ಪಣಸೋಗೆಯ ಯುದ್ಧದ ತರುವಾಯ ಮಲೆಪರ ನಾಡನ್ನು ಗೆದ್ದುಕೊಳ್ಳಲು ಆಗ ತಾನೆ ರಾಜ್ಯ ಕಟ್ಟಿಕೊಂಡಿದ್ದ ಹೊಯ್ಸಳರಿಗೂ ಚೋಳರಿಗೂ ಯುದ್ಧಗಳು ನಡೆಯಲಾರಂಭಿಸಿದವು. ತಲಕಾಡಿನ ಬಳಿ ಕಾವೇರಿಯ ದಕ್ಷಿಣ ತಟದಲ್ಲಿ ಕಲವೂರು (ಕಲಿಯೂರು) ಯುದ್ಧದಲ್ಲಿ (ಕ್ರಿ.ಶ. ೧೦೦೬) ಚೋಳರ ದಂಡನಾಯಕ ಅಪ್ರಮೇಯನು ಹೊಯ್ಸಳ ನೃಪಕಾಮನ (೧೦೦೬-೪೭) ದಳವಾಯಿ ನಾಗಣ್ಣನನ್ನು ಸೋಲಿಸಿದ.

[1] ಈ ಯುದ್ಧದ ವಿವರಗಳನ್ನು ನೀಡುವ ತಿರುಮಕೂಡ್ಲು ನರಸೀಪುರದ ೪೪ನೇ ಶಾಸನದಲ್ಲಿ ಅಪ್ರಮೇಯನು ತನ್ನನ್ನು ‘ಮಲೆಪಕುಲಕಾಲಂ’ ಎಂದು ಹೇಳಿಕೊಂಡಿದ್ದಾನೆ. ಈ ಕಲವೂರು ಯುದ್ಧವು ಮಲೆನಾಡನ್ನು ಗೆದ್ದುಕೊಳ್ಳಲು ಹೊಯ್ಸಳರು ಚೋಳರ ವಿರುದ್ಧ ಮಾಡಿದ ಯುದ್ಧಗಳಲ್ಲಿ ಮೊದಲನೆಯದೆಂದು ಕಾಣುತ್ತದೆ. ಚೋಳರ ಸಾಮಂತರಾಗಿದ್ದ ಚಂಗಾಳ್ವ ಮತ್ತು ಕೊಂಗಾಳ್ವರನ್ನು ಸದೆಬಡಿದು ಮಲೆನಾಡನ್ನು ಗೆದ್ದುಕೊಳ್ಳುವ ಉದ್ದೇಶವೇ ಹೊಯ್ಸಳರದಾಗಿತ್ತು. ಹೊನ್ನಾರು (ಹೊನ್ನೂರು), ರಾಜೇಂದ್ರಪುರ ಮತ್ತು ಗುಂಡೆತ್ತರಣ್ಯ ಶಾಸನಗಳು ಹೊಯ್ಸಳರ ಹಾಗೂ ಚೋಲರ ಸಾಮಂತರಾಗಿದ್ದ ಕೊಂಗಾಳ್ವ, ಚಂಗಾಳ್ವರ ನಡುವಣ ಗಡಿಯುದ್ಧಗಳನ್ನು ಚಿತ್ರಿಸುತ್ತವೆ.[2] ಹೊಯ್ಸಳ ನೃಪಕಾಮನು ತಾನಾಗಿಯೇ ಕೆಣಕಿ ಕೊಂಗಾಳ್ವ-ಚಂಗಾಳ್ವರ ಮೇಲೆ ಬೀಳುತ್ತಿರಲಿಲ್ಲ. ರಾಜೇಂದ್ರಚೋಳ ಕೊಂಗಾಳ್ವನು (೧೦೨೫-೫೫) ದಂಡೆತ್ತಿ ಬಂದಾಘ ಅವನನ್ನು ಓಡಿಸಲು ನೃಪಕಾಮ ಕ್ರಿ.ಶ. ೧೦೨೨ ರಲ್ಲಿ ಯುದ್ಧಮಾಡಿದ್ದಾನೆ. ಕೊಂಗಾಳ್ವನ ದಳಪತಿ ಕನ್ನನು ಸಮರದಲ್ಲಿ ನೃಪಕಾಮನನ್ನು ಪ್ರತಿಭಟಿಸಿ ನಿಂತಾಗ ನೃಪಕಾಮನ ದಳವಾಯಿ ಜೋಗಿಮಯ್ಯನು ಕೊಂಗಾಳ್ವ ಏರಿದ್ಧ ಅಶ್ವದತ್ತ ನುಗ್ಗಿ ಕೊಂಗಾಳ್ವನನ್ನು ಕೊಂದು ಕೊಂಗಾಳ್ವನ ಖಡ್ಗಕ್ಕೆ ತಾನೂ ಬಲಿಯಾದ.[3] ಮತ್ತೆ ೧೦೨೬ರಲ್ಲಿ ಕೊಂಗಾಳ್ವರನ್ನು ಮನ್ನೆ ಎಂಬಲ್ಲಿ ನೃಪಕಾಮ ಸೋಲಿಸಿದ್ದಾನೆ.[4]ಆದರೆ ನೃಪಕಾಮನ ಕಾಲದಲ್ಲಿ ಹೊಯ್ಸಳರಿಗೂ ಚಂಗಾಳ್ವರಿಗೂ ಘರ್ಷಣೆಯಿರಲಿಲ್ಲ. ಹೊಳೆನರಸೀಪುರ ತಾಲ್ಲೂಕಿನ ಜೋಡಿಕುಪ್ಪೆ ಶಾಸನದಲ್ಲಿ ಚಂಗಾಳ್ವ-ಕೊಂಗಾಳ್ವರ ನಡುವೆ ನಡೆದ ಸಮರದಲ್ಲಿ ಕೊಂಗಾಳ್ವರಿಂದ ಚಂಗಾಳ್ವವೀರ ಮಡಿದಿರಬಹುದಾದ ವಿಷಯದ ಕುರಿತ ವಿವರಗಳು ಹಾಳಾಗಿವೆ. ಈ ಶಾಸನ ೧೧ನೇ ಶತಮಾನದ್ದಿರಬಹುದೆಂದು ಹೇಳಲಾಗಿದೆ.

ನೃಪಕಾಮನ ತುವಾಯ ಬಂದ ಹೊಯ್ಸಳ ವಿನಯಾದಿತ್ಯನ ಕಾಲದಲ್ಲಿ (೧೦೪೭-೧೦೯೮) ಚಂಗಾಳ್ವರ ನನ್ನಿಚಂಗಾಳ್ವ, ಮಾಚೆಯರಸ, ಮಾದೇವ, ಒಡೆಯಾದಿತ್ತಯ ಎಂಬ ಅರಸರು ಶಾಸನಗಳಲ್ಲಿ ಕಂಡು ಬರುತ್ತಾರೆ. ಚಿಕ್ಕಹನಸೋಗೆಯಲ್ಲಿ ಶಾಂತೀಶ್ವರ ಬಸದಿ (ಅಬ್ಬೆಯ ಜಿನಾಲಯ)ಯನ್ನು ಕಟ್ಟಿಸಿದ ನನ್ನಿ ಚಂಗಾಳ್ವನು ರಾಜೇಂದ್ರಚೋಳ ನನ್ನಿ ಚಂಗಾಳ್ವ ವೀರರಾಜೇಂದ್ರ ನನ್ನಿ ಚಂಗಾಳ್ವ ಎಂಬ ಹೆಸರುಗಳನ್ನು ಹೊತ್ತಿದ್ದ. ಇವನ ಕಾಲ ಸುಮಾರು ೧೦೩೪ ಮತ್ತು ೧೦೬೦ ರ ನಡುವೆ, ಚೋಳರ ಅಧೀನಪ್ರಭುವಾಗಿದ್ದ ಕಾರಣ ನನ್ನಿಚಂಗಾಳ್ವ ತನ್ನ ಹೆಸರಿನೊಂದಿಗೆ ಚೋಳ ಚಕ್ರವರ್ತಿಗಳ ಹೆಸರುಗಳನ್ನು ಸೇರಿಸಿಕೊಂಡಿದ್ದಾನೆ. ಇವನು ಬಲಯುತನಾದ ರಾಜ. ಇವನು ಬೆಟ್ಟದಪುರ ಕೋಟೆಯನ್ನು ಭದ್ರಪಡಿಸಿ ರಾಜ್ಯವನ್ನು ವಿಸ್ತರಿಸಿದ. ಪಿರಿಯಾಪಟ್ಟಣದ (ಸಿಂಗಪಟ್ಟಣ) ನಂಜುಂಡರಾಜನ ಮಗವೀರರಾಜನಿಗೆ ತನ್ನ ಮಗಳು ಮಲ್ಲಾಜಮ್ಮನನ್ನು ಕೊಟ್ಟು ವಿವಾಹ ಮಾಡಿ ನಂಜುಂಡನೊಡನೆ ಸ್ನೇಹ ಬೆಳೆಸಿದ.[5] ನನ್ನಿಚಂಗಾಳ್ವನ ಆಳ್ವಿಕೆಯ ತರುವಾಯ ೧೦೯೦ರ ಶಾಸನದಲ್ಲಿ ಮಾದೆಯರಸ ಅಥವಾ ಮಾಚೆಯರಸ ಚಂಗಾಳ್ವನ ಹೆಸರು, ೧೦೯೧ ರ ಶಾಸನದಲ್ಲಿ ಮಾದೇವ ಅಥವಾ ಮಾದೇವಣ್ಣ ಚಂಗಾಳ್ವರ ಹೆಸರು ಬರುತ್ವೆ. ಮಾಚೆಯರಸ ಹಾಗೂ ಮಾದೇವಣ್ಣ ಈ ಎರಡೂ ಹೆಸರುಗಳು ಒಬ್ಬನೇ ಚಂಗಾಳ್ವ ಅರಸನದಾಗಿರಬಹುದು. ಈ ಎರಡೂ ಶಾಸನಗಳ ವರುಷಗಳು ನಿಕಟ ಸಾಮೀಪ್ಯ ಹೊಂದಿರುವುದು ಈ ವಿಷಯವನ್ನೇ ಸಮರ್ಥಿಸುತ್ತವೆ. ಮೇಲೆ ಹೇಳಲಾದ ೧೦೯೦ ರ ಅರಕಲಗೂಡು ತಾಲ್ಲೂಕು ಲಕ್ಕೂರು ಶಾಸನದಲ್ಲಿ ಕುಪ್ಪಿನಾಡಿನ ಮಾವನೂರು ಗ್ರಾಮದ ಮುಂಡಗೌಡ ಕುಲದ ಚೋಳಗಾವುಂಡನ ಮಗ ಮಾರಗಾವುಂಡ ನಿಗಳಂಕಮಲ್ಲ ಮಾಚೆಯರಸ ಚಂಗಾಳ್ವನ ಸಮ್ಮುಖದಲ್ಲಿ ಚಂಗಾಳೇಶ್ವರ ದೇವರನ್ನು ನೊಕ್ಕಿಯೂರಿನಲ್ಲಿ ಪ್ರತಿಷ್ಠಾಪಿಸಿದ ವಿವರಗಳಿವೆ.[6] ೧೦೯೧ರ ಶಾಸನದ ಪ್ರಕಾರ ಮರಿಯಪೆರ್ಗಡೆ ಹಿಳ್ದುವಯ್ಯನೊಂದಿಗೆ ಅವನು ಭೂಮಿಯನ್ನು ದಾನವಾಗಿ ನೀಡಿದ್ದಾನೆ.[7]ಕ್ರಿ.ಶ. ೧೦೭೯ ರ ಸಾಲಿಗ್ರಾಮದ ಶಾಸನದ ಪ್ರಕಾರ ರಾಜೇಂದ್ರಚೋಳ ಕೊಂಗಾಳ್ವನು ಆಳುತ್ತಿದ್ದ ಕಾಲದಲ್ಲಿ (೧೦೨೫-೧೧೦೦) ಚಂಗಾಳ್ವ ರಾಜನೊಬ್ಬ ಸಾಲಿಗ್ರಾಮದ ಮೇಲೆ ಧಾಳಿ ನಡೆಸಿದಾಗ ತ್ರ್‌ಐಲೋಕ್ಯಸೆಟ್ಟಿ ಮತ್ತು ಬೆಳುತುಸೆಟ್ಟಿ ಎಂಬುವರು ಚಂಗಾಳ್ವನನ್ನು ಪ್ರತಿಭಟಿಸಿ ಯುದ್ಧ ಮಾಡಿ ಸತ್ತರು. ಈ ಚಂಗಾಳ್ವ ಬಹುಶಃ ಮಾಚೆಯರಸನಿರಬಹುದು.[8]

೧೦೯೭ರ ಸಂಗರಶೆಟ್ಟಿಹಳ್ಳಿ ಶಾಸನವು ಮಹಾಮಂಡಲೇಶ್ವರ ಒಡೆಯಾದಿತ್ಯ ಚಂಗಾಳ್ವನ ಅಳ್ವಿಕೆಯನ್ನು ಸೂಚಿಸುವುದಲ್ಲದೆ ಅವನು ಕುಲೋತ್ತುಂಗ ಚೋಳ ಎಂಬ ಬಿರುದನ್ನು ಹೊತ್ತಿದ್ದುದನ್ನೂ ತಿಳಿಸುತ್ತದೆ. ಈ ಒಡೆಯಾದಿತ್ಯ ಚಂಗಾಳ್ವನು ಗಣಪತಿ ದೇವರನ್ನು ಚಂಗಾಳ್ವ ಶೆಟ್ಟಿಹಳ್ಳಿ (ಈಗಿನ ಸಂಗರಸೆಟ್ಟಿಹಳ್ಳಿ)ಯಲ್ಲಿ ಪ್ರತಿಷ್ಠಾಪಿಸಿದ್ದಾನೆ[9] ಈ ಚಂಗಾಳ್ವರಸನು ಒಂದನೇ ಕುಲೋತ್ತುಂಗ ಚೋಳನ (೧೦೭೦-೧೧೨೨) ಸಾಮಂತನಾಗಿದ್ದ. ಇದೇ ಅವಧಿಯದಿರಬಹುದಾದ ಅರಕಲಗೂಡು ತಾಲ್ಲೂಕಿನ ಸುಳುಗೋಡು ಸೋಮವಾರದ ಶಾಸನವು ಯರಗನೃಪನ ಮಗ ಚಂಗಾಳ್ವ ಮತ್ಸ್ಯಭೂಪಾಲಕ ಎಂಬುವನು ತನ್ನ ಅರಸಿ ಏಷಬ್ಬರಸಿಯ ಪರೋಕ್ಷ ವಿನಯ ನಿಮಿತ್ತ ಚೈತ್ಯಗೃಹವನ್ನು ಮಾಡಿಸಿದ ವಿವರಗಳನ್ನು ಹೇಳುತ್ತದೆ.[10]

ಹೊಯ್ಸಳ ಒಂದನೇ ಬಲ್ಲಾಳನು (೧೧೦೩-೧೧೦೮) ಚಾಲುಕ್ಯ ಆರನೇ ವಿಕ್ರಮಾದಿತ್ಯನ ಮಂಡಲಾಧಿಪತಿಯಾಗಿದ್ದ ಅವಧಿಯಲ್ಲಿ ಇನ್ನೂ ಸ್ವತಂತ್ರ ರಾಜನಾಗಿರಲಿಲ್ಲ. ಹೊಯ್ಸಳ ರಾಜ್ಯವನ್ನು ವಿಸ್ತರಿಸುವ ಯೋಜನೆಯಲ್ಲಿ ಅವನು ಗಂಗವಾಡಿಯನ್ನು ಹಾಗೂ ಕೊಡಗಿನ ಪ್ರದೇಶಗಳಲ್ಲಿದ್ದ ಮಲೆಪರ ಪಾಳೆಯಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಈ ರಾಜ್ಯ ವಿಸ್ತರಣೆಯ ನೀತಿಗನುಸಾರವಾಗಿ ಅವನು ಚಂಗಾಳ್ವ ದೇವನ ಮೇಲೆ ದಂಡೆತ್ತಿ ಹೋದ.[11]ಈ ದಂಡಯಾತ್ರೆಯ ಕಾಲದಲ್ಲಿ ಅವನು ಗುಂಡೆತ್ತರಣ್ಯದ ಸೋಮೇಶ್ವರ ದೇವಾಲಯಕ್ಕೆ ದತ್ತಿಯನ್ನು ನೀಡಿದ.[12]

ಒಂದನೇ ಬಲ್ಲಾಳನ ತರುವಾಯ ಹೊಯ್ಸಳ ರಾಜ್ಯವನ್ನಾಳಿದ ಬಲ್ಲಾಳನ ಸಹೋದರ ವಿಷ್ಣುವರ್ಧನನು (೧೧೦-೧೧೪೨) ಚೋಳರಿಂದ ಗಂಡವಾಡಿಯನ್ನು ವಶಪಡಿಸಿಕೊಂಡ ಮೇಲೆ ಮಲೆಪರನ್ನು ಅಡಗಿಸುವ ಯೋಜನೆಯಲ್ಲಿ ಚಂಗಾಳ್ವ ಮತ್ತು ಕೊಂಗಾಳ್ವರನ್ನು ನಿಯಂತ್ರಿಸಲು ಮುಂದಾದ. ಕೊಂಗಾಳ್ವರು ಅವನ ಪ್ರಭುತ್ವವನ್ನು ಸ್ವೀಕರಿಸಿದರು. ವಿಷ್ಣುವರ್ಧನನು ತ್ರಿಭುವನಮಲ್ಲ ಕೊಂಗಾಳ್ವನ (ಸು.೧೧೦-೧೧೭೦) ಮಗಳಾದ ಚಂದಲಾ ದೇವಿಯನ್ನು ವಿವಾಹವಾದನು.[13]ಆದರೆ ಅವನು ಅಂಥ ವಿವಾಹಸಂಬಂಧವನ್ನು ಚಂಗಾಳ್ವರೊಡನೆ ಮಾಡಿಕೊಂಡಂತೆ ಕಂಡುಬರುವುದಿಲ್ಲ. ಚಂಗಾಳ್ವರು ಪದೇ ಪದೇ ಹೊಯ್ಸಳರ ಆಕ್ರಮಣವನ್ನು ತಡೆಯಬೇಕಾಯ್ತು. ಮಲೆಪರನ್ನೆಲ್ಲಾ ಕೂಡಿಸಿ ತನ್ನ ಮೇಲೆ ಬಿದ್ದ ಚಂಗಾಳ್ವರನ್ನು ಅಡಗಿಸಲು ವಿಷ್ಣುವರ್ಧನನು ಮುಂದಾದ. ಚಂಗಾಳ್ವರಿಗೂ ಹೊಯ್ಸಳರಿಗೂ ನಡುವೆ ಕ್ರೋಧನ ಸಂವತ್ಸರದಲ್ಲಿ (೧೧೨೪) ಘೋರ ಸಮರವಾಯ್ತು.[14] ವಿಷ್ಣವರ್ಧನನ ವಿರುದ್ಧ ಸೆಣಸಿದ ಈ ಚಂಗಾಳ್ವನೃಪನ ಹೆಸರೇನೆಂಬುದನ್ನು ಶಾಸನಗಳಲ್ಲಿ ನಮೂದಿಸಲಿಲ್ಲ. ಜೋಗನಹಳ್ಳಿ ಶಾಸನವು (೧೧೩೦-೩೧) ಚಂಗಾಳ್ವನೊಬ್ಬನ ಆಳ್ವಿಕೆಯನ್ನು ಸೂಚಿಸುತ್ತದೆ.[15]ಇವನ ಹೆಸರೂ ಸಹ ತಿಳಿದುಬರುವುದಿಲ್ಲ. ೧೧೨೪ ಯುದ್ಧದ ತರುವಾಯ ಚಂಗಾಳ್ವರ ಬಲ ಕುಗ್ಗಿತು. ಅಣತಿಗ್ರಾಮದಲ್ಲಿನ ಎರಡು ಶಾಸನಗಳ ಪ್ರಕಾರ ಚಂಗಾಳ್ವರಸನ ಸೇವೆಯಲ್ಲಿದ್ದ ಪುರಾಣದ ಜನಾರ್ಧನ ಭಟ್ಟನ ಬೇಡಿಕೆಯಂತೆ ಆ ಗ್ರಾಮದ ನಾರಾಯಣಸ್ವಾಮಿ ದೇವಾಲಯಕ್ಕೆ ವಿಷ್ಣುವರ್ಧನನು ದತ್ತಿಯನ್ನು ನೀಡಿದ್ದಾನೆ.[16] ಚಂಗಾಳ್ವರ ರಾಜ್ಯ ಚನ್ನರಾಯಪಟ್ಟಣದವರೆಗೂ ವ್ಯಾಪಿಸಿತ್ತೆಂಬುದು ಈ ಶಾಸನದಿಂದ ತಿಳಿದುಬರುತ್ತದೆ.

ಹೊಯ್ಸಳ ಒಂದನೇ ನರಸಿಂಹನ (೧೧೪-೧೧೭೩) ಕಾಲದಲ್ಲಿ ಸಹ ಚಂಗಾಳ್ವರು ತಮ್ಮ ರಾಜ್ಯ ಸಂರಕ್ಷಣೆಗಾಗಿ ಹೋರಾಡಿದ್ದಾರೆ. ನರಸಿಂಹನು ೧೧೪೫ರಲ್ಲಿ ಚಂಗಾಳ್ವನ ಮೇಲೆ ದಂಡೆತ್ತಿ ಹೋಗಿ ರಣರಂಗದಲ್ಲಿ ಅವನನ್ನು ಕೊಂದು ಅವನ ಗಜ, ಅಶ್ವ, ಹೊನ್ನು, ಆಭರಣಾದಿಗಳನ್ನು ವಶಪಡಿಸಿಕೊಂಡ ವಿಚಾರವನ್ನು ನಾಗಮಂಗಲ ತಾಲ್ಲೂಕಿನ ಯಲ್ಲಾದಹಳ್ಳಿ ಶಾಸನ ತಿಳಿಸುತ್ತದೆ.[17] ಬಹುಶಃ ಇದೇ ಅವಧಿಯದಿರಬಹುದಾದ ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿ ಶಾಸನವು ಹೊಯ್ಸಳ ಸಣ್ನೆ ನಾಡಾಳ ಚಂಗಿಕುಳದ ಸಾವಂತ ಭರತೆನಾಯಕನ ಶ್ರೀ ಶಾಂತೀಶ್ವರ ದೇವರ ಪೂಜೆಗೆ ಹಿರಿಯಕೆರೆಯ ದಕ್ಷಿಣ ಭಾಗದ ತೂಬಿನ ಮೊದಲೇರಿಯಲ್ಲಿ ಸಂಕ್ರಾಂತಿಯಂದು ಖಂಡುಗ ಗದ್ದೆಯನ್ನು ಧಾರಾಪೂರ್ವಕವಾಗಿ ಬಿಟ್ಟ ದತ್ತಿಯ ವಿವರಗಳನ್ನು ಹೇಳುತ್ತದೆ.[18] ಅರಸೀಕೆರೆ ತಾಲ್ಲೂಕಿನ ಬೆಂಡೆಕೆರೆ ಶಾಸನದಲ್ಲಿ ಸಾವಂತನಹಳ್ಳಿಯ ಮಸಣಗವುಂಡನ ಮದವಣಿಗೆ ಚಂಗವ್ವ ಎಂದು ಹೇಳಿದೆ. ಈ ಚಂಗವ್ವ ಚಂಗಾಳ್ವರ ಹೆಣ್ಣುಮಗಳೆ? ಎಂಬುದಕ್ಕೆ ಯಾವ ವಿವರಗಳೂ ಈ ಶಾಸನದಲ್ಲಿಲ್ಲ.[19] ಹೀಗೆ ಚಂಗಾಳ್ವರು ಹೊಯ್ಸಳ ಪೂರ್ವದಲ್ಲಿ ದಕ್ಷಿಣ ಕರ್ನಾಟಕದ ಬಹುಭಾಗಗಳಲ್ಲಿ ಹರಡಿಕೊಂಡಿದ್ದಂತೆ ಕಾಣುತ್ತದೆ.

೧೧೪೫ರ ಅನಂತರ ಐದು ವರ್ಷಗಳ ತರುವಾಯ ಚಂಗಾಳ್ವರು ಹೊಯ್ಸಳ ನಾಡನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.[20] ನರಸಿಂಹನ ದಂಡನಾಯಕ ಬೋಕಣ (ಬೋಕಿಮಯ್ಯ) ೧೧೫೫ರಲ್ಲಿ ಕೊಂಗ, ಚಂಗ, ಚೋಳ, ಕೇರಳನಾಡುಗಳ ಅರಸುಗಳನ್ನು ಅಡಗಿಸಿದನೆಂದು ತಿಳಿದು ಬರುತ್ತದೆ.[21]ಮತ್ತು ಹೊಯ್ಸಳ ನರಸಿಂಹನು ೧೧೬೯ರಲ್ಲಿ ಚಂಗಾಳ್ವರ ಮೇಲೆ ದಂಡೆತ್ತಿ ಹೋದಾಗ ಅವನ ದಳಪತಿ ಗೋವಿದೇವನು ಪರಾಕ್ರಮದಿಂದ ಯುದ್ಧವೆಸಗಿ ಚಂಗಾಳ್ವನು ಏರಿದ್ದ ಆನೆಯನ್ನು ತನ್ನ ಭರ್ಚಿಯಿಂದ ಗಾಯಗೊಳಿಸಿದ.[22] ಚಂಗಾಳ್ವನನ್ನು ಸೆರೆಹಿಡಿದು ಸಂಕೋಲೆಗಳಿಂದ ಬಂಧಿಸಿದ ವಿಷಯ ಸೊರಬದ ಶಾಸನವೊಂದರಲ್ಲಿದೆ.[23] ಈ ಯುದ್ಧಗಳಲ್ಲಿ ಸೋತು ಚಂಗಾಳ್ವರು ಬಲಹೀನರಾಗಿದ್ದ ಸಮಯದಲ್ಲಿ ಮುಂದೆ ಅರಸನಾಗಿ ಬಂದ ಮಹದೇವ ಚಂಗಾಳ್ವನು ರಾಜಧಾನಿಯನ್ನು ಹುಣಸೂರು ನಾಡಿನ ಬೆಟ್ಟದಪುರದಿಂದ ಕೊಡಗಿನ ಕಿಗ್ಗಟ್ಟ್ನಾಡಿನ ಪಾಲ್ಪರೆಗೆ ವರ್ಗಾಯಿಸಿದ. ಹೊಯ್ಸಳ ಒಂದನೇ ನರಸಿಂಗನು ಚಂಗಾಳ್ವರ ವಿರುದ್ಧ ಯುದ್ಧ ಮಾಡಿದರೂ ಸಹ ಚಂಗನಾಡಿನವರೊಡನೆ ವೈವಾಹಿಕ ಸಂಬಂಧವನ್ನು ಮಾಡಿಕೊಂಡಿರುವಂತೆ ಕಾಣುತ್ತದೆ. ಅವರ ರಾಣಿ ಚಂಗಲದೇವಿ ಚಂಗಾಳ್ವ ಕುಲದ ರಾಜಕುಮಾರಿಯಾಗಿರಬಹುದು.[24]

ನರಸಿಂಹನ ತರುವಾಯ ಬಂದ ಹೊಯ್ಸಳ ಇಮ್ಮಡಿ ಬಲ್ಲಾಳನು (೨ನೇ ಬಲ್ಲಾಳ : ೧೧೭೩-೧೨೨೦) ಪರಮ ಪರಾಕ್ಷಮಿ ಹಾಗೂ ಮಹಾಸಾಹಸಿ. ಅವನು ೧೧೭೨-೭೩ ರ ನಡುವೆ ಸಿಂಹಾಸನಕ್ಕಾಗಿ ತಂದೆ ನರಸಿಂಹನ ಮೇಲೆ ದಂಗೆಯೆದ್ದು ಮಲೆನಾಡಿನ ಕಡೆ ಹೋದಾಗ, ಅಯ್ಯಾವೊಳೆಯಿಂದ ವಲಸೆ ಬಂದು ಕೊಡಗು ನಾಡಿನಲ್ಲಿ ನೆಲೆಸಿದ್ದ ಬಳೆಗಾರ ಕುಲದ ತಂತ್ರಪಾಲ ಹೆಮ್ಮಡಿಯಣ್ಣನು ಬಲ್ಲಾಳನ ಪರನಿಂತು ಚಂಗಾಳ್ವ ಕೊಂಗಾಳ್ವಾದಿ ಮಲೆಪರನ್ನು ಕೂಡಿಸಿಕೊಂಡು ಬಲ್ಲಾಳನಿಗೆ ಸಿಂಹಾಸನವನ್ನು ಸಾಧಿಸಲು ನೆರವು ನಿಂತು ತರುವಾಯ ಬಲ್ಲಾಳನ ಮಂತ್ರಿಯಾದ. ಶಾಸನದ ಮಾತುಗಳಲ್ಲಿ “ಹೆಮ್ಮಡಿಯಣ್ಣನು ಸಮಸ್ತ ಮಲೆಯ ಪ್ರಜೆಗಾವುಂಡಗಳಂ ಕೊಂಗಾಳ್ವ ಚಂಗಾಳ್ವಾದಿಯಾದ ಮಲೆಯ ಮಾಂಡಲಿಕರುಮಂ ಕಾಣಿಸಿ ತನ್ನಾಳ್ದಂಗೆ ಸಾಮ್ರಾಜ್ಯ ಪಟ್ಟಮಂ ಕಟ್ಟಿಸಿ ಪ್ರಧಾನ ಪದವಿಯಂ ಪಡೆದಂ”[25] ಆ ಸಮಯದಲ್ಲಿ ಬಲ್ಲಾಳನಿಗೆ ವಿಶಿಷ್ಟವಾಗಿ ನೆರವು ನೀಡಿದವರು ಚಂಗಾಳ್ವರು ಮತ್ತು ಕೊಂಗಾಳ್ವರು.

ರಾಜ್ಯವನ್ನು ಸಾಧಿಸಿಕೊಳ್ಳಲು ತನಗೆ ಚಂಗಾಳ್ವರು ನೆರವು ನೀಡಿದರೂ ಇಮ್ಮಡಿ ಬಲ್ಲಾಳನಿಗೆ ಅವರ ಅಟ್ಟಹಾಸವನ್ನು ಸಹಿಸಿಕೊಳ್ಳಲಾಗಲಿಲ್ಲ. ಚಂಗಾಳ್ವರು ಹೊಯ್ಸಳರ ದ್ವಾರಾವತೀ ಪುರವರಾಧೀಶ್ವರ, ಭುಜಬಲ, ಗಂಡಭೇರುಂಡ ಮುಂತಾದ ಬಿರುದುಗಳನ್ನು ವಹಿಸಿಕೊಂಡು ಮೆರೆಯುತ್ತಿದ್ದುದೇ ಬಲ್ಲಾಳನು ಚಂಗಾಳ್ವರ ಮೇಲೆ ಸೈನ್ಯವೆತ್ತಲು ಕಾರಣ. ಕ್ರಿ.ಶ. ೧೧೭೨ ರ ಹುಣಸೂರು ಶಾಸನವು ಬಲ್ಲಾಳನ ಈ ದಂಡಯಾತ್ರೆಯ ವಿವರಗಳನ್ನು ನೀಡುತ್ತದೆ. ಬಲ್ಲಾಳನ ದಂಡನಾಯಕ ಬೆಟ್ಟದರಸನು ಪಾಲ್ಪರೆ ಕೋಟೆಗೆ ಮುತ್ತಿಗೆ ಹಾಕಿ, ಚಂಗಾಳ್ವ ಅರಸ ಮಹದೇವನನ್ನು ಸಮರದಲ್ಲಿ ಕೊಂದು, ಪಾಲ್ಪರೆಯನ್ನು ವಶಪಡಿಸಿಕೊಂಡು ಅಲ್ಲಿಯೇ ಬೀಡುಬಿಟ್ಟು ಅಲ್ಲಿಯ ಪಟ್ಟಣವನ್ನು ವಿಸ್ತರಿಸಿದನು. ಮಹದೇವ ಚಂಗಾಳ್ವನ ತರುವಾಯ ಪೆಮ್ಮವೀರ ಚಂಗಾಳ್ವನು ಪಾಲ್ಪರೆಯನ್ನು ವಶಪಡಿಸಿಕೊಳ್ಳಲು ಸರ್ವಪ್ರಯತ್ನ ಮಾಡಿದನು. ಕುಲೋತ್ತುಂಗ ಚೋಳ ಚಂಗಾಳ್ವ ಪೆಮ್ಮವೀರರಸ ಎಂಬುದಾಗಿ ತನ್ನನ್ನು ಕರೆದುಕೊಂಡಿರುವ ಇವನು ಕೊಡುಗುನಾಡಿನ ಎಲ್ಲಾ ಕೊಡವರನ್ನೂ ಸಂಘಟಿಸಿಕೊಂಡು ಅವರ ನೆರವಿನಿಂದ ಬೆಟ್ಟದರಸನನ್ನು ಪಾಲ್ಪರೆಯಿಂದ ಓಡಿಸಲು ಮುಂದಾದ. ಬೆಟ್ಟದರಸನಿಗೂ ಪೆಮ್ಮವೀರ ಚಂಗಾಳ್ವನಿಗೂ ನಡೆದ ಈ ಪಾಲ್ಪರೆಯ ಯುದ್ಧದಲ್ಲಿ ಮೊದಲು ಕೊಡವರಿಗೆ ಜಯಲಭಿಸುವಂತೆ ಕಂಡರೂ ಕೊನೆಯಲ್ಲಿ ಹೊಯ್ಸಳವೀರ ಮಾದಯ್ಯನಾಯಕನ ಸಾಹಸದಿಂದ ಬೆಟ್ಟದರಸನಿಗೆ ಜಯವಾಯಿತು. ಆದರೆ ಯುದ್ಧದಲ್ಲಿ ಮಾದಯ್ಯನಾಯಕ ಮಡಿದ. ಚಂಗಾಳ್ವರಿಗೆ ಕೊಡವರ ನಿಕಟ ಸಂಪರ್ಕ ಇಲ್ಲಿಂದ ಪ್ರಾರಂಭವಾಗುವುದಲ್ಲದೆ ಕೊಡವರ ಹೆಸರು ನಿರ್ದಿಷ್ಡವಾಗಿ ಮೊದಲ ಬಾರಿಗೆ ಕಾಣುವುದು ಪಾಲ್ಪರೆ ಯುದ್ಧಕ್ಕೆ ಸಂಬಂಧಪಟ್ಟ ಹುಣಸೂರು ಶಾಸನದಲ್ಲಿ.[26] ಈ ಯುದ್ಧದಲ್ಲಿ ಹೊಯ್ಸಳರ ಕಡೆಯ ಮಾಚದಂಡನಾಯಕನು ಚಂಗಾಳ್ವನು ಕುಳಿತಿದ್ದ ಆನೆಯ ಮೇಲೆ ತನ್ನ ಅಶ್ವವನ್ನು ನುಗ್ಗಿಸಿ ಚಂಗಾಳ್ವನ ಛತ್ರವನ್ನು ಕಸಿದುಕೊಂಡನೆಂದು ಹೇಳಲಾಗಿದೆ.[27] ಪಾಲ್ಪರೆ ಸೋಲಿನ ನಂತರ ಕುಲೋತ್ತುಂಗ ಚೋಳ ಚಂಗಾಳ್ವನೆಂದು ಕರೆದುಕೊಳ್ಳುವ ಪೆಮ್ಮವೀರರಸನ ಹೆಸರು ಕ್ರಿ.ಶ. ೧೧೮೬-೮೭ ರ ಶಾಸನದಲ್ಲಿ ಸಿಕ್ಕುತ್ತದೆ.[28] ಆ ತರುವಾಯ ಅವನ ಬಗ್ಗೆ ಯಾವ ಸುದ್ದಿಯೂ ತಿಳಿದುಬರುವುದಿಲ್ಲ. ಅವನ ಬಳಿಕ ಸುಮಾರು ಎಪ್ಪತ್ತು ವರ್ಷಗಳ ಕಾಲ ಚಂಗಾಳ್ವರ ಇತಿಹಾಸದ ಮೇಲೆ ಕತ್ತಲು ಕವಿದಿದೆ.

ಹೊಯ್ಸಳ ಸೋಮೇಶ್ವರನ ಕಾಲದಲ್ಲಿ (೧೨೩೫-೧೨೬೦) ಚಂಗಾಳ್ವ ಸೋಮದೇವ ಮತ್ತು ಬೊಪ್ಪದೇವ ಎಂಬಿಬ್ಬರು ಅರಸರು ಒಟ್ಟಿಗೆ ಶ್ರೀರಂಗಪಟ್ಟಣವನ್ನು ಆಳಿದರೆಂದು ತಿಳಿದು ಬರುತ್ತದೆ. ಈ ಸಂಬಂಧದಲ್ಲಿ ನಾವು ಆಗಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಬಹುದು. ಆಗ ಹೊಯ್ಸಳರು ಕರ್ನಾಟಕ ಭಾಗದಲ್ಲಿ ಬಲಯುತವಾದ ರಾಜ್ಯವನ್ನು ಹಳೇಬೀಡಿನಿಂದ ಆಳುತ್ತಿದ್ದರು. ಶ್ರೀರಂಗಪಟ್ಟಣದಲ್ಲಿ ಮೈಸೂರು ಅರಸರು ರಾಜ್ಯಸ್ಥಾಪನೆಯನ್ನಿನ್ನೂ ಮಾಡಿರಲಿಲ್ಲ. ಅಲ್ಲದೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯೂ ಆಗಿರಲಿಲ್ಲ. ಹೊಯ್ಸಳ ಸೋಮೇಶ್ವರನು ಬಲಹೀನವಾಗಿದ್ದ ಚೋಳರಾಜ್ಯದ ಭಾಗವನ್ನು ಗೆದ್ದುಕೊಂಡು ಸುಮಾರು ೧೨೩೯ರಲ್ಲಿ ತಮಿಳುನಾಡಿನ ತಿರುಚನಾಪಲ್ಲಿ ಜಿಲ್ಲೆಯಲ್ಲಿ ಶ್ರೀರಂಗ ಕ್ಷೇತ್ರಕ್ಕೆ ಉತ್ತರದಲ್ಲಿರುವ ಕಣ್ಣಾನೂರು ಅಥವಾ ವಿಕ್ರಮಪುರವನ್ನು ನೆಲೆವೀಡನ್ನಾಗಿ ಮಾಡಿಕೊಂಡಿದ್ದ.[29] ಸೋಮೇಶ್ವರನು ಕಣ್ಣಾನೂರಿನಲ್ಲಿ ಬೀಡುಬಿಟ್ಟಿದ್ದ ಕಾಲದಲ್ಲಿ ತನ್ನ ಸಾಮಂತರಾಗಿದ್ದ ಈ ಚಂಗಾಳ್ವರಸರಿಗೆ ಶ್ರೀರಂಗಪಟ್ಟಣದ ಆಡಳಿತವನ್ನು ಒಪ್ಪಿಸಿದ್ದ. ಇವರು ಚೋಳರಿಗೂ, ಕೇರಳರಿಗೂ, ಕದಂಬರಿಗೂ ಸಿಂಹಪ್ರಾಯರಾಗಿದ್ದರೆಂದು ಹೇಳಲಾಗಿದೆ. ರಾಮನಾಥಪುರದ ದೇವಾಲಯದ ಕೈಲಾಸರೆಂಬ ಅರ್ಚಕರು ಶ್ರೀರಂಗಪಟ್ಟಣದಲ್ಲಿದ್ದ ಈ ಚಂಗಾಳ್ವ ಅರಸರಲ್ಲಿಗೆ ಹೋಗಿ ದೇವಸ್ಥಾನದ ಎಪ್ಪತ್ತೆರಡು ಎಮ್ಮೆಗಳ ಹಾಲಿನಿಂದ ಬರುವ ಇನ್ನೂರು ಗದ್ಯಾಣಗಳು ದೇವರ ಸೇವೆಗೆ ಸಾಲದೆಂದು ಹೇಳಿಕೊಂಡಾಗ, ಅವರು ದೇವಸ್ಥಾನದ ಪರಿಸ್ಥಿತಿಯನ್ನು ಕೇಳಿ ರಾಮನಾಥಪುರಕ್ಕೆ ೧೨೪೫ರಲ್ಲಿ ಹೋಗಿ ದೇವಸ್ಥಾನವನ್ನು ದುರಸ್ತು ಮಾಡಿಸಿ ಮಾವನೂರನ್ನು ಉಂಬಳಿಯಾಗಿ ನೀಡಿದರು. ಚಂಗಾಳ್ವರ ನೆರವಿನಿಂದ ಉತ್ತೇಜಿತರಾದ ಅರ್ಚಕರು ಏಳು ವರ್ಷಗಳ ತರುವಾಯ ಅಂದರೆ ೧೨೫೨ರಲ್ಲಿ ಹೊಯ್ಸಳ ಸಾರ್ವಭೌಮ ಸೋಮೇಶ್ವರನಲ್ಲಿಗೆ ಹೋಗಿ ಚಂಗಾಳ್ವರು ನೀಡಿದ್ದ ಉಂಬಳಿ ಗ್ರಾಮವನ್ನು ದೇವಸ್ಥಾನಕ್ಕೆ ಸ್ಥಿರಗೊಳಿಸಿಕೊಂಡರೆಂದು ಹೇಳಲಾಗಿದೆ. ಆ ಸಂದರ್ಭದಲ್ಲಿ ಹೊಯ್ಸಳ ಸೋಮೇಶ್ವರನು ಚಂಗಾಳ್ವ ಬೊಪ್ಪದೇವ, ಸೋಮದೇವ, ಅವರ ರಾಯಸಕೂಸುಗಳು (ರಾಜಕುಮಾರರು) ಹಾಗೂ ಪರಿವಾರದೊಡನೆ ರಾಮನಾಥಪುರಕ್ಕೆ ಬಂದು ಮಾವನೂರಿನಲ್ಲಿ ನಂದೀ ಕಂಬವನ್ನು ಪ್ರತಿಷ್ಠಾಪಿಸಿ ರಾಮನಾಥ ದೇವಾಲಯದಲ್ಲಿ ಆ ಬಗ್ಗೆ ಶಾಸನವನ್ನು ನಡೆಸಿದ್ದಾನೆ.[30] ಸೋಮದೇವ ಮತ್ತು ಬೊಪ್ಪದೇವ ಚಂಗಾಳ್ವರ ತರುವಾಯ ಸುಮಾರು ಮುನ್ನೂರು ವರ್ಷಗಳ ತನಕ ಚಂಗಾಳ್ವ ಅರಸರ ಹಾಗೂ ಅವರ ಚಟುವಟಿಕೆಗಳ ಬಗ್ಗೆ ಶಾಸನಗಳಲ್ಲಿ ಏನೊಂದು ಮಾಹಿತಿಯೂ ಸಿಗುವುದಿಲ್ಲ. ಆದರೆ ೧೫ನೆಯ ಶತಮಾನದ್ದಿರಬಹುದಾದ ಮಿರ್ಲೆಯ ಶಾಸನವೊಂದರಲ್ಲಿ ತೆಂಗಾಳ್ವ ದೇವನು ಚನ್ನಿಗರಾಯ ದೇವಾಲಯಕ್ಕೆ ದತ್ತಿಕೊಟ್ಟ ಸಂಗತಿ ಇದೆ.[31] ಇಲ್ಲಿ ಚಂಗಾಳ್ವಕ್ಕೆ ಬದಲಿ ತೆಂಗಾಳ್ವ ಎಂದಿದ್ದು, ಇದು ಲಿಪಿಕಾರನ ದೋಷದಿಂದಾದುದಿರಬಹುದೆಂದು ಕಾಣುತ್ತದೆ. ಈ ಉಲ್ಲೇಖದ ಅನಂತರದಲ್ಲಿ, ಅಂದರೆ-೧೬ನೇ ಶತಮಾನದ ಪ್ರಾರಂಭದಲ್ಲಿ ಚಂಗಾಳ್ವರು ಮತ್ತೆ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಬಿ.ಎಲ್.ರೈಸ್ ತಿಳಿಸುತ್ತಾರೆ.[32] ಆದರೆ ಬಿ.ಆರ್.ಗೋಪಾಲ್ ಅವರು ಎಪಿಗ್ರಾಫಿಯ ಕರ್ನಾಟಕದ ಪರಿಷ್ಕೃತ ಆವೃತ್ತಿಯ ಕೊಡಗು ಜಿಲ್ಲೆ ಸಂಪುಟಕ್ಕೆ ಬರೆದಿರುವ ಪೀಠಿಕೆಯಲ್ಲಿ ಹೀಗೆ ಹೇಳಿದ್ದಾರೆ.

“೧೩ನೆಯ ಶತಮಾನದ ಶಾಸನಗಳಲ್ಲಿ ಈ ವಂಶದ ಮುನಿವರಾದಿತ್ಯ, ಮಲ್ಲಿದೇವ ಮತ್ತು ಹರಿಹರದೇವ ಎಂಬ ಮೂವರು ಮಾಂಡಲಿಕರ ಹೆಸರುಗಳಿವೆ. ೩೯ನೆಯ ನಂಬರಿನ ಶಾಸನ ಸಹ ಒಡೆದು ಹೋಗಿವೆ. ಇದರಲ್ಲಿ ಮುನಿವರಾದಿತ್ಯ ಎಂಬ ಹೆಸರು ಎರಡು ಸಲ ಉಕ್ತವಾಗಿದೆ. ಒಮ್ಮೆ ಅದು ‘ಚಂಗಾಳುವ’ ಎಂಬ ಹೆಸರಿನೊಡನೆ ಕೂಡಿಕೊಂಡಿದೆ. ಈ ಮುನಿವರಾದಿತ್ಯನು ಚಂಗಾಳ್ವನಾಗಿರಬಹುದೆಂದು ಸಂದೇಹಾಸ್ಪದವಾಗಿಯೇ ಊಹಿಸಬಹುದು. ೫೦ ಮತ್ತು ೫೧ನೆಯ ಶಾಸನಗಳೂ ಅಷ್ಟೆ. ಇವರೆಡರಲ್ಲಿಯೂ ಮಲ್ಲಿದೇವ ಮತ್ತು ಹರಿಹರ ದೇವರು ನಮೂದಿಸಲ್ಪಟ್ಟಿದ್ದಾರೆ. ಇವರು ಚಂಗಾಳ್ವರೆಂದು ಅಭಿಪ್ರಾಯ ಪಡಲಾಗಿದೆ. ಮಲ್ಲಿದೇವನನ್ನು ೧೨೮೦ನೆಯ ನಾರಣಪುರದ ಶಾಸನದಲ್ಲಿ (E.C.V.BI.೮೯) ಮಹಾ ಮಂಡಲೇಶ್ವರ ಕುಲೋತ್ತುಂಗ ಚೋಲ ಶ್ರೀ ವೀರ ಚಂಗಾಳ್ವನೆಂದು ಕರೆಯಲಾಗಿದೆ. ಈ ಸಂಪುಟದ ಶಾಸನಗಳಲ್ಲಿ ಮಲ್ಲಿದೇವ ಮತ್ತು ಹರಿಹರ ದೇವರಿಬ್ಬರೂ ಜೊತೆಯಾಗಿಯೇ ಇದ್ದಾರೆ. ೧೨೯೬ನೆಯ ವರ್ಷದ ಶಾಸನದಲ್ಲಿ (ನಂ೮೦) ಮಾತ್ರ ಹರಿಹರ ದೇವನೊಬ್ಬನೇ ಆಳುತ್ತಿದ್ದುದಾಗಿ ಹೇಳಿದೆ. ಇದರಿಂದ ಈತನು ಮಲ್ಲಿದೇವನ ಮಗನಾಗಿದ್ದು ತಂದೆಯ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಅವನೊಡನೆ ತಾನೂ ರಾಜ್ಯವಾಳತೊಡಗಿದಂತೆ ತೋರುತ್ತದೆ. ೮೦ನೆಯ ಈ ಶಾಸನದಲ್ಲಿ ಇವನನ್ನು ಹರಿಹರದೇವ ಚೋಲದೇವನೆಂದು ಕರೆಯಲಾಗಿದೆ. ತ್ರುಟಿತವಾದ ೬೦ನೆಯ ನಂಬರಿನ ಶಾಸನ ಸಹ ಬಹುಶಃ ಈತನದೇ ಆಗಿರಬಹುದು.[33]

ಪಿರಿಯಾಪಟ್ಟಣದ ತಾಲ್ಲೂಕು ಹಿರೇಮಳಲಿಯ ೧೬ನೆಯ ಶತಮಾನದ ಸಂಸ್ಕೃತ ಶಾಸನದಲ್ಲಿ ಚಂಗನಾಡನ್ನು ಆಳಿದ ಉತ್ತರೋತ್ತರ ಅರಸರ ಹೆಸರುಗಳಿವೆ. ಅವರ ವಂಶಾವಳಿಯಲ್ಲಿ ಅನುಕ್ರಮವಾಗಿ ಚಂಗಾಳ್ವ, ಅವನ ಮಗ ನಾಗ, ಅವರ ಮಗ ರಂಗ, ರಂಗನ ಮಗ ಪಿರಿಯಣ್ಣ, ಪಿರಿಯಣ್ಣನ ಇಬ್ಬರು ಮಕ್ಕಳು ನಂಜ (ವೀರನಂಜಯ್ಯದೇವ) ಮತ್ತು ಮಹದೇವ ಕಂಡು ಬರುತ್ತಾರೆ.[34] ನಂಜ ಮತ್ತು ಮಹದೇವ ಚಂಗಾಳ್ವರಿಬ್ಬರೂ ಒಟ್ಟಿಗೆ ೧೫೦೩ ರಿಂದ ೧೫೨೫ ರವರೆಗೆ ಆಳಿದರೆಂದು ತಿಳಿದುಬರುತ್ತದೆ.[35] ಮಹಾದೇವನನ್ನು ಹಿರೇಮಳಲಿ ಶಾಸನದಲ್ಲಿ ಮಹಾಮಂಡಲೇಶ್ವರನೆಂದು, ಶ್ರವಣಬೆಳಗೊಳದ ಶಾಸನದಲ್ಲಿ ಮಹೀಪಾಲನೆಂದೂ ಕರೆಯಲಾಗಿದೆ.[36] ಮಹಾದೇವ ಚಂಗನಾಡಿನ ಮಹೀಪಾಲನಾಗಿದ್ದರೂ ವಿಜಯನಗರದ ಅರಸರ ಅಧೀನನಾಗಿಯೂ ಮಹಾಮಂಡಲೇಶ್ವರನ ಸ್ಥಾನವನ್ನೇ ಹೊಂದಿದ್ದ. ಅವನ ಕಾಲಕ್ಕಾಗಲೇ ಹೊಯ್ಸಳ ಸಾಮ್ರಾಜ್ಯ ಪತನಗೊಂಡು ಸುಮಾರು ೧೭೦ ವರ್ಷಗಳಾಗಿದ್ದವು. ವಿಜಯನಗರದಲ್ಲಿ ಆಗ ಸಾಳುವ ಸಂತತಿಯ ವೀರನರಸಿಂಹ (೧೫೦೫-೦೯) ಆಳುತ್ತಿದ್ದ. ಮಹಾದೇವನ ಸಹೋದರ ನಂಜಯ್ಯನನ್ನು ಶಾಸನಗಳಲ್ಲಿ ವೀರನಂಜಯ್ಯ ದೇವನೆಂದೂ ಕರೆಯಲಾಗಿದೆ. ಅವನು ತನ್ನ ಹೆಸರಿನಲ್ಲಿ ನಂಜರಾಜ ಪಟ್ಟಣವನ್ನು ಕೊಡಗಿನಲ್ಲಿ ಕಾವೇರಿಯ ಉತ್ತರದ ಕಡೆ ಕಟ್ಟಿಸಿದ.

ನಂಜರಾಜನು (೧೫೦೨-೧೫೩೩) ಅಧಿಕಾರಕ್ಕೆ ಬಂದ ಕೆಲವು ವರ್ಷಗಳಲ್ಲಿಯೇ ಎಂದರೆ ೧೫೦೯ರಲ್ಲಿ ಕೃಷ್ಣದೇವರಾಯನು ಪಟ್ಟಕ್ಕೆ ಬಂದನು. ಆತನು ಆಡಳಿತ ವಹಿಸಿಕೊಂಡ ಕೂಡಲೇ ಉಮ್ಮತ್ತೂರಿನ ಮೇಲೆ ದಂಡೆತ್ತಿ ಬಂದಾಗ ಹೊಯ್ಸಳನಾಡಿಗೂ ಬಂದಿದ್ದನೆಂದು ಚರಿತ್ರೆಯಲ್ಲಿ ವರ್ಣಿತವಾಗಿದೆ. ಬಹುಶಃ ಆ ಸಂದರ್ಭದಲ್ಲಿ ಸ್ವತಂತ್ರನಾಗಿಯೇ ಇರಲು ಪ್ರಯತ್ನಿಸಿದ ಚಂಗಾಳ್ವ ನಂಜರಾಜನಿಗೂ ಕೃಷ್ಣದೇವರಾಯನ ಸೈನ್ಯಕ್ಕೂ ಯುದ್ಧ ನಡೆದಿರಬಹುದು.[37] ವಿಜಯನಗರದ ಅರಸರ ಅಧೀನಕ್ಕೆ ಚಂಗಾಳ್ವರು ಒಳಗಾದ ಕಾರಣದಿಂದಾಗಿ ಚಂಗಾಳ್ವ ಭೂಮಿಯಲ್ಲೆಲ್ಲ ಅವರು ಹಾಕಿಸಿದ ಶಾಸನಗಳು, ಅವರು ಕಟ್ಟಿಸಿದ ದೇವಾಲಯಗಳು, ಅವರ ಹೆಸರಿನ ಊರುಗಳು ಎಲ್ಲೆಂದರಲ್ಲಿ ಕಾಣಸಿಗುತ್ತವೆ. ವಿಜಯನಗರದ ರಾರೋ ಅಥವಾ ಪ್ರತಿನಿಧಿಗಳೋ ಆಗಿರಬಹುದಾದ ಬುಕ್ಕರಾಯ, ಮಲ್ಲಿಕಾರ್ಜುನ, ನರಸಣ್ಣನಾಯಕ ಕೃಷ್ಣದೇವರಾಯ, ಲಕ್ಕಣ್ಣವೊಡೆಯ, ಹಂಪರಸ, ವೀರನರಸಿಂಹ, ಕೃಷ್ಣರಾಮನಾಯಕ, ಮಹಾಮಂಡಲೇಶ್ವರ ರಾಮರಾಜರಾಯ, ತಿರುಮಲರಾಜಯ್ಯದೇವರ ಹೆಸರುಗಳು ಈ ಸುತ್ತಿನ ಶಾಸನಗಳಲ್ಲಿ ದೊರೆಯುತ್ತವೆ. ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತೂರು, ಗುಂಡುರಾಜಪಟ್ಟಣ ತೆಲುಗನಕುಪ್ಪೆ, ತಿರುಮಲಾಪುರಗಳನ್ನು ಕುರಿತ ಐತಿಹ್ಯಗಳು ವಿಜಯನಗರದ ಅರಸಸಂಬಂಧ ಕಥೆಗಳನ್ನು ಹೇಳುತ್ತವೆ. ವಿಜಯನಗರದ ಸೈನಿಕರೋ ಅಥವಾ ಸೈನಿಕರ ಜೊತೆಯಲ್ಲಿ ಬಂದಿದ್ದವರೋ ಆಗಿರಬಹುದಾದ ತೆಲುಗು ಬಣಜಿಗರು, ವೀರಶೈವರು, ಶ್ರೀವೈಷ್ಣವರು, ದೊಂಬಿದಾಸರು ಈ ವಲಯದಲ್ಲೆಲ್ಲ ಹರಡಿಕೊಂಡಿದ್ದಾರೆ. ಪಿರಿಯಾಪಟ್ಟಣದ ತಾಲ್ಲೂಕಿನಲ್ಲಿರುವ ಹಾಳುಬಿದ್ದರುವ ಗುಂಡುರಾಜ ಪಟ್ಟಣವು ವಿಜಯನಗರದ ಪ್ರತಿನಿಧಿ ಗುಂಡುರಾಜನಿಂದ ಕಟ್ಟಲ್ಪಟ್ಟ ಪಟ್ಟಣವಾಗಿರುವುದರರ ಜೊತೆಗೆ ಈ ಪಟ್ಟಣದ ಸಮೀಪದಲ್ಲಿರುವ ಚಿಕ್ಕಹೊನ್ನೂರು ಗುಡ್ಡದ ಮೇಲೆ ಗುಂಡುರಾಜನು ಶ್ರೀ ವೆಂಕಟರಮಣಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದಾಗಿಯೂ ಆ ಸಂದರ್ಭದಲ್ಲಿ ವಿಜಯನಗರದಿಂದ ಪುರಂದರದಾಸರು ಇಲ್ಲಿಗೆ ಬಂದಿದ್ದರೆಂದೂ ಇಲ್ಲಿನ ಜನಶ್ರುತಿಯಿಂದ ತಿಳಿದು ಬರುತ್ತದೆ. ಆ ಸಂದರ್ಭದಲ್ಲಿ ಪುರಂದರದಾಸರು ‘ಕಂಡು ಕಂಡು ನೀ ಎನ್ನ ಕೈಬಿಡುವರೆ’ ಎಂಬ ದೇವರ ನಾಮವನ್ನು ಕಟ್ಟಿ ಹಾಡಿದರೆಂದೂ ‘ಹೊನ್ನೂರು ಪುರವಾಸ’ ಎಂಬ ಪ್ರಯೋಗ ಇಲ್ಲಿನ ಚಿಕ್ಕ ಹೊನ್ನೂರಮ್ಮ, ಇಲ್ಲಿನ ವಿಷ್ಣುವನ್ನು ಕುರಿತದ್ದೆಂದೂ ಹೇಳುತ್ತಾರೆ. ಗುಂಡುರಾಜನ ಹೆಸರನ್ನು ಹೇಳುವ ಯಾವ ಲಿಖಿತ ಆಧಾರಗಳು ಇಲ್ಲದಿದ್ದರೂ ಗುಂಡುರಾಜ ಪಟ್ಟಣ, ಗುಂಡುಪಟ್ಣದ ಕೆರೆಗಳ ಪಳಯುಳಿಕೆಗಳು ಅವನು ಇಲ್ಲಿದ್ದುದಕ್ಕೆ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ಚಂಗಾಳ್ವನೆಲದಲ್ಲಿ ವೀರಶೈವ ಹಾಗೂ ಶ್ರೀ ವೈಷ್ಣವ ಧರ್ಮಗಳು ತಲೆ ಎತ್ತಿದ್ದಲ್ಲದೆ ಪರಸ್ಪರ ಪೈಪೋಟಿ ಹಾಗೂ ದ್ವೇಷಕ್ಕೂ ಕಾರಣವಾದಂತೆ ಮುತ್ತೂರು ಹಾಗೂ ಹೊನ್ನೂರುಗಳ ಬಗೆಗಿರುವ ಐತಿಹ್ಯಗಳಿಂದ ತಿಳಿದು ಬರುತ್ತದೆ. ಅಲ್ಲದೆ ಈ ಅವಧಿಯಲ್ಲಿ ಜೈನಧರ್ಮ ತಬ್ಬಲಿಯಾದುದು ಮಾತ್ರವಲ್ಲ ಬೆಟ್ಟದಪುರದ ಮಲ್ಲಿನಾಠ ಬಸದಿ ಮಲ್ಲಿಕಾರ್ಜುನಸ್ವಾಮಿ ದೇವಾಲಯವಾಗಿ ಪರಿವರ್ತಿತವಾಯಿತು. ಚಂಗಾಳ್ವರು ಮಲ್ಲಿಕಾರ್ಜುನಸ್ವಾಮಿಯನ್ನು ತಮ್ಮ ಕುಲದೇವವನ್ನಾಗಿ ಸ್ವೀಕರಿಸಿದರು. ನಂಜರಾಜಪಟ್ಟಣದಿಂದ ಆಳ್ವಿಕೆ ನಡೆಸುತ್ತಿದ್ದ ನಂಜಯ್ಯನು ತನ್ನ ಕುಲದೈವವಾದ ಶ್ರೀಗಿರಿಯ (ಬೆಟ್ಟದಪುರದ ಬೆಟ್ಟ) ಅನ್ನದಾನಿ ಮಲ್ಲಿಕಾರ್ಜುನ ದೇವಾಲಯಕ್ಕೆ ಅಲ್ಪ ನಾಯಕನಹಳ್ಳಿಯನ್ನು ೧೫೨೧ರಲ್ಲಿ ನೀಡಿದ್ದಾನೆ.[38]

ನಂಜಯ್ಯದೇವನ ತರುವಾಯ ಅವನ ಮಗ ನಂಜುಂಡನು ೧೫೨೫ ರಿಂದ ೧೫೪೦ ರವರೆಗೆ ನಂಜರಾಜಯಪಟ್ಟಣದಿಂದ ರಾಜ್ಯಭಾರ ಮಾಡಿದ. ಅವನ ಬಗ್ಗೆ ವಿಶೇಷ ಮಾಹಿತಿಗಳೇನೂ ಶಾಸನಗಳಲ್ಲಿ ದೊರೆಯುವುದಲ್ಲ. ‘ರಾಮವಿಜಯ’ ಕಾವ್ಯವನ್ನು ಬರೆದ ರಾವಂದೂರು ದೇವಪ್ಪ ಕವಿಯು ತಾನು ‘ಹೊಯ್ಸಳ ದೇಶಕ್ಕೆ ಒಪ್ಪುವ ಚಂಗನಾಡ ನಡುವೆ’ ಇರುವ ರಾವಂದೂರಿನಿಂದ ನಂಜರಾಜ ಪಟ್ಟಣಕ್ಕೆ ಹೋಗಿ ನಂಜುಂಡರಸನ ಆಶ್ರಯದಲ್ಲಿ ಕಾವ್ಯವನ್ನು ರಚಿಸಿರುವುದಾಗಿ ತಿಳಿಸುತ್ತಾನೆ.[39] ನಂಜುಂಡ ಚಂಗಾಳ್ವನು ಜೈನಧರ್ಮಕ್ಕೆ ಹಾಗೂ ಕನ್ನಡ ಸಾಹಿತ್ಯಕ್ಕೆ ನೀಡಿರುವ ಪ್ರೋತ್ಸಾಹ ಇಲ್ಲಿ ಅಭಿವ್ರಯಕ್ತವಾಗಿದೆ. ನಂಜುಂಡರಸನು ನಂಜರಾಜಪಟ್ಟಣದಲ್ಲಿರುವಾಗಲೇ ಪಿರಿಯಾಪಟ್ಟಣವನ್ನು ಮಣ್ಣಿನ ಕೋಟೆ ಸಮೇತ ಕಟ್ಟಿದ. ಆ ಸಂಬಂಧವಾದ ಐತಿಹ್ಯದ ಪ್ರಕಾರ ಅವನು ಹನಗೋಡಿಗೆ ಹೋಗುತ್ತಿದ್ದಾಗ ದಾರಿಯಲ್ಲಿ ಮೊಲವೊಂದು ಕುದುರೆಯ ಪಾದವನ್ನು ಕಚ್ಚಿ ಕುದುರೆಯನ್ನು ಬೆದರಿಸುತ್ತಿದ್ದುದನ್ನು ಕಂಡು ಅದು ಪಟ್ಟಣವನ್ನು ಕಟ್ಟಲು ಯೋಗ್ಯವಾದ ಸ್ಥಳವೆಂದು ತಿಳಿದು ಅಲ್ಲಿ ಊರನ್ನು ಸ್ಥಾಪಿಸಿ ಕೋಟೆಯನ್ನು ಕಟ್ಟಿದ. ಈ ಸ್ಥಳಕ್ಕೆ ಪೂರ್ವದಲ್ಲಿ ಸಿಂಗಪಟ್ಟಣವೆಂಬ ಹೆಸರಿದ್ದು ಕರಿಕಾಲ ಚೋಳನು ಅಲ್ಲಿ ಒಂದು ಕೆರೆಯನ್ನೂ ಈಶ್ವರ ದೇವಾಲಯವನ್ನೂ ಕಟ್ಟಿಸಿದನೆಂದೂ ಹೇಳಲಾಗಿದೆ.[40]

ನಂಜುಂಡರಸ ಚಂಗಾಳ್ವನ ಮಗ ಶ್ರೀಕಂಠನು ಪ್ರಖ್ಯಾತನಾಗಿದ್ದು ರಾಜಾಧಿರಾಜ ಪರಮೇಶ್ವರ ಎಂಬ ಬಿರುದನ್ನು ತಾಳಿದ್ದ.[41]ಅವನನ್ನು ಶ್ರೀಕರಂಠರಸ, ಶ್ರೀಕಂಠವೊಡೆಯ ಎಂದೂ ಕರೆಯಲಾಗಿದೆ. ಅವನು ೧೫೪೦-೧೫೬೦ರ ಅವಧಿಯಲ್ಲಿ ರಾಜ್ಯಭಾರ ಮಾಡಿದನು. ಅವನು ನಂಜರಾಜ ಪಟ್ಟಣದ ಅರಸನಾಗಿದ್ದನೆಂದು ೧೫೪೫ರ ದೊಡ್ಡ ಬೇಲಾಳು ಶಾಸನ ತಿಳಿಸುತ್ತದೆ.[42] ಶ್ರೀಕಂಠನ ಮಗ ವೀರರಾಜನನ್ನು ಸಹ ನಂಜರಾಜ ಪಟ್ಟಣದ ಅರಸನೆಂದು ಕರೆಯಲಾಗಿದೆ. ಅವನಿಗೆ ವೀರರಾಜಯ್ಯ ಹಾಗೂ ಚಿಕ್ಕರಾಜಯ್ಯ ಎಂಬ ಹೆಸರುಗಳಿದ್ದವು. ಅವನ ಆಳ್ವಿಕೆ ೧೫೬೦ರಿಂದ ೧೫೮೫ ರವರೆಗೆ, ಬಸವಾಪಟ್ಟಣದ ೧೫೭೯ರ ಶಾಸನದಲ್ಲಿ ಅವನ ಮಗಳನ್ನು ಮಹಾಮಂಡಲೇಶ್ವರ ರಾಮರಾಜಯ್ಯದೇವ ಮಹಾ ಅರಸು ಮದುವೆಯಾಗಿ ವಧುವಿನ ಪಲ್ಲಕ್ಕಿಯುಂಬಳಿಯಾಗಿ ಬಸವಾಪಟ್ಟಣ ಮತ್ತು ಕೊಣನೂರುಗಳನ್ನು ಕೊಟ್ಟನೆಂದು ದಾಖಲೆಯಿದೆ.[43] ಈ ರಾಮರಾಯ ಶ್ರೀರಂಗಪಟ್ಟಣದಲ್ಲಿ ವಿಜಯನಗರದ ಪ್ರತಿನಿಧಿಯಾಗಿ ನೇಮಕವಾಗಿದ್ದವನು. ಅವನು ವಿಜಯನಗರದ ಅರವೀಡು ಸಂತತಿಯ ಒಂದನೇ ತಿರುಮಲರಾಯನ (೧೫೭೦-೧೫೭೪) ಎರಡನೆಯ ಮಗ.[44] ಆದ್ದರಿಂದ ಅವನನ್ನು ದೊಡ್ಡ ಬೇಲಾಳು ಶಾಸನದಲ್ಲಿ ‘ಮಹಾ ಮಂಡಲೇಶ್ವರ’ ‘ಮಹಾ ಅರಸು’ ಎಂದು ಕರೆಯಲಾಗಿದೆ.

ವೀರರಾಜಯ್ಯನ ತಮ್ಮ (ಶ್ರೀಕಂಠನ ಎರಡನೇ ಮಗ) ಪೆರಿಯರಾಜ ರುದ್ರಗಣ (ಕ್ರಿ.ಶ. ೧೫೮೫-೧೬೨೫) ನಂಜರಾಜ ಪಟ್ಟಣದಲ್ಲಿ ಆಳುತ್ತಿದ್ದ. ಕ್ರಿ.ಶ. ೧೬೦೦ರ ಹಾರನಹಳ್ಳಿ ಶಾಸನದಿಂದ ಅವನ ತಾಯಿ ವಲ್ಲಭಾಜಮ್ಮನೆಂದು ತಿಳಿದು ಬರುತ್ತದೆ.[45] ಇವನು ಪಿರಿಯಾಪಟ್ಟಣದ ಮಣ್ಣಿನ ಕೋಟೆಗೆ ಬದಲಾಗಿ ಕಲ್ಲಿನಕೋಟೆಯನ್ನು ಕಟ್ಟಿಸಿ ಪಿರಿಯಾ ಪಟ್ಟಣವನ್ನು ಭದ್ರಗೊಳಿಸಿದ. ಇವನ ಕಾಲದಲ್ಲಿ (ಕ್ರಿ.ಶ. ೧೬೦೭ಓ) ಶ್ರೀರಂಗಪಟ್ಟಣದಲ್ಲಿ ವಿಜಯನಗರ ಸಾಮ್ರಾಜ್ಯದ ಪರವಾಗಿ ರಾಜ್ಯಪಾಲನಾಗಿದ್ದ ತಿರುಮಲರಾಯನು ‘ನಂಜರಾಜ ಪಟ್ಟಣದ ಚಂಗಾಳ್ವ ಅರಸ ಸಂತತಿ ಇರುವ ಪರ್ಯಂತವೂ’ಬೆಟ್ಟದಪುರದ ಅನ್ನದಾನಿ ಮಲ್ಲಿಕಾರ್ಜುನನ ಪೂಜೆ ಸುಗಮವಾಗಿ ಸಾಗುವಂತೆ ಕಟ್ಟೆಮಳಲವಾಡಿಯನ್ನು ಉಂಬಳಿಯಾಗಿ ನೀಡಿದ್ದಾನೆ.[46] ಪೆರಿಯರಾಜ ರುದ್ರಗುಣನೂ ಅವನ ದಾಯಾದಿ (ವೀರರಾಜಯ್ಯನ ಮಗ) ವಿರುಪರಾಜಯ್ಯನೂ ಒಟ್ಟಿಗೆ ಚಂಗನಾಡನ್ನು ಆಳಿದಂತೆ ತೋರುತ್ತದೆ. ಪೆರಿಯರಾಜ ರುದ್ರಗಣನ (೧೫೮೫-೧೬೦೭) ತರುವಾಯ ಅವನ ತಮ್ಮ ಕೃಷ್ಣರಾಜ ಸ್ವಲ್ಪ ಕಾಲ ರಾಜ್ಯಭಾರ ಮಾಡಿದಂತೆ ಕಾಣುತ್ತದೆ. ಇಲ್ಲಿಂದ ಮುಂದಿನ ಅರಸುಗಳ ಕ್ರಮಬದ್ಧಯಾದಿ ಇಲ್ಲದಿರುವುದರಿಂದ ಆಳಿದ ಅರಸರುಗಳ ಹೆಸರು ಗೊಂದಲಕ್ಕೀಡಾಗಿದೆ. ನಂಜುಂಡ, ಮಲ್ಲರಾಜ, ವೀರರಾಜ, ಕೃಷ್ಣರಾಜ ರಾಜರುಗಳ ಹೆಸರುಗಳ ಪಟ್ಟಿಯನ್ನು ಕೊಡುವುದು ತುಂಬ ತೊಡಕಿನದಾಗಿದೆ.

ಜನಪದ ವೀರಕಾವ್ಯ ‘ಪಿರಿಯಾಪಟ್ಟಣದ ಕಾಳಗ’ದ ಪ್ರಕಾರ ಚಂಗಾಳ್ವರ ಕೊನೆಯ ರಾಜ ವೀರರಾಜ ಪಿರಿಯಾಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ೧೬೧೯ ರಿಂದ ೧೬೪೪ ರವರೆಗೆ ರಾಜ್ಯಭರ ಮಾಡಿದ. ಚಂಗಾಳ್ವ ವೀರರಾಜಯ್ಯನು ಮಡಿಕೇರಿಯನ್ನಾಳುತ್ತಿದ್ದ ಹಾಲೇರಿ ರಾಜರ ಬಂಧುವಾಗಿದ್ದ. ಇವನ ಕಾಲಕ್ಕಾಗಲೆ ಜೈನಧರ್ಮ ಸಂಪೂರ್ಣವಾಗಿ ನಶಿಸಿ ಹೋಗಿದ್ದುಲ್ಲದೆ ಮಲ್ಲಿನಾಥ ಬಸದಿಗಳು ಮಲ್ಲಯ್ಯನ ದೇವಾಲಯಗಳಾಗಿ ಚಂಗಾಳ್ವರು ವೀರಶೈವ ಧರ್ಮಾವಲಂಬಿಗಳಾಗಿದ್ದರು.

ಪಿರಿಯಾಪಟ್ಟಣದ ಚಂಗಾಳ್ವರಿಗೂ ಶ್ರೀರಂಗಪಟ್ಟಣದ ವೊಡೆಯರಿಗೂ ರಾಜವೊಡೆಯನ (೧೫೭೮-೧೬೧೭) ಕಾಲದಿಂದಲೂ ಯುದ್ಧಗಳು ನಡೆಯುತ್ತಲೇ ಇದ್ದವು. ರಾಜವೊಡೆಯ ಪಿರಿಯಾಪಟ್ಟಣಕ್ಕೆ ಸೇರಿದ್ದ ಸೆರೂರು ಮತ್ತು ಮನುತ್ತೂರುಗಳನ್ನು ವಶಪಡಿಸಿಕೊಂಡ.[47]ಕಂಠೀರವ ನರಸರಾಜ ಮೊದಲ ಮುತ್ತಿಗೆಯಲ್ಲಿ ಚಂಗಾಳ್ವರಿಗೆ ಸೇರಿದ ಅರಕಲಗೂಡು ಮತ್ತು ಬೆಟ್ಟದಪುರಗಳನ್ನು ವಶಪಡಿಸಿಕೊಂಡ.[48]ನರಸರಾಜನ ದಳವಾಯಿ ೧೬೪೪ ರಲ್ಲಿ ಪಿರಿಯಾಪಟ್ಟಣವನ್ನು ಮುತ್ತಿ ಹನ್ನೆರಡು ತಿಂಗಳುಗಳ ಕಾಲ ಸತತವಾಗಿ ಹೋರಾಡಿ ಪಿರಿಯಾಪಟ್ಟಣವನ್ನು ಮೈಸೂರಿನ ಅಧೀನಕ್ಕೆ ತೆಗೆದುಕೊಂಡ. ದಳವಾಯಿ ಮುತ್ತಿಗೆ ಹಾಕಿದಾಗ ಪಿರಿಯಾಪಟ್ಟಣವನ್ನು ಆಳುತ್ತಿದ್ದವನು ಚಂಗಾಳ್ವ ಅರಸ ವೀರರಾಜ. ಆದರೆ ಕಂಠೀರವ ನರಸರಾಜ ವಿಜಯದಲ್ಲಿ

ಪಿರಿಯಾಪಟ್ಟಣದ ರಾಜ್ಯವನ್ನಾಳುವ ದುಷ್ಟ
ದುರದುಂಬಿ ನಂಜುಂಡ ರಾಜ ಕಪ್ಪವ
ಕೊಡದೆ ಕೂಟವ ಮಾಡದೆ ಮೇರೆ
ದಪ್ಪಿ ಚಂಡಿಸಿ ಬಲವಿಡಿದು
ಇಪ್ಪುದ ಕಂಡು ಕಂಠೀರವ ರಾಜ ಕಂ
ದಪ್ಪ ಸನ್ನಿಭ ಕೋಪಿಸಿದ[49]

ಎಂದು ಹೇಳಿದೆ. ಅಲ್ಲದೆ ತನ್ನ ದಳವಾಯಿ ನಂಜರಾಜನನ್ನು ಪಿರಿಯಾಪಟ್ಟಣವನ್ನು ಸೂರೆ ಮಾಡಿ ಬರಲು ಕಳಿಸಿದನೆಂಬ ವಿಷಯ ಪ್ರಸ್ತಾಪವಾಗಿದೆ. ಆದರೆ ತಿರುಮಲೆಯಾರ್ಯನ ‘ಚಕ್ಕದೇವರಾಯ ವಂಶಾವಳಿ”[50] ಹಾಗೂ ದೇವಚಂದ್ರ ವಿರಚಿತ ‘ರಾಜಾವಳಿ ಕಥಾಸಾರ’[51]ಗಳಲ್ಲಿ ಚಂಗಾಳ್ವ ನಂಜುಂಡರಾಜನ ಹೆಸರಿಗೆ ಬದಲಾಗಿ ಮಲ್ಲರಾಜನ ಹೆಸರು ಬಂದಿದೆ. ಇದರಿಂದಾಗಿ ಶ್ರೀಕಂಠನಿಗೆ ಚನ್ನಯ್ಯ ಎಂಬ ಹೆಸರಿನೊಂದಿಗೆ ನಂಜರಾಜ ಎಂಬ ಮತ್ತೊಂದು ಹೆಸರಿತ್ತೆ? ನಂಜರಾಜಯ್ಯದೇವ ಅಥವಾ ನಂಜುಂಡದೇವನು ಶ್ರೀಕಂಠದೇವನ ಮೂರನೇ ಮಗನೆ? ಅಥವಾ ಕೃಷ್ಣರಾಜಯ್ಯ ಹಾಗೂ ನಂಜುಂಡ ಎಂಬ ಎರಡೂ ಹೆಸರುಗಳು ಒಬ್ಬನೇ ಅರಸನವೇ? ಕೃಷ್ಣರಾಜನೇ ಹರವೇ ಮಲ್ಲರಾಜಪಟ್ಟಣದ (ಪಿರಿಯಾಪಟ್ಟಣದ ಉತ್ತರಕ್ಕಿದ್ದ ಈ ಊರು ಈಗ ಹಾಳಾಗಿದೆ) ಸ್ಥಾಪಕನೆ? ಮಲ್ಲರಾಜ (ಕೃಷ್ಣಾರಾಜಯ್ಯದೇವ?) ವೀರರಾಜ (೧೬೧೯-೧೬೪೪) ಪಿರಿಯಾಪಟ್ಟಣದ ಪೇಟೆಯ ಉತ್ತರಕ್ಕಿದ್ದ ರಾಜಾಪುರದ ಸ್ಥಾಪಕ ಅಲ್ಲದೆ ಚಂದೆ ಅರಸು (ಜನಪದ ಕಾವ್ಯದಲ್ಲಿ ಮಾತ್ರ ಈ ಹೆಸರು ಬಂದಿದೆ)- ಈ ಮೂವರೂ ನಂಜುಂಡನ ಮೂವರು ಮಕ್ಕಳಿರಬಹುದೆ? ಎಂಬೆಲ್ಲ ಪ್ರಶ್ನೆಗಳಿಗೆ ಸದ್ಯಕ್ಕೆ ಸರಿಯಾದ ಉತ್ತರಗಳಿಲ್ಲ. ಚಂಗಾಳ್ವ ವಂಶದ ಕೊನೆಯ ಅರಸುಗಳ ಹೆಸರುಗಳು ಲಿಖಿತ ರೂಪದಲ್ಲುಳಿಯದೆ ಇರುವುದರಿಂದ ಈ ಗೊಂದಲಕ್ಕೆ ಕಾರಣವಾಗಿದೆ. ಆದರೆ ಚಂಗಾಳ್ವ ವಂಶದ ಕಟ್ಟಕಡೆಯ ರಾಜ ವೀರರಾಜನೆಂಬುವುದರಲ್ಲಾಗಲಿ ಮೈಸೂರಿನ ದಳವಾಯಿ ಪಿರಿಯಾಪಟ್ಟಣವನ್ನು ಮೈಸೂರಿಗೆ ಸೇರಿಸಿಕೊಂಡ ವಿಚಾರದಲ್ಲಾಗಲಿ ಯಾವ ಅಸ್ಪಷ್ಟತೆಯೂ ಇಲ್ಲ. ಈ ಯುದ್ಧಕ್ಕೆ ಕಾರಣಗಳು ಮಾತ್ರ ಬಗೆಬಗೆಯಾಗಿದೆ.

ಮೈಸೂರು ಸೈನ್ಯ ಪಿರಿಯಾಪಟ್ಟಣವನ್ನು ಮುತ್ತಲು ಕಾರಣವೆಂದರೆ ಪಿರಿಯಾಪಟ್ಟಣದ ರಾಜ ಮೈಸೂರು ಅರಸನಿಗೆ ವಾರ್ಷಿಕ ಪೊಗದಿಯಾಗಿ ಮೂರು ಸಾವಿರ ವರಹಗಳನ್ನು ಕೊಡಬೇಕೆಂದು ತೀರ್ಮಾನವಾಗಿತ್ತು. ಈ ಒಪ್ಪಂದವನ್ನು ಪಿರಿಯಾಪಟ್ಟಣ ಅರಸರು ಒಪ್ಪದೆ ತಿರಸ್ಕರಿಸಿದ್ದರಿಂದ ಕಂಠೀರವ ನರಸರಾಜನಿಗೂ ಪಿರಿಯಾಪಟ್ಟಣದ ರಾಜನಿಗೂ ಯುದ್ಧ ನಡೆಯಿತೆಂದು ಇತಿಹಾಸ ಹೇಳುತ್ತಿದೆ.[52] ಈ ಯುದ್ಧವನ್ನು ಪ್ರೊನೆಜ ಎಂಬ ಪಾದ್ರಿಯು ಮೂಗುಗಳಿಗಾಗಿ ನಡೆದ ಯುದ್ಧವೆಂದು ವರ್ಣಿಸಿದ್ದಾನೆ. ಎದುರಾಳಿಗಳ ಮೂಗುಗಳನ್ನು ಕತ್ತರಿಸಬೇಕೆಂದು ಕಂಠೀರವ ನರಸರಾಜ ಆಜ್ಞೆ ಇತ್ತನೆಂಬುದು ಅವನ ಅಭಿಪ್ರಯ.[53] ಕಂಠೀರವ ನರಸರಾಜನು ಎದುರಾಳಿಗಳ ಮೂಗುಗಳನ್ನು ಕತ್ತರಿಸಿ ಅವರನ್ನು ವಿಕಾರಗೊಳಿಸುತ್ತಿದ್ದುದಲ್ಲದೆ ಅತ್ಯಂತ ಕ್ರೂರ ರೀತಿಯಲ್ಲಿ ಅವರು ನರಳಿ ಸಾಯುವಂತೆ ಮಾಡುತ್ತಿದ್ದನಂತೆ. ಬೆಟ್ಟದಪುರ, ಅರಕಲಗೂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಸ್ವತಃ ನರಸರಾಜನೇ ಯುದ್ಧಕ್ಕೆ ಬಂದಿದ್ದರೂ ಎರಡನೇ ಸಲ ದಳವಾಯಿಯೊಬ್ಬ ಪಿರಿಯಾಪಟ್ಟಣವನ್ನು ಮುತ್ತಿದಂತೆ ತಿಳಿದು ಬರುತ್ತದೆ. ಈ ರೌದ್ರಭೀಕರ ಯುದ್ಧದ ಘಟನಾವಳಿಗಳು ಜನಪದ ಸಾಹಿತ್ಯದಲ್ಲಿ ಉಳಿದು ಬಂದು ಜನಮನದಲ್ಲಿ ಹಚ್ಚಹಸುರಾಗಿ ಚಂಗಾಳ್ವರ ಹೆಸರನ್ನು ಚಿರವಾಗಿಸಿವೆ. ಪಿರಿಯಾಪಟ್ಟಣದ ಹೆಸರನ್ನು ಅಮರವಾಗಿಸಿವೆ.

ಚಂಗಾಳ್ವರು ಮತಸಹಿಷ್ಣುಗಳು, ಮಹಾದಾನಿಗಳೂ, ಆಶ್ರಿತವತ್ಸರೂಕ, ಪರಾಕ್ರಮಿಗಳೂ ಆಗಿದ್ದರಲ್ಲದೆ ಉದಾರಾಶ್ರಯ ಕೊಟ್ಟವರೆಂದು ಅವರನ್ನು ಕೊಂಡಾಡಿದ ಶಾಸನಗಳಿಂದಲೂ ಕವಿಗಳ ವಾಣಿಗಳಿಂದಲೂ ತಿಳಿಯುತ್ತದೆ. ‘ಕುಮಾರರಾಮ ಸಾಂಗತ್ಯ’ದ ಕಲ್ಲಹಳ್ಳಿ ನಂಜುಂಡ ಕವಿ, ಚಂದ್ರಪ್ರಭ ಸಾಂಗತ್ಯ ಹಾಗೂ ಭುಜಬಲಶತಕಗಳ (ಸಂಸ್ಕೃತ ಶತಕ) ಕರ್ತೃ ಪೆರಿಯಾ ಪಟ್ಟಣದ ದೊಡ್ಡಯ್ಯ ಕವಿ ‘ರಾಮವಿಜಯ’ ಕಾವ್ಯದ ರಾವಂದೂರು ದೇವಪ್ಪ ‘ಗೀತರಾಘವ’ದ ರಾಮಕವಿ ‘ಶಮಂತಕೋಪಾಖ್ಯಾನ’ದ ನಾಗರಾಜ ಕವಿ. ‘ಕುಮುದೇಂದು ರಾಮಾಯಣದ ಕುಮುದೆಂದು ಕವಿ, ‘ನೇಮಿಜಿನೇಶಸಂಗತಿ’ ‘ಶ್ರೀಪಾಲಚರಿತೆ’ ‘ಪ್ರಭಂಜನ ಚರಿತ್ರೆ’ ‘ಜಯನೃಪಕಾವ್ಯ’ ‘ಸಮ್ಯಕ್ತ್ವಕೌಮುದಿ’, ಮತ್ತು ‘ಸೂಪಶಾಸ್ತ್ರಗ್ರಂಥಗಳನ್ನೆಲ್ಲ ಬರೆದ ಮಂಗರಸ ಈ ಎಲ್ಲರೂ ಚಂಗಾಳ್ವ ಕವಿಗಳು ಅಥವಾ ಚಂಗಾಳ್ವರ ಆಶ್ರಯದಲ್ಲಿದ್ದ ಕವಿಗಳು. ಹೀಗೆ ಚಂಗಾಳ್ವರ ಸಾಹಿತ್ಯ ಸೇವೆಯು ಅನುಪಮ.

ಚಂಗಾಳ್ವರು ಮೂಲತಃ ಜೈನರಾಗಿದ್ದರೂ ಅನಿವಾರ್ಯ ಪರಿಸ್ಥಿತಿಗಳು ಒದಗಿ ಬಂದ ಕಾರಣದಿಂದ ಚೋಳರಿಗೆ ಮಾಂಡಲಿಕರಾದಾಗ ಕಾಪಾಲಿಕ ಶೈವರಾಗಿದ್ದು, ಹೊಯ್ಸಳರ ಅಧೀನಕ್ಕೆ ಬಂದಾಗ ಅವರಂತೆಯೇ ಜೈನ ಧರ್ಮದ ಜೊತೆಗೆ ಶೈವ ಹಾಗೂ ವೈಷ್ಣವ ಧರ್ಮಗಳನ್ನು, ವಿಜಯನಗರದ ಅರಸರ ಆಳ್ವಿಕೆಗೆ ಒಳಪಟ್ಟಾಗ ವೀರಶೈವ ಹಾಗೂ ಶ್ರೀವೈಷ್ಣವ ಧರ್ಮಗಳನ್ನು ಅನುಸರಿಸಿಕೊಂಡು ಬಂದು ಸರ್ವಧರ್ಮ ಸಮನ್ವಯಿಗಳಂತೆ ಕಂಡರೂ ಕೊನೆಕೊನೆಗೆ ಕಟ್ಟುಗ್ರವೀರ ಶೈವರಾದಂತೆ ಕಾಣುತ್ತದೆ. ಆದರೆ ಅವರು ಜೈನಧರ್ಮಕ್ಕೆ ಕೊಟ್ಟಿದ್ದ ಪ್ರಾಮುಖ್ಯವನ್ನು ಚಂಗನಾಡಿನ ಚಿಕ್ಕ ಹನಸೋಗೆಯ ತ್ರಿಕೂಟ ಬಸದಿಯಾದ ಅಬ್ಬೆಯ ಜಿನಾಲಯವೆಂದೇ ಪ್ರಸಿದ್ಧವಾಗಿರುವ ಶಾಂತೀಶ್ವರ ಆದೀಶ್ವರ ಹಾಗೂ ನೇಮೀಶ್ವರ ಬಸದಿಗಳು, ಕಲ್ಲಹಳ್ಳಿಯ ಆದಿದೇವ ಬಸದಿ, ಬೆಟ್ಟದತುಂಗದ ಆದಿನಾಥ ಬಸದಿ ಬೂವನ ಹಳ್ಳಿಯ ಚಂದ್ರನಾಥ ಬಸದಿ, ರಾವಂದೂರಿನ ಸುಮತಿ ತೀರ್ಥಂಕರ ಬಸದಿ, ಬ್ಯಾಡರ ಬೆಳಗುಲಿಯ ಶಾಂತಿನಾಥ ಬಸದಿ, ಆನವಾಳು ಗ್ರಾಮದ ಅನಂತನಾಥ ಬಸದಿ, ಸಾಲಿಗ್ರಾಮದ ಅನಂತನಾಥ, ಪಾರ್ಶ್ವನಾಥ ಬಸದಿಗಳು ಸಾರಿ ಹೇಳುತ್ತವೆ.

ಇಷ್ಟಾದರೂ ಅವರು ಶೈವ, ವೀರಶೈವ, ವೈಷ್ಣವ ಧರ್ಮಗಳನ್ನೆಲ್ಲ ಆದರಿಸಿ ಆಶ್ರಯ ಕೊಟ್ಟು ಮತ ಸಹಿಷ್ಣುಗಳೆನಿಸಿಕೊಂಡ ಉದಾರ ಹೃದಯಿಗಳು. ಹೀಗೆ ಚಂಗಾಳ್ವರು ಕಲಾರಾಧಕರಾಗಿ ಸಾಹಿತ್ಯ ಸೇವಕರಾಗಿ ಧರ್ಮಾಶ್ರಯದಾತರಾಗಿ ಇತಿಹಾಸದ ಪುಟಗಳಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದಿದ್ದಾರೆ.

04_270_MAM-KUH05_270_MAM-KUH 

[1]ಎ.ಕ.ಸಂ. ೩ ಟಿ.ನರಸಿಪುರ ಸಂಖ್ಯೆ ೪೪.

[2] C.Hayavadana Rao. Mys Gaz II Pt ೨ P. ೬೪೪.

[3] Mys Gaz II Part ೨ ೧೩೧೯ ಎ.ಕ. ೫ ಮಂಜರಾಬಾದ್ ನಂ. ೭೬

[4]ಎ.ಕ. ೫ ಅರಕಲಗೂಡು ೭೬.

[5] Mys Gaz V PP ೬೪೪-೬೪೫.

[6]ಎ.ಕ. ಸಂ. ೮ ಅರಕಲಗೂಡು, ೧೦೧.

[7] B.R. Gopal ; Minor Dynasties of South India : Karnataka New Era Pubilication Madras      (೧೯೮೨) P. 170

[8]ಎ.ಕ.ಸಂ. ೫ ಕೃಷ್ಣರಾಜನಗರ ೬೬.

[9]ಎ.ಕ.ಸಂ. ೪ ಪಿರಿಯಾಪಟ್ಟಣ ೧೩೭.

[10]ಎ.ಕ.ಸಂ. ೮ ಅರಕಲಗೂಡು ೧೪೦.

[11]ಎ.ಕ. ೫ (ರೈಸ್) ಅರಕಲಗೂಡು ೧೬೧ ಮತ್ತು ೧೬೨.

[12]ಅದೇ, ಹಾಸನ ೧೬೨.

[13] Derrett J.D.M. Op Cit Chaper III Section. ೨.

[14]ಎ.ಕ.ಸಂ. ೫ ಭಾಗ ೧ ಬೇಲೂರು ೧೭೮ (ಕ್ರಿ.ಶ. ೧೧೩೪)

[15]ಎ.ಕ.ಸಂ. ೫ ಪಿರಿಯಾಪಟ್ಟಣ ನಂ. ೩೭.

[16]ಎ.ಕ.ಸಂ. ೫ (Rice) ಚನ್ನರಾಯಪಟ್ಟಣ ೧೯೯ ಮತ್ತು ೨೦೦.

[17]ಎ.ಕ.ಸಂ. ೭ ನಾಗಮಂಗಲ ೬೪.

[18]ಎ.ಕ.ಸಂ. ೭ ನಾಗಮಂಗಲ ೨೯.

[19]ಎ.ಕ.ಸಂ. ೭ ಅರಸೀಕೆರೆ ೫೩.

[20]ಎ.ಕ. V (Rice) ಹಾಸನ ೧೪೩ ಕ್ರಿ.ಶ. ೧೧೫೦.

[21]ಅದೇ ಹಾಸನ ೬೯ ಕ್ರಿ.ಶ. ೧೧೫೫.

[22] M.A.R. ೧೯೦೯-೧೯೧೦. Para .೭೬

[23]ಎ.ಕ.೮ ಸೊರಬ ೩೪೫. (B.L.Rice Edition)

[24]ಎ.ಕ.೫ (Rice) No. ೧೧೪ of A.D. ೧೧೭೩ : Hayavadan Rao Mys. Gaz. vol II Part ೨ P. ೧೩೫೬

[25]ಎ.ಕ.೫ (Rice) ೪ x೨ ಬಲೂರು ೮೬

[26]ಎ.ಕ.೪ (Rice) ಹುಣಸೂರು ೨೦. ಕ್ರಿ.ಶ. ೧೧೭೩

[27]ಎ.ಕ.೬ (Rice) ಕಡೂರು ೫೨. ಕ್ರಿ.ಶ. ೧೧೭೨

[28]ಎ.ಕ.ಸಂ. ೪ ಹುಣಸೂರು. ನಂ. ೩೬

[29]ಎ.ಕ. (Rice) ಮೈಸೂರು ಜಿಲ್ಲೆ. Introduction ; C.Mayavadana Rao. Mys. Gaz. Vol II Part ೨. P. ೧೩೮೪

[30]ಎ.ಕ.೫. (Rice) ಅರಕಲಗೂಡು ೫೩ ಕ್ರಿ.ಶ. ೧೨೫೨

[31]ಎ.ಕ.ಸಂ. ೫. ಕೃಷ್ಣರಾಜನಗರ. ೯೩.

[32]ಎ.ಕ.ಸಂ. ೪ (Rice) ಭಾಗ ೨. Introduction.

[33]ಎ.ಕ.ಸಂ. ೧ ಪು. xxxiv

[34]ಎ.ಕ.ಸಂ.೪. ಪಿರಿಯಾಪಟ್ಟಣ. ನಂ. ೧೩೨. ಕ್ರಿ.ಶ. ೧೫೦-೦೪

[35] B.R.Gopal. ಪೂರ್ವೋಕ್ತ P. ೧೭೪.

[36]ಎ.ಕ.ಸಂ. ೪ ಶ್ರವಣಬೆಳಗೊಳ. ನಂ. ೩೨೯

[37]ಡಾ.ಜಿ.ವರದರಾಜರಾವ್, ಕುಮಾರರಾಮನ ಸಾಂಗತ್ಯಗಳು, ಪ್ರಸಾರಾಂಗ, ಮೈ.ವಿ.ವಿ.ಮೈಸೂರು. (೧೯೬೬) ಪು. ೨೦.

[38]ಎ.ಕ.ಸಂ. ೪, ಪಿರಿಯಾಪಟ್ಟಣ, ನಂ.೩೩.

[39]ರಾಮವಿಜಯ ಕಾವ್ಯ. ಸಂ.: ಟಿ. ಕೇಶವಭಟ್ಟ ಭಾರತೀಯ ಜ್ಞಾನಪೀಠ ಪ್ರಕಾಶನ ಕಲಕತ್ತಾ. (೧೯೬೯)

[40] C.Hayavadana Rao. Mys Gaz II Pt II

[41]ಎ.ಕ.ಸಂ. ೪ (Rice) ಹಾಸನ. ೨೪.

[42]ಎ.ಕ.ಸಂ: ೪ ಪಿರಿಯಾಪಟ್ಟಣ. ೧೨೧.

[43]ಎ.ಕ.೫ (Rice) ಅರಕಲಗೂಡು. ೪೪.

[44] C.Hayavadana Rao. Mys Gaz Vol. III P. 2125.

[45]ಎ.ಕ. ೪ ಪೀಠಿಕೆ. ೨೫.

[46]ಎ.ಕ. ೫, ಭಾಗ. ೨ (Rice) ಹಾಸನ. ೩೬. ೧೬೦೭

[47] Wilks. Mysore, Vol I PP. 53.54

[48]ಕನ್ನಡ ವಿಷಯ ವಿಶ್ವಕೋಶ (ಕರ್ನಾಟಕ ಸಂಪುಟ) ಕ.ಅ.ಸ.ಮೈ.ವಿ.ವಿ.ಮೈಸೂರು (೧೯೭೯) ಪು. ೧೨೦.

[49]ಗೋವಿಂದ ವೈದ್ಯನ ‘ಕಂಠೀರವ ನರಸರಾಜ ವಿಜಯ’ ಸಂ.ಡಾ.ಆರ್.ಶಾಮಾ ಶಾಸ್ತ್ರಿ, ಪ್ರಸಾರಾಂಗ. ಮೈ.ವಿ.ವಿ. ಮೈಸೂರು. ೧೯೭೧. ಸಂ. ೨೮, ೨೦, ೨೧.

[50]ತಿರುಮಲೆಯಾರ್ಯನ ಚಿಕದೇವರಾಯ ವಂಶಾವಳಿ. ಸಂ: ಎಂ.ಎ. ರಾಮಾನುಜಯ್ಯಂಗಾರ್. ಜಿ. ಟಿ.ವಿ.ಪ್ರಸ್. ೧೯೩೩. ಪು. ೬೨.

[51]ದೇವಚಂದ್ರನ ರಾಜಾವಳಿ ಕಥಾಸಾರ. ಸಂ.ಬಿ.ಎಸ್.ಸಣ್ಣಯ್ಯ. ಕ.ಅ. ಸಂಸ್ಥೆ. ಮೈ.ವಿ.ವಿ. ಮೈಸೂರು. ೧೯೮೮. ಪು. ೩೩೯

[52] C.Hayavadana Rao. History of Mysore. Vol. I 1943. P. iii

[53]ಕನ್ನಡ ವಿಶ್ವಕೋಶ. ಸಂ: ಮೂರು. ಕ.ಅ. ಸಂಸ್ಥೆ. ಮೈಸೂರು. ೧೯೭೦. ಪು. ೫೦೯.