ಅಳಿಯ ಬೀರರಸನ ಮಗ ಹೊಸಗುಂದದ (ಮೂರನೆಯ) ಬೊಮ್ಮರಸ

ಈ ಬೊಮ್ಮರಸನು ೧೨೫೮ರಲ್ಲೇ ಪಟ್ಟಕ್ಕೇರಿದನು. ಆತನನ್ನು ಕೆಲ ಶಾಸನಗಳಲ್ಲಿ ‘ಬೀರ ಭೂಪನ ಪ್ರಿಯ ವಲ್ಲಭೆ ಹೊನ್ನಲದೇವಿಯ’ ಕುಮಾರನೆಂದು ತಿಳಿಸಲಾಗಿದೆ.[1]ಹೊಸಗುಂದದ ಯಾವ ಅರಸರನ್ನೂ ಹೀಗೆ ತಾಯಿಯ ಹೆಸರಿನಿಂದ ಗುರುತಿಸಿಲ್ಲವಾದ್ದರಿಂದ ಈ ಹೊನ್ನಲದೇವಿ ಹೊಸಗುಂದದ ಎರಡನೇ ಬೊಮ್ಮರಸನ ಮಗಳಾಗಿದ್ದಿರಬಹುದು. ಅಳಿಯ ಬೀರರಸನು ಹೊಸಗುಂದದ ಬೊಮ್ಮರಸನ ಅಳಿಯ ಎಂಬ ಉಲ್ಲೇಖಗಳು ಇರುವುದರಿಂದ ಹೀಗೆ ಗ್ರಹಿಸಬಹುದು. ಅಳಿಯ ಬೀರರಸನು ಗಂಡು ಸಂತಾನವಿಲ್ಲದ ಹೊಸಗುಂದಕ್ಕೆ ಅರಸನಾಗಿ ಜವಾಬ್ದಾರಿ ವಹಿಸಿಕೊಂಡು ಅಧಿಕಾರ ವಿಸ್ತರಣೆ ಮಾಡುತ್ತಿರುವಾಗ ಬೊಮ್ಮರಸನನ್ನು ಹೊಸಗುಂದದ ಅಧಿಕೃತ ವಾರಸುದಾರನನ್ನಾಗಿ ಪಟ್ಟ ಕಟ್ಟಿದಂತೆ ತೋರುತ್ತದೆ. ಮತ್ತು ಕೆಲವು ಶಾಸನಗಳಲ್ಲಿ ಬೊಮ್ಮರಸನ ರಾಜ್ಯೋದಯದ ವರ್ಷವನ್ನೂ ಉಲ್ಲೇಖಿಸಲಾಗಿದೆ. ಹಾಗಾಗಿ ಶಾಸನಗಳಲ್ಲಿ ಅಳಿಯ ಬೀರರಸನನ್ನು ಕಲಿಸೆಯ ಅರಸನೆಂದೇ ಉಲ್ಲೇಖಿಸಲಾಗಿದೆ. ೧೨೪೮ ರಲ್ಲಿ ಹೊಂಬುಚದಲ್ಲಿ ಇದ್ದ ಬೊಮ್ಮರಸನು ಇವನೇ ಆಗಿರುವ ಸಾಧ್ಯತೆ ಇದೆ. ಏಕೆಂದರೆ ಈತನು ಪೊಂಬುಚ್ಚಪುರವರಾದೀಶ್ವರ ಎಂಬ ಬಿರುದನ್ನು ಧರಿಸಿದ್ದನು. ಈ ಬೊಮ್ಮರಸನು ತನ್ನ ಕೆಲವು ಶಾಸನಗಳಲ್ಲಿ ಸೋಮನಾಥ ವರಪ್ರಸಾದಾಸಾದಿತನೆಂದು ಕೊಳ್ಳುತ್ತಾನೆ. ಈ ಸೋಮನಾಥ ದೇವರು ಕಲಿಸೆಯದೇ ಎಂಬುವುದರಲ್ಲಿ ಸಂಶಯವಿಲ್ಲ. ಇದರಿಂದ ಆತನು ಕಲಿಸೆಯ ಅಳಿಯ ಬೀರರಸನ ಮಗನೆಂಬುದು ದೃಢಪಡುತ್ತದೆ.

ಬಹುಶಃ ಅಳಿಯ ಬೀರರಸನ ಇಚ್ಛೆಗೆ ವಿರುದ್ಧವಾಗಿ ಆತನನ್ನು ಹೊಸಗುಂದದ ಅರಸನನ್ನಾಗಿ ಮಾಡಿದಂತೇ ತೋರುತ್ತದೆ. ಹಾಗಾಗಿ ಬೀರರಸನು ಆತನ ವಿರುದ್ಧ ಕೆಲ ಬಾರಿ ದಂಡೆತ್ತಿ ಹೋಗಿದ್ದನು.

ಬೊಮ್ಮರಸನು ಪಟ್ಟವನ್ನೇರಿದಂದಿನಿಂದಲೂ ಕಾದಾಟದಲ್ಲಿ ನಿರತನಾಗಿದ್ದನು. ೧೨೬೨ ರಿಂದ ೧೨೬೫ರ ವರೆಗೆ ತೈಲಪನ ಕುಮಾರ ಕಾವದೇವನ ಪ್ರಧಾನಿ ಕಲ್ಲವೆಗ್ಗಡೆ ಎಂಬವನ ಜೊತೆ ಹೋರಾಡುತ್ತಿದ್ದನು.[2]ಈ ಕಾವದೇವನು ಚಂದಾವೂರು ಕದಂಬರ ವಂಶದವನಾಗಿದ್ದಂತೆ ತೋರುತ್ತದೆ. ಈ ಕಾಳಗಗಳು ಕೋಡ್ಕಣಿ ಹಾಗೂ ಬರದವಳ್ಳಿಗಳಲ್ಲಿ ನಡೆದವು. ತನ್ನ ಪಟ್ಟಾಭಿಷೇಕದ ೧೨ಮೇ ವರುಷದಲ್ಲಿ ಆತನು ಬಿದಿರೂರ ಮಳಲಿಗೆ ದಾಳಿಯಿಕ್ಕಿ ವಾಪಾಸು ಬರುತ್ತಿರುವಾಗ ಲಿಂಗನಮಕ್ಕಿಯಲ್ಲಿ ಒಂದು ಕಾಳ ನಡೆದದ್ದು ಗೊತ್ತಾಗುತ್ತದೆ.[3]೧೨೬೮ರ ಸುಮಾರಿಗೆ ಆತನು ಶಿವಮೊಗ್ಗ ಬಳಿಯ ಕೂಡಲಿಯನ್ನು ಇರಿದು ತುರುಗಳುವು ಮಾಡಿದ್ದನು.[4]೧೨೭೦-೭೧ ರಲ್ಲಿ ಮಹಾಮಂಡಲೇಶ್ವರ ಅಣ್ಣಮವೆಗ್ಗಡೆಯ ಮೇಲೆತ್ತಿ ಹೋಗಿ ಹೊಸನಗರದ ಬಳಿಯ ಕೋಡೂರು ದುರ್ಗವನ್ನು ಮುರಿದು ಒಳನುಗ್ಗಿದ್ದನು.[5]

ಬೊಮ್ಮರಸನ ಬಿರುದುಗಳಲ್ಲಿ “ಪಶ್ಚಿಮಸಮುದ್ರಾಧಿಪತಿ” ಎಂಬುದು ಆತನು ಚಂದಾವೂರು ಕದಂಬರನ್ನು ಹಿಮ್ಮೆಟ್ಟಿಸಿದ ನಂತರ ಧರಿಸಿದ್ದಾಗಿ ತೋರುತ್ತದೆ. ಈತನ “ಕಾದಂಬರಾಯ ವಿಭಾಡ” ಎಂಬ ಬಿರುದೂ ಈ ಘಟನೆಯನ್ನೇ ಸೂಚಿಸುತ್ತಿರಬಹುದು. ಈತನ “ಸಿಲ್ದ (ಸಿಂಧ?) ಕುಳನಿರ್ಮೂಳನ” ಎಂಬ ಬಿರುದು ಕುತೂಹಲಕಾರಿಯಾಗಿದೆ. ಇದು ಸಿಂಧ ಎಂದಾದರೆ ಬೆಳಗುತ್ತಿಯ ಸಿಂಧರನ್ನೇ ಸೂಚಿಸುತ್ತದೆ. ಆದರೆ ನಮಗೆ ತಿಳಿದ ಹಾಗೆ ಬೆಳಗುತ್ತಿಯ ಸಿಂದರನ್ನು ನಿರ್ಮೂಲನ ಮಾಡಿದವನು ಬೀರರಸನೇ ಹೊರತೂ ಬೊಮ್ಮರಸನಲ್ಲ. ಬಹುಶಃ ಇದು ಬೀರರಸನ ಬಿರುದುಗಳ ಕೇವಲ ಅನುಕರಣೆಯಾಗಿರಬಹುದು. ಏಕೆಂದರೆ ಈತನು ತನ್ನ ಹಿಂದಿನ ಅರಸರಂತೇ ಅವರ ಅನೇಕ ಬಿರುದುಗಳನ್ನು ಧರಿಸಿದ್ದನು. ಅವುಗಳಲ್ಲಿ ‘ಹೊನ್ನಕೊಟ್ಟು ಕುದುರೆ ಕಟ್ಟುವ ಮಂಡಳಿಕರ ಗಂಡ’ ಎಂಬುದು ಒಂದು.

ಮೂರನೆಯ ಬೀರರಸ ಹಾಗೂ ತಮ್ಮರಸ

ಬೊಮ್ಮರಸನು ೧೨೮೩ರಕ್ಕು ಮೊದಲೇ ನಿಧನ ಹೊಂದಿದಂತೆ ತೋರುತ್ತದೆ.[6]ಬಹುಶಃ ಈತನ ಮರಣ ಪಟ್ಟುಗುಪ್ಪೆಯ ಶಾಸನದಲ್ಲಿ ಸೂಚಿತವಾದಂತೆ ೧೭೨೮ರಲ್ಲಿ ಆಯಿತು. ಈತನ ಮೊದಲನೆ ಮಗ ಬೀರರಸನೆಂಬವನು ೧೨೮೩ರ ವರೆಗೆ ಆಳಿದನು. ಇವನ ಕಾಲದಲ್ಲಿ ಐವತ್ತುನಾಡು ಎಂಬ ಭಾಗವು ಹೊಸಗುಂದದ ಅರಸರ ಕೈತಪ್ಪಿ ಹೋಯಿತು. ೧೨೮೩ ರಲ್ಲಿ ಬೊಮ್ಮರಸನ ಮತ್ತೊಬ್ಬ ಮಗ ತಮ್ಮರಸನು ಹೊಸಗುಂದದ ಉತ್ತರಾಧಿಕಾರಿಯಾದನು ಹಾಗೂ ಅದೇ ವರ್ಷದಲ್ಲೇ ಪಟ್ಟುಗುಪ್ಪೆಯ ಚೆಲ್ಲರ್ಸನ ಜೊತೆ ಈ ಕಾರಣಕ್ಕಾಗಿ ಯುದ್ಧ ಮಾಡಿದನು. ೧೨೮೨-೮೩ ರಲ್ಲಿ ಅಳಿಯ ಬೀರರಸನು ಹೊಸಗುಂದದ ಮೇಲೆ ದಾಳಿ ಮಾಡಿದಾಗ ತಮ್ಮ ರಸನ ದಂಡನಾಯಕ ಕೋಟಿನಾಯಕನು ಅವನನ್ನು ಸಮರ್ಥವಾಗಿ ಎದುರಿಸಿದನು.[7]ತಮ್ಮರಸನ ಸಹೋದರ ಬೀರರಸನು ೧೩೦೦ರ ಸುಮಾರಿಗೆ ಪುಣಜಿಯಲ್ಲಿ ಬಯೇಶ್ವರ ದೇವರಿಗೆ ದಾನ ನೀಡಿದ ಒಂದ ಶಾಸನೋಲ್ಲೇಖವಿದೆ.[8]

ತಮ್ಮರಸನ ಕಾಲದಲ್ಲಿ ಆತನ ಅಧಿಕಾರಿಯಾಗಿ ಸೋಮೆಯ ನಾಯಕ ಹಾಗೂ ಕೋಟಿ ನಾಯಕ ಎಂಬುವನು ತೀರ ಪ್ರಬಲರಾಗಿ ಬೆಳೆದರು. ಸೋಮೆಯ ನಾಯಕನು ‘ಮಹಾಪ್ರಧಾನ’ ಹಾಗೂ ಇನ್ನೂ ಅನೇಕ ಬಿರುದಾವಳಿಗಳನ್ನು ಧರಿಸಿದ್ದನು. ಕೋಟಿನಾಯಕನು ಆತನ ಸೇನಾದಂಡನಾಯಕನಾಗಿದ್ದನು. ತಮ್ಮರಸನು ತನ್ನ ಹಿರಿಯರು ಧರಿಸಿದ ಅನೇಕ ಬಿರುದುಗಳನ್ನು ಧರಿಸುವುದರ ಜೊತೆಗೇ ‘ಲಾಳರಾಯ ಮಾನಮರ್ಧನ’ ‘ಕದಂಬರಾಯ ವಿಭಾಡ’ ಎಂಬ ಬಿರುದುಗಳನ್ನು ಧರಿಸಿದ್ದನು. ೧೨೮೭ರ ಒಂದು ಶಾಸನದಲ್ಲಿ ‘ಮಹಾ ಮಂಡಳೇಸ್ವರ ತಮ್ಮರಸನು ಹೊಸಗುಂದದಲ್ಲಿ ಸುಖಸಂಕಥಾವಿನೋಧದಿಂದ ರಾಜ್ಯವಾಳುತ್ತಿದ್ದ’ಂತೆ ಉಲ್ಲೇಖವಿದೆ.[9]

ಸೊಡ್ಡಲದೇವ, ಸೋಮೆಯ ನಾಯಕ ಹಾಗೂ ಕೋಟಿನಾಯಕ

೧೨೮೮ರಲ್ಲೇ ಕೋಟಿನಾಯ್ಕ ಸೋಮೆಯ ನಾಯ್ಕ ಹಾಗೂ ಕುಮಾರ ಸೊಡ್ಡಲದೇವ ಇವರು ಸಾಂತಳಿಗೆಯನ್ನು ಆಳುತ್ತಿದ್ದುದಾಗಿ ಉಲ್ಲೇಖ ಬರುತ್ತದೆ.[10]ಇವರಲ್ಲಿ ಸೊಡ್ಡಲದೇವನು ಹೊಸಗುಂದದ ಅರಸರ ಉತ್ತರಾಧಿಕಾರಿಯಾಗಿದ್ದಂತೆ ತೋರುತ್ತದೆ. ೧೩೦೨ ರ ಒಂದು ಶಾಸನದಲ್ಲಿ ಆತನಿಗೆ ಹಿಂದಿನ ಅರಸರಿಗಿದ್ದ ಅನೇಕ ಬಿರುದುಗಳನ್ನು ಆರೋಪಿಸಲಾಗಿದೆ. ಆತನನ್ನು ‘ವೀರಬಲ್ಲಾಳ ಪಾದಾಂಬೋಜ ಪಸಾಯಿತನಪ್ಪ ಶ್ರೀ ಮನು ಮಹಾಮಂಡಳೇಶ್ವರ’ ಎಂದು ವರ್ಣಿಸಲಾಗಿದೆ. ಅಂದರೆ ವೀರಬಲ್ಲಾಳನು ೧೩೦೦ ರಲ್ಲಿ ಹೊಸಗುಂದ ಅರಸೊತ್ತಿಗೆಯನ್ನು ಸಂಪೂರ್ಣ ತನ್ನ ಕೈವಶ ಮಾಡಿಕೊಂಇಡದ್ದನು. ಈ ಸಂದರ್ಭದಲ್ಲಿ ವೀರಬಲ್ಲಾಳನಿಗೂ ಕೋಟಿನಾಯಕನಿಗೂ ಘರ್ಷಣೆ ಬೆಳೆದಿತ್ತು. ಹೊಸಗುಂದದ ಶಾಶನಗಳು ಈ ಕುರಿತು ಆಸಕ್ತಿ ಪೂರ್ಣ ವಿವರಗಳನ್ನು ಹೊರಚೆಲ್ಲುತ್ತವೆ. ಬಹುಶಃ ಕೋಟಿನಾಯಕನು ತಮ್ಮರಸನ ಮರಣಾ ನಂತರ ಆತನ ಉತ್ತರಾಧಿಕಾರಿ ಸೊಡ್ಡಲದೇವನನ್ನು ಬದಿಗೊತ್ತಿ ತಾನೇ ಅಧಿಕಾರಗ್ರಹಣ ಮಾಡಿದ್ದಾಗಿ ತೋರುತ್ತದೆ. ಈ ಕೆಲಸವನ್ನು ಆತನು ಸೋಮೆಯ ನಾಯಕನ ಜೊತೆ ಕೂಡಿಕೊಂಡು ಮಾಡಿರಬಹುದು. ಆದರೆ ನಂತರ ಕ್ರಮೇಣ ತಾನೊಬ್ಬನೇ ಅಧಿಕಾರ ಹಿಡಿದನು. ೧೨೯೦ರಲ್ಲಿ ಕೋಟಿನಾಯಕ ಸೋಮೆನಾಯಕ್ರು ಹದಿನೆಂಟು ಕಂಪಣಗಳನ್ನು ಆಳುತ್ತಿದ್ದರು.[11]ಇವು ವಿಜಯನಗರ ಕಾಲದಲ್ಲಿ ಹೆಸರಿಸುವ ಆರಗ ವೇಂಠೆಯ ಹದಿನೆಂಟು ಕಂಪಣಗಳ ಉಲ್ಲೇಖವೆನ್ನಬಹುದು. ಅದೇ ಕಾಲದ ಕೆಲ ಶಾಸನಗಳಲ್ಲಿ ಕೋಟಿಸೋಮೆ ನಾಯಕ ಎಂದು ಒಂದೇ ವ್ಯಕ್ತಿಯನ್ನು ಸೂಚಿಸಲಾಗಿದೆ. ಜೊತೆಗೇ ಆತನನ್ನು ‘ಹೊಂಬುಚ ಪುರವರಾಧೀಶ್ವರ ಸಮಸ್ತ ಪ್ರಶಸ್ತಿ ಸಹಿತ ಮಹಾಮಂಡಲೇಶ್ವರ’ ಎಂದು ಕರೆಯಲಾಗಿದೆ. ೧೨೯೩ ರಲ್ಲಿ ಆತನನ್ನು ಮಹಾಮಂಡಲೇಶ್ವರ ಎಂದು ಕರೆದು ಆತನು ಸಾಂತಳಿಗೆ ೧೦೦೦ವನ್ನು ಆಳುತ್ತಿದ್ದನೆಂದು ಹೇಳಲಾಗಿದೆ.[12]೧೨೯೪ರಲ್ಲಿ ಯಾದವರ ದಳವಾಯಿ ಪರಶುರಾಮನು ಇವನ ಮೇಲೆ ದಂಡೆತ್ತಿ ಬಂದಿದ್ದನು. ೧೨೯೪ರಲ್ಲೇ ಆತನಿಗೆ ಹೊಸಗುಂದದ ಅರಸರ ಅನೇಕ ಬಿರುದುಗಳನ್ನು ಆರೋಪಿಸಲಾಗಿದೆ. ಆತನ ಕುಲದೈವ ಕಲಿನಾಥ ದೇವರಾಗಿತ್ತು. ಆತನ ಒಂದು ಬಿರುದು “ವೀರ ಪಂಚ ವರಪ್ರತಿಷ್ಟಾಚಾರ್ಯ”, “ಹೊನ್ನ ಕೊಟ್ಟು ಕುದುರೆಯ ಕಟ್ಟುವವರ ಗಂಡ”, “ಕೊಂಕಣಿಗ ಬೇಟೆಗಾರ”, “ಕದಂಬರಾಯ ವಿಭಾಡ” ಮುಂತಾದ ಬಿರುದುಗಳು ಈತನು ಹೊಸಗುಂದದ ಅರಸೊತ್ತಿಗೆಯನ್ನು ತನ್ನ ವಶದಲ್ಲಿ ತೆಗೆದುಕೊಂಡ ಸೂಚನೆಯಾಗಿವೆ. ೧೨೯೦ ರಲ್ಲಿ ಬಂಕಿನಾಯ್ಕನೆಂಬವನ ಮೇಲೆ ಧಾಳಿ ಮಾಡಿದನು. ೧೨೯೩ರಲ್ಲಿ ಈತನು ಇರುವಂದೂರು ಮಾಳೆಯ ಸಾವಂತನ ಜೊತೆ ಎಡಮಲೆಯಲ್ಲಿ ಕಾದಾಡಿದನು. ಈ ಯೆಡ(ರ) ಮಲೆಯೆಂಬುದು ಸಹ್ಯಾದ್ರಿ ಘಟ್ಟದ ತುದಿಯಲ್ಲಿ ಸಾಂತಳಿಗೆಯ ಪಶ್ಚಿಮದ ಮೇರೆಯಾಗಿದೆ. ಆದರೆ ೧೩೦೦ರ ಸುಮಾರಿಗೆ ವೀರ ಬಲ್ಲಾಳನು ಹೊಸಗುಂದದ ಮೇಲೆ ಧಾಳಿಮಾಡಲು ಪ್ರಾರಂಭಿಸಿದ್ದನು. ಬಲ್ಲಾಳನು ಈ ಧಾಳಿಯನ್ನು ಒಂದು ಆನೆಯ ಸಲುವಾಗಿ ಮಾಡಿದಂತೆ ತೋರುತ್ತದೆ. ಆತನು ಪಂಚಪ್ರಧಾನರ ಸಮೇತ ಹೊಸಗುಂದಕ್ಕೆ ಧಾಳಿ ಮಾಡಿ ಕೋಟಿ ನಾಯಕನನ್ನು ಹಿಡಿದುಕೊಂಡು ಹೋದನು.[13]

ಈತನ ಕಾಲದಲ್ಲಿ ಬಿದಿರೂರಿನಲ್ಲಿ ತಮ್ಮೆಯ ಸಾವಂತನೆಂಬವನು ಆಳುತ್ತಿದ್ದನು. ಈತನು ಹಿರಿಯ ಸುಳಸೆ ಹಾಗೂ ಗಾವಣ ನಾಡುಗಳನ್ನು ಆಳುತ್ತಿದ್ದನು. ಇವನಿಗೂ ಇರುವಂದೂರಿನ ಮಾಳೆಯ ಸಾವಂತನಿಗೂ ಮಧ್ಯದಲ್ಲಿ ತಿಕ್ಕಾಟವಿತ್ತು ಹಾಗೂ ಕೋಟಿನಾಯ್ಕನು ತಮ್ಮೆಯನಿಗೆ ಸಹಾಯ ಮಾಡಿದ್ದನು. ಇವರಿಬ್ಬರೂ ೧೩೦೧ರ ಸುಮಾರಿಗೆ ಒಟ್ಟಾಗಿ ರಾಜ್ಯವಾಳುತ್ತಿದ್ದುದಾಗಿ ತಿಳಿದುಬರುತ್ತದೆ.[14]ಬಹುಶಃ ಬಲ್ಲಾಳನು ಕೋಟಿಯ ನಾಯಕನನ್ನು ಸೆರೆ ಹಿಡಿದ ವರ್ಷವೇ ಬಿಡುಗಡೆ ಮಾಡಿದನು. ಅಷ್ಟರ ನಂತರ ೧೩೦೪ ರಲ್ಲಿ ಆತನು ಸೇತುವಿನಲ್ಲಿ ರಾಜ್ಯಭಾರ ಮಾಡುತ್ತಿದ್ದನು. ೧೩೨೦ರ ವರೆಗೂ ಆತನು ಅಲ್ಲೇ ಇದ್ದುದಾಗಿ ಕಂಡು ಬರುತ್ತದೆ.

ಸೋಮೆಯ ನಾಯಕನು ೧೨೮೭ರಲ್ಲಿ ತಮ್ಮರಸನ ಕಾಲದಲ್ಲಿ ಸಂಡ ಗ್ರಾಮದಲ್ಲಿ ಕಾಳಿಯಘಟ್ಟ ಕಟ್ಟಿಸಿ ಒಂದು ಸುದೀರ್ಘವಾದ ಶಾಸವನ್ನು ನಿಲ್ಲಿಸಿದನು.[15]ಅದರಲ್ಲಿ ಆತನನ್ನು “ಮಹಾಪ್ರಧಾನ”, “ಬಾಹತ್ತರ ನಿಯೋಗಾಧಿಪತಿ”, “ಮಂಡಳಿಕ ಸ್ಥಾಪನಾಚಾರ್ಯ”, “ಮಲ್ಲಿನಾಥ ದೇವರ ಭಕ್ತ”, “ಕಲಿಯುಗ ವೀರಭದ್ರ”, “ಮಹೇಶ್ವರ ಗಣಾವತಾರ” “ಶಿವರಾಶಿ ದೇವರ ಶಿಷ್ಯ” ಎಂದು ಕರೆಯಲಾಗಿದೆ. ಈ ಬಿರುದುಗಳು ಸೂಚಿಸುವ ಹಾಗೆ ಸೋಮೆಯ ನಾಯಕನು ೧೩ನೇ ಶತಮಾನದಲ್ಲಿ ಆಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ವೀರಶೈವ ಸಂಪ್ರದಾಯದ ಅನುಯಾಯಿಯಾಗಿದ್ದನು. ೧೨೯೦ರ ವರೆಗೆ ಕೋಟಿ ನಾಯಕನ ಜೊತೆ ಕಾಣಿಸಿಕೊಳ್ಳುವ ಈತನು ನಂತರ ಏನಾದ ಎಂಬುದು ಸ್ಪಷ್ಟವಿಲ್ಲ. ೧೩೨೦ರ ಒಂದು ಶಾಸನದ ಪ್ರಕಾರ ವೀರ ಬಲ್ಲಾಳನ ದಂಡನಾಯಕನ ಮಗ ದೇವಪ್ಪನು ಸೋಮೆಯ ನಾಯಕನಿಗೆ ಹೊಸಗುಂದದ ಒಡೆತನವನ್ನು ನೀಡಿದನು.[16]ಅಂದರೆ ಸೋಮೆಯ ನಾಯಕನೂ ಅಷ್ಟು ಕಾಲದವರೆಗೆ ತನ್ನ ಸ್ಥಾನಮಾನಗಳನ್ನು ಉಳಿಸಿಕೊಂಡಿದ್ದನು.

೧೩೨೦ರ ನಂತರ ಹೊಸಗುಂದದ ಅರಸೊತ್ತಿಗೆಯ ವಿಚಾರ ಏನಾಯಿತೆಂದು ತಿಳಿದು ಬರುವುದಿಲ್ಲ. ಆದರೆ ಹೊಸಗುಂದವು ೧೪೧೩ರ ವರೆಗೂ ಒಂದು ಪ್ರಾದೇಶಿಕ ರಾಜಧಾನಿಯಾಗಿತ್ತೆಂದು ಚಿಕ್ಕಬೆಳಗುಂಜಿಯ ಶಾಸನದ ಮೂಲಕ ತಿಳಿದುಬರುತ್ತದೆ. ಗೋವೆ ಚಂದ್ರಗುತ್ತಿಯ ರಾಜ್ಯವನ್ನು ಅರಸಪ್ಪನು ಆಳುತ್ತಿದ್ದಾಗ, ಹಂದಿ ನಾಯಕನು ಹೊಸಗುಂದದ ಮೇಲೆ ಧಾಳಿಮಾಡಿದ್ದನು.

೪. ಕೆಲ ಚಿಕ್ಕಪುಟ್ಟ ಸ್ಥಾನಿಕ ಮನೆತನಗಳು

೧೧೬೪ರಲ್ಲಿ ಆವಿನಹಳ್ಳಿಯಲ್ಲಿ ಬಿಲ್ಲವೆಗ್ಗಡೆಯ ಪ್ರಧಾನ ಸಿಂಗವೆಗ್ಗಡೆ ಎಂಬವನಿದ್ದನು. ಹೊಸಗುಂದ ಹಾಗೂ ಕಲಿಸೆಗಳನ್ನು ಬಿಟ್ಟರೆ ಇನ್ನೂ ಅನೇಕ ಚಿಕ್ಕಪುಟ್ಟ ಮನೆತನಗಳೂ ಈ ಪ್ರದೇಶದಲ್ಲಿ ಇದ್ದವು. ಅವುಗಳಲ್ಲಿ ಬಿದಿರೂರು ಪ್ರಮುಖವಾದುದು. ಅಲ್ಲಿ ೧೨೫೩ ರಲ್ಲಿ ಆಳುತ್ತಿದ್ದ ಈಡು ಸಾವಂತ, ೧೨೯೩ರಲ್ಲಿ ಇದ್ದ ತಮ್ಮೆಯ ಸಾವಂತರ ಕುರಿತು ತಿಳಿದು ಬರುತ್ತದೆ. ಇವರು ಹಿರಿಯಸುಳಸೆ ಮತ್ತು ಗಾವಣ ನಾಡುಗಳನ್ನು ಆಳುತ್ತಿದ್ದರು ಹಾಗೂ ತಮ್ಮನ್ನು ಮಹಾಮಂಡಳೇಶ್ವರರೆಂದು ಕರೆದುಕೊಂಡಿದ್ದರು.[17]೧೪೧೦ರ ಶಾಸನವೊಂದರ ಪ್ರಕಾರ ಇವರೂ ಅದಿಯರ ಬಳಿಯವರೇ ಆಗಿದ್ದರು. ಈ ಬಳಿಗೆ ಸೇರಿದ ರಾಮನಾಯ್ಕ ಎನ್ನುವವನು ಅದೀಸ್ವರ ದೇವಾಲಯವನ್ನು ಕಟ್ಟಿಸಿದನು. ಇಂದಿನ ನಗರ ತಾಲ್ಲೂಕಿನ ಪಟ್ಟುಗುಪ್ಪೆಯಲ್ಲೂ ತಮ್ಮನ್ನು ಮಹಾಮಂಡಳೇಶ್ವರರೆಂದು ಗುರುತಿಸಿಕೊಂಡ ಒಂದು ವಂಶ ಇತ್ತು. ಸುಮಾರು ೧೨೭೦ ರಿಂದ ೧೨೯೭ರ ವರೆಗಿನ ಅವಧಿಯಲ್ಲಿ ಚೋಕರ್ಸ, ಚೆಲ್ಲರ್ಸ ಹಾಗೂ ತೈಲರ್ಸ ಎಂಬ ಮೂರು ತಲೆಮಾರಿನ ಅರಸರು ಉಲ್ಲೇಖಿತರಾಗಿದ್ದಾರೆ.[18]ಸುಮಾರು ೧೨೬೫-೭೦ ರಲ್ಲಿ ಅಣ್ಣಮವೆಗ್ಗಡೆ ಎಂಬವನು ಕೋಡೂರು ದುರ್ಗದಲ್ಲಿ ಆಳುತ್ತಿದ್ದಂತೆ ತೋರುತ್ತದೆ. ೧೨೯೩ರಲ್ಲಿ ಹಾಲುಗೆದ್ದೆಯ ನಾಗದೇವರಸ ಗಾವುಂಡನನ್ನು “ಶ್ರೀಮತು ಸಮುದ್ರಾಧಿಪತಿ” ಎಂದು ಕರೆಯಲಾಗಿದೆ. ಈತನಿಗೂ ಇರುವಂದೂರಿನ ಮಾಳೆಯ ಸಾವಂತನಿಗೂ ಯುದ್ಧವಾಯಿತು. ೧೩೦೪ ರಲ್ಲಿ ಅದಿಯರ ಬಳಿಯವನೇ ಆದ ದೇಕರಸನು ಸೇತುವಿನಲ್ಲಿ ಆಳುತ್ತಿದ್ದನು. ಇವರಲ್ಲಿ ಕೆಲವರು ಹೊಸಗುಂದದ ಅರಸರಿಗೆ ನಿಷ್ಠೆಯನ್ನು ತೋರಿಸಿದರೆ ಇನ್ನೂ ಕೆಲವರು ಹೊಸಗುಂದದ ಅರಸರ ಅಂಕೆಯಲ್ಲಿ ಬರಲಿಕ್ಕೆ ಪ್ರತಿರೋಧಿಸುತ್ತಿದ್ದರು.

೫. ರಾಜ್ಯ ನಿರ್ಮಾಣ ಪ್ರಕ್ರಿಯೆ ಮತ್ತು ಇವರ ಸಾಂಸ್ಕೃತಿಕ ನೀತಿಯ ವೈಶಿಷ್ಟ್ಯತೆಗಳು

ಹೊಸಗುಂದದ ಅರಸರ ಆಳ್ವಿಕೆಯ ವೈಶಿಷ್ಟ್ಯತೆಗಳಲ್ಲಿ ಕೆಲವನ್ನು ಈ ಕೆಳಗಿನಂತೆ ಗುರುತಿಸಬಹುದು. ೧)ಈ ಅರಸರು ತಮ್ಮನ್ನು ಮಂಡಳೇಶ್ವರರೆಂದು ಕರೆದುಕೊಂಡರೂ ಯಾವ ಸಾಮ್ರಾಜ್ಯಗಳಲ್ಲೂ ತಮ್ಮನ್ನು ವ್ಯವಸ್ಥಿತವಾಗಿ ಗುರುತಿಸಿಕೊಳ್ಳಲಿಲ್ಲ. ಈ ದುರ್ಗಮ ಅರಣ್ಯ ಪ್ರದೇಶದಲ್ಲಿ ಸಾಮ್ರಾಜ್ಯಗಳ ಅಸ್ಥಿತ್ವವನ್ನು ಸಂಪೂರ್ಣ ಒಪ್ಪಿಕೊಳ್ಳದೇ ಇರುವುದೂ ಇವರಿಗೆ ಸಾಧ್ಯವಿತ್ತು. ೨) ಮಧ್ಯಕಾಲೀನ ರಾಜ್ಯಸಂಸ್ಕೃತಿಯ ಅನೇಕ ಅಂಶಗಳು ಇವರಲ್ಲಿ ಕಂಡುಬರುವುದಿಲ್ಲ. ಇವರಿಗೆ ಒಂದು ವಂಶಾವಳಿ ಇರಲಿಲ್ಲ. ಹಾಗಾಗಿ ಉತ್ತರಾಧಿಕಾರತ್ವ ಇವರಲ್ಲಿ ತೀರಾ ಅನಿಶ್ಚಿತವಾಗಿತ್ತು. ೩) ಇವರು ತಮ್ಮ ರಾಜತ್ವದ ಪ್ರತಿಷ್ಟೆಯನ್ನು ದೇವಾಲಯಗಳ, ಮಠಗಳ, ಅಗ್ರಹಾರಗಳ ಪೋಷಣೆ ಮಾಡುವ ಮೂಲಕ ಆಚರಿಸಲಿಲ್ಲ.

ಇವರಲ್ಲಿಲ್ಲದ ಈ ಮೇಲಿನ ಲಕ್ಷಣಗಳು ಬನವಾಸಿ ೧೨೦೦೦ದ ಅರಸೊತ್ತಿಗೆಗಳಲ್ಲಿ ಹಾಗೂ ಸಾಂತಳಿಗೆಯಲ್ಲೇ ಸಾಂತರರಲ್ಲಿ ಕಂಡುಬರುತ್ತವೆ. ಹೊಸಗುಂದದ ಅರಸರು ಇವುಗಳಲ್ಲಿ ಕೆಲವು ಲಕ್ಷಣಗಳನ್ನು ಮೈಗೂಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದರು. ಉದಾಹರಣೆಗೆ ಮೂರನೇ ಬೊಮ್ಮರಸನ ಕಾಲದ ಶಾಸನಗಳಲ್ಲಿ ಅವರ ಹೆಸರಿನ ಸಂಸ್ಕೃತೀಕರಣವಾಗಿ ವೀರ, ಬ್ರಹ್ಮ ಎಂಬ ರೂಪ ತಳೆಯುತ್ತವೆ. ೧೨೮೭ ರ ತಮ್ಮರಸನ ಕಾಲದ ಸೋಮೆಯ ನಾಯಕನ ಶಾಸದಲ್ಲಿ ಪ್ರಪ್ರಥಮ ಬಾರಿಗೆ ಈ ಅರಸರನ್ನು ರಾಜವಂಶಾವಳಿಯೊಳಗೆ ಗುರುತಿಸುವ ಪ್ರಯತ್ನ ನಡೆಯಿತು.[19]ಈ ಶಾಸನದ ಪ್ರಾರಂಭ “ನಮಸ್ತಂಗ…” ಶ್ಲೋಕದಿಂದ ಆಗುತ್ತದೆ. ನಂತರ ಚಾಳುಕ್ಯಾನ್ವಯ ಎಂಬುದೊಂದು ಆಗಿಹೋಗಿದೆ, ಅದರಲ್ಲಿ ಸಾಂತರಸರೂ ಅವತರಿಸಿದರು ಎಂದಿದೆಯೇ ಹೊರತೂ ಈ ಅರಸರ ವಿವರಗಳು ಇಲ್ಲ. ಸಾಂತರರಿಂದ ಬ್ರಹ್ಮನು (ಮೂರನೇ ಬೊಮ್ಮರಸ) ಅಧಿಕಾರ ಪಡೆಯುತ್ತಾನೆ. ಬ್ರಹ್ಮನ ಬಿರುದಾವಳಿಗಳು ಯಾವುವೂ ಇಲ್ಲಿ ಇಲ್ಲ. ನಂತರ ಆತನ ಮಗ ತಮ್ಮರಸನ ಹೆಸರನ್ನು ಸಂಸ್ಕೃತೀಕರಿಸಲಾಗಿದೇ ಹಾಗೇ ಇಡಲಾಗಿದೆ. ಆದರೆ ಆತನಿಗೆ ದೀರ್ಗ ಬಿರುದಾವಳಿಯನ್ನು ಆರೋಪಿಸಲಾಗಿದೆ. ನಂತರ ಸೋಮೆನಾಯಕನ ಬಿರುದಾವಳಿಗಳು ಬರುತ್ತವೆ. ಈ ಶಾಸನದ ಮೂಲಕ ಸೋಮೆಯನಾಯಕನು ತನ್ನನ್ನು ವೈಭವೀಕರಿಸಿಕೊಳ್ಳಲು ಪ್ರಯತ್ನಿಸುವುದು ಗಮನಾರ್ಹವಾಗಿದೆ. ಈ ಶಾಸನ ಸಿಕ್ಕ ಪುನೇದಹಳ್ಳಿ ಬನವಾಸಿ ೧೨೦೦೦ ದ ಗಡಿ ಪ್ರದೇಶವಾಗಿದೆ.

ಸಾಂತಳಿಗೆಯ ಒಳಗೇ ಇಂತಹ ಒಂದು ಪ್ರಯತ್ನ ೧೨೧೮ ರಷ್ಟು ಹಂದೇ ನಡೆದಿತ್ತು.[20]ಕಲಿಸೆಯ ಬಾಳೆಯಮ್ಮವೆಗ್ಗಡೆ ಸೋಮನಾಥ ದೇವಾಲಯವನ್ನು ಕಟ್ಟಿಸಿ ತನ್ನ ಪ್ರಶಸ್ತಿ ಶಾಸನಗಳನ್ನು ಬರೆಸಿದ್ದನು. ಅದರಲ್ಲಿ ತನ್ನ ವಂಶಾವಳಿಯನ್ನು ತಾಯಿಯ ಕಡೆಯಿಂದ ಹೊಸಗುಂದದ ಮೊದಲನೇ ಬೊಮ್ಮರಸನವರೆಗೆ ಗುರುತಿಸುತ್ತಾನೆ. ಆದರೆ ಇದೊಂದು ಪಿತೃಪ್ರಧಾನ ವಂಶಾವಳಿ ಅಲ್ಲದ್ದರಿಂದಲೋ ಅಥವಾ ಸಾಂತರರಿಗೂ ಇವರಿಗೂ ವಂಶ ಸಂಬಂಧ ಸಾಧ್ಯವಾಗಿರದ್ದರಿಂದಲೋ ಏನೋ ನಾಲ್ಕನೆಯ ಬೊಮ್ಮರಸನ ಕಾಲದವರೆಗೂ ಮತ್ತೊಮ್ಮೆ ಈ ಅರಸರು ತಮ್ಮ ವಂಶಾವಳಿಯಲ್ಲಿ ಆಸಕ್ತಿ ತೋರಿಸಲಿಲ್ಲ. ಕೋಟಿನಾಯಕನು ಹೊಸಗುಂದವನ್ನು ವಶಕ್ಕೆ ತೆಗೆದುಕೊಂಡ ಮೇಲಂತೂ ವಂಶಾವಳಿಯ ಸಾಧ್ಯತೆ ಮತ್ತೂ ಕಷ್ಟವಾಯಿತು.

ಈ ಅರಸರ ಕಾಲದ ಕೆಲ ದೇವಾಲಯಗಳು ಉತ್ತಮವಾದ ಮಾದರಿಗಳಾದರೂ ಅವುಗಳನ್ನು ಹೊಸಗುಂದದ ಅರಸರೇ ಕಟ್ಟಿಸಿ ದಾನ ಕೊಟ್ಟ ಮಾಹಿತಿಗಳಿಲ್ಲ. ಬಾಳೆಯಮ್ಮವೆಗ್ಗಡೆ ಕಟ್ಟಿಸಿದ ಸೋಮನಾಥ ದೇವಾಲಯಕ್ಕೂ ಭೂಮಿದಾನ ನೀಡಿದ ಶಾಸನೋಲ್ಲೇಖವಿಲ್ಲ. ಅಳಿಯಬೀರರಸನು ಅಭಿನವ ಶ್ರೀಶೈಲ ಎನಿಸಿದ ಸೊನ್ನಲಿಗೆಯ ಕಪಿಲಸಿದ್ದ ಮಲ್ಲಿಕಾರ್ಜುನ ದೇವರಿಗೆ ದಾನ ಕೊಟ್ಟ ಸ್ಥಳವೂ ಕೂಡ ಬನವಾಸಿ ೧೨೦೦೦ದ ಗಡಿಯಲ್ಲೇ ಇದೆ. ಈ ದಾನ ಶಾಸನವು ಹೊಸಗುಂದದ ಅರಸರದೇ ಆದ ಏಕೈಕ ದೇವದಾನ ಶಾಸನವಾಗಿದೆ.[21]ಈ ಶಾಸನದಲ್ಲಿ ಬೀರರಸನ ಬಿರುದುಗಳಲ್ಲಿ “ಸಾಹಿತ್ಯ ರತ್ನಾಕರ”, “ಆಶ್ರಿತ ಜನ ಹೃತ್ಸರೋಜಿನೀವಿರಾಜಿತ”, “ಆಶ್ರಿತಜನ ಚಿಂತಾಮಣಿ” ಎಂಬ ಬಿರುದುಗಳು ಒಂದು ಮಧ್ಯಕಾಲೀನ ರಾಜತ್ವದ “ಆಶ್ರಯ ದಾತ” ಕಲ್ಪನೆಯನ್ನು ಈ ಅರಸನಿಗೆ ಆರೋಪಿಸುವ ಪ್ರಯತ್ನವನ್ನು ಪ್ರತಫಲಿಸುತ್ತದೆ. ಆದರೆ ಈ ಅರಸರು ಮತ್ತೆಲ್ಲೂ ಇಂಥ ಪ್ರಯತ್ನವನ್ನು ಮಾಡಲಿಲ್ಲ. ಇವರ ಪ್ರಧಾನನಾದ ಸೋಮೆನಾಯಕನು ಸಂಡದಲ್ಲಿ ಕಾಳಿಯಘಟ್ಟ ಕಟ್ಟಿಸಿ ಅನೇಕ ಅಗ್ರಹಾರಗಳ ಸಮ್ಮುಖದಲ್ಲಿ ಅಗುಂದದ ಬ್ರಾಹ್ಮಣರಿಂದ ಪಡೆದ ಭೂಮಿಯನ್ನು ದಾನನೀಡುತ್ತಾನೆ. ೧೨೯೮ರಲ್ಲಿ ಕೋಟಿನಾಯಕನು ತಾರೆ ಗ್ರಾಮದಲ್ಲಿ ತಮ್ಮೆಯ ಸಾವಂತನ ಜೊತೆ ಸೇರಿಕೊಂಡು ವಿಠ್ಠಲದೇವರನ್ನು ಹಾಗೂ ಆತನ ಪರಿವಾರ ದೇವತೆಗಳನ್ನು ಪ್ರತಿಷ್ಠಾಪಿಸಿದನು. ಈ ಸಂದರ್ಭದಲ್ಲಿ ಹಾರುವಿಗೊಪ್ಪದ ವಾಮನ ಹೆಬ್ಬಾರುವರ ಮಗ ರಾಯ ರಾಜಗುರು ಭಟ್ಟಾಚಾರ್ಯರ ದೀಕ್ಷಾಪುತ್ರ ವಿಠ್ಠಯ್ಯ ಸೇನಬೋವನಿಗೆ ೩ ಸಿವನೆ, ೧ ಹೊದ ಭೂಮಿಯನ್ನು ದಾನ ನೀಡಿದನು.[22]ವಿಠಲ ದೇವತೆಗೆ ಮಲೆನಾಡಿನಲ್ಲಿ ನೀಡಿದ ಅತೀ ಪ್ರಾಚೀನ ದಾನ ಹಾಗೂ ಆತನ ಪ್ರತಿಷ್ಠೆಯ ಉಲ್ಲೇಖ ಇದಾಗಿದೆ.

ಇವರು ಕೊಟ್ಟ ದಾನಗಳೆಲ್ಲ ಗತಿಸಿದ ವೀರರ ಸಂಬಂಧಿಗಳಿಗೆ ನೀಡಿದ ಉಂಬಳಿ, ನೆತ್ತರ ಕೊಡಿಗೆ, ಹೆಣ್ಣು ದಾನ (ಸತಿ ಹೋದವರ ಸಂಬಂಧಿಗಳಿಗೆ) ಮುಂತಾದವುಗಳಿವೆ. ಭೂಮಿದಾನವನ್ನು ಉಂಬಳಿ ಹಾಗೂ ಹೆಣ್ಣುದಾನವನ್ನು ಕಂಬಳ ಎಂದೂ ಸೂಚಿಸಲಾಗಿದೆ. ಭೂ ದಾನವನ್ನು ಒಂದೆರಡು ಸಿವನೆ ಅಥವಾ ಮತ್ತರು ಭೂಮಿಗಳ ರೂಪದಲ್ಲಿ ಕೊಡುತ್ತಿದ್ದರು. ಈ ಅರಸರು ಅಗ್ರಹಾರಗಳನ್ನು ಸ್ಥಾಪಿಸಲಿಲ್ಲ ಹಾಗೂ ಅವುಗಳಿಗೆ ದಾನವನ್ನು ನೀಡಿದಂತೆಯೂ ಕಾಣುವುದಿಲ್ಲ. ಬದಲಾಗಿ ಮೊದಲನೇ ಬೀರರಸನು ಅಂಧಾಸುರದ ಅಗ್ರಹಾರದ ಮೇಲೆ ಧಾಳಿಮಾಡಿದ ಉಲ್ಲೇಖ ಇದೆ. ಇವರು ಕೆಲ ಶೈವ ಮುನಿಗಳಿಗೆ ಪೋಷಣೆ ನೀಡಿದ ಉಲ್ಲೇಖ ಇದ್ದರೂ ದಟ್ಟ ಮಲೆನಾಡಿನ ಇವರ ರಾಜ್ಯದ ಕೇಂದ್ರ ಭಾಗದಲ್ಲೇ ಇವರು ಅಂಥದೊಂದು ಸಂಸ್ಕೃತಿಯನ್ನು ನೆಲೆನಿಲ್ಲಿಸಲು ಪ್ರಯತ್ನಿಸಿದಂತಿಲ್ಲ. ಇವರಿಗೂ ಮೊದಲನ ಸಾಂತರ ರಾಜರು ಇದಕ್ಕೂ ದಟ್ಟ ಮಲೆನಾಡಿನ ಭಾಗದಲ್ಲಿ ಜೈನ ಮಠ ಮತ್ತು ದೇವಾಲಯಗಳನ್ನು ಪೋಷಿಸುತ್ತಾ ತಮ್ಮ ರಾಜ್ಯವನ್ನು ನೆಲೆ ನಿಲ್ಲಿಸಿದ್ದನ್ನು ಗಮನಿಸಿ ಈ ವಿಷಯವನ್ನು ಪರಿಶೀಲಿಸಬಹುದು. ಒಂದು ಉಲ್ಲೇಖಾರ್ಹ ವಿಷಯವೆಂದರೆ ಈ ಕಾಲದಲ್ಲಿ ಕರ್ನಾಟಕದಲ್ಲಿ ತಲೆ ಎತ್ತುತ್ತಿದ್ದ ವೀರಶೈವ ಸಂಪ್ರದಾಯ ಈ ಮಲೆನಾಡಿನ ಗಡಿಭಾಗದಲ್ಲೂ ಪ್ರಸಾರವಾಗುತ್ತಿದ್ದಿತ್ತು.

೬. ಹೊಸಗುಂದದ ಅರಸರ ಕಾಲದ ಸಾಂತಳಿಗೆ

ಐತಿಹಾಸಿಕ ಭೂಗೋಲ : (ನಗಾಶೆ ನೋಡಿ) ಹೊಸಗುಂದದ ಅರಸರು ಆಳಿದ ಪ್ರದೇಶವು ಇಂದಿನ ಶಿವಮೊಗ್ಗಾದ ದಟ್ಟ ಮಾಲೆನಾಡಲ್ಲಿ ಬರುತ್ತದೆ. ಇದನ್ನು ಭೌಗೋಲಿಕವಾಗಿ ಮೇಲಿನ ಹಾಗೂ ಕೆಳಗಿನ ಸಾಂತಳಿಗೆಗಳೆಂದು ಗುರುತಿಸಲಾಗಿತ್ತು. ಅಂದರೆ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡು ಶರಾವತಿ ಪಾತ್ರದ ತಗ್ಗಿನ ಪ್ರದೇಶವನ್ನು ಕೆಳ ಸಾಂತಳಿಗೆಯೆಂದೂ ಕುಮುದ್ವತಿ ಹಾಗೂ ವರದಾ ನದಿಗಳ ಜಲಾನಯನದ ಎತ್ತರ ಪ್ರದೇಶವನ್ನು ಮೇಲು ಸಾಂತಳಿಗೆಯೆಂದೂ ಗುರುತಿಸಿದ್ದರು. ಕೆಳ ಸಾಂತಳಿಗೆಯು ಸಾಂತರ ಅರಸರ ಕೇಂದ್ರಸ್ಥಾನವಾಗಿ ಹೊಂಬುಚದಂಥ ಪಟ್ಟಣಗಳಿಂದ ಹೆಚ್ಚು ಜನವಸತಿಗಳನ್ನು ಹೊಂದಿತ್ತು. ಮೇಲು ಸಾಂತಳಿಗೆಯು ಸ್ಥೂಲವಾಗಿ ಇಂದಿನ ಸಾಗರ ತಾಲ್ಲೂಕನ್ನು ಒಳಗೊಂಡಿತ್ತು. ಒಟ್ಟಾರೆಯಾಗಿ ಮೇಲು ಸಾಂತಳಿಗೆಯು ದುರ್ಗಮ ಜನರಹಿತ ಪ್ರದೇಶವಾಗಿದ್ದರೂ ಇದರಲ್ಲಿ ಬರುವ ಕುಂದನಾಡು ಹಾಗೂ ಕೊಡನಾಡಗಳು ಹೆಚ್ಚು ಅಭಿವೃದ್ಧಿ ಹೊಂದಿದ್ದವು. ಹಾಗಾಗೇ ಹೊಯ್ಸಳರು ಈ ನಾಡುಗಳಿಗೇ ಪ್ರತ್ಯೇಕ ಅರಸೊತ್ತಿಗೆಯನ್ನು ಮಾನ್ಯ ಮಾಡಿದ್ದರು ಎಂದು ತೋರುತ್ತದೆ. ಶರಾವತಿ ನದೀ ಕಣಿವೆಯ ಪ್ರದೇಶದಲ್ಲಿ ಹಿರಿಯ ತುಳಸೆ, ಗಾವಣನಾಡು, ಸೇತುನಾಡು, ಮುಂತಾದ ನಾಡುಗಳಿದ್ದವು. ಇವುಗಳ ಪಶ್ಚಿಮಕ್ಕೆ ಘಟ್ಟದ ತುದಿಗೆ ಎಡಮಲೆ ಎಂದೆನ್ನುತ್ತಿದ್ದರು. ಇಂದಿನ ಕಾರ್ಗಲ್ಲಿನ ಸಮೀಪದ ಬಿದಿರೂರು ಒಂದು ಸ್ಥಾನಿಕ ಆಳ್ವಿಕೆಯ ಕೇಂದ್ರವಾಗಿತ್ತು. ಇವಲ್ಲದೇ ಸಾಂತಳಿಗೆಯ ಮಧ್ಯ ಭಾಗದಲ್ಲಿ ಬಲೆನಾಡು, ಬಡಗಿನಾಡು, ಕಬ್ಬುನಾಡು, ಮುಂತಾದ ನಾಡುಗಳು ಇದ್ದವು. ಬನವಾಸಿ ೧೨೦೦೦ ದ ಗಡಿಯಲ್ಲಿ ಎಡೆನಾಡು ಹಾಗೂ ಜಿಡ್ಡುಳಿಗೆ ನಾಡುಗಳಲ್ಲಿ ಕೂಡ ಹೊಸಗುಂದದ ಅರಸರು ಕೆಲ ಭಾಗಗಳ ಮೇಲೆ ತಮ್ಮ ಅಧಿಕಾರವನ್ನು ವಿಸ್ತರಿಸುವ ಪ್ರಯತ್ನದಲ್ಲಿದ್ದರು. ೧೨೯೦ರ ಒಂದು ಶಾಸನದ ಪ್ರಕಾರ ಸಾಂತಳಿಗೆಯಲ್ಲಿ ೧೮ ಕಂಪಣಗಳಿದ್ದವು.[23]ಕಂಪಣ ಶಬ್ದವನ್‌ಉ ನಾಡು ಎಂಬರ್ಥದಲ್ಲಿ ೧೨ನೇ ಶತಮಾನದಿಂದಲೇ ಬಳಸಿದರೂ ನಾಡುಗಳಿಗೆ ಕಂಪಣವೆಂಬ ಅಧಿಕೃತ ಪರಿಭಾಷೆಯು ೧೩-೧೪ನೇ ಶತಮಾನದಲ್ಲಿ ಗಟ್ಟಿಯಾಯಿತು. ಇವೇ ಮುಂದೆ ಆರಗ ೧೮ ಕಂಪಣಗಳೆಂದು ಪ್ರಸಿದ್ಧವಾದವು. ಹೊಸಗುಂದದ ಅರಸರು ಬನವಾಸಿ ೧೨೦೦೦ ಪ್ರದೇಶದ ಬಳ್ಳವೆ ೭೦ ಎಂಬ ಇಂದಿನ ಹೊನ್ನಾಳಿ ತಾಲ್ಲೂಕಿನ ಭಾಗಗಳನ್ನು ೧೨೪೫ ರಿಂದ ಆಳಿದ್ದರು.

ಅರಣ್ಯಾವೃತವಾದ ಈ ಭಾಗದಲ್ಲಿ ಹೊಂಬುಚ, ಅಂಧಾಸುರ ಮುಂತಾದ ಸ್ಥಳಗಳು ೧೧-೧೨ನೇ ಶತಮಾನದಲ್ಲೇ ರಾಜಧಾನಿ ಪಟ್ಟಣಗಳಾಗಿ ಸಮೃದ್ಧ ಕೃಷಿ ವಲಯಗಳಾಗಿ ಬೆಳೆದಿದ್ದವು. ಬನವಾಸಿ ೧೨೦೦೦ ಕ್ಕೆ ತಾಗಿಕೊಂಡ ಭಾಗಗಳಲ್ಲಿ ಕೆರೆ ನೀರಾವರಿಯಿಂದ ಕೃಷಿ ಪ್ರದೇಶಗಳಾಗಿದ್ದ ಹಳ್ಳಿಗಳಿದ್ದವು. ೧೦೪೩ರ ಅಂಧಾಸುರದ ಶಾಸನವೊಂದು ಸಾಂತಳಿಗೆ ಸಾಸಿರದ ಬೆಳೆಗಳಾದ ಕಬ್ಬು, ಬತ್ತ, ಎಲೆ, ಅಡಕೆ, ತೆಂಗು, ಮಾವು, ಮೆಳಸು, ಅರಸಿನ, ಏಲಕ್ಕಿ, ಬಾಳೆ ಮುಂತಾದ ಬೆಳೆಗಳನ್ನೂ, ಕೋಡಾನೆಗಳನ್ನೂ ಈ ಪ್ರದೇಶದ ಸಂಪತ್ತೆಂದು ವರ್ಣಿಸುತ್ತದೆ. ಇಲ್ಲಿನ ಹಳ್ಳಿಗಳಲ್ಲಿ ಅನೇಕ ಕೆರೆಗಳ ಉಲ್ಲೇಖವೂ ಬರುತ್ತದೆ. ಆದರೆ ಹೊಸಗುಂದದ ಸುತ್ತ ಮುತ್ತಲ ಪ್ರದೇಶವು ಹೀಗೆ ಬೆಳೆದಿದ್ದರ ಸ್ಪಷ್ಟ ಉಲ್ಲೇಖಗಳಿಲ್ಲ. ಸಿಗುವ ಅಲ್ಪಸ್ವಲ್ಪ ವಿವರಗಳು ಹೊಸಗುಂದ, ಬಿದಿರೂರು ಮುಂತಾದ ಒಂದೆರೆಡು ಪಟ್ಟಣಗಳನ್ನು ಹಾಗೂ ಅನೇಕ ಹಳ್ಳಿಗಳನ್ನೂ ಉಲ್ಲೇಖಿಸುತ್ತವೆ. ಇಲ್ಲಿನ ಹಳ್ಳಿಗಳಲ್ಲಿ ಬತ್ತದ ಗದ್ದೆಗಳು ಸಾಮಾನ್ಯವಾಗಿ ನೆತ್ತರು ಕೊಡುಗೆಯ ಸಂದರ್ಭದಲ್ಲಿ ಉಲ್ಲೇಖಿತವಾಗುತ್ತವೆ. ತೋಟ, ವೊರಡು ಮುಂತಾದ ಭೂವಿವರಗಳು ಅಪರೂಪಕ್ಕೆ ಕಾಣಸಿಗುತ್ತವೆ. ಈ ಹಳ್ಳಿಗಳಲ್ಲಿ ರಾಜ್ಯದ ಆಡಳಿತ ವ್ಯವಸ್ಥೆಯ ಪ್ರತಿಬಿಂಬವಾಗಿ ಮಹಾಮಂಡಳೇಶ್ವರರು, ಸಾವಂತರು, ಮನ್ನೆಯರು, ಹೆರ್ಗ್ಗಡೆಗಳು, ನಾಯಕರು, ಗಾವುಂಡರು, ಪಡವಳರು ಮುಂತಾದವರ ಜೊತೆಗೇ ಸೇನಬೊವರು, ಹಳ್ಳಿನಾಡ ಸಮಸ್ತರು ಅಥವಾ ಹಲರು ಇಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ಕಾಣಿಸಿಕೊಳ್ಳದ ಎರಡು ವರ್ಗಗಳೆಂದರೆ ಮಹಾಜನರ ಹಾಗೂ ವರ್ತಕರು. ಸೆಟ್ಟಿಗಳ ಉಲ್ಲೇಖ ಬಂದರೂ ಅವರು ವೀರರಾಗಿ ಕಾಣಿಸಿಕೊಳ್ಳುತ್ತಾರೆ. ಬಹುಶಃ ಇವರ ಶಾಸನಗಳೆಲ್ಲ ವೀರಗಲ್ಲುಗಳೇ ಆಗಿರುವುದೂ ಇದಕ್ಕ ಕಾರಣವಿರಬಹುದು. ಇಲ್ಲಿನ ಅರಣ್ಯವೂ ಈ ರಾಜರಿಗೆ ಒಂದು ಸಂಪತ್ತಾಗಿತ್ತೆಂಬುದನ್ನು ಬಿಲ ಮೂನೂರ್ವರ “ಅರಣ್ಯ ಭಂಡಾರರು” ಎಂಬ ಬಿರುದೇ ತಿಳಿಸುತ್ತದೆ.

ವ್ಯವಸಾಯ-ವಾಣಿಜ್ಯ : ಕೃಷಿಭೂಮಿಯನ್ನು ಮಲೆನಾಡಿನ ಭಾಗದಲ್ಲಿ ಸಿವನೆ ಎಂಬ ಅಳತೆಯಲ್ಲೂ ಅರೆಮಲೆನಾಡಿನಲ್ಲಿ ಮತ್ತರು ಎಂಬ ಅಳತೆಯಲ್ಲೂ ಲೆಕ್ಕಹಾಕುತ್ತಿದ್ದರು. ಈ ಅರಸರ ಕಂದಾಯ ವ್ಯವಸ್ಥೆ ಕೂಡ ನಿಗೂಢವಾಗಿದೆ. ೧೧-೧೨ನೇ ಶತಮಾನದ ಸಾಂತರರ ಶಾಸಗಳಲ್ಲಿ ಈ ಕುರಿತು ಸಿಗುವ ವಿವರಗಳು ಇವರ ಶಾಸನಗಳಲ್ಲಿ ದುರ್ಲಭವಾಗಿವೆ. ಆದರೆ ಇದಕ್ಕೂ ಮೊದಲೇ ಈ ಪ್ರದೇಶದಲ್ಲಿನ ಹಳ್ಳಿಗಳಲ್ಲಿ ಕಂದಾಯದ ವ್ಯವಸ್ಥೆ (ಮರ್ಯಾದೆ) ಇತ್ತು. ಹೊಸಗುಂದದ ಅರಸರ ಶಾಸನಗಳಲ್ಲಿ ಅಪರೂಪಕ್ಕೆ ಗದ್ಯಾಣದ ರೂಪದಲ್ಲಿ ಭೂಮಿದಾನವನ್ನು ಉಲ್ಲೇಖಿಸರುವುದರಿಂದ ಅದು ಕಂದಾಯವೇ ಇರಬೇಕು. ೧೨೭೬ರ ಶಾಸನವೊಂದರಲ್ಲಿ ಹದಿನೆಂಟು ಕಂಪಣದ ಕಂಡೆ, ಸಿದ್ಧಾಯ, ಮನಿದಾವಣ ಮುಂತಾದುವುಗಳ ಉಲ್ಲೇಖ ಬರುತ್ತದೆ.[24]೧೩೨೧ರ ಹೊಸಗುಂದದ ಶಾಸನವೊಂದು ಗುಡ್ಡೆಯಬೀಡು ಎಂಬ ಹಳ್ಳಿಯ ಸೇಸೆ, ಸಿದ್ಧಾಯ, ಕಾಣಿಕೆ, ಕಿರುಕುಳ ಮುಂತಾದುವುಗಳನ್ನು ದಾನ ನೀಡಿದ್ದಾಗಿ ತಿಳಿಸುತ್ತದೆ.[25]ಹೊನ್ನ ಕೊಟ್ಟು ಕುದುರೆ ಕಟ್ಟುವವರ ಗಂಡ” ಎಂಬ ಬಿರುದು ಸ್ಪಷ್ಟವಾಗೇ ಈ ಅರಸರು ಮಾಡುತ್ತಿದ್ದ ಕುದುರೆ ಖರೀದಿಯ ಕುರಿತು ತಿಳಿಸುತ್ತದೆ. ಈ ವ್ಯಾಪಾರವನ್ನು ಬಹುಶಃ ಪರ್ಶಚಿಮ ಕರಾವಳಿಯಲ್ಲಿ ಮಾಡುತ್ತಿದ್ದಿರಬಹುದು. ಈ ಕಾಲದಲ್ಲಿ ಅರಬ್ಬರು ಪಶ್ಚಿಮ ಕರಾವಳಿಯಲ್ಲಿ ಕುದುರೆ ವ್ಯಾಪಾರ ಮಾಡುತ್ತಿದ್ದರು ಎಂಬುದು ಗಮನಿಸಬೇಕಾದ ವಿಷಯ.

ವ್ಯಕ್ತಿನಾಮಗಳು : ಈ ಕಾಲದ ಶಾಸನಗಳಲ್ಲಿ ಬರುವ ಜನರ ಹೆಸರುಗಳಲ್ಲಿ ಹೆಚ್ಚು-ಕಡಿಮೆ ಎಲ್ಲವೂ ಸ್ಥಾನಿಕ ಹಿನ್ನೆಲೆಯವೇ ಆಗಿವೆ. ಅರಸು ಮನೆತನದವರ ಹೆಸರುಗಳು ಎಲ್ಲವೂ ಬೀರ, ಬೊಮ್ಮ, ಬಾಳೆಯಮ್ಮ, ಬಿಲ್ಲ, ತಮ್ಮೆಯ, ಸೊಡ್ಡಲ, ಕಾಳ, ಕೆಳೆಯಬ್ಬೆ, ಬಿಯಬ್ಬೆ, ಹೊನ್ನಲೆ, ಮುಂತಾದವಾಗಿವೆ. ಈ ಕಾಲದ ಉಳಿದ ಆಳುವ ಸ್ಥಾನಮಾನ ಹೊಂದಿದ್ದ ವ್ಯಕ್ತಿಗಳೂ ಅಣ್ಣಮ, ಬೆಳ್ಳ, ಸೊಡ್ಡಿಗ, ಎರಹ, ಗಬ್ಬಿ, ಬೊಪ್ಪ, ಕನ್ನ, ಮಲ್ಲ, ಸೆಟುಮ, ಹೆಳವ, ಹಳೆಯ, ಬೋಳ, ತಾರ, ಬೀಬಿ, ಸಖಣ, ಕಪ್ಪ, ಹುಲಿಯ ಮುಂತಾಗಿದ್ದು ಇವುಗಳಿಗೆ ಅರಸ, ನಾಯಕ, ಸೆಟ್ಟಿ, ಹೆಗ್ಗಡೆ, ಗಾವುಂಡ ಅಂತ್ಯಗಳನ್ನು ಸೇರಿಸಲಾಗಿದೆ. ಸಿರಿಯಬ್ಬೆ, ಬೊಮ್ಮಕ್ಕ, ಮುಂತಾದ ಹೆಂಗಸರ ಹೆಸರುಗಳೂ ಬರುತ್ತವೆ. ಈ ಮೇಲಿನ ಹೆಸರುಗಳಲ್ಲಿ ಅನೇಕವು ಪ್ರಾದೇಶಿಕ ದೇವತೆಗಳ ಹೆಸರುಗಳಾಗಿದ್ದಿರಬಹುದು. ಸಿರಿ, ಜಕ್ಕ, ಲಚ್ಚಿ, ಕನ್ನ, ವಿಠ್ಠಯ್ಯ, ಬಿಟ್ಟಿಗ ಮುಂತಾದವು ತದ್ಭವಗಳಂತೇ ಭಾಸವಾಗುತ್ತವೆಯಾದರೂ ಬಹುತೇಕ ಹೆಸರುಗಳಿಗೆ ಅಂಥ ಯಾವ ಸಂಸ್ಕೃತ ಸಂಬಂಧ ಇಲ್ಲ ಎಂಬುದು ಗಮನಾರ್ಹ. ಈ ಅರಸರು ಹಾಗೂ ಅಧಿಕಾರಿಗಳು ಶಾಸನಗಳಲ್ಲೂ ತಮ್ಮ ಹೆಸರಿನ ಸಂಸ್ಕೃತೀಕರಣಕ್ಕೆ ಗಮನ ನೀಡಲಿಲ್ಲ ಎಂಬುದು ಪ್ರಾದೇಶಿಕತೆಯ ಪ್ರಭಾವ ಇಲ್ಲಿ ಗಾಢವಾಗಿದ್ದುದರ ಪ್ರತಿಬಿಂಬವಾಗಿದೆ.

ಯೋಧ ಜನರು ಹಾಗೂ ಸೈನ್ಯ ಸಂಘಟನೆ : ಇಲ್ಲಿ ಇದ್ದ ಬೇರೆ ಬೇರೆ ಬುಡಕಟ್ಟು/ಜಾತಿ/ವೃತ್ತಿಗಳ ಹಿನ್ನಲೆಯ ಜನರ ಕುರಿತು ಅಲ್ಪಸ್ವಲ್ಪ ಮಾಹಿತಿ ಸಿಗುತ್ತದೆ. ಇಲ್ಲಿ ಹಡವಳ (ಪಡೆವಳ-ಸೈನಿಕ) ವೃತ್ತಿಯನ್ನು ಆಧರಿಸಿದವರಲ್ಲಿ ಭಿಲ್ಲರು ಮುಖ್ಯರಾಗಿದ್ದರು. ಇವರು ಬಿಲ ಮುನ್ನೂರ್ವರೆಂಬ ಗುಂಪನ್ನೂ ಕಟ್ಟಿಕೊಂಡಿದ್ದರು. ಇವರು ತಮ್ಮನ್ನು ನಿಷ್ಣಾತ ಬಿಲ್ಲುಗಾರರೆಂದು, ಹೊಯ್ಸಳರ ಪರಮ ವಿಶ್ವಾಸಿಗಳೆಂದು ಕರೆದುಕೊಳ್ಳುತ್ತಾರೆ. ಬಹುಶಃ ಈ ಐತಿಹಾಸಿಕ ಮಹತ್ವದಿಂದಾಗಿ ಈ ದುರ್ಗಮ ಮಲೆನಾಡಿನಲ್ಲಿ ಇವರು ಆಳುವ ವರ್ಗವಾಗಿ ರೂಪುಗೊಂಡರು. ಹಡವಳ ವೃತ್ತಿಯನ್ನು ಆಧರಿಸಿದ ಮತ್ತೊಂದು ಜನರು ದೀವರಾಗಿದ್ದರು. ಎರಡು ಶಾಸನಗಳಲ್ಲಿ ಬಾಲಿ ಅರಸ, ಎರಹಗಬ್ಬಿ, ಬೊಪ್ಪಣ ಮುಂತಾದ ದೀವರ ಹಡವಳರ ಉಲ್ಲೇಖವಿದೆ.[26]ಇನ್ನು ಯೋಧರಾಗಿ ಹೋರಾಡಿದ, ನಾಯಕರಾಗಿ ಸೈನ್ಯ ನಡೆಸಿದ ಜನರಲ್ಲಿ ಸೆಟ್ಟಿ, ಗಾವುಂಡ, ಹೆಗ್ಗಡೆ, ನಾಯಕ ಮುಂತಾದ ಅಂತ್ಯ ಪದಗಳನ್ನು ಹೊಂದಿದ ಹೆಸರಿನವರಿದ್ದಾರೆ. ಬಹುಶಃ ಈ ಭಾಗದ ಹಳ್ಳಿ, ಪಟ್ಟಣ ಹಾಗೂ ಗುಡ್ಡಗಾಡು ಪ್ರದೇಶದ ಬೇರೆ ಬೇರೆ ಜನರು ಈ ವಿದ್ಯೆಯನ್ನು ಬಲ್ಲವರಾಗಿದ್ದರೂ ಹೆಚ್ಚಿನವರು ಕೃಷಿಕರೇ ಆಗಿದ್ದರು. ಜೊತೆಗೇ ಯುದ್ಧದಲ್ಲಿ ಮಡಿದವರ ಸಂಬಂಧಿಗಳಿಗೆ ನೆತ್ತರು ಕೂಡಿಗೆ, ಉಂಬಳಿ ಮುಂತಾದವುಗಳ ಮೂಲಕ ಕೃಷಿ ಭೂಮಿಯನ್ನು ದಾನ ನೀಡುತ್ತಿದ್ದರಾದ್ದರಿಂದ ಯೋಧರು ಕೃಷಿಕರಾಗಿ ಮಾರ್ಪಟ್ಟಿರಬಹುದು.

ಈ ಪ್ರದೇಶದ ಶಾಸನಗಳು ಈ ಕುರಿತು ವಿಶೇಷ ಬೆಳಕು ಚೆಲ್ಲುತ್ತವೆ. ಪ್ರಾದೇಶಿಕವಾಗಿ ಸೈನ್ಯ ಸಂಘಟನೆ ಮಾಡುವ ಸಾಮಂತ ವೃತ್ತಿ ಪ್ರಚಲಿತದಲ್ಲಿತ್ತು. ಈ ಸಾಮಂತರು ತಮ್ಮ ಮೇಲಿನ ರಾಜರಿಂದ ಹಳ್ಳಿಗಳ ಆದಾಯವನ್ನು ಪಡೆಯುತ್ತಿದ್ದರು. ಸಾಗರ ತಾಲ್ಲೂಕಿನ ಸೆಣಿಗೆಯ ಶಾಸನವೊಂದರಲ್ಲಿ ಇಂಥ ವಿವರ ಬರುತ್ತದೆ.[27]ಹಾನಂಗಲ್ಲು ಕದಂಬ ಕೀರ್ತಿದೇವನ ಬಂಟ ಹಾಗೂ ಆತನ ಸಾಮಂತನೊಬ್ಬನ ಪಡೆವಳನಾಗಿದ್ದ ಭಿಲ್ಲ ಬೊಮ್ಮನ ಮಗ ಕುಪ್ಪನು ಕದಂಬರಲ್ಲಿ ಸಾಮಂತ ವೃತ್ತಿಯನ್ನು ಪಡೆದು ಐನೂರು ಆಳಿಗೆ (ಯೋಧರಿಗೆ) ಪೆದ್ದೊರೆಗೋಡಿ ಹಳ್ಳಿಯ ಮನ್ನೆಯವನ್ನು ಪಡೆದು ಬೀಡನ್ನು ಕಟ್ಟಿಕೊಂಡಿದ್ದನು. ಬಹುಶಃ ಇವರ ಕೆಳಗೆ ಪಡೆವಳರು ಸೇವೆಸಲ್ಲಿಸುತ್ತಿದ್ದರು. ಇವರು ಇವರ ಸ್ಥಾನವೇ ಸೂಚಿಸುವಂತೆ ಪಡೆ ಕಟ್ಟಿಕೊಂಡು ಇದ್ದವರಾಗಿದ್ದರು. ಕಲಿಸೆಯ ಬಾಳೆಯಮ್ಮ ವೆಗ್ಗಡೆ ಪಡೆವಳ ಗೊಂಗಣ್ಣನೆಂಬವನ ಮಗನಾಗಿದ್ದ ಎಂಬುದನ್ನು ಗಮನಿಸಿದರೆ ಪಡೆವಳ ಮನೆತನಗಳೂ ಅರಸು ಮನೆತನಗಳ ಜೊತೆ ವಿವಾಹ ಸಂಬಂದ ಹೊಂದಿದ್ದ ವಿಷಯ ಸ್ಪಷ್ಟವಾಗುತ್ತದೆ. ಇವರು ಯುದ್ಧದಲ್ಲಿ ಮುಂದಾಗಿ ಹೊಡೆದಾಡುತ್ತಿದ್ದರೆಂದು ತೋರುತ್ತದೆ. ಯೋಧರನ್ನು ಬಂಟ, ಬಿಟ್ಟಿಗ, ಬೆಸಮಗ, ಲೆಂಕ ಮುಂತಾದ ಪ್ರಕಾರಗಳಲ್ಲಿ ಗುರುತಿಸಬಹುದು. ಬಂಟರು ಅಂಗರಕ್ಷರಾಗಿದ್ದಿರಬಹುದು. ಬಿಟ್ಟಿಗೆ ಬಿಟ್ಟಿಯಾಗಿ ಸೇವೆ ಸಲ್ಲಿಸುವವನು ಹಾಗೂ ಬೆಸಮಗ ಕರೆದಾಗ ಬಂದು ಸೇವೆ ಸಲ್ಲಿಸುವವನು. ಅವರಿಗೆ ವೀಳೆಯವನ್ನು ಕೊಟ್ಟು ಅಥವಾ ನೇಮವನ್ನು ಮಾಡಿ ಹೋರಾಡಲು ಕಳುಹಿಸುತ್ತಿದ್ದರು. ಪಡೆಗಳಲ್ಲಿ ಸಾಮಾನ್ಯವಾಗಿ ಕಾಲಾಳುಗಳು ಹಾಗೂ ಮೇಲಾಳುಗಳು (ಕುದುರೆ ಸವಾರರು) ಅಥವಾ ರಾಹುತರು ಇರುತ್ತಿದ್ದರು ಅಪರೂಪಕ್ಕೆ ಗಜಗಳ ಉಲ್ಲೇಖವೂ ಬರುತ್ತದೆ. ಕುದುರೆಗಳು ತೀರ ಮಹತ್ವದ ಹಾಗೂ ನಿರ್ಣಾಯಕ ಪಾತ್ರ ಹೊಂದಿದ್ದವು ಎಂಬುದು ವೀರಗಲ್ಲುಗಳ ಶಿಲ್ಪ ಹಾಗೂ ಶಾಸನಗಳಿಂದ ಸ್ಪಷ್ಟವಾಗುತ್ತದೆ. ಹೋರಾಟದಲ್ಲಿ ಮಡಿದರೆ ವೀರಗಲ್ಲನ್ನು ನಿಲ್ಲಿಸಿ ನೆತ್ತರುಗೊಡಗೆಯನ್ನು ಹಾಗೂ ಸತಿ ಹೋದವರಿಗೆ ಹೆಣ್ಣದಾನವನ್ನೂ ಭೂಮಿ ರೂಫದಲ್ಲಿ ನೀಡುತ್ತಿದ್ದರು.

ಶಿಲ್ಪಿಗಳು ಮತ್ತು ಬರಹಗಾರರು : ಈ ಶಾಸನಗಳಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ ಮತ್ತೊಂದು ರೀತಿಯ ಜನವೆಂದರೆ ಶಿಲ್ಪಿಗಳು ಮತ್ತು ಬರಹಗಾರರು. ಬಹುಶಃ ಈ ಪ್ರದೇಸಕ್ಕೂ ಹೊರಜಗತ್ತಿಗೂ ಸಂಪರ್ಕ ಕಲ್ಪಿಸಿದ ಒಂದು ಪ್ರಮುಖ ಸಮಾಜ ಇದಾಗಿತ್ತು. ಇಲ್ಲಿನ ವೀರಗಲ್ಲುಗಳನ್ನು ಕೊರೆಯಲು, ದೇವಾಲಯಗಳನ್ನು ಕಟ್ಟಲು ಈ ಪರಿಣಿತರ ಅಗತ್ಯ ತುಂಬಾ ಇತ್ತು. ವೀರಗಲ್ಲುಗಳನ್ನು ನಿಲ್ಲಿಸುವವರು (ಕಲ್ಲುಗೆಯ್ಸುವವರು), ಕಲ್ಲು ಕಡಿಯುವವರು (ಕಲ್ಗುಟಿಗ), ಅಕ್ಷರ ಕೊರೆಯುವವರು (ಸಿಳಾಲಿಖಿತಮಾಡುವವ), ಶಾಸನಗಳ ಪಾಠವನ್ನು ರಚಿಸುವವರು (ಬರೆದಾತ) ಮುಂತಾದ ವಿಭಿನ್ನ ಜನ ಇಲ್ಲಿ ಒಟ್ಟಾಗುತ್ತಿದ್ದರು. ಮೊದಲನೆಯ ಪ್ರಕಾರದವರು ಸತ್ತವರ ಸಂಬಂಧಿಗಳಾಗಿದ್ದರು. ಎರಡನೇ ಹಾಗೂ ಮೂರನೆಯ ಪ್ರಕಾರದವರು ಶಿಲ್ಪಿಕುಲಕ್ಕೆ ಸೇರಿದ್ದರು. ಅವರನ್ನು ಕಲ್ಕುಟಿಗೆ, ಬಿನ್ನಾಣಿ (ವಿಜ್ಞಾನಿ), ರೂವಾರಿ ಎಂದು ವಿಶೇಷವಾಗಿ ಸೂಚಿಸಲಾಗಿದೆ. ಬಹುಶಃ ರೂವಾರಿ ಶಿಲ್ಪ ಕೆತ್ತುವ ಪರಿಣತನಾಗಿದ್ದನು. ಇವರ ಹೆಸರುಗಳು ರಾಮೋಜ, ಮಧುಕೋಜ, ಆದಿತ್ಯಾಚಾರಿ, ಪಾಂಡ್ಯಾಚಾರಿ, ಸಿಂಗೋಜ, ಭೀಮ, ಬೀರೋಜ, ಸಂಕೋಜ, ಮುಂತಾಗಿದ್ದು ಈ ಹಿಂದೆ ಪರಿಶೀಲಿಸಿದ ಅಚ್ಚ ಪ್ರಾದೇಶಿಕ ಆಳುವವರ ಹೆಸರಿಗಿಂತ ತೀರ ಭಿನ್ನವಾಗಿರುವುದನ್ನು ಗಮನಿಸಬಹುದು. ಕಲಿಸೆ ಹಾಗೂ ಹುಂಚದಲ್ಲಿ ಇಂಥ ಶಿಲ್ಪಿಗಳ ಕೇಂದ್ರಗಳಿದ್ದವು. ಇಲ್ಲಿನ ಶಿಲ್ಪಿಗಳು ಉಳಿದ ಅನೇಕ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಒಂದು ವೀರಗಲ್ಲಿನಲ್ಲಿ ಅಬ್ಬಲೂರಿನ ಸಂಕೋಜನೆಂಬವನು ಇಲ್ಲಿಗೆ ಬಂದು ಕೆಲಸ ಮಾಡಿದ್ದು ತಿಳಿದುಬರುತ್ತದೆ.[28]ಶಾಸನಗಳನ್ನು ಬರೆಯುವವರು ಸಾಧಾರಣವಾಗಿ ಅಕ್ಷರಸ್ಥರಾದ ಸೇನಬೊವರಾಗಿದ್ದರು. ಒಂದು ಶಾಸನವನ್ನು ಚಿಕ್ಕಕೆರೆಯೂರು ‘ಕವಿದರ್ಪಣ’ ಎಂಬ ಬಿರುದು ಧರಿಸಿದ್ದ ಬೊಮ್ಮರಾಯ ಎಂಬುವನು ರಚಿಸಿದನು.[29]ಈ ಕಾಲದ ಅನೇಕ ವೀರಗಲ್ಲುಗಳು ತೀರ ಸುಂದರ ಕಲಾಕೃತಿಗಳಾಗಿವೆ.

ದೇವಾಲಯಗಳ ವಾಸ್ತುಶಿಲ್ಪ : ಈ ಪ್ರದೇಶದ ಮೇಲೆ ಬಾಹ್ಯ ಸಂಸ್ಕೃತಿಯ ಪ್ರಭಾವ ಹಾಗೂ ಅದರ ಪ್ರಾದೇಶಿಕ ತಿದ್ದುಪಡಿಗೆ ಈ ಕಾಲದ ದೇವಾಲಯಗಳು ಸಾಕ್ಷಿಗಳಾಗಿವೆ. ಕಲಿಸೆ(ನಾಡ ಕಳಸಿ)ಯ ಸೋಮನಾಥ ದೇವಾಲಯವನ್ನು ಬಿಟ್ಟರೆ ಉಳಿದವಕ್ಕೆ ಶಾಸನಾಧಾರಗಳಿಲ್ಲ. ಆದರೆ ಈ ಕಾಲದ ದೇವಾಲಯಗಳನ್ನು ಕೋಡಕಣಿ, ಪುರ, ನಾಡಕಳಸಿ (ಮಲ್ಲಿಕಾರ್ಜುನ ದೇವಾಲಯ), ಹೊಸಗುಂದ, ಬಿಳಗುಂಜಿ ಹಾಗೂ ಮರಗಳಲೆ ಮುಂತಾದ ಸ್ಥಳಗಳಲ್ಲಿ ನೋಡಬಹುದು. ಈ ದೇವಾಲಯಗಳು ಸಾಮಾನ್ಯವಾಗಿ ಬನವಾಸಿ ೧೨೦೦೦ ದ ಈ ಕಾಲದ ಚಾಲುಕ್ಯ ದೇವಾಲಯಗಳ ಸಂಪ್ರದಾಯದಲ್ಲೇ ಇವೆ.[30]ಇವುಗಳಲ್ಲಿ ವಿಮಾನಕ್ಕೆ ಒಂದು ಗೂಢಮಂಡಪವನ್ನು ಜೋಡಿಸಲಾಗುತ್ತದೆ. ಇಲ್ಲ ಒಂದು ಅರೆತೆರೆದ ಸಭಾಮಂಡಪವನ್ನು ಜೋಡಿಸಲಾಗುತ್ತದೆ. ಗರ್ಭಗೃಹಗಳು ಚಾಲುಕ್ಯ ಶೈಲಿಯಲ್ಲಿ ನಿರಂಧಾರ (ಪ್ರದಕ್ಷಿಣಾಪಥರಹಿತ) ವಾಗಿರುತ್ತವೆ. ಮಲೆನಾಡಿನ ಪ್ರದೇಶದಲ್ಲಿ ಅಂಥ ಗರ್ಭಗೃಹಗಳ ಜೊತೆಗೇ ತೀರ ವಿಶಿಷ್ಟವಾದ ಸಾಂಧಾರ ಗರ್ಭಗೃಹಗಳೂ ಪ್ರಾದೇಶಿಕವಾಗಿ ಪ್ರಚಲಿತದಲ್ಲಿದ್ದವು. ಕಲಿಸೆಯ ರಾಮೇಶ್ವರ (ಸೋಮನಾಥ) ದೇವಾಲಯದಲ್ಲಿ ಹಾಗೂ ಹೊಸಗುಂದದ ಈಶ್ವರ ದೇವಾಲಯದಲ್ಲಿ ಇಂಥ ಉದಾಹರಣೆಗಳಿವೆ. ಇಂಥ ವಿಮಾನಗಳಿಗೆ ಪ್ರತ್ಯೇಕ ಅಂತರಾಳ ಇರುವುದಿಲ್ಲ. ಬದಲಾಗಿ ಪ್ರದಕ್ಷಿಣಾಪಥಕ್ಕೇ ರಂಗಮಂಡಪವನ್ನು ಜೋಡಿಸಲಾಗುತ್ತದೆ. ಹೊಸಗುಂದದ ದೇವಾಲಯದಲ್ಲಿ ಗರ್ಭಗೃಹದ ದ್ವಾರದ ಎದುರಿಗೇ ಮುಖಭದ್ರವನ್ನು ಜೋಡಿಸಲಾಗಿದೆ ಹಾಗೂ ಇದರ ಎದುರಿಗೆ ಅಂತರಳದ ಜಾಲಂದ್ರಗಳು ಬರುತ್ತವೆ. ನಿರಂಧಾರ ವಿಮಾನಗಳಿಗೆ ಚಾಲುಕ್ಯ ಶೈಲಿಯ ಭದ್ರ (ಭಿತ್ತಿಯ ಮಧ್ಯದ ಉಬ್ಬುಗಳು) ಉಪಭದ್ರಗಳು ಇದ್ದು ಕಪೋತಬಂಧ ಅಧಿಷ್ಟಾನಗಳಿರುತ್ತವೆ. ಇವುಗಳ ಶಿಖರಗಳು ಮೆಟ್ಟಿಲು ಮೆಟ್ಟಿಲಾಗಿ ಪಿರಮಿಡ್ ಆಕಾರದಲ್ಲಿರುತ್ತವೆ. ಇದು ಒಂದು ತೀರ ಜನಪ್ರಿಯ ಪ್ರಾದೇಶಿಕ ಶೈಲಿಯಾಗಿತ್ತು.

ವಿಮಾನಗಳಿಗೆ ಸೇರಿಸಲಾಗಿರುವ ಸಭಾಮಂಡಪಗಳು ೧೧೭೦ರ ನಂತರದಲ್ಲಿ ಬನವಾಸಿ ಪ್ರದೇಶದಲ್ಲಿ ಪ್ರಚಲಿತದಲ್ಲಿ ಬಂದಂಥವುಗಳಾಗಿವೆ. ಇಲ್ಲಿ ವಿಮಾನದ ಗೋಡೆಯನ್ನೇ ವಿಸ್ತರಿಸಿ ಸಭಾಮಂಡಪದ ಒಂದು ಭಾಗಕ್ಕೆ ಚಾಚಲಾಗಿದೆ. ಈ ಮಂಡಪಗಳ ಪ್ರವೇಶದ ಮೆಟ್ಟಿಲುಗಳ ಎರಡೂ ಕಡೆ ವೇದಿಕೆಗಳು ಇರುತ್ತವೆ. ಮಂಡಪದ ಒಳಭಾಗದಲ್ಲಿ ನಾಲ್ಕು ಸಾಲು ಶ್ರೀಕಾರ (ಘಂಟಾಕಾರ) ಕಂಭಗಳಿದ್ದು ಕಕ್ಷಾಸನಗಳ ಮೇಲೆ ಗಿಡ್ಡ ಧಾರಾವೃತ್ತ (ಬಹುಮುಖಗಳ) ಕಂಭಗಳನ್ನು ಜೋಡಿಸಲಾಗಿದೆ. ಕಕ್ಷಾಸನದ ಬಾಹ್ಯ ಅಲಂಕಾರವು ತೀರ ಸಾಮಾನ್ಯವಾಗಿ ಕೂಟಸ್ತಂಭಗಳ ಸಾಲುಗಳಾಗಿದ್ದು ಮೇಲೆ ಶಿಲ್ಪಗಳ ಚೌಕಟ್ಟುಗಳನ್ನು ನೋಡಬಹುದು. ಇಂಥ ಶಿಲ್ಪಗಳಲ್ಲಿ ನರ್ತಕರು, ಮಿಥುನಗಳು, ದೇವತೆಗಳನ್ನು ಚಿತ್ರಿಸಲಾಗಿದೆ.

 

[1]ಎ.ಕ. ೮ ಸೊರಬ ೧೯. ಕೊಡಕಣಿ ೧೧೫೨

[2]ಎ.ಕ. ೮ ಸಾಗರ ೧೩೯. ಹೊಸಗುಂದ

[3]ಎ.ಕ. ೮ ಸಾಗರ ೭೮, ಸೇಣಿಗೆ ೧೨೬೬

[4]ಎ.ಕ. ೭ ಶಿವಮೊಗ್ಗ ೬೧, ೬೨ ಹಾರೋಬೆನವಳ್ಳಿ

[5]ಎ.ಕ. ೮ ಸಾಗರ ೧೩೮. ಹೊಸಗುಂದ. ಶಕವರ್ಷ ತಪ್ಪಾಗಿ ಓದಲ್ಪಟ್ಟಿದೆ. ಸಂವತ್ಸರದ ಆಧಾರದ ಮೇಲೆ ೧೨೭೦-೭೧ ಎನ್ನಬಹುದು.

[6]ಎ.ಕ. ೮ ನಗರ ೨೦ ಪಟ್ಟುಗುಪ್ಪೆ ಅರಸರ ಕುರಿತು ಮುಂದಿನ ವಿವರಗಳೆಲ್ಲ ಈ ಶಾಸನದಲ್ಲೇ ಇವೆ.

[7]ಎ.ಕ. ೮ ಸಾಗರ ೮೬. ಆವಿನಹಳ್ಳಿ

[8]ಮೈ.ಆ ರಿ. ೧೯೩೧, ಸಂ.೬೬.

[9]ಎ.ಕ. ೭ ಶಿಕಾರಿಪುರ ೩೧೨. ಪುನೇದಹಳ್ಳಿ

[10]ಎ.ಕ. ೮ ನಗರ ೬೧. ಹುಂಚದ ಕಮಟೇಶ್ವರ ದೇವಾಲಯಕ್ಕೆ ಈತನು ದಾನ ನೀಡಿದ್ದನು.

[11]ಎ.ಕ. ೮ ಸಾಗರ ೩೧. ಕಂಬಳಿಕೊಪ್ಪ

[12]ಎ.ಕ. ೮ ಸಾಗರ ೯೭. ನಾಡಮಡುವು

[13]ಎ.ಕ. ೮ ಸಾಗರ ೯೬, ೯೮. ನಾಡಮಡುವು ೧೩೦೦-೧೩೦೧

[14]ಎ.ಕ. ೮ ಸಾಗರ ೯೯, ನಾಡಮಡುವು

[15]ಎ.ಕ. ೭ ಶಿಕಾರಿಪುರ ೩೧೨, ಪುನೇದಹಳ್ಳಿ

[16]ಎ.ಕ. ೮ ಸಾಗರ ೧೩೫ ಹೊಸಗುಂದ

[17]ಎ.ಕ. ೮ ಸಾಗರ ೯೭. ನಾಡಮಡುವು

[18]ಎ.ಕ. ೮ ನಗರ ೨೦, ಪಟ್ಟುಗುಪ್ಪೆ

[19]ಎ.ಕ. ೭ ಶಿಕಾರಿಪುರ ೩೧೨. ಪುನೇದಹಳ್ಳಿ

[20]ಎ.ಕ. ೮ ಸಾಗರ ೧೫. ನಾಡಕಳಸಿ

[21]ಎ.ಕ. ೮ ಸೊರಬ ೫೬೧. ಕೋಳಿಸಾಲೆ

[22]ಎ.ಕ. ೮ ಸಾಗರ ೯೯. ನಾಡಮಡುವು

[23]ಎ.ಕ. ೮ ಸಾಗರ ೩೧, ಕಂಬಳಿಕೊಪ್ಪ ೧೨೯೦, ೭೦ ಸಾತಳಲು ೧೨೭೬

[24]ಎ.ಕ. ೮ ಸಾಗರ ೭೦. ಸಾತಳಲು ೧೨೭೬

[25]ಎ.ಕ. ೮ ಸಾಗರ ೧೩೫, ಹೊಸಗುಂದ ೧೩೨೧ ರ ಕಂಚಿಕಾಳಮ್ಮನ ಗುಡಿ ಶಾಸನ

[26]ಎ.ಕ. ೮ ಸಾಗರ ೯೧, ೯೨ ಹೆಡತರಿ ೧೧೬೧

[27]ಎ.ಕ. ೮ ಸಾಗರ ೭೧.

[28]ಎ.ಕ. ೮ ಸಾಗರ ೧೦೧. ಮತ್ತಿಕೊಪ್ಪ ೧೩೦೩

[29]ಅದೇ.

[30]ಧಾಕೆ ಎಂ.ಎ. ಎನ್ಸೈಕ್ಲೋಪೀಡಿಯ ಆಫ್ ಇಂಡಿಯನ್ ಆರ್ಕಿಟೆಕ್ಚರ್, ಸೌಥ್ ಇಂಡಿಯಾ ಅಪ್ಪರ್ ದ್ರಾವಿಡ ದೇಶ, ಲೇಟರ್‌ಫೇಸ್, ಅಮೇರಿಕನ್ ಇನ್ಸಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್, ೧೯೯೬, ಸಂ. ೧, ಪು. ೨೯೫.