ಹೊಸಗುಂದವು ಇಂದಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಣ್ಯದಲ್ಲಿರುವ ಒಂದು ಹಳ್ಳಿಯಾಗಿದೆ. ಈ ಸ್ಥಳವು ೧೨-೧೩ನೇ ಶತಮಾನದಲ್ಲಿ ಒಂದು ಸ್ಥಾನಿಕ ಅರಸರ ರಾಜಧಾನಿಯಾಗಿತ್ತು ಈ ಅರಸರ ಸಂಬಂಧಿಸಿ ವಿವರವಾದ ಅಧ್ಯಯನ ಇನ್ನೂ ನಡೆಯಬೇಕಿದೆ. ಈ ಅರಸರನ್ನು ಹುಂಚದ ಸಾಂತರರ ವಂಶಜರೆಂದು ಬಿ.ಎಲ್.ರೈಸ್ ಅವರು ಗ್ರಹಿಸಿದ್ದರು.

[1] ನಂತರದ ವಿದ್ವಾಮಸರು ಇವರನ್ನು ಸಾಂತರರ ಅಧಿಕಾರಿಗಳೆಂದು ಗುರುತಿಸುತ್ತಾರೆ. ಆದರೆ ಇವರ ಕುರಿತು ಪ್ರತ್ಯೇಕ ಒಂದು ಅಧ್ಯಯನ ಇನ್ನೂ ಆಗಿಲ್ಲ.

ಈ ಅರಸರ ಕುರಿತು ಪ್ರತ್ಯೇಕ ಅಧ್ಯಯನ ನಡೆಸಲು ನಮಗೆ ಸುಮಾರು ೧೦೦ ರಷ್ಟು ಶಾಶನಗಳು ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ, ಶಿಕಾರಿಪುರ ಹಾಗೂ ಶಿವಮೊಗ್ಗ ತಾಲ್ಲೂಕುಗಳಲ್ಲಿ ಸಿಗುತ್ತವೆ.[2] ಅವುಗಳಲ್ಲಿ ೬೦ ರಷ್ಟು ಕೇವಲ ಸಾಗರ ತಾಲ್ಲೂಕಿನಲ್ಲೇ ಸಿಗುತ್ತವೆ ಎನ್ನುವ ಸಂಗತಿಯನ್ನು ಗಮನಿಸಿದರೆ ಈ ಅರಸರ ಆಳ್ವಿಕೆಯು ಅಲ್ಲೇ ಕೇಂದ್ರಿತವಾಗಿತ್ತೆನ್ನುವುದು ಸ್ಪಷ್ಟವಾಗುತ್ತದೆ. ಈ ಶಾಸನಗಳಲ್ಲಿ ನಾಲ್ಕೈದನ್ನು ಬಿಟ್ಟರೆ ಉಳಿದವೆಲ್ಲ ವೀರಗ್ಲುಗಳೆಂಬುದು ಗಮನಾರ್ಹ. ಹೊಸಗುಂದ, ನಾಡಕಳಸಿ ಮುಂತಾದೆಡೆಗಳಲ್ಲಿ ಆ ಕಾಲದ ಕೋಟೆ ಅಥವಾ ವಸತಿಗಳ ಅವಶೇಷಗಳನ್ನು ಇನ್ನೂ ನೋಡಬಹುದು. ಈ ಕಾಲದವು ಎನ್ನಬಹುದಾದ ದೇವಾಲಯಗಳು ಹೊಸಗುಂದ, ನಾಡಕಳಸಿ, ಕೋಡಕಣಿ, ಪುರ, ಮುಂತಾದೆಡೆಗಳಲ್ಲಿ ಪೂರ್ಣಪ್ರಮಾಣದಲ್ಲಿ ಕಂಡುಬಂದರೆ ಆ ಕಾಲದ ವೀರಗಲ್ಲುಗಳು ಸಿಗುವ ಹಲವೆಡೆ ದೇವಾಲಯಗಳ ಅವಶೇಷಗಳನ್ನೂ ಗುರುತಿಸಬಹುದು.

೧. ಐತಿಹಾಸಿಕ ಹಿನ್ನೆಲೆ

ಮಧ್ಯಕಾಲೀನ ಮಲೆನಾಡಿನಲ್ಲಿ ರಾಜ್ಯನಿರ್ಮಾಣ ಪ್ರಕ್ರಿಯೆಯ ಸ್ವರೂಪ

ಸಾಂತಳಿಗೆ ಅಥವಾ ಸಾಂತಳಿಗೆ ಸಾವಿರ ಎಂಬ ಭೌಗೋಲಿಕ ವಿಭಾಗವು ೯ನೆಯ ಶತಮಾನದಿಂದ ೧೪ನೆಯ ಶತಮಾನದವರೆಗೆ ಅಸ್ತಿತ್ವದಲ್ಲಿದ್ದ ಒಂದು ಆಡಳಿತ ವಿಭಾಗವಾಗಿದ್ದಿತ್ತು. ಈ ಸಾಂತಳಿಗೆ ಈಗಿನ ಶಿವಮೊಗ್ಗ ಜಿಲ್ಲೆಯ ದಟ್ಟ ಹಾಗೂ ಅರೆ-ಮಲೆನಾಡಿನ ಭಾಗಗಳನ್ನು ಒಳಗೊಂಡ ಪ್ರದೇಶವಾಗಿದೆ. ಪಶ್ಚಿಮದಲ್ಲಿ ಸಹ್ಯಾದ್ರಿಯೇ ಗಡಿಯಾಗಿ, ಪೂರ್ವದಲ್ಲಿ ಈಗಿನ ಸೊರಬ ಮತ್ತು ಶಿಕಾರಿಪುರ ತಾಲ್ಲೂಕುಗಳ ಪಶ್ಚಿಮದ ಸ್ವಲ್ಪ ಭಾಗವನ್ನು ಇದು ಒಳಗೊಳ್ಳುತ್ತದೆ. ಈಗಿನ ಸಾಗರ, ಹೊಸನಗರಗಳು ಹಾಗೂ ತೀರ್ಥಹಳ್ಳಿ, ಶಿವಮೊಗ್ಗ ತಾಲೂಕುಗಳ ಕೆಲ ಭಾಗಗಳೂ ಈ ಪ್ರದೇಶದಲ್ಲಿ ಬರುತ್ತವೆ. ಈ ಪ್ರದೇಶಕ್ಕೆ ತೀರ ವಿಶಿಷ್ಟವಾದ ಭೌಗೋಳಿಕ ಆವರಣವಿದೆ. ಇದರ ಬಹುಭಾಗ ದುರ್ಗಮವಾದ ಮಲೆನಾಡಾಗಿದೆ. ಮಲೆನಾಡಿನ ಕಾಡು, ಬೆಟ್ಟಗಳು ಪಶ್ಚಿಮದಲ್ಲಿ ಶರಾವತಿ ಜಲಾನಯನ ಪ್ರದೇಶ ಹಾಗೂ ಹೊಂಬುಚದ ಪ್ರದೇಶದಲ್ಲಿ ದಟ್ಟವಾಗಿದ್ದು, ಪೂರ್ವಕ್ಕೆ ಬಂದಂತೆ ನೆಲ ಸಮತಟ್ಟಾಗುತ್ತ ಹೋಗುತ್ತದೆ. ಅದೇ ರೀತಿ ಈ ಪ್ರದೇಶದ ಪಶ್ಚಿಮ ಭಾಗ ನಿತ್ಯ ಹರಿದ್ವರ್ಣ ಕಾಡುಗಳಿಂದ ಕೂಡಿದ್ದರೆ, ಪೂರ್ವ ಭಾಗದಲ್ಲಿ ಚಳಿಗಾಲದಲ್ಲಿ ಎಲೆ ಉದುರಿಸುವ ಹಸಿ ಕಾಡುಗಳಿವೆ. ಈ ಭಾಗ ಮನ್ಸೂನ ಕಾಲದಲ್ಲಿ ಜೂನ್‌ನಿಂದ ಸೆಪ್ಟೆಂಬರವರೆಗೆ ಮಳೆಯಲ್ಲಿ ತೊಯ್ದುಕೊಂಡಿರುತ್ತದೆ. ಮಧ್ಯಕಾಲದ ಸಂದರ್ಭದಲ್ಲಿ ಈ ನೈಸರ್ಗಿಕ ಅಂಶಗಳು ನಾಗರೀಕತೆಯ ಬೆಳವಣಿಗೆಗೆ ದೊಡ್ಡ ತೊಡಕಾಗಿದ್ದುದರಲ್ಲಿ ಸಂದೇಹವಿಲ್ಲ. ಆಧುನಿಕ ಪೂರ್ಣ ಕಾಲದಲ್ಲಿ ಮುಖ್ಯವಾಗಿ ಹೇರೆತ್ತಿನ ಮೇಲೇ ವ್ಯಾಪಾರ ನಡೆಯುತ್ತಿದ್ದ ಈ ಭಾಗದಲ್ಲಿ ಸಂಪರ್ಕ ವ್ಯವಸ್ಥೆ ಮಿತವಾಗಿ ಇತ್ತು. ಬಹುಶಃ ಈ ಕಾರಣಗಳಿಂದಾಗಿ ಎಂಟು-ಒಂಭತ್ತನೆಯ ಶತಮಾನದವರೆಗೂ ಈ ಪ್ರದೇಶ, ಉಳಿದ ಇಂಥ ಮಲೆನಾಡಿನ ಪ್ರದೇಶಗಳಂತೇ ಬಯಲು ನಾಡಿನ ರಾಜ್ಯಗಳಿಗೆ ಅಜ್ಞಾತ ಪ್ರದೇಶವಾಗಿ ಉಳಿದುಕೊಂಡು ಬಂದಿತು.

ಹನ್ನೊಂದನೆಯ ಶತಮಾನದಲ್ಲಿ ಕಲ್ಯಾಣದ ಚಾಲುಕ್ಯರು ಈ ಪ್ರದೇಶವನ್ನು ಸಾಂತಳಿಗೆ ಸಾವಿರ ಎಂದು ಒಳಗೊಳ್ಳುವ ಪೂರ್ವದಲ್ಲಿ ನೂರಾರು ವರ್ಷಗಳ ಮನುಷ್ಯ ವಸತಿಗಳ ಇತಿಹಾಸ ಇದಕ್ಕೆ ಇತ್ತು. ಒಂಭತ್ತನೆಯ ಶತಮಾನದ ಸುಮಾರಿಗೇ ಇಂದಿನ ಹುಂಚವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ‘ಶಾಂತರ’ ರಾಜವಂಶ ಈ ಪ್ರದೇಶದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ. ಈ ಪ್ರದೇಶದ ಮನುಷ್ಯ ವಸತಿ, ಆರ್ಥಿಕಾಭಿವೃದ್ಧಿ, ಸಾಂಸ್ಕೃತಿಕ ಬೆಳವಣಿಗೆ ಶಾಂತರರ ಆಳ್ವಿಕೆಯ ಕಾಲದಲ್ಲಿ ರಾಜ್ಯ ಸಂಸ್ಕೃತಿಗೆ ನೆಲವನ್ನು ಹದಗೊಳಿಸಿದ್ದವು. ಶಾಂತರರು ಆಳಿದ ಈ ಒಟ್ಟೂ ಪ್ರದೇಶ ಸಾಂತಳಿಗೆ ಎಂದೇ ಗುರುತಿಸಲ್ಪಟ್ಟು ಹೀಗೆ ಚಾಲುಕ್ಯ ಸಾಮ್ರಾಜ್ಯದಲ್ಲಿ ಸಾಂತಳಿಗೆ ಸಾವಿರವಾಗಿ ರಾಜ್ಯಾಧಿಕಾರದ ಮತ್ತೊಂದು ಆಯಾಮ ಮಲೆನಾಡಿಗೆ ಸಂದಿತು. ಸಾಂತಳಿಗೆಯ ಅಧಿಪತಿಗಳು ಸಮಧಿಗತ ಪಂಚಮಹಾಶಬ್ದ ಮಹಾ ಮಂಡಲೇಶ್ವರರು, ಆಗಿ ಪರಿವರ್ತಿತರಾದರು. ತದನಂತರ ಕರ್ನಾಟಕದ ಈ ಪ್ರದೇಶದ ತೀರ ಪ್ರಬಲ ಅರಸರು, ಅಥವಾ ಚಕ್ರವರ್ತಿಯ ಆಪ್ತರು ಬನವಾಸಿ ೧೨೦೦೦ ಹಾಗೂ ಸಾಂತಳಿಗೆ ಸಾವಿರಗಳನ್ನು ಪಾಲಿಸುವ ಪರಿಕ್ರಮವನ್ನು ಹೊಯ್ಸಳ ಸಾಮ್ರಾಜ್ಯದ ಪತನದವರೆಗೂ ನೋಡುತ್ತೇವೆ.

ಆಡಳಿತಾತ್ಮಕವಾಗಿ ಸಾಂತಳಿಗೆಯ ಪ್ರದೇಶ ವಿಜಯನಗರ ಕಾಲದವರೆಗೂ ಸಾಮ್ರಾಜ್ಯದ ಅಂಚಿನಲ್ಲೇ ಇತ್ತು. ಈ ಪ್ರದೇಶದ ಪಶ್ಚಿಮ ಘಟ್ಟದ ಕೆಳಗಿನ ತುಳುವ ನಾಡಿನ ರಾಜಕೀಯ ಸಂಬಂಧ ಇಲ್ಲಿಯ ರಾಜರಿಗೆ ಸಾಕಷ್ಟಿದ್ದರೂ ಪಶ್ಚಿಮಘಟ್ಟವೊಂದು ಅಡ್ಡಿಯಾಗಿದ್ದಿತ್ತು. ಪೂರ್ವದ ಗಡಿಯಲ್ಲಿ ಬರುವ ಬನವಾಸಿ ೧೨೦೦೦ ಬಯಲುನಾಡಿನ ಸಾಮ್ರಾಜ್ಯಗಳ ವಿಶೇಷ ಆಕರ್ಷಣೆಯಾಗಿತ್ತು. ಅಲ್ಲಿಯ ಶಾಸನಗಳಲ್ಲಿ ನಾವು ಚಕ್ರವರ್ತಿಯ ಅಸ್ತಿತ್ವವನ್ನು ಗಾಢವಾಗಿ ಕಾಣಬಹುದಾಗಿದೆ. ಚಕ್ರವರ್ತಿಗಳು ಆ ಪ್ರದೇಶದಲ್ಲಿ ಕೆಲವೊಮ್ಮೆ ಖುದ್ದಾಗಿ ಸಂಚರಿಸಿ, ಠಿಕಾಣಿ ಹಾಕಿ, ಮಹತ್ತರ ದೇವಾಲಯಗಳನ್ನು ಸಂದರ್ಶಿಸಿ, ದಾನ ನೀಡಿ ಹೋಗುತ್ತಿದ್ದುದಲ್ಲದೇ ಅವರ ಮಹಾ ದಂಡನಾಯಕರು, ಪ್ರಧಾನರು ಮುಂತಾದವರೆಲ್ಲ ಉಸ್ತುವಾರಿ ನಡೆಸುತ್ತಿದ್ದರು. ಆದರೆ ಸಾಂತಳಿಗೆಯ ಶಾಸನಗಳು ಪ್ರತಿಬಿಂಬಿಸುವ ಚಿತ್ರವೇ ಬೇರೆ. ಇಲ್ಲಿನ ರಾಜರೂ ಮಹಾಮಂಡಲೇಶ್ವರ ಎಂದು ಬಿರುದು ಧರಿಸುವುದು ಒಂದು ಸ್ಥಾನಮಾನ ಎಂದು ಗ್ರಹಿಸುತ್ತಾರೆಯಾದರೂ ಅವರು ಯಾರ ಮಂಡಲೇಶ್ವರರು ಎಂಬುದು ಬಹಳ ಬಾರಿ ಅಪ್ರಸ್ತುತವಾಗುತ್ತದೆ. ಚಕ್ರವರ್ತಿ ಇಲ್ಲಿ ಒಬ್ಬ ವ್ಯಾವಾಹಾರಿಕನಲ್ಲದ ತತ್‌ಕ್ಷಣದ ಶಕ್ತಿಯಾಗದ ರೀತಿಯಲ್ಲಿ ಅಲ್ಲಲ್ಲಿ ಉಲ್ಲೇಖಿತನಾಗುತ್ತಾನೆ. ಎಲ್ಲೋ ಯಾದವ ಕನ್ನರದೇವನ ಬಂಟರ ಜೊತೆ ಯುದ್ಧ ಮಾಡಲಿಕ್ಕೆ ಇಲ್ಲ ಬಿಜ್ಜಳ ಅಥವಾ ಬಲ್ಲಾಳನಿಂದ ಕಳಿಸಲ್ಪಟ್ಟ ಅವರ ಬಂಟರ ಜೊತೆ ಯುದ್ಧ ಮಾಡಲಿಕ್ಕೆ ಅವರು ಪ್ರಸ್ತುತರಾಗುತ್ತಾರೆ. ಅಂದರೆ ಈ ಚಕ್ರವರ್ತಿಗಳಿಗೆ ಮಲೆನಾಡಿನ ಅರಸರನ್ನು ಬಗ್ಗುಬಡಿಯುವ ಸಾಮರ್ಥ್ಯ ಇರಲಿಲ್ಲ ಎಂತಲ್ಲ, ಸಾಂತಳಿಗೆಯ ಭೌಗೋಳಿಕ ಸ್ವರೂಪವೇ ಅದನ್ನು ಸಾಮ್ರಾಜ್ಯಗಳಿಗೆ ದುಃಸಾಧ್ಯವನ್ನಾಗಿ ಮಾಡಿತ್ತು. ಭೌಗೋಳಿಕ ಪರಿಸರ ಸಾಂತಳಿಗೆಯ ರಾಜಕೀಯವನ್ನು ನಿರ್ಧರಿಸುವ ಒಂದು ಮುಖ್ಯ ಸಂಗತಿಯಾಗಿದ್ದಿತ್ತು. ಹಾಗಾಗಿ ಸಾಮ್ರಾಟರ ಆಟಾಟೋಪಗಳು ಏನೇ ಇರಲಿ ಸಾಂತಳಿಗೆಯನ್ನು ಅವರು ಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳುವದು ವಿಜಯನಗರ ಕಾಲದವರೆಗೂ ಸಾಧ್ಯವಾಗಲಿಲ್ಲ. ಈ ರೀತಿ ಸಾಂತಳಿಗೆ ಸಾವಿರ ಸಾಮ್ರಾಜ್ಯದ ಒಂದು ಆಡಳಿತ ವಿಭಾಗವಾಗಿ ಸೇರ್ಪಡೆಯಾದ ಮೇಲೂ ಅದರ ಅಂಚಿನ ಭಾಗವಾಗೇ ಉಳಿಯಿತು.

ಸಾಂತಳಿಗೆಯ ರಾಜಕೀಯ

ಸಾಂತಳಿಗೆ ಸಾವಿರ ಪ್ರದೇಶದಲ್ಲಿನ ೧೦ ರಿಂದ ೧೪ನೇ ಶತಮಾನದವರೆಗಿನ ಐತಿಹಾಸಿಕ ಪ್ರಕ್ರಿಯೆ ಮಲೆನಾಡಿನ ಇತಿಹಾಸದ ನಿರ್ಮಾಣ ಘಟ್ಟ ಎನ್ನಬಹುದು. ಒಂದು ಪ್ರದೇಶ ತನ್ನ ಸೀಮಿತತೆಯನ್ನು ಒಡೆದುಕೊಂಡು ವಿಶಾಲ ಸಾಮ್ರಾಜ್ಯದ ಭಾಗವಾದ ಈ ಪ್ರಾರಂಭಿಕ ಅವಸ್ಥೆಯಲ್ಲಿ ಈ ಸಣ್ಣ ಪ್ರದೇಶದಲ್ಲಿ ಕೂಡ ರಾಜ್ಯ ಸಂಸ್ಕೃತಿ ಬೆಳೆಯತೊಡಗಿತು. ಅರಣ್ಯವನ್ನು ವ್ಯವಸಾಯ ಭೂಮಿಯನ್ನಾಗಿ ಪರಿವರ್ತಿಸುವುದು, ಕೆರೆ ನೀರಾವರಿಯಿಂದ ಒಣ ಭೂಮಿಯನ್ನು ಬೇಸಾಯಕ್ಕೆ ಒಳಪಡಿಸುವುದು, ಗ್ರಾಮಗಳ ಹಾಗೂ ಜನಸಂಖ್ಯೆಯ ವೃದ್ಧಿಯ ಜೊತೆಗೇ ಹಳ್ಳಿಯ ಮಟ್ಟದಿಂದ ಹಿಡಿದು ಆಳ್ವಿಕೆಯ ಹಾಗೂ ಶಿಷ್ಟ ಸಂಸ್ಕೃತಿಯ ಬೆಳವಣಿಗೆ, ಸಾಂಸ್ಕೃತಿಕ ಪ್ರಭಾವಗಳು ಇದು ಈ ಪ್ರದೇಶದ ಶಾಸನಗಳಲ್ಲೂ ಬಿಂಬಿತವಾದ ಒಂದು ಪ್ರಕ್ರಿಯೆ. ಈ ಪ್ರದೇಶವನ್ನು ತಮ್ಮ ಆಳ್ವಿಕೆಗೊಳಪಡಿಸುವ ಪ್ರಯತ್ನವನ್ನು ಪ್ರಾದೇಶಿಕ ಮನೆತನಗಳೂ ಹೆಚ್ಚು ಮಾಡಿದಂತೆಲ್ಲ, ಸಾಮ್ರಾಜ್ಯಗಳು ಹೆಚ್ಚು ಗಂಭೀರವಾಗಿ ಈ ಪ್ರದೇಶವನ್ನು ಪರಿಗಣಿಸಿ ವಿಜಯನಗರದ ಕಾಲದಲ್ಲಿ ಇದೇ ಪ್ರದೆಶದ ಅರಗ ಹಾಗೂ ಚಂದ್ರಗುತ್ತಿಯಲ್ಲಿ ಪಾಳಯ ಪಟ್ಟನ್ನು ಸ್ಥಾಪಿಸಿದರು.

ಈ ಪ್ರದೇಶದಲ್ಲಿ ೧೨-೧೩ನೇ ಶತಮಾನದಲ್ಲಿ ನಡೆದ ಪೈಪೋಟಿಯನ್ನು ಎರಡು ಮಟ್ಟಗಳಲ್ಲಿ ಗುರುತಿಸುವುದು ಅಗತ್ಯವಿದೆ. ೧) ಈ ಪ್ರದೇಶದ ಹೊರಗಿನ ರಾಜಕೀಯ ೨) ಆಂತರಿಕ ರಾಜಕೀಯ. ಹೊರಗಿನ ರಾಜಕೀಯದಲ್ಲಿ ಮುಖ್ಯ ಭಾಗಿಗಳೆಂದರೆ ಕರ್ನಾಟಕ ಒಳನಾಡಿನ ಮಹಾರಾಜಾಧಿರಾಜರು ಹಾಗೂ ಅವರ ಮಧ್ಯವರ್ತಿಗಳು. ನಾವು ಪರಿಗಣಿಸುತ್ತಿರುವ ಕಾಲದಲ್ಲಿ ಈ ಪ್ರದೇಶದೊಳಗೆ ಉಲ್ಲೇಖಿತರಾಗುವವರೆಂದರೆ, ಕಳಚೂರ್ಯ ಎರಡನೆಯ ಬಿಜ್ಜಳ (೧೧೩೦-೧೧೬೭), ಸೇವುಣ ಕನ್ನರ (ಕ್ರಿ.ಶ. ೧೨೪೭-೧೨೬೧), ಸೇವುಣ ರಾಮಚಂದ್ರ (ಕ್ರಿ.ಶ. ೧೨೭೧-೧೩೧೨), ಹೊಯ್ಸಳ ನರಸಿಂಹ, ಸೋಮೇಶ್ವರ, ಎರಡನೆಯ ವೀರಬಲ್ಲಾಳ (ಕ್ರಿ.ಶ. ೧೧೭೩-೧೨೨೦) ಹಾಗೂ ಮೂರನೆಯ ವೀರಬಲ್ಲಾಳ (ಕ್ರಿ.ಶ. ೧೨೯೨-೧೩೪೨). ಈ ಚಕ್ರವರ್ತಿಗಳು ನೇರವಾಗಿ ಈ ಪ್ರದೇಶದಲ್ಲಿ ಬರದೇ ತಮ್ಮ ಪರವಾಗಿ ತಮ್ಮ ಅಧೀನ ಅರಸರ ಮೂಲಕ ವ್ಯವಹರಿಸಿದ್ದು ಕಂಡು ಬರುತ್ತದೆ. ಸಾಂತಳಿಗೆಯ ಅರಸರು ಕೂಡ ಕೆಲವೊಮ್ಮೆ ಈ ಚಕ್ರವರ್ತಿಗಳ ಬೆಸದಿಂದ ತಮ್ಮ ಪ್ರದೇಶದವರೇ ಆದ ಅರಸರ ಮೇಲೆ ಉಳಿದ ಮಾಂಡಲಿಕರನ್ನು ಕೂಡಿಕೊಂಡು ಯುದ್ಧಕ್ಕೆ ಹೋಗಿದ್ದರು. ಅಥವಾ ಚಕ್ರವರ್ತಿಗೆ ಅವಿಧೇಯರಾಗಿ ವರ್ತಿಸಿ ಅವರನ್ನು ಬಗ್ಗುಬಡಿಯಲೆಂದು ಚಕ್ರವರ್ತಿಗಳು ಕಳುಹಿಸಿದ ಮಾಂಡಲಿಕರ ಜೊತೆ ಯುದ್ಧ ಮಾಡಿದ್ದರು. ಒಟ್ಟಿನಲ್ಲಿ ಈ ಚಕ್ರವರ್ತಿಗಳು ಪ್ರಾದೇಶಿಕ ಅರಸರ ಮಧ್ಯದ ಪೈಪೋಟಿಯನ್ನು ಉಪಯೋಗಿಸಿ ಕೊಂಡು ತಮ್ಮ ಆಳ್ವಿಕೆಯನ್ನು ಗಟ್ಟಿ ಮಾಡುವ ಪ್ರಯತ್ನ ಎದ್ದು ಕಾಣಿಸುತ್ತದೆ. ಸಾಂತಳಿಗೆಯ ಹೊಸಗುಂದದ ಅರಸರಿಗೆ ಹೊಯ್ಸಳ ಮೂರನೆಯ ವೀರಬಲ್ಲಾಳ ನಿರ್ಣಾಯಕನಾಗಿ ಪರಿಣಮಿಸಿದ. ಹೊಸಗುಂದದ ಆಳ್ವಿಕೆ ನಿಲ್ಲಲು ಬಲ್ಲಾಳ ಕೋಟೆ ನಾಯ್ಕನನ್ನು ಹಿಡಿದುಕೊಂಡು ಹೋದದ್ದೇ ಕಾರಣವಾಯಿತು. ಈ ಪ್ರದೇಶದೊಳಗೆ ಈ ರೀತಿ ಪ್ರವೇಶಿಸಿದ ಒಳನಾಡಿನ ಮಾಂಡಲಿಕರಲ್ಲಿ ಒಂದಣಿಕೆಯ ಸೋಯಿದೇವ, ಉದ್ಧರೆಯ ಎಕ್ಕಲರಸ, ಕಂದಾರದೇವನ ಮಹಾ ಪ್ರಧಾನ ಬೊಮ್ಮಯಸೆಟ್ಟಿ, ಚಂದಾವೂರಿನ ಕದಂಬರು, ಗುತ್ತಿಯ (ಹಾನಗಲ್ಲು ಕದಂಬ ವಂಶದ) ಮಾಂಡಲಿಕ, ಸಾಂತರ ಸಿಂಗಿದೇವ ಮುಂತಾದವರಿದ್ದಾರೆ. ಇವರ ಜೊತೆಗೆ ತುಳುನಾಡಿನ ಅರಸರು ಈ ಪ್ರದೇಶದ ರಾಜಕೀಯದ ಜೊತೆಗೆ ನಿಕಟ ಸಂಬಂಧ ಹೊಂದಿದ್ದರು.

ಆಳುವ ವರ್ಗ ಮತ್ತು ಅಧಿಕಾರಕ್ಕಾಗಿ ಪೈಪೋಟಿ

ಈ ಕಾಲದ ಸಾಂತಳಿಗೆಯ ಆಳ್ವಿಕೆಯ ಶ್ರೇಣೀಯಲ್ಲಿ ಕಳಚೂರ್ಯ, ಹೊಯ್ಸಳ, ಯಾದವರಂಥ ಸಾಮ್ರಾಜ್ಯಗಳು ವಹಿಸಿದ ಪಾತ್ರದ ಯಥಾರ್ಥತೆಯನ್ನು ಅರಿಯುವುದು ಕಷ್ಟ. ಖಂಡಿತವಾಗಿಯೂ ಅವರು ಈ ಪ್ರದೇಶದ ರಾಜಕೀಯವನ್ನು ಪ್ರಭಾವಿಸಿದ್ದಾರೆ. ಈ ಪ್ರದೇಶದ ರಾಜಕೀಯ ಕೆಲವೊಮ್ಮೆ ಈ ಸಾಮ್ರಾಜ್ಯಗಳ ನೆರಳಿನಲ್ಲೇ ತನ್ನ ಗತಿಯನ್ನು ಪಡೆದರೆ ಕೆಲವೊಮ್ಮೆ ಅದನ್ನು ಮೀರುವ ಪ್ರಯತ್ನದಲ್ಲಿ ತೊಡಗಿದ್ದುದೂ ಕಂಡು ಬರುತ್ತದೆ. ಸಾಂತರದ ಆಳ್ವಿಕೆಯ ಕಾಲದಲ್ಲಿ ಸಾಂತರರು ಈ ಪ್ರದೇಶದ ಅರಸರಾಗಿ ಸಾಮ್ರಾಜ್ಯಗಳ ಅಧೀನರಾಗಿ ಆಳಿದ್ದರೆ ಅವರ ಸ್ಥಾನವನ್ನು ಹೊಸಗುಂದದ ಅರಸರು ನಂತರ ತುಂಬಿದ್ದುದು ಕಂಡು ಬರುತ್ತದೆ. ಹೊಸಗುಂದದ ಅರಸರ ಉಚ್ಛ್ರಾಯ ಸ್ಥಿತಿಯ ಹಿಂದೆ ಹೊಯ್ಸಳರ ರಾಜಕೀಯದ ಆಶ್ರಯ ಮೊದಮೊದಲು ಇತ್ತು. ನಂತರ ಹೊಸಗುಂದದ ಅರಸರು ಹೊಯ್ಸಳ ಮೇಲಧಿಕಾರವನ್ನು ಕನಿಷ್ಟ ಸ್ಥಿತಿಗೆ ಒಯ್ದು ತಮ್ಮ ಪ್ರಾಬಲ್ಯ ಸ್ಥಾಪನೆ ಮಾಡಿದರು. ಆದರೆ ಇದಕ್ಕೂ ಆಚೆಗೆ ಹೊಸಗುಂದದ ಅರಸರಿಗೆ ಬೆಳೆಯುವ ಸಾಮರ್ಥ್ಯವಾಗಲೀ, ಸನ್ನಿವೇಶವಾಗಲೀ ನಿರ್ಮಾಣವಾಗಲಿಲ್ಲ. ಹೊಸಗುಂದದ ಅರಸರ ಇತಿಹಾಸ ತೋರಿಸುವಂತೆ ಮಧ್ಯಕಾಲದಲ್ಲಿ ಅರಸೊತ್ತಿಗೆಯ ನಿರ್ಮಾಣದಲ್ಲಿ ಮಹಾರಾಜ ಭಾಗಶಃ ಮಾತ್ರ ಕಾರಣೀಭೂತನಾಗಿದ್ದ. ಪ್ರಾದೇಶಿಕ ಮಟ್ಟದಲ್ಲಿ ಆಳ್ವಿಕೆಗಳಿಸಲು ಒಂದು ಮುಕ್ತ ಪೈಪೋಟಿಯ ವಾತಾವರಣವೂ ಇತ್ತು. ಈ ಪೈಪೋಟಿಗಳು ಪ್ರಾದೇಶಿಕ ಕದನಗಳಾಗಿ ಕೂಡ ಆಗಾಗ ಪರ್ಯಾವ ಸಾನಗೊಳ್ಳುತ್ತಿದ್ದವು. ಇಂಥ ಪೈಪೋಟಿಯಲ್ಲಿ ಗೆದ್ದವರು ನಿಧಾನವಾಗಿ ಪ್ರಾದೇಶಿಕ ಆಳ್ವಿಕೆಯ ಮೆಟ್ಟಲುಗಳನ್ನು ಏರುತ್ತಿದ್ದರು. ಹೊಸಗುಂದದ ಅರಸರ ಕಾಲದಲ್ಲಿ ಇತಿಹಾಸ ಇಂಥ ಯುದ್ಧಗಳಿಂದಲೇ ತುಂಬಿದೆ. ಈ ಯುದ್ಧಗಳಲ್ಲಿ ಕೆಲವನ್ನು ಸ್ಥಾನಿಕ ಆಳರಸರನ್ನು ಬಗ್ಗುಬಡೆಯಲಿಕ್ಕಾಗಿ ಪ್ರಾದೇಶಿಕ ಅರಸರು ನಡೆಸಿದ್ದರೆ, ಇನ್ನೂ ಕೆಲವು ಸಾಮ್ರಾಜ್ಯಗಳ ಪರವಾಗಿ ತನ್ನ ವೈರಿ ಪ್ರಾದೇಶಿಕ ಅರಸರನ್ನು ಬಗ್ಗುಬಡೆಯಲಿಕ್ಕಾಗಿ ನಡೆಸಿದವುಗಳಾಗಿವೆ. ಈ ಮೂಲಕ ವೈರಿ ಹನನ ಹಾಗೂ ಸಾಮ್ರಾಟರ ಆಶ್ರಯ ಎರಡನ್ನೂ ಸಾಧಿಸುವ ರಾಜನೀತಿಯನ್ನು ಈ ಅರಸರು ಅನುಸರಿಸಿದ್ದರು. ಪ್ರಾದೇಶಿಕವಾಗಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸುವ ಸಾಮರ್ಥ್ಯದ ಲಕ್ಷಣವನ್ನು ತೋರಿಸಿದ ಇಂಥ ಅರಸರನ್ನು ಸಾಮ್ರಾಜ್ಯಗಳ ರಾಜಕೀಯದಲ್ಲಿ ಪ್ರಾದೇಶಿಕ ಮಧ್ಯವರ್ತಿಗಳನ್ನಾಗಿ ಒಳಗೊಳ್ಳುವ ನೀತಿಯನ್ನು ತೋರಿಸುತ್ತಿದ್ದರು. ಈ ರೀತಿ ಸಾಂತಳಿಗೆ ಪ್ರದೇಶದ ಮೇಲೆ ತಮ್ಮ ಹತೋಟಿಯನ್ನು ಪಡೆಯುವುದಕ್ಕಾಗಿ ಸಾಮ್ರಾಟರು ಪ್ರಾದೇಶಿಕ ರಾಜಕೀಯದ ಉಪಯೋಗ ಮಾಡಿಕೊಂಡದ್ದು ಕಂಡು ಬರುತ್ತದೆ.

ಪ್ರಾದೇಶಿಕ ರಾಜಕೀಯದ ದೃಷ್ಟಿಯಿಂದ ಸಾಂತಳಿಗೆಯನ್ನು ಪರಶೀಲಿಸಿದರೆ ಅಲ್ಲಿಯ ಆಂತರಿಕ ಪೈಪೋಟಿ ನಮಗೆ ಎದ್ದು ಕಾಣುತ್ತದೆ. ಇಲ್ಲಿರುವ ಹೆಗ್ಗಡೆಗಳು, ಅರಸರು, ಗಾವುಂಡರು, ನಾಯಕರು, ಪ್ರಧಾನಿಗಳು, ದಂಡನಾಯಕರು, ಸಾವಂತರು ಮುಂತಾದ ಆಳುವ ವರ್ಗದವರು ೧೨-೧೩ನೆಯ ಶತಮಾನದಲ್ಲಿ ಸಾಕಷ್ಟು ಕಾದಾಟಗಳಲ್ಲಿ ತೊಡಗಿಕೊಂಡದ್ದು ತಿಳಿದು ಬರುತ್ತದೆ. ವೀರಗಲ್ಲುಗಳಲ್ಲಿ ಮಡಿದ ವೀರರ ಕೌಟುಂಬಿಕ ವಿವರಗಳು ಸೂಚಿಸುವಂತೇ ಈ ವರ್ಗದವರು ಮಲೆನಾಡಿನ ಯೋಧ ಜನಾಂಗದವರಾಗಿದ್ದರು. ಇವರಲ್ಲಿ ಅನೇಕ ವಂಶಗಳು ೧೨-೧೩ನೆಯ ಶತಮಾನದಲ್ಲಿ ಹೆಗ್ಗಡೆ ಹಾಗೂ ಅರಸಪಟ್ಟವನ್ನು ಗಳಿಸಿದ್ದರು. ಪಟುಗುಪ್ಪೆಯಲ್ಲಿ ಅಂಥ ಅರಸು ಕುಲ ಇದ್ದ ಉಲ್ಲೇಖ ಬರುತ್ತದೆ. ಅಲ್ಲಿಯ ಚೋಕರ್ಸನು ತನ್ನನ್ನು ‘ಮಹಾ ಮಂಡಳೇಶ್ವರ’ ಎಂದು ಕರೆದುಕೊಳ್ಳುತ್ತಾನೆ. ಆತನ ಮಗ ಚೆಲ್ಲರ್ಸ ಹಾಗೂ ಮೊಮ್ಮಗ ತೈಲರ್ಸರ ಕಾಲದವರೆಗೂ ಹೊಸಗುಂದದ ಅರಸರಿಗೂ ಅವರಿಗೂ ಕಾದಾಟ ನಡೆದದ್ದು ಕಂಡು ಬರುತ್ತದೆ. ಅದೇ ರೀತಿ ಸೇತುವಿನಿಂದ ಒಬ್ಬ ದೇಕರಸ ಎಂಬವನು ೧೨೯೫ ರಲ್ಲಿ ಆಳುತ್ತಿದ್ದನು. ಇನ್ನೂ ಕೆಲವು ಇಂಥ ಅರಸರು ಶಾಸನಗಳಲ್ಲಿ ಉಲ್ಲೇಖಿತರಾಗಿದ್ದಾರೆ. ಹೆಗ್ಗಡೆಗಳು ಸಾಕಷ್ಟು ಬಾರಿ ಶಾಸನಗಳಲ್ಲಿ ಉಲ್ಲೇಖಿತರಾಗಿದ್ದಾರೆ. ಅದರಲ್ಲಿ ಮೂರನೆಯ ಬೊಂಮರಸನು ಬಿದಿರೂರಿನ ಕಲ್ಲವೆಗ್ಗಡೆ ಎಂಬವನ ಮೇಲೆ ದಂಡೆತ್ತಿ ಹೋಗಿದ್ದನು. ಈ ರೀತಿಯಾಗಿ ಹೊಸಗುಂದದ ಅರಸರು ಸಾಂತಳಿಗೆ ಪ್ರದೇಶದ ಇಂಥ ಸಣ್ಣ ಪುಟ್ಟ ಅರಸರ ಮೇಲೆ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದ್ದು ಕಂಡು ಬರುತ್ತದೆ.

೨. ಸಾಮಾಜಿಕ ಹಿನ್ನೆಲೆ

ಈ ಅರಸರ ಸಂಬಂಧಿಸಿ ವೀರಗಲ್ಲುಗಳು ಮಾತ್ರ ಸಿಗುವುದು ಈ ಅರಸು ಮನೆತನದ ಸಾಮಾಜಿಕ ಹಿನ್ನೆಲೆಯ ಮೇಲೂ ಬೆಳಕು ಚೆಲ್ಲುತ್ತದೆ. ಇವರು ಸ್ಥಾನಿಕ ಆಳರಸರಾಗಿದ್ದರೂ ದೇವಾಲಯ ದಾನಗಳನ್ನು ಅಥವಾ ಅಗ್ರಹಾರ ದಾನಗಳನ್ನು ಮಾಡುವುದರತ್ತ ತಮ್ಮ ಗಮನ ಹರಿಸಿದ್ದು ಕಡಿಮೆ. ಬದಲಾಗಿ ಇವರ ಕಾಲದಲ್ಲಿ ಕಡೆತನಕವೂ ಯುದ್ಧಗಳೇ ಪ್ರಧಾನವಾಗಿದ್ದವು. ಇದು ಒಂದೆಡೆ ಇವರ ರಾಜ್ಯದಲ್ಲಿ ನಿರಂತರ ಅಸ್ಥಿರತೆ ಇದ್ದುದನ್ನು ಸೂಚಿಸಿದರೆ ಮತ್ತೊಂದೆಡೆ ಇವರು ಯುದ್ಧವನ್ನೇ ಆಧರಿಸಿ ಮಹ್ವ ಗಳಿಸಿದ್ದನ್ನೂ ಸೂಚಿಸಬಹುದು. ಇವರು ದುರ್ಗಮವಾದ ಅಡವಿಗಳಲ್ಲಿ ಪಡೆಗಳನ್ನು ಕಟ್ಟಿಕೊಂಡು ಬದುಕುತ್ತಿದ್ದ ಒಂದು ಸಮಾಜವಾಗಿದ್ದರು. ಪಕ್ಕದ ಅರೆಬಯಲುನಾಡಿನ ವ್ಯವಸಾಯ ರಾಜ್ಯಗಳಲ್ಲಿನ ಹಳ್ಳಿಗಳಿಗೆ ನುಗ್ಗಿ ಕಿರುಕುಳ ನೀಡುತ್ತಿದ್ದರು. ಇಂಥವರನ್ನು ಮಲೆಪರು, ಬೇಡರು, ಕಿರಾತಕರು ಎಂದೆಲ್ಲ ಅರೆಬಯಲುನಾಡಿನ ಶಾಸನಗಳಲ್ಲಿ ಕರೆಯಲಾಗಿದೆ. ಅಂಥ ಮಲೆಪರಲ್ಲಿ ಈ ಅರಸರ ಸಮಾಜವೂ ಒಂದಾಗಿತ್ತು. ಇವರು ಶಿವಮೊಗ್ಗಾದ ಮಲೆನಾಡಿನ ಭಾಗದಲ್ಲಿ ಅದರಲ್ಲೂ ಮೇಲು ಸಾಂತಳಿಗೆ ಅಂದರೆ ಈಗಿನ ಸಾಗರದ ಭಾಗದಲ್ಲಿ ಪ್ರಬಲವಾಗಿದ್ದರು. ಬಹುಶಃ ಇವರು ಮೊದಮೊದಲು ತಮ್ಮ ಪಡೆಗಳ ಮೂಲಕ ಸಾಂತರರನ್ನು ಹಾಗೂ ಇತರ ನಾಡರಸರನ್ನು ಸೇವಿಸುತ್ತಿದ್ದವರು ಕ್ರಮೇಣ ಮೇಲು ಸಾಂತಳಿಗೆಯಲ್ಲಿ ರಾಜ್ಯ ಸ್ಥಾಪಿಸಿರಬಹುದು. ಈ ವಿಷಯವು ಕೆಳಗಿನ ವಿವರಗಳ ಮೂಲಕ ಧೃಡಪಡುತ್ತದೆ.

ಈ ಅರಸರು ತಾವು ಬಿಲ್ಲೇಶ್ವರ ದೇವರ ಪಾದ ಪದ್ಮಾರಾಧಕರು ಎಂದುಕೊಳ್ಳುತ್ತಾರೆ. ಈ ಬಿಲ್ಲೇಶ್ವರನು ಹೊಂಬುಚದ ಆದಿ ಬಿಲ್ಲೇಶ್ವರ ಎಂದು ತಿಳಿದುಬರುತ್ತದೆ. ಇವರು ತಾವು ಸಾಂತರರ ವಂಶದವರೆಂದು ತೀರ ಕೊನೆಗಾಲದ ಶಾಸನವೊಂದನ್ನು ಬಿಟ್ಟರೆ ಎಲ್ಲೂ ಹೇಳಿಕೊಳ್ಳುವುದಿಲ್ಲ. ಬಿಲ್ಲೇಶ್ವರ ದೇವರು ಈ ಪ್ರದೇಶದ ಬಿಲ್ಲ ಅಥವಾ ಬಿಲ ಎಂಬ ಜನಾಂಗದ ದೇವತೆಯಾಗಿತ್ತು. ಈ ಸಂಬಂಧಿಸಿ ನಮಗೆ ಕೋಡಕಣಿ ಹಾಗೂ ಕುರುವದ ಎರಡು ಶಾಸನಗಳು ಕೆಲ ಉಪಯುಕ್ತ ಮಾಹಿತಿ ನೀಡುತ್ತವೆ.[3] ಈ ಶಾಸನಗಳಲ್ಲಿ ಬಿಲ ಮುನ್ನುರ್ವರು ಎಂಬ ಯೋಧ ಜನಾಂಗದ ಶ್ರೇಣಿಯ ಉಲ್ಲೇಖವಿದೆ. ಕೋಡಕಣಿಯ ಶಾಸನದಲ್ಲಿ ಈ ಶ್ರೇಣಿಯ ಕುರಿತ ಪ್ರಶಸ್ತಿ ಸರಿಯಾಗಿ ಕಾಣಿಸುವುದಿಲ್ಲ. ಅವರು ಬಿಲ್ಲೇಶ್ವರ ದೇವರಿಗೆ ಒಂದು ದೇವಾಲಯವನ್ನು ಕಟ್ಟಿಸಿ ಹಂಚೆಯ ರಾಮೇಶ್ವರ ದೇವರ ಆಚಾರ್ಯರಿಗೆ ಅದನ್ನು ವಹಿಸಿ ಕೊಟ್ಟರು. ಕುರುವದ ಶಾಸನದಲ್ಲಿ ಅಲ್ಲಿನ ರಾಮೇಶ್ವರ ದೇವರಿಗೆ ದಾನ ಕೊಡುವ ಸಂದರ್ಭದಲ್ಲಿ ಇವರ ಕುರಿತು ದೀರ್ಘ ಪ್ರಶಸ್ತಿ ಬರುತ್ತದೆ. ಅಲ್ಲಿ ಇವರನ್ನು “ಬಿಲು ಪಡ್ಡೆಕಾರರು, ಕಿರಾತಾನ್ವಯರು, ಕಾಡಾನೆ ಮಲ್ಲರು, ಹುಲಿ-ಸಿಂಹಗಳನ್ನು ಬೇಟೆಯಾಡುವವರು, ನೋಡಿ ತಪ್ಪದೆಸೆವ ಕಣ್ಣಂಬಿನವರು, ಅರಣ್ಯ ಭಂಡಾರರು, ಬೈಸಣಿಗೆ, ತೋರಣ, ಪರಕ್ಷಪಾಳಕರು, ಪರಸೈನ್ಯ ಗಜಕೇಸರಿಗಳು, ಹೊಯ್ಸಣ ಬೀಡಿನ ಪರಮ ವಿಶ್ವಾಸಿಗಳು” ಎಂದೆಲ್ಲ ವಿವರಿಸಲಾಗಿದೆ ಈ ವಿವರಗಳು ಭಿಲ್ಲರ ಜನಾಂಗೀಯ ವಿವರಗಳನ್ನು ತುಂಬಾ ಅರ್ಥಪೂರ್ಣವಾಗಿ ಕಟ್ಟಿ ಕೊಡುತ್ತವೆ. ಇವರು ಬಿಲ್ಲಾಳುಗಳಾಗಿದ್ದು ಅಡವಿಯನ್ನೇ ನೆಚ್ಚಿಕೊಂಡ ಬೇಟೆಗಾರ ಬುಡಕಟ್ಟಿನವರಾಗಿದ್ದರು ಹಾಗೂ ಬಹುಶಃ ಹೊಯ್ಸಳ ರಾಜರಿಂದ ಮಾನ್ಯತೆ ಪಡೆದ ಪಡೆವಳರಾಗಿದ್ದರು. ಈ ಬಿಲ್ಲರು ಸಾಂತಳಿಗೆಯ ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಾರೆ. ಬಹುಶಃ ಇವರಲ್ಲಿನ ಒಂದು ಬಳಿ ಅದಿಯರಬಳಿ ಎಂಬ ಹೆಸರನ್ನು ಹೊಂದಿತ್ತು ಹಾಗೂ ಈ ಬಳಿಯವರೇ ೧೩ನೇ ಶತಮಾನದ ಸ್ಥಾನಿಕ ರಾಜಮನೆತನಗಳಾಗಿ ಬೆಳೆದರು. ಅದಿಯರ ಕುಲಕ್ಕೆ ಸೇರಿದ, ಬಿಲ್ಲೇಶ್ವರನು ಕುಲದೇವತೆಯಾದ ಕೆಲ ಅರಸು ಮನೆತನಗಳಲ್ಲಿ ಹೊಸಗುಂದದ ಅರಸರು ಪ್ರಮುಖರು. ಇವರ ಜೊತೆಗೇ ನಾಡಕಳಸಿಯ ಅರಸರು ಹಾಗೂ ಜೋಗದ ಬಳಿಯ ಬಿದಿರೂರಿನವರು ಸಾಕಷ್ಟು ಪೈಪೋಟಿ ನಡೆಸಿದ್ದು ಕಂಡುಬರುತ್ತದೆ. ಇವರಲ್ಲದೇ ಪಟ್ಟುಗುಪ್ಪೆ, ಸೇತು, ಹಾಲುಗುಡ್ಡೆ, ಕೋಡೂರು ಮುಂತಾದೆಡೆಗಳಲ್ಲೂ ಈ ಕುಲದವರು ಪ್ರಭುಗಳಾಗಿದ್ದಂತೆ ತೋರುತ್ತದೆ. ಇವರೆಲ್ಲ ಅರಸ, ಹೆಗ್ಗಡೆ, ಸಾವಂತ ಹಾಗೂ ಪಡೆವಳ ಎಂಬ ಬೇರೆ ಬೇರೆ ಸ್ಥಾನಗಳಿಂದ ಗುರುತಿಸಲ್ಪಟ್ಟಿದ್ದಾರೆ. ಪಡೆವಳರೆಂದರೆ ಯೋಧರ ಪಡೆಯನ್ನು ಕಟ್ಟಿಕೊಂಡ ನಾಯಕರಾಗಿದ್ದರು. ಈ ಅರಸು ವಂಶಗಳಲ್ಲಿ ಬಿಲ್ಲವೆಗ್ಗಡೆ, ಬಾಳೆಯಮ್ಮವೆಗ್ಗಡೆ ಮುಂತಾದ ಹೆಸರುಗಳು ಪ್ರಾರಂದಲ್ಲಿ ಕಾಣಸಿಗುತ್ತವೆ. ಹೆಗ್ಗಡೆಗಳು ಉಳಿದ ಪ್ರದೇಶಗಳಲ್ಲಿ ಮುಖ್ಯವಾಗಿ ರಾಜ್ಯದ ಅಧಿಕಾರಿಗಳಾಗಿದ್ದರೆ ಇಲ್ಲಿ ಅವರು ಮುಖ್ಯವಾಗಿ ಯುದ್ಧ ಹಾಗೂ ರಾಜ್ಯ ನಿರ್ಮಾಣದಲ್ಲಿ ನಿರತರಾಗಿದ್ದರು.

ಈ ಅರಸರ ಹೆಸರುಗಳೂ ಅಚ್ಚ ಪ್ರಾದೇಶಿಕ ಮೂಲದವಾಗಿವೆ. ಬೀರ ಹಾಗೂ ಬೊಮ್ಮ ಎಂಬ ಹೆಸರುಗಳು ಸಾಮಾನ್ಯವಾಗಿವೆ. ಈ ಹೆಸರುಗಳು ಸಾಂತರ ಅರಸರಲ್ಲೂ ಬಳಕೆಯಲ್ಲಿದ್ದವು. ಇವೇ ಸಂಸ್ಕೃತೀಕರಣವಾಗಿ ವೀರ ಹಾಗೂ ಬ್ರಹ್ಮ ಎಂಬ ರೂಪ ತಳೆದದ್ದನ್ನು ನೋಡಬಹುದು. ಬೀರನು ಗುಡ್ಡಗಾಡು ಹಾಗೂ ಪಶುಸಂಗೋಪನಾ ಸಮಾಜಗಳ ಜನಪ್ರಿಯ ದೇವತೆಯಾಗಿದ್ದಾನೆ. ಆಸಕ್ತಿಯ ವಿಷಯವೆಂದರೆ ಬೀರರಸ ಎಂಬವನನ್ನು ಬಿಲ್ಲವೆಗ್ಗಡೆ ಎಂದೂ ಶಾಸನಗಳು ಉಲ್ಲೇಖಿಸುವುದರಿಂದ ಬಿಲ್ಲ ಮತ್ತು ಬೀರ ಎಂಬ ಹೆಸರುಗಳೆರಡೂ ಉಚ್ಛಾರಣಾ ವ್ಯತ್ಯಾಸಗಳೆಂದು ಗ್ರಹಿಸಬಹುದು. ಹಾಗಾಗಿ ಬಿಲ್ಲೇಶ್ವರನು ಬೀರದೇವತೆಯೇ ಆಗಿರುವಂತೆ ತೋರುತ್ತದೆ. ಬೊಮ್ಮ ಎಂಬ ದೇವತೆ ತುಳು ನಾಡಿನದೇ ವಿಶಿಷ್ಟ ದೇವತೆಯಾಗಿದ್ದು ದಕ್ಷಿಣ ಕನ್ನಡದ ಬರ್ಮೇರ್ ದೇವತೆ ಎಂಬುದು ಸ್ಪಷ್ಟ. ಈ ಅರಸರಿಗೇ ವಿಶಿಷ್ಟವಾದ ಮತ್ತೊಂದು ಹೆಸರು ಬಾಳೆಯಮ್ಮ ಎಂಬುದು.

೩. ಶಾಸನೋಕ್ತ ಅರಸರು

ಈ ಅರಸರ ಒಂದು ವ್ಯವಸ್ಥಿತವಾದ ವಂಶಾವಳಿಯನ್ನು ಕಟ್ಟಿಕೊಡುವುದು ಪ್ರಯಾಸದ ಕೆಲಸವೇ ಆಗಿದೆ. ಈ ಕೆಲಸದಲ್ಲಿ ಎದುರಾಗುವ ಮೊದಲನೇ ತೊಡಕು ಎಂದರೆ ಕೇವಲ ಬೀರರಸ ಹಾಗೂ ಬೊಮ್ಮರಸ ಎಂಬ ಎರಡೇ ಹೆಸರುಗಳನ್ನು ಬೇರೆ ಬೇರೆ ತಲೆಮಾರಿನ ಅರಸರೆಲ್ಲರೂ ಇಟ್ಟುಕೊಂಡಿದ್ದರು. ಎರಡನೆಯದಾಗಿ ಇದು ಒಂದೇ ವಂಶವೂ ಆಗಿರಲಿಲ್ಲ. ಅಳಿಯಂದಿರು, ಅಧಿಕಾರಿಗಳು ಕೂಡ ಆಳಿದ್ದಾರೆ. ಇವರ ಅನೇಕ ಶಾಸನಗಳ ಕಾಲ ಬಹುಶಃ ತಪ್ಪಾಗಿ ಓದಲ್ಪಟ್ಟು ಅಚ್ಚಾಗಿವೆ. ಹಾಗಾಗಿ ಲಭ್ಯವಿರುವ ಮಾಹಿತಿಗಳಿಂದ ಒಂದು ತಾತ್ಕಾಲಿಕ ವಂಶಾವಳಿಯನ್ನು ಮಾತ್ರ ಸೂಚಿಸಬಹುದು. ಗೊಂದಲದ ಭಾಗಗಳನ್ನು ಮುಂದಿನ ಸಂಶೋಧನೆಗೆ ಬಿಡಲಾಗಿದೆ. ಹೊಸಗುಂದವೇ ಇವರ ಪ್ರಮುಖ ರಾಜಧಾನಿಯಾಗಿದ್ದರಿಂದ ಇವರನ್ನು ಹೊಸಗುಂದದ ಅರಸರೆಂದು ಸ್ಥೂಲವಾಗಿ ಕರೆಯಬಹುದು.

03_270_MAM-KUH

ಮೊದಲನೇ ಬೊಮ್ಮರಸ, ಬೀರರಸರು

೧೧೪೭ರಲ್ಲಿ ಜಗದೇವ ಸಾಂತರನು ಸೇತುವಿನಿಂದ ಆಳತೊಡಗಿದ ನಂತರ ಹೊಸಗುಂದದ ಅರಸರು ತಮ್ಮ ಅಸ್ತಿತ್ವವನ್ನು ಪ್ರಕಟಿಸಲು ಪ್ರಾರಂಭಿಸುತ್ತಾರೆ. ೧೦೬೨ರಲ್ಲಿ ತೈಲಹರಸ ಸಾಂತರನ ಅಧಿಕಾರಿಯಾಗಿ ಹೊಸಗುಂದದ ಬೀರರಸ ಎಂಬವನು ಮೇಲು ಸಾಂತಳಿಗೆಯನ್ನು ಆಳುತ್ತಿದ್ದನು.[4] ಈ ಮೇಲು ಸಾಂತಳಿಗೆಯಲ್ಲೇ ಕುಂದನಾಡು ಹಾಗೂ ಕೊಡನಾಡುಗಳು ಬರುತ್ತವೆ. ಈ ಬೀರರ ಸನಿಗೂ ಪೂರ್ವದಲ್ಲಿ ಒಬ್ಬ ಬೊಮ್ಮ ರಸನೆಂಬವನು ಇದ್ದಿರಬಹುದು. ನಾಡಕಳಸಿಯ ಶಾಸನದಲ್ಲಿ ಬೊಮ್ಮರಸನೆಂಬವನೊಬ್ಬನು ೧೨ನೇ ಶತಮಾನದ ಮಧ್ಯ ಭಾಗದಲ್ಲಿ ಕುಂದನಾಡು ಹಾಗೂ ಕೊಡನಾಡುಗಳ ಆಳ್ವಿಕೆಯನ್ನು ನಡೆಸುತ್ತಿದ್ದುದಾಗಿ ಉಲ್ಲೇಖವಿದೆ.[5](ಆ ಬೊಮ್ಮರಸನ ಮಗಳ ಮಗಳ ಮಗ ೧೨೧೮ರ ಶಾಸನದಲ್ಲಿ ಕಲಿಸೆಯ ಅರಸನಾಗಿ ಕಾಣಿಸಿಕೊಳ್ಳುತ್ತಾನೆ.) ಇವರಿಬ್ಬರನ್ನೂ ಮೊದಲನೆಯ ಬೀರರಸ ಹಾಗು ಮೊದಲನೆಯ ಬೊಮ್ಮರಸರೆಂದು ಇಲ್ಲಿ ಗ್ರಹಿಸಿಕೊಳ್ಳಲಾಗಿದೆ. ಬಹುಶಃ ಮೊದಲನೆಯ ಬೀರರಸನನ್ನೇ ಬಿಲ್ಲವೆಗ್ಗಡೆ ಎಂದೂ ಕರೆಯಲಾಗುತ್ತಿತ್ತು. ಈ ಬೀರರಸನಿಗೂ ಆತನ ಮೇಲೆ ಆಳುತ್ತಿದ್ದ ಸಾಂತರ ಸಿಂಗಿದೇವನಿಗೂ ಮಧ್ಯೆ ಸದಾ ತಿಕ್ಕಾಟ ನಡೆದಿತ್ತು. ಬೀರರಸನು ಸಾಂತರರ ಮೇಲಾಳಿಕೆಯನ್ನು ಕಿತ್ತೊಗೆಯಲೂ ಪ್ರಯತ್ನಿಸುತ್ತಿದ್ದನೆಂದು ತೋರುತ್ತದೆ. ೧೧೬೪ ರಲ್ಲಿ ಸಿಂಗಿದೇವನು ಕೆಲ ಮಾಂಡಳಿಕರನ್ನು ಕೂಡಿಕೊಂಡು ಬೀರರಸನ ಮೇಲೆ ದಂಡೆತ್ತಿ ಬಂದಿದ್ದನು.[6]ಘಟ್ಟದ ಕೆಳಗಿನ ಆಳ್ವರಸರು ಸಾಂತರರ ಪರವಾಗಿ ಬಂದು ನಾಡುಗಳನ್ನು ಕೆಡಿಸುತ್ತಿದ್ದರು. ಇವರ ಸೈನ್ಯದಲ್ಲಿ ೧೦೦೦ ಕುದುರೆಗಳು ಹಾಗೂ ೫೦,೦೦೦ ಆಳುಗಳು ಇದ್ದರೆಂದು ಹೇಳಲಾಗಿದೆ. ಬಹುಶಃ ಇದೇ ಸಮಯದಲ್ಲಿ ಬೀರರಸನು ಅಂಧಾಸುರದ ಅಂಧಾಸುರದಲ್ಲಿ ಜಗದೇವ ಸಾಂತರನನ್ನು ಮುತ್ತಿದಾಗ ಆತನ ಇತರ ಮಾಂಡಳಿಕರ ಜೊತೆಗೆ ಬೀರರಸನೂ ಇದ್ದನು.[7]ಇದರಿಂದ ಸ್ಪಷ್ಟವಾಗುವ ವಿಷಯವೆಂದರೆ ತನ್ನ ಕಾಲದ ರಾಜಕೀಯ ಪ್ರಕ್ಷುಬ್ಧತೆಯನ್ನು ಬೀರರಸನು ಸದುಪಯೋಗಪಡಿಸಿಕೊಂಡನು. ಈ ಬೀರರಸನು ಯಾವುದೇ ಬಿರುದುಗಳನ್ನೂ ಧರಿಸಿದಂತೆ ಕಂಡುಬರುವುದಿಲ್ಲ.

೧೧೭೨ರಲ್ಲಿ ಒಬ್ಬ ಕುಮಾರ ಮಾಂಡಲಿಕ ಬೊಮ್ಮರಸ ಎಂಬವನ ಉಲ್ಲೇಖವಾಗುತ್ತದೆ.[8]ಇವನನ್ನು ಮಾಂಡಳಿಕ ಎಂದು ಕರೆದಿರುವುದರಿಂದ ಮೊದಲನೇ ಬೀರರಸನ ತಂತ್ರ ಫಲಿಸಿದಂತೆ ತೋರುತ್ತದೆ, ಅಂದರೆ ಈ ಅರಸರು ಕುಂದನಾಡು-ಕೊಡನಾಡುಗಳ ಜೊತೆಗೇ ಸಾಂತಳಿಗೆ ಅಧಿಕಾರವನ್ನೂ ಪಡೆದಿರಬಹುದು. ಈ ಬೊಮ್ಮರಸನು ಬಹುಶಃ ಎರಡನೆ ಬೊಮ್ಮರಸನಾಗಿದ್ದಾನೆ. ಆದರೆ ೧೧೭೨ ರಿಂದ ಸುಮಾರು ೧೨೧೫ರ ವರೆಗೆ ಸಾಂತರರು ಹೊಸಗುಂದದ ಅರಸರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಸಮರ್ಥರಾದರು. ೧೧೯೦-೧೨೦೦ರ ಮಧ್ಯದಲ್ಲಿ ಒಂದೆರಡು ಬಾರಿ ಬೀರರಸ ಹಾಗೂ ಬೊಮ್ಮರಸ ಎಂಬವರ ಉಲ್ಲೇಖವಾದರೂ ಅವರ ಕುರಿತ ವಿವರಗಳು ಸಿಗುವುದಿಲ್ಲ. ಈ ಮಧ್ಯದ ಕಾಲದಲ್ಲಿ ಆಗಿಹೋದ ಅರಸರ ಕುರಿತು ಇನ್ನಾವುದೇ ಮಾಹಿತಿ ಲಭ್ಯವಿಲ್ಲ.

ಕಲಿಸೆಯ ಬಾಳೆಯಮ್ಮವೆಗ್ಗಡೆ

೧೨೧೬ ರಲ್ಲಿ ಜಗದೇವ ಪಾಂಡ್ಯದೇವರಸನೆಂಬ ಸಾಂತರನ ಮಹಾಪ್ರಧಾನಿ, ಸರ್ವಾಧಿಕಾರಿ, ಬಾಹತ್ತರ ನಿಯೋಗಾಧಿಕಾರಿ ಎಂದೆಲ್ಲ ಕರೆದುಕೊಂಡು ಕುಮಾರ ಬಾಳೆಯಮ್ಮವೆಗ್ಗಡೆ ಎಂಬವನು ಕಲಿಸೆಯಲ್ಲಿ ಆಳುತ್ತಿದ್ದನು.[9]ಆತನು ನೆರೆಯ ಜಿಡ್ಡುಳಿಗೆ ನಾಡಿನ ಹಳ್ಳಿಗಳ ಮೇಲೆ ಧಾಳಿ ನಡೆಸುತ್ತಿದ್ದನು. ೧೨೧೮ರ ನಾಡಕಲಸಿಯ ಸೋಮನಾಥ ದೇವಾಲಯದ ಶಾಸನಗಳಲ್ಲಿ ಈ ಅರಸನ ಬಗ್ಗೆ ಅನೇಕ ವಿವರಗಳು ದಾಖಲಾಗಿವೆ.[10]ಆತನು ತಾನು ಬೊಮ್ಮರಸನೆಂಬವನ ಮಗಳ ಮಗಳ ಮಗನೆನ್ನುತ್ತಾನೆ. ಆತನ ತಾಯಿ ಬಿಯಬರಸಿಯು ಬೊಮ್ಮರಸನ ಮಗಳು ಕೆಳೆಯಬರಸಿಯ ಮಗಳಾಗಿದ್ದಳು. ಆತನ ತಂದೆ ಹ(ಪ)ಡವಳ ಗೊಂಗಣ್ಣ ಹಾಗೂ ಮಾವನು ಬಿಲ್ಲವೆಗ್ಗಡೆಯಾಗಿದ್ದನು. ಈ ಬಿಲ್ಲವೆಗ್ಗಡೆ ಹೊಸಗುಂದದ ವಂಶದವನೆಂಬುದು ಸ್ಪಷ್ಟ. ಬಹುಶಃ ಅವನು ೧೧೭೨ ರಲ್ಲಿ ಕಾಣಿಸಿಕೊಳ್ಳುವ ಬೊಮ್ಮರಸನ ಮಗನಾಗಿರಬಹುದು. ಆದರೆ ೧೨೧೫ರ ಸುಮಾರಿಗೆ ಹೊಸಗುಂದದ ಅರಸರೂ ಧರಿಸದಿದ್ದ ಪ್ರಶಸ್ತಿಗಳನ್ನೆಲ್ಲ ಧರಿಸಿ ಕಲಿಸೆಯ ಬಾಳೆಯಮ್ಮವೆಗ್ಗಡೆ ಹೇಗೆ ಪ್ರಬಲನಾದ ಎಂಬುದು ಸ್ಪಷ್ಟವಿಲ್ಲ. ಆತನಿಗೆ ಅದಿಯರಾದಿತ್ಯ, ಸತ್ಯ ರತ್ನಾಕರ ಮುಂತಾದ ಬಿರುದುಗಳಿದ್ದವು. ಆತನ ಪರಾಕ್ರಮವನ್ನು ಸುದೀರ್ಘವಾಗಿ ವರ್ಣಿಸಲಾಗಿದೆ. ಬಹುಶಃ ಆತನು ತನ್ನ ಶೌರ್ಯದಿಂದ ಅಥವಾ ನಿಷ್ಠೆಯಿಂದಾಗಿ ಸಾಂತರರಿಗೆ ಆಪ್ತನಾಗಿರಬಹುದು. ಆತನು ತನ್ನನ್ನು ಮಾಂಡಳಿಕನೆಂದುಕೊಳ್ಳುತ್ತಾನೆ. ನಾಡಕಲಸಿಯ ಸೋಮನಾಥ ದೇವಾಲಯವನ್ನು ಆತನು ಕಟ್ಟಿಸಿದನು. ೧೨೨೦ರ ಸುಮಾರಿಗೆ ಚಿಟ್ಟೂರು ಕೋಟೆಯಲ್ಲಿದ್ದ ಬೆಳಗುತ್ತಿಯ ಈಶ್ವರದೇವನನ್ನು ಮುತ್ತಿ ಕಾದಾಡುತ್ತಿದ್ದನು.[11]

ಹೊಸಗುಂದದ ಬಿಲ್ಲವೆಗ್ಗಡೆಯ ಮಗ (ಎರಡನೆಯ) ಬೊಮ್ಮರಸ

೧೨೨೦ರ ನಂತರ ಹೊಸಗುಂದದ ಬಿಲ್ಲವೆಗ್ಗಡೆಯ ಮಗನಾದ ಕುಮಾರ ಬೊಮ್ಮರಸನು ಸಾಂತರರ ಮೇಲಾಳಿಕೆಯಿಂದ ಸ್ವತಂತ್ರನಾದಂತೆ ತೋರುತ್ತದೆ. ೧೧೧೦ ಕ್ಕೂ ಮೊದಲಿನಿಂದಲೇ ಈತನು ಆಳುತ್ತಿರುವ ಸಾಧ್ಯತೆ ಇದ್ದಿರಬಹುದಾದರೂ, ೧೨೨೫ಲರಲ್ಲಿ ಆತನು ಸಾಂತಳಿಗೆ ೧೦೦೦ ವನ್ನು ಸುಖಸಂಕಥಾವಿನೋದದಿಂದ ಆಳುತ್ತ ನಾಡುಹಳ್ಳಿಗೆ ಧಾಳಿಯಿಟ್ಟಿದ್ದಾಗಿ ತಿಳಿದುಬರುತ್ತದೆ. ಆತನು ೧೨೨೬ ರಲ್ಲಿ ತೀರಿಕೊಂಡಿದ್ದನು.[12]

ಕಲಿಸೆಯ ಅಳಿಯ ಬೀರರಸ

೧೨೩೦ರಲ್ಲೇ ಕಲಿಸೆಯ ಬಾಳೆಯಮ್ಮವೆಗ್ಗಡೆಯ ಮಗ ಕುಮಾರ ಬೀರರಸನು ಕಾಣಿಸಿಕೊಳ್ಳುತ್ತಾನೆ.[13]ಮಾವನ ಗಂಧವಾರಣ” ಎಂಬುದು ಆತನ ಬಿರುದುಗಳಲ್ಲೊಂದಾಗಿತ್ತು. ಅವನು ಕುಂದನಾಡು-ಕೊಡನಾಡುಗಳನ್ನು ಆಳುತ್ತಿದ್ದುದಾಗಿ ತಿಳಿದು ಬರುತ್ತದೆ. ೧೨೨೯ರಲ್ಲಿ ಹೊಸಗುಂದದ ಬೊಮ್ಮರಸನ ಕಾಲದ ನಂತರ ಆತನೇ ಕಾರಣಾಂತರದಿಂದ ಸಾಂತಳಿಗೆ ಅರಸನಾದನು. ೧೨೨೯ರ ಒಂದು ಶಾಸನದ ‘ಪ್ರಕಾರ ಬಾಳೆಯಮ್ಮವೆಗ್ಗಡೆಯ ಸುತ ಬೀರರಸನು ಕುಮಾರ ಬೊಮ್ಮರಸನ ಕಾಲಾನಂತರ’ ಸಾಂತಳಿಗೆಗೆ ಅರಸನಾದನು.[14]ಈತನನ್ನು ಅಳಿಯ ಬೀರರಸ ಅಥವಾ ಕಲಿಸೆಯ ಬೀರರಸ ಎಂದೂ ಕರೆಯಲಾಗಿದೆ. ಪುರದ ಶಾಸನವೊಂದರಲ್ಲಿ ಈತನನ್ನು ಹೊಸಗುಂದದ ಬೊಮ್ಮರಸನ ಅಳಿ ಎಂದು ಕರೆಯಲಾಗಿದೆ.[15]ಈತನು ೧೨೪೫ಕ್ಕೂ ಸ್ವಲ್ಪ ಮೊದಲು ಬೆಳಗುತ್ತಿಯ ಸಿಂಧರ ಈಶ್ವರದೇವನನ್ನು ಸೋಲಿಸಿ ಬೆಳಗುತ್ತಿಯನ್ನು ಆಕ್ರಮಿಸಿಕೊಂಡು ತನ್ನ ಸೇಡನ್ನು ತೀರಿಸಿಕೊಂಡನು. ೧೨೫೭ರ ವರೆಗೂ ಆತನ ಶಾಸನಗಳು ಬೆಳಗುತ್ತಿಯಲ್ಲಿ ಸಿಗುತ್ತವೆ.[16]ಅವನಿಗೆ ಶ್ರೀಧರನೆಂಬ ದಂಡನಾಯಕನಿದ್ದನು ಹಾಗೂ ಬೀರರಸನ ಜಯಗಳಲ್ಲಿ ಆತನ ಪಾತ್ರ ಮಹತ್ವದ್ದಾಗಿತ್ತೆಂದು ಶಾಸನಗಳ ಮೂಲಕ ತಿಳಿದು ಬರುತ್ತದೆ. ೧೨೪೮ ರಲ್ಲಿ ಈತನು ಹೊಂಬುಚ ಹಾಗೂ ಸೇತುವಿನ ಮೇಲೆ ಧಾಳಿ ಮಾಡಿದ್ದನು ಹಾಗೂ ಆಗ ಹೊಂಬುಚದಲ್ಲಿ ಬೊಮ್ಮಸನೆಂಬವನು ಆಳುತ್ತಿದ್ದನು. ಈ ಬೊಮ್ಮರಸನು ಸಾಂತರನೆ ಅಥವಾ ಹೊಸಗುಂದದವನೆ ಎಂಬುದು ಸ್ಪಷ್ಟವಿಲ್ಲ. ೧೨೫೩ ರಲ್ಲಿ ಬಿದಿರೂರಿನ ಈಡು ಸಾವಂತನ ಮೇಲೆ ಧಾಳಿ ಮಾಡಿದನು. ೧೨೫೫ರ ವರೆಗೂ ಬಿದಿರೂರಿನ ಮೇಲೆ ಧಾಳಿ ಮುಂದುವರೆದಿತ್ತು.

ಅಳಿಯ ಬೀರರಸನು ಈ ರೀತಿ ಪ್ರಬಲನಾಗುತ್ತಾ ಒಳನಾಡಿನ ಸಾಮ್ರಾಜ್ಯಗಳ ಹಿಡಿತದಿಂದ ಸ್ವತಂತ್ರನಾಗಲು ಹವಣಿಸಿದಂತೆ ತೋರುತ್ತದೆ. ೧೨೧೫ ರ ಸುಮಾರಿಗೇ ದೇವಗಿರಿಯ ಯಾದವರು ಹೊಯ್ಸಳರನ್ನು ಬನವಾಸಿ ಪ್ರದೇಶದಿಂದ ಹಿಮ್ಮೆಟ್ಟಿಸಿದ್ದರು. ಹೊಯ್ಸಳರಿಂದ ವಿಶೇಷವಾಗಿ ಸನ್ಮಾನಿತರಾಗಿ ಅವರ ಅಂಕೆಯೊಳಗೆ ಇದ್ದ ಈ ಅರಸರಿಗೆ ಹೊಯ್ಸಳರ ಈ ಹಿಮ್ಮೆಟ್ಟುವಿಕೆಯಿಂದ ತಕ್ಕಮಟ್ಟಿಗಿನ ಸ್ವಾತಂತ್ರ‍್ಯ ಸಿಕ್ಕಿರಬಹುದು ಅಥವಾ ಹೊಯ್ಸಳರು ವಿಶೇಷ ಸ್ವಾತಂತ್ರ‍್ಯವನ್ನು ನೀಡಿರಬಹುದು. ಬೆಳಗುತ್ತಿಯ ಅರಸರನ್ನೂ ಹೊಯ್ಸಳರು ಮಣಿಸಿ ತಮ್ಮ ಅಂಕೆಯಲ್ಲಿ ತಂದುಕೊಂಡಿದ್ದರು. ಎರಡನೆಯ ಬಿಲ್ಲಾಳನ ಕಾಲದ ನಂತರ ಬೀರರಸನು ಬೆಳಗುತ್ತಿಯನ್ನು ಆಕ್ರಮಿಸಿಕೊಳ್ಳುವುದು ಬೀರರಸನಿಗೆ ಸಿಕ್ಕ ಹೊಸ ರಾಜಕೀಯ ಅವಕಾಶದ ದೃಷ್ಟಾಂತವಾಗಿದೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಬೀರರಸನು ತನ್ನ ಬಿರುದಾವಳಿಗಳನ್ನು ಹೆಚ್ಚಿಸಿಕೊಂಡನು. ಆತನ ಬಿರುದುಗಳಲ್ಲಿ ಮುಖ್ಯವಾದುವೆಂದರೆ ‘ಹೊನ್ನ ಕೊಟ್ಟು ಕುದುರೆ ಕಟ್ಟುವ ಮಾಂಡಳಿಕರ ಗಂಡ’, ‘ಕೊಂಕಣಿಗೆ ಬೇಟೆಗಾರ’, ‘ತುಳುರಾಜ್ಯ ಸಮುದ್ಧರಣ’ ಎಂಬವು. ಕರಾವಳಿಗೆ ಹೊಂದಿಕೊಂಡಿರುವ ಈ ಮಲೆನಾಡಿನ ಘಟ್ಟ ಪ್ರದೇಶವು ಮಧ್ಯ ಕಾಲದ ಅರಬ್ಬರ ಕುದುರೆ ವ್ಯಾಪಾರದ ಮಾರುಕಟ್ಟೆಯಾಗಿತ್ತು ಎಂಬುದು ಇದರಿಂದ ತಿಳಿದು ಬರುತ್ತದೆ. ಈ ಕಾಲದ ವೀರಗಲ್ಲುಗಳ ಶಾಸನಗಳಲ್ಲಿ ಸಾಮಾನ್ಯವಾಗಿ ಕುದುರೆ ಸವಾರರ (ಮೇಲಾಳುಗಳ) ವರ್ಣನೆ ಬರುತ್ತದೆ. ಶಾಸನ ಕಲ್ಲುಗಳ ಶಿಲ್ಪಗಳಲ್ಲೂ ಕುದುರೆಗಳ ಚಿತ್ರ ಸಾಮಾನ್ಯ. ಬಹುಶಃ ಬೀರರಸನ ಹೊನ್ನು ಕೊಟ್ಟು ಖರೀದಿಸುವುದು ಈ ಕಾಲದ ಮಾಂಡಲೀಕರ ಪ್ರತಿಷ್ಟೆಯ ವಿಷಯವೂ ಆಗಿತ್ತೆಂಬುದು ಇಲ್ಲಿ ವಿದಿತವಾಗಿದೆ. ಕೊಂಕಣಿಗ ಬೇಂಟೆಗಾರ ಎಂಬ ಬಿರುದು ಆತನು ಬಹುಶಃ ಹೈವೆಯ ಅಥವಾ ಗೋವೆಯ ಅರಸರ ವಿರುದ್ಧ ಸಾಧಿಸಿದ ಜಯವನ್ನು ಸೂಚಿಸಬಹುದು. ತುಳುರಾಜ್ಯ ಸಮುದ್ಧರಣ ಎಂಬ ಬಿರುದು ಹೊಸಗುಂದದ ಅರಸರಿಗೆ ನೇರವಾಗಿ ಹೇಗೆ ಸಂಬಂಧಿಸಿದೆ ಎಂಬುದು ಸ್ಪಷ್ಟವಿಲ್ಲ. ಆದರೆ ೯೮೦ ರಿಂದ ೧೦೧೦ರ ವರೆಗೆ ಆಳಿದ ಬಂಕಿದೇವನೆಂಬ ತುಳುರಾಜನು ಚೋಳರಿಗೆ ಸೋತಾಗ ಸಾಂತರರು ಸಹಾಯ ಮಾಡಿದ್ದರು.[17]೧೨೫೬ರ ಶಾಸನವೊಂದರಲ್ಲಿ ಬೀರರಸನು ಅಭಿನವ ಕಪಿಲಸಿದ್ಧ ಮಲ್ಲಿಕಾರ್ಜುನ ದೇವರಿಗೆ ದಾನ ನೀಡುವ ಸಂದರ್ಭದಲ್ಲಿ ಬೀರರಸನನ್ನು ಸತ್ಯರತ್ನಾಕರ, ಸಾಹಿತ್ಯಜನ ಹೃತ್ ಸರೋಜ ಎಂದೆಲ್ಲ ಬಣ್ಣಿಸಲಾಗಿದೆ.[18]ಈ ಶಾಸನದಲ್ಲಿ ಉಲ್ಲೇಖಿತವಾದ ಸೊನ್ನಲಿಗೆಯು ವೀರಶೈವ ಮತದ ಆದ್ಯಪುರುಷರಲ್ಲೊಬ್ಬರಾದ ಸಿದ್ಧರಮನ ಕ್ಷೇತ್ರವಾಗಿದ್ದು ಅದರ ಪ್ರಭಾವ ಈ ಪ್ರದೇಶದಲ್ಲೂ ಆಗಿತ್ತು ಎಂದು ತಿಳಿದು ಬರುತ್ತದೆ.

೧೨೫೭ರ ಸುಮಾರಿನ ಒಂದು ಶಾಸನವು ಆಸಕ್ತಿ ಪೂರ್ಣವಾಗಿದೆ. ಇದರ ಪ್ರಕಾರ ಬೀರದೇವನ ಅತಿಬಿರುದುಗಳನ್ನು ಕಂಡು ಸಿಟ್ಟಿಗೆದ್ದ ಯಾದವರ ಕಂದಾರದೇವನು ದಂಡನಾಯಕ ಬೊಮ್ಮಿಸೆಟ್ಟಿಯನ್ನು ಅವನನ್ನು ಹಿಡಿದುಕೊಂಡು ಬರುವಂತೆ ಆದೇಶಿಸಿ ಕಳುಹಿಸಿದ್ದನು.[19]ಆ ಶಾಸನದಲ್ಲಿ ಬೀರರಸನನ್ನು ‘ಸಮಸ್ತ ಭುವನಾಶ್ರಯ, ಪ್ರಥುವೀ ವಲ್ಲಭ, ಮಹಾರಾಜಾಧಿರಾಜ ಪರಮೇಶ್ವರ, ಸತ್ಯಾಶ್ರಯ ಕುಳತಿಳಕ ಪದ್ಮಾವತೀ ದೇವಿ ವರಪ್ರಸಾದಾಸಾದಿತ’ ಮುಂತಾಗಿ ಕರೆಯಲಾಗಿದೆ. ಈ ಬಿರುದುಗಳಲ್ಲಿ ಕೊನೆಯದನ್ನು ಬಿಟ್ಟು ಉಳಿದವೆಲ್ಲ ಚಾಲುಕ್ಯ ಸಾಮ್ರಾಟರ ಬಿರುದುಗಳೆಂಬುದು ಗಮನಾರ್ಹ. ಕೊನೆಯದು ಹೊಂಬುಚದ ಸಾಂತರರ ಬಿರುದಾಗಿದೆ. ಬಹುಶಃ ಈ ಮೂಲಕ ಬೀರರಸನು ಯಾದವ ಆಳ್ವಿಕೆಯಿಂದ ಸ್ವತಂತ್ರನಾಗಲು ಹವಣಿಸಿದ್ದಿರಬಹುದು. ಆ ಯುದ್ಧದ ಪರಿಣಾಮ ಏನಾಯಿತೆಂಬುದು ಸ್ಪಷ್ಟವಿಲ್ಲ. ಏಕೆಂದರೆ ಅದೇ ಶಾಸನದಲ್ಲಿ ಆತನ ಮಗ ಬೊಮ್ಮರಸನು ಹತನಾದ ವೀರನೊಬ್ಬನಿಗೆ ನೆತ್ತರುಗೊಡಗೆ ನೀಡಿದನು. ಅಂದರೆ ಬೀರರಸನು ಆ ಯುದ್ಧದಲ್ಲೇ ಸತ್ತಿರಬಹುದು ಅಥವಾ ಪದಚ್ಯುತನಾಗಿರಬಹುದು. ೧೨೮೩ರ ಎರಡು ಶಾಸನಗಳಲ್ಲಿ ಅಳಿಯ ಬೀರರಸನು ಮಲೆಯ ನಾಯಕರನ್ನು ಕೂಡಿಕೊಂಡು ಹೊಸಗುಂದದ ಮೇಲೆ ದಂಡೆತ್ತಿ ಹೋದ ಉಲ್ಲೇಖವಿದೆ.[20]ಆಗ ಹೊಸಗುಂದದಲ್ಲಿ ಬೊಮ್ಮರಸನ ಮಗ ತಮ್ಮರಸನು ಆಳುತ್ತಿದ್ದನು. ಇವನು ಈ ಹಿಂದೆ ಚರ್ಚಿಸಿದ ಅಳಿಯ ಬೀರರಸನೇ ಆಗಿದ್ದಲ್ಲಿ ಕೆಲ ಪ್ರಶ್ನೆಗಳು ಏಳುತ್ತವೆ. ಮೊದಲನೆಯದಾಗಿ ಏಕೆ ಈ ಬೀರರಸನು ತನ್ನ ಮಗ ಹಾಗೂ ಮೊಮ್ಮಗನಿಂದ ಅಧಿಕಾರ ವಂಚಿತನಾದನು ಹಾಗೂ ಏಕೆ ಅವರ ಮೇಲೆ ಹಗೆತನವನ್ನು ಬೆಳೆಸಿಕೊಂಡನು? ಎಂಬುದು. ಎರಡನೆಯದಾಗಿ ೧೨೩೦ ರ ಸುಮಾರಿಗೆ ಪ್ರಬುದ್ಧಾವಸ್ಥೆಗೆ ಬಂದ ಈತನು ೧೨೮೩ರ ವರೆಗೆ ಯುದ್ಧಗಳಲ್ಲಿ ತೊಡಗಿಕೊಂಡಿರುವುದು ಸಾಧ್ಯವೇ ಎಂಬುದು. ಗಮನಿಸಬೇಕಾದ ವಿಷಯವೆಂದರೆ ಬೊಮ್ಮರಸ ತಮ್ಮರಸರು ತಮ್ಮನ್ನು ಹೊಸಗುಂದದ ಅರಸರೆಂದೇ ಗುರುತಿಸಿಕೊಳ್ಳುತ್ತಾರೆ. ಬಹುಶಃ ಕಂದಾರ ದೇವನ ಕಾಲದಲ್ಲೇ ಬೊಮ್ಮರಸನನ್ನು ಬೀರರಸನ ಬದಲಾಗಿ ಹೊಸಗುಂದದಲ್ಲಿ ಅಧಿಕೃತವಾಗಿ ಸ್ಥಾಪಿಸಿರಬಹುದು.

 

[1]ಬಿ.ಲೆವಿಸ್ ರೈಸ್, ಎಫಿಗ್ರಾಫಿಯಾ ಕರ್ನಾಟಿಕಾ, ಸಂ.೮, ೧೯೦೪, ಮುನ್ನುಡಿ ಪು.೯

[2]ಈ ಶಾಸನಗಳು ಈ ಕೆಳಗಿನ ಸಂಗ್ರಹಗಳಲ್ಲಿ ಸಿಗುತ್ತವೆ: ಎಪಿಗ್ರಾಫಿಯಾ ಕರ್ನಾಟಕ, (ಎ.ಕ). ಸಂ. ೭ ಹಾಗೂ ೮: ಮೈಸೂರು ಆರ್ಕಿಯಾಲಾಗಿಕಲ್‌ರಿಪೋರ್ಟ್ಸ್, (ಮೈ.ಆ.ರಿ.) ೧೯೨೩, ೧೯೩೦, ೧೯೩೫, ೧೯೩೧. ೧೯೪೩ ಹಾಗೂ ೧೯೪೪: ಎ.ಕ. ಸಪ್ಲಿಮೆಂಟರಿವೊಲ್ಯೂಂ (ಎ.ಕ.ಸ.): ಎರಡು ಶಾಸನಗಳನ್ನು ಶ್ರೀ ಜಗದೀಶ್ ಅಗಸಿಬಾಗಿಲವರ್ ಶಿವಮೊಗ್ಗಾದ ಎಸ್.ಪಿ. ಆಫೀಸಿನ ಸಂಗ್ರಹದಿಂದ ಓದಿ ಕೊಟ್ಟಿದ್ದಾರೆ.

[3]ಎ.ಕ. ಸಂ.೮ ಸೊರಬ ಸಂ. ೫೮೬. ಕೋಡಕಣಿ ೧೨೦೮, ಹಾಗೂ ಎ.ಕ. ಸಂ. ೭, ಹೊನ್ನಾಳಿ ೮. ಸು. ೧೧೫೦

[4]ಮೈ.ಆ.ರಿ. ೧೯೨೩, ಸಂ ೬೪.

[5]ಎ.ಕ. ೮ ಸಾಗರ ೧೫, ಕ್ರಿ.ಶ. ೧೨೧೫, ೧೫೩ ೧೧೩೪ ಸಾಲೆಕೊಪ್ಪ, ಜಗದೇವ ಸಿಂಗಿದೇವರಸನ ಪಾದ ಪದ್ಮೋಪಜೀವಿ ಬಮ್ಮವೆಗ್ಗಡೆ.

[6]ಮೈ.ಆ ರಿ. ೧೯೩೦, ಸಂ. ೬೭

[7]ಎ.ಕ. ೮ ಸಾಗರ ೧೧೪. ಬಸವ ನೆಲ್ಲೂರು ಸು. ಕ್ರಿ.ಶ. ೧೧೬೬

[8]ಮೈ.ಆ ರಿ. ೧೯೨೩. ಸಂ. ೧೨೫.

[9]ಎ.ಕ. ೮ ಸಾಗರ ೧೨೫. ನಾಡಮಂಚಸಾಲೆ ಕ್ರಿ.ಶ. ೧೨೧೭

[10]ಎ.ಕ. ೮ ಸಾಗರ ೧೫.

[11]ಎ.ಕ. ೮ ಸಾಗರ ೪. ಮಾಳವಿ.

[12]ಎ.ಕ. ೮ ಸಾಗರ ೧೪೮, ಹೊಸಗುಂದ ೮೩, ಆವಿನಹಳ್ಳಿ ಸು. ಕ್ರಿ.ಶ. ೧೨೨೫, ೧೩೬ ಹೊಸಗುಂದ ೧೨೨೬ ಬೊಮ್ಮರಸ ತೀರಿದ ವರ್ಷ

[13]ಎ.ಕ. ೮ ಸೊರಬ ೫೪೦. ಹುನವಳ್ಳಿ ೧೨೩೦-೩೧

[14]ಎ.ಕ. ೮ ಸಾಗರ ೧೪೬. ಹೊಸಗುಂದ ೧೨೨೯-೩೦

[15]ಎ.ಕ. ೮ ಸೊರಬ ೫೨೨.

[16]ಎ.ಕ. ೭ ಹೊನ್ನಾಳಿ ೪೯-೧೨೪೫ ೫೪-೧೨೪೬ ೫೫-೧೨೫೭ ೫೬, ೫೮, ೭೯ ಇದು ಬೊಮ್ಮರಸನದು. ಬೀರರಸನ ಹೆಚ್ಚಿನ ಶಾಸನಗಳು ಕುಳ್ಳಳ್ಳಿಯಲ್ಲಿ ಸಿಗುತ್ತವೆ.

[17]ಗುರುರಾಜ ಭಟ್. ಸ್ಟಡೀಸ್ ಇನ್‌ತುಳುವ ಹಿಸ್ಟ್ರಿ ಎಂಡ್ ಕಲ್ಚರ್, ಮಣಿಪಾಲ್ ೧೯೭೫, ಪು.೧೨

[18]ಎ.ಕ. ೮ ಸೊರಬ ೫೬೧, ಕೋಳಿಸಾಲೆ

[19]ಎ.ಕ. ೮ ಸಾಗರ ೧೧೯. ಮಲ್ಲಂದೂರು

[20]ಎ.ಕ. ೮ ಸಾಗರ ೮೫, ೮೬ ಆವಿನಹಳ್ಳಿ