ಸಾಂತರರ ಕಾಲದ ಜೈನ ಧರ್ಮ

ಸಾಂತರರು ಮೂಲತಃ ಜೈನ ಧರ್ಮಿಯರಾಗಿದ್ದು ತಮ್ಮನ್ನು ಪಾರ್ಶ್ವನಾಥ ತೀರ್ಥಂಕರನ ಉಗ್ರವಂಶದವರೆಂದು, ಉತ್ತರ ಮಥುರದಿಂದ ಬಂದವರೆಂದು, ಪದ್ಮಾವತೀಲಬ್ಧ ವರಪ್ರಸಾದರೆಂದು ಕರೆದುಕೊಂಡಿದ್ದಾರೆ.

ಇಂದಿಗೂ ಸಹ ಹುಂಚವು ಒಂದು ಜೈನ ಮಠವನ್ನು ಹೊಂದಿದೆ. ಇಲ್ಲಿ ಇಂದಿಗೂ ಪದ್ಮಾವತಿ ದೇವಿ ಪೂಜಿಸಲ್ಪಡುತ್ತಿದ್ದು ಅನೇಕ ಪಾರ್ಶ್ವನಾಥ ಬಸದಿಗಳು ಇಲ್ಲಿವೆ.

ಅವರ ಶಾಸನಗಳು ಜೈನ ಆಚಾರ್ಯ ಪರಂಪರೆಯ ಬಗ್ಗೆ ತಿಳಿಸುತ್ತಾ ಕುಂದಕುಂದಾನ್ವಯ ಮೂಲಗಣ, ನಂದಿಗಣ, ದೇಸಿಗಣ, ಪುಸ್ತಕ ಗಚ್ಚ ಮೊದಲಾದವುಗಳನ್ನು ಉಲ್ಲೇಖಿಸುತ್ತವೆ. ಕೆಲವೊಮ್ಮೆ ದ್ರಮಿಳ ಸಂಘದ ಉಲ್ಲೇಖವು ಬರುತ್ತದೆ. ಅಂತೆಯೇ ಸಾಂತರ ರಾಜ ರಾಣಿಯರು, ಅವರ ಮಕ್ಕಳೂ ಕೆಲವೊಂದು ಅಧಿಕಾರಿ ವರ್ಗದವರೂ, ವರ್ತಕರು ಹಾಗೂ ಸಾಮಾನ್ಯ ಪ್ರಜೆಗಳು ಈ ಜೈನ ಧರ್ಮವನ್ನು ಪ್ರೋತ್ಸಾಹಿಸಿರುವುದು ಸಾಂತರರ ಶಾಸನಗಳ ಅಧ್ಯಯನದಿಂದ ತಿಳಿದು ಬರುತ್ತದೆ. ಅದರಲ್ಲೂ ಜೈನ ಧರ್ಮಕ್ಕೆ ರಾಜ ಪ್ರೋತ್ಸಾಹ ಬಹಳವಾಗಿ ದೊರಕಿರುವುದು ಎದ್ದು ಕಾಣುವ ಅಂಶವಾಗಿದೆ. ಉದಾಃ ತೊಲಾ ಪುರುಷ ವಿಕ್ರಮಾದಿತ್ಯ ಸಾಂತರನು ಮೋನಿ ಭಟ್ಟಾರರ ಶಿಷ್ಯನಾಗಿ ಗುಡ್ಡದ ಮೇಲೆ ಬಾಹುಬಲಿಯ ಬಸದಿಯನ್ನು ಕಟ್ಟಿಸಿದುದರ ಉಲ್ಲೇಖ ಬರುತ್ತದೆ. ಹಾಗೆಯೇ ಈ ಬಸದಿಗಾಗಿ ಅವರು ಮಾಡಿದ ದಾನದ ವಿವರಗಳೂ ಇವೆ.[1]

ನಂತರ ಆಳ್ವಿಕೆ ಮಾಡಿದ ಭುಜಬಳ ಶಾನ್ತರನು ಜಿನಾಲಯವನ್ನು ಕ್ರಿ.ಶ. ೧೦೬೬ರಲ್ಲಿ ನಿರ್ಮಿಸಿ ತನ್ನ ರಾಜಗುರು ಕನಕನಂದಿ ದೇವರಿಗೆ ಭೂಮಿಯನ್ನು ಉಂಬಳಿಯಾಗಿ ಬಿಟ್ಟು ಕೊಡುವುದರೊಂದಿಗೆ ಅದನ್ನು ಒಪ್ಪಿಸಿದನು.[2]ವೀರ ಶಾನ್ತರನು ನೊಕ್ಕಿಯಬ್ಬೆ ಜಿನಗೇಹವನ್ನು ಮಾಡಿಸಿ ಅದಕ್ಕೆ ಕೆಲವೊಂದು ಭೂಮಿಗಳನ್ನು ತೆರಿಗೆ ರಹಿತವನ್ನಾಗಿ ದಾನ ಮಾಡಿದನು. ತ್ರಿಭುವನಮಲ್ಲ ಸಾಂತರನು ಆನಂದೂರಿನಲ್ಲಿ ಬಸದಿಯನ್ನು ನಿರ್ಮಿಸಿದ ಉಲ್ಲೇಖ ಬರುತ್ತದೆ.[3]ಒಟ್ಟಿನಲ್ಲಿ ಪುರಾಣ ಕಥೆಯಂತೇ ಜಿನದತ್ತನಿಂದ ರಾಜಧಾನಿಯಾಗಿ ಅಂಗೀಕರಿಸಲ್ಪಟ್ಟು ಹೊಂಬುಜದಲ್ಲಿ ಲೊಕ್ಕಯಬ್ಬೆಯು ನೆಲೆ ನಿಂತಿದ್ದಕ್ಕಾಗಿ ಜಿನದತ್ತನು ಲೊಕ್ಕಿಯಬ್ಬೆಗೆ ಅಲ್ಲಿ ಜಿನಗೇಹವನ್ನು ಕಟ್ಟಿಸಿದನೆಂದು ಅವರ ಶಾಸನಗಳಿಂದಲೂ ತಿಳಿದು ಬರುತ್ತದೆ. ಅಲ್ಲಿಂದ ಪ್ರಾರಂಭವಾಗುವ ಅವರ ಜೈನ ಧರ್ಮದ ಪರಿಪಾಲನೆ ಅವರ ಆಳ್ವಿಕೆಯ ಕಾಲದುದ್ದಕ್ಕೂ ಮುಂದುವರೆದುಕೊಂಡು ಹೋಗಿರುವುದು ಕಂಡು ಬರುತ್ತದೆ. ಚಟ್ಟಲದೇವಿ ತಾನು ಸಾಕಿದ ನಾಲ್ಕು ಜನ ರಾಜಕುಮಾರರೊಂದಿಗೆ ತಮ್ಮ ಹಿರಿಯರಿಗೆ ಪರೋಕ್ಷ ವಿನಯವನ್ನು ಮಾಡಲು ಪಂಚ ಬಸದಿಯನ್ನು ಕಟ್ಟಿಸಿ, ಆ ಬಸದಿಗಾಗಿ ಮಾಡಿದ ದಾನದ ವಿವರಗಳು ಪ್ರಮುಖವಾಗಿವೆ.

ನಂತರ ಇನ್ನೊಂದು ಶಾಸನದಲ್ಲಿ ತೊಲಾಪುರುಷ ವಿಕ್ರಮ ಶಾನ್ತರನ ಬಳೆಯಾಕೆ ಪಾಳಿಯಕ್ಕನು ಕಲ್ಲು ಬಸದಿಯನ್ನು ಹಾಗೂ ಇನ್ನೊಂದು ಬಸದಿಯನ್ನು ಕಟ್ಟಿಸಿದಾಗ ಆ ಬಸದಿಗಾಗಿ ರಾಜನು ಮಾಡಿದ ದಾನದ ವಿವರಗಳೂ ಶಾಸನಗಳಿಂದ ವಿದಿತವಾಗುತ್ತವೆ.[4]ಕ್ರಿ.ಶ. ೧೧೪೦ರಲ್ಲಿ ಇದ್ದ ತ್ರಿಭುವನಮಲ್ಲ ಸಾಂತರನ ಮಗಳಾದ ಪಂಪಾದೇವಿಯು ಎರಡನೇ ಅತ್ತಿಮಬ್ಬೆ ಎಂದೆನಿಸಿಕೊಂಡಿದ್ದಳು ಎಂದು ಶಾಸನಗಳು ತಿಳಿಸುತ್ತವೆ.[5]ಹಾಗೆಯೇ ಶಾಸನದಲ್ಲಿ ಉಲ್ಲೇಖಗೊಂಡಿರುವ ತೈಲಪನ ಪತ್ನಿ ಅಕ್ಕಾದೇವಿಯು ಅಂಧಾಸುರದಲ್ಲಿ ಒಂದು, ಸೇತುವಿನಲ್ಲಿ ಎರಡು ಬಸದಿಗಳನ್ನು ನಿರ್ಮಿಸಿ ಅಭಿನವ ಅತ್ತಿಮಬ್ಬೆ ಎಂದೆನಿಸಿಕೊಂಡಳೆಂದು ಶಾಸನಗಳು ತಿಳಿಸುತ್ತವೆ.[6]

ರಾಜವಂಶದವರಲ್ಲದೇ ಸಮಾಜದ ಇತರೆ ಕೆಲವು ವರ್ಗದ ಜನರೂ ಸಹ ಜೈನ ಮತಾವಲಂಬಿಗಳಾಗಿದ್ದು ಆ ಸಮಾಜದ ಜೈನಧರ್ಮದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಉದಾ: ಅಮ್ಮಣ್ಣ ಶೆಟ್ಟಿಯ ಮಗನಾದ ಹೆಸರಾಂತ ಜೈನಾಚಾರ್ಯ ದಿವಾಕರ ನಂದಿ ಸಿದ್ಧಾಂತರ ಶಿಷ್ಯನಾದ ನೊಕ್ಕಯ್ಯ ಶೆಟ್ಟಿ, ಶಾಸನಗಳು ಇವನನ್ನು ಪಟ್ಟಣ ಸ್ವಾಮಿ ನೊಕ್ಕಯ್ಯಶೆಟ್ಟಿ ಎಂದೇ ಕರೆದಿವೆ. ಈ ನೊಕ್ಕಯ್ಯಸೆಟ್ಟಿಯು ಹೊಂಬುಜದಲ್ಲಿ ನಿರ್ಮಿಸಿದ ಪಟ್ಟಣಸ್ವಾಮಿ ಜಿನಾಲಯ, ಅನೇಕ ಕೆರೆಗಳ ನಿರ್ಮಾಣ ಹಾಗೂ ಅನೇಕ ಭೂದಾನಗಳ ವಿವರಗಳನ್ನು ಶಾಸನಗಳು ಒದಗಿಸುತ್ತವೆ.[7]

ಇದಲ್ಲದೆ ಇವರ ಕಾಲಕ್ಕೆ ಸಂಬಂಧಪಟ್ಟ ಅನೇಕ ನಿಷಿಧ ಕಲ್ಲುಗಳು ಈ ಪ್ರಾಂತ್ಯದಲ್ಲಿ ಲಭ್ಯವಿದ್ದು ಅವುಗಳು ಆ ಕಾಲದಲ್ಲಿ ಸಮಾಧಿ ಮರಣವನ್ನಪ್ಪಿದ ಜೈನಾಚಾರ್ಯರ ಅಥವಾ ಶ್ರಾವಿಕೆಯರ ವಿವರಗಳನ್ನು ನೀಡುತ್ತವೆ. ಈ ನಿಷಿಧಿ ಕಲ್ಲುಗಳನ್ನು ಸಾಮಾನ್ಯವಾಗಿ ಬಸದಿಗಳ ಪರಿಸರದಲ್ಲಿ ನಿಲ್ಲಿಸಿರುತ್ತಾರೆ. ಉದಾ: ಕ್ರಿ.ಶ. ಸು. ೧೨೪೪-೫೬ ರಲ್ಲಿ ಮಹಾಮಂಡಳಾಚಾರ್ಯರೂ ರಾಜಗುರುಗಳೂ ಆದ ಇಮ್ಮಡಿ ಪುಷ್ಟಸೇನದೇವ ಹಾಗೂ ಆಕಳಂಕದೇವ ಎಂಬ ಇಬ್ಬರು ಆಚಾರ್ಯರು ಸನ್ಯಾಸನ ವಿಧಿಯಿಂದ ಮುಡಿಪಿ ಮುಕ್ತಿಪಥವನ್ನು ಪಡೆದರು.[8]

ಅಂತೆಯೇ ಈ ಸಾಂತರ ಅರಸರ ರಾಜಗುರುಗಳಾದ ಜೈನ ಮುನಿಗಳ ಬಗ್ಗೆಯೂ ಶಾಸನಗಳು ಸಾಕಷ್ಟು ಉಲ್ಲೇಖಿಸಿದ್ದು, ಅವರಲ್ಲಿ ಪ್ರಮುಖರಾದ ಕೆಲವರು ಯಾರೆಂದರೆ, ನನ್ನಿ ಶಾನ್ತರನ ಗುರುಗಳಾದ ವಿಜಯಭಟ್ಟಾರಕರಶಿಷ್ಯರು ಆದಂತಹ ಅಜಿತ ಪಂಡಿತದೇವ. ಹಾಗೆಯೇ ಶಾಸನದಲ್ಲಿ ಕಂಡು ಬರುವ ಅನೇಕ ಜೈನ ಆಚಾರ್ಯರಲ್ಲಿ ವಾದಿಸೇನ ಕನಕಸೇನ ಭಟ್ಟಾರಕರು, ಸಿದ್ಧಾಂತ ದೇವ ಮೊದಲಾದವರು. ಹಾಗೆಯೇ ವಿಕ್ರಮ ಶಾನ್ತರನ ಕಾಲದಲ್ಲಿದ್ದ ಪ್ರಮುಖ ಆಚಾರ್ಯರು ಮೋನಿ ಸಿದ್ಧಾಂತ ಭಟ್ಟಾರ ಅಥವ ಮೌನಿದೇವ.[9]ಅಂತೆಯೇ ಒಡೆಯದೇವರು, ಕಮಳ ಭದ್ರ ಮುನಿ, ಕುಮಾರಸೇನ ದೇವರು, ಅಜಿತ ಸೇನ ದೇವರು, ವಾಸು ಪೂಜ್ಯ ಸಿದ್ಧಾಂತ ದೇವರು ಮುಂತಾದವರು, ಹೀಗೆ ಜೈನ ಆಚಾರ್ಯರ ಒಂದು ದೊಡ್ಡ ಪಟ್ಟಿಯೇ ನಮಗೆ ಅವರ ಶಾಸನಗಳಿಂದ ತಿಳಿದುಬರುತ್ತದೆ.

ಸಾಂತರರ ಪ್ರಮುಖ ಅರಸಿಯಾದ ಚಾಗಲದೇವಿಯು ನೊಕ್ಕಯಬ್ಬೆಯ ಬಸದಿಯ ಮುಂದೆ ಮಾಡಿಸಿರುವ ಮಕರ ತೋರಣದ ಉಲ್ಲೇಖವು ಶಾಸನಗಳಿಂದ ತಿಳಿದು ಬರುತ್ತದೆ.[10]ಇಲ್ಲಿ ನಾವು ಗಮನಿಸಬಹುದಾದ ಮುಖ್ಯ ವಿಷಯವೇನೆಂದರೆ ಪದ್ಮನಾಭಕವಿಯು ಬರೆದಿರುವ ಜಿನದತ್ತ ಚರಿತೆಯಲ್ಲಿ ಉಲ್ಲೇಖವಾಗಿರುವ ನೊಕ್ಕಯಬ್ಬೆ ಬಸದಿಯ ನಿರ್ಮಾಪಕ ಜಿನದತ್ತ. ಆದರೆ ಆ ಬಸದಿಯು ಹಳೆಯದಾಗಿ ಹೋದುದರಿಂದ ವೀರಶಾನ್ತರನು ಅಲ್ಲಿ ತಮ್ಮ ಕುಲದೇವತೆಯಾದ ಲೊಕ್ಕಯಬ್ಬೆಗೆ ಹೊಸ ಬಸದಿಯನ್ನು ಮಾಡಿಸಿದನೆಂದು ಕಂಡು ಬರುತ್ತದೆ. ಸಾಂತರರ ಕಾಲದ ಕೆಲವು ಬಸದಿಗಳು ಶಾಸನದಲ್ಲಿ ಉಲ್ಲೇಖಗೊಂಡಿದ್ದು ಅವು ಯಾವುವೆಂದರೆ ಗುಡ್ಡದ ಬಸದಿ, ಪಾಳಿಯಕ್ಕನ ಬಸದಿ, ಪಂಚ ಬಸದಿ ಮುಂತಾದವು. ಆ ಬಸದಿಗಳ ವಾಸ್ತು ಶಿಲ್ಪ ಶೈಲಿಯನ್ನು ನಂತರ ಪ್ರತ್ಯೇಕವಾಗಿ ಚರ್ಚಿಸಲಾಗುವುದು.

ಸಾಂತರರ ಕಾಲದ ಇತರ ಧರ್ಮಗಳು

ಈಗಾಗಲೇ ತಿಳಿಸಿದಂತೆ ಸಾಂತರರು ಮೂಲತಃ ಜೈನ ಧರ್ಮಿಯರಾಗಿದ್ದರೂ ಬೇರೆ ಧರ್ಮಗಳ ಬೆಳವಣಿಗೆಗೂ ಸಹಾಯಕರಾಗಿದ್ದರೆಂದು ಶಾಸನಗಳ ಮೂಲಕ ತಿಳಿಯುತ್ತದೆ. ಅವರ ರಾಜಧಾನಿಯಾಗಿದ್ದ ಹೊಂಬುಜದಲ್ಲಿ ಜೈನಬಸದಿಗಳ ಜೊತೆಗೆ ಕೆಲವೊಂದು ಶೈವ ದೇವಾಲಯಗಳೂ ಇರುವುದು ಕಂಡು ಬರುತ್ತದೆ. ಆದರೆ ಅವರ ರಾಜಧಾನಿಪಟ್ಟಣದಲ್ಲಿ ಯಾವುದೇ ವೈಷ್ಣವ ದೇವಾಲಯ ಕಂಡು ಬರುವುದಿಲ್ಲ.

ಆದರೂ ಅವರ ಶಾಸನಗಳ ಆಧಾರದ ಮೇಲೆ ಅವರು ಶೈವ ಹಾಗೂ ವೈಷ್ಣವ ಈ ಎರಡು ಪಂಥಗಳ ಬೆಳವಣಿಗೆಗೆ ಕಾರಣರಾಗಿದ್ದು, ಅವರ ಕಾಲದಲ್ಲಿ ಈ ರಾಜರು ಸ್ಥಾಪಿಸಿದ ಅನೇಕ ಅಗ್ರಹಾರಗಳು, ಹಾಗೂ ಅನೇಕ ದೇವಾಲಯಗಳಿಗೆ ಅವರು ಮಾಡಿದ ದಾನದ ವಿವರಗಳು ಶಾಸನಗಳಿಂದ ತಿಳಿದು ಬರುತ್ತವೆ.

ಹುಂಚದಲ್ಲಿರುವ ಕಮಠೇಶ್ವರ ದೇವಾಲಯವನ್ನೂ ಈ ಸಾಂತರರು ಪಾಲಿಸುತ್ತಿದ್ದುದು ಆ ದೇವಾಲಯದ ಬಾಗಿಲನ ಮೇಲ್ಭಾಗದಲ್ಲಿ ನಿಲ್ಲಿಸಿರುವ ಒಂದು ಶಾಸನದಲ್ಲಿ ಸ್ಪಷ್ಟವಾಗಿದೆ. ಸುಮಾರು ಕ್ರಿ.ಶ. ೮೦೦ರ ಸುಮಾರಿಗೆ ಮನ್ನೆಖೇಟದಿಂದ ತೆಂಕಣಕ್ಕೆ ಇರುವ ಪೊಂಬುರ್ಚದಲ್ಲಿ ಜಕ್ಕಯ್ಯ ಎಂಬುವನು ಕಮಠೇಶ್ವರ ದೇವಾಲಯವನ್ನು ಮಾಡಿಸಿದನು. ಆದರೆ ಆ ಕಾಲದಲ್ಲಿ ಅಲ್ಲಿ ಆಳ್ವಿಕೆ ಮಾಡುತ್ತಿದ್ದ ಸಾಂತರ ರಾಜ ಯಾರು ಎಂದು ಖಚಿತವಾಗಿ ತಿಳಿದುಬರುವುದಿಲ್ಲ.

ಈ ದೇವಾಲಯದ ಮುಂದೆ ನಿಲ್ಲಿಸಿರುವ ಸುಮಾರು ಕ್ರಿ.ಶ. ೧೨೮೭ರ ಇನ್ನೊಂದು ಶಾಸನದ ಪ್ರಕಾರ ಕುಮಾರಸೊಡ್ಡ ದೇವನು ಸಾನ್ತಳಿಗೆ ನಾಡನ್ನು ಏಕಚತ್ರದಿಂದ ಆಳುತ್ತಿರಬೇಕಾದರೆ ಈ ಕಮಠೇಶ್ವರ ದೇವಾಲಯವನ್ನು ಪುನಃ ಪ್ರತಿಷ್ಠಾಪನೆ ಮಾಡಿ ಅದಕ್ಕೆ ದಾನ ನೀಡಿದನು. ಅಂದರೆ ಜಕ್ಕಯ್ಯನ ಹಿಂದೆ ಕಟ್ಟಿಸಿದ ದೇವಾಲಯವು ಶಿಥಿಲವಾಗಿದ್ದು ಅದನ್ನು ಇವರು ಪುನಃ ಪ್ರತಿಷ್ಠಾಪಿಸಿರಬಹುದಾಗಿದೆ.

ಬಿಲ್ಲೇಶ್ವರ ದೇವಾಲಯದ ಆವರಣದಲ್ಲಿ ಕಂಡು ಬರುವ ಕಾಳ ಭೈರವನ ಗುಡಿಯ ಗೋಡೆಯ ಮೇಲೆ ಕಂಡು ಬರುವ ಶಾಸನದ ಪ್ರಕಾರ ಶ್ರೀತ್ರೈಳೋಕ್ಯಮಲ್ಲ ವೀರಶಾನ್ತರನು ಕಾಳಾಮುಖ ಶೈವಗುರುಗಳಿಗೆ ಗೊರವರ ಪಳ್ಳಿ ಎಂಬ ಹಳ್ಳಿಯನ್ನು ಸರ್ವನಮಸ್ಯವನ್ನಾಗಿ ದಾನ ಮಾಡಿದನು.[11]ನಂತರ ವೀರ ಸಾಂತರನು ತನ್ನ ಕಾಲದಲ್ಲಿ ಕಣ್ಣೂರು ಅಗ್ರಹಾರದ ಬ್ರಾಹ್ಮಣರಿಗೂ ಹಾಗೂ ಅಲ್ಲಿಯ ಗೌತಮೇಶ್ವರ ದೇವಾಲಯಕ್ಕೂ ಭೂದಾನ ನೀಡಿದ ವರದಿಗಳಿವೆ.[12]ನನ್ನಿ ಸಾನ್ತರನು ಕ್ರಿ.ಶ. ೧೦೨೭ ರಲ್ಲಿ ತ್ಯಾಗರ್ತಿಯಲ್ಲಿರುವ ಜನಾರ್ಧನ ಅಥವಾ ನಾರಾಯಣ ದೇಗುಲಕ್ಕೆ ಭೂದಾನವನ್ನು ಮಾಡಿದನು. ವೀರ ಶಾನ್ತರನ ರಾಣಿಯಾದ ಚಾಗಲದೇವಿಯೂ ಬಳ್ಳಿಗಾವೆಯಲ್ಲಿ ಚಾಗಲೇಶ್ವರವೆಂಬ ದೇಗುಲವನ್ನು ಮಾಡಿಸಿ ದಾನ ನೀಡಿರುವ ಉಲ್ಲೇಖವಿದೆ.[13]

ಹೀಗೆ ಸಾಂತರರು ತಮ್ಮ ಆಳ್ವಿಕೆಯ ಕಾಲದಲ್ಲಿ ಎಲ್ಲಾ ಧರ್ಮಗಳ ಪರಿಪಾಲನೆ ಮಾಡಿದ್ದು ಪರಧರ್ಮ ಸಹಿಷ್ಣುತೆ, ಸಮಾನತೆ ಹಾಗೂ ಸಮನ್ವಯ ದೃಷ್ಟಿಯನ್ನು ಕಾಪಾಡಿಕೊಂಡು ಅನೇಕ ದೇವಾಲಯ, ಬಸದಿ, ಕೆರೆ, ಭಾವಿ ಮಾಡಿಸಿ ತಮ್ಮ ಪ್ರಾಂತ್ಯದಲ್ಲಿ ಧರ್ಮ ಪರಿಪಾಲಕರಾಗಿ ಬಾಳಿದರು. ಅದಕ್ಕೆ ಸಾಕ್ಷಿಯಾಗಿ ಇಂದಿನವರೆಗೂ ಹೊಂಬುಜದಲ್ಲಿ ಅವರ ಕಾಲದ ಅನೇಕ ಬಸದಿ ಹಾಗೂ ದೇವಾಲಯಗಳು ಇರುವುದನ್ನು ಕಾಣಬಹುದು.

ಸಾಂತರರ ಕಾಲದ ಕಲೆ ಮತ್ತು ವಾಸ್ತುಶಿಲ್ಪ

ಈಗಾಗಲೇ ಮೇಲೆ ತಿಳಿಸಿದಂತೆ ಸಾಂತರರ ಕಾಲದಲ್ಲಿ ಅನೇಕ ಜೈನ ಹಾಗೂ ಇತರೆ ದೇವಾಲಯಗಳು ನಿರ್ಮಾಣವಾಗಿದ್ದು ಅವುಗಳಲ್ಲಿ ಕೆಲವು ಇನ್ನೂ ಉಳಿದು ಬಂದಿವೆ. ಆದರೆ ಶಾಸನದಲ್ಲಿ ಉಲ್ಲೇಖಗೊಂಡ ಅನೇಕ ಬಸದಿ ಅಥವಾ ದೇವಾಲಯಗಳು ಇಂದು ಕಂಡು ಬರದಿದ್ದರೂ, ಇರುವ ಕೆಲವೇ ಕೆಲವು ಕಟ್ಟಡಗಳ ಆಧಾರದ ಮೇಲೆ ನಾವು ಈ ಪ್ರಾಂತ್ಯದಲ್ಲಿ ಬೆಳೆದು ಬಂದಂತಹ ಪ್ರಾದೇಶಿಕ ಶೈಲಿಯನ್ನು ಗುರುತಿಸಬಹುದು. ಸಾಂತರರ ವಾಸ್ತುಶಿಲ್ಪ ಶೈಲಿಯು ಚಾಳುಕ್ಯರ ಪ್ರಮುಖ ಶೈಲಿಯದೇ ಆಗಿದ್ದರೂ ಸಹ ಅವರ ಶೈಲಿಯಲ್ಲಿ ಕೆಲವೊಂದು ಮಾರ್ಪಾಟುಗಳು ಸಹ ಎದ್ದು ಕಾಣುತ್ತವೆ. ಅಂತೆಯೇ ಅವರ ಕಾಲದಲ್ಲಿ ಕಲೆ ಹಾಗೂ ವಾಸ್ತುಶಿಲ್ಪ ಶೈಲಿಯೂ ನೇರವಾಗಿ ರಾಜರ ಪ್ರೋತ್ಸಾಹದಲ್ಲಿ ಬೆಳದು ಬಂದುದ್ದಾಗಿದೆ.

ಅವರ ಕಾಲದ ವಾಸ್ತುಶಿಲ್ಪ ಶೈಲಿಯಲ್ಲಿ ಎದ್ದು ಕಾಣುವ ಕೆಲವು ಪ್ರಾದೇಶಿಕ ಶೈಲಿಯ ಲಕ್ಷಣಗಳು ಇಂತಿವೆ.

ಅ) ಅವರ ದೇವಾಲಯ ಅಥವಾ ಬಸದಿಗಳು ಸಾಮಾನ್ಯವಾಗಿ ಮಧ್ಯಮ ಗಾತ್ರದವಾಗಿವೆ.

ಆ) ಅವರ ಬಸದಿಗಳು ಚಚ್ಚೌಕಾಕಾರದ ಗರ್ಭಗೃಹವನ್ನು ಹೊಂದಿದ್ದು, ಅದಕ್ಕೆ ಹೊಂದಿಕೊಂಡಂತೆ ಆದರೆ ಅದಕ್ಕಿಂತ ದೊಡ್ಡ ಪ್ರಮಾಣದ ಮುಚ್ಚಿದ ಮಂಟಪವನ್ನು ಹೊಂದಿದ್ದವು.

ಇ) ಅವರ ಕಟ್ಟಡಗಳು ಸಣ್ಣ ಪ್ರಮಾಣದ ಸರಳವಾದ ಅಧಿಷ್ಟಾನವನ್ನು ಹಾಗೂ ಅಲಂಕಾರ ರಹಿತ ಗೋಡೆಗಳನ್ನು ಹೊಂದಿದ್ದವು.

ಈ) ಗೋಡೆಗಳ ಮಧ್ಯದಲ್ಲಿ ಅರ್ಧ ಕಂಬಗಳನ್ನು ಸಹ ನೋಡಬಹುದಾಗಿದೆ.

ಉ) ಗೋಡೆಯ ತುದಿಯಲ್ಲಿ ಕಪೋತದ ಕೆಳಭಾಗದಲ್ಲಿ ಕೆಲವು ಸಣ್ಣ ಸಣ್ಣ ಶಿಲ್ಪಗಳು ಕಂಡು ಬರುತ್ತವೆ. ಅದರ ಮೇಲೆ ಹಾರವಿದ್ದು ಹಾಗೆಯೇ ದೇವಾಲಯದ ಅಥವಾ ಶಿಖರದ ಭಾಗ ಕಂಡು ಬರುತ್ತದೆ. ಈ ಶಿಖರಗಳು ವಿಶೇಷವಾಗಿದ್ದು, ಅತ್ಯಂತ ಹೆಚ್ಚು ಮಳೆ ಬೀಳುವ ಈ ಮಲೆನಾಡಿನ ಪ್ರದೇಶದಲ್ಲಿ ಈ ಮಳೆ ನೀರು ನಿಲ್ಲದೆ ಹರಿದು ಹೋಗುವ ಮಾದರಿಯಲ್ಲಿ ಕಟ್ಟಿಸಲಾಗಿದೆ.

ಊ) ದೇವಾಲಯದ ಮಂಟಪದ ಬಾಗಿಲುವಾಡ ಸಹ ಅತ್ಯಂತ ಸುಂದರ ಕೆತ್ತನೆಗಳಿಂದ ಕೂಡಿರುತ್ತದೆ.

ಎ) ಮಂಟಪದ ಒಳಗೆ ಸಾಮಾನ್ಯವಾಗಿ ಚಚ್ಚೌಕಾಕಾರದ ಕಂಬಗಳು ಕಂಡು ಬರುತ್ತಿದ್ದು ಅವುಗಳು ಸೂಕ್ಷ್ಮ ಕೆತ್ತನೆಯಿಂದ ಕೂಡಿವೆ.

ಏ) ಜೈನ ಬಸದಿಯ ಮುಂದೆ ಸ್ವತಂತ್ರವಾಗಿ ನಿಲ್ಲಿಸಿರುವ ಕಲ್ಲಿನ ಮಕರ ತೋರಣಗಳು ಸಾಮಾನ್ಯವಾಗಿದ್ದು, ಇಂದು ಬರೀ ಎರಡೇ ಎರಡು ಅಂತಹ ಮಕರ ತೋರಣಗಳು ನಮಗೆ ಅವರ ರಾಜಧಾನಿಯಾಗಿದ್ದ ಹುಂಚದಲ್ಲಿ ಕಂಡು ಬರುತ್ತವೆ.

ಐ) ಈ ಬಸದಿ ಅಥವಾ ದೇವಾಲಯಗಳ ರಚನೆಯನ್ನು ಅತ್ಯಂತ ಗಟ್ಟಿಯಾದ ಕಣಶಿಲೆಯನ್ನು ಬಳಸಿ ನಿರ್ಮಾಣ ಮಾಡಿದ್ದಾರೆ.

ಮೇಲೆ ಹೇಳಿರುವ ಲಕ್ಷಣಗಳ ಹಿನ್ನೆಲೆಯಲ್ಲಿ ಇಲ್ಲಿ ಕೆಲವೊಂದು ದೇವಾಲಯ ಅಥವಾ ಬಸದಿಗಳನ್ನು ಕುರಿತು ಚರ್ಚಿಸಲಾಗಿದೆ.

ಕಮಠೇಶ್ವರ ದೇವಾಲಯ

ಇದು ಇವತ್ತಿನ ಹೊಂಬುಜದ ಜೈನಮಠದಿಂದ ಅರ್ಧ ಕಿಲೋಮೀಟರ ದೂರದಲ್ಲಿ ಈಶಾನ್ಯ ದಿಕ್ಕಿನಲ್ಲಿ ಕಂಡು ಬರುತ್ತದೆ.

ದೇವಾಲಯವು ಶಿಥಿಲಾವಸ್ಥೆಯನ್ನು ತಲುಪಿದ್ದು ಸರಿಯಾದ ಸಂರಕ್ಷಣೆಗೆ ಕಾಯುತ್ತಿದೆ. ದೇವಾಲಯವು ಒಂದು ಸಣ್ಣ ಚಚ್ಚೌಕಾಕಾರದ ಗರ್ಭಗೃಹ ಹಾಗೂ ಚಚ್ಚೌಕಾಕಾರದ ಮಂಟಪವನ್ನು ಹೊಂದಿದೆ. ಅಲ್ಲಿ ನಾಲ್ಕು ಚಚ್ಚೌಕಾಕಾರದ ಕಂಭಗಳು ಕಂಡು ಬರುತ್ತಿದ್ದು, ಯಾವುದೇ ಅರ್ಧ ಕಂಬಗಳು ಕಂಡು ಬರುವುದಿಲ್ಲ. ಈ ನಾಲ್ಕು ಕಂಬಗಳು ತರಂಗ ಭೋದಿಗೆಗಳನ್ನು ಹೊಂದಿದ್ದು, ಇದು ಬಾದಾಮಿ ಚಾಳುಕ್ಯರ ಶೈಲಿಯ ಅನುಕರಣೆಯಾಗಿದೆ. ಮಂಟಪದ ಮಧ್ಯ ಭಾಗದಲ್ಲಿ ಒಂದು ಪುಟ್ಟ ನಂದಿ ವಿಗ್ರಹ ಸಹ ಇದೆ.

ಮಂಟಪದ ಅಂಕಣದಲ್ಲಿ ಅಷ್ಟದಿಕ್ಪಾಲಕರ ಪಟ್ಟಿಕೆ ಇದ್ದು ಮಧ್ಯದಲ್ಲಿ ನಟರಾಜ, ಕಾರ್ತೀಕೇಯ ಹಾಗೂ ಗಣೇಶನನ್ನು ನೋಡಬಹುದಾಗಿದೆ. ಈ ಪಟ್ಟಿಕೆಯ ಸುತ್ತ ಕಮಲದ ಹೂವಿನ ಅಲಂಕರಣವನ್ನು ಕಾಣಬಹುದು. ಈ ಪಟ್ಟಿಕೆಯನ್ನು ಹೊರತುಪಡಿಸಿ ಉಳಿದಂತೆ ಇದು ಅಲಂಕಾರ ರಹಿತ ಅಂಕಣವನ್ನು ಹೊಂದಿದೆ.

ಗರ್ಭಗೃಹದ ದ್ವಾರ ಶಾಖೆಯ ತ್ರಿಶಾಖವಾಗಿದ್ದು ಲಲಾಟಬಿಂಬದಲ್ಲಿ ಗಜಲಕ್ಷ್ಮಿಯ ಶಿಲ್ಪ ಕಂಡು ಬರುತ್ತದೆ. ಆದರೆ ಅತ್ಯಂತ ಸುಂದರವಾದ ಚಿತ್ರ ಶಿಲ್ಪಕಲೆ ನಮಗೆ ದೇವಾಲಯದ ಗೋಡೆಯ ಮೇಲ್ಭಾಗದಲ್ಲಿ ಕಪೋತದ ಕೆಳಗೆ ಕಂಡು ಬರುವಂತಹದು. ಅಲ್ಲಿ ಅನೇಕ ವಾದ್ಯಗಳನ್ನು ನುಡಿಸುತ್ತಿರುವ ಶಿಲ್ಪಗಳು, ನೃತ್ಯ ಭಂಗಿಯಲ್ಲಿರುವ ಶಿಲ್ಪಗಳು ಕಂಡು ಬರುತ್ತವೆ. ಇದು ಸರಳವಾದ ಅಧಿಷ್ಠಾನ, ಸರಳವಾದ ಗೋಡೆಯನ್ನು ಹೊಂದಿದ್ದು ಚಜ್ಜದ ಕೆಳಭಾಗದಲ್ಲಿ ಅಡ್ಡಲಾಗಿ ಇರುವ ಪಟ್ಟಿಕೆಯ ಮೇಲೆ ಚಿತ್ರಣಗಳು ಕಂಡು ಬರುತ್ತವೆ. ಈ ರೀತಿಯ ಶೈಲಿಯು ಮರದ ವಾಸ್ತುಶಿಲ್ಪ ಶೈಲಿಯ ಅನುಕರಣೆಯಾಗಿದ್ದು, ಈ ಪ್ರಾಂತ್ಯದಲ್ಲಿ ವಾಸ್ತುಶಿಲ್ಪದ ರಚನೆಗೆ ಕಲ್ಲನ್ನು ಉಪಯೋಗಿಸುವ ಮೊದಲು ಮರವನ್ನು ಕಚ್ಛಾಸಾಮಾಗ್ರಿಯನ್ನಾಗಿ ಬಳಸುತ್ತಿದ್ದರೆಂದು ಊಹಿಸಬಹುದು.

ಅಂತೆಯೇ ಗೋಡೆಗಳು ಸರಳವಾಗಿದ್ದು ಮಧ್ಯ ಮಧ್ಯದಲ್ಲಿ ಅರ್ಧ ಕಂಬಗಳು ಈ ಸರಳತೆಯನ್ನು ಮುರಿಯುತ್ತವೆ. ಆದರೆ ಈ ಅರ್ಧಕಂಬಗಳು ಮಂಟಪದ ಹೊರಗೋಡೆಗೆ ಮಾತ್ರ ಸೀಮಿತವಾಗಿವೆ. ಭಿತ್ತಿಯ ಮೇಲ್ಘಾಗದಲ್ಲಿ ಕಪೋತವನ್ನು ಸುಂದರವಾದ ಕೂಟಗಳಿಂದ ಕೆತ್ತಿದ್ದಾರೆ. ಈ ದೇವಾಲಯದ ಮೇಲ್ಛಾವಣಿ ಸಮತಟ್ಟಾಗಿದ್ದು ನಾಲ್ಕು ಭಾಗಗಳಲ್ಲಿ ಸ್ವಲ್ಪ ಬಾಗಿದಂತೆ ಕಂಡು ಬರುತ್ತದೆ. ಕಪೋತದ ಮೇಲೆ ಹಾರವು ಕಂಡು ಬಂದಿಲ್ಲ. ಆದರೆ ಗರ್ಭಗೃಹದ ಶಿಖರ ಭಾಗದಲ್ಲಿ ಫಲಕದ ಕೆಳಗೆ ಎರಡು ಮುಂಚಾಚಿರುವ ಕಲ್ಲಿನ ಸಾಲಿದ್ದು ಮರದ ವಾಸ್ತುಶಿಲ್ಪ ಶೈಲಿಯನ್ನು ನೆನಪಿಸುತ್ತದೆ. ಇದರ ಮೇಲೆ ಚಚ್ಚೌಕಾಕಾರದ ಭೂಮಿಯ ರಚನೆ ಕಂಡು ಬರುತ್ತದೆ.

ಒಟ್ಟಿನಲ್ಲಿ ಈ ದೇವಾಲಯವು ಏಕಕೂಟ ವಿಮಾನವೆನಿಸಿಕೊಳ್ಳುತ್ತದೆ. ಹಾಗೆಯೇ ಈ ದೇವಾಲಯದ ಬಾಗಿಲು ತ್ರಿಶಾಖಾ ದ್ವಾರಶಾಖೆಯನ್ನು ಹೊಂದಿದ್ದು ಬಾಗಿಲುವಾಡದ ಮೇಲ್ಭಾಗದಲ್ಲಿ ಪೂರ್ಣ ಕಳಶದ ರಚನೆ ಕಂಡು ಬರುತ್ತದೆ. ಇದೊಂದು ಅಪರೂಪದ ಲಕ್ಷಣವೆಂದೇ ಹೇಳಬಹುದು. ಈ ದೇವಾಲಯ ಭಿತ್ತಿಯ ಮೇಲ್ಘಾಗದಲ್ಲಿ ಚಜ್ಜದ ಕೆಳಗೆ ಒಂದು ಸಾಲು ಸುಂದರವಾದ ಅಲಂಕಾರಿಕ ಪಟ್ಟಿಕೆಯಿದ್ದು, ಅಲ್ಲಿ ಅನೇಕ ಮಾದರಿಯ ಶಿಲ್ಪರಚನೆ ಕಂಡು ಬರುತ್ತದೆ. ಆದರೆ ಅತ್ಯಂತ ಮನ ಸೆಳೆಯುವ ಚಿತ್ರಗಳೆಂದರೆ ಪಂಚತಂತ್ರಗಳ ನಿರೂಪಣೆಯದು.

ಸೂಳೆ ಬಸದಿ

ಇದನ್ನು ಈ ಪ್ರಾಂತ್ಯದ ಜನ ಸೂಳೆ ಬಸದಿ ಎಂದು ಕರೆಯುತ್ತಾರೆ. ಆದರೆ ಶಾಸನದ ಆಧಾರದ ಮೇಲೆ ಈ ಬಸದಿಯನ್ನು ವಿಕ್ರಮ ಶಾನ್ತರನ ಬಳೆಯಾಕೆ ಪಾಳಿಯಕ್ಕ ಕಟ್ಟಿಸಿದ್ದು, ಕಾಲಕ್ರಮೇಣ ಲೋಕರೂಢಿಯಾಗಿ ಸೂಳೆ ಬಸದಿ ಎಂದು ಹೆಸರು ಬಂದಿದೆ. ಎಂ.ಎ. ಧಾಕಿಯವರು ಈ ದೇವಾಲಯವನ್ನು ಈ ಪ್ರದೇಶದ ಅತ್ಯಂತ ಹಳೆಯ ಬಸದಿ ಎಂದು ಗುರುತಿಸುತ್ತಾರೆ.[14]ಆದರೆ ಇಂದು ಗರ್ಭಗೃಹವನ್ನು ಹೊರತುಪಡಿಸಿ ಬೇರೆ ಯಾವುದೇ ಅವಶೇಷಗಳು ಕಂಡುಬರುವುದಿಲ್ಲ.

ಬೋಗಾರ ಬಸದಿ

ಹುಂಚದ ಜೈನ ಮಠದ ದಕ್ಷಿಣ ಭಾಗದಲ್ಲಿ ಈ ಬಸದಿ ಕಂಡು ಬರುತ್ತದೆ. ಇಂದು ಈ ಮೂಲ ಬಸದಿಯ ಮೇಲ್ಘಾಗದಲ್ಲಿ ಕಟ್ಟಿದ ಒಂದು ಹೊಸ ಕಟ್ಟಡವು ಬಸದಿಯ ಸಹಜ ಸೌಂದರ್ಯವನ್ನು ಮರೆ ಮಾಡಿದೆ. ಆದರೆ ಈ ಬಸದಿಯ ಕೆಳಗಿನ ಭಾಗ ಇವತ್ತಿನವರೆಗೂ ಸುಸ್ಥಿತಿಯಲ್ಲಿಯೇ ಇದೆ. ಬಸದಿಯು ಮಧ್ಯಮ ಗಾತ್ರದ್ದಾಗಿದ್ದು ಗರ್ಭಗೃಹ, ಅಂತರಾಳ ಹಾಗೂ ಮಂಟಪವನ್ನು ಹೊಂದಿದೆ. ಹೊರಗಿನಿಂದ ನೋಡಿದಾಗ ಬಸದಿಯು ಒಂದು ಸರಳ ಅಧಿಷ್ಠಾನವನ್ನು ಹೊಂದಿದ್ದು, ಸರಳ ಭಿತ್ತಿ, ಕುಡ್ಯಸ್ತಂಭಗಳನ್ನು ಹೊಂದಿದ್ದು, ಅದರ ಮೇಲೆ ಒಂದು ಸಾಲು ಶಿಲ್ಪಗಳನ್ನು ನೋಡಬಹುದಾಗಿದೆ. ಬಸದಿಯ ಮೇಲಿನ ಭಾಗವು ಶಾಲಾ, ಕೂಟ, ಪಂಜರದಿಂದ ಕೂಡಿದ ದ್ರಾವಿಡ ಶೈಲಿಯ ಶಿಖರವನ್ನು ಹೊಂದಿದ್ದು, ಶಿಖರದಲ್ಲಿ ಅನೇಕ ಸಣ್ಣ ನಾಸಿಗಳ ರಚನೆ ಹಾಗೂ ಆ ನಾಸಿಗಳ ಮಧ್ಯದಲ್ಲಿ ಕಿನ್ನರ ಶಿರ ಹಾಗೂ ವ್ಯಾಳದ ಸುಂದರ ಕೆತ್ತನೆಯನ್ನು ಹೊಂದಿದೆ.

ಬಸದಿಯ ಒಳಗಿನ ಮಂಟಪ ಭಾಗದಲ್ಲಿ ಕಂಭಗಳಿವೆ. ಇವು ದೊಡ್ಡಗಾತ್ರದ ಚಚ್ಚೌಕಾಕಾರದ ಕಂಭಗಳಾಗಿದ್ದು ಅವುಗಳ ಪಟ್ಟಿಕೆಯ ಮೇಲೆ ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳು ಕಂಡು ಬರುತ್ತವೆ. ಕಂಭಗಳಿಂದ ಹೊರಚಾಚಿರುವ ತರಂಗ ಬೋದಿಗೆಗಳು ಚಾಳುಕ್ಯರ ವಾಸ್ತುಶಿಲ್ಪ ಶೈಲಿಯನ್ನು ನೆನಪಿಸುತ್ತವೆ. ಈ ಕಂಭಗಳ ಮೇಲೆ ಬಳ್ಳಿ, ಸರಕುಚ್ಚು, ಕಲ್ಲಿನಾಕಾರದ ಪ್ರಭಾವಳಿಯೊಳಗೆ ಕೆತ್ತಿರುವ ಜಿನರ ಉಬ್ಬುಶಿಲ್ಪ ಆಕರ್ಷಕವಾಗಿದೆ. ಅಂತೆಯೇ ಇನ್ನೊಂದು ಕಂಭದಲ್ಲಿ ಕಂಡು ಬರುವ ಉಬ್ಬು ಶಿಲ್ಪದಲ್ಲಿ ಪಾರ್ಶ್ವನಾಥ ತೀರ್ಥಂಕರರ ಹಾಗೂ ಬಾಹುಬಲಿಯ ಕಾಯೋತ್ಸರ್ಗಭಂಗಿಯ ಶಿಲ್ಪಗಳು ಮನಸೆಳೆಯುವಂತಿದೆ.

ಆದರೆ ಗರ್ಭಗೃಹದೊಳಗೆ ಇರುವ ಜೈನ ಪ್ರತಿಮೆಯು ಯಾವ ತೀರ್ಥಂಕರನದೆಂದು ಗುರುತಿಸಲು ಸಾಧ್ಯವಾಗಿಲ್ಲ. ಈ ಪ್ರದೇಶದ ಜನರು ಇದನ್ನು ಚಂದ್ರನಾಥ ತೀರ್ಥಂಕರರದೆನ್ನುತ್ತಾರೆ. ಈ ಜಿನಮೂತಿರ್ಯಯು ಸಿಂಹ ಪೀಠದಲ್ಲಿ ಪದ್ಮಾಸನದಲ್ಲಿ ಕುಳಿತಿರುವ ಭಂಗಿಯಲ್ಲಿದೆ.

ಪಂಚ ಬಸದಿ

ಇದು ಈ ಪ್ರದೇಶದ ಅತ್ಯಂತ ಸುಂದರವಾದ ಬಸದಿಯಾಗಿದ್ದು, ಅತ್ಯಂತ ಪ್ರಸಿದ್ಧಿ ಪಡೆದುದಾಗಿದೆ. ಈ ದೇವಾಲಯವು ಬಂದು ದೊಡ್ಡ ಪ್ರಾಕಾರದಲ್ಲಿ ನಿರ್ಮಾಣವಾಗಿದ್ದು, ಅಲ್ಲಿ ಪಂದ ಬಸದಿಯ ಜೊತೆಗೆ ಇನ್ನೆರಡು ಸಣ್ಣ ದೇವಾಲಯಗಳು ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಇವೆ. ಈ ಬಸದಿಯ ಮುಂದೆ ಅತ್ಯಂತ ಸುಂದರವಾದ ಒಂದು ಮಾನಸ್ತಂಭ ಹಾಗೂ ಬಲಿ ಪೀಠವಿದೆ. ಶಾಸನಗಳ ಆಧಾರದ ಮೇಲೆ ಪಂಚ ಬಸದಿಯ ನಿರ್ಮಾಣ ಕಾರ್ಯ ಸುಮಾರು ಕ್ರಿ.ಶ. ೧೦೭೭ ರಲ್ಲಿ ಪ್ರಾರಂಭವಾಯಿತೆಂದು ತಿಳಿದು ಬರುತ್ತದೆ. ಈ ಬಸದಿಯನ್ನು ಎರಡು ಹಂತಗಳಲ್ಲಿ ಕಟ್ಟಿಸಿದಂತೆ ಕಂಡು ಬರುತ್ತದೆ. ಬಸದಿಯ ನಿರ್ಮಾಣಕ್ಕೆ ಕಣಶಿಲೆ ಹಾಗೂ ಜಂಬಿಟ್ಟಿಗೆಯನ್ನು ಬಳಸಿದ್ದಾರೆ.

ದೇವಾಲಯದ ಮುಂಭಾಗದಲ್ಲಿ ಕಂಡು ಬರುವ ಕಂಭಗಳ ಸಾಲುಗಳ ತೆರೆದ ಮಂಟಪವನ್ನು ಜಂಬಿಟ್ಟಿಗೆಯ ವೇದಿಕೆಯ ಮೇಲೆ ನಿರ್ಮಿಸಲಾಗಿದ್ದು, ಈ ಕಂಭಗಳು ಹೊಯ್ಸಳರ ಕಾಲದ ಕಡೆದ (Lathe Turned) ಕಂಭಗಳಂತೆ ಸುಂದರವಾಗಿದೆ. ಈ ಮಂಟಪವನ್ನು ಬಸದಿಯ ನಿರ್ಮಾಣದ ಕಾರ್ಯ ಮುಗಿದ ಸ್ವಲ್ಪ ನಂತರದ ಕಾಲದಲ್ಲಿ ಕಟ್ಟಿಸಿದಂತೆ ತೋರುತ್ತದೆ. ಈ ಬಸದಿಯು ಉತ್ತರ ದಕ್ಷಿಣವಾಗಿ ಐದು ಗರ್ಭಗೃಹಗಳನ್ನು ಹೊಂದಿದ್ದು, ಈ ಐದು ಗರ್ಭಗೃಹಗಳಿಗೆ ಹೊಂದಿಕೊಂಡಂತೆ ಐದು ಕಂಭಗಳ ನಾಲ್ಕು ಸಾಲುಗಳಿಂದ ಕೂಡಿದ ಮಂಟಪವಿದೆ. ಬಸದಿಗೆ ಮೂರು ದ್ವಾರಗಳಿದ್ದು ಎಲ್ಲವೂ ಪೂರ್ವದ ಕಡೆ ಮುಖ ಮಾಡಿವೆ. ಮಂಪಟದ ಮುಂಭಾಗದಲ್ಲಿ ಸ್ವತಂತ್ರವಾಗಿ ನಿಂತಿರುವ ಕಂಭಗಳ ಮೇಲಿರುವ ಮಕರ ತೋರಣ ಅತ್ಯಂತ ಸುಂದರವಾಗಿದೆ. ಅಂತೆಯೇ ಬಸದಿಯ ದ್ವಾರಶಾಖೆಗಳನ್ನು ಬಹಳ ಅಂದವಾಗಿ ಕೆತ್ತಲಾಗಿದೆ. ಮಂಟಪದ ಪ್ರವೇಶದ್ವಾರದಲ್ಲಿ ಮೆಟ್ಟಿಲುಗಳ ಪಕ್ಕದಲ್ಲಿ ಕಂಡುಬರುವ ಹಸ್ತಿಹಸ್ತದಲ್ಲಿ (Balustrade) ಆನೆಯನ್ನು ಮಧಿಸುತ್ತಿರುವ ಸಿಂಹದ ಉಬ್ಬು ಚಿತ್ರವಿದೆ. ಗರ್ಭಗೃಹಗಳಲ್ಲಿ ಐದು ಜಿನ ತೀರ್ಥಂಕರರ ದೊಡ್ಡ ಪ್ರಮಾಣದ ಮೂರ್ತಿಗಳು ಇದ್ದು ಅವನ್ನು ಆದಿನಾಥ, ಅಜಿತನಾಥ, ಮಹಾವೀರ, ಪಾರ್ಶ್ವನಾಥ ಹಾಗೂ ಶಾಂತಿನಾಥ ಎಂದು ಗುರುತಿಸಲಾಗಿದೆ. ಈ ಐದು ಜಿನಮೂರ್ತಿಗಳು ಪದ್ಮಾಸನದ ಭಂಗಿಯಲ್ಲಿದ್ದು, ಅವರುಗಳು ಸಿಂಹ ಪೀಠದ ಮೇಲೆ ವಿರಾಜಮಾನರಾಗಿದ್ದಾರೆ. ಮಕರ ತೋರಣದಲ್ಲಿ ಇಬ್ಬರು ಚಾಮರಧಾರಿಗಳನ್ನು ಕೆತ್ತಲಾಗಿದೆ. ಆದಿನಾಥ, ಪಾರ್ಶ್ವನಾಥ, ಅಜಿತನಾಥರಿಗೆ ಮಾತ್ರ ತಲೆಯ ಮೇಲೆ ಮುಕ್ಕೂಡೆ, ಹಾಗೂ ಅಕ್ಕಪಕ್ಕದಲ್ಲಿ ಚಾಮರಧಾರಿಗಳು ಇದ್ದಾರೆ.

ಪಾರ್ಶ್ವನಾಥ ಬಸದಿ

ಇದೊಂದು ಅತ್ಯಂತ ಸುಂದರವಾದ ಸಣ್ಣ ಪ್ರಮಾಣದ ಬಸದಿಯಾಗಿದೆ. ಇದು ಪಂಚ ಬಸದಿಯ ದಕ್ಷಿಣದಲ್ಲಿ ಇದ್ದು ಅದರ ಪ್ರಾಕಾರದ ಒಳಗೆ ಕಂಡು ಬರುತ್ತದೆ. ಆದರೆ ಒಂದು ಕಾಲದಲ್ಲಿ ಇದು ಸ್ವತಂತ್ರ ದೇವಾಲಯವಾಗಿದ್ದು ಇವತ್ತು ಅದು ಪಂಚಕೂಟ ಬಸದಿಯ ಒಂದು ಭಾಗವಾಗಿದೆ. ಬಸದಿಯು ಗರ್ಭಗೃಹ ಅಂತರಾಳ ಹಾಗೂ ಕಂಭಗಳನ್ನೊಳಗೊಂಡ ಮುಚ್ಚಿದ ಮಂಟಪವನ್ನು ಹೊಂದಿದೆ. ದೇವಾಲಯವನ್ನು ಸರಳವಾದ ಅಧಿಷ್ಠಾನದ ಮೇಲೆ ನಿರ್ಮಿಸಲಾಗಿದ್ದು ಭಿತ್ತಿಯ ಸರಳತೆಯನ್ನು ಮುರಿಯಲು ಮಧ್ಯ ಮಧ್ಯದಲ್ಲಿ ಅರ್ಧ ಕಂಭಗಳ ರಚನೆಯನ್ನು ಮಾಡಿದ್ದಾರೆ. ದೇವಾಲಯವು ಸುಮದರವಾದ ದ್ರಾವಿಡ ಶಿಖರವನ್ನು ಹೊಂದಿದೆ. ಮಂಟಪದ ಒಳಭಾಗದಲ್ಲಿ ಸುಂದರವಾದ ಚಚ್ಚೌಕಾಕಾರದ ಕಂಬಗಳಿಗೆ ಸುಂದರವಾದ ತರಂಗ ಬೋಧಿಗೆಗಳಿವೆ. ಇದರ ಮೇಲ್ಛಾವಣಿಯು ಅಷ್ಟದಿಕ್ಪಾಲರ ಪಟ್ಟಿಕೆಯನ್ನು ಹೊಂದಿದ್ದು ಮಧ್ಯದಲ್ಲಿ ಒಂದು ನೃತ್ಯ ಭಂಗಿಯಲ್ಲಿರುವ ಅನೇಕ ಕೈಗಳನ್ನು ಹೊಂದಿರುವ ನಟರಾಜ ಮೂರ್ತಿ ಕಂಡು ಬರುತ್ತದೆ. ದೇವಾಲಯದ ಬಾಗಿಲುವಾಡದ ಮೇಲೆ ಹಾಗೂ ಅಡ್ಡ ತೊಲೆಗಳಲ್ಲಿ (Beams) ವಾದ್ಯಗಳನ್ನು ನುಡಿಸುತ್ತಿರುವ ಗಣಗಳ ಸಾಲು ಕಂಡು ಬರುತ್ತದೆ. ದೇವಾಲಯದ ಮಾಡನ್ನು ಇಳಿಜಾರಾಗಿ ರಚಿಸಲಾಗಿದೆ.

ಮಾನಸ್ತಂಭ

ಮಾನಸ್ತಂಭ ಜೈನರ ವಾಸ್ತುಶಿಲ್ಪದ ಪ್ರಮುಖ ಲಕ್ಷಣವಾಗಿವೆ. ಇವು ಸಾಮಾನ್ಯವಾಗಿ ಬಸದಿಯ ಮುಂಭಾಗದಲ್ಲಿ ಹಿಂದೂ ದೇವಾಲಯದ ಧ್ವಜಸ್ತಂಭದ ಸ್ಥಾನದಲ್ಲಿ ಕಂಡು ಬರುತ್ತವೆ. ಹುಂಚದಲ್ಲಿ ಕಂಡು ಬರುವ ಈ ಮಾನಸ್ತಂಭವು ಪಂಚ ಬಸದಿಯ ಮುಂಭಾಗದಲ್ಲಿದೆ. ವಾಸ್ತುಶಿಲ್ಪ ಶೈಲಿಯ ದೃಷ್ಟಿಯಿಂದ ಇದು ಬಹಳ ಉನ್ನತವಾಗಿದೆ. ಇದರ ಎತ್ತರ ಸುಮಾರು ೫೦ ಅಡಿ. ಮಾನಸ್ತಂಭದ ಕೆಳಗಿನ ಶಿಲಾವೇದಿಕೆಯ ನಾಲ್ಕು ಮೂಲೆಗಳಲ್ಲಿ ಆನೆಗಳಿವೆ, ಮತ್ತು ಮಧ್ಯದಲ್ಲಿ ನಾಲ್ಕು ಆನೆಗಳನ್ನು ಕೆತ್ತಿದ್ದಾರೆ. ಆನೆಗಳ ನಡು ನಡುವೆ ಸಿಂಹಗಳನ್ನು ವಿವಿಧ ಭಂಗಿಗಳಲ್ಲಿ ಕೆತ್ತಲಾಗಿದೆ. ಇವುಗಳ ಮೇಲಿನ ಸಾಲಿನಲ್ಲಿ ಅಷ್ಟದಿಕ್ಪಾಲಕರನ್ನು ಅವರ ಪರಿವಾರ ಸಹಿತ ಹಾಗೂ ಸಂಗೀತವಾದ್ಯ ಗೋಷ್ಠಿಗಳೊಂದಿಗೆ ಸುಂದರವಾಗಿ ಕೆತ್ತಿದ್ದಾರೆ.

ಕಂಬದ ಕಾಂಡ ಭಾಗದಲ್ಲಿ ಶಾಸನವನ್ನು ಕೆತ್ತಿದ್ದಾರೆ. ಮಾನಸ್ತಂಭವು ತುದಿಯಲ್ಲಿ ಒಂದು ಕಲ್ಲಿನ ಮಂಟಪವನ್ನು ಹೊಂದಿದೆ. ಈ ಮಂಟಪದೊಳಗೆ ನಾಲ್ಕು ಕಡೆ ಮುಖ ಮಾಡಿದಂತೆ ನಾಲ್ಕು ಜಿನ ಬಿಂಬಗಳಿವೆ. ಅಂತೆಯೇ ಮಾನಸ್ತಂಭದ ಶಿಲಾವೇದಿಕೆಯಲ್ಲಿ ಮೂರು ಹಂತಗಳಲ್ಲಿ ಮಿಥುನ ಶಿಲ್ಪಗಳು ಬಹಳ ಸಣ್ಣ ಪ್ರಮಾಣದಲ್ಲಿ ಕೆತ್ತಲ್ಪಟ್ಟಿವೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಅದೇ ನಗರ ೩೬

[2]ಅದೇ ನಗರ ೨೫

[3]ಅದೇ ನಗರ ೨೬

[4]ಅದೇ ನಗರ ೪೬

[5]ಅದೇ ನಗರ ೩೮

[6]ಅದೇ ನಗರ ೧೫೯ ಕ್ರಿ.ಶ. ೧೦೭೭

[7]ಅದೇ ನಗರ ೩೮ ಮತ್ತು ೩೯ ಕ್ರಿ.ಶ. ೧೦೬೪

[8]ಅದೇ ನಗರ ೪೫ ಕ್ರಿ.ಶ. ೧೨೫೫-೫೬

[9]ಅದೇ ನಗರ ೪೬

[10]ಅದೇ ನಗರ ೪೮ ಕ್ರಿ.ಶ. ೧೦೬೨

[11]ಅದೇ ನಗರ ೬೪ ಕ್ರಿ.ಶ. ೧೦೬೨

[12]ಅದೇ ಸಂ. ೭ ಶಿಕಾರಿಪುರ ೧೩೬

[13]ಅದೇ ನಗರ ೪೮

[14]ಧಾಕೆ ಎಂ.ಎ. ಎನ್ಸೈಕ್ಲೋಪೀಡಿಯಾ ಆಫ್ ಇಂಡಿಯನ್ ಆರ್ಕಿಟೆಕ್ಚರ್ ಸೌಥ್ ಇಂಡಿಯಾ, ಅಪ್ಪರ್ ದ್ರಾವಿಡ ದೇಶ, ಅರ್ಲಿ ಫೇಸ್, ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್.