ಇದುವರೆಗೆ ರಾಜಕೀಯ ರಚನೆಗಳನ್ನು ಕೇಂದ್ರೀಕರಣ ಮತ್ತು ವಿಕೇಂದ್ರೀಕರಣದ ಶಕ್ತಿಗಳ ನಡುವೆ ಅನವರತ ಹೊಯ್ದಾಡುವಂಥವುಗಳೆಂಬ ನೆಲೆಯಲ್ಲಿ ಮೌಲ್ಯೀಕರಿಸಲಾಗಿದೆ. ಪ್ರಾರಂಭಿಕ ಮಧ್ಯಕಾಲೀನ ಭಾರತದ ರಾಜಕೀಯ ರಚನೆಯ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸ್ಥಳೀಯ ರಾಜಕೀಯ ವ್ಯವಸ್ಥೆಗಳು ಮತ್ತು ಸ್ಥಳೀಯತೆಯನ್ನು ದಾಟಿದ ರಾಜ್ಯ ವ್ಯವಸ್ಥೆಗಳು ರೂಪುಗೊಳ್ಳುವ ಪ್ರಕ್ರಿಯೆಗಳು ಮತ್ತು ಸ್ಥಳೀಯತೆಯನ್ನು ದಾಟಿದ ರಾಜ್ಯವ್ಯವಸ್ಥೆಗಳು ರೂಪುಗೊಳ್ಳುವ ಪ್ರಕ್ರಿಯೆಗಳನ್ನು ಮುಖಾಮುಖಿಯಾಗಿಸಿ ನೋಡುವದು ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ಡಾ. ಬಿ.ಡಿ.ಚಟ್ಟೋಪಾಧ್ಯಾಯ. (‘Political Processes and Structure of Polity in Early Medieval India: Problems of Perspective’ Presidential Address ot the Ancient India Section, 44th session of Indian History Congress, Burdwan, 1984)

ಸಮಕಾಲೀನ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಪ್ರಕ್ರಿಯೆಗಳಿಗೆ ಸಮಾನಾಂತರಗಳಾಗಿ ರಾಜಕೀಯ ಪ್ರಕ್ರಿಯೆಗಳನ್ನು ನೋಡುವುದು ಸಾಧ್ಯ. ರಾಜಕೀಯ ಪ್ರಕ್ರಿಯೆಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಮೂರು ಸ್ತರಗಳಲ್ಲಿ ಈ ಸಾದೃಶ್ಯಗಳನ್ನು ಗಮನಿಸಬಹುದು.

೧. ರಾಜ್ಯ ಸಮಾಜದ ಸಿದ್ಧ ಉಪಕ್ರಮಗಳು ಹಾಗೂ ಮೂಲ ಕೇಂದ್ರವೊಂದರ ಉಪಸ್ಥಿತಿ.

೨. ರಾಜ್ಯಪೂರ್ವ ರಾಜಕೀಯ ವ್ಯವಸ್ಥೆಗಳು ರಾಜ್ಯ ವ್ಯವಸ್ಥೆಗಳಾಗಿ ಬದಲಾಗುವುದನ್ನು ಸೂಚಿಸುವ ರಾಜ್ಯ ಸಮಾಜದ ಸಮತಲ (horizontal) ವಿಸ್ತರಣೆ.

೩. ಸ್ಥಳೀಯ ರಾಜ್ಯಾಧಿಕಾರದ ಪರಿಮಿತಿಯನ್ನು ದಾಟಿ ಬೆಳೆದ ರಾಜಕೀಯ ರಚನೆಗಳಲ್ಲಿ ಸ್ಥಳೀಯ ರಾಜಕೀಯ ವ್ಯವಸ್ಥೆಗಳ ಅನುಕಲನ.

ಸ್ಥಳೀಯ ರಾಜಕೀಯ ವ್ಯವಸ್ಥೆಗಳಂಥ ಚದುರಿದಂತಿದ್ದ ಅಧಿಕಾರ ಕೇಂದ್ರಗಳು ನಮ್ಮ ಪಾರಂಪರಿಕ ಇತಿಹಾಸ ರಚನೆಯಲ್ಲಿ, ವಿಶೇಷವಾಗಿ ಊಳಿಗಮಾನ್ಯ ಪ್ರವೃತ್ತಿಗಳ ಕುರಿತ ಸೂತ್ರೀಕರಣಗಳಲ್ಲಿ ಇದ್ದೇ ಇವೆ. ಅಖಿಲ ಭಾರತ ವ್ಯಾಪ್ತಿಯ ಸಾಮ್ರಾಜ್ಯಗಳಿಗೆ ಹೋಲಿಸಿದಾಗ ಅಷ್ಟು ವಿಶಾಲವಲ್ಲದ ಆದ್ದರಿಂದ ಕೇಂದ್ರೀಕೃತವೆಂದು ಪರಿಗಣಿಸಲು ಸಾಧ್ಯವಿಲ್ಲದ ರಾಜ್ಯವ್ಯವಸ್ಥೆಯ ಮಾದರಿಗಳಿಗೆ ಈ ಸೂತ್ರೀಕರಣವನ್ನು ಅನ್ವಯಿಸಲಾಗುತ್ತಿತ್ತು. ಮಧ್ಯಕಾಲೀನ ಭಾರತದ ರಾಜಕೀಯ ಇತಿಹಾಸ ಹಾಗೂ ಸಂಸ್ಥೆಗಳ ಕುರಿತ ಹಲವಾರು ಕೃತಿಗಳು ವಿರೋಧಾಭಾಸದಿಂದ ಕೂಡಿದ ಸಾಮಾನ್ಯೀಕರಣಗಳನ್ನೊಗೊಂಡಿವೆಯಷ್ಟೆ. ಅರಸೊತ್ತಿಗೆಯನ್ನು ಆಧರಿಸಿದ ರಾಜ್ಯಗಳಲ್ಲೆಲ್ಲ ಅಧಿಕಾರಶಾಹಿಯ ಮೂಲಕ ನಿಯಂತ್ರಣ ಹೊಂದಿದ ರಾಜನೇ ಪರಮಾಧಿಕಾರದ ಮೂಲ ಎಂದು ಹೇಳುತ್ತಲೇ ಅದೇ ಕಾಲಕ್ಕೆ ರಾಜ್ಯಾಡಳಿತ ವ್ಯವಸ್ಥೆ ವ್ಯಾಧಿಗ್ರಸ್ತವಾಗುವುದು ಊಳಿಗಮಾನ್ಯ ಪ್ರವೃತ್ತಿಗಳಿಂದ ಎಂದು ನಿರೂಪಿಸುವುದು ಇಂಥ ವಿರೋಧಾಭಾಸಗಳ ಒಂದು ಉದಾಹರಣೆ.

ರಾಜ್ಯ ವ್ಯವಸ್ಥೆಯಲ್ಲಿಯ ಬದಲಾವಣೆಗಳು ಹಾಗೂ ಊಳಿಗಮಾನ್ಯ ಪ್ರವೃತ್ತಿಗಳು ಇವೆರಡರ ನಡುವೆ ಒಂದು ಸಂವಾದಿ ಸಂಬಂಧ ಇದ್ದ ಕುರಿತ ಗ್ರಹಿಕೆಗಳು ನಮ್ಮ ಇತಿಹಾಸ ಲೇಖನದಲ್ಲಿ ಇದ್ದೇ ಇವೆ. ಊಳಿಗಮಾನ್ಯವಾದ ಇತಿಹಾಸ ಲೇಖನದ ಹೊಸ ಉಪಕ್ರಮವಾಗಿರದೆ, ರಾಜಕೀಯ ಸ್ತರಕ್ಕೆ ಸೀಮಿತವಾಗಿ, ರಾಜಕೀಯ ವಿಘಟನೆಯ ಸಮಾನಾರ್ಥಕವಾಗಿ ಮೊದಲಿನಿಂದಲೂ ಬಳಕೆಗೊಳ್ಳುತ್ತಲೇ ಬಂದಿದೆ. ರಾಜಕೀಯ ದಿಗಂತದಲ್ಲಿ ಏಕತ್ರಿತ ಸಾಮ್ರಾಜ್ಯವೆಂಬುದು ಕಂಡುಬಾರದ ಯಾವುದೇ ಅವಧಿಗೆ ಹೊಂದುವಂತೆ feudal ಶಬ್ದವನ್ನು ಪ್ರಾಚೀನ ಭಾರತ ಇತಿಹಾಸದಲ್ಲಿ ಹಿಂದೆ ಮುಂದೆ ತಳ್ಳಲಾಗಿದೆ.

ಭಾರತೀಯ ಸಂದರ್ಭಕ್ಕೆ ಈ ಶಬ್ದವನ್ನು ಅನ್ವಯಿಸುವಲ್ಲಿ ಮಹತ್ವಪೂರ್ಣ ಮುನ್ನಡೆ ಉಂಟಾದದ್ದು ೫೦ರ ದಶಕದಿಂದ ಹೊರಬಂದ ತಲಸ್ಪರ್ಶಿ ಅಧ್ಯಯನಗಳ ಒಂದು ಸರಣಿಯಲ್ಲಿ. ಭಾರತೀಯ ಊಳಿಗಮಾನ್ಯವಾದ ಎಂಬ ಈ ಪ್ರತಿಪಾದನೆಯಲ್ಲಿ ಮೊದಲ ಬಾರಿಗೆ ಊಳಿಗಮಾನ್ಯ ರಾಜ್ಯವ್ಯವಸ್ಥೆ ತನ್ನಷ್ಟಕ್ಕೆ ತಾನೇ ಒಂದು ಇರುವಿಕೆಯಾಗಿರದೆ ಭಾರತದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ರಾಚನಿಕ ಬದಲಾವಣೆಯನ್ನು ಪ್ರತಿನಿಧಿಸುವ ಒಂದು ಹಂತವೆಂದು ವಾದಿಸಲಾಯಿತು. ರಾಜ್ಯ ಮತ್ತು ರೈತಾಪಿ ಎಂಬ ಮುಖಾಮುಖಿ ದ್ವಿಭಜನೆಯ ಸ್ಥಾನದಲ್ಲಿ ಸಮಾಜದ ಶ್ರೇಣೀಕೃತ ರಚನೆಯ ಉಗಮವನ್ನದು ಲಕ್ಷಿಸಿತು. ಮಧ್ಯವರ್ತಿಗಳ ವಿವಿಧ ಸ್ತರಗಳನ್ನೊಳಗೊಂಡ ಈ ಶ್ರೇಣೀಕೃತ ರಚನೆಯ ಪರಿಕಲ್ಪನೆಯಿಂದಲೇ ರಾಜ್ಯದ ಶೋಷಕ ಹಾಗೂ ಬಲ ಪ್ರಯೋಗ ಸಂಬಂಧಿ ಕಾರ್ಯ ತಂತ್ರವನ್ನು ವಿವರಿಸಲೆತ್ನಿಸಿತು.

ಅದೇ ಕಾಲಕ್ಕೆ ಇತಿಹಾಸ ಲೇಖನ ಪರಂಪರೆಯ ಗತಪ್ರವೃತ್ತಿಗಳ ಗ್ರಹಿಕೆಗಳ ಮುಂದು ವರಿಕೆಯನ್ನು ಭಾರತೀಯ ಊಳಿಗಮಾನ್ಯವಾದದಲ್ಲಿ ಕಾಣಬಹುದು. ಉದಾ: ಊಳಿಗಮಾನ್ಯ ರಾಜ್ಯಾಡಳಿತಕ್ರಮ = ರಾಜಕೀಯ ವಿಚ್ಛಿದ್ರೀಕರಣ -= ಕೇಂದ್ರೀಕೃತ ರಾಜ್ಯದ ವಿಘಟನೆ ಎಂಬ ಸಮೀಕರಣ. ಭಾರತೀಯ ಊಳಿಗಮಾನ್ಯ ಸಿದ್ಧಾಂತದ ಪ್ರಕಾರ ಮೌರ‍್ಯ ರಾಜ್ಯ ವ್ಯವಸ್ಥೆ ಪ್ರತಿನಿಧಿಸಿದ ಕೇಂದ್ರೀಕೃತ ಅಧಿಕಾರಶಾಹಿ ವ್ಯವಸ್ಥೆ ಕ್ರಮೇಣ ಮುರಿದು ಬಿದ್ದು ಅದರಿಂದ ಊಳಿಗಮಾನ್ಯ ರಾಜ್ಯವ್ಯವಸ್ಥೆ ಉದಿಸಿತು. ಬಹುಶಃ ಮೌರ‍್ಯರ ಕಾಲದಲ್ಲಿ ಸೇವೆಗೆ ಪ್ರತಿಯಾಗಿ ಧನರೂಪದ ಸಂಭಾವನೆ ಕೊಡುವ ಪದ್ಧತಿಯಿಂದಾಗಿ ಭೂಜಾಗೀರು ಕೊಡುವ ವ್ಯವಸ್ಥೆ ಇರಲಿಲ್ಲ. ನಂತರದ ಅವಧಿಯಲ್ಲಿ ಈ ಭೂ ಕೊಡುಗೆ ಪ್ರವೃತ್ತಿ ವ್ಯಾಪಕವಾಗಿ ಬೆಳೆಯಿತು. ಆಡಳಿತಾತ್ಮಕ ಹಕ್ಕುಗಳೊಂದಿಗೆ ಬೆರೆತು ರಾಜ್ಯಾಧಿಕಾರವನ್ನು ಶಿಥಿಲಗೊಳಿಸಿ ಸಾರ್ವಭೌಮಾಧಿಕಾರದ ವಿಘಟನೆಗೆ ಕಾರಣವಾಯಿತು.

ಊಳಿಗಮಾನ್ಯ ರಚನೆ ಎಂದು ಕರೆಯಲಾಗುವ ಒಟ್ಟು ರಾಜಕೀಯ ವಿನ್ಯಾಸವನ್ನು ಭಾರತೀಯ ಊಳಿಗಮಾನ್ಯವಾದದ ಪ್ರತಿಪಾದನೆಗಳು ತಕ್ಕ ಪ್ರಮಾಣದಲ್ಲಿ ವಿವರಿಸುತ್ತವೆಯೇ ಎಂಬ ಪ್ರಶ್ನೆಯನ್ನು ಪ್ರೊ. ಚಟ್ಟೋಪಾಧ್ಯಾಯ ಕೇಳುವುದು ಗಮನಾರ್ಹವಾಗಿದೆ. ಅವರ ಪ್ರಕಾರ ಆ ವಿವರಣೆ ನಿರ್ದಿಷ್ಟ ರಾಜಸತ್ತೆಗಳ ರಚನೆಗಷ್ಟೇ ಅಲ್ಲ ಯಾವುದೇ ಅವಧಿಯಲ್ಲಿ ಉಪಖಂಡದಲ್ಲಿದ್ದ ರಾಜಕೀಯ ಭೂಗೋಲಕ್ಕೂ ಪ್ರಸ್ತುತವಾಗಿರಬೇಕು. ಏಕೆಂದರೆ ಅಧಿಕಾರ ಕೇಂದ್ರಗಳು ಆಗಾಗ ಸ್ಥಳಾಂತರಗೊಳ್ಳುತ್ತಿದ್ದವು. ರಾಜ್ಯಪೂರ್ವ ಸಮಾಜಗಳು ರಾಜ್ಯ ಸಮಾಜಗಳಾಗಿ ಬದಲಾಗುವ ಪ್ರಕ್ರಿಯೆ ನಡೆಯುತ್ತಿತ್ತು, ಹೊಸ ರಾಜ್ಯ ವ್ಯವಸ್ಥೆಗಳು ರೂಪುಗೊಳ್ಳುತ್ತಲೇ ಇದ್ದವು. ಈ ಹಿನ್ನೆಲೆಯಲ್ಲಿ ಸಾರ್ವಭೌಮ ರಾಜ್ಯವಾಗಿರುವ ಒಂದು ಕೇಂದ್ರ ಮತ್ತು ಹಲವು ವಿಧದ ಇತರ ರಾಜ್ಯವ್ಯವಸ್ಥೆಗಳ ನಡುವಿನ ಸಂಬಂಧಗಳನ್ನು ಪ್ರತಿನಿಧಿಸುವ ಮೌರ‍್ಯ ರಾಜ್ಯದ ಕುರಿತು ಗಮನಾರ್ಹ ಪುನರಾಲೋಚನೆ ನಡೆದಿದೆ. ಸಾರ್ವಭೌಮ ಮೌರ‍್ಯ ರಾಜ್ಯದ ಕಣ್ಮರೆಯಿಂದಾಗಿ ರಾಜ್ಯ ರಾಜಕೀಯ ವ್ಯವಸ್ಥೆ ಅಸ್ತಿತ್ವದಲ್ಲಿದ್ದ ಪ್ರದೇಶಗಳಲ್ಲಾಗಲಿ ಅಥವಾ ಮೌರ‍್ಯ ಸಮ್ರಾಜ್ಯ ತನ್ನೊಳಗೆ ಅಡಕಗೊಳಿಸುವ ರಾಜ್ಯಪೂರ್ವ ರಾಜಕೀಯ ವ್ಯವಸ್ಥೆಯ ಪ್ರದೇಶಗಳಲ್ಲಾಗಲಿ ರಾಜಕೀಯ ಆರ್ಥಿಕ ಬಿಕ್ಕಟ್ಟು ಉಂಟಾಗಲಿಲ್ಲ. ವಾಸ್ತವವಾಗಿ ಮೌರ‍್ಯದ ಪ್ರಾದೇಶಿಕ ವಿಸ್ತರಣೆ ಹಾಗೂ ನಂತರದ ಅವಧಿಯಲ್ಲಿ ನಡೆದ ಅಂಥದ್ದೇ ವಿಸ್ತರಣೆಗಳು ರಾಜ್ಯಪೂರ್ವ ರಾಜಕೀಯ ವ್ಯವಸ್ಥೆಯ ಪ್ರದೇಶಗಳಲ್ಲಿ ಸ್ಥಳೀಯ ರಾಜ್ಯಗಳ ಉಗಮದ ಒಂದು ಹೊಸ ಉಬ್ಬರವನ್ನೇ ಸೃಷ್ಟಿಸಿದವು. ಈ ವಿದ್ಯಮಾನವನ್ನು ಕೇಂದ್ರೀಕೃತ ಆಡಳಿತವೊಂದು ವಿಕೇಂದ್ರೀಕರಣ ಹೊಂದಿದ ಪ್ರಕ್ರಿಯೆ ಎಂದು ತಪ್ಪು ತಿಳಿಯಬೇಕಾಗಿಲ್ಲ.

ಊಳಿಗಮಾನ್ಯವಾದದಲ್ಲಿ ಆಡಳಿತಾತ್ಮಕಕ್ರಮಗಳಾಗಿ ಭೂ ವರ್ಗಾವಣೆಗಳನ್ನು ರಾಜ್ಯಾಧಿಕಾರವನ್ನು ಶಿಥಿಲಗೊಳಿಸುವ ಮುದ್ದಾಂ ಕ್ರಮಗಳೆಂದೇ ಬಿಂಬಿಸಲಾಗಿದೆ. ಇದರರ್ಥ ಊಳಿಗಮಾನ್ಯ ರಾಜಕೀಯ ವ್ಯವಸ್ಥೆ ಏಕೆ ಹುಟ್ಟಿಕೊಳ್ಳುತ್ತದೆಂದರೆ ಊಳಿಗಮಾನ್ಯಪೂರ್ವದ ರಾಜಕೀಯ ವ್ಯವಸ್ಥೆಯ ತನ್ನದೇ ಅಧಿಕಾರ ವಿಘಟನೆಯ ಮೇಲೆ ಸುಖಾಸೀನವಾಗಿರಲು ನಿರ್ಧರಿಸುತ್ತದೆ. ಇದೊಂದು ವಿಲಕ್ಷಣ ನಿಲುವು. ಊಳಿಗಮಾನ್ಯ ಪೂರ್ವದ ರಾಜಕೀಯ ಇಲ್ಲವೆ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ರಾಚನಿಕ ಮಹತ್ವದ ಬಿಕ್ಕಟ್ಟಿನ ಇರುವಿಕೆಯ ಹೊರತು ಅರ್ಥವಾಗದಂಥದು. ಮೌರ‍್ಯ ರಾಜ್ಯದ ಪತನ ಇಂಥದೊಂದು ಬಿಕ್ಕಟ್ಟಿಗೆ ಕಾರಣವಾದಂತೆ ತೋರುವುದಿಲ್ಲವೆಂಬುದನ್ನಾಗಲೇ ಗಮನಿಸಿದ್ದೇವೆ.

ಒಂದು ಪರ್ಯಾಯ ವಿವರಣೆಗಾಗಿ ಹುಡುಕುವುದು ಅನಿವಾರ್ಯ. ಪ್ರೊ. ಚಟ್ಟೋಪಾಧ್ಯಾಯ ಅವರು ಪರ್ಯಾಯ ಮಾದರಿ ಎಂಬ ಅರ್ಥದಲ್ಲಿ ಅಲ್ಲವಾದರೂ ಹಲವಾರು ವಿಶ್ಲೇಷಣಾ ಕ್ರಮಗಳ ಸೂಚನೆಗಳನ್ನೊಳಗೊಂಡ Integrative Polity ಎಂಬ ಪರಿಪ್ರೇಕ್ಷ್ಯವೊಂದನ್ನು ಒದಗಿಸಿದ್ದಾರೆ. ಮಲೆನಾಡು ಕರ್ನಾಟಕದ ಅರಸು ಮನೆತನಗಳ ಕುರಿತ ರಾಜಕೀಯ ರಚನೆ, ಪ್ರಕ್ರಿಯೆಯ ಕೆಲ ಅಂಶಗಳನ್ನು ಅವರ ಸೂಚನೆಯ ಪರಿಪ್ರೇಕ್ಷ್ಯದಲ್ಲಿ ಪರಿಶೀಲಿಸಲು ಸಾಧ್ಯ.

ಅದೆಷ್ಟೇ ಕೇಂದ್ರೀಕೃತವಾದದ್ದೆಂದರೂ ಯಾವುದೇ ರಾಜ್ಯ ವ್ಯವಸ್ಥೆಯಲ್ಲಿ ಅಧಿಕಾರದ ಒಂದೇ ಸ್ತರ ಅಥವಾ ಕೇಂದ್ರವಿರುವುದಿಲ್ಲ. ಬಹುಶಃ ಪ್ರಾರಂಭಿಕ ಮಧ್ಯ ಕಾಲದ ರಾಜ್ಯ ವ್ಯವಸ್ಥೆಯಲ್ಲಿ ಅಧಿಕಾರ ಹಂಚಿಕೆಯ ವ್ಯತ್ಯಾಸಗಳ ನಿರ್ದಿಷ್ಟ ಗ್ರಹಿಕೆ ನಾವೀ ತನಕ ಭಾವಿಸಿಕೊಂಡಿದ್ದಕ್ಕಿಂತ ಸಂಕೀರ್ಣವಾಗಿದೆ.

ಒಂದು ನೆಲೆಯಲ್ಲಿ ಈ ಸಂಕೀರ್ಣತೆಯ ಮೂಲ ಎಲ್ಲ ರಾಜ್ಯ ವ್ಯವಸ್ಥೆಗಳಲ್ಲಿ ಇರುವ ರಾಜಕೀಯೋತ್ತರ ತತ್ವಪ್ರಣಾಲಿ. ಇದರ ಒಂದು ಆಯಾಮವೆಂದರೆ ಸತತವಾಗಿ ಅಧಿಕಾರವನ್ನು ನ್ಯಾಯ ಸಮ್ಮತಗೊಳಿಸಿಕೊಳ್ಳುತ್ತ ಇರಬೇಕಾದ ಅಗತ್ಯ. ಈ ಅಗತ್ಯದ ಬೇರಿದ್ದುದು ರಾಜಕೀಯ ಮತ್ತು ಧಾರ್ಮಿಕ ಪ್ರಭಾವಕ್ಷೇತ್ರಗಳ ಪ್ರತ್ಯೇಕತೆಯಲ್ಲಾದರೂ ವಾಸ್ತವದಲ್ಲಿ ಇವೆರಡೂ ಪರಸ್ಪರ ಅವಲಂಭಿತವಾಗಿದ್ದವು. ರಾಜಕೀಯ ಪ್ರಭುತ್ವದ ಸಮರ್ಥನೆ, ಪೋಷಣೆಯ ಅಗತ್ಯವಿತ್ತು.

ನವೋದಿತ ಸ್ಥಳೀಯ ರಾಜಕೀಯ ವ್ಯವಸ್ಥೆಗಳು ಗೌರವಾರ್ಹ ಕ್ಷತ್ರಿಯಾನ್ವಯಗಳೊಂದಿಗೆ ಸಂಬಂಧ ಜೋಡಿಸಿಕೊಳ್ಳುವ ಪ್ರಕ್ರಿಯೆಯನ್ನು ಹಲವು ಮನೆತನಗಳ ಸಂದರ್ಭದಲ್ಲಿ ಕಾಣಬಹುದು. ಕೊಂಗಾಳ್ವ ದೊರೆ ತನ್ನ ಒಂದು ಶಾಸನದಲ್ಲಿ ತನ್ನನ್ನು ಸೂರ್ಯವಂಶ ಶಿಖಾಮಣಿ ಎಂದು ಕರೆದುಕೊಂಡಿದ್ದರೆ ಚೆಂಗಾಳ್ವರು ತಾವು ಚಂದ್ರವಂಶದವರೆಂದೂ ಯಾದವಕುಲಕ್ಕೆ ಸೇರಿದವರೆಂದೂ ದ್ವಾರಾವತಿಯಿಂದ ಬಂದವರೆಂದೂ ಹೇಳಿಕೊಂಡಿದ್ದಾರೆ. ಹತ್ತನೆಯ ಶತಮಾನದಲ್ಲಿ ದ್ವಾರಕಾ ಪಟ್ಟಣದಿಂದ ದಕ್ಷಿಣದ ಕಡೆಗೆ ವಲಸೆ ಬಂದ ಜೈನಕ್ಷತ್ರಿಯ ವಿಕ್ರಮ ಚೆಂಗಾಳ್ವನು ತನ್ನೊಂದಿಗೆ ಬಂದ ಐದಾರುನೂರು ಕುಟುಂಬಗಳೊಂದಿಗೆ ತುಂಬಾ ಎಂಬಲ್ಲಿ ನೆಲೆಸಿದನೆನ್ನಲಾಗಿದೆ. ಈತನು ತೀರ್ಥಕರ ಬೆಟ್ಟದ ಬಳಿ ಬೀಡು ಬಿಟ್ಟಿದ್ದಾಗ ಮೊಲವೊಂದು ಬೇಟೆನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಕಂಡು ಈ ಭೂಮಿಯು ರಾಜ್ಯ ಸ್ಥಾಪನೆಗೆ ಯೋಗ್ಯವಾದ ಗಂಡುಭೂಮಿ ಎಂದು ತಿಳಿದು ಅಲ್ಲಿ ಕೋಟೆ ಸಮೇತ ಪಟ್ಟಣವನ್ನು ಕಟ್ಟಿಸಿ ಅದನ್ನು ಬೆಟ್ಟದಪುರವೆಂದು ಕರೆದನೆನ್ನಲಾಗಿದೆ. ಈ ಲೇಖನದ ಕರ್ತೃ ಕೆ. ರಾಜಶೇಖರ ಅವರು ಹೇಳುವ ಹಾಗೆ ಈ ಗಂಡು ಭೂಮಿಯ ಕಲ್ಪನೆ ಒಂದು ಸಂಚಾರಿ ಆಶಯವಾಗಿದೆ. ಈ ಮೊಲ ನಾಯಿಯ ರೂಪಕವನ್ನು ವಿಜಯನಗರ, ಕೆಳದಿ ಮೊದಲಾದ ರಾಜಮನೆತನಗಳ ಉಗಮದ ಕುರಿತ ಐತಿಹ್ಯಗಳಲ್ಲೂ ನಾವು ಕಾಣುತ್ತೇವೆ. ಇಲ್ಲಿ ಮುಖ್ಯವಾದುದೇನೆಂದರೆ ಹಾಗೆ ತುಂಗಾ ಎಂಬಲ್ಲಿ ನೆಲೆಸಿದ ವಿಕ್ರಮಚೆಂಗಾಳ್ವನು ಸುತ್ತಮುತ್ತಲ ಬೇಡರ ನಾಯಕರನ್ನು ಸೋಲಿಸಿ ರಾಜ್ಯವನ್ನು ವಿಸ್ತರಿಸಿದ ಎಂಬ ಅಂಶ.

ವಿಕ್ರಮಚೆಂಗಾಳ್ವನು ದ್ವಾರಾವತಿ ಅಥವಾ ದ್ವಾರಕಾ ಪಟ್ಟಣದಿಂದ ದಕ್ಷಿಣಕ್ಕೆ ವಲಸೆ ಬಂದವನೆಂದು ಹೇಳಿಕೊಂಡಿರುವಂತೆಯೇ ಶಾಂತರರ ಒಂದು ಶಾಸನ ಅವರ ದೊರೆ ಜಿನದತ್ತನು ದಕ್ಷಿಣಕ್ಕೆ ಬಂದನೆಂದು ಹೇಳುತ್ತದೆ. ಆತ ತನ್ನ ತಂದೆಯ ನರಭಕ್ಷಕ ಪ್ರವೃತ್ತಿಯಿಂದ ಬೇಸತ್ತಿದ್ದುದು ಹಾಗೆ ಆತ ವಲಸೆ ಬರಲು ಕಾರಣವೆಂದು ಶಾಸನ ಹೇಳುವುದು ಕುತೂಹಲಕಾರಿಯಾಗಿದೆ.

ಪ್ರಾರಂಭಿಕ ಮಧ್ಯಕಾಲದ ರಾಜಕೀಯ ವ್ಯವಸ್ಥೆಯಲ್ಲಿ ಅಧಿಕಾರ ಹಂಚಿಕೆಯ ವ್ಯತ್ಯಾಸಗಳ ಗ್ರಹಿಕೆಯ ಸಂಕೀರ್ಣತೆಯನ್ನು ಮೇಲೆ ಪ್ರಸ್ತಾಪಿಸಲಾಗಿದೆ. ಈ ಸಂಕೀರ್ಣತೆಯ ಇನ್ನೊಂದು ಮುಖ ರಾಜಕೀಯ ಅಧಿಕಾರ ಕ್ಷೇತ್ರದ ವ್ಯಾಪ್ತಿಯನ್ನು ಕುರಿತಾಗಿದೆ. ರಾಜಕೀಯ ಅಧಿಕಾರ ರಾಜನ ಅಧಿಕಾರ ಎಷ್ಟೆಂಬುದರಿಂದ ವ್ಯಾಖ್ಯಾನಿತವಾಗುತ್ತಿತ್ತು. ಆದರೆ ರಾಜ್ಯವು ನಿರ್ದಿಷ್ಟ ಭೂಪ್ರಾದೇಶಿಕ ಅರ್ಥದಲ್ಲಿ ವ್ಯಾಖ್ಯಾನಿಸಲ್ಪಡುತ್ತಿರಲಿಲ್ಲ. ರಾಜ್ಯವೆಂಬುದು ಜಡವಾಗಿರದೆ ಸ್ವಾಭಾವಿಕವಾಗಿಯೇ ಕ್ರಿಯಾಶೀಲವಾದ ಘಟಕವಾಗಿತ್ತು.

ಆಳುವ ವಂಶಗಳ ಉಗಮ ಪ್ರತಿನಿಧಿಸುವ ರಾಜ್ಯ ಸಮಾಜವು ಗುಪ್ತರ ಆಳ್ವಿಕೆಯ ಅಂತ್ಯದ ಹೊತ್ತಿಗೆ ಪ್ರಧಾನಾಕರ್ಷಣೆಯ ಸಾರಭಾಗಗಳಲ್ಲೆಲ್ಲ ಹರಡಿ ಪರಿಘ ಭಾಗಗಳಲ್ಲೂ ಗಟ್ಟಿಯಾಗಿ ಬೇರುಬಿಡತೊಡಗಿತ್ತು. ಆದಾಗ್ಯೂ ಕ್ರಿ.ಶ. ೭ನೇ ಶತಮಾನದಿಂದ ಭಾರತದ ವಿವಿಧ ಪರದೇಶಗಳ ಶಾಸನಗಳು ವಿವರವಾದ ವಂಶಾವಳಿಗಳನ್ನು ಒದಗಿಸಿಕೊಡುವುದು ಗಮನಾರ್ಹ. ಆಳುವ ವಂಶಗಳ ತಥಾಕಥಿತ ಸ್ಥಳೀಯತೆಯನ್ನು ಒಂದು ಪೌರಾಣಿಕ ಪರಂಪರೆಯೊಂದಿಗೆ ಜೋಡಿಸುವ ಅಥವ ಪೌರಾಣಿಕ ಕಲಿಗಳಿಂದ ತಮ್ಮ ವಂಶಾನ್ವಯಗಳನ್ನು ನಿಷ್ಪನ್ನಗೊಳಿಸುವ ಒಂದೆರಡು ಉದಾಹರಣೆಗಳನ್ನು ಆಗಲೇ ಗಮನಿಸಿದ್ದೇವೆ.

ಮಲೆನಾಡು ಕರ್ನಾಟಕ ಎಂದು ಗೊತ್ತಾದ ಸೀಮಿತ ಭೌಗೋಲಿಕ ವ್ಯಾಪ್ತಿಯಲ್ಲಿಯೇ ವಾಸ್ತವವಾಗಿ ಆಳ್ವಿಕೆ ಮಾಡುತ್ತಿದ್ದ ವಂಶಗಳ ಸಂಖ್ಯೆಯಲ್ಲಿ ಕಾಲದಿಂದ ಕಾಲಕ್ಕೆ ವೃದ್ಧಿಯಾದ ಸೂಚನೆಗಳು ಈ ಸಂಕಲನದ ಪ್ರಬಂಧಗಳಲ್ಲಿ ದೊರೆಯುತ್ತವೆ. ಗಮನಿಸಬೇಕಾದ ಅಂಶವೆಂದರೆ ಕೇಂದ್ರಪ್ರಾಧಾನ್ಯದ ಪ್ರದೇಶಗಳಲ್ಲೂ ರಾಜ್ಯ ಸಮಾಜಕ್ಕೆ ಒಂದು ಸ್ಥಿರ ನೆಲೆ ಇರಲಿಲ್ಲ. ಸೈನ್ಯ ಶಕ್ತಿಯ ಸಂಘಟನೆ ಒಂದು ಆಳುವ ವಂಶವನ್ನು ಸ್ಥಾನಚ್ಯುತಗೊಳಿಸುವುದು ಮಾತ್ರವಲ್ಲ ಒಂದು ಹೊಸ ನೆಲೆ ಹಾಗೂ ರಾಜಕೀಯ ಸಂಬಂಧಗಳ ಹೊಸದೇ ಆದ ಒಂದು ಜಾಲವನ್ನು ನಿರ್ಮಿಸಬಹುದಿತ್ತು. ಬದಾಮಿ ಚಾಲುಕ್ಯರಿಂದ ರಾಷ್ಟ್ರಕೂಟರಿಗೆ ಅಲ್ಲಿಂದ ಮತ್ತೆ ಕಲ್ಯಾಣ ಚಾಲುಕ್ಯರಿಗೆ ಹೀಗೆ ಉಂಟಾದ ಬದಲಾವಣೆಗಳು ಬರೀ ಆಳುವ ಕುಲಗಳ ಬದಲಾವಣೆಗಳಾಗಿರದೆ, ರಾಜ್ಯ ಸಮಾಜಗಳ ದೀರ್ಘ ಹಾಗೂ ಸತತ ಇತಿಹಾಸವನ್ನು ಕಂಡುಂಡ ಭೌಗೋಳಿಕ ಸಂದರ್ಭಗಳಲ್ಲಿ ಕೂಡ ರಾಜ್ಯದ ನೆಲೆಯನ್ನು ಪುನರ್‌ವ್ಯಾಖ್ಯಾನಿಸಿದ ಬೆಳವಣಿಗೆಗಳಾಗಿದ್ದವು ಎಂದು ಡಾ. ಚಟ್ಟೋಪಾಧ್ಯಾಯ ಅಭಿಪ್ರಾಯ ಪಡುತ್ತಾರೆ.

ಒಂದು ಆಳುವ ವಂಶ ಹಾಗೂ ನಿಶ್ಚಿತ ಪ್ರಾದೇಶಿಕ ಘಟಕಗಳ ಮಧ್ಯೆ ಸಂವಾದಿ ಸಂಬಂಧವೊಂದು ಸದಾಕಾಲ ಇತ್ತೇ? ಪ್ರಾರಂಭಿಕ ಮಧ್ಯಕಾಲೀನ ಪುರಾವೆ ಇದಕ್ಕೆ ವ್ಯತಿರಿಕ್ತವಾಗಿದೆ. ಕದಂಬರ ಪ್ರಭಾವಕ್ಷೇತ್ರಗಳು ಹಲವಾರು ಇದ್ದುದನ್ನು ಉದಾಹರಣೆಯಾಗಿ ನೋಡಬಹುದು. ಬನವಾಸಿ, ಗೋವಾ ಮೊದಲಾದವುಗಳಂತೆ ಹಾಲೆಬೇಲೂರಿನಲ್ಲೂ ಕದಂಬರ ಒಂದು ಶಾಖೆ ಇದ್ದ ಕುರಿತ ಲೇಖನ ಇಲ್ಲಿದೆ. ಹಾಗೆಯೇ ಸಿಂಧೆ ಆಳುವ ವಂಶಕ್ಕೆ ಸಂಬಂಧಿಸಿದಂತೆ ಬೆಳಗುತ್ತಿ, ಬಾಗಡಗೆ, ಯಲಬುರ್ಗಿ, ರಂಜೋಳ, ಮುಳಗುಂದ, ಕೋಗಳಿನಾಡು, ಗುತ್ತಿ ಹಾಗೂ ಕುರುಗೋಡ ಸಿಂಧಾನ್ವಯಗಳನ್ನು ನೋಡಬಹುದು. ಅಂದರೆ ಒಂದು ಆಳುವ ವಂಶ ಮೂಲನೆಲೆಯೊಂದರಿಂದ ಹೊರಟು ಶಾಖೋಪಶಾಖೆಗಳಾಗಿ ಬೇರೆ ಪ್ರಾದೇಶಿಕ ಘಟಕಗಳಲ್ಲಿ ಹರಡುತ್ತಿತ್ತು. ಉದಾಹರಣೆಗೆ ಬಸವಾಪಟ್ಣ, ಸಂತೆಬೆನ್ನೂರು, ತರೀಕೆರೆ ನಾಯಕರೆಂದು ಕರೆಯಲ್ಪಡುವ ಅನ್ವಯಗಳೆಲ್ಲ ತಮ್ಮನ್ನು ಸಂತೆಬೆನ್ನೂರು ನಾಯಕರೆಂದು ಕರೆದುಕೊಳ್ಳುವ ಒಂದೇ ವಂಶಕ್ಕೆ ಸೇರಿದವರು. ಅವರ ಮೂಲ ನೆಲೆ ಬಸವಾಪಟ್ಣ. ಇದರರ್ಥ ಆಳುವ ವಂಶಗಳು ನಿಶ್ಚಿತ ಪ್ರಾದೇಶಿಕ ಘಟಕಗಳೊಂದಿಗೆ ಗುರುತಿಸಿಕೊಂಡು ಜಡವಾಗಿ ನಿಲ್ಲಲಿಲ್ಲ. ಅವುಗಳ ಹರಡುವಿಕೆ ಪರಿವರ್ತನಶೀಲವಾಗಿತ್ತು. ಬೆಳಗುತ್ತಿಯ ಸಿಂಧರು ತಮ್ಮನ್ನು ಕರಹಾಟ ಪುರವರಾಧೀಶ್ವರರೆಂದು ಕರೆದುಕೊಂಡದ್ದನ್ನು ಗಮನಿಸಬಹುದು. ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕರಹಾಡ ಇವರ ಮೂಲವೆಂಬುದು ಇದರಿಂದ ಗೊತ್ತಾಗುತ್ತದೆ.

ಆಳುವ ವಂಶಗಳ ಅಧಿಕಾರ ಸ್ಥಾಪನೆ ಹಾಗೂ ಕ್ರೋಢೀಕರಣ ಏಕರೂಪವಾಗಿ ನಡೆಯಲಿಲ್ಲ. ರಾಜ್ಯ ಪೂರ್ವ ರಾಜಕೀಯ ವ್ಯವಸ್ಥೆಯ ಪ್ರದೇಶಗಳಲ್ಲಿ ನೆಲೆಸಿದ ಕುಲಗಳು ವಿಸ್ತೃತವಾಗಿ ಆ ಪ್ರದೇಶದ ಆರ್ಥಿಕ ವ್ಯವಸ್ಥೆಯನ್ನು ಮಾರ್ಪಡಿಸಬಹುದಿತ್ತು. ಕೆಲ ಸಂದರ್ಭಗಳಲ್ಲಿ ಆಳುವ ವಂಶಗಳ ಉಗಮವು ಪ್ರಾಥಮಿಕ ರಾಜ್ಯ ರಚನೆ ಹಾಗೂ ಆಳ್ವಿಕೆಯ ಅರಸೊತ್ತಿಗೆ ಸಿದ್ಧಾಂತಕ್ಕೆ ಸಮನಾಗಿರಬಹುದಿತ್ತು. ಅಥವಾ ಸರಳವಾಗಿ ಒಂದು ಆಳುವ ವಂಶದ ಸ್ಥಾನದಲ್ಲಿ ಇನ್ನೊಂದು ಆಳುವ ವಂಶದ ಸ್ಥಾಪನೆಯಾಗಿರಬಹುದಿತ್ತು. ಈ ಎಲ್ಲ ಪ್ರಕ್ರಿಯೆಗಳು ಏಕಕಾಲಕ್ಕೆ ನಡೆಯಬಹುದಿತ್ತು. ಏಕೆಂದರೆ ರಾಜಕೀಯ ವ್ಯವಸ್ಥೆಗಳು ಒಂದರೊಡನೊಂದು ಬೆರೆತು ಅಂತರ್ ಕ್ರಿಯಾತ್ಮಕವಾಗಿದ್ದವು. ಬಹಳ ಸಲ ಈ ಪ್ರಕ್ರಿಯೆಗಳು ಹೊಸ ಅಧಿಕಾರ ಕೇಂದ್ರ ಮತ್ತು ಸಂಬಂಧಗಳ ರಚನೆಯಲ್ಲಿ ಪರಿಸಮಾಪ್ತಿಯಾಗಿ ಒಂದು ಕುಲದ ಮೂಲ ಗುರುತು ಅಳಿಸಿಹೋಗಬಹುದಿತ್ತು.

ಆಳುವ ವಂಶಗಳ ಹರಡುವಿಕೆ ಆಶ್ಚರ್ಯಕರವೆನ್ನಿಸುವಷ್ಟು ವ್ಯಾಪಕವಾಗಿದ್ದರೂ ಆಳುವ ವಂಶ ಹಾಗೂ ಪ್ರದೇಶಗಳ ನಡುವಿನ ಸಂಬಂಧಗಳನ್ನು ಪರಿಶೀಲಿಸಬಹುದಾದ ಕೆಲ ಸ್ತರಗಳಿವೆ. ಈ ಸಂಬಂಧ ಆಯಾ ವಂಶಗಳು ಪ್ರಬಲವಾಗಿದ್ದ ಸೀಮೆಯ ಹೆಸರುಗಳ ರೂಪದಲ್ಲಿ ವ್ಯಕ್ತಗೊಳಿಸಲ್ಪಟ್ಟಿದೆ. ಗಂಗವಾಡಿ, ನೊಳಂಬವಾಡಿ ಇವು ಸುಪರಿಚಿತ ಉದಾಹರಣೆಗಳು. ಕೊಂಗಾಳ್ವ ಎಂಬುದು ಆಳುವ ವಂಶವೊಂದನ್ನು ಕೊಂಗನಾಡು, ಕೊಂಗಲ್ನಾಡು, ಕೊಂಗವಿಷಯ ಇತ್ಯಾದಿಯಾಗಿ ಉಲ್ಲೇಖಿಸಲ್ಪಟ್ಟ ಒಂದು ಪ್ರದೇಶದೊಂದಿಗೆ ಗುರುತಿಸುವ ಶಬ್ದವಾಗಿದೆ. ಹಾಗೆಯೇ ಚಂಗಾಳ್ವರ ಮೂಲನೆಲೆಯಾಗಿದ್ದ ಹುಣಸೂರು ಮತ್ತು ಸುತ್ತಮುತ್ತಲ ಪ್ರದೇಶಗಳೇ ಚಂಗನಾಡು. ಅಂತೆಯೇ ಸಾಂತರರು ಆಳಿದ ಪ್ರದೇಶ ಸಾಂತಳಿಗೆ ಸಾಯಿರವಾಯಿತು.

ಒಂದು ವಂಶದ ಅಧಿಕಾರಕೇಂದ್ರ ಎರಡು ಅಥವಾ ಮೂರು ಜಿಲ್ಲೆಗಳಷ್ಟು ಪ್ರದೇಶವಾಗಿರಬಹುದಿತ್ತು. ಒಂದು ಆಳುವ ವಂಶದ ಅಧಿಕಾರ ಸ್ಥಳೀಯ ಅಥವಾ ಪ್ರಾದೇಶಿಕ ವ್ಯಾಪ್ತಿಯನ್ನು ಮೀರಿ ಬೆಳೆದಾಗ ಆಡಳಿತ ಘಟಕಗಳಾಗಿ ನಾಡು ಅಥವಾ ಇತರ ಘಟಕಗಳ ಪುನರ್ ಸಂಘಟನೆಯಾಗುತ್ತಿತ್ತು. ಇಂಥ ಆಡಳಿತ ಘಟಕಗಳು ಪೂರ್ವಸ್ಥಿತ ಆಳುವ ಕುಲ ಪ್ರದೇಶಗಳನ್ನು ಅಂತರ್ಗತವಾಗಿಸಿಕೊಂಡು ಉದಿಸುತ್ತಿದ್ದವು.

ಆಳುವ ವಂಶಗಳ ರಚನೆಯನ್ನು ಪ್ರಾರಂಭಿಕ ಮಧ್ಯಕಾಲೀನ ಭಾರತದಲ್ಲಿ ಸಾಮಾಜಿಕ ಚಲನೆ ಪ್ರಕ್ರಿಯೆಯ ಪರಿಪ್ರೇಕ್ಷ್ಯದಲ್ಲಿಯೂ ನೋಡಬಹುದು. ಕ್ಷತ್ರಿಯೀಕರಣಕ್ಕೆ ಅನುಕೂಲಕರವಾಗಿದ್ದ ವಾತಾವರಣ ಮತ್ತು ಮುಕ್ತ ರಾಜಕೀಯ ಸನ್ನಿವೇಶವೊಂದರಲ್ಲಿ ಯಾವುದೇ ವಂಶ ಅಥವಾ ಪ್ರಮುಖ ಜನವರ್ಗದ ಘಟಕವು ಸುಸಂಗತ ಬಲಸಂಘಟನೆಯ ಮೂಲಕ ರಾಜಕೀಯ ಅಧಿಕಾರ ಘೋಷಿಸಬಹುದಿತ್ತು. ದುರ್ಗಮವಾದ ಅಡವಿಗಳಲ್ಲಿ ಪಡೆಗಳನ್ನು ಕಟ್ಟಿಕೊಂಡು ಬದುಕುತ್ತಿದ್ದ, ಪಕ್ಕದ ಅರೆ ಬಯಲುನಾಡಿನ ವ್ಯವಸಾಯ ರಾಜ್ಯಗಳಲ್ಲಿನ ಹಳ್ಳಿಗಳಿಗೆ ನುಗ್ಗಿ ಕಿರುಕುಳ ನೀಡುತ್ತಿದ್ದ ಸಮಾಜವೊಂದು ಆಳುವ ವಂಶವಾಗಿ ಬೆಳೆದದ್ದನ್ನು ಹೊಸಗುಂದದ ಅರಸರು ಎಂಬ ಈ ಸಂಗ್ರಹದ ಲೇಖನದಲ್ಲಿ ನೋಡಬಹುದು. ಬಿಲ್ಲಾಳುಗಳಾಗಿದ್ದು ಅಡವಿಯನ್ನೇ ನೆಚ್ಚಿಕೊಂಡ ಬೇಟೆಗಾರ ಬಡಕಟ್ಟಿನವರಾಗಿದ್ದ ಈ ಭಿಲ್ಲರ ಜನಾಂಗೀಯ ವಿವರಗಳು ಶಾಸನವೊಂದರಲ್ಲಿರುವ ಬಿಸಿಲು ಪಡ್ಡೆಕಾರರು, ಕಾಡಾನೆ ಮಲ್ಲರು, ನೋಡಿ ತಪ್ಪದೆಸೆವ ಕಣ್ಣಂಬಿನವರು, ಅರಣ್ಯ ಭಂಡಾರರು ಮೊದಲಾದ ಶಬ್ದಗಳಲ್ಲಿ ವ್ಯಕ್ತವಾಗುತ್ತವೆ. ಇಂಥವರನ್ನು ಮಲೆಪರು, ಬೇಡರು, ಕಿರಾತರು ಎಂದೆಲ್ಲ ಅರೆ ಬಯಲುನಾಡಿನ ಶಾಸನಗಳಲ್ಲಿ ಕರೆಯಲಾಗಿದೆ. ಸುಮಾರು ಮೂರುವರೆ ಶತಮಾನಗಳ ಕಾಲ ಬಾಳಿದ ಹೊಯ್ಸಳ ರಾಜ್ಯದ ಉಗಮವು ಮಲೆನಾಡು ಪಡೆಗಳನ್ನು ಒಂದು ಹಂತದಲ್ಲಿ ತಮ್ಮ ಅಂಕೆಯಲ್ಲಿಟ್ಟುಕೊಂಡ ಮಲೆಪರು ಅಥವಾ ಸೊಸೆಯೂರು ಅರಣ್ಯದ ಗಿರಿನಾಯಕರಿಗೆ ಹೋಗುತ್ತದೆ. ಹೊಯ್ಸಳರು ತಮ್ಮನ್ನು ಎಲ್ಲಿಯೂ ಮಲೆಪರೆಂದು ಗುರುತಿಸಿಕೊಂಡಿಲ ಬದಲಿಗೆ ಮಲೆಪರ ಸಂಹಾರಕರು ತಾವೆಂಬ ಅರ್ಥದಲ್ಲಿ ಮಲೆಪರೊಳ್ಗಂಡ ಎಂಬ ಬಿರುದನ್ನು ಧರಿಸಿದ್ದಾರೆ. ಹೀಗಿರುವಾಗ ಮಲೆಪರು ಅಂದರೆ ಯಾರು ಎಂಬ ಪ್ರಶ್ನೆ ಬರುತ್ತಿದೆ ಎಂದು ಹಾರುವ ಬೆಲುಹೂರ ಕದಂಬರಿಗೆ ಸಂಬಂಧಿಸಿದ ಇಲ್ಲಿಯ ಲೇಖನದಲ್ಲಿ ಕೇಳಲಾಗಿದೆ. ಆದರೆ ಹೊಯ್ಸಳರನ್ನು ಮಲೆಪರಿಗೆ ಹೊರತಾಗಿ ನೋಡಬೇಕೆನ್ನುವ ಸೂಚನೆಯೇನೂ ಆ ಪುರಾವಣೆಗಳಲ್ಲಿ ಕಾಣುವುದಿಲ್ಲ.

ಆಳುವ ವಂಶವೊಂದು ರೂಪುಗೊಳ್ಳುವ ಕ್ರಮ ಹಾಗೂ ಅದು ತಲುಪಬಹುದಾದ ಅಧಿಕಾರದ ಹಂತ ಎಲ್ಲ ಪ್ರದೇಶಗಳಲ್ಲಿ ಒಂದೇ ಆಗಿರಲಿಲ್ಲ. ಸಾಮಾನ್ಯವಾಗಿ ಮೇಲ್ಮುಖ ಚಲನೆ ಕೃಷಿಕ ಎಂದು ಸ್ಥೂಲವಾಗಿ ಲಕ್ಷಿಸಬಹುದಾದ ಮೂಲದಿಂದಾಗಿರುತ್ತಿತ್ತು. ಉದಾಹರಣೆಗೆ ಚೆಂಗಾಳ್ವರು ಮೂಲತಃ ಒಕ್ಕಲಿಗರು. ನಾಗಮಂಗಲ ತಾಲೂಕಿನ ಲಾಳನಕೆರೆಯಿಂದ ಹಿಡಿದು ಕೊಡಗಿನ ಸೋಮವಾರಪೇಟೆಯವರೆಗೂ ಈ ಒಕ್ಕಲಿಗರು ಹಬ್ಬಿಕೊಂಡಿದ್ದಾರೆ. ತಮ್ಮನ್ನು ಚೆಂಗಾಳ್ವರೆಂದು ಹೇಳಿಕೊಳ್ಳುವ ಲಾಳನಕೆರೆ ಮೂಲದ ಒಕ್ಕಲಿಗರು ಹುಣಸೂರು, ಪೆರಿಯಾಪಟ್ಲ, ಕೆ.ಆರ್. ಪೇಟೆ, ಸೋಮವಾರಪೇಟೆ ತಾಲೂಕುಗಳಲ್ಲಿ ಹರಡಿಕೊಂಡಿರುವುದನ್ನು ಚೆಂಗಾಳ್ವರ ಕುರಿತ ಇಲ್ಲಿಯ ಪ್ರಬಂಧ ಉಲ್ಲೇಖಿಸಿದೆ.

ಒಂದು ಹಂತದವರೆಗೆ ಸ್ವಾಯತ್ತವಾಗಿದ್ದ ಪ್ರಭುತ್ವಗಳ ಈ ಚದುರಿದಂತಿದ್ದ ಕೇಂದ್ರಗಳನ್ನು ಸಾಮಂತ ವ್ಯವಸ್ಥೆಯೆಂದು ಸ್ಥೂಲವಾಗಿ ಗುರುತಿಸಲ್ಪಡುವ ವ್ಯವಸ್ಥೆ ಪ್ರತಿನಿಧಿಸುತ್ತದೆ. ಎಲ್ಲ ಪ್ರಧಾನ ರಾಜಕೀಯ ವ್ಯವಸ್ಥೆಗಳಲ್ಲಿಯೂ ಇವು ಒಂದಿಲ್ಲೊಂದು ರೂಪದಲ್ಲಿ ಇದ್ದವು.

ಸಾಮಂತ ಎಂಬುದು ಪ್ರಾರಂಭಿಕ ಮಧ್ಯಕಾಲದಲ್ಲಿ ಬಳಕೆಯಲ್ಲಿದ್ದು ದಿನೇ ದಿನೇ ವೃದ್ಧಿಸುತ್ತಿದ್ದ ವಿವಿಧ ಉಪಾಧಿಗಳನ್ನು ಹೊಂದಿದ ವಿಶಾಲ ಹರಹು ಉಳ್ಳ ಒಂದು ವರ್ಗವಾಗಿತ್ತು. ಎಲ್ಲ ಉಪಾಧಿಗಳೂ ಏಕಕಾಲಕ್ಕೆ ಹುಟ್ಟಿಕೊಳ್ಳಲಿಲ್ಲ. ಆದರೆ ೧೨-೧೩ನೇ ಶತಮಾನದ ಹೊತ್ತಿಗೆ ಮಹಾಸಾಮಂತ, ಸಾಮಂತ, ಮಹಾ ಮಂಡಳೇಶ್ವರ, ಮಂಡಳೇಶ್ವರ ಮೊದಲಾದವುಗಳು ರಾಜಕೀಯ ವ್ಯವಸ್ಥೆಯೊಂದರ ಸೂಚಕಗಳಾಗಿ ಬೆಳೆದವು. ಅಧಿಕಾರಶಾಹಿಗೆ ತುಂಬ ಸೀಮಿತ ಪಾತ್ರವಿರುತ್ತಿದ್ದ ಈ ವ್ಯವಸ್ಥೆ ಶ್ರೇಣೀಕೃತ ರಚನೆಯೊಂದರ ಲಕ್ಷಣಗಳನ್ನು ಮೈಗೂಡಿಸಿಕೊಂಡಿತು. ರಾಜಕೀಯದಿಂದ ಹೊರತಾದ ಮಾತುಗಳಲ್ಲಿ ಸಾಮಂತರು ಭೂ ಸ್ವಾಮ್ಯ ಹೊಂದಿದ ಶ್ರೀಮಂತವರ್ಗವಾಗಿದ್ದರು.

ಸಾಮಂತ ವ್ಯವಸ್ಥೆ ಪ್ರಾರಂಭಿಕ ಮಧ್ಯಕಾಲೀನ ರಾಜಕೀಯ ಪದ್ಧತಿಯ ಮುಖ್ಯ ಲಕ್ಷಣವಾಗಿತ್ತು. ಕ್ರಮೇಣ ಸಾಮಂತರು ರಾಜ್ಯ ವ್ಯವಸ್ಥೆಯ ರಚನೆಯೊಳಗೆ ಅಂತರ್ಗತಗೊಳಿಸಲ್ಪಟ್ಟರು. ರಾಜಕೀಯ ರಚನೆಯಲ್ಲಿ ಇತರ ಎಲ್ಲ ಹಂತಗಳ ಸಂಬಂಧಗಳಿಗಿಂತ ಅಧಿಪತಿ ಆಧೀನ ಸಂಬಂಧ ಪ್ರಬಲವಾಯಿತು.

ಗುಪ್ತರ ಕಾಲಾವಧಿಯಿಂದ ವಿಸೇಷವಾಗಿ ಬೆಳೆದು ಬಂದ ಈ ವ್ಯವಸ್ಥೆಯನ್ನು Indian Feudalish ಮಾದರಿಯು ವಿಕೇಂದ್ರೀಕೃತ ರಾಜ್ಯಾಡಳಿತ ಕ್ರಮದ ಸೂಚನೆಯಾಗಿ ನೋಡುತ್ತದೆ. ಈ ಪರಿಕಲ್ಪನೆಗೆ ಪರ್ಯಾಯವಾಗಿ ಡಾ. ಚಟ್ಟೋಪಾಧ್ಯಾಯ ಅವರು ರಾಜಕೀಯ ಅನುಕಲನ (Political Integration) ಎಂಬ ಪ್ರಮೇಯವನ್ನು ಪ್ರತಿಪಾದಿಸುತ್ತಾರೆ. ಸಮತಲ ವಿಸ್ತಾರಗೊಳ್ಳುತ್ತಿದ್ದ ರಾಜ್ಯ ವ್ಯವಸ್ಥೆಯು ವಿವಿಧ ಸ್ಥಳೀಯ ನೆಲೆಗಳಲ್ಲಿ ಆಳುವ ವಂಶಗಳು ಪ್ರತಿನಿಧಿಸುತ್ತಿದ್ದ ರಾಜ್ಯಾಡಳಿತ ವ್ಯವಸ್ಥೆಗಳೊಂದಿಗೆ ಅಂತಸ್ಸಂಬಂಧವನ್ನು ಏರ್ಪಡಿಸಿಕೊಳ್ಳಬೇಕಾಗಿತ್ತು. ಆ ರಾಜಕೀಯ ಅನುಕಲನದ ತುರ್ತು ಇದ್ದುದು ಹಾಗೆ ಏರ್ಪಡಿಸಿಕೊಳ್ಳಬೇಕಿದ್ದ ಸಂಬಂಧದಲ್ಲಿ. ಏಕೆಂದರೆ ರಾಜ್ಯಾಡಳಿತ ವ್ಯವಸ್ಥೆಗಳ ರಚನೆ ಪೂರ್ಣತಃ ಪೂರ್ವಸ್ಥಿತ ಅಧಿಕಾರಕೇಂದ್ರಗಳ ಉಚ್ಛಾಟನೆಯನ್ನು ಆಧರಿಸಿರಲಿಲ್ಲ. ಅಸ್ತಿತ್ವದಲ್ಲಿರುವ ಅಧಿಕಾರ ಕೇಂದ್ರಗಳನ್ನು ಒಳಗೊಳ್ಳುವುದು ಈ ರಚನೆಯ ನಿರ್ಮಾಣದಲ್ಲಿ ಪ್ರಮುಖ ವಿಧಾನವಾಗಿತ್ತು. ರಾಜಕೀಯ ಸಂಬಂಧಗಳು ನಿಯಮಿತವಾಗಿ ಅಧಿಪತಿ ಮತ್ತು ಅಧೀನ ರಾಜರುಗಳ ನಡುವಿನ ಸಂಬಂಧಗಳೆಂಬಂತೆ ವ್ಯಕ್ತಗೊಂಡಿರುವುದು ಇದನ್ನೇ ಸೂಚಿಸುತ್ತದೆ.

ಅಧಿಪತಿಯ ಉಗಮದ ಮೂಲವೂ ಬಹುತೇಕವಾಗಿ ಸ್ಥಳೀಯ ಕುಲಾಧಿಕಾರದಲ್ಲಿದ್ದುದರಿಂದ ಒಂದು ಕುಲವು ಸೈನ್ಯಸಂಪನ್ಮೂಲಗಳನ್ನು ಕ್ರೋಢೀಕರಿಸುವ ಮೂಲಕ ಹಾಗೂ ಇತರ ಕುಲಗಳ ವಿವಿಧ ರೀತಿಯ ಬೆಂಬಲದ ಮುಲಕ ಸ್ಥಳೀಯತೆಯನ್ನು ಮೀರಿದ ಅಧಿಕಾರವಾಗಿ ವಿಸ್ತರಣೆ ಗೊಳ್ಳುತ್ತಿತ್ತು. ಅದಕ್ಕಿಂತ ಮುಖ್ಯವಾಗಿ ಈ ಕ್ರೋಢೀಕರಣ – ವಿಸ್ತರಣೆಯ ಪ್ರಕ್ರಿಯೆಯಲ್ಲಿ ಹಸ್ತಗತವಾದ ಸಂಪನ್ಮೂಲಗಳ ಪುನರ್ವಿತರಣೆಯಷ್ಟೇ ಅಲ್ಲದೆ ಪದವಿ ಶ್ರೇಣೀಕರಣದ ಒಂದು ವ್ಯವಸ್ಥೆಯೂ ಅಗತ್ಯವಿತ್ತು.

ರಾಜಕೀಯ ರಚನೆಯಲ್ಲಿ ಒಂದು ಮುಖ್ಯ ಘಟಕವಾಗಿ ‘ಸಾಮಂತ’ದ ರೂಪಾಂತರ ಸ್ವತಃ ಈ ಪದವಿಶ್ರೇಣೀಕರಣದ ಒಂದು ನಿದರ್ಶನವಾಗಿದೆ ಮತ್ತು ಅನುಕಲನದ (Integration) ರಾಜಕೀಯ ಅಡಿಪಾಯವನ್ನು ಸ್ಪಷ್ಟಗೊಳಿಸುತ್ತದೆ. ಈ ಪದವಿ ಅಥವ ಅಂತಸ್ತುಗಳ ಶ್ರೇಣೀಕರಣ ಪಾತ್ರ ಮತ್ತು ಸೇವೆಗಳಿಗೆ ಸಂಬಂಧಿಸಿತ್ತು. ಸಂಧಿವಿಗ್ರಹಿ, ದಂಡನಾಯಕದಂಥ ಉಪಾಧಿಗಳು ಮತ್ತು ಸಾಮಂತ ವ್ಯವಸ್ಥೆಯಲ್ಲಿಯ ಅಂತಸ್ತುಗಳ ಶ್ರೇಣಿಕರಣದ ನಡುವೆ ಒಂದು ಪಾರಸ್ಪರಿಕ ಸಂಬಂಧವೂ ರೂಪಗೊಂಡಿತ್ತು.

ತಂತ್ರಪಾಳ ಹೆಮ್ಮಾಡಿದೇವನು ‘ಪ್ರಧಾನ’ ಪದವಿ ಪಡೆದ ಕುರಿತು ಕ್ರಿ.ಶ. ೧೧೭೭-೭೮ರ ೨ನೇ ಬಲ್ಲಾಳನ ಕೂಡಲೂರು ಶಾಸನ ದಾಖಲಿಸುವ ವಿವರಗಳು ಆಸಕ್ತಿದಾಯಕವಾಗಿವೆ. ತಂತ್ರಪಾಲ ಹೆಮ್ಮಾಡಿಯಂಣ ಅಯ್ಯಾವೊಳೆ (ಐಹೊಳೆ)ಯಿಂದ ವಲಸೆ ಬಂದು ಕೊಡಗು ನಾಡಿನಲ್ಲಿ ನೆಲೆಸಿದ್ದ ಬಳೆಗಾರ ಕುಲದ ವ್ಯಕ್ತಿ. ಸಿಂಹಾಸನಕ್ಕಾಗಿ ತಂದೆಯ ವಿರುದ್ಧ ದಂಗೆಯೆದ್ದು ಹೊಯ್ಸಳ ೨ನೇ ಬಲ್ಲಾಳನು ಮಲೆನಾಡಿನ ಕಡೆ ಹೋದಾಗ ತಂತ್ರಪಾಳ ಹೆಮ್ಮಾಡಿಯು ಆತನ ಪರವಾಗಿ ನಿಂತು ಕೊಂಗಾಳ್ವ ಚೆಂಗಾಳ್ವರೂ ಸೇರಿದಂತೆ ಮಲೆಯ ಮಂಡಳಿಕರು ಮತ್ತು ಪ್ರಜೆಗವುಂಡುಗಳು ರಾಜಕುಮಾರನನ್ನು ಕಂಡು ನೆರವು ನೀಡುವಂತೆ ಪ್ರೇರೇಪಿಸಿರಬೇಕು. ಆತನು ಬಲ್ಲಾಳನಿಗೆ ಪಟ್ಟಗಟ್ಟಿಸಿ ತಾನೂ ಪ್ರಧಾನ ಪದವಿ ಪಡೆದನೆಂದು ಶಾಸನ ತಿಳಿಸುತ್ತದೆ.

ಅಂತಸ್ತುಗಳ ಶ್ರೇಣೀಕರಣ ಪದ್ಧತಿ ಕ್ರಮೇಣ ಗಟ್ಟಿಗೊಂಡು ಪ್ರಾರಂಭಿಕ ಮಧ್ಯಕಾಲೀನ ಸಮಾಜವನ್ನು ಎಷ್ಟು ಪ್ರಭಾವಿಸಿತೆಂದರೆ ಪ್ರತಿಯೊಂದು ಆಳುವ ವಂಶಗಳಲ್ಲಿರುವವರ ಅಂತಸ್ತುಗಳು ಉಪಾಧಿಗಳ ಪರಿಭಾಷೆಯಲ್ಲೇ ವ್ಯಕ್ತಗೊಳ್ಳುವಂತಾಯಿತು. ಅದಿಯರ ಕುಲಕ್ಕೆ ಸೇರಿದ ಬಿಲ್ಲೇಶ್ವರನನ್ನು ಕುಲದೇವತೆಯಾಗಿ ಹೊಂದಿದ ಕೆಲ ಅರಸು ಮನೆತನಗಳಲ್ಲಿ ಹೊಸಗುಂದದ ಅರಸರು, ಅವರೊಂದಿಗೆ ಪೈಪೋಟಿ ನಡೆಸಿದ ನಾಡಕಳಸಿ ಹಾಗೂ ಜೋಗದ ಬಳಿಯ ಬಿದಿರೂರಿನ ಅರಸರು ಅಲ್ಲದೆ ಪಟ್ಟುಗುಪ್ಪೆ, ಸೇತು, ಹಾಲುಗುಡ್ಡೆ, ಕೋಡೂರು ಮುಂತಾದೆಡೆಗಳಲ್ಲಿ ಪ್ರಭುಗಳಾಗಿದ್ದ ಈ ಕುಲದವರು ಅರಸ, ಹೆಗ್ಗಡೆ, ಸಾವಂತ ಹಾಗೂ ಪಡೆವಳ ಎಂಬ ಸ್ಥಾನಗಳಿಂದ ಗುರುತಿಸಲ್ಪಟ್ಟದ್ದನ್ನು ಹೊಸಗುಂದ ಅರಸರ ಕುರಿತ ಇಲ್ಲಿಯ ಪ್ರಬಂಧ ಗುರುತಿಸಿದೆ.

ಕಾಲಾಂತರದಲ್ಲಿ ರಾಜಕೀಯವಾಗಿ ನೆಲೆಗೊಂಡ ಚಿಕ್ಕ ಪುಟ್ಟ ಮನೆತನಗಳು ತಮ್ಮ ಉಗಮವನ್ನು ಆ ಮುಂಚಿನ ರಾಜಕೀಯ ಪ್ರಭುತ್ವಗಳ ಕೊಡುಗೆಯ ಪರಿಣಾಮಗಳಾಗಿ ದಾಖಲಿಸಿಕೊಂಡಿವೆ. ಉದಾ: ದಾನಿವಾಸದ ಒಡೆಯರ ಶಿಲಾಶಾಸನ ದಾನಿವಾಸವನ್ನು ಶ್ರೀ ವೀರ ಹೊಯಿಸಳ ಬಲ್ಲಾಳ ಮಹಾರಾಯರು ತಮಗೆ ವಂಶಾನ್ವಯವಾಗಿ ನಾಯಕತನಕೆ ಪಾಲಿಸಿದ ಸೀಮೆ ಎಂಬುದಾಗಿ ಘೋಷಿಸಿದೆ. ಆ ಲೇಖನದ ಕರ್ತೃ ಊಹಿಸಿದಂತೆ ಒಡೆಯರ ಪೂರ್ವಜರು ಹೊಯ್ಸಳರ ರಾಜ್ಯಾಡಳಿತದಲ್ಲಿ ಅಧಿಕಾರಿಗಳಾಗಿಯೊ, ದಂಡನಾಯಕರಾಗಿಯೊ ಸೇವೆಯನ್ನು ಸಲ್ಲಿಸಿರಬೇಕು. ಚೋಳರ ದಂಡನಾಯಕ ಪಂಚವಾನ್‌ಮಹಾರಾಯನಿಗೆ ಕೊಂಗಾಳ್ವ ಅರಸ ಮನಿಜನು ಚೆಂಗಾಳ್ವರ ವಿರುದ್ಧ ನೆರವು ನೀಡಿದ ಕಾರಣ ಚೆಂಗಾಳ್ವರಿಗೆ ಸೋಲಾಯಿತು. ರಾಜೇಂದ್ರ ಚೋಳನು ತನ್ನ ನೆರವಿಗೆ ಬಂದ ಕೊಂಗಾಳ್ವ ಮನಿಜನಿಗೆ ಮಾಳಂಬಿ ಮತ್ತು ಅರಕಲಗೂಡು ಏಳುಸಾವಿರ ಸೀಮೆಯನ್ನು ಕೊಟ್ಟುದಲ್ಲದೆ ‘ಕ್ಷತ್ರಿಯ ಶಿಖಾಮಣಿ ಕೊಂಗಾಳ್ವ’ ಎಂಬ ಬಿರುದನ್ನು ನೀಡಿದನು. (ಇತರ ಲಾಂಛನ ಮತ್ತು ಉಪಾದಿಗಳ ವಿವರಗಳಿಗೆ ನೋಡಿ, ಎಪಿಗ್ರಾಫಿಯಾ ಕರ್ನಾಟಿಕಾ (ಪರಿಷ್ಕೃತ) ಸಂ.೧, ನಂ. ೬೫.)

ಸಾಮಂತರು ಸೈನಿಕ ಹಿನ್ನೆಲೆಯಿಂದಲೇ ಬಂದವರಾಗಿರಬೇಕೆಂದಿರಲಿಲ್ಲ. ಆನೆಗೊಂದಿ ಸಂಸ್ಥಾನದ ಆಳ್ವಿಕೆಯಲ್ಲಿ ವಿಕ್ರಮರಾಯನೆಂಬ ಕ್ಷತ್ರಿಯನಡಿ ಅಮರ ಮಾಗಣಿಯಾಗಿದ್ದ ಬೇಲೂರು ಸೀಮೆಯನ್ನು ಅವನ ಮರಣಾನಂತರ ಸಂತಾನವಿಲ್ಲದ್ದರಿಂದ ಆನೆಗೊಂದಿಯವರು ಜಪ್ತಿ ಮಾಡಿಕೊಂಡು ಕಾಲಾಂತರದಲ್ಲಿ ಅದರ ಒಂದು ಭಾಗವನ್ನು ಅಮರ ಮಾಗಣಿಯಾಗಿ ಭಿಕ್ಕಾರಿ ರಾಮಪ್ಪಯ್ಯನಿಗೆ ಕೊಟ್ಟರೆಂದು ಮೆಕೆಂಝಿ ಸಂಗ್ರಹದ ಒಂದು ಕೈಫಿಯತ್ತು ತಿಳಿಸುತ್ತದೆ. ಇದು ಅವನಿಗೆ “ವಿದ್ಯದಲ್ಲಿ ಅರಸಗಳಿಗೆ ಮೆಚಿಸಿದ್ದರಿಂದಾ” ಸಿಕ್ಕ ಮಾಗಣಿ. ಲಿಂಗಣ್ಣ ಕವಿಯ ಕೆಳದಿನೃಪ ವಿಜಯ ದಲ್ಲಿ ಬೇಲೂರು ನಾಯಕರ ಪಾಳೆಯಪಟ್ಟಿನ ಮೂಲ ಸಂಸ್ಥಾಪಕನೆಂದು ಉಲ್ಲೇಖಿತನಾದ ಕೃಷ್ಣಪ್ಪನಾಯಕನ ತಂದೆಯನ್ನು ಅಡಪ (ಹಡಪ) ಬಯ್ಯಪ್ಪನೆಂಬುದಾಗಿ ಗುರುತಿಸಿರುವುದೂ ಗಮನಾರ್ಹ.

ರಾಜಕೀಯ ಘಟನೆಯ ತಳಹದಿಯಾಗಿ ಉಪಾಧಿಯು ಕೇಂದ್ರದೊಂದಿಗೆ ಸಾಮೀಪ್ಯ ಅಥವಾ ಪ್ರದೇಶಕ್ಕೆ ಸಂಬಂಧಿಸಿದಂತೆ ತಾರತಮ್ಯವನ್ನು ಮತ್ತು ಉಪಾದಿ ಪದ್ಧತಿಯೊಳಗೇ ಬದಲಾವಣೆ ಗಳನ್ನು ಸೂಚಿಸುತ್ತದೆ. ಪ್ರಾದೇಶಿಕ ಮತ್ತು ರಾಜಕೀಯ ಹಿಡಿತ ಜಡವಾದುದಾಗಿರಲಿಲ್ಲವಾಗಿ ಉಪಾದಿಯೂ ಬದಲಾವಣೆ ರಹಿತವಾಗಿರಲಿಲ್ಲ. ಪ್ರತ್ಯೇಕ ಕುಟುಂಬಗಳು ಹೊಂದಿದ್ದ ಉಪಾಧಿಗಳು ಬದಲಾಗುತ್ತಿದ್ದವು. ಉದ್ರಿಯ ಅರಸರನ್ನು ಕೋಳಾಲಪುರವರಾಧೀಶ್ವರರೆಂದು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಇವರು ಮೂಲತಃ ಗಂಗ ವಂಶೀಯರೇ ಆಗಿದ್ದು ಕಲ್ಯಾಣಿ ಚಾಲುಕ್ಯರ ಮಾಂಡಲೀಕರಾಗಿ ನಂತರ ಮಹಾಮಂಡಳೇಶ್ವರರಾಗಿ ಪ್ರಸಿದ್ಧರಾದದ್ದನ್ನು ಅವರ ಕುರಿತಾಗಿ ಆ ಸಂಕಲನದಲ್ಲಿರುವ ಲೇಖನ ಉಲ್ಲೇಖಿಸಿದೆ. ಹೆಚ್ಚೆಯ ಅರಸ ಸತ್ಯಾಶ್ರಯ ಮಹಾಮಂಡಳೇಶ್ವರನ ಸ್ಥಾನಕ್ಕೆ ಏರಿದ್ದು ೧೦೫೭ರ ಚೀಲನೂರಿನ ಶಾಸನದಿಂದ ಗೊತ್ತಾಗುತ್ತದೆ. ಹೆಚ್ಚೆಯ ಕೊನೆಯ ಇಬ್ಬರು ದೊರೆಗಳು ಬರಿದೇ ಮಂಡಳಿಕರ ಸ್ಥಾನವನ್ನು ಹೊಂದಿದ್ದರು. ಕೊಂಗಾಳ್ವರ ಕುರಿತ ಲೇಖನದಲ್ಲಿ ಎಚ್.ಎಂ. ನಾಗರಾಜರಾವ್ ಅವರು ಗಮನಿಸಿರುವಂತೆ ಎಷ್ಟೋ ಸಲ ಒಂದು ಸಾಮಂತ ಮನೆತನ ಪ್ರಧಾನ ರಾಜವಂಶವಾಗಿ ಬೆಳೆಯುವದಕ್ಕೂ ಮತ್ತು ಒಂದು ರಾಜವಂಶವು ಸಾಮಂತ ಮನೆತನವಾಗಿ ಪರಿವರ್ತನೆಗೊಳ್ಳುವದಕ್ಕೂ ಕಾಲಧರ್ಮ ಆಸ್ಪದವಿತ್ತುದನ್ನು ನಾವು ಕಾಣುತ್ತೇವೆ. ಇಂಥ ಪರಿವರ್ತನೆಗಳ ಕಾರಣಗಳನ್ನು ಮಾತ್ರ ನಾವು ಮಧ್ಯಕಾಲೀನ ರಾಜಕೀಯ ರಚನೆ ಮತ್ತು ಪ್ರಕ್ರಿಯೆಯ ಸ್ವರೂಪದಲ್ಲೇ ಶೋಧಿಸಬೇಕು.

ವಾಸ್ತವವಾಗಿ ಸ್ಥಾನಿಕ ಮತ್ತು ಪ್ರಾದೇಶಿಕ ನೆಲೆಗಳಲ್ಲಿ ಪರಿಣಾಮಕಾರಿಯಾಗಿ ಕ್ರಿಯಾ ಶೀಲವಾಗಿದ್ದ ಘಟಕಗಳು ಈ ಸಣ್ಣ ಪುಟ್ಟ ಅರಸು ಮನೆತನಗಳೇ. ಕೆಲವಂತೂ ಎಷ್ಟು ಚಿಕ್ಕವೆಂದರೆ ಅವುಗಳನ್ನು ಅರಸು ಮನೆತನಗಳೆಂದು ಕರೆಯುವುದೂ ಚರ್ಚಾರ್ಹ. ಅದೇನೇ ಇದ್ದರೂ ಇತಿಹಾಸ ಅಧ್ಯಯನದ ಮುಂಚೂಣಿಗೆ ಈ ಘಟಕಗಳನ್ನು ತರಬೇಕು. ಇಲ್ಲಿಯವರೆಗೆ ಇಂಥ ಮನೆತನಗಳನ್ನು, ಅವರ ಆಳ್ವಿಕೆಯ ಪ್ರದೇಶಗಳನ್ನು, ಅಲ್ಲಿಯ ಸಾಮಾಜಿಕ, ಧಾರ್ಮಿಕ, ಆಡಳಿತಾತ್ಮಕ ರೀತಿ ರಿವಾಜುಗಳನ್ನು ಅವರ ಕೊಡುಗೆಗಳನ್ನು ಅವಗಣಿಸಿ ಹೊಯ್ಸಳರ, ಚಾಲುಕ್ಯರ ಅಥವಾ ವಿಜಯನಗರದ ವಿಶಾಲ ರಚನೆಗಳ ಅಪ್ರಧಾನ ಆಯಾಮಗಳೆಂಬಂತೆ ಅವುಗಳನ್ನು ನೋಡಲಾಗಿದೆ. ಈ ಸಂಕಲನದಲ್ಲಿ ಹೊಯ್ಸಳರ ಕುರಿತಾದ ಪ್ರಬಂಧ ಇಲ್ಲದೇ ಇರುವುದಕ್ಕೆ ಅವರ ಕುರಿತ ಪೂರ್ಣ ಪ್ರಮಾಣದ ಅಧ್ಯಯನಗಳು ಲಭ್ಯವಿದ್ದು, ಅವರ ಇತಿಹಾಸ ಸುಪರಿಚಿತವಾಗಿದೆ ಯೆಂಬುದು ಒಂದು ಕಾರಣವಾದರೆ, ಅವರ ರಾಜ್ಯವ್ಯವಸ್ಥೆಯ ಅವಿಭಾಜ್ಯ ಘಟಕಗಳಾಗಿದ್ದ ಸಣ್ಣ ರಾಜಕೀಯ ವ್ಯವಸ್ಥೆಗಳನ್ನು ಪ್ರಧಾನವಾಗಿ ಅಭ್ಯಸಿಸಬೇಕೆಂಬ ಆಶಯ ಇನ್ನೊಂದು ಮುಖ್ಯ ಕಾರಣವಾಗಿದೆ. ಸ್ಥಳೀಯತೆ ಅಥವಾ ಪ್ರಾದೇಶಿಕತೆಯನ್ನು ದಾಟಿ ಬೆಳೆದ ವ್ಯಾಪಕ ರಾಜ್ಯ ಅಥವ ಪ್ರಭುತ್ವ ವ್ಯವಸ್ಥೆಗಳ ರಚನೆಯನ್ನು ಗ್ರಹಿಸಬೇಕಾದರೆ, ಕೆಳಸ್ತರದ ಘಟಕಗಳ ವಿವರಗಳು ಎಷ್ಟು ಮುಖ್ಯ ಎಂಬುದನ್ನು ಇಲ್ಲಿಯ ಹಲವಾರು ಲೇಖನಗಳು ಮನವರಿಕೆ ಮಾಡಿಕೊಡುತ್ತವೆ.

ಇಲ್ಲಿಯ ಲೇಖನಗಳು ಸ್ವಾಭಾವಿಕವಾಗಿಯೇ ಸಿದ್ಧ ಉಪಕ್ರಮದಲ್ಲಿ, ಪ್ರಧಾನವಾಗಿ ರಾಜಕೀಯ ವಿವರಗಳು, ವಂಶಾವಳಿಗಳನ್ನು ಕಟ್ಟಿಕೊಡುವದರತ್ತ ಗಮನ ಕೇಂದ್ರೀಕರಿಸಿವೆ. ಇದರಲ್ಲಿ ಕೆಲವು ಆಳುವ ಕುಲಗಳ ಹಾಗೂ ಅವುಗಳ ಆಳ್ವಿಕೆಯ ಪ್ರದೇಶಗಳ ಇತಿಹಾಸ ಮೊದಲ ಬಾರಿಕೆ ಪ್ರತ್ಯೇಕ ಅಧ್ಯಯನಕ್ಕೊಳಗಾಗಿರುವದರಿಂದ ಅಂಥ ಲೇಖನಗಳನ್ನು ವಿವರವಾಗಿಯೇ ಉಳಿಸಿಕೊಂಡು ಸಂಕಲಿಸಲಾಗಿದೆ.