ಕೈಫಿಯತ್ತುಗಳು : ಇತಿಹಾಸ ಬರವಣಿಗೆಯ ಸಂದರ್ಭದಲ್ಲಿ ದಾಖಲೆಗಳಾದ ಶಾಸನಗಳಿಗೆ ಪ್ರಥಮ ಸ್ಥಾನ, ಮಿಕ್ಕವುಗಳಿಗೆ ದ್ವಿತೀಯ ಸ್ಥಾನ ಸಲ್ಲುತ್ತದೆ. ಈ ದ್ವಿತೀಯ ಸ್ಥಾನದ ಆಧಾರ ಸಾಮಗ್ರಿಯಲ್ಲಿ ಕೈಫಿಯತ್ತುಗಳು ಪರಿಗಣಿತವಾಗುತ್ತವೆ. ಶಾಸನಗಳಂತೆ ಕೇವಲ ದಾನ ವೀರಘಟನೆಗಳನ್ನು ಹೇಳದೆ, ಕೈಫಿಯತ್ತುಗಳು ವಾಸ್ತವ ಜೀವನದ ವಿವರಗಳನ್ನು ಒದಗಿಸಿ, ಬದುಕಿನ ಮುಚ್ಚಿಹೋದ ಮುಖಗಳನ್ನು ಬಿಚ್ಚಿ ತೋರಿಸುತ್ತವೆ. ಕೈಫಿಯತ್ತುಗಳಲ್ಲಿ ಆಡಳಿತ ನಡೆಸಿದ ಆ ಸ್ಥಳದ ರಾಜರ, ಪಾಳೇಗಾರರ ಹೆಸರು, ಆಳ್ವಿಕೆ, ಕಾಲ, ಮನೆತನದ ಸಂಬಂಧಗಳಲ್ಲದೆ ಸಮಕಾಲೀನ ಅರಸರ ಬಗೆಗೂ, ಅವರ ಸಂಬಂಧ, ಯುದ್ಧ, ಕಟ್ಟಿಸಿ ಮತ್ತು ಜೀರ್ಣೋದ್ಧಾರ ಮಾಡಿದ ಕೆರೆ, ಕೊಳ, ದೇವಸ್ಥಾನಗಳ ಬಗ್ಗೆಯೂ, ವ್ಯಾಪಾರ, ವ್ಯವಹಾರ, ಕೃಷಿ ಇತ್ಯಾದಿ ಅನೇಕ ವಿವರಗಳನ್ನೂ ಒದಗಿಸುತ್ತವೆ. ನಾಯಕರ ಜೊತೆಗೆ ನಾಗತಿಯರ ವಿವರವೂ ನಮಗೆ ತಿಳಿದು ಬರುವುದು ಕೈಫಿಯತ್ತಿನಿಂದ, ಕೈಫಿಯತ್ತನ್ನು ಪರಿಶೀಲಿಸಿದಾಗ ದೊರಕಿರುವ ಶಾಸನಗಳಿಗೂ ಕೈಫಿಯತ್ತಿನಲ್ಲಿ ಉಲ್ಲೇಖಿಸಿದ ಹೆಸರು, ಕಾಲಗಳಿಗೂ ಬಹಳಷ್ಟು ವ್ಯತ್ಯಾಸ ಕಂಡುಬರುತ್ತದೆ. ಶಾಸನಾಧಾರಗಳನ್ನು ಹೆಚ್ಚು ನಂಬಬಹುದಾಗಿದ್ದು ಕೈಫಿಯತ್ತಿನ ಉಲ್ಲೇಖಗಳು ಸಂದೇಹಕ್ಕೆ ಒಳಪಡುತ್ತವೆ. ಆದರೂ ಅವು ಸತ್ಯಕ್ಕೆ ಸಮೀಪವಾಗಿರುವುದರಿಂದ ಅವುಗಳೂ ಇತಿಹಾಸದ ಪ್ರಮುಖ ಆಕರ ಗ್ರಂಥಗಳಾಗಿವೆ.

ಸಂತೇಬೆನ್ನೂರು ನಾಯಕರ ಬಗ್ಗೆ ಈ ಕೆಳಕಂಡ ಕೈಫಿಯತ್ತಿನಲ್ಲಿ ನಮಗೆ ಮಾಹಿತಿ ದೊರೆಯುತ್ತದೆ.

೧.         ಉತ್ಸಂಗಿ ವೆಂಟಿಕೆ ಸಲ್ಲುವ ಸಂತೆಬೆನ್ನುರು ಶೀಮೆ ಕೈಫಿಯತ್ತು
೨.         ಹೊದಿಗೆರೆ ಶೀಮೆ ಕೈಫಿಯತ್ತು
೩.         ಹೊಳೆಹೊನ್ನೂರು ಕೈಫಿಯತ್ತು
೪.         ಹೈದರ್ ಕೈಫಿಯತ್ತು
೫.         ಹಾರನಹಳ್ಳಿ ಕೈಫಿಯತ್ತು
೬.         ಸೂಳೇಕೆರೆ ಶೀಮೆ ಕೈಫಿಯತ್ತು
೭.         ಸಾಗರದ ಕೈಫಿಯತ್ತು
೮.         ಯುಗಟೇ ಕೈಫಿಯತ್ತು
೯.         ಮಲ್ಲೂರು ಸಾಸುವೆಹಳ್ಳಿ ಶೀಮೆ ಕೈಫಿಯತ್ತು
೧೦.       ಕೈಫಿಯತ್ತು ತಾಲ್ಲೂಕು ಅಜಂಪುರ

೧೧.       ಬೆಳಗುತ್ತಿ ಅರಸುಗಳ ವಂಶಾವಳಿ ವಿವರ ಕೈಫಿಯತ್ತು
೧೨.       ತರೀಕೆರೆ ಕೈಫಿಯತ್ತು (ರಂಗಪ್ಪ ನಾಯಕರು ಬರೆಸಿದ್ದು)

ಸಂತೇಬೆನ್ನೂರು ನಾಯಕರ ಆಡಳಿತ

೧. ಮೂಲಪುರುಷ ಧೂಮರಾಜ : ಹನುಮನಾಯಕ (ಕ್ರಿ.ಶ. ೧೪೮೦-೧೫೦೦)

ಈ ವಂಶದ ಮೂಲ ಪುರುಷನ ಬಗ್ಗೆ ಭಿನ್ನಾಭಿಪ್ರಾಯವಿದ್ದು ಸರ್ಕಾರಿ ಗೆಜೆಟಿಯರುಗಳು, ವಿಶ್ವಕೋಶದಲ್ಲಿ ವಿಜಯನಗರದ ಪ್ರತಿನಿಧಿ ದೂಮರಾಜನೆಂದು ಹೇಳಲ್ಪಟ್ಟರೆ, ಈ ವಂಶದ ಕೈಫಿಯತ್ತಿನಲ್ಲಿ[1]ಈ ವಂಶದ ಮೂಲ ಪುರುಷ ರಾಮಕೋಟಿ ಹಣಮಪ್ಪ ನಾಯ್ಕರು ಎಂದೂ, ಈತನು ಹುಚ್ಚಂಗಿಯಿಂದ ಬಸವಾಪಟ್ಟಣಕ್ಕೆ ಬಂದು, ಪಾಳೆಯಪಟ್ಟು ಕಟ್ಟಿ ನೆಲೆಸಿದನೆಂದು ತಿಳಿಸಲಾಗಿದೆ. ಇನ್ನು ಕೆಲವು ದಾಖಲೆಗಳಲ್ಲಿ ಹನುಮಿನಾಯ್ಕನೆಂದು ಹೇಳಲಾಗಿದೆ. ಇವನು ಮೊದಲು ಈಗನ ಸಂತೇಬೆನ್ನೂರು ಸಮೀಪ ಇರುವ ಗೊಲ್ಲರ ಹಳ್ಳಿಗೆ ಬಂದು ನೆಲೆಸಿ ಅದರ ಹತ್ತಿರದ ಚಿಕ್ಕಕೋಗಲೂರು ಹನುಮಂತ ದೇವರನ್ನು ತನ್ನ ಕುಲದೈವವಾಗಿ ಮಾಡಿಕೊಂಡು ತನ್ನ ಕುಲದ ವೃತ್ತಿಯಾದ ಬೇಟೆ, ಶಿಕಾರಿ ಆಡುತ್ತಾ ನೆಲಸಿದನೆಂದು ತಿಳಿಸುತ್ತದೆ. ಬಹುಶಃ ಇವನ ಕಾಲ ೧೪೮೦-೧೫೫೦ ಎಂದು ತರೀಕೆರೆಯ ಪಾಳೇಗಾರರು[2]ಪುಸ್ತಕ ಬರೆದ ಪಿ.ಅಬ್ದುಲ್ ಸತ್ತಾರ್ ಅಭಿಪ್ರಾಯ ಪಡುತ್ತಾರೆ. ಮುಂದೆ ಈತ ಬಸವಾಪಟ್ಟಣದ ಬೇಡರ ಹೆಣ್ಣುಮಗಳನ್ನು ಮದುವೆಯಾಗಿ ಅಲ್ಲಿ ನೆಲೆನಿಂತ ಎನ್ನಲಾಗಿದೆ.

ನಮಗೆ ದೊರೆತ ಈ ನಾಯಕರ ಶಾಸನ ಕೂಡ್ಲಿ-೪೭ರಲ್ಲಿ[3]ಇಮ್ಮಡಿ ಸೀತಾರಾಮಪ್ಪ ನಾಯಕರ ಪುತ್ರ ಹನುಮಪ್ಪ ನಾಯಕ ಎಂದಿದ್ದು, ಈ ಶಾಸನದ ಕಾಲ ೧೫೫೮. ಈ ಶಾಸನದ ಹನುಮಪ್ಪ ನಾಯಕ, ಹನುಮಿ ನಾಯಕ ಒಬ್ಬನೇ ಎಂದಾದರೆ ಈತನ ತಂದೆ ಸೀತಾರಾಮಪ್ಪ ನಾಯಕ ಯಾರು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ಮೂಲ ಪುರುಷ ಧೂಮರಾಜ ಅಥವಾ ಹನುಮಿ ನಾಯಕನ ಮಗ ಇಮ್ಮಡಿ ಸೀತಾರಾಮಪ್ಪ ನಾಯಕ ಒಬ್ಬನೇ ಇರಬೇಕು. ಅವನ ಮಗನೇ ಕೂಡ್ಲಿ-೪೭ರ ಶಾಸನದಲ್ಲಿ ಉಕ್ತವಾಗಿರುವ ಹನುಮಪ್ಪ ನಾಯಕನೆಂಬ ನಿರ್ಣಯಕ್ಕೆ ಬರಬೇಕಾಗುತ್ತದೆ. ಆದ್ದರಿಂದ ಈ ಧೂಮರಾಜ ಹನುಮಿನಾಯಕ ಕ್ರಿ.ಶ. ೧೪೮೦-೧೪೦೦ವರೆಗೂ ನಂತರ ಇಮ್ಮಡಿ ಸೀತಾರಾಮಪ್ಪ ನಾಯಕ ಕ್ರಿ.ಶ. ೧೫೦೦-೧೫೨೫ರವರೆಗೂ ಆಳಿರಬಹುದೆಂಬ ನಿರ್ಣಯಕ್ಕೆ ಬರಬಹುದು.

೨. ಮುಮ್ಮಡಿ ಹನುಮಪ್ಪ ನಾಯಕ (ಕ್ರಿ.ಶ. ೧೫೦೫-೧೫೫೦)

ಈತನ ಹೆಸರಿನಲ್ಲಿ ಚನ್ನಗಿರಿ ೩೫-೪೨[4] ಎರಡು ಶಾಸನಗಳು ದೊರೆತಿದ್ದು, ಈ ಶಾಸನದ ಕಾಲವನ್ನು ೧೬೨೫, ೧೬೦೧ ಎಂದು ರೈಸರು ಸೂಚಿಸಿದ್ದಾರೆ. ಬಹುಶಃ ಅದು ತಪ್ಪಾಗಿರಬೇಕು ಎನ್ನಿಸುತ್ತದೆ. ಈ ವಂಶದ ಕೈಫಿಯತ್ತುಗಳಲ್ಲಿ ಮುಮ್ಮಡಿ ಹನುಮಪ್ಪ ನಾಯಕನ ಹೆಸರಿಲ್ಲದಿರುವುದು ಅಚ್ಚರಿ ತರುತ್ತದೆ. ಚನ್ನಗಿರಿ ಶಾಸನ – ೨[5]ರಲ್ಲಿ ಉಲ್ಲೇಖವಾಗಿರುವ ನಿಂಗಾಭಟ್ಟರು ಚನ್ನಗಿರಿ-೪೨[6]ರಲ್ಲಿ ಉಲ್ಲೇಖವಾಗಿರುವ ಲಿಂಗಾಭಟ್ಟರು ಒಬ್ಬರೆಂದೇ ಕಾಣುತ್ತದೆ. ಈ ನಿರ್ಣಯದಂತೆ ಈ ಮುಮ್ಮಡಿ ಹನುಮಪ್ಪ ನಾಯಕ, ಕೆಂಗಪ್ಪ, ಬಿಲ್ಲಪ್ಪನಾಯಕರಿಗಿಂತ ಪೂರ್ವದಲ್ಲಿ ಆಳ್ವಿಕೆ ನಡೆಸುತ್ತಿದ್ದಿರಬೇಕು. ಕೂಡ್ಲಿ – ೪೭[7] ರ ಶಾಸನದಲ್ಲಿ ಉಕ್ತವಾಗಿರುವ ಹನುಮಪ್ಪ ನಾಯಕನೇ ಈ ಮುಮ್ಮಡಿ ಹನುಮಪ್ಪ ನಾಯಕನಾಗಿರುವ ಸಾಧ್ಯತೆಯೂ ಇದೆ. ಆದ್ದರಿಂದ ಈ ಶಾಸನಗಳನ್ನು ಕ್ರಿ.ಶ. ೧೫೦೫-೧೫೪೭ ಕಾಲದವು ಎಂದು ನಿರ್ಣಯಕ್ಕೆ ಬರಬಹುದಾಗಿದೆ. ಶಾಸನ-೪೨[8] ಹೊಸಳ್ಳಿ ಈಶ್ವರ ದೇವಸ್ಥಾನದ ಬಳಿ ಇದ್ದು ಸಿಂಹದ ಮಲ್ಲಭಟ್ಟರ ಮಕ್ಕಳು ನಿಂಗಣ್ಣ ಭಟ್ಟರಿಗೆ ಗದ್ದೆದಾನ ಕೊಟ್ಟ ವಿಚಾರ ತಿಳಿಸಿದರೆ, ಶಾಸನ – ೩೫[9] ವೆಂಕಟಯ್ಯಗೆ ಮಂಜಿರಗಟ್ಟ ಗದ್ದೆ ದಾನ ಕೊಟ್ಟ ಬಗ್ಗೆ ತಿಳಿಸುತ್ತದೆ.

೩. ಪಿಲ್ಲಪ್ಪ ನಾಯಕ (ಕ್ರಿ.ಶ. ೧೫೫೦-೧೬೬೫)

ಈತ ಹನುಮಿ ನಾಯಕನ ಮಗ. ಈತನ ಹೆಸರು ಚನ್ನಗಿರಿ ಶಾಸನ-೬೨[10]ರಲ್ಲಿ ಉಕ್ತವಾಗಿದೆ. ಶಾಸನದ ಕಾಲ ೧೫೬೩. ಈತನಿಗೆ ಬಿಲ್ಲಪ್ಪ, ಹುಚ್ಚಪ್ಪ ಎಂದೂ ಹೆಸರಿದ್ದುದಾಗಿ ತಿಳಿದುಬರುತ್ತದೆ. ಚನ್ನಗಿರಿ-೬೯[11]ರ ಶಾಸನದಲ್ಲಿ ವಿಜಯನಗರದ ವೀರಪ್ರತಾಪ ಶ್ರೀ ಸದಾಶಿವ ಮಹಾರಾಯರು ದುಮ್ಮಿ ಸೀಮೆಯನ್ನು ಮಲಕಲ್ಲೊಡೆಯರಿಗೆ ಅಮರ ಪಾಲಿಸಿದರು. ಆತನ ಠಾಣೆದಾರ ದಿಲಾವರನೆಂಬುದನು ಪ್ರಜೆಗಳಿಗೆ ಉಪಹತಿ ಮಾಡಲಾಗಿ ಸಂತೇಬೆನ್ನೂರ ಹನುಮಿನಾಯಕರ ಮಕ್ಕಳು ಪಿಲ್ಲಪ್ಪನಾಯ್ಕನನ್ನು ಕಳುಹಿಸಿ ದಿಲಾವರನನ್ನು ನಿಗ್ರಹಿಸಿದ್ದಕ್ಕೆ ಸಂತೇಬೆನ್ನೂರು ಪಿಲ್ಲಪ್ಪ ನಾಯ್ಕರಿಗೆ ದುಮ್ಮಿ ಸೀಮೆಯನ್ನು ಪಾಲಿಸಲು ಕೊಟ್ಟಿದ್ದಾಗಿಯೂ, ಈ ಸಂದರ್ಭದಲ್ಲಿ ಇವರಿಗೆ ಸಹಾಯ ಮಾಡಿದ ಚಿಕ್ಕಗಂಗೂರ ಗೌಡಯ್ಯನ ತಲೆಯನ್ನು ದಿಲಾವರ ತೆಗೆದ ಕಾರಣ ಅವನ ಮಕ್ಕಳಿಗೆ ನೆತ್ತರುಡುಗೆಯಾಗಿ ಚಿಕ್ಕಗಂಗೂರಿನಲ್ಲಿ ಎರೆಹೊಲ ಕೊಟ್ಟಿದ್ದಾಗಿಯೂ ತಿಳಿದುಬರುತ್ತದೆ. ಈ ಶಾಸನದಲ್ಲಿ ಆಗಲೇ ಸಂತೇಬೆನ್ನೂರ ಹನುಮಿ ನಾಯಕರೆಂದು ಪ್ರಯೋಗವಾಗಿರುವುದರಿಂದ ಆ ವೇಳೆಗಾಗಲೇ ಈ ನಾಯಕರು ಬಸವಾಪಟ್ಟಣದಿಂದ ಸಂತೇಬೆನ್ನೂರಿಗೆ ಬಂದು ನೆಲಸಿರಬೇಕು. ಆಗಲೇ ಸಂತೇಬೆನ್ನೂರು ಪಾಳ್ಯ ಅಸ್ಥಿತ್ವದಲ್ಲಿರಬೇಕೆಂದು ಊಹಿಸಬಹುದಾಗಿದೆ. ಈ ಪಿಲ್ಲಪ್ಪ ನಾಯಕ ಕ್ರಿ.ಶ. ೧೫೫೦-೧೫೬೫ ರವರೆಗೂ ಆಳ್ವಿಕೆ ನಡೆಸಿರಬೇಕೆಂದು ತೋರುತ್ತದೆ. ಚನ್ನಗಿರಿ-೬೨[12]ಶಾಸನದಂತೆ ವಿಜಯನಗರದ ವೀರ ರಾಮ ದೇವರಾಯರ ಕಾರ್ಯಕರ್ತರಾಗಿದ್ದ ಸಂತೇಬೆನ್ನೂರು ಬಿಲ್ಲಪ್ಪನಾಯಕರು, ಕೆಂಗಪ್ಪನಾಯಕರು ಶ್ರೀವತ್ಸ ಗೋತ್ರದ ಲಿಂಗಣ್ಣಗೆ ಸಂತೇಬೆನ್ನೂರು ಶ್ರೀಮಸ್ಥಳದ ಸೇನಭೋವಿಕೆ, ಜೋತಿಷ್ಯ, ಪುರೋಹಿತ್ಯಕ್ಕೆ ಶಾಸನ ಬರೆಯಿಸಿ ಕೊಟ್ಟಿದ್ದಾರೆ. ಇದರಲ್ಲಿ ಉಕ್ತವಾಗಿರುವ ಬಿಲ್ಲಪ್ಪ ಹಾಗೂ ಶಾಸನ-೬೯ರ[13]ಪಿಲ್ಲಪ್ಪ ಒಬ್ಬನೇ ಆಗಿರಬೇಕು. ಬಿಲ್ಲಪ್ಪ ಮತ್ತು ಕೆಂಗಪ್ಪ ಇಬ್ಬರೂ ಹನುಮಿ ನಾಯಕರ ಮಕ್ಕಳಾಗಿದ್ದು ಬಹುಶಃ ಒಟ್ಟಿಗೆ ರಾಜ್ಯಪಾಲನೆ ಮಾಡುತ್ತಿರಬೇಕು. ಹೀಗಾಗಿ ಇಬ್ಬರೂ ಸೇರಿ ಈ ಶಾಸನ ಬರೆಯಿಸಿ ಕೊಟ್ಟಿದ್ದಾರೆ.

೪. ಕೆಂಗಪ್ಪ ನಾಯಕ –I (ಕ್ರಿ.ಶ. ೧೫೫೮-೧೫೬೭)

ಈತನು ಪಿಲ್ಲಪ್ಪನ ಸಹೋದರ. ಚನ್ನಗಿರಿ-೬೭[14] ಶಾಸನದಲ್ಲಿ ಕೆಂಗಪ್ಪ ನಾಯಕನೋರ್ವನ ಹೆಸರು ಮಾತ್ರ ಉಲ್ಲೇಖವಾಗಿದೆ. ಬಹುಶಃ ಅಷ್ಟರಲ್ಲಿ ಪಿಲ್ಲಪ್ಪ ನಿಧನರಾಗಿರಬೇಕು. ಅವನ ಮರಣಾನಂತರ ಈತನೊಬ್ಬನೇ ಈ ಪಾಳೇಪಟ್ಟು ನಡೆಸಿರಬೇಕು. ಗೊಪ್ಪೇನಹಳ್ಳಿ ಆಂಜನೇಯ ದೇವಸ್ಥಾನದ ಪ್ರಾಕಾರದಲ್ಲಿರುವ ಈ ಶಾಸನದಂತೆ ಡೊಂಬರ ಕೆಂಗಪ್ಪಗೆ ಕೆಂಗಪ್ಪ ನಾಯಕ ಕೊಟ್ಟ ಊರು ಭೂಮಿ ಎಂದಿದೆ. ಈ ಶಾಸನ ಕಾಲ ರೈಸರು ಸೂಚಿಸಿದಂತೆ ಕ್ರಿ.ಶ. ೧೫೬೫. ಉತ್ಸಂಗಿ ವೆಂಟಕೆ ಸಲ್ಲುವ ಸಂತೇಬೆನ್ನೂರು ಕೈಫಿಯತ್ತಿ[15] ನಂತೆ ಕೆಂಗಪ್ಪ ಶಾಲಿವಾಹನ ಶಕ ೧೪೮೦ನೇ ಕಾಳಾಯುಕ್ತಿ ಸಂವತ್ಸರಿಂದ ಶಾ,ಶಕ ೧೪೮೯ನೇ ಪ್ರಭವ ಸಂವತ್ಸರದವರೆಗೆ ೯ ವರ್ಷ ಆಳ್ವಿಕೆ ನಡೆಸಿದ್ದಾನೆ. (ಕ್ರಿ.ಶ. ೧೫೫೮-೧೫೬೭) ಕೈಫಿಯತ್ತಿನಂತೆ ಕೆಂಗಪ್ಪ ನಾಯಕ ಒಮ್ಮೆ ಬೇಟೆ ನಿಮಿತ್ತ ಮದಕರಿ ಸೀಮೆಯ ವಳಿತವಾದ ರಂಗಾಪುರ ಗ್ರಾಮದ ಬಳಿ ಬರಲು ಆ ಸ್ಥಳದಲ್ಲಿ ಮೊಲವು ಬೇಟೆ ನಾಯಿಯ ವಿರುದ್ಧವೇ ತಿರುಗಿ ಬಿದ್ದುದನ್ನು ಕಂಡು, ಆ ಭೂಮಿ ಗಂಡುಭೂಮಿ ಎಂದು ಸ್ಥಳ ಗುರುತು ಮಾಡಿ ವಿಶ್ರಮಿಸಿಕೊಂಡಿರಲು ಆತನ ಸ್ವಪ್ನದಲ್ಲಿ ವೃಷಭೇಶ್ವರರು ಕಾಣಿಸಿಕೊಂಡು ಆ ಸ್ಥಳದಲ್ಲಿ ಕೋಟೆ ಕಟ್ಟಿ, ರಾಜ್ಯ ಸ್ಥಾಪಿಸಲು ಸೂಚಿಸಿದ್ದಲ್ಲದೆ ಅದಕ್ಕೆ ಬೇಕಾದ ಗುಪ್ತ ನಿಧಿಯನ್ನು ತೋರಿಸಿಕೊಟ್ಟದ್ದಾಗಿಯೂ, ಆ ಸ್ವಪ್ನ ಸೂಚನೆಯಂತೆ ನಿಧಿ ಪಡೆದು ಈಗಿರುವ ಸಂತೇಬೆನ್ನೂರು ಸ್ಥಳದಲ್ಲಿ ಕೋಟೆ, ಶ್ರೀರಾಮಚಂದ್ರ ದೇವಸ್ಥಾನ ಮತ್ತು ರಾಮತೀರ್ಥ ಎಂಬ ಸರೋವರವನ್ನು ಶಾಲಿವಾಹನ ಶಕ ೧೪೮೦ನೇ ಕಾಳಾಯುಕ್ತಿ ಸಂವತ್ಸರದಲ್ಲಿ ಕೆಂಗಪ್ಪನಾಯಕ ಕಟ್ಟಿಸಿದನೆಂದು ತಿಳಿದು ಬರುತ್ತದೆ. [16]

ಸಂತೇಬೆನ್ನೂರಲ್ಲಿ ಇವನು ಕಟ್ಟಿಸಿದ ಕೊಳ ೨೩೫x೨೪೫ ಅಗಲ ಧ್ವಜಾಯದಲ್ಲಿದ್ದು, ನಾಲ್ಕು ದಿಕ್ಕಿಗೂ ಸೋಪಾನಗಳೂ, ಎಂಟು ದಿಕ್ಕಿಗೆ ಎಂಟು ಮಂಟಪಗಳೂ, ಮಧ್ಯೆ ವಸಂತ ಮಂಟಪ, (೩೦’x೩೦ ‘೬೦’) ಕೆಂಪು ಗ್ರಾನೈಟ್ನಲ್ಲಿ ಕಟ್ಟಿದ್ದು, ಇದಕ್ಕೆ ಕೊಷ್ಮಾಂಡು ಶೈಲಿಯ ಗೋಪುರ ನಿರ್ಮಿಸಿದ್ದಾನೆ. ಇದು ದಕ್ಷಿಣ ಭಾರತದಲ್ಲೇ ಬಹು ಸುಂದರವಾಗಿದ್ದು ಇದಕ್ಕೆ ಸರಿಸಾಟಿ ಬೇರೊಂದಿಲ್ಲ ಎಂದು ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. [17] ಇದಲ್ಲದೆ ಚಿಕ್ಕ ಕೋಗಲೂರಿನ ದೇವಸ್ಥಾನವನ್ನು, ದೇವರಹಳ್ಳಿಯ ಉಡುಗಿರಿ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನವನ್ನು ವಿಸ್ತಾರವಾಗಿ ಕಟ್ಟಿಸಿ ಜೀರ್ಣೋದ್ಧಾರ ಈತ ಮಾಡಿದ್ದಾಗಿ ತಿಳಿದು ಬರುತ್ತದೆ. ಇಲ್ಲಿ ಉಕ್ತವಾದ ರಂಗಾಪುರಕ್ಕೆ ಮೊದಲು ಬೆಂನೂರು ಎಂದು ಹೆಸರಿತ್ತೆಂದೂ ಮುಂದೆ ಅಲ್ಲಿ ನಡೆಯುತ್ತಿದ್ದ ಸಂತೆಯಿಂದಾಗಿ ಸಂತೇಬೆನ್ನೂರು ಆಯಿತೆಂದು ಗೆಜೆಟಿಯರ್‌ನಲ್ಲಿ[18] ಹೇಳಲಾಗಿದೆ. ಈ ಕೆಂಗಪ್ಪ ನಾಯಕನ ಪೂರ್ವದಲ್ಲಿ ಕೂಡ್ಲಿ-೪೭[19] ಶಾಸನ ಮತ್ತು ಚನ್ನಗಿರಿ-೬೯[20] ಶಾಸನದಲ್ಲಿ ಸಂತೇಬೆನ್ನೂರು ಹೆಸರು ಪ್ರಸ್ತಾಪವಾಗಿರುವುದರಿಂದ ಕೈಫಿಯತ್ತಿನ ಉಲ್ಲೇಖದಂತೆ ಸಂತೇಬೆನ್ನೂರು ನಿರ್ಮಾಣದ ಕಥೆಯನ್ನು ನಂಬುವುದು ಕಷ್ಟವಾಗುತ್ತದೆ. ಒಟ್ಟಿನಲ್ಲಿ ಈ ಕೆಂಗಪ್ಪನಾಯಕ ಬಹಳ ವೀರನಿದ್ದುದಾಗಿ ತಿಳಿದು ಬಂದಿದ್ದು ಈತನು ವಿಜಯನಗರದ ಅರಸರ ಅನೇಕ ಯುದ್ಧದಲ್ಲಿ ಭಾಗಿಯಾಗಿದ್ದನೆಂದು ತಿಳಿದುಬರುತ್ತದೆ. ಕ್ರಿ.ಶ. ೧೫೬೫ರ ತಾಳೀಕೋಟೆ ಯುದ್ಧದಲ್ಲಿ ಅವರಿಗೆ ಸಹಾಯಕರಾಗಿ ಹೋರಾಟ ಮಾಡಿದ್ದಕ್ಕಾಗಿ ಈ ನಾಯಕರಿಗೆ ಕೃಷ್ಣದೇವರಾಯನ ಅಳಿಯ ರಾಮರಾಯರಿಂದ ಸಂತೇಬೆನ್ನೂರು ಅಮರ ಮಾಗಣಿಯಾಗಿ ಕೊಡಲ್ಪಟ್ಟಿತೆಂದು ಇತಿಹಾಸ ದಾಖಲೆಗಳು ತಿಳಿಸುತ್ತವೆ. ಕೆಂಗಪ್ಪ ನಾಯಕ ಸಂತೇಬೆನ್ನೂರು ಕೊಳ, ಕೋಟೆ, ದೇವಸ್ಥಾನ ನಿರ್ಮಾಣ ಮಾಡಿದ ಎಂಬ ಬಗ್ಗೆ ಅನುಮಾನಗಳಿಲ್ಲ. ಕೊಳದ ಮಂಟಪಗಳಲ್ಲಿರುವ ನಾಯಕನ ಉಬ್ಬುಶಿಲ್ಪ ಅದನ್ನು ಕಟ್ಟಿಸಿದ ಕೆಂಗಪ್ಪ ನಾಯಕನದಿರಬೇಕೆಂದು ಸಂಶಧಕ ಕೆಳದಿ ವೆಂಕಟೇಶ ಜೋಯಿಸ್ ಅಭಿಪ್ರಾಯ ಪಟ್ಟಿದ್ದಾರೆ.

೫. ಇಮ್ಮಡಿ ಕೆಂಗಾ ಹನುಮಪ್ಪ ನಾಯಕ (ಕ್ರಿ.ಶ. ೧೫೬೭-೧೫೭೦)

ಈತ ಕೆಂಗಪ್ಪ ನಾಯಕನ ಮಗ. ಸಂತೇಬೆನ್ನೂರು ಕೈಫಿಯತ್ತಿನಂತೆ[21] ಈತ ಹಿರೇಕೋಗಲೂರು, ಸಂತೇಬೆನ್ನೂರು, ಮೆದಿಕೆರೆ, ತಣಿಗೆರೆ, ಸಿದ್ಧನಮಠ ಗ್ರಾಮಗಳಲ್ಲಿ ಕೆರೆಗಳನ್ನು ಕಟ್ಟಿಸಿ ಶಾಲಿವಾಹನ ಶಕ ೧೪೯೨ನೇ ಪ್ರಮೋದೂತ ಸಂವತ್ಸರದವರೆಗೆ (೧೫೭೦) ೩ ವರ್ಷ ಧರ್ಮದಿಂದ ರಾಜ್ಯವಾಳಿದ ಹಾಘೆ ತಿಳಿದುಬರುತ್ತದೆ. ಈಗಿನ ದಾವಣಗೆರೆ ತಾಲ್ಲೂಕು ವಡೇರಹಳ್ಳ ಗ್ರಾಮದ ಕಲ್ಲೇಶ್ವರ ದೇವಾಲಯದ ಗೋಡೆಗೆ ಈತನ ಕಾರ್ಯಕರ್ತ ಆಡುಗೆರೆ ಮಲ್ಲಣ್ಣ ಹಾಕಿಸಿದ ಶಾಸನವಿದೆ.[22]

೬. ನಿಚ್ಚ ಮದುಮಣಿಗ ಕೆಂಗಾ ಹನುಮಪ್ಪ ನಾಯಕ (ಕ್ರಿ.ಶ. ೧೫೭೦-೧೫೮೦)

ಈತ ಇಮ್ಮಡಿ ಕೆಂಗಾ ಹನುಮಪ್ಪ ನಾಯಕನ ಮಗ. ಕೈಫಿಯತ್ತಿ[23] ನಂತೆ ಈತ ಶಾ.ಶಕ. ೧೫೦೨ ರ ವಿಕ್ರಮ ಸಂವತ್ಸರದವರೆಗೆ ೧೦ ವರ್ಷ ಆಳಿದನು. (೧೫೭೦-೧೫೮೦) ಈತನು ತನ್ನ ಆಳ್ವಿಕೆ ಕಾಲದಲ್ಲಿ ಬೆಳ್ಳಿಗನೂಡು, ಮತ್ತು ಕುಳೇನೂರು ಗ್ರಾಮದ ಕೆರೆಯನ್ನು ಕಟ್ಟಿಸಿದನು.[24] ಇವನು ಬಹಳ ರೂಪವಂತನಿದ್ದನೆಂದೂ, ಬಹಳ ಮದುವೆ ಮಾಡಿ ಕೊಂಡಿದ್ದನೆಂದೂ ಹೇಳಲಾಗುತ್ತದೆ. ಆದಕಾರಣ ಈತನಿಗೆ ನಿಚ್ಚ ಮದುವಣಿಗ ಎಂಬ ಅನ್ವರ್ಥನಾಮ ಬಂದಿರಬೇಕು. ಈತನು ತನ್ನ ರಾಜ್ಯ ವಿಸ್ತಾರಕ್ಕಾಗಿ ಚಿತ್ರದುರ್ಗದವರೊಂದಿಗೆ ಯುದ್ಧ ಮಾಡಿದ್ದಾಗಿ ತಿಳಿದು ಬರುತ್ತದೆ. ಈ ನಿಚ್ಛ ಮದುಮವಣಿಗ ಕೆಂಗಾ ಹನುಮಪ್ಪ ನಾಯಕನು ಕ್ರಿ.ಶ. ೧೬೪೭ರಲ್ಲಿ ಉಡುಪಿ ಸ್ವಾದಿಮಠದ ಸ್ವಾಮಿಗಳಿಗೆ ಕೂಡ್ಲಿಯಲ್ಲಿ ಮಠ ಕಟ್ಟಿಕೊಂಡು ಇರಲು ಕೋಡಮಗ್ಗೆ ಗ್ರಾಮದತ್ತಿ ಕೊಟ್ಟದ್ದಾಗಿ ಬೆಂಗಳೂರು -೧೨[25]ಶಾಸನ ತಿಳಿಸುತ್ತದೆ. ಈ ಶಾಸನದ ಕಾಲಕ್ಕೂ, ಕೈಫಿಯತ್ತಿನಲ್ಲಿ ನಮೂದಾದ ಈತನ ಕಾಲಕ್ಕೂ ವ್ಯತ್ಯಾಸ ಕಂಡುಬರುತ್ತದೆ. ಈತ ಬೆಳಗುತ್ತಿ ಅರಸರನ್ನು ಸೋಲಿಸಿದ್ದಾಗಿ ತಿಳಿದುಬರುತ್ತದೆ.

೭. ರಾಜಪ್ಪ ನಾಯಕ, ಬಾಲಗಿರಿ ನಾಯಕ, ದಳನಾಯಕ (ಕ್ರಿ.ಶ. ೧೫೭೦-೧೬೧೦)

ಈ ಮೂವರ ಹೆಸರಿನಲ್ಲಿ ಹೊಳಲ್ಕೆರೆ-೧೧೫, ೪೦,೯೨[26]ಶಾಸನಗಳಿವೆ. ಬಾಲಗಿರಿ ನಾಯಕರ ಹೆಸರು ತರಿಕೆರೆ-೨೧, ೨೪[27]ಶಾಸನಗಳಲ್ಲಿ ಬಂದಿದ್ದು ಅದರಲ್ಲಿ ಸಂತೇಬೆನ್ನೂರು ಕೆಂಗಪ್ಪ ನಾಯಕರ ಪುತ್ರರಾದ ಹಿರೇಹನುಮಪ್ಪ ನಾಯಕರ ಸಹೋದರರಾದ ಬಾಲಗಿರಿ ನಾಯಕರು ಎಂದು ಉಕ್ತವಾಗಿದೆ. ಆದರೆ ರಾಜಪ್ಪ ನಾಯಕ, ದಳ ನಾಯಕರ ಹೆಸರು ಅವರ ವಂಶದ ಕೈಫಿಯತ್ತುಗಳಲ್ಲಿ ಪ್ರಸ್ತಾಪವಾಗಿಲ್ಲ. ಮೇಲೆ ಸೂಚಿಸಿದ ಶಾಸನಗಳ ಕಾಲದಂತೆ ಇವರು ಸಮಕಾಲೀನರಾಗಿದ್ದು ಮೂವರು ಸಹೋದರರಾಗಿರಬೇಕೆಂದು ತೋರುತ್ತದೆ. ಇವರು ಸಂತೇಬೆನ್ನೂರು ಶೀಮೆಗೆ ಒಳಪಟ್ಟ ಸಣ್ಣ ಸಣ್ಣ ಪ್ರಾಂತ್ಯದ ಅಧಿಪತಿಗಳಾಗಿದ್ದು, ಕಾರ್ಯನಿರ್ವಹಿಸಿ ಶಾಸನ ಬರೆಯಿಸಿರಬೇಕು. ಹನುಮಪ್ಪ ನಾಯಕರ ಮಗ ರಾಜಪ್ಪ ಬಾಗೂರು ಲಕ್ಷ್ಮೀದೇವಿ ದೇವಸ್ಥಾನ ಜೀರ್ಣೋದ್ಧಾರ ಕ್ರಿ.ಶ. ೧೫೭೧ರಲ್ಲಿ ಮಾಡಿಸಿದ್ದಾಗಿ ತಿಳಿದು ಬಂದರೆ, ಹೊರಕರೆ ರಂಗನಾಥ ಸ್ವಾಮಿಗೆ ಬಾಲಗಿರಿ/ಬಾಲನಾಯಕ ದತ್ತಿ ಕೊಟ್ಟಿದ್ದಾಗಿಯೂ, ದಳ ನಾಯಕ ಕಲ್ಲೋಡು ಹನುಮಂತ ದೇವರಿಗೆ ಕುರುಬರಹಳ್ಳಿ ಗ್ರಾಮವನ್ನು ೧೬೦೫ರಲ್ಲಿ ದತ್ತಿ ಕೊಟ್ಟಿದ್ದಾಗಿ ಶಾಸನಗಳು[28]ತಿಳಿಸುತ್ತವೆ. ಆದ್ದರಿಂದ ಇವರ ಕಾಲವನ್ನು ಕ್ರಿ.ಶ. ೧೫೭೦ರಿಂದ ೧೬೧೦ ಎಂದು ನಿರ್ಣಯಿಸಬಹುದಾಗಿದೆ. ಇವರು ಹೊಳಲ್ಕೆರೆ, ಹೊಸದುರ್ಗ ಪ್ರಾಂತ್ಯ ಆಳುತ್ತಿದ್ದುದಾಗಿ ತಿಳಿದುಬರುತ್ತದೆ. ಇವರು ಕೆಂಗಾ ನಿಚ್ಚಮದುಮಣಿಗ, ಕೆಂಗಾ ಹನುಮಪ್ಪ ನಾಯಕರ ಸಹೋರರಾಗಿರುವ ಸಾಧ್ಯತೆಯೂ ಇದೆ.

೮. ಹಿರೇ ಕೆಂಗಾ ಹನುಮಪ್ಪ ನಾಯಕ (ಕ್ರಿ.ಶ. ೧೫೮೧-೧೬೩೮)

ನಿಚ್ಚ ಮದುಮಣಿಗ ಹನುಮಪ್ಪ ನಾಯಕರಿಗೆ ಹಿರೇ ಕೆಂಗಾ ಹನುಮಪ್ಪ ನಾಯಕ ಮತ್ತು ಚಿಕ್ಕ ಕೆಂಗಾ ಹನುಮಪ್ಪ ನಾಯಕ ಎಂಬ ಇಬ್ಬರು ಮಕ್ಕಳು. ತಂದೆಯ ನಿಧನದ ತರುವಾಯ ಹಿರೇ ಕೆಂಗಾ ಹನುಮಪ್ಪ ನಾಯಕ ರಾಜ್ಯದ ಆಡಳಿತ ವಹಿಸಿಕೊಳ್ಳುತ್ತಾನೆ. ಒಂದು ವರ್ಷ ಈರ್ವರೂ ಒಟ್ಟಿಗೆ ರಾಜ್ಯಾಡಳಿತ ನಡೆಸುತ್ತಾ ಇರಲಾಗಿ ಅಣ್ಣ ತಮ್ಮಂದಿರಿಗೆ ಮನಸ್ತಾಪ ಬಂದು ಚಿಕ್ಕ ಕೆಂಗಾಹನುಮಪ್ಪ ನಾಯಕ ಬಾಣಾವರಕ್ಕೆ ಹೋಗಿ ಅಲ್ಲಿ ತಾನೇ ಪ್ರತ್ಯೇಕ ಪಾಳೆಪಟ್ಟು ಕಟ್ಟಿಕೊಂಡು ಇರುತ್ತಾನೆ. ಹಿರೇ ಕೆಂಗಾ ಹನುಮಪ್ಪ ನಾಯಕ ಶಾಲಿವಾಹನ ಶಕ ೧೫೦೩ನೇ ವಿಶು ಸಂವತ್ಸರದಿಂದ ಶಾ.ಶಕ ೧೫೬೦ನೇ ಬಹುಧಾನ್ಯ ಸಂವತ್ಸರದವರೆಗೆ (ಕ್ರಿ.ಶ. ೧೫೮೧-೧೬೩೮) ಬಸವಾಪಟ್ಟಣ, ಸಂತೇಬೆನ್ನೂರು ಎರಡೂ ಪ್ರಾಂತ್ಯಗಳನ್ನು ಒಟ್ಟಿಗೆ ಆಳುತ್ತಾ ಇರುವ ಕಾಲದಲ್ಲಿ ಭಾಗನಗರದ (ಬಿಜಾಪುರದ) ದಂಡನಾಯಕ ರಣದುಲ್ಲಾಖಾನ್ ಭಾರೀ ದಂಡು ತೆಗೆದುಕೊಂಡು ಬಂದು ಸಂತೇಬೆನ್ನೂರು, ಬಸವಾಪಟ್ಟಣ ಕೋಟೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಲ್ಲದೆ, ಸಂತೇಬೆನ್ನೂರು ನಾಯಕರ ಕುಲದೇವರಾದ ರಾಮಚಂದ್ರ ದೇವಸ್ಥಾನ, ಕಲ್ಲೇಶ್ವರ ದೇವಸ್ಥಾನವನ್ನು, ಹಿರೇಕೋಗಲೂರಿನ ಸುಖನೇಶ್ವರ, ಕಲ್ಲೇಶ್ವರ, ಮಲ್ಲೇಶ್ವರ ದೇವಸ್ಥಾನಗಳನ್ನು, ಸಿದ್ಧನ ಮಠದ ರಾಮೇಶ್ವರ ದೇವಸ್ಥಾನ ತಣಿಗೆರೆಯ ಕಲ್ಲೇಶ್ವರ ದೇವಸ್ಥಾನವನ್ನು ಮುರಿದುದಲ್ಲದೆ ದೇವರಹಳ್ಳಿ ಉಡುಗಿರಿ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನವನ್ನು ನಾಶ ಪಡಿಸಲು ಹೋದಾಗ ಜೇನು ಎದ್ದು ಹಿಮ್ಮೆಟ್ಟಬೇಕಾಯಿತೆಂದೂ, ನಂತರ ಸಂತೇಬೆನ್ನೂರಲ್ಲಿದ್ದ ೬೪ ಅಂಕಣದ ದೇವಸ್ಥಾನ ಇದ್ದ ಜಾಗದಲ್ಲಿ ಒಂದು ಮಸೀದಿ ಕಟ್ಟಿಸಲು ಜನರನ್ನು ನೇಮಿಸಿ, ಹಿರೇಕೆಂಗಾ ಹನುಮಪ್ಪ ನಾಯಕನನ್ನು ದಸ್ತಗಿರಿ ಮಾಡಿಕೊಂಡು ಬಿಜಾಪುರಕ್ಕೆ ಕರೆದುಕೊಂಡು ಹೋದನು.[29]ಹೀಗೆ ಸಂತೇಬೆನ್ನೂರು ಬಿಜಾಪುರ ಸುಲ್ತಾನರ ಆಡಳಿತಕ್ಕೆ ಒಳಪಟ್ಟಿತು. ದಾವಣಗೆರೆ-೧೪೪[30]ಶಾಸನ ಸಂತೇಬೆನ್ನೂರು ಹನುಮಪ್ಪ ನಾಯಕರ ಕಾರ್ಯಕರ್ತ ಮಾಯಕೊಂಡದ ಮೀಯಪ್ಪನಾಯಕ ವೀರೇಶ್ವರಗೆ ಅಮೃತಪಡಿಗೆ ಬುಳ್ಳಾಪುರ ಗ್ರಾಮ ದತ್ತಿ ಕೊಟ್ಟಿರುವುದಾಗಿ ತಿಳಿಸುತ್ತದೆ. ಚನ್ನಗಿರಿ-೨೫, ೪೮, ೪೯, ೬೩[31]ಹಾಗೂ ಕಡೂರು. ೨೪[32] ಚಿಕ್ಕನಾಯ್ಕನಹಳ್ಳಿ-೧೯[33] ಶಾಸನ ಈತನ ಕಾಲದ್ದಾಗಿರುವಂತೆ ಕಂಡು ಬರುತ್ತದೆ. ಚಿಕ್ಕನಾಯ್ಕನಹಳ್ಳಿ-೧೯ ಶಾಸನ ನಾಯಕರು ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಆಡಳಿತ ನಿರ್ವಹಿಸುತ್ತಿದ್ದ ಹೆಗ್ಗುರುತಾಗಿದ್ದು ಇದರಲ್ಲಿ ಈತನ ಪ್ರಧಾನಿ ಕಳಸಪ್ಪಯ್ಯನ ಹೆಸರು ನಮೂದಾಗಿರುವುದು ವಿಶೇಷ.

೯. ಚಿಕ್ಕ ಕೆಂಗಾ ಹನುಮಪ್ಪ ನಾಯಕ/ಸರ್ಜಾ ಹನುಮಪ್ಪ ನಾಯಕ (ಕ್ರಿ.ಶ. ೧೬೫೬-೧೬೬೨)

ಹಿರೇ ಕೆಂಗಾ ಹನುಮಪ್ಪ ನಾಯಕನ ತಮ್ಮ ಚಿಕ್ಕ ಕೆಂಗಾ ಹನುಮಪ್ಪ ನಾಯಕನು ತನ್ನ ಅಣ್ಣ ಹಿರೇ ಕೆಂಗಾ ಹನುಮಪ್ಪ ನಾಯಕನನ್ನು ರಣದುಲ್ಲಾಖಾನ್ ಬಿಜಾಪುರಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ಬಾಣಾವರದಲ್ಲಿದ್ದನು. ತನ್ನ ಅಣ್ಣನನ್ನು ಬಿಜಾಪುರಕ್ಕೆ ಕರೆದುಕೊಂಡು ಹೋದ ವಿಚಾರ ತಿಳಿದು ಆತನೇ ಸ್ವತಃ ಬಿಜಾಪುರಕ್ಕೆ ಹೋಗಿ ಸಮಯ ಸಾಧಿಸಿ ಅಲ್ಲಿ ಸುಲ್ತಾನನು ಏರ್ಪಡಿಸಿದ್ದ ಹುಲಿಯ ಕಾಳದಲ್ಲಿ ಭಾಗವಹಿಸಿ, ಹುಲಿಯೊಡನೆ ಹೋರಾಡಿ, ಅದನ್ನು ಕೊಂದು ಬಾದ಼ಷಾಹನ ಮೆಚ್ಚುಗೆ ಗಳಿಸಿದನು. ಅಲ್ಲದೆ ಚಿಕ್ಕ ಕೆಂಗಾ ಹನುಮಪ್ಪ ನಾಯಕನಿಗೆ ಬಿಜಾಪುರ ಸುಲ್ತಾನನು ‘ಸರ್ಜಾ’ ಎಂಬ ಕಿತ್ತಾಬುಕೊಟ್ಟು[34]ಹಸಿರು ಪಲ್ಲಕ್ಕಿ, ಹಸಿರು ಶಾಲು, ಹಗಲು ದೀವಟಿಗೆ ಕೊಟ್ಟು ಸನ್ಮಾನಿಸಿದ್ದಲ್ಲದೆ ಸಂತೇಬೆನ್ನೂರು ಮತ್ತು ಬಸವಾಪಟ್ಟಣ ಪ್ರಾಂತ್ಯದ ಆಡಳಿತವನ್ನು ಮರಳಿ ಈ ನಾಯಕರಿಗೆ ಬಿಟ್ಟುಕೊಟ್ಟನು. ಅಲ್ಲದೆ ತನ್ನ ಸೆರೆಯಲ್ಲಿದ್ದ ಹಿರೇ ಕೆಂಗಾ ಹನುಮಪ್ಪ ನಾಯಕನನ್ನು ಬಿಡಿಸಿ ಕಳುಹಿಸಿದನು. ಹೀಗೇ ತನ್ನ ಅಣ್ಣನನ್ನು ಬಿಜಾಪುರದಿಂದ ಬಿಡಿಸಿಕೊಂಡು ಬಂದ ಚಿಕ್ಕ ಕೆಂಗಾ ಹನುಮಪ್ಪ ನಾಯಕ ಸಂತೇಬೆನ್ನೂರಿಗೆ ಬಂದಾಗ ದೇವಸ್ಥಾನ ಇದ್ದ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಿರುವುದನ್ನು ಕಂಡು ಕೋಪೋದ್ರಿಕ್ತನಾಗಿ ಮಸೀದಿಯಲ್ಲಿ ಹಂದಿಯನ್ನು ಕೊಲ್ಲಿಸಿ,[35]ನಿರ್ಮಾಣ ಮಾಡಿದ್ದ ಮಿನಾರುಗಳನ್ನು, ಅಂಕಣಕ್ಕೆ ಒಂದೊಂದು ಕಲ್ಲನ್ನು ಕೀಳಿಸಿ ಮಸೀದಿಯಲ್ಲಿ ಪ್ರಾರ್ಥನೆ ಮಾಡದಂತೆ ಅಪವಿತ್ರಗೊಳಿಸಿದನು. ಇದರಿಂದ ಚಿಕ್ಕ ಕೆಂಗಾ ಹನುಮಪ್ಪ ನಾಯಕನಿಗೆ ಪುಂಡ ಹನುಮಪ್ಪ ನಾಯಕನೆಂಬ ಹೆಸರೂ ಇದೆ. ಈ ಚಿಕ್ಕ ಕೆಂಗಾ ಹನುಮಪ್ಪ ನಾಯಕನು ಬಿಜಾಪುರ ಸುಲ್ತಾನರಿಂದ ಮರಳಿ ಸಂತೇಬೆನ್ನೂರನ್ನು ಪಡೆದು ಶಾಲಿವಾಹನ ಶಕ ೧೫೭೮ ದುರ್ಮುಖ ಸಂವತ್ಸರದಿಂದ ಶಾ.ಶಕ. ೧೫೮೪ ಶುಭಕೃತು ಸಂವತ್ಸರದವರೆಗೆ (೧೬೫೬-೧೬೬೨) ಆರು ವರ್ಷ ಆಳಿದನು. ಆ ಸಮಯದಲ್ಲಿ ಸರ್ಜಾಖಾನನು ಸಯ್ಯದ್ ಕಡೆಯಿಂದ ಬಂದು ಚಿಕ್ಕ ಕೆಂಗಾ ಹನುಮಪ್ಪ ನಾಯಕನನ್ನು ಮುತ್ತಲು ಹೆಚ್ಚಿನ ಬಲವಿಲ್ಲದೆ ಚಿಕ್ಕ ಕೆಂಗಾ ಹನುಮಪ್ಪ ನಾಯಕ ಸಂತೇಬೆನ್ನೂರನ್ನು ಅವನಿಗೆ ಒಪ್ಪಿಸಿ ತರೀಕೆರೆ ಪ್ರಾಂತ್ಯಕ್ಕೆ ಹೊರಟು ಹೋದನು. [36]ಅಲ್ಲಿಂದ ಮುಂದೆ ಸಂತೇಬೆನ್ನೂರು ಪ್ರಾಂತ್ಯ ಬಿಜಾಪುರ ಸುಲ್ತಾನರು, ಚಿತ್ರದುರ್ಗ ಪಾಳೇಗಾರರು, ಕೆಳದಿ ನಾಯಕರು, ಮೊಘಲರು, ಮರಾಠರು, ಹೈದರ್ ಮತ್ತು ಟಿಪ್ಪು ಸುಲ್ತಾನರು, ಮೈಸೂರು ಅರಸರ ಕೈ ಬದಲಾಯಿಸುತ್ತಾ ಕೊನೆಗೆ ಬ್ರಿಟಿಷ್ ಅಧಿಪತ್ಯಕ್ಕೆ ಸೇರಿದ ಮೈಸೂರು ಪ್ರಾಂತ್ಯದೊಂದಿಗೆ ವಿಲೀನವಾಯಿತು. ಚಿಕ್ಕ ಕೆಂಗಾ ಹನುಮಪ್ಪ ನಾಯಕ ತರೀಕೆರೆಗೆ ಹೋಗಿ ನೆಲೆನಿಂತ ನಂತರ ಇವರನ್ನು ತರೀಕೆರೆ ನಾಯಕರು (ತರೀಕೆರೆಯ ಪಾಳೆಯಗಾರರು) ಎಂದು ಕರೆಯಲಾಯಿತು. ಬಿಜಾಪುರ ಸುಲ್ತಾನ್ ಆದಿಲ್ ಶಾನ ಜೀವನ ಕಾಲದಲ್ಲಿ ಕ್ರಿ.ಶ. ೧೬೪೬ರಲ್ಲಿ ರಚಿತವಾದ ಪುತ್ ಹತ್ಇ-ಆದಿಲ್ ಶಾಹಿ ಗ್ರಂಥದಲ್ಲಿ (ಲೇಖಕ: ಘಝನಿ ಅಸ್ತ್ರವಾದಿ) ಕಂಕಯ್ಯ ನಾಯಕನೆಂದು ಹೆಸರಿಸಿರುವ ನಾಯಕ ಈತನೇ ಇರಬೇಕೆಂದು ಆದಿಲ್ ಶಾಹಿ ಇತಿಹಾಸ ಪರಿಣಿತ ಡಾ. ಪಿ.ಎಂ. ಜೋಹೊ[37]ಅಭಿಪ್ರಾಯಪಡುತ್ತಾರೆ. ಮುಂದೆ ಚಿಕ್ಕ ಕೆಂಗಾ ಹನುಮಪ್ಪ ನಾಯಕ ಬಿಜಾಪುರ ಸುಲ್ತಾನರ ಅಧೀನ ಅರಸನಾಗಿ ಅವರೊಡನೆ ಕೆಳದಿ, ಚಿತ್ರದುರ್ಗ, ಸಿರಾ, ಹಾಗಲವಾಡಿ, ಬೆಂಗಳೂರು, ಮೈಸೂರು ಮುಂತಾದ ಹಲವಾರು ಯುದ್ಧದಲ್ಲಿ ಭಾಗವಹಿಸಿದ್ದನೆಂದು ತಿಳಿದುಬರುತ್ತದೆ.

 

[1]ತರೀಕೆರೆ ಕೈಫಿಯತ್ತು (ತ.ಪಾ.) ಪುಟ.೪೭

[2]ತ.ಪಾ. ಪುಟ.೧೩

[3]ಶ್ರೀ ಕೂಡ್ಲಿ – ಶೃಂಗೇರಿ ಮಠದ ಶಾಸನಗಳು

[4]ಎ.ಕ. ಸಂ.೭ ಶಿವಮೊಗ್ಗ ಭಾಗ -೧ (ಮಂಟರಗಟ್ಟ – ಹೊಸಳ್ಳಿ ಶಾಸನಗಳು)

[5]ಅದೇ ಚನ್ನಗಿರಿ ತಾಮ್ರಶಾಸನ

[6]ಅದೇ ಚನ್ನಗಿರಿ ತಾಲ್ಲೂಕು ಮಂಟರಗಟ್ಟ ಶಾಸನ

[7]ಕೂಡ್ಲಿ – ಶೃಂಗೇರಿ ಮಠದ ಶಾಸನಗಳು, ಬ್ಯಾಡಗಿ ಜಿಲ್ಲೆ.

[8]ಎ.ಕ. ಸಂ.೭ ಶಿವಮೊಗ್ಗ ಭಾಗ – ೧ ಚನ್ನಗಿರಿ ತಾ ಹೊಸಳ್ಳಿ ಶಾಸನ

[9]ಅದೇ ಚನ್ನಗಿರಿ ತಾಲ್ಲೂಕು ಮಂಟರಗಟ್ಟ ಶಾಶನ

[10]ಅದೇ ಚನ್ನಗಿರಿ ತಾಲ್ಲೂಕು ಶಾಸನ

[11]ಅದೇ ಚನ್ನಗಿರಿ ತಾಲ್ಲೂಕು ಚಿಕ್ಕಗಂಗೂರು ಶಾಸನ

[12]ಅದೇ ಚನ್ನಗಿರಿ ತಾಲ್ಲೂಕು ತಾಮ್ರ ಶಾಸನ

[13]ಅದೇ ಚನ್ನಗಿರಿ ಚಿಕ್ಕಕೋಗಲೂರು ಶಾಸನ

[14]ಅದೇ ಚನ್ನಗಿರಿ ತಾಲ್ಲೂಕು ಗೊಪ್ಪೇನಹಳ್ಳಿ ಶಾಸನ

[15]ಕ.ಕೈ. ಪುಟ.೨೫

[16]ಅದೇ

[17] ಹರತಿ ಸಿರಿಸ್ಮರಣ ಸಂಚಿಕೆ

[18]ರೈಸ್ ಗೆಜೆಟಿಯರ್ ಸಂ.೨ ಪುಟ. ೪೬೯

[19]ಶ್ರೀ ಕೂಡ್ಲಿ – ಶೃಂಗೇರಿ ಮಠದ ಶಾಸನಗಳು

[20]ಎ.ಕ. ಸಂ.೭ ಶಿವಮೊಗ್ಗ ಭಾಗ – ೧ ಚನ್ನಗಿರಿ ತಾಲ್ಲೂಕು ಚಿಕ್ಕಗಂಗೂರು ಶಾಸನ

[21]ಕ.ಕೈ. ಪುಟ. ೪೨೫

[22]ಎ.ಕ. ಸಂ. II (ಚಿತ್ರದುರ್ಗ – ದಾವಣಗೆರೆ – ೧೫೮ ಶಾಸನ ವಡೇರಹಳ್ಳಿ)

[23]ಕ.ಕೈ. ಪುಟ. – ೪೨೬

[24]ಅದೇ

[25]ಎಂ.ಎ.ಆರ್. – ೧೯೨೫ ಪುಟ – ೭

[26]ಎ.ಕ. ಸಂ.II ಚಿತ್ರದುರ್ಗ – ಹೊಳಲ್ಕೆರೆ ತಾಲ್ಲೂಕು ಬಾಗೂರು, ತಾಳ್ಯ, ಕೆಲ್ಲೋಡು ಶಾಸನಗಳು

[27]ಎ.ಕ. ಸಂ.೬ ಕಡೂರು ತರೀಕೆರೆ ತಾಮ್ರಶಾಸನ

[28]ಎ.ಕ. ಸಂ. II ಚಿತ್ರದುರ್ಗ (ಹೊಳಲ್ಕೆರೆ ಶಾಸನ) – ೯೨ ಕೆಲ್ಲೋಡು

[29]ಕ.ಕೈ. ಪುಟ – ೪೨೬

[30]ಎ.ಕ.ಸಂ. II ಚಿತ್ರದುರ್ಗ ದಾವಣಗೆರೆ ತಾಲ್ಲೂಕು ಬುಳ್ಳಾಪುರ ಶಾಸನ

[31]ಎ.ಕ. ಸಂ. ೭. ಶಿವಮೊಗ್ಗ ಭಾಗ I (ಚನ್ನಗಿರಿ ತಾಲ್ಲೂಕು ಹಿರೇಕೋಗಲೂರು ಹಿರೇಮಾಡಾಳು – ಅಂಣಾಪುರ ಶಾಸನಗಳು)

[32]ಎ.ಕ. ಸಂ.೬ ಕಡೂರು – ಆಲದಹಳ್ಳಿ ಶಾಸನ

[33]ಎ.ಕ. ಸಂ.೧೨ ತುಮಕೂರು ಜಿಲ್ಲಾ ಚಿಕ್ಕನಾಯಕನಹಳ್ಳಿ ತಾಲ್ಲೂಕು ಗರಗ ಗ್ರಾಮ ಶಾಸನ

[34]ಕ.ಕೈ. ಪುಟ ೪೨೭

[35]ಅದೇ

[36]ಅದೇ

[37]ದೀಕ್ಷಿತ್‌ಜಿ.ಎಸ್. ಕೆಳದಿ ಐತಿಹಾಸಿಕ ನಿಬಂಧಗಳು ೧೯೮೩, ಕೆಳದಿ ಪುಟ – ೪೯