ಗ್ರಾಮಾಡಳಿತ

ಗ್ರಾಮಾಡಳಿತದ ಮುಖ್ಯಸ್ಥನನ್ನು ಪ್ರಭುಗಾವುಂಡನೆಂದು ಕರೆಯಲಾಗುತ್ತಿತ್ತು. ಕ್ರಿ.ಶ. ೧೧೦೪ರ ಬಂಕಿನಕಟ್ಟೆಯ ಶಾಸನ, ಬಂಕಿನಕಟ್ಟೆಯ ಬಂಕಗಾವುಂಡ ಮತ್ತು ಬಮ್ಮಗಾವುಂಡಿಯ ಪುತ್ರ ಚಟ್ಟಗಾವುಂಡ, ಚಂದವೆಗಾವುಂಡಿಯನ್ನು ಹೆಸರಿಸುತ್ತವೆ.[1] ಕ್ರಿ.ಶ. ೧೧೩೦ರ, ಬುಕ್ಕಾಂಬುಧಿ ಶಾಸನ, ಅರಗಟ್ಟದ ಚಟ್ಟಗೌಂಡ, ಮಾದಿಗೌಂಡ, ಮಾಚಗೌಂಡನನ್ನು ಉಲ್ಲೇಖಿಸುತ್ತದೆ.[2] ಕ್ರಿ.ಶ. ೧೧೪೧ರ ಅನುವನಹಳ್ಳಿ ಶಾಸನ ಕಾಳಗವುಡ ಮತ್ಕಾಳಗವುಡಿ ಅವರ ಆಲಗವುಡ ಮತ್ತು ಆತನ ಮದವಳಿಗೆ ದುಗ್ಗಗಾವುಡಿ ಆ ಗವುಡನ ಮಗ ಕಾಳಗವುಡನನ್ನು ಹೆಸರಿಸುತ್ತದೆ.[3] ಕ್ರಿ.ಶ. ೧೧೭೩ರ ಮುದಿಗೆರೆ ಶಾಸನದಲ್ಲಿ ಮುದಿಗೆರೆಯ ಮಹಾಪ್ರಭು ಮತ್ತು ಆದಿಗೌಡ ಮತ್ತು ಮಾಕಗವುಂಡಿಗೆ, ಬ್ಯೇಲಗೌಡ, ಚೀಲಗೌಡ, ರಾಮಗೌಡರೆಂಬ ಮಕ್ಕಳೆಂದು ತಿಳಿಸುತ್ತದೆ.[4] ಅಂತೆಯೇ ಕ್ರಿ.ಶ. ೧೨೩೦ರ ಮುದಿಗೆರೆಯ ಮತ್ತೊಂದು ಶಾಸನ ಬ್ಯೇಳಗೌಡ, ಚೀಲಗೌಡ, ರಾಮಗೌಡ, ಆ ಮೂವರು ಮಕ್ಕಳು, ರಾಮಗೌಡ, ಆ ಸೋಮಗೌಡ ಮತ್ತು ಬಯಿಚಗೌಡನನ್ನು ಹೆಸರಿಸುತ್ತದೆ.[5] ಹಾಗೆಯೇ ೧೨೦೨ರ ಮತ್ತು ೧೨೦೬ರ ಆಸಂದಿ ಶಾಸನಗಳು ಇತರ ಗಾವುಂಡರನ್ನು ಉಲ್ಲೇಖಿಸುತ್ತವೆ.

ಗ್ರಾಮಾಡಳಿತ ಮುಖ್ಯಸ್ಥರಾಗಿದ್ದ ಆ ಪ್ರಭು ಗಾವುಂಡರು ಗ್ರಾಮ ಸಭೆಗಳ ಸಹಕಾರ ಸಹಾಯದೊಂದಿಗೆ ಗ್ರಾಮಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಹೊಯ್ಸಳರ ಕಾಲದಲ್ಲಿ ಗ್ರಾಮ ಸಭೆಗಳು ಅಸ್ತಿತ್ವದಲ್ಲಿದ್ದವು. ಶಾಸನಗಳಲ್ಲಿ ಅವುಗಳನ್ನು ಅವುಗಳನ್ನು ಒಕ್ಕಲು ಮಹಾಜನರು, ಹಲರು, ಹದಿನೆಂಟು ಸಮಯ, ಸಮುದಾಯ, ಸಮೂಹ ಮತ್ತು ಪ್ರಜೆ ಎಂದು ಕರೆಯಲಾಗುತ್ತಿತ್ತೆಂದು ಡಾ. ವೆಂಕಟರತ್ನಂ ತಿಳಿಸಿರುತ್ತಾರೆ.[6]

ಧರ್ಮ

ಜೈನಧರ್ಮ

ದಕ್ಷಿಣ ಭಾರತದ ಜೈನಧರ್ಮದ ಇತಿಹಾಸವೆಂದರೆ ಬಹುತೇಕ ಕರ್ನಾಟಕದ ಜೈನ ಧರ್ಮದ ಇತಿಹಾಸವೇ ಆಗಿದೆ. ಈ ಮಾತು ಕರ್ನಾಟಕದಲ್ಲಿನ ಜೈನಧರ್ಮದ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ಕ್ರಿ.ಶ. ೯೭೧ರ ಕಡೂರಿನ ಶಾಸನ “ಸ್ವಸ್ತಿ ಶ್ರೀ ಕೊಂಡಕುನ್ದಾನ್ವಯ ದೇಸಿಯ ಗಣ ಮುಖ್ಯರ್‌ದೇವೇನ್ದ್ರ ಸಿದ್ಧಾನ್ತ ಭಟಾರರ ಹಿರಿಯ ಶಿಷ್ಯರ್ ಚಾನ್ದ್ರಾಯಣದ ಭಟಾರರ ಶಿಷ್ಯರ್‌ಗುಣಚನದ್ದ್ರಭಟಾರರ ವರಶಿಷ್ಯರ್‌ಶ್ರೀ ಮದಭಯಣನ್ದಿ ಪಣ್ದಿತದೇವರನಾಣಬ್ಯೆಕನ್ತಿಯರ ಶಿಶ್ಯನ್ತಿಯರ್ ಪಡಿಯರದೊರಪಯ್ಯನ ಪಿರಿಯರಸಿ ಪಾಂಬಬ್ಬೆ ತಲೆನರಿದು ಮೂವತ್ತು ವರಿಸಂ ತಪಂಗೆಯ್ದನೋನ್ತುಚ್ಛಮರಣಮೇರುದರ್” ಎಂದು ಪಾಂಬಬ್ಬೆಯನ್ನು ಕೊಂಡಾಡಿದೆ.[7]

ಹೊಯ್ಸಳ ವಿಷ್ಣುವರ್ಧನನ ಸುಪ್ರಸಿದ್ಧ ದಂಡನಾಯಕ ಗಂಗರಾಜನ ಮರಣಾನಂತರ, ಆತನ ಮಗ ಬೊಪ್ಪ ದೋರ ಸಮುದ್ರದಲ್ಲಿ (ಈಗಿನ ಹಳೇಬೀಡು) ದ್ರೋಹರಘಟ್ಟ ಜಿನಾಲಯವನ್ನು ನಿರ್ಮಿಸಿದ.[8]ದ್ರೋಹರಘಟ್ಟ ಎಂಬುದು ಗಂಗರಾಜನ ಪ್ರಸಿದ್ಧ ಬಿರುದುಗಳಲ್ಲೊಂದು. ಈ ಜಿನಾಲಯ ಪ್ರತಿಷ್ಠಾಪನೆಯ ಪ್ರಸಾದ ಹೊಯ್ಸಳ ವಿಷ್ಣುವರ್ಧನನಿಗೆ ತಲುಪಿದಾಗ, ವಿಷ್ಣುವರ್ಧನನು ಬಂಕಾಪುರದಲ್ಲಿ ತನ್ನ ಶತ್ರುಗಳ ವಿರುದ್ಧ ವಿಜಯವನ್ನು ಗಳಿಸಿದ್ದ ಹಾಗೂ ಇದೇ ಸಂದರ್ಭದಲ್ಲಿ ಆತನ ಪತ್ನಿ ಲಕ್ಷ್ಮೀದೇವಿ ಪುತ್ರ ಸಂತಾನ ಪಡೆದ ಸುದ್ದಿ ಆತನಿಗೆ ತಲುಪಿತು. ಇದರಿಂದ ಆನಂದ ಪಟ್ಟ ಹೊಯ್ಸಳ ವಿಷ್ಣು, ದ್ರೋಹರಘಟ್ಟ ಜಿನಾಲಯದ ಜಿನಮೂರ್ತಿಗೆ ವಿಜಯಪಾರ್ಶ್ವನೆಂದೂ ಹಾಗೂ ತನ್ನ ಮಗನಿಗೆ ವಿಜಯ ನರಸಿಂಹ ದೇವನೆಂದು ನಾಮಕರಣ ಮಾಡಿದ ಎಂದು ಬೇಲೂರಿನ ಶಾಸನವೊಂದು ವರ್ಣಿಸುತ್ತದೆ. ಹಾಗೂ ಆಸಂದಿ ನಾಡಿನ ಜಾವಗಲ್ಲನ್ನು ದತ್ತಿ ನೀಡಿದುದಾಗಿ ತಿಳಿಸುತ್ತದೆ.[9]

ಹತ್ತನೆ ಶತಮಾನ ಜೈನಧರ್ಮದ ಸುವರ್ಣಯುಗವಾಗಿದ್ದರೆ, ನಂತರದ ಕಾಲ ಜೈನಧರ್ಮದ ಇಳಿಕೆಯ ಕಾಲ. ತಲಕಾಡಿನ ಗಂಗರು ಜೈನ ಧರ್ಮದ ಪ್ರಬಲ ಪೋಷಕರಾಗಿದ್ದರು.

ಬೌದ್ಧ ಧರ್ಮ

ಆಸಂದಿಯ ಗಂಗರಸರ ಕಾಲದ ದಾಖಲೆಗಳಲ್ಲಿ ಬೌದ್ಧಮತದ ನೇರ ಉಲ್ಲೇಖಗಳು ಕಂಡು ಬರುವುದಿಲ್ಲ. ಆದರೆ ಕದಂಬರ ಕಾಲದ ಆಲೂರಿನ ತಾಮ್ರಪಟ ಶಾಸನ ಬೌದ್ಧ ಧರ್ಮಕ್ಕೆ ನೀಡಿದ ದಾನ ದತ್ತಿಗಳನ್ನು ಉಲ್ಲೇಖಿಸುತ್ತದೆ ಎಂದು ಡಾ. ಅ. ಸುಂದರ ತಿಳಿಸಿರುತ್ತಾರೆ.[10]ಬೌದ್ಧ ಧರ್ಮ ತನ್ನ ನೇರ ಅಸ್ತಿತ್ವವನ್ನು ಕಳೆದುಕೊಂಡರೂ ಪಾಶುಪತ ಶೈವ ಧರ್ಮದ ವೇಷಾಂತರದಲ್ಲಿ ಅಸ್ತಿತ್ವದಲ್ಲಿದ್ದಿತೆಂಬುದು, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಅಧ್ಯಯನದಿಂದ ತಿಳಿದು ಬರುತ್ತದೆ. ಮುಳ್ಳಯ್ಯನಗಿರಿಯಲ್ಲಿರುವ ಮುಳ್ಳಯ್ಯನ ಮಠದ ಪ್ರಧಾನ ಗದ್ದುಗೆ ಗಜಪೃಷ್ಠಾಕಾರದ ವಾಸ್ತುವಿನಿಂದ ಸುತ್ತುವರಿಯಲ್ಪಟ್ಟಿದ್ದು ಪೂರ್ವಾಭಿಮುಖವಾಗಿದೆ. ಹೊರಗಿನಿಂದ ವೀಕ್ಷಿಸಿದರೆ ಅರ್ಧ ಗೋಲವನ್ನು ಭೂಮಿಯ ಮೇಲೆ ಮಗುಚಿ ಇಟ್ಟಂತೆ ಕಂಡು ಬರುತ್ತದೆ. ಸಾಮಾನ್ಯವಾಗಿ ಬೌದ್ಧರ ಸ್ತೂಪಗಳು ಈ ರೀತಿಯ ರಚನೆಯನ್ನು ಹೊಂದಿರುತ್ತವೆ. ಈ ಗದ್ದುಗೆ ಬೌದ್ಧರ ಸ್ತೂಪವನ್ನು ಹೋಲುತ್ತಿದ್ದು ಮೇಲ್ಭಾಗದಲ್ಲಿ ಒಂದು ಕಲಶವಿದೆ. ಇದು ಮೂಲ ರಚನೆಯಾಗಿದ್ದು ನಂತರ ಅದಕ್ಕೆ ನವರಂಗ ಮುಖಮಂಟಪವನ್ನು ಸೇರಿಸಲಾಗಿದೆ. ಈ ಎಲ್ಲಾ ಲಕ್ಷಣಗಳನ್ನು ಗಮನಿಸಿದಾಗ ಹನ್ನೆರಡನೇ ಶತಮಾನಕ್ಕೂ ಮೊದಲು ಈ ಕ್ಷೇತ್ರ ವಜ್ರಯಾನ ಬೌದ್ಧಮತದ ಕೇಂದ್ರವಾಗಿತ್ತೇ? ಎನ್ನುವ ಅನುಮಾನಗಳು ಕಾಡುತ್ತವೆ.[11]

ಶೈವಧರ್ಮ

ವೈದಿಕ ಶೈವಕ್ಕೆ ಭಿನ್ನವಾದ ನಕುಲೀಶ ಪಾಶುಪತ ಹೆಸರಿನ ಆಗಮಿಕ ಶೈವವೊಂದು ಕರ್ನಾಟಕದಲ್ಲಿ ತುಂಬ ಪ್ರಸಿದ್ಧವಾಗಿದ್ದಿತು.[12]ಈ ಧರ್ಮ ಆಚಾರ್ಯರ ಹೆಸರಿನ ಮುಂದೆ ರಾಶಿ, ಪಂಡಿತ, ಜೀಯ, ಶಕ್ತಿಯೆಂಬ ಉತ್ತರ ಪದಗಳು ಬಳಕೆಯಾಗುತ್ತಿದ್ದವು.[13]ಈ ಪಾಶುಪತರ ಮುಖ್ಯ ಕೊಡುಗೆಯೆಂದರೆ ದೇವಾಲಯ ಮತ್ತು ಮಠ ನಿರ್ಮಾಣ. ದೇವಾಲಯವ್ನು ಕಟ್ಟಿಸಿ, ತಮ್ಮ ಹೆಸರಿನಲ್ಲಿ ಲಿಂಗವನ್ನು ಸ್ಥಾಪಿಸಿದವರು ದೇವರೇ ಆಗುತ್ತಾರೆಂಬ ಆಗಮ ವಾಕ್ಯದ ಮೇರೆಗೆ ಆ ಕಾಲದಲ್ಲಿ ಅನೇಕರು ತಮ್ಮ ಮತ್ತು ತಮ್ಮ ಪರಿವಾರದವರ ಹೆಸರಿನಲ್ಲಿ ದೇವಾಲಯಗಳನ್ನು ಕಟ್ಟಿಸುತ್ತಿದ್ದರು.[14]ಆಸಂದಿ ಅರಸರ ಕಾಲದ ದಾಖಲೆಗಳು, ಶೈವ ಧರ್ಮಕ್ಕೆ ಹೆಚ್ಚಿನ ಸ್ಥಾನಮಾನವಿದ್ದುದನ್ನು ದಾಖಲಿಸುತ್ತವೆ. ಕ್ರಿ.ಶ. …………. ಬಂಕನಕಟ್ಟಿ ಶಾಸನ, ಬಂಕೇಶ್ವರ ದೇವರ ಪ್ರತಿಷ್ಠೆಯನ್ನು ಮಾಡಿ, ಕೆರೆಯನ್ನು ಕಟ್ಟಿಸಿ, ಶಿವಶಕ್ತಿ ಪಂಡಿತರಿಗೆ ಧಾರಾಪೂರ್ವಕಂ ಮಾಡಿ, ದತ್ತಿ ನೀಡಿರುವುದನ್ನು ದಾಖಲಿಸುತ್ತದೆ.[15]ಕ್ರಿ.ಶ. ೧೧೩೦ರ ಬುಕ್ಕಾಂಬುದಿ ಶಾಸನ, ಶ್ರೀಮತು ಮಂಡಳೀಕ ಬಂರ್ಮ್ಯರಸ ದೇವರು, ಅರಘಟ್ಟದ ಕೆರೆಯನ್ನು ಕಟ್ಟಿಸಿ, ಶಿವಾಲ್ಯವನ್ನು ಮಾಡಿ ಶ್ರೀ ರಾಮೇಶ್ವರ ದೇವರಿಗೆ ದಾನ ದತ್ತಿ ನೀಡಿ, ಸುರೇಶ್ವರ ಪಂಡಿತರು ಹಡದಪೂರ್ವ ಸ್ಥಾನಮಂ ಮಹಾಬಳ ದೇವರ್ಗೆ ಧಾರಾಪೂರ್ವಕವಾಗಿ ಕೊಟ್ಟುದುದನ್ನು ದಾಖಲಿಸುತ್ತದೆ.[16]ಕ್ರಿ.ಶ. ೧೧೭೩ರ ಮುದಿಗೆರೆ ಶಾಸನ, ರಾಮೇಶ್ವರ ದೇವರಿಗೆ ದೇವಾಲಯವನ್ನು ಮಾಡಿ, ಕಲ್ಯಾಣಶಕ್ತಿ ದೇವರಿಗೆ ಧಾರಾಪೂರ್ವಕವಾಗಿ ನೀಡಿದ ದತ್ತಿಯನ್ನು ಹೆಸರಿಸುತ್ತದೆ.[17]ಕ್ರಿ.ಶ. ೧೨೦೫ರ ಶಾಸನ, ಮಹಾಪ್ರಧಾನ ಹರಹಸಾಹಣಿ ಆಸಂದಿಪುರದಲ್ಲಿ, ಸಮಸ್ತ ಭುವನ ವ್ಯಾಪಾರ ಪಾರಾಯಣ ತ್ರಿಮೂರ್ತಿಯಂ, ಬಲ್ಲೇಶ್ವರ ದೇವರನ್ನೂ ಪ್ರತಿಷ್ಠೆ ಮಾಡಿದುದನ್ನು ತಿಳಿಸುತ್ತದೆ.[18]ಕ್ರಿ.ಶ. ೧೧೯೧-೯೨ರ ಶಾಸನ ಬ್ರಹ್ಮೇಶ್ವರ ಮತ್ತು ಗಂಗೇಶ್ವರ ದೇವಾಲಯಗಳ ಪ್ರತಿಷ್ಠೆಯನ್ನು ಮಾಡಿ, ರಾಜಗುರು ಕ್ರಿಯಾಶಕ್ತಿ ದೇವರು, ಸೇನಬೋವ ಕಲ್ಯಾಣ ದೇವರಿಗೆ ಧಾರಾಪೂರ್ವಕವಾಗಿ ಮಾಡಿಕೊಟ್ಟ ವಿಷಯವನ್ನು ತಿಳಿಸುತ್ತದೆ.[19]ಕ್ರಿ.ಶ. ೧೨೦೨ರ ಆಸಂದಿಯ ಶಾಸನ, ಅನಾದಿ ಸಂಸಿದ್ಧ…. ಹಳೆ ಸೂರ್ಯ ದೇವರ ದೇವಾಲಯಕ್ಕೆ ದತ್ತಿಯನ್ನು ನೀಡಿ ಬಪ್ಪಜೀಯವರ ಪುತ್ರ ಮಲ್ಲಿಕಾರ್ಜುನ ಗುರುಗಳಿಗೆ ನೀಡಿದುದನ್ನು ಅರುಹುತ್ತದೆ.[20]ಕ್ರಿ.ಶ. ೧೨೦೬ರ ಆಸಂದಿಯ ಶಾಸನ ಗಂಗೇಶ್ವರ, ಬ್ರಹ್ಮೇಶ್ವರ, ವೇದೇಶ್ವರ, ನಖರೇಶ್ವರ, ವೀರ ಬ್ರಹ್ಮೇಶ್ವರ, ದೇಣೀಶ್ವರ, ಬಲೇಶ್ವರ, ಮಾಚೇಶ್ವರ, ಜಗತೇಶ್ವರ, ಜಾದೆಶ್ವರ, ಮಾದೇಶ್ವರ, ಒಳಗಣ ಬಲ್ಲೇಶ್ವರ, ಮತ್ತು ಸೂರ್ಯದೇವರ ದೇವಾಲಯಗಳನ್ನು ಹೆಸರಿಸುತ್ತದೆ ಹಾಗೂ ಸರ್ವಬಾಧೆ ಪರಿಹಾರವಾಗಿ ಆ ಸ್ಥಳಗದ ರಾಜಗುರು, ಕ್ರಿಯಾ ಶಕ್ತಿ ದೇವರು, ಸೂರ್ಯಾಭರಣ ದೇವರು, ಕೇಸವ ಜೀಯ್ಯ, ನಖರೇಶ್ವರ ರುದ್ರಶಕ್ತಿ ಪಿಳ್ಳಜೀಯರಿಗೆ ಧಾರಾಪೂರ್ವಕವಾಗಿ ಬಿಟ್ಟ ದತ್ತಿಯನ್ನು ಉಲ್ಲೇಖಿಸುತ್ತದೆ.[21]ಕ್ರಿ.ಶ. ೧೨೧೬ರ ಆಸಂದಿ ಶಾಸನ, ಶಕ್ತಿ ಪಂಡಿತರ ಪುತ್ರ ಚಿಕ್ಕರುದ್ರ ಶಕ್ತಿ, ಕಲ್ಯಾಣ ಶಕ್ತಿಯನ್ನು ಹೆಸರಿಸುತ್ತದೆ.[22]ಕ್ರಿ.ಶ. ೧೨೩೫ರ ಆಸಂದಿಯ ಶಾಸನ, ಆಸಂದಿಯ ರಾಜಗುರು, ನಾರಸಿಂಗ, ವಾಮಶಿವದೇವ, ಬೈಚಯ್ಯ, ಚವುಡಯ್ಯ, ಬೊಂದುಜೀಯರನ್ನು, ಕಮೇಶ್ವರದ ಫೊಫುಜೀಯ, ಜವನಜೀಯರನ್ನು, ವೈಜೇಶ್ವರದ ರುದ್ರಶಕ್ತಿ, ಹೆಗ್ಗಡೆಯವರ ಬಲ್ಲಯ್ಯ, ದೋಕಜೀಯ, ಜಗತಜೀಯ, ಕಲ್ಲಜೀಯರನ್ನು, ಬಲ್ಲೇಶ್ವರದ ಕಲ್ಲಜೀಯ, ನಾಗಜೀಯರನ್ನು ಹೆಸರಿಸುತ್ತದೆ.[23]

ಮೇಲಿನ ಈ ಅಂಶಗಳು, ಆಸಂದಿ ನಾಡಿನಲ್ಲಿ ಶೈವಧರ್ಮ ಅತ್ಯಂತ ಪ್ರಬಲವಾಗಿತ್ತೆನ್ನುವ ಅಂಶವನ್ನು ಹೆಚ್ಚು ದೃಢವಾಗಿ ದಾಖಲಿಸುತ್ತದೆ.

ವೈದಿಕ ಧರ್ಮ

ಕ್ರಿ.ಶ. ೭೯೫ರ ಎರಡನೇ ಶಿವಮಾರನ ಆಸಂದಿಯ ತಾಮ್ರಪಟ ಶಾಸನ, ಮಗ ಜಯಸಿಂಹನ? ವಿಜ್ಞಾಪನೆಯ ಮೇರೆಗೆ ಅರಸ ಶಿವಮಾರ ಆಸಂದಿ ವಿಷಯಕ್ಕೆ ಸೇರಿದ ತೋರಗ್ಲು ಎಂಬ ಗ್ರಾಮವನ್ನು ವೃತ್ತಿಗಳಾಗಿ ವಿಂಗಡಿಸಿ ನಂದಿಗ್ರಾಮದ ಅತ್ರೇಯ ಗೋತ್ರದ ಪನಂಕಾಟದತ್ತ ಶರ್ಮ, ಡಾಯಣ್ಣೇಯಕುಲದ ಇಂದ್ರಪ್ರಮದ, ವಶಿಷ್ಠ ಗೋತ್ರದ ವಿಷ್ಣುದಾಸ ಶರ್ಮ, ಏಟೂರು ಗ್ರಾಮದ ವಶಿಷ್ಠ ಗೋತ್ರದ ವಿಂಧ್ಯ ಕುಮಾರ ಶರ್ಮ, ಚಾಂದೂರು ಗ್ರಾಮದ ಭಾರದ್ವಾಜ ಗೋತ್ರದ ದ್ರೋನಾಶರ್ಮ, ಪರನ್ತೂರು ಗ್ರಾಮದ ಭಾರದವಾಜ ಗೋತ್ರದ ಭಾಸ್ಕರ, ಕುಮಳೂರು ಗ್ರಾಮದ ಕೌಶಿಕ ಗೋತ್ರದ ಶಿವಕುಮಾರ ಶರ್ಮ, ಅಳಂಪೂರು ಗ್ರಾಮದ ಕಾಶ್ಯಪ ಗೋತ್ರದ ನಾರಾಯಣ ಶರ್ಮ, ಮುಡುಂಬಿ ಗ್ರಾಮದ ಕಾಮಣಯನ ಗೋತ್ರದ ನಾಗಶರ್ಮರಿಗೆ ದಾನವಿತ್ತುದನ್ನು ತಿಳಿಸುತ್ತದೆ. ಈ ಪ್ರತಿಗ್ರಹಿಗಳು ಪರೋಪಕಾರಿಗಳು, ಯಮನಿಯಮತತ್ಪರರು ಹಾಗೂ ದೇವಿದ್ವಿಜಗುರು ಪೂಜನಾರತರರೆಂದು ಶಾಸನದಲ್ಲಿ ಪ್ರಶಂಸಸಿಸಲಾಗಿದೆ.[24]ಆದರೆ ಹತ್ತನೇ ಶತಮಾನದ ತರುವಾಯ ಶೈವ ಧರ್ಮದ ಪ್ರಾಬಲ್ಯದಿಂದಾಗಿ ವೈದಿಕ ಧರ್ಮ ಮಂಕಾದ ಹಾಗೆ ಕಂಡು ಬರುತ್ತದೆ. ಕಾರಣ ಆಸಂದಿ ಅರಸರ ಶಾಸನಗಳು ವೈದಿಕ ಧರ್ಮದ ಕಿಂಚಿತ್‌ಉಲ್ಲೇಖವನ್ನು ಮಾಡುವುದಿಲ್ಲಆದರೆ ಇರಲೇ ಇಲ್ಲವೆಂದು ಭಾವಿಸುವುದು ತಪ್ಪಾಗುತ್ತದೆ.

ಅಂತರಗಟ್ಟೆ ಮಾರಮ್ಮ

ಆಸಂದಿ ನಾಡಿನ ಅಂತರಗಟ್ಟಿ ಮಾರಮ್ಮ ಜನಪದ ದೇವತೆ. ‘ಅಂತರಗಟ್ಟಿ ಮಾರಮ್ಮ’ನಂತೂ ಜಿಲ್ಲೆಯಲ್ಲೇ ಪ್ರಸಿದ್ಧ ದೇವತೆ…. ಅಂತರಗಟ್ಟಮ್ಮನ ಆಪ್ತ ಸಹಾಯಕನೆಂದರೆ ‘ಆಸಾದಿ’. ಅವನು ತಾಯಿಯನ್ನು ಕುರಿತು ನೂರೆಂಟು ರೀತಿಯಲ್ಲಿ ಹಾಡಿ ಹೊಗಳುತ್ತಾನೆ. ಅದೇ ನಾಲಿಗೆಯಲ್ಲಿ ಅಮ್ಮನನ್ನು ಸಲುಗೆಯಿಂದ ನೂರೆಂಟು ರೀತಿಯಲ್ಲಿ ಬೈದೂ ಹಂಗಿಸುವುದೂ ಉಂಟು.

ಆಸಂದಿ ಸೀಮ್ಯೋಳೇ ರೇಸಿಮೆ ಸೀರ್ಯೋಳೆ,
ಏಸೊಂದು ಬೆಳ್ಳಿ ಬಳೆಯೋಳೆ-ಮಾರಮ್ಮ
ಬೋಸಡಿ ಬಾರೆ ಬಯಲಿಗೆ ![25]

ವಾಸ್ತುಶಿಲ್ಪ

ಆಸಂದಿ ನಾಡಿನ, ಆಸಂದಿ, ಮುದಿಗೆರೆ, ಗಡಿಹಳ್ಳಿ, ಕಡೂರು, ಕಲ್ಲಹತ್ತಿ, ಬುಕ್ಕಾಂಬುಧಿ, ಹಾಗೂ ಇನ್ನಿತರ ಅನೇಕ ಸ್ಥಳಗಳಲ್ಲಿ ತಲಕಾಡಿನ ಗಂಗರು ಮತ್ತು ಆಸಂದಿ ಗಂಗರ ವಾಸ್ತುಶಿಲ್ಪಗಳು ಕಂಡು ಬರುತ್ತವೆ.

ಆಸಂದಿಯ ಭಾಗವಾಗಿರುವ, ಕೋಟಿಹಾಳು ದಿಬ್ಬ ಅನೇಕ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅವಶೇಷಗಳ ಆಗರ. ಈ ದಿಬ್ಬದಲ್ಲಿನ ಇಟ್ಟಿಗೆಗಾಗಿ ಜನ ಅದನ್ನು ಅಗೆದು, ಅಮೂಲ್ಯ ಐತಿಹಾಸಿಕ ಸಂಪತ್ತನ್ನು ನಾಶಪಡಿಸುತ್ತಿದ್ದಾರೆ. ಈ ದಿಬ್ಬದಲ್ಲಿ, ಈ ಲೇಖಕನಿಗೆ ಜೈನಶಿಲ್ಪವೊಂದು ದೊರೆತಿತ್ತು.[26]ಇದೇ ದಿಬ್ಬದಲ್ಲಿ ಅಗೆಯುವಾಗ ಸ್ಥಳೀಯರಿಗೆ ಪ್ರಾಚೀನ ತಾಮ್ರಪಟ ಶಾಸನಗಳು ದೊರಕಿದ್ದವು. ಈ ಹಿನ್ನೆಲೆಯಲ್ಲಿ ಈ ಪ್ರದೇಶದ ವ್ಯವಸ್ಥಿತ ಅಧ್ಯಯನ ಮತ್ತು ಉತ್ಖನನಗಳು ಗಂಗ ಇತಿಹಾಸದ ಕುರಿತು ಅಪೂರ್ವ ಮಾಹಿತಿ ಒದಗಿಸಬಹುದಾಗಿದೆ. ಈ ಸ್ಥಳದಲ್ಲಿದ್ದ ಸೂರ್ಯ ದೇವಾಲಯವನ್ನು ಆಸಂದಿ ಅರಸರ ಶಾಸನಗಳು ‘ಕೋಟಿಹಳಿದ ಅನಾದಿ ಸಂಸಿದ್ಧ ಹಳಿ ಸೂರ್ಯದೇವರು’ ಎಂದು ಉಲ್ಲೇಖಿಸಿವೆ.[27]ಆದರೆ ಅಲ್ಲಿ ಈಗ ಕೇವಲ ವಿಶಾಲ ದಿಬ್ಬವಿದೆ.

ಆಸಂದಿಯ ೧೨೦೬ರ ಶಾಸನವೊಂದು, ಆಸಂದಿಯ ೧೨ ಶಿವಾಲಯಗಳು ಮತ್ತು ಸೂರ್ಯ ದೇವಾಲಯವನ್ನು ಸಮಸ್ತ ಶಿವಾಲ್ಯಂಗಳೆಂದು ಹೆಸರಿಸುತ್ತದೆ.[28]ಆದರೆ ಈಗ ಆಸಂದಿಯಲ್ಲಿ, ಕೇವಲ ಮೂರು ದೇವಾಲಯಗಳಿದ್ದು ತೀರಾ ದುಸ್ಥಿತಿಯಲ್ಲಿವೆ.

ಗಂಗೇಶ್ವರ ಮತ್ತು ಬ್ರಹ್ಮೇಶ್ವರ

ಆಸಂದಿಯನ್ನು ಪ್ರವೇಶಿಸುತ್ತಿದ್ದಂತೆ, ಶಾಲೆಯ ಪಕ್ಕದಲ್ಲಿ ಕಂಡು ಬರುವ ದೇವಾಲಯ ಸ್ಥಳೀಯರಿಂದ ಬೇಕಾಬಿಟ್ಟಿ ಜೀರ್ಣೋದ್ಧಾರಗೊಂಡು ಮತ್ತೆ ದುಃಸ್ಥಿತಿಯಲ್ಲಿದೆ. ಈ ದೇವಾಲಯ ಎರಡು ಗರ್ಭಗೃಹ, ಅಂತರಾಳ, ಏಕವಾದ ಒಂದೇ ತೆರದ ಮಂಟಪವನ್ನು ಒಳಗೊಂಡಿದೆ. ಇಲ್ಲಿನ ಎರಡು ಗರ್ಭಗೃಹಗಳಲ್ಲಿಯೂ ಮೂರ್ತಿಗಳಿಲ್ಲ. ಮುಖ ಮಂಟಪದ ಎರಡು ಬದಿಗಳಲ್ಲಿ ಪ್ರವೇಶ ದ್ವಾರವಿದೆ. ಗರ್ಭಗುಡಿಗೆ ನೇರವಾಗಿ ಎದುರಿನಿಂದ ಎರಡು ಪ್ರವೇಶ ದ್ವಾರವಿದೆ. ಒಟ್ಟು ನಾಲ್ಕು ಪ್ರವೇಶ ದ್ವಾರವನ್ನು ಒಳಗೊಂಡಿರುವ ಮುಖ ಮಂಟಪದಲ್ಲಿ ಕಕ್ಷಾಸನವಿದೆ. ಕಕ್ಷಾಸನದ ಹೊರಭಿತ್ತಿಯಲ್ಲಿ ಸುಂದರವಾದ ಹೂವು, ಲತೆ, ಪ್ರಾಣಿ, ಪಕ್ಷಿ ಹಾಗೂ ಚಿಕ್ಕ, ಚಿಕ್ಕ ಗೋಪುರಗಳ ಆಕರ್ಷಕ ಕೆತ್ತನೆಗಳಿವೆ. ಈ ದೇವಾಲಯವನ್ನು ಕ್ರಿ.ಶ. ೧೧೯೧ ರಲ್ಲಿ ಆಸಂದಿಯ ನಾರಸಿಂಗ ದೇವ ತನ್ನ ತಂದೆ-ತಾಯಿಗಳ ಹೆಸರಿನಲ್ಲಿ ಕಟ್ಟಿಸಿ, ಗಂಗೇಶ್ವರ, ಬ್ರಹ್ಮೇಶ್ವರ ದೇವಾಲಯವೆಂದು ನಾಮಕರಣ ಮಾಡಿದಂತೆ ತಿಳಿದು ಬರುತ್ತದೆ.[29]ದ್ವಿಕೂಟಾಚಲ ಮಾದರಿಯ ಈ ದೇವಾಲಯಗಳು ಆಯತಾಕಾರದ ತಲ ವಿನ್ಯಾಸವನ್ನು ಹೊಂದಿದ್ದು, ಎತ್ತರವಾದ ಅಧಿಷ್ಠಾನದ ಮೇಲೆ ನಿರ್ಮಿಸಲ್ಪಟ್ಟಿವೆ. ದೇವಾಲಯದ ಹೊರಭಿತ್ತಿಯಲ್ಲಿ ಅರೆಗಂಭಗಳು, ಶಿಖರಗಳ ಅಲಂಕರಣೆಯಿದೆ. ಹೊಯ್ಸಳ ಶೈಲಿಯ ಅತ್ಯಂತ ಸುಂದರವಾದ ಹಾಗೂ ಕಲಾತ್ಮಕವಾದ ಸ್ತಂಭಗಳು ದೇವಾಲಯದ ಮುಖ ಮಂಟಪದಲ್ಲಿವೆ. ಭುವನೇಶ್ವರಿಯಲ್ಲಿನ ಕಲಾತ್ಮಕ ಕೆತ್ತನೆ ಆಕರ್ಷಕವಾಗಿದೆ.

ವೀರಭದ್ರ ದೇವಾಲಯ

ಈಗ ವೀರಭದ್ರ ದೇವಾಲಯವೆಂದು ಕರೆಯಲ್ಪಡುವ ದೇವಾಲಯವನ್ನು ಕ್ರಿ.ಶ. ೧೨೦೫ರಲ್ಲಿ ಹೊಯ್ಸಳ ಮಹಾ ಪ್ರಧಾನ ಹರಹಯ ಸಾಹಣಿ ಆಸಂದಿಪುರದಲ್ಲಿ ನಿರ್ಮಿಸಿ ತ್ರಿಮೂರ್ತಿ ಮತ್ತು ಬಲ್ಲೇಶ್ವರ ದೇವರನ್ನು ಪ್ರತಿಷ್ಠೆ ಮಾಡಿಸಿದನೆಂದು ಶಾಸನ ತಿಳಿಸುತ್ತದೆ.[30]ಘಟಿಕಾ ಸ್ಥಾನವಿದ್ದಲ್ಲಿ ತ್ರೈಪುರುಷ (ಬ್ರಹ್ಮ, ವಿಷ್ಣು, ಮಹೇಶ್ವರ) ದೇವಾಲಯಗಳಿರುತ್ತಿದ್ದವು ಎಂದು ಡಾ. ಎಂ.ಎಂ. ಕಲಬುರ್ಗಿ ತಿಳಿಸುತ್ತಾರೆ.[31]ಇದು ತ್ರಿಕೂಟಾಚಲ ದೇವಾಲಯವಾಗಿದ್ದು, ಮಧ್ಯದ ಗರ್ಭಗುಡಿಯಲ್ಲಿರುವ ಲೋಹದ ಮುಖವಾಡಗಳು ಇತ್ತೀಚಿನ ಶಿಲ್ಪಗಳಾಗಿವೆ. ಎಡ-ಬಲದ ಗರ್ಭಗೃಹದಲ್ಲಿ ವೀರಭದ್ರರ ಪುರುಷ ಪ್ರಮಾಣದ ಎರಡು ಶಿಲ್ಪಗಳಿವೆ. ಪೂರ್ವ (ಬಲ)ದ ಗರ್ಭಗುಡಿಯಲ್ಲಿ ಮತ್ತೊಂದು ವೀರಭದ್ರನ ಶಿಲ್ಪವಿದ್ದು ಸ್ಥಳೀಯವಾಗಿ ಅದನ್ನು ಕಲ್ಲಮ್ಮ ಎಂದು ಜನ ಕರೆಯುತ್ತಾರೆ. ಈ ಶಿಲ್ಪಗಳು ವಿಜಯನಗರದ ಶಿ‌ಲ್ಪ ಲಕ್ಷಣಗಳನ್ನೊಳಗೊಂಡಿವೆ. ಬಲಭಾಗದ ಗರ್ಭಗೃಹದಲ್ಲಿನ ವೀರಭದ್ರ ಮೂರ್ತಿಯ ಪೀಠದಲ್ಲಿನ ಉಬ್ಬು ಶಿಲ್ಪವನ್ನು ಉಜ್ಜಿ ಅಳಿಸುವ ಪ್ರಯತ್ನ ಮಾಡಿದ್ದರೂ, ಅವು ಇಂದಿಗೂ ಸ್ಪಷ್ಟವಾಗಿ ದೃಗ್ಗೋಚರವಿದ್ದು ಈ ದೇವಾಲಯದ ಅಧ್ಯಯನದಲ್ಲಿ ಮಹತ್ವಪೂರ್ಣ ಸುಳಿವು ನೀಡುತ್ತವೆ. ಪೀಠದ ಮೇಲೆ ಸ್ಪಷ್ಟವಾಗಿ ಸಪ್ತಾಶ್ವಗಳು ಹಾಗೂ ಅರುಣ ಶಿಲ್ಪವಿದ್ದು ಇದು ಖಚಿತವಾಗಿ ಅಲ್ಲಿ ಮೂಲತಃ ಸೂರ್ಯನ ಶಿಲ್ಪವಿತ್ತೆನ್ನುವುದಕ್ಕೆ ಸಾಕ್ಷಿಯಾಗಿದೆ. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ತ್ರೈಪುರುಷ ದೇವಾಲಯಗಳಲ್ಲಿ ಎರಡು ಶೈವ ಮತ್ತು ಸೂರ್ಯ ವಿಗ್ರಹಗಳಿರುವುದನ್ನು ನಾನು ಗುಲಬರ್ಗಾ ಜಿಲ್ಲೆ ಕಾಳಿಗ ದೇವಾಲಯದಲ್ಲಿ ಗಮನಿಸಿದ್ದೇನೆ. ಅದೇ ರೀತಿ ಇಲ್ಲಿಯೂ ಎರಡು ಶಿವಲಿಂಗ ಮತ್ತು ಸೂರ್ಯನನ್ನು ಪ್ರತಿಷ್ಟಾಪಿಸಿದ ತ್ರಿಮೂರ್ತಿ ದೇವಾಲಯವನ್ನು ಹರಹಸಾಹಣಿ ನಿರ್ಮಿಸಿದಂತೆ ಕಂಡುಬರುತ್ತದೆ. ಆದ್ದರಿಂದ ತ್ರೈಪುರುಷ ದೇವಾಲಯವೆಂದರೆ ಕೇವಲ ಬ್ರಹ್ಮ, ವಿಷ್ಣು, ಮಹೇಶ್ವರರ ಶಿಲ್ಪಗಳೇ ಇರಬೇಕೆಂದಿಲ್ಲ. ಈ ದೇವಾಲಯದ ಹೊರಭಿತ್ತಿಯಲ್ಲಿ ಜನಾರ್ಧನ, ಕೇಶವ, ಸದಾಶಿವ, ಬ್ರಹ್ಮ, ಸ್ತ್ರೀ, ಶಿಲ್ಪಗಳು ಇವೆ. ಭುವನೇಶ್ವರಿಯಲ್ಲಿ ಆಕರ್ಷಕ ಕೆತ್ತನೆಗಳೊಡನೆ, ದಿಕ್ಪಾಲಕರ ಶಿಲ್ಪಗಳಿವೆ. ಈ ದೇವಾಲಯದ ಪ್ರವೇಶ ದ್ವಾರದಲ್ಲಿರುವ ಆನೆಕಲ್ಲುಗಳು (ವ್ಯಾಳಿ ಶಿಲ್ಪಗಳು) ಕೇವಲ ಆಕರ್ಷಣೀಯ ದೃಷ್ಟಿಯಿಂದಲ್ಲದೆ ಅವುಗಳ ಪ್ರಾಚೀನತೆಯಿಂದಲೂ ನಮ್ಮ ಗಮನ ಸೆಳೆಯುತ್ತವೆ. ಇಲ್ಲಿನ ತ್ರಿವಿಕ್ರಮ ಶಿಲ್ಪ ಹಾಗೂ ನಟರಾಜ, ಎಲ್ಲೋರಾದ ಕೈಲಾಸ ದೇವಾಲಯದ ಭಿತ್ತಿ ಕೆತ್ತನೆಗಳನ್ನು ನೆನಪಿಸುತ್ತವೆ. ಆದ್ದರಿಂದ ಸುಮಾರು ೮-೯ನೇ ಶತಮಾನದ ಯಾವುದೇ ಹಳೆ ದೇವಾಲಯದಿಂದ ಇವುಗಳನ್ನು ತಂದು ಇಲ್ಲಿ ಇಟ್ಟಿರಬೇಕೆನಿಸುತ್ತದೆ.

ಚಂಡಿಕೇಶ್ವರಿ ದೇವಾಲಯ

ಈ ದೇವಾಲಯದ, ಎರಡು ಗರ್ಭಗುಡಿಯಲ್ಲಿ, ಎರಡು ಶಿವಲಿಂಗಗಳಿವೆ. ಮಧ್ಯದ ಗರ್ಭಗುಡಿ ಖಾಲಿಯಿದೆ. ಎಡಭಾಗದ ಗರ್ಭಗುಡಿಯಲ್ಲಿ ಲಿಂಗದ ಎಡಭಾಗಕ್ಕೆ ಸಿಂಹದ ಶಿಲ್ಪವೊಂದಿದೆ. ತಟ್ಟನೆ ಚೋಳರ ಸಿಂಹವನ್ನು ನೆನಪಿಸುವ ಅದು ಆಸಂದಿ ಗಂಗರ ಕಾಲದ ಅವಶೇಷ. ಅದೇ ಗರ್ಭಗೃಹದ ಎಡಬದಿ ಗೋಡೆಗೆ, ತಾಗಿಸಿದಂತಿರುವ ಸ್ತ್ರೀ ಶಿಲ್ಪ “ಕಾಲಭೈರವಿ”ಯದು, ಕೊರಳಲ್ಲಿ ರುಂಡಮಾಲೆ, ಜಟೆಯಲ್ಲಿ ರುಂಡ ಶಿಲ್ಪ, ಪಾನಪಾತ್ರೆ ಕೈಯಲ್ಲಿ, ಪಾನಪಾತ್ರೆಯ ಕೆಳಗೆ ಶುನಕ (ನಾಯಿ) ಮತ್ತು ಬೇತಾಳನ ಕೆತ್ತನೆಗಳಿವೆ. ಕೈಯಲ್ಲಿ ರುಂಡವೊಂದನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಮತ್ತೊಂದು ಕೈಯಲ್ಲಿ ತ್ರಿಶೂಲವಿದೆ. ಎಲ್ಲವೂ ಹೆಸರಿಗೆ ತಕ್ಕ ರೂಪವಾಗಿದೆ. ಇದು ಸಹ ಆಸಂದಿ ಅರಸರ ಕಾಲದ ಶಿಲ್ಪ. ಮತ್ತೊಂದು ಸ್ತ್ರೀ ಶಿಲ್ಪವಿದ್ದು ಕೈಯಲ್ಲಿ ಬಿಲ್ಲು ಬಾಣಗಳಿವೆ. ಅದರ ಇತರ ಲಕ್ಷಣಗಳು ಸ್ಪಷ್ಟವಾಗಿಲ್ಲದಿರುವುದರಿಂದ ಗುರುತಿಸಲು ಸಾಧ್ಯವಾಗುವುದಿಲ್ಲ. ಈ ಮೂರ ಗರ್ಭಗುಡಿಗಳಿಗೆ ಒಂದೇ ಮುಖ ಮಂಟಪವಿದೆ. ಲಿಂಗದ ಎದುರು ನಂದಿಗಳಿವೆ. ಮುಖಮಂಟಪ ಸಂಪೂರ್ಣ ಹೊಯ್ಸಳ ಶೈಲಿಯಲ್ಲಿದೆ. ಆಕರ್ಷಕ ಕೆತ್ತನೆಗಳಿಂದ ಕೂಡಿದ ಭುವನೇಶ್ವರಿಗಳು, ಅದರಲ್ಲಿ ತಾಂಡವಮೂರ್ತಿ, ವೀರಭದ್ರನ ಶಿಲ್ಪಗಳಿವೆ. ಭುವನೇಶ್ವರಿಯ ಅಷ್ಟ ದಿಕ್ಕುಗಳಲ್ಲಿ ಅಷ್ಟ ದಿಕ್ಪಾಲಕರ ಪಟ್ಟಿಕೆಗಳಿವೆ ಹಾಗೂ ರಾಮಾಯಣ ಮತ್ತು ಮಹಾಭಾರತದ ಕೆತ್ತನೆಗಳಿವೆ.

ಉಪಸಂಹಾರ

ಕ್ರಿ.ಶ. ೧೧೦೪ರ ಬಂಕನಕಟ್ಟಿ ಶಾಸನ,[32]ಗಂಗ ನಾಡರಸನನ್ನು ತನ್ನ ಪರಂಪರಾಗತ ಬಿರುದುಗಳೊಂದಿಗೆ, ಕೋದಂಡ ಪಾತ್ಥರಣ, ರಂಗನೀರ, ಬಿಲ್ಲಂಕಕಾರ, ಪರಮಂಡಲ ಸೂರೆಕಾರ, ಕಂಣಂಬಿನಾತನೆಂದು ಕರೆಯುತ್ತದೆ.

ಮೊದಲನೆ ವೈಜರಸ ‘ಕಣ್ಣಂಬಿನಾತ’ನೆಂದು ಬಿರುದು ಧರಿಸಿದ ಮೊದಲ ಗಂಗರಸ, ಆತನ ನಂತರದ ಈ ಮನೆತನದ ಎಲ್ಲಾ ದೊರೆಗಳು, ಮೊದಲನೆ ವೈಜರಸ ಮತ್ತು ಶ್ರೀನಾಡ ಪ್ರಶಸ್ತಿಗಳೊಂದಿಗೆ ಗುರುತಿಸಿಕೊಂಡಿದ್ದಾರೆ. “ನೋಡಿ ತಪ್ಪದೆಸೆವ ಕಣ್ಣಂಬಿನವರು” ಎಂಬ ಉಲ್ಲೇಖವನ್ನು ರಾಜಾರಾವ್ ಹೆಗಡೆಯವರು ಮಾಡಿದ್ದಾರೆ.[33]ಆಸಂದಿಯ ಕ್ರಿ.ಶ. ೧೨೦೬ರ ಶಾಸನವೊಂದು ಆಸಂದಿಯ ಶಿವಸ್ಥಾನಗಳನ್ನು ಹೆಸರಿಸುತ್ತಾ ಬಲ್ಲೇಶ್ವರ ಮತ್ತು ಒಳಗಣ ಬಲ್ಲೇಶ್ವರಗಳನ್ನು ಉಲ್ಲೇಖಿಸುತ್ತದೆ. ಆಸಂದಿ ನಾಡಿನ ಅನೇಕ ಶಾಸನಗಳಲ್ಲಿ ವ್ಯಕ್ತಿನಾಮಗಳು, ಬೀರ, ಮಾರ, ಬಯಿಚ ಮುಂತಾಗಿ ದೊರೆಯುತ್ತವೆ. ೧೨೭೮ರ ಗಡಿಹಳ್ಳಿ ಶಾಸನ (ಟಿ.ಕೆ.೮೦) ಆದಿ ಕಲಿದೇವ, ರಾಮನಾಥ, ಸಬ್ಬಳೇಶ್ವರ ದೇವಾಲಯಗಳೊಂದಿಗೆ ಶ್ರೀ ಮಯಿಲಾರನನ್ನು ಉಲ್ಲೇಖಿಸುತ್ತದೆ. ಆಸಂದಿಯಲ್ಲಿ ಬಿಲ್ಲು ಬಾಣ ಹೊಂದಿರುವ ಸ್ತ್ರೀ ಶಿಲ್ಪವೊಂದಿದೆ.

ಆಸಂದಿ ನಾಡಿನಲ್ಲಿ ಆಸಂದಿಯೂ ಸೇರಿದಂತೆ, ಕಡೂರು, ಬೀರೂರು ಅನೇಕ ಕಡೆಗಳಲ್ಲಿ ಬೀರೇಶ್ವರ ಜನಸಾಮಾನ್ಯರ ಅಂದರೆ ಕುರುಬರ ಜನಪ್ರಿಯ ದೈವ. ಬಲ್ಲೇಶ್ವರ, ರಂಗ, ರಾಮ, ಇವೆಲ್ಲಾ ಬೇಟೆಯ ಮೂಲದ ದೇವತೆಗಳು. ಆಸಂದಿ ಅರಸರ ಪ್ರಭು ಗಾವುಂಡುಗಳನ್ನು ಒಂದು ಶಾಸನ ‘ಸತ್ಯರತುನಾಕರ ಸಿವಗಣವತಾರ, ಮಹೇಶ್ವರ, ಪ್ರಜೆಮೆಚ್ಚೆಗಂಡ, ದಾಯಿಗ, ಬೇಟೆಕಾರ, ಸಿವಪಾದಸೇಕರ’ ನೆನ್ನುತ್ತದೆ. ಈ ಅಂಶಗಳನ್ನು ಐತಿಹಾಸಿಕ ಮತ್ತು ಜಾನಪದೀಯ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಅಧ್ಯಯನಕ್ಕೊಳಪಡಿಸಬೇಕಾಗಿದೆ.

 

[1]ಅದೇ, ತರಿಕೆರೆ, ಪು.೪೫೩

[2]ಅದೇ, ತರಿಕೆರೆ, ೬೬, ಪು.೪೫೬

[3]ಅದೇ, ತರಿಕೆರೆ, ೬೫, ಪು.೪೫೪

[4]ಅದೇ, ತರಿಕೆರೆ, ೮೫, ಪು.೪೭೧

[5]ಅದೇ, ತರಿಕೆರೆ, ೮೩, ಪು.೪೬೯

[6]ಡಾ. ಎ.ವಿ.ವೆಂಕಟರತ್ನಂ, “ವಿಲೇಜ್ ಆಟೋನಮಿ, ಅಂಡರ್ ದಿ ಹೊಯ್ಸಳಸ್‌” ಶೇಕ್‌ಅಲಿ, ಹಿಂದೆ ಉಲ್ಲೇಖಿಸಿದ್ದು – ಪು.೧೩೭

[7]ಎ.ಕ.ಸಂ.೬ ಕಡೂರು, ೧, ಪು.೧

[8]ಎ.ಎಸ್.ಎಮ್.ಎ.ಆರ್., ೧೯೦೮, ಸಂ. II ಪು. ೫೯, ಎಸ್.ಶೆಟ್ಟರ್

[9]ಡಾ.ಎಚ್.ವಿ.ಶ್ರೀನಿವಾಸಮೂರ್ತಿ, “ಜೈನಿಸಮ್‌ಅಂಡರ್‌ದಿ ಹೊಯ್ಸಳಾಸ್” ಡಾ. ಬಿ.ಷೇಕ್‌ಅಲಿ, ಹಿಂದೆ ಉಲ್ಲೇಖಿಸಿದ್ದು, – ಪು.೩೨೧-೨೨.

[10]ಮಲೆನಾಡು ಕರ್ನಾಟಕ ಅರಸು ಮನೆತನಗಳು ವಿಚಾರ ಸಂಕಿರಣ – ಫೆಬ್ರವರಿ ೧೨, ೧೩, ೨೦೦೦. ಪ್ರಸ್ತುತ ಪ್ರಬಂಧವನ್ನು ಲೇಖಕ ಮಂಡಿಸಿದಾಗ ಈ ಶಾಸನದ ವಿಷಯವಾಗಿ ಡಾ| ಅ. ಸುಂದರ ಅವರು ನೀಡಿದ ಮಾಹಿತಿ. ಅದಕ್ಕಾಗಿ ಈ ಲೇಖಕ ಅಭಾರಿಯಾಗಿದ್ದಾನೆ.

[11]ಟಿ. ಮುರುಗೇಶಿ, “ಗತಕಾಲದ ಚಿರಂತ ಸಾಕ್ಷಿ” – ಮುಳ್ಳಯ್ಯನ ಗಿರಿ, ಶಿರೋರತ್ನ ಚಿಕ್ಕಮಗಳೂರು ಜಿಲ್ಲಾ ಕನ್ನಡ ದಿನಪತ್ರಿಕೆ, ೬-೪-೧೯೯೦

[12]ಡಾ.ಎಂ.ಎಂ.ಕಲಬುರ್ಗಿ, ಹಿಂದೆ ಉಲ್ಲೇಖಿಸಿದ್ದು, ೧೯೮೭, ಪು.೪೩

[13]ಅದೇ. ಪು.೪೩

[14]ಅದೇ, ಪು.೪೪

[15]ಎ.ಕ. ಸಂ.೬, ತರೀಕೆರೆ, ೬೨, ಉಪ. ೪೫೩

[16]ಅದೇ, ತರೀಕೆರೆ, ೬೬, ಪು. ೪೫೬

[17]ಅದೇ, ತರೀಕೆರೆ, ೮೫, ಪು. ೪೭೨

[18]ಅದೇ, ತರೀಕೆರೆ, ೧೪೯ ಪು. ೧೩೪

[19]ಅದೇ, ತರೀಕೆರೆ, ೧೪೭ ಪು. ೧೪೩

[20]ಅದೇ, ತರೀಕೆರೆ, ೧೪೮ ಪು. ೧೩೧

[21]ಅದೇ, ತರೀಕೆರೆ, ೬೧ ಪು. ೪೫೨

[22]ಅದೇ, ತರೀಕೆರೆ, ೧೫೧ ಪು. ೧೩೬

[23]ಅದೇ, ತರೀಕೆರೆ, ೧೫೨ ಪು. ೧೩೬

[24]ಆರ್. ರಾಜಪ್ಪ ದಳವಾಯಿ, “ಆಸಂದಿಯ ಎರಡು ತಾಮ್ರ ಶಾಸನಗಳು”, ಮಾನವಿಕ ಕರ್ನಾಟಕ ಸಂ.೧೫.೩, ೧೯೮೫, ಪು.೫೬

[25]ಚಿಕ್ಕಮಗಳೂರು ಜಿಲ್ಲಾ ದರ್ಶನ,ಹೋಗಿ ಬರುವೇನು ತೌರಿಗೆ, ಪು. ೧೬೫-೧೬೬ – ಗೊ.ರು.ಚೆನ್ನಬಸಪ್ಪ.

[26]ಈ ಶಿಲ್ಪ ಪ್ರಸ್ತುತ ಶಿರ್ವದ ಎಂ.ಎಸ್.ಆರ್.ಎಸ. ಕಾಲೇಜಿನ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲ್ಪಟ್ಟಿದೆ. ಕೆಂಪು ಮರಳುಗಳಲ್ಲಿನ ಈ ಚಿಕ್ಕ ಶಿಲ್ಪ ಪದ್ಮಾಸನ ಭಂಗಿಯಲ್ಲಿ ಕುಳಿತಿದ್ದು, ಸೊಂಟದ ಮೇಲ್ಭಾಗ ತುಂಡಾಗಿ ಹೋಗಿದ್ದು ಮೇಲ್ಭಾಗ ದೊರೆತಿಲ್ಲ. ಅತ್ಯಂತ ಆಕರ್ಷಕವಾಗಿರುವ ಈ ಜಿನಬಿಂಬ ೧೦ನೇ ಶತಮಾನದ ಶಿಲ್ಪಲಕ್ಷಣಗಳನ್ನೊಳಗೊಂಡಿದೆ.

[27]ಎ.ಕ. ಸಂ.೬, ಕಡೂರು, ೧೪೮, ಪು.೧೩೧.

[28]ಅದೇ, ಕಡೂರು, ೧೫೪, ಪು. ೧೩೭

[29]ಅದೇ, ಕಡೂರು, ೧೫೭, ಪು. ೧೪೩

[30]ಅದೇ, ಕಡೂರು, ೧೪೯, ಪು. ೧೩೪

[31]ಡಾ. ಎಂ.ಎಂ.ಕಲಬುರ್ಗಿ, ಹಿಂದೆ ಉಲ್ಲೇಖಿಸಿದ್ದು, ೧೯೮೭, ಪು.೫೦

[32]ಎ.ಕ.ಸಂ.೬, ತರೀಕೆರೆ ೬“ಹೊಸಗುಂದದ ಅರಸರು” – ರಾಜಾರಾಮ್ ಹೆಗಡೆ, ಮಲೆನಾಡು ಕರ್ನಾಟಕ ಅರಸು ಮನೆತನಗಳು ವಿಚಾರ ಸಂಕಿರಣ ೧೨, ೧೩ ಫೆಬ್ರವರಿ ೨೦೦೦ ಶಿವಮೊಗ್ಗ.೨, ಪು. ೪೫೨-೫೩

[33]