ಕ್ರಿ.ಶ. ಹನ್ನೆರಡು ಹದಿಮೂರನೇ ಶತಮಾನದಲ್ಲಿ ‘ಜಿಡ್ಡುಳಿಗೆ’ ನಾಡು ಒಂದು ಪ್ರಾದೇಶಿಕ ವಿಭಾಗವಾಗಿ ರೂಪುಗೊಂಡಿತ್ತು. ಈ ನಾಡಿನ ಕೇಂದ್ರ ಸ್ಥಳವಾದ ‘ಉದ್ರಿ’ ಇಂದಿಗೂ ಇದರ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಒಂದು ಪ್ರಸಿದ್ಧ ತೀರ್ಥ ಕ್ಷೇತ್ರವಾಗಿದೆ. ಈ ನಾಡಿನ ಚರಿತ್ರೆಯನ್ನು ಉಲ್ಲೇಖಿಸುವ ಬಹಳಷ್ಟು ಶಾಸನಗಳು ಉದ್ರಿಯಲ್ಲಿ ದೊರೆತಿದ್ದು, ಅದರ ಚಾರಿತ್ರಿಕ ಭೌಗೋಲಿಕ ವಿವರಗಳೊಂದಿಗೆ ರಾಜಕೀಯ, ಸಾಂಸ್ಕೃತಿಕ ವಿವರಗಳನ್ನು ದಾಖಲಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಉದ್ರಿಯ ಅರಸರನ್ನು ಕೋಳಲಾಪುರವರಾಧೀಶ್ವರರೆಂದು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.

[1]ಹಾಗಾಗಿ ಇವರು ಮೂಲತಃ ಗಂಗ ವಂಶಿಯರೇ ಆಗಿದ್ದು ಕಲ್ಯಾಣಿ ಚಾಲುಕ್ಯರ ಮಾಂಡಲಿಕರಾಗಿ ನಂತರ ಹೊಯ್ಸಳ ಮತ್ತು ಸೇವುಣರ ಕಾಲದಲ್ಲಿ ಮಹಾಮಂಡಲೇಶ್ವರರಾಗಿ ಪ್ರಸಿದ್ಧರಾದರು.

ಜಿಡ್ಡುಗಳಿಗೆ ೭೦, ನಾಗರಖಂಡ ೭೦ ಮತ್ತು ಎಡವಟ್ಟೆ ೭೦ ಮುಂತಾದ ನಾಡುಗಳ ಆಡಳಿತದ ವಿಭಾಗಗಳನ್ನು ಹೊಂದಿರುವ ಬನವಾಸಿಯು ಮಧ್ಯಕಾಲೀನ ಸಾಮ್ರಾಜ್ಯಗಳಲ್ಲೇ ಅತ್ಯಂತ ಸಮೃದ್ಧ ಪ್ರದೇಶವಾಗಿತ್ತು. ಕುತೂಹಲದ ಅಂಶವೆಂದರೆ ಪ್ರತಿಯೊಂದು ನಾಡಿಗೆ ಅದರದ್ದೇ ಆದ ರಾಜಧಾನಿ ಇರುವುದು. ಬಂದಳಿಕೆ (ಬಾಂಧವಪುರ) ನಾಗರಖಂಡದ ರಾಜಧಾನಿ. ಸಾತೇನಹಳ್ಳಿ ಸತ್ತಳಿಗೆ ನಾಡಿನ ಕೇಂದ್ರ ಸ್ಥಾನವಾಗಿತ್ತು.[2]ಅಂತೆಯೇ ಜಿಡ್ಡುಗಳಿಗೆ ೭೦ಕ್ಕೆ ರಾಜಧಾನಿಯಾಗಿ ಪ್ರಸಿದ್ಧಿ ಪಡೆದಿದ್ದ ಉದ್ರಿಯು ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ಕೇಂದ್ರದಿಂದ ಉತ್ತರ ಪೂರ್ವಕ್ಕೆ ಸುಮಾರು ೧೪ ಕಿ.ಮೀ. ದೂರದಲ್ಲಿರುವ ಒಂದು ಹೋಬಳಿ ಗ್ರಾಮವಾಗಿದೆ.[3](ನಕಾಶೆ ನೋಡಿ) ಇದಕ್ಕೆ ಮೇರೆಯಾಗಿ ಉತ್ತರ ದಿಕ್ಕಿನಲ್ಲಿ ಬೆಟ್ಟದ ಕುರ್ಲಿ, ದಕ್ಷಿಣಕ್ಕೆ, ಚಿಕ್ಕವಳ್ಳಿ, ಪೂರ್ವದಲ್ಲಿ ತೊಗರ್ಸಿ ಮತ್ತು ಪಶ್ಚಿಮ ದಿಕ್ಕಿನಲ್ಲಿ ಎಡೆಕೊಪ್ಪ ಗ್ರಾಮಗಳಿವೆ.

ಅಧ್ಯಯನ ಆಕರಗಳು

ಅತ್ಯಮೂಲ್ಯವಾದ ಲಿಖಿತ ದಾಖಲೆಗಳೆಂದರೆ ಶಾಸನಗಳು. ಉದ್ರಿಯ ಅರಸರ ರಾಜಕೀಯ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕೆ ಶಾಸನಗಳೇ ಮೂಲ ಆಕರಗಳಾಗಿವೆ. ಆದ್ದರಿಂದ ಈ ಲೇಖನಕ್ಕೆ ಆ ಶಾಸನಗಳನ್ನು ಮತ್ತು ಈವರೆಗಿನ ಅಧ್ಯಯನಗಳ ನೆರವನ್ನು ಪಡೆಯಲಾಗಿದೆ. ಸುಮಾರು ೨೧ ಶಾಸನಗಳನ್ನು ಅಧ್ಯಯನ ಮಾಡಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.

ಉದ್ರಿಯ ಭೌಗೋಳಿಕ ಹಿನ್ನೆಲೆ, ಅರಸರ ವಂಶಾವಳಿ, ಸಾಮ್ರಾಜ್ಯಗಳ ಚೌಕಟ್ಟಿನಲ್ಲಿ ಅವರ ಸ್ಥಾನಮಾನ, ಅವರಿಗಿದ್ದ ಬಿರುದುಗಳು ಮತ್ತು ಅವರ ರಾಜಕೀಯ ಸಾಧನೆಗಳ ಬಗೆಗಿನ ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಬಿ.ಎಲ್.ರೈಸ್ ಅವರ “ಎಪಿಗ್ರಾಪಿಯಾ ಕರ್ನಾಟಕಾ” ಶಿವಮೊಗ್ ಜಿಲ್ಲೆ ಸಂ. ೮ ಉದ್ರಿ ಶಾಸನಗಳು ಎಂಬ ಭಾಗವನ್ನು ಗಮನಿಸಲಾಗಿದೆ.[4]

ಧಾರ್ಮಿಕವಾಗಿ ಮಧ್ಯಯುಗವೆಂದರೆ ಸ್ಥಿತ್ಯಂತರದ ಕಾಲ. ಉದ್ರಿಯ ಅರಸರ ಆಳ್ವಿಕೆಯಲ್ಲಿ ನಿರ್ಮಿತವಾದ ದೇವಾಲಯಗಳು ಮತ್ತು ಅವುಗಳಿಗೆ ದೊರೆತ ದಾನ ದತ್ತಿಗಳಂತಹ ಸಾಂಸ್ಕೃತಿಕ ಮಹತ್ವವುಳ್ಳ ಅಂಶಗಳನ್ನು ಶಾಸನಗಳ ಆಧಾರದಿಂದ ವಿಶ್ಲೇಷಿಸಲಾಗಿದೆ. ಹಾಗೂ ಕ್ಷೇತ್ರಕಾರ್ಯದಿಂದ ಪೂರಕ ವಿವರಗಳನ್ನು ಸಂಗ್ರಹಿಸಲಾಗಿದೆ.

ಈವರೆಗಿನ ಅಧ್ಯಯನ

‘ಉದ್ರಿ’ಯ ಅರಸರ ರಾಜಕೀಯ ಸಾಧನೆಗಳ ಮತ್ತು ಅವರ ಸಾಂಸ್ಕೃತಿಕ ಕೊಡುಗೆಗಳ ಬಗೆಗೆ ವ್ಯಾಪಕವಾದ ಅಧ್ಯಯನ ನಡೆದಿಲ್ಲ. ಶಿವಮೊಗ್ಗ ಗೆಜಿಟೇಯರ ಪುಟ ಸಂಖ್ಯೆ ೬೭೦ ರಲ್ಲಿ ‘ಉದ್ರಿ’ ಯ ಕೆಲವು ದೇವಾಲಯಗಳ ಲಕ್ಷಣಗಳ ಬಗೆಗೆ ಸಂಕ್ಷಿಪ್ತವಾಗಿ ಉಲ್ಲೇಖಿಸಲಾಗಿದೆ. ರಾಜಾರಾಮ ಹೆಗೆಡೆ, ರಾಮಭಟ್ಟ ಮತ್ತು ಭೋಜರಾಜ ಪಾಟೀಲರು ಬನವಾಸಿ ನಾಡಿನಲ್ಲಿ ಚಾರಿತ್ರಿಕ ಸಂಶೋಧನೆ ಮಾಡಿರುತ್ತಾರೆ. ಆದರೆ ಅವರ ಬಿಡಿ ಲೇಖನಗಳಲ್ಲಿ ‘ಉದ್ರಿ’ಯ ಅರಸರ ರಾಜಕೀಯ ಮತ್ತು ಸಾಂಸ್ಕೃತಿಕ ಸಾಧನೆಗಳ ಬಗೆಗೆ ಆಳವಾದ ಅಧ್ಯಯನ ನಡೆದಿಲ್ಲ. ರಾಜಾರಮ ಹೆಗಡೆಯವರ ಅಧ್ಯಯನ ಆರ್ಟ ಆಂಡ್ ಪೇಟ್ರನೇಜ್ ಇನ್ ಮಿಡೀವಲ್ ಬನವಾಸಿ ೧೨೦೦೦ದಲ್ಲಿ ಉದ್ರಿಯ ಶಾಂತಿನಾಥ ಬಸದಿಯ ತಲ ವಿನ್ಯಾಸ, ಉದ್ರಿಯ ಇತರ ದೇವಾಲಯಗಳ ಕುರಿತು ಮತ್ತು ಕ್ರಿ.ಶ. ೧೧೪೫ ರ ಉದ್ರಿಯ ಶಾಸನದಲ್ಲಿ ಕುಂತಲನಾಡಿನ ವರ್ಣನೆ ಬಗೆಗೆ ಇರುವ ಮಾಹಿತಿ ವಿವರಿಸಿದ್ದಾರೆ.[5]ರಾಮಭಟ್ಟರವರು ಮಲೆನಾಡಿನ ಜೈನ ಅರಸೊತ್ತಿಗೆ ಒಂದು ಅಧ್ಯಯನದಲ್ಲಿ ಜಿಡ್ಡುಳಿಗೆಯ ಗಂಗರು ಎಂಬ ಲೇಖನದಲ್ಲಿ ಉದ್ರಿಯ ಅರಸರ ಸಂಕ್ಷಿಪ್ತ ರಾಜಕೀಯ ಚರಿತ್ರೆಯನ್ನು ವಿಶ್ಲೇಷಿಸಿದ್ದಾರೆ.[6]

ಉದ್ರಿಯ ಪರಿಸರದ ವರ್ಣನೆ

ಉದ್ರಿಯ ಶಾಸನವೊಂದು (ಕ್ರಿ.ಶ. ೧೧೩೯) ಉದ್ರಿಯ ಮತ್ತು ಅದರ ಪರಿಸರದ ಭೌಗೋಳಿಕ ಸಿರಿ ಸಂಪತ್ತಿನ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದೆ. ಅದರ ವರ್ಣನೆ ಕೆಳಗಿನಂತಿದೆ.[7]

ಕುಂತಳ ದೇಶದ ಬನವಾಸಿ ನಾಡಿನಲ್ಲಿ ಜಿಡ್ಡುಳಿಗೆ ನಾಡಿನ ರಾಜಧಾನಿ ಉದ್ದರೆಯು ಚಂದ್ರನಂತೆ ಕಂಗೊಳಿಸುತ್ತಿತ್ತು. ಸುತ್ತಲೂ ಬೆಳೆದಿರುವ ಶ್ರೀಗಂಧ, ಭತ್ತದ ಗದ್ದೆಗಳು, ತೆಂಗು, ಕಮಲದ ಸರೋವರಗಳಿಂದ ಉದ್ರಿಯು ಶೋಭಾಯಮಾನವಾಗಿತ್ತು. ಹಾಗೆಯೇ ಅಲ್ಲಿನ ದಟ್ಟವಾದ ನಿಸರ್ಗ ಸೌಂದರ್ಯಕ್ಕೆ ಕಾರಣವಾದ ಬಕುಲಾ, ತಿಲಕ, ಸಂಪಿಗೆ, ಅಶೋಕ, ನೇರಳ, ಜಂಜೀರ, ಅಡಿಕೆ ಮುಂತಾದ ವೃಕ್ಷಗಳಲ್ಲದೆ, ಕುರವಂತ, ವೀಳ್ಯದೆಲೆಯ ಬಳ್ಳಿಗಳ ವಿವರಗಳನ್ನು ಆ ಶಾಸನ ಕೊಡುತ್ತದೆ. ಅನೇಕ ಕೆರೆ ಕಾಲುವೆಗಳಿಂದಲೂ ದೊಡ್ಡ, ದೊಡ್ಡ ಮನೆಗಳಿಂದಲು ಕೂಡಿದ ಉದ್ದರೆಯ ವಿದ್ವಾಂಸರಿಗೆ, ಪಂಡಿತರಿಗೆ, ಭೋಗಿಗಳಿಗೆ, ಯೋಗಿಗಳಿಗೆ ಸಂಗಮ ಸ್ಥಾನವಾಗಿತ್ತೆಂದು ತಿಳಿದು ಬರುತ್ತದೆ. ಜಿಡ್ಡುಳಿಗೆ ನಾಡಿಗೆ ರಾಜಧಾನಿಯೆಂದು ತಿಳಿದು ಬರುವ ಇಂದಿನ ಉದ್ರಿಯು ಶಾಸನಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಲ್ಪಟ್ಟಿದೆ. ಅವುಗಳಲ್ಲಿ ಮುಖ್ಯವಾದ ಹೆಸರುಗಳೆಂದರೆ : ಉದ್ದರೆ,[8]ಉದರ್ರೆ,[9]ಯುದ್ದರೆ,[10]ಜದರ ದುರ್ಗಾ ಉದ್ದರೆ,[11]ಉದ್ದರಿಪೂರ[12] ಮತ್ತು ಉದ್ದರೆಯ ಪುರ[13]ಎಂಬುವುದು. ಕ್ರಿ.ಶ. ೧೧೪೫ರ ಶಾಸನವೊಂದು ಜಿಡ್ಡುಳಿಗೆ ನಾಡಿಗೆ ಉದ್ಧರೆ ಎಂಬ ರಾಜಧಾನಿ ಇತ್ತು ಎಂದು ತಿಳಿಸುತ್ತದೆ.

04_270_MAM-KUH

ರಾಜಕೀಯ ಚರಿತ್ರೆ

ಬಿಟ್ಟಿಗ : ಉದ್ರಿಯ ಅರಸರ ಇತಿಹಾಸವು ಬಿಟ್ಟಿಗನಿಂದ ಪ್ರಾರಂಭವಾಗುತ್ತದೆ. ಕ್ರಿ.ಶ. ೧೧೯೮ರ ಶಾಸನದಲ್ಲಿ ಈತನ ಪ್ರಥಮ ಉಲ್ಲೇಖವಿದೆ. ಈತನು ೧೧ನೇ ಶತಮಾನದಲ್ಲಿ ಜೀವಿಸಿದ್ದಿರಬಹುದು. ಇದೇ ಶಾಸನದಲ್ಲಿ ಈತನನ್ನು ‘ಕಲಿಜಟ್ಟಿಗ’ ಎಂದು ಕರೆಯಲಾಗಿದೆ.[14]ಅಸಾಧಾರಣ ಶೌರ್ಯವುಳ್ಳವನು, ಛಲದ ಸ್ವಭಾವದವನು ಮತ್ತು ಅರಿಭಯಂಕರನು ಆದ ಬಿಟ್ಟಿಗನು ತನ್ನ ವೈರಿಗಳ ಪಟ್ಟಣವನ್ನು ಸುಟ್ಟು ‘ಕಂಚಿಗನಾದ’ ಎಂಬ ಬಿರುದನ್ನು ಪಡೆದು, ಉದ್ರಿಯಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದನು.

ಈತನ ಮಗ ಮಾರಸಿಂಗ ಗಂಗಕುಲಕ್ಕೆ ಉತ್ತಮನೂ ಅಸಾಧಾರಣ ಪರಾಕ್ರಮಿಯೂ ಆಗಿದ್ದನು. ಇವನ ಮಗ ಕೀರ್ತಿದೇವ.

ಚಾಲುಕ್ಯ ಅಥವಾ ವಿಕ್ರಮಾದಿತ್ಯನ ರಾಜ್ಯೋದಯದ ಕಾಲದಲ್ಲಿ ಉದ್ದರೆಯಲ್ಲಿ ಒಬ್ಬ ಯಕ್ಕಲರಸನು ಆಳುತ್ತಿದ್ದನು. ಅವನಿಗೆ ಸಂಬಂಧಿಸಿದ ೧೦೭೭, ೧೦೮೩ ರ ಶಾಸನಗಳು ಅಲ್ಲಿವೆ. ಆದರೆ ಈ ಯಕ್ಕಲನು ಮೊದಲನೇ ಯಕ್ಕಲನೇ ಎಂಬುದು ಸ್ಪಷ್ಟವಿಲ್ಲ.

ಮಾರಸಿಂಗ II :ಕೀರ್ತಿದೇವನ ಮಗನಾದ ಈತನು ಉದ್ರಿಯ ಅರಸರಲ್ಲಿ ಪರಾಕ್ರಮಿಯಾಗಿದ್ದನು. ಚಾಲುಕ್ಯ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ಕಂಚಿಗೆ ದಾಳಿಯಿಟ್ಟು ಆ ನಾಡಿನ ಸಂಪತ್ತನ್ನು ಸೂರೆಗೊಂಡನು.[15]ಮಾರಸಿಂಗನು ತೇಜಸ್ವಿಯೂ, ಕೀರ್ತಿವಂತನೂ, ಯುದ್ಧ ಪ್ರಿಯನೂ ಆಗಿದ್ದನೆಂದು ಅವನ ಗುಣ ಮತ್ತು ಸಾಮರ್ಥ್ಯದ ಬಗ್ಗೆ ಕ್ರಿ.ಶ. ೧೧೩೯ರ ಶಾಸನ ಮಾಹಿತಿ ನೀಡುತ್ತದೆ.

ಯೆಕ್ಕಲದೇವ I :ಮಾರಸಿಂಗನ ಪತ್ನಿ ಅನಲದೇವಿ ಹಾಗೂ ಅವರ ಮಗ ಯೆಕ್ಕಲದೇವ. ಶಾಸನಗಳಲ್ಲಿ ಈತನನ್ನು ಯೆಕ್ಕಲದೇವ ಮತ್ತು ಯೆಕ್ಕಲಭೂಪನೆಂದು ಗುರುತಿಸಲಾಗಿದೆ. ಲಭ್ಯ ಶಾಸನಗಳ ಆಧಾರದಿಂದ ತಿಳಿದು ಬರುವುದೆಂದರೆ ಜಿಡ್ಡುಳಿಗೆ ಗಂಗ ಅರಸರಲ್ಲಿ ಯೆಕ್ಕಲಭೂಪ ಪ್ರಖ್ಯಾತನಾಗಿದ್ದನು. ಈತನ ಆಳ್ವಿಕೆಯಲ್ಲಿ ಜಿಡ್ಡುಳಿಗೆ ನಾಡಿನ ಗೌರವಕೀರ್ತಿ ಮತ್ತು ವೈಭವಗಳು ದೇಶೀಯ ನಾಡುಗಳಲ್ಲಿ ಜನಜನಿತವಾದವು. ತನ್ನ ಶಕ್ತಿ, ಸಾಹಸ, ಧೈರ್ಯಗಳಿಂದ ಈತನು ಗಂಗರ ಕುಲವೆಂಬ ಕಮಲವನಕ್ಕೆ ಸೂರ್ಯನಂತಿದ್ದನು.[16]

“ಮನ್ಮಥನಂತೆ ಸುಂದರನೂ, ವೈರಿಗಳನ್ನು ಸದೆ ಬಡಿದವನು, ಭೂಲೋಕಕ್ಕೆ ಕಣ್ಮಣಿಯಂತಿರುವ ಯೆಕ್ಕಲಭೂಪನು ಅತ್ಯಂತ ಉದಾರಿಯೂ ಆಗಿದ್ದನು. ಪರ ಚಿಂತಕನೂ, ಮಹಾವೀರನೂ, ತರುಣಿಯರ ಕಣ್ಮನ ಸೆಳೆವ ಸ್ವುರದ್ರೂಪಿಯೂ, ಸಜ್ಜನರ ರಕ್ಷಕನೂ, ದಕ್ಷ ಆಡಳಿತಗಾರನೂ ಮತ್ತು ಸ್ವಾರ್ಥರಹಿತನೂ ಆದ ಪುರುಷ ಶ್ರೇಷ್ಠನಾಗಿದ್ದನು. ಯೆಕ್ಕಲಭೂಪತಿಯು ಅಜಾನುಬಾಹುವಾಗಿದ್ದು ತನ್ನನ್ನು ಎದುರಿಸಿದ ರಾಜರುಗಳನ್ನು ಸದೆ ಬಡಿದು ಅವರ ಸೈನ್ಯವನ್ನೆಲ್ಲ ದಿಕ್ಕೆಟ್ಟು ಓಡಿಸಿ ಶತ್ರುಗಳ ಸೊಕ್ಕನ್ನು ಅಡಗಿಸಿ ಬಿಟ್ಟಿದ್ದನು. ಇಂತಹ ಯೆಕ್ಕಲ ರಾಜ ಗಂಗಮಾರ್ತಾಂಡದೇವನು ರಾಜ್ಯವನ್ನು ಆದರ್ಶಪ್ರಾಯವಾಗಿ ಆಳುತ್ತಿದ್ದನು. ಕ್ರೂರಿಗಳಾದ ಶತ್ರುರಾಜರ ಸೇವೆಯೆಂಬ ಮದಗಜಗಳನ್ನು ಸದರ ಬಡಿದದ್ದಲ್ಲದೆ, ಶತ್ರುರಾಜರ ಪತ್ನಿಯರು ಕಣ್ಣೀರು ಸುರಿಸುವಂತೆ ಮಾಡಿದನು. ಗಂಭೀರವಾದ ಮೋಡದಂತೆ ಇದ್ದ ಈತ, ಬಹುಶಃ ಎಣ್ಣೆಗೆಂಪು ಬಣ್ಣದಿಂದ ಶೋಭಿಸುತ್ತಿದ್ದನು.”[17] ಅದೇ ಶಾಸನ ಯೆಕ್ಕಲ ಭೂಪನನ್ನು ಮಹಾನ್ ಉದಾರಿ ಎಂಬುದಾಗಿಯೂ ವರ್ಣಿಸಿದೆ. ಅವನು ವಿಶ್ವದ ಸಕಲವಿದ್ಯೆಗಳಿಂದ ಭೂಷಿತನಾದವನು.[18]ಈತನು ಕಲೆ ಮತ್ತು ಸಾಹಿತ್ಯಗಳಿಗೆ ಆಶ್ರಯದಾತನೂ ಆಗಿದ್ದನು. ಅಂಗ, ವಂಗ, ಕಳಿಂಗ, ಕುರುಜಾಂಗಳ, ಮಗದ, ಆಂಧ್ರ ಆವಂತಿ, ಮಧ್ಯದೇಶ, ತುರುಷ್ಕ, ಚೋಳ, ಮುಂತಾದ ಬೇರೆ ಬೇರೆ ರಾಜ್ಯಗಳ ಕವಿಗಳಿಗೂ ವಿದ್ವಾಂಸರಿಗೂ ಉತ್ತಮವಾದ ಧನ, ಕನಕ, ವಸ್ತ್ರಗಳಿಂದ ಸನ್ಮಾನಿಸಿದನು. ಹೀಗೆ ಮಹಾನ್ ಉದಾರಿಯಾದ ಯೆಕ್ಕಲಭೂಪನು ದಾನಶೂರ ಕರ್ಣನಿಗೆ ಸಮಾನವಾಗಿ ಶೋಭಿಸುತ್ತಿದ್ದನು.”

ಬೊಪ್ಪಾದೇವಿ : ಇವಳು ಯೆಕ್ಕಲದೇವನ ಪಟ್ಟದ ರಾಣಿ, ಕ್ರಿಶ. ೧೨೭೨ ರ ಉದ್ರಿಯ ಶಾಸನದಲ್ಲಿ ಬೊಪ್ಪಾದೇವಿಯ ಗುಣ ಮತ್ತು ಅವಳ ಸೌಂದರ್ಯದ ಬಗ್ಗೆ ವಿವರಿಸಿದ್ದು ಅದು ಇಂತಿದೆ.

“ಅವಳು ಮಹಾಸುಂದರಿ. ಹೀಗೆ ನೋಡಿ ನಕ್ಕರೆ ಬೆಳದಿಂಗಳ ಮಳೆಯು ಸುರಿದಂತೆ. ಸೌಭಾಗ್ಯದಲ್ಲಿ ಉಮೆಯಂತೆ, ರೂಪದಲ್ಲಿ ರತಿಯಂತೆ, ಕಾಂತಿಯಲ್ಲಿ ಲಕ್ಷ್ಮೀಯಂತೆ, ಮಾತಿನಲ್ಲಿ ಸರಸ್ವತಿಯಂತೆಯೂ ಇದ್ದ ಯೆಕ್ಕಲದೇವನ ಪಟ್ಟದಮಹಿಶಿ ಬೊಪ್ಪಾದೇವಿ ಅವನನ್ನು ಅನುರಾಗದಿಂದ ನೋಡಿಕೊಳ್ಳುತ್ತಿದ್ದಳು.”[19]

ಯೆಕ್ಕಲರಸನಿಗೆ ಗಂಡು ಮಕ್ಕಳಿರಲಿಲ್ಲವೆಂದು ತೋರುತ್ತದೆ. ಈತನ ತಂಗಿ ಚಟ್ಟಲದೇವಿ ದಸಮಮರಸನ ಪತ್ನಿ. ಅವಳಿಗೆ ಮೂರು ಜನ ಮಕ್ಕಳಿದ್ದರು. ಎರಗ, ನರಸಿಂಗ ಮತ್ತು ಕೇಶವ.

ಎರಗ : ಚಟ್ಟಲದೇವಿಯ ಮೂರು ಮಕ್ಕಳಲ್ಲಿ ಎರಗ ಹಿರಿಯವನು. ಯೆಕ್ಕಲನ ನಂತರ ಪಟ್ಟಾಭಿಷಿಕ್ತನಾದ ಇವನಿಗೆ ಮಹಾವಿಷ್ಣು ಕುಲ ದೇವತೆಯಾಗಿತ್ತು. ೧೧೮೭ರ ಒಂದು ಶಾಸನವೂ ಎರಗಸನು ಉದ್ಧರೆಯನ್ನು ಆಳುತ್ತಿದ್ದುದಾಗಿ ತಿಳಿಸುತ್ತದೆ.[20]

ನರಸಿಂಗ : ಎರಗನ ತಮ್ಮನಾದ ನರಸಿಂಗನನ್ನು ಶಾಸನದಲ್ಲಿ ಸಿಂಗದೇವನೆಂದು ಸಹ ಕರೆಯಲಾಗಿದೆ. ಈತನು ಕವಿಯಾಗಿದ್ದು ಕೊಳಾಲಪುರವರಾಧೀಶ್ವರ ಎಂಬ ಬಿರುದನ್ನು ಪಡೆದಿದ್ದನು. ಲಕ್ಷ್ಮಾದೇವಿ ಈತನ ಪತ್ನಿ.

ಎರಡನೆಯ ಯೆಕ್ಕಲ ೧೧೯೩-೧೨೧೭ : ನರಸಿಂಗ ಮತ್ತು ಲಕ್ಮಾದೇವಿಯ ಮಗನಾದ ಎರಡನೇ ಯೆಕ್ಕಲ ಜಿಡ್ಡುಳಿಗೆ ಗಂಗರ ಕೊನೆಯ ಅರಸ. ಉದ್ರಿಯ ಶಾಸನ (ಕ್ರಿ.ಶ. ೧೧೯೮) ಯೆಕ್ಕಲದೇವನು ಅನೇಕ ಕವಿಗಳಿಗೂ, ಪಂಡಿತರಿಗೂ ಮತ್ತು ವಿವಿಧ ಕಲಾ ಮಂಡಿತರಿಗೂ ಆಶ್ರಯದಾತನಾಗಿದ್ದನೆಂದು ಉಲ್ಲೇಖಿಸುತ್ತಿದೆ.”[21] ಭೂದಾನ, ಅನ್ನದಾನ ಮತ್ತು ಕನ್ಯಾದಾನಗಳಿಂದ ಬ್ರಾಹ್ಮಣರನ್ನು ತೃಪ್ತಿಪಡಿಸುತ್ತಿದ್ದನು. ಪರಾಕ್ರಮಿಯೆಂದು ಹೆಸರು ಪಡೆದ ಈತನು ಹಲವಾರು ಯುದ್ಧಗಳ ಮಧ್ಯದಲ್ಲೂ ಧಾರ್ಮಿಕ ಕಾರ್ಯಗಳಲ್ಲಿ ತನ್ನನ್ನು ತೊಡಿಗಿಸಿಕೊಂಡಿದ್ದನು ಎಂದು ಪ್ರಶಂಸಿಸುತ್ತದೆ. ಕ್ರಿ.ಶ. ೧೨೧೭ರಲ್ಲಿ ಬಾದ್ರಪದ ಅಮವಾಸ್ಯೆ ಸೋಮವಾರ ಸೂರ್ಯಗ್ರಹಣ ಸಂಕ್ರಮಣದಂದು ಶ್ರೀ ಲಕ್ಷ್ಮೀನಾರಾಯಣ ದೇವರ ಬ್ರಹ್ಮಪುರಿಯ ಮಹಾಜನಗಳ ಮುಖಂಡರಾದ ವೈಜನಾಥ ಭಟ್ಟೋಪಾಧ್ಯಾಯರ ಪಾದ ತೊಳೆದು, ಮೂವತ್ತೈದು ಕಂಬದ ಗದ್ದೆ ಮತ್ತು ಎರಡು ಹಾಗವನ್ನು ಉದ್ರಿಯ ಅಗ್ರಹಾರಕ್ಕೆ ದಾನ ಮಾಡಿದನು.[22]

ಎರಡನೇ ಯಕ್ಕಲನನ್ನು ಶಾಸನದಲ್ಲಿ ಮಹಾಮಂಡಳೇಶ್ವರ ಕೋಳಾಪುರವದಾಧೀಶ್ವರ, ಶ್ರೀ ಮನು ಮಹಾಮಾಂಡಳಿಕ ಗಂಡಬೇರುಂಡ ಸತ್ಯತ್ಯಾಗ ಸಾಹಸಾಭಿನವ, ಧರ್ಮಪುತ್ರ, ಎಂದು ಕರೆಯಲಾಗಿದೆ.[23]

ಶೂರನಾದ ಮಹಾಮಂಡಳೇಶ್ವರ ಯೆಕ್ಕಲದೇವನು ಕತ್ತಿಯನ್ನು ಹಿಡಿದರೆ ವೈರಿಗಳ ರುಂಡ ಉರುಳುತ್ತಿದ್ದವು. ರಣರಂಗದಲ್ಲಿ ಅವನನ್ನು ಎದುರಿಸಿ ಗೆಲ್ಲುವುದು ಯಾರಿಂದಲೂ ಸಾಧ್ಯವಿರಲಿಲ್ಲ. ದಾರಿ ತಪ್ಪಿದವರನ್ನು ನೀತಿ ಬಿಟ್ಟವರನ್ನು ಸರಿ ದಾರಿಗೆ ತರುವಲ್ಲಿ ಅಸಾಧಾರಣನಾಗಿದ್ದನು ಎಂದು ಈತನ ವೀರ ಗುಣದ ಬಗ್ಗೆ ಶಾಸನದಲ್ಲಿ ವರ್ಣನಾತ್ಮಕವಾಗಿ ವಿವರಿಸಿದೆ.[24]

ಉದ್ರಿ ಅರಸರ ದಂಡನಾಯಕರು

ಉದ್ರಿ ಅರಸು ಮನೆತನದ ಅಭ್ಯುದಯಕ್ಕೆ ಮತ್ತು ಆ ನಾಡಿನ ಸಾಂಸ್ಕೃತಿಕ ಅಭಿವೃದ್ಧಿಗೆ ಅವರ ದಂಡನಾಯಕರ ಕೊಡುಗೆ ಗಣನೀಯವಾಗಿದೆ. ಸೈನ್ಯದ ದಂಡನಾಯಕರಾಗಿ ಯುದ್ಧ ಮಾಡುವುದಲ್ಲದೆ, ಅವರ ವ್ಯಾಪ್ತಿಗೆ ಒಳಪಟ್ಟಿರುವ ಪ್ರದೇಶಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಅರಸರ ಅನುಮತಿ ಪಡೆದು ಅವರ ಪ್ರೋತ್ಸಾಹಗಳಿಂದ ಒಳ್ಳೆಯ ಕೆಲಸಗಳನ್ನು ಹಮ್ಮಿಕೊಳ್ಳಲು ಸ್ವತಂತ್ರರಾಗಿದ್ದರು. ದೇವಾಲಯಗಳ ನಿರ್ಮಾಣ ಮತ್ತು ಅವುಗಳ ನಿರಂತರ ನಿರ್ವಹಣೆಗೆ ದಾನ ಮಾಡುವುದರ ಮೂಲಕ ಧಾರ್ಮಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಇವರು ಕೆಲವು ಸಂದರ್ಭದಲ್ಲಿ ಪ್ರಧಾನ ಮಂತ್ರಿಯ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು.

ಸಿಂಗಣ ದಂಡನಾಯಕ : ಯೆಕ್ಕಲರಸನ ದಂಡನಾಯಕರಲ್ಲಿ ಸಿಂಗಣ ಮೊದಲಿಗ. ಇವನ ಉಲ್ಲೇಖ ಕ್ರಿ.ಶ. ೧೦೭೭ರ ಶಾಸನದಲ್ಲಿ ಬರುತ್ತದೆ.[25]ಶಾಸನದಲ್ಲಿ ಈತನನ್ನು ಗುಣದ ಕಣಿ ಜೈನಚೂಡಾಮಣಿ ವೈರಿ ಬಲಕ್ಕೆ ಸಮರ ಮುಖದೊಳ ಸಿಂಗಣ ದಂಡಾಧಿಪತಿ ಎಂದು ಕರೆಯಲಾಗಿದೆ. ಮಹಾವೀರನಾದ ಸಿಂಗಣ ಜೈನಧರ್ಮೀಯನಾಗಿದ್ದನು. ಇವನು ಯುದ್ಧದಲ್ಲಿ ಹೋರಾಡುತ್ತಾ ವೀರಸ್ವರ್ಗ ಹೊಂದಿದ ಅಂಶವು ತಿಳಿದುಬರುತ್ತದೆ.

ಬೊಪ್ಪದೇವ : ಇವನು ಸಿಂಗಣ ದಂಡನಾಯಕ ಮತ್ತು ಆತನ ಪತ್ನಿ ಮಹಾದೇವಿಯರ (ಬೋಪದೇವ) ಮಗ, ಬೋಪದೇವನು ಯೆಕ್ಕಲದೇವನ ದಂಡಾಧಿಪತಿಯಾಗಿಯೂ ಪ್ರಧಾನ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದನು.[26]ಇವನ ಪತ್ನಿ ಬೋಪಿಯಕ್ಕ ಜೈನ ಧರ್ಮೀಯಳು.

ಸೋಮ : ಬೋಪ ಮತ್ತು ಬೊಪ್ಪಾದೇವಿಯರ ಮಗ ಸೋಮ. ಇವನ ಗುಣವನ್ನು ಭೂಮಂಡಲವೇ ಕೊಂಡಾಡುತ್ತಿತ್ತು ಎಂದು ಕ್ರಿ.ಶ. ೧೧೯೮ ರ ಶಾಸನ ವರ್ಣಿಸುತ್ತದೆ.[27]ಈತನ ಪತ್ನಿ ಸೋಮಲದೇವಿ ಮಹದೇವ, ರಾಮ ಮತ್ತು ಕೇಶವ ಎಂಬ ಮೂವರು ಇವರ ಮಕ್ಕಳು. ಇವರಲ್ಲಿ ಮಹದೇವ ಮತ್ತು ಕೇಶವರು ಸಚಿವರು ಮತ್ತು ದಂಡಾಧಿಪತಿಗಳಾಗಿದ್ದರೆಂದು ತಿಳಿಯುತ್ತದೆ. ಇವರಲ್ಲಿ ರಾಮ ಉತ್ತಮನು ಮತ್ತು ಧರ್ಮ ಕರ್ಮಗಳಲ್ಲಿ ಪ್ರೀತಿ ಇಟ್ಟುಕೊಂಡವನು ಆಗಿದ್ದನು.[28]

ಮಹಾದೇವ ದಂಡನಾಯಕ : ಇವನು ಸೋಮನ ಹಿರಿಯ ಮಗ. ಉದ್ರಿ ಅರಸರ ದಂಡನಾಯಕರಲ್ಲಿ ಅಪ್ರತಿಮ ವೀರ, ಶಾಸನಗಳಲ್ಲಿ ಈತನನ್ನು ಮಹಾ ಪ್ರಧಾನ ಮಹಾದೇವ ದಂಡನಾಯಕ ಎಂದು ಕರೆಯಲಾಗಿದೆ.[29]ಯುದ್ಧ ಪ್ರವೀಣಂ ಎಂಬ ಪ್ರಶಂಸೆಗೆ ಪಾತ್ರನಾದವನು. ಯೆಕ್ಕಲರಸನ ಕೋಟೆಯ ರಕ್ಷಣೆಯಲ್ಲಿ ತನ್ನ ತೋಳ್ಬಲವನ್ನು ತೋರಿಸಿ ಆತನ ರಾಜ್ಯ ಅಭ್ಯುದಯ ಹೊಂದಲು ಮುಖ್ಯ ಕಾರಣನಾದನು. ಈತನ ಸಾಹಸ ಶಕ್ತಿ ಮತ್ತು ಧೈರ್ಯ ಗುರುತಿಸಿ ಹೊಯ್ಸಳ ವೀರಬಲ್ಲಾಳ ಅವನನ್ನು ತನ್ನ ಸೇನಾಧಿಪತಿಯಾಗಿ ನೇಮಕ ಮಾಡಿಕೊಂಡಿರುವುದು ಮಹಾದೇವ ದಂಡನಾಯಕನ ವೀರ ಬದುಕಿಗೆ ಒಂದು ನಿದರ್ಶನವಾಗಿದೆ.[30]

ಸಕಲ ಕಲಾ ಪೋಷಕನು, ಮಹಾ ಬುದ್ಧಿವಂತ ಮತ್ತು ಸಕಲ ವಿದ್ಯೆಗಳಿಗೆ ಬ್ರಹ್ಮನಂತೆ ತೋರುವ ಒಬ್ಬ ವಿದ್ವಾಂಸ ದಂಡನಾಯಕನಾಗಿದ್ದನು ಎಂಬುವುದು ಅಲ್ಲಿಯ ಒಂದು ಶಾಸನ (ಕ್ರಿ.ಶ. ೧೧೯೮) ದಿಂದ ತಿಳಿಯುತ್ತದೆ.[31] ಈತನು ಜೈನಧರ್ಮದವನಾಗಿದ್ದು ಜೈನ ಸಾಹಿತ್ಯದಲ್ಲಿ ಪ್ರವೀಣನಾಗಿದ್ದನು. ಜೈನ ಧರ್ಮದ ವ್ರತಗಳನ್ನು ತಪ್ಪದೇ ಆಚರಿಸುತ್ತಿದ್ದನು. ಮಹದೇವನಿಗೆ ಗುರುವೆನಿಸಿದ ಜೈನ ಮುನಿ ಚಂದ್ರ ಭಟ್ಟಾರಕನು ಇಂದ್ರಿಯಗಳಿಗೆ ಸೋಲದೆ ತಪಸ್ಸು ಮಾಡುತ್ತಿದ್ದರು. ಅವನೊಬ್ಬ ಬ್ರಹ್ಮ ಚಾರಿಯಾಗಿದ್ದನೆಂದು ಎಲ್ಲಾ ಕಡೆ ಅವನ ಕೀರ್ತಿ ಹರಡಿತ್ತು.

ಮಹದೇವ ದಂಡನಾಯಕನು ಉದ್ರಿಯಲ್ಲಿ ಕ್ರಿ.ಶ. ೧೧೯೭ ರಲ್ಲಿ ಎರಗ ಜಿನಾಲಯ ಕಟ್ಟಿಸಿ ಅದರಲ್ಲಿ ಶಾಂತಿನಾಥ ಜಿನಬಿಂಬವನ್ನು ಪ್ರತಿಷ್ಠಾಪಿಸಿದನು. ಈ ಜಿನಾಲಯಕ್ಕೆ ಮಹಾಮಂಡಲೇರ್ಶವರ ಯೆಕ್ಕಲ ತನ್ನ ಪರಿವಾರ ಸಮೇತ ಬಂದು ಬಸದಿಯ ಜೀರ್ಣೋದ್ಧಾರಕ್ಕೆ ಭಕ್ತರ ಅನ್ನದಾನಕ್ಕೆ ದಾನ ಮಾಡಿದ್ದಾನೆ. ಈತನು ಜೈನ ಮುನಿಚಂದ್ರ ಭಟ್ಟಾರಕರ ಕಾಲು ತೊಳೆದು ಮೂರು ಮತ್ತರು ಭೂಮಿ ಎರಡು ಮತ್ತರು, ಒಂದು ಅಂಗಡಿ ಇವುಗಳನ್ನು ದತ್ತಿ ಬಿಟ್ಟಿದ್ದನು ಎಂದು ಕ್ರಿ.ಶ. ೧೧೯೮ ರ ಶಾಸನ ಉಲ್ಲೇಖಿಸುತ್ತದೆ.

ಮಹದೇವ ದಂಡನಾಯಕನ ಪತ್ನಿ ಲೋಕಲದೇವಿ. ಇವಳನ್ನು ಶಾಸನದಲ್ಲಿ ಜಿನಶಾಸನ ದೇವತೆ ಎಂದು ಬಣ್ಣಿಸಲಾಗಿದೆ.[32]ಜೈನ ಧರ್ಮವನ್ನು ಉನ್ನತಿಗೆ ತರುವಲ್ಲಿ ಅವಳು ಅತ್ತಿಮಬ್ಬೆಗೆ ಸಮಾನಳಾಗಿದ್ದಳು ಎಂದು ಕ್ರಿ.ಶ. ೧೧೯೮ರ ಶಾಸನ ಮುಕ್ತ ಕಂಠದಿಂದ ಹೊಗಳಿದೆ.

ಆಡಳಿತ

‘ಉದ್ರಿ’ಯ ಅರಸರು ರಾಜಕೀಯವಾಗಿ ಕಲ್ಯಾಣಿ ಚಾಲುಕ್ಯರ, ಹೊಯ್ಸಳರ ಮತ್ತು ಸೇವುಣರ ಸಾಮಂತರಾಗಿದ್ದರೂ, ಆಡಳಿತಾತ್ಮಕವಾಗಿ ಮಂಡಲೇಶ್ವರರಾಗಿದ್ದರು. ಯೆಕ್ಕಲ ದೇವನ ಆಜ್ಞೆಗಳನ್ನು ಆ ನಾಡಿನ ಎಲ್ಲಾ ಪ್ರಜೆಗಳು ನಿಷ್ಠೆಯಿಂದ ಪಾಲಿಸುತ್ತಿದ್ದರು ಎಂದು ಅಲ್ಲಿಯ ಕ್ರಿ.ಶ. ೧೧೯೮ರ ಶಾಸನ ತಿಳಿಸುತ್ತದೆ.[33]ವಾಸ್ತವಾಗಿ ಉದ್ರಿಯ ಅರಸರು ಸ್ವತಂತ್ರ ರಾಜರಂತೆ ಆಳಿರುತ್ತಾರೆ. ಮಾರಸಿಂಗ, ಯೆಕ್ಕಲದೇವ, ಮಹದೇವ ದಂಡನಾಯಕ ಮುಂತಾದವರ ಆಡಳಿತ ಈ ನಾಡಿನಲ್ಲಿ ನಡೆದಿದೆ. ಕ್ರಿ.ಶ. ೧೩ನೇ ಶತಮಾನದವರೆಗೂ ಜಿಡ್ಡುಳಿಗೆ ಒಂದು ಮುಖ್ಯ ಕಂಪಣವಾಗಿ ಆಡಳಿತ ವಿಭಾಗವಾಗಿತ್ತು. ಈ ನಾಡಿನ ರಾಜಧಾನಿ ಉದ್ರಿಯು ಒಂದು ಪ್ರಮುಖ ಪಟ್ಟಣವಾಗಿತ್ತು ಎಂಬುದು ಗಮನಾರ್ಹ ಅಂಶ. ಉದ್ರಿಯನ್ನು ನೆಲೆವೀಡು ಎಂದೂ ಕರೆಯಲಾಗಿದೆ.

ಬಿರುದಾವಳಿ

ಉದ್ರಿಯ ಕೆಲವು ಅರಸರನ್ನು ಶಾಸನಗಳಲ್ಲಿ ಕೋಳಾಲ ಪುರವರಾಧೀರ್ಶವರ, ಮಹಾ ಮಂಡಲೇರ್ಶವರ, ಗಂಡಭೇರುಂಡ, ಗಂಗಮಾರ್ತಾಂಡದೇವ ಹಾಗೂ ಧರ್ಮಪುತ್ರರೆಂದು ಕರೆಯಲಾಗಿದೆ.

ಉದ್ರಿಯ ಕೋಟೆ

ಉದ್ರಿಯ ಅರಸರ ದಂಡಾಧಿಪತಿಗಳು ಆ ನಾಡಿನ ಜನರ ರಕ್ಷಣೆಗಾಗಿ ಕೋಟೆಯನ್ನು ನಿರ್ಮಾಣ ಮಾಡಿದ್ದರು. ಮಹದೇವ ದಂಡನಾಯಕನು ತನ್ನ ಸಾಮರ್ಥ್ಯದಿಂದ ಯೆಕ್ಕಲದೇವನ ಕೋಟೆಯನ್ನು ರಕ್ಷಿಸಿ ಖ್ಯಾತನಾದನು.[34]ದಂಡನಾಯಕನ ಸ್ಥಾನ ಅನುವಂಶಿಕವಾಗಿತ್ತು. ಈಗ ಉದ್ರಿಯ ಗ್ರಾಮದ ಸುತ್ತು ಮಣ್ಣಿನ ಕೋಟೆಯ ಅಳಿದುಳಿದ ಭಾಗಗಳಿವೆ. ಬಹುಶಃ ಈ ಕೋಟೆಯನ್ನು ಯೆಕ್ಕಲದೇವನು ಕಟ್ಟಿಸಿರಬಹುದು. ಉದ್ರಿಯ ಕೋಟೆಯ ಬಗ್ಗೆ ಮೊದಲಿಗೆ ಕ್ರಿ.ಶ. ೧೧೯೮ರ ಶಾಸನಗಳಲ್ಲಿ ಯೆಕ್ಕಲದೇವನ ಉದ್ರಿ ಕೋಟೆ ಎಂಬ ಉಲ್ಲೇಖವಿದೆ.[35]

ಪೌರ ಸಮಿತಿ : ಉದ್ರಿ ಪಟ್ಟಣದ ಆಡಳಿತವನ್ನು ಪುರದ ಗಣ್ಯರು ನಡೆಸುತ್ತಿದ್ದರು. ಐದು ಸದಸ್ಯರನ್ನು ಹೊಂದಿರುವ ಪೌರ ಸಮಿತಿಯ ಮುಖ್ಯಸ್ಥ ಸಾಥಿಶೆಟ್ಟಿ. ಈತನ ಅನುಮತಿಯೊಂದಿಗೆ ಉದ್ರಿಯ ಪಟ್ಟಣದ ಕಾರ್ಯಕಲಾಪಗಳು ನಡೆಯುತ್ತಿದ್ದವು. ಜಸವಂತ ದಂಡನಾಯಕನು ಸಾಥಿಶೆಟ್ಟಿ ಮತ್ತು ನಗರದ ಐವರ ಅನುಮತಿ ಪಡೆದು ಬ್ರಹ್ಮಪುರಿಗೆ ದಾನ ಕೊಡಬೇಕಾದರೆ ಪೌರ ಸಮಿತಿಗೆ ಪರಮಾಧಿಕಾರ ಇತ್ತೆಂಬುದನ್ನು ಸೂಚಿಸುತ್ತದೆ.[36]ಮಹಾಮಂಡಳೇಶ್ವರ ಯೆಕ್ಕಲರಸನು ಸಹ ಲಕ್ಷ್ಮೀನಾರಾಯಣ ದೇವರ ಬ್ರಹ್ಮಪುರಿಗೆ ದಾನ ಕೊಡುವಾಗ ಸಾಥಿಶೆಟ್ಟಿಯ ಸಮ್ಮುಖದಲ್ಲಿ ನಗರದ ಗಣ್ಯರನ್ನು ಸೇರಿಸಿ ದಾನ ಕೊಟ್ಟಿರುವುದರಿಂದ ಸಾಥಿಶೆಟ್ಟಿಯ ಸ್ಥಾನ ಉನ್ನತವಾಗಿತ್ತೆಂಬುದು ಸ್ಪಷ್ಟವಾಗುತ್ತದೆ.[37]ಸಾಥಿಶೆಟ್ಟಿಯನ್ನು ಪಟ್ಟಣ ಸ್ವಾಮಿ ಎಂಬುದಾಗಿಯೂ ಕರೆಯಲಾಗಿದೆ. ಕ್ರಿ.ಶ. ೧೧೯೮ ರಲ್ಲಿ ಮಹಾದೇವ ದಂಡನಾಯಕನು ಎರಗ ಜಿನಾಲಯಕ್ಕೆ ಉದ್ದರೆಯ ಪಟ್ಟಣ ಸ್ವಾಮಿ ಮತ್ತು ಅನೇಕ ನಾಗರೀಕ ಸಮ್ಮುಖದಲ್ಲಿ ಅಂಗ ಭೋಗ ಮತ್ತು ರಂಗಭೋಗಕ್ಕೆ ಮೂರು ಮತ್ತರು ಭೂದಾನ ಕೊಟ್ಟಿರುವುದು ತಿಳಿಯುತ್ತದೆ.

ಉದ್ರಿಯ ಒಂದು ಶಾಸನದ ಪ್ರಕಾರ (ಕ್ರಿ.ಶ. ೧೧೭೩) ಬನವಾಸಿ ನಾಡಿನ ತೆರಿಗೆ ವಸೂಲಿಗಾಗಿ ಕಲಚೂರ್ಯ ಚಕ್ರವರ್ತಿ ಸೊಯಿದೇವ ತನ್ನ ಇಬ್ಬರು ಸೇನಾಪತಿಗಳಾದ ಕಾವಣ ಮತ್ತು ಸೋವಣರನ್ನು ಕಳುಹಿಸಿದನು. ಇವರು ಸುಂಕ ವಸೂಲಿಗಾಗಿ ಉದ್ರೆಯಲ್ಲಿ ತಂಗಿದ್ದರು.[38]ಎಂಬ ಉಲ್ಲೇಖವಿರುವುದು ಕುತೂಹಲಕಾರಿಯಾಗಿದೆ.

ಸಾಂಸ್ಕೃತಿಕ ಕೊಡುಗೆಗಳು

ಸಾಮಾಜಿಕ ಮತ್ತು ಧಾರ್ಮಿಕ ಅಂಶಗಳು  

ಉದ್ರಿಯ ಶಾಸನಗಳು, ದೇವಾಲಯಗಳು, ಮೂರ್ತಿ ಶಿಲ್ಪಗಳನ್ನು ಅವಲೋಕಿಸಿದಾಗ ಕ್ರಿ.ಶ. ೧೨-೧೩ನೇ ಶತಮಾನದಲ್ಲಿ ಉದ್ರಿಯು ಒಂದು ಅತ್ಯಂತ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿತ್ತು ಎಂಬಂಶ ವ್ಯಕ್ತವಾಗುತ್ತದೆ. ಈ ಅವಧಿಯಲ್ಲಿ ಜೈನ, ಶೈವ ಮತ್ತು ವೈಷ್ಣವ ಧರ್ಮಗಳು ಇಲ್ಲಿ ಪ್ರಚಲಿತದಲ್ಲಿದ್ದವು. ವಿವಿಧ ಧರ್ಮಗಳಿಗೆ ಸೇರಿದ ಈ ನಾಡಿನ ಜನರು ಅವರು ನಂಬಿದ ಮತಗಳನ್ನು ಪರಸ್ಪರ ಗೌರವಿಸಿ ಒಟ್ಟಿಗೆ ಜೀವಿಸುತ್ತಿದ್ದರೆಂಬುದಕ್ಕೆ ಕೆಲವು ಕಾಲ ಈ ಪ್ರದೇಶದಲ್ಲಿ ಸಾಮಾಜಿಕ ಸಾಮರಸ್ಯ ನೆಲಸಿತ್ತೆಂಬುದಕ್ಕೆ ಇಲ್ಲಿಯ ವಿಭಿನ್ನ ಧರ್ಮದ ಸ್ಮಾರಕಗಳು ನಿದರ್ಶನವಾಗಿವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಬ್ರಾಹ್ಮಣರು ಉನ್ನತ ಸ್ಥಿತಿಯಲ್ಲಿದ್ದು, ಧಾರ್ಮಿಕವಾಗಿ ಜನರನ್ನು ತಮ್ಮ ಆಧೀನಕ್ಕೆ ಒಳಪಡಿಸಿದ್ದರು. ಅರಸರು ಕೂಡಾ ತಮ್ಮ ದೈನಂದಿನ ಕಾರ್ಯಗಳಲ್ಲಿ ಪುರೋಹಿತರ ಆಶೀರ್ವಾದ ಪಡೆಯುತ್ತಿದ್ದರು. ಶಾಸನಗಳ ಪ್ರಕಾರ ಯೆಕ್ಕಲರಸನು ತನ್ನ ಜೀವನದುದ್ದಕ್ಕೂ ಬ್ರಾಹ್ಮಣರ ಆಶೀರ್ವಾದ ಪಡೆದು ಅವರ ಮಂತ್ರಾಕ್ಷತೆಯನ್ನು ಸ್ವೀಕರಿಸುತ್ತಿದ್ದನು.[39]ಸಮಾಜದ ಕೆಳಸ್ತರದಲ್ಲಿರುವ ಶೂದ್ರರ ಬಗ್ಗೆ ಇಲ್ಲಿನ ಯಾವ ಶಾಸನದಲ್ಲೂ ಉಲ್ಲೇಖವಿಲ್ಲ. ಶಾಸನಗಳ ಮಾಹಿತಿ ಪ್ರಕಾರ ಜಿಡ್ಡುಳಿಗೆ ನಾಡಿನಲ್ಲಿ ಬ್ರಾಹ್ಮಣರು ಮತ್ತು ಜೈನರು ಪ್ರತಿಷ್ಠಿತ ವರ್ಗಕ್ಕೆ ಸೇರಿದವರಾಗಿದ್ದರು. ಉದ್ರಿಯ ಹೆಚ್ಚಿನ ಅರಸರು ಮತ್ತು ಅವರ ಪತ್ನಿಯರು ಜೈನ ಧರ್ಮೀಯರಾಗಿದ್ದರು. ಮಾರಸಿಂಗ, ಯಕ್ಕಲರಸ, ಮಹಾದೇವ ದಂಡನಾಯಕ ಮತ್ತು ಅವನ ಪತ್ನಿ ಲೋಕಲದೇವಿ ಜೈನಧರ್ಮವನ್ನು ಅನುಸರಿಸುತ್ತಿದ್ದು ಅವರ ಉನ್ನತಿಗಾಗಿ ಹಲವು ದಾನಗಳಾದ ಭೂದಾನ, ಅನ್ನದಾನ, ಗ್ರಾಮದಾನ, ಎಣ್ಣೆ ಗಾಣಗಳನ್ನು ನೀಡಿ ಆ ಧರ್ಮದ ಪೋಷಕರಾಗಿದ್ದರು.

ಉದ್ರಿ ಸ್ಮಾರಕಗಳಲ್ಲಿ ಇಂದಿಗೂ ಉತ್ತಮ ಸ್ಥಿತಿಯಲ್ಲಿರುವುದು ಅಲ್ಲಿಯ ಎರಗ ಜಿನಾಲಯ (ಶಾಂತಿನಾಥ ಬಸದಿ). ಜೈನ ಧರ್ಮದ ಇತರ ಕುರುಹುಗಳೂ ಗಮನಾರ್ಹವಾಗಿದೆ. ಆದರೆ ಈಗ ಉದ್ರಿಯ ೨೫೦ ಕುಟುಂಬಗಳಲ್ಲಿ ಒಂದೂ ಜೈನ ಕುಟುಂಬವಿಲ್ಲ.

ಜೈನ ಬಸದಿಯ ನವರಂಗ ದ್ವಾರದ ಮೇಲಿನ ಫಲಕ ಕಿತ್ತು ಶಿವನ ಮೂರ್ತಿ ಇರುವ ಮಕರತೋರಣ ಇಟ್ಟಿದ್ದಾರೆ. ಅಲ್ಲದೆ ಎರಡು ಭಗ್ನ ತೀರ್ಥಕರ ಶಿಲ್ಪಗಳು ಮತ್ತು ಒಂದು ಭಗ್ನ ವಿಷ್ಣುವಿನ ಶಿಲ್ಪ ಬಸದಿಯ ಆವರಣದಲ್ಲಿ ಬಿದ್ದಿವೆ.

ಬ್ರಹ್ಮಪುರಿ : ಉದ್ರಿಯ ಅರಸರು ಶ್ರೀ ಲಕ್ಷ್ಮೀನಾರಾಯಣ ದೇವರುಳ್ಳ ಬ್ರಹ್ಮಪುರಿಗೆ ವಿದ್ಯಾಭ್ಯಾಸಕ್ಕಾಗಿ ದಾನ, ದತ್ತಿಗಳನ್ನು ನೀಡಿದ್ದಾರೆ. ವೈಜನಾಥ ಭಟ್ಟೋಪಾಧ್ಯಾಯ ಬ್ರಹ್ಮ ಪುರಿಯ ಮುಖ್ಯಸ್ಥನಾಗಿದ್ದನು.

ಉದ್ರಿಯ ಒಂದು ಶಾಸನವು (ಕ್ರಿ.ಶ. ೧೨೧೭) ಅಲ್ಲಿಯ ಲಕ್ಷ್ಮೀನಾರಾಯಣ ದೇವರ ಬ್ರಹ್ಮಪುರಿ ಮಹಾಜನಗಳಿಗೆ ಯೆಕ್ಕಲರಸು ದಾನ ದತ್ತಿ ನೀಡಿರುವುದನ್ನು ಉಲ್ಲೇಖಿಸಿದೆ.[40] ಇದು ವಿದ್ಯಾ ದಾನದ ಬಗೆಗೆ ಲಭ್ಯವಿರುವ ಮೊದಲ ಮಾಹಿತಿಯಾಗಿದೆ. ಇದರಿಂದ ಜಿಡ್ಡುಳಿಗೆ ನಾಡಿನಲ್ಲಿ ಉದ್ರಿಯು ಒಂದು ಪ್ರಸಿದ್ಧ ಬ್ರಹ್ಮಪುರಿಯಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಬ್ರಹ್ಮಪುರಿಯ ಮುಖ್ಯಸ್ಥ ವೈಜನಾಥ ಭಟ್ಟೋಪಾಧ್ಯಾಯನನ್ನು “ವಿದ್ಯಾ ಚಕ್ರವರ್ತಿ” ಎಂದು ಅದೇ ಶಾಸನದಲ್ಲಿ ಬಣ್ಣಿಸಲಾಗಿದೆ. ಈ ಅಗ್ರಹಾರಕ್ಕೆ ವಿಷ್ಣುಭಟ್ಟ, ಗೋವಿಂದ ಕ್ರಮಿತ, ಕಾವದೇವ, ಚಂದ್ರಭಟ್ಟ, ಭಾಸ್ಕರ ಭಟ್ಟ, ವಾಸುದೇವಭಟ್ಟ ಮತ್ತು ದಾಮೋದರ ಉಪಾಧ್ಯಾಯರೆಂಬ ಏಳು ಜನ ಉಪಾಧ್ಯಾಯರಿದ್ದರು.

ವಿದ್ಯಾಭ್ಯಾಸದಲ್ಲಿ ಪುರಾಣ ಮತ್ತು ವೇದಗಳಿಗೆ ಹೆಚ್ಚು ಅವಕಾಶವನ್ನು ಕಲ್ಪಿಸಲಾಗಿತ್ತ. ಪುರಾಣದಲ್ಲಿ ವಾಸುದೇವ ಭಟ್ಟರು ಮತ್ತು ಸಾಮವೇದಶಾಸ್ತ್ರದಲ್ಲಿ, ದಾಮೋದರ ಉಪಾಧ್ಯಾಯರು ವಿದ್ವಾಂಸರಾಗಿದ್ದರು. ಅವರ ಪಾಂಡಿತ್ಯಕ್ಕೆ ಯೆಕ್ಕಲರಸನು ಭೂದಾನ ನೀಡಿ ಪ್ರೋತ್ಸಾಹಿಸಿದ್ದಾನೆ.[41]

ಆರ್ಥಿಕ ಅಂಶಗಳು

ಈ ಪ್ರದೇಶವು ಕಲೆ, ಕೆರೆನೀರಾವರಿ, ಹಾಗೂ ಕೃಷಿ ಅಭಿವೃದ್ಧಿಯಿಂದಾಗಿ ಉಚ್ಛ್ರಾಯ ಸ್ಥಿತಿ ತಲುಪಿತು. ಶಾಸನಗಳಲ್ಲಿ ಕೆರೆಗಳು, ಹಳ್ಳಿಗಳು, ವೃತ್ತಿಗಳು, ವರ್ತಕರು, ಉಲ್ಲೇಖಗೊಂಡಿದ್ದಾರೆ.

ಜನರ ಮೂಲಭೂತ ಸೌಕರ್ಯಗಳಲ್ಲಿ ನೀರು ಒದಗಿಸುವುದು ಒಂದು ಪ್ರಮುಖ ಕೆಲಸ. ಉತ್ತಮ ಕೃಷಿಗಾಗಿನೀರಿನ ಅಗತ್ಯವಿದೆ. ಅದಕ್ಕಾಗಿ ಉದ್ರಿಯ ಅರಸರು ಅನೇಕ ಕೆರೆ ನಿರ್ಮಾಣ ಮಾಡಿ ಆರ್ಥಿಕ ಪ್ರಗತಿಗೆ ಪ್ರೋತ್ಸಾಹ ನೀಡಿದ್ದಾರೆ. ಕ್ರಿ.ಶ. ೧೧೫೧ ರ ಶಾಸನ ಅವಲಿಯ ಕೆರೆ ಬಗ್ಗೆ ಉಲ್ಲೇಖಿಸುತ್ತದೆ. ಯೆಕ್ಕಲರಸನು ಅವಲಿಯ ಕೆರೆಯನ್ನು ನೋಡಿ ಆ ಊರಿನ ಮುಖಂಡರಾದ ತದ್ದಗೌಡ, ಕಾಳಗೌಡ, ಜಕಗೌಡ, ಹೆಮ್ಮಗೌಡ ಮೊದಲಾದವರ ಸಮ್ಮುಖದಲ್ಲಿ ಕೆರೆಯನ್ನು ದುರಸ್ತಿ ಮಾಡಿಸಿ ಅದರಲ್ಲಿ ನೀರು ತುಂಬಿಸಿದನು, ಮತ್ತು ಅದಕ್ಕೆ ಭೂದಾನ (ಮತ್ತರು ೧) ನೀಡಿದರು.[42] ಅದೆ ಸ್ಥಳದ ಇನ್ನೊಂದು ಶಾಸನದಲ್ಲಿ ಯೆಕ್ಕಲರಸನು ಉದ್ರಿಯಲ್ಲಿ ಕೆರೆಯನ್ನು ಕಟ್ಟಿಸಿದ ವಿವರವಿದೆ. ಈಗ ಉದ್ರಿಯಲ್ಲಿ ಮೂರು, ಕೆರೆಗಳು ಇವೆ. ಕಂಚನಾಗಳ ಕೆರೆ, ದೊಡ್ಡಕೆರೆ, ಮತ್ತು ಕಸಗುಂಡಿಕೆರೆ ಈ ನಾಡಿನಲ್ಲಿ, ರೈತರು ಭತ್ತ, ಅಡಿಕೆ, ತೆಂಗು, ಕಬ್ಬು ಮತ್ತು ವಿಳ್ಳೆದೆಲೆ ಬೇಸಾಯ ಮಾಡುತ್ತಿದ್ದರು.[43]

ಆರ್ಥಿಕ ಅಭಿವೃದ್ಧಿಯಲ್ಲಿ ವಾಣಿಜ್ಯ ಚಟುವಟಿಕೆಗಳು ಗಮನಾರ್ಹ ಪಾತ್ರವಹಿಸುತ್ತವೆ. ಸಾರಂಗದೇವ ಉದ್ರಿಯ ಪ್ರಖ್ಯಾತ ವರ್ತಕ, ಇವನೊಂದಿಗೆ ಇನ್ನೂ ಐದು ಜನ ವ್ಯಾಪಾರಿಗಳು ಸೇರಿ ಈಶ್ವರ ದೇವರ ನಂದಾ ದೀವಿಗೆಗೆ ಐದು ಹಣದಾನ ನೀಡಿರುತ್ತಾರೆ.[44] ಪಟ್ಟಣಸ್ವಾಮಿ, ರಾಮಶೆಟ್ಟಿ, ಯಂಥ ವರ್ತಕರ ಹೆಸರುಗಳು ಶಾಸನಗಳಲ್ಲಿ ಕಾಣಿಸಿಕೊಂಡಿರುವುದರಿಂದ ವ್ಯಾಪಾರ ವಾಣಿಜ್ಯ ನಡೆಯುತ್ತಿದ್ದ ಸೂಚನೆಗಳಿವೆ.

ಕಲೆ ಮತ್ತು ವಾಸ್ತುಶಿಲ್ಪ

೧) ಬನಶಂಕರಿ ದೇವಾಲಯ

ಉದ್ರಿ ಉಸ್ ನಿಲ್ದಾಣದಿಂದ ಗ್ರಾಮದ ಒಳಗೆ ಹೋಗುವಾಗ ರಸ್ತೆಯ ಬಲಬದಿಯಲ್ಲಿ ಒಂದು ಚಿಕ್ಕ ಬನಶಂಕರಿ ದೇವಸ್ಥಾನ ಇದೆ. ಇದರ ರಚನೆ ನೋಡಿದಾಗ ಇದು ತೀರ ಇತ್ತೀಚಿನದು ಎಂದು ಕಂಡು ಬರುತ್ತದೆ. ಈ ಗುಡಿಯನ್ನು ಬಹುಶಃ ೧೭-೧೮ನೇ ಶತಮಾನದಲ್ಲಿ ಕಟ್ಟಲಾಗಿದೆ. ಗರ್ಭಗೃಹದಲ್ಲಿ ಸುಮಾರು ನಾಲ್ಕು ಅಡಿ ಎತ್ತರದ ಬನಶಂಕರಿಮೂರ್ತಿ ಇದೆ. ಗರ್ಭಗೃಹ ದ್ವಾರದ ಲಲಾಟದಲ್ಲಿ ಗಜಲಕ್ಷ್ಮಿ ಚಿತ್ರವಿದೆ. ಈ ದೇವಸ್ಥಾನದ ಬಗ್ಗೆ ಶಾಸನಗಳಲ್ಲಿ ಉಲ್ಲೇಖ ಬರುವುದಿಲ್ಲ. ಈಗ ಗ್ರಾಮದಲ್ಲಿ ನೆಲೆಸಿರುವ ಪಟೇಲ್ ಮನೆತನದ ಸಣ್ಣ ಬಸವಲಿಂಗಪ್ಪ ಗೌಡರು ಬನಶಂಕರಿ ಮೂರ್ತಿಯನ್ನು ಅವರ ಪೂರ್ವಿಕರು ಬಾದಾಮಿಯಿಂದ ತಂದು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ ಎಂದು ಹೇಳುತ್ತಾರೆ. ಈಗ ಬನಶಂಕರಿ ಜನರಿಂದ ಆರಾಧಿಸಲ್ಪಡುವ ಪ್ರಸಿದ್ಧ ಗ್ರಾಮದೇವತೆ.

೨) ವೀರಭದ್ರ ದೇವಾಲಯ

ಉದ್ರಿ ಗ್ರಾಮದ ಮಧ್ಯೆ ವೀರಭದ್ರ ದೇವಸ್ಥಾನವಿದೆ. ಉತ್ತರ ದಿಕ್ಕಿಗೆ ಮುಖಮಾಡಿರುವ ಈ ದೇವಾಲಯಕ್ಕೆ ಗರ್ಭಗೃಹ ಮತ್ತು ನಾಲ್ಕು ಸ್ಥಂಭಗಳಿರುವ ಮುಖ ಮಂಟಪವಿದೆ. ಗರ್ಭಗೃಹ ಉಳಿದುಕೊಂಡು, ದೇವಾಲಯದ ಮೂಲ ರಚನೆಯು ಸಂಪೂರ್ಣವಾಗಿ ಜೀರ್ಣವಾಗಿದೆ. ಗರ್ಭಗೃಹದಲ್ಲಿ ಈಗ ಪೂಜೆಗೊಳ್ಳುತ್ತಿರುವ ವೀರಭದ್ರನ ಶಿಲ್ಪವು ನಾಲ್ಕು ಅಡಿ ಎತ್ತರ ಮೂರು ಅಡಿ ಅಗಲ ಇದ್ದು ಅತ್ಯಂತ ಸುಂದರವಾಗಿದೆ. ನಾಲ್ಕು ಕೈಗಳ ಈ ಶಿಲ್ಪದ ಕೈಗಳಲ್ಲಿ ಖಡ್ಗ, ಬಾಣ, ಗುರಾಣಿ ಮತ್ತು ಬಿಲ್ಲು ಕೆತ್ತಲಾಗಿದೆ.

ಅಪರೂಪದ ನಂದಿ ವಿಗ್ರಹ : ವೀರಭದ್ರ ದೇವಾಲಯದ ಗರ್ಭಗೃಹದ ಬಲಭಾಗದಲ್ಲಿ ಒಂದು ನಂದಿ ಮಂಟಪದಲ್ಲಿ ಮೂರು ಅಡಿ ಎತ್ತರದ ಕಪ್ಪು ಶಿಲೆಯ ಅಪರೂಪದ ನಂದಿ ವಿಗ್ರಹವಿದ್ದು, ಅದು ಕಲಾ ನೈಪುಣ್ಯತೆಯಿಂದ ಎದ್ದು ಕಾಣುತ್ತದೆ. ಶಿಲ್ಪವು ಕುಳಿತುರವ ಭಂಗಿಯಲ್ಲಿ ಇದ್ದು ಕುತ್ತಿಗೆಗೆ ರುದ್ರಾಕ್ಷಿ ಸರವನ್ನು ಕಟ್ಟಲಾಗಿದೆ. ಕೊರಳಿನಿಂದ ಎದೆಯವರೆಗೆ ಗೆಜ್ಜೆ ಸರ ಕೆತ್ತಲಾಗಿದ್ದು ಸುಂದರವಾಗಿ ಕಾಣುತ್ತದೆ. ನಂದಿ ಮಂಟಪದ ಮುಂಭಾಗದಲ್ಲಿ ಮೂರು ಅಡಿ ಎತ್ತರದ ವೀರಭದ್ರನ ಮೂರ್ತಿ ಇದೆ. ಶಿಲ್ಪದ ಎದೆಭಾಗ ಸೀಳಿ ಹೋಗಿದೆ. ನಾಲ್ಕು ಕೈಗಳ ಈ ಶಿಲ್ಪದ ಕೈಗಳಲ್ಲಿ ತ್ರಿಶೂಲ, ಡಮರು ಮತ್ತು ಇನ್ನೊಂದು ಕೈಯಲ್ಲಿ ರುಂಡ ಇದೆ. ವೀರಭದ್ರನ ಜಟೆಯಲ್ಲಿ ಸರ್ಪವನ್ನು ಕೆತ್ತಲಾಗಿದೆ. ರುಂಡಮಾಲೆ ಸ್ಪಷ್ಟವಾಗಿ ಕಾಣುತ್ತದೆ. (ಚಿತ್ರ ೨) ದೇವಾಲಯದ ಮುಂಭಾಗದಲ್ಲಿ ಆರು ಅಡಿ ಎತ್ತರದ ಎರಡು ದ್ವಾರಪಾಲಕರ ವಿಗ್ರಹಗಳಿವೆ. ಎರಡು ವಿಗ್ರಹಗಳ ಕೈಗಳು ಭಗ್ನಗೊಂಡಿವೆ. ಜಟೆಯನ್ನು ಕಲಾತ್ಮಕವಾಗಿ ಕೆತ್ತಲಾಗಿದೆ.

೩) ಈಶ್ವರ ದೇವಾಲಯ (ಸಿಂಗೇಶ್ವರ)

ಈ ದೇವಾಲಯ ಸಂಪೂರ್ಣವಾಗಿ ಹಾಳಾಗಿದೆ. ಶಿಥಿಲ ಸ್ಥಿತಿಯಲ್ಲಿರುವ ಗರ್ಭಗೃಹ ಮಾತ್ರ ಉಳಿದಿದೆ. ಪೂರ್ವದಿಕ್ಕಿಗೆ ಮುಖ ಮಾಡಿರುವ ಈ ದೇವಾಲಯವನ್ನು ಎತ್ತರದ ಅಧಿಷ್ಠಾನದ ಮೇಲೆ ಕಟ್ಟಲಾಗಿದೆ. ಗರ್ಭಗೃಹದಲ್ಲಿ ಎರಡು ಅಡಿ ಎತ್ತರದ ಶಿವ ಲಿಂಗವಿದ್ದು, ಗೋಡೆಯಲ್ಲಿ ನಾಲ್ಕು ಅರ್ಧಗಂಭಗಳಿವೆ. ದ್ವಾರ ಪಟ್ಟಿಯ ಫಲಕದ ಮೂರು ಶಾಖೆಗಳಲ್ಲಿ ಲತಾ, ಅರ್ಧಗಂಬ ಮತ್ತು ಸುರುಳಿ ಚಿತ್ರಗಳಿವೆ. ಲಲಾಟದಲ್ಲಿ ಮಧ್ಯೆ ಗಜ ಲಕ್ಷ್ಮಿಯನ್ನು ಕೆತ್ತಲಾಗಿದೆ. ಈ ಗುಡಿಯನ್ನು ಬಹುಶಃ ೧೧ನೇ ಶತಮಾನದ ಅಂತ್ಯದಲ್ಲಿ ಕಟ್ಟಲಾಗಿದೆ. (ಛಾಯಾ ಚಿತ್ರ ನೋಡಿ)

೪) ಲಕ್ಷ್ಮೀನಾರಾಯಣ ದೇವಸ್ಥಾನ

ಈ ದೇವಾಲಯ ಮೂರು ಅಡಿ ಎತ್ತರದ ಜಗಲಿಯ ಮೇಲೆ ನಿರ್ಮಾಣಗೊಂಡಿದ್ದು ಉತ್ತಾರಾಭಿಮುಖವಾಗಿದೆ. ಗರ್ಭಗೃಹದಲ್ಲಿ ಎರಡು ಅಡಿ ಎತ್ತರದ ಪೀಠದ ಮೇಲೆ ಸುಂದರವಾದ ಲಕ್ಷ್ಮೀನಾರಾಯಣ ವಿಗ್ರಹವಿದೆ. ಈ ದೇವಾಲಯದ ಮುಖ ಮಂಟಪ ಶಿಥಿಲಗೊಂಡಿದೆ. ಗರ್ಭಗೃಹ ಮತ್ತು ಅಂತರಾಳ ಉಳಿದುಕೊಂಡಿವೆ. ಗರ್ಭಗೃಹ ದ್ವಾರಕ್ಕೆ ಮೂರು ಶಾಖೆಗಳಿದ್ದು ಅವುಗಳಲ್ಲಿ ಲತಾ ಸುರುಳಿ, ಅರ್ಧಗಂಭ ಮತ್ತು ರತ್ನ ಪಟ್ಟಿಗಳಿವೆ. ಅಂತರಾಳ ದ್ವಾರ ಪಟ್ಟಿಗಳಲ್ಲಿ ಐದು ಶಾಖೆಗಳಿದ್ದು ಲಲಾಟದಲ್ಲಿ ಗಜಲಕ್ಷ್ಮಿಯ ಶಿಲ್ಪವಿದೆ. ಕ್ರಿ.ಶ. ೧೨೧೭ರ ಶಾಸನವೊಂದು ಲಕ್ಷ್ಮೀನಾರಾಯಣ ದೇವಸ್ಥಾನದ ವ್ಯಾಪ್ತಿಗೆ ಬರುವ ಬ್ರಹ್ಮಪುರಿ ಮಹಾಜನಗಳಿಗೆ ಯೆಕ್ಕಲರಸನು ಭೂದಾನ ಮಾಡಿರುವದನ್ನು ಉಲ್ಲೇಖಿಸುತ್ತದೆ.

೫) ಈಶ್ವರ ದೇವಾಲಯ (ಬೊಪ್ಪೇಶ್ವರ)

ಶಿಥಿಲ ಸ್ಥಿತಿಯಲ್ಲಿರುವ ಈ ದೇವಾಲಯದ ಗರ್ಭಗೃಹ ಮತ್ತು ಅಂತರಾಳ ಉಳಿದುಕೊಂಡಿವೆ. ನಾಲ್ಕು ಅಡಿ ಎತ್ತರದ ಜಗತಿ ಮೇಲೆ ನಿರ್ಮಾಣವಾದ ಈ ದೇವಾಲಯದ ಅಧಿಷ್ಠಾನ ಸಂಪೂರ್ಣ ಹಾಳಾಗಿದೆ. ಗರ್ಭಗೃಹದಲ್ಲಿ ನಾಲ್ಕು ಅರ್ಧಗಂಭಗಳಿದ್ದು ನಾಲ್ಕು ಅಡಿ ಎತ್ತರದ ಶಿವಲಿಂಗವಿದೆ.

ಗರ್ಭಗೃಹದ ದ್ವಾರದಲ್ಲಿ ಏಳು ಶಾಖೆಗಳಾದ ರತ್ನ, ಲತಾಸುರಳಿ, ಅರ್ಧ ಗಂಭಗಳಿವೆ, ಲಲಾಟದಲ್ಲಿ ಗಜಲಕ್ಷ್ಮಿ ಚಿತ್ರವಿದೆ. ಗರ್ಭಗೃಹದ ಹೊಸ್ತಿಲಿಗೆ ಹೊಂದಿಸಿರುವ ಚಂದ್ರ ಶಿಲೆ ಇಲ್ಲಿ ಗಮನಿಸಬೇಕಾದ ಅಂಶ. ಇದು ಸುಮಾರು ಐದು ಅಡಿ ಅಗಲವಿದ್ದು ಇದರಲ್ಲಿ ಕಮಲಗಳು ಇವೆ.

ತೆರೆದ ಅಂತರಾಳದ ಗೋಡೆಯಲ್ಲಿ ನಾಲ್ಕು ಅರ್ಧ ಕಂಭಗಳಿವೆ. ಇದರ ದ್ವಾರಕ್ಕೆ ಮೂರು ಶಾಖೆಗಳಿದ್ದು, ಎರಡು ಬದಿಗೆ ಜಾಲಂಧ್ರಗಳು ವೈಶಿಷ್ಟ್ಯ ಪೂರ್ಣವಾಗಿವೆ. ಇವುಗಳನ್ನು ದ್ವಾರಶಾಖೆ ಮತ್ತು ಅರ್ಧಗಂಭಗಳ ನಡುವೆ ಕೆತ್ತಲಾಗಿದೆ.

ಲಲಾಟ ಬಿಂಬದ ಫಲಕದ ಮೇಲೆ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣು ಶಿಲ್ಪಗಳಿವೆ. ಬಲಭಾಗದಲ್ಲಿ ಬ್ರಹ್ಮನಿದ್ದು, ಮಧ್ಯದಲ್ಲಿ ಶಿವ ಕೊರೆದಿದ್ದಾರೆ. ನಂತರ ವಿಷ್ಣುವಿನ ವಿಗ್ರಹವಿದ್ದು ಸಮಭಂಗದಲ್ಲಿರುವ ಆತನ ನಾಲ್ಕು ಕೈಗಳಲ್ಲೊಂದು ಅಭಯ ಮುದ್ರೆಯಲ್ಲಿದ್ದರೆ ಶಂಖ, ಚಕ್ರ ಮತ್ತು ಗದೆಗಳಿವೆ. ಕೆಳಗಡೆ ಎರಡೂ ಕೈ ಜೋಡಿಸಿರುವ ಗರುಡನ ವಿಗ್ರಹವನ್ನು ಕೊರೆದಿದ್ದಾರೆ.

ಈ ದೇವಾಲಯದ ಗೋಡೆ ಅರ್ಧ ಕಂಭಗಳ ಮೇಲೆ ಶಿಖರಗಳಿಂದ ಅಲಂಕೃತಗೊಂಡಿದೆ. ಗರ್ಭಗೃಹದ ಮೂರು ಗೋಡೆಗಳಲ್ಲಿ ಕೋಷ್ಠವನ್ನು ಕಟ್ಟಲಾಗಿದ್ದು ಅವುಗಳಲ್ಲಿ ಯಾವುದೇ ದೇವತಾ ವಿಗ್ರಹಗಳಿಲ್ಲ. ಈ ಕೋಷ್ಠದ ಮೇಲ್ಭಾಗವನ್ನು ವಿಮಾನದ ಆಕಾರದಲ್ಲಿ ಅಲಂಕರಿಸಿದ್ದಾರೆ. ಈ ದೇವಾಲಯವನ್ನು ಬಹುಶಃ ಎಕ್ಕಲರಸ (ಮೊದಲನೆಯ) ಕಟ್ಟಸಿದ್ದಿರಬಹುದು. ೧೨೫೫ ರಲ್ಲಿ ಸಾರಂಗದೇವನ ಕಾಲದ ದಾನವನ್ನು ಆ ದೇವರ ನಂದಾದೀವಿಗೆಗ ನೀಡಲಾಗಿತ್ತು.[45] ಈ ಶಾಸನವು ದೇವಾಲಯದ ಕಂಭದ ಬುಡದಲ್ಲಿದ್ದು, ಈ ಕಂಭವನ್ನು ಶಿವಮೊಗ್ಗಾ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಇಡಲಾಗಿದೆ.

ಜೈನ ಬಸದಿ (ಛಾಯಚಿತ್ರ ನೋಡಿ)

ಉದ್ರಿ ಗ್ರಾಮ ಪ್ರವೇಸಿಸುವ ಮೊದಲು ಎಡಕ್ಕೆ ಜೈನ ಬಸದಿ ಇದೆ. ಶಾಸನದಲ್ಲಿ ಇದನ್ನು ಎರಗ ದೇವಾಲಯ ಎಂದು ಕರೆಯಲಾಗಿದೆ. ಮಹಾದೇವ ದಂಡನಾಯಕನು ಕ್ರಿ.ಶ. ೧೧೮೭ ರಲ್ಲಿ ಈ ಬಸದಿ ಕಟ್ಟಿಸಿ ಶಾಂತಿನಾಥನ ಮೂರ್ತಿಯನ್ನು ಪ್ರತಿಷ್ಠಾಪಿಸಿದನು; ಇಡೀ ಬಸದಿಯನ್ನು ಈಗ ಶೈವ ದೇವಾಲಯವಾಗಿ ಪರಿವರ್ತಿಸಲಾಗಿದೆ. ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಿದ ಸಮಭಾಗದಲ್ಲಿರುವ ಶಾಂತಿನಾಥನ ವಿಗ್ರಹದ ಐದು ಹೆಡೆಯುಳ್ಳ ಪ್ರಭಾವಳಿಯನ್ನು ನವರಂಗದಲ್ಲಿ ಇಟ್ಟಿದ್ದಾರೆ. ಈ ವಿಗ್ರಹದ ಕೆಳಭಾಗವನ್ನು ಪ್ರಾಚ್ಯವಸ್ತು ಸಂಗ್ರಹಾಲಯ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿ ಆವರಣದಲ್ಲಿ ಇಡಲಾಗಿದೆ. ಈಗ ಗರ್ಭಗೃಹದಲ್ಲಿ ನಾಲ್ಕು ಅಡಿ ಎತ್ತರವಿರುವ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ. ಅಂತರಾಳದ ದ್ವಾರದ ಲಲಾಟಬಿಂಬದಲ್ಲಿ ತೀರ್ಥಂಕರನ ಶಿಲ್ಪವಿದೆ. ದ್ವಾರದ ಫಲಕದಲ್ಲಿ ಮೂರು ಶಾಖೆಗಳಿವೆ. ನವರಂಗದ ಮಧ್ಯದಲ್ಲಿ ನಾಲ್ಕು ಕಂಭಗಳಿದ್ದು ಆ ಭಾಗದ ನೆಲ ಸ್ವಲ್ಪ ಎತ್ತರವಾಗಿದೆ. ಭುವನೇಶ್ವರಿಯಲ್ಲಿ ನಕ್ಷತ್ರಾಕಾರದ ಕಮಲದ ಅಲಂಕರಣವಿದೆ. ನವರಂಗದ ದ್ವಾರಕ್ಕೆ ಐದು ಶಾಖೆಗಳಿವೆ. ದರಲ್ಲಿ ಲತಾಸುರುಳಿ, ಅರ್ಧಗಂಭ, ಸರಳಪಟ್ಟಿ, ಜಾಲಂಧ್ರ ಮತ್ತು ಅರ್ಧ ಗಂಭಗಳಿವೆ. ಅಂತರಾಳಕ್ಕೆ ಹೊಂದಿಕೊಂಡು ಎಡ ಮತ್ತು ಬಲ ಬದಿಯಲ್ಲಿ ತಲಾ ಒಂದೊಂದು ಗೂಡುಗಳು ಇವೆ. ಅವುಗಳಲ್ಲಿ ಗಣೇಶ ಮತ್ತು ಷಣ್ಮುಖನ ವಿಗ್ರಹ ಇಡಲಾಗಿದೆ. ನವರಂಗ ದ್ವಾರದ ಲಲಾಟದಲ್ಲಿ ಗಜಲಕ್ಷ್ಮಿ ವಿಗ್ರಹವಿದ್ದು ಅದರ ಮೇಲಿನ ಭಾಗದಲ್ಲಿ ಆರು ತೀರ್ಥಂಕರರ ಶಿಪಗಳ ಫಲಕ ಇದೆ. ಬಸದಿಯ ಆವರಣದಲ್ಲಿ ಸುಮಾರು ಹನ್ನೆರಡು ಅಡಿ ಎತ್ತರವಿರುವ ಶಿಲಾಶಾಸನ ಪ್ರತಿಷ್ಠಾಪಿಸಲಾಗಿದೆ.

ಮೂರ್ತಿಶಿಲ್ಪಗಳು

ಈ ಗ್ರಾಮದಲ್ಲಿ ಹನ್ನೊಂದು ಮಾಸ್ತಿಗಲ್ಲು, ಎಂಟು ನಾಗಶಿಲ್ಪ, ಒಂದು ಆಂಜನೇಯ ಶಿಲ್ಪ ಮೂರು ವೀರಗಲ್ಲುಗಳು ಮತ್ತು ಎರಡು ಗಣೇಶ ಶಿಲ್ಪಗಳು ಅಲ್ಲಲ್ಲಿ ಬಿದ್ದಿವೆ. ಅವುಗಳನ್ನು ಒಂದೆಡೆ ಸಂಗ್ರಹಿಸಿ ಸುರಕ್ಷಿತವಾಗಿಡುವ ಕಾರ್ಯ ಅಗತ್ಯವಾಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಎ.ಕ. ೨ ಶಿವಮೊಗ್ಗ, ಶಾಸನ ೧೩೨

[2]ಶ್ರೀನಿವಾರ ರಿತ್ತಿ, ಸೌಥ್ ಇಂಡಿಯನ್ ಇನ್‌ಸ್ಕ್ರಿಪ್ಶನ್ ಸಂ. ೧೮, ಮುನ್ನುಡಿ.

[3]ಶಿವಮೊಗ್ಗ ಗೆಜೆಟೀಯರ್‌ಪು. ೬೭೦.

[4]ಎ.ಕ.೮ ಬಿ.ಎಲ್.ರೈಸ್ ಎಫಿಗ್ರಾಫಿಯಾ ಕರ್ನಾಟಿಕಾ, ಪು. ೪-೯೯.

[5]ರಾಜರಾಮ ಹೆಗೆಡೆ ಆರ್ಟಿ ಆಂಡ್ ಪೇಟ್ರನೇಜ್‌ಇನ್ ಮೀಡಿವಲ್ ಬನವಾಸಿ ೧೨೦೦ ಪು.೮೫. (ಐ.ಸಿ.ಎಚ್.ಆರ್. ಸಂಶೋಧನಾ ಯೋಜನೆ ಪ್ರಬಂಧ – ೧೯೯೯ – ಅಪ್ರಕಟಿತ)

[6]ರಾಮಭಟ್ಟ, “ಮಲೆನಾಡಿನ ಜೈನ ಅರಸೊತ್ತಿಗೆ: ಒಂದು ಅಧ್ಯಯನ

[7]ಎ.ಕ.೮ ಸೊರಬ ಶಾಸನ ೨೩೩.

[8]ಅದೇ ಸೊರಬ ೧೩೫.

[9]ಅದೇ ಸೊರಬ ೧೫೬.

[10]ಅದೇ ಸೊರಬ ೨೩೩.

[11]ಅದೇ ಸೊರಬ ೧೩೬.

[12]ಶಿವಮೊಗ್ಗ ಗೆಜೆಟೀಯರ್ ಪುಟ ೬೭೦.

[13]ಎ.ಕ. ಶಾಸನ ೧೪೦, ೧೫೩; ಸಂ. ೧೪೭ ರಲ್ಲಿ ‘ಉದ್ದರೆಯ ನೆಲೆವೀಡಿನೊಳ್’ ಎಂದಿದೆ.

[14]ಎ.ಕ. ಶಾಸನ ೧೪೦, ೧೧೯೮, ೧೩೫, ೧೨೧೭

[15]ಅದೇ ಸೊರಬ ೨೩೩.

[16]ಅದೇ

[17]ಅದೇ

[18]ಅದೇ

[19]ಎ.ಕ. ಶಾಸನ ೧೪೦, ೧೩೭.

[20]ಅದೇ, ಸೊರಬ ೧೪೦

[21]ಅದೇ , ಸೊರಬ ೪೭

[22]ಅದೇ, ಸೊರಬ ೧೩೫

[23]ಅದೇ, ಸೊರಬ ೧೪೦

[24]ಅದೇ

[25]ಅದೇ, ೧೪೯

[26]ಅದೇ, ಶಾಸನ ೧೪೦

[27]ಅದೇ

[28]ಅದೇ

[29]ಅದೇ

[30]ಅದೇ

[31]ಅದೇ

[32]ಅದೇ

[33]ಅದೇ

[34]ಅದೇ

[35]ಅದೇ

[36]ಎ.ಕ. ಶಾಸನ ೧೩೫, ೧೨೧೭

[37]ಅದೇ

[38]ಅದೇ ಸೊರಬ ೧೩೯

[39]ಅದೇ ಸೊರಬ ೧೪೦

[40]ಅದೇ ಸೊರಬ ೧೩೫

[41]ಅದೇ

[42]ಅದೇ ಸೊರಬ ೧೩೨

[43]ಅದೇ

[44]ಅದೇ ಸೊರಬ ೧೩೬ ಉದ್ರಿ ೧೨೫೫

[45]ಅದೇ ಸೊರಬ ೧೩೮ ಉದ್ರಿ, ೧೧೪೫