ಕರ್ನಾಟಕದಲ್ಲಿ ಅಲ್ಲಲ್ಲಿ ಅನೇಕ ಸಿಂದಮನೆತನಗಳು ಕಲ್ಯಾಣ ಚಾಲುಕ್ಯ, ಕಳಚೂರ್ಯ ಮತ್ತು ಸೇವುಣರ ಸಾಮಂತರಾಗಿ ಆಳಿದ್ದಾರೆ. ಇದಕ್ಕೂ ಹಿಂದೆ ಬಾದಾಮಿ ಚಲುಕ್ಯ ಮತ್ತು ಬನವಾಸಿ ಕದಂಬರ ಕಾಲದಲ್ಲಿ ಬರುವ ಸೇಂದ್ರಕರು ಹೆಚ್ಚಾಗಿ ಬನವಾಸಿ ಮತ್ತು ನಾಗರಖಂಡ-೭೦ ವಿಭಾಗದಲ್ಲಿ ಕಂಡು ಬರುತ್ತಾರೆ. ನಾಗರಖಂಡ – ೭೦ ವಿಭಾಗದಲ್ಲಿ ಹಿಂದೆ ನಾಗರ ಆಳ್ವಿಕೆ ಇದ್ದು ಇಲ್ಲಿನ ಸೇಂದ್ರಕರೇ ಮುಂದೆ ಸಿಂದಮನೆತನದವರಾದರು ಎಂಬ ಅಭಿಪ್ರಾಯವಿದೆ.

ಇದುವರೆಗೆ ಗುರ್ತಿಸಲ್ಪಟ್ಟ ಸಿಂದಮನೆತನಗಳು ಹೀಗಿವೆ : ಬೆಳಗುತ್ತಿ ಸಿಂದರು, ಬಾಗಡಗೆಯ ಸಿಂದರು, ಯಲಬುರ್ಗಿಯ ಸಿಂದರು, ರಂಜೋಲದ ಸಿಂದರು, ಮುಳುಗುಂದದ ಸಿಂದರು, ಕೋಗಳಿನಾಡ ಸಿಂದರು, ಗುತ್ತಿಯ ಸಿಂದರು, ಕುರುಗೋಡ ಸಿಂದರು, ಸಾಲಂದಗೆಯ ಸಿಂದರು, ಚಕ್ರಕೂಟದ ಸಿಂದರು ಮತ್ತು ಪ್ರತ್ಯಂಡ್ರಕದ ಸಿಂದರು.

ಹತ್ತನೆಯ ಶತಮಾನದಲ್ಲಿ ಕಂಡು ಬರುವ ಸಿಂದಮನೆತನಗಳು ತಮ್ಮ ಪೂರ್ವ ವೃತ್ತಾಂತವನ್ನು ನೀಡುತ್ತವೆ. ಬಾಗಡಗೆಯ ಸಿಂದರ ಮತ್ತು ರಂಜೋಲದ ಸಿಂದರ ಪೂರ್ವ ವೃತ್ತಾಂತ ಭೈರನಮಟ್ಟಿ ಮತ್ತು ರಂಜೋಲದ ಶಾಸನಗಳಲ್ಲಿ

[1]ದೊರೆಯುತ್ತದೆ. ಧರಣೀದೇವ ಮತ್ತು ಆತನ ಪತ್ನಿಯು ಅಹಿಚ್ಛತ್ರದಲ್ಲಿ ಬಂದು ನೆಲೆಸಿರಲು ಅವರಿಗೆ ಪುತ್ರ ಸಂತಾನವಾಗುತ್ತದೆ. ಭೂಮಿಯ ಮೇಲೆ ಉದಯಿಸಿದ ಈ ಪುತ್ರನನ್ನು ಇಲ್ಲಿಯೇ ಬಿಡುವುದೆಂದು ನಿರ್ಧರಿಸಿ ಒಂದು ಹುಲಿಯನ್ನು ಸೃಷ್ಠಿಸಿ ಈ ಪುತ್ರನ ರಕ್ಷಣೆಗಾಗಿ ನೇಮಿಸಿದರು. ಹುಲಿಯ ಮರಿಗಳೊಂದಿಗೆ ಹುಲಿಯ ಹಾಲನ್ನು ಕುಡಿದು ಇವನು ಬೆಳೆದನು.

ಹರಿಹರ ಮತ್ತು ಹಳ್ಳೂರು ಶಾಸನಗಳು[2] ಬೆಳಗುತ್ತಿಯ ಸಿಂದರ ಪೂರ್ವ ವೃತ್ತಾಂತವನ್ನು ನೀಡುತ್ತವೆ. ಶಿವ ಮತ್ತು ಸಿಂದುವಿನ ಸಂಯೋಗದಿಂದ ಸೈಂದವ ಜನ್ಮತಾಳಿದನು. ಉರಗಾದಿ ರಾಜನು ಶಿವನ ರಕ್ಷಕನಾದನು. ಶಿವನು ಈ ಪುತ್ರನು ಧೈರ್ಯವಂತನಾಗಬೇಕೆಂದು ಹುಲಿಯನ್ನು ಸೃಷ್ಠಿಸಿ, ಅದರ ಹಾಲನ್ನು ಕುಡಿದ ಈ ಕೂಸು ಮಾಲತಿದೇವಿಗೆ ಯುದ್ಧದಲ್ಲಿ ಸಹಕರಿಸಿ ನಿಡುದೋಳ ಸಿಂಧನೆಂದು ಹೆಸರಾದನು. ಎಲ್ಲಾ ಸಿಂಧ ಮನೆತನಗಳು ನಾಗವಂಶದವರೆಂದು ಒಂದಿಲ್ಲೊಂದು ರೀತಿಯಲ್ಲಿ ಹೇಳಿಕೊಳ್ಳುತ್ತವೆ. ಸೇಂದ್ರಕರೂ ನಾಗ ವಂಶಕ್ಕೇ ಸೇರಿದವರು, ಅದ್ದರಿಂದ ಇದೇ ಸೇಂದ್ರಕರು ಮುಂದೆ ಸಿಂಧ ಮನೆತನದವರಾದರೆಂದು ಅಭಿಪ್ರಾಯವಿದೆ. ಆದರೆ ಬಹುತೇಕ ಸಿಂಧ ಶಾಸನಗಳು ಸೇಂದ್ರಕರು ಇದ್ದ ವಿಭಾಗವನ್ನು ಸೂಚಿಸದೆ ತಮ್ಮ ಪೂರ್ವಜನಾದ ನಿಡುದೋಳ ಸಿಂಧನನ್ನು ಹೆಸರಿಸುತ್ತವೆ. ಈ ನಿಡುದೋಳ ಸಿಂಧನು ಕರಹಾಡ – ೪೦೦೦ ಪ್ರದೇಶವನ್ನು ಆಳುತ್ತಿದ್ದನು. ಕೆಲವು ಸಿಂಧ ಮನೆತನಗಳು ತಮ್ಮನ್ನು ಭೋಗವತಿ ಪುರದವರೆಂತಲೂ ಅಥವಾ ಅಹಿಚ್ಛತ್ರದವರೆಂತಲೂ ಹೇಳುತ್ತಾರೆ.

ಕರಹಾಡ – ೪೦೦೦ ಇಂದಿನ ಸತಾರಜಿಲ್ಲೆಯ ದಕ್ಷಿಣ ಭಾಗ ಮತ್ತು ವಿಜಾಪುರ ಜಿಲ್ಲೆಯ ಉತ್ತರ ಭಾಗವನ್ನೊಳಗೊಂಡ ಪ್ರದೇಶವಾಗಿತ್ತು.[3]

ಬೆಳಗುತ್ತಿಯ ಸಿಂದರು ತಮ್ಮನ್ನು ಕರಹಾಟಪುರವರಾಧೀಶ್ವರರೆಂದೂ ಮಾಲತೀ ದೇವಿಲಬ್ಧ ವರಪ್ರಸಾದವರೆಂದೂ, ನೀಳ ಧ್ವಜವುಳ್ಳವರೂ, ಫಣಿರಾಜ ವಂಶದವರೂ, ಹುಲಿಯನ್ನು ಲಾಂಛನವನ್ನಾಗಿಟ್ಟುಕೊಂಡು ಸಿಂಧಗೋವಿಂದ ಮತ್ತು ಪಾತಾಳ ಚಕ್ರವರ್ತಿಗಳೆಂದು ಗುರ್ತಿಸಲ್ಪಟ್ಟಿದ್ದಾರೆ. ಕರಹಾಡ ಇಂದಿನ ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯಲ್ಲಿದೆ. ಈ ನಿಡುದೋಳ ಸಿಂಧನ ನಂತರ ಅನೇಕ ಸಿಂಧರು ರಾಜ್ಯವಾಳಿದರು. ಒಮ್ಮೆ ಕರಹಾಡ-೪೦೦೦ ಆಳಿದ ನಿಡುದೋಳ ಸಿಂಧನ ವಂಶದವರು ಅಲ್ಲಲ್ಲಿ ಚದರಿಹೋಗಿ ಇತರ ವಿಭಾಗಗಳಲ್ಲಿ ಆಳಿದ ಮನೆತನಗಳಂತೆ ಕಾಣುತ್ತದೆ.

ದಿನಕರ ದೇಸಾಯಿಯವರು ಹೊಳಲ್ಕೆರೆ ತಾಲೂಕಿನ ಗುಂಡೇರಿಯ ಶಾಸನದಲ್ಲಿ ಬರುವ ಮೂರನೆಯ ಕೃಷ್ಣನ ಕಾಲದ ಕೆರಸಿಗ ನನ್ನಿಯ ಸಿಂಧ ಬೆಳಗುತ್ತಿಯ ಸಿಂಧರ ಮೂಲಪುರುಷ ನಿರಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ. ಶಿಕಾರಿಪುರ ತಾಲೂಕಿನ ಮುತ್ತಗೆಯ ಶಾಸನದಲ್ಲಿ ಬರುವ ಮಹಾಮಂಡಳೇಶ್ವರ ಕಾಯವೀರರಸ ಧರಣಿಯನ್ನು ಆಳುತ್ತಿದ್ದುದ್ದನ್ನು ತಿಳಿಸುತ್ತದೆ. ದಿನಕರ ದೇಸಾಯಿ ಮತ್ತು ಚನ್ನಬಸಪ್ಪ ಹಿರೇಮಠ ಇವರು ಮುತ್ತಗೆಯು ಬೆಳಗುತ್ತಿಯ ಸನಿಹ ಇರುವದರಿಂದ ಕಾಯವೀರರಸ ಬೆಳಗುತ್ತಿಯ ಸಿಂಧ ಮನೆತನಕ್ಕೆ ಸೇರಿದವನೆಂದು ಪರಿಗಣಿಸಿದ್ದಾರೆ. ಬಿ.ಆರ್. ಗೋಪಾಲರು ಇವನು ಸಿಂಧ ಮನೆತನಕ್ಕೆ ಸೇರಿದ್ದನೆಂದು ಹೇಳಲು ಆಧಾರ ಸಾಲದೆನ್ನುತ್ತಾರೆ.[4]

ಕ್ರಿ.ಶ. ೯೯೨ರ ಹರಿಹರ ತಾಲೂಕು ವಾಸನ ಶಾಸನದಲ್ಲಿ[5] ಬರುವ ಮುಳುಗುಂದ ಸಿಂದ ಜಾತರಸ ಕದಂಬಳಿಗೆ ಸಾವಿರದೊಳಗಣ ಮುಳುಗುಂದ – ೧೨ ಆಳುತ್ತಿದ್ದಾಗ ವಾಸನ ತೀರ್ಥಕ್ಕೆ* (ಇಂದಿನ….. ಒಸನ) *ಪುಲ್ಲುಣಿಯ (ಇಂದಿನ ಗಳಗನಾಥ ಹಾವೇರಿ ತಾಲ್ಲೂಕು)[6] ಮರಿಯಾದೆಯಾದ ಕೆಲವು ಗ್ರಾಮಗಳನ್ನು ನೀಡುತ್ತಾನೆ. ಗದಗ ತಾಲೂಕಿನಲ್ಲಿ ಅದೇ ಹೆಸರಿನೊಂದಿಗೆ ಇಂದಿಗೂ ಗುರ್ತಿಸಲ್ಪಡುವ ಮುಳುಗುಂದ ಎಂಬ ಪಟ್ಟಣದ ಅರಸನಾಗುತ್ತಾನೆ. ಗದಗ ತಾಲೂಕಿನ ಹೊಸೂರು ಕ್ರಿ.ಶ. ೯೯೪ ಮತ್ತು ೧೦೨೮[7] ಶಾಸನಗಳು ಸಿಂಧಕೊರಲಗಾವುಂಡ ಮುಳುಗುಂದ ಪ್ರದೇಶ ಆಳುತ್ತಿದ್ದುದ್ದಾಗಿ ತಿಳಿಸುತ್ತವೆ. ಈ ಮುಳುಗುಂದದ ಸಿಂಧರು ಪನ್ನಗ ಧ್ವಜರು ಹುಲಿಯನ್ನು ಲಾಂಛನವನ್ನಾಗಿಟ್ಟುಕೊಂಡು, ಕುನ್ನಲ ವಂಶ ಪ್ರದೀಪಕರೆಂದು ಕರೆಯಲ್ಪಟ್ಟಿದ್ದಾರೆ. ಆದ್ದರಿಂದ ಬೆಳಗುತ್ತಿಯ ಸಿಂಧರಿಗೂ ಈ ಮುಳುಗುಂದ ಸಿಂಧರಿಗೂ ಸಂಬಂಧ ಇದ್ದಂತೆ ತೋರುವುದಿಲ್ಲ.

ಎಲ್ಲಾ ಸಿಂಧರ ಶಾಸನಗಳು ನಿಡುದೋಳ ಸಿಂಧನನ್ನೇ ಉದಾಹರಿಸುವುದರಿಂದ ಐತಿಹಾಸಿಕವಾಗಿ ನಿಡುದೋಳ ಸಿಂಧನ ಕಾಲವನ್ನು ಗುರ್ತಿಸಲಾಗುವುದಿಲ್ಲ. ಬೆಳಗುತ್ತಿಯ ಶಾಸನಗಳು ನಿಡುದೋಳ ಸಿಂಧನನಂತರ ಅನೇಕರು ಆಳಿದುದಾಗಿ ಹೇಳುತ್ತವೆ. ಹಿರಿಯ ಚಟ್ಟರಸ ಶಾಸನೋಕ್ತವಾಗಿ ಬರುವ ಮೊದಲ ಬೆಳಗುತ್ತಿಯ ಸಿಂಧ ಅರಸ. ಇವನ ಹೆಂಡತಿ ದೋರಬರಸಿ; ಇವರ ಮಗ ಅಯ್ಯಣ ಜೋಗರಸ. ಅಯ್ಯಣ ಜೋಗರಸನ ಮೇದೂರಿನ ಶಾಸನ ಬಹಳ ತೃಟಿತವಾಗಿದ್ದು ಅಮವಾಸ್ಯೆ ತಿಥಿ ಮತ್ತು ವಾರದ ವಿವರ ಲಭ್ಯವಿದ್ದು ಕಾಲವನ್ನು ಸರ್ವಜಿತ ಎಂದು ಕ್ರಿ.ಶ. ೧೧೧೭ಕ್ಕೆ ನಿಗಧಿಪಡಿಸಿದ್ದಾರೆ. ಅಯ್ಯಣ ಜೋಗರಸನ ಸುಮಾರು ೭೦ ವರ್ಷಗಳ ಆಳ್ವಿಕೆಯ ನಂತರ ಎರಡನೆಯ ಚಟ್ಟರಸ ಬರುವುದರಿಂದ ಬಿ.ಆರ್.ಗೋಪಾಲರು ಮೆಕೆಂಝಿಯವರ ಸಂಗ್ರಹದ ಪ್ರತಿಯನ್ನು ನೋಡಿ ಸಂವತ್ಸರವನ್ನು ಸರ್ವಜಿತು ಎಂದು ಪರಿಗಣಿಸಿರುವುದಕ್ಕೆ ಬದಲಾಗಿ ಶುಭಕೃತ ಅಥವಾ ಶೋಭಕೃತ ಎಂದು ಪರಿಗಣಿಸಿ ಇದು ಕ್ರಿ.ಶ. ೧೦೬೩-೬೪ ಸರಿಹೊಂದುತ್ತದೆ. ಹಾಗಾಗಿ ಅಯ್ಯಣ ಜೋಗರಸ ಕ್ರಿ.ಶ. ೧೦೬೦-೯೦ ವರೆಗೆ ಆಳುತ್ತಿದ್ದಿರಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.[8]

ಶಿಕಾರಿಪುರ ತಾಲೂಕು ಗೊ‌ಗ್ಗ ಶಾಸನ[9] ಕ್ರಿ.ಶ. ೧೧೧೭ ರಲ್ಲಿ ಹೊರಡಿಸಲಾಗಿದ್ದು ಮಹಾಪ್ರಧಾನಿ ಗೋವಿಂದರಸನು ಬನವಾಸಿ ಆಳುತ್ತಿದ್ದಾಗ ಎರಡನೆಯ ಚಟ್ಟರಸನು ಎಡವಟ್ಟೆ – ೭೦ ಆಳುತ್ತಿದ್ದುದ್ದಾಗಿ ತಿಳಿಸುತ್ತದೆ. ಕ್ರಿ.ಶ. ೧೧೧೩ರ ಮೇದೂರಿನ ಆರನೆಯ ವಿಕ್ರಮಾದಿತ್ಯನಶಾಸನವು[10] ಅತಿತೃಟಿತವಾಗಿದ್ದು ಎಡವಟ್ಟೆ – ೭೦, ಅರಕೆರೆ – ೧೨ ಮತ್ತು ಇತರ ವಿಭಾಗಗಳನ್ನು ಆಳುತ್ತಿದ್ದ ಅರಸನ ಹೆಸರು ‘ಮ’ ಎಂದು ಮಾತ್ರ ಇರುವುದನ್ನು ಗುರ್ತಿಸಿ ಇದು ಚಟ್ಟರಸನ ಮೊಮ್ಮಗನಾದ ಮಾಚರಸನದಿರಬೇಕೆಂದು ಬಿ.ಆರ್. ಗೋಪಾಲರು ಊಹಿಸಿದ್ದಾರೆ. ಕ್ರಿ.ಶ. ೧೧೧೭ ಗೊಗ್ಗ ಶಾಸನದಲ್ಲಿ ಮಾಚರಸನನ ಅಜ್ಜ ಚಟ್ಟರಸ ಇನ್ನೂ ಆಳುತ್ತಿರುವುದರಿಂದ ಈ ಸಮಯದಲ್ಲಿ ಮಾಚರಸ ತನ್ನ ಅಜ್ಜ ಎರಡನೆಯ ಚಟ್ಟರಸನೊಂದಿಗೆ ಆಡಳಿತದಲ್ಲಿ ಭಾಗಿಯಾಗಿದ್ದನೆಂದು ತೋರುತ್ತದೆ. ಕ್ರಿ.ಶ. ೧೧೨೮ ನಾಗವಂದ ಶಾಸನವು ಸಿಂಧಮಾಚರಸ ಎಡವಟ್ಟೆ – ೭೦, ಅರಕರೆ – ೧೨ ಮತ್ತು ೫೬ ಬಾಡ ಆಳುತ್ತಿದ್ದುದ್ದಾಗಿ ತಿಳಿಸುತ್ತದೆ.

ಶಾಸನಗಳು ಎರಡನೆಯ ಚಟ್ಟರಸನ ನಂತರ ಮಾಚರಸ ಆಡಳಿತಕ್ಕೆ ಬಂದಿರುವುದನ್ನು ಸೂಚಿಸುತ್ತಿರುವುದರಿಂದ, ಎರಡನೆಯ ಚಟ್ಟರಸನ ಮಗನ ಹೆಸರು ತಿಳಿಯುವುದಿಲ್ಲ. ಬೆಳುಗುತ್ತಿಯ ಕ್ರಿ.ಶ. ೧೧೭೫[11]ಮತ್ತು ಹಿರೇಕಬ್ಬಾರದ ಕ್ರಿ.ಶ. ೧೧೮೭[12]ಶಾಸನಗಳು ಮಾಚಿದೇವ ಮತ್ತು ಮಲ್ಲಿದೇವ ಇವರ ತಂದೆ ಈಶ್ವರದೇವನೆಂದು ತಿಳಿಸಿದರೆ, ಬೆಳಗುತ್ತಿಯ ಶಾಸನದಲ್ಲಿ ಮಲ್ಲಿದೇವ ಈಶ್ವರದೇವನ ಅಜ್ಜನಾಗುತ್ತಾನೆ. ಕ್ರಿ.ಶ. ೧೧೭೫ ಸುಮಾರಿನಲ್ಲಿರುವ ಈಶ್ವರದೇವನನ್ನು ಎರಡನೆಯ ಈಶ್ವರದೇವನೆಂದು ಗುರ್ತಿಸುವದಾದರೆ, ಮಾಚರಸನ ತಂದೆ ಒಂದನೆಯ ಈಶ್ವರದೇವ, ಆಗುತ್ತಾನೆ. ಒಂದನೆಯ ಈಶ್ವರದೇವ ಆಡಳಿತಕ್ಕೆ ಬರಲಿಲ್ಲವೆಂದು ತೋರುತ್ತದೆ. ಒಂದನೆಯ ಈಶ್ವರದೇವನಿಗೆ ಮೂರು ಮಕ್ಕಳಿದ್ದು ಮೊದಲನೆಯವನು ಮಾಚರಸ ಎರಡನೆಯವನು ಮಲ್ಲಿದೇವ ಮತ್ತು ಮುರನೆಯವನು ಅಹಿಯರಸ, ಅಹಿಯರಸ ಕ್ರಿ.ಶ. ೧೧೨೦-೪೦ ರವರೆಗೆ ಆಳುತ್ತಿದ್ದು ಅನಂತರ ಕ್ರಿ.ಶ. ೧೧೪೦-೪೫ ವರೆಗೆ ಮಲ್ಲಿದೇವ ಆಳುತ್ತಿದ್ದಿರಬೇಕು. ಮಲ್ಲಿದೇವನ ಬಗ್ಗೆ ಯಾವುದೇ ಅಧಿಕೃತ ಶಾಸನವಿಲ್ಲ, ಆದರೆ ಪರೋಕ್ಷವಾಗಿ ಎರಡನೆಯ ಈಶ್ವರದೇವನ ಕ್ರಿ.ಶ. ೧೧೭೧ರ ಹರಿಹರದ ಶಾಸನವು ಅವನನ್ನು ಉಲ್ಲೇಖಿಸುತ್ತದೆ.[13] ಈತನು ಹಿಂದೆ ದುಂದುಭಿ ಸಂವತ್ಸರದಲ್ಲಿ ಅಂದರೆ ಕ್ರಿ.ಶ. ೧೧೪೩ರಲ್ಲಿ ಹರಿಹರದ ಶ್ರೀ ಯೋಗೇಶ್ವರ ದೇವರಿಗೆ ತನ್ನ ಮನ್ನೆಯದೊಳಗಿನ ಬೆಳಗೆರೆಯಲ್ಲಿನ ಕಕ್ಕರಗೊಳ (ಇಂದಿನ ಕಕ್ಕರಗೊಳ)ದಲ್ಲಿ ಒಂದು ಮತ್ತರು ಭೂಮಿದಾನ ಬಿಟ್ಟಿದ್ದಾನೆ.

ಮಾಚರಸ ಮತ್ತು ಮಲ್ಲಿದೇವ ಇವರಿಗೆ ಸಂತತಿ ಇರಲಿಲ್ಲವೆಂದೂ ಅಹಿಯರಸನ ಮಗ ರಾಯರಸ ಪಟ್ಟಕ್ಕೆ ಬರಲಿಲ್ಲವೆಂದು ತೋರುತ್ತದೆ. ಕೋಡಮಗ್ಗಿಯ ಕ್ರಿ.ಶ. ೧೧೫೮[14] ಶಾಸನದಂತೆ ಕಲಚೂರಿ ಬಿಜ್ಜಳನ ಮಹಾಮಂಡಳೇಶ್ವರನಾಗಿ ಎರಡನೆಯ ಈಶ್ವರದೇವ ಎಡವಟ್ಟೆ-೭೦ ಆಳುತ್ತಿದ್ದನು. ಎರಡನೆಯ ಈಶ್ವರದೇವ ಬೆಳಗುತ್ತಿ ಸಿಂಧರ ಪ್ರಮುಖ ದೊರೆಯಾಗಿದ್ದು ಅಂಗುಷ್ಟಯಲ್ಲಿ ರತ್ನದ ಫಣಿಯ ಮುದ್ರೆ ಧರಿಸುತ್ತಿದ್ದುದ್ದಾಗಿ ಶಾಸನಗಳಲ್ಲಿ ಕೆಲವು ಬಾರಿ ಈಶ್ವರಭೂಪನೆಂದು ಕರೆಯಲ್ಪಟ್ಟಿದ್ದಾನೆ. ಈತನು ಆಡಳಿತಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಅಂದರೆ ಕ್ರಿ.ಶ. ೧೧೬೫ ರಲ್ಲಿ ನಿಡನೇಗಿಲ[15] ಶಾಸನದಲ್ಲಿ ಐದು ನಾಡುಗಳಲ್ಲಿ ಹದಿನಾರು ಕಂಪಣಗಳನ್ನು ಆಳುತ್ತಿದ್ದುದನ್ನು ಕಾಣುತ್ತೇವೆ. ಕ್ರಿ.ಶ. ೧೧೮೦ರ ಸುಮಾರು ತನ್ನ ಮಕ್ಕಳಾದ ಪಾಂಡ್ಯದೇವ ಮತ್ತು ಎರಡನೆಯ ಮಲ್ಲಿದೇವ ಇವರ ಸಹಾಯದಿಂದ ಆಳುತ್ತದ್ದಾಗ ಎಳಂಬೇರು-೧೨ (ಇಂದಿನ ಎಲೆ ಬೆತೂರು, ದಾವಣಗೆರೆ ತಾಲೂಕು) ಹೊಸದಾಗಿ ಕಂಡು ಬರುವ ವಿಭಾಗವಾಗಿದೆ, ಎರಡನೆಯ ಈಶ್ವರದೇವನ ಹೆಂಡತಿ ಕಾದಂಬ ವಂಶದ ದೊರೆ ಮತ್ತು ಬೊಪ್ಪಾದೇವಿಯ ಮಗಳಾದ ಬಾಚಲದೇವಿ ಆಗಿದ್ದಳು.

ಎರಡನೆಯ ಮಲ್ಲಿದೇವ ಕ್ರಿ.ಶ. ೧೧೮೫ರ ಸುಮಾರಿಗೆ ಆಡಳಿತಕ್ಕೆ ಬಂದಿದ್ದು ಚಾಲುಕ್ಯ ಸೋಮೇಶ್ವರನ ಮಾಂಡಲೀಕನಾಗಿ ಕ್ರಿ.ಶ. ೧೧೮೯ ರಲ್ಲಿ ಆಳುತ್ತಿದ್ದನು.

ಎರಡನೆಯ ಮಲ್ಲಿದೇವನ ಮಗ ಮೂರನೆಯ ಈಶ್ವರದೇವ ಕ್ರಿ.ಶ. ೧೨೦೫ ರಲ್ಲಿ ಆಡಳಿತಕ್ಕೆ ಬಂದನು. ಮೂರನೆಯ ಈಶ್ವರದೇವ ಹೊಯ್ಸಳರ ವಿರುದ್ಧ ತಿರುಗಿ ಬೀಳುವುದಕ್ಕೆ ಸಮಯ ಕಾಯುತ್ತಿದ್ದು, ಇದಕ್ಕೆ ಸೇವುಣರು ಅನವು ಮಾಡಿಕೊಟ್ಟರು ನಂತರ ಮೂರನೆಯ ಈಶ್ವರದೇವ ಸೇವುಣರನ್ನೂ ಹೊರದೂಡಿ ಪ್ರತ್ಯೇಕ ಅಸ್ಥಿತ್ವಕ್ಕೆ ಪ್ರಯತ್ನಿಸಿದನು. ಕ್ರಿ.ಶ. ೧೨೨೨ರ ಮಾಧನಭಾವಿ ಶಾಸನ[16] ಈಶ್ವರದೇವನ ಹೆಂಡತಿ ಚಟ್ಟಲೆಯನ್ನು ಮತ್ತು ಮಗ ಕೇಶವದೇವನನ್ನು ಉಲ್ಲೇಖಿಸಿದೆ. ಕೇಶವದೇವ ಕ್ರಿ.ಶ. ೧೨೨೯ ರ ಸುಮಾರಿಗೆ ಆಡಳಿತಕ್ಕೆ ಬಂದಿದ್ದು ಕ್ರಿ.ಶ. ೧೨೩೨ ರ ಶಾಸನವು[17] ಅವನು ಬೆಳಗುತ್ತಿಯಿಂದ ಆಳುತ್ತಿದ್ದುದ್ದನ್ನು ತಿಳಿಸುತ್ತದೆ.

ಕ್ರಿ.ಶ. ೧೨೪೦ ರ ಸುಮಾರಿಗೆ ಕೇಶವದೇವನೊಂದಿಗೆ ಬೆಳಗುತ್ತಿಯ ಸಿಂದರ ಆಳ್ವಿಕೆ ಕೊನೆಗೊಂಡಿದ್ದು ನಂತರ ಬೀರರಸ ಬೆಳಗುತ್ತಿ ಆಳುತ್ತಿರುವುದು ಕಂಡು ಬರುತ್ತದೆ. ಬಿ.ಆರ್. ಗೋಪಾಲರು ಬೀರರಸ ಅಥವಾ ಹರಬರದೇವರಸ ಕೇಶವದೇವನ ಮಗನಿರಬೇಕು, ಇವರಿಬ್ಬರ ಮಧ್ಯ ಯಾವ ಸಂಬಂಧ ಇತ್ತು? ಇವನು ಸಿಂಧ ಮನೆತನದವನೆ? ಎಂದು ಸಂದೇಹಿಸಿದ್ದಾರೆ.[18] ಅವರ ಈ ಸಂದೇಹವು ನಿಜವಾಗಿದ್ದು ಶಾಸನಗಳು ತಿಳಿಸುವಂತೆ ಬಿಲ್ಲೇಶ್ವರ ದೇವರ ಪಾದಪದ್ಮಾ ರಾಧಕನಾದ ಇವನು ಹೊಸಗುಂದದ ಬೀರರಸನೇ (ಕಲಿಸೆ) ಆಗಿದ್ದಾನೆ. ಇವನು ಕ್ರಿ.ಶ. ೧೨೫೭ ರವರೆಗೆ ಬೆಳಗುತ್ತಿಯಿಂದ ಆಳುತ್ತಿದ್ದಿರಬಹುದು.

ಬೆಳಗುತ್ತಿಯ ಸಿಂಧರ ಆಡಳಿತವನ್ನು ಮೂರು ಹಂತಗಳಲ್ಲಿ ಗುರ್ತಿಸಬಹುದು. ಅವುಗಳೆಂದರೆ,

(೧) ಚಾಳುಕ್ಯರಿಗೆ ಅಧೀನವಾಗಿ
(೨) ಕಳಚೂರ್ಯ, ಸೇವುಣ ಮತ್ತು ಹೊಯ್ಸಳರಿಗೆ ಪರ-ವಿರೋಧವಾಗಿ ಹಾಗೂ
(೩) ಪ್ರತ್ಯೇಕ ಅಸ್ತಿತ್ವದಲ್ಲಿ.

(೧) ಚಾಳುಕ್ಯರಿಗೆ ಅಧೀನವಾಗಿ

ಕಲ್ಯಾಣ ಚಾಲುಕ್ಯ ಒಂದನೆಯ ಸೋಮೇಶ್ವರ ಮೇದೂರಿನ ಶಾಸನದಲ್ಲಿ[19] ಮಹ ಮಂಡಳೇಶ್ವರ ಚಾವುಂಡರಾಯ ಮಹಾ ಪ್ರಧಾನಿಯಾಗಿದ್ದಾಗ ಭಾವ ಬಿಜ್ಜರಸ ಎಡವಟ್ಟಿ-೭೦, ಮೂಗುಂದ-೧೨ (ಮುಳಗುಂದ-೧೨?) ಆಳುತ್ತಿದ್ದಾಗ ಬೆಳಗುತ್ತಿಯ ಅಯ್ಯಣ ಜೋಗರಸ ಮಾಸೂರು-೧೨, ಕುಂದೂರು-೧೨, ಕೊಳ್ಳಿಗನೂರು-೭೦ ಮತ್ತು ಅರಕೆರೆ-೧೨ ಮುಂತಾದ ವಿಭಾಗಗಳನ್ನು ಆಳುತ್ತಿದ್ದನು. ಕ್ರಿ.ಶ. ೧೧೧೭ ರಲ್ಲಿ ಮಹಾಪ್ರಧಾನಿ ಗೋವಿಂದರಸ ಬನವಾಸಿ ಆಳುತ್ತಿದ್ದಾಗ ಎರಡನೆಯ ಚಟ್ಟರಸ ಎಡವಟ್ಟೆ-೭೦ ವಿಭಾಗ ಆಳುತ್ತಿದ್ದ.[20] ಈ ಸಮಯಕ್ಕಾಗಲೇ ರಟ್ಟಪಳ್ಳಿ ಮತ್ತು ಎಡವಟ್ಟೆ ವಿಭಾಗಗಳು ಚಾಲುಕ್ಯರ ನೇರ ಅಧೀನಕ್ಕೆ ಬದಲಾಗಿ ನೂರುಂಬಾಡದ ಕದಂಬರು ರಟ್ಟಪಳ್ಳಿ-೭೦ ಮತ್ತು ಬೆಳಗತ್ತಿಯ ಸಿಂಧರು ಎಡವಟ್ಟೆ-೭೦ ವಿಭಾಗಗಳನ್ನು ಆಳುತ್ತಿದ್ದಿರಬೇಕು.

ಎರಡನೆಯ ಚಟ್ಟರಸನ ಮೊಮ್ಮಗ ಮಾಚರಸ ಕ್ರಿ.ಶ. ೧೧೨೦ ರಲ್ಲಿ ಆಡಳಿತಕ್ಕೆ ಬರುತ್ತಾನೆ. ಆಗ ಸಿಂಧರು ನೊಳಂಬವಾಡಿಯಲ್ಲಿ ಇನ್ನೂ ಮೂರು ವಿಭಾಗಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದನ್ನು ಕಾಣುತ್ತೇವೆ. ಕ್ರಿ.ಶ. ೧೦೪೩ರಲ್ಲಿ ಚಾಳುಕಿ ಅಹಿಯರಸ ಭ್ರಾನ್ತಿಕಾಡು-೩೦ ರ ನಾಳ್ಗಾವುಂಡನಾಗಿ ಆಳುತ್ತಿದ್ದ.[21] ಈ ಶಾಸನವು ಭ್ರಾನ್ತಿಕಾಡು-೩೦, ಬಿನ್ನವೂರು-೧೨ ಮತ್ತು ಮುರ್ಚನೂರು-೧೨ ಈ ವಿಭಾಗಗಳನ್ನು ಅಂತೂ ೫೪ ಬಾಡಗಳೆಂದು ತಿಳಿಸುತ್ತದೆ. ಚಾಳುಕಿ ಅಹಿಯರಸ ಮಾಚರಸನ ಮಾವನೆಂದು ಹರಿಹರದ ಶಾಸನದಿಂದ ತಿಳಿದುಬರುತ್ತದೆ. ಪ್ರಾಯಶಃ ಮಾಚರಸನ ಹೆಂಡತಿಯಾದ ಚಟ್ಟಲದೇವಿಯು ಈ ಚಾಳುಕಿ ಅಹಿಯರಸನ ಮಗಳಾಗಿರಬೇಕು. ನೊಳಂಬರ ಕಾಲದ್ಲಿ ೫೪ ಬಾಡಗಳಾಗಿದ್ದ (೩೦-+೧೨+೧೨=೫೪) ಈ ಮೂರು ವಿಭಾಗಗಳಿಗೆ ಇನ್ನೂ ಎರಡು ಬಾಡಗಳು ಸೇರಿ ೫೬ ಬಾಡಗಳಾಗಿ ಬೆಳಗುತ್ತಿ ಸಿಂಧರ ಶಾಸನಗಳಲ್ಲಿ ೫೬ ಬಾಡಗಳೆಂದೇ ಕರೆಯಲ್ಪಟ್ಟಿವೆ.

ಆಡಳಿತಾತ್ಮಕ ಅಥವಾ ಬೇರೆ ಕಾರಣಗಳಿಂದಾಗಿ ಎರಡು ಅಥವಾ ಮೂರು ವಿಭಾಗಗಳು ಒಟ್ಟುಗೂಡಿದಾಗ ಈ ವಿಭಾಗಗಳ ಗ್ರಾಮಗಳ ಬಾಡಗಳ ಸಂಖ್ಯೆಯನ್ನು ಒಟ್ಟುಗೂಡಿಸಿ ಬರುವ ಮೊತ್ತವನ್ನು ಯಾವುದಾದರೊಂದು ಪ್ರಮುಖ ವಿಭಾಗದ ಹೆಸರಿನೊಂದಿಗೆ ಅಥವಾ ಬೇರೆ ಹೆಸರನ್ನು ಈ ಹೊಸ ವಿಭಾಗಕ್ಕೆ ಅನ್ವಯಿಸಿ ಶಾಸನಗಳಲ್ಲಿ ಬಳಸಿರುವುದನ್ನು ಕಾಣುತ್ತೇವೆ. ರಾಷ್ಟ್ರಕೂಟರ ಕಾಲದಲ್ಲಿನ ಕ್ರಿ.ಶ. ೯೧೨ರ ಶಾಸನದಲ್ಲಿ ಕುಡುವಣ್ಣ ಗಂಡ-೭೦ ಮತ್ತು ಇಟ್ಟಿಗೆ-೩೦ ವಿಭಾಗಗಳ ಉಲ್ಲೇಖವಿದೆ. ಇದೇ ಪ್ರದೇಶ ಕಲ್ಯಾಣ ಚಲುಕ್ಯರ ಕಾಲದಲ್ಲಿ ರಟ್ಟಪಳ್ಳಿ-೭೦ ಮತ್ತು ಇಟ್ಟಿಗೆ-೩೦ ಎಂದು ಕರೆಯಲ್ಪಟ್ಟಿದೆ. ಒಂದು ವಿಭಾಗದ ಹೆಸರು ಬದಲಾಗಿರುವುದು ಪ್ರಾಯಶಃ ಕುಡುವಣ್ಣ ಗಂಡ-೭೦ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಬರುಬರುತ್ತಾ ರಟ್ಟಪಳ್ಳಿ ಗ್ರಾಮ ಪ್ರಾಮುಖ್ಯತೆ ಗಳಿಸಿ ಪ್ರಮುಖ ಪಟ್ಟಣವಾಗಿ ಆಳುವ ರಾಜವಂಶದ ಬದಲಾವಣೆಯಾಗಿ ರಾಜಧಾನಿಯ ಸ್ಥಳಾಂತರಕ್ಕೆ ಕಾರಣವಾಗಿರಬಹುದು.[22] ಇಟ್ಟಿಗೆ-೩೦ ಮತ್ತು ರಟ್ಟಪಳ್ಳಿ-೭೦ ವಿಭಾಗಗಳು ಸೇರಿ ನೂರುಂಬಾಡ ಆಗಿದ್ದನ್ನು ಇಟ್ಟಿಗೆಯ ಶಾಸನದಿಂದ ಕಾಣುತ್ತೇವೆ.[23]

ರಾಜ್ಯ ವಿಸ್ತರಣಾಕಾಂಕ್ಷಿಯಾದ ಹೊಯ್ಸಳ ವಿಷ್ಣುವರ್ಧನ ಉಚ್ಚಂಗಿಯನ್ನು ಗೆದ್ದುಕೊಂಡು ಹಾನಗಲ್ಲು ಪ್ರದೇಶಕ್ಕೂ ಬಂದು ಸಾಂತರರ ಸ್ನೇಹ ಬೆಳೆಸಿದ್ದನ್ನು ಕಾಣುತ್ತೇವೆ. ಆಳ್ವಖೇಡದ ಅಳುಪರು ಸಾಂತಳಿಗೆಯನ್ನು ಮುತ್ತಿದಾಗ ಬನವಾಸಿಯಲ್ಲಿ ತಂಗಿದ್ದ ವಿಷ್ಣುವರ್ಧನ ಅಳುಪರನ್ನು ಸೋಲಿಸಿ ಸಾಂತರರ ಬೆಂಬಲಕ್ಕೆ ನಿಂತನು. ಹಾನುಗಲ್ಲು ಕದಂಬರ ತೈಲಪ ಕ್ರಿ.ಶ. ೧೦೯೦ ರಲ್ಲಿ ಪಟ್ಟಕ್ಕೆ ಬಂದಿದ್ದು ಆರನೆಯ ವಿಕ್ರಮಾದಿತ್ಯನ ವಿಶ್ವಾಸ ಗಳಿಸಿ ಬನವಾಸಿ ಮತ್ತು ಹಾನಗಲ್ಲು ಪ್ರದೇಶಗಳನ್ನು ಆಳುತ್ತಿದ್ದನು. ಶಿವಮೊಗ್ಗ ತಾಲೂಕಿನ ಕ್ರಿ.ಶ. ೧೧೧೫ ಶಾಸನದಲ್ಲಿ ಹೇಳಿದಂತೆ[24] ತೈಲಪನ ಮಾಂಡಳೀಕ ಮಹಾಪ್ರಧಾನಿ ಮಸಣಯ್ಯ ಹೊಂಬುಚದ ಸಾಂತರರ ಮೇಲೆ ಧಾಳಿಮಾಡಿ ಸಾಂತರರ ಮನ್ನೆಯ ಬಮ್ಮರಸನ ಮಗನನ್ನು ಕೊಲ್ಲುತ್ತಾನೆ. ಶಿಕಾರಿಪುರ ಮತ್ತು ಸೊರಬ ತಾಲೂಕಿನ ಕೆಲವು ಶಾಸನಗಳಲ್ಲಿ ಕೂಡಾ ಮಸಣಯ ಉಲ್ಲೇಖವಿದೆ. ಶಿವಮೊಗ್ಗ ತಾಲೂಕು ಅಗ್ರಹಾರ ಚೋರಡಿಯ ಕಾಲದ ಉಲ್ಲೇಖವಿಲ್ಲದ ವೀರಗಲ್ಲು ಶಾಸನದಲ್ಲಿ ಕದಂಬರ ತೈಲಪ ಇಲ್ಲಿನ ಹಸುಗಳನ್ನು ಅಪಹರಿಸಿದ್ದನ್ನು ತಿಳಿಸುತ್ತದೆ.[25] ಕದಂಬರ ತೈಲಪ ಹೆಚ್ಚಿನಪಾಲು ಹೊಂಬುಚದ ಸಾಂತರರು ಮತ್ತು ಹೊಯ್ಸಳರನ್ನು ಎದುರಿಸುತ್ತಾ ಬನವಾಸಿ ಪ್ರಾಂತದಲ್ಲೇ ಹೆಚ್ಚು ಕಾಲ ಕಳೆದಿರಬೇಕು. ಬೆಳಗುತ್ತಿಯ ಸಿಂದರು ಪರೋಕ್ಷವಾಗಿ ಹೊಯ್ಸಳರ ಬದಲಿಗೆ ಕದಂಬರ ತೈಲಪನನ್ನೆ ಬೆಂಬಲಿಸಿರಬೇಕು. ಬೆಳಗುತ್ತಿಯ ೧೦ನೇ ವೀರಗಲ್ಲು[26] ೬ ಅಕ್ಟೋಬರ್‌೧೧೩೦ ರಂದು ತೈಲಪ ಮರಣ ಹೊಂದಿದನ್ನು ಆ ಸಮಯದಲ್ಲಿ ಮಹಾಪ್ರಧಾನಿ ಮಸಣಯ್ಯನ ತಮ್ಮ ಬೊಪ್ಪ ವೇಳೆವಾಳಿಯಾಗಿ ಸ್ವರ್ಗವೇರಿದ ವಿಷಯ ತಿಳಿಸುತ್ತದೆ.

ನೂರುಂಬಾಡದ ಮೂರನೆಯ ಕೇತರಸನ ಮೂವರು ಪತ್ನಿಯರಲ್ಲಿ ಸಿಂಧ ಮನೆತನದ ದೋರಲಾದೇವಿಯು ಒಬ್ಬಳು. ಡಾ. ಶ್ರೀನಿವಾಸ ರಿತ್ತಿಯವರು ಬಹುತೇಕ ಈ ದೋರಲಾದೇವಿಯು ಬೆಳಗುತ್ತಿಯ ಸಿಂಧರ ಒಂದನೆಯ ಈಶ್ವರದೇವನ ಮಗಳಿರಬಹುದೆಂದು ಅಭಿಪ್ರಾಯ ಪಡುತ್ತಾರೆ.[27]

ಗದಗ ತಾಲುಕಿನ ಹಂಚಿನಾಳದ ಅತಿತ್ರುಟಿತ ಶಾಸನವೊಂದು[28] ಸಿಂಧ ಪೆರ್ಮಾಡಿ ಗೋವೆಯ ಕದಂಬರನ್ನು ಸೋಲಿಸಿ ಕೊಳ್ಳಿಗನಘಟ್ಟಕ್ಕೆ ದಾಳಿಮಾಡಿ ಹೊಯ್ಸಳ ವಿಷ್ಣುವರ್ಧನನನ್ನು ದೋರಸಮುದ್ರದವರೆಗೆ ಬೆನ್ನಟ್ಟಿ ಹೋಗಿದ್ದನ್ನು ತಿಳಿಸುತ್ತದೆ. ಕೊಳ್ಳಿಗನ ಘಟ್ಟವು ಹೊನ್ನಾಳಿ ತಾಲೂಕಿನಲ್ಲಿರುವ ಕೊಳ್ಳಿಗ-೭೦ ವಿಭಾಗವಾಗಿದ್ದು ಕುಳಗಟ್ಟೆ ಇದರ ರಾಜಧಾನಿಯಾಗಿದೆ. ಶಾಸನೋಕ್ತ ಸಿಂಧ ಪೆರ್ಮಾಡಿ ಪ್ರಾಯಶಃ ಬೆಳಗುತ್ತಿಯ ಸಿಂಧ ಮಾಚರಸನಿರಬೇಕೆಂದು ತೋರುತ್ತದೆ.

(೨) ಕಳಚೂರ್ಯ, ಸೇವುಣ ಮತ್ತು ಹೊಯ್ಸಳರಿಗೆ ಪರ-ವಿರೋಧವಾಗಿ

ಹಾನಗಲ್ಲು, ಉದ್ದರೆ ಮತ್ತು ಸಾಂತಳಿಗೆ ಅರಸರು ತಮ್ಮನ್ನು ಹೊಯ್ಸಳರೊಂದಿಗೆ ಗುರ್ತಿಸಿಕೊಂಡರು. ಬೆಳಗುತ್ತಿಯ ಸಿಂಧರು ತಮ್ಮನ್ನು ಕಳಚೂರ್ಯರೊಂದಿಗೆ ಗುರ್ತಿಸಿಕೊಂಡರು. ಹೊಯ್ಸಳ ಒಂದನೆಯ ನರಸಿಂಹನು ಕ್ರಿ.ಶ. ೧೧೫೪ ರಲ್ಲಿ ಬನವಾಸಿಯಲ್ಲಿ ಕೆಲಕಾಲ ತಂಗಿದ್ದನು. ಬಿಜ್ಜಳನು ಕ್ರಿ.ಶ. ೧೧೬೩ ರಲ್ಲಿ ಸಾಗರ ತಾಲೂಕಿನ ತ್ಯಾಗರ್ತಿಯಲ್ಲಿ ಸಾಂತರರ ಜಗದೇವನನ್ನು ಸೋಲಿಸಿದನು. ಹೊಯ್ಸಳ ನರಸಿಂಹನು ಬೆಳಗುತ್ತಿಯನ್ನು ವಶಪಡಿಸಿಕೊಂಡಿರಬೇಕು. ಬೆಳಗುತ್ತಿಯಲ್ಲಿರುವ ಈಶ್ವರರ ದೇವನ ಕ್ರಿ.ಶ. ೧೧೬೬ರ ಶಾಸನದ ಪ್ರಕಾರ ಆತನ ಅಧಿಕಾರಿಗಳಾದ ಹೆಗ್ಗಡೆ ಸಿಂಗಯ್ಯ ಮತ್ತು ಗಂಡ ವಿಗ್ರಹ ಕೇಶದೇವ ಬೆಳಗುತ್ತಿಯ ಕೋಟೆಯ ಮೇಲೆ ಧಾಳಿ ಮಾಡಿರುವುದನ್ನು ಕಾಣುತ್ತೇವೆ.[29] ಕ್ರಿ.ಶ. ೧೧೬೫ ರ ಹಿರೇಕೆರೂರು ತಾಲೂಕು ನಿಡನೇಗಿಲ[30] ಶಾಸನದಲ್ಲಿ ತಿಳಿಸಿದಂತೆ ಈಶ್ವರದೇವ ಹಳ್ಳೂರಿನಿಂದ ಐದು ನಾಡುಗಳಲ್ಲಿ ಹದಿನಾರು ಕಂಪಣಗಳನ್ನು ಆಳುತ್ತಿದ್ದನು. ಎರಡನೆಯ ಈಶ್ವರದೇವ ತನ್ನ ಅಭ್ಯುದಯಕ್ಕೆ ಕಾರಣನಾದ ಮಾವ ಅಲ್ಲಮರಸ ಮತ್ತು ಮಂತ್ರಿ ಮಹದೇವನನ್ನು ಸ್ಮರಿಸುತ್ತಾನೆ. ಈ ಸಮಯದಲ್ಲೆ ಬೆಳಗುತ್ತಿ ಸಿಂಧರ ಆಳ್ವಿಕೆಯ ಪ್ರದೇಶದ ವಿಸ್ತಾರ ಹೆಚ್ಚುವುದನ್ನು ಕಾಣುತ್ತೇವೆ.

ಈ ಹದಿನಾರು ಕಂಪಣಗಳು ಹಿರೇಕೆರೂರು, ಹೊನ್ನಾಳಿ, ಶಿವಮೊಗ್ಗ, ಹರಿಹರ, ದಾವಣಗೆರೆ, ಹೊಸದುರ್ಗ, ತರೀಕೆರೆ ಮತ್ತು ಅರಸೀಕೆರೆ ತಾಲೂಕುಗಳಲ್ಲಿ ಹರಡಿಕೊಂಡಿದ್ದವು. ಆ ನಾಡುಗಳಾವುವೆಂದರೆ:

ಬನವಾಸೆ ನಾಡು ಮಾಸೂರು-೧೨ ಎಡವಟ್ಟೆ-೭೦, ಬಳ್ಳವೆ-೭೦, ನರಿಯಳಿಗೆ-೭೦
ಸಾನ್ತಳಿಗೆ ನಾಡು ಎಡಮಲೆ-೭೦, ಮುದುವರ (ಮುದುಮಲ್ಲ)-೩೦
ಮಂಡಲಿ ನಾಡು ಹೊಳಲೂರು-೧೨
ನೊಳಂಬವಾಡಿ ನಾಡು ಕೊಳ್ಳಿಗ-೭೦, ಕುಂದೂರು-೭೦, ಅರಬಲ-೭೦ ಬಾಡ-೫೬
ಮುನುಡಿವೂಳಲು ೧೨, ಅರಕೆರೆ-೧೨, ಅತ್ತಿಗೇರ-೧೨, ಪಡುಗಲು-೧೨,
ಅಸನ್ದಿ ನಾಡು ಕಳಿಕಟ್ಟೆ-೧೨, ಅರಬಲ-೭೦

ಹೊಯ್ಸಳ ವೀರ ಬಲ್ಲಾಳ ಕೃಷ್ಣಾನದಿಯವರೆಗೂ ರಾಜ್ಯ ವಿಸ್ತರಿಸಿದ್ದು, ಈಗ ಲಕ್ಕುಂಡಿಯಲ್ಲಿ ಉತ್ತರ ಭಾಗದ ರಾಜಧಾನಿಯನ್ನಾಗಿ ಆಳುತ್ತಿದ್ದನು. ಕ್ರಿ.ಶ. ೧೨೦೦ ರಲ್ಲಿ ಹೊಯ್ಸಳ ಮಹಾದೇವಿಯು ದೋರಸಮುದ್ರದಲ್ಲಿ ಆಳುತ್ತಿದ್ದಳು. ಹೊಯ್ಸಳ ಬಲ್ಲಾಳನು ಗುತ್ತಿ, ಉದ್ದರೆ, ಬಂದಣಿಕೆ, ರಟ್ಟಹಳ್ಳಿ, ಕೋಟೆಗಳನ್ನು ವಶಪಡಿಸಿಕೊಂಡಿದ್ದು ಕ್ರಿ.ಶ. ೧೧೯೩ ರಲ್ಲಿ ಆತನ ದಂಡನಾಯಕನೊಬ್ಬ ಬನವಾಸಿ ಮತ್ತು ಸಾಂತಳಿಗೆಯನ್ನು ಆಳುತ್ತಿದ್ದನೆಂದು ಲಕ್ಕುಂಡಿಯ ಶಾಸನ ಹೇಳುತ್ತದೆ.

ಕ್ರಿ.ಶ. ೧೧೮೭ ರಲ್ಲಿ ಪಾಂಡ್ಯನು ನ್ಯಾಮತಿಯ (ನೆಲವತ್ತಿ) ಮೇಲೆ ಧಾಳಿ ಮಾಡಿ ಹಸುಗಳನ್ನು ಅಪಹರಿಸುವಾಗ ಮಲ್ಲಿದೇವನು ಪಡೆಯ ಚಟ್ಟನಾಯಕ ಎದುರಾಳಿಗಳ ನೆತ್ತುರೋಕುಳಿಯಾಡಿ ಹಸುಗಳನ್ನು ಮರಳಿ ಪಡೆಯುತ್ತಾನೆ.[31] ಕ್ರಿ.ಶ. ೧೧೯೫ ರಲ್ಲಿ ಮಲ್ಲಿದೇವನು ರಟ್ಟೆಹಳ್ಳಿಯ ಮೇಲೆ ದಾಳಿ ಮಾಡಿದಾಗ ಕಲ್ಲೆಯನಾಯಕ ಮರಣ ಹೊಂದುತ್ತಾನೆ. ರಟ್ಟೆಹಳ್ಳಿಯ ಈ ದಾಳಿಯು ಕೋಟೆಯನ್ನು ವಶಪಡಿಸಿಕೊಂಡ ಹೊಯ್ಸಳ ಬಲ್ಲಾಳನನ್ನು ಅಲ್ಲಿಂದ ಹೊರದೂಡುವ ಉದ್ದೇಶದಿಂದಲೇ ಆಗಿರಬೇಕು.

ವೀರ ಬಲ್ಲಾಳನ ಹೆಂಡತಿ ಹಿರಿಯ ಕೇತಲದೇವಿ ಕುಂದವಾಡದಲ್ಲಿ[32] ಸಂತೆಯನ್ನು ಸ್ಥಾಪಿಸಿ ದತ್ತಿಗಳನ್ನು ಬಿಡುತ್ತಾಳೆ. ಮತ್ತೊಬ್ಬ ಹೆಂಡತಿ ವುಮಾದೇವಿಗೆ ಬೆಳಗುತ್ತಿಯ ಮೇಲೆ ವಿಶೇಷ ಆಸಕ್ತಿಯನ್ನು ಕಾಣುತ್ತೇವೆ. ಕ್ರಿ.ಶ. ೧೧೯೬ ರಲ್ಲಿ ಆಕೆ[33] ಕವುಡಿವೂಳೆಯಲ್ಲಿ ಬೀಡುಬಿಟ್ಟು (ತುಂಗಭದ್ರಾ ಪಶ್ಚಿಮ ತೀರದ ಜಾಳೆವೂಳ್-ಹೊನ್ನಾಳಿ ತಾಲೂಕಿನ ಇಂದಿನ ಬಳ್ಳೇಶ್ವರ?) ಬೊಪ್ಪಾದೇವಿಯರೊಡಗೂಡಿ ಬೆಳಗುತ್ತಿಯ ಮೇಲೆ ಧಾಳಿ ಮಾಡಿ ಹಸುಗಳನ್ನು ಅಪಹರಿಸಿ ಕೊಂಡು ಹೋಗುವಾಗ ಮಲ್ಲೆನಾಯಕನ ಮಗ ಗಟ್ಟಿನಾಯಕ ಮತ್ತು ಇತರರು ಕಾದಿ ಮರಣ ಹೊಂದುತ್ತಾರೆ. ಕ್ರಿ.ಶ. ೧೧೯೬ರ ಚಿಕ್ಕೆ ಎರೆಹಳ್ಳಿಯ ಶಾಸನದಲ್ಲಿ ಸಂವತ್ಸರವನ್ನು ಎಪಿಗ್ರಾಫಿಯಾ ಕರ್ನಾಟಿಕಾ ಸಂಪುಟದಲ್ಲಿ ಪಿಂಗಳ ಎಂದು ಓದಲಾಗಿದೆ. ಆದರೆ ಕ್ರಿ.ಶ. ೧೧೯೬ಕ್ಕೆ ನಳ ಸಂವತ್ಸರವನ್ನು ಬರುತ್ತಿದ್ದು ಹೊಯ್ಸಳ ವುಮಾದೇವಿಯ ಬೆಳಗುತ್ತಿಯ ದಾಳಿಯಿಂದ ಹಿಂತಿರುವಾಗ ೧೬ನೇ ದಿನ ದಾರಿಯಲ್ಲಿ ಕತ್ತಿಗೆ ಗ್ರಾಮದ ಹಸುಗಳನ್ನು ಕದ್ದೊಯ್ಯಲು ಪ್ರಯತ್ನಿಸಿದಾಗ ಮಲಯನ ಮಗ ಚೀಲಯ್ಯ ಹತ್ತೂರು ಕೆರೆಯ ಕೆಳಗಿನ ಬಯಲಲ್ಲಿ ಹೊಯ್ಸಳರನ್ನು ಎದುರಿಸಿ ಹಸುಗಳನ್ನು ಹಿಂದಕ್ಕೆ ಪಡೆದು ಸ್ವರ್ಗಸ್ಥನಾಗುತ್ತಾನೆ. ಕ್ರಿ.ಶ. ೧೧೯೮ ಶಿಕಾರಿಪುರ ಶಾಸನ[34] ಹೊಯ್ಸಳ ಬಲ್ಲಳ ಸಿಂದರನ್ನು ಅಡಗಿಸಿದನೆಂದು ತಿಳಿಸುತ್ತದೆ
ವಿಜಯ ಸಮುದ್ರ ಹಳ್ಳವೂರೆ?

ಕ್ರಿ.ಶ. ೧೨೦೦ರ ಹಾಸನ ಶಾಸನದಲ್ಲಿ ವೀರಬಲ್ಲಾಳನು ವಿಜಯ ಸಮುದ್ರದಲ್ಲಿ ಬೀಡುಬಿಟ್ಟಿದ್ದನ್ನು ಕಾಣುತ್ತೇವೆ. ಬಿ.ಎಲ್.ರೈಸರು ವಿಜಯ ಸಮುದ್ರವು ವಿಜಯಪುರ ಅಥವಾ ಹಳ್ಳೂರು ಎಂದು ಗುರುತಿಸಿದ್ದಾರೆ. ವೀರಬಲ್ಲಾಳನು ತನ್ನ ತಂದೆಯಾದ ನರಸಿಂಹನ ಹೆಸರಿನಲ್ಲಿ ತುಂಗಭದ್ರಾ ಪಶ್ಚಿಮ ತೀರದಲ್ಲಿನ ಜಾಳೆವಳೆಯಲ್ಲಿ ಲಿಂಗ ಪ್ರತಿಷ್ಠೆಯ ಮಾಡಿ ದೇವಾಲಯ ನಿರ್ಮಿಸಿದನು.[35] ಈ ಜಾಳವಳೆಯನ್ನು ಇಂದಿನ ಹೊನ್ನಾಳಿ ತಾಲೂಕಿನ ಬಳ್ಳೇಶ್ವರದೊಂದಿಗೆ ಗುರ್ತಿಸಬಹುದು. ಇಲ್ಲಿ ತ್ರಿಕೂಟಾಚಲ ದೇವಾಲಯವಿದ್ದು ಮಧ್ಯದ ಲಿಂಗವನ್ನು ಬಳ್ಳೇಶ್ವರನಾಗಿದ್ದು, ಬಳ್ಳಿಗಾವೆಯ ಶಾಸನದಿಂದ ತಿಳಿಯುವ ವಿಷಯವೇನೆಂದರೆ ಮಹದೇವ ಎಂಬ ಸಹವಾಸಿ ಬ್ರಾಹ್ಮಣ ಗೌತಮೇಶ್ವರ ಎಂಬ ಲಿಂಗ ಮತ್ತು ಆತನ ಸಹೋದರಿ ಮಾದಲದೇವಿಯು ಲಕ್ಷ್ಮೀನಾರಾಯಣನ್ನು ಪ್ರತಿಷ್ಠಾಪಿಸಿದರು. ಈ ಊರು ತುಂಗಭದ್ರಾ ನದಿಯ ದಕ್ಷಿಣ ದಡದಲ್ಲಿ ಇದ್ದು ಬಲ್ಲಾಳನಿಂದ ನಿರ್ಮಿತವಾದ ದೆಸೆಯಿಂದ ದೇವಾಲಯವನ್ನು ಈಗ ಬಳ್ಳಿಲಿಂಗಪ್ಪನ ಗುಡಿಯೆಂತಲೂ ಗ್ರಾಮವನ್ನು ಬಳ್ಳೇಶ್ವರ ಎಂದು ಕರೆದಿರಬೇಕು. ಇದರ ಸಮೀಪದಲ್ಲೇ ನರಸಿಂಹಪುರ ಎಂಬ ಬೇಚಿರಾಕ್ ಗ್ರಾಮವಿದೆ. ಇದು ಪ್ರಾಯಶಃ ಅಂದು ಹೊಯ್ಸಳ ಬಲ್ಲಾಳ ತನ್ನ ತಂದೆಯ ಹೆಸರಿನಲ್ಲಿ ಲಿಂಗ ಸ್ಥಾಪಿಸಿದ ನಂತರ ಸ್ಥಾಪಿಸಿದ ಅಗ್ರಹಾರ ಗ್ರಾಮ ಇರಬೇಕೆಂದು ಕಾಣುತ್ತದೆ.

ಚೆನ್ನಗಿರಿ ತಾಲೂಕಿನ ತಾವರೆಕೆರೆಯ ಅತಿತ್ರುಟಿತವಾದ ಹಾಗೂ ಕಾಲದ ಉಲ್ಲೇಖವಿಲ್ಲದ ಶಾಸನವೊಂದು ವೀರ ಬಲ್ಲಾಳ ವಿಜಯ ಸಮುದ್ರದಲ್ಲಿರುವುದನ್ನು ಹಾಗೆಯೇ ಅರಸೀಕೆರೆಯ ತಾಲೂಕು ಕಣಿಕಟ್ಟಿಯ ಕ್ರಿ.ಶ. ೧೨೦೯ರ ಶಾಸನ[36] ಹಳ್ಳೂರಿನಿಂದ ರಾಜ್ಯವಾಳುತ್ತಿದ್ದುದನ್ನು ತಿಳಿಸುತ್ತವೆ. ಹರಿಹರ ತಾಲೂಕಿನ ದೇವರಬೆಳೆಕೆರೆಯ ಹತ್ತಿರದ ಹಳೆಹಾಳುಪಾಳು ಗ್ರಾಮದ ಕಲ್ಲೇಶ್ವರ ದೇವಾಲಯದ ರಂಗ ಮಂಟಪದ ಕಂಬದ ಮೇಲಿನ ಶಾಸನವು ವಿಜಯ ಸಂವತ್ಸರದಲ್ಲಿ ಹೊರಡಿಸಲಾಗಿದ್ದು ಕಲಿಯುಗ ಧನ್ವಂತರಿ ವಿಜಯ ಪಂಡಿತರು ತಾವು ಕಟ್ಟಿಸಿದ ವಿಜಯ ಸಮುದ್ರದ ಕೆಳಗೆ ಗದ್ದೆ ದಾನವನ್ನು ಕಲಿದೇವರಿಗೆ ನೀಡಿದ ಉಲ್ಲೇಖವಿದೆ.[37] ಆದರೆ ಕಡೂರಿನ ಶಾಸನವೊಂದರಲ್ಲಿ ಹಳ್ಳೂರಿನ ಪ್ರತಿ ನಾಮವು ‘ವಿಜಯಸಮುದ್ರ’ ಆಗಿತ್ತೆಂಬ ಸ್ಪಷ್ಟ ಉಲ್ಲೇಖ ಇರುವುದರಿಂದ ರೈತರ ಅಭಿಪ್ರಾಯವೇ ಸರಿ ಎಂಬುದು ಸ್ಪಷ್ಟ.

ಕ್ರಿ.ಶ. ೧೧೭೫ರ ಬೆಳಗುತ್ತಿ ಶಾಸನದಲ್ಲಿ ತಿಳಿಸಿರುವಂತೇ ಹೊಯ್ಸಳ ಬಲ್ಲಾಳ ತೂದು ಪಿಳ್ಳೆ ದಂಡನಾಯಕನನ್ನು ಬೆಳಗುತ್ತಿಯಲ್ಲಿ ಆಡಳಿತಾಧಿಕಾರಿಯಾಗಿ ನೇಮಿಸಿದನು. ಕ್ರಿ.ಶ. ೧೨೦೮ರ ಚಿಕ್ಕ ಯೆರೆಹಳ್ಳಿಯ ರಾಮೇಶ್ವರ ದೇವಾಲಯದ ಶಾಸನದಲ್ಲಿ[38] ತೂದು ಪಿಳ್ಳೆ ದಂಡನಾಯಕ ಮತ್ತು ಬೆಳಗುತ್ತಿಯ ಸುಂಕದ ಹೆಗ್ಗಡೆ ವಿರುಪಯ್ಯ, ನಾಕಯ್ಯರು ಹತ್ತೂರ ರಾಮನಾಥ ದೇವರಿಗೆ ಹತ್ತೆತ್ತಿನ ವಕ್ಕಲುದೆರೆ ಸುಂಕವೊಂದು ಹಡುಂಕೆದೆರೆ ಇವುಗಳನ್ನು ಬಿಡುತ್ತಾರೆ. ಈ ಎರಡೂ ಶಾಸನಗಳ ಅವಧಿಯನ್ನು ಪರಿಗಣಿಸಿದರೆ ತೂದುಪಿಳ್ಳೆ ದಂಡನಾಯಕ ಹೊಯ್ಸಳರ ಅಧಿಕಾರಿಯಾಗಿ ಬೆಳಗುತ್ತಿಯಲ್ಲಿ ೩೩ ವರ್ಷಕಾಲ ಇದ್ದನೆ? ಎಂಬ ಪ್ರಶ್ನೆ ಉದ್ಬವಿಸುತ್ತದೆ.

ಹೊಯ್ಸಳರಿಗೂ ಮತ್ತು ಕಳಚೂರ್ಯರಿಗೂ ಆಗಾಗ್ಗೆ ಕದನವಾಗುತ್ತಿದ್ದು ಇವರಿಬ್ಬರನಡುವೆ ಸಂಧಾನವಾಗಿರುವುದು ಕುತೂಹಲಕಾರಿಯಾಗಿದೆ. ಕ್ರಿ.ಶ. ೧೨೫೫ರ ಅರಿಸೀಕೆರೆ ತಾಲೂಕಿನ ಹಿರಿಯೂರು ಗ್ರಾಮದಲ್ಲಿನ ಕುಂಜೇಶ್ವರ ದೇವಾಲಯದ ಶಾಸನ ಈ ಸಂಧಾನದ ವಿವರಗಳನ್ನು ನೀಡುತ್ತದೆ.[39] ಮಲೆಯಾಳ ದೇಶದ ಕುಂಜನಂಬಿಶೆಟ್ಟಿಯ ಬಗ್ಗೆ ಆತನ ಅಳಿಯ ಹೊಗಳುತ್ತಾ ತನ್ನ ಮಾವನಾದ ಕುಂಜನಂಬಿಶೆಟ್ಟಿಯು ವಿದ್ಯಾ ನಿಪುಣನೂ, ಮಂತ್ರಿಯ ಸಾಮರ್ಥ್ಯ ಹೊಂದಿದವನೂ ಸಂಧಿವಿಗ್ರಹಿಯೂ ಆಗಿದ್ದನು. ಹೊಯ್ಸಳ ವೀರಬಲ್ಲಾಳ ಮತ್ತು ಉತ್ತರದ ಅಹವಮಲ್ಲ ಇವರಿಬ್ಬರೂ ಮೆಚ್ಚುವಂತಹ ಸಂಧಾನವನ್ನು ಏರ್ಪಡಿಸಿದನು. ಡೆರೆಟ್ ಅವರು ಈ ಅಹವಮಲ್ಲ ಕಳಚೂರ್ಯ ಸಂಕಮ ಆಗಿರಬಹುದೆಂದು ಅಭಿಪ್ರಾಯ ಪಡುತ್ತಾರೆ. ಈ ಸಂಧಾನದ ಫಲಶೃತಿಯನ್ನು ಬೆಳಗುತ್ತಿಯ ಅರಸರ ಶಾಸನಗಳಲ್ಲಿ ಕಾಣುತ್ತೇವೆ. ಈ ಸಂಧಾನದ ಫಲವಾಗಿ ನಾವು ತೂದುಪಿಳ್ಳೆ ದಂಡನಾಯಕನನ್ನು ೩೩ ವರ್ಷಗಳ ಕಾಲ ಬೆಳಗುತ್ತಿಯಲ್ಲಿ ಆಡಳಿತ ಅಧಿಕಾರಿಯಾಗಿ ಕಾಣುತ್ತೇವೆ. ಅದರಂತೆ ಬೆಳಗುತ್ತಿಯ ಸಿಂಧರ ಶಾಸನಗಳು ದೂರದ ಅರಿಸೀಕೆರೆಯ ತಾಲೂಕಿನ ಕಳಿಕಟ್ಟೆ-೧೨ ಮತ್ತು ಅರಬಲ-೭೦ (ಅಸನ್ದಿ ನಾಡಿನ ಭಾಗಗಳು) ವಿಭಾಗಗಳನ್ನು ಆಳುತ್ತಿದ್ದಾಗಿ ತಿಳಿಸುತ್ತವೆ.

ಹೊಯ್ಸಳ ಪ್ರತಿನಿಧಿಯ ಉಲ್ಲೇಖವು ಬೆಳಗುತ್ತಿ ಸಿಂಧರ ಎರಡು ಶಾಸನಗಳಲ್ಲಿ ಕಂಡು ಬಂದರೆ, ಹೊಯ್ಸಳರ ಆಳ್ವಿಕೆಯ ಪ್ರದೇಶವಾದ ಅರಬಲ-೭೦ ಮತ್ತು ಕಳಿಕಟ್ಟೆ-೧೨ ವಿಭಾಗಗಳಲ್ಲಿ ಬೆಳಗುತ್ತಿ ಸಿಂಧರ ಯಾವುದೇ ರೀತಿಯ ಶಾಸನ ಅಥವಾ ಪರೋಕ್ಷ ಉಲ್ಲೇಖ ಕಂಡು ಬರದೇ ಇರುವುದು ಗಮನಾರ್ಹವಾಗಿದೆ. ಅಲ್ಲದೆ ಬೆಳಗುತ್ತಿ ಸಿಂಧರು ಈ ನಾಡುಗಳಲ್ಲಿನ ಕಂಪಣಗಳಲ್ಲಿ ಆಳುತ್ತಿರುವ ಹೇಳಿಕೆ ಬಿಟ್ಟರೆ ಇನ್ನಾವುದೇ ಪ್ರಮಾಣವಿಲ್ಲ.

(೩) ಪ್ರತ್ಯೇಕ ಅಸ್ತಿತ್ವದಲ್ಲಿ

ಮೂರನೆಯ ಈಶ್ವರದೇವ ಹೊಯ್ಸಳರ ವಿರುದ್ಧ ತಿರುಗಿ ಬೀಳುವುದಕ್ಕಾಗಿ ಸಮಯ ಕಾಯುತ್ತಿದ್ದನು. ಹೊಯ್ಸಳರು ಬಂಕಾಪುರದ ಮುಖಾಂತರ ನಾಗರಖಂಡ ವಿಭಾಗವನ್ನು ವಶಪಡಿಸಿಕೊಂಡರು. ಕ್ರಿ.ಶ. ೧೨೦೩ರಲ್ಲಿ ಹೊಯ್ಸಳರ ಕಮ್ಮಟದ ಮಲ್ಲಣ್ಣ ದಂಡನಾಯಕ ಜಿಡ್ಡುಳಿಗೆ-೭೦ ನ್ನು ಮುತ್ತಿದನು. ವೀರ ಬಲ್ಲಾಳನ ಪಿರಿಯರಸಿ ಕೇತಲದೇವಿಯು ಬಂದಳಿಕೆಯಲ್ಲಿದ್ದುದನ್ನು ಕಾಣುತ್ತೇವೆ.[40]

ಎರಡನೆಯ ಮಲ್ಲಿದೇವನ ಆಡಳಿತದ ಸಮಯದಲ್ಲಿ ಹೊಯ್ಸಳರು ಬೆಳಗುತ್ತಿಯ ಮೇಲೆ ಹಿಡಿತ ಸ್ಥಾಪಿಸಿರಬೇಕು. ಕಲ್ಯಾಣ ಚಾಲುಕ್ಯ ಮತ್ತು ಕಳಚೂರ್ಯರನ್ನು ಬೆಂಬಲಿಸಿದ ಸಿಂಧರಿಗೆ ಹೊಯ್ಸಳರ ಮೇಲಾಳಿಕೆ ಬೇಕಾಗಿರಲಿಲ್ಲ. ಆದ್ದರಿಂದ ಈಶ್ವರದೇವ ಸೇವುಣ ಸಿಂಘಣನ ಸ್ನೇಹ ಬಯಸಿದನು. ಸೇವುಣರಿಗೂ ಹೊಯ್ಸಳರ ವಿರುದ್ಧ ನಿಲ್ಲಬಲ್ಲ ಒಂದು ಅರಸು ಮನೆತನ ಬೇಕಾಗಿತ್ತು. ಮಾಧನಬಾವಿಯ ಶಾಸನವು ಈಶ್ವರದೇವನನ್ನು ಸಿಂಹಳ ರಾಜ್ಯಾಭ್ಯುದಯ ಕಾರಣನೆಂದು ಹೊಗಳುತ್ತದೆ.[41] ಕ್ರಿ.ಶ. ೧೨೧೬ ರಲ್ಲಿ ಹೊಯ್ಸಳರ ಪರಮ ವಿಶ್ವಾಸಿಗಳಾದ ಬೇಡರ ಪಡೆಯು ಮಾಧನಬಾವಿಯ ಮೇಲೆ ದಾಳಿ ಮಾಡಿದಾಗ ಈಶ್ವರದೇವನ ಪಟ್ಟಣ ಸಾಹಣಿ ಚಿಣ್ಣಯ್ಯ ಹೋರಾಡುತ್ತಾನೆ.[42] ಇದೇ ವರ್ಷ ಈಶ್ವರದೇವ ಅಬ್ಬಲೂರ ಮೇಲೆ ಆಕ್ರಮಣ ಮಾಡಿ ಹಸುಗಳನ್ನು ಅಪಹರಿಸಲು ಪ್ರಯತ್ನಿಸಿದಾಗ ಮಾಚ ಮತ್ತು ಗುರವ ಮರಣ ಹೊಂದುತ್ತಾರೆ.[43] ಮತ್ತೊಮ್ಮೆ ಈಶ್ವರದೇವ ಹಲವು ಮನ್ನೆಯರ ಹಾಗೂ ಸಾಂತಳಿಗೆ ನಾಯಕರನ್ನು ಕೂಡಿ ೧೦,೦೦೦ ಆಳು, ೧೦೦೦ ಕುದುರೆಗಳಿಂದ ಅಬ್ಬಲೂರ ಮೇಲೆ ಆಕ್ರಮಣ ಮಾಡಿದನು.[44]ಕ್ರಿ.ಶ. ೧೨೨೧ರಲ್ಲಿ ಬಂದಳಿಕೆಯ ಬೊಮ್ಮಿ ದೇವನನ್ನು ಕೂಡಿಕೊಂಡು ಮುಳುಗಂದದ ಮೇಲೆ ದಾಳಿ ಮಾಡಿದನು.[45] ಕೊಡಮಗ್ಗಿಯ ಕ್ರಿ.ಶ. ೧೨೧೭ರ ಶಾಸನದಲ್ಲಿ[46] ಹೊಯ್ಸಳ ಬಲ್ಲಾಳ ಬೆಳಗುತ್ತಿಯ ಮೇಲೆ ಧಾಳಿ ಮಾಡಿದಾಗ ವೀರನೊಬ ಮರಣ ಹೊಂದುತ್ತಾನೆ.

ಮೂರನೆಯ ಈಶ್ವರದೇವನು ಸ್ವತಂತ್ರ ಅಸ್ತಿತ್ವಕ್ಕಾಗಿ ನಡೆಸಿದ ಪ್ರಯತ್ನವು ಸೇವುಣರೊಂದಿಗಿನ ಅವರ ಸ್ನೇಹವನ್ನು ಕಡಿಯಿತು. ಈಶ್ವರದೇವ ಸೇವುಣರನ್ನು ಬೆಳ್ವೊಲದವರೆಗೂ ಬೆನ್ನಟ್ಟಿದ್ದಾಗಿ ಸೊರಬ ಶಾಸನ ಸೂಚಿಸುತ್ತದೆ.[47] ಮಾಧನಬಾವಿಯ ಶಾಸನವು ಸೂಚಿಸುವಂತೇ ಹಿಂದೆ ಆಳುತ್ತಿದ್ದ ೧೬ ಕಂಪಣಗಳಲ್ಲದೇ ಉಚ್ಚಂಗಿ-೩೦, ನಾಗರಖಂಡ, ಜಿಡ್ಡುಳಿಗೆ ಮತ್ತು ಮಾತೃಪಕ್ಷ ಇನ್ನೂರು ಅಲ್ಲದೆ ಇನ್ನೂ ಇತರ ವಿಭಾಗಗಳನ್ನು ತನ್ನ ಮಗನಾದ ಕೇಶವದೇವನೊಂದಿಗೆ ಆಳುತ್ತಿದ್ದನು. ಈ ಮಾತೃಪಕ್ಷ ಇನ್ನೂರು ಯಾವ ವಿಭಾಗವಾಗಿತ್ತೆಂದು ಪರಿಶೀಲಿಸಬೇಕಾಗಿದೆ. ಈಶ್ವರದೇವನ ಪ್ರಯತ್ನ ಸೇವುಣ ಮತ್ತು ಹೊಯ್ಸಳರ ಬಲದ ಮುಂದೆ ಬಹಳ ಸಮಯ ನಿಲ್ಲಲಿಲ್ಲವೆಂದು ಕಾಣುತ್ತದೆ.

ಸೇವುಣ ಹೊನ್ನಬೊಮ್ಮಿಸೆಟ್ಟಿ ಬನವಾಸಿಯಲ್ಲಿದ್ದಾಗ ಆತನ ಮೇಲೆ ಕೇಶವದೇವನ ಅಧಿಕಾರಿಯಾದ ಬೊಮ್ಮ ಆಕ್ರಮಣ ಮಾಡಿದಾಗ ಹೊನ್ನಬೊಮ್ಮಿಸೆಟ್ಟಿಯು ಸೇನಾಸಮೇತನಾಗಿ ಬಂದು ಕಾದಿದ ಯುದ್ಧದಲ್ಲಿ ಬೊಮ್ಮ ಮರಣ ಹೊಂದುತ್ತಾನೆ.[48] ಸೇವುಣರ ಪ್ರಾಬಲ್ಯವನ್ನು ಹೊಸಗುಂದದ ಬೀರರಸ ಬೆಳಗುತ್ತಿಯನ್ನು ಆಳುತ್ತಿರುವಾಗಲೂ ಕಾಣುತ್ತೇವೆ. ಕ್ರಿ.ಶ. ೧೨೪೬ರಲ್ಲಿ ಹತ್ತೂರ ಮೇಲೆ ಲಖಣಪಾಲ (ಲಕ್ಷ್ಮಣಪಾಲ)ನ ದಾಳಿ ಮತ್ತು ಕ್ರಿ.ಶ. ೧೨೪೬ರಲ್ಲಿ[49] ಶ್ರೀಧರ ದಂಡನಾಯಕನ ಕೂಡಲಿಯುದ್ಧ, ಕ್ರಿ.ಶ. ೧೨೪೭ರ ಚೇಳಂಗಿಯ ಬಿರಯನಾಯಕ ಮಹಾಮಂಡಳೇಶ್ವರ ದೇಕರಸನ ನ್ಯಾಮತಿಯ ದಾಳಿಗಳನ್ನು ಬೀರರಸ ತಡೆದುದು ಬೆಳಗುತ್ತಿಯ ಹತ್ತಿರದ ಕುಳಹಳ್ಳಿಯ ವೀರಗಲ್ಲುಗಳು ಸೂಚಿಸುತ್ತವೆ.[50] ಹೊಯ್ಸಳ ವೀರನರಸಿಂಹನು ಹೊಸಗುಂದದ ಗಡಿ ಪ್ರದೇಶದವರನ್ನು ಹಿಂಸಿಸುತ್ತಿದ್ದು ಬೀರರಸನ ಮಗ ಬೊಮ್ಮರಸ ಅವರ ಮೇಲೆ ಯುದ್ಧ ಮಾಡಿ ಅವರನ್ನು ಸೋಲಿಸುತ್ತಾನೆ.

ಆಡಳಿತ ಮತ್ತು ಧರ್ಮ

ಎರಡನೆಯ ಈಶ್ವರದೇವ ಅನೇಕ ದಾನ ಕಾರ್ಯಗಳಲ್ಲಿ ಭಾಗವಹಿಸಿದ್ದ. ಹಿರೆಕೆರೂರು ಕೊಡಮೊಗ್ಗೆಯ ದೇವಾಲಯಕ್ಕೆ ದಾನ ನೀಡಿದ್ದಾನೆ. ಇದೇ ತಾಲೂಕಿನ ಹಳೆನಿಡನೇಗಿಲದಲ್ಲಿ ನಾಗದೇವ ಮತ್ತು ನನ್ನಿಕವ್ವೆ ಇವರ ಮಗನಾದ ಮಹಾದೇವ ಮಂತ್ರಿಯು ಕಟ್ಟಿಸಿದ ಮಲ್ಲಿಕಾರ್ಜುನ ದೇವಾಲಯಕ್ಕೆ ಪ್ರತೀಗಾಣದ ಮೇಲಿನ ಡೊಂಕೆವಣ (ದೇವರ ನಂದಾದೀವಿಗೆಗೆ ನಡೆಸುವ ಸಲುವಾಗಿ ಬಿಟ್ಟ ಹಣ) ಬಿಡಲಾಗಿದೆ.[51]

ಹರಿಹರವು ಅನೇಕ ದೇವಾಲಯಗಳಿಂದ ಕೂಡಿದ ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು. ಇಲ್ಲಿನ ಶ್ರೀ ಯೋಗೇಶ್ವರ ದೇವರಿಗೆ ಬೆಳೆಗೆರೆಯ ಹತ್ತಿರದಲ್ಲಿನ ಕೆಕರಗೋಳದಲ್ಲಿ ೧ ಮತ್ತರು ಭೂಮಿಯನ್ನು ಮಾಚರಸ ದಾನನೀಡುತ್ತಾನೆ. ಎರಡನೆಯ ಈಶ್ವರದೇವ ಈ ಭೂಮಿಗೆ ಹೊಂದಿಕೊಂಡಂತೆ ಇನ್ನೂ ೨ ಮತ್ತರು ದಾನ ನೀಡುತ್ತಾನೆ. ಇದೇ ಶಾಸನದಲ್ಲಿ ಅಂಬಿಗರು ಅಂಬಿಗೆದೆರೆಯನ್ನು ಬಿಡುವುದನ್ನು ಕಾಣುತ್ತೇವೆ.[52] ಕಳಚೂರ್ಯ ಮಲ್ಲಿದೇವ ಶಂಕರನಾರಾಯಣ ದೇವರಿಗೆ ದಾನ ನೀಡುವ ಸಂದರ್ಭದಲ್ಲಿ ಈಶ್ವರದೇವ ತನ್ನ ಮನ್ನೆಯದ ಭ್ರಾನ್ತಿ-೩೦ರ ಪ್ರತಿಯೊಂದು ಊರಿನಿಂದ ಒಂದು ಹೊನ್ನು ನೀಡುತ್ತಾನೆ.[53]

ಕುರುವದ ರಾಮೇಶ್ವರ ದೇವರ ದೇವತಾ ಭವನವನ್ನು ಬೆಳಗುತ್ತಿಯ ಹೆಜ್ಜುಂಕದ ದೇವರಸ ಜೀರ್ಣೋದ್ದಾರ ಮಾಡಿಸಿ ಒಂದು ಮತ್ತರು ದಾನ ನೀಡುತ್ತಾನೆ. ದೇವರಸ ವಿರುಪಯ್ಯ ಮತ್ತು ನಾಕಣ್ನರು ಎಡವಟ್ಟೆ ಮತ್ತು ಬಳ್ಳವೆಯ ಸುಂಕದ ಅಧಿಕಾರಿಗಳಾಗಿದ್ದರು. ಇವರು ಚಿಕ್ಕೆರೆಹಳ್ಳಿಯ ಶ್ರೀ ರಾಮೇಶ್ವರ ದೇವರಿಗೂ ದಾನ ನೀಡುವಲ್ಲಿ ಭಾಗಿಯಾಗಿದ್ದಾರೆ.[54] ಎರಡನೆಯ ಮಲ್ಲಿದೇವನ ಕಾಲದಲ್ಲಿ ಬೆಳಗುತ್ತಿಯ ಸಿದ್ದೇಶ್ವರ ದೇವಾಲಯಕ್ಕೆ ಭೂಮಿದಾನ ಮಾಡಲಾಯಿತು; ಮತ್ತು ತೆಲ್ಲಿಗರು ನಂದಾದೀವಿಗೆಗೆ ಗಾಣವೊಂದನ್ನು ಬಿಟ್ಟರು. ಅರಕೆರೆಯ ಶ್ರೀ ಯೋಗೇಶ್ವರ ದೇವರಿಗೆ ಸಂತೆಯ ಆದಾಯವನ್ನು ಬಿಟ್ಟುದನ್ನು ಕಾಣುತ್ತೇವೆ.[55]

ಹೊಯ್ಸಳರ ಅಧಿಕಾರಿಯಾದ ತೂದು ಪಿಳ್ಳೆದಂಡನಾಯಕ ೩೩ ವರ್ಷಕಾಲ ಬೆಳಗುತ್ತಿಯಲ್ಲಿ ಇದ್ದರೆ, ಅದೇ ರೀತಿ ಕಳಚೂರ್ಯರ ಅಧಿಕಾರಿ ಇರುವುದನ್ನು ರಾಣೆಬೆನ್ನೂರು ತಾಲೂಕು ನದಿಹರಳಹಳ್ಳಿ ಶಾಸನ ಸೂಚಿಸುತ್ತದೆ.[56] ಕಳಚೂರ್ಯ ರಾಯಮುರಾರಿ ಸೋವಿದೇವನ ಕಾಲದಲ್ಲಿ ಮಹಾಪ್ರದಾನಿ ಕೇಸಿಮಯ್ಯ ದಂಡನಾಯಕ ಬನವಾಸಿ ಆಳುತ್ತಿದ್ದಾಗ ಕ್ರಿ.ಶ. ೧೧೭೨ ರಲ್ಲಿ ಗೊಟ್ಟಗಡಿಯ ನಾಗಗಾವುಂಡನ ಬಸದಿಗೆ ನೀಡಿರುವ ದಾನದಲ್ಲಿ ಬನವಸೆ ನಾಡ ಹೆಜ್ಜುಂಕ ವಡ್ಡರಾವುಳದ ದಂಡನಾಯಕ ಮಹೇಶ್ವರದೇವನ ಬೆಸದಿಂದ ಎಡವಟ್ಟೆ ಬಳ್ಳವೆ ನರಿಯಳಿಗೆ ಮತ್ತು ನೂರುಂಬಾಡದದವಸಾಯದ ಸುಂಕವೆರ್ಗ್ಗಡೆ ದಾವರಸ, ಮಂನ್ನೆಯ ಸುಂಕವೆರ್ಗ್ಗಡೆ ಬೊಮ್ಮದೇವ ಬಾಗಿಯಾಗಿದ್ದರೆ. ದವಸದಾಯದ ಸುಂಕವೆರ್ಗ್ಗಡೆ ದಾವರಸ ಬೆಳಗುತ್ತಿಯ ಸಿಂಧರ ಕೆಲವು ವಿಭಾಗಗಳ ಮತ್ತು ನೂರುಂಬಾಡದ ಕದಂಬರ ವಿಭಾಗದ ಸುಂಕದ ಅಧಿಕಾರಿಯಾಗಿ ಕಂಡುಬರುತ್ತಾರೆ.

ನ್ಯಾಮತಿ, ದಿಡಗೂರು, ಮಾದನಬಾವಿ, ಚಿಕ್ಕೆ ಎರೆಹಳ್ಳಿ, ತೀರ್ಥರಾಮೇಶ್ವರ ಮತ್ತು ಸಾಸುವೆಹಳ್ಳಿಯಲ್ಲಿ ಜಿನದೇವಾಲಯಗಳು ಇದ್ದವು.[57]ಚೀಲೂರಿನಲ್ಲಿ ನಾಲ್ಕು ತಿಂಗಳ ಕಾಲ ಅರೆವಟ್ಟಿಗೆಯನ್ನು ನಡೆಸುತ್ತಿದ್ದು ಇಲ್ಲಿ ಭತ್ತದ ಅಂಬಳಕ (ಗಂಜಿ)? ನೀಡಲಾಗುತ್ತಿತ್ತು.[58] ಸಹಗಮನ ಪದ್ಧತಿಯು ರೂಢಿಯಲ್ಲಿತ್ತೆಂದು ಚಿಕ್ಕಹಾಲಿವಾಣದ ಕ್ರಿ.ಶ. ೧೪೧೦ರ ಶಾಸನದಲ್ಲಿ ಕಂಡು ಬರುತ್ತದೆ.[59]

ಭೂಮಾಪನ

ತುಂಗಭದ್ರಾ ನದಿಯ ಬಲಭಾಗದಲ್ಲಿ ಕೃಷಿ ಭೂಮಿಗೆ ಸಂಬಂಧಿಸಿ ‘ಮಾರು’ ಅಳತೆಯುಬಳಕೆಯಲ್ಲಿತ್ತು. ದಾವಣಗೆರೆ ತಾಲೂಕಿನ ಆನೆಕೊಂಡದಲ್ಲಿ ೧೫ ಮಾರು, ಚನ್ನಗಿರಿ ತಾಲೂಕಿನ ಅಲಕನಾಳದಲ್ಲಿ ೪ ಮಾರು, ನಲ್ಕುಧರೆಯಲ್ಲಿ ೧೪ ಮಾರು, ಹೊನ್ನಾಳಿ ತಾಲೂಕು ಅರಕೆರೆಯಲ್ಲಿ ಮಾರುಬತೋಳು ಮತ್ತು ಅರಸೀಕೆರೆ ಹಿರಿಯೂರಿನಲ್ಲಿ ೫ ಮಾರು ಬಳಸುತ್ತಿದ್ದರು.[60]ಕುಂದೂರು-೭೦ ವಿಭಾಗದ ಬನ್ನಿಕೋಡು ಗ್ರಾಮದಲ್ಲಿ ಉಚ್ಚಂಗಿ-೩೦ರ ಪ್ರಮುಖ ಪಟ್ಟಣವಾದ ಬೇತೂರಿನ….ಕು ಗೇಣ ಗಳೆಯನ್ನು ಉಪಯೋಗಿಸಲಾಗಿದೆ.[61] ತುಂಗಭದ್ರಾ ನದಿಯ ಎಡಭಾಗದಲ್ಲಿನ ಎಡವಟ್ಟೆ-೭೦ರ ರಾಜಧಾನಿ ಮೇದೂರಿನಲ್ಲಿ ಕಚ್ಚವಿಯ ಕೋಲನ್ನು ಬಳಸಲಾಗಿದೆ.[62] ಚಿಕ್ಕ ಎರೆಹಳ್ಳಿ ಮತ್ತು ಕುರುವ ಶಾಸನಗಳು ಒಂದು ಮತ್ತರು ನೂರು ಕಮ್ಮಗಳನ್ನೊಳಗೊಂಡಿತ್ತೆಂದು ಸೂಚಿಸುತ್ತವೆ.[63] ಅರಕೆರೆಯ ಶಾಸನವು ಒಂದು ಮತ್ತರು ಕೇವಲ ೯ ಕಮ್ಮ ಮಾತ್ರ ಒಳಗೊಂಡಿತ್ತೆಂದು ಸೂಚಿಸುತ್ತದೆ.[64] ಇದು ಶಾಸನಗಳಲ್ಲೇ ಸೂಚಿತವಾಗುವ ಒಂದು ಮತ್ತರಿನ ಅತೀ ಕಡಿಮೆಪ್ರಮಾಣ. ಮತ್ತರನ್ನು ನೀರಿನ ಸೌಲಭ್ಯವನ್ನು ಆದರಿಸಿ ಗದ್ದೆ, ಬೆದ್ದಲು ಎಂದು ಗುರ್ತಿಸುವುದಲ್ಲದೆ ಬೆಳೆಯುವ ಬೆಳೆಯ ಆಧಾರದ ಮೇಲೆ ನೆಲ್ಲು ಮತ್ತರು, ಎಳ್ಳು ನವಣಿ ಮತ್ತರು ಎಂದು ಗುರ್ತಿಸಿದ್ದರು.[65] ಅಲ್ಲದೆ ಕುರಿಕಮ್ಮ ಎಂಬ ಉಲ್ಲೇಖವು ಗಮನಾರ್ಹವಾಗಿದ್ದು ಇದು ಗೋಮಾಳ ಭೂಮಿಯಂತೆ ಇರುವ ಭೂಮಿಯಾಗಿರಬಹುದು.

ಆಯಾ ಪ್ರದೇಶದಲ್ಲಿ ಪ್ರಚಲಿತದಲ್ಲಿದ್ದ ಅಳತೆ ಕೋಲುಗಳನ್ನೇ ಬಳಸಲಾಗಿತ್ತು. ಬೆಳಗುತ್ತಿ ಸಿಂಧರ ಆಡಳಿತದಲ್ಲಿ ಏಕರೂಪದ ಅಳತೆಯ ಕೋಲುಗಳ ಬಳಕೆಯಾಗಿಲ್ಲವೆಂದು ಕಂಡುಬರುತ್ತದೆ.

ಬೆಳಗುತ್ತಿ ಸಿಂಧರು ಆಳಿದ ನಾಡನೊಳಗಿನ ಕಂಪಣಗಳು (ನಕಾಶೆ ನೋಡಿ)

೧. ಬನವಾಸೆ ನಾಡು

ಅ) ಮಾಸೂರು ೧೨ : ಹಿರೆಕೆರೂರು ತಾಲೂಕಿನ ಕುಮದ್ವತಿ ನದಿಯ ಎಡಭಾಗದಲ್ಲಿನ ಮಾಸೂರು ಗ್ರಾಮವನ್ನು ಕೇಂದ್ರವಾಗಿ ಒಳಗೊಂಡ ಪ್ರದೇಶ.

ಆ) ಎಡವಟ್ಟೆ ೭೦ : ಬಾದಾಮಿ ಚಾಲುಕ್ಯರ ಕಾಲದಿಂದಲೂ ಉಲ್ಲೇಖಿಸಲ್ಪಡುವ ಈ ನಾಡು ಹಿರೆಕೆರೂರು ತಾಲೂಕಿನ ದಕ್ಷಿಣಭಾಗ ಮತ್ತು ಹೊನ್ನಾಳಿ ತಾಲೂಕಿನ ಉತ್ತರ ಭಾಗವನ್ನಾಗಿ ಒಳಗೊಂಡ ಪ್ರದೇಶವಾಗಿತ್ತು. ಇಂದಿನ ಮೇದೂರನ್ನು ರಾಜಧಾನಿಯಾಗಿ ಹೊಂದಿತ್ತು. ಇದೇ ವಿಭಾಗದಲ್ಲಿ ಬರುವ ಹಳ್ಳೂರು ತುಂಗಭದ್ರಾ ನದಿ ತೀರದಲ್ಲಿದ್ದು ಮುಖ್ಯ ಪಟ್ಟಣವಾಗಿ ವಿಜಯಪುರವೆಂದು ಕರೆಯಲ್ಪಟ್ಟು ಕೆಲವು ಬಾರಿ ಬೆಳಗುತ್ತಿಯ ಸಿಂಧ ಅರಸರು ಮತ್ತು ಹೊಯ್ಸಳ ಅರಸರು ಇಲ್ಲಿಂದ ಆಳುತ್ತಿದ್ದುದ್ದಾಗಿ ಹೇಳಲಾಗಿದೆ.

ಇ) ಬಳ್ಳವೆ ೭೦ : ಎಡವಟ್ಟೆ ನಾಡಿನ ದಕ್ಷಿಣ ಭಾಗದಲ್ಲಿ ಬಹುತೇಕ ಹೊನ್ನಾಳಿ ತಾಲೂಕಿನಲ್ಲಿ ಈ ಪ್ರದೇಶ ಇದ್ದು ಕ್ರಿ.ಶ. ೧೦೭೭ ರಲ್ಲಿ ಬಳ್ಳಿ ೭೦ (ಹೊ.ನಂ.೧೪) ಹೊನ್ನಾಳಿ ಶಾಸನದಲ್ಲಿ ಬಳ್ಳವಿ ೭೦ (ಹೊ ನಂ ೧) ಕ್ರಿ.ಶ. ೧೨೫೮ರಲ್ಲಿ ಬಳೆಯ ನಾಡ ಬೆಳಗವತ್ತಿ (ಹೊ ನಂ ೭೬) ವಿಜಯನಗರ ಹರಿಹರನ ಸುರಹೊನ್ನೆ ಶಾಸನದಲ್ಲಿ ಬಳೆಯನಾಡ ಬೆಳಗವತ್ತಿಯೊಳಗಣ ನೇಮತ್ತಿ (ಹೊ ನಂ ೭೧) ನ್ಯಾಮತಿ ಶಾಸನದಲ್ಲಿ ಬಳ್ಳಿಯನಾಡು (ಹೊ ನಂ ೭೨) ಮತ್ತು ಮಲ್ಲಿಗೇನಹಳ್ಳಿಯ ಶಾಸನದಲ್ಲಿ ಬಳ್ಳವೆ, ಬೆಳಗುತ್ತಿಯ ಪ್ರದೇಶವೆ ಆಗಿದ್ದು ಬೆಳಗುತ್ತಿಯು ಅದರ ರಾಜಧಾನಿಯಾಗಿತ್ತು.

ಈ) ನರಿಯಳಿಗೆ ೪೦ : ಡಾ. ಶ್ರೀನಿವಾಸ ರಿತ್ತಿಯವರು ಶಿವಮೊಗ್ಗ ಜಿಲ್ಲೆಯಲ್ಲಿ ಇದೇ ಹೆಸರಿನ ಗ್ರಾಮವಾಗಿರಬೇಕೆಂದು ಊಹಿಸಿದ್ದಾರೆ. ಇದನ್ನು ಸದ್ಯಕ್ಕೆ ಸೊರಬ ತಾಲೂಕಿನ ಕುಬಟೂರು ಬಳಿಯ ನೇರಲಿಗೆಯೊಂದಿಗೆ ಗುರ್ತಿಸಬಹುದು.

೨. ಸಾನ್ತಳಿಗೆ ನಾಡು

ಅ) ಎಡಮಲೆ ೭೦ : ಶಿವಮೊಗ್ಗ ತಾಲೂಕಿನ ಉತ್ತರ ಭಾಗದಲ್ಲಿರುವ ಎಡವಾಳ ಗ್ರಾಮ ಮುಖ್ಯ ಪಟ್ಟಣವಾಗಿ ಹೊಂದಿದ ಪ್ರದೇಶ ಆಗಿರಬೇಕು.

ಆ) ಮುದುವರ ೩೦ (ಮುದುಮಲ್ಲ ೩೦) : ಕುರುವದಗಡ್ಡೆ ಶಾಸನದಲ್ಲಿ ಈ ವಿಭಾಗದಲ್ಲಿ ಸೊಗಿಲು ಗ್ರಾಮವಿತ್ತೆಂದು ತಿಳಿಯುತ್ತದೆ. ಇದನ್ನು ಕೂಡ ಶಿವಮೊಗ್ಗ ತಾಲೂಕಿನ ಉತ್ತರ ಭಾಗದಲ್ಲಿನ ಮುದುವಳಲು ಗ್ರಾಮವನ್ನು ರಾಜಧಾನಿಯಾಗಿ ಹೊಂದಿದ ಪ್ರದೇಶವಾಗಿ ಸಧ್ಯಕ್ಕೆ ಗುರ್ತಿಸಬಹುದು.

೩. ಮಂಡಲಿ ನಾಡು

ಅ) ಹೊಳಲೂರು ೧೨ : ಶಿವಮೊಗ್ಗ ತಾಲೂಕಿನ ತುಂಗಭದ್ರಾ ನದಿಯ ಎಡದಂಡೆಯಲ್ಲಿನ ಹೊಳಲೂರನ್ನು ಕೇಂದ್ರವಾಗಿ ಹೊಂದಿದ ಪ್ರದೇಶ.

೪. ನೊಳಂಬವಾಡಿ ನಾಡು

ಅ) ಮುನುಡಿ ವೊಳಲು ೧೨ (ಮನುಜ ವೊಳಲು) : ಚನ್ನಗಿರಿ ತಾಲೂಕಿನ ಮಲ್ಲಿಗೆಯ ಹಳ್ಳಿಯನ್ನೊಳಗೊಂಡ ಪ್ರದೇಶವಾಗಿರಬೇಕು.

ಆ) ಕೊಳ್ಳಿಗ ೭೦ : ಹೊನ್ನಾಳಿ ತಾಲೂಕಿನ ತುಂಗಭ್ರಾ ನದಿಯ ಬಲದಂಡೆಯಲ್ಲಿನ ಕುಳಗಟ್ಟೆಯನ್ನು ರಾಜಧಾನಿಯನ್ನಾಗಿ ೭೦ ಗ್ರಾಮಗಳನ್ನೊಳಗೊಂಡ ಇದು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಕೊಳ್ಳಿಗನಫಟ್ಟ ಎಂದು ಕರೆಯಲಾಗಿರುವ ಈ ಊರು ನಾಲ್ಕೂ ದಿಕ್ಕುಗಳಿಂದ ಬರುವ ನಾನಾ ದೇಶಿಗಳಿಗೆ ಆಶ್ರಯ ತಾಣವಾಗಿತ್ತು. ಕ್ರಿ.ಶ. ೧೧೭೩ರ ಗೋಳಿಹಳ್ಳಿ ಖಾನಾಪುರ ಶಾಸನ ಐಹೊಳೆ ೫೦೦ ಸ್ವಾಮಿಗಳನ್ನು ಹೆಸರಿಸುವಾಗ ಕುಳಿಗಲು ಗೆರೆಯವರನ್ನು (ಕುಳಗಟ್ಟೆಯವರನ್ನು) ಹೆಸರಿಸುತ್ತದೆ. ಹೊಯ್ಸಳ ಬಾಲ್ಲಾಳನ ಪತ್ನಿಯಾದ ಚೋಳ ಮಹಾದೇವಯ ಹೆಸರನ್ನು ಕ್ರಿ.ಶ. ೧೨೯೧ ರಲ್ಲಿ ಗಂಗ ಪೆರುಮಾಳೆ ದೇವರಸ ಕೊಳ್ಳಿಗನ ಫಟ್ಟಕ್ಕೆ ಇಟ್ಟು ಇದನ್ನು ಚೋಳಮಹಾದೇವಿಪುರ ಎಂದು ಕರೆದಿದ್ದಾನೆ. ಇದೇ ಪರೆಮಾಳೇದೇವರಸನು ಹರಿಹರದ ದೇವಾಲಯದ ಕ್ರಿ.ಶ. ೧೨೫೪, ೧೨೫೮, ೧೨೬೬, ೧೨೭೨ ಮತ್ತು ೧೨೯೦ ರ ದಾನಶಾಸನಗಳಲ್ಲಿ ಹೆಸರಲ್ಪಟ್ಟಿದ್ದಾನೆ. ಬೆಳಗುತ್ತಿ ಸಿಂಧರ ಪತನಾನಂತರ ಈ ವಿಭಾಗದಲ್ಲಿ ಈ ಅಧಿಕರಿ ೩೭ ವರ್ಷ ಇರುವುದನ್ನು ಕಾಣುತ್ತೇವೆ.

ಇ) ಕುಂದೂರು ೭೦ : ಹೊನ್ನಾಳಿ ತಾಲೂಕಿನ ಕುಂದೂರನ್ನು ಮುಖ್ಯ ಕೇಂದ್ರವಾಗಿ ಹೊಂದಿದ ಈ ವಿಭಾಗದಲ್ಲಿ ಬನ್ನಿಕೊಡು, ಹಪ್ಪರ ವನಹಾಳು ಮತ್ತು ನಿಟ್ಟೂರು ಗ್ರಾಮಗಳಿದ್ದವು.

ಈ) ಬಾಡ ೫೬: ಮೂರು ಉಪ ವಿಭಾಗಗಳಾದ ಭ್ರಾನ್ತಿ ೩೦, ಭಿನ್ನವೂರು ೧೨ ಮತ್ತು ಮುರ್ಚನೂರು ೧೨ ಸೇರಿ ೫೪ ಬಾಡ ಆಗಿದ್ದು, ಪ್ರಾಯಶಃ ಅನಂತರದ ಶಾಸನಗಳಲ್ಲಿ ಇನ್ನೂ ಎರಡು ಬಾಡ ಸೇರಿ ೫೬ ಬಾಡ ಎಂದು ಆಗಿದೆ.

ಬ್ರಾನ್ತಿ ೩೦ ದಾವಣಗೆರೆ ತಾಲೂಕಿನ ಬಾತಿಯನ್ನು ಮುಖ್ಯ ಪಟ್ಟಣವಾಗಿ ಹರಿಹರ ತಾಲೂಕಿನ ಗುತ್ತೂರನ್ನು ಒಳಗೊಂಡಿತ್ತು. ಸಿಂಧ ಮಾಚರಸನ ಮಾವ ಚಾಲುಕಿ ಅಹಿಯರಸ ಇಲ್ಲಿನ ನಾಳ್ಗಾ ಮುಂಡನಾಗಿದ್ದನು. ಮುರ್ಚನೂರು ವಿಭಾಗವನ್ನು ದಾವಣಗೆರೆ ತಾಲೂಕಿನ ತುರವನೂರು ಅಥವಾ ತುರ್ಚಘಟ್ಟ ಗ್ರಾಮದೊಂದಿಗೆ ಗುರ್ತಿಸುವ ಸಾಧ್ಯತೆ ಇದೆ. ಬಿನ್ನವೂರಿನಲ್ಲಿ ಕುಳವನೂರು ಇತ್ತು.

ಉ) ಪಡುಗಲು ೧೨ : ದಾವಣಗೆರೆ ತಾಲೂಕಿನ ಹದಡಿ ಇದರ ಮುಖ್ಯ ಕೇಂದ್ರವಾಗಿತ್ತು. ಕ್ರಿ.ಶ. ೧೦೩೭ ರಲ್ಲಿ ನೊಳಂಬ ಪಲ್ಲವ ಪರ್ಮಾಡಿ ಕಾಲದಲ್ಲಿ ಬ್ರಹ್ಮಧಿರಾಜ ಪದಡಿ ೧೨ ಆಳುತ್ತಿದ್ದ. ಕ್ರಿ.ಶ. ೧೧೬೫ರ ಹಳೆ ನಿಡನೇಗಿಲ ಶಾಸನದಲ್ಲಿ ಪಡುಗಲು ೧೨ ಎಂದು ಕರೆಯಲಾಗಿದೆ.

ಊ) ಅತ್ತಿಗೇರಿ ೧೨ : ದಾವಣಗೆರೆ ತಾಲೂಕಿನ ಅತ್ತಿಗೇರೆ ಮುಖ್ಯ ಪಟ್ಟಣವಾಗಿ, ತೊಗಲೇರಿ ಗ್ರಾಮವೂ ಈ ವಿಭಾಗದಲ್ಲಿ ಸೇರಿತ್ತು.

ಋ) ಮಲೆ ೭೦ : ಹರಿಹರ ತಾಲೂಕಿನ ಮಲೆಬೆನ್ನೂರನ್ನು ಕೇಂದ್ರವಾಗಿ ಹೊಂದಿದ ಪ್ರದೇಶ

ಋ) ಅರಕೆರೆ ೧೨ : ಹೊನ್ನಾಳಿ ತಾಲೂಕಿನ ತುಂಗಭದ್ರಾನದಿಯ ಬಲದಂಡೆಯಲ್ಲಿನ ಅರಕೆರೆ ಗ್ರಾಮವನ್ನು ಕೇಂದ್ರವನ್ನಾಗಿ ಹೊಂದಿದ್ದ ಪ್ರದೇಶವಾಗಿತ್ತು.

೫. ಅಸನ್ದಿ ನಾಡು

ಅ) ಅರಬಲ ೭೦ : ಹೊಸದುರ್ಗ ಮತ್ತು ತರೀಕೆರೆ ತಾಲೂಕುಗಳಲ್ಲಿ ಈ ಪ್ರದೇಶ ಇದ್ದಿರಬೇಕು.

ಆ) ಕಳಿಕಟ್ಟೆ ೧೨ : ಅರಸೀಕೆರೆ ತಾಲೂಕಿನ ಇದೇ ಹೆಸರಿನ ಗ್ರಾಮವನ್ನು ಕೇಂದ್ರವಾಗಿ ಹೊಂದಿದ್ದ ಪ್ರದೇಶವಾಗಿದೆ.

 

[1]ಬಿ.ಆರ್. ಗೋಪಾಲ್‌ಮೈನರ್ ಡೈನಾಸ್ಟಿನ್‌ಆಫ್ ಕರ್ನಾಟಕ, ನ್ಯೂ ಎರಾ ಪಬ್ಲಿಕೇಷನ್ಸ್‌ಮದ್ರಾಸ್ ೧೯೮೨ ಪುಟ ೮೭.

[2]ಇಸಿ (ಎಫಿಗ್ರಾಫಿಯಾ ಕರ್ನಾಟಿಕ, ರೈಸ್ ಸಂಪಾದಿತ) ೯ ದಾವಣಗೆರೆ ೪೩, ಇಸಿ ೭ ಹೊನ್ನಾಳಿ ೫೦, ಕೆ.ಐ. (ಕರ್ನಾಟಕ ಇನ್ಸ್‌ಕ್ರಿಪ್‌ಷನ್ಸ್‌) ೬ ನಂ ೧೧

[3]ಡಾ. ಶ್ರೀನಿವಾಸ್ ರಿತ್ತಿ, ದಿ ಸೇವುಣಾಸ್ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ೧೯೭೩ ಪು ೩೩೩

[4]ಡಾ. ಬಿ.ಆರ್.ಗೋಪಾಲ್ ಹಿಂದೆ ಉಲ್ಲೇಖಿಸಿದ್ದು ಪುಟ ೯-೯೬

[5]ಇಸಿ ೯ ದಾವಣಗೆರೆ ನಂ.?

[6]ಜಗದೀಶ್, “ಹುಲ್ಲುಣಿಯ ತೀರ್ಥ: ಗಳಗನಾಥ’, ಕರ್ನಾಟಕ ಇತಿಹಾಸ ದರ್ಶನ ಸಂಪುಟ ಪು

[7]ಡಾ.ಬಿ.ಆರ್. ಗೋಪಾಲ್‌ಹಿಂದೆ ಉಲ್ಲೇಖಿಸಿದ್ದು ಪು ೯-೯೬ ಕರ್ನಾಟಕ ಇನ್‌ಸ್ಕ್ರಿಪ್ಶನ್ಸ್‌,

[8]ಡಾ. ಬಿ.ಆರ್.ಗೋಪಾಲ್ ಹಿಂದೆ ಉಲ್ಲೇಖಿಸಿದ್ದು ಪುಟ ೯೮

[9]ಇಸಿ ೮ ಶಿಕಾರಿಪುರ ನಂ. ೩೧೬

[10]ಕೆ.ಐ. (ಕರ್ನಾಟಕ ಇನ್ಸ್‌ಕ್ರಿಪ್‌ಷನ್ಸ್‌), ಸಂ. ಅಣ್ಣೀಗೇರಿ ಕನ್ನಡ ಸಂ. ಸಂಸ್ಥೆ ಧಾರವಾಡ ಸಂಪುಟ ೪ ನಂ. ೩೯

[11]ಅದೇ ೬ ನಂ. ೩೮

[12]ಎ.ಆರ್.ಐ.ಇ. (ಎನ್ಯುಯಲ್ ರಿಪೋರ್ಟ್‌ಆಫ್ ಇಂಡಿಯನ್‌ಎಫಿಗ್ರಾಫಿ) ೧೯೫-೫೯ ನಂ. ೫೭೧

[13]ಇಸಿ ೯ ದಾವಣಗೆರೆ ನಂ ೬ (ಕ್ರಿ.ಶ.೧೧೭೧ ಪರೋಕ್ಷವಾಗಿ ಕ್ರಿ.ಶ. ೧೧೪೩ ಸೂಚಿಸುತ್ತದೆ.)

[14]ಎ.ಆರ್.ಐ.ಇ. ೧೯೫೮-೫೯ ನಂ. ೫೭೧

[15]ಕೆ.ಐ. ಸಂಪುಟ ೪ ನಂ ೧೩

[16]ಇಸಿ ೭ ಹೊನ್ನಾಳಿ ನಂ ೪೩

[17]ಅದೇ ನಂ ೪೩

[18]ಬಿ.ಆರ್.ಗೋಪಾಲ್‌ಹಿಂದೆ ಉಲ್ಲೇಖಿಸಿದ್ದು ಪುಟ ೧೦೬

[19]ಕೆ.ಐ. ಸಂಪುಟ ೪ ನಂ. ೪೩

[20]ಅದೇ ನಂ. ೪೩

[21]ಇಸಿ ೯ ದಾವಣಗೆರೆ ನಂ. ೬೧

[22]ಎಸ್‌ಐಐ ೧೮ ಇಂಟ್ರಡಕ್ಷನ್‌

[23]ಎಸ್‌ಐಐ ಸೌತ್ ಇಂಡಿಯನ್ ಇನ್ಸ್‌ಕ್ರಿಪ್‌ಷನ್ಸ್‌, ೧೮ ಇಟ್ಟಿಗೆ ಶಾಸನ ನಂ. ೩೩೫

[24]ಇಸಿ ೭ ಶಿವಮೊಗ್ಗ ನಂ. ೨೩

[25]ಎಂಎಆರ್‌೧೯೪೨ ನಂ. ೬೨

[26]ಇಸಿ ೭ ಹೊನ್ನಾಳಿ ನಂ. ೪೭

[27]ಡಾ. ಶ್ರೀನಿವಾಸ ರಿತ್ತಿ ಹಿಂದೆ ಉಲ್ಲೇಖಿಸಿದ್ದು ಪುಟ ೩೧೮

[28]ಕೆ ಐ ಸಂಪುಟ ೫ ಗದಗ, ಹಂಚಿನಾಳ ನಂ. ೭೨

[29]ಎಂಎಆರ್‌೧೯೪೨ ನಂ. ೬೬

[30]ಕೆ ಐ ಸಂಪುಟ ೪ ಹಳೆ ನಿಡನೇಗಿಲ ನಂ. ೧೩

[31]ಇಸಿ ೭ ಹೊನ್ನಾಳಿ ನಂ. ೩೫ ಮತ್ತು ೫೧

[32]ಇಸಿ ೯ ದಾವಣಗೆರೆ ನಂ. ೧೦೫

[33]ಇಸಿ ೭ ಹೊನ್ನಾಳಿ ನಂ. ೨೮; ೩೭;೩೮;೪೦

[34]ಇಸಿ ೮ ಶಿಕಾರಿಪುರ ನಂ. ೩೫

[35]ಇಸಿ ೭ ಹೊನ್ನಾಳಿ ನಂ. ೧೭

[36]ಇಸಿ ೭ ಚನ್ನಗಿರಿ ನಂ. ೭೭; ಇಸಿ ೫ ಅರಸೀಕೆರೆ ತವರೆಕೆರೆ ನಂ. ೪೬

[37]ಇಸಿ ೯ ದಾವಣಗೆರೆ, ಹಳೆಹಾಳುಪಾಳು ಗ್ರಾಮ (ದೇವರಬೆಳೆಕೆರೆ) ನಂ. ೭೪

[38]ಇಸಿ ೭ ಹೊನ್ನಾಳಿ ನಂ. ೨೫

[39]ಇಸಿ ೫ ಅರಸೀಕೆರೆ, ಹಿರಿಯೂರು ನಂ. ೧೦೮

[40]ಡಾ. ಬೋಜರಾಜ ಪಾಟೀಲ, ನಾಗರಖಂಡ ೭೦, ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆ ಶಿವಮೊಗ್ಗ ಪುಟ ೧೯೯

[41]ಇಸಿ ೭ ಹೊನ್ನಾಳಿ ನಂ. ೨೦

[42]ಅದೇ ನಂ. ೪೮

[43]ಎಆರ್‌ಎಸ್‌ಐಇ (ಎನ್ಯುಯಲ್ ರಿಪೋರ್ಟ್‌ಆಫ್‌ಸೌಥ್ ಇಂಡಿಯನ್ ಎಫಿಗ್ರಾಫಿ) ೧೯೫-೫೮ ನಂ. ೨೮೪

[44]ಎಪಿಗ್ರಾಫಿಯಾ ಇಂಡಿಕಾ ಸಂಪುಟ ೫ ಪುಟ ೨೬೩

[45]ಡಾ. ಶ್ರೀನಿವಾಸ ರಿತ್ತಿ ಹಿಂದೆ ಉಲ್ಲೇಖಿಸಿದ್ದು ಪುಟ ೧೨೩

[46]ಎಆರ್‌ಎಸ್‌ಐಇ ೧೯೫-೫೮ ನಂ. ೫೭೨

[47]ಇಸಿ ೮ ಸೊರಬ ನಂ. ೨೭೬

[48]ಇಸಿ ೭ ಹೊನ್ನಾಳಿ ನಂ. ೩೦

[49]ಇಸಿ ೭ ಹೊನ್ನಾಳಿ ನಂ. ೫೪

[50]ಇಸಿ ೭ ಹೊನ್ನಾಳಿ ನಂ. ೫೫; ೫೮

[51]ಕೆಐ ಸಂಪುಟ ನಂ. ೪ ನಂ. ೧೩

[52]ಇಸಿ ೯ ದಾವಣಗೆರೆ ನಂ. ೬೨

[53]ಇಸಿ ೯ ದಾವಣಗೆರೆ ನಂ. ೪೩ ಸಾಲು ೧೮೩

[54]ಇಸಿ ೭ ಹೊನ್ನಾಳಿ ನಂ. ೨೫

[55]………ಅದೇ ನಂ. ೫೦, ೧೦೮

[56]ಎಸ್‌ಐಐ ೧೮ ರಾಣೆಬೆನ್ನೂರು, ನದಿಹರಳಹಳ್ಳಿ ನಂ. ೧೮೩

[57]ಇಸಿ ೭ ಹೊನ್ನಾಳಿ ನಂ. ೫,೨೦,೩೨,೫೨,೮೬

[58]…………… ಅದೇ ನಂ. ೧೮

[59]…………… ಅದೇ ನಂ. ೧೮

[60]ಇಸಿ ೯ ದಾವಣಗೆರೆ ನಂ. ೩, ಇಸಿ ೭ ಚನ್ನಗಿರಿ ನಂ. ೫೨, ಇಸಿ ೫ ಅರಸೀಕೆರೆ ಹಿರಿಯೂರು ನಂ. ೧೦೮

[61]ಇಸಿ ದಾವಣಗೆರೆ ನಂ. ೭೭

[62]ಕೆಐ ಸಂಪುಟ ೪ ನಂ. ೪೦

[63]ಇಸಿ ೭ ಹೊನ್ನಾಳಿ ನಂ. ೧೨೫

[64]…………… ಅದೇ ನಂ. ೧೦೭

[65]…………… ಅದೇ ನಂ. ೫