೧೧ನೇ ಶತಮಾನದ ಆರಂಭದಲ್ಲಿ ಚೋಳ-ಗಂಗ ಸಂಘರ್ಷ ಪರಾಕಾಷ್ಠೆಯ ಹಂತವನ್ನು ತಲುಪಿ ತಲಕಾಡಿನ – ಗಂಗರ ಪತನದಲ್ಲಿ ಪರ್ಯಾವಸಾನಗೊಳ್ಳುತ್ತದೆ. ಕ್ರಿ.ಶ. ೧೦೦೪ ರಲ್ಲಿ ನಡೆದ ತಲಕಾಡಿನ ಯುದ್ಧ,[1] ಮತ್ತು ಕ್ರಿ.ಶ. ೧೦೦೬ರಲ್ಲಿ ನಡೆದ ಕಲಿಯೂರು ಕಾಳಗಗಳು,[2]ಪ್ರತಿಷ್ಠಿತ ತಲಕಾಡು ಗಂಗ ರಾಜ ಮನೆತನದ ಶತಮಾನಗಳ ಅಖಂಡ ಆಳ್ವಿಕೆಯನ್ನು ಕೊನೆಗೊಳಿಸುತ್ತವೆ. ಈ ಐತಿಹಾಸಿಕ ಕದನಗಳ ನಂತರ ತಲಕಾಡಿನ ‘ರಕ್ಕಸ ಗಂಗ’ ಸುಮಾರು ೧೦೨೪ ರವರೆಗೆ ಚೋಳ ರಾಜಮನೆತನದ ಮಾಂಡಲೀಕನಾಗಿ ಆಳ್ವಿಕೆ ನಡೆಸುತ್ತಾನೆ.[3]ಮಲೆಕರ್ನಾಟಕದ ಅರಸು ಮನೆತನಗಳು

ತಾವು ಗಂಗರ ವಂಶಜರೆಂದು ಹೇಳಿಕೊಳ್ಳುವ ಅನೇಕ ಮನೆತನಗಳು ಸಾಮಂತರಾಗಿ ವಿವಿಧ ಪ್ರಾಂತ್ಯಗಳಲ್ಲಿ ಆಳ್ವಿಕೆಯನ್ನು ನಡೆಸಿದರು. ಹೀಗೆ ಆಸಂದಿಯಲ್ಲಿ ಹೊಯ್ಸಳ ಮಾಂಡಲೀಕರಾಗಿ ಅಸ್ತಿತ್ವಕ್ಕೆ ಬಂದ ಗಂಗರಸರು ಸುಮಾರು ೨ ಶತಮಾನಗಳ ಕಾಲ ಹೊಯ್ಸಳ ಮಾಂಡಲೀಕರಾಗಿ ಆಸಂದಿಯಲ್ಲಿ ಆಳ್ವಿಕೆಯನ್ನು ನಡೆಸುತ್ತಾರೆ.

ಆಸಂದಿ

ಆಸಂದಿ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಇದು ಕಡೂರಿಗೆ ಈಶಾನ್ಯ ದಿಕ್ಕಿನಲ್ಲಿ ೨೦ ಕಿ.ಮೀ. ದೂರದಲ್ಲಿದೆ.[4] ಅಜ್ಜಂಪುರ-ಹೊಸದುರ್ಗ-ರಸ್ತೆಯಲ್ಲಿರುವ ಬೇಗೂರು ಗ್ರಾಮದಿಂದ ೨ ಮೈಲು ದೂರದಲ್ಲಿದೆ.[5] ಮಲೆನಾಡು ಮತ್ತು ಬಯಲು ನಾಡಿನ ಮಧ್ಯೆ ಹರಡಿರುವ ಅರೆಮಲೆನಾಡಿನ ಭೂ ಲಕ್ಷ್ಮಣ ಮತ್ತು ಪ್ರಾಕೃತಿಕ ಹಿನ್ನೆಲೆಯನ್ನು ಹೊಂದಿರುವ ಆಸಂದಿ, ಸೀಗೆ ಮತ್ತು ಜಾಲಿಯ ಕುರುಚಲು ಕಾಡಿನಿಂದ ಆವೃತವಾಗಿದೆ.

ಮೊದಲನೆ ವೈಜರಸ (ಕ್ರಿ.ಶ. ೧೦೮೦-೧೧೦೦)೨

“ಕಣ್ನಂಬಿ” ನಾತನೆಂದು ಬಿರುದಾಂಕಿತನಾದ ವೈಜರಸ ಹೊಯ್ಸಳ ಮಾಂಡಲೀಕನಾಗಿ ಆಳ್ವಿಕೆಯನ್ನು ಆರಂಭಿಸಿದಂತೆ ಕಂಡು ಬರುತ್ತದೆ. ಆಸಂದಿಯ ಕೆಲವು ಶಾಸನಗಳಲ್ಲಿ ಎರಯಂಗರಸನ ಕಾಲದಲ್ಲಿ ಬೇಡರ ಬಂಕಿ ವನದಲ್ಲಿ ಅಗ್ಗದ ರಾಯನೆಂಬುವನು ಎದುರಿನಲ್ಲಿ ಓಡಿದಾಗ ವೈಜರಸನ ಒಂದು ಬಾಣ ಆತನನ್ನು ಸೀಳಿಕೊಂಡು ಆಗಸದಲ್ಲಿಯ ಹಕ್ಕಿಯಾಕಾರದ ಗಾಳಿಪಟದ ಕಣ್ಣನ್ನು ಸೀಳಿತೆಂದು, ಇದರಿಂದ ಅಚ್ಚರಿಪಟ್ಟ ಹೆಮ್ಮಡಿರಾಯ ಆತನಿಗೆ ಕಣ್ನಂಬಿನಾತನೆಂಬ ಬಿರುದನ್ನು ದಯಪಾಲಿಸಿದನೆಂದು ತಿಳಿಸುತ್ತವೆ.[6] ತಲಕಾಡಿನ ಗಂಗರಿಗೂ ಆಸಂದಿಯ ಈ ವೈಜರಸನಿಗೂ ಇರುವ ಸಂಬಂಧಗಳು ಸ್ಪಷ್ಟವಾಗುವುದಿಲ್ಲ. ಶಾಸನಗಳಲ್ಲಿ ಈತನ ಕಣ್ನಂಬಿನ ಪ್ರಶಸ್ತಿ, ಎರೆಯಂಗರಸನ ಕಾಲದೊಳ್, ಎಂಬ ಒಕ್ಕಣೆಯ ನಂತರವೇ ಕಂಡು ಬರುತ್ತದೆ. ಬಿ.ಎಲ್. ರೈಸ್ ರವರು ಈತ ೧೦೮೧ ರಲ್ಲಿ ಆಳ್ವಿಕೆ ನಡೆಸುತ್ತಿದ್ದನೆಂದು ತಿಳಿಸುತ್ತಾರೆ.[7] ನಂತರ ಕ್ರಿ.ಶ. ೧೧೦೪ರ ಬಂಕಿನಕಟ್ಟೆ ಶಾಸನ ಇವನ ಮಗ ನಾಡರಸನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ.[8] ಆದ್ದರಿಂದ ಸರಿ ಸುಮಾರು ಕ್ರಿ.ಶ. ೧೦೮೦ ರಿಂದ ೧೧೦೦ ರ ವರೆಗೆ ಆಸಂದಿಯ ಗಂಗರಸರ ಮೊದಲನೆಯ ದೊರೆಯಾಗಿ ಕಣ್ನಂಬಿನ ವೈಜರಸನು ಆಳ್ವಿಕೆ ನಡೆಸಿದನೆಂದು ತಿಳಿಯುತ್ತದೆ. ಈತನ ಬಿರುದುಗಳು ಸಮಕಾಲೀನ ಇತಿಹಾಸ ಪುನರ್ರಚನೆಯ ದೃಷ್ಟಿಯಿಂದ ಮಹತ್ವಪೂರ್ಣ ಮಾಹಿತಿಯೊದಗಿಸುವುದಿಲ್ಲವಾದರೂ ಹೆಮ್ಮಡಿರಾಯನನ್ನು ಚಾಲುಕ್ಯ ದೊರೆಯೆಂದು ಬಿ.ಎಲ್.ರೈಸ್ ರವರು ಸರಿಯಾಗಿಯೇ ಗುರುತಿಸಿದ್ದಾರೆ.[9] ಐತಿಹಾಸಿಕವಾಗಿ ಇದು ಕಲ್ಯಾಣ ಚಾಳುಕ್ಯರ ಉತ್ಕರ್ಷದ ಕಾಲವಾದ್ದರಿಂದ ಸಹಜವಾಗಿಯೇ ಚಾಲುಕ್ಯರ ಮಾಂಡಲೀಕರಾಗಿದ್ದ ಹೊಯ್ಸಳರು ಅವರ ಅನೇಕ ಕದನದಲ್ಲಿ ಭಾಗಿಯಾಗಿದ್ದಾರೆ. ಮೇಲಾಗಿ ಹೊಯ್ಸಳ ಎರೆಯಂಗದೇವನನ್ನು ಚಾಲುಕ್ಯ ವಿಕ್ರಮನ ಬಲಗೈ ಬಂಟನೆಂದು ಕರೆಯಲಾಗಿದೆ.[10] ಆದ್ದರಿಂದ ಹೊಯ್ಸಳ ಮಾಂಡಲೀಕರಾಗಿದ್ದ ಆಸಂದಿಯ ವೈಜರಸನು ಈ ಯುದ್ಧಗಳಲ್ಲಿ ಭಾಗವಹಿಸಿದ್ದನೆಂದು ಇದರಿಂದ ಊಹಿಸಬಹುದಾಗಿದೆ. ಕಣ್ನಂಬಿನ ಘಟನೆಯಲ್ಲಿ ಬರುವ ‘ಹೆಮ್ಮಾಡಿ’ ಆರನೇ ವಿಕ್ರಮಾದಿತ್ಯನೆಂದು ಗುರುತಿಸಲ್ಪಟ್ಟರೂ ಈ ಘಟನೆಯಲ್ಲಿನ ‘ಅಗ್ಗದರಾಯ’ ಮತ್ತು ಬೇಡರ ಬಂಕಿಗಳನ್ನು ಖಚಿತವಾಗಿ ಗುರುತಿಸಲಾಗಲಿಲ್ಲ. ಬಹುಶಃ ಆತನೊಬ್ಬ ಬೇಡ ದೊರೆಯಾಗಿರಬಹುದು. ಏಕೆಂದರೆ ಆಸಂದಿ ನಾಡಿನ ಅನೇಕ ಶಾಸನಗಳಲ್ಲಿ ಬೇಡರ ಧಾಳಿಗಳನ್ನು ಉಲ್ಲೇಖಿಸಲಾಗಿದೆ.[11] ವೈಜರಸನ ಮಡದಿ “ಅಂಗನಾ”[12]ಇವರೀರ್ವರ ಪುತ್ರ ಶ್ರೀನಾಡ.

ನಾಡರಸ (ಕ್ರಿ.ಶ. ೧೧೦೦-೧೧೧೫)

ಮೊದಲನೆ ವೈಜರಸ ಮತ್ತು ಅಂಗನೆಯ ಪುತ್ರ ಶ್ರೀನಾಡ. ಈತನನ್ನು ಕ್ರಿ.ಶ. ೧೧೦೪ರ ಬಂಕಿನಕಟ್ಟೆ ಶಾಸನದಲ್ಲಿ ಮಹಾಮಂಡಳೇಶ್ವರ, ತ್ರಿಭುವನಮಲ್ಲ, ಹೊಯ್ಸಳ ದೇವರು, ಗಂಗವಾಡಿ, ತೊಂಭತ್ತಾರು ಸಾಸಿರವನ್ನು ಪ್ರತಿಪಾಲಿಸುತ್ತಿರಲು, ಶ್ರೀಮನ್ ಮಹಾಮಂಡಳೀಕಂ, ನಾಡರಸರು, ಆಸಂದಿಯ ನೆಲೆವೀಡಾಗಿ ಸುಖ-ಸಂಕಥಾ ವಿನೋದದಿಂದ ರಾಜ್ಯಂಗೈಯುತ್ತಿದ್ದರೆಂದು ಪರಿಚಯಿಸುತ್ತದೆ. ಅದೇ ಶಾಸನ ನಾಡರಸನನ್ನು, ಸತ್ಯವಾಕ್ಯ, ಕೊಂಗುಳಿವರ್ಮ, ಧರ್ಮರಾಜಾಧಿರಾಜ, ವಂದಿಜನಕಳ್ವಭುಜಂ, ಕೋಳಲಪುರವರಾಧೀಶ್ವರ, ಪ್ರತಾಪಮಹೇಶ್ವರ, ನಂದಗಿರಿನಾಥ, ಮನುಜ ಮಾನ್ದಾತ, ನಂನಿಯಗಂಗ, ಜಯದುತ್ತರಂಗ, ಮದಗಜೇಂದ್ರಲಾಂಛನ, ವಿನಿಯೋಗ ಕಾಂಚನ, ಪದ್ಮಾವತೀಲಬ್ದವರಪ್ರಸಾದ, ಮೃಗಮದಾ ಮೋದ, ರಿಪುನಿವಹಕ, ಜವನಕುಂಜರ, ಗಂಗಕುಳಕಮಳಮಾರ್ತಣ್ಡ, ಅಣಿಯೊಡೆಗಂಣ್ಡ, ಕೋದಂಡಪಾತ್ಥರಣ, ರಂಗನೀರ, ಬಿಲಂಕಕಾರ, ಪರಮಂಡಲ ಸೂರೆಕಾರ, ಎಸುವರಾದಿತ್ಯ, ಕಂಣ್ಮಂಬಿನಾತ, ಅಹವಜತ್ತಲಟ್ಟ, ವೈರಿಘರಟ್ಟ, ಶರಣಾಗತ, ವಜ್ರಪಂಜರ, ವೈರಿಕ್ಕುಂಜರ, ಕ್ಷತ್ರಿಯಪವಿತ್ರ, ಪರಬಳಭಯಂಕರ, ಬಂಟರಭಾವ, ಮರೆಯಂಗೆಕಾವ, ತಪ್ಪೆತಪ್ಪು ಮನೆನ್ತುವೊಪ್ಪುವ, ನಾಮಾದಿ ಸಮಸ್ತ ಪ್ರಶಸ್ತಿ ಸಹಿತ[13]ನೆಂದು, ತಲಕಾಡಿನ ಗಂಗರ ಎಲ್ಲ ಪ್ರಶಸ್ತಿಗಳೊಂದಿಗೆ ಹೆಸರಿಸುವುದು ಅತ್ಯಂತ ಗಮನಾರ್ಹ ಸಂಗತಿ. ಈತ ಹೊಯ್ಸಳ ಎರೆಯಂಗನ ಮಗ ಮೊದಲನೇ ವೀರಬಲ್ಲಾಳನ ಸಮಕಾಲೀನನಾಗಿ ಕ್ರಿ.ಶ. ೧೧೦೪ ರಿಂದ ೧೧೧೫ ರವರೆಗೆ, ಹೊಯ್ಸಳ ಮಾಂಡಲೀಕನಾಗಿ ಆಳ್ವಿಕೆ ನಡೆಸಿದ. ನಾಡರಸನ ಮಡದಿ ನಾಗಲೆ.[14] ಇವರೀರ್ವರ ಮಗ ಎರಡನೆ ವೈಜರಸ.

ಎರಡನೆ ವೈಜರಸ (ಕ್ರಿ.ಶ. ೧೧೧೫-೧೧೩೦)

ನಾಡರಸ ಮತ್ತು ನಾಗಲೆಯರ ಪುತ್ರ ಎರಡನೇ ವೈಜರಸನನ್ನು ಕ್ರಿ.ಶ. ೧೧೪೧ರ ಅನುವನಹಳ್ಳಿ ಶಾಸನ ಪರಿಚಯಿಸುತ್ತದೆ. ಈ ಶಾಸನದ ಕಾಲವನ್ನು ಬಿ.ಎಲ್.ರೈಸ್ ಕ್ರಿ.ಶ. ೧೧೪೧ ಎಂದು ನಿರ್ಧರಿಸಿದ್ದಾರೆ.[15] ಶಾಸನದಲ್ಲಿ “ಸ್ವಸ್ತಿ ಶ್ರೀ ಮಾ ಚಾಳುಕ್ಯ ಚಕ್ರವರ್ತಿ ಜಗದೇಕಮಲ್ಲ ವರ್ಶ್ಯದ || ೨೫ನೆಯ ಶುಕ್ಲ ಸಂವತ್ಸರದ, ಫಾಲ್ಗುಣ ಸುದ್ಧ ಪುಣ್ಯಮಿ, ಸೋಮವಾರದಂದು”[16]ಎಂದಿದೆ. ಇವು ಒಂದಕ್ಕೊಂದು ತಾಳೆಯಾಗುವುದಿಲ್ಲವೆನ್ನುವುದು ಅವರ ಅಭಿಮತ. ಆದರೆ ವೈಜರಸನ ಮಗ ಬರ್ಮರಸ ಕ್ರಿ.ಶ. ೧೧೩೦ ರಲ್ಲಿ ರಾಜ್ಯವಾಳುತ್ತಿದ್ದನೆಂದು ಬುಕ್ಕಾಂಬುಧಿಯ ಶಾಸನ ಸ್ಪಷ್ಟವಾಗಿ ತಿಳಿಸುತ್ತದೆ.[17] ಬಿ.ಎಲ್.ರೈಸ್ ಈ ಶಾಸನದ ಕಾಲವನ್ನು ಅಂಗೀಕರಿಸಿದ್ದಾರೆ.[18] ಆದ್ದರಿಂದ ಎರಡನೇ ವೈಜರಸ ಮತ್ತು ಬರ್ಮರಸ ಜಂಟಿಯಾಗಿ ಆಳ್ವಿಕೆ ನಡೆಸುತ್ತಿದ್ದರೆಂದು ಭಾವಿಸಬೇಕಾಗುತ್ತದೆ. ನಂತರ ಕ್ರಿ.ಶ. ೧೨೦೫ರ ಆಸಂದಿ ಶಾಸನ ಮತ್ತೆ ವೈಜರಸನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ.[19] ಆದ್ದರಿಂದ ಈತ ಬಹು ದೀರ್ಘಾವಧಿಯವರೆಗೆ ಬದುಕಿದ್ದನೆಂದು ಭಾವಿಸಬೇಕಾಗುತ್ತದೆ. ನಾಡರಸನಂತೆ ವೈಜರಸನು ಸಹ ತಲಕಾಡು ಗಂಗರ ಬಹುತೇಕ ಎಲ್ಲ ಪ್ರಶಸ್ತಿಗಳಿಂದ ಬಿರುದಾಕಿಂತನಾಗಿದ್ದಾನೆ. ಆದರೆ ಕ್ರಿ.ಶ. ೧೧೪೧ರ ಅನುವನಹಳ್ಳಿ ಶಾಸನದಲ್ಲಿ ಈತನನ್ನು “ಕೊಂಗಹರ್ತ್ಯ” ಎಂದು ಕರೆಯಲಾಗಿದೆ.[20] ಇದನ್ನು ಕೊಂಗಾಳ್ವರನ್ನು ನಾಶಪಡಿಸಿದವನೆಂದು ಅರ್ಥೈಸಬಹುದೇ ? ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ಆತನ ದಂಡನಾಯಕ “ಪುನಿಸ” ಕೊಂಗಾಳ್ವರನ್ನು ಹತ್ತಿಕ್ಕಿದ. ‘ಪುನಿಸ’ನ ಈ ವಿಜಯದಿಂದಾಗಿ ಹೊಯ್ಸಳ ವಿಷ್ಣು “ಕೊಂಗಾಳ್ವ ನೃಪವನದಾವಾನಲ” ಎಂಬ ಬಿರುದು ಗಳಿಸಿದ್ದನೆಂದು ಡಾ ಎ.ವಿ. ನರಸಿಂಹಮೂರ್ತಿಯವರು ತಿಳಿಸುತ್ತಾರೆ.[21] ಆದ್ದರಿಂದ ಹೊಯ್ಸಳ ಪರಮಾಪ್ತ ಮಾಂಡಲೀಕನಾಗಿದ್ದ ಎರಡನೇ ವೈಜರಸನೂ ಸಹ, “ಹೊಯ್ಸಳ-ಕೊಂಗಾಳ್ವ” ತೀವ್ರ ಸಂಘರ್ಷಗಳಲ್ಲಿ ಪಾಲ್ಗೊಂಡು ಹೊಯ್ಸಳರ ವಿಜಯಕ್ಕೆ ಕಾರಣೀಭೂತನಾಗಿದ್ದರಿಂದ “ಕೊಂಗಹರ್ತ್ಯ”ನೆಂಬ ಬಿರುದು ಗಳಿಸಿದಂತೆ ಕಂಡು ಬರುತ್ತದೆ. ಈತನ ಸತಿ ವೈಜಲಾದೇವಿ.[22] ಇವರೀರ್ವರ ಪುತ್ರ ಬರ್ಮರಸ.

ಬರ್ಮರಸ (ಕ್ರಿ.ಶ. ೧೧೩೦-೧೧೮೦)

ಆಸಂದಿಯ ಅರಸರಲ್ಲೆಲ್ಲಾ ಸುವಿಖ್ಯಾತನಾದ, ಬರ್ಮರಸನನ್ನು ಕ್ರಿ.ಶ. ೧೧೩೦ರ ಬುಕ್ಕಾಂಬುಧಿಯ ಶಾಸನ,[23]ಗಂಗರ ಸಕಲ ಬಿರುದು – ಬಾವಲಿಗಳೊಂದಿಗೆ ಪರಿಚಯಿಸುತ್ತದೆ. ೧೧೭೩ರ ಮುದಿಗೆರೆಯ ಶಾಸನ “ಬರಸಿಡಿಲಿಟ್ಟ ವೊಯ್ವ ತೆರದಿಂದ ದುರದಾಂತರಿ, ಮಾಂಡಲೀಕರಂ, ತರಿಯೆ, ರಣಾಗ್ರದೊಳ್ನೆರೆದ ಭೂತ, ಪಿಶಾಚ, ದಡಾಕಿನಿಮಯಂ, ಬಿರುವರಿವೀರ…”ನೆಂದು ಆತನ ಶೌರ್ಯವನ್ನು ಕೊಂಡಾಡುತ್ತದೆ. ಅದೇ ಶಾಸನ ಆತನನ್ನು ಗಂಗಾಚೂಡಾಮಣಿ, ವಿದ್ವಜ್ಜನ ಚಿಂತಾಮಣಿ, ಕವಿ, ಗಮಕ, ವಾದಿ, ವಾಗ್ಮಿಗಳಿಗೆ ಆಶ್ರಯ ದಾತನೆಂದು ಕೊಂಡಾಡುತ್ತದೆ.[24] ಕ್ರಿ.ಶ. ೧೧೮೦ರ ಆಸಂದಿಯ ಶಾಸನ, ಬರ್ಮರಸ ಮತ್ತು ಆತನಲೆಂಕ, ಸಂಕಲಮೆಯ ಬಮ್ಮೆನಾಯಕನ ಮರಣವನ್ನು ವೀರೋಚಿತವಾಗಿ ದಾಖಲಿಸುತ್ತದೆ. ಅದೇ ಶಾಸನ, ಆತ ಕೊಂಗು, ಕಳಿಂಗ, ಸಿಂಗಳ, ಸುಲಾಟ, ತೆಲುಂಗ, ಮಾಗಧೋತ್ತುಂಗ, ನೃಪಾಳರು, ಎದುರಿಲ್ಲದೆಂದು ಹೋರಾಡಿ, ಸುರಾಂಗನಾಲಿಂಗನಚಿತ್ತ, ಇಂದ್ರನ ಅಮರಾವತಿಯನ್ನು ಮುತ್ತಿದನೆಂದು ವರ್ಣಿಸುತ್ತದೆ.[25] ಹೊಯ್ಸಳ ವಿಷ್ಣುವರ್ಧನ ೧೧೨೨ ರಲ್ಲಿ ಚಾಲುಕ್ಯರಿಂದ ತೀವ್ರ ಪರಾಭೌವವನ್ನನುಭವಿಸುತ್ತಾನೆ. ಈ ಪರಾಭವದ ನಂತರ ಚಾಲುಕ್ಯ ಆರನೇ ವಿಕ್ರಮಾದಿತ್ಯನಿಗೆ ನಿಷ್ಠನಾಗಿ ಚಾಲುಕ್ಯ ಪರ ಯುದ್ಧಗಳಲ್ಲಿ ಸಕ್ರಿಯ ಸಹಾಯ ಹಸ್ತ ನೀಡತೊಡಗಿದ. ಈ ಅಂಶ ಆಸಂದಿಯ ಅರಸರ ಶಾಶನಗಳಲ್ಲಿ ಸೂಚ್ಯವಾಗಿ ಅಭಿವ್ಯಕ್ತವಾಗಿದೆ. ಕ್ರಿ.ಶ. ೧೧೭೩ರ ಮುದಿಗೆರೆ ಶಾಸನ ಕಲ್ಯಾಣಿ ಚಾಲುಕ್ಯರನ್ನು ಅತ್ಯುನ್ನತ ಪ್ರಶಸ್ತಿಗಳಿಂದ ವರ್ಣಿಸಿ, ಅವರ ಸಾಮಂತ ಅರಸರಾದ ಹೊಯ್ಸಳರನ್ನು “……ಆತನ ತತ್ಪಾದ ಪದ್ಮೋಪಜೀವಿ…. ಶ್ರೀ ವಿಷ್ಣುಭೂಪಂ, ಬೆಳಗುಗೆ ಜಗಂ, ರಾಜಾಮಾರ್ತಾಂಡರೂಪಂ” ಎಂದು ಹೆಚ್ಚಿನ ಯಾವುದೇ ಆಡಂಬರದ ಪ್ರಶಸ್ತಿಗಳಿಲ್ಲದೆ ವರ್ಣಿಸುತ್ತದೆ.[26] ಈ ಹಿನ್ನೆಲೆಯಲ್ಲಿ ಹೊಯ್ಸಳ ಮಾಂಡಲೀಕನಾಗಿದ್ದ ಬರ್ಮರಸ, ಚಾಲುಕ್ಯರ ಪರವಾಗಿ ಕಳಿಂಗ, ಲಾಟ, ಮಾಳ್ವ, (ಮಾಗಧೋತ್ತುಂಗ) ವೆಂಗಿ (ತೆಲುಂಗ)ಯ ಕದನಗಳಲ್ಲಿ ಭಾಗವಹಿಸಿದ್ದಾನೆ. ಅಂತೆಯೇ ಹೊಯ್ಸಳರ ಪರವಾಗಿ ಕೊಂಗಾಳ್ವ (ಕೊಂಗು)ರ ವಿರುದ್ಧ ಹೋರಾಡಿದ್ದಾನೆ. ಈ ನಿರಂತರ ಹೋರಾಟದ ಬದುಕು ಆಸಂದಿಯ ಬರ್ಮರಸನನ್ನು ಆಸಂದಿಯಿಂದ ಬಹುಕಾಲ ಹೊರಗುಳಿಯುವಂತೆ ಮಾಡಿತು. ಈ ರಾಜಕೀಯ ಅನಿವಾರ್ಯತೆ, ವೈಜರಸ ಮತ್ತು ಬರ್ಮರಸರ ಜಂಟಿ ಆಳ್ವಿಕೆಯನ್ನು ಸೃಷ್ಟಿಸಿದ್ದಂತೆ ಕಂಡು ಬರುತ್ತದೆ. ಬರ್ಮರಸನ ಸತಿ ಗಂಗಾಮಹಾದೇವಿ.[27] ಇವರ ಪುತ್ರ ನಾರಸಿಂಗದೇವ ಅಥವಾ ನರಸಿಂಹ.

ನರಸಿಂಹ (ಕ್ರಿ.ಶ. ೧೧೮೦-೧೨೦೨)

ಬರ್ಮರಸ ಮತ್ತು ಗಂಗಾಮಹಾದೇವಿಯವರ ಪುತ್ರ ನರಸಿಂಹನನ್ನು ಕ್ರಿ.ಶ. ೧೧೩೦ರ ಬುಕ್ಕಾಂಬುಧಿಯ ಶಾಸನ, “ಜಗದ್ವಿಖ್ಯಾತ ನರಸಿಂಹ ಭೂಪ ನತಿಬಳ…… ವೀತರಿಪುನಿವಹನ ಖಿಳೋದ್ವಿ…… ತಳನ್ರಿಪ ಮಸ್ತಕಾಗ್ರಮಣಿಯೆನೆ ನೆಗಳ್ದಂ” ಎಂದು ವರ್ಣಿಸುತ್ತದೆ.[28] ಕ್ರಿ.ಶ. ೧೧೮೦ ರಲ್ಲಿ ಆಸಂದಿಯ ಬರ್ಮರಸ ಮರಣ ಹೊಂದಿದ. ಆತನ ಮರಣಾನಂತರ ಅವನ ಮಗ ನರಸಿಂಹ ಭೂಪತಿ ಅಧಿಕಾರಕ್ಕೆ ಬಂದ. ಕ್ರಿ.ಶ. ೧೧೩೦ರ ಶಾಸನದಲ್ಲಿ ನರಸಿಂಹನ ಉಲ್ಲೇಖವಿರುವುದರಿಂದ, ಆತ ಅಧಿಕಾರಕ್ಕೆ ಬರುವಾಗ ಪ್ರಬುದ್ಧ ವಯಸ್ಕನಾಗಿದ್ದನೆಂಬುವುದು ಸುಸ್ಪಷ್ಟವಾಗುತ್ತದೆ. ಕ್ರಿ.ಶ. ೧೧೯೦ರ ಆಸಂದಿ ಶಾಸನ, ಈತನನ್ನು “ಕರಿಪತಿಯಪ್ಪ ಮಾಳವ ಮಹೀಪತಿ, ಬಂಟನಲಾಳ ಭೂಮಿಪಂ, ತುರುಗಚಯಂಗಳಿಂದೆಸೆವ ಗೂರ್ಜರ ಭೂಪತಿ, ಚೋಳ ಭೂಭುಜಂ, ನೆರೆದಿದಿರಾಂತು ಹಾಗೆ, ರಣರಂಗದೋಳುದ್ವನೇ ಕಾಡಿಗೆಲ್ದನೀ ನರಪತಿ, ಬಲ್ಲ ಭೂಪನ ಬೆಸಂ ಒಡೆದಿ ನರಸಿಂಹ ಭೂಭುಜಂ” ಎಂದು ವರ್ಣಿಸುತ್ತದೆ.[29] ಬಹುಶಃ ಈ ಯುದ್ಧಗಳಲ್ಲಿ ನರಸಿಂಹ ತನ್ನ ತಂದೆಯ ಕಾಲದಲ್ಲಿ ಭಾಗವಹಿಸಿದ್ದಿರಬೇಕು. ಏಕೆಂದರೆ ಹೊಯ್ಸಳ ಎರಡನೆಯ ವೀರಬಲ್ಲಾಳ ತನ್ನ ಅಧಿಕಾರಾವಧಿಯಲ್ಲಿ ಮಾಳ್ವ, ಲಾಟ, ಗೂರ್ಜರರೊಡನೆ ಹೋರಾಡಿದ ನಿದರ್ಶನಗಳು ನಮಗೆ ದೊರೆಯುವುದಿಲ್ಲ. ನಂತರ ಆಸಂದಿಯ ಕ್ರಿ.ಶ. ೧೧೯೧-೯೨ ಮತ್ತು ೧೨೦೨ ಶಾಸನಗಳು[30] ನರಸಿಂಹನ ಆಳ್ವಿಕೆಯ ಕಾಲದಲ್ಲಿ ನೀಡಿದ ದಾನ ದತ್ತಿಗಳನ್ನು ಉಲ್ಲೇಖಿಸುತ್ತದೆ. ನಂತರ ಯಾವುದೇ ಶಾಸನಗಳಲ್ಲಿ ನರಸಿಂಹನ ಪ್ರಸ್ತಾಪ ದೊರೆಯುವುದಿಲ್ಲ. ಆದ್ದರಿಂದ ೧೨೦೨ರ ನಂತರ ಈತ ಮರಣ ಹೊಂದಿರಬೇಕೆನಿಸುತ್ತದೆ. ಕ್ರಿ.ಶ. ೧೨೦೫ರ ಆಸಂದಿಯ ಶಾಸನ ವೈಜರಸನ ಉಪಸ್ಥಿತಿಯನ್ನು ಉಲ್ಲೇಖಿಸಿದರೂ ನರಸಿಂಹನ ಆಳ್ವಿಕೆಯೊಂದಿಗೆ, ಆಸಂದಿಯ ಗಂಗರಸರ ಆಳ್ವಿಕೆ ಬಹುತೇಕ ಕೊನೆಗೊಳ್ಳುತ್ತದೆ.

ಮರುಳಮಾರ್ಕ್ಕಂಡದೇವ (ಕ್ರಿ.ಶ. ೧೨೦೬-೧೨೧೬)

ಕ್ರಿ.ಶ. ೧೨೦೫ರಲ್ಲಿ ಆಸಂದಿಯ ವೈಜರಸ ಮರಣ ಹೊಂದಿದ ನಂತರ, ಮರುಳುಮಾರ್ಕ್ಕಂಡದೇವ ಆಸಂದಿನಾಡನ್ನಾಳುತ್ತಿದ್ದಂತೆ ಕ್ರಿ.ಶ. ೧೨೦೬ರ ಆಸಂದಿ ಶಾಸನ[31] ತಿಳಿಸುತ್ತದೆ.

ಹೆಬ್ಬಾರಿಮಾರ್ಕ್ಕಂಡದೇವ (ಕ್ರಿ.ಶ. ೧೨೧೬-೧೨೨೫)

ಹರಿಹರ ದಣ್ನಾಯಕರು ಆಸಂದಿನಾಡಂ ಸುಖ ಸಂಖಥಾ ವಿನೋದದಿಂ ರಾಜ್ಯಂಗೆ ಯುತ್ತಮಿರೆ, ಹೆಬ್ಬಾರಿಮಾರ್ಕ್ಕಂಡದೇವ ಆಸಂದಿ ನಾಡ ಪ್ರಭುವಾಗಿದ್ದನೆಂದು ಕ್ರಿ.ಶ. ೧೨೧೬ರ ಆಸಂದಿಯ ಶಾಸನ ತಿಳಿಸುತ್ತದೆ.[32]

ತಲಕಾಡಿನ ಗಂಗರ ಪತನಾನಂತರ ಹೊಯ್ಸಳ ರಾಜ್ಯಭಾರದಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಸಂದಿಯ ಗಂಗರಸರು ೧೨೦೫ರ ನಂತರ ರಾಜಕೀಯ ರಂಗದಿಂದ ಸಂಪೂರ್ಣವಾಗಿ ಕಣ್ಮರೆಯಾಗುತ್ತಾರೆ.

ಆಡಳಿತ

ಹಲವು ಶತಮಾನಗಳ ಸುದೀರ್ಘ ಐತಿಹಾಸಿಕ ದಾಖಲೆ ಹೊಂದಿರುವ ಆಸಂದಿ, ಕರ್ನಾಟಕದ ರಾಜಕೀಯ ಮತ್ತು ಬದುಕಿನೊಂದಿಗೆ ಅಭೇದ ಸಂಬಂಧವನ್ನು ಹೊಂದಿದೆ.

ತಲಕಾಡಿನ ಗಂಗ ಶ್ರೀ ಪುರುಷನ ಕ್ರಿ.ಶ. ೭೫೦ರ ಆಸಂದಿ ಶಾಸನ, ಆತನ ಮಗ ವಿಜಯಾದಿತ್ಯ, ಈ ನಾಡು ಆಳುತ್ತಿದ್ದ ಕಾಲದಲ್ಲಿ ಅವರ ಆಳು, ಚಣ್ಣವೂರಲ್ಲಿ, ಎರಮ್ಮಾ ಆಸಂದಿ ಆಳುತ್ತಿದ್ದನೆಂದು ತಿಳಿಸುತ್ತದೆ.[33] ಗಂಗ ಎರಡನೆಯ ಶಿವಮಾರನ ಕ್ರಿ.ಶ. ೭೯೫ರ, ಆಸಂದಿ ತಾಮ್ರ ಪಟ ಶಾಸನ, ಆತನ ಮಗ ಜಯಸಿಂಹ?ನ ವಿಜ್ಞಾಪನೆಯ ಮೇರೆಗೆ ಅರಸ ಶಿವಮಾರ ಆಸಂದಿ ವಿಷಯಕ್ಕೆ ಸೇರಿದ ತೋರುಗಲ್ಲು ಎಂಬ ಗ್ರಾಮವನ್ನು ಅನೇಕ ವೃತ್ತಿಗಳಾಗಿ ವಿಂಗಡಿಸಿ ಹನ್ನೊಂದು ಜನ ಬ್ರಾಹ್ಮಣರಿಗೆ, ದಾನವಿತ್ತಿದ್ದನ್ನು ಹೆಸರಿಸುತ್ತದೆ.[34] ಈ ಶಾಸನದಲ್ಲಿ ಉಲ್ಲೇಖವಾದ ಎರಡನೆಯ ಶಿವಮಾರನ ಮಗ ಜಯಸಿಂಹ, ಮಾರಣಸಿಂಹನಿರಬೇಕೆಂದು ಲೇಖಕರು ತಿಳಿಸುತ್ತಾರೆ.[35]

ಕ್ರಿ.ಶ. ೯೮೦ರ ಅರಕೆರೆ ಶಾಸನ, ಗಂಗ ಎರಡನೆಯ ರಾಚಮಲ್ಲನ ಕಾಲದಲ್ಲಿ ಮಹಾಬಲಿ ವಂಶದ ಶ್ರೀಮುತ್ತರ ಆಸಂದಿ ನಾಡನ್ನು ಆಳುತ್ತಿದ್ದನೆಂದು ತಿಳಿಸುತ್ತದೆ.[36]

ಕ್ರಿ.ಶ. ೮೯೯ರ ಹಿರೇಬಾಸೂರಿನ ಶಾಸನ, ಗಂಗ, ನೀತಿಮಾರ್ಗ ರಾಜಮಲ್ಲನ ಕಾಲದಲ್ಲಿ ಆಸಂದಿ ನಾಡನ್ನು ನೊಳಂಬ ಮಹಾದೇವ ಆಳುತ್ತಿದ್ದನೆಂದು ತಿಳಿಸುತ್ತದೆ.[37] ಗಂಗ ಮೂರನೆಯ ರಾಚಮಲ್ಲನ ಕ್ರಿ.ಶ. ೯೦೦ ಮುಗಳವಳ್ಳಿ ಶಾಸನವು ಮಾದಿವರ್ಮನನ್ನು ಆಸಂದಿ ನಾಡಿಗೆ ನೇಮಕ ಮಾಡಿದುದನ್ನು ತಿಳಿಸುತ್ತದೆ.[38] ಈತ ಕದಂಬ ವಂಶದವನಿರಬೇಕೆಂದು ಬಿ.ಎಲ್.ರೈಸ್ ಅಭಿಪ್ರಾಯ ಪಡುತ್ತಾರೆ.[39] ಮೇಲಿನ ಉಲ್ಲೇಖಗಳಿಂದ “ಆಸಂದಿ ನಾಡು” ಕ್ರಿ.ಶ. ೭-೮ನೇ ಶತಮಾನದಿಂದಲೇ ಒಂದು ಪ್ರಮುಖ ಆಡಳಿತ ವಿಭಾಗವಾಗಿತ್ತೆನ್ನುವುದು ಸ್ಪಷ್ಟವಾಗುತ್ತದೆ.

ಐತಿಹಾಸಿಕ ಭೌಗೋಳಿಕ ವ್ಯಾಪ್ತಿ

ಈ ನಾಡು ಕಡೂರು ತಾಲೂಕಿನ ಹಿರೇನೆಲ್ಲೂರು ಹೋಬಳಿಯ ಈಗಿನ ಆಸಂದಿ ಪಟ್ಟಣವನ್ನು ಕೇಂದ್ರವಾಗಿ ಹೊಂದಿತ್ತು. ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಬೇಲೂರು ತಾಲೂಕುಗಳನ್ನು ಒಳಗೊಂಡಿತ್ತಾದರೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ತರೀಕೆರೆ ತಾಲೂಕುಗಳು ಇದರ ಕೇಂದ್ರ ಭಾಗವಾಗಿತ್ತು.[40] ಆದರೆ ಕ್ರಿ.ಶ. ೧೧೬೫ರ ಹಳೇನಿಡನೇಗಿಲ ಶಾಸನ ಆಸಂದಿ ನಾಡಿನ ಅರಬಲ ೭೦ ಮತ್ತು ಕಳಕಿಟ್ಟಿ ೧೨ನ್ನು ಉಲ್ಲೇಖಿಸುತ್ತದೆ.[41] ಇದರಲ್ಲಿ ಅರಬಲ ೭೦, ಈಗಿನ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿದೆ. ಕಳಿಕಟ್ಟಿ ಅರಸೀಕೆರೆ ತಾಲೂಕಿನಲ್ಲಿದೆ. ಆದ್ದರಿಂದ ಆಸಂದಿ ನಾಡು ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ, ಹಾಸನ ಜಿಲ್ಲೆಯ ಬೇಲೂರು, ಅರಸೀಕೆರೆ ಮತ್ತು ಕೆಲವೊಮ್ಮೆ ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ, ಹೊನ್ನಾಳಿ ತಾಲೂಕುಗಳನ್ನು ಒಳಗೊಂಡಿರುವುದು ಸ್ಪಷ್ಟವಾಗಿದೆ.[42]

ಆಸಂದಿ ನಾಡಿನ ರಾಜಧಾನಿ “ಆಸಂದಿಯನ್ನು” ನೆಲೆವೀಡು ಎಂದು ಅನೇಕ ಶಾಸನಗಳಲ್ಲಿ ಕರೆಯಲಾಗಿದೆ.[43] ರಾಜಧಾನಿಯನ್ನು “ನೆಲೆವೀಡು” ಎಂದು ಕರೆಯುತ್ತಿದ್ದರೆಂದು ಡಾ. ಎಂ. ಚಿದಾನಂದಮೂರ್ತಿ ತಿಳಿಸುತ್ತಾರೆ.[44] ಚಕ್ರವರ್ತಿಯನ್ನು ಕುರಿತು ಹೇಳುವಾಗ, ಅವನ ಬೇರೆ, ಬೇರೆ ರಾಜಧಾನಿಗಳ ಉಲ್ಲೇಖಗಳು ಬರುತ್ತವೆ. ಇವೆಲ್ಲಾ ಆತನ ರಾಜಧಾನಿಗಳಾಗಿದ್ದವೆಂದು ಎಲ್ಲರೂ ಭಾವಿಸುತ್ತಾರೆ. ಆದರೆ ಆತನಿಗೆ ರಾಜಧಾನಿ ಇದ್ದುದು ಒಂದೇ. ಪ್ರಯಾಣ ಪ್ರಸಂಗದಲ್ಲಿ ಬೀಡು ಬಿಟ್ಟ ಗ್ರಾಮದಿಂದ ದಾನನೀಡಿದಾಗ ಆ ಗ್ರಾಮದಿಂದ ಆಳುತ್ತಿರಲಾಗಿ ಎಂದು ಬರೆಯುವುದು ರೂಢಿ. ಹೀಗೆಂದ ಮಾತ್ರಕ್ಕೆ ಇವೆಲ್ಲಾ ರಾಜಧಾನಿಗಳೆಂದು ಭಾವಿಸಲಾಗದು. ಇದೇ ರೀತಿ ಅಧಿಕಾರಿಗಳನ್ನು ಉಲ್ಲೇಖಿಸುತ್ತಾ “ಆಳುತ್ತಾಮಿರೆ” ಎಂಬ ಪದವನ್ನು ಶಾಸನಗಳು ಬಳಸಿವೆ. ಅಲ್ಲಿ ಈ ಪದ Ruling ಮತ್ತು Administration ಎಂಬ ಎರಡು ಅರ್ಥಗಳಲ್ಲಿ ಬಳಕೆಯಾಗಿದೆ. ಹಾಗಾಗಿ ಕೆಲವರು ಅಧಿಪತ್ಯದ ಪ್ರಭುಗಳು, ಇನ್ನು ಕೆಲವರು ಆಡಳಿತಾಧಿಕಾರಿಗಳು ಎಂದು ಆಡಳಿತವರ್ಗದವರನ್ನು ವರ್ಗೀಕರಿಸಬೇಕು. ಇದರಿಂದಾಗಿ ಚಕ್ರವರ್ತಿ, ಮಾಂಡಲೀಕ, ಸಾಮಂತರು, ನಾಳ್ಗಾವುಂಡ, ಗಾವುಂಡ ಇವರೆಲ್ಲಾ ಪ್ರಭುಗಳು, ಮಿಕ್ಕವರು ಅಧಿಕಾರಿಗಳೆಂದು ಸ್ಪಷ್ಟವಾಗುತ್ತದೆ.[45] ಕ್ರಿ.ಶ. ೧೨೦೫ರ ಆಸಂದಿ ಶಾಸನ, ಆಸಂದಿಯನ್ನು “ಶ್ರೀಮತ್ ರಾಜಧಾನಿ ಆಸಂದಿಪುರವೆಂದೂ” ತಿಳಿಸುತ್ತದೆ.[46] ಮಾನಸಾರದ ಪ್ರಕಾರ, ಒಂದು ಊರು, ‘ಪಪುರ’ ಎನ್ನಿಸಿಕೊಳ್ಳಬೇಕಾದರೆ ಅದರ ಸುತ್ತ-ಮುತ್ತ ಆರಾಮಗಳು, ತೋಟಗಳು ಇರಬೇಕು. ಮಾರಾಟಗಾರರಿಂದ ಮತ್ತು ಕೊಳ್ಳುವವರಿಂದ ಕಿಕ್ಕಿರಿದು ತುಂಬಿ ಗದ್ದಲದಿಂದ ಕೂಡಿರಬೇಕು. ಏಳು ದೇವ – ದೇವತೆಗಳ ದೇವಸ್ಥಾನದಿಂದ ರಾರಾಜಿಸುತ್ತಿರಬೇಕು.[47] ಕ್ರಿ.ಶ. ೭೫೦ರ ಆಸಂದಿ ಶಾಸನ ೫೨ ಜನರನ್ನು (ಅಯ್ಯದಿಮ್ಬುರುಂ) ನೌಕರರನ್ನು ಉಮತ್ತು ಸೇನೆಯನ್ನು ಉಲ್ಲೇಖಿಸುತ್ತದೆ.[48] ೧೨೦೬ರ ಆಸಂದಿಯ ಶಾಸನ, ಆಸಂದಿಯ ೧೩ ಶಿವದೇವಾಲಯಗಳನ್ನು ಹೆಸರಿಸುತ್ತದೆ.[49] ಕ್ರಿ.ಶ. ೧೨೮೭ರ ಗಡಿವಳ್ಳಿ ಶಾಸನ, ಆಸಂದಿ ನಾಡೊಳಗಣ ಉಭಯನಾನಾದೇಶಿಯನ್ನು ಹೆಸರಿಸುತ್ತದೆ.[50]

ಜಿ.ಆರ್. ಕುಪ್ಪುಸ್ವಾಮಿಯವರು ಮೂರು ವಿಧದ ಪಟ್ಟಣಗಳನ್ನು ಹೆಸರಿಸುತ್ತಾರೆ. ಅವೆಂದರೆ ರಾಜಧಾನಿ, ನೆಲೆವೀಡು, ಪಟ್ಟಣ ಅಥವಾ ನಗರ. ಆದರೆ ರಾಜಧಾನಿಯೆನ್ನುವುದು, ರಾಜ್ಯದ ರಾಜಧಾನಿಯಾಗಿರಬೇಕಿಲ್ಲ. ಒಂದು ಪ್ರದೇಶದ ಮುಖ್ಯ ಪಟ್ಟಣವೂ ಆಗಿರಬಹುದೆನ್ನುತ್ತಾರೆ. ಆದ್ದರಿಂದ ಅವರ ಪ್ರಕಾರ, ನೆಲೆವೀಡು, ರಾಜಧಾನಿಗಿಂತ ಭಿನ್ನವಾಗಿದ್ದು ಪ್ರದೇಶದ ಆಡಳಿತಗಾರ ಅಥವಾ ಸಾಮಂತ ದೊರೆಗಳ ಕೇಂದ್ರಸ್ಥಳವಾಗಿದ್ದು ಚಕ್ರವರ್ತಿಗಳು ಅಂಥದಲ್ಲಿ ನೆಲೆ ನಿಲ್ಲುವ ವಸತಿ ಸ್ಥಳಗಳಾಗಿದ್ದವು ಇಲ್ಲದಿದ್ದರೆ ಅವುಗಳಿಗೆ ಯಾವುದೋ ವಾಣಿಜ್ಯ-ವ್ಯಾಪಾರದ ಪ್ರಾಮುಖ್ಯತೆ ಅನುಮಾನಾಸ್ಪದವೆನ್ನುತ್ತಾರೆ.[51]

ಆದ್ದರಿಂದ ಆಸಂದಿ ನಾಡಿನ ಕೇಂದ್ರವಾಗಿದ್ದ ‘ಆಸಂದಿ’ ಮಧ್ಯಕಾಲೀನ ಕರ್ನಾಟಕದ ಪ್ರಮುಖ ಪಟ್ಟಣವಾಗಿತ್ತೆಂದು ಮೇಲಿನ ಅಭಿಪ್ರಾಯಗಳೊಂದಿಗೆ ಸಮಕಾಲೀನ ದಾಖಲೆಗಳ ಅಧ್ಯಯನದಿಂದ ಸ್ಪಷ್ಟವಾಗುತ್ತದೆ.

ಕ್ರಿ.ಶ. ೧೨೦೨ರ ಆಸಂದಿ ಶಾಸನ, ಕೋಟಿ ಹಾಳದ ಸೂರ್ಯ ದೇವಾಲಯಕ್ಕೆ ದತ್ತಿ ನೀಡಿದವರನ್ನು ಹೆಸರಿಸುತ್ತದೆ. ಆಸಂದಿಯ ನಾರಸಿಂಹ ದೇವ, ವಿರಬಲ್ಲಾಳ ದೇವನ ಹಿರಿಯ ಮಾಣಿಕ್ಯ ಭಂಡಾರಿ ಸಿಂಗಯ್ಯ, ಆಸಂದಿಯ ಮಹಾದೇವ ಶೆಟ್ಟಿಯ ಮಗ ಆದಿಶೆಟ್ಟಿ ತದನಂತರ ಆ ಭಂಡಾರಿ ಸಿಂಗಯ್ಯನ ಮಗ ಸಂಕರ, ಡಣ್ಣಾಯಕ ಆಲಕಟ್ಟದ ಹಿರಿಯಣ್ಣ ಸಿಂಗಯ್ಯ, ಮುದುಗೆರೆಯ ರಾಮಗೌಡ…… ಘೆಯಹರಿಯಮಗ ಗೌಡ, ಮಾಳವದ ಮಾದಿಗೌಡ, ದಂ…… ಬಮ್ಮಗೌಡ, ಕಲ್ಲಕೆರೆಯ ಕನ್ನಗೌಡ, ಅಂತರಗಟ್ಟದ….. ಗೌಡ, ಹಡುಗಲ ಭೀಮಗೌಡ ಇಂತಿವರು ಮುಖ್ಯವಾಗಿದ್ದ ಪ್ರಭುಗಾವುಂಡಗಳು ಇದ್ದು, ಆ ದೇವಾಲಯದ ಜೀರ್ಣೋದ್ಧಾರ ಸಮಸ್ತ ಭೋಗಕ್ಕೆ ಮಲ್ಲಿಕಾರ್ಜುನ ಗುರುಗಳಿಗೆ ಧಾರಾಪೂರ್ವಕವಾಗಿ ಕೊಟ್ಟಂತೆ ತಿಳಿಸುತ್ತದೆ.[52] ಆಡಳಿತದಲ್ಲಿ ಕೇಂದ್ರೀಯ ಮತ್ತು ಪ್ರಾಂತೀಯ ಎಂಬ ಜೋಡು ಪದ್ಧತಿ ರೂಢಿಯಲ್ಲಿತ್ತು. ಅಂದರೆ ಯಾವುದೇ ಪ್ರಾಂತ್ಯದಲ್ಲಿ ಕೇಂದ್ರದ ಆಡಳಿತದವರು, ಪ್ರಾಂತ್ಯದ ಕೆಲಸದವರು ಒಟ್ಟಿಗೇ ಕೆಲಸ ಮಾಡುತ್ತಿದ್ದರು.[53] ಮೇಲೆ ಉಲ್ಲೇಖಿತ ಕ್ರಿ.ಶ. ೧೨೦೨ರ ಆಸಂದಿ ಶಾಸನದಲ್ಲಿ ಹೆಸರಿಸುವ, ಆಸಂದಿಯ ನಾರಸಿಂಗ ದೇವ, ಆಸಂದಿ ನಾಡಿನ ಮಹಾಮಾಂಡಲೀಕ ನಾಗಿದ್ದರೆ, ವೀರಬಲ್ಲಾಳ ದೇವನ ಹಿರಿಯ ಮಾಣಿಕ್ಯ ಭಂಡಾರಿ ಸಿಂಗಯ್ಯ ಮತ್ತು ಆತನ ಮಗ ಸಂಕರ ಡಣ್ಣಾಯಕ ಕೇಂದ್ರೀಯ ಅಧಿಕಾರಿಗಳು. ಇದು ಆಡಳಿತದಲ್ಲಿ ಕೇಂದ್ರೀಯ ಮತ್ತು ಪ್ರಾಂತೀಯ ಎಂಬ ಜೋಡುಪದ್ಧತಿ ಅಸ್ತಿತ್ವದಲ್ಲಿದ್ದುದನ್ನು ಸ್ಪಷ್ಟಪಡಿಸುತ್ತದೆ. ಕ್ರಿ.ಶ. ೧೨೦೬ರ ಆಸಂದಿ ಶಾಸನದಲ್ಲಿ ಮರುಳುಮಾರ್ಕ್ಕಂಡದೇವ, ಬೆಳುಗೌಡ, ರಾಂಚೇಗೌಡ, ಕಡಜಿಗೌಡ, ಹೋಲಿಗೌಡ, ರಂಗಗೌಡ, ಕಲ್ಲಗೌಡ, ರಾಮಗೌಡ, ಹೊಂನ್ನಗೌಡ, ಮಾಳಗೌಡ, ಹರಿಯಮಗೌಡ, ಮಾಕಗೌಡ, ಬೋಕಗೌಡ, ಆಸಂದಿಯ ಬಮ್ಮಗೌಡ, ಪಟ್ಟಣಸ್ವಾಮಿ ಸೆಟ್ಟಿಯಂಣ್ಣ, ಆದಿಸೆಟ್ಟಿ, ಬಳ್ಳಿಕೆರೆಯ ಬಮ್ಮರಸರು, ಅಂತರಘಟ್ಟದ ಬಿಟ್ಟಗವುಡ ಮುಖ್ಯರಾಗಿ ಪ್ರಭುಗೌಡಗಳು ದತ್ತಿ ನೀಡಿದಂತೆ ಉಲ್ಲೇಖಿಸುತ್ತದೆ.[54] ಅದೇ ರೀತಿ ೧೨೧೬ರ ಆಸಂದಿಯ ಶಾಸನವು ವರ್ಣಿಸುತ್ತದೆ. ಕ್ರಿ.ಶ. ೧೨೭೮ರಲ್ಲಿ ಗುಡಿಹಳ್ಳಿ ಶಾಸನ, ಆಸಂದಿ ನಾಡಿನ ಉಭಯನಾನಾದೇಶೀ, ಸಮಸ್ತ ಪ್ರಜೆ ಗಾವುಂಡಗಳು, ಬೋವಕ್ಕಳು, ಮುಖ್ಯರಾದ ಹದಿನೆಂಟು ಸಮಯಿಗಳು, ನೀಡಿದ ದತ್ತಿಯನ್ನು ವಿವರಿಸುತ್ತದೆ.[55]

ಈ ಮೇಲಿನ ಉಲ್ಲೇಖಗಳು, ನಾಡಿನ ಆಡಳಿತದಲ್ಲಿ, ನಖರರು, ಉಭಯ ನಾನಾ ದೇಶಿಗಳು, ಪ್ರಭುಗಾವುಂಡರು, ಬೋವಕ್ಕಳು, ಹದಿನೆಂಟು ಸಮಯಿಗಳು, ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ರೆಂದು ಸ್ಪಷ್ಟಪಡಿಸುತ್ತದೆ.

 

[1]ಬಿ.ಶೇಕ್‌ಅಲಿ, ಹಿಸ್ಟರಿ ಆಫ್ ದಿ ವೆಸ್ಟರ್ನ್‌ಗಂಗಾಸ್ – ೧೯೭೬, ಪು. ೧೫೯೯.

[2]ಅದೇ, ಪು.೧೬೦

[3]ಅದೇ, ಪು.೧೬೧

[4]ಕರ್ನಾಟಕ ಸ್ಟೇಟ್ ಗ್ಯಾಸಟಿಯರ್‌– ಚಿಕ್ಕಮಗಳೂರು ಡಿಸ್ಟ್ರಿಕ್ಟ್‌, ೧೯೮೧, ಪು. ೫೫೯

[5]ಮಾನವಿಕ ಕರ್ನಾಟಕ ಸಂಪುಟ ೧೫, ಸಂಚಿಕೆ ೩. ಆಸಂದಿಯ ೨ ಶಾಸನಗಳು – ಆರ್. ರಾಜಪ್ಪ ದಳವಾಯಿ, ಪು.೫೩

[6]ಎಪಿಗ್ರಾಫಿಯಾ ಕರ್ನಾಟಕ, (ಎ.ಕ) ಸಂ.೬, ಕಡೂರು ೧೫೬-೫೭, ಪು.೧೪೮

[7]ಅದೇ, ಸಂ.೬, ಇನ್‌ಟ್ರಡಕ್ಷನ್‌, ಪು. ೮-೧೨

[8]ಅದೇ, ಸಂ.೬, ತರೀಕೆರೆ, ೬೨, ಪು.೪೫೩

[9]ಅದೇ, ಸಂ.೬, ಇನ್‌ಟ್ರಡಕ್ಷನ್‌, ಪು. ೮-೧೨

[10]ಡಾ. ಶೇಕ್‌ಅಲಿ, ಸಂ. ದಿ ಹೊಯ್ಸಳ ಡೈನಾಸ್ಟಿ, ೧೯೭೨, ಹೊಯ್ಸಳ ಚಾಲುಕ್ಯ ರಿಲೇಶನ್ಸ್‌- ಡಾ. ಎಂ. ಮುದ್ದಾಚಾರಿ, ಪು.೫೭

[11]ಎ.ಕ., ಸಂ.೬, ತರೀಕೆರೆ, ೮೪, ಪು.೪೭೦, ತರೀಕೆರೆ, ೬೩, ಪು.೪೫೩.

[12]ಅದೇ, ಸಂ.೬, ಕಡೂರು ೧೫೬, ಪು. ೧೩೯

[13]ಅದೇ, ಸಂ.೬, ತರೀಕೆರೆ, ೬೨, ಪು. ೪೫೨-೫೩

[14]ಅದೇ, ಸಂ.೬, ತರೀಕೆರೆ, ೮೫, ಪು. ೪೭೧

[15]ಅದೇ, ಸಂ.೬, ತರೀಕೆರೆ, ೬೫, ಆಂಗ್ಲ ಸಾರಾಂಶ ಪು.೧೧೭

[16]ಅದೇ, ಸಂ.೬, ತರೀಕೆರೆ, ೬೫, ಪು. ೪೫೪

[17]ಅದೇ, ಸಂ.೬, ತರೀಕೆರೆ, ೬೫, ಪು. ೪೫೫

[18]ಅದೇ, ಸಂ.೬, ತರೀಕೆರೆ, ೬೬, ಆಂಗ್ಲ ಸಾರಾಂಶ, ಪು.೧೧೭

[19]ಅದೇ, ಸಂ.೬, ಕಡೂರು, ೧೪೯, ಪು.೧೩೨

[20]ಅದೇ, ಸಂ.೬, ಕಡೂರು, ೬೫, ಪು. ೪೫೪

[21]ಡಾ.ಎ.ವಿ. ನರಸಿಂಹಮೂರ್ತಿ, “ಸಂ. ಇನ್ ಪರ್ಮನೆಂಟ್‌ಹೊಯ್ಸಳ ಫ್ಯೂಡಟರೀಸ್”, ಡಾ. ಬಿ.ಶೇಕ್ ಅಲಿ, ಸಂ. ದಿ ಹೊಯ್ಸಳ ಡೈನಾಸ್ಟ್ಸಿ ೧೯೭೨, ಪು. ೭೫

[22]ಎ.ಕ. ಸಂ.೬, ಕಡೂರು, ೧೪೮, ಪು.೧೩೦

[23]ಅದೇ, ಸಂ.೬, ತರೀಕೆರೆ, ೬೬, ೪೫೫-೫೩

[24]ಅದೇ, ಸಂ.೬, ತರೀಕೆರೆ, ೮೫, ಪು-೪೭೧

[25]ಅದೇ, ಸಂ.೬, ಕಡೂರು, ೧೪೬, ಪು.೧೨೯

[26]ಅದೇ, ಸಂ.೬, ತರೀಕೆರೆ, ೮೫, ಪು.೪೭೧

[27]ಅದೇ, ಸಂ.೬, ಕಡೂರು, ೧೪೮, ಪು.೧೪೦

[28]ಅದೇ, ಸಂ.೬, ತರೀಕೆರೆ, ೬೬, ಪು. ೪೫೫-೫೬

[29]ಅದೇ, ಸಂ.೬, ಕಡೂರು, ೧೫೬, ಪು.೧೩೯

[30]ಅದೇ, ಸಂ.೬, ಕಡೂರು, ೧೫೭, ಪು.೧೪೧, ೧೫೬, ಪು. ೧೩೮, ೧೪೮, ಪು.೧೩೯

[31]ಅದೇ, ಸಂ.೬, ಕಡೂರು, ೧೫೪, ಪು. ೧೩೭

[32]ಅದೇ, ಸಂ.೬, ಕಡೂರು, ೧೫೧, ಪು. ೧೩೫

[33]ಅದೇ, ಸಂ.೬, ಕಡೂರು, ೧೫೫, ಪು.೧೨೩ ‘ಅವರಾಳ್ಬೆಣ್ಣವೂರೊಳ್ ಎಮ್ಮನಾಸನಿಂ ಅಳೆ’

[34]ರಾಜಪ್ಪ ದಳವಾಯಿ, ‘ಆಸಂದಿಯ ಎರಡು ತಾಮ್ರ ಶಾಸನಗಳು’, ಮಾನವಿಕ ಕರ್ನಾಟಕ, ಸಂ. ೧೧೧೫, ಸಂಚಿಕೆ ೩, ೧೯೮೫, – ಪು. ೫೩-೬೩

[35]ಅದೇ, ೧೯೯೫, ಪು.೫೬

[36]ಎ.ಎಸ್.ಎಂ.ಎ.ಆರ್. ೧೯೧೦-೧೯೧೧, ಸಂ.೩, ಎಸ್.ಶೆಟ್ಟರ್, ಪು.೧೪೩

[37]ಎ.ಕ.ಸಂ.೬ ಮ ಕಡೂರು, ೧೪೧, ಪು.೧೨೫

[38]ಅದೇ, ಚಿಕ್ಕಮಗಳೂರು, ೧೨೮, ಪು.೨೧೪

[39]ಅದೇ, ಇನ್‌ಟ್ರಡಕ್ಷನ್‌ಪು.೦೫

[40]ಎಂ.ಎ.ಆರ್. ೧೯೦೮, ಸಂ.,೨, ಪು.೫೯ರ ೭೧ನೇ ಅಡಿಟಿಪ್ಪಣಿ – ಎಸ್.ಸೆಟ್ಟರ್‌

[41]ಎ.ಎಂ. ಅಣ್ಣಿಗೇರಿ (ಸಂ) ‘ಕರ್ನಾಟಕ ಇನ್‌ಸ್ಕ್ರಿಪ್ಷನ್ಸ್‌’ ಕನ್ನಡ ಸಂಶೋಧನಾ ಸಂಸ್ಥೆ, ಧಾರವಾಡ. ಸಂ., ೪, ಪು. ೩೭

[42]ಆಸಂದಿ ಆಡಿನ ಪುನಾರಚಿತ ಭೂಪಟವನ್ನು (ಭೂಪಟ ನಂ.೧) ನೀಡಲಾಗಿದೆ.

[43]ಎ.ಕ.ಸಂ.೬, ತರಿಕೆರೆ, ೬೨, ಪು. ೪೫೨; ೬೫, ಪು. ೪೫೪; ೭೨, ಪು. ೪೬೦; ೮೫, ಪು. ೭೭೨; ಕಡೂರು ೧೪೮, ಪು. ೧೩೧

[44]ಎಂ.ಚಿದಾನಂದ ಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ೧೯೭೯ ಪು. ೪೬೦

[45]ಎಂ.ಎಂ.ಕಲಬುರ್ಗಿ, ಮಹಾರಾಷ್ಟ್ರದ ಕನ್ನಡ ಶಾಸನಗಳು – ೧೯೮೭, ಪು.೫೪

[46]ಎ.ಕ.ಸಂ.೬, ಕಡೂರು, ೧೪೯, ಪು.೧೩೪

[47]ಕನ್ನಡ ಶಾಶನಗಳ ಸಾಂಸ್ಕೃತಿಕ ಅಧ್ಯಯನ – ಡಾ| ಎಂ.ಚಿದಾನಂದಮೂರ್ತಿ, ೧೯೭೯, ಪು. ೨೪೯

[48]ಎ.ಕ.ಸಂ.೬, ಕಡೂರು, ೧೪೫, ಪು.೧೨೩

[49]ಅದೇ ಕಡೂರು, ೧೫೪, ಪು. ೧೩೭

[50]ಅದೇ ತರೀಕೆರೆ ೮೭, ಪು. ೪೬೬

[51]ಜಿ.ಆರ್.ಕುಪ್ಪುಸ್ವಾಮಿ, ಇಕನಾಮಿಕ್ ಕಂಡೀಶನ್ಸ್ ಇನ್ ಕರ್ನಾಟಕ -೧೯೭೫, ಪು. ೯೫-೯೬

[52]ಎ.ಕ. ಸಂ.೬, ಕಡೂರು, ೧೪೮, ೧೩೧

[53]ಎಂ.ಎಂ.ಕಲಬುರ್ಗಿ, ೧೯೮೭, ಹಿಂದೆ ಉಲ್ಲೇಖಿಸಿದ್ದು, ಪು.೫೪

[54]ಎ.ಕ.ಸಂ.೬, ಕಡೂರು, ೧೫೪, ಪು.೧೩೭

[55]ಅದೇ, ತರಿಕೆರೆ, ೮೦, ಪು.೪೬೬