ಗ್ರಾಮದೇವತೆಗಳು

ಆರಗದ ಪರಿಸರದಲ್ಲಿ ಹಿಂದಿನ ಕಾಲದಿಂದಲೂ ಗ್ರಾಮದೇವತೆಗಳ ಆರಾಧನೆ ನಡೆಯುತ್ತಿತ್ತು. ಬ್ರಾಹ್ಮಣರು ಈ ಬೂರಿ ದೈವಗಳ ಅರ್ಚಕರಾಗಿದ್ದು ಇದೇ ದೈವಗಳ ಹೆಸರನ್ನು ಇಟ್ಟುಕೊಂಡಿರುವುದು ಸೋಜಿಗವೆನಿಸಿದೆ.

ಗ್ರಾಮದೈವ ಬ್ರಾಹ್ಮಣರ ಹೆಸರು ಶಾಸನದ ಆಧಾರ
ಜಕ್ಕಣೆ ಜಕ್ಕಂಬಟ್ಟ ಎ.ಕ.ತೀರ್ಥಹಳ್ಳಿ ೨೦೮
ಬಾಗಮ್ಮ ಬಾಗಿಭಟ್ಟ ಎ.ಕ.ತೀರ್ಥಹಳ್ಳಿ ೧೩೬
ಸಿಂಗಾರಿ ಸಿಂಗಾರಿಭಟ್ಟ ಎ.ಕ.ತೀರ್ಥಹಳ್ಳಿ ೨೧೬
ಆಯಿ ಆಯಿಭಟ್ಟ ಎ.ಕ.ತೀರ್ಥಹಳ್ಳಿ ೨೦೮
ಚಂದಮ್ಮ ಚಂದಪ್ಪಗಳು ಎ.ಕ.ತೀರ್ಥಹಳ್ಳಿ ೧೩೧
ಲಕ್ಕಮ್ಮ ಲಖಂಣ ಎ.ಕ.ತೀರ್ಥಹಳ್ಳಿ ೧೪೮
ಪಾವು ಪಾವುನಾತ್ಮಜ ಎ.ಕ.ತೀರ್ಥಹಳ್ಳಿ ೨೦೯

ಮೇಲಿನಂತೆ ನೂರಾರು ಹೆಸರುಗಳೂ ಶಾಸನಗಳಲ್ಲಿವೆ. ಹೆಸರುಗಳೂ ಸಹ ವಿಚಿತ್ರವಾಗಿವೆ. ಕೆಲವು ಬ್ರಾಹ್ಮಣರ ಹೆಸರುಗಳು ಸೊಗಾನಿ, ಸಗಾಯಿ, ಕೋಡಿಭಟ್ಟ, ದಂಡಪ್ಪ, ಬೊಲ್ಲರ್ಸ, ಖೇಬರ್ಸ, ಮುಕ್ಕರ್ಸ, ಬೆಲ್ಲರ್ಸ, ಮಾದರ್ಸ, ಬಾಯಪ್ಪ, ಭರಣಿಭಟ್ಟ, ಅಂಕನಾಥ, ಚಿತ್ರಗುಪ್ತಭಟ್ಟ ಎಂದು ಮುಂತಾಗಿ ಶಾಸನದಲ್ಲಿವೆ.

ಆದರೆ ಇವರೆಲ್ಲರೂ ಕಾಶ್ಮೀರದ ‘ಸಾವಾಸಿಗರು’ ಎಂಬ ವೈದಿಕ ಕುಟುಂಬದವರೆಂದು ತಿಳಿದುಬಂದಿದೆ. ಇವರು ಕಾಶ್ಮೀರದಿಂದ ರಾಷ್ಟ್ರಕೂಟರ ದೊರೆ ಕನ್ನಡ (೯೪೫-೯೫೬) ನ ಕಾಲದಲ್ಲಿ ಕರ್ನಾಟಕಕ್ಕೆ ಬಂದು ನೆಲೆಸಿದರು. ಬೇಲೂರಿನ ಒಂದು ಶಾಸನದಲ್ಲಿ ಮಾಯಿಭಟ್ಟ, ಕೋಮಣಭಟ್ಟ, ಲಖ್ಖಣ ಎಂಬ ಹೆಸರಿದೆ ಇವರೂ ಸಹ ಸಾವಾಸಿಗರು. ವೀರಬಲ್ಲಾಳನು ತನ್ನ ತಂದೆ ನರಸಿಂಹನ ಹೆಸರಿನಲ್ಲಿ ತುಂಗಭದ್ರಾ ನದಿಯ ಪಶ್ಚಿಮ ದಂಡೆಯ ಬಳ್ಳೇಶ್ವರದಲ್ಲಿ ದೇವಾಲಯ ಕಟ್ಟಿಸಿ ಲಿಂಗ ಪ್ರತಿಷ್ಠೆ ಮಾಡಿದನು. ಇದೇ ದೇವಾಲಯದಲ್ಲಿ ಗೌತಮೇಶ್ವರ ಲಿಂಗ ಪ್ರತಿಷ್ಠೆ ಮಾಡಿದ ಮಹದೇವ ಮತ್ತು ಲಕ್ಷ್ಮೀನಾರಾಯಣನನ್ನು ಪ್ರತಿಷ್ಠಾಪಿಸಿದ ಅವನ ಸಹೋದರಿ ಮಾದಲದೇವಿಯರೂ ಸಹವಾಸಿ ಬ್ರಾಹ್ಮಣರು. ಹಾಸನದ ೧೨೧೭ರ ಶಾಸನದಂತೆ

[1]ಹೊಯ್ಸಳ ವೀರಬಲ್ಲಾಳನು ನಿಜಗಲ್ಲಿನಲ್ಲಿ ಆಳುತ್ತಿದ್ದಾಗ ಭದ್ರಾಹು ಗ್ರಾಮದಲ್ಲಿ ಜೈತನಾರಾಯಣ ದೇವರನ್ನು ಪ್ರತಿಷ್ಠೆ ಮಾಡಿದಿ ಜೈಭಟ್ಟಯ್ಯನು ಸಾವಾಸಿ ಬ್ರಾಹ್ಮಣನಾಗಿದ್ದಾನೆ.[2]ಸೊರಬದ ೨೬೫ನೆಯ ಶಾಸನದಲ್ಲಿರುವ ಕಾಮಯ್ಯ, ಸಾತಯ್ಯ ಎಂಬುವರು, ೧೨೨೯ ರ ಸೌಂದತ್ತಿ ಶಾಸನದ[3]ಮಾದಿರಾಜ ಎಂಬ ಕವಿಯೂ ಸಹ ನಿವಾಸಿಗಳೇ ಸಾವಾಸಿ ಬ್ರಾಹ್ಮಣರು ಹೊಯ್ಸಳರ ಕಾಲದಲ್ಲಿ ಆರಗಕ್ಕೆ ಅನೇಕ ಕುಟುಂಬಗಳು ಬಂದು ನೆಲೆಸಿ ತಾಂತ್ರಿಕ ಪೂಜಕರಾಗಿದ್ದರು.

ವೀರಶೈವ ಮಠಗಳು

ಕೆಳದಿಯ ಅರಸರ ಕಾಲದಲ್ಲಿ ಆರಗದ ಬಾವಿಕೈ ದಾಸನ ಗದ್ದೆಯಲ್ಲಿ ಕುಪಸ್ತ ಕಂತೆ ಹರೀಶ್ವರ ಮಲ್ಲಿಕಾರ್ಜುನದೇವರೆಂಬುವರು ವಶೀಕೃತ ಮಠವನ್ನು ಕಟ್ಟಿದರು.[4] ಇನ್ನೊಂದು ಶಾಸನದಲ್ಲಿ “ಆರಗದಲು ವಂಚಿದೇವರು ಕಪ್ಪಗಳಲೆ ಬಸವ ಕಟಿಸ್ತ ಮಠ” ಎಂದು ಹೇಳಿದೆ.[5]ಕೆಳದಿಯ ಅರಸು ಹಿರಿಯ ವೆಂಕಟಪ್ಪನಾಯಕನ ಕಾಲದಲ್ಲಿ ಆರಗದಲ್ಲಿ ಮಹತ್ತಿನ ಮಠ ನಿರ್ಮಾಣವಾಯಿತು[6]ವೀರಭದ್ರ ನಾಯಕ ಮತ್ತು ಸೋಮಶೇಖರ ನಾಯಕರೂ ಸಹ ಆರಗದಲ್ಲಿ ಮಹತ್ತಿನ ಮಠ ಕಟ್ಟಿಸಿದರು[7]ಈ ಎಲ್ಲಾ ಮಠಗಳಿಗೂ ಭೂದಾನ ನೀಡಲಾಗಿತ್ತು.

ಸಾಂಸ್ಕೃತಿಕ ಚಟುವಟಿಕೆಗಳು : ಮಾರಪ್ಪನ ಮಂತ್ರಿ ಮಾಧವನು ಸಮಸ್ತ ಶೈವಾಗಮಸಾರ ಸಂಗ್ರಹ ಎಂಬ ಗ್ರಂಥವನ್ನು ಬರೆದಿದ್ದಾನೆಂದು ತ್ರ್ಯಂಬಕದ ಒಂದು ಶಾಸನದಲ್ಲಿ ಹೇಳಿದೆ. ಈ ಗ್ರಂಥದ ಬಗ್ಗೆ ತಿಳಿದಿಲ್ಲ. ಇದಲ್ಲದೆ ಸೊರಬದ ೩೭೫ನೇ ತಾಮ್ರ ಶಾಸನವನ್ನು ಸಹ ಇವನೇ ಬರೆದಿದ್ದಾನೆ.[8]

ಆರಗದ ಆದ್ಯರು ಮತ್ತು ಆರಾಧ್ಯರು ರಚಿಸಿದ ಉಗಾಭೋಗಗಳು ಪುರಂದರದಾಸರು, ಶ್ರೀಪಾದರಾಯರು ಹಾಘೂ ವ್ಯಾಸರಾಯರ ರಚನೆಗಳ ಮೇಲೆ ಹೇಗೆ ಪ್ರಭಾವ ಬೀರಿವೆ ಎಂದು ಈ ಕೆಳಗಿನಂತೆ ನಮೂದಿಸಿದೆ.

ಆರಗದ ಅಚಲಾನಂದ ಆದ್ಯರ ಉಗಾಭೋಗಗಳು

೧. ಅತ್ತೆ ಸತ್ತಾರೆ ಸೊಸೆ ಅಳುವಳಂತೆ ಅತ್ತೆ,ಅತ್ತೆ, ಅತ್ತೆಂದತ್ತೆ ಅತ್ತೆ ಸತ್ತಾರೆ ಎನಗೆ ಹುಚ್ಚು ಹೋಯಿತು.

೨. ಬಲ್ಲವ ಉಳ್ಳವ ನೀನಿರುತಿರಲಿಕ್ಕೆ ಕ್ಷುಲ್ಲಕ ಮತವಿಡಿದು ಸುಖವ ಬಯಸುವ ಕುಂಟ.

೩. ಗಾಳಿಗಿಕ್ಕಿದ ದೀವಿಗೆಯಂತೆ ದೇಹವೆಂದು

ಪುರಂದರದಾಸರಉಗಾಭೋಗಗಳು

೧. ಅತ್ತೆ ಅತ್ತೆ ಅತ್ತೆಯಂದತ್ತೆ ಅತ್ತೆ ಸತ್ತಾರೆಸೊಸೆ ಅಳುವಂತೆ ಆಯಿತು. ಅತ್ತೆ ಸತ್ತರೆ ಸೊಸೆಗೆಬುದ್ಧಿಯಾಯಿತು.

ಶ್ರೀಪಾದರಾಯರು

ಬಲ್ಲವನು ಉಳ್ಳವನು ನೀನಿರಲು ಭಜಿಸದೆ; ಕ್ಷುಲ್ಲಕರ ಮತವಿಡಿದು ಸುಖವ ಬಯಸುವೆ ನಾನು.

ವ್ಯಾಸರಾಯರು

ಗಾಳಿಗಿಕ್ಕಿದ ದೀವಿಗೆಯಂತೆ ಈ ದೇಹ ವ್ಯಾಳ್ಯ ವ್ಯಾಳ್ಯಕ್ಕೆ ಶೃತಿ ಸಾರುತಿದೆ.

ಹೀಗೆ ಆದ್ಯರು ಮತ್ತು ದಾಸಕೂಟದ ರಚನೆಗಳಿಗೂ ಎಷ್ಟೊಂದು ಸಾಮ್ಯತೆ ಇದೆ ಎಂದು ತಿಳಿಯುತ್ತದೆ. ಆರಗದ ಅಚಲಾನಂದರ ಉಗಾಭೋಗದಲ್ಲಿ ಅಚಲಾನಂದ ವಿಠಲ, ಯೋಗೇಂದ್ರ ವಿಠಲ, ಬಲ್ಲಿದ ವಿಠಲ, ಸೊಬಲಗು ವಿಠಲ ಸಿರಿಪತಿ ವಿಠಲ ಮತ್ತು ರಾಮಕೃಷ್ಣ ವಿಠಲ ಎಂಬ ಮುದ್ರಿಕೆಗಳಿವೆ. ಹೀಗೆ ಆರಗವು ಪಂಡರಾಪುರದಂತೆ ಸುಪ್ರಸಿದ್ಧ ವಿಠಲ ಕ್ಷೇತ್ರವಾಗಿತ್ತೆಂದು ತೋರುತ್ತದೆ. ಮೇಲಿನ ಉಗಾಭೋಗಗಳನ್ನು ಕೆಲವು ಗ್ರಾಮದೈವಗಳ ಹೆಸರನ್ನು ಕಪಟರಾಳು ಕೃಷ್ಣರಾಯರ ಸಂಗ್ರಹದಿಂದ ಆಯ್ದುಕೊಂಡಿದೆ.

ಸಂಗೀತ ನೃತ್ಯ

ಆರಗದ ಬ್ರಾಹ್ಮಣರಿಗೆ ವ್ರಿತ್ತಿಯನ್ನು ನೀಡುವಾಗ ಆರಗದ ಒಂದು ಶಾಸನವು “ಭರತಶಾಸ್ತ್ರ ವಿಶಾರವತ್ ಸೋಮನಾತ್ಮಜ ಮಾಯಿ ಭಟ್ಟಗೆ” ಎಂದು ಉಲ್ಲೇಖಿಸಿದೆ. ೧೪೬೪ ರ ಇದೇ ಶಾಸನದಂತೆ ಸೋಮನಾಥ ಭಟ್ಟನ ಮಗ ಮಾಯಿಭಟ್ಟನು ಗೌತಮಗೋತ್ರದ ಋಗ್ವೇದ ಶಾಖೆಯ ಬ್ರಾಹ್ಮಣನಾಗಿದ್ದು ಭರತನಾಟ್ಯದಲ್ಲಿ ಅದ್ವಿತೀಯನೆಂದು ಹೇಳುತ್ತದೆ.[9]“ಸಂಗೀತ ವಿದ್ವಾಂಸನಾದ ಸೂರಪ್ಪನಿಗೆ ಭೂದಾನ” ಎಂದು ತೂದೂರಿನ ಶಾಸನದಲ್ಲಿದೆ.[10]ಹೀಗೆ ಆರಗದ ಅಗ್ರಹಾರವು ಸಾಹಿತ್ಯ ನೃತ್ಯ, ಸಂಗೀತಾದಿ ಕಲೆಗಳಲ್ಲಿಯೂ ಹೆಸರು ಗಳಿಸಿತ್ತು.

ಪುರಂದರದಾಸರು ಆರಗ

ಪುರಂದರದಾಸರು ತಾವು ಹುಟ್ಟಿದ ಸ್ಥಳವನ್ನು ಹೇಳಿಕೊಂಡಿಲ್ಲ. ಇವರು ಮಹಾರಾಷ್ಟ್ರ ಪುರಂದರಘಡದಲ್ಲಿ ಹುಟ್ಟಿದವರೆಂದು ವಿದ್ವಾಂಸರು ಹೇಳಿದ್ದಾರೆ. ಪುರಂದರ ಎಂಬುದು ಒಂದು ಸ್ಥಳನಾಮವೆ? ಆರಾಧ್ಯ ದೈವವೆ? ಅಥವಾ ಒಂದು ಮುದ್ರಿಕೆಯೆ? ಎಂಬುದು ಇನ್ನೂ ಚರ್ಚಾಸ್ಪದವಾಗಿಯೇ ಉಳಿದಿದೆ. ಈ ಕಗ್ಗಂಟನ್ನು ಈ ಕೆಳಗಿನ ಅಂಶಗಳಿಂದ ಸ್ವಲ್ಪಮಟ್ಟಿಗೆ ಸಡಿಲಗೊಳಿಸಬಹುದು.

ಸ್ಥಳನಾಮ

ಕಪಟರಾಳು ಕೃಷ್ಣರಾಯರು ಮತ್ತು ಆದ್ಯರಾಮಾಚಾರ್ಯರು ತಮ್ಮ ಕೃತಿಗಳಲ್ಲಿ ಪುರಂದರ ದಾಸರು ತೀರ್ಥ ಹಳ್ಳಿಯ ಘಟ್ಟದ ಪ್ರದೇಶದವರೆಂದು ಐತಿಹಾಸಿಕ ಆಧಾರಗಳನ್ನು ನೀಡಿದ್ದಾರೆ.

ಕಪಟರಾಳರು-

“ಭಾರತೆ ವಿದ್ಯತೆ ದೇಶ : ಪಶ್ಚಿಮವಾರ್ದಿ ಪೂರ್ವತಟಗ :

ಶ್ರೀತೌಳವಾಖ್ಯೋಮಹಾನ್
ತಸ್ಮಿನ್ ಅಂಬುನದಿಸ ದಕ್ಷಿಣ ತಟೀ
ಶ್ರೀ ಪುಂಡ್ರವದ್ಬಾಸತೆ ಶ್ರೀ ಕ್ಷೇಮಪುರಂ
ಪುರಂದರ ಪ್ರಖ್ಯಂ ಸ್ಪುರದ್ಗೋಪುರಮ್

ಎಂದು ಹೇಳಿರುವ ಸಾಗರದ ೫೪ ನೆಯ ಶಾಸನವನ್ನು ಕುರಿತು ಆಲೋಚಿಸಿದ್ದಾರೆ. ಈ ಶಾಸನದಲ್ಲಿ ಹೇಳಿರುವ ಪಶ್ಚಿಮದಲ್ಲಿ ಹರಿಯುತ್ತಿರುವ ಅಂಬುನದಿ ಎಂಬುದು ಶರಾವತಿಯಾಗಿದೆ. ಇದರ ದಕ್ಷಿಣದಲ್ಲಿರುವ ಪುರಂದರಪುರ ಅಥವಾ ಕ್ಷೇಮಪುರವು ಸುಂದರ ಗೋಪುರಗಳಿಂದ ಕಂಗೊಳಿಸುತ್ತಿದೆ ಎಂದು ವರ್ಣಿಸಿದೆ. ಶಾಸನೋಕ್ತ ಪುರಂದರಪುರ ಕ್ಷೇಮಪುರವು ಗೇರುಸೊಪ್ಪೆಯ ಇನ್ನೊಂದು ಹೆಸರು. ಈ ಶಾಸನವು ಸಾಗರ ತಾಲ್ಲೂಕು ಗೋವರ್ಧನಗಿರಿಯ ನೇಮಿನಾಥ ಚೈತ್ಯಾಲಯದ ಮಾನಸ್ಥಂಭದಲ್ಲಿದೆ. ಪುರಂದರದಾಸರು ತಮ್ಮ ಪದಗಳಲ್ಲಿ “ಸೃಷ್ಟಿಯೊಳಗೆ ಪುರಂದರವೆಂಬ ಪಟ್ಟಣದೊಳಗೊಬ್ಬ ವಿಠಲನೆಂಬ ಚಿನಿವಾರ ಇರಲಾತನಿಗೆ” ಎಂದು ಹೇಳಿದ್ದಾರೆ. ವಿಜಯದಾಸರು ಪುರಂದರದಾಸರನ್ನು ಕುರಿತು “ಜನವಾದರು ಪುರಂದರವೆಂಬ ನಗರಿಯಲಿ” ಎಂದು ಸ್ಪಷ್ಟಪಡಿಸಿದ್ದಾರೆ. ಶಾಸನದಲ್ಲಿ ಹೇಳಿರುವ ಪುರಂದರ ಎಂಬ ಸ್ಥಳಕ್ಕೆ ಅನ್ವಯಿಸಿಕೊಂಡಿರುವ ಮೇಲಿನ ಇಬ್ಬರು ವಿದ್ವಾಂಸರು ಇದನ್ನು ಗೇರುಸೊಪ್ಪೆ ಎಂದು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಅಲ್ಲದೆ ಇಲ್ಲಿಯೇ ಹುಟ್ಟಿದರೆಂದು ಹೇಳಲು ಸದ್ಯಕ್ಕಂತೂ ಯಾವ ಆಧಾರವೂ ದೊರೆತಿಲ್ಲ.

ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಗೂ ಪುರಂದರಪುರ, ಬಲಿಪುರ ಎಂಬ ಹೆಸರಿದೆ. ಇಲ್ಲಿ ದಾಸರು ಹುಟ್ಟಿದರೆಂದು ಹೇಳುವ ದಾಖಲೆಗಳಿಲ್ಲ.

ಕೋನೇರಿ : ಪುರಂದರದಾಸರ ಪದದಲ್ಲಿ “ಜಗದೊಡೆಯ ಮೂಡಲ ಗಿರಿಯ ಕೋನೇರಿ ತಿಮ್ಮ” ಎಂದು ಹೇಳಿದೆ. ಇಲ್ಲಿ ಕೋನೇರಿ ಎಂಬ ಪದವನ್ನು ಮಾತ್ರ ತೆಗೆದುಕೊಂಡರೆ ತೀರ್ಥಹಳ್ಳಿಯ ಒಂದು ಶಾಸನದಲ್ಲಿ “ಪಲಾಕೂರ ರಾಮಭಟರಿಗೆ ಕೋನೇರಿ ದೀಕ್ಷತನಿಂದ ಸ್ವಾಸ್ತೆ” ಎಂದಿದೆ.[11]ಕೋನೇರಿಯು ತೀರ್ಥಹಳ್ಳಿಯ ಒಂದು ಅಗ್ರಹಾರವೂ ಆಗಿತ್ತು.

ಆರಗ ವ್ಯಾಪಾರಿಗಳು

ಆರಗವು ದೊಡ್ಡ ವ್ಯಾಪಾರ ಕೇಂದ್ರವಾಗಿದ್ದು ಎಂಟು ವೇಂಟೆಗಳ ಕೇಂದ್ರಸ್ಥಾನವಾಗಿತ್ತು. ಎಂದು ಈಗಾಗಲೇ ಹೇಳಿದೆ. ಇಲ್ಲಿ ಇತರ ಸರಕುಗಳೊಂದಿಗೆ ಚಿನ್ನ, ಬೆಳ್ಳಿ ಮತ್ತು ಹರಳು ಕಲ್ಲುಗಳ ವ್ಯಾಪಾರ ನಡೆಯುತ್ತಿತ್ತು ಎಂದು ದಾಸರಪದಗಳಲ್ಲಿಯೂ ಗುರುತಿಸಬಹುದು. ಆರಗದಲ್ಲಿ ವರ್ತಕರ ಸಂಘವಿತ್ತು. ಪುರಂದರದಾಸರ ಪೂರ್ವಾಶ್ರಮದ ಶ್ರೀನಿವಾಸ ನಾಯಕರು ಮತ್ತು ಅವರ ಮನೆತನದವರು ವಿಜಯನಗರ, ಕೆಳದಿ ಮತ್ತು ದಕ್ಷಿಣ ಕನ್ನಡದಲ್ಲಿ ವ್ಯಾಪಾರ ನಡೆಸುತ್ತಿದ್ದ ಪೋರ್ಚುಗೀಸರೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರೆಂದು ಆದ್ಯರಾಮಾಚಾರ್ಯರು ತಮ್ಮ ಕೃತಿಯಲ್ಲಿ ಹೇಳಿದ್ದಾರೆ. ಹೀಗೆ ಶ್ರೀನಿವಾಸ ನಾಯಕರು ಆರಗದ ವ್ಯಾಪಾರಿಗಳಲ್ಲಿ ಒಬ್ಬರಾಗಿರಬಹುದು.

೫. ನಾಯಕ, ದಾಸ, ಆರಾಧ್ಯ, ಖೈಂಬಣ

ಆರಗದ ಅಗ್ರಹಾರದ ಬ್ರಾಹ್ಮಣರ ಹೆಸರಿನ ಮುಂದೆ ನಾಯಕ ಎಂಬ ಉಪನಾಮವಿದ್ದು ಚಿಕ್ಕಹಳ್ಳಿಯ ಶಾಸನದಲ್ಲಿ “ದಾಮೋದರ ನಾಯಕರ ಮಗ ಕೇನವ್ವಗಳಿಗೆ ವೃತ್ತಿ” ಎಂದೂ ಇನ್ನೊಂದು ಶಾಸನದಲ್ಲಿ ಮಾಧವದಾಸ ಎಂದೂ ಅಗ್ರಹಾರದವರು ಇಟ್ಟುಕೊಳ್ಳುತ್ತಿದ್ದ ಹೆಸರಿನಂತೆ ಪುರಂದರದಾಸರ ಒಬ್ಬ ಮಗನ ಹೆಸರು “ಖೈಂಬಣ” ಎಂದಿದೆ.

೬. ಸ್ಥಳೀಯ ದೈವಗಳು

ಪುರಂದರದಾಸರು ಆರಗದ ಪರಿಸರದಲ್ಲಿ ನಡೆಯುತ್ತಿದ್ದ ಮಾರಿ, ಮಸಣಿ, ಎಕನಾತಿ ಮುಂತಾದ ಅನೇಕ ದೈವಗಳ ಪೂಜೆ ಮತ್ತು ಬಲಿಯನ್ನು ಕಣ್ಣಾರೆ ಕಂಡಂತೆ ವರ್ಣಿಸಿ ಇದನ್ನು ಅತ್ಯಂತ ಪ್ರಬಲವಾಗಿ ಖಂಡಿಸಿದ್ದಾರೆ.

೭. ಸಾಮರಸ್ಯ

ವಿಜಯನಗರ ಕಾಲದಲ್ಲಿ ಆರಗದಲ್ಲಿ ವೀರಶೈವರು ಹೆಚ್ಚಾಗಿ ನೆಲಸಿದ್ದರು. ಎಲ್ಲರೊಡನೆ ಸಹಬಾಳ್ವೆ ನಡೆಸಲು “ಜಂಗಮರು ನಾವು ಲಿಂಗಾಂಗಿಗಳು, ಮಹಂತಿನ ಮಠದವರು” ಎಂದು ಪುರಂದರದಾಸರು ವೀರಶೈವರನ್ನು ಕುರಿತು ಹೇಳಿದಂತಿದೆ.

೮. ಪ್ರಾದೇಶಿಕ ಭಾಷೆ

ದಾಸರು ತಮ್ಮ ರಚನೆಗಳಲ್ಲಿ ಬಳಸಿರುವ ಸಣ್ಣನುಚ್ಚು, ಗೊಡ್ಡುಳಿ, ಸೀಸಾರು, ತೋಡುತುಪ್ಪ, ಬೋಳೇರು, ಬೂಚಿ, ಸಟಗ, ವಾತ, ಗುಳಿಗೆ, ಚಿಕ್ಕಣಿ ಅಡಿಕೆ, ಮುಂತಾದ ಅನೇಕ ಪದಗಳು ಮಲೆನಾಡಿನ ಪರಿಸರದ ಆಡು ಮಾತುಗಳಾಗಿವೆ.

೯. ಸಾಮಾಜಿಕ ಚಿತ್ರಣ

ಸಾಂಸಾರಿಕ ಕಲಹ, ವಿಧವೆಯರ ದುಸ್ಥಿತಿ, ಮಡಿವಂತಿಕೆ, ಬಡತನ, ಹಸಿವು, ಶ್ರೀಮಂತರ ಅಟ್ಟಹಾಸ, ಹಣದ ಮೇಲಿನ ಬಡ್ಡಿ ವ್ಯವಹಾರ, ಭಕ್ತಿಯಿಲ್ಲದ ಪೂಜೆ ಮುಂತಾದ ವಿಷಯಗಳನ್ನು ಕುರಿತು ಪುರಂದರದಾಸರು ಮನಮಿಡಿಯುವಂತೆ ವರ್ಣಿಸಿರುವುದು ಆರಗದ ಪ್ರಾಂತ್ಯಕ್ಕೂ ಅನ್ವಯಿಸುವಂತಿದೆ.

ಮೇಲಿನ ಅಂಶಗಳು ಪುರಂದರದಾಸರ ಜನ್ಮ ಸ್ಥಳದ ಬಗ್ಗೆ ಹುಡುಕಾಟ ನಡೆಸಲು ಕೆಲವು ಆಧಾರಗಳು ಮಾತ್ರ. ಇದು ದಾಸರನ್ನು ಆರಗದ ಘಟ್ಟ ಪ್ರದೇಶಕ್ಕೆ ತರುವಂತಿದ್ದರೂ ಇವರು ಇದೇ ಸ್ಥಳದವರೆಂದು ಹೇಳಲು ಶಾಸನಾಧಾರಗಳಿಲ್ಲ. ಸಂಶೋಧಕರಿಗೆ ಇದೊಂದು ಗ್ರಾಸವಾಗಬಲ್ಲದು.

ಶಿಲ್ಪಕಲೆ : ಕಲಾನಾಥೇಶ್ವರ : ಪ್ರಸ್ತುತ ಆರಗದಲ್ಲಿ ಉಳಿದು ಬಂದಿರುವ ದೇವಾಲಯಗಳು ಐದು ಮಾತ್ರ. ಈ ದೇವಾಲಯಗಳು ವಿಜಯನಗರ ಅಥವಾ ಕೆಳದಿ ಶಿಲ್ಪಶೈಲಿಯ ಪ್ರತೀಕಗಳು. ಕಲಾನಾಥ ದೇವಾಲಯವು ಊರಿಗೆಲ್ಲ ಎದ್ದು ಕಾಣುವ ಒಂದು ಸುಂದರಮಂದಿರ. ಶಾಸನದಲ್ಲಿ ಇದಕ್ಕೆ “ಕಲಿನಾಥ” ಎಂದು ಹೇಳಿದೆ. ಇದರ ಮಾಡಿನ ಅಂಚಿನಲ್ಲಿ ಇಳಿಜಾರದ ಕಪೋತವಿದೆ. ಶೃಂಗಾರಗೊಂಡಿರುವ ಎತ್ತರದ ಗೋಪುರ ಶಿಖರ, ಮತ್ತು ಅಲಂಕೃತವಾದ ಸ್ಥಂಭ ಬೋದಿಗೆಗಳು ವಿಜಯನಗರ ಶಿಲ್ಪಶೈಲಿಗೆ ಶೋಭೆ ತಂದಿದೆ. ಎದುರಿನ ಧ್ವಜಸ್ಥಂಭದ ತಳಭಾಗದ ಶಿಲ್ಪದಲ್ಲಿ ಪುರುಷನೋರ್ವನು ಒಂದು ಕಾಲು ಮಡಿಸಿ ನಿಂತಿದ್ದು ಅವನ ತಲೆಗೂದಲು ಬಲಕ್ಕೆ ಬಾಗಿದೆ.

ಅಖಂಡೇಶ್ವರ : ಈ ದೇವಾಲಯಕ್ಕೆ ಗರ್ಭಗೃಹ ಅಂತರಾಳ ಮತ್ತು ಮಂಟಪವಿದೆ. ಇಳಿಜಾರಾದ ಕಪೋತವಿದೆ. ಸ್ಥಂಭ ದ್ವಾರಪಟ್ಟಕ, ದ್ವಾರಪಾಲಕರ ಕೆತ್ತನೆಯ ಆಕರ್ಷಕ ವೆನಿಸುತ್ತದೆ. ಎತ್ತರವಾದ ಶಿವಲಿಂಗ ಇದರ ಇನ್ನೊಂದು ಆಕರ್ಷಣೆ. ಇಲ್ಲಿ ಅನ್ನ ಸತ್ರವು ನಡೆಯುತ್ತಿತ್ತು ಎಂದು ಶಾಸನದಲ್ಲಿದೆ.

ಬನಶಂಕರಿ : ಇದು ಪೂರ್ಣವಾಗಿ ಪಾಳು ಬಿದ್ದು ಮರಗಿಡಗಳು ಬೆಳೆದಿವೆ. ಆದರೂ ಆಯುಧಪಾಣಿಯಾದ ಬನಶಂಕರಿ, ಕಾಮಧೇನು, ನಟರಾಜ ಮತ್ತು ದ್ವಾರಪಾಲಕರ ಮೂರ್ತಿಗಳು ಉಳಿದಿವೆ.

ಸದಾಶಿವ : ಆರಗದಲ್ಲಿ ಹೆಚ್ಚು ಪ್ರಸಿದ್ಧಿಯಾದ ಈ ದೇಗುಲ ಅಗ್ರಹಾರದಲ್ಲಿದೆ. ಶಿಖರ ಪಾಳಾಗಿದೆ. ಈ ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ಮಂಟಪವಿದೆ. ನವಿಲು ವಾಹನದ ಕಾರ್ತಿಕೇಯನ ಶಿಲ್ಪವಲ್ಲದೆ ಮಾಡಿನ ಅಂಚಿನಲ್ಲಿ ರುಂಡಮಾಲೆಯಂಥಹ ಕೆತ್ತನೆಯಿದೆ.

ಕಾಳಮ್ಮನಗುಡಿ : ಆಯುಧಪಾಣಿಯಾದ ಈ ಮೂರ್ತಿಯು ಆಸೀನ ಭಂಗಿಯಲ್ಲಿದೆ. ಎದುರಿನ ಒಂದು ಸಾಲಿನ ಶಾಸನದಲ್ಲಿ ಕೆಳದಿ ದೊರೆ ಬಸಪ್ಪನಾಯಕನ ಸೇನಭೋವನಾಗಿದ್ದ ಎಲ್ಲಣ್ಣನ ನಮಸ್ಕಾರ ಎಂದಿದೆ.

ಕಪ್ಪಗೋಡು ದೇವಾಲಯ : ಆರಗದ ಸಮೀಪದ ಕಪ್ಪಗೋಡು (ದಾವಣೆಬೈಲು) ಎಂಬಲ್ಲಿರುವ ಈ ದೇವಾಲಯವು ಶಿವಾಲಯವೆಂದು ಪ್ರಚಲಿತವಿದ್ದರೂ ಇದರಲ್ಲಿ ಮೂರ್ತಿಯಿಲ್ಲ. ಇದು ಹೊಯ್ಸಳ ಶೈಲಿಯ ಬಹು ಸುಂದರವಾದ ದೇವಾಲಯ. ತರೀಕೆರೆ ಬಳಿಯ ಅಮೃತೇಶ್ವರ ದೇವಾಲಯವನ್ನು ಹೋಲುತ್ತದೆ. ಗರ್ಭಗುಂಡಿ, ಅಂತರಾಳ ಮತ್ತು ಮುಖಮಂಟಪವಿದೆ. ಮಂಟಪದಲ್ಲಿ ಶೃಂಗಾರಗೊಂಡ ಹದಿನಾರು ಸ್ಥಂಭಗಳಿವೆ. ಛಾವಣಿಯಲ್ಲಿ ೯ ಮೂಲೆಗಳ ಕಮಲದ ಕೆತ್ತನೆಯಿದೆ. ಎಡಬಲಗಳಲ್ಲಿ ಜಗತಿಯಿದೆ. ಕಪೋತವು ಇಳಿಜಾರಾಗಿದೆ. ದ್ವಾರ ಪಟ್ಟಿಕೆಗಳಲ್ಲಿ ಸುಂದರವಾದ ಕೆತ್ತನೆಗಳಿವೆ. ಹೊರಭಾಗದಲ್ಲಿ ಸುತ್ತಲೂ ಸೊಗಸಾದ ಗೋಪುರಾಕೃತಿಯ ತೆನೆಗಳ ಕೆತ್ತನೆಯಿದೆ.

ಜೈನ ಬಸದಿ : ಕಾಳಮ್ಮನ ಗುಡಿ ಬಳಿಯ ಜೈನ ಬಸದಿಯು ಪಾಳು ಬಿದ್ದಿದೆ. ಗರ್ಭಗುಡಿಯಲ್ಲಿ ಮೂಲ ದೇವತೆಯ ವಿಗ್ರಹವಿಲ್ಲ. ರಂಗ ಮಂಟಪದಲ್ಲಿ ನಾಲ್ಕು ಸ್ಥಂಭಗಳಿವೆ. ದ್ವಾರಪಟ್ಟಿಕೆಯ ಮೇಲೆ ತೀರ್ಥಂಕರರ ಮೂರ್ತಿಗಳಿವೆ. ಈ ಬಸದಿಯು ಕಾಲಕಾಲಕ್ಕೆ ಜೀರ್ಣೋದ್ಧಾರಗೊಂಡಂತೆ ತಿಳಿಯುತ್ತದೆ. ಮರಗಿಡಗಳು ಬೆಳೆದು ಬಸದಿಯು ಮತ್ತೆ ಬೀಳುವ ಸ್ಥಿತಿಯಲ್ಲಿದೆ.

ಹಣೆಗಿರಿ : ಇದನ್ನು ಹಣ್ಣೆಗಿರಿ, ಹಣೆಗಿರಿ, ಅಣ್ಣಯ್ಯಗಿರಿ ಎಂದು ಕರೆಯುತ್ತಾರೆ. ಶಿವಲಿಂಗವಿರುವ ಈ ದೇವಾಲಯದಲ್ಲಿ ರಂಗನಾಥಸ್ವಾಮಿಯ ಮೂರ್ತಿಯಿದೆ. ಪುರಂದರದಾಸರು ಹಾಡಿರುವ “ಅರುಣಗಿರಿಯ ಈಶ” ಇದೇ ಇರಬೇಕೆಂದು ಅನಿಸಿಕೆ. ಆಯುಧಪಾಣಿಯಾದ ರಂಗನಾಥ ಸ್ವಾಮಿಯ ಮೂರ್ತಿ ಆಕರ್ಷಕವಾಗಿದೆ. ಪ್ರಾಯಶಃ ಇದು ವಿಜಯನಗರಕ್ಕಿಂತ ಪೂರ್ವದಲ್ಲಿ ಹೊಯ್ಸಳರ ಕಾಲದಲ್ಲಿ ಸ್ಥಾಪನೆಯಾಗಿರಬಹುದು. ಮೊದಲು ಇದು ಶಿವಾಲಯವಾಗಿತ್ತೆ ಎಂಬ ಸಂದೇಹವಿದೆ. ರಂಗಮಂಟಪದಲ್ಲಿ ಶ್ರೀದೇವಿ ಭೂದೇವಿ ಮುಂತಾದ ಮೂರ್ತಿಗಳಿವೆ.

ದೇವಾಲಯದಿಂದ ಮುಂದೆ ಬಂದರೆ ಎಡಭಾಗದಲ್ಲಿರುವ ಒಂದು ಪುಟ್ಟ ಮೂರ್ತಿಯು ಯಕ್ಷಿಯ ಶಿಲ್ಪವಾಗಿರಬಹುದು. ಗಿರಿಯ ತಳಭಾಗದಲ್ಲಿರುವ ಒಂದು ಗುಹೆಯ ಬಂಡೆಯ ಮೇಲ ಈಚೆಗೆ ಕೆತ್ತಲಾಗಿರುವ ಚಿತ್ರಗಳಿವೆ.

ವೀರಭದ್ರ ದೇವಾಲಯ ಸಮುಚ್ಚಯ : ಹಿಂದೆ ಈ ಸ್ಥಳದಲ್ಲಿ ವೀರಭದ್ರನದೆಂದು ಹೇಳಲಾಗುತ್ತಿದ್ದ ಗುಡಿಯು ಪಾಳು ಬೀಳುತ್ತಿದ್ದ ಕಾರಣ ಇದನ್ನು ಈಗ ಹೊಸದಾಗಿ ಕಟ್ಟಿದೆ. ಧ್ವಜಸ್ಥಂಭವು ಹಾಗೆಯೇ ಉಳಿದಿದೆ. ಈ ದೇವಾಲಯದ ಎರಡು ಶಿಲೆಗಳ ಮೇಲೆ ತೀರ್ಥಂಕರರು ಹಾಗೂ ಯಕ್ಷಯಕ್ಷಿಯರ ಕೆತ್ತನೆಯಿದೆ. ಇದನ್ನು ದೇವಾಲಯದ ಎದುರಿನಲ್ಲಿ ನಿಲ್ಲಿಸಿದೆ. ಇನ್ನೊಂದು ಶಿಲೆಯ ಮೇಲೆ ಆನೆಯ ಮೇಲೆ ಕುಳಿತು ಯುದ್ಧ ಮಾಡುವ ವೀರರು ಹಾಗೂ ಶಿವಲಿಂಗವಿದೆ.

ಇಲ್ಲಿರುವ ಒಂದು ವೀರಗಲ್ಲಿನಲ್ಲಿ ಖಡ್ಗಧಾರಿಗಳಾಗಿ ಕುದುರೆಯ ಮೇಲೆ ಕುಳಿತಿರುವ ಇಬ್ಬರು ಮಹಿಳೆಯರು ಮತ್ತು ನಿಂತಿರುವ ಇನ್ನೊಬ್ಬ ಮಹಿಳೆಯ ಕೆತ್ತನೆಯಿದೆ. ವೀರಗಲ್ಲಿನ ಒಂದು ಸಾಲಿನಲ್ಲಿ ನಿಂತಿರುವ ಪುರುಷನೊಬ್ಬನ ರುಂಡವು ಹಾರಿಹೋಗಿ ಅಲ್ಲಿ ನಿಂತಿರುವ ಮಹಿಳೆಯೊಬ್ಬಳ ಕೈಯಲ್ಲಿದೆ. ಮತ್ತೊಂದು ವೀರಗಲ್ಲಿನಲ್ಲಿ ಆರು ಭಾಗಗಳಿವೆ. ಈ ವೀರ ಗಲ್ಲುಗಳು ಯಾವ ಕಾಲಕ್ಕೆ ಸಂಬಂಧಿಸಿದ್ದು ಎಂದು ತಿಳಿದು ಬಂದಿಲ್ಲ. ತೀರ್ಥಹಳ್ಳಿಯ ೨೬ ನೆಯ ಶಾಸನದಲ್ಲಿ ಒಬ್ಬ ಸಿರಿಯಮನ ಸಾಹಸದ ವರ್ಣನೆಯಿದೆ.

ಇದೇ ದೇವಾಲಯದ ಸಮುಚ್ಛಯದಲ್ಲಿರುವ ಜೈನ ತೀರ್ಥಂಕರರ ಮೂರ್ತಿಗಳು ಕ್ರಿ.ಶ. ೮ನೆಯ ಶತಮಾನದ ಚೈತ್ಯಾಲಯಕ್ಕೆ ಸಂಬಂಧಿಸಿದ್ದಂತೆ ತೋರುತ್ತದೆ.

ಸೋಜಿಗದ ಶಿಲ್ಪಗಳು : ಆರಗದ ತುಂಬೆಲ್ಲ ಅನೇಕ ಶಿಲ್ಪಗಳು ತುಂಡು ತುಂಡಾಗಿ ಬಿದ್ದಿವೆ. ಅಗ್ರಹಾರದ ಹಾಸುಗಲ್ಲೊಂದು ಮೇಲೆ ನಾಲ್ಕು ಪಾದಗಳಿದ್ದು ಇದಕ್ಕೆ ಹಾವು ಸುತ್ತು ಹಾಕಿದೆ. ಇದರ ಎರಡು ಭಾಗಗಳಲ್ಲಿ ರುಂಡವಿಲ್ಲದ ಪುರುಷರು ಎರಡು ಕೈಗಳಲ್ಲಿ ರುಂಡವನ್ನು ಎತ್ತಿ ಹಿಡಿದಿದ್ದಾರೆ. ಇದರ ನಡುವೆ ಮತ್ತೆ ಮೂರು ರುಂಡಗಳಿವೆ. ಬಹುಶಃ ಈ ಸ್ಥಳದಲ್ಲಿ ಶಕ್ತಿದೇವತೆಯ ಆರಾಧಕರಾಗಿದ್ದ ಕಾಪಾಲಿಕರಿದ್ದ ಸಂಭವವಿದೆ.

ಅಗ್ರಹಾರದ ಒಂದು ಮರದ ಬುಡದಲ್ಲಿ ನಿಲ್ಲಿಸಿರುವ ಶಿಲೆಯಲ್ಲಿ ಕುಳಿತ ಮಹಿಳೆಯೊಬ್ಬಳ ಚಿತ್ರವಿದೆ. ಬಲಗೈಯನ್ನು ತೊಡೆಯ ಮೇಲೆ ಇಟ್ಟುಕೊಂಡಿದ್ದಾಳೆ. ಎಡಗೈಯಲ್ಲಿ ಯಾವುದೋ ವಸ್ತುವಿದೆ. ರಾಜವಂಶದ ಮಹಿಳೆಯಂತೆ ಕಾಣಿಸುತ್ತಾಳೆ.

ಅವಲೋಕನ : ಆರಗದ ಶಾಸನಗಳು ವಿಜಯನಗರದ ಪೂರ್ವೇತಿಹಾಸವನ್ನು ಸೂಚ್ಯವಾಗಿ ನಿವೇದಿಸಿವೆ. ಮಾರಪ್ಪನಿಗೆ ಸಂಬಂಧಿಸಿದ ಶಾಸನದಂತೆ ವಿಜಯನಗರ ಸ್ಥಾಪನೆಯ ಕಾಲದಲ್ಲಿ ೧೩೩೬ರಲ್ಲಿ ಮಾರಪ್ಪ ಮತ್ತು ಅವನ ಸಹೋದರರು ಬೇರೆ ಬೇರೆ ಕಡೆ ಆಡಳಿತ ನಡೆಸುತ್ತಿದ್ದರೆಂದು ತಿಳಿಯುತ್ತದೆ.

ವಿಜಯನಗರ ಕಾಲದಲ್ಲಿ ಗಂಗ ಮಂಡಳಿನಾಡು ಆರಗ ರಾಜ್ಯಕ್ಕೆ ಸೇರಿ ಗಾಜನೂರು ಸೀಮೆಯಲ್ಲಿ ವಿಲೀನಗೊಂಡಿತು[12]ಪೆನುಗೊಂಡೆಯಲ್ಲಿ ಆಳುತ್ತಿದ್ದ ವೆಂಕಟಪತಿರಾಯನು ಆರಗದಲ್ಲಿ ವಿರುಪಂಣನ ಮಗಳನ್ನು ಮದುವೆಯಾದನೆಂದು ಬಿ.ಎಲ್.ರೈಸ್ರವರು ತೀರ್ಥಹಳ್ಳಿಯ ೯೭ನೆಯ ಶಾಸನವನ್ನು ಉಲ್ಲೇಖಿಸಿ ಹೇಳಿದ್ದಾರೆ. ವಿರುಪಂಣನು ೧೩೬೮ ರಲ್ಲಿ ಆಳುತ್ತಿದ್ದು ವೆಂಕಟಪತಿರಾಯನು ೧೫೬೫ರಲ್ಲಿ ಆಳುತ್ತಿದ್ದ ಕಾರಣ ಕಾಲವು ಹೊಂದಿಕೆಯಾಗುವುದಿಲ್ಲ.[13] ತೀರ್ಥಹಳ್ಳಿಯ ೧೨೯ನೆಯ ಶಾಸನವು ವಿಜಯನಗರದ ದೊರೆ ಇಮ್ಮಡಿ ಹರಿಹರನ ಮರಣದ ದಿನಾಂಕವನ್ನು ಹೇಳಿರುವ ಕಾರಣ ಪ್ರಾಮುಖ್ಯತೆ ಪಡೆದಿದೆ.[14] ಆರಗದ ಅಗ್ರಹಾರದ ಮಹಾಜನರು ತಮಗೆ ಹಿಂದೆ ನೀಡಿದ್ದ ಭೂದಾನ ವ್ರಿತ್ತಿಯನ್ನು ಅಲ್ಲಿಯ ಸದಾಶಿವ ದೇವಾಲಯಕ್ಕೆ ಬಿಟ್ಟುಕೊಡಲು ಕಾರಣವೇನೆಂದು ತರ್ಕಿಸಬಹುದಾಗಿದೆ. ಆರಗದಲ್ಲಿ ಮಾತ್ರ ಭೂಮಾಲೀಕತ್ವದ ಬಗ್ಗೆ ಹೆಚ್ಚು ಪ್ರಕರಣಗಳನ್ನು ಗುರುತಿಸಬಹುದು.

ಆರಗದಲ್ಲಿ ವೈದಿಕರಲ್ಲದೆ ಜೈನ ಮತ್ತು ವೀರಶೈವ ಧರ್ಮೀಯರು ನೆಲಸಿದ್ದರು. ಅಲ್ಲದೆ ಲಾಕುಳಶೈವ (ಕಾಳಾಮುಖ) ಕಾಪಾಲಿಕ, ಗಾಣಪತ್ಯ, ಕಾಲಭೈರವ, ಗೊರವ ಮುಂತಾದ ಮತ ಪಂಗಡಗಳು ಸಹ ನೆಲೆಸಿ ತಮ್ಮ ತಮ್ಮ ಆಚರಣೆಗಳಲ್ಲಿ ನಿರತರಾಗಿದ್ದರು. ಹೀಗೆ ಒಂದೇ ಸ್ಥಳದಲ್ಲಿ ಈ ಪರಿಯ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದುದು ಅಪರೂಪವೆನಿಸುತ್ತದೆ.

ಆರಗರಾಜ್ಯದ ಹಲವಾರು ತಾಮ್ರ ಪಟಗಳು ಪ್ರಾಮುಖ್ಯತೆ ಪಡೆದಿವೆ. ಆರಗದ ವಿರುಪಾಪುರದ ತಾಮ್ರ ಶಾಸನದಲ್ಲಿ ಇಮ್ಮಡಿ ಹರಿಹರನು ಶ್ರೀ ವಿರೂಪಾಕ್ಷ ಎಂದು ಸಹಿ ಮಾಡಿರುವುದು ತೀರ್ಥಹಳ್ಳಿಯ ೨೦೧ನೆಯ ತಾಮ್ರಪಟದಲ್ಲಿ ನೋಡಬಹುದು. ಇದೇ ರೀತಿ ಇಮ್ಮಡಿದೇವರಾಯನ ೨೦೦ನೆ ಸಂಖ್ಯೆಯ ತಾಮ್ರಶಾಸನದಲ್ಲಿ ಹಾಗೂ ತೀರ್ಥಹಳ್ಳಿಯ ಪುತ್ತಿಗೆ ಮಠದ ೨೦೬ನೆಯ ತಾಮ್ರ ಶಾಸನದಲ್ಲಿಯೂ ವಿರೂಪಾಕ್ಷ ಎಂದು ಕನ್ನಡದಲ್ಲಿ ರುಜು ಮಾಡಿರುವುದನ್ನು ನೋಡಬಹುದು. ಒಟ್ಟಿನಲ್ಲಿ ಆರಗ ರಾಜ್ಯವು ಇತಿಹಾಸಕ್ಕೆ ಮೌಲಿಕ ಕೊಡುಗೆ ನೀಡಿದೆ.

(ಆರಗದ ವ್ಯಾಪಕ ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಕಾಳಮ್ಮನ ಗುಡಿಯ ಕೆ.ಎಂ.ಶ್ರೀನಿವಾಸ್, ಬಿ.ಎಸ್ಸಿ, ಎಲ್ (ಶಿವಮೊಗ್ಗ), ಪಿ.ವಿ.ಮಹಾಬಲೇಶ, ಪ್ರಗತಿ ಪೈನಾನ್ಸಿನ ಮಂಜುನಾಥ್, ಹಿತ್ತಲಗದ್ದೆ ಶಿವಕುಮಾರ್, ಶಾಂತವೇರಿ ಸುರೇಶ್, ಯುವಕ ಸಂಘದ ಪದಾಧಿಕಾರಿಗಳು ಗ್ರಾಮಸ್ಥರು, ಹಾಗೂ ಅರುಣಗಿರಿಯ ದೇವಾಲಯದ ಅರ್ಚಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.)


 

[1]ಎ.ಕ. ಹಾಸನ ೯ ಬೇಲೂರು

[2]ಇದೇ ೬೧ ಭದ್ರಾಹು ೧೨೧೭

[3]ಅಡಿಟಿಪ್ಪಣಿ ೩ ಪು ೨೯೩

[4]ಎಂ.ಎ.ಆರ್. ೧೯೪೩ ಸಂ. ೪೭

[5]ಎ.ಕ. ೮ ತೀರ್ಥಹಳ್ಳಿ ೫೯ ಕವಲೆದುರ್ಗ ೧೭೧೩

[6]ಕೆಳದಿ ನೃಪವಿಜಯ ಪು ೧೪೧

[7]ಇದೇ

[8]ಕಪಟರಾಳು ಕೃಷ್ಣರಾವ್, ಪೂರ್ವೋಕ್ತ ಪು ೨೫೨

[9]ಎ.ಕ. ೮ ತೀರ್ಥಹಳ್ಳಿ ೨೦೬ ಆರಗ ೧೪೬೪

[10]ಇದೇ ೧೮೨ ತೂದೂರು ೧೬೪೧

[11]ಇದೇ ೧೮೯

[12] Ganga Mandalinad was amalgamated with aRaga kingdom and merged in Gajanur Sime. Later Gangas. of Mandali 1000-page 13

[13] Venkatapathiraya was now on the Vijayanagar throne in Penugonda and Thirthahalli 166 discribes Venkatanayaka as ruling at Araga which was in Araga Desa. Thirthahally 97 says his wife was Virupanna Nayaka’s daugther without naming her: B.L. Rice Ec Shimoga Ec. Dt P 15 of introduction 94

[14] Thirthahalli 29 is of special inportance for fixing absolutely the date of the death of Harihara II.