ಮಧ್ಯಕಾಲೀನ ಕರ್ನಾಟಕದ ಇತಿಹಾಸದಲ್ಲಿ ಚಂಗಾಳ್ವ ರಾಜ ವಂಶ ಪುಟ್ಟ ಅರಸು ಮನೆತನವೆನಿಸಿಕೊಂಡರೂ ಇವರು ಸುಮಾರು ೧೦ನೇ ಶತಮಾನದಿಂದ ೧೭ನೇ ಶತಮಾನದವರೆಗೂ ಅಂದರೆ ಸುಮಾರು ೭೦೦-೮೦೦ ವರ್ಷಗಳವರೆಗೂ ದೀರ್ಘಕಾಲ ರಾಜ್ಯಭಾರ ಮಾಡಿದರು. ಈಗಲೂ ತಮ್ಮನ್ನು ಚಂಗಾಳ್ವರೆಂದು ಗುರುತಿಸಿಕೊಳ್ಳುವ ಮನೆತನದವರು ಕೊಡಗು ಹಾಗೂ ಪಿರಿಯಾಪಟ್ಟಣದ ಕಡೆಗಳಲ್ಲಿ ಇದ್ದಾರೆ. ಚಂಗಾಳ್ವ ಚಂಗಲರಾಯರೆಡ್ಡಿ, ಚಂಗಪ್ಪ, ಚಂಗೇಗೌಡ ಎಂಬ ಹೆಸರಿನ ವ್ಯಕ್ತಿಗಳು ಈ ಸುತ್ತಿನಲ್ಲಿ ಇಂದಿಗೂ ಇರುವುದಲ್ಲದೆ ಅವರು ತಮ್ಮ ವಂಶದ ಕುರುಹನ್ನು ಹೆಮ್ಮೆಯಿಂದ ಹೇಳಿಕೊಳ್ಳುವವರೂ ಆಗಿದ್ದಾರೆ. ಆಶ್ಚರ್ಯವೆಂದರೆ ತಮ್ಮನ್ನು ಕೊಂಗಾಳ್ವರೆಂದೂ ತಾವು ಕೋಟೆಭೈರವನ ಒಕ್ಕಲಿನವರೆಂದು ಹೇಳಿಕೊಳ್ಳುವ ಒಕ್ಕಲಿಗರು ಕೆ.ಆರ್. ನಗರ ತಾಲೂಕಿನ ಹೆಬ್ಬಾಳು, ಮಿರ್ಲ್ಲೆ, ಸಾಲಿಗ್ರಾಮ, ನಾಟ್ನಳ್ಳಿ ಹಾಗೂ ಕೆ.ಆರ್. ಪೇಟೆ ತಾಲ್ಲೂಕಿನಲ್ಲಿ ಈಗಲೂ ಇದ್ದಾರೆ. ಹೀಗೆ ಚಂಗಾಳ್ವರ ಹಾಗೂ ಕೊಂಗಾಳ್ವರ ಪಳೆಯುಳಿಕೆಯನ್ನು ಇಂದಿಗೂ ಗುರುತಿಸಬಹುದಾಗಿದೆ.

ಚಂಗಾಳ್ವರ ಇತಿಹಾಸ ಸುಮಾರು ೧೦ನೇ ಶತಮಾನದಿಂದ ೧೭ನೇ ಶತಮಾನದ ಮಧ್ಯ ಭಾಗದವರೆಗೆ ವ್ಯಾಪಿಸಿದೆ. ಅವರು ಇಷ್ಟು ದೀರ್ಘಕಾಲ ಅಳಿದರೂ ಅವರ ಬಗ್ಗೆ ಶಾಸನಗಳಿಂದಾಗಲಿ ಸಮಕಾಲೀನ ಕೃತಿಗಳಿಂದಾಗಲಿ ಹೆಚ್ಚು ವಿವರಗಳು ದೊರೆಯುವುದಿಲ್ಲ. ಅವರು ಆಳಿದ ಕೊಡಗಿನ ಭಾಗಗಳು ಮೈಸೂರು ಯುದ್ಧಗಳ ತರುವಾಯ ಸ್ಥಾಪಿಸಿದ ಕೊಡಗಿನ ರಾಜ್ಯಕ್ಕೆ ಸೇರಿ ಹೋದವು. ಉಳಿದ ಭಾಗಗಳಾದ ಪಿರಿಯಾಪಟ್ಟಣ ಹುಣಸೂರು ಕೃಷ್ಣರಾಜನಗರ (ಎಡತೊರೆ) ಮೊದಲಾದವು ಮೈಸೂರು ಜಿಲ್ಲೆಗೆ ಸೇರಿಕೊಂಡವು. ಚಂಗಾಳ್ವರು ಚೋಳರ ಸಾಮಂತರಾಗಿದ್ದು ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರೊಡನೆ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆದರೆ ಅವರು ಹೊಯ್ಸಳರಂತೆ ಶ್ರೀರಂಗಪಟ್ಟಣದ ಒಡೆಯರಂತೆ, ಇಕ್ಕೇರಿಯ ನಾಯಕರಂತೆ ದೊಡ್ಡ ರಾಜ್ಯವನ್ನು ಸ್ಥಾಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಟ್ಟ ಗುಡ್ಡಗಳಿಂದ ಕೂಡಿದ ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗದ ಮಲೆನಾಡಿನಲ್ಲಿ ನೆಲೆಸಿದ್ದುದರಿಂದ ರಾಜ್ಯವನ್ನು ವಿಸ್ತರಿಸಿಕೊಳ್ಳಲು ಅವರಿಗೆ ಭೌಗೋಳಿಕವಾಗಿ ಸಾಧ್ಯವಾಗಲಿಲ್ಲವೆಂದು ಕಾಣುತ್ತದೆ. ಚಂಗಾಳ್ವ ಮತ್ತು ಕೊಂಗಾಳ್ವರ ಇತಿಹಾಸ ಕೊಡಗಿನ ಇತಿಹಾಸದೊಂದಿಗೆ ಹಾಸುಹೊಕ್ಕಾಗಿದೆ. ಚಂಗಾಳ್ವರಿಗೂ ಕೊಂಗಾಳ್ವರಿಗೂ ನಡುವೆ ಪದೇ ಪದೇ ಯುದ್ಧಗಳಾಗುತ್ತಿದ್ದು ಕೊನೆಗೆ ೧೩ನೇ ಶತಮಾನದಲ್ಲಿ ಚಂಗಾಳ್ವರು ಕೊಂಗಾಳ್ವರ ರಾಜ್ಯವನ್ನು ಗೆದ್ದುಕೊಂಡಂತೆ ಕಾಣುತ್ತದೆ. ಈ ಎರಡು ಕುಲದವರೂ ಒಂದೇ ಮೂಲದವರಾಗಿದ್ದು ದಾಯಾದಿಗಳಾಗಿರಬಹುದು. ಈ ಇರ್ವರೂ ಕನ್ನಡದಲ್ಲಿಯೇ ಶಾಸನಗಳನ್ನು ಹಾಕಿಸಿದ್ದಾರೆ. ಹೊಯ್ಸಳರು ಈ ಈರ್ವರನ್ನೂ ಮಲೆಪರೆಂದು ಕರೆದಿದ್ದಾರೆ. ಚಂಗಾಳ್ವರ ಶಾಸನಗಳು ಎಡತೊರೆ ಮತ್ತು ಹುಣಸೂರು ತಾಲ್ಲೂಕುಗಳಲ್ಲಿ ದೊರಕಿವೆ.

[1] ಆದರೆ ಅವರ ಪ್ರಸ್ತಾಪವಿರುವ ಶಾಸನಗಳು ಹಳೇ ಮೈಸೂರು ಭಾಗದಲ್ಲೆಲ್ಲ ಹರಡಿಕೊಂಡಿವೆ. ಅವರ ಮೂಲ ನೆಲೆ ಈಗಿನ ಹುಣಸೂರು ಮತ್ತು ಅದರ ಸುತ್ತಮುತ್ತಲ ಪ್ರದೇಶವಾಗಿತ್ತು. ಇದೇ ಚಂಗನಾಡು.[2]ಡೆರೆಟ್ ಅವರು ತಿಳಿಸುವಂತೆ ಚಂಗಾಳ್ವರಾಜ್ಯದ ಎಲ್ಲೆ ಕಟ್ಟು ಉತ್ತರ-ದಕ್ಷಿಣಕ್ಕೆ ಹೇಮಾವತಿಯಿಂದ ಕಾವೇರಿಯವರೆಗೆ ಪೂರ್ವ ಪಶ್ಚಿಮಕ್ಕೆ ಕಾವೇರಿಯಿಂದ ಕೊಡಗಿನವರೆಗೆ ವ್ಯಾಪಿಸಿತ್ತು.[3]

ಜನಪದ ವೀರಕಾವ್ಯ ಪಿರಿಯಾಪಟ್ಟಣದ ಕಾಳಗದಲ್ಲಿ ಪಿರಿಯಾಪಟ್ಟಣದ ರಾಜ್ಯವನ್ನು ಮತ್ತೆ ಮತ್ತೆ ‘ಗಂಡುಭೂಮಿ’ ಎಂದು ಸಾರಿ ಸಾರಿ ಹೇಳಲಾಗಿದೆ. ಇದರ ಸಂಸ್ಕೃತ ರೂಪವೇ ಪುಂರಾಷ್ಟ್ರ ಅನ್ನುವುದಾದರೆ ಈ ಗಂಡುಭೂಮಿ ಮೈಸೂರಿನಿಂದ ಪಡುವಣ ಭಾಗದ ನಾಡು ಎಂಬ ಅರ್ಥ ಬರುವಂತೆ ಹೇಳಿಕೊಂಡು ಬರಲಾಗಿದೆ. ಪುಂರಾಷ್ಟ್ರದ ವ್ಯಾಪ್ತಿಯನ್ನು ಇಂದು ಸ್ಪಷ್ಟವಾಗಿ ಹೇಳಬರುವುದಿಲ್ಲವಾದರೂ ಮಾಂಬಳಿಯ ಶಾಸನವೊಂದರಲ್ಲಿ ಅದು ಕಾವೇರಿ ಹಾಗೂ ಕಪಿನೀ ನದಿಗಳಿಂದ ಶೋಭಿಸುತ್ತಿತ್ತೆಂದು ಹೇಳಲಾಗಿದೆ.[4] ಈ ಪುಂರಾಷ್ಟ್ರ ಅರ್ಥಾತ್ ಪುನ್ನಾಟ ಕಾವೇರಿ ನದಿಯು ಹರಿದು ಬರುವ ಕೊಡಗಿನ ಕುಶಾಲನಗರದಿಂದ ಹಿಡಿದು ರಾಮನಾಥಪುರ, ಎಡತೊರೆ ಸೇರಿದಂತೆ ಇತ್ತ ಕಡೆಗೆ ಕಪಿನೀ ಹರಿದು ಬರುವ ಹೆಗ್ಗಡದೇವನ ಕೋಟೆ ನಂಜನಗೂಡು, ಟಿ.ನರಸೀಪುರಗಳವರೆಗೂ ಆದರಿಸಿರುವ ಹುಣಸೂರು ಪಿರಿಯಾ ಪಟ್ಟಣಗಳ ವಿಸ್ತಾರವಾದ ನಾಡೆಂದು ಕಾಣುತ್ತದೆ. ಇದಕ್ಕೆ ಪೂರಕವಾಗಿ ಪ್ರೊ.ದೇಜಗೌ ಅವರು ಪಿರಿಯಾಪಟ್ಟಣದ ಸುತ್ತಮುತ್ತಣ ಪ್ರದೇಶಕ್ಕೆ ಹಿಂದೆ ಪುನ್ನಾಟ ಎಂಬ ಹೆಸರಿತ್ತು ಎಂದು ಹೇಳಿ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಪೂನಾಡಹಳ್ಳಿಯೇ ಪುನ್ನಾಟದ ಅವಶೇಷ ರೂಪವಾಗಿರಬಹುದೆಂದು ಹೇಳುತ್ತಾರೆ.[5]ಹೀಗಾಗಿ ಪುನ್ನಾಟದ ಕೇಂದ್ರವೇ ಆಗಿತ್ತೆಂಬುದಕ್ಕೆ ಈ ಹಿಂದೆ ಹೇಳಿರುವ ಎಲ್ಲ ತಾಲ್ಲೂಕುಗಳಲ್ಲೂ ಕಂಡು ಬರುವ ಜೈನಬಸದಿಗಳ ಅವಶೇಷಗಳು ಸಾಕ್ಷಿ ನುಡಿಯುತ್ತವೆ.

ಇಷ್ಟಾದರು ಚಂಗಾಳ್ವರ ರಾಜ್ಯದ ವಿಸ್ತಾರವನ್ನು ಸ್ಪಷ್ಟಪಡಿಸಿದಂತೆ ಆಗುವುದಿಲ್ಲ. ಅವರು ಮೊದಮೊದಲು ಸ್ವತಂತ್ರರಾಗಿದ್ದಂತೆ ಕಂಡರೂ ಕ್ರಮೇಣ ಚೋಳರ ಅಧೀನಕ್ಕೆ ಒಳಗಾದಂತೆ ಕಾಣುತ್ತದೆ. ಹೀಗಾಗಿ ಅವರು ಚೋಳರ ಪ್ರತಿನಿಧಿಗಳಾಗಿದ್ದಾಗ ಮಂಡ್ಯ ಜಿಲ್ಲೆಯ ಚುಂಚನಗಿರಿಯಿಂದ ಹಿಡಿದು ನಾಗಮಂಗಲ, ಕೆ.ಆರ್.ಪೇಟೆ, ಕೆ.ಆರ್.ನಗರ, ಅರಕಲಗೂಡು, ಕೊಡಗಿನ ಭಾಗವಾಗಿದ್ದ ಹುಣಸೂರು ತಾಲ್ಲೂಕುಗಳನ್ನೆಲ್ಲ ಆಳಿದಂತೆ ಕಾಣುತ್ತದೆ. ಏಕೆಂದರೆ ಲಾಳನಕೆರೆಯ ಶಂಭವರಾಯನ ವಂಶವು ಚಂಗಾಳ್ವರ ಒಂದು ಶಾಖೆಯೇ ಆಗಿದೆ. ಚೋಳರ ಸೈನ್ಯದ ತಂಗುದಾಣವಾಗಿದ್ದ ಚುಂಚನಗಿರಿಯಲ್ಲಿ ಅವರ ಸೈನ್ಯದ ಮೇಲ್ವಿಚಾರಣೆಯನ್ನು ಚಂಗಾಳ್ವರಿಗೆ ಒಪ್ಪಿಸಿದಂತೆ ಕಾಣುತ್ತದೆ. ಮಹಾವೀರರಾಗಿದ್ದ ಇವರು ಚೋಳರ ಪರವಾಗಿ ಪಡ್ಯೆವೀಡು ರಾಜ್ಯವೆಂದು ಹೆಸರು ಪಡೆದಿದ್ದ ಉತ್ತರ ಆರ್ಕಾಟ್ ಮತ್ತು ಚಂಗಲ್ಪೇಟೆ ಜಿಲ್ಲೆಗಳ ಸುತ್ತಮುತ್ತಲ ಪ್ರದೇಶದಲ್ಲಿದ್ದ ಚೋಲರ ಸಾಮಂತರಾಗಿ ದುಡಿದವರು.[6] ಈ ವಂಶದವನೇ ಆದ ಶಂಭುರಾಯ ಎಂಬುವನು ಪಿರಿಯಾಪಟ್ಟಣ ತಾಲ್ಲೂಕಿನ ಚಾಮರಾಯ (ಶಂಭುರಾಯ)ನ ಕೋಟೆ, ಸೂಳೆಕೋಟೆ (ಸುಶೀಲೆಕೋಟೆ), ಕೋಮಲಾಪುರಗಳ ಸಂಸ್ಥಾಪಕನೆಂಬ ಐತಿಹ್ಯಗಳು ವಾಚಕ ಸಂಪ್ರದಾಯದಲ್ಲಿ ಉಳಿದು ಬಂದಿವೆ. ಚಂಗಳ್ಪೇಟೆಯಂತೆ ಮಳವಳ್ಳಿ ತಾಲ್ಲೂಕಿನ ಚಂಗವಾಡಿ ಎಂಬ ಊರು ಚಂಗಾಳ್ವರ ಹೆಸರಿನ ಊರಾಗಿರಬಹುದು. ಹೆಗ್ಗಡದೇವನ ಕೋಟೆಯ ತಾಲ್ಲೂಕಿನ ಅಂಕನಾಥಪುರದ ಶಾಸನ[7](ಕ್ರಿ.ಶ. ೧೦೩೭)ದಲ್ಲಿ, ಶಿಕಾರಿಪುರದ[8]೧೧೮೨ರ ಶಾಸನವೊಂದರ ‘ಆನನ ಕಾಶ್ಮೀರದ್ರವಂ ಪತ್ತಿದ ನಿಗಳದ ಚಂಗಾಳ್ವನಂಗಕ್ಕೆ ಸೇವಾ ಜನಿತಾ ರಾಗಂಬೊಲಾಗಳ್ ಮೆರೆವುದನುದಿನಂ ಸೋಮಭೂಮೀಶಪಾದಂ’ ಎಂಬ ಮಾತಿನಲ್ಲಿ ಚಿಕ್ಕನಾಯಕನಹಳ್ಳಿಯ[9] ಕ್ರಿ.ಶ. ೧೧೬೯ರ ಶಾಸನದ ‘ಚಂಗಾಳುವನೇ’ ರಿದ ಮಾತಂಗ ಮೊಗದೊಡ್ಡಿನಲಿ ಸಬಳದ ಮನೆಗಳು ಪಿಂಗದೆ ಪೋಲ್ತೆನೆದಿರ್ದವು’ ಎಂಬ ಉಲ್ಲೇಖಗಳಲ್ಲಿ ಚಂಗಾಳ್ವರು ಪ್ರಾರಂಭದಲ್ಲಿ ತಮ್ಮ ರಾಜ್ಯವನ್ನು ವಿಸ್ತರಿಸಲು ಹತ್ತೂ ದಿಕ್ಕುಗಳಲ್ಲೂ ಸುತ್ತಾಡಿದಂತೆ ಕಾಣುತ್ತದೆ.

ಚಂಗಾಳ್ವರು ತಾವು ಚಂದ್ರವಂಶದವರೆಂದೂ, ಯಾದವ ಕುಲಕ್ಕೆ ಸೇರಿದವರೆಂದೂ, ದ್ವಾರಾವತಿಯಿಂದ ಬಂದವರೆಂದೂ ಹೇಳಿಕೊಂಡಿದ್ದಾರೆ. ಅವರು ಬಹುಶಃ ೭ನೇ ಶತಮಾನದಲ್ಲಿನ ಚಾಲುಕ್ಯರ ಅಧೀನರಾಗಿದ್ದ ಆಳುಪರ ಒಂದು ಶಾಖೆಯಾಗಿದ್ದಿರಬಹುದು. ಆದರೆ ಚಂಗಾಳ್ವರ ಶಾಸನಗಳಲ್ಲಿ ಆಳುಪರ ವಿಷಯ ಎಲ್ಲೂ ಕಂಡುಬರುವುದಿಲ್ಲ.

‘ಚಂಗ’ ಎಂಬುದಕ್ಕೆ ಸುಂದರ ಎಂಬ ಅರ್ಥವಿರುವಂತೆ ಚಂದ್ರ ಎಂಬ ಅರ್ಥಕ್ಕೂ ಇದು ಹತ್ತಿರದ ಪದವಾಗಿದೆ. ಚಂಗಾಳ್ವರು ಸುಂದರ ಕಾಯರಾಗಿದ್ದುದರಿಂದ ಅವರ ರಾಜ ಸಂತತಿಗೆ ಚಂಗಾಳ್ವರು ಎಂಬ ಹೆಸರು ಬಂದಿರಬಹುದು. ಅಥವಾ ಬಹಳಷ್ಟು ರಾಜವಂಶಗಳು ತಮ್ಮನ್ನು ಚಂದ್ರವಂಶದವರೆಂದು ಕರೆದುಕೊಳ್ಳುವಂತೆ ಇವರೂ ಕರೆದುಕೊಂಡಿರಬಹುದು. ಚಂಗ ಅರಸರ ನಾಡು ಚಂಗನಾಡೆಂದು ಹೆಸರಾಯಿತೆಂದು ಕಾಣುತ್ತದೆ. ಚಂಗಾಳ್ವರನ್ನು ಕೊಡವರೆಂದೂ, ಕೊಡಗಿನ ರಾಜ ಸಂತತಿಯವರೆಂದೂ ಎಂ.ಪಿ.ಕಾರಿಯಪ್ಪ ಮತ್ತು ಶ್ರೀಮತಿ ಪೊನ್ನಮ್ಮ ಕಾರಿಯಪ್ಪ ಪುಷ್ಟೀಕರಿಸಲು ಪ್ರಯತ್ನಿಸಿದ್ದಾರೆ.[10] ಆದರೆ ಚಂಗಾಳ್ವರು ಕೊಡಗಿನ ಪ್ರದೇಶವನ್ನು ಆಳಿದರಾದರೂ ಕೊಡವರೇ ಇವರೆಂದು ಹೇಳುವುದು ಕಷ್ಟವೆನಿಸುತ್ತದೆ. ಏಕೆಂದರೆ ಕೊಡಗು ಪ್ರದೇಶದಲ್ಲಿರುವ ಜನರೆಲ್ಲ ಕೊಡವ ಜಾತಿಗೆ ಸೇರಿದವರಲ್ಲ.

ಪ್ರಾರಂಭದಲ್ಲಿ ಸ್ವತಂತ್ರರಾಗಿದ್ದ ಚಂಗಾಳ್ವರು ಮೂಲತಃ ಜೈನಧರ್ಮಿಯರಾಗಿದ್ದಂತೆ ಕಾಣುತ್ತದೆ. ಅವರು ಗಂಗರ ಅಧೀನಕ್ಕೊಳಪಟ್ಟಾಗ ಅವರ ಜೈನಧರ್ಮಕ್ಕೆ ಯಾವುದೇ ವಿಧವಾದ ಧಕ್ಕೆಯೂ ಬಂದಂತೆ ಕಾಣವುದಿಲ್ಲ. ಆದರೆ ಇವರು ಚೋಳರ ಆಕ್ರಮಣಕ್ಕೊಳಗಾದಾಗ ಶೈವಧರ್ಮವನ್ನು, ಹೊಯ್ಸಳರ ಆಡಳಿತಕ್ಕೆ ತಲೆಬಾಗಿದಾಗ ವೈಷ್ಣವ ಧರ್ಮವನ್ನು ಪೋಷಿಸಿಕೊಂಡು ಬಂದು ಹಾಲೇರಿ ರಾಜರ ಹಾಗೂ ವಿಜಯನಗರದ ಅರಸರ ಸಂಪರ್ಕದಿಂದಾಗಿ ಶೈವ ಹಾಗೂ ಜೈನಧರ್ಮಗಳನ್ನು ತೊರೆದು ವೀರಶೈವರಾದಂತೆ ಕಾಣುತ್ತದೆ ಆದರೆ ಚಂಗಾಳ್ವರು ಮೂಲತಃ ಒಕ್ಕಲಿಗರು. ನಾಗಮಂಗಲ ತಾಲ್ಲೂಕಿನ ಲಾಳನಕೆರೆಯಿಂದ ಹಿಡಿದು ಕೊಡಗಿನ ಸೋಮವಾರಪೇಟೆಯವರೆಗೂ ಈ ಒಕ್ಕಲಿಗರು ಹಬ್ಬಿಕೊಂಡಿದ್ದಾರೆ. ಇವರೆಲ್ಲರೂ ಭೈರವನ ಆರಾಧಕರಾಗಿದ್ದಾರೆ. ತಮ್ಮನ್ನು ಚಂಗಾಳ್ವರೆಂದು ಹೇಳಿಕೊಳ್ಳುವ ಲಾಳನಕೆರೆ ಮೂಲದ ಒಕ್ಕಲಿಗರು ಪಿರಿಯಾಪಟ್ಟಣ ತಾಲ್ಲೂಕಿನ ಕಿತ್ತೂರಿನಲ್ಲಿ ವಿಶೇಷವಾಗಿ ಕಾಣಿಸಿಗುತ್ತಾರೆ. ಇವರು ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ಪೇಟೆ, ಸೋಮವಾರಪೇಟೆ ತಾಲ್ಲೂಕುಗಳಲ್ಲಿ ಹರಡಿಕೊಂಡಿದ್ದಾರೆ. ಈ ಮೂಲದ ಕಿತ್ತೂರಿನ ದಮ್ಮನಹಳ್ಳಿ ಕೊಪ್ಪಲಿನ ಚಂಗೇಗೌಡರ ವಂಶಿಕರು ತಮ್ಮನ್ನು ಚಂಗಾಳ್ವರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.[11] ಇಂಥ ಕಂಠಸ್ಥ ಮೂಲಗಳಲ್ಲದೆ ಚಂಗಾಳ್ವರು ಒಕ್ಕಲಿಗರೆಂಬುದನ್ನು ಕಲ್ಲಹಳ್ಳಿಯ ಅರಸು ವಂಶದವರ ಕಡೆಯಿಂದಲೂ ಈಗಾಗಲೆ ಗುರುತಿಸಲಾಗಿದೆ. ನಂಜುಂಡ ಕವಿಯು ಪಾಂಚಾಲ ಗಂಗನಿಂದ ಕಮ್ಮಟದ ಬೇಡರ ರಾಮ ಕಥೆಯನ್ನು ಅರಿಯಲು ಲಿಂಗಧಾರಿಯಾದನೆಂದೂ ಆಗ ಆತ ತನ್ನ ಹೆಸರನ್ನು ಬದಲಾಯಿಸಿ ಕೊಂಡನೆಂದೂ ಹೇಳಿರುವ ದೇವಚಂದ್ರನ ಹೇಳಿಕೆಯನ್ನು ಸಂಶೋಧಕ ಶ್ರೀ ಹ.ಕ.ರಾಜೇಗೌಡರು ಪ್ರಸ್ತಾಪಿಸಿ ಕುಮಾರರಾಮ ಸಾಂಗತ್ಯದ ಹಸ್ತ ಪ್ರತಿಯೊಂದರ ಆರಂಭದಲ್ಲಿ ‘ಕಲ್ಲಹಳ್ಳಿ ದೇವರಸಗೌಡ ಹೇಳಿದ ರಾಮನಾಥನ ಸಾಂಗತ್ಯಕ್ಕೆ ಮಂಗಳ’ ಎಂದಿರುವುದನ್ನು ಹಾಗೂ ಮೈಸೂರು ಆರ್ಕಿಯಾಲಜಿಕಲ್ ರಿಪೋರ್ಟ್‌‌ನಲ್ಲಿನ ಶಾಸನವೊಂದರ ಬಗೆಗಿರುವ,

An image of Adiparameswara was Caused to be Carved at the instance of Rayagowda Son of Muddegowda who was the son of Malligowda and Jayagowda the disciple of Anantha Vidyadeva, whose guru was Jayadevan Battarakar.

ಎಂಬ ಹೇಳಿಕೆಯನ್ನು ಇಟ್ಟುಕೊಂಡು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಕಲ್ಲಹಳ್ಳಿಯ ದೇವರಾಜಾ ಅರಸ್ ಅವರ ಮನೆತನದವರು ಮೂಲತಃ ಒಕ್ಕಲಿಗರಾಗಿದ್ದು ಜೈನಧರ್ಮಾವಲಂಬಿಗಳಾಗಿದ್ದರೆಂಬುದನ್ನು ಸ್ಪಷ್ಟಪಡಿಸಿದ್ದಾರೆ.[12]

ಆದರೆ ಕಾಲಾನುಕ್ರಮದಲ್ಲಿ ಈ ಒಕ್ಕಲಿಗರು ಐದು ಹೋಳಾಗಿ ಒಡೆದು ಹೋದಂತೆ ಕಾಣಿಸುತ್ತದೆ. ಕೆಲವರು ಒಕ್ಕಲಿಗರಾಗಿಯೇ ಉಳಿದಿದ್ದರೆ ಮತ್ತೆ ಕೆಲವರು ವೀರಶೈವರಾದಂತೆ ಇನ್ನು ಕೆಲವು ಮೈಸೂರು ಅರಸರ ಸಂಬಂಧದಿಂದ ಅರಸು ಜಾತಿಯವರಾಗಿದ್ದು ಇನ್ನುಳಿದವರಲ್ಲಿ ಕೆಲವರು ತಮ್ಮನ್ನು ಕೊಡವರೆಂದು ಗುರುತಿಸಿಕೊಂಡಂತೆ ಬೂವನಹಳ್ಳಿ, ಹನಸೋಗೆ, ಸಾಲಿಗ್ರಾಮ, ಯಮಗುಂಬ ಮುಂತಾದಡೆಗಳಲ್ಲಿನ ಕೆಲವರಾದರೂ ತಮ್ಮನ್ನು ಜೈನರನ್ನಾಗಿ ಗುರುತಿಸಿಕೊಂಡಿದ್ದಾರೆ.

ಚಂಗಾಳ್ವರ ರಾಜ್ಯಸ್ಥಾಪನೆಯ ವಿಚಾರ ಅರೆ ಇತಿಹಾಸ ಹಾಗೂ ಐತಿಹ್ಯಗಳಿಂದ ಕೂಡಿದೆ. ಹತ್ತನೆಯ ಶತಮಾನದಲ್ಲಿ ದ್ವಾರಕ ಪಟ್ಟಣದಿಂದ ದಕ್ಷಿಣದ ಕಡೆಗೆ ವಲಸೆ ಬಂದ ಜೈನ ಕ್ಷತ್ರಿಯ ವಿಕ್ರಮ ಚಂಗಾಳ್ವನು ತುಂಬಾ ಎಂಬಲ್ಲಿ ತನ್ನೊಂದಿಗೆ ಬಂದ ೫೦೦-೬೦೦ ಕುಟುಂಬಗಳೊಂದಿಗೆ ನೆಲೆಸಿದ.[13] ಅವನು ಸುತ್ತಮುತ್ತಲ ಬೇಡರ ನಾಯಕರನ್ನು ಸೋಲಿಸಿ ರಾಜ್ಯವನ್ನು ವಿಸ್ತರಿಸಿದ. ಬೇಡರ ನಾಯಕರಲ್ಲಿ ಪ್ರಬಲರಾದವರು ವಲಸೆ ಬಂದ ಚಂಗಾಳ್ವರ ಹೆಣ್ಣುಗಳ ಸೌಂದರ್ಯಕ್ಕೆ ಸೋತು ವಿವಾಹ ಸಂಬಂಧಕ್ಕೆ ಒತ್ತಾಯ ಮಾಡಿದಾಗ ವಿಕ್ರಮ ಚಂಗಾಳ್ವನು ವಿವಾಹಕ್ಕೆ ಚಪ್ಪರವನ್ನು ಕಟ್ಟಿಸಿ, ಚಪ್ಪರದ ಕೊನೆಯಲ್ಲಿ ನಿರ್ಮಿಸಿದ ಕತ್ತಲೆಯ ಕೋಣೆಯಲ್ಲಿ ಕಂದಕವನ್ನು ತೋಡಿಸಿ ಪೂಜೆಯ ನೆಪದಿಂದ ಬೇಡರನ್ನು ಒಬ್ಬೊಬ್ಬರನ್ನಾಗಿ ಕಳುಹಿಸಿ, ಅವರನ್ನು ಕಡಿದು ಕಂದಕದಲ್ಲಿ ಹಾಕಿಸಿದ. ಬೇಡರ ಉಪದ್ರವ ಹೀಗೆ ಮುಕ್ತಾಯವಾಯಿತು.[14] ಮೈಸೂರರಸರ ಸಂಬಂಧವನ್ನು ಕೇಳಿ ಬಂದ ಕಾರುಗಳ್ಳಿ ಮಾರನಾಯಕನನ್ನು ಸಂಹರಿಸಿದ ಸಂಘಟನೆಯು ಇದನ್ನೆ ಹೋಲುತ್ತಿದ್ದು ಇದೊಂದು ಸಂಚಾರಿ ಆಶಯವಾಗಿದೆ. ಈ ವಿಕ್ರಮ ಚಂಗಾಳ್ವನು ತೀರ್ಥಂಕರ ಬೆಟ್ಟದ ಬಳಿ (ಬೆಟ್ಟದಪುರದ ಈಗಿನ ಸಿಡ್ಲು ಮಲ್ಲಿಕಾರ್ಜುನನ ಬೆಟ್ಟ. ಇದ ಮೊದಲು ಮಲ್ಲಿನಾಥ ತೀರ್ಥಂಕರನ ಬಸದಿಯಿದ್ದ ಬೆಟ್ಟವಾಗಿತ್ತು.) ಬಿಡಾರ ಬಿಟ್ಟಿದ್ದಾಗ ಮೊಲವೊಂದು ಬೇಟೆಯ ನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಕಂಡು ಆ ಭೂಮಿಯು ರಾಜ್ಯ ಸ್ಥಾಪನೆಗೆ ಯೋಗ್ಯವಾದ ಗಂಡುಭೂಮಿ ಎಂದು ತಿಳಿದು ಅಲ್ಲಿ ಕೋಟೆ ಸಮೇತ ಪಟ್ಟವನ್ನು ಕಟ್ಟಿಸಿ ಅದನ್ನು ಬೆಟ್ಟದಪುರವೆಂದು ಕರೆದ. ತರುವಾಯ ಅವನು ಬೆಟ್ಟದಪುರದ ಆಡಳಿತವನ್ನು ತನ್ನ ಮಗ ಚಂಗಲರಾಯನಿಗೂ ಕಲ್ಲಹಳ್ಳಿಯನ್ನು ತನ್ನ ಮಂತ್ರಿಯೂ ಹಾಗೂ ಕುಲದವನೂ ಆದ ಮಂಗರಸನಿಗೂ ವಹಿಸಿದನೆಂದು ಹೇಳಲಾಗಿದೆ.[15] (ಗಂಡುಭೂಮಿಯ ಕಲ್ಪನೆಯೂ ಒಂದು ಸಂಚಾರಿ ಆಶಯವೇ ಆಗಿದೆ. ಇಲ್ಲಿ ಹೇಳಿರುವ ಜೈನ ಕ್ಷತ್ರಿಯ ಮಂಗರಸನು ೧೫-೧೬ನೇ ಶತಮಾನದ ಅಂತರದಲ್ಲಿದ್ದ ಕಲ್ಲಹಳ್ಳಿಯ ಕವಿ ಮಂಗರಸನ ಪೂರ್ವಿಕನೇ ಆಗಿದ್ದಾನೆ.)

ಚಂಗಲರಾಯನ ಬಗೆಗೆ ಜನಪದ ಮೂಲವೆನಿಸುವ ಹಲವಾರು ದಂತಕಥೆಗಳಿವೆ. ಒಂದು ಕಥೆಯ ಪ್ರಕಾರ ಅವನ ಒಂದು ಕಿವಿ ಕತ್ತೆಯ ಕಿವಿಯಂತಿದ್ದು ಆ ರಹಸ್ಯವು ಅವನ ಕ್ಷೌರಿಕನಿಗೆ ಮಾತ್ರ ತಿಳಿದಿತ್ತು. ಕೆಲ್ಸಿಯು ಆ ರಹಸ್ಯವನ್ನು ತನ್ನಲ್ಲೇ ಇರಿಸಿಕೊಳ್ಳಲಾಗದೇ ಅರಮನೆಯ ಹೊರಾಂಗಣದಲ್ಲಿದ್ದ ಗಂಧದ ಮರಕ್ಕೆ ತಿಳಿಸಿದ. ಸ್ವಲ್ಪ ದಿನಗಳ ತರುವಾಯ ದೊಂಬರ ತಂಡವೊಂದು ಆಟವಾಡಿ ತನ್ನನ್ನು ಸಂತೋಷಗೊಳಿಸಲು ಚಂಗಲರಾಯನು ಅವರಿಗೆ ಡೋಲು ಮಾಡಿಕೊಳ್ಳಿರೆಂದು ಆ ಗಂಧದ ಮರವನ್ನು ಕಡಿದು ಕೊಟ್ಟ. ಅವರು ತಯ್ಯಾರಿಸಿದ ಡೋಲು ಕೆಲ್ಸಿಯು ಹೇಳಿದ್ದ ಅರಸನ ಕಿವಿಯ ರಹಸ್ಯದ ಹೊರತು ಯಾವ ನಾದವನ್ನು ಹೊರಡಿಸಲಿಲ್ಲ. ‘ಅರಸನ ಕಿವಿ ಕತ್ತೆ ಕಿವಿ’ ಎಂದು ಡೋಲು ಬಡಿದುಕೊಳ್ಳಲು ಅವನಿಗೆ ನಾಚಿಕೆಯು ಆಯಿತು. ಇನ್ನೊಂದು ದಂತಕಥೆಯ ಪ್ರಕಾರ ಚಂಗಲರಾಯನ ತೋಳುಗಳು ಮೊಣಕಾಲನ್ನು ಮುಟ್ಟುತ್ತಿದ್ದವು. ಜೈನನಾದ ಅವನು ಜೀವಂತ ಪ್ರಾಣಿಗಳನ್ನು ಎಲ್ಲಿ ತುಳಿದು ಬಿಡುವೆನೋ ಎಂಬ ಧರ್ಮ ಭೀತಿಯಿಂದ ತನ್ನ ಪಾದಗಳನ್ನು ಭೂಮಿಯ ಮೇಲೆ ಇರಿಸುತ್ತಿರಲಿಲ್ಲವಾಗಿ ಅವನ ಅಂಗಾಲ ತುಂಬಾ ಕೂದಲು ಬೆಳೆದಿತ್ತು.[16]

ಚಂಗಾಳ್ವರು ಮೊದಮೊದಲು ಎಡತೊರೆ ಹಾಗೂ ಹನಸೋಗೆಯ ಜೈನ ಶಾಸನಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ಅವರು ಗಂಗವಾಡಿಯನ್ನು ಗೆದ್ದುಕೊಂಡು ಚೋಳರ ಅಧೀನರಾಗಿ ಅವರ ಸಾಮಂತರಾದರು.ಮೈಸೂರು ಜಿಲ್ಲೆಯ ದಕ್ಷಿಣ ಮತ್ತು ಪೂರ್ವ ಭಾಗಗಳು, ಅರಕಲಗೂಡು, ನಾಗಮಂಗಲ (ಮಂಡ್ಯ ಜಿಲ್ಲೆ) ಮೊದಲಾದ ಪ್ರದೇಶಗಳು ಚೋಳರ ವಶವಾದವು. ಹುಣಸೂರು ಮತ್ತು ಕೊಡಗಿನ ಭಾಗಗಳಲ್ಲಿ ಚಂಗಾಳ್ವರು ರಾಜರಾಜಚೋಳನ (೯೮೫-೧೦೧೬) ನಿಯಂತ್ರಣಕ್ಕೆ ಒಳಪಟ್ಟಿದ್ದರು. ಚೋಳರು ಚಂಗಾಳ್ವರನ್ನು ಸೋಲಿಸಿದ್ದು ೧೦೦೪ ರ ಪನಸೋಗೆ(ಹನಸೋಗೆ) ಯುದ್ಧದಲ್ಲಿ. ಚೋಳರ ದಂಡನಾಯಕ ಪಂಚವಾನ ಮಹಾರಾಯನಿಗೆ ಕೊಂಗಾಳ್ವ ಅರಸ ಮನಿಜ (ಸುಮಾರು ೧೦೦-೧೦೨೦) ಚಂಗಾಳ್ವರ ವಿರುದ್ಧ ನೆರವು ನೀಡಿದ ಕಾರಣ ಚಂಗಾಳ್ವರಿಗೆ ಸೋಲಾಯಿತು. ಚಂಗಾಳ್ವರಿಗೆ ಸೇರಿದ ಕೊಡಗಿನ ಕುಡುಮಲೈ ನಾಡು ರಾಜರಾಜಚೋಳನ ಸ್ವಾಧೀನವಾಯಿತು. ರಾಜೇಂದ್ರ ಚೋಳನು ತನ್ನ ನೆರವಿಗೆ ಬಂದ ಕೊಂಗಾಳ್ವ ಮನಿಜನಿಗೆ ಮಾಳವಿ (ಮಾಳಂಬಿ) ಮತ್ತು ಅರಕಲಗೂಡು ಏಳುಸಾವಿರ ಸೀಮೆಯನ್ನು ಕೊಟ್ಟುದಲ್ಲದೆ ‘ಕ್ಷತ್ರಿಯ ಶಿಖಾಮಣಿ ಕೊಂಗಾಳ್ವ’ ಎಂಬ ಬಿರುದನ್ನು ನೀಡಿದನು.[17]

ಕ್ರಿ.ಶ. ೧೦೩೬ರಲ್ಲಿ ತೆಲುಗರ ಮಾರಿ ಚಂಗಾಳ್ವನು ತನ್ನ ತಮ್ಮಂದಿರೊಡನೆ ತುರುಗಳನ್ನು ಕೊಂಡುಯ್ಯುತ್ತಿರಲು ಮೈಸೂರು ತಾಲ್ಲೂಕು ಮಲ್ಲೇಗೌಡನ ಕೊಪ್ಪಲಿನ ಬಳಿ ನಾಗಯ್ಯನ ಮಗ ಬಾಗುಳಿ ಸಿರಿಯಣ್ಣ ಚಂಗಾಳ್ವನ ಜೊತೆ ಕಾದಿ ತುರುಗಳನ್ನು ಮರಳಿಸುವಲ್ಲಿ ಸತ್ತ. ಅವನ ಹೆಸರಿನಲ್ಲಿ ನಿಲ್ಲಿಸಿದ ಪರೋಕ್ಷ ವಿನಯದ ಕಲ್ಲಿನ ವಿವರಗಳಿಂದ ಚಂಗಾಳ್ವರ ರಾಜ್ಯದ ವ್ಯಾಪ್ತಿ ಅರಿವಾಗುತ್ತದೆ.[18] ಆದರೆ ಎಡತೊರೆಯ ಹಂಪಾಪುರದಲ್ಲಿ ಸಿಕ್ಕಿರುವ ವೀರಗಲ್ಲಿನ ವಿವರಗಳ ಪ್ರಕಾರ ಒಂದನೆ ರಾಜೇಂದ್ರ ಚೋಳನ (೧೦೧೨-೧೦೪೪) ಪ್ರಭುತ್ವವನ್ನು ನನ್ನಿ ಚಂಗಾಳ್ವನು (ಸು.೧೦೩೩-೬೦) ಸ್ವೀಕರಿಸಿರುವುದು ಸ್ಪಷ್ಟವಾಗಿದೆ.[19]

 

[1]ಎಫಿಗ್ರಾಫಿಯ ಕರ್ನಾಟಕ. (ಎ.ಕ.) ಸಂ. ೪. ಭಾಗ.೨ Introduction.

[2] Karnataka Through The Ages. Govt of Mysore ೧೯೬೮ P. ೪೦೭

[3] Derret J.D.M : The Hoysalas, Oxford university Press (London. ೧೯೫೭) chapter I

[4]ಎ.ಕ.ಸಂ. ನಾಲ್ಕು ೪ ಯಳಂದೂರು ತಾಲ್ಲೂಕಿನ ೧೬೭ನೇ ಶಾಸನ.

[5]ದೇಜಗೌ. ಸ್ಥಳನಾಮ ವ್ಯಾಸಂಗ ಸಹ್ಯಾದ್ರಿ ಪ್ರಕಾಶನ (ಮೈಸೂರು ೧೯೯೦) ಪುಟ ೧೧೯.

[6]ಎ.ಕ.ಸಂ. ೭ ನಾಗಮಂಗಲ. ೬೨ ಲಾಳನಕೆರೆ ಶಾಸನ.

[7]ಎ.ಕ.ಸಂ. ೩ ಹೆಗ್ಗಡದೇವನ ಕೋಟೆ ೭ ಅಂಕನಾಥಪುರ ಶಾಸನ.

[8]ಎ.ಕ.ಸಂ. ೭ ಶಿಕಾರಿಪುರ. ೧೯೭-೪೫.

[9]ಎ.ಕ.ಸಂ. ೧೬ ಚಿಕ್ಕನಾಯಕನಹಳ್ಳಿ ೯೮-೩೪.

[10] M.P.Cariappa and Ponnamma. The Corrge and their Origin. Geeta Book House. Mysore (೧೯೮೧) P. ೨೫೪.

[11]ಈ ಮಾಹಿತಿ ಒದಗಿಸಿದವರು ಪುಟ್ಟಬಸವೇಗೌಡ ಎಂ.ಎ. ನಿವೃತ್ತ ಸಹಾಯ ನಿರ್ದೇಶಖರು, ಪ್ರಸಾರಾಂಗ, ಮೈಸೂರು. ವಿ.ವಿ. ಮೈಸೂರು.

[12] M.A.R. ಮೈಸೂರು ಆರ್ಕಿಯಾಲಜಿಕಲ್ ರಿಪೋರ್ಟ್ (೧೯೨೫) P ೧೦೯ ನೋಡಿ ಹ.ಕ. ರಾಜೇಗೌಡು ಸಂಪಾದಿಸಿರುವ ಮಂಗರಸನ ಶ್ರೀಪಾಲ ಚರಿತೆಗೆ           ಬರೆದಿರುವ ಪೀಠಿಕೆ ಕ.ಅ.ಸಂ. ಮೈ.ವಿ.ವಿ. ಮಾಸೂರು (೧೯೭೭) ಪು. XXXIV

[13] C.Hayavadana Rao. Mysore Gazetteer Vol V.P. ೬೪೪.

[14]ಹ.ಕ. ರಾಜೇಗೌಡ. ಪೂರ್ವೋಕ್ತ ಪು. XVI-XVIII.

[15] M.A.R. (೧೯೨೫. P ೧೪)

[16] C.Hayavadana Rao. Mysore Gazetteer Vol V.Pag. ೬೪೪.

[17]ಎ.ಕ.ಸಂ. ೧ (ಕೊಡಗು) ೬೫ Mys Gaz Vol II Part ೨ P. ೯೫೨.

[18]ಎ.ಕ.ಸಂ. ೫ ಮೈಸೂರು ೧೧೩ ಮತ್ತು ೧೧೪.

[19] M.A.R. ೧೯೧-೧೩ Part II Para ೬೯.