ಒಂದು ನಾಡಿನ ಇತಿಹಾಸದಲ್ಲಿ ಪ್ರಧಾನ ರಾಜವಂಶಗಳಿಗೆ ನೀಡುವ ಮಹತ್ವವನ್ನು ಆಯಾ ಕಾಲದ ಸಾಮಂತ ಮನೆತನಗಳಿಗೂ ಸಲ್ಲಿಸಬೇಕಾದುದು ಇತಿಹಾಸಕಾರರ ಕರ್ತವ್ಯವಾಗಿದೆ. ಏಕೆಂದರೆ ಎಷ್ಟೋ ಸಲ ಒಂದು ಸಾಮಂತ ಮನೆತನ ಪ್ರಧಾನ ರಾಜವಂಶವಾಗಿ ಬೆಳೆಯುವುದಕ್ಕೂ ಮತ್ತು ಒಂದು ರಾಜವಂಶ ಸಾಮಂತ ಮನೆತನವಾಗಿ ಪರಿವರ್ತನೆಗೊಳ್ಳುವುದಕ್ಕೂ ಕಾಲಧರ್ಮ ಅಸ್ಪದವಿತ್ತುದನ್ನು ನಾವು ಕಾಣುತ್ತೇವೆ.

ಕರ್ನಾಟಕದ ಇತಿಹಾಸದಲ್ಲಿ ಅಂತ ಹಲವು ಸಾಮಂತ ಮನೆತನಗಳ ಅಸ್ತಿತ್ವವನ್ನು ನಾವು ನೋಡಬಹುದು. ಈ ಸಾಮಂತ ಮನೆತನಗಳ ಅರಸರು ತಮ್ಮ ಸಾರ್ವಭೌಮರಿಗೆ ನಿಷ್ಠರಾಗಿದ್ದು, ಅವರು ದುರ್ಬಲರಾದಾಗ ಸ್ವತಂತ್ರರಾಗಲು ಹವಣಿಸುತ್ತಿದ್ದರು, ಇಲ್ಲವೇ ಅದಕ್ಕಿಂತ ಪ್ರಭಾವಶಾಲಿಯಾದ ಮತ್ತೊಂದು ರಾಜವಂಶಕ್ಕೆ ಅಧೀನರಾಗಿ ಕೆಲವು ಪ್ರದೇಶಗಳಲ್ಲಿ ಆಡಳಿತ ನಡೆಸುತ್ತಿದ್ದರು. ಕನ್ನಡ ನಾಡಿನ ಇತಿಹಾಸದಲ್ಲಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಸೇವುಣರು ಮುಂತಾದ ಪ್ರಮುಖ ರಾಜವಂಶಗಳೆಲ್ಲ ಮೂಲತಃ ಸಾಮಂತ ಮನೆತನಗಳಾಗಿ ಜನ್ಮ ತಳೆದು, ಕ್ರಮೇಣ ಬಲಯುತವಾಗಿ ಸ್ವತಂತ್ರ ಸಾಮ್ರಾಜ್ಯಗಳನ್ನು ಸ್ಥಾಪಿಸಿದುವು. ಇನ್ನು ಕೆಲವು ಸಾಮಂತ ಮನೆತನಗಳು ಒಂದೆರಡು ಶತಮಾನಗಳ ಕಾಲ ಆಳಿ, ಹೇಳಹೆಸರಿಲ್ಲದಂತೆ ಅಳಿದುಹೋದವು. ಕೊಂಗಾಳ್ವ ಮನೆತನವು ಎರಡನೆಯ ವರ್ಗಕ್ಕೆ ಸೇರಿದುದು.

ಕೊಂಗಾಳ್ವರ ಇತಿಹಾಸವನ್ನು ಪುನಾರಚಿಸಲು ಇರುವ ಏಕೈಕ ಆಕರವೆಂದರೆ ಶಾಸನಗಳು. ಇವು ಕೊಡಗು ಜಿಲ್ಲೆಯ ಸೋಮವಾರಪೇಟೆ, ಮೈಸೂರು ಜಿಲ್ಲೆಯ ಕೃಷ್ಣರಾಜನಗರ, ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ, ಹಾಸನ ಜಿಲ್ಲೆಯ ಅರಕಲಗೂಡು, ಹೊಳೇನರಸೀಪುರ ಮತ್ತು ಸಕಲೇಶಪುರ ತಾಲ್ಲೂಕುಗಳಲ್ಲಿ ಕಾಣಸಿಗುತ್ತವೆ. ಉಪಲಬ್ಧ ಶಾಸನಗಳಲ್ಲಿ ಸ್ಮಾರಕ ಶಾಸನಗಳು ಎಂದರೆ ವೀರಗಲ್ಲು ಮತ್ತು ನಿಷಿಧಿಗಳು ಹಾಗೂ ದಾನಶಾಸನಗಳೇ ಅಧಿಕವಾಗಿವೆ. ಒಂದೂ ತಾಮ್ರಶಾಸನ ದೊರೆತಿಲ್ಲ. ಒಟ್ಟು ಶಾಸನಗಳು ಸುಮಾರು ೩೫ ಎಂದು ಹೇಳಬಹುದು.

ಕೊಂಗಾಳ್ವರನ್ನು ಕುರಿತು ಮೊಟ್ಟಮೊದಲು ಉಲ್ಲೇಖಿಸಿದವರೆಂದರೆ ಬೆಂಜಮಿನ್ ಲೂಯಿ ರೈಸ್. ಹಾಸನ ಮತ್ತು ಕೊಡಗು ಜಿಲ್ಲೆಗಳ ಶಾಸನಗಳನ್ನು ಕುರಿತು ಪ್ರಾಸ್ತಾವನೆಯನ್ನು ಬರೆಯುವಾಗ ಹಾಗೂ ಮೈಸೂರು ಅಂಡ್ ಕೂರ್ಗ್ ಫ್ರಂ ಇನ್‌ಸ್ಕ್ರಿಪ್ಷನ್ಸ್ ಎಂಬ ಗ್ರಂಥ ರಚಿಸುವಾಗ ಅವರು ಕೊಂಗಾಳ್ವರ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ಡಾ. ಬಿ.ಶೇಕ್ ಅಲಿ ಅವರ ಸಂಪಾದಕತ್ವದಲ್ಲಿ ಹೊರಬಂದ ದಿ ಹೊಯ್ಸಳ ಡೈನಾಸ್ಟಿ (೧೯೭೨) ಎಂಬ ಸಂಶೋಧನ ಪ್ರಬಂಧಗಳ ಸಂಕಲನದಲ್ಲಿ ಡಾ. ಎ.ವಿ.ನರಸಿಂಹಮೂರ್ತಿ ಅವರು ‘ಸಂ ಇಂಪಾರ್ಟೆಟ್ ಹೊಯ್ಸಳ ಫ್ಯೂಡೇಟರೀಸ್’ ಎಂಬ ಲೇಖನದಲ್ಲಿ ಕೊಂಗಾಳ್ವರ ಸಂಕ್ಷಿಪ್ತ ಇತಿಹಾಸವನ್ನು ಎರಡು ಪುಟಗಳಲ್ಲಿ (೭೪-೭೫) ನೀಡಿದ್ದಾರೆ. ಕೊಂಗಾಳ್ವರನ್ನು ಕುರಿತ ಸಂಶೋಧನ ಲೇಖನವೊಂದನ್ನು ಮಾನವಿಕ ಕರ್ಣಾಟಕದಲ್ಲಿ (ಸಂಪುಟ ೩, ಸಂಚಿಕೆ ೨, ೧೯೭೩) ಈ ಲೇಖನದ ಕರ್ತೃ ಪ್ರಕಟಿಸಿದರು; ಆಗ ಲಭ್ಯವಿದ್ದ ಬಹುತೇಕ ಮಾಹಿತಿಯನ್ನು ಈ ಲೇಖನದಲ್ಲಿ ಕ್ರೋಢೀಕರಿಸಲಾಗಿದೆ. ೧೯೬೮ ರಲ್ಲಿಯೇ ಕರ್ನಾಟಕ ಥ್ರೂ ದಿ ಏಜಸ್ ಎಂಬ ಗ್ರಂಥದಲ್ಲಿ ಎಂ.ವಿ.ಕೃಷ್ಣರಾವ್ ಕೇವಲ ಎರಡು ಪ್ಯಾರಾಗಳಲ್ಲಿ ಕೊಂಗಾಳ್ವರ ಸ್ಥೂಲ ಪರಿಚಯವನ್ನು ಮಾಡಿಕೊಟ್ಟಿದ್ದರು; ಈ ಗ್ರಂಥ ಕರ್ಣಾಟಕದ ಪರಂಪರೆ ಎಂಬ ಶೀರ್ಷಿಕೆಯಡಿ ಅನುವಾದಗೊಂಡು ಪ್ರಕಟವಾಗಿದೆ (೧೯೭೦). ಕರ್ನಾಟಕ ವಿಷಯ ವಿಶ್ವಕೋಶದಲ್ಲಿ (೧೯೭೯) ಡಾ. ಎ.ವಿ.ನರಸಿಂಹಮೂರ್ತಿ ಅವರು ಕೊಂಗಾಳ್ವರ ಇತಿಹಾಸವನ್ನು ಸಂಕ್ಷಿಪ್ತವಾಗಿ ನಿರೂಪಿಸಿದ್ದಾರೆ. ಡಾ. ಬಾ.ರಾ.ಗೋಪಾಲ ಅವರು ತಮ್ಮ ಒಂದು ಕೃತಿಯಲ್ಲಿ[1] ಹಾಗೂ ಎಪಿಗ್ರಾಫಿಯ ಕರ್ನಾಟಕದ ಪರಿಷ್ಕೃತ ಸಂಪುಟಗಳಲ್ಲಿ[2] ಕೊಂಗಾಳ್ವರ ಇತಿಹಾಸವನ್ನು ವಿಶ್ಲೇಷಿಸಿದ್ದಾರೆ. ವೆಂಕಟೇಶ್ ಅವರು ಪಿ.ಎಚ್.ಡಿ.ಪದವಿಗೆ ಸಲ್ಲಿಸಿದ ತಮ್ಮ ಪ್ರೌಢ ಪ್ರಬಂಧದಲ್ಲಿ[3] ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಕೊಡಗಿನ ಗೆಜೆಟಿಯರ್‌ನಲ್ಲಿ (ಪು.೪೮-೫೦) ಕೊಂಗಾಳ್ವರ ಇತಿಹಾಸ ನಿರೂಪಿತವಾಗಿದೆ. ಡೆರೆಟ್,[4] ಕೊಎಲ್ಹೊ[5] ಮುಂತಾದವರ ಕೃತಿಗಳಲ್ಲಿ ಅನುಷಂಗಿಕವಾಗಿ ಕೊಂಗಾಳ್ವರ ಉಲ್ಲೇಖಗಳು ಬಂದಿವೆ.

ಕ್ರಿ.ಶ. ೬ನೆಯ ಶತಮಾನದಲ್ಲಿಯೇ ರವಿವರ್ಮನ ಗುಡ್ನಾಪುರ ಶಾಸನದಲ್ಲಿ ಆತ ಗಂಗಪುನ್ನಾಟ, ಕೊಂಗಾಳ್ವ, ಪಾಂಡ್ಯ ಮತ್ತು ಆಳುಪ ದೊರೆಗಳನ್ನು ಸೋಲಿಸಿದನೆಂದು ಹೇಳಿದೆ.[6] ಆದರೆ ಶಾಸನದಲ್ಲಿ ಬಳಸಿರುವ ‘ಕೊಂಗಾಳ್ವ’ ಎಂಬ ಶಬ್ದವು ಒಂದು ಪ್ರದೇಶವನ್ನು ಸೂಚಿಸುತ್ತದೆ, ಮನೆತನವನ್ನಲ್ಲ ಎಂದು ತೋರುತ್ತದೆ. ಕೊಂಗಾಳ್ವರು ಆಳುವಖೇಡದ (ಈಗಿನ ದಕ್ಷಿಣ ಕನ್ನಡ ಪ್ರದೇಶ) ಆಳ್ವ ಅಥವಾ ಆಳುವ ಮನೆತನದ ಶಾಖೆಯೊಂದಕ್ಕೆ ಸೇರಿದವರಿರಬೇಕೆಂದು ಕೆಲವು ಭಾವಿಸುತ್ತಾರೆ.[7] ಕೊಂಗು ನಾಡನ್ನು ಅವರು ಆಳುತ್ತಿದ್ದುದರಿಂದ ಕೊಂಗಾಳ್ವರೆನಿಸಿದರು ಎಂಬ ವೆಂಕಟೇಶ್ ಅವರು ಅಭಿಪ್ರಾಯ ಸಮ್ಮತಾರ್ಹವೆನ್ನಿಸುತ್ತದೆ. ಚಂಗಾಳ್ವ, ನಾಡಾಳ್ವ ಎಂಬಂತೆಯೇ ಕೊಂಗಾಳ್ವವಿದ್ದಿರಬೇಕು. ಕೊಂಗನಾಡು, ಕೊಂಗವಿಷಯ, ಕೊಂಗಲ್ನಾಡು, ಕೊಂಗನಾಡು ಎರಡಿಚ್ಛಾಸಿರ ಮುಂತಾದ ಅನೇಕ ಉಲ್ಲೇಖಗಳು ಈ ಭಾಗದ ಶಾಸನಗಳಲ್ಲಿ ದೊರೆಯುತ್ತವೆ.[8]

ಕೊಂಗಾಳ್ವರ ಶಾಸನಗಳೆಲ್ಲ ಕನ್ನಡದಲ್ಲಿಯೇ ಇದ್ದರೂ ಒಂದು ಶಾಸನದಲ್ಲಿ ಮಾತ್ರ ಅವರು ಚೋಳ ಮೂಲದವರಿರಬಹುದೆಂಬ ಊಹೆಗೆ ಅವಕಾಶ ದೊರೆಯುತ್ತದೆ; ಅರಕಲಗೂಡು ತಾಲ್ಲೂಕಿನ ಸುಳಗೋಡು ಸೋಮವಾರ ಎಂಬಲ್ಲಿರುವ ಶಾಸನವು ರಾಜೇಂದ್ರ ಪೃಥುವೀ ಕೊಂಗಾಳ್ವನೆಂಬ ರಾಜನಿಗೆ ಸೇರಿದ್ದು, ಅದರಲ್ಲಿರುವ ಬಿರುದುಗಳ ಪೈಕಿ ‘ಜತಾಚೋಛಿ ಕುಳೋದಯಾಚಳಗಭಸ್ತಿಮಾಳಿ’ ಎಂಬುದೊಂದು. ಹಾಗೆಯೇ ಅವರು ಸೌರ ವಂಶದವರೆಂಬುದು ‘ಸೂರ್ಯ್ಯವಂಶ ಶಿಖಾಮಣಿ’ ಎಂಬ ಬಿರುದಿನಿಂದ ವಿದಿತವಾಗುತ್ತದೆ.

ಕರ್ನಾಟಕ ಮತ್ತು ತಮಿಳುನಾಡಿನ ಅರಸರ ನಡುವಣ ಹಗೆತನ ದಕ್ಷಿಣ ಭಾರತದ ಇತಿಹಾಸದುದ್ದಕ್ಕೂ ಎದ್ದು ಕಾಣುವ ಅಂಶ. ಕ್ರಿ.ಶ. ೧೧ನೆಯ ಶತಮಾನದ ಆರಂಭದಲ್ಲಿ ಚೋಲ ದೊರೆ ಒಂದನೆಯ ರಾಜರಾಜನು ಗಂಗವಾಡಿಯನ್ನು ಗೆದ್ದುಕೊಂಡನು. ಇದರಿಂದಾಗಿ ಕೊಂಗಾಳ್ವರು ಚೋಲಮಾಂಡಲೀಕರಾಗಿ ಕೆಲವು ಭೂಭಾಗಗಳನ್ನು ಆಳುವಂತಾಯಿತು.

ಕೊಂಗಾಳ್ವ ಮನೆತನದ ಅತ್ಯಂತ ಪ್ರಾಚೀನ ಶಾಸನ ಸೋಮವಾರಪೇಟೆ ತಾಲ್ಲೂಕಿನ ಮಾಲಂಬಿ ಗ್ರಾಮದಲ್ಲಿ ದೊರೆತಿದೆ.[9] ಕೊಂಗಾಳ್ವರು ಅಧಿಕಾರಕ್ಕೆ ಬಂದ ಪರಿಸ್ಥಿತಿಯನ್ನು ಇದರಲ್ಲಿ ತಿಳಿಸಿದೆ. ‘ಕವೇರ ಕನ್ಯಕಾ ಸಖೀಯ ಮಾನ’ ಮತ್ತು ‘ಚೋಳಮಹಾಮಹೀಪತಿ’ ಎನಿಸಿದ ರಾಜಕೇಸರಿವರ್ಮ ಪೆರ್ಮನಡಿಯು (ಒಂದನೆಯ ರಾಜರಾಜ) ಪನಸೋಗೆಯ ಕಾಳಗದಲ್ಲಿ ಶತ್ರುಗಳ ದಮನವಾಗುವವರೆಗೂ ಹೋರಾಡಿದ ಮನಿಜನ ಪರಾಕ್ರಮವನ್ನು ಮೆಚ್ಚಿದ; ಅವನಿಗೆ ಪಟ್ಟವನ್ನು ಕಟ್ಟಿ ನಾಡನ್ನು ಕೊಡಬೇಕೆಂದು ಪಂಚವನ್ ಮಾರಾಯನಿಗೆ ಆದೇಶ ನೀಡಿದ; ಅದರಂತೆ ಪಂಚವನ್ ಮಾರಾಯನು ಮನಿಜನಿಗೆ ‘ಕ್ಷತ್ರಿಯ ಶಿಖಾಮಣಿ ಕೊಂಗಾಳ್ವ’ ಎಂಬ ಬಿರುದನ್ನಿತ್ತು ಮಾಲ್ವ್ವಿಯನ್ನು ನೀಡಿದನೆಂದು ಅದೇ ಶಾಸನದಲ್ಲಿ ಹೇಳಿದೆ. ಇದರಲ್ಲಿನ ‘ಕೊಂಗಾಳ್ವ’ ಎಂಬ ಶಬ್ದ ಕೊಂಗನ್ನು ಅಥವಾ ಕೊಂಗನಾಡನ್ನು ಆಳುವವ ಎಂದೇ ಸೂಚಿಸುವಂತಿದೆ. ಶಾಸನೋಕ್ತ ಮಾಲವ್ವಿ ಕೊಡಗಿನಲ್ಲಿದೆ. ಮನಿಜ ಈ ಪ್ರದೇಶದವನಾಗಿರಬಹುದು. ಕೆಲವರು ಪಂಚವನ್ ಮಾರಾಯನೇ ಮಾಲವ್ವಿಯನ್ನು ಪಡೆದನೆಂದು ಹಾಗೂ ಆತನೇ ಕೊಂಗಾಳ್ವ ಮನೆತನದ ಮೊದಲ ಮಾಂಡಲಿಕನೆಂದು ಭಾವಿಸುತ್ತಾರೆ.[10] ಆದರೆ ಪಂಚವನ್ ಮಾರಾಯ ಎಂಬುದು ಚೋಲಯುವರಾಜ ಮತ್ತು ಗಂಗಮಂಡಲದ ಪ್ರಧಾನ ಸೇನಾನಿಯಾಗಿದ್ದ ಒಂದನೆಯ ರಾಜೇಂದ್ರ ಚೋಳನ ಬಿರುದುಗಳಲ್ಲೊಂದು.[11]ಅಲ್ಲದೆ, ಶಾಸನದಲ್ಲಿ ಮನಿಜನ ಹೆಸರು ಸ್ಪಷ್ಟವಾಗಿದೆ. ಆದ್ದರಿಂದ ಮನಿಜನೇ ಕೊಂಗಾಳ್ವವಂಶದ ಮೊದಲ ಮಾಂಡಲಿಕನೆಂದು ನಿರ್ಧರಿಸಬಹುದು. ಸುಮಾರು ಕ್ರಿ.ಶ. ೧೦೦೪-೦೫ ರಲ್ಲಿ ಪನಸೋಗೆಯ ಕಾಳಗವು ಗಂಗರ ಇಲ್ಲವೇ ಚಂಗಾಳ್ವರ ವಿರುದ್ಧ ನಡೆದಿರಬೇಕು. ಕೊಂಗಾಳ್ವರ ಆಳ್ವಿಕೆ ಕೂಡ ಇದೇ ಸುಮಾರಿಗೆ ಆರಂಭವಾಗಿರಬಹುದು. ಆದರೆ ಶಾಸನದಲ್ಲಿ ‘ಪಟ್ಟವಂ ಕಟ್ಟಿ ಮಾಲವ್ವಿಯನ್‌’ ಕೊಟ್ಟುದಷ್ಟನ್ನು ಮಾತ್ರ ಹೇಳಿದೆ. ಪಟ್ಟ ದೊರೆತದ್ದರಿಂದ ಮಾಲವ್ವಿಯ ಆಸುಪಾಸಿನ ಪ್ರದೇಶವನ್ನು ಆತ ಆಳಿದನೆಂದು ಭಾವಿಸಲಾಗಿದೆ.

ಸು. ಕ್ರಿ.ಶ. ೧೦೨೦ ಕ್ಕೆ ಅನ್ವಯಿಸಲಾದ ಶಾಸನವೊಂದರಲ್ಲಿ ಬಡಿವ ಕೊಂಗಾಳ್ವನ ಉಲ್ಲೇಖವಿದೆ.[12]ಇನ್ನೇನೂ ವಿವರ ದೊರೆಯುವುದಿಲ್ಲ. ಇದು ಒಂದು ಬಿರುದಾಗಿರಬಹುದೆಂಬುದು ಡಾ. ಬಾರಾ. ಗೋಪಾಲರ ಅಭಿಪ್ರಾಯ.[13]ಕ್ರಿ.ಶ. ೧೧ನೆಯ ಶತಮಾನದ ಮೊದಲ ದಶಕಗಳಿಗೆ ಸೇರಬಹುದಾದ ಒಂದು ಶಾಸನದಲ್ಲಿ ಕಾಡವ ಕೊಂಗಾಳ್ವನ ಪ್ರಸ್ತಾಪವಿದೆ.[14] ಬಡಿವ ಮತ್ತು ಕಾಡವ ಅಭಿನ್ನರೆ? ಆಧಾರಗಳ ಕೊರತೆಯಿಂದಾಗಿ ಇದು ಕೇವಲ ಊಹೆಯಾಗುತ್ತದೆ. ಮನಿಜನಿಗೂ ಬಡಿವ ಅಥವಾ ಕಾಡವನಿಗೂ ಇರುವ ಸಂಬಂಧವೂ ತಿಳಿದು ಬರುವುದಿಲ್ಲ.

ಕ್ರಿ.ಶ. ೧೦೨೨-೨೩ಕ್ಕೆ ಸೇರಿದ, ಸಕಲೇಶಪುರ ತಾಲ್ಲೂಕಿನ ರಾಜೇಂದ್ರಪುರದಲ್ಲಿರುವ ಹಾಗೂ ರಾಜೇಂದ್ರಜೋಳ ಪೃಥುವೀ ಮಹಾರಾಜನಿಗೆ ಸೇರಿದ ವೀರಗಲ್ಲು ಪಡೆವಳ ಜೋಗಯ್ಯನ ಮರಣವನ್ನು ದಾಖಲಿಸುತ್ತದೆ.[15]ಜೋಗಯ್ಯನು ಹೊಯ್ಸಳ ಪಕ್ಷದ ವೀರನೆಂದೂ ಕೊಂಗಾಳ್ವರ ಪರ ಹೋರಾಡಿದ ಕನ್ನಮ್ಮ ನೃಪಕಾಮ ಪೊಯ್ಸಳನ ಪ್ರಾಣಕ್ಕೆ ಸಂಚಕಾರ ತರಲು ಜೋಗಯ್ಯ ರಕ್ಷಣೆಗೆ ಧಾವಿಸಿ ಕನ್ನಮ್ಮನನ್ನೂ ಅವನ ಕುದುರೆಯನ್ನೂ ಕೊಂದು ಅಸುನೀಗಿದನೆಂದು ಅರ್ಥೈಸಲಾಗಿತ್ತು. ಇದು ಸರಿಯಲ್ಲ. ಶಾಸನದಲ್ಲಿ ರಾಜೇಂದ್ರಜೋಳ ಪೃಥುವೀ ಮಹಾರಾಜನ ಹೆಸರು ಮೊದಲು ಬರುತ್ತದೆ; ನೃಪಕಾಮನನ್ನು ಮಹಾರಾಜ ಎಂದು ಕರೆದಿಲ್ಲ; ಹಾಗೂ ಶಾಸನ ದೊರೆತ ಗ್ರಾಮದ ಹೆಸರು ಈಗಲೂ ರಾಜೇಂದ್ರಪುರ ಎಂದಿರುವು ಗಮನಾರ್ಹ. ಈ ಹೋರಾಟದಲ್ಲಿ ವಿಜಯಿಯಾದವನು ರಾಜೇಂದ್ರನೇ. ಆದರೆ ಇಲ್ಲೊಂದು ಸಮಸ್ಯೆ ಇದೆ. ಹೊಯ್ಸಳ ವಿರೋಧಿಯನ್ನು ಕೊಂಗಾಳ್ವನೆಂದು ಹೇಳಿಲ್ಲ; ಅಲ್ಲದೆ, “ಇದು ಮಾಂಡಲಿಕರ ಮೇಲಿನ ಅಧಿರಾಜರಿಗೆ ಸಂಬಂಧಿಸಿದೆ ಎನ್ನುವುದಕ್ಕೆ ‘ಪೃಥುವೀ ಮಹಾರಾಜ’ ಎಂಬ ಬಿರುದನ್ನು ಇದರಲ್ಲಿ ಬಳಸಿರುವುದು ಬಹಳ ಮುಖ್ಯವಾಗಿದೆ. ಮತ್ತೆ ಕೊಂಗಾಳ್ವರು ತಮ್ಮನ್ನು ‘ಪೃಥುವೀ ಮಹಾರಾಜ ಎಂದು ಕರೆದುಕೊಂಡಿರುವುದಕ್ಕೆ ಎಲ್ಲಿಯೂ ಇನ್ನೊಂದು ದಾಖಲೆ ಈ ಕಾಲದಲ್ಲಿ ಇಲ್ಲ …..ಶಾಸನದಲ್ಲಿ ರಾಜೇಂದ್ರ ಚೋಳ ಪೃಥುವೀ ಮಹಾರಾಜ ಎಂದು ಸ್ಪಷ್ಟವಾಗಿ ಹೇಳಿರುವುದರಿಂದ ಇದು ಒಂದನೆಯ ರಾಜೇಂದ್ರ ಚೋಳ ದೊರೆಗೆ (ಕ್ರಿ.ಶ. ೧೦೧೨-೧೦೪೪) ಸಂಬಂಧಿಸಿದೆ” ಎಂದು ಹೇಳಲಾಗಿದೆ.[16]ಕೊಂಗಾಳ್ವ ಶಾಸನಗಳಲ್ಲಿ ರಾಜೇಂದ್ರಚೋಳ ಕೊಂಗಾಳ್ವ ಎಂಬುದಕ್ಕಿಂತಲೂ ಹೆಚ್ಚು ಕಂಡುಬಂದಿರುವುದು ರಾಜೇಂದ್ರ ಪೃಥುವೀ ಕೊಂಗಾಳ್ವ ಎಂಬ ರೂಪವೇ. ಚೋಳರ ಶಾಸನಗಳು ಸಕಲೇಶಪುರದಂಥ ಮಲೆನಾಡಿನ ಪ್ರದೇಶದಲ್ಲಿ ದೊರೆಯುವ ಸಂಭವನೀಯತೆ ಕಡಿಮೆ. ಇದು ಕೊಂಗಾಳ್ವ-ಹೊಯ್ಸಳ ಹೋರಾಟವೆಂದೇ ತೋರುತ್ತದೆ; ಏಕೆಂದರೆ ಮೂರ್ನಾಲ್ಕು ವರ್ಷಗಳಲ್ಲೇ, ಎಂದರೆ ಕ್ರಿ.ಶ. ೧೦೨೬ರ ಫೆಬ್ರವರಿ ೪ ರಂದು ಹೊಯ್ಸಳರಿಗೂ ಕೊಂಗಾಳ್ವರಿಗೂ ಮತ್ತೆ ಹೋರಾಟ ನಡೆಯಿತೆಂದು ಹೆಣ್ಣೂರು ಗ್ರಾಮದ ವೀರಗಲ್ಲಿನಿಂದ ತಿಳಿದುಬರುತ್ತದೆ.[17]ಮಣ್ಣೆ ಎಂಬಲ್ಲಿ ನಡೆದ ಹೋರಾಟದಲ್ಲಿ ಕೊಂಗಾಳ್ವ ದೊರೆಗೆ ಜಯ ಲಭಿಸಿತು. ಇರ್ಗ್ಗಡಲ ಕೋಟೆಯನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿ ಮಡಿದ ಜಾಕವನಿಗೆ ಆತನ ತಾಯಿ ವೆಂದಕಬ್ಬೆ ವೀರಗಲ್ಲನ್ನು ನಿಲ್ಲಿಸಿದಳು; ಮೃತವೀರನ ತಂದೆಯ ಹೆಸರು ಕೊಂಗಳಾಚಾರಿ. ಈ ವೀರಗಲ್ಲು ಶಾಸನದಲ್ಲಿ ಗಮನಿಸಬೇಕಾದುದು ‘ಮುಣ್ಡಪೊಯ್ಸಳ’ ಎಂಬ ಉಲ್ಲೇಖ. ಬಿ.ಎಲ್.ರೈಸ್ ಈ ಶಬ್ದವನ್ನು ‘base ಎಂದು ಅರ್ಥೈಸಿದ್ದಾರೆ.[18] ಕೊಎಲ್ಹೊ ಈ ಅರ್ಥವನ್ನು ಒಪ್ಪಿಕೊಂಡಿದ್ದಾರೆ.[19] ಡೆರೆಟ್‌ರಂತೂ, ನೃಪಕಾಮನು ಯುದ್ಧದಲ್ಲಿ ಯಾವುದೋ ಅಂಗವನ್ನು ಕಳೆದುಕೊಂಡವನಿರಬೇಕೆಂದು ಭಾವಿಸಿ ಮುಂಡವೆಂಬ ಶಬ್ದಕ್ಕೆ ಅಂಗಹೀನ (deprived of limb) ಎಂಬ ವಿಪರೀತಾರ್ಥ ಕಲ್ಪಿಸಿದ್ದಾರೆ.[20]ಮಂಡನೆಂಬ ಹೊಯ್ಸಳ ದೊರೆ ಕ್ರಿ.ಶ. ೧೦೦೬ ರಿಂದ ೧೦೨೬ರವರೆಗೆ ಆಳಿದನೆಂಬ ಅಭಿಪ್ರಾಯವೂ ಇದೆ. ಕಲಿಯೂರು ಶಾಸನೋಕ್ತ ‘ಗಣ್ಡರಗಣ್ಡ ಮುಣ್ಡ’ ಈತನೇ ಎಂದು ಗುರುತಿಸಿದೆ.[21]ಮುಂಡ ಎಂಬ ಶಬ್ದವು ಚಾಮುಂಡ ಎಂಬ ಶಬ್ದದ ಒಂದು ರೂಪ. ಅದು ವ್ಯಕ್ತಿನಾಮವಾಗಿ ಮತ್ತು ಕುಲಸೂಚಕವಾಗಿ ಬಂದಿರುವ ಉದಾಹರಣೆಗಳನ್ನು ಶಾಸನಗಳಲ್ಲಿ ಕಾಣಬಹುದು.[22]ರಾಜೇಂದ್ರ ಕೊಂಗಾಳ್ವನು ಚೋಳರ ಪರವಾಗಿ ಹೊಯ್ಸಳರೊಡನೆ ಕಾದಿರಬೇಕೆಂದು ರೈಸ್ ಭಾವಿಸುತ್ತಾರೆ.[23]

ರಾಜೇಂದ್ರ ಚೋಳನ ತರುವಾಯ ಮೂರುದಶಕಗಳವರೆಗೆ ನಮಗೆ ಕೊಂಗಾಳ್ವ ಶಾಸನಗಳು ಕಂಡುಬರುವುದಿಲ್ಲ. ಕ್ರಿ.ಶ. ೧೦೫೯ ರಲ್ಲಿ ರಾಜೇಂದ್ರಚೋಳ ಕೊಂಗಾಳ್ವನು ತನ್ನ ತಂದೆ ಕಟ್ಟಿಸಿದ ಬಸದಿಗೆ ದಾನನೀಡಿದರು.[24]ಈತನನ್ನು ನಾವು ಎರಡನೆಯ ರಾಜೇಂದ್ರಚೋಳ ಕೊಂಗಾಳ್ವನೆಂದು ಪರಿಗಣಿಸಬಹುದು. ಈತನ ತಂದೆಯ ಹೆಸರನ್ನು ಸೂಚಿಸಿಲ್ಲವಾದರೂ, ರಾಜಾಧಿರಾಜ ಎಂದಿರಬೇಕೆಂದು ಕೊಂಗಾಳ್ವ ವಂಶಾವಳಿಯ ಪರಿಶೀಲನೆಯಿಂದ ಊಹಿಸಬಹುದು.

ಎರಡನೆಯ ರಾಜೇಂದ್ರ ಚೋಳನ ಅನಂತರದ ಕೊಂಗಾಳ್ವ ವಂಶಾವಳಿಯಲ್ಲಿ ಹೆಚ್ಚು ತೊಡಕಿಲ್ಲ. ರಾಜಾಧಿರಾಜ ಕೊಂಗಾಳ್ವನ ತಾಯಿ ಪೋಚಬ್ಬರಸಿಯು ಮುಳ್ಳೂರಿನಲ್ಲಿ ಬಸದಿಯೊಂದನ್ನು ಕಟ್ಟಿಸಿದಳು.[25]ಅದೇ ಬಸದಿಯ ತಳಪಾಯ ಕಲ್ಲಿನ ಮೇಲಿರುವ ಇನ್ನೊಂದು ಶಾಸನದಿಂದ ರಾಜಾಧಿರಾಜ ಕೊಂಗಾಳ್ವನು ರಾಜೇಂದ್ರಚೋಳ ಕೊಂಗಾಳ್ವನ ಮಗನೆಂದೂ, ಆ ‘ವಾಸಸ್ಥಾನ’ವನ್ನು ಗುಣಸೇನ ಪಂಡಿತನೆಂಬ ಜೈನಗುರುವಿಗೆ ನೀಡಿದನೆಂದೂ ತಿಳಿದು ಬರುತ್ತದೆ.[26]ಈ ಗುಣಸೇನ ಪಂಡಿತ ಪೋಚಬ್ಬರಸಿಗೂ ಗುರುವಾಗಿದ್ದನು.[27]ಆದ್ದರಿಂದ ಎರಡನೆಯ ರಾಜಾಧಿರಾಜನು ಪೋಚಬ್ಬರಸಿ ಮತ್ತು ಎರಡನೆಯ ರಾಜೇಂದ್ರ ಚೋಳ ಕೊಂಗಾಳ್ವನ ಮಗನೆಂದು ತೀರ್ಮಾನಿಸಬಹುದು. ಮುಳ್ಳೂರಿನಲ್ಲಿ ರುಗ್ಮಿಣಿದೇವಿಯು ಬಹಶಃ ವಿಗ್ರಹವೊಂದನ್ನು ಪ್ರತಿಷ್ಠಾಪಿಸಿದಳು.[28]ಸುಮಾರು ಮೂರು ಶತಮಾನಗಳ ನಂತರ ಕ್ರಿ.ಶ. ೧೩೯೦ರ ಶಾಸನವೊಂದು ಈಕೆಯ ಹೆಸರನ್ನು ರಾಜಾಧಿರಾಜ ಕೊಂಗಾಳ್ವನ ಜೊತೆಯಲ್ಲಿ ಪ್ರಸ್ತಾಪಿಸುತ್ತದೆ.[29]ಆದ್ದರಿಂದ ಈಕೆ ರಾಜಾಧಿರಾಜ ಕೊಂಗಾಳ್ವನ ಪತ್ನಿಯಾಗಿದ್ದಿರಬೇಕು.

ಎರಡನೆಯ ರಾಜಾಧಿರಾಜನ ತರುವಾಯ ಮೂರನೆಯ ರಾಜೇಂದ್ರ ಅಧಿಕಾರಕ್ಕೆ ಬಂದ. ಈತನ ಆಳ್ವಿಕೆಯ ಕಾಲದಲ್ಲಿ ಬುಳ್ಳುಹನಾಡಿನ ಪಳಿಗವೆರ್ಗಡೆಯು ಇಡಿಗ್ಗುಳೂರಿನಲ್ಲಿ ದೇವಾಲಯವನ್ನು ಕಟ್ಟಿಸಿ ಅದಕ್ಕೆ ಭೂಮಿದಾನಮಾಡಿದ ವಿಷಯ ಮಲ್ಲಿ ಪಟ್ಟಣದ ಕ್ರಿ.ಶ. ೧೦೬೬ರ ಶಾಸನದಲ್ಲಿ ನಿರೂಪಿತವಾಗಿದೆ.[30] ಮಲ್ಲಿಪಟ್ಟವನೇ ಶಾಸನೋಕ್ತ ಇಡಿಗ್ಗುಳೂರಿರಬಹುದು. ದಾನವನ್ನು ಸ್ವೀಕರಿಸಿದವನು ಮಲೆಯಾಳಜೀಯ ಎಂದೂ ಪರಿಚಿತನಾದ ನೀಲಕಂಠರವಿಭಟಾರ; ನಲ್ಲೂರ್ಪಳ್ಳಿಗೆ ಸೇರಿದವನು. ಇದೇ ರಾಜನ ಆಳ್ವಿಕೆಗೆ ಸೇರಿದ, ಕ್ರಿ.ಶ. ೧೦೭೦ರ ಎರಡು ಶಾಸನಗಳು ಹೊಸಹಳ್ಳಿಯಲ್ಲಿ ದೊರೆತಿವೆ. ದೊರೆಯು ‘ಅಯ್ವತ್ತು ಖಣ್ಡುಗ ಬಿಡಭೂಮಿಯಂ ಹೊಷವಳ್ಳಿ ವೀರಸಿದ್ಧೇಶ್ವರ ದೇವರ್ಗ್ಗಂ ಅರ್ಚನಾಭೋಗಕ್ಕಂ’ ನೀಡಿದ ವಿಷಯ ಮೊದಲನೆಯ ಶಾಸನದ ವಸ್ತು.[31]ಅದೇ ತೇದಿಯಂದು, ಅದೇ ದೇವರಿಗೆ ‘ಪೊಸವಳ್ಳಿಯ ನೀರಗಾವುಣ್ಡನ’ ಭೂಮಿಯಲ್ಲಿ ಹತ್ತು ಖಂಡುಗವನ್ನು ಕೊಂಡು ದಾನವಿತ್ತು ಸಂಗತಿ ಎರಡನೆಯ ಶಾಸನದಲ್ಲಿ ನಿರೂಪಿತವಾಗಿದೆ.[32]ಈ ಕೊಂಗಾಳ್ವ ರಾಜನ ಪತ್ನಿ ಪದ್ಮಲದೇವಿ. ಆಕೆ ಕ್ರಿ.ಶ. ೧೦೭೭ರಲ್ಲಿ ಮರಣ ಹೊಂದಿದಳು. ಆ ಸಂದರ್ಭದಲ್ಲಿ ಬಹುಶಃ ‘ಗರುಡ’ರಾಗಿದ್ದ ಒಬ್ಬ ವೀರ ಮತ್ತು ಆತನ ಪತ್ನಿ ಸಹ ಪ್ರಾಣತ್ಯಾಗ ಮಾಡಿದರು. ಆದರೆ ಈ ವೀರಗಲ್ಲು ಶಾಸನದಲ್ಲಿ ವಿವರಗಳು ದುರದೃಷ್ಟವಶಾತ್‌ನಷ್ಟವಾಗಿವೆ.[33]

ಸುಳಗೋಡು ಸೋಮವಾರದಲ್ಲಿರುವ ಕ್ರಿ.ಶ. ೧೦೭೯-೮೦ರ ಶಾಸನವೊಂದು ಕೊಂಗಾಳ್ವರ ಕೆಲವು ಬಿರುದುಗಳನ್ನು ನಮೂದಿಸುತ್ತದೆ.[34] ಅವೆಂದರೆ ಮಹಾಮಂಡಲೇಶ್ವರ, ಒರೆಯೂರ್ಪುರ ವರಾಧೀಶ್ವರ, ಜಟಾಚೋಳ ಕುಳೋದಯಾಚಳ ಗಭಸ್ತಿ ಮಾಳಿ, ಸೂರ್ಯ್ಯವಂಶ ಶಿಖಾಮಣಿ ಹಾಗೂ ಶರಣಾಗತ ವಜ್ರಪಂಜರ. ಕೊಂಗಾಳ್ವರು ಚೋಳರನ್ನು ಹೇಗೆ ಹೆಸರಿನಲ್ಲಿ ಮಾತ್ರ ವಲ್ಲದೆ ಬಿರುದುಗಳಲ್ಲಿ ಕೂಡ ಅನುಕರಿಸುತ್ತಿದ್ದರೆಂಬುದು ಈ ಶಾಸನದಿಂದ ಸ್ಪಷ್ಟವಾಗುತ್ತದೆ. ಕೊಂಗಾಳ್ವ ಜೈನ ಗೃಹವೊಂದನ್ನು ಅದಟರಾದಿತ್ಯ ಕಟ್ಟಿಸಿದ; ರಾಜೇಂದ್ರ ಕೊಂಗಾಳ್ವನೇ ಈ ಅದಟರಾದಿತ್ಯ; ಅದಟರಾದಿತ್ಯ ಎಂದರೆ ಶೂರರಲ್ಲಿ ಕಂಗೊಳಿಸುವವನು ಎಂದರ್ಥ. ಗಂಡ ವಿಮುಕ್ತ ಸಿದ್ಧಾಂತ ದೇವರಿಗೆ ಈ ಬಸದಿಯನ್ನು ಒಪ್ಪಿಸಿ, ಅದಕ್ಕೆ ತರಿಗಳನೆಯಲ್ಲಿ ಭೂದಾನ ನೀಡಿದುದನ್ನು ಪ್ರಸ್ತುತ ಶಾಸನ ತಿಳಿಸುತ್ತದೆ.

ಕ್ರಿ.ಶ. ೧೦೭೯ರ ಸಾಲಿಗ್ರಾಮದ ಶಾಸನದಲ್ಲಿ[35] ತ್ರಿಭುವನಮಲ್ಲ ಕೊಂಗಾಳ್ವನಿಗೂ ಚಂಗಾಳ್ವಿರಗೂ ಹೋರಾಟ ನಡೆದ ಉಲ್ಲೇಖವಿದೆ. ಅದರಲ್ಲಿ ತ್ರೈಳೋಕ್ಯಸೆಟ್ಟಿ ಮತ್ತು ಚೆಳುಕಿಸೆಟ್ಟಿ ಕಾದಿ ಮಡಿದರು. ತ್ರಿಭುವನಮಲ್ಲ ಎನ್ನುವುದು ಕೂಡ ರಾಜೇಂದ್ರ ಕೊಂಗಾಳ್ವನ ಬಿರುದಿರಬೇಕು. ಈ ಪ್ರದೇಶದಲ್ಲಿ ಚಾಲುಕ್ಯರಪ್ರಭಾವ ಹೆಚ್ಚಾಗಿದ್ದಾಗ ಕೊಂಗಾಳ್ವದೊರೆಯು ಚೋಳ ಚಾಲುಕ್ಯರಿಬ್ಬರೊಡನೆಯೂ ವಿರೋಧ ಕಟ್ಟಿಕೊಳ್ಳಲು ಇಚ್ಛಿಸದೆ ‘ತ್ರಿಭುವನಮಲ್ಲ ಚೋಳ’ ಎಂಬ ಹೆಸರನ್ನು ಧರಿಸಿದ್ದಿಬೇಕೆಂದು ಡರೆಟ್ ಅಭಿಪ್ರಾಯಪಡುತ್ತಾರೆ.[36]ಸುಮಾರು ಕ್ರಿ.ಶ. ೧೦೮೦ಕ್ಕೆ ಸೇರಿಸಬಹುದಾದ ಗುಬ್ಬಿ ಶಾಸನವು ಮಹಾಮಂಡಲೇಶ್ವರ ಅದಟರಾದಿತ್ಯ ತ್ರಿಭುವನಮಲ್ಲ ಚೋಳ ಕೊಂಗಾಳ್ವದೇವನನ್ನು ಉಲ್ಲೇಖಿಸುತ್ತದೆ. ರಾಜೇಂದ್ರನನ್ನೇ ಇದು ಸೂಚಿಸುತ್ತದೆಂಬುದು ರೈಸ್ ಅವರ ಅಭಿಪ್ರಾಯ; ಅದಟರಾದಿತ್ಯ ಎಂಬುದನ್ನು ಜೈನಗುರು ಪ್ರಭಾಚಂದ್ರನನ್ನು ಪ್ರಶಂಸಿಸಲೂ ಬಳಸಿರಬೇಕೆಂದು ಅವರು ಹೇಳುತ್ತಾರೆ.[37]ಸಾವಂತಬೂವೆಯನಾಯಕನು ಪದ್ಮನಂದಿದೇವನೆಂಬ ಜೈನಯತಿಗೆ ಭೂದಾನವಿತ್ತುದು ಪ್ರಸ್ತುತ ಶಾಸನದ ವಸ್ತು; ಸಾವಂತನಿಗೂ ಅದಟರಾದಿತ್ಯ ಎಂಬ ಬಿರುದಿದೆ.[38]ದೊಡ್ಡ ಬೆಮ್ಮತ್ತಿ ಶಾಸನವು ರಾಜೇಂದ್ರನ ಆಳ್ವಿಕೆಗೆ ಸೇರಿದೆ; ಅದರ ಕಾಲ ಕ್ರಿ.ಶ. ೧೦೯೧. “ರಾಯನ ಬೆಮ್ಮತ್ತಿಯ ಮಾಕಬ್ಬೆ ಎತ್ತಿಸಿದ ಆದಿತ್ಯದೇವರ್ಗ್ಗೆ” ನೈವೇದ್ಯಕ್ಕಾಗಿ ರಾಜೇಂದ್ರನು ಭೂಮಿದಾನ ಮಾಡಿದ.[39]ಕ್ರಿ.ಶ. ೧೦೯೪ ಮತ್ತು ೧೧೦೦ರ ಎರಡು ಶಾಸನಗಳು ರಾಜೇಂದ್ರ ಪೃಥುವೀ ಕೊಂಗಾಳ್ವನನ್ನು ಉಲ್ಲೇಖಿಸುತ್ತವೆ.[40]ಇವೆರಡೂ ವೀರಗಲ್ಲುಗಳು. ಕ್ರಿ.ಶ. ೧೧೦೫ರಲ್ಲಿ ಚಂಗಾಳ್ವರು ಮತ್ತೊಮ್ಮೆ ಸಾಲಿಗ್ರಾಮದ ಮೇಲೆ ದಾಳಿ ಮಾಡಿ ಬ್ರಾಹ್ಮಣರನ್ನು ಲೂಟಿ ಮಾಡಿದಾಗ ಮಾಸಯ್ಯ ಹೋರಾಡಿ ಮಡಿದ.[41] ಚಂಗಾಳ್ವರ ದಾಳಿಯನ್ನು ಕೊಂಗಾಳ್ವರು ಸಮರ್ಥವಾಗಿ ಎದುರಿಸಿದರು.

ಮೂರನೆಯ ರಾಜೇಂದ್ರನಾದ ಮೇಲೆ ದುದ್ಧಮಲ್ಲ ಅಧಿಕಾರಕ್ಕೆ ಬಂದನೆಂದು ತೋರುತ್ತದೆ. ಈತ ‘ಸಕಳ ರಾಜ್ಯೋತ್ಸಾಹದಿಂ ಹೆಣ್ಣೆಗಡಂಗದೊಳ್’ ಸುಖದಿಂದಿದ್ದ ವಿಷಯವನ್ನು ಅಂಕನಾಥಪುರದ ಶಾಸನವೊಂದು[42] ಸಾರುತ್ತದೆ. ಆತ ಅಲ್ಲಿದ್ದಾಗ ಜಿನಮಂದಿರವೊಂದರ ನಿರ್ಮಾಣಕ್ಕೆ ಮತ್ತು ಜೀರ್ಣೋದ್ಧಾರಕ್ಕೆ ಅಯ್ಚವಳ್ಳಿ ಗ್ರಾಮವನ್ನು ಪ್ರಭಾಚಂದ್ರದೇವರೆಂಬ ಜೈನಯತಿಗೆ ನೀಡಿದ; ಈ ಶಾಸನದ ಕಾಲ ಕ್ರಿ.ಶ. ೧೧-೧೨ನೆಯ ಶತಮಾನ.[43] ಇದೇ ದುದ್ಧಮಲ್ಲನ ಬಾಣಸಿಗನಾಗಿದ್ದ ಜಕ್ಕಯ್ಯ ಸುಳಗೋಡು ಸೋಮವಾರದಲ್ಲಿ ಬಸದಿಯನ್ನು ಕಟ್ಟಿಸಿದ.[44] ಇವೆರಡೂ ಶಾಸನಗಳಲ್ಲಿ ಉಕ್ತನಾದ ದೊರೆ ಕೊಂಗಾಳ್ವ ಮನೆತನದವನೆಂದು ತೋರುತ್ತದೆ; ಈ ದುದ್ಧಮಲ್ಲ ಮತ್ತು ವೀರಕೊಂಗಾಳ್ವದೇವ ಅಭಿನ್ನರೆನಿಸುತ್ತದೆ. ಅದು ಸಂದೇಹಾಸ್ಪದವೆಂದು ಡಾ. ಬಾ.ರಾ.ಗೋಪಾಲ ಅಭಿಪ್ರಾಯಪಡುತ್ತಾರೆ.[45]

ಮಹಾಮಂಡಲೇಶ್ವರ ವೀರಕೊಂಗಾಳ್ವದೇವನು ಪ್ರಭಾಚಂದ್ರ ಸಿದ್ಧಾಂತದೇವರ ಗುಡ್ಡ; ಸತ್ಯವಾಕ್ಯ ಜಿನಾಲಯವನ್ನು ಕಟ್ಟಿಸಿದ; ಪ್ರಭಾಚಂದ್ರನಿಗೆ ಹೆಣ್ಣೆಗಡಲು ಗ್ರಾಮವನ್ನು ದಾನವಿತ್ತು.[46] ಹೆಣ್ನೆಗಡಂಗ ಮತ್ತು ಹೆಣ್ನೆಗಡಲು ಒಂದೇ ಗ್ರಾಮವನ್ನು ಸೂಚಿಸುತ್ತವೆ; ಪ್ರತಿಗ್ರಹಿಯೂ ಒಬ್ಬನೇ; ಆದ್ದರಿಂದ ದುದ್ದಮಲ್ಲ ಮತ್ತು ವೀರಕೊಂಗಾಳ್ವ ಅಭಿನ್ನ ಎಂದು ತಿಳಿಯಬಹುದು. ಶಾಸನದಲ್ಲಿ ಕಾಲ ಸೂಚಿತವಾಗಿಲ್ಲ; ಆದರೆ ಶ್ರವಣಬೆಳಗೊಳದ ಒಂದು ಶಾಸನದಲ್ಲಿ[47] ಈ ಪ್ರಭಾಚಂದ್ರ ಉಲ್ಲೇಖಿತನಾಗಿರುವುದರಿಂದ, ಅದರ ಆಧಾರದ ಮೇಲೆ ಈ ಶಾಸನದ ಕಾಲ ಕ್ರಿ.ಶ. ಸು. ೧೧೨೦ ಎಂದು ಭಾವಿಸಬಹುದು.

ಕ್ರಿ.ಶ. ೧೧೭೧ ಮತ್ತು ೧೧೭೭ಕ್ಕೆ ಸೇರುವ ತ್ರಿಭುವನಮಲ್ಲ ವೀರದುದ್ಧ ಕೊಂಗಾಳ್ವ ದೇವನ ಎರಡು ಶಾಸನಗಳು ಲಭ್ಯವಾಗಿವೆ. ಕೊಂಗಾಳ್ವ ದೊರೆಯು ಮೊಳತೆಯ ಬೀಡಿನಿಂದ ಆಳುತ್ತಿದ್ದಾಗ ಹೊಯ್ಸಳ ದೊರೆ. ಒಂದನೆಯ ನರಸಿಂಹನು ಮೊಳತೆಯನ್ನು ಮುತ್ತಿದನೆಂದು ಮೊದಲನೆಯ ಶಾಸನದಲ್ಲಿ ಹೇಳಿದೆ.[48]ಇಲ್ಲಿ ನಡೆದ ಹೋರಾಟದಲ್ಲಿ ತಮ್ಮಡಿ ರುದ್ರನು ಒಡೆಯನ ಅಪ್ಪಣೆಯ ಮೇರೆಗೆ ಶತ್ರುಗಳೊಡನೆ ಕಾದಿ ಮೃತನಾದ; ಆತನಿಗೆ ಕೋಟೆಹಾಳು ಗ್ರಾಮವನ್ನು ನೀಡಲಾಯಿತು. ವೀರಚೋಳ ಕೊಂಗಾಳ್ವನು ಆಳುತ್ತಿದ್ದಾಗ ಕ್ರಿ.ಶ. ೧೧೭೭ರಲ್ಲಿ ಇಪ್ಪಯದ ಈಶ್ವರ ದೇವಾಲಯಕ್ಕೆ ಕೊಂಗಳಸೆಟ್ಟಿ ಮತ್ತು ಇತರರು ದತ್ತಿ ಬಿಟ್ಟರೆಂದು ಇನ್ನೊಂದು ಶಾಸನದಿಂದ ತಿಳಿದುಬರುತ್ತದೆ.[49]

ಕ್ರಿ.ಶ. ೧೨೧೩ರಲ್ಲಿ ರಾಜೇಂದ್ರಬಿಲ್ಲ ಕೊಂಗಾಳ್ವನೆಂಬಾತ ಮೊಳತೆಯ ಬೀಡಿನಿಂದ ಆಳುತ್ತಿದ್ದನು.[50] ಈತನೇ ನಮಗೆ ತಿಳಿದುಬರುವ ಕೊನೆಯ ದೊರೆ. ಕೊಂಗಾಳ್ವ ವಂಶಾವಳಿಯನ್ನು ಹೀಗೆ ರೂಪಿಸಿಬಹುದು :

ಮನಿಜ (೧೦೦೪-೦೫)
|
ಬಡವ/ಕಾಡವ (೧೦೨೦-೨೧)
|
ರಾಜೇಂದ್ರ ಪೃಥುವೀ ಮಹಾರಾಜ (೧೦೨೨-೨೬)
(ರಾಜೇಂದ್ರ ಚೋಳ ಕೊಂಗಾಳ್ವ)
|
ರಾಜಾಧಿರಾಜ I
ರಾಜೇಂದ್ರ ಪೃಥುವೀ ಕೊಂಗಾಳ್ವ II (೧೦೫೯)
(ಪತ್ನಿ ಪೋಚಬ್ಬರಸಿ)
|
ರಾಜಾಧಿರಾಜ II
ರಾಜೇಂದ್ರ ಪೃಥುವೀ ಕೊಂಗಾಳ್ವ III (೧೦೬೬-೧೧೦೫)
(ಅದಟರಾದಿತ್ಯ, ತ್ರಿಭುವನಮಲ್ಲ ಚೋಳ)
(ಪತ್ನಿ ಪದ್ಮಲದೇವಿ)
|
ದುದ್ಧಮಲ್ಲ (ವೀರಕೊಂಗಾಳ್ವದೇವ) (ಸು.೧೧೨೦)
|
ವೀರದುದ್ಧ ಕೊಂಗಾಳ್ವ (೧೧೭೧-೭೭)
(ತ್ರಿಭುವನಮಲ್ಲ; ವೀರಚೋಳ)
|
ರಾಜೇಂದ್ರ ಬಿಲ್ಲ ಕೊಂಗಾಳ್ವ (೧೨೧೩)

ಕೊಂಗಾಳ್ವ ದೊರೆಗಳು ತಮ್ಮ ಹೆಸರು ಮತ್ತು ಬಿರುದುಗಳಲ್ಲಿ ಚೋಳರನ್ನು ಅನುರಕಿಸಿದರೂ ಧರ್ಮದಲ್ಲಿ ಮಾತ್ರ ಜೈನಮತಾನುಯಾಯಿಗಳಾಗಿದ್ದರೆನ್ನುವುದು ಗಮನಾರ್ಹ ಅಂಶ. ಒಂದನೆಯ ರಾಜಾಧಿರಾಜನು ಮುಳ್ಳೂರಿನಲ್ಲಿ ಕಟ್ಟಿಸಿದ ಬಸದಿಗೆ ಅವನ ಮಗ ಎರಡನೆಯ ರಾಜೇಂದ್ರನು ದತ್ತಿ ನೀಡಿದುದನ್ನು ಹಿಂದೆ ಗಮನಿಸಲಾಗಿದೆ. ಅದಟರಾದಿತ್ಯ ಅಥವಾ ಮೂರನೆಯ ರಾಜೇಂದ್ರನು ಅದಟರಾದಿತ್ಯ ಚೈತ್ಯಾಲಯವನ್ನೂ, ದುದ್ಧಮಲ್ಲನು ಸತ್ಯವಾಕ್ಯ ಜಿನಾಲಯವನ್ನೂ ಕಟ್ಟಿಸಿದರು. ರುಗ್ಮಿಣಿದೇವಿಯು ಪ್ರಾಯಶಃ ಜಿನಮೂರ್ತಿಯೊಂದನ್ನು ಪ್ರತಿಷ್ಠೆ ಮಾಡಿಸಿದಳು. ಕೊಂಗಾಳ್ವರು ಇತರ ಧರ್ಮಗಳನ್ನು, ವಿಶೇಷವಾಗಿ ಶೈವ ಧರ್ಮವನ್ನು ಉದಾರವಾಗಿ ಕಂಡರೆಂಬುದಕ್ಕೆ ಮೂರನೆಯ ರಾಜೇಂದ್ರನು ಹೊಸಹಳ್ಳಿಯ ವೀರಸಿದ್ಧೇಶ್ವರ ದೇವಾಲಯಕ್ಕೆ ನೀಡಿದ ದತ್ತಿಗಳು ಸಾಕ್ಷಿಯಾಗುತ್ತವೆ.

ಕೊಂಗಾಳ್ವರ ಈ ಧಾರ್ಮಿಕ ಕಾರ್ಯಗಳಿಗೆ ಮೂಲಸ್ಫೂರ್ತಿ ಎಂದರೆ ಜೈನಗುರು ಗುಣಸೇನ ಪಂಡಿತ. ಈತ ದ್ರವಿಳ ಅಥವಾ ತಿವುಳಿಗಣ, ನಂದಿಸಂಘ ಹಾಗೂ ಅರುಂಗಳಾನ್ವಯಕ್ಕೆ ಸೇರಿದವನು;[51]ಪುಷ್ಟಸೇನ ಸಿದ್ಧಾಂತ ದೇವನ ಶಿಷ್ಯ.[52]ಕ್ರಿ.ಶ. ೧೦೬೧ರ ಸುಮಾರಿಗೆ ಮುಳ್ಳೂರಿನ ಬಸದಿಗಳೆಲ್ಲ ಈತನ ಸ್ವಾಮಿತ್ವಕ್ಕೆ ಒಳಪಟ್ಟಿದ್ದುವು. ಕ್ರಿ.ಶ. ೧೦೬೪ ರಲ್ಲಿ ಈತ ಮುಳ್ಳೂರಿನಲ್ಲಿ ಸಮಾಧಿಮರಣ ಹೊಂದಿದ. ಮುಳ್ಳೂರಿನ ಶಾಸನವೊಂದು ಈತನನ್ನು ‘ಪರಮಾರ್ಹನ್ತ್ಯಾದಿ ರತ್ನತ್ರಯಸರಳ ಮಹಾಶಬ್ದಶಾಸ್ತ್ರಾಗಮಾದಿ ಸ್ಥಿರ ಷಟ್ತರ್ಕ ಪ್ರವೀಣರ್‌’ ಎಂದು ಬಣ್ಣಿಸಿದೆ. ಶ್ರವಣಬೆಳಗೊಳದ ಒಂದು ಶಾಸನದಲ್ಲಿ ಈತನ ಉಲ್ಲೇಖವಿದೆ.[53] ಮುಳ್ಳೂರಿನ ಬಸದಿ ಮತ್ತು ಶಾಸನಗಳ ಬಗ್ಗೆ ಒಂದು ಪರಿಚಯ ಲೇಖನವನ್ನು ರೈಸ್ ಬರೆದಿದ್ದಾರೆ.[54]ಕ್ರಿ.ಶ. ೧೦೦೧ ರಲ್ಲಿ ಮುಳ್ಳೂರ್ನಾಡು ಇತ್ತು.[55]

ಕೊಂಗಾಳ್ವ ಶಾಸನಗಳಲ್ಲಿ ಕಂಡುಬರುವ ಇನ್ನೊಬ್ಬ ಜೈನಗುರು ಪ್ರಭಾಚಂದ್ರ ಸಿದ್ಧಾಂತದೇವ. ಈತ ಮೇಘಚಂದ್ರ ತ್ರೈವಿದ್ಯ ದೇವನ ಶಿಷ್ಯ. ಕೊಂಗಾಳ್ವ ದೊರೆ ದುದ್ದಮಲ್ಲ ಅಥವಾ ವೀರ ಕೊಂಗಾಳ್ವನು ಪ್ರಭಾಚಂದ್ರನ ಶಿಷ್ಯ. ಪ್ರಭಾಚಂದ್ರ ಮೂಲಸಂಘ, ದೇಸಿಗಗಣ ಮತ್ತು ಪುಸ್ತಕಗಚ್ಛಕ್ಕೆ ಸೇರಿದವನು. ಇತರ ಜೈನ ಯತಿಗಳಲ್ಲಿ ಗಂಡವಿಮುಕ್ತ ಸಿದ್ಧಾಂತ, ಕಲಾಚಂದ್ರ ಸಿದ್ಧಾಂತದೇವ ಭಟಾರ, ಕನಕಸೇನ, ಪದ್ಮನಂದಿ, ಅಮಳಚಂದ್ರಭಟಾರರನ್ನು ಹೆಸರಿಸಬಹುದು. ಪಳಿಗವೆರ್ಗ್ಗಡೆ, ಮಾಕಬ್ಬೆ, ಅಹಿತರರೇಚಿಸೆಟ್ಟಿ, ಚರುವಕಬ್ಬೆ, ಮಸಣಮೆಯ ನಾಯಕ, ಬಸವಿಸೆಟ್ಟಿ, ಬಮ್ಮದೇವ, ಮಲ್ಲಿಸೆಟ್ಟಿ ಮುಂತಾದ ಅನೇಕ ಶೈವ-ಜೈನಭಕ್ತರು ಈ ಕಾಲದ ಶಾಸನಗಳಲ್ಲಿ ಉಲ್ಲೇಖಿತರಾಗಿದ್ದಾರೆ. ಯಲ್ಲೇಶ್ವರ, ಪೊಲ್ಲೇಶ್ವರ, ಅಮ್ರಿತೇಶ್ವರ ಈ ಕಾಲದ ಶಿವಾಲಯಗಳು.

ಮುಳ್ಳೂರಿನಲ್ಲಿ ಪಾರ್ಶ್ವನಾಥ, ಚಂದ್ರನಾಥ ಹಾಗೂ ಶಾಂತೀಶ್ವರ ಬಸದಿಗಳಿವೆ. ಪಾರ್ಶ್ವನಾಥ ಬಸದಿಯನ್ನು ಎರಡನೆಯ ರಾಜೇಂದ್ರನ ಪತ್ನಿ ಪೋಚಬ್ಬರಸಿ ಕಟ್ಟಿಸಿದಳು. ಚಂದ್ರನಾಥ ಬಸದಿಯನ್ನು ಎರಡನೆಯ ರಾಜಾಧಿರಾಜನು ತನ್ನ ತಾಯಿ ಪೋಚಬ್ಬರಸಿಯ ಪುಣ್ಯಾರ್ಥವಾಗಿ ಕಟ್ಟಿಸಿದನು. ಶಾಂತಿನಾಥ ಬಸದಿಯನ್ನು ಪ್ರಾಯಶಃ ಒಂದನೆಯ ರಾಜಾಧಿರಾಜನು ಕಟ್ಟಿಸಿದನು. ಈ ಬಸದಿಯಲ್ಲಿರುವ ಶಾಂತೀಶ್ವರ ವಿಗ್ರಹದ ಪೀಠದ ಮೇಲಿನ ಶಾಸನದಿಂದ ಕ್ರಿ.ಶ. ೧೨ನೆಯ ಶತಮಾನದ ಮಧ್ಯಭಾಗದಲ್ಲಿ ಮಲ್ಲಷೇಣ ಎಂಬ ಜೈನಯತಿ ಈ ಬಸದಿಯ ಜೀಣೋದ್ಧಾರ ಮಾಡಿಸಿದನೆಂದು ತಿಳಿದುಬರುತ್ತದೆ.[56]ಸುಳಗೋಡು ಸೋಮವಾರದ ಅದಟರಾದಿತ್ಯ ಚೈತ್ಯಾಲಯವು ಪಾಳುಬಿದ್ದಿದ್ದು, ಜಿನವಿಗ್ರಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈಗ ಅದು ಬಸವಣ್ಣ ದೇವಾಲಯವಾಗಿ ಪರಿವರ್ತಿತವಾಗಿದೆ. ಸತ್ಯವಾಕ್ಯ ಜಿನಾಲಯ ನಿರ್ಮಾಣ ವಿಷಯವನ್ನು ತಿಳಿಸುವ ಶಾಸನ ಈಗ ಹೊಳೇನರಸೀಪುರದ ಲಕ್ಷ್ಮೀನರಸಿಂಹ ದೇವಾಲಯದ ಪ್ರಾಕಾರದಲ್ಲಿರುವ ರಾಮಾನುಜಾಚಾರ್ಯರ ಗುಡಿಯ ಮುಂದಣ ಕೈಸಾಲೆ ಕಂಬವಾಗಿದೆ. ಅರಕೆರೆಯಲ್ಲಿ ಒಂದು ಬಸದಿ ಇದ್ದ ಉಲ್ಲೇಖ ಉಂಟು.[57]ಮುಳ್ಳೂರಿನಲ್ಲಿರುವ ಜಿನಬಿಂಬಗಳು ಕೊಂಗಾಳ್ವ ಶಿಲ್ಪಕಲೆಗೆ ಸಾಕ್ಷಿಯಾಗಿವೆ; ಬಸದಿಗಳು ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲ.

ಕ್ರಿ.ಶ. ೧೦೯೪ರಲ್ಲಿ ಚರುವಕಬ್ಬೆ ಎಂಬ ಭಕ್ತೆಯು ನಂದಿ, ನಂದಿಮಂಟಪ, ಭೈರವ, ಭೈರವನ ಗುಡಿ, ಭಗವತಿ, ನಾರಾಯಣ ಮತ್ತಿತರ ಪರಿವಾರದೇವತೆಗಳನ್ನು ಮಾಡಿಸಿದಳು; ಪೊಲ್ಲೇಶ್ವರ ದೇಗುಲದ ಸುಣ್ಣಬಣ್ಣ ಮಾಡಿಸಿದಳು. ಈ ದೇಗುಲ ಕಟ್ಟಿದ ಶಿಲ್ಪ ಲಕನಾಚಾರಿ.[58]ಹೊಸಹಳ್ಳಿಯ ವೀರಸಿದ್ಧೇಶ್ವರ ದೇವಾಲಯದ ಬಗ್ಗೆ ಹಿಂದೆ ಪ್ರಸ್ತಾಪಿಸಿದೆ.

ಕೊಂಗಾಳ್ವರಿಗೂ ಹೊಯ್ಸಳರಿಗೂ ಇದ್ದ ರಾಜಕೀಯ ಮತ್ತು ರಾಜಕೇಯೇತರ ಸಂಬಂಧಗಳನ್ನು ಶಾಸನಗಳಿಂದ ತಿಳಿಯಬಹುದು. ಒಂದನೆಯ ರಾಜೇಂದ್ರ ಮತ್ತು ವೀರಚೋಳರ ಕಾಲದಲ್ಲಿ ಹೊಯ್ಸಳರಿಗೂ ಕೊಂಗಾಳ್ವರಿಗೂ ಹೋರಾಟಗಳು ನಡೆದವು. ಹೊಯ್ಸಳರ ಶಾಸನಗಳಲ್ಲಿಯೂ ಕೊಂಗಾಳ್ವರ ಉಲ್ಲೇಖ ಕಂಡುಬರುತ್ತದೆ. ಕ್ರಿ.ಶ. ೧೧೩೦ರ ಶಾಸನವೊಂದು ವಿಷ್ಣುವರ್ಧನನನ್ನು ‘ಕೊಂಗಾಳ್ವನೃಪಾಳವನದಹನದಾವಾನಳ’ ಎಂದು ಬಣ್ಣಿಸುತ್ತದೆ.[59] ಇನ್ನೂ ಹಿಂದೆಯೇ ಸುಮಾರು ಕ್ರಿ.ಶ. ೧೧೦೪ರಲ್ಲಿ ತ್ರಿಭುವನಮಲ್ಲ ಬಲ್ಲಾಳು ಪೊಯ್ಸಳ ದೇವನು ‘ಗೊಂಗಾಳ್ವದೇವರ ಮೇಲೆ ಧಾಳಿ’ ಮಾಡಿದ ಉಲ್ಲೇಖವಿದೆ; ಹೊಯ್ಸಳ ದೊರೆ ಒಂದನೆಯ ಬಲ್ಲಾಳ,[60] ಎರಡನೆಯ ಬಲ್ಲಾಳನ, ಕ್ರಿ.ಶ. ೧೧೭೭-೭೮ರ ಕೂಡಲೂರು ಶಾಸನ ತುಂಬ ಮಹತ್ವದ ವಿಷಯವನ್ನು ದಾಖಲಿಸುತ್ತದೆ. ಬಲ್ಲಾಳನು ತನ್ನ ತಂದೆಯನ್ನು ವಿರೋಧಿಸಿ ಮಲೆನಾಡಿಗೆ ಹೋದಾಗ ತಂತ್ರಪಾಳ ಹೆಮ್ಮಾಡಿದೇವನು ಆತನ ಪರವಾಗಿ ನಿಂತು ಕೊಂಗಾಳ್ವ ಚಂಗಾಳ್ವನೂ ಸೇರಿದಂತೆ ಮಲೆಯ ಮಂಡಳಿಕರು ಮತ್ತು ಪ್ರಜೆಗಾವುಂಡುಗಳು ರಾಜಕುಮಾರನನ್ನು ಕಂಡು ನೆರವು ನೀಡುವಂತೆ ಮಾಡಿದ್ದಿರಬೇಕು. ಆತನು ಬಲ್ಲಾಳನಿಗೆ ಪಟ್ಟಕಟ್ಟಿಸಿ ತಾನೂ ಪ್ರಧಾನ ಪದವಿ ಪಡೆದನಂತೆ.[61] ಕೊಂಗಾಳ್ವರು ಹೊಯ್ಸಳರ ಸಾಮಂತರಾಗಿ ರಾಜ್ಯವಾಳಿದರೆಂಬುದನ್ನು ಇದು ಸೂಚಿಸುತ್ತದೆ. ೧೨೧೩ರಲ್ಲಿ ಕೊಂಗಾಳ್ವ ದೊರೆಯೊಬ್ಬ ಮಲೆರಾಜರಾಜ, ಮಲೆಪರೊಳುಗಂಡ, ಕದನಪ್ರಚಂಡ ಶರಣಾಗತ ವಜ್ರಪಂಜರ ಎಂಬ ಬಿರುದು ಧರಿಸುವುದು ಸಹ ಇದನ್ನು ಸಮರ್ಥಿಸುತ್ತದೆ.[62] ಹೊಯ್ಸಳ ಶಾಸನವೊಂದು ಭೂದಾನದ ಸೀಮೆಯನ್ನು ವಿವರಿಸುವಾಗ ಕೊಂಗಾಳ್ವನ ಕೆರೆ ಎಂಬ ಸ್ಥಳವನ್ನು ಉಲ್ಲೇಖಿಸುತ್ತದೆ.[63]

ಡೆರೆಟ್ ಅವರು ವಿಷ್ಣುವರ್ಧನನ ಪತ್ನಿ ಚಂದಲದೇವಿ ಕೊಂಗಾಳ್ವ ರಾಜಪುತ್ರಿಯಾಗಿದ್ದಿರಬೇಕೆಂದು, ವಿವಾಹಸಂಬಂಧದ ಮೂಲಕ ಕ್ರಿ.ಶ. ೧೧೧೫-೧೬ರಲ್ಲಿ ವಿಷ್ಣುವರ್ಧನ ಕೊಂಗಾಳ್ವರೊಂದಿಗೆ ಮೈತ್ರಿಯನ್ನು ಏರ್ಪಡಿಸಿಕೊಂಡನೆಂದು ಅಭಿಪ್ರಾಯ ಸೂಚಿಸುತ್ತಾರೆ.[64] ಶ್ರವಣನಹಳ್ಳಿಯಲ್ಲಿರುವ ಒಂದು ಶಾಸನದಿಂದ “ವಿಷ್ಣುವರ್ಧನ ಹೊಯ್ಸಳದೇವರ ಪಿರಿಯರಸಿ ಚಂದಲದೇವಿಯರು ತ್ರಿಭುವನ ತಿಳ ….. ತೀರ್ತ್ಥದ ವೀರಕೊಂಗಾಳ್ವ ಜಿನಾಲೆಯದ ದೇವರ ಅಂಗಭೋಗಕ್ಕಂ ರಿಷಿಯರಾಹಾರದಾನಕ್ಕಂ ತಮ್ಮ ಬಪ್ಪ ಪ್ರಿಥ್ವಿಯ ಕೊಂಗಾಳ್ವದೇವರವಗ ಬಳಿವಳಿ ಬಿಟ್ಟ ಮಂದಗೆಱೆಯ ಶ್ರಿತಿಯೊಳಗೆ ಕಾವನಹಳ್ಳಿಯ ದುದ್ದಮಲ್ಲದೇವನು ತಾವೂವಿಳ್ದು” ಪ್ರಭಾಚಂದ್ರ ಸಿದ್ಧಾಂತದೇವರ ಕಾಲ್ತೊಳೆದು ದಾನವಿತ್ತರೆಂದು ಗೊತ್ತಾಗುತ್ತದೆ.[65]

ಕ್ರಿ.ಶ. ೧೦೬೩ರಲ್ಲಿಯೇ ಮುಳ್ಳೂರ ಗುಣಸೇನಪಂಡಿತ ದೇವರಿಗೆ ರಕ್ಕಸಪೊಯ್ಸಳ ಅರ್ಥಾತ್‌ವಿನಯಾದಿತ್ಯನ ಪತ್ನಿ ಪರಿಯಲದೇವಿಯ ಸೊಸೆವೂರಿನ ಬಸದಿ ಸ್ಥಾನವೊಂದನ್ನು ಒಪ್ಪಿಸಿದ ಸಂಗತ ಗಮನಾರ್ಹವಾದುದು.[66] ಗುಣಸೇನಪಂಡಿತರನ್ನು ‘ಪೊಯ್ಸಳನ ಗುರುಗಳ್‌’ ಎಂದು ಕರೆದಿದೆ. ಕ್ರಿ.ಶ. ೧೧೭೫ರ ವೀರಚೋಳ ಕೊಂಗಾಳ್ವನ ಶಾಸನವೊಂದರಲ್ಲಿ ಆತನು ತಾಯಿ ಪದುಮಲದೇವಿ, ಸೋಮಲದೇವಿ ಮತ್ತು ಇತರರ ಸಮ್ಮುಖದಲ್ಲಿ ದಾನ ನೀಡಿದ ಉಲ್ಲೇಖವಿದೆ.[67] ಈ ವೇಳೆಗೆ ಕೊಂಗಾಳ್ವರು ಹೊಯ್ಸಳರ ಸಾಮಂತರಾಗಿ ಅವರೊಡನೆ ಸುಮಧುರ ಬಾಂಧವ್ಯ ಹೊಂದಿದ್ದರು. ಹೊಯ್ಸಳ ಎರಡನೆಯ ಬಲ್ಲಾಳನ ಪತ್ನಿ ಮತ್ತು ಪುತ್ರಿಯರ ಹೆಸರು ಸಹ ಕ್ರಮವಾಗಿ ಪದುಮಲದೇವಿ ಮತ್ತು ಸೋಮಲದೇವಿ ಎಂದಿದೆ. ಬಲ್ಲಾಳನ ಪತ್ನಿಪುತ್ರಿಯರ ಸನ್ನಿಧಿಯಲ್ಲಿ ಈ ದಾನ ನೀಡಿದ್ದಿರಬೇಕೆಂಬುದು ಕೊಎಲ್ಲೊ ಅವರ ಅಭಿಪ್ರಾಯ.[68] ಅವರ ಈ ಅಭಿಪ್ರಾಯ ನಿಂತಿರುವುದು ಶಾಸನೋಕ್ತ ವ್ಯಕ್ತಿಗಳು ಹೊಯ್ಸಳ ರಾಜಕುಟುಂಬದವರೇ ಎಂಬ ರೈಸ್‌ಅವರ ಅಭಿಪ್ರಾಯದ ಆಧಾರದ ಮೇಲೆ. ಆದರೆ ರಾಜಯೋಗ್ಯವಾದ ಯಾವ ಶಬ್ದವನ್ನೂ ಶಾಸನದಲ್ಲಿ ಬಳಸದಿರುವುದರಿಂದ ಈ ಅಭಿಪ್ರಾಯ ಕರಿಯಲ್ಲ ಎಂಬ ವಾದವೂ ಇದೆ. ಏನೇ ಇದ್ದರೂ ಹೊಯ್ಸಳರಿಗೂ ಕೊಂಗಾಳ್ವರಿಗೂ ಸುಮಾರು ಎರಡು ಶತಮಾನಗಳ ಸಂಪರ್ಕ-ಸಂಬಂಧಗಳಿದ್ದವೆಂದೂ ಖಚಿತವಾಗಿ ಹೇಳಬಹುದು.

ಕೊಂಗಾಳ್ವರ ಕಾಲದಲ್ಲಿದ್ದ ಕೆಲವೇ ಅಧಿಕಾರಿಗಳ ಹೆಸರುಗಳನ್ನು ಶಾಸನಗಳಿಂದ ಉಲ್ಲೇಖಿಸಬಹುದು: ರಾಜಯ ಸುಂಕವೆರ್ಗಡೆಯಾಗಿದ್ದು ವೀರಕೊಂಗಾಳ್ವದೇವನ ಕಾಲದಲ್ಲಿದ್ದ ಮಸಣಮೆಯ ನಾಯಕನು ಮಹಾಪ್ರಧಾನ ಹಾಗೂ ಪಸಾಯ್ತದ ಹೆಗ್ಗಡೆಯಾಗಿದ್ದ. ಜಕ್ಕಯ್ಯ ದುದ್ಧಮಲ್ಲನ ಬಾಣಸಿಯಾಗಿದ್ದ. ಬೂವೆಯನಾಯಕನೆಂಬ ಸಾವಂತನೊಬ್ಬ ಕೊಂಗಾಳ್ವರ ಒಂದು ಶಾಸನದಲ್ಲಿ ಉಲ್ಲೇಖಿತನಾಗಿದ್ದಾನೆ. ನಕುಳಾರ್ಯ ಸಂಧಿವಿಗ್ರಹಿಯಾಗಿದ್ದ. ಜಾಕವ, ಕೋಗಿಲ್ಲನಾಯಕ, ಜೋಗಯ್ಯ, ಚೆಳುಕಿಸೆಟ್ಟಿ ಮುಂತಾದ ವೀರರು ಕೊಂಗಾಳ್ವರ ಪರ ಕಾದಿ ಮಡಿದರು. ತಮ್ಮಡಿ ರುದ್ರನು ಕೋಟೆಹಾಳನ್ನು ‘ತಲೆಗೊಟ್ಟು ಹಡದ’ನಂತೆ. ಕೊಂಗಾಳ್ವಸೆಟ್ಟಿ, ಕೊಂಗಳಾಚಾರಿ ಮುಂತಾದ ವ್ಯಕ್ತಿನಾಮಗಳು ವಿಶೇಷವೆನಿಸುತ್ತವೆ.

ದುರದೃಷ್ಟವಶಾತ್‌ ಕೊಂಗಾಳ್ವರ ಕಾಲದ ಸಾಹಿತ್ಯವನ್ನು ತಿಳಿಯಲು ಸಾಕಷ್ಟು ಸಾಮಗ್ರಿ ಇಲ್ಲ. ಕ್ರಿ.ಶ. ೧೦೭೯-೮೦ರ ಶಾಸನವೊಂದನ್ನು ‘ಚತುರ್ಭಾಷಾ-ಲಿಖಿತ್ಥಕ ವಿದ್ಯಾಧರ’ ಎನಿಸಿದ ನಕುಳಾರ್ಯ ಬರೆದ. ಪಾಶುಪತಪಂಥದ ಲಕುಳ ಈತನಿರಬಹುದೆ ಎನ್ನುವ ರೈಸರ ಊಹೆ ತುಂಬ ದುರ್ಬಲವಾದುದು; ಕೇವಲ ಹೆಸರಿನ ಸಾಮ್ಯವನ್ನು ಆಧರಿಸಿರುವಂಥದ್ದು. ಈತನ ಶೈಲಿಗೆ ಇದೊಂದಿಗೆ ನಿದರ್ಶನ.

ಜಗದಾಶ್ಚರ್ಯ ಮಿದತ್ಯ ಪೂರ್ವ್ವಮಿದರಂದಕ್ಕಬ್ಜಜಂ ಕೂಡಬ
ಟ್ಟಿಗೆಯಂತಿಟ್ಟು ಮಿಡಲ್ಕಿದೇನ್ನೆಱೆದನೇ ಪೇಳೆಂಬ ಕೊಂಗಾಳ್ವ ಜೈ!
ನಗೃಹಂ ನಾಡಬೆಡಂಗು ವೆತ್ತದಟರಾದಿತ್ಯಾವನೀನಾಥ ಕೀ
ರ್ತ್ತಿಗಡರ್ಪ್ಪಿರ್ಪ್ಪುವೊಲಾರ್ಪ್ಪುತೋರ್ಪ್ಪುದೆನೆ ಮತ್ತೆ ಮತ್ತೇವಣ್ನಿಪಂ ಬಣ್ನಿಪಂ ||[69]

ತಮ್ಮಡಿರುದ್ರನೆಂಬ ವೀರನ ವ್ಯಕ್ತಿತ್ವವನ್ನು ಹೀಗೆ ಕೊಂಡಾಡಿದೆ:

ಎರವರ್ತಿಜನಕ್ಕೆ ಸುರಕುಜಂ
ನಿರುತಂ ಕಾಮಿನಿಯರಲ್ಲಿಗಭಿಮಾನ ಕಾಮಂ |
ಪರಬಳಕೆ ಭೀಮಸೇನಂ
ಹರಪದಯುಗ್ಮಭ್ರಿಂಗನೆನಿಪ ತಮ್ಮಡಿಯ ರುದ್ರ |[70]

ಪ್ರಭಾಚಂದ್ರನೆಂಬ ಜೈನಗುರು ಪರಸಮಯತಿಮಿರ ದಿನಕರನೆನಿಸಿದ್ದ; ಉರುತರ ಕವಿಗಮಕ ವಾದಿವಾಗಿತ್ವ ದೊಡೆಯನಾಗಿದ್ದನಂತೆ.[71]

ಕೊಂಗಾಳ್ವ ಶಾಸನಗಳಲ್ಲಿ ಆಡವಲ, ಆಡವಲಗದ್ಯಾಣ ಎಂಬ ಶಬ್ದಗಳು ಕಂಡುಬರುತ್ತವೆ.[72]ಇವಕ್ಕೆ ಅರ್ಥವೇನೆಂದು ತಿಳಿಯದು. ಚೋಳರ ಸುಧಾರಿತ ಚಿನ್ನದ ನಾಣ್ಯವನ್ನು ಇದು ಸೂಚಿಸಬಹುದೆಂದು ಪ್ರೊ. ಕೆ.ಎ. ನೀಲಕಂಠ ಶಾಸ್ತ್ರಿಗಳು ತಿಳಿಸುತ್ತಾರೆ.[73]

ಕೊಂಗಾಳ್ವರ ಶಾಸನಗಳನ್ನು ಆಧರಿಸಿ ಒಂದು ಸ್ಥೂಲವಾದ ಅಧ್ಯಯನವನ್ನು ಮೇಲೆ ಮಾಡಲಾಗಿದೆ. ಮಾಲಂಬಿ, ಮುಳ್ಳೂರು, ಹೆಣ್ನೆಗಡಂಗ, ಮೊಳತೆ, ಸುಳಗೋಡು ಸೋಮವಾರ, ಮಗ್ಗೆ, ನಂದಳಕ್ಕೆ, ರಾಜೇಂದ್ರಪುರ ಮುಂತಾದ ಹಲವು ಸ್ಥಳಗಳು ಕೊಂಗಾಳ್ವರ ನೇರ ಆಡಳಿತಕ್ಕೆ ಕೆಲವು ಕಾಲವಾದರೂ ಒಳಪಟ್ಟಿದ್ದವು. ಹೊಳೇನರಸೀಪುರ ತಾಲೂಕಿನಲ್ಲಿ ಕೊಂಗಲ್‌ ಬೀಡು ಎಂಬ ಗ್ರಾಮವಿದ್ದು ನಮ್ಮ ಕುತೂಹಲವನ್ನು ಕೆರಳಿಸುತ್ತದೆ. ಹೆಚ್ಚಿನ ಪರಿಶೋಧನೆಯಿಂದ ಕೊಂಗಾಳ್ವ ಇತಿಹಾಸದ ಬಗ್ಗೆ ಮತ್ತಷ್ಟು ವಿಷಯಗಳು ತಿಳಿದು ಬರಬಹುದು.

 

[1] Minor Dynasties of south India : Karnataka, Vol. I (1982, New Era Publications), Chapter 7, Families of the Mediaeval Period.

[2]ಸಂಪುಟ I (೧೯೭೨) ಮತ್ತು VIII (೧೯೮೪) ಇತ್ಯಾದಿ

[3] History of Some Feudatory Dynasties of Karnataka (1982, Unpublished).

[4] J.D. Derret,The Hoysalas (1957)

[5] W. Coelho, The Hoysalavamsa (1950)

[6] P.B. Desai and others : A History of Karnataka, p.62; Sri Kanthika (Dr.S. Srikantha Sastri Felicitation volume, 1973), p.63 & 70; Dr. B.R. Gopal: Corpus of Kadamba Inscriptions, Vol. I (1985). p.84 & 89. Introduction (LIV): “Reference to a Kongalva in the Gudnapura Inscription is the earliest.”

[7] Epigraphia Carnatica (EC) Vol. Introduction, P.7 ; S.K. Aiyangar and R. Sewel : Historical Inscriptions of South India, P. 364

[8] EC. IV, ಚಾಮರಾಜನಗರ – ೩೫೪, ಬೇಲೂರು ೯೬, ೧೪೫, ೧೬೮ ಇತ್ಯಾದಿ; “ಮಲೆಯಂ ಸಾಧಿಸಿ ಕೊಂಗಚಂಗ ವಿಷಯ ಕ್ಷೋಣೀಶರಂ ಗೆಲ್ದು” – ನರಸಿಂಹನ ಶಾಸನ, IX, ಬೇಲೂರು ೨೬೮; ಗಂಗ ಎರೆಯಪ್ಪ ಕೊಂಗಲ್ನಾಡಿನಲ್ಲಿ ಭೂದಾನ ನೀಡಿದ, EC, VIII ಅರಕಲಗೂಡು-೫; ಕೊಂಗನಾಡ ಎರಡಿಚ್ಛಾಸಿರ, VIII, ಅರಕಲಗೂಡು ೧೩೧; ಇತ್ಯಾದಿ. ಕೊಂಗನಾಡು ಕಾವೇರಿ ಮತ್ತು ಹೇಮಾವತಿ ನದಿಗಳ ನಡುವಣ ಪ್ರದೇಶ.

[9] EC., I, ಕೊಡಗು – ೬೫

[10] B.L. Rice : Mysore and Coorg from inscriptions, p.144; ಕರ್ಣಾಟಕದ ಪರಂಪರ, ಸಂಪುಟ ೧, ಪು ೪೮೬; ಇತ್ಯಾದಿ.

[11] K.A. Nilakantha Sastri : The Colas, Madras, 1955, p. 172.

[12] EC. VIII (ಪರಿಷ್ಕೃತ) ಅರಕಲಗೂಡು – ೧೭೦

[13] B.R. Gopal : Minor Dynasties of South India : Karnataka, Vol. I.p.178.

[14] EC.VI (ಪರಿಷ್ಕೃತ), ಕೃಷ್ಣರಾಜಪೇಟೆ – ೧೫.

[15] EC., IX (ಪರಿಷ್ಕೃತ), ಸಕಲೇಶಪುರ – ೩೪.

[16]ಅದೇ, ಪೀಠಿಕೆ, ಪು. Lii

[17] EC., VIII (ಪರಿಷ್ಕೃತ), ಅರಕಲಗೂಡು – ೧೪೩.

[18] EC., V, Introduction,p.7

[19] W. Coelho, O.P. Cit. p.27.

[20] D.L. Derret. O.P. Cit.p.27.

[21]ಎಂ.ಎನ್.ಪ್ರಭಾಕರ, “ಮುಣ್ಡ ಪೊಯ್ಸಳ”, ಇತಿಹಾಸ ದರ್ಶನ ಸಂಪುಟ ೭, ಪು.೨೨೨ ರಿಂದ.

[22] EC., VIII (ರೈಸ್ ಆವೃತ್ತಿ) ತೀರ್ಥಹಳ್ಳಿ – ೩೧,೧೩೪ ಇತ್ಯಾದಿ; ಮುಣ್ಡಗೌಡ ಕುಲದ ಉಲ್ಲೇಖ, ಕ್ರಿ.ಶ. ೧೦೯೮ರ ಲಕ್ಕೂರು ಶಾಸನ, EC., VIII (ಪರಿಷ್ಕೃತ) ಅರಕಲಗೂಡು – ೧೦೧.

[23] B.L. Rice, Op. Cit. P. ೨೧೫; M.A.R., 1915 p.14

[24] EC, 1,ಕೊಡಗು – ೭೨.

[25]ಅದೇ, ಕೊಡಗು – ೬೮.

[26]ಅದೇ, ಕೊಡಗು – ೬೯.

[27]ಅದೇ, ಕೊಡಗು – ೭೨.

[28]ಅದೇ, ಕೊಡಗು – ೭೦.

[29]ಅದೇ, ಕೊಡಗು – ೭೫.

[30] EC., VIII (ಪರಿಷ್ಕೃತ), ಅರಕಲಗೂಡು – ೧೬೮

[31] EC., I, ಕೊಡಗು – ೪೮.

[32]ಅದೇ, ಕೊಡಗು – ೪೯.

[33]ಅದೇ, ಕೊಡಗು – ೮೧.

[34] EC., VIII (ಪರಿಷ್ಕೃತ), ಅರಕಲಗೂಡು – ೧೩೩.

[35] EC., V (ಪರಿಷ್ಕೃತ), ಕೃಷ್ಣರಾಜನಗರ – ೬೬.

[36] D.L.Derret, op.Cit, p.33

[37] EC., V (ರೈಸ್ ಆವೃತ್ತಿ), Introduction, p.7

[38] EC. VIII (ಪರಿಷ್ಕೃತ), ಹೊಳೇನರಸೀಪುರ – ೧೩೫.

[39]ಅದೇ, ಅರಕಲಗೂಡು – ೧೫೧

[40]ಅದೇ, ಅರಕಲಗೂಡು – ೧೪೫ ಹಾಗೂ EC. IX (ಪರಿಷ್ಕೃತ), ಸಕಲೇಶಪುರ – ೫೭

[41] EC. V (ಪರಿಷ್ಕೃತ), ಕೃಷ್ಣರಾಜನಗರ – ೬೭

[42] EC. VIII (ಪರಿಷ್ಕೃತ), ಹೊಳೇನರಸೀಪುರ – ೬೧

[43]ಅದೇ, ಹೊಳೇನರಸೀಪುರ – ೫೬

[44]ಅದೇ, ಅರಕಲಗೂಡು – ೧೩೯

[45] B.R. Gopal, op. Cit, Vol. I, p.183

[46] EC., VIII (ಪರಿಷ್ಕೃತ), ಹೊಳೇನರಸೀಪುರ – ೭ ಮತ್ತು ೮.

[47] EC., II (ಪರಿಷ್ಕೃತ, ೧೯೭೩), ಶ್ರವಣಬೆಳಗೊಳ-೧೬೨.

[48] EC., VIII (ಪರಿಷ್ಕೃತ), ಹೊಳೇನರಸೀಪುರ – ೧೦೮.

[49]ಅದೇ, ಹೊಳೇನರಸೀಪುರ – ೧೦೬.

[50]ಅದೇ, ಅರಕಲಗೂಡು – ೩೫

[51] EC., I, ಕೊಡಗು – ೭೭

[52]ಅದೇ, ಕೊಡಗು – ೭೮

[53] EC., II (ಪರಿಷ್ಕೃತ, ೧೯೭೩), ಶ್ರವಣಬೆಳಗೊಳ – ೭೭

[54] Indian Antiquary, Vol. 45,1915, p.14-42.

[55] EC.,I (ಪರಿಷ್ಕೃತ), ಕೊಡಗು – ೨

[56]ಅದೇ, ಕೊಡಗು – ೭೭

[57] EC., VIII (ಪರಿಷ್ಕೃತ), ಅರಕಲಗೂಡು – ೫

[58]ಅದೇ, ಅರಕಲಗೂಡು – ೧೪೬.

[59] EC., XI (ಪರಿಷ್ಕೃತ), ಚಿಕ್ಕಮಗಳೂರು-೧೦೮

[60] EC., VIII (ಪರಿಷ್ಕೃತ), ಹಾಸನ-೧೭೭; B.R. Gopal : op. cit., p. 182.

[61] EC., IX (ಪರಿಷ್ಕೃತ), ಬೇಲೂರು – ೨೨೫. ಸಂಬಂಧಿಸಿದ ಶಾಸನಪಾಠ ಹೀಗಿದೆ: “ಬಲ್ಲಾಳದೇವಂ ತಂಮ ಬಪ್ಪನಿಂ ತೊಲಗಿ ಮಲೆವಾಯ್ದಿರಲು ಸಮಸ್ತ ಮಲೆಯ ಪ್ರಜೆಗಾವುಂಡುಗಳಂ ಕೊಂಗಾಳ್ವ ಚಂಗಾಳ್ವನಾದಿಯಾದ ಮಲೆ ಮಂಡಳಿಕರುಮಂ ಕಾಣಿಸಿ ತಂನಾಳ್ದಂಗೆ ಸಾಮ್ರಾಜ್ಯಪಟ್ಟಮಂ ಕಟ್ಟಿಸಿ ಪ್ರಧಾನ ಪದವಿಯಂ ಪಡದನ್.”

[62] EC., VIII (ಪರಿಷ್ಕೃತ), ಅರಕಲಗೂಡು – ೩೫.

[63] EC., IX (ಪರಿಷ್ಕೃತ), ಬೇಲೂರು – ೨೪೪; ಕಾಲ ಕ್ರಿ.ಶ. ೧೧೮-೮೯.

[64] J.D. Derret. op.cit. p.48

[65]ಈ ಶಾಸನವು ಮೂಲತಃ ಮೈಸೂರು ಪುರಾತತ್ವ ಇಲಾಖೆಯ ೧೯೨೭ನೆಯ ವಾರ್ಷಿಕ ವರದಿಯಲ್ಲಿ ಪ್ರಕಟವಾಗಿದೆ. ಲಿಪ್ಯಂತರದಲ್ಲಿ ಅರಸಿಯ ಹೆಸರನ್ನು ಚನ್ತಲದೇವಿ ಎಂದು ನೀಡಿ, ಅದು ಶಾಂತಲದೇವಿಯ ತಪ್ಪು ರೂಪವೆಂದು ಸೂಚಿಸಲಾಗಿದೆ. ಆದರೆ ಕನ್ನಡ ಲಿಪಿ ಇರುವ ಭಾಗದಲ್ಲಿ ಚಂದಲದೇವಿ ಎಂಬ ರೂಪವೇ ಇದೆ. (ಪ್ರಭಾಚಂದ್ರ ಶಾಂತಲೆಗೆ ಗುರುವಾಗಿದ್ದ. ಬಹುಶಃ ಈ ಕಾರಣದಿಂದ ಶಾಮಶಾಸ್ತ್ರಿ ಅವರು ಚಂದಲೆ-ಶಾಂತಲೆ ಒಬ್ಬರೇ ಎಂದು ಭಾವಿಸಿದರು. ಆದರೆ ಆಕೆಯ ತಂದೆ ಮತ್ತು ತಮ್ಮಂದಿರ ಹೆಸರುಗಳು ಸ್ಪಷ್ಟವಾಗಿವೆ.

[66] EC., XI (ಪರಿಷ್ಕೃತ), ಮೂಡಿಗೆರೆ – ೨೫.

[67] EC., I, ಕೊಡಗು – ೮೭.

[68] W. Coelho. op. Cit. p.119 & 137

[69] EC., VIII (ಪರಿಷ್ಕೃತ), ಅರಕಲಗೂಡು – ೧೩೩.

[70]ಅದೇ, ಹೊಳೇನರಸೀಪುರ – ೧೦೮.

[71]ಅದೇ, ಅರಕಲಗೂಡು – ೧೩೮.

[72] EC., I ಕೊಡಗು – ೪೮ ಮತ್ತು ೪೯.

[73] K.A. Nilakantha Sastri. op. Cit, p.68.