ಹಿರಿಯ ಸಾಮ್ರಾಜ್ಯಗಳ ಅಧೀನದಲ್ಲಿ ಸಾಮಂತ ರಾಜ್ಯಗಳು ಆಡಳಿತ ನಡೆಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿವೆ. ವಿಸ್ತಾರ ಮತ್ತು ಸ್ವಾಯತ್ತತೆಯಲ್ಲಿ ಇವುಗಳ ಸ್ಥಾನ ಎತ್ತರಕ್ಕೆ ಬಾರದಿದ್ದರೂ ತಮ್ಮ ಸಮಕಾಲೀನ ಸಾರ್ವಭೌಮರ ಏಳು ಬೀಳುಗಳಲ್ಲಿ ಇವು ವಹಿಸಿದ ಪಾತ್ರವನ್ನು ಅಲಕ್ಷಿಸುವಂತಿಲ್ಲ. ಪ್ರಬಲ ರಾಷ್ಟ್ರಗಳು ದುರ್ಬಲ ರಾಜ್ಯಗಳನ್ನು ಆಕ್ರಮಿಸಿ ಸಾಮಂತರ ಮಟ್ಟಕ್ಕಿಳಿಸಿರುವ ದಾಖಲೆಗಳು ಇತಿಹಾಸದಲ್ಲಿ ತುಂಬಿಕೊಂಡಿವೆ. ಪ್ರಾದೇಶಿಕ ಇತಿಹಾಸವನ್ನು ಸೃಷ್ಟಿಸಿರುವ ಇಂತಹ ಅರಸೊತ್ತಿಗೆಗಳಿಂದ ಅಧ್ಯಯನಕ್ಕೆ ವಿಪುಲವಾದ ಮಾಹಿತಿಗಳು ದೊರೆಯುತ್ತವೆ.

ಪ್ರಸ್ತುತ ಆರಗವು ತೀರ್ಥಹಳ್ಳಿಯಿಂದ ೧೧ ಕಿ.ಮೀ. ದೂರದಲ್ಲಿರುವ ಒಂದು ಗ್ರಾಮವಾಗಿದೆ. ಅಪರೂಪದ ಅವಶೇಷಗಳಿಂದ ತುಂಬಿಕೊಂಡಿರುವ ಈ ಗ್ರಾಮದ ಬಳಿಯಲ್ಲಿ ಕುಶಾವತಿ ಮತ್ತು ಗೋಪಿನಾಥ ಎಂಬ ಎರಡು ಪುಟ್ಟ ನದಿಗಳೂ ಹರಿಯುತ್ತವೆ. ಆರಗವು ವಿಜಯನಗರ ಸಾಮ್ರಾಜ್ಯದ ಒಂದು ಭಾಗವಾಗಿ ಕಂಪಣ ಎಂಬ ಒಂದು ಪ್ರತ್ಯೇಕ ಘಟಕವಾಗಿ ಒಂದು ರಾಜ್ಯದ ಸ್ಥಾನಮಾನವನ್ನು ಪಡೆದಿತ್ತು. ವಿಜಯನಗರದ ಅರಸರ ನಿರೂಪದಂತೆ ಅರಸು ಮನೆತನದವರು ಅಥವಾ ಅವರ ಬಂಧುಗಳು ಇಲ್ಲಿ ಆಡಳಿತ ನಡೆಸಿದರು. ಈ ದೃಷ್ಟಿಯಿಂದ ಇಲ್ಲಿ ಆಳಿದವರು ಸಾಮಂತರು ಅಥವಾ ಮಂಡಳಿಕರೆಂದು ಕರೆಸಿಕೊಂಡಿಲ್ಲ. ಇವರಿಗೆ ಪ್ರತ್ಯೇಕವಾದ ಪ್ರಶಸ್ತಿಗಳು ಇರಲಿಲ್ಲ.

ಆರಗದ ಚಾರಿತ್ರಿಕ ಅಂಶಗಳ ಹುಡುಕಾಟದಲ್ಲಿ ಮೊದಲು ಎದುರು ನಿಲ್ಲುವ ಸಾಮಗ್ರಿಗಳಲ್ಲಿ ಶಿಲಾಶಾಸನಗಳಿಗೆ ಅಗ್ರಸ್ಥಾನ. ಇವುಗಳ ಅಧ್ಯಯನ ನಡೆದಂತೆಲ್ಲಾ ಪ್ರಾದೇಶಿಕ ಇತಿಹಾಸದ ಮಹತ್ವವು ಅರಿವಾಗುತ್ತದೆ.

ಆರಗದ ಶಾಂತವೇರಿಯಿಂದ ಪೊಂಬುಚ ರಾಜ್ಯಕ್ಕೆ ಸಾನ್ತಳಿಗೆ ಎಂಬ ಹೆಸರು ಬಂದಿತೆಂದು ಐತಿಹಾಸಿಕ ಗ್ರಂಥಗಳಲ್ಲಿದೆ.[1] ಶಾಂತವೇರಿಗೆ ಹಿಂದೆ ಸಂತೇರಿ, ಸಂತವೇರಿ, ಸಂತರಿಗೆ ಎಂಬ ಹೆಸರಿನಿಂದ ಕರೆಯುತ್ತಿದ್ದರೆಂದು ಸ್ಥಳೀಯರು ಹೇಳುತ್ತಾರೆ. ಬಹುಶಃ ಇದು ಗಂಗರ ಕಾಲದಲ್ಲಿಯೇ ಜೈನರ ಒಂದು ನೆಲೆವೀಡಾಗಿದ್ದು ಇಲ್ಲಿ ಜಂಬಿಟ್ಟಿಗೆಯಲ್ಲಿ ಕಟ್ಟಿದ್ದ ಒಂದು ಬಸದಿ ಇದ್ದರಿಬೇಕು ಇದನ್ನು ಜಿನದತ್ತರಾಯನು ಶಿಲೆಯಲ್ಲಿ ಕಟ್ಟಿಸಿ ಚೈತ್ಯಾಲಯವನ್ನಾಗಿ ಮಾಡಿರಬೇಕು. ಈಗಿರುವ ಬಸದಿಯು ಮತ್ತೆ ಜೀರ್ಣೋದ್ಧಾರಗೊಂಡಿದೆ. ಹೀಗೆ ಪ್ರಾಚೀನ ಜೈನ ಕ್ಷೇತ್ರವಾಗಿದ್ದ ಸಂತರಿಗೆಯಿಂದ ಜಿನದತ್ತರಾಯನು ತನ್ನ ರಾಜ್ಯಕ್ಕೆ ಸಾನ್ತಳಿಗೆ ಎಂದು ಹೆಸರಿಟ್ಟಿರಬಹುದು. ಇದರಿಂದ ಇವನ ವಂಶಸ್ಥರಿಗೆ ಸಾನ್ತರರು ಎಂಬ ಹೆಸರು ಬಂದಿರಬೇಕು. ಆದರೂ ಸಾನ್ತರರು ಎಂಬ ಹೆಸರು ಬಂದಿದ್ದಕ್ಕೆ ಬೇರೆ ಬೇರೆ ಐತಿಹಾಸಿಕ ಕಾರಣಗಳನ್ನು ನೀಡಲಾಗಿದೆ.

ಸಾಂತಳಿಗೆ ಸಾವಿರವನ್ನು ಆಳುತ್ತಿದ್ದ ಹೊಯ್ಸಳರು ಆರಗವನ್ನು ಅನನ್ಯ ದೇಶ ಮತ್ತು ಮಲೆ ರಾಜ್ಯವೆಂದು ಕರೆದರು[2] ಆದರೂ ಇದನ್ನು ಒಂದು ಪ್ರತ್ಯೇಕ ಆಡಳಿತ ವಿಭಾಗವನ್ನಾಗಿ ಮಾಡಲಿಲ್ಲ. ಹಾಗೂ ರಾಜವಂಶದವರಾಗಲೀ ಅಥವಾ ಇವರಿಂದ ನೇಮಿಸಲ್ಪಟ್ಟಿದ್ದ ರಾಜ ಪ್ರತಿನಿಧಿಗಳಾಗಲೀ ಇಲ್ಲಿ ಆಡಳಿತ ನಡೆಸಿದ ದಾಖಲೆಗಳು ಲಭ್ಯವಾಗಿಲ್ಲ.

ಆರಗದ ಅರಸರು : ಮೊದಲ ಘಟ್ಟ

ಮಾರಪ್ಪ : ಆರಗದ ಅರಸೊತ್ತಿಗೆಯು ಮೊದಲ ಆರಂಭವಾದುದು ಮಾರಪ್ಪನಿಂದ, ಇವನು ವಿಜಯನಗರದ ದೊರೆ ಮೊದಲನೆಯ ಹರಿಹರನ ಸಹೋದರ. ಇವನು ಚಂದ್ರಗುತ್ತಿಯಲ್ಲಿದ್ದು ಆರಗದ ಸೀಮೆಯನ್ನು ಆಳುತ್ತಿದ್ದನು. ಮೊದಲನೆಯ ಹರಿಹರನು ಬಹುಶಃ ಮಾರಪ್ಪನನ್ನು ಚಂದ್ರಗುತ್ತಿಯ ಪ್ರಾಂತ್ಯದ ಆಡಳಿತಕ್ಕೆ ನೇಮಿಸಿರಬೇಕು.[3] ಮುಂದೆ ಚಂದ್ರಗುತ್ತಿ ಮತ್ತು ಆರಗದ ಕಂಪಣಗಳನ್ನು ಒಟ್ಟಾಗಿಯೂ ಕೆಲವು ಅರಸರು ಆಳಿದ್ದಾರೆ. ಮಾರಪ್ಪನು ಚಂದ್ರಗುತ್ತಿಯಲ್ಲಿ ಆಳುತ್ತಿದ್ದಾಗ ಮೊದಲನೆಯ ಹರಿಹರ (೧೩೩೬-೧೩೬೦)ನು ೧೩೪೭ ರಲ್ಲಿ ಆನೆಗೊಂದಿಯಲ್ಲಿ ಆಳುತ್ತಿದ್ದನು. ಚಂದ್ರಗುತ್ತಿಗೆ ಕಲ್ಲಾಸನ ಮತ್ತು ಗೋಮಂತ ಶೈಲ ಎಂಬ ಹೆಸರುಗಳಿತ್ತು ಎಂದು ಹೇಳಲಾಗಿದೆ.[4]

ಮಾರಪ್ಪನು ಚಂದ್ರಗುತ್ತಿಯಲ್ಲಿದ್ದಾಗ ಕದಂಬರಿಗೆ ಸೇರಿದ್ದ ಕೆಲವು ಸೀಮೆಗಳನ್ನು ಗೆದ್ದನು. ಮಾಧವ ಎಂಬ ಕಾಶ್ಮೀರಿ ಶೈವ ಬ್ರಾಹ್ಮಣನು ಇವನ ಮಂತ್ರಿಯಾಗಿದ್ದನು. ಮಾರಪ್ಪನು ಆಂಧ್ರದಿಂದ ಬಂದ ಬ್ರಾಹ್ಮಣ ಕುಟುಂಬಗಳಿಗೆ ೨೮ ವೃತ್ತಿಗಳನ್ನು ನೀಡಿ ಕುಂಚಾಪುರಿ ಎಂಬಲ್ಲಿ ನೆಲೆಗೊಳಿಸಿದನುಲ. ಕುಂಚಾಪುರಿಯು ಶಿಕಾರಿಪುರ ತಾಲ್ಲೂಕಿನ ಸಂಡ ಗ್ರಾಮವಾಗಿರಬಹುದು. ಇಲ್ಲಿರುವ ೧೩೮೧ನೆಯ ವರ್ಷದ ಮಹಾಸತಿ ಕಲ್ಲು ವಿಜಯನಗರದ ಇಮ್ಮಡಿ ಹರಿಹರನ ಕಾಲಕ್ಕೆ ಸಂಬಂಧಿಸಿದೆ. ಇದರಲ್ಲಿ ಆರಗದ ೧೮ ಕಂಪಣದೊಳಗಣ ನೆಲುವಳಿಗೆ ನಾಡು ಎಂದು ಹೇಳಿದೆ.[5]ಇದೇ ಗ್ರಾಮದ ಚಾಳುಕ್ಯ ಜಗದೇಕ ಮಲ್ಲನ ಇನ್ನೊಂದು ಶಾಸನವು ಇದನ್ನು ಆದಿಯ ಅಗ್ರಹಾರಂ ಸಂಡದ ಮೂವತಿರ್ಚ್ಛಾಸಿರಕ್ಕೆ ಎಂದು ಹೇಳಿದೆ. ಆದುದರಿಂದ ಮಾರಪ್ಪನು ಬ್ರಾಹ್ಮಣರನ್ನು ನೆಲೆಗೊಳಿಸಿದ್ದು ಇದೇ ಅನಾದಿ ಅಗ್ರಹಾರವಾಗಿರಬಹುದು. ಆದರೆ ಇಲ್ಲಿಯ ಯಾವ ಶಾಸನದಲ್ಲಿಯೂ ಮಾರಪ್ಪನು ಹೆಸರಿಟ್ಟ ‘ಮಾರಪಪುರಿ’ ಎಂಬ ಹೆಸರು ಕಂಡುಬಂದಿಲ್ಲ.

ಮಾರಪ್ಪನ ಕಾಲದ ಸೊರಬದ ಒಂದು ಶಾಸನದಲ್ಲಿ ಹೇಳಿರುವಂತೆ[6]ವಿಜಯನಗರ ರಾಜ್ಯಸ್ಥಾಪಕನಾದ ಹರಿಹರನು ಯಾದವವಂಶದ ಸಂಗಮನ ಮಗ. ಸಂಗಮನಿಗೆ ಐದು ಮಂದಿ ಮಕ್ಕಳು. ೧೩೪೬ ರಲ್ಲಿ ಈ ನಾಲ್ವರು ಸಹೋದರರು ಶೃಂಗೇರಿಯ ಜಗದ್ಗುರುಗಳವರಿಗೆ ನೀಡಿದ ದಾನ ಶಾಸನದಲ್ಲಿ ವೀರ ಹರಿಯಪ್ಪ ಒಡೆಯ, ಬುಕ್ಕಣ್ಣ ಒಡೆಯ, ಮಾರಪ್ಪ ಒಡೆಯ ಮತ್ತು ಮುದ್ದಪ್ಪ ಒಡೆಯ ಎಂಬ ನಾಲ್ಕು ಹೆಸರುಗಳಿದ್ದು ಐದನೆಯವನಾದ ಕಂಪಣ್ಣನು ಅದೇ ವೇಳೆಗೆ ಮೊದಲು ಮರಣ ಹೊಂದಿರಬಹುದು. ಇಮ್ಮಡಿ ಹರಿಹರರಾಯನ ಕಾಲದಲ್ಲಿ ಆರಗಕ್ಕೆ ಒಂದು ಆಡಳಿತ ಘಟಕದ ಸ್ಥಾನವನ್ನು ನೀಡಿ ಹದಿನೆಂಟು ಕಂಪಣವೆಂದು ವಿಭಾಗ ಮಾಡಲಾಯಿತು.[7]

ವೀರಹರಿಯಪ್ಪ ಒಡೆಯ : ಇವನನ್ನು ಹೊಸದಾಗಿ ರಚಿಸಿದ ೧೮ ಕಂಪಣಗಳ ಆಡಳಿತ ನಡೆಸಲು ನೇಮಿಸಲಾಯಿತು. ಇವನು ಕ್ರಿ.ಶ. ೧೩೪೭ ರಲ್ಲಿ ಆರಗದಿಂದ ಸಾನ್ತಳಿಗೆ ಸಾವಿರವನ್ನು ಸಹ ಆಳುತ್ತಿದ್ದನು. ಇದು ಸಾನ್ತಳಿಗೆ ರಾಜ್ಯದಲ್ಲಿ ಹೊಯ್ಸಳರ ಆಡಳಿತದ ಅಂತಿಮಘಟ್ಟದ ಕಾಲ. ಹೊಯ್ಸಳ ವಿರೂಪಾಕ್ಷ ಬಲ್ಲಾಳ (೧೩೪೨-೧೩೪೬) ಕ್ರಿ.ಶ. ೧೩೪೬ರಲ್ಲಿ ಮರಣಹೊಂದಿದನು. ಇವನು ಹೊಯ್ಸಳ ವಂಶದ ಕೊನೆಯ ದೊರೆ. ಇದೇ ವರ್ಷ ಸಾನ್ತಳಿಗೆ ಸಾವಿರವು ವಿಜಯನಗರ ಸಾಮ್ರಾಜ್ಯದಲ್ಲಿ ವಿಲೀನಗೊಂಡಿತು.

ಹಿಂದೆ ಹೇಳಿದ ೧೩೪೬ರ ಶ್ರಿಂಗೇರಿ ಶಾಸನದಂತೆ ಮೊದಲನೆಯ ಹರಿಹರನು ಶ್ರಿಂಗೇರಿ ಪೀಠಾಧಿಪತಿಗಳಾದ ಭಾರತ ತೀರ್ಥರಿಗೆ ಸಾಂತಳಿಗೆ ನಾಡಿನ ಕೆಳಭಾಗದ ಕೈಮೇಲೆ ಹೊಸವೂರು ಎಂಬ ಗ್ರಾಮವನ್ನು ದಾನವಾಗಿ ನೀಡಿದ್ದಾನೆ. ಇದೇ ಸಮಯದಲ್ಲಿ ಹೊಯ್ಸಳ ವೀರ ಬಲ್ಲಾಳನ ಹಿರಿಯ ಅರಸಿ ಕಿಕ್ಕಾಯಿ ತಾಯಿಯು ಸಾಂತಳಿಗೆ ನಾಡಿನ ಕೆಲವು ಸೀಮೆಗಳನ್ನು ಇದೇ ಮಠಕ್ಕೆ ಇದೇ ಸಂದರ್ಭದಲ್ಲಿ ದಾನ ನೀಡಿರುವುದು ಗಮನಾರ್ಹವಾಗಿದೆ. ಇದರಿಂದ ಕಿಕ್ಕಾಯಿ ತಾಯಿಯು ಸಾಂತಳಿಗೆ ಮೇಲಿದ್ದ ಹರಿಹರನ ಪ್ರಭುತ್ವವನ್ನು ಒಪ್ಪಿಕೊಂಡಿದ್ದಳೆಂದು ತಿಳಿಯುತ್ತದೆ.

೧೩೬೦ರಲ್ಲಿ ಬುಕ್ಕರಾಯನ ಹಿರಿಯ ಮಗ ತಿಪ್ಪಣ್ಣನು ಆರಗ ಮತ್ತು ಮಂಗಳೂರು ಪ್ರಾಂತ್ಯದಲ್ಲಿ ರಾಜ್ಯವನ್ನು ವಿಸ್ತರಿಸುತ್ತಿದ್ದನೆಂದು ಬೆಳಗುತ್ತಿಯ ಕೈಫಿಯತ್ತಿನಲ್ಲಿದೆ. ಸೀವೆಲ್ಲನು (Sewell) ತಿಪ್ಪಣ್ಣನನ್ನು ಇಮ್ಮಡಿ ಹರಿಹರನೆಂದು ಹೇಳಿದ್ದಾನೆ.[8]೧೩೩೬ರಲ್ಲಿ ಮಾರರಸನು ಮಂಗಳೂರಿನ ರಾಜ್ಯಪಾಲನಾಗಿದ್ದನೆಂದು ಇದೇ ಕೈಫಿಯುತ್ತಿನಲ್ಲಿದೆ.

ವಿಜಯನಗರದ ದೊರೆ ಹರಿಹರನು ಸಾಂತಳಿಗೆ ಆಡಳಿತ ನಡೆಸಲು ಆಗ ಆರಗದಲ್ಲಿ ಆಳುತ್ತಿದ್ದ ತನ್ನ ವಂಶದ ವೀರ ಹರಿಯಪ್ಪ ಒಡೆಯನನ್ನು ನೇಮಿಸಿದಂತೆ ತಿಳಿಯುತ್ತದೆ. ಇವನ ಕಾಲದಲ್ಲಿ ಕ್ರಿ.ಶ. ೧೩೬೧ರಲ್ಲಿ ಬೆಳಗುತ್ತಿಯ ಅರಸು ಚೆಲುವರಂಗಪ್ಪನು ಆರಗದ ಬಳಿಯ ಕೌಲೆದುರ್ಗದಲ್ಲಿ ಕೋಟೆ ಕಟ್ಟಿಸಿದನೆಂದು ಬೆಳಗುತ್ತಿಯ ಕೈಫಿಯತ್ತಿನಲ್ಲಿದೆ.[9]ಇವನೂ ಸಹ ವಿಜಯನಗರದ ರಾಜವಂಶದ ಬಂಧುವಾಗಿದ್ದನು. ಇದೇ ವೀರ ಹರಿಯಪ್ಪ ಒಡೆಯನ ಕಾಲದಲ್ಲಿ ಕ್ರಿ.ಶ. ೧೩೬೩ರಲ್ಲಿ ಬುಕ್ಕರಾಯನ ಕುಮಾರ ವಿರೂಪಾಕ್ಷನು ಆರಗದ ಮದುವಂಕ ನಾಡಿನ ವಿರೂಪಾಕ್ಷಪುರದಲ್ಲಿ ಬ್ರಾಹ್ಮಣರಿಗೆ ಭೂದಾನ ನೀಡಿದ್ದಾನೆ.[10]ಇವನು ತನ್ನ ಹೆಸರಿನಲ್ಲಿ ಆರಗದಲ್ಲಿ ವಿರೂಪ ಸಮುದ್ರ ಎಂಬ ಕೆರೆಯನ್ನು ಕಟ್ಟಿಸಿದ್ದಾನೆ.

ವಿರುಪಂಣ ಒಡೆಯ : ಇವನು ಬುಕ್ಕರಾಯನ ಮಗ. ಇವನು ೧೩೬೮ ರಲ್ಲಿ ಆರಗವನ್ನು ಆಳುತ್ತಿದ್ದಾಗ ಕೌಲೆದುರ್ಗದ ಮೈಲಾರದೇವರ ಅಮೃತಪಡಿಗೆ[11] ಮತ್ತು ಇಲ್ಲಿಯ ವಿರಕ್ತಮಠಕ್ಕೆ[12] ಭೂದಾನ ನೀಡಿದ್ದಾನೆ. ಕೋಡೂರಿನ ದಾನ ಶಾಸನದಲ್ಲಿಯೂ ಇವನ ಪ್ರಸ್ತಾಪವಿದೆ[13] ವಿರುಪಂಣ ಒಡೆಯನ ಕಾಲದಲ್ಲಿ ಹೆದ್ದೂರು ನಾಡಿನ ಕಣಿಗ್ರಾಮದ ಪಾರ್ಶ್ವನಾಥ ಬಸದಿಗೆ ಆಬಾರಿಗಳು, ಸೂರಿಗಳು, ಮಹಾಪ್ರಧಾನ ನಾಗಂಣ, ಪ್ರಧಾನಿ ದೇವರಸ ಆರಗದ ಪಟ್ಟಣಸಾಮಿ ಮಾಚಿ ಸೆಟ್ಟಿ ಮತ್ತು ಗುಮ್ಮಟಸೆಟ್ಟಿಯು ಏಕತ್ರರಾಗಿ ಭೂದಾನ ನೀಡಿದರೆಂದು ಈ ಗ್ರಾಮದಲ್ಲಿರುವ ಶಾಸನದಲ್ಲಿದೆ.[14]ಇವನ ಕಾಲದಲ್ಲಿ ವೀರಪ್ಪ ಒಡೆಯರ ಕುಮಾರ ಸೋಮಂಣ ಒಡೆಯರು ಜಾಗಟಗಾರು ದೇವಣ್ಣ ಭಟ್ಟರಿಗೆ ಭೂದಾನ ನೀಡಿದ ಶಾಸನವಿದೆ.[15]ಇವನು ೧೩೪೭ರಲ್ಲಿ ಆರಗದಲ್ಲಿ ಆಳುತ್ತಿದ್ದ ವೀರ ಹರಿಯಪ್ಪ ಒಡೆಯನ ಮಗನಿರಬೇಕು.

ವೇದಗಿರಿ ವಿರುಪರಾಯ : ಇವನು ಬುಕ್ಕರಾಯ ಮತ್ತು ಪದುಮಲದೇವಿಯರ ಮಗ. ಅತ್ತಿಗಾರಿನ ಶಾಸನದಲ್ಲಿ ಇವನನ್ನು ಬುಕ್ಕರಾಯ ಕುಮಾರ ವೀರ ಉದಗಿರಿ ವಿರುಪಂಣ ಒಡೆಯ ಎಂದು ಉಲ್ಲೇಖಿಸಿದೆ.[16] ಇವನ ತಾಯಿ ಪದುಮಲ ದೇವಿಯು ವಾಸುಕಾರ ರಾಮದೇವನ ಮಗಳು. ಮಂಜಾದೇವಿಯು ವಿರುಪರಾಯನ ಪತ್ನಿ ಇವರಿಬ್ಬರೂ ಆರಗದ ವೀರಭದ್ರ ದೇವರಿಗೆ ವೈಭವದ ಉತ್ಸವ ನಡೆಸಿದರು. (ಶಾಸನ ಅಸ್ಪಷ್ಟ) ಕೊನೆಗೆ ವೇದಗಿರಿ ವಿರುಪಂಣ ಒಡೆಯರ ಕೂಡಿ ಮಂಜಾದೇವಿಯು ಸ್ವರ್ಗವನ್ನು ಸೂರೆಗೊಂಡಳೆಂದು ಹೇಳಿದೆ.[17]

ಚಿಕ್ಕರಾಜ ಒಡೆಯ : ಇವನು ಇಮ್ಮಡಿ ಹರಿಹರ ರಾಯನ ಮಗ. ಈಸರಾಪುರದ ಶಾಸನದಲ್ಲಿ ಮೊದಲ ಬಾರಿಗೆ ಇವನನ್ನು ಶ್ರೀಮನ್ಮಹಾಮಂಡಳೇಶ್ವರ ಎಂದು ಕರೆದಿದೆ.[18]ಇವನು ೧೩೭೬ ರಲ್ಲಿ ಚಂದ್ರಗುತ್ತಿಯನ್ನು ಸಹ ಆಳುತ್ತಿದ್ದನು.

ಇವನ ಪಾದಪದ್ಮೋಪಜೀವಿಯಾದ ವೀರ ವಸಂತರಾಯನು ಮಹಾವೀರ. ಶಾಸನದಲ್ಲಿ ಇವನಿಗೆ “ಅರಿರಾಯ ಭಯಂಕರ ಮೂವರ ರಾಯರಗಂಡ, ತುರುಕದಳ ವಿಭಾಡ, ವೈರಿರಾಯ ಮಸ್ತಕಶೂಲ” ಮುಂತಾದ ಪ್ರಶಸ್ತಿಗಳನ್ನು ಹೇಳಿದೆ. ಇದರಿಂದ ಇಮ್ಮಡಿ ಹರಿಹರನು ಈ ಎರಡು ಕಂಪಣಗಳ ರಕ್ಷಣೆ ಮತ್ತು ಚಿಕ್ಕರಾಜ ಒಡೆಯನಿಗೆ ಆಡಳಿತದಲ್ಲಿ ಸಹಾಯ ಮಾಡಲು ಇವನನ್ನು ನೇಮಿಸಿರಬೇಕು. ೧೩೭೮ರ ಈ ಶಾಸನದಲ್ಲಿ ಹೇಳಿರುವ ಬಸಪ್ಪನಾಯಕನು ಈಸರಾಪುರದ ಪೆರಗ್ಗಡೆ.

ಮಲ್ಲಪ್ಪ ಒಡೆಯ : ಇವನು ಇಮ್ಮಡಿ ಹರಿಹರ ರಾಯನ ವಂಶದವನು. ೧೩೯೦ರಲ್ಲಿ ಆರಗದಲ್ಲಿ ಆಳುತ್ತಿದ್ದಾಗ ನೆಲವಾಗಿಲು ಮೈಲಾರಲಿಂಗೇಶ್ವರ ದೇವಾಲಯಕ್ಕೆ ಭೂದಾನ ನೀಡಿದ್ದನೆಂದು ಇಲ್ಲಿರುವ ಶಾಸನದಲ್ಲಿದೆ.[19]

ವೀರಣ್ಣ ಒಡೆಯ : ೧೩೯೪ರಲ್ಲಿ ಆಡಳಿತ ನಡೆಸುತ್ತಿದ್ದ ಇವನು ಚಿಕ್ಕರಾಜ ಒಡೆಯನ ಮಗ. ಇವನಿಗೆ ವೀರ ಸೋಮಂಣ ಎಂಬ ಇನ್ನೊಂದು ಹೆಸರಿತ್ತು. ಇವನು ತೀರ್ಥಹಳ್ಳಿಯ ಬುಕ್ಕರಾಯಪುರದ ಮಹಾಜನಂಗಳಿಗೆ (ಬ್ರಾಹ್ಮಣರಿಗೆ) ಭೂದಾನ ನೀಡಿ ಶಿಲಾಪ್ರತಿಷ್ಠೆ ಮಾಡಿಸಿದನು.[20]ಇವನು ಆಳುತ್ತಿದ್ದಾಗ ೧೩೯೦ರಲ್ಲಿ ಮರಣ ಹೊಂದಿದ ಇಮ್ಮಡಿ ಹರಿಹರನಿಗೆ ಮುಕ್ತಿ ಸಿಗಲೆಂದು ಮುಕ್ತಿಹರಿಹರಪುರ ಎಂಬ ಅಗ್ರಹಾರವನ್ನು ಸ್ಥಾಪಿಸಿ ಬ್ರಾಹ್ಮಣರಿಗೆ ಸ್ಥಳ ವೃತ್ತಿಯನ್ನು ಕಲ್ಪಿಸಿದನು. ಈ ಶಾಸನದಲ್ಲಿ ಅಗ್ರಹಾರ ಸ್ಥಾಪನೆಯ ಕಾಲವನ್ನು ಹೇಳಿಲ್ಲ.[21] ರಾಮರಸನು ವೀರಣ್ಣ ಒಡೆಯನ ಮನೆಯ ಪ್ರಧಾನನೆಂದು ಹೇಳಿದೆ. ಬಹುಶಃ ಇವನು ರಾಜನ ಆಪ್ತ ಕಾರ್ಯದರ್ಶಿಯಾಗಿರಬಹುದು.[22]

ಜನ್ನಪ್ಪ ಒಡೆಯ : ಇವನು ೧೪೦೦ ರಲ್ಲಿ ಆರಗವನ್ನು ಆಳುತ್ತಿದ್ದಾಗ ಚಿಕ್ಕವಳ್ಳಿಯ ದೇವಾಲಯಕ್ಕೆ ದಾನ ನೀಡಿದ್ದಾನೆ.[23]ಇದರ ಹೊರತಾಗಿ ಇವನ ಬಗ್ಗೆ ವಿವರಗಳಿಲ್ಲ.

ರಾಯಪ್ಪಯ್ಯ ವೀರಪ್ಪಯ್ಯ ಒಡೆಯ : ೧೪೦೩ರಲ್ಲಿ ಆಡಳಿತ ಸೂತ್ರಧಾರಿಯಾದ ಇವನು ಸಂಕಪ್ಪರಾಯಪ್ಪನ್ವಯದವನೆಂದು ಹೇಳಲಾಗಿದೆ. ಇವನು ಅಬಿಪ್ಪಗಳ ಮಕ್ಕಳು ವಿಠಪ್ಪ ಎಂಬುವರಿಗೆ ಭೂದಾನ ನೀಡಿದ ದಾಖಲೆಯಿದೆ.[24]

ವಿಠಂಣ : ಇವನ ಹೆಸರಿನ ಮುಂದೆ ಒಡೆಯ ಎಂಬ ಉಪನಾಮವಿಲ್ಲ. ಇವನು ರಾಜ ಕುಟುಂಬದ ಬಂಧುವಾಗಿ ಬೇರೊಂದು ಅನ್ವಯಕ್ಕೆ ಸೇರಿದವನೆಂದು ತಿಳಿಯುತ್ತದೆ. ಇದರಂತೆ ಇವನನ್ನು ರಾಮಪ್ಪ ಒಡೆಯರ ಬೊಂಮಣಗಳ ಮಕ್ಕಳು ವಿಠಣ್ನಗಳು ಎಂದು ಶಾಸನದಲ್ಲಿ ಉಲ್ಲೇಖಿಸಿದೆ. ೧೪೦೩ರಲ್ಲಿ ಇವನು ಆಳುತ್ತಿದ್ದಾಗ ಆರಗದ ಕಲಿನಾಥ ದೇವರಿಗೆ ಭೂದಾನ ನೀಡಿದ್ದಾನೆ. ಇವನಿಗೆ ಸಂಬಂಧಿಸಿದ ಆರಗದ ಇನ್ನೊಂದು ಶಾಸನದಲ್ಲಿ ಹೊಂನಗುತ್ತಿಗೆ ಸಲುವ ಭೂಮಿ ಎಂದು ಹೇಳಿದೆ.[25] ಇವನು ಆರಗದ ಹಿರಿಯಂಗಡಿ ಬನದೇವಿ ದೇವಾಲಯಕ್ಕೆ ಭೂದಾನ ನೀಡಿದ್ದಾನೆ.[26]

ಇಮ್ಮಡಿ ವೀರಣ್ಣ ಒಡೆಯ : ಇವನು ೧೪೦೫ ರಿಂದ ಆರಗದಲ್ಲಿ ಆಡಳಿತ ನಡೆಸಿದ್ದಾನೆ. ಇಲ್ಲಿಯ ಕಲಿನಾಥ ದೇವಾಲಯದ ಒಂದು ಶಾಸನದಲ್ಲಿ ೧೪೦೫ರಲ್ಲಿ ಬುಕ್ಕರಾಯನು ವಿಜಯನಗರವನ್ನು ಆಳುತ್ತಿದ್ದಾಗ, “ಸಂಕಪ್ಪರಾಯಪ್ಪಾನ್ವಯ ಬ್ರಂಹರಾಜಕುಮಾರ ವೀರಪ್ಪ ಒಡೆಯರು ಆರಗದಲ್ಲಿ ರಾಜ್ಯವಾಳುತಿರೆ ಮದುವಂಕನಾಡ ಸಮಸ್ತಗವುಡ ಪ್ರಭುಗಳು” ಸೇರಿ ಕಲಿನಾಥದೇವರಿಗೆ ಭೂದಾನ ನೀಡಿದ್ದಾರೆ.[27]ಇದೇ ಸ್ಥಳದ ಇನ್ನೊಂದು ಶಾಸನದಲ್ಲಿ ಬುಕ್ಕರಾಯನ ನಿರೂಪದಿಂದ “ಹೇಮಾದ್ರಿಪ್ರೋಕ್ತಸರಳ ದಾನ ದೀಕ್ಷಾಗುರು ಸಂಕಪ್ಪರಾಯ ಪ್ಪಾನ್ವಯ ಬ್ರಂಹರಾಜ ಕುಮಾರ” ಎಂದು ಕಾಣಿಸಿದೆ.[28] ಇಲ್ಲಿಯ ಮತ್ತೊಂದು ಶಾಸನದಲ್ಲಿ ಶ್ರೀಮತುಸುಭತೀರ್ಥ ಶ್ರೀ ಪಾದಂಗಳು ಆರಾಧಿಸುವ ಅಮೃತಪಡಿಗೆ ಅಯೋಧ್ಯಾಪುರವೆಂದು ರಾಯಪ್ಪಗಳ ಬೊಮ್ಮಣಗಳ ಮಗ ವೀರಂಣಗಳು ಸಹಿರಣ್ಯೋದಕ ದಾನ ಎಂದು ಓದಿಸಿಕೊಳ್ಳುತ್ತದೆ.[29]ಹೀಗೆ ಶಾಸನೋಕ್ತ ಹೇಳಿಕೆಗಳೆಲ್ಲಾ ವೀರಣ್ಣ ಒಡೆಯನಿಗೆ ಸಂಬಂಧಿಸಿವೆ. ಇವನು ಕೂಡಲಿ ಶ್ರೀಮಠದ ಯತಿಗಳಾಗಿದ್ದ ಅಕ್ಷೋಭ್ಯತೀರ್ಥರ ಸಮಕಾಲೀನನಾಗಿದ್ದನು. ಇವನಿಗೆ ಸರಳದಾನ ದೀಕ್ಷಾಗುರು ಎಂದು ಹೇಳಿದೆ.

ಈಚಲುಬಯಲು ಕ್ರಿ.ಶ. ೧೪೦೫ರ ಶಾಸನದಲ್ಲಿ ಆರಗದ ವೇಂಟೆಯ ಒಳಗಿನ ಸಾಂತಳಿಗೆ ಸಾವಿರ ಎಂದಿರುವುದರಿಂದ ಆಗ ಸಾಂತಳಿಗೆಯು ಆರಗದ ಆಡಳಿತದಲ್ಲಿತ್ತು ಎಂದು ತಿಳಿಯುತ್ತದೆ.[30]

ಸಿರಿಗಿರಿನಾಥದೇವ : ಆರಗದ ಒಂದು ಶಾಸನದಲ್ಲಿ ತಂಮಣ ಒಡೆಯರ ಮಕ್ಕಳು ಸಿರಿಗಿರಿನಾಥ ಒಡೆಯರು ಛತ್ರ ಕಟ್ಟಿಸಿ ಭೂದಾನ ನೀಡಿದರೆಂದು ಉಲ್ಲೇಖವಾಗಿದೆ. ಇವನು ವಿಜಯನಗರದ ಪ್ರಭು ಇಮ್ಮಡಿ ದೇವರಾಯ (೧೪೧೯-೧೪೪೬) ನ ಕಾಲದಲ್ಲಿ ೧೪೨೨ರಲ್ಲಿ ಆರಗದಲ್ಲಿ ಆಳುತ್ತಿದ್ದು ಇಲ್ಲಿಯ ಅಖಂಡೇಶ್ವರ ದೇವಾಲಯಕ್ಕೆ ಭೂದಾನ ನೀಡಿದ್ದಾನೆ.[31]

ಸಿರಿಯಮ್ಮ ಹೆಗ್ಗಡೆ : ಇವನು ವಿಜಯನಗರದ ರಾಜವಂಶದ ಬಂಧುವಾಗಿರಬಹುದು. ಹೊರಬೈಲಿನ ದೇವಾಲಯಕ್ಕೆ ನೀಡಿದ ದಾನ ಶಾಸನದಂತೆ ಇವನು ಆರಗದಲ್ಲಿ ೧೪೫೧ ರಲ್ಲಿ ಆಳುತ್ತಿದ್ದನೆಂದು ತಿಳಿಯುತ್ತದೆ.[32]

ದೇವಪ್ಪ ಡಣಾಯಕ : ಈವರೆಗೆ ಆರಗದಲ್ಲಿ ಆಳುತ್ತಿದ್ದ ರಾಜವಂಶದವರ ಆಡಳಿತ ಕಣ್ಮರೆಯಾದಂತೆ ತಿಳಿಯುತ್ತದೆ. ಬಹುಶಃ ಸೈನ್ಯಾಧಿಪತಿಯಾಗಿದ್ದ ದೇವಪ್ಪ ಡಣಾಯಕನು ೧೪೬೭ರಲ್ಲಿ ಆರಗದಲ್ಲಿ ಆಳುತ್ತಿದ್ದನೆಂದು ಇವನು ನಾಬಳದ ದೇವಾಲಯಕ್ಕೆ ನೀಡಿದ ದಾನ ಶಾಸನದಿಂದ ತಿಳಿಯುತ್ತದೆ.[33] ಮುಂದೆ ೧೫೦೯ ರವರೆಗೆ ಆಡಳಿತ ವಿವರ ದೊರೆತಿಲ್ಲ. ನಂತರ ಆರಗ ೧೮ ಕಂಪಣವು ಕೆಳದಿಯ ಸಂಸ್ಥಾನಕ್ಕೆ ಸೇರಿಕೊಂಡಿತು. ಇಲ್ಲಿಗೆ ಆರಗದ ರಾಜಕೀಯ ಇತಿಹಾಸದ ಮೊದಲ ಘಟ್ಟಕ್ಕೆ ತೆರೆಬಿದ್ದಿತು.

ಎರಡನೆಯ ಘಟ್ಟ

ಸದಾಶಿವನಾಯಕ : (೧೫೧೪-೧೫೩೭) ಇವನಿಂದ ಆರಗದ ರಾಜಕೀಯ ಚಟುವಟಿಕೆಯ ಎರಡನೆಯ ಘಟ್ಟ ಆರಂಭವಾಗುತ್ತದೆ. ವಿಜಯನಗರದ ದೊರೆ ಕೃಷ್ಣದೇವರಾಯನು (೧೫೦೯-೧೫೨೯) ಆರಗದ ೧೮ ಮಾಗಣೆಯ ಆಡಳಿತವನ್ನು ಕೆಳದಿಯ ಸದಾಶಿವನಾಯಕನಿಗೆ ವಹಿಸಿದನು.[34]ವಿಜಯನಗರದ ಸಾಮಂತನಾಗಿದ್ದ ಈ ಅರಸನು ಇಕ್ಕೇರಿಯಿಂದ ಆರಗದ ಆಡಳಿತವನ್ನು ನಿರ್ವಹಿಸಿದನು. ಇವನು ಆರಗದ ಸದಾಶಿವಪುರ ಅಗ್ರಹಾರದಲ್ಲಿ ವೈದಿಕರ ಪುನರ್ವಸತಿಗೆ ಆದ್ಯತೆ ನೀಡಿದನು.[35] ಹೀಗೆ ಆರಗ ಕೆಳದಿ ಅರಸರ ನೇರ ಆಡಳಿತಕ್ಕೆ ಒಳಪಟ್ಟಿತು.

ಆಸೇಸಪ್ಪ : ಇವನು ವಿಜಯನಗರದ ರಾಜಪ್ರತಿನಿಧಿಯಾಗಿ ೧೫೬೦ರಲ್ಲಿ ಆರಗವನ್ನು ಆಳುತ್ತಿದ್ದನೆಂದು ಒಳಗೋಡು ಶಾಸನದಿಂದ ತಿಳಿಯುತ್ತದೆ. ಹೆಚ್ಚಿನ ವಿವರಗಳು ದೊರೆತಿಲ್ಲ.[36] ವಿಜಯನಗರ ಕಾಲದಲ್ಲಿ ಆರಗವನ್ನು ಒಂದು ಪ್ರತ್ಯೇಕ ರಾಜ್ಯ ಘಟಕವನ್ನಾಗಿ ಮಾಡಲಾಯಿತೆಂದು ಹಿಂದೆಯೇ ಹೇಳಿದೆ. ಇದಕ್ಕೆ ಬೇರೆ ಬೇರೆ ಹೆಸರಿತ್ತು ಎಂದು ಶಾಸನದಲ್ಲಿದೆ.

. ರಾಜ್ಯ : ಎಂದು ಕರೆದಿರುವ ದಾಖಲೆಗಳು.
ಅ) ಆಸೇಸಪ್ಪನವರು ಆರಗರಾಜ್ಯವನ್ನು ಸುದರ್ಮದಲ್ಲಿ ಪಾಲಿಸುತ್ತಿರೆ.[37]
ಆ) ಆರಗ ರಾಜ್ಯಕ್ಕೆ ಸಲುವ ಮದುವಂಕನಾಡಸೀಮೆ.[38]

೨. ಕಂಪಣ
(೧) ಆರಗದ ೧೮ ಕಂಪಣದ ಒಳಗಿನ ನೆಲುವಳಿಗೆ ನಾಡು[39]
(೨) ಆರಗದ ವೇಂಟಿಗೆ ಸಲುವ ೧೮ ಕಂಪಣ[40]
(೩) ಆರಗದ ೧೮ ಕಂಪಣದ ಸಮಸ್ತ ನಾಡು[41]
(೪) ಆರಗದ ನಾಡ ೧೮ ಕಂಪಣ[42]

೩. ವೇಂಟೆ
(೧) ಆರಗದ ವೇಂಟೆ[43]
(೨) ಆರಗದ ವೇಂಟೆಗೆ ಸಲುವ[44]
(೩) ಆರಗದ ವೇಂಟೆಯ ಸೀಮೆ[45]

೪. ಸೀಮೆ
(೧) ಆರಗದ ಸೀಮೆಯ ಹೊಳೆಹೊನ್ನೂರು[46]
(೨) ಆರಗ ಗುತ್ತಿ ಸೀಮೆ[47]

೫. ಹೋಬಳಿ

(೧) ಆರಗದ ಹೋಬಳಿ[48]

೬. ಮಾಗಣೆ

(೧) ಆರಗರಾಜ್ಯವನು ಮಾಗಣೆಯಾಗಿ

ಆರಗ ರಾಜ್ಯದಲ್ಲಿ ನಿರ್ದಿಷ್ಟವಾಗಿ ಎಷ್ಟು ಸೀಮೆಗಳಿತ್ತು ಎಂಬ ಅಂಕೆ ಸಂಖ್ಯೆಗಳು ದೊರೆತಿಲ್ಲ ಶಾಸನದಲ್ಲಿ ಈ ಕೆಳಗಿನ ಸೀಮೆಗಳ ಹೆಸರು ಕಂಡು ಬಂದಿದೆ.

ಹೆರ್ದ, ಹೊಕ್ಕಳಿ, ಮದುವಂಕನಾಡು, ಗಾಜನೂರು, ಹೊಸ ಎಡತ್ತೊರೆ, ಮಂಡಗದ್ದೆ, ಹಣಗೇರಿ, ಹಲಸರ, ವಾಸದ, ದಾನಿವಾಸ, ಕೆಳದಿ ದೇವಸ್ಥಾನ, ಆರಗ ದೇವಸ್ಥಾನ, ಕಲ್ಲು ಕೊಡಗಿ, ಕಿರುವರಿಗೆ, ಗಡತ್ತಾರೆ, ಹೊನ್ನಾಳಿ, ಹಾರನಹಳ್ಳಿ, ಹೊಂಬುಜ, ಮತ್ತೂರು, ಉಡಗಣಿ, ಶಿವಪುರ, ಸೀತೂರು, ಮೊಸರೂರು, ಕುಪಟೂರು, ನೆಲವತ್ತಿ (ನ್ಯಾಮತಿ), ನಿಡುವಲ ಹೊನ್ನೆಕೊಪ್ಪ, ಹಲವುಸಾಲೆ, ನೇರ್ಲಕೊಪ್ಪ, ಕನ್ನಂಗಿ, ಮಾಳೂರು, ತುರುವಳ.

ಘಟಕದ ಸ್ವರೂಪ (ನಕಾಶೆ ನೋಡಿ)

ಆರಗದ ೧೮ ಕಂಪಣವನ್ನು ಇಚ್ಛೆ ೯ ಕಂಪಣ ಈಳೆ ೯ ಕಂಪಣ ಎಂದು ಪ್ರಮುಖವಾಗಿ ಎರಡು ವಿಭಾಗಗಳನ್ನಾಗಿ ಮಾಡಲಾಗಿದೆ.[49] ಇಚ್ಛೆ ಮತ್ತು ಈಳೆ ಎಂಬುದು ಸ್ಥಳನಾಮವೆ ಅಥವಾ ಒಂದು ವಿಭಾಗದ ಹೆಸರಿರಬಹುದೆ ಎಂಬುದು ತಿಳಿಯುವುದಿಲ್ಲ. ಸಾಗರದ ಬಳಿ ಈಳಿ ಎಂಬ ಗ್ರಾಮವಿದೆ. ಇದನ್ನೇ ಈಳೆ ಎಂದು ಹೇಳಲು ಆಧಾರವಿಲ್ಲ. ಮೇಲೆ ಹೇಳಿದಂತೆ ಕಂಪಣ, ವೇಂಟೆ, ರಾಜ್ಯ, ನಾಡುಗಳನ್ನು ಒಟ್ಟಾಗಿಯೂ ಹೇಳಲಾಗಿದೆ. ಉದಾಹರಣೆಗೆ

೧) ೧೮ ಕಂಪಣದ ನಾಡು
೨) ಆರಗದ ಸೀಮೆ ವೇಂಟೆ
೩) ಆರಗದ ವೇಂಟೆಗೆ ಸಲುರ್ವ ಕಂಪಣ ಇತ್ಯಾದಿ

ಹೀಗೆ ಆರಗವು ಒಂದು ಕಂಪಣ, ರಾಜ್ಯ, ವೇಂಟೆ, ಸೀಮೆ, ಹೋಬಳಿ, ನಾಡು ಎಂದೆಲ್ಲ ಕರೆಸಿಕೊಂಡಿದೆ. ಇದರಲ್ಲಿ ೧೮ ಕಂಪಣಗಳು ೧೮ ಸೀಮೆಗಳಾಗಿದ್ದ ಸಾಧ್ಯತೆಯಿದೆ. ಆದರೂ ಈ ವಿಭಾಗಗಳ ವಿಸ್ತಾರವಾಗಲೀ ಇವುಗಳಲ್ಲಿದ್ದ ಗ್ರಾಮಗಳ ಸಂಖ್ಯೆಯಾಗಲೀ ತಿಳಿದಿಲ್ಲ.

ಆರಗವೇಂಟೆಯಲ್ಲಿ ಆರಗ, ಕೊಡಲೂರು (ಕೋಡೂರು) ಯಡೆಹಳ್ಳೀ, ಆವಿನಹಳ್ಳಿ, ಕಾರಲೂರು (ಕರೂರು) ಬಿದರೂರು, ಮೊಸರೂರು, ಮಾಳೇನಹಳ್ಳಿ ಎಂಬ ಎಂಟು ಪೇಟೆಗಳಿತ್ತು ಎಂದು ಕೌಲೆದುರ್ಗದ ಒಂದು ಶಾಸನದಲ್ಲಿದೆ.[50]ಇನ್ನೊಂದು ಶಾಸನದಲ್ಲಿ ಆರಗದ ವೇಂಟೆಯ ರಾವಣದೊಳಗಣ ಎಂದು ಹೇಳಿದೆ.[51]ಇದನ್ನು ಸೀಮೆ ಎಂಬ ಅರ್ಥದಲ್ಲಿ ಹೇಳಿರಬಹುದು.

 

[1]ಹಂಪನಾಗರಾಜಯ್ಯ, ಸಾಂತರರು ಒಂದು ಅಧ್ಯಯನ ಪು ೧೩-

[2]ಎಫಿಗ್ರಾಫಿಯಾ ಕರ್ನಾಟಕಾ (ಎ.ಕ.)ಸಂ. ೮, (ರೈಸ್ ಸಂಪಾದಿತ) ಸೊರಬ ೩೭೫ ಸೊರಬ ೧೩೪೭

[3]ಕಪಟರಾಳು ಕೃಷ್ಣರಾವ್ ಕರ್ನಾಟಕ ಸಂಸ್ಕೃತಿಯ ಸಂಶೋಧನೆ ಪು ೨೪೪

[4]ಇದೇ ಪು ೨೫೦

[5]ಎ.ಕ. ೭ ಶಿಕಾರಿಪುರ ೧೮೭ ಕ್ರಿ.ಶ. ೧೩೮೧

[6]ಎ.ಕ.೮. ಸೊರಬ ೩೭೫

[7]ಎ.ಕ.೭. ಶಿಕಾರಿಪುರ ೧೮೭.

[8] Sewell R. Forgotten Empire Bukka had seven sons in 1360 AD. Bukka’s eldest son was Spreading the rule of Vijayanagar Kingdom in Araga and Mangalore Rajya. He captured the fort of Uccangi. Sewell identifies this Thippanna with Harihara II. In 1361 Mararasa was goverining Mangalore. Z.

[9] Belaguthi kaifiat Q.J.M.S. (Quarterly Journal mythic society) Bangalore Vol XXXV AP 1945 P.67

[10]ಎ.ಕ. ೮ ತೀರ್ಥಹಳ್ಳಿ ೮ ಮಾಕೋಡು ೧೩೯೭

[11]ಇದೇ ೯೭ ಕವಲೆದುರ್ಗ ೧೩೭೬

[12]ಇದೇ ೩೦ ಮಿಟಲಗೋಡು ೧೩೬೮

[13]ಇದೇ ನಗರ ೭೩ ಕೋಡೂರು ೧೩೬೮

[14]ಇದೇ ತೀರ್ಥಹಳ್ಳಿ ೯೪ ಕಣಿಗ್ರಾಮ ೧೩೭೬

[15]ಇದೇ ೧೩೨ ಜಾಗಟಗಾರು ೧೩೬೯

[16]ಇದೇ ೨೮ ಅತ್ತಿಗರು ೧೩೭೬

[17]ಇದೇ

[18]ಎ.ಕ. ೭ ಹೊನ್ನಾಳಿ ೮೪ ಈಸರಾಪುರ ೧೩೭೯

[19]ಅದೇ ಶಿಕಾರಿಪುರ ೩೧೩ ಗೊಡ್ಡನಕೊಪ್ಪ ೧೩೯೦

[20]ಎ.ಕ. ೮ ತೀರ್ಥಹಳ್ಳಿ ೯೨ ಕುರುವಳ್ಳಿ ೧೩೯೪

[21]ಇದೇ ೧೬೪ ಮುಕ್ತ ಹರಿಹರಪುರ ಕ್ರಿ.ಶ. ?

[22]ಇದೇ ೧೨೫ ಹುತ್ತವಳ್ಳಿ ೧೩೭೬

[23]ಇದೇ ೩೧ ಚಿಕ್ಕಹಳ್ಳಿ ೧೪೦೦

[24]ಇದೇ ೧೩೩ ಕುರುವಳ್ಳಿ ೧೪೦೩

[25]ಇದೇ ೯ ಆರಗ ೧೪೦೩

[26]ಇದೇ ೧೩ ಆರಗ ೧೪೦೪

[27]ಇದೇ ೪ ಆರಗ ೧೪೦೫

[28]ಇದೇ ೧೨ ಆರಗ

[29]ಇದೇ ಬಾಳಗಾರು ನಂ. ೨೪

[30]ಇದೇ ೨೨ ಈಚಲಬೈಲು ೧೪೦೫

[31]ಇದೇ ೧೪ ಆರಗ ೧೪೨೨

[32]ಇದೇ ೧೫೨ ಹೊರಬೈಲು ೧೪೫೧

[33]ಇದೇ ೧೬೨ ನಾಬಳ ೧೪೬೭

[34]ವಚನ || ಮತ್ತವಾದಲ್ಲಿದಾ ಸದಾಶಿವರಾಯನಯಕನನಾರಗದ ಕುಶಾವತಿನಗರದ ನದಿತೀರದೊಳ್ ಸದಾಶಿವಪುರವೆಂಬ ಅಗ್ರಹಾರಂ ಕಟ್ಟಿಸಿ ಭೂಸುರಾರ್ಗೆ ಮತ್ತುತ್ತ ಮನಿವೇಶನ ವೃತ್ತಿ ತೇತ್ರಂಗಳಂ ಕಲ್ಪಿಸಿ, ಶಿವಾರ್ಪಿತವಾಗಿ ಧಾರೆ ಎರೆದು ಸ್ಥಿರ ಶಾಸನಂ ಬರಸಿತ್ತ, ಕೆಳದಿನೃಪ ವಿಜಯ ಪು ೭೦

[35]ಇದೇ

[36]ಎ.ಕ. ೮ ತೀರ್ಥಹಳ್ಳಿ ೧೦೩ ಒಳಗೋಡು ೧೫೬೦

[37]ಇದೇ ನಗರ ೧೩೪ ಸಂಪಿಗೆ ಕೋಟೆ ೧೫೬೬

[38]ಇದೇ ತೀರ್ಥಹಳ್ಳಿ ೪ ಆರಗ ೧೬೪೦

[39]ಅಡಿಟಿಪ್ಪಣಿ ೫

[40]ಇದೇ ನಗರ ೧, ೩, ೪ ಸಂಪಿಗೆ ಕೋಟೆ ೧೫೬೬

[41]ಇದೇ ತೀರ್ಥಹಳ್ಳಿ ೯ ಆರಗ ೧೪೦೩

[42]ಇದೇ ೧೪ ಇದೇ ೧೪೨೨

[43]ಇದೇ ನಗರ ೭೩ ನಗರ ೧೫೫೧

[44]ಎ.ಕ. ೭ ಹೊನ್ನಾಳಿ ಕುರುವಗಡ್ಡೆ ೧೫೫೬

[45]ಎಂ.ಎ.ಆರ್. (ಮೈಸೂರು ಅರ್ಕಿಯಾಲಾಜಿಕಲ್ ರಿಪೋರ್ಟ್) ೧೯೨೩ ನಂ. ೧೩೮

[46]ಇದೇ ೧೪೨೨ ನಂ. ೫೭

[47]ಎ.ಕ. ೮ ತೀರ್ಥಹಳ್ಳಿ ೫ ತೀರ್ಥಹಳ್ಳಿ ೧೫೭೩

[48]ಇದೇ ತೀರ್ಥಹಳ್ಳಿ ೪೭ ಕವಲೆದುರ್ಗ ೧೭೦೯

[49]ಎಂ.ಎ.ಆರ್. ೧೯೪೩ ಪು ೩೦

[50]ಇದೇ ೧೯೩೦ ನಂ. ೪

[51]ಎ.ಕ. ೮ ತೀರ್ಥಹಳ್ಳಿ ೨೪ ಬಾಳಗಾರು ೧೬೭೪