ರಾಜ್ಯ ವಿಸ್ತಾರ

ಒಳಗೋಡಿನ ೧೫೬೦ರ ಒಂದು ಶಾಸನವು ಈ ರಾಜ್ಯದಲ್ಲಿ ೫೦ ನಾಡುಗಳಿವೆ ಎಂದು ಉಲ್ಲೇಖಿಸಿದೆ. ಕೊಡೂರಿನ ಶಾಸನವು ಆರಗ ೧೮ ಕಂಪಣ ಹೊಯ್ಸಳ ರಾಜ್ಯದ ಮೇಲೆ ಎಂದು ಹೇಳುತ್ತದೆ. ಇದರಲ್ಲಿರುವ ಹೊಯ್ಸಳ ರಾಜ್ಯದ ಮೇರೆ ಎಂದರೆ ಹೊಯ್ಸಳರ ಆಡಳಿತದಲ್ಲಿದ್ದ ಸಾಂತಳಿಗೆ ಸಾವಿರ ಮತ್ತು ಮಂಡಳಿ ಸಾವಿರ ಆಗುತ್ತದೆ. ಶಾಸನದ ಆಧಾರದಂತೆ ಆರಗದ ರಾಜ್ಯಕ್ಕೆ ತೀರ್ಥಹಳ್ಳಿ ತಾಲ್ಲೂಕಿನ ಕೆಲವು ಹಳ್ಳಿಗಳು ಹಾಗೂ ಕೊಪ್ಪ, ನರಸಿಂಹರಾಜಪುರದ ಹಲವು ಗ್ರಾಮಗಳು ಮತ್ತು ದಾನಿವಾಸದ ಸೀಮೆಯು ಸೇರಿದಂತೆ ತಿಳಿಯುತ್ತದೆ.

ಆಡಳಿತ ಪದ್ಧತಿ

ವಿಜಯನಗರದ ರಾಜವಂಶದವರು ಆರಗವನ್ನು ರಾಜಪ್ರತಿನಿಧಿಗಳಂತೆ ಆಳಿದರು. ಚಿಕ್ಕರಾಜ ಒಡೆಯನಿಗೆ ಮಾತ್ರ ಶಾಸನದಲ್ಲಿ ಶ್ರೀಮನ್ಮಹಾಮಂಡಳೇಶ್ವರ ಎಂದು ಸಂಬೋಧಿಸಿದೆ. ಆರಗದ ಪ್ರಭುತ್ವಕ್ಕೆ ಆಯ್ಕೆ ಮಾಡುವ ಪೂರ್ಣಸ್ವಾತಂತ್ರ್ಯ ವಿಜಯನಗರದ ಪ್ರಭುಗಳಿಗೆ ಮಾತ್ರ ಮೀಸಲಾಗಿತ್ತು. ವಂಶಪಾರಂಪರ್ಯವು ಅರ್ಹತೆಯಾಗಿರಲಿಲ್ಲ. ಆದರೂ ಕೆಲವೊಮ್ಮೆ ಅದನ್ನು ಪರಿಗಣಿಸಿದ್ದರೆಂದು ಗಮನಿಸಬಹುದು.

ಆರಗದ ರಾಜ್ಯ ರಕ್ಷಣೆಗೆ ಪ್ರತ್ಯೇಕವಾದ ಸೈನ್ಯ ಆಡಳಿತಕ್ಕೆ ಸಚಿವರು ಮತ್ತು ಅಧಿಕಾರಿಗಳಿದ್ದರು. ಕಂದಾಯ ಮತ್ತು ತೆರಿಗೆಗಳನ್ನು ವಸೂಲು ಮಾಡುತ್ತಿದ್ದರು. ಮಿಕ್ಕೆಲ್ಲ ಕ್ಷೇತ್ರಗಳ ಆಡಳಿತದಲ್ಲೂ ವಿಜಯನಗರದ ಆಡಳೀತ ಕ್ರಮವನ್ನೇ ಅನುಸರಿಸಲಾಗಿತ್ತು.

ಮಾರಪ್ಪ ಮತ್ತು ವೀರಹರಿಯಪ್ಪನ ಕಾಲದಿಂದಲೇ ಸಚಿವಾಧಿಕಾರ ಸೂಚಕ ಉಲ್ಲೇಖಗಳಿವೆ. ಶಾಸನಗಳಲ್ಲಿ ಮಹಾಪ್ರಧಾನ ನಾಗಂಣ, ಪ್ರಧಾನಿ ದೇವರಸು ಮತ್ತು ಬೊಮ್ಮಣ್ಣ ಅಮಾತ್ಯರ ಸುತರಾದ ವಿಠಣ್ನಗಳು ಎಂದು ಕಂಡುಬಂದಿದೆ.

ಗ್ರಾಮದ ಮುಖ್ಯಸ್ಥರನ್ನು ಗಉಡ ಪ್ರಭುಗಳು ಎಂದು ಕರೆಯಲಾಗಿದೆ. ಮಹಿಳೆಯಾಗಿದ್ದಲ್ಲಿ ಗಾವುಂಡಿ ಎಂದು ಕರೆದಿದೆ.[1]ಕುರುವಳ್ಳಿಯ ಶಾಸನದಲ್ಲಿ ರಾಯಸದ ಹರಿಯಪ್ಪಗಳು ಎಂದು ಹೇಳಿದೆ[2]ರಾಯಸ ಎಂದರೆ ಪತ್ರವನ್ನು ತರುವ ಒಬ್ಬ ವ್ಯಕ್ತಿ ಅಥವಾ ಅಧಿಕಾರಿ ಎಂದು ತಿಳಿಯುತ್ತದೆ. ಸೇನಬೋವ ಎಂಬುವನು ಗ್ರಾಮಲೆಕ್ಕಿಗ ಇವನಿಗೆ ಶಾನುಭೋಗ ಎಂದೂ ಕರೆಯುತ್ತಾರೆ. ಶಾಸನದಲ್ಲಿ “ಕಾರಗಡಿ ಗ್ರಾಮದ ಸೇನಬೋವ ವೀರಪ್ಪನಾಡಸೇನಬೋವ ನರಹರಿದೇವ” ಎಂದು ಕಂಡು ಬಂದಿದೆ.[3] ತಳವಾರನು ಗ್ರಾಮದ ಅಥವಾ ಊರಿನ ಕಾವಲುಗಾರ. ಆರಗದ ಶಾಸನದಲ್ಲಿ ತಳವಾರ ಜನ ಎರಡಕ್ಕೆ ಕೊಡವೀಸ ಎಂದು ಹೇಳಿದೆ.[4]

ಒಡೆಯರು, ಹೆಗ್ಗಡೆ, ಸಮಸ್ತ ಹಲರು

ಈ ಪದಗಳು ಅಧಿಕಾರದ ಸಂಕೇತವಲ್ಲ. ಸಾಮಾನ್ಯ ಅರ್ಥದಲ್ಲಿ ಒಡೆಯರು ಎಂದರೆ ಯಜಮಾನ, ಮಾಲಿಕ ಮತ್ತು ಗಣ್ಯವ್ಯಕ್ತಿ ಎಂದು ಪರಿಭಾವಿಸಬಹುದು. ಮಲೆನಾಡಿನಲ್ಲಿ ಒಡೇರು ಎಂಬ ಗ್ರಾಮ್ಯ ಶಬ್ದ ಬಳಕೆಯಲ್ಲಿದೆ.

ವಿಜಯನಗರದ ಸಂಗಮನ ಐದು ಮಕ್ಕಳ ಹೆಸರಿನೊಂದಿಗೆ ಒಡೆಯ ಎಂಬ ಉಪನಾಮವಿದೆ. ನಂತರ ಈ ಪದವು ಬಿಟ್ಟು ಹೋಗಿದೆ. ಸಾಮಾನ್ಯ ಕುಟುಂಬದಲ್ಲಿಯೂ ಒಡೆಯ ಎಂಬ ಪದದ ಬಳಕೆಯಿತ್ತು. ಆರಗದ ಒಂದು ಶಾಸನದಲ್ಲಿ ಮಳಿಗೆಯ ಸಂಕಪ್ಪ ಒಡೆಯರ ಮಕ್ಕಳು ತಂಮಣ್ಣ ಒಡೆಯರು ಎಂದಿದೆ. ತೀರ್ಥಹಳ್ಳಿಯ ವೈಷ್ಣವ ಮಠದ ಗುರುಗಳಿಗೂ ಸಹ ಅಮರೇಂದ್ರಪುರಿ ಒಡೆಯರ ಶಿಷ್ಯರು ದೇವೇಂದ್ರಪುರಿ ಒಡೆಯರು ಎಂದು ಹೇಳಿದೆ.[5] ಆರಗವನ್ನು ಆಳಿದ ಸಿರಿಯಮ್ಮನ ಮುಂದೆ ಹೆಗ್ಗಡೆ ಎಂದು ಸೇರಿಸಿದೆ. ಇದನ್ನು ಒಡೆಯ ಎಂಬ ಅರ್ಥದಲ್ಲಿ ಬಳಸಿರಬಹುದು. ಮಾಕೋಡು ಗ್ರಾಮದ ಒಂದು ಶಾಸನದಲ್ಲಿ ಮಹಾಜನ ಗಉಡ ಪ್ರಜೆಗಳು ಮದುವಂಕನಾಡ ಸಮಸ್ತ ನಾಡವರು ದೇವರ ಸನ್ನಿಧಿಯಲ್ಲಿ ಕುಳ್ಳಿರ್ದು ಎಂದು ಹೇಳಿದೆ.[6] ಹಾಗೆಯೇ ಇನ್ನೊಂದು ಶಾಸನವು ‘ಆರಗದ ವೇಂಟೆಯ ಹದಿನೆಂಟು ಕಂಪಣದ ಸಮಸ್ತನಾಡು ಮೂರು ಪಟ್ಟಣದ ಸಮಸ್ತ ಹಲರು ಸರ್ವೈಕ್ಯಮತವಾಗಿ ಆರಗದ ಮೂಲಸ್ಥಾನ ಕಲಿನಾಥ ದೇವರ ಅಮೃತಪಡಿಗೆ ದಾನ’[7]ಎಂದು ಹೇಳಿದೆ. ಮೇಲಿನ ಎರಡು ಶಾಸನಗಳಲ್ಲಿ ಹಲರು ಎಂಬುದು ಹಲಬರು, ಹಲವರು ಎಂಬ ರೂಪದಲ್ಲಿಯೂ ಬಳಕೆಯಾಗಿದೆ. ಇಲ್ಲಿ ಸಮಸ್ತ ಹಲರು ಎಂದರೆ ಗಣ್ಯ ಪ್ರತಿನಿಧಿಗಳ ಸಮೂಹ ಅಥವಾ ಪ್ರತಿನಿಧಿಕ ಸಮುದಾಯ. ಈ ಪ್ರತಿನಿಧಿಗಳು ಯಾವ ಸ್ಥಳಕ್ಕೆ ಸೇರಿದವರೆಂಬುದನ್ನು ಸ್ಪಷ್ಟಪಡಿಸಲಾಗಿದೆ.

ರಾಜ್ಯಾದಾಯ ಮೂಲಗಳು

ಭೂಕಂದಾಯ, ತೆರಿಗೆ ಮತ್ತು ಸುಂಕವು ಆರಗ ರಾಜ್ಯದ ಸಂಪನ್ಮೂಲಗಳಾಗಿತ್ತು. ಮಾರುಕಟ್ಟೆಗಳಿಗೆ ಬರುವ ಪ್ರಮುಖ ಸರಕುಗಳ ಮೇಲೆ ಸುಂಕವನ್ನು ವಿಧಿಸಲಾಗಿತ್ತು. ಅಲ್ಲದೆ ವೃತ್ತಿ ತೆರಿಗೆಯನ್ನು ವಸೂಲು ಮಾಡುತ್ತಿದ್ದ ದಾಖಲೆಗಳಿವೆ. ಹೊಂನು ಮತ್ತು ಗದ್ಯಾಣ ಚಲಾವಣೆಯಲ್ಲಿದ್ದ ನಾಣ್ಯಗಳು.

ಹೊಂನು : ಇದು ೧೦ ಹಣದ ಮೌಲ್ಯವಿದ್ದ ಚಿನ್ನದ ನಾಣ್ಯವೆಂದು ಹೇಳಲಾಗಿದೆ. ಇದನ್ನು “ಪೊನ್” ಎಂದೂ ಹೇಳುತ್ತಿದ್ದರು. ಇದು ಗದ್ಯಾಣಕ್ಕೆ ಸಮನಾದ ನಾಣ್ಯವೆಂದು ಪ್ರಚಲಿತವಿತ್ತು. ಗದ್ಯಾಣವೇ ದೊಡ್ಡ ವರಹವಾಗಿದ್ದು ಎಲ್ಲಕ್ಕಿಂತ ಹೆಚ್ಚಿನ ಮೌಲ್ಯದ ನಾಣ್ಯವಾಗಿತ್ತು.[8]

ಗದ್ಯಾಣ : ಆಋಗದ ಬನಶಂಕರಿ ದೇವಾಲಯದ ಶಾಸನದಲ್ಲಿ ದೇವಾದಾಯ ಅಮೃತಪಡಿಗೆ ಗದ್ಯಾಣ ೨೪ ಎಂದು ಹೇಳಿದೆ[9] (ಈ ನಾಣ್ಯದ ಹೆಸರು ಶಾಸನಗಳಲ್ಲಿ ಕಂಡು ಬಂದಿದೆ) ಶ್ರೋತ್ರಿಯ ಗದ್ಯಾಣ ಇದು ಶ್ರೋತ್ರಿಯ ಬ್ರಾಹ್ಮಣರಿಗೆ (ವೇದಾಧ್ಯಯನ ಸಂಪನ್ನರಾದ) ಮಾತ್ರ ಕೊಡುವ ಕಾಣಿಕೆ. ಇದಕ್ಕೆ ಸಂವಾದಿಯಾಗಿ ಹೊಂಬುಚದ ಒಂದು ಶಾಸನದಲ್ಲಿ “ಕುಮಾರ ಗದ್ಯಾಣ” ಎಂದು ಹೇಳಿದೆ.[10]

ರೊಕ್ಕ : ರೊಕ್ಕ ಎಂದರೆ ನಗದು ಹಣ ಎಂದು ತಿಳಿಯುತ್ತದೆ. ಇದೊಂದು ಅನ್ಯಭಾಷೆಯ ಶಬ್ದ. “ರೊಕ್ಕ ಗದ್ಯಾಣ ಮೂರಕ್ಕೆ” ಎಂದು ಆರಗದ ಶಾಸನದಲ್ಲಿದೆ.[11]

ವರ್ತನೆ : ಆರಗದ ಒಂದು ಶಾಸನದಲ್ಲಿ ಆರಗದ ಕೋಟೆ ವರ್ತನೆ ಎಂದಿದೆ. ಇದು ರಕ್ಷಣೆಗೆ ಸಂಬಂಧಿಸಿದ್ದ ಪ್ರತಿ ವರ್ಷ ತಪ್ಪದೇ ನೀಡಬೇಕಾಗಿದ್ದ ತೆರಿಗೆಯಾಗಿತ್ತು.

ಬಿರಾಡ : ಇದು ಕೋಟೆಯನ್ನು ಸುಭದ್ರಗೊಳಿಸಲು, ರಿಪೇರಿ ಮಾಡಲು ಮತ್ತು ನಿರ್ವಹಣೆಗಾಗಿ ಆಕರಿಸುತ್ತಿದ್ದ ವಿಶೇಷ ತೆರಿಗೆಯಾಗಿತ್ತು. ಬಿರಾಡವಲ್ಲದೆ ವಿರಾಡ ಎಂಬ ಮತ್ತೊಂದು ಶಬ್ದವಿದೆ. ವಿರಾಡ ಎಂದರೆ ಮನೆಗಂದಾಯ. ಹೊಂಬುಚದ ೩೧ನೆಯ ಶಾಸನದಲ್ಲಿಯೂ ಇದನ್ನೂ ಹೇಳಿದೆ.

ಸಿದ್ದಾಯ : ಇದು ಅರಮನೆಗೆ ವಾರ್ಷಿಕವಾಗಿ ನೀಡಬೇಕಾಗಿದ್ದ ಹೊಂನಿನ ತೆರಿಗೆ. ಇದು ಸಂಸ್ಕೃತ ಪದ. ಇದು ಅನೇಕ ಶಾಸನಗಳಲ್ಲಿದೆ.[12]

ಕೊಡವೀಸ : ಇದು ವರ್ತಕರ ಸಂಘದ ಮೇಲೆ ಸರಕಾರವು ವಿಧಿಸುತ್ತಿದ್ದ ತೆರಿಗೆಯಾಗಿತ್ತು.

ವ್ರಿತ್ತಿ : ಇದು ವಿಶೇಷವಾಗಿ ಬ್ರಾಹ್ಮಣ ಕುಟುಂಬಗಳಿಗೆ ಅಗ್ರಹಾರದಲ್ಲಿ ನೀಡುತ್ತಿದ್ದ ಉಂಬಳಿ ಭೂಮಿ. ಇದರ ಚತುರ್ಗಡಿ ಮತ್ತು ಸ್ಥಳ ನಿರ್ದೇಶನವನ್ನು ಶಾಸನದಲ್ಲಿ ನಿರೂಪಿಸಿತ್ತು.

ತಳವ್ರಿತ್ತಿ : ಇದು ಆಯಾಯ ಸ್ಥಳಗಳಲ್ಲಿ ಬ್ರಾಹ್ಮಣ ಕುಟುಂಬಗಳಿಗೆ ನೀಡುತ್ತಿದ್ದ ಉಂಬಳಿ ಭೂಮಿ. ತಳ ಮತ್ತು ಸ್ಥಳ ಎಂಬ ಪದಗಳು ಶಾಸನಗಳಲ್ಲಿವೆ. ಆದರೆ ಪ್ರಮುಖವಾಗಿ ಇದು ದೇವಾಲಯದ ರಕ್ಷಣೆಗಾಗಿ ಬಿಟ್ಟು ಕೊಟ್ಟ ಭೂಮಿಯಾಗಿದೆ. ಇದನ್ನು ಹೊಂಬುಚದ ಒಂದು ಶಾಸನದಲ್ಲಿಯೂ ಹೇಳಿದೆ.[13]

ಪಂಚ ಕಾರುಕ : ಇದೊಂದು ವೃತ್ತಿ ತೆರಿಗೆ. ಬಹುಶಃ ಇದು ಐದು ಪ್ರಮುಖ ಉದ್ಯೋಗಗಳ ಮೇಲೆ ಆಕರಿಸುತ್ತಿದ್ದ ತೆರಿಗೆಯಾಗಿರಬೇಕು. ತೀರ್ಥಹಳ್ಳಿಯ ೯೫ನೆಯ ಶಾಸನದಲ್ಲಿ ಬೇಟೆಯಾಡುವ ಬೇಡರಿಂದ ‘ಹುಂಬ ಕಾರುಕ’ ಎಂಬ ತೆರಿಗೆಯನ್ನು, ಬೆಸ್ತರಿಮದ ಹುಡಿಕೆ ಕಾರುಕ ಎಂಬ ತೆರಿಗೆಯನ್ನು ವಸೂಲು ಮಾಡಲಾಗುತ್ತಿತ್ತು.

ಕುಳ : ಬೇಸಾಯ ಮಾಡುವ ರೈತನು ಸರಕಾರಕ್ಕೆ ಕೊಡಬೇಕಾಗಿದ್ದ ಕಂದಾಯಕ್ಕೆ “ಕುಳ” ಎಂಬ ಹೆಸರಿತ್ತು. ಇದನ್ನು ಹಣದ ರೂಪದಲ್ಲಿ ನೀಡಬೇಕಾಗಿತ್ತು. ಆರಗದ ಒಂದು ಶಾಸನದಲ್ಲಿ ಎರಡು ಹೊಂನಿನ ಕುಳಕ್ಕೆ ಎಂದು ಹೇಳಿದೆ[14]ಇದಕ್ಕಾಗಿಯೇ ಈ ಶಾಸನದಲ್ಲಿ ಗದ್ಯಾಣ ೧೨ ಎಂದು ಗೊತ್ತುಪಡಿಸಿದ್ದು ತಿಳಿಯುತ್ತದೆ.

ನರಿವ್ರಿತ್ತಿ, ನರಿಮಾನಿ : ಆರಗದ ೧೯ನೆಯ ಶಾಸನದಲ್ಲಿ ಇದನ್ನು ಓದಬಹುದು. ಹೊಂಬುಚದ ೨೭ನೆಯ ಶಾಸನದಲ್ಲಿ ಇದನ್ನು ನರಿವ್ರಿತ್ತಿ ಎಂದು ಹೇಳಿದೆ. ಬಹುಶಃ ಇವೆರಡೂ ಒಂದೇ ಅರ್ಥದ ಪದಗಳಾಗಿರಬಹುದು. ಇದರ ಅರ್ಥ ತಿಳಿದಿಲ್ಲ.

ಕಮ್ಮ : ಬೆಳೆ ಬೆಳೆಯುವ ಭೂಮಿಯ ವಿಸ್ತೀರ್ಣವನ್ನು ಕಮ್ಮ ಎಂಬ ಉದ್ದಳತೆಯ ಮಾಪಕದಿಂದ ನಿರ್ಧರಿಸಲಾಗುತ್ತಿತ್ತು. ಶಾಸನಗಳಲ್ಲಿ ಇದನ್ನು ಕಂಬ, ಕಂಮ ಮತ್ತು ಕಮ್ಮ ಎಂದೂ ಬರೆದಿದೆ. ಕೆಲವು ಕಮ್ಮಗಳು ಸೇರಿ ಒಂದು ಮತ್ತರು ಆಗುತ್ತದೆ. ಆದರೆ ಒಂದು ಮತ್ತರಕ್ಕೆ ಎಷ್ಟು ಕಮ್ಮಗಳೆಂದು ತಿಳಿದಿಲ್ಲ. ಪೊಂಬುಚದ ಶಾಸನದಲ್ಲಿ ಕಂಮ ೫೦೦, ಕಂಮ ೫೨, ಕಂಮ ೨೫ ಎಂದು ಬರೆದಿದೆ.

ಮೊರಡಿ : ಮೊರಡಿ ಎಂದರೆ ದಿಣ್ಣೆ, ಆರಗದ ಶಾಸನಗಳಲ್ಲಿ ಮೊರಡಿ ಮತ್ತು ಮರಡಿ ಎಂಬ ಶಬ್ದಗಳಿವೆ. ಇದು ೯ನೆಯ ಶತಮಾನದಿಂದಲೂ ಬಳಕೆಯಲ್ಲಿದೆ.[15]

ಖಂಡುಗ : ಇದು ಆಹಾರ ಧಾನ್ಯದ ಅಳತೆಯ ಪ್ರಮಾಣ. ಹೆಚ್ಚಾಗಿ ಭತ್ತಕ್ಕೆ ಸಂಬಂಧಿಸಿದಂತೆ ಕಂಡುಗ, ಮತ್ತು ಖಂಡುಗ ಎಂದು ಹೇಳಿದೆ. ಒಂದು ಖಂಡುಗಕ್ಕೆ ೨೦ ಕೊಳಗವೆಂದು ಕೆಲವೆಡೆ ಹೇಳುತ್ತಾರೆ. ಪ್ರಮಾಣ ವ್ಯತ್ಯಾಸವಾಗಬಹುದು. ಇದೊಂದು ದೇಶ್ಯ ಶಬ್ದ.

ಗುತ್ತಿಗೆ : ಇದು ಹಿಡುವಳಿದಾರ ಹಾಗೂ ಕೃಷಿಕನ ನಡುವಿನ ಒಂದು ಒಪ್ಪಂದ. ಇದರಂತೆ ಭೂಸ್ವಾಮ್ಯ ಹೊಂದಿದವನು ಗೊತ್ತು ಪಡಿಸಿದ ದರದಲ್ಲಿ ವಾರ್ಷಿಕ ಗೇಣಿಯನ್ನು ಧಾನ್ಯ ಅಥವಾ ನಗದು ರೂಪದಲ್ಲಿ ನೀಡಬೇಕಿತ್ತು. ಇದನ್ನು ಶಾಸನದಲ್ಲಿ ಕೇಣೆ, ಖೇಣೆ ಮತ್ತು ಗೇಣೆ ಎಂದು ಸಮಾನಾರ್ಥದಲ್ಲಿ ಬಳಸಿದೆ. ಆರಗದ ಒಂದು ಶಾಸನದಲ್ಲಿ ೧೨ ಹೊಂನ ಸಲುವ ಗುತ್ತಿಗೆ ಭೂಮಿ ಎಂದಿದೆ.[16]

ಬಳಗೋಡು ಗ್ರಾಮದ ಒಟ್ಟು ಸಾಗುವಳಿ ಭೂಮಿಯ ಮೇಲೆ ಗುತ್ಇತಗೆ ನಿಗದಿಪಡಿಸಿದಂತಿದೆ. ಗದ್ಯಾಣವು ಕಂದಾಯವಾಗಿರಬಹುದು. ಗೇಣಿದಾರನು ಇದೇ ದರದಲ್ಲಿ ಗಡಿ ಭತ್ತ ಹಾಗೂ ಗದ್ಯಾಣವನ್ನು ತೆರಬೇಕಾಗಿತ್ತು. ಒಟ್ಟಿನಲ್ಲಿ ಆರಗರಾಜ್ಯದಲ್ಲಿ ಗೇಣಿ ಮತ್ತು ಗೇಣಿದಾರನ ಬಗ್ಗೆ ಸಾಕಷ್ಟು ಮಾಹಿತಿ ದೊರೆಯುತ್ತದೆ.

ಆರಗ ರಾಜಧಾನಿ

ಕ್ರಿ.ಶ. ಸು. ೮ನೆಯ ಶತಮಾನದಲ್ಲಿ ಆರಗದ ಉಲ್ಲೇಖ ಬರುತ್ತದೆ. ಇದು ಕ್ರಿ.ಶ. ಸು. ೧೦ ರಿಂದ ೧೭ನೇ ಶತಮಾನದವರೆಗೆ ವೇಂಟೆ, ಕಂಪಣ, ರಾಜ್ಯ, ಪುರ, ಪತ್ತನ ಮುಂತಾದ ಶೀರ್ಷಿಕೆಗಳನ್ನು ಹೊತ್ತು ಮಲೆರಾಜ್ಯದ ರಾಜಧಾನಿಯಾಗಿತ್ತು. ಒಂದಿಷ್ಟು ವರ್ಷಗಳ ಕಾಲ ಚಂದ್ರಗುತ್ತಿಯೊಂದಿಗೆ ಸೇರಿ ಆರಗ ಗುತ್ತಿರಾಜ್ಯವೆಂದು ಗುರುತಿಸಲ್ಪಟ್ಟಿತು.

ವಿಜಯನಗರದ ಅರಸು ವಂಶದವರು ಆರಗದಲ್ಲಿ ಆಡಳಿತ ನಡೆಸಿ ಅನುಭವ ಗಳಿಸಿಕೊಂಡರು. ಸ್ವಾಭಾವಿಕವಾಗಿ ಆರಗ ಮಲೆನಾಡಿನ ದೊಡ್ಡ ವ್ಯಾಪಾರ ಸ್ಥಳವಾಗಿ ಬೆಳೆಯಿತು. ಶಾಸನಗಳಲ್ಲಿ ಕಂಡು ಬಂದಿರುವ ಪಟ್ಟಣಶೆಟ್ಟಿ ಮತ್ತು ಶ್ರೇಷ್ಠಿಗಳು ಒಂದುಗೂಡಿ ನೀಡಿರುವ ದಾನಗಳು ಇವರ ಶ್ರೀಮಂತಿಕೆಯನ್ನು ಸಮರ್ಥಿಸುವಂತಿದೆ. ಆರಗದಲ್ಲಿ ಈ ವ್ಯಾಪಾರಿಗಳಿದ್ದ ಕೇರಿಗಳನ್ನು ಮತ್ತು ಮಾರುಕಟ್ಟೆಯ ಪಾಳು ನಿವೇಶನವನ್ನು ಈಗಲೂ ನೋಡಬಹುದು. ಆರಗವು ಎಂಟು ಮಾರುಕಟ್ಟೆಗಳಿಗೆ ಕೇಂದ್ರ ಸ್ಥಳವೆಮದು ಶಾಸನದಲ್ಲೂ ಸಹ ಉಲ್ಲೇಖವಿದೆ.

ದೇವಾಲಯಗಳು, ಅಗ್ರಹಾರ, ಬ್ರಹ್ಮಪುರಿ, ಸಂಧ್ಯಾಮಂಟಪ ವಿರೂಪ ಸಮುದ್ರವೆಂಬ ಕೆರೆ ಅದರಂಚಿನಲ್ಲಿ ಗ್ರಾಮದೈವಗಳ ಗುಡಿಗಳು ರಾಜಧಾನಿಯನ್ನು ಸುಂದರಗೊಳಿಸಿದ್ದವು. ನೆಲದುರ್ಗ, ಅಗಳ ಬಾಗಿಲು ಮತ್ತು ಮೂಡುಬಾಗಿಲಿನ ಮಹಾದ್ವಾರಗಳು ಹಾಗೂ ಕಂದಕಗಳು ಈಗ ಕೇವಲ ಅವಶೇಷಗಳು ಮಾತ್ರ. ಶಾಂತವೇರಿ, ಕಾಳಮ್ಮನಗುಡಿ, ಮುತ್ತಿನಕೇರಿ, ಕುಂಬಾರಕೇರಿ, ದಾಸನಗದ್ದೆ, ಎಕನಾಥಿ ಊರು, ಅಗ್ರಹಾರ ಮುಂತಾದ ಬೀದಿ ಬಡಾವಣೆಗಳು ಆರಗವು ಜನಭರಿತ ಪಟ್ಟಣವಾಗಿತ್ತೆಂದು ಹೇಳುತ್ತವೆ. ಕುದುರೆ ಮತ್ತು ಆನೆಯ ಲಾಯಗಳು ಮತ್ತು ಮದ್ದಿನ ಉಗ್ರಾಣಗಳು ಮಣ್ಣು ಮತ್ತು ಕಲ್ಲುಗಳ ರಾಶಿಯಲ್ಲಿ ಮರೆಯಾಗಿವೆ. ಇಲ್ಲಿ ಶೃಂಗೇರಿ ಮಠದ ಒಂದು ಶಾಖಾಮಠವಿತ್ತು.

ಕೆಳದಿಯ ಹಿರಿಯ ವೆಂಕಟಪ್ಪನಾಯಕನು ಕೆಲವು ಕಾಲ ಆರಗದಲ್ಲಿದ್ದು ಆಳಿದನೆಂದು ಆಗ ಆರಗವು ಸುಂದರವಾದ ಪಟ್ಟಣವಾಗಿತ್ತೆಂದು ಕೆಳದಿ ನೃಪವಿಜಯದಲ್ಲಿ ಹೇಳಿದೆ. ಅರಸರ ವಂಶದ ರಾಣಿ ಸಿದ್ದಮ್ಮಾಜಿಯ ಶ್ರಾದ್ಧವನ್ನು ಇಲ್ಲಿಯೇ ನಡೆಸಿ ಹದಿನೇಳು ಹೊಂನ ಗದ್ಯಾಣವನ್ನು ದಾನ ಮಾಡಲಾಯಿತೆಂದು ದಾಖಲೆಯಿದೆ.[17]

ಧಾರ್ಮಿಕ ಚಟುವಟಿಕೆಗಳು

ಧಾರ್ಮಿಕ ಪರಂಪರೆಯ ಆರಗದ ಅರಸರು ಸಮಕಾಲೀನರಂತೆ ದೇವಾಲಯ, ಮಠ ಮತ್ತು ಅಗ್ರಹಾರಗಳನ್ನು ಕಟ್ಟಿಸಿದರು ಮತ್ತು ಪೋಷಿಸಿದರು. ಆರಗದಲ್ಲಿ ವಿವಿಧ ಧರ್ಮೀಯರು ನೆಲಸಿದ್ದರು.

ಹರಿದಾಸ ಪರಂಪರೆಯು ಆರಗ ರಾಜ್ಯದಲ್ಲಿ ಮೊಟ್ಟಮೊದಲು ಉಗಮವಾಯಿತೆಂದು ಸಂಶೋಧಕ ಕಪಟರಾಳು ಕೃಷ್ಣರಾಯರು ಪುರಾವೆಗಳನ್ನು ನೀಡಿದ್ದಾರೆ.[18]ತೀರ್ಥಹಳ್ಳಿಯ ಭೀಮನ ಕಟ್ಟೆ ಮಠದ ಗರುಡವಾಹನ ತೀರ್ಥರು ಮತ್ತು ಕೂಡಲಿ ಅಕ್ಷೋಭ್ಯ ತೀರ್ಥರ ಮಠದ ಸುಲಭಾಚಾರ್ಯರಿಂದ ಪಶ್ಚಿಮದಲ್ಲಿ ದಾಸ ಸಾಹಿತ್ಯವು ಆರಂಭವಾಗಿ ಮುಂದೆ ಹಂಪೆ, ರಾಯಚೂರು ಮತ್ತು ಆದವಾನಿ ನಾಡುಗಳಲ್ಲಿ ಬೆಳೆದು ಬಂದಿದೆ. ಎಂದು ಶ್ರೀಯುತರು ಅನೇಕ ಆಧಾರಗಳನ್ನು ನೀಡಿದ್ದಾರೆ.

ಭೀಮನಕಟ್ಟೆ ಮಠಕ್ಕೆ ಮುನಿವೃಂದ ಎಂಬ ಹೆಸರಿದೆ. ಇದು ಮಧ್ವಾಚಾರ್ಯರಿಗೆ ಗುರುಗಳಾಗಿದ್ದ ಅಚ್ಚುತ ಪ್ರೇಕ್ಷಕರ ಸಂಸ್ಥಾನ. ಕೂಡಲಿ ಅಕ್ಷೋಭ್ಯ ಮತ್ತು ಬಾಳಿಗಾರು ಮಠಗಳು ಆರಗದ ರಾಜ್ಯದಲ್ಲಿರುವ ಮತ್ತೆರಡು ಪ್ರಾಚೀನ ಮಠಗಳಾಗಿವೆ. ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ನರಹರಿ ತೀರ್ಥರು ಹರಿದಾಸ ಪರಂಪರೆಯಲ್ಲಿ ಮೊದಲಿಗರೆಂದು ವಿದ್ವಾಂಸರ ಅಭಿಮತ. ಈ ಮಠಗಳಿಗೆ ಸಂಬಂಧಿಸಿದಂತೆ ಹರಿದಾಸ ಭಾರತಿ[19] ಹಾಗೂ ವಿಜಯಾಂಕ ರತ್ನದಲ್ಲಿ ವಿವರವಾದ ಲೇಖನಗಳು ಪ್ರಕಟವಾಗಿವೆ.

ಸುಮಾರು ೧೨೫ ವರ್ಷಗಳ ಕಾಲ ಹರಿದಾಸರಿಗೆ ಸಂಬಂಧಿಸಿದ ಸಾಹಿತ್ಯ ರಚನೆಗಳು ಲಭ್ಯವಾಗಿಲ್ಲ. ಆದರೆ ಇದೇ ಅವಧಿಯಲ್ಲಿ ಆರಗದಲ್ಲಿ ಅರವತ್ತು ಮಂದಿ ಆದ್ಯರು ಮತ್ತು ಆರಾದ್ಯರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆಂದು ಗೊರಬಾಳು ಹನುಮಂತರಾಯರು ಬರೆದಿದ್ದಾರೆ. ಈ ಮಹನೀಯರು ಆರಗದ ಆದ್ಯರು ಮತ್ತು ಆರಾದ್ಯರು ರಚಿಸಿದ ೫೧ ಪದಗಳು ಮತ್ತು ೨೦ ಸುಳಾದಿಗಳನ್ನು ಹಾಗೂ ಉಗಾಭೋಗಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಇದು ಸಮಗ್ರ ಸಂಗ್ರಹವೇ ಎಂಬುದು ತಿಳಿದಿಲ್ಲ. ವೈಷ್ಣವ ಗುರುಗಳ ಪಟ್ಟಿಯಲ್ಲಿ ಸಿರಿಪತಿ, ಸುಲಭ ತೀರ್ಥ ಮತ್ತು ಗರುಡ ವಾಹನ ತೀರ್ಥಂಕರ ಹೆಸರುಗಳಿವೆ. ತೀರ್ಥಹಳ್ಳಿಯ ೨೪ನೆಯ ಶಾಸನದಲ್ಲಿ “ಶ್ರೀಮತು ಸುಲಭ ತೀರ್ಥ ಶ್ರೀಪಾದಂಗಳು ಆರಾಧಿಸುವ” ಎಂದು ಹೇಳಿದೆ. ಶ್ರೀ ಸುಲಭ ತೀರ್ಥರು ಕೂಡ್ಲಿ ಅಕ್ಷೋಭ್ಯ ಮಠದ ಯತಿಗಳು ಹಾಗೆಯೇ ತೀರ್ಥಹಳ್ಳಿಯ ಭೀಮನಕಟ್ಟೆಯ ೧೫೭ನೆಯ ಶಾಸನದಲ್ಲಿ ಉಲ್ಲೇಖಿಸಿರುವ ಗರುಡವಾಹನ ತೀರ್ಥರು ಭೀಮನಕಟ್ಟೆ ಮಠದ ಯತಿಗಳೂ. ಸುಳಾದಿಗಳನ್ನು ರಚಿಸಿದ ಆದ್ಯರು ಮತ್ತು ಆರಾಧ್ಯರನ್ನು ಆರಗದ ಶಾಸನಗಳಲ್ಲಿ

೧. ಹರಿಹರಾಧ್ಯ ಮಲ್ಲಾರಾಧ್ಯ ಕಲ್ಲಾರಾಧ್ಯ[20]

೨. ಕೃಷ್ಣಾರಾಧ್ಯ ನಾರಾಯಣರಾಧ್ಯ[21]

೩. ಭರತಾರಾಧ್ಯ, ಆರಾಧ್ಯದೇವ[22]

ಎಂದು ಉಲ್ಲೇಖಿಸಿದೆ. ಇವರೆಲ್ಲರೂ ವಿಜಯನಗರದ ಕಾಲದವರು. ಇವರ ರಚನೆಗಳು ಮತ್ತು ಉಗಾಭೋಗಗಳು ಪುರಂದರದಾಸರು ಮತ್ತು ಇತರ ದಾಸರ ರಚನೆಗಳ ಮೇಲೆ ಪ್ರಭಾವ ಬೀರಿದೆ. ಇವುಗಳ ತುಲನಾತ್ಕ ವಿವರಣೆಯನ್ನು ಮುಂದೆ ನೀಡಿದೆ.

ವಿಠಲಭಕ್ತಿ

ಆರಗವು ವಿಠಲ ಭಕ್ತಿಯ ನೆಲೆಯಾಗಿತ್ತು. ಈ ಪ್ರಾಂತ್ಯಗಳ ಅನೇಕ ಕುಟುಂಬಗಳಿಗೆ ವಿಠಲನೇ ಆರಾಧ್ಯದೈವ. ಶಾಸನದಲ್ಲಿ “ವಿಠಲ ಗದ್ಯಾಣ”, “ವಿಠಲ ಪಂಡಗ” ಎಂಬುದು ಗಮನಾರ್ಹವಾದುದು. ಪಂಡ ಎಂದರೆ ಕ್ಷೇತ್ರಪುರೋಹಿತ ಎಂದು ಅರ್ಥ. ಆದುದರಿಂದ ಆರಗವು ವಿಠಲ ಕ್ಷೇತ್ರವಾಗಿತ್ತೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಇದನ್ನು ಸಮರ್ಥಿಸುವ ಆರಗದ ಇನ್ನಷ್ಟು ಶಾಸನಗಳಲ್ಲಿ

೧.ಪಂಡರಂಗ ದೇವಗಳ ಶಂಕರಭಟ್ಟರಿಗೆ ಬಾವಿಕೈಯಲ್ಲಿ ವೃತ್ತಿ[23]

೨. ಪಂಡರಿಭಟ್ಟರ ಕೋರಿನಾಥ ಭಟ್ಟರಿಗೆ ವೃತ್ತಿ[24]

೩.ವೈಷ್ಣವ ವಿಠಪಗಳಿಗೆ ವೃತ್ತಿ

೪.ನೀವಣೆ ವಿಠಲಭಟ್ಟರ ಪ್ರಪೌತ್ರರು ಸೂರಿಭಟರಿಗೆ ವೃತ್ತಿ. ಹೀಗೆ ಅನೇಕ ಮನೆತನಗಳು ವಿಠಲನ ಹೆಸರನ್ನು ಇಟ್ಟುಕೊಂಡಿದ್ದರು. ಆರಗದ ವೈಷ್ಣವರ ಹೆಸರಿನ ಮುಂದೆ ‘ನಾಯಕ’ ಎಂಬ ಉಪನಾಮವಿತ್ತು. ಉದಾಹರಣೆಗೆ ಜನ್ಮಸ ಒಡೆಯರು ಆರಗ ರಾಜ್ಯವನ್ನು ಪಾಲಿಸುತ್ತಿದ್ದಲ್ಲಿ ಭಾರದ್ವಾಜ ಗೋತ್ರದ ದಾಮೋದರ ನಾಯಕರ ಮಗ ಕೇಸಪ್ಪಗಳಿಗೆ ಎಂದು ಆರಗದ ಶಾಸನದಲ್ಲಿದೆ.[25]

ಅಗ್ರಹಾರಗಳು

ವಿಜಯನಗರದ ಕಾಲದಿಂದ ಕೆಳದಿ ಅರಸರ ಕಾಲದವರೆಗೆ ಆರಗದ ಸುತ್ತಲೂ ನಿರ್ಮಾಣವಾದ ಅನೇಕ ಅಗ್ರಹಾರಗಳಿವೆ. ಒಳಗೋಡು, ಪದ್ಮಲಾಒಉರ, ಲಕ್ಷ್ಮಿಗೋವಿಂದಪುರ, ಬುಕ್ಕರಾಯಪುರ, ಶಿವರಾಜಪುರ ಎಂದು ಸಂಖ್ಯೆಗಳು ಬೆಳೆಯುತ್ತಾ ಆರಗದಂಥ ಸಣ್ಣ ಕಂಪಣದಲ್ಲಿ ೨೨ ಕ್ಕಿಂತ ಹೆಚ್ಚು ಅಗ್ರಹಾರಗಳಿದ್ದುದು ಶಾಸನಗಳಲ್ಲಿದೆ ಈ ಅಗ್ರಹಾರಗಳ ವೈದಿಕರಿಗೆ, ವಿದ್ವಾಂಸರಿಗೆ ರಾಜ್ಯದ ಉದ್ದಗಲಕ್ಕೂ ಗ್ರಾಮಗಳಲ್ಲಿ ಭೂದಾನ ನೀಡಿ ವ್ರಿತ್ತಿ ಕಲ್ಪಿಸಿರುವ ಶಾಸನಗಳು ಸಿಗುತ್ತವೆ.

ಆಗರದ ಸದಾಶಿವಪುರ ಮತ್ತು ದೇವಾಲಯದಲ್ಲೂ ಒಂದು ವಿಶೇಷತೆಯಿದೆ. ಸದಾಶಿವಪುರದ ಶಿವಾಲಯವನ್ನು ವಿಜಯನಗರದ ಕಾಲದಲ್ಲಿಯೇ ಕಟ್ಟಲಾಗಿತ್ತು. ವಿಜಯನಗರದ ಸಾಮಂತ ಕೆಳದಿ ಸದಾಶಿವ ನಾಯಕನ ಮಂತ್ರಿ ಮಾದಪ್ಪಯ್ಯನು ತನ್ನ ರಾಜನ ಹೆಸರಿನಲ್ಲಿ ನಿರ್ಮಿಸಿದ. ಸದಾಶಿವ ಅಗ್ರಹಾರವು ಪಾಳುಬಿದ್ದಿತು. ವಿಜಯನಗರದ ಚಕ್ರವರ್ತಿಯ ಆದೇಶದಂತೆ ಕೆಳದಿ ರಾಮರಾಜ ನಾಯಕನು ಪರಭಾರೆಯಾಗಿದ್ದ ವ್ರಿತ್ತಿಗಳನ್ನು ಬ್ರಾಹ್ಮಣರಿಗೆ ಮತ್ತೆ ಕೊಡಿಸಿ ಅಗ್ರಹಾರವನ್ನು ಅಭಿವೃದ್ಧಿಗೊಳಿಸಿದನು. ಅಲ್ಲಿಗೆ ಆರಗ ಗುತ್ತಿ ಸೀಮೆಯ ಎಲ್ಲ ಅಗ್ರಹಾರಗಳಿಗೆ ಈ ಅಗ್ರಹಾರವೇ ಯಜಮಾನನೆಂದು ಮನ್ನಣೆ ನೀಡಿದನು. ಇಲ್ಲಿಯ ದೇವಾಲಯ ಮತ್ತು ಅಗ್ರಹಾರದ ನಿರ್ವಹಣೆಯ ಉಸ್ತುವಾರಿಯನ್ನು ಆರಗದಲ್ಲಿದ್ದ ಚಿಂನ ಭಂಡಾರದ ರಾಮಕೃಷ್ಣಯ್ಯನವರಿಗೆ ವಹಿಸಿದನು. ಕೆಳದಿ ಅರಸು ಸದಾಶಿವ ನಾಯಕನು ಬ್ರಾಹ್ಮಣರಿಗೆ ಇನ್ನಷ್ಟು ವ್ರಿತ್ತಿಗಳನ್ನು ನೀಡಿದನು.

ಕ್ರಮೇಣ ಸದಾಶಿವ ದೇವಾಲಯ ತುಂಬಾ ಅಭಿವೃದ್ಧಿಗೆ ಬಂದಿತು. ಇದಕ್ಕೆ ಸಂಬಂಧಿಸಿದ ಇದೇ ಸ್ಥಳದ ಶಿಲಾಶಾಸನವು ಹಾಳಾಗಿದೆ. ಉಳಿದಷ್ಟೇ ಭಾಗದಲ್ಲಿ “ದ.ಸ.೩೧೪೦೦ ಸುವರ್ಣಾದಾಯದ ೫೯೫೯ (ಐವತ್ತೊಂಭತ್ತು ಆರು, ಒಂಬತ್ತು) ಖಂಡುಗ ಭತ್ತವನ್ನು ಕೊಟ್ಟು ಕೈನಾಯಕರು ಆರಗದ ಸದಾಶಿವಪುರದ ಯಜಮಾನರು, ಜನಂಗಳು ದೇವಸ್ಥಾನ ಮುಂತಾದ ಗ್ರಾಮ ಧರ್ಮಗಳಿಗೆ ಸಹಿರನ ದಾರಾ ಪೂರ್ವಕವಾಗಿ ಕೊಟ್ಟ ಜೀರ್ಣೋದ್ಧಾರ ಪುರಸ್ಸರ ಭೂಮಿ” ಎಂದಿದೆ. ಈ ಶಾಸನದಲ್ಲಿ ಅಗ್ರಹಾರದವರೇ ಇಷ್ಟೊಂದು ಉತ್ಪನ್ನದ ಭೂಮಿ ಭತ್ತ ಮತ್ತು ಕಾಣಿಕೆ ನೀಡಿರುವುದು ಸೋಜಿಗವೆನಿಸಿದೆ.

ಈ ದೇವಾಲಯದ ನಿತ್ಯಾರ್ಚನೆ ವಿಶೇಷ ಹಬ್ಬಗಳು ಹಾಗೂ ಉತ್ಸವಾದಿಗಳಿಗೆ ಪ್ರತಿಯೊಂದು ಕೈಂಕರ್ಯಕ್ಕೂ ವಿವರವಾಗಿ, ಇದನ್ನು ನಿರ್ವಹಿಸುವ ವ್ಯಕ್ತಿಗಳಿಗೆ ವಾರ್ಷಿಕ ಗದ್ಯಾಣ ರೂಪದಲ್ಲಿ ನೀಡುವಂತೆ ನಿಗದಿಗೊಳಿಸಿದೆ. ಇದರಿಂದ ಹಲವಾರು ವೈದಿಕರಿಗೆ ದೇವಾಲಯದ ಧರ್ಮಕಾರ್ಯಗಳಲ್ಲಿ ಪಾಲು ಸಿಕ್ಕಿದೆ. ಇದರೊಂದಿಗೆ ನಾಲ್ಕು ವೇದಗಳ ಅಧ್ಯಯನ ಮಾಡುವ ವಿದ್ಯಾರ್ಥಿಗಳ ವೆಚ್ಚವನ್ನು ಭರಿಸಲಾಗುತ್ತಿತ್ತು.

ವೈದಿಕೇತರರೂ ಸಹ ದೇವಾಲಯದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಬಾರಿಕೆ ಜನ, ಅಗಸ, ನಾಯಿಂದ, ದನಗಾಹಿಗಳಿಗೂ ಕಂಮುಗಳಿ, ನರಿಮಾನಿ, ಯೋಗೀಯದಂಡ ಮುಂತಾದವರಿಗೆ ವಾರ್ಷಿಕ ವೇತನವನ್ನು ನಗದಾಗಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಇವರಲ್ಲಿ ಕೊನೆಯ ಮೂವರು ಯಾರೆಂದು ತಿಳಿಯುವುದಿಲ್ಲ. ಇದರೊಂದಿಗೆ ದೇವಾಲಯದ ಹೂವಿನ ತೋಟದ ನಿರ್ವಹಣೆಯವರಿಗೆ, ದೇವಾಲಯದಲ್ಲಿ ಸೋರುವ ಸ್ಥಳದಲ್ಲಿ ವೊದಲ ಹೊದಿಸುವವರಿಗೆ (ಅಡಿಕೆಯ ಸೋಗೆ ಅಥವಾ ಹುಲ್ಲು ಇರಬಹುದೆ?) ಒಟ್ಟು ೧೬ ಜನಕ್ಕೆ ೨೪ ಖಂಡುಗ ಭತ್ತವನ್ನು ನೀಡಬೇಕೆಂದು ಗೊತ್ತುಪಡಿಸಿದೆ.

ದೇವಾಲಯದ ಉತ್ಪನ್ನದ ವಸೂಲಿಗಾಗಿ ಹಾಗೂ ಲೆಕ್ಕಪತ್ರಗಳನ್ನಿಡಲು ಸಹಾಯ ಮಾಡುವ ಗ್ರಾಮದ ಸೇನಬೋವ (ಶಾನುಭೋಗ)ರಿಗೂ ವಾರ್ಷಿಕ ಗದ್ಯಾಣ ರೂಪದಲ್ಲಿ ಗೌರವ ಧನ ನೀಡಲಾಗುತ್ತಿತ್ತು. ದೇವಾಲಯದ ನಿರ್ವಹಣೆಯನ್ನು ಪಾರುಪತ್ಯಗಾರನಿಗೆ ವಹಿಸಿ ಇವನಿಗೆ ವಾರ್ಷಿಕ ೧೮ ಗದ್ಯಾಣ ಗೌರವ ಧನ ನೀಡಲಾಗುತ್ತಿತ್ತು.

 

[1]ಇದೇ ೧೨೧ ಹಾದಿಗಲ್ಲು

[2]ಇದೇ ೯೧ ಕುರುವಳ್ಳಿ ೧೫೮೪

[3]ಇದೇ ೧೯ ಆರಗ ೧೫೭೩

[4]ಇದೇ

[5]ಇದೇ ತೀರ್ಥಹಳ್ಳಿ ೯೦ ಕುರುವಳ್ಳಿ ೧೫೮೪

[6]ಇದೇ ೮ ಮಾಕೊಡು ೧೩೯೭

[7]ಇದೇ ೯ ಆರಗ ೧೪೦೩

[8]ಇದೇ

[9]ಇದೇ ೧೩ ಆರಗ ೧೪೦೪

[10]ಇದೇ ನಗರ ೬ ಹೊಂಬುಚ

[11]ಇದೇ ತೀರ್ಥಹಳ್ಳಿ ೧೯ ಆಗಳಬಾಗಿಲು ೧೫೭೩

[12]ಇದೇ

[13]ಇದೇ ನಗರ ೧ ಹೊಂಬುಚ

[14]ಇದೇ ತೀರ್ಥಹಳ್ಳಿ ೧೨ ಆರಗ ೧೪೦೫

[15]ಎ.ಕ. ನಾಗಮಂಗಲ ೧೪೯ ಕ್ರಿ.ಶ. ೧೭೭೬

[16]ಎ.ಕ. ೮. ತೀರ್ಥಹಳ್ಳಿ ೧೯

[17]ಎಂ.ಎ.ಆರ್. ೧೯೪೩ ನಂ. ೩೧

[18]ಅಡಿಟಿಪ್ಪಣಿ ೩ ಪುಟ ೨೮೧

[19]ಹರಿದಾಸಭಾರತಿ ಸಂ. ೫ ಸಂ. ೧೨ ಅಕ್ಟೋಬರ್ ೧೯೫೫

[20]ಎ.ಕ. ೮ ತೀರ್ಥಹಳ್ಳಿ ೨೦೧ ಆರಗ ೧೩೯೫

[21]ಇದೇ ೧೬೩ ಇದೇ ೧೪೨೫

[22]ಇದೇ

[23]ವೆಂಕಟೇಶ ಜೋಯಿಸ, ಕೆಳದಿ ಅರಸರ ಶಾಸನ ಸಂಪುಟ, ಪು ೧೮೬

[24]ಇದೇ ಪು ೧೨೨

[25]ಎ.ಕ. ೮ ತೀರ್ಥಹಳ್ಳಿ ೩೧ ಚಿಕ್ಕಹಳ್ಳಿ ೧೪೦೦