ತರೀಕೆರೆಯಲ್ಲಿ ಮುಂದುವರೆದ ಆಡಳಿತ

ತರೀಕೆರೆಗೆ ಬಂದು ನೆಲೆಸಿದ ಸಂತೇಬೆನ್ನೂರು ನಾಯಕರಲ್ಲಿ ಚಿಕ್ಕ ಕೆಂಗಾ ಹನುಮಪ್ಪ ನಾಯಕ ಮೊದಲನೆಯವನು. ಇವನಿಂದ ಮೊದಲ್ಗೊಂಡು ಇವರನ್ನು ತರೀಕೆರೆ ಪಾಳೆಯಗಾರರು ಎಂದು ಕರೆಯಲಾಗಿದ್ದರೂ ಇಲ್ಲಿಂದ ಹೊರಡಿಸಿದ ಶಾಸನಗಳಲ್ಲಿ ಅವರು ತಮ್ಮನ್ನು ಸಂತೇಬೆನ್ನೂರು ನಾಯಕರೆಂದೇ ಕರೆದುಕೊಂಡಿದ್ದಾರೆ. ಚಿಕ್ಕ ಕೆಂಗಾ ಹನುಮಪ್ಪ ನಾಯಕ ತರೀಕೆರೆಗೆ ಬಂದ ಮೇಲೆ ಒಂದು ಕೋಟೆ ಹಾಗೂ ಅರಮನೆಯನ್ನು ಕಟ್ಟಿಸಿದನು. ಅಲ್ಲದೆ ಅನೇಕ ದೇವಾಲಯಗಳನ್ನು ಕೆರೆ-ಕಟ್ಟೆಗಳನ್ನು ನಿರ್ಮಿಸಿದನು. ಇದರ ಜೊತೆಗೆ ಕಲ್ ದುರ್ಗ, ಹನುಮಯ್ಯನಗಿರಿ ದುರ್ಗ ಕಟ್ಟಿಸಿದನು. ಬಾಬಾ ಬುಡನ್ಗಿರಿ ಮೇಲಿದ್ದ ಕಾಮನದುರ್ಗವನ್ನು ದುರಸ್ತಿಗೊಳಿಸಿದನು. ಅದನ್ನು ಪ್ರಮುಖ ಸೇನಾ ಕೇಂದ್ರವಾಗಿ ಮಾಡಿದನು. ಕಡೂರು-೧೬೩[1]ಶಾಸನ ಕಲತಿ ವೀರಣ್ಣಗೆ ಆಲದಹಳ್ಳಿ ಗ್ರಾಮವನ್ನು ಚಿಕ್ಕಣ್ಣ ನಾಹಕ ಕ್ರಿ.ಶ. ೧೬೫೦ರಲ್ಲಿ ದತ್ತಿ ಕೊಟ್ಟದ್ದಗಿ ತಿಳಿಸುತ್ತದೆ. ಈ ಚಿಕ್ಕಣ್ಣ ನಾಯಕ ಮತ್ತು ಚಿಕ್ಕ ಕೆಂಗಾ ಹನುಮಪ್ಪ ನಾಯಕ ಒಬ್ಬನೇ ಇರಬೇಕು.

ಈ ಚಿಕ್ಕ ಕೆಂಗಾ ಹನುಮಪ್ಪ ನಾಯಕ ಬಿಜಾಪುರ ಸುಲ್ತಾನರಿಂದ ಸರ್ಜಾ ಎಂಬ ಬಿರುದು ಪಡೆದಿದ್ದುದರಿಂದ ಈತ ಮುಂದೆ ತನ್ನ ಹೆಸರನ್ನು ಸರಜಾ ಹನುಮಪ್ಪ ನಾಯಕ ಎಂದು ಶಾಸನದಲ್ಲಿ ಕರೆದುಕೊಂಡಿದ್ದಾನೆ. ತರೀಕೆರೆ ೨೧-೨೪[2] ಶಾಸನ, ಕೂಡ್ಲಿ ೪೮-೨೯-೫೦-೫೧-೫೨-೫೩[3]ಇದನ್ನು ಸ್ಪಷ್ಟಪಡಿಸುತ್ತವೆ. ಸಂತೇಬೆನ್ನೂರು ಮುಮ್ಮಡಿ ಹನುಮಪ್ಪ ನಾಯಕರ ಪುತ್ರ ನಿಚ್ಚ ಮದುವಣಿಗ ಹನುಮಪ್ಪ ನಾಯಕರ ಪುತ್ರ ಸರಜಾ ಹನುಮಪ್ಪ ನಾಯಕ ಎಂದು ಇವನು ಶಾಸನದಲ್ಲಿ ಕರೆದುಕೊಂಡಿದ್ದಾನೆ.

ಕೂಡ್ಲಿ-ಶೃಂಗೇರಿ ಮಠದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳಿಗೆ ಸರಜಾ ಹನುಮಪ್ಪ ನಾಯಕ ೬ ಶಾಸನಗಳನ್ನು ಬರೆಯಿಸಿ ಕೊಟ್ಟಿದ್ದು ಶೆಟ್ಟಿಹಳ್ಳಿ, ಸನ್ಯಾಸಿ ಕೊಪ್ಪ, ಮಲವಗೊಪ್ಪ, ದಂದೂರು, ಜಾವಳ್ಳಿ ಹಾಗೂ ಹಂಗರಹಾಳು ಗ್ರಾಮಗಳನ್ನು ತಮ್ಮ ಹಿರಿಯರು ಕಟ್ಟಿಸಿಕೊಟ್ಟ ಕೂಡ್ಲಿ ಶೃಂಗೇರಿ ಮಠದ ಧರ್ಮಕ್ಕೆ ತಮ್ಮ ಮಾತಾ ಪಿತೃಗಳಿಗೆ ಅಕ್ಷಯ ಪುಣ್ಯ ಲೋಕವಾಗಲಿ ಎಂದು ವಿವಿಧ ಧಾರ್ಮಿಕ ಕಾರ್ಯಗಳಿಗೆ ದತ್ತಿ ಬಿಟ್ಟಿರುವುದಾಗಿ ತಿಳಿಸುತ್ತವೆ. ತರೀಕೆರೆ ೨೧-೨೪[4]ಶಾಸನದಂತೆ ಕೆಂಗಪ್ಪ ನಾಯಕರ ಪುತ್ರರಾದ ಹಿರೇ ಹನುಮಪ್ಪ ನಾಯಕರ ಸಹೋದರ ಬಾಲಗಿರಿ ನಾಯಕರು ಈ ಹಿಂದೆ ಭಾರಧ್ವಾಜ ಗೋತ್ರದ ಕೊನೇರಿ ಭಟ್ಟರಿಗೆ ಕೊಟ್ಟ ದಾನಪಟ್ಟಿ ಶಿಥಿಲವಾದ ಕಾರಣ ಅವರ ವಂಶದ ಜಕ್ಕಾ ಭಟ್ಟರಿಗೆ ಮರಳಿ ಕಲತ್ತಿ ವೀರನ ಸನ್ನಿಧಿಯಲ್ಲಿ ಹಿರೇಕಾತೂರು, ಹಾದಿಕೆರೆ, ಕುಂಚಿನ ಮಡು, ಅಮೃತಾಪುರ, ದೋರನಾಳು, ತರೀಕೆರೆ, ಚಿಕ್ಕ ಕಾತೂರು, ದುಗ್ಗನಹಾಳ್, ಮತ್ತಿತರ ಹತ್ತು ಸ್ಥಳಕ್ಕೆ ಸಲ್ಲುವ ಗದ್ದೆ, ತೋಟ, ಹೊಲ, ಮನೆಯನ್ನು ಉಪಾದಿ ಜ್ಯೋತಿಷ್ಯಕ್ಕೆ ಕೊಡಲಾಗಿದೆ ಎಂದು ಬರೆದುಕೊಟ್ಟಿದ್ದಾನೆ.

೧೦. ಕೆಂಗಪ್ಪ ನಾಯಕ –II (ಕ್ರಿ.ಶ. ೧೫೮೧-೧೬೪೮)

ಕದರ ಮಂಡಳಿಗೆ ಶಾಸನ[5]ದಂತೆ ಚಿಕ್ಕ ಹನುಮಪ್ಪ ನಾಯಕನ ಮಗ ಕೆಂಗಪ್ಪ ನಾಯಕ ಚಂದ್ರಗುತ್ತಿ ವೆಂಠೆಗೆ ಸಲ್ಲುವ ನೂರುಂಬಾಡದ ರಟ್ಟೇಹಳ್ಳಿ ಶೀಮೆಗೆ ಸಲ್ಲುವ ಬೆಂನೂರು ಸ್ಥಳದ ವಳಗಣ ಕದರ ಮಂಡಳಿಗೆ ಗ್ರಾಮವನ್ನು ಅಲ್ಲಿನ ಹನುಮಂತ ಸ್ವಾಮಿಯ ಅಮೃತಪಡಿ, ನಂದಾದೀಪ, ಅಂಗರಂಗ ವೈಭವಕ್ಕೆ ದಾನ ಕೊಟ್ಟಿರುವುದಾಗಿ ತಿಳಿಸುತ್ತದೆ. ಶಾಸನದ ಕಾಲ ೧೫೮೧ ಎಂದು ಸೂಚಿಸುತ್ತದೆ. ಈ ಕೆಂಗಪ್ಪ ನಾಯಕ ಚಿಕ್ಕ ಕೆಂಗಾ ಹನುಮಪ್ಪ ನಾಯಕನ ಮಗನೇ ಎಂಬ ಅನುಮಾನ ಉಂಟು ಮಾಡುತ್ತದೆ. ಬಹಳ ಮಾಡಿ ಶಾಸನದಲ್ಲಿ ಉಕ್ತವಾದಂತೆ ಇವನು ಚಿಕ್ಕ ಹನುಮಪ್ಪ ಅಂದರೆ ಚಿಕ್ಕ ಕೆಂಗಾ ಹನುಮಪ್ಪ ನಾಯಕನ ಮಗನೇ ಇರಬೇಕೆಂದು ತೋರುತ್ತದೆ. ತುಂಗಭದ್ರಾ ನದಿ ದಾಟಿ ಈಗಿರುವ ಹಾವೇರಿಯಲ್ಲಿ ರಾಣೆಬೆನ್ನೂರು ತಾಲ್ಲೂಕು ಕದರಮಂಡಳಿಗೆ ಗ್ರಾಮ ಸಂತೆಬೆನ್ನೂರು ನಾಯಕರಿಗೆ ಸೇರಿತ್ತಂದು ಈ ಶಾಸನದಿಂದ ಸ್ಪಷ್ಟವಾಘಿ ತಿಳಿದುಬರುತ್ತದೆ. ಆದರೆ ಈ ಬಗ್ಗೆ ಕೈಫಿಯತ್ತಿನಲ್ಲಿ ಉಲ್ಲೇಖ ಇಲ್ಲದಿರುವುದು ಆಶ್ಚರ್ಯ ತರುತ್ತದೆ.

ಸೀತಾರಾಮಪ್ಪ ನಾಯಕ II (ಕ್ರಿ.ಶ. ೧೬೪೮-೧೬೭೯)

ಸರ್ಜಾ ಹನುಮಪ್ಪ ನಾಯಕನ ನಿಧನಾನಂತರ ಆತನ ಮಗ ಸೀತಾರಾಮಪ್ಪ ನಾಯಕ ಅರಸನಾಗುತ್ತಾನೆ. ತರೀಕೆರೆ ಕೈಫಿಯತ್ತಿನಂತೆ[6]ಶಾ.ಶ. ೧೫೭೦ನೇ ಸರ್ವಧಾರಿ ಸಂವತ್ಸರದಿಂದ ಶಾಶ ೧೬೦೧ನೇ ಸಿದ್ಧಾರ್ಥ ಸಂವತ್ಸರದವರೆಗೆ (ಕ್ರಿ.ಶ. ೧೬೪೮-೧೬೭೯) ೩೧ ವರ್ಷ ಆಳ್ವಿಕೆ ನಡೆಸಿದನು.

ಚಿಕ್ಕಮಗಳೂರು ೧೧೪ ಶಾಸನ[7]ದಂತೆ ಬೆಂಡುಗ ಗ್ರಾಮದ ಒಂದು ಉಂಬಳಿ ಹೊಲ ಈತ ದಾನ ಬರೆಯಿಸಿ ಕೊಟ್ಟಿದ್ದಾನೆ. ಇದರಲ್ಲಿ ನಮೂದಾದ ಕಾಲ ತಪ್ಪಾದಂತಿದೆ. ತರೀಕೆರೆ-೩೯[8]ಶಾಸನದಂತೆ ಹುಲಿ ತಿಮ್ಮಪುರ ಗ್ರಾಮವನ್ನು ಕಾಮನ ದುರ್ಗದ ಚೆನ್ನಿಗರಾಯ ಸ್ವಾಮಿಗೆ ದಾನ ಕೊಟ್ಟದ್ದಾಗಿ ತಿಳಿದು ಬರುತ್ತದೆ.

ಅಲ್ಲದೆ ಕೂಡ್ಲಿ ೫೭, ೫೮, ೫೯ ೯೧[9]ಶಾಸನಗಳಂತೆ ಕೂಡ್ಲಿ-ಶೃಂಗೇರಿ ಭಾರತಿ ಸ್ವಾಮಿಗಳಿಗೆ ದೇವಲಾಪುರ ಗ್ರಾಮ ಹಾಗೂ ದಂದೂರು ಗ್ರಾಮವನ್ನು ದತ್ತಿ ಕೊಟ್ಟಿರುವುದಗಿ ತಿಳಿದು ಬರುತ್ತದೆ ಹಾಗೂ ಮೂಲ ಶೃಂಗೇರಿ ಮಠಕ್ಕೆ ಕೊಟ್ಟಿದ್ದ ದಂದೂರು ಗ್ರಾಮ ಮರಳಿ ಕೂಡ್ಲಿ ಶೃಂಗೇರಿ ಮಠಕ್ಕೆ ಸಲ್ಲುವಂತೆ ತಾವು ಅಧೀನರಾಗಿದ್ದ ಭಾಗನಗರದ ದಿವಾನ ಮಹದಾಜಿ ಪಂಡಿತರಿಗೆ ಸೀತಾರಾಮಪ್ಪ ನಾಯಕ ತಿಳಿಸಿರುವುದಾಗಿ ತಿಳಿದುಬರುತ್ತದೆ. ಉಲ್ಲೇಖಿತ ಶಾಸನಗಳು ಸೀತಾರಾಮಪ್ಪನ ಕಾಲವನ್ನು ಕ್ರಿ.ಶ. ೧೬೮೬ರ ವರೆಗೂ ಸೂಚಿಸಿರುವುದರಿಂದ ಕೈಫಿಯತ್ತಿನ ಉಲ್ಲೇಖ ತಪ್ಪಾಗಿರುವ ಸಾಧ್ಯತೆ ಇದೆ. ಕಡೂರು-೨೬ ಶಾಸನ[10]ಸೀತಾರಾಮಪ್ಪ ನಾಯಕರು ಕ್ರಿ.ಶ. ೧೭೪೩ ರಲ್ಲಿ ಅರಶಿನ ಗುಪ್ಪೆ ಗ್ರಾಮದಲ್ಲಿ ದೊಡ್ಡಯ್ಯ ಗೌಡಗೆ ಒಮದು ಗದ್ದೆ ದಾನ ಕೊಟ್ಟಿರುವುದಾಗಿ ತಿಳಿಸುತ್ತದೆ. ಹಾಗಾದರೆ ಈತನ ಜೀವಿತದ ಕಾಲ ಕ್ರಿ.ಶ. ೧೭೪೩ ವರೆಗೂ ವಿಸ್ತರಿಸಬಹುದು. ಕೂಡ್ಲಿ ದಾನ ಶಾಸನ ೫೪, ೫೫, ೫೬[11]ರಲ್ಲಿ ನಮೂದಾದ ಕಾಲದಂತೆ ಈ ಶಾಸನಗಳು ಸೀತಾರಾಮಪ್ಪ ನಾಯಕನ ಅವಧಿಯದಾಗಿದ್ದು ಅದರಲ್ಲಿ ನಮೂದಾದ ಹನುಮಪ್ಪ ನಾಯಕ ಇವನ ಮಗನೇ ಎಂಬ ಸಂದೇಹ ಉಂಟು ಮಾಡುತ್ತದೆ.

೧೨. ಹುಚ್ಚ ಹನುಮಪ್ಪ ನಾಯಕ (ಕ್ರಿ.ಶ. ೧೬೮೦-೧೭೧೬)

ಸೀತಾರಾಮಪ್ಪ ನಾಯಕನ ನಂತರ ಇವರ ಮಗ ಹುಚ್ಚ ಹನುಮಪ್ಪ ನಾಯಕ ಶಾ.ಶಕ ೧೬೦೨ ರೌದ್ರಿ ಸಂವತ್ಸರದಿಂದ ಶಾ.ಶಕ ೧೬೩೮ನೇ ಜಯ ಸಂವತ್ಸರದವರೆಗೆ (ಕ್ರಿ.ಶ. ೧೬೮೦-೧೭೧೬) ೩೬ ವರ್ಷ ಆಳ್ವಿಕೆಗೆ ನಡೆಸಿದ್ದಾಗಿ ಕೈಫಿಯತ್ತಿನಿಂದ[12]ತಿಳಿದುಬರುತ್ತದೆ. ಕೂಡ್ಲಿ-೬೦[13]ಶಾಸನದಲ್ಲಿ ಪ್ರಸ್ತಾಪಿತವಾದ ಹನುಮಪ್ಪ ಈತನೇ. ಈ ಶಾಸನದಂತೆ ಕೂಡ್ಲಿ, ಶೃಂಗೇರಿ ಶಂಕರಭಾರತಿ ಸ್ವಾಮಿಗಳಿಗೆ ದೇಮಾಪುರ ಗ್ರಾಮದಿಂದ ಆರೇರ ಪಟ್ಟಿ, ಮೊಗಲರ ಪಟ್ಟಿ, ವರ್ತನೆ, ವರಾಡ ಮುಂತಾಗಿ ಒಂದನ್ನು ತೆಗೆದುಕೊಳ್ಳದ ರೀತಿ ಕಟ್ಟಳೆ ಮಾಡಿ ನಿಸಪತ್ತಿ ಹೋಗದ ರೀತಿ ಬರೆಯಿಸಿ ಕೊಟ್ಟಿದ್ದಾನೆ. ಮೂಲ ಶೃಂಗೇರಿ ಮಠಕ್ಕೆ ಬರೆದುಕೊಟ್ಟ ಶೃಂಗೇರಿ ೪[14]ಶಾಸನ ಈತನದೇ ಆಗಿರಬೇಕು.

೧೩. ಪಟ್ಟಾಭಿನಾಯಕ (ಕ್ರಿ.ಶ. ೧೭೧೫-೧೭೧೭)

ಹುಚ್ಚ ಹನುಮಪ್ಪ ನಾಯಕನ ನಂತರ ಈತನ ಮಗ ಪಟ್ಟಾಭಿನಾಯಕ ಶಾ.ಶಕ ೬೩೭ನೇ ಮನ್ಮಥ ಸಂಚತ್ಸರದಿಂದ ಶಾ.ಶಕ ೧೬೩೯ನೇ ಹೇವಿಳಂಬಿ ಸಂವತ್ಸರದವರೆಗೆ (ಕ್ರಿ.ಶ. ೧೭೧೫-೧೭೧೭) ೭ ವರ್ಷ ಆಳಿದ್ದಾಗಿ ತರೀಕೆರೆ ಕೈಫಿಯತ್ತು ದಾಖಲೆ ತಿಳಿಸುತ್ತದೆ. ಇವನ ಕಾಲದಲ್ಲಿ ಸಿರಾದವರು ತರೀಕೆರೆಗೆ ಮುತ್ತಿಗೆ ಹಾಕಿದಾಗ ಈತ ಬಿದನೂರು ನಾಯಕರ ಸಹಾಯ ಪಡೆದು ಸಿರಾದವರನ್ನು ಹಿಮ್ಮೆಟ್ಟಿಸಿದ್ದಾಗಿ ತಿಳಿದು ಬರುತ್ತದೆ.

೧೪. ನಿತ್ಯ ಮದುವಣಿಗ ಹನುಮಪ್ಪ ನಾಯಕ (ಕ್ರಿ.ಶ. ೧೭೧೮-೧೭೬೪)

ಪಟ್ಟಾಭಿರಾಮಪ್ಪ ನಾಯಕರ ತರುವಾಯ ಇವರ ತಮ್ಮ ನಿತ್ಯಮದುವಣಿಗ ಹನುಮಪ್ಪ ನಾಯಕ ಶಾ.ಶಕ ೧೬೪೦ನೇ ವಿಳಂಬಿ ಸಂವತ್ಸರದಿಂದ ಶಾ.ಶಕ ೧೬೮೬ನೇ ತಾರಣ ಸಂವತ್ಸರದವರೆಗೆ (ಕ್ರಿ.ಶ. ೧೭೧೮-೧೭೬೪) ಅಂದರೆ ೪೬ ವರ್ಷ ಆಡಳಿತ ನಡೆಸಿದ್ದಾಗಿ ತಿಳಿದುಬರುತ್ತದೆ.

೧೫. ಇಮ್ಮಡಿ ಹನುಮಪ್ಪ ನಾಯಕ (ಕ್ರಿ.ಶ. ೧೭೬೫-೧೭೭೧)

ನಿತ್ಯ ಮದುವಣಿಗ ಹನುಮಪ್ಪ ನಾಯಕನ ತರುವಾಯ ಅವರ ಮಗ ಇಮ್ಮಡಿ ಹನುಮಪ್ಪ ನಾಯಕ ಅಧಿಕಾರ ವಹಿಸಿಕೊಂಡು ಶಾ.ಶಕ ೧೬೮೭ನೇ ಪಾರ್ಥಿವ ಸಂವತ್ಸರದಿಂದ ಶಾ.ಶಕ ೧೬೯೩ನೇ ಖರ ಸಂವತ್ಸರದವರೆಗೆ (ಕ್ರಿ.ಶ. ೧೭೭೧) ಅಧಿಕಾರ ನಡೆಸಿದ್ದಾಗಿ ತರೀಕೆರೆ ಕೈಫಿಯತ್ತು ತಿಳಿಸುತ್ತದೆ.

೧೬. ಸೀತಾರಾಮಪ್ಪ ನಾಯಕ III (ಕ್ರಿ.ಶ. ೧೭೭೨-೧೭೭೯)

ಇಮ್ಮಡಿ ಹನುಮಪ್ಪ ನಾಯಕನ ತರುವಾಯ ಅವರ ತಮ್ಮ ಸೀತಾರಾಮಪ್ಪ ನಾಯಕ ಶಾ.ಶಕ ೧೬೯೪ನೇ ಸಂವತ್ಸರದ ಲಾಗಾಯ್ತು ಶಾ.ಶಕ ೧೭೦೧ನೇ ವಿಕಾರಿ ಸಂವತ್ಸರದವರೆಗೆ (ಕ್ರಿ.ಶ, ೧೭೭೨-೧೭೭೯) ಒಟ್ಟು ೭ ವರ್ಷ ಆಳಿದನೆಂದು ತರೀಕೆರೆ ಕೈಫಿಯತ್ತಿನಂತೆ ತಿಳಿದು ಬರುತ್ತದೆ.

೧೭. ಸರ್ಜಾಹನುಮಪ್ಪ ನಾಯಕ – II (ಕ್ರಿ.ಶ. ೧೭೮೦-೧೭೮೧)

ಸೀತಾರಾಮಪ್ಪ ನಾಯಕನ ತರುವಾಯ ಅವರ ಮಗ ಸರ್ಜಾ ಹನುಮಪ್ಪ ನಾಯಕ ಶಾ.ಶಕ ೧೭೦೨ನೇ ಶಾರ್ವರಿ ಸಂವತ್ಸರದಿಂದ ಶಾ.ಶಕ ೧೭೦೩ ಪ್ಲವ ಸಂವತ್ಸರದವರೆಗೆ (ಕ್ರಿ.ಶ. ೧೭೮೦-೧೭೮೧) ಎರಡು ವರ್ಷ ಅಧಿಕಾರ ನಡೆಸಿದನು. ಇವರ ಪತ್ನಿ ಸುಬ್ಬಮ್ಮ ನಾಗತಿ. ಇವರಿಗೆ ಸರ್ಜಾ ಕಾಗಣಪ್ಪ ನಾಯಕ ಮತ್ತು ಸರ್ಜಾ ಹನುಮಪ್ಪ ನಾಯಕ ಎಂಬ ಇಬ್ಬರು ಮಕ್ಕಳು. ಹೈದರಾಲಿ ಇವರನ್ನು ಜಯಿಸಿ ೧೮ ಸಾವಿರ ಪೊಗದಿ ಕೊಡಲು ನಿರ್ಣಯಿಸಿ ಮರಳಿ ರಾಜ್ಯ ಇವರಿಗೆ ಬಿಟ್ಟುಕೊಟ್ಟಿದ್ದನು. ಇದನ್ನೂ ಸಹ ಕೊಡಲು ಆಗದೆ ಇದ್ದುದರಿಂದ ೧೦೦ ಹೈದರಿ ವರಾಹ ಗೊತ್ತು ಮಾಡಿ ೧೭೮೨ ವರಹ ಸೀಮೆ ಜಹಗೀರ್ ಕೊಟ್ಟು ಮಂಜುರಾಬಾದು ಪ್ರಾಂತ್ಯ ಆಳಲು ಕಳುಹಿಸಿದನು. ಇವರು ತರೀಕೆರೆಯಿಂದ ಮಂಜುರಾಬಾದನ್ನು ಆಳುತ್ತಿದ್ದಾಗ ಹೆದರನಿಗೆ ಸಹಾಯ ಮಾಡಲು ಕೊಯಮತ್ತೂರು ಯುದ್ಧಕ್ಕೆ ಹೋದಾಗ ಅಲ್ಲಿ ನಿಧನರಾದರೆಮದು[15]ತಿಳಿದು ಬರುತ್ತದೆ.

೧೮. ಕೃಷ್ಣಪ್ಪ ನಾಯಕ (ಕ್ರಿ.ಶ. ೧೭೮೨-೧೮೦೪)

ಸರ್ಜಾ ಹನುಮಪ್ಪ ನಾಯಕನ ತರುವಾಯ ಇವನ ಮಗ ಕೃಷ್ಣಪ್ಪ ನಾಯಕ ಅಧಿಕಾರಕ್ಕೆ ಬಂದನು. ಇವನು ಶಕ ೧೬೬೫ನೇ ದುಂದುಭಿ ಸಂವತ್ಸರದ ಶ್ರಾವಣ ಬಹುಳ ಕ್ರಿಷ್ಣಾಷ್ಟಮಿಯಂದು ಜನಿಸಿದ್ದರಿಂದ ಇವನಿಗೆ ಕೃಷ್ಣಪ್ಪ ಎಂದು ನಾಮಕರಣ ಮಾಡಲಾಯಿತು ಎಂದು ತಿಳಿದು ಬರುತ್ತದೆ. ಇವನಿಗೆ ಲಕ್ಷ್ಮಮ್ಮ ನಾಗತಿ ಜೊತೆಗೆ ಶಾ.ಶಕ ೧೬೮೬ನೇ ಸ್ವಭಾನು ಸಂವತ್ಸರದಲ್ಲಿ ವಿವಾಹವಾಯಿತು. ಈತ ತನ್ನ ೪೧ನೇ ವಯಸ್ಸಿನಲ್ಲಿ ನಿಧನರಾದನು. ಕ್ರಿ.ಶ. ೧೮೦೪ರಲ್ಲಿ ಅವನನ್ನು ಬಂಧಿಸಿದಾಗ ಮೈಸೂರು ಅರಮನೆಯಲ್ಲಿ ಇವನು ನಿಧನನಾದನೆಂದು ಅಬ್ದುಲ್ ಸತ್ತಾರ್ ತಮ್ಮ ತರೀಕೆರೆ ಪಾಳೆಯಗಾರರು ಪುಸ್ತಕದಲ್ಲಿ ತಿಳಿಸುತ್ತಾರೆ. ಟಿಪ್ಪುವಿನ ವಿರೋಧಿ ಎಂದು ದಿವಾನ್ ಪೂರ್ಣಯ್ಯ ಈತನಿಗೆ ವಿಷವಿಕ್ಕಿ ಕೊಲ್ಲಿಸಿದನೆಂದು ಹೇಳಲಾಗುತ್ತದೆ. [16]

೧೯. ಸರ್ಜಾ ರಂಗಪ್ಪ ನಾಯಕ I (ಕ್ರಿ.ಶ. ೧೮೦೪-೧೮೩೦)

ಸರ್ಜಾ ಕೃಷ್ಣಪ್ಪ ನಾಯಕನ ನಂತರ ಅವನ ತಮ್ಮ ರಂಗಪ್ಪ ನಾಯಕ ಈ ಪಾಳೇಪಟ್ಟಿನ ಅಧಿಕಾರ ವಹಿಸಿಕೊಂಡನು. ಇವನಿಗೆ ಸೀತಮ್ಮ ನಾಗತಿ ಎಂಬ ಸಹೋದರಿ ಇದ್ದು ಅವಳನ್ನು ರಘುನಾಥ ನಾಯಕನೆಂಬುವನಿಗೆ ವಿವಾಹ ಮಾಡಿಕೊಡಲಾಗಿತ್ತು. ರಘುನಾಥ ನಾಯಕನು ಸಂತೇಬೆನ್ನೂರು ಶೀಮೆಗೆ ಒಳಪಟ್ಟ ಕೆಲ ಪ್ರಾಂತ್ಯದ ಆಡಳಿತ ನಡೆಸುತ್ತಿದ್ದುದಾಗಿ ತಿಳಿದು ಬರುತ್ತದೆ. ಸರ್ಜಾ ರಂಗಪ್ಪ ನಾಯಕನಿಗೆ ಕ್ರಿ.ಶ. ೧೭೯೧ರಲ್ಲಿ ತಿಮ್ಮಮ್ಮ ನಾಗತಿ ಎಂಬುವಳೊಡನೆ ವಿವಾಹವಾಗಿತ್ತು. ಇದಲ್ಲದೆ ಇನ್ನು ಈರ್ವರು ಪತ್ನಿಯರು ಇವನಿಗೆ ಇದ್ದರು.

ಸರ್ಜಾ ರಂಗಪ್ಪ ನಾಯಕನು ಮೈಸೂರು ಚರಿತ್ರೆಯಲ್ಲಿ ಬಹಳ ಪ್ರಾಮುಖ್ಯತೆ ಗಳಿಸಿದ್ದನು. ಇವರು ೩-೪ನೆ ಮೈಸೂರು ಯುದ್ಧದಲ್ಲಿ ಭಾಗವಹಿಸಿದ್ದನು. ಟಿಪ್ಪುವಿನ ಮರಣಾನಂತರ (೧೭೯೯) ಮೈಸೂರಿನ ರಾಜಕೀಯ ಚಿತ್ರದಲ್ಲಿ ಭಾರಿ ಬದಲಾವಣೆ ಕಂಡು ಬಂತು. ಬ್ರಿಟಿಷರು ಟಿಪ್ಪುವನ್ನು ಗೆದ್ದು ದೇಶದ ಕೆಲಭಾಗದ ಆಡಳಿತವನ್ನು ಮೈಸೂರು ಮಹಾರಾಜರಿಗೆ ವಹಿಸಿಕೊಟ್ಟರು. ಇದರಿಂದ ‘ಕುಂಪಣಿ’ ಸರ್ಕಾರದ ಪರಮಾಧಿಕಾರ ರಾಜ್ಯದಲ್ಲಿ ಸ್ಥಾಪಿತವಾಯಿತು. ಕುಂಪಣಿ ಸರ್ಕಾರ ಶ್ರೀರಂಗಪಟ್ಟಣದಲ್ಲಿ ಒಂದು ದಂಡನ್ನಿಟ್ಟಿತ್ತು. ಇದು ಟಿಪ್ಪುಸುಲ್ತಾನನ ಪರವಾಗಿದ್ದ ಪಾಳೆಯಗಾರರಿಗೆ ಸರಿ ಬರುತ್ತಿರಲಿಲ್ಲ. ಹಾಗಾಗಿ ದೊಂಢಿಯಾವಾಘ್, ವೂರಿನ ಕೃಷ್ಣಪ್ಪ, ನಗರದ ಬೂದಿ ಬಸಪ್ಪ, ಸರ್ಜಾ ರಂಗಪ್ಪ ಸೇರಿ ಬ್ರಿಟಿಷರ ವಿರುದ್ಧ ದೊಡ್ಡ ಬಂಡಾಯವನ್ನು ಹೂಡಿದರು. ಇದು’ ರಂಗಪ್ಪ ನಾಹಕರ ಅಡಾವುಡಿ’[17]ಎಂದು ಹೆಸರಾಯಿತು. ಬ್ರಿಟಿಷರು ಈ ದಂಗೆ ಅಡಗಿಸಿ ಸರ್ಜಾ ರಂಗಪ್ಪ ನಾಯಕನನ್ನು ಶ್ರೀರಂಗಪಟ್ಟಣದಲ್ಲಿ ನಿರ್ಬಂಧದಲ್ಲಿ ಇಟ್ಟಿದ್ದರು. ರಂಗಪ್ಪನಾಯಕನು ಉಪಾಯದಿಂದ ತಪ್ಪಿಸಿಕೊಂಡು ತರೀಕೆರೆಗೆ ಬಂದು ಮೈಸೂರು ಸೈನ್ಯದಲ್ಲಿ ಬೇಡರ ಕಂದಾಚಾರ ಸೀಪಾಯಿಗಳನ್ನೆಲ್ಲ ಒಟ್ಟು ಮಾಡಿ ಬ್ರಿಟಿಷರ ವಿರುದ್ಧ ಮತ್ತೆ ಹೋರಾಟ ಮಾಡಿದನು. ಕ್ರಿ.ಶ. ೧೮೩೨ರಲ್ಲಿ ಜಾಗರ ತರ್ಪು ಗೊಣಕಲ್ಲು ಸಮೀಪ ಶತ್ರುಗಳು ಹಿಡಿಯುವುದಕ್ಕೆ ಬಂದಾಗ ಯುದ್ಧ ಮಾಡುತ್ತಾ ರಂಗಪ್ಪನಾಯಕ ವೀರಸ್ವರ್ಗ ಸೇರಿದನು. [18]

ಕೂಡ್ಲಿ-೬೧ ಶಾಸನದಂತೆ[19]ಕ್ರಿ.ಶ. ೧೮೧೪ರಲ್ಲಿ ಕೂಡ್ಲಿ-ಶೃಂಗೇರಿ ಮಠದ ಶ್ರೀ ನರಸಿಂಹ ಭಾರತಿ ಸ್ವಾಮಿಗಳಿಗೆ ತರೀಕೆರೆ ಕೆರೆಯ ಹಿಂದಿನ ತೋಟವನ್ನು ಈತ ಚಂದ್ರಮೌಳೇಶ್ವರ ವಿದ್ಯಾಶಂಕರ ದೇವರ ಸಹಾಯಾರ್ಥವಾಗಿ ದತ್ತಿ ಕೊಟ್ಟಿರುವುದಾಗಿ ತಿಳಿದು ಬರುತ್ತದೆ.

೩೦. ಸರ್ಜಾ ಹನುಮಪ್ಪ ನಾಯಕ –III (ಕ್ರಿ.ಶ. ೧೮೩೦-೧೮೩೨)

ಸರ್ಜಾ ರಂಗಪ್ಪ ನಾಯಕನ ನಂತರ ಅವನ ಮಗ ಸರ್ಜಾ ಹನುಮಪ್ಪ ನಾಯಕ ಪಾಳೇಪಟ್ಟಿನ ಅಧಿಕಾರ ವಹಿಸಿಕೊಂಡನು. ಜನಪದ ಸಾಹಿತ್ಯದಲ್ಲಿ ಈತನನ್ನು ಸಾವಿರಾಳು ಶಕುತಿಯೋನು, ಮೂರಾನೆ ಬಲದೋನು’ ಎಂದು ಬಣ್ಣಿಸಲಾಗಿದೆ. ಈತನಿಗೆ ಸರ್ಜಪ್ಪ ನಾಯಕ ಎಂಬ ಹೆಸರು ರೂಢಿಯಲ್ಲಿತ್ತು. ಸರ್ಜಾ ಹನುಮಪ್ಪ ನಾಯಕ ವೀರ, ದೀರ, ಛಲಗಾರ, ಗಂಭೀರ, ಆಂಜನೇಯನ ಪರಮಭಕ್ತ, ಬಡವರ ಬಂಧು, ಜನತೆಯ ಅಚ್ಚು ಮೆಚ್ಚಿನ ನಾಯಕ. ತಂದೆಯ ನಂತರ ಬಂಡಾಯವನ್ನು ನಿರ್ದೇಶಿಸಿ ಯುವಕರ ಪಡೆಯನ್ನು ಕಟ್ಟಿ ಸರ್ಕಾರದ ವಿರುದ್ಧ ನಿಂತು ಇರಸಾಲನ್ನು ದೋಚಿ ಬಡವರಿಗೆ ಹಂಚ ತೊಡಗಿದನು. ಇವನು ತನ್ನ ಕಾರ್ಯಾಚರಣೆಯನ್ನು ಕಾಮನ ದುರ್ಗದಿಂದ ನಡೆಸುತ್ತಿದ್ದನು. ಇವನ ಉಪಟಳ ನಿಯಂತ್ರಿಸಲು ಇವನ ಪ್ರೇಯಸಿ ರಂಗಮ್ಮನ ಸಹಾಯದಿಂದ ಈತನನ್ನು ಬಂಧಿಸಲಾಯಿತೆಂದು ತಿಳಿದುಬರುತ್ತದೆ. ಈತನನ್ನು ೧೮೩೨ರಲ್ಲಿ ಬೆಂಗಳೂರಿನ ಗಟ್ಟಹಳ್ಳಿ ವನಪ್ರದೇಶದಲ್ಲಿ ಗಲ್ಲಿಗೆ ಹಾಕಲಾಯಿತೆಂದು ದಾಖಲೆಗಳು ತಿಳಿಸುತ್ತವೆ. [20]

ಕಡೂರು-೨೬ ಶಾಸನ[21]ದಂತೆ ಈ ಹನುಮಪ್ಪನಿಗೆ ಬಾಳಪ್ಪ ಎಂಬ ಸಹೋದರನಿದ್ದನೆಂದೂ ಈ ಅಣ್ಣ ತಮ್ಮಂದಿರಿಬ್ಬರಿಗೂ ಒಟ್ಟಿಗೆ ಫಾಶಿ ಶಿಕ್ಷೆ ವಿಧಿಸಲಾಗಿತ್ತೆಂದೂ, ತಿಳಿದು ಬರುತ್ತದೆ. ಬಹುಶಃ ಈತನ ತಂದೆ ರಂಗಪ್ಪನಾಯಕ ಮಗನ ಫಾಶಿ ಶಿಕ್ಷೆ ಆದ ನಂತರ ನಿಧನರಾದ ಹಾಗೆ ತೋರುತ್ತದೆ. ಇವನ ನಂರ ಸಂತೇಬೆನ್ನೂರು ನಾಯಕರ ರಾಜ್ಯದ ಆಡಳಿತ ಅಂತ್ಯ ಕಂಡಿತು.

ಕೊನೆಯ ಸಂತತಿ: ಸರ್ಜಾ ಹನುಮಪ್ಪ ನಾಯಕನ ನಂತರ ಈ ಪಾಳೇಪಟ್ಟಿನ ರಾಜ್ಯದ ಆಡಳಿತ ಮುಕ್ತಾಯವಾಯಿತು. ನಂತರ ಪಟ್ಟಾಭಿ ರಾಮಪ್ಪ ನಾಯಕ -II (ಕ್ರಿ.ಶ. ೧೮೩೩-೪೦) ಸರ್ಜಾ ಹನುಮಪ್ಪ – IV (೧೮೪೦-೮೮) ಪಟ್ಟಾಭಿರಾಮಪ್ಪ -II (೧೯೯೯-೧೯೨೦) ಸರ್ಜಾ ಹನುಮಪ್ಪ ನಾಯಕ V (೧೯೨೦=೧೯೪೭) ಸಂಪ್ರದಾಯದಂತೆ ತಮ್ಮ ವಂಶವನ್ನು ನಡೆಯಿಸಿದರು. ಇವರಿಗೆ ಬ್ರಿಟಿಷ್ ಸರ್ಕಾರ ನಿವೃತ್ತಿ ವೇತನವನ್ನು ಕೊಡಮಾಡಿತ್ತು. ಕೊನೆಯ ಸರ್ಜಾ ಹನುಮಪ್ಪ ನಾಯಕರಿಗೆ ಮಕ್ಕಳಿಲ್ಲದ ಪ್ರಯುಕ್ತ ಅವರ ನಂತರ ಅವರ ೩ನೇ ಹೆಂಡತಿ ಯಶೋದಮ್ಮ ನಾಗತಿ ಈ ಪಾಳೆಪಟ್ಟಿನ ಅಧಿಕಾರ ವಹಿಸಿಕೊಂಡರು. ಅವರು ಒಬ್ಬ ಗಂಡು ಮತ್ತು ಓರ್ವ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದರು. ಅವರು ಅಕಾಲ ಮರಣಕ್ಕೆ ತುತ್ತಾದ್ದರಿಂದ ವಾರಸುದಾರರಿಲ್ಲದೆ ಈ ಪಾಳೆಪಟ್ಟು ಅವಸಾನಗೊಂಡಿತ್ತು. ಯಶೋದಮ್ಮ ನಾಗತಿ ತಮ್ಮ ಅಂತ್ಯ ಕಾಲದಲ್ಲಿ ಮರಣಶಾಸನ ಬರೆದು ತಮ್ಮ ನಂತರ ಎಲ್ಲಾ ಆಸ್ತಿಯನ್ನು ಚಿತ್ರದುರ್ಗದ ಶ್ರೀ ಮರುಘರಾಜೇಂದ್ರ ಬೃಹನ್ಮಠಕ್ಕೆ ಸೇರುವಂತೆ ದಾನ ಕೊಟ್ಟು ನಿಧನರಾದರು. (೧೯೮೬). ಇವರ ನಿಧನದೊಂದಿಗೆ ಮೂರು ಶತಮಾನ ಕಾಲ ಆಳಿದ ಒಂದು ರಾಜವಂಶ ಅಂತ್ಯಗೊಂಡಿತು. ತರೀಕೆರೆಯಲ್ಲಿ ಅವರಿದ್ದ ಅರಮನೆ ಜಾಗದಲ್ಲಿ ಈಗ ಒಂದು ಪ್ರೌಢಶಾಲೆಯನ್ನು ಅವರ ಹೆಸರಿನಲ್ಲಿ ಚಿತ್ರದುರ್ಗದ ಬೃಹನ್ಮಠ ನಡೆಸುತ್ತಿದೆ. ಯಶೋದಮ್ಮ ನಾಗತಿಯವರು ತಮ್ಮ ಮನೆತನದ ವಿವಿಧ ವಿಚಾರಗಳನ್ನು ತಮ್ಮ ಕೈಬರಹದ ಒಂದು ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ. ಇದರಲ್ಲಿ ಈ ನಾಯಕ ಸಂತತಿಯ ಅಂತಿಮ ಚಿತ್ರ ನಮಗೆ ತಿಳಿದು ಬರುತ್ತದೆ.

ನಾಗತಿಯರು : ಸಂತೇಬೆನ್ನೂರು ನಾಯಕರ ಬಗ್ಗೆ ತಿಳಿದಷ್ಟು ಸಂಗತಿಗಳು ಅವರ ಮನೆತನದ ಹೆಣ್ಣು ಮಕ್ಕಳ ಬಗ್ಗೆ ನಮಗೆ ತಿಳಿಯಬರುವುದಿಲ್ಲ. ಈ ಮನೆತನದ ಕೈಫಿಯತ್ತಿನಲ್ಲಿ, ಕೃಷ್ಣಶರ್ಮನ ಸರಜಾ ಹನುಮೇಂದ್ರ ಯಶೋವಿಲಾಸಂ ಕೃತಿಯಲ್ಲಿ ಹಾಗೂ ಜಾನಪದ ಸಂಗ್ರಹಗಳಲ್ಲಿ ಈ ವಂಶದ ಕೆಲವು ನಾಗತಿಯರ ಬಗ್ಗೆ ವಿವರಗಳು ದೊರೆಯುತ್ತವೆ.

ಬೇಡರ ಯುವತಿಯನ್ನು ಮದುವೆಯಾಗಿ ಬಸವಾಪಟ್ಟಣದಲ್ಲಿ ನೆಲೆನಿಂತ ವಿಜಯನಗರದ ಸೈನ್ಯಾಧಿಕಾರಿ ಧೂಮರಾಜ ಈ ಪಾಳೇಪಟ್ಟಿನ ಉಗಮನಕ್ಕೆ ಕಾರಣನಾದ ಎಂದು ತಿಳಿದು ಬರುತ್ತದೆ. ಅದರ ಪಕ್ಕದಲ್ಲಿರುವ ಕಂಚುಗಾರನಹಳ್ಳಿಯಲ್ಲಿ ಹನುಮಪ್ಪ ನಾಯಕನ ಹೆಂಡತಿ ಗಿರಿಯಪ್ಪ ನಾಗತಿ ಕ್ರಿ.ಶ. ೧೪೯೦ರಲ್ಲಿ ಒಂದು ಕೆರೆ ಕಟ್ಟಿಸಿದ್ದಾಗಿ ಸಾಸುವೆ ಹಳ್ಳಿ ಕೈಫಿಯತ್ತಿ[22]ನಿಂದ ತಿಳಿದು ಬರುತ್ತದೆ.

ಚಿತ್ರದುರ್ಗ ಪಾಳೇಗಾರರಿಗೂ ಇವರಿಗೂ ನೆಂಟಸ್ಥಿಕೆ ಇತ್ತೆಂದೂ ಸರ್ಜಾ ಹನುಮಪ್ಪ ನಾಯಕನ ಮಗ ಸೀತಾರಾಮಪ್ಪ ನಾಯಕನ ಮಗ ಪಟ್ಟಾಭಿರಾಮಪ್ಪ ನಾಯಕನಿಗೆ ದುರ್ಗದ ಭರಮಣ್ಣ ನಾಯಕನ ಮಗಳನ್ನು ಕೊಟ್ಟು ವಿವಾಹವಾಗಿತ್ತೆಂದು ಯಗಟಿ ಕೈಫಿಯತ್ತಿನಲ್ಲಿ[23] ಉಲ್ಲೇಖವಿದೆ.

ಕೃಷ್ಣಶರ್ಮನ ಸರಜಾ ಹನುಮೇಂದ್ರ ಯಶೋ ವಿಲಾಸಂನಲ್ಲಿ ಸರಜಾ ಹನುಮಪ್ಪ ನಾಯಕನ ಹೆಂಡತಿಯ ಹೆಸರು ಗಂಗಾಂಬಿಕೆಎ ಎಂಬುದಾಗಿ ತಿಳಿಸುತ್ತಾನೆ. ಕ.ರಾ.ಕೃ. ಸಂಗ್ರಹಿಸಿರುವ ರಂಗಪ್ಪನಾಯಕನ ಕುರಿತು ಪಾಳೇಗಾರರ ಪದಗಳು ಇದರಲ್ಲಿ ರಂಗಪ್ಪ ನಾಯಕನಿಗೆ ಕಾವೇರಮ್ಮ ಎಂಬ ಹೆಂಡತಿ, ಲಕ್ಷ್ಮವ್ವ ನಾಘತಿ ಎಂಬ ಮಗಳೂ, ಇವರ ಅಣ್ಣ ಹನುಮಪ್ಪ ನಾಯಕನಿಗೆ ತಿಮ್ಮಮ್ಮ ನಾಗತಿ ಎಂಬ ಮಗಳು ಇದ್ದು ಇವಳನ್ನು ಕುಪ್ಪಂ ಪಾಳೇಗಾರನಿಗೆ ೧೮೯೧ರಲ್ಲಿ ಮದುವೆ ಮಾಡಿಕೊಟ್ಟುದ್ದಾಗಿ ತಿಳಿದು ಬರುತ್ತದೆ.

ಹರಪನಹಳ್ಳಿ ಪಾಳೇಗಾರರ ಮೂಲ ಪುರುಷ ದಾದಾ ನಾಯಕ[24]ತರೀಕೆರೆ ನಾಯಕರ ಮಗಳು ಹನುಮ ನಾಗತಿಯನ್ನು ವಿವಾಹ ಮಾಡಿಕೊಂಡಿದ್ದಾಗಿಯೂ, ಹಾಗೆಯೇ ಚಿತ್ರದುರ್ಗ ಪಾಳೇಗಾರ ಚಿಕ್ಕಣ್ಣ ನಾಯಕನಿಗೆ ಹನುಮವ್ವ ನಾಗತಿ ಎಂಬುವವಳನ್ನೂ ಕೊಟ್ಟು ೧೬೭೯ರಲ್ಲಿ ಮದುವೆಯಾಗಿ[25]ಈರ್ವರ ನಡುವೆ ಇದ್ದ ಅಂತಃಕಲಹ ಶಮನವಾಗಿತ್ತೆಂದೂ ತಿಳಿದುಬರುತ್ತದೆ. ಸರ್ಜಾ ರಂಗಪ್ಪ ನಾಯಕನಿಗೆ ಸೀತಮ್ಮ ನಾಗತಿ ಎಂಬ ಸಹೋದರಿ ಇದ್ದು ಅವಳನ್ನು ರಘುನಾತ ನಾಯಕನೆಂಬುವವನಿಗೆ ಮದುವೆ ಮಾಡಿಕೊಡಲಾಗಿತ್ತು. ‘ಹೊನ್ನ ಬಿತ್ತೇವು ಹೊಲಕೆಲ್ಲಾ’ ಎಂಬ ಗ್ರಂಥದಲ್ಲಿ ಲೇಖಕ ಮತಿಘಟ್ಟ ಕೃಷ್ಣಮೂರ್ತಿ ಕೆಲ ನಾಗತಿಯರ ಹೆಸರನ್ನು ಉಲ್ಲೇಖಿಸುತ್ತಾರೆ. ಅದರಂತೆ ನಿಚ್ಚ ಮದುವಣಿಗ ಹನುಮಪ್ಪ ನಾಯಕನಿಗೆ (೧೭೨೧-೨೨) ಸುಬ್ಬಮ್ಮ ನಾಗತಿ ಎಂಬ ಹೆಂಡತಿ, ಅವನ ಮಗ ಸರ್ಜಾ ಕೃಷ್ಣಪ್ಪನಿಗೆ ಲಕ್ಷ್ಮವ್ವ ನಾಗತಿ ಎಂಬ ಪತ್ನಿ, ಸರ್ಜಾ ರಂಗಪ್ಪ ನಾಯಕನಿಗೆ ತಿಮ್ಮಮ್ಮ ನಾಗತಿ, ದೊಡ್ಡಮ್ಮ ನಾಗತಿ ಎಂಬೀರ್ವರು ಪತ್ನಿಯರು ಇದ್ದರು ಎಂದು ತಿಳಿಸುತ್ತಾರೆ. ಸರ್ಜಾ ರಂಗಪ್ಪ ನಾಯಕನ ಮೊಮ್ಮಗ ರಂಗಪ್ಪನಾಯಕನಿಗೆ ಭಾಗಮ್ಮ ಎಂಬ ಮಗಳಿದ್ದಳೆಂದೂ ಅವಳನ್ನು ಕೆಂಗುಂದಿ ಕುಪ್ಪಂ ಪಾಳೇಗಾರರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಇದೇ ಕೆಂಗುಂದಿ ಕುಪ್ಪಂ ಮನೆತನದ ತಿಮ್ಮಾಜಮ್ಮ ಎಂಬ ಇಂಗ್ಲೀಷ್ ಕಲಿತ ಹೆಣ್ಣನ್ನು ಪಟ್ಟಾಭಿರಾಮಪ್ಪ ಮದುವೆ ಆಗಿದ್ದನು. ಪಟ್ಟಾಭಿರಾಮಪ್ಪನ ಮಗ ಸರ್ಜಾ ಹನುಮಪ್ಪ ನಾಯಕನ ಮೊದಲ ಪತ್ನಿ ಕುಪ್ಪಂನ ಸಾವಿತ್ರಮ್ಮ ನಾಗತಿ. ಆಕೆ ಮಕ್ಕಳಿಲ್ಲದೆ ನಿಧನಳಾದಳು. ಎರಡನೇ ಹೆಂಡತಿ ಶುಂಡಿಯ ನಾಗಮ್ಮ ನಾಗತಿ. ತೌರಿನಲ್ಲೇ ಇದ್ದಳು. ಮೂರನೇ ಹೆಂಡತಿ ಚಿತ್ರದುರ್ಗದ ಬಿಚ್ಚುಗತ್ತಿ ಮದಕರಿ ನಾಯಕನ ಮಗಳು ಯಶೋದಮ್ಮ ನಾಗತಿ ಇವರೇ ಈ ಪಾಳೇಪಟ್ಟಿನ ಕಡೆಯ ನಾಗತಿಯೂ ಹೌದು.

ಕೂಡ್ಲಿ-ಶೃಂಗೇರಿ ಮಠ ಮತ್ತು ಸಂತೇಬೆನ್ನೂರು ನಾಯಕರು

೮ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಅಮ್ನಾಯ ಪೀಠಗಳಲ್ಲಿ ಶೃಂಗೇರಿಯೂ ಒಂದು. ಶೃಂಗೇರಿಯಲ್ಲಿ ಸ್ಥಾಪಿಸಿದ ಅದ್ವೈತ ಪೀಠವನ್ನು ಅವರ ಶಿಷ್ಯರಾದ ಸುರೇಶ್ವರಾಚಾರ್ಯರಿಂದ ಪ್ರಾರಂಭಿಸಿ ೨೧ನೇ ಪೀಠಾಧೀಶ್ವರರಾದ ರಾಮಚಂದ್ರ ಭಾರತಿ ಸ್ವಾಮಿಗಳ ಶಿಷ್ಯರಾದ ಶ್ರೀ ನರಸಿಂಹ ಭಾರತಿ ಸ್ವಾಮಿಗಳು ಮುಂದುವರೆಸಿಕೊಂಡು ಬಂದರು. ಅವರು ಮಹಾಯಾತ್ರೆ ಕೈಗೊಂಡು ಉತ್ತರದ ಬದರಿ, ಕಾಶೀಯಾತ್ರೆಗೆ ಹೋಗಿ ಬಹಳ ದಿನಗಳಾದರೂ ಹಿಂತಿರುಗಿ ವಾಪಾಸ್ಸು ಸ್ವಕ್ಷೇತ್ರಕ್ಕೆ ಬರಲೇ ಇಲ್ಲ. ಆಗ ಅವರ ಶಿಷ್ಯರು ಪೀಠವನ್ನು ಖಾಲಿ ಬಿಡುವುದು ಸರಿಯಲ್ಲ ಎಂದು ನಿರ್ಧರಿಸಿ ಬೇರೊಬ್ಬರನ್ನು ಶೃಂಗೇರಿ ಸಂಸ್ಥಾನದ ಪೀಠಾಧಿಕಾರಿಗಳಾಗಿ ಆರಿಸಿಕೊಂಡು ಎಲ್ಲಾ ಆಡಳಿತ ಅವರಿಂದ ಮುಂದುವರೆಸಿದರು. ಅವರನ್ನು ಅಭಿನವ ನರಸಿಂಹ ಭಾರತಿ ಸ್ವಾಮಿಗಳು ಎನ್ನಲಾಗಿದೆ. ಅನಂತರ ಕಾಶೀಯಾತ್ರೆಗೆ ಹೋಗಿದ್ದ ಶ್ರೀ ನರಸಿಂಹ ಭಾರತಿ ಸ್ವಾಮಿಗಳು ವಾಪಾಸ್ಸು ತಮ್ಮ ಯಾತ್ರೆ ಮುಗಿಸಿಕೊಂಡು ಕ್ರಿ.ಶ. ೧೫೪೭ರಲ್ಲಿ ಕೂಡಲ ಸಂಗಮ ಕ್ಷೇತ್ರಕ್ಕೆ ಬಂದು ಮುಕ್ಕಾಂ ಮಾಡಿದ್ದರು. ಆ ಸಮಯದಲ್ಲಿ ತಮ್ಮ ಆಡಳಿತಕ್ಕೊಳಪಟ್ಟಿದ್ದ ಕೂಡ್ಲಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದ ಸಂತೇಬೆನ್ನೂರು ನಾಯಕರು ಅವರನ್ನು ದರ್ಶನ ಮಾಡಿದಾಗ, ತಾವು ಪೀಠಾಧಿಕಾರಿಗಳಾಗಿದ್ದ ಶೃಂಗೇರಿ ಪೀಠಕ್ಕೆ ಬೇರೊಬ್ಬರನ್ನು ನೇಮಕ ಮಾಡಿರುವ ವಿಚಾರ ಅವರ ಗಮನಕ್ಕೆ ತಂದರು. ಸಂತೇಬೆನ್ನೂರು ನಾಯಕರು ಆ ಸ್ವಾಮಿಗಳಿಗೆ ಅವರು ಅಲ್ಲಿಯೇ ಒಂದು ಪ್ರತ್ಯೇಕ ಮಠ ಸ್ಥಾಪಿಸಿ ನೆಲಸುವಂತೆಯೂ, ಅದಕ್ಕಾಗಿ ಬೇಕಾದ ಸಹಾಯ, ಸಹಕಾರ, ಆರ್ಥಿಕ ನೆರವು ತಾವು ನೀಡುವುದಾಗಿ ಆಶ್ವಾಸನೆ ನೀಡಿ ಆ ಮಠಕ್ಕೆ ಒಂದು ಮಂದಿರವನ್ನು ಕಟ್ಟಿಸಿ ಕೊಟ್ಟಿದ್ದಲ್ಲದೆ ಹಲವು ದತ್ತಿ, ದಾನ, ಕೊಟ್ಟಿದ್ದಾಗಿ ತಿಳಿದು ಬರುತ್ತದೆ. ಸಂತೇಬೆನ್ನೂರು ನಾಯಕರ ಪ್ರೇರಣೆಯಂತೆ ಶ್ರೀ ನರಸಿಂಹ ಭಾರತಿಗಳು ಕೂಡಲಿ-ಶೃಂಗೇರಿ ಮಠ ಎಂಬ ಹೊಸ ಮಠವೊಂದನ್ನು ಸ್ಥಾಪಿಸಿ ಅಲ್ಲಿಯೇ ನೆಲೆ ನಿಂತರು. ಹೀಗೆ ಸಂತೇಬೆನ್ನೂರು ನಾಯಕರಿಂದ ಒಂದ ಹೊಸ ಗುರುಪರಂಪರೆ ಉದಯವಾಯಿತು. ಇದರ ದ್ಯೋತಕವಾಗಿ ಇಂದಿಗೂ ಶ್ರೀಕೂಡ್ಲಿ-ಶೃಂಗೇರಿ ಮಠದಲ್ಲಿ ಈ ನಾಯಕರ ಉಬ್ಬಶಿಲ್ಪ ಒಂದಕ್ಕೆ ಮಠದಿಂದ ಈಗಲೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಕೂಡ್ಲಿ ಶೃಂಗೇರಿ ಮಠದ ಪ್ರಾಚೀನ ಶಾಸನ ಲೇಖನ ಸಂಗ್ರಹ ಪುಸ್ತಕದಲ್ಲಿ ಸಂತೇಬೆನ್ನೂರು ನಾಯಕರು ಆ ಮಠಕ್ಕೆ ಬರೆಯಿಸಿಕೊಟ್ಟ ೧೫ ಶಾಸನ, ಸನ್ನದುಗಳ ಉಲ್ಲೇಖವಿದೆ. ಈ ಶಾಸನಗಳಿಂದ ಸಂತೇಬೆನ್ನೂರು ನಾಯಕರು ಈ ಮಠದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೆಂಬುದಾಗಿಯೂ ಮತ್ತು ಅವರು ಈ ಮಠದ ಶಿಷ್ಯರಾಗಿ ನಡೆದುಕೊಳ್ಳುತ್ತಿದ್ದುದಾಗಿಯೂ ತಿಳಿದು ಬರುತ್ತದೆ. [26]

ಸಂತೇ ಬೆನ್ನೂರು ನಾಯಕರು ಕೂಡ್ಲಿ ಶೃಂಗೇರಿ ಮಠಕ್ಕಲ್ಲದೆ ಮೂಲ ಶೃಂಗೇರಿ ಮಠಕ್ಕೆ ಹಲವಾರು ದತ್ತಿ-ದಾನ ಕೊಟ್ಟಿದ್ದು ಇದಲ್ಲದೆ ಕೂಡ್ಲಿಯಲ್ಲಿದ್ದ ಆರ್ಯ ಅಕ್ಷೋಭ್ಯತೀರ್ಥ ಸ್ವಾಮಿ ಮಠಕ್ಕೂ, ಸ್ವಾದೆ ಮಠಕ್ಕೂ[27] ಹಲವು ಜಮೀನು ದಾನ ಬಿಟ್ಟಿರುವುದಾಗಿ ತಿಳಿದು ಬರುತ್ತದೆ. ಸಂತೇಬೆನ್ನೂರಿನಲ್ಲಿದ್ದ ಮಹಂತಮಠ, ಸಿದ್ಧಲಿಂಗಮಠ[28]ಮುಂತಾದ ವೀರಶೈವ ಮಠಗಳಿಗೂ ಈ ನಾಯಕರು ದತ್ತಿ ಬಿಟ್ಟ ಬಗ್ಗೆ ಉಲ್ಲೇಖಗಳಿವೆ.

 

[1]ಎ.ಕ. ಸಂ.೬ ಕಡೂರು ತಾಲ್ಲೂಕು ಆಲದಹಳ್ಳಿ ಶಾಸನ

[2]ಅದೇ ತರೀಕೆರೆ ತಾಲ್ಲೂಕು ತಾಮ್ರಶಾಸನ

[3]ಶ್ರೀ ಕೂಡ್ಲಿ ಶೃಂಗೇರಿ ಮಠದ ಶಾಸನಗಳು

[4]ಎ.ಕ.ಸಂ. ೬ ಕಡೂರು ಜಿಲ್ಲಾ ತರೀಕೆರೆ ತಾಲ್ಲೂಕು ತಾಮ್ರಶಾಸನ

[5]ಸೌ. ಇಂ. ಇ. XVIII ಧಾರವಾಡ ೪೨, ೭೭ ಪುಟ ೧೮೮

[6]ತ. ಪಾ ಪುಟ – ೫೦

[7]ಎ.ಕ. ಸಂ. – ೬ ಕಡೂರು ಜಿಲ್ಲಾ ಚಿಕ್ಕಮಗಳೂರು ತಾಲ್ಲೂಕು ಬೆಂಡುಗ ಶಾಸನ

[8]ಅದೇ ತರೀಕೆರೆ ತಾಲ್ಲೂಕು ಹುಲ್ಲಿ ತಿಮ್ಮಾಪುರ ಶಾಸನ

[9]ಶ್ರೀ ಕೂಡ್ಲಿ – ಶೃಂಗೇರಿ ಮಠದ ಶಾಸನಗಳು

[10]ಎಂ.ಎ. ಆರ್. – ೧೯೨೭ ಕಡೂರು ಜಿಲ್ಲಾ ಅರಸಿನ ಗುಪ್ಪೆ ಗ್ರಾಮಶಾಸನ

[11]ಶ್ರೀ ಕೂಡ್ಲಿ ಶೃಂಗೇರಿ ಮಠದ ಶಾಸನಗಳು

[12]ತರೀಕೆರೆ ಕೈಫಿಯತ್ತು

[13]ಶ್ರೀ ಕೂಡ್ಲಿ ಶೃಂಗೇರಿ ಮಠದ ಶಾಸನಗಳು

[14]ಶೃಂಗೇರಿ ಮಠದ ಕಡತ

[15]ತ.ಪಾ. – ಪುಟ.೫೨

[16]ಕರ್ನಾಟಕ ಪರಂಪರೆ ಸಂ. ೨ ಕರ್ನಾಟಕ ಸರಕಾರ ಬೆಂಗಳೂರು ಪುಟ .೨೦೨

[17]ತ.ಪಾ. ಪುಟ – ೩೯

[18]ಹೊನ್ನ ಬಿತ್ತೇವು ಹೊಲಕ್ಕೆಲ್ಲಾ (ಜಾನಪದ ಸಾಹಿತ್ಯ ಸಮ್ಮೇಳನ ತರೀಕೆರೆ) ಸ್ಮರಣ ಸಂಚಿಕೆ ಪುಟ.೨೪

[19]ಕೂಡ್ಲಿ – ಶೃಂಗೇರಿ ಮಂಠದ ಶಾಸನಗಳು

[20]ತಪಾ – ಪುಟ ೪೨

[21]ಎಂ.ಎ.ಆರ್. – ೧೯೨೫ ಕಡೂರು ಜಿಲ್ಲಾ ಶಾಸನಗಳು (ಕೋಲಾರ ವೆಂಕಟರಾಯರಲ್ಲಿದ್ದು ಸನ್ನದಿನಂತೆ)

[22]ಕಕೈ ಪುಟ. ೧೦೨

[23]ಅದೇ

[24]ಕುಂ.ಬಾ. ಸದಾಶಿವಪ್ಪ ಹರಪನಹಳ್ಳಿ ಪಾಳೆಯಗಾರರು, ಬೆಂಗಳೂರು ೧೯೯೬, ಪುಟ – ೧೩

[25]ಎಂ.ಎಸ್.ಪುಟ್ಟಣ್ಣ ಚಿತ್ರದುರ್ಗ ಪಾಳೆಯಗಾರರು, ಮೈಸೂರು ೧೯೯೭, ಪುಟ. ೪೧

[26]ಶ್ರೀ ಕೂಡ್ಲಿ ಶೃಂಗೇರಿ ಮಠದ ಶಾಸನಗಳು

[27]ಎಂ.ಎ.ಆರ್. – ೧೯೭೫ (ಶಾಸನ ಬೆಂಗಳೂರು – ೧೨)

[28]ಎ.ಕ. ಸಂ.೭ (ಶಿವಮೊಗ್ಗ ಶಾಸನ ಚನ್ನಗಿರಿ – ೨೫ ಹಿರೇಕೋಗಲೂರು ಶಾಸನ)