ಲಿ ತಪ್ಪಾಗಿ ಬರೆದಿದ್ದಾರೆ. [10]

ಬೊಪ್ಪದೇವನ ಕಾಲದಲ್ಲಿಯೇ ಕಲ್ಯಾಣದಲ್ಲಿ ಕಳಚೂರ್ಯ ಆಳ್ವಿಕೆ ಸಮಾಪ್ತವಾಗಿ ಚಾಳುಕ್ಯ ೪ನೆಯ ಸೋಮೇಶ್ವರ ಪಟ್ಟಕ್ಕೆ ಬಂದಿದ್ದಾನೆ. ಇದನ್ನು ತಿಳಿಸುವ ಮೊದಲ ಶಾಸನ ನಾಗರಖಂಡದ ಅಬಲೂರಲ್ಲಿದೆ. [11]

ಕಲ್ಯಾಣ ಚಾಲುಕ್ಯ ೪ನೆಯ ಸೋಮೇಶ್ವರ ಹಾಗೂ ಚಾಲುಕ್ಯ ರಾಜ್ಯ ಪ್ರತಿಷ್ಠಾಪಕನಾದ ದಂಡನಾಯಕ ಕುಮಾರ ಬಮ್ಮಿದೇವ ಕ್ರಿ.ಶ. ೧೧೮೬ರ ಅನಂತರ ವಿಷಮ ರಾಜಕೀಯ ಪರಿಸ್ಥಿತಿಯಿಂದಾಗಿ ಬನವಾಸಿಗೆ ಹೋದರೆಂದು ಹೇಳಲಾಗಿದೆ.[12] ಆದರೆ ಅವರು ಬಂದದ್ದು ಬನವಾಸಿ ಮಂಡಲದ ನಾಗರಖಂಡದ ಸಿಲೆಯಹಳ್ಳಿ ಕೊಪ್ಪಕ್ಕೆ. [13]

ಅಂಥ ವಿಷಮಸ್ಥಿತಿಯಲ್ಲಿಯೂ ಸೋಮೇಶ್ವರನು ತಾನಿದ್ದ ಗ್ರಾಮಕ್ಕೆ ಏಕಾಂತ ರಾಮಯ್ಯನನ್ನು ಬರಮಾಡಿಕೊಂಡು ತನ್ನ ನಿವಾಸದಲ್ಲಿ ಪೂಜಿಸಿ ಅಬಲೂರನ್ನು ದತ್ತಿಯಾಗಿ ಕೊಟ್ಟನು.

ಬ್ರಹ್ಮ ಭೂಪಾಲ : (ಕ್ರಿ.ಶ. ೧೨೦೨-೧೨೨೩) ಬೊಪ್ಪದೇವ ಮಾಳಲದೇವಿಯರ ಪುತ್ರನು. ಇವನ ಆಡಳಿತದ ಕೊನೆಯ ಕಾಲಕ್ಕೆ ಹೊಯ್ಸಳರು ರಾಜಧಾನಿ ಬಂದಳಿಕೆಯಲ್ಲಿಯೇ ತಮ್ಮ ಪ್ರತಿನಿಧಿಯಾಗಿ ಕಮ್ಮಟದ ಮಲ್ಲಿದೇವ ದಂಡನಾಯಕನನ್ನು ಪ್ರತಿಷ್ಠಾಪಿಸಿದರು. ಅಲ್ಲಿಮದ ಸು. ೨೦ ವರ್ಷ ಕಾಲ ಮಲ್ಲಿದೇವ ಕಂಪಣದ ಮೇಲೆ ಬಲವಾದ ಹಿಡಿತ ಸಾಧಿಸಿದನು. ಬ್ರಹ್ಮ ಭೂಪಾಲ ಹೆಸರಿಗೆ ಅರಸನಾಗಿ ಉಳಿದನು. ಹೊಯ್ಸಳರು ಬಂದಳಿಕೆ ಕೇಂದ್ರ ಮಾಡಿಕೊಂಡು ಸುತ್ತಲಿನ ಕಂಪಣಗಳ ಮೇಲೆ ಆಗಾಗ ಧಾಳಿ ಮಾಡುತ್ತಿದ್ದರು.

ಮಲ್ಲಣ ದಂಡನಾಯಕ ಕ್ರಿ.ಶ. ೧೨೦೭ ರವರೆಗೆ ಬಂದಳಿಕೆಯಲ್ಲಿಯೇ ವಾಸವಾಗಿದ್ದನು. ಇಲ್ಲಿಯ ಬ್ರಹ್ಮಪುರಿಗೆ ಮಲ್ಲಣ ದತ್ತಿಬಿಡುವ ಸಂದರ್ಭದಲ್ಲಿ ಹೊಯ್ಸಳ ವೀರಬಲ್ಲಾಳನ ಪರಿಯರಸಿ ಅಭಿನವ ಕೇತಲ ಮಹಾದೇವಿ ಬಂದಳಿಕೆಗೆ ಆಗಮಿಸಿ ತನ್ನ ಸೋದರ ಮಾಧವ ದಂಡನಾಯಕ ಬಿಟ್ಟ ದತ್ತಿಯನ್ನು ದೃಢೀಕರಿಸುತ್ತಳೆ.[14]ಬಂದಳಿಕೆಯ ಮಹತ್ವದ ಈ ಶಾಸನದಲ್ಲಿ ಅರಸ ಬ್ರಹ್ಮ ಭೂಪಾಲನ ಹೆಸರೇ ಇರದಿರುವುದು ಗಮನಾರ್ಹವಾಗಿದೆ.

ಕಳಚೂರ್ಯರ ಅನಂತರ ಉತ್ತರದಲ್ಲಿ ಪ್ರಬಲರಾದ ಸೇವುಣರಿಗೆ ದಕ್ಷಿಣದ ಹೊಯ್ಸಳರು ವೈರಿಗಳಾಗಿದ್ದರು. ಸೇವುಣರ ಸಿಂಘಣ ಕ್ರಿ.ಶ. ೧೨೧೨ರಲ್ಲಿ ಬಂದಳಿಕೆ ಮೇಲೆ ಧಾಳಿ ಮಾಡಿದನು.[15]ಸೇವುಣ ಸೈನಿಕರು ಬಂದಳಿಕೆ ಸಂಪತ್ತು ಲೂಟಿ ಮಾಡಿದ್ದಾಗಿ ದೋರವಳ್ಳಿ ಶಾಸನ ಹೇಳುತ್ತದೆ.

ಈ ಧಾಳಿಯಿಂದ ನಾಗರಖಂಡದ ಮೇಲೆ ಹೊಯ್ಸಳರ ಹಿಡಿತ ತಪ್ಪಿ ಸೇವುಣರ ಪ್ರಭುತ್ವ ಪ್ರಾರಂಭವಾಯಿತು. ಬ್ರಹ್ಮ ಭೂಪಾಲನಿಗೆ ಸಿಂಘಣನು ಸ್ವಾತಂತ್ರ್ಯವಿತ್ತನು. ಆದರೆ ಅವನನ್ನು ಹೊಯ್ಸಳರ ವಶದಲ್ಲಿರುವ ಜಿಡ್ಡುಳಿಗೆ ಮತ್ತು ಎಡೆವೆಟ್ಟ ಕಂಪಣಗಳನ್ನು ಬಿಡಿಸಿಕೊಳ್ಳಲು ಬಳಸಿಕೊಂಡನು. ಈ ಎರಡೂ ಯುದ್ಧಗಳಲ್ಲಿ ಬ್ರಹ್ಮ ಭೂಪಾಲ ವಿಜುಯಿಯಾದನು.

ಇಲ್ಲಿಂದ ಮುಂದಿನ ಈರ್ವರು, ಬೋಕನಬೊಪ್ಪ ಹಾಗೂ ಇಮ್ಮಡಿ ಸೋಯಿದೆವರಸರು, ಸೇವುಣರ ಆಜ್ಞಾನುವರ್ತಿಗಳಾಗಿ ನಡೆದುಕೊಂಡರು. ಪದ್ಮಣನ ಮಗ ನೆಣಸಿದೇವನು ಕ್ರಿ.ಶ. ೧೨೪೮ರಲ್ಲಿ ಸೇವುಣರ ಪ್ರತಿನಿಧಿಯಾಗಿ ಬಂದಳಿಕೆಯಲ್ಲಿಯೇ ಇದ್ದನು.[16]ಕುಮಾರ ಬೊಮ್ಮಿ ದೇವರಸನೇ ಅದನ್ನು ನಡೆಸಿಕೊಟ್ಟನು.

ಕೊನೆಯದಾಗಿ ವಿಜಯನಗರ ಸಂಗಮ ವಂಶದ ದೊರೆ ಬುಕ್ಕರಾಯನ ಕಾಲದಲ್ಲಿ ನಾಗರಖಂಡದ ಮುಚಡಿ ಗ್ರಾಮವನ್ನು ಅಗ್ರಹಾರವಾಗಿ ಪರಿವರ್ತಿಸಲಾಯಿತು.

ವೀರಬುಕ್ಕರಾಯನ ಮಹಾಪ್ರಧಾನನೂ ಕಾಶಿವಿಲಾಸ ಕ್ರಿಯಾಶಕ್ತಿ ಗುರುಗಳ ಶಿಷ್ಯನೂ ಆದ ಮಾದರಸ ಒಡೆಯನು ಅರಸನ ಹಾಗೂ ಗುರುವಿನ ಅಭಿಪ್ರಾಯದ ಮೇರೆಗೆ ಈ ಅಗ್ರಹಾರ ಸ್ಥಾಪಿಸಿದ.[17]

ಇಲ್ಲಿ ಬರುವ ಮಾದರಸ ಬುಕ್ಕರಾಯನ ಸೋದರನು ಹಾಗೂ ಕಾಶಿವಿಲಾಸ ಕ್ರಿಯಾಶಕ್ತಿಯಾಚಾರ್ಯರು ಈ ವಂಶದ ಗುರುಗಳು. ಇವರಿಂದಲೇ ವಿಜಯನಗರ ಸ್ಥಾಪನೆಗೆ ಪ್ರೇರಣೆಯಾಯಿತೆಂಬ ವಾದಕ್ಕೆ ಇಲ್ಲಿಯ ಸಂಗತಿಯೂ ಶಾಸನವೂ ಪುಷ್ಟಿಕೊಡುತ್ತವೆ.

ಇಲ್ಲಿಗೆ ಬಂದಳಿಕೆ ಅರಸರ ರಾಜಕೀಯ ಚರಿತ್ರೆ ಸಮಾಪ್ತವಾದಂತೆ ಆಗುತ್ತದೆ.

ನಾಗರಖಂಡದ ಆರ್ಥಿಕ ವ್ಯವಸ್ಥೆ ಒಟ್ಟು ಕರ್ನಾಟಕದ ಆರ್ಥಿಕ ವ್ಯವಸ್ಥೆಗೆ ಹೊಂದಿಕೊಂಡೇ ಹೋಗಿದ್ದರೂ ಹೇಳಿಕೊಳ್ಳುವಂಥ ಒಂದೆರಡು ಸಂಗತಿಗಳು ಇಲ್ಲದೆ ಹೋಗಿಲ್ಲ. ‘ಕಾರ್ಪಟೇಶ್ವರ ಮಾನ’ ವೆಂಬ ಭೂಮಾಪನ ೬ನೆಯ ಶತಮಾನದಷ್ಟು ಪೂರ್ವಾದಲ್ಲಿಯೇ ಇಲ್ಲಿ ಬಳಕೆಯಾಗಿದೆ.[18] ನಿರ್ದಿಷ್ಟ ನಾಮಾಂಕಿತ ಅಳತೆಗೋಲಿನ ಮೊದಲ ಉಲ್ಲೇಖವಿದು. ಈ ಕಂಪಣದ ಒಂದು ಗ್ರಾಮವಾದ ಕಚ್ಚವಿಯ ಹೆಸರಿನಿಂದ ಹೊರಟ ‘ಕಚ್ಛವಿಯಗಳೆ’ ಸುತ್ತುವರಿದ ಎಲ್ಲ ಕಂಪಣಗಳಿಗೂ ಒಂದು ಕೊಡುಗೆಯಾಗಿದೆ.

ನಾಗರಖಂಡ ನಾಡಿಗೆ ಬಹಳ ದೂರದ ಪ್ರದೇಶದಿಂದ ವ್ಯಾಪಾರಿಗಳು ಬರುತ್ತಿದ್ದರು. ಕ್ರಿ.ಶ. ೧೧೨೯ರ ಚಿಕ್ಕೇರೂರಿನ ಒಂದು ಶಾಸನದಲ್ಲಿ ದೇವಿಸೆಟ್ಟ ಆಸವಿಯಿಂದ ಬನವಾಸಿ ದೇಶಕ್ಕೆ ಬಂದಿದ್ದನೆಂದು ಹೇಳಿದೆ. ಪ್ರಸ್ತುತ ಆಸವಿಗಂಗಾ-ಯಮುನಾ ನದಿಗಳ ನಡುವಿನ ಪಟ್ಟಣವೆಂದು ಶಾಸನ ತಿಳಿಸುತ್ತದೆ. ಅದರಂತೆ ಮಿರಿಂಜಿ (ಮಿರಜ) ಯಿಂದಲೂ ಬಂದಳಿಕೆಗೆ ವ್ಯಾಪಾರಸ್ಥರು ಬಂದಿರುತ್ತಾರೆ.

ಸಾಂಸ್ಕೃತಿಕ ಚರಿತ್ರೆ

ಧರ್ಮಗಳು

ಭಾರತದಲ್ಲಿ ಸಾಮಾನ್ಯವಾಗಿದ್ದ ವರ್ಗ, ವರ್ಣ, ಜಾತಿಗಳು ನಾಗರಖಂಡದಲ್ಲಿ ಕಂಡುಬಂದರೂ ಅವುಗಳ ಆಚರಣೆ ಇಲ್ಲಿ ಬಿಗಿಯಾಗಿರಲಿಲ್ಲ. ಕುಪಟೂರು ಶಾಸನ ಈ ಮಾತನ್ನು ಎತ್ತಿ ಹೇಳಿದೆ.[19]ಜಾತಿ ವಿಜಾತಿಯೆಂದು ಹಿಡಿಹಿಡಿದು ಎಳೆಯತ್ತಿ ನುಡಿವವನು ಅಷ್ಟಾಂಗ ದ್ರೋಹನುಂ ನಾಲ್ಕು ನಾಡಿಗೆಯೂ ಹದಿನೆಂಟು ಸಮಯಕೆಯೂ ಕೂಡೆ ದ್ರೋಹಿ ನಾಡಾಳ ಕೈಯ ಸಾಯ ಸಾಯುವನು’. ಇಲ್ಲಿಯ ಉದಾರ ಧೋರಣೆ ಸರ್ವಕಾಲಕ್ಕು ಆದರ್ಶವಾಗಿ ನಿಂತಿದೆ.

ನಾಗರಖಂಡದಲ್ಲಿ ನಾಗಾರಾಧನೆ, ಸೂರ್ಯಾರಾಧನೆಯಂತಹ ಪ್ರಾಚೀನ ಧರ್ಮಗಳಿಂದ ಹಿಡಿದು ಶೈವ, ವೈಷ್ಣವ, ವೀರಶೈವ, ಜೈದಂತಹ ಸುಧಾರಿತ ಧರ್ಮಗಳೂ ನೆಲೆಗೊಂಡಿವೆ.

ಸೂರ್ಯಾರಾಧನೆ : ನಾಗಾರಾಧನೆಯಂತೆ ವ್ಯಾಪಕವಾಗಿಯಲ್ಲದಿದ್ದರೂ ಸೂರ್ಯಾರಾಧನೆ ಇಲ್ಲಿ ಪ್ರಚಲಿತವಾಗಿತ್ತು. ಅನೇಕ ಶೈವದೇವಾಲಯಗಳ ದೇವಕೋಷ್ಠಗಳಲ್ಲಿ ಸೂರ್ಯ ವಿಗ್ರಹಗಳು ಪ್ರತಿಷ್ಠಿತವಾಗಿವೆ. ಅಬಲೂರಿನ ಬ್ರಹ್ಮೇಶ್ವರ ದೇವಾಲಯದಲ್ಲಿ ನಂದಿಯ ಹಿಂದೆ ಪ್ರತ್ಯೇಕ ಗರ್ಭಗೃಹದಲ್ಲಿ ಬೃಹತ್ತಾದ ಸೂರ್ಯವಿಗ್ರಹ ನಿಂತಿದೆ. ಸೂರ್ಯಾರಾಧನೆ ನಿಮಿತ್ಯ ಕಿರಣ ಸ್ತಂಭಗಳನ್ನು ಮಾಯಿತಮ್ಮನ ಮುಚಡಿ, ಮಳವಳ್ಳಿ ಗ್ರಾಮಗಳಲ್ಲಿ ಪ್ರತಿಷ್ಠಿಸಲಾಗಿತ್ತು.[20] ಸೂರ್ಯಗ್ರಹಣದಂದು ಕಿಚ್ಚಿನಲ್ಲಿ ಹಾರಿಕೊಂಡು ಸೂರ್ಯಬಲಿಯಾದ ಎರಡು ಘಟನೆಗಳೂ ಇಲ್ಲಿ ಜರುಗಿವೆ.[21]

ಶೈವಧರ್ಮ : ಕರ್ನಾಟಕದಂತೆ ನಾಗರಖಂಡದ ಪ್ರಾಚೀನವೂ ವ್ಯಾಪಕವೂ ಆದ ಧರ್ಮ ಶೈವ ಧರ್ಮ. ಮಳವಳ್ಳಿಯ ಕ್ರಿ.ಶ. ೨ನೆಯ ಶತಮಾನದ ಚುಟು ಶಾಸನ, ೪ನೆಯ ಶತಮಾನದ ಕದಂಬ ಶಾಸನಗಳು ಕರ್ನಾಟಕದ ಶೈವ ಪರಂಪರೆ ದೃಷ್ಟಿಯಿಂದ ಅತ್ಯಂತ ಮಹತ್ವದ ದಾಖಲೆಗಳಾಗಿವೆ. ಮೊದಲ ಶಸನ ಮಹಾದೇವನಿಗೆ ದತ್ತಿ ಬಿಟ್ಟದ್ದನ್ನು ಉಲ್ಲೇಖಿಸುತ್ತದೆ. ಅದೇ ರೀತಿ ತಾಳಗುಂದದ ಪ್ರಣವೇಶ್ವರನನ್ನು ಚುಟುಗಳೂ ಕದಂಬರೂ ಪೂಜಿಸಿದ್ದಾರೆ.

ಶೈವಧರ್ಮದ ಪಂಗಡಗಳಾದ ಕಾಳಾಮುಖ, ನಾಥ, ಕೌಳ ಪಂಥಗಳೂ ನಾಗರಖಂಡದಲ್ಲಿಯೂ ಬೆಳೆದು ಬಂದಿವೆ. ಇಲ್ಲಿಯ ಶಾಸನಗಳಲ್ಲಿ ೨೭ ಕಾಳಾಮುಖ ತಪೋಧನರು ಉಲ್ಲೇಖಿತರಾಗಿದ್ದಾರೆ.

ವೀರಶೈವ : ನಾಗರಖಂಡದಲ್ಲಿ ವೀರಶೈವಧರ್ಮ ಕಲ್ಯಾಣದ ಕ್ರಾಂತಿಯೊಂದಿಗೇ ಹೆಜ್ಜೆ ಇಟ್ಟಿದೆ. ೧೨ನೆಯ ಶತಮಾನದ ಶರಣರಲ್ಲಿ ಅಗ್ರಗಣ್ಯರಾದ ಅಲ್ಲಮಪ್ರಭುದೇವರ ಜನ್ಮಸ್ಥಳವಾದ ‘ಕರವೂರು’ ಡಾ. ಎಂ.ಎಂ.ಕಲಬುರ್ಗಿಯವರು ಊಹಿಸಿದಂತೆ (ವಿಶಾಲ) ನಾಘರತಖಂಡದ ಒಂದು ಗ್ರಾಮ. ವೈರಾಗ್ಯ ನಿಧಿ ಅಕ್ಕಮಹಾದೇವಿ ನೆರೆಯ ಉಡುತಡಿಯವಳು. ಏಕಾಂತ ರಾಮಯ್ಯನ ಕಾರ್ಯಕ್ಷೇತ್ರ ಈ ನಾಡಿನ ಅಬಲೂರು. ಬಿಜ್ಜಳನೊಂದಿಗೆ ಬಸವಣ್ಣನವರೂ ಇಲ್ಲಿಗೆ ಬಂದಿದ್ದರೆಂದು ಹೇಳಲಾಗುತ್ತದೆ.[22]ಬಿಜ್ಜಮಹಾದೇವಿ, ಇಕ್ಕದಮಾರಯ್ಯ ಇಲ್ಲಿಯವರು.

ಬಸವಣ್ಣನವರು ಕಲ್ಯಾಣದಲ್ಲಿ ಕಾರ್ಯತತ್ವರರಾಗಿದ್ದ ಕಾಲದಲ್ಲಿಯೇ ಬಮ್ಮಕೂರು ಹಿರಿಯಮಠದ ಆಚಾರ್ಯರಾದ ದೇವಶಕ್ತಿ ಯತಿಗಳು ಕ್ರಿ.ಶ. ೧೧೬೩ರಲ್ಲಿ ಮಾಚೆಯ ನಾಯಕನಿಗೆ ಅನುಗ್ರಹಿಸಿದರು. (’ಅನುಗ್ರಹ’ ವೀರಶೈವರಲ್ಲಿ ಪಾರಿಭಾಷಿಕ ಪದ) ಕ್ರಿ.ಶ. ೧೨೦೪ರಲ್ಲಿ ಗೊಟ್ಟೆಯಹಳ್ಳಿಯ ಬಮ್ಮಗಾವುಂಡ ತೇಜೋನಿಧಿ ಮುನಿಗಳಿಂದ ಶಿವದೀಕ್ಷೆ ಹೊಂದಿದನು. ಈ ಘಟನೆಗಳು ಕಾಳಾಮುಖಿ ಆಚಾರ್ಯರಲ್ಲಿ ಪ್ರಗತಿಪರ ಧೋರಣೆಗಳು ಉದಿಸಿದುದಕ್ಕೆ ನಿರ್ದಶನಗಳಾಗಿವೆ. ಕಾಳಾಮುಖ ಮಠಗಳು ವೀರಶೈವ ಮಠಗಳಾಗಿ ಪರಿವರ್ತನೆಗೊಂಡುದಕ್ಕೂ ಇವು ನಿದರ್ಶನಗಳು.

ವೈಷ್ಣವ ಧರ್ಮ : ನಾಗರಖಂಡ ಕಂಪಣದಲ್ಲಿ ಈ ಮತ ಹೆಚ್ಚು ಪ್ರಚಲಿತವಿದ್ದಂತಿಲ್ಲ. ಹಲವು ದೇವಾಲಯಗಳ ದೇವಕೋಷ್ಠಗಳಲ್ಲಿ, ತ್ರೈಪುರುಷ ದೇವಾಲಯಗಳಲ್ಲಿ ವಿಷ್ಣು ವಿಗ್ರಹಗಳು ಶೋಭಿಸುತ್ತವೆ. ಆದರೂ ಇಲ್ಲಿ ೮ ವೈಷ್ಣವ ದೇವಾಲಯಗಳು ಇದ್ದ ಬಗೆಗೆ ಶಾಸನೋಲ್ಲೇಖಗಳಿವೆ. ಅಬಲೂರು ಬಸವೇಶ್ವರ ದೇವಾಲಯದ ಆವರಣದಲ್ಲಿ ಚಿಕ್ಕ ಏಕಗರ್ಭ ದೇವಾಲಯವಿದೆ. ಇಲ್ಲಿಯ ವಿಷ್ಣು ವಿಗ್ರಹ ಆದಿ ಕದಂಬರ ಕಾಲದ್ದೆಂದು ಗುರುತಿಸಲಾಗಿದೆ.[23]ಇದರಿಂದ ಪ್ರಾಚೀನ ಕಾಲದಿಂದಲೂ ವೈಷ್ಣವಧರ್ಮ ಇಲ್ಲಿ ಇದ್ದುದಾಗಿ ಸ್ಥಿತವಾಗುತ್ತದೆ.

ಜೈನಧರ್ಮ : ನಾಗರಖಂಡಕ್ಕೆ ಜೈನಧರ್ಮ ೬ನೆಯ ಶತಮಾನದಲ್ಲಿ ಪ್ರವೇಶಿಸಿದೆ. ಕ್ರಿ.ಶ. ೫೨೮ರ ಶಿವಳ್ಳಿ ತಾಮ್ರಶಾಸನದಲ್ಲಿ ಬಂದಳಿಕೆ ನಾಗರಕೆರೆಗೆ ‘ಶಾಂತಿ ತಟಾಕ’ ವೆಂದು ಶಾಂತಿನಾಥ ತೀರ್ಥಂಕರನ ಹೆಸರಿನಲ್ಲಿ ಕರೆಯಲಾಗಿದೆ. ಈ ಕೆರೆ ಏರಿಗೆ ಹೊಂದಿಕೊಂಡೇ ಪ್ರಾಚೀನ ಶಾಂತಿನಾಥ ಬಸದಿ ಇದೆ.

ಬಂದಳಿಕೆ ಸಮೀಪದ ಮುತ್ತಳ್ಳಿಯ ಕ್ರಿ.ಶ. ಸು. ೭೬೦ರ ಗೋಸಾಸನಗಳಲ್ಲಿ ಜಿನಮುನಿಗಳ ಹೆಸರುಗಳಿವೆ. ನಾಗರಖಂಡವನ್ನಾಳಿದ ಸಾಂತರ ಅರಸರು ಜೈನರಾಗಿದ್ದರು. ಚಿಕ್ಕಮಾಗಡಿ, ಬಾರಂಗಿ, ತೆವರತೆಪ್ಪ, ಎಲೆವಾಳ, ಅಬಲೂರು, ಕುಪಟೂರುಗಳಂಥ ಪ್ರಮುಖ ಕೇಂದ್ರಗಳಲ್ಲಿ ಜೈನ ಸಾಮಂತ ಮನೆತನಗಳು ಆಗಿಹೋಗಿವೆ. ಇವರ ಕಾಲದಲ್ಲಿ ಅನೇಕ ಜಿನಬಸದಿಗಳು ನಿರ್ಮಾಣಗೊಂಡಿವೆ. ದಾನದತ್ತಿ ಪಡೆದಿವೆ. ಸಮಾಧಿ ಮರಣದ ವಿಷಧಿ ಕಲ್ಲುಗಳು ಸಾಕಷ್ಟು ನಿಂತಿವೆ. ವಿದ್ವಾಂಸರೂ ತಪಸ್ವಿಗಳೂ ಮಾಂತ್ರಿಕರೂ ಆದ ಜಿನಮುನಿಗಳನೇಕರು ಇಲ್ಲಿ ಆಗಿಹೋಗಿದ್ದಾರೆ.

ಹಾನಗಲ್ಲ ಕದಂಬ ಕೀರ್ತಿದೇವನ ಪಟ್ಟಮಹಿಷಿ ಮಾಳಲದೇವಿ ಕ್ರಿ.ಶ. ೧೦೭೭ರಲ್ಲಿ ಕುಪಟೂರಲ್ಲಿ ಪಾರ್ಶ್ವನಾಥ ಚೈತ್ಯಾಲಯ ನಿರ್ಮಿಸಿ, ಅಗ್ರಹಾರದಲ್ಲಿ ಜೈನಧರ್ಮದ ಅಸ್ತಿಭಾರ ಹಾಕಿದಳು. ಅಗ್ರಹಾರದ ಮಹಾಜನರನ್ನು ಪೂಜಿಸಿ ಅವರಿಷ್ಟದಂತೆ ಆ ಬಸದಿಗೆ ‘ಬ್ರಹ್ಮ ಜಿನಾಲಯ’ವೆಂದು ನಾಮಕರಣ ಮಾಡಿದಳು. ಈ ಬ್ರಹ್ಮ ಜಿನಾಲಯ ಈ ಭಾಗದ ಜಿನಕೇಂದ್ರವಾಗಿ ಪರಿಣಮಿಸಿತು.

ಅಬಲೂರಲ್ಲಿ ಏಕಾಂತರಾಮಯ್ಯನ ಕಾಲಕ್ಕೆ ನಡೆದ ಘಟನೆಯಿಂದಾಗಿ ಜೈನಧರ್ಮ ಹೆಮ್ಮಿಟ್ಟಿತು.

ದೇವಾಲಯಗಳು

ನಾಗರಖಂಡದದಲ್ಲಿ ೭೩ ದೇವಾಲಯಗಳು ಶಾಸನೋಕ್ತವಾಗಿವೆ. ಇವುಗಳಲ್ಲಿ ೫೯ ಶೈವ, ೭ ವೈಷ್ಣವ, ೭ ಜೈನದೇವಾಲಯಗಳಿವೆ. ಶಾಸನೋಕ್ತವಾಗದ ಅನೇಕ ದೇವಾಲಯಗಳೂ ಇವೆ.

ಕ್ರಿ.ಶ. ೧೫೦ ರಷ್ಟು ಪೂರ್ವದಲ್ಲಿಯೇ ಮಳವಳ್ಳಿಯ ಮಹಾದೇವ ದೇವಾಲಯ ಉಲ್ಲೇಖಗೊಂಡಿರುವುದು ಒಂದು ದಾಖಲೆ ಎನಿಸುತ್ತದೆ. ವಾಸ್ತುಶಿಲ್ಪ ಮೂರ್ತಿಶಿಲ್ಪ ಕಲೆಗಳ ಬೆಳವಣಿಗೆಯ ದೃಷ್ಟಿಯಿಂದ ಇಲ್ಲಿಯ ದೇವಾಲಯಗಳು ಗಮನಾರ್ಹವಾಗಿವೆ. ಕಲಾತ್ಮಕವಾಗಿಯೂ ಇವು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ.

ಕೋಟಿಪುರದ ಕೈಟಭೇಶ್ವರ ದೇವಾಲಯ ನಾಗರಖಂಡದ ಅತ್ಯಂತ ಶ್ರೇಷ್ಠ ದೇವಾಲಯವಾಗಿದ್ದು ಪ್ರೇಕ್ಷಣೀಯವಾಗಿದೆ. ಇದರ ಸಭಾ ಮಂಟಪದಲ್ಲಿ ಸುಮಾರು ೧೧ ಅಡಿ ಎತ್ತರದ ಚಾಲುಕ್ಯ ಶೈಲಿಯ ನುಣುಪಾದ ವೃತ್ತಾಕಾರದ ಅಲಂಕೃತ ಕಂಭಗಳು ಇವೆ. ಕಕ್ಷಾಸನಗಳ ಮೇಲೆ ಇರುವ ೧೬ ಕಂಭಗಳೂ ೧೬ ಬದಿಗಳನ್ನು ಹೊಂದಿವೆ. ಮಂಟಪದ ಮಧ್ಯದ ಛತ್ತಿನಲ್ಲಿರುವ ಭುವನೇಶ್ವರಿ ಈ ದೇವಾಲಯದ ಅತ್ಯಂತ ಆಕರ್ಷಕ ಭಾಗವು, ಇದರ ಒಳಮುಖದ ಮೊದಲ ಸುತ್ತಿನಲ್ಲಿ ಅಷ್ಟದಿಕ್ಪಾಲಕರು, ಇದರ ಮೇಲಿನ ಎರಡು ಸುತ್ತುಗಳಲ್ಲಿ ಋಷಿ-ಮುನಿಗಳು ಕಂಡು ಬರುತ್ತಾರೆ. ಮಧ್ಯದಲ್ಲಿ ಇಳಿಬಿದ್ದಿರುವ ಎಸಳಿಗೆ ಮೂರು ಸುತ್ತು ದಳಗಳಿವೆ.

ಮುಖ ಮಂಟಪದ ಎದುರು ಭಾಗದಲ್ಲಿ ಸುತ್ತುವರಿದಿರುವ ಜಗತಿಯಲ್ಲಿ ಅನೇಕ ದೇವ ದೇವತೆಗಳನ್ನು ಹೊಂದಿದ ಕೀರ್ತಿಮುಖಗಳು ಸಾಲುಗಟ್ಟಿವೆ. ಪೂರ್ವಭಾಗದಲ್ಲಿ ತಾಂಡವೇಶ್ವರ, ಯಕ್ಷರು, ತಾಂಡವ ಗಣಪತಿ, ದಿಕ್ಪಾಲಕರು, ಭೈರವ, ಹರಿಹರ, ಬ್ರಹ್ಮ, ಪಾರ್ವತಿ, ಉತ್ತರದ ಜಗತಿಯಲ್ಲಿ ಉಗ್ರನರಸಿಂಹ, ವರಾಹ, ಗರುಡ, ಕೇಶವ, ಢಾಲು-ಭರ್ಚಿ ಹಿಡಿದ ಕುಮಾರ, ನರ್ತಿಸುವ ದುರ್ಗೆ, ಉಮಾಮಹೇಶ್ವರ, ಸೂರ್ಯ, ಮಹಿಷಾಸುರಮರ್ದಿನಿ ಕಂಡುಬರುತ್ತಾರೆ.

ಬಂದಳಿಕೆ ಸೋಮೇರ್ಶವರ ದೇವಾಲಯ : ಈ ಮಂದಿರದ ದ್ವಾರ ಮಂಟಪಕ್ಕಿರುವ ಜಾಲಂದರದ ಎರಡು ಸಾಲುಗಳ ಮಧ್ಯದಲ್ಲಿ ವಿಸ್ತಾರವಾದ ಅಲಂಕೃತ ಪಟ್ಟಿ ಇದ್ದು ಇದರಲ್ಲಿ ರಾಮಾಯಣ, ಮಹಾಭಾರತದ ದೃಶ್ಯಗಳನ್ನು ಸುಂದರವಾಗಿ ಕಂಡರಿಸಲಾಗಿದೆ.

ಬಂದಳಿಕೆ ತ್ರಿಮೂರ್ತಿ ದೇವಾಲಯ

ಇದು ತ್ರೈಪುರುಷ ದೇವಾಲಯ, ಚಾಲುಕ್ಯ ಶೈಲಿಯ ಶಿಖರಗಳನ್ನು ಹೊಂದಿದ್ದು, ಪಶ್ಚಿಮ ಶಿಖರದ ಶುಕನಾಸಿಯ ಸಿಂಹಲಲಾಟ ಭಾರೀ ಭವ್ಯವಾಗಿದೆ. ಬಾಯ್ದೆರೆದ ಸಿಂಹದ ಉಗ್ರಮುಖ ವಿಶಾಲವಾಗಿ ತೆರೆದ ಕಣ್ಣುಗಳು, ಬಾಯಿಯಿಂದ ಹೊರಚಾಚಿದ ನಾಲಿಗೆ, ಎದ್ದು ಕಾಣುವ ಮೂರು ಹಲ್ಲುಗಳನ್ನು ನೋಡುತ್ತಿದ್ದರೆ ಸಿಂಹವೊಂದು ಮಲಗಿದಂತೆ ಭಾಸವಾಗುತ್ತದೆ. ಈ ದೇವಾಲಯದ ಗರ್ಭಗೃಹಗಳ ಬಾಗಿಲುವಾಡಗಳ ಮಕರತೋರಣಗಳೂ ಅಷ್ಟೇ ಆಕರ್ಷಕವಾಗಿವೆ.

ಅಬಲೂರು ಬ್ರಹ್ಮೇಶ್ವರ, ತಿಳಿವಳ್ಳಿಯ ಸಾವಂತೇಶ್ವರ ದೇವಾಲಯಗಳು ಕುಪಟೂರಿನ ರಾಮೇಶ್ವರ ದೇವಾಲಯ, ಪಾರ್ಶ್ವನಾಥ ಬಸದಿ, ಅಬಲೂರು ಸೋಮೇಶ್ವರ ದೇವಾಲಯದ ಶರಣರ ವಿಗ್ರಹಗಳು, ಏಕಾಂತರಾಮಯ್ಯ ಶಿರಸ್ ಪವಾಡ ಮೆರೆದ ಹಾಗೂ ಜೈನರೊಡನೆ ಹೋರಾಡಿದ ದೃಶ್ಯಗಳನ್ನುಳ್ಳ ಫಲಕಗಳು ಐತಿಹಾಸಿಕ ಮಹತ್ವದವಾಗಿವೆ. ಬಂದಳಿಕೆ ಹಾಗೂ ಅಬಲೂರುಗಳಲ್ಲಿ ಕಂಡುಬರುವ ಸಿಡಿತಲೆ ಮತ್ತು ಪೆಣ್ಣುಯ್ಯಲ್ ದೃಶ್ಯದ ಶಾಸನಗಳೂ ಆಕರ್ಷಕವಾಗಿವೆ.

ಶಿಕ್ಷಣ ಮತ್ತು ಸಾಹಿತ್ಯ

ಅಗ್ರಹಾರಗಳು, ಬ್ರಹ್ಮಪುರಿ, ಘಟಿಕಾಸ್ಥಾನಗಳೂ, ಶಿವಪುರಗಳು ಪ್ರಾಚೀನ ಕಾಲದ ಪ್ರಮುಖ ಶಿಕ್ಷಣ ಸಂಸ್ಥೆಗಳಾಗಿದ್ವವು. ನಾಗರಖಂಡದಲ್ಲಿ ಕುಪಟರೂರು, ತಿಳಿವಳ್ಳಿ, ಚಿಕ್ಕ ಕೆರೆಯೂರು, ಬೆಣ್ಣೇಗೇರಿ, ನೀರಲಗಿ, ಅಗ್ರಹಾರಮುಚಡಿ, ಕಚವಿ ಹೀಗೆ ಏಳು ಗ್ರಾಮಗಳಲ್ಲಿ ಅಗ್ರಹಾರಗಳು, ಬಂದಳಿಕೆ, ಕುಪಟೂರು, ತಿಳಿವಳ್ಳಿಗಳಲ್ಲಿ ಒಂದೊಂದು ಬ್ರಹ್ಮಪುರಿಯೂ ಕುಪಟೂರಲ್ಲಿ ಘಟಿಕಾಸ್ಥಾನವೂ, ಬಾರಂಗಿಯಲ್ಲಿ ಶಿವಪುರವೂ ಇದ್ದವು. ಇವೆಲ್ಲವಕ್ಕೆ ಉದಾರ ರಾಜಾಶ್ರಯವಿರುತ್ತಿತ್ತು.

ಸಾಹಿತ್ಯ : ನಾಗರಖಂಡದಲ್ಲಿ ಇದುವರೆಗೆ ೧೭ ಶಾಸನ ಕವಿಗಳನ್ನು ಗುರುತಿಸಲಾಗಿದೆ. ಇವರನ್ನು ಬಿಟ್ಟರೆ ಗ್ರಂಥ ಸಾಹಿತ್ಯ ರಚಿಸಿದ ಮೂವರು ಕವಿಗಳು ಕಂಡು ಬರುತ್ತಾರೆ. ಇವರಲ್ಲಿ ವಚನಕಾರ ಏಕಾಂತ ರಾಮಯ್ಯ, ಜನಪದ ಮಹಾಕವಿ ಸರ್ವಜ್ಞ ಸುಪರಿಚಿತರಾಗಿ ಇನ್ನುಳಿದ ಓರ್ವ ಕವಿ ಮಹಿಳೆಯಾಗಿದ್ದು ಸಾಹಿತ್ಯ ಲೋಕಕ್ಕೆ ಪ್ರಥಮವಾಗಿ ಪರಿಚಯವಾಗುತ್ತಿದ್ದಾಳೆ.

ಶ್ರೀಮತಿ ಜಕ್ಕಲಾಂಬಾ : (ಕ್ರಿ.ಶ. ೧೨೧೨ರ ಪೂರ್ವದಲ್ಲಿ) ಪ್ರಪ್ರಥಮ ಜೈನ ಕವಯಿತ್ರಿ ಇವಳು. ಚಿಕ್ಕಮಾಗಡಿ ಸಾಮಂತ ಮನೆತನಕ್ಕೆ ಸೇರಿದವಳು.[24]ಇವರದು ಅಂಡುವಂಶ. ಈ ವಂಶದ ಚರಿತ್ರೆ ಕ್ರಿ.ಶ. ೯೦೨ರಿಂದಲೇ ಪ್ರಾರಂಭವಾಗುತ್ತದೆ. ಜಕ್ಕಲಾಂಬೆಯ ಅಜ್ಜ ಶಂಕರ ಚಿಕ್ಕಮಾಗಡಿಯಲ್ಲಿ ಶಾಂತಿನಾಥ ಜಿನಾಲಯವನ್ನು ನಿರ್ಮಿಸಿದ. ಶಂಕರನ ಪತ್ನಿ ಜಕ್ಕವ್ವೆ ಪರಮ ಜಿನಭಕ್ತಳು. ಇವಳ ಹೆಸರನ್ನು ಮೊಮ್ಮಗಳಿಗೆ ಇಟ್ಟಂತಿದೆ. ಜಕ್ಕಲಾಂಬೆಯ ತಂದೆ ಸಾಮಂತ ಮುದ್ದಯ್ಯ, ತಾಯಿ ಲಚ್ಚಾಂಬಿಕೆ, ತಂಗಿ ಮಲ್ಲಗೌಡಿ, ಗುರುಗಳು ಅನಂತ ಕೀರ್ತಿಮುನಿಗಳು. ಜಕ್ಕವ್ವೆ ಕಿರಿ ವಯಸ್ಸಿನಲ್ಲಿಯೇ ವೈರಾಗ್ಯ ಭಾವ ಹೊಂದಿದಳು. ಅವಳು ‘ಚರಿತ್ರ ಗುಣಾಂಕಮಾಲೆ’ ಎಂಬ ಕೃತಿಯನ್ನು ರಚಿಸಿದ್ದಾಗಿ ಶಾಸನವು ಹೇಳುತ್ತದೆ. ಈ ಕೃತಿಯನ್ನು ‘ಸುಪ್ರಬಂಧ’ ವೆಂದು ಶಾಸನ ವರ್ಣಿಸಿದೆ. ಮಕ್ಕಲಾಂಬೆ ಕ್ರಿ.ಶ. ೧೨೧೨ ರಲ್ಲಿ ಸಮಾಧಿ ಮರಣ ಹೊಂದಿದಳು.

ಉಪಸಂಹಾರ

ನಾಗರಖಂಡ ಕಂಪಣ ರಾಜಕೀಯವಾಗಿಯೂ, ಸಾಮಾಜಿಕವಾಗಿಯೂ ಸಾಂಸ್ಕೃತಿಕವಾಗಿಯೂ ಅನೇಕ ವಿಶೇಷತೆಗಳನ್ನು ಮೆರೆದು ಬನವಾಸಿ ೧೨೦೦೦ ದ ಕಂಪಣಗಳಲ್ಲಿ ಒಂದು ವಿಶಿಷ್ಟ ಸ್ಥಾನಮಾನವನ್ನು ಪಡದಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


 

[1]ಮೈಸೂರು ವಿಶ್ವವಿದ್ಯಾನಿಲಯ, ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಸಾಹಿತ್ಯ ಚರಿತ್ರೆ, ಸಂ. ೧ ಪುಟ ೪೧೦.

[2]ಎ.ಕ.ಸಂ.೮ ಸೊ. ೪೧೪ ಮತ್ತು ೪೧೫ ಹಿರೇಮಾಗಡಿ ಕ್ರಿ.ಶ. ೧೧೩೯.

[3]ಸಿ.ಎಫ. ಆಯ್ಯಂಟಿ. ಪುಟ-೧೩೮.

[4]ಎ.ಕ.ಸಂ. ೭ ಶಿಕಾ – ೧೯೭ ಚಿಕ್ಕಮಾಗಡಿ ಕ್ರಿ.ಶ. ೧೧೩೯.

[5]ಜಿ.ಎಂ. ಮೊರೇಸ್ ‘ಕದಂಬ ಕುಲ’ ಪುಟ ೨೨೬.

[6]ಎ.ಕ. ಸಂ. ೮ ಸೊ-೩೪೬ ಬೆಣ್ಣಿಗೇರಿ ಕ್ರಿ.ಶ. ೧೧೬೦.

[7]ಎ.ಕ.ಸಂ.೭ ಶಿಕಾ ೧೦೨ ಬಳ್ಳಿಗಾವೆ ಕ್ರಿ.ಶ. ೧೧೬೨.

[8]ಎ.ಕ.ಸಂ. ೮, ಸೊ-೪೧೨ ಹಿರೇಮಾಗಡಿ ಕ್ರಿ.ಶ. ೧೧೭೭.

[9]ಎ.ಕ. ಸಂ. ೭ ಶಿಕಾ-೪೯೭ ಚಿಕ್ಕಮಾಗಡಿ ಕ್ರಿ.ಶ. ೧೧೮೨.

[10]ವಿವರಗಳಿಗೆ ನೋಡಿ ಮೂಲ ಪ್ರಬಂಧ ಪುಟ – ೫೮-೫೬.

[11]ಧಾ.ಶಾ.ಸೂ. (ಧಾರವಾಡ ಜಿಲ್ಲಾ ಶಾಸನ ಸೂಚಿ) ನಂ. ೧೬ ಹಿರೇಕೆರೂರು (ತಾ) ಅಬಲೂರು ಕ್ರಿ.ಶ. ೧೨೦೦.

[12]ಡಾ. ಕೊಪ್ಪ ಎಸ್.ಕೆ. ‘ತರ್ದವಾಡಿ ನಾಡು ಒಂದು ಅಧ್ಯಯನ ಸಂ. ಅ. ಪುಟ-೬೮.

[13]ಎ.ಇಂ. ಸಂ ೫ ಪುಟ-೨೩೭-೬೦ ಹಿರೇಕೆರೂರು (ತಾ) ಅಬಲೂರು ಕ್ರಿ.ಶ. ಸು. ೧೨೦೦?

[14]ಎ.ಕ. ಸಂ. ೭, ಶಿಕಾ-೨೩೫ ಬಂದಳಿಕೆ-ಕ್ರಿ.ಶ. ೧೨೦೭.

[15]ಎ.ವಿ.ನರಸಿಂಹಮೂರ್ತಿ * ‘ದ ಸೇವುಣಾಜ ಆಫ ದೇವಗಿರಿ’* ಪುಟ -೮೩ ಮತ್ತು ಎ,ಕ.ಸಂ. ೮ ಸೊ. ೩೭೬ ಹುರುಳಿ ಕ್ರಿ.ಶ. ೧೨೧೨.

[16]ಎ.ಕ. ಸಂ. ೮ ಸೊ-೪೨೬ ಗಿಣಿವಾಲ ಕ್ರಿ.ಶ. ೧೨೪೮.

[17]ಕ.ಇ. (ಕರ್ನಾಟಕ ಇನ್ಸ್ ಕ್ರಿಪ್ಷನ್ಸ್) ಸಂ. ೪ ೪೮ ಹಿರೇಕೆರೂರು (ತಾ) ಮಡಲೂರು ಕ್ರಿ.ಶ. ೧೨೬೪.

[18]ಶಿವಳ್ಳಿ ತಾಮ್ರಶಾಸನ, ಕ್ರಿ.ಶ. ೫೧೬-೫೪೦.

[19]ಎ.ಕ.ಸಂ. ೮ ಸೊ-೨೬೮ ಕುಪಟೂರು ಕ್ರಿ.ಶ. ೧೨೪೫.

[20]ಎ.ಕ.ಸಂ. ೭ ಶಿಕಾ-೨೭೯ ಮಾ. ಮುಚಡಿ. ಶಿರಾ-೨೬೬ ಮಳವಳ್ಳಿ. ಕ್ರಿ.ಶ. ೧೧೩೯.

[21]ಧಾ.ಶಾ.ಸೂ.ನಂ. ೧೧೪, ಹಾ.ನ.(ತಾ) ತಿಳಿವಳ್ಳೀ. ಕ್ರಿ.ಶ. ೧೧೩೦, ಕ.ಇ.ಸಂ ೫-೯೭ ತಿಳಿವಳ್ಳಿ.

[22]ಶಾಂತನಿರಂಜನ ಕವಿ ‘ಅಬಲೂರು ಚರಿತೆ’ ಸಂ-೬ ಮ ಪಟ್ಟಿ ೩೯-೪೪/ಕ್ರಿ.ಶ. ೧೧೪೧.

[23]ಡಾ.ರು.ಮ. ಷಡಕ್ಷರಯ್ಯ ‘ ಸಂಯುಕ್ತ ಕರ್ನಾಟಕ’ ದಿನ ಪತ್ರಿಕೆ ೨೦-೪-೧೯೯೨

[24]ಎ.ಕ. ಸಂ. ೭ ಶಿಕಾ-೨೦೨ ಚಿಕ್ಕ ಮಾಗಡಿ ಕ್ರಿ.ಶ. ೧೨೧೧.