ಆಕರಗಳು

ಬೇಲೂರು (ಬಲಂ) ನಾಯಕರನ್ನು ಕುರಿತು ಕೆಳದಿ ನೃಪ ವಿಜಯ, ಶಿವತತ್ವರತ್ನಾಕರ, ಶಾಸನ ಸಂಪುಟಗಳು, ಸರಜಾ ಹನುಮೇಂದ್ರ ಯಶೋವಿಲಾಸಂ, ಗೆಜೆಟೀರ್‌ಗಳು, ಮೆಕಂಜೀ ಸಂಗ್ರಹಗಳು, ಶ್ರೀ ಕೃಷ್ಣದೇವರಾಯನ ದಿನಚರಿ

[1] ಹಾಗೂ ವೇಲ್‌ಪುರೀ ಕೇಶವನೇತಿ ಗೀತಾ[2]ಮಿಥಿಕ್ ಸೊಸೈಟಿಯ L VIII ಮತ್ತು L VII ಸಂಚಿಕೆಗಳು, ಚಿಕ್ಕದೇವರಾಯ ವಂಶಾವಳಿ, ಚಿಕ್ಕದೇವರಾಯ ವಿಜಯ, ಮೈಸೂರು ದೊರೆಗಳ ಪೂರ್ವೋಭ್ಯುದಯ, ಹಯವದನರಾಯರ ಮೈಸೂರು ಚರಿತ್ರೆ, ಮೈಸೂರು ಅರಮನೆಯ ಪ್ರಕಟಣೆಗಳು, ವಿಜಯನಗರದ ಇತಿಹಾಸಗಳು, ಸೂರ್ಯಾಂಕ ವಿರಚಿತ ಕವಿ ಕಂಠಾಭರಣ, ಶಾಮರಾಯರ ಮೈಸೂರಿನ ಇತಿಹಾಸ, Letters and Despatches of Duke of Wellington, ಹೊಯ್ಸಳ ವಾಸ್ತುಶಿಲ್ಪ ಮುಂತಾದ ಮೂಲ ಸಾಮಗ್ರಿಗಳು ಇತಿಹಾಸವನ್ನು ರೂಪಿಸಲು ಸಹಕಾರಿಯಾಗಿವೆ.

ಬೇಲೂರು ಬಲಂ ನಾಯಕರ ಪ್ರಾಚೀನತೆ

ಸ್ಥಳ ಪುರಾಣದ ಮೇರೆಗೆ ಬೇಲೂರಿಗೆ “ಮೇಲಾಪುರ” ಹಾಗೂ “ಬೇಲುಹೂರು” ಎಂಬ ಹೆಸರಿತ್ತು. ಶಿವತತ್ವರತ್ನಾಕರದಲ್ಲಿ ಕೆಳದಿ ಬಸವರಾಜನು.

ವೇಲಾಪುರಾಖ್ಯಂ ಪ್ರಾಕಾರಂ ಸಹಸಾ ಸ್ವಯಮಗ್ರಹೀತ್‌ |
ತತೋಗ್ರಹೀತ್ಕರೇಣೈವರಿಪುಂ ತನ್ಮಧ್ಯವರ್ತಿನಮ್  ||
ಶ್ರೀ ರಂಗ ಸಾರ್ವಭೌಮಸ್ತಂ ಶೃತ್ವೋದಂತಂ ಪ್ರಹರ್ಷಿತಃ |
ವೇಲಾಪುರಂ ಸಮಾಯತಃ ಶಿವಭೂಪದಿದೃಕ್ಷಯಾ ||

ಎನ್ನುವಲ್ಲಿ ಅದನ್ನು “ವೇಲಾಪುರ” ವೆಂಬುದಾಗಿ ಉಲ್ಲೇಖಿಸಿದ್ದಾನೆ. [3]

ಬೇಲೂರಿನ ಪ್ರಸಿದ್ಧ ಕೇಶವ ದೇವಾಲಯದ ಶಾಸನದಲ್ಲಿ ಉಕ್ತವಾಗಿರುವಂತೆ “ಅಭಿನವಕ್ಷೋಣಿ ವೈಕುಂಠ”, “ದಕ್ಷಿಣವಾರಣಾಸಿ” ಎಂಬುದಾಗಿ ವರ್ಣಿಸಲಾಗಿದೆ. ಬೇಲೂರಿಗೆ “ಸೌಭಾಗ್ಯಪುರ” ಎಂಬ ಹೆಸರೂ ಇದ್ದುದು ಕಂಡು ಬರುತ್ತದೆ.[4] ಕ್ರಿ.ಶ. ೧೩೯೭ ರಲ್ಲಿ ವಿಜಯನಗರ ಚಕ್ರವರ್ತಿಯ ಅಧೀನದಲ್ಲಿ ಬಲಂ (ಈಗಿನ ಮಂಜಿರಾಬಾದ್) ಪ್ರಾಂತವಾಗಿದ್ದು, ಅನಂತರ ಐಗೂರು ಪಾಳೆಯ ಪಟ್ಟಿಗೆ ಸೇರಿತು. ಹೊಯ್ಸಳ ಸಾಮ್ರಾಜ್ಯದ ಕಣ್ಮಣಿಯಾಗಿದ್ದ ಬೇಲೂರಿನ ಮೇಲೆ ವಿಜಯನಗರದವರಿಗೆ ವಿಶೇಷ ಆಸಕ್ತಿಯುಂಟಾಯಿತು. ಬಲಂ ಪಾಳೆಯಗಾರ ಮಂಚಯ್ಯನಾಯಕನ ಪುತ್ರ ಹಿರಿಯಸಿಂಗಪ್ಪನಾಯಕನು “ಮಣಿನಾಗಪುರ”[5] ಎಂಬ ಅಭಿಧಾನದಿಂದ ಕೂಡಿದ ಐಗೂರು ಸಂಸ್ಥಾನಕ್ಕೆ ಅಧಿಪತಿಯಾದನು. ‘ಬಲಂ’ ಅಂಕಿತವು ಹೊಯ್ಸಳ ‘ಬಲ್ಲಾಳ’ದ ಮೂಲ ಸ್ವರೂಪವಿರಬಹುದಾಗಿ ಹಲವು ವಿದ್ವಾಂಸರ ಅಭಿಪ್ರಾಯವಾಗಿದೆ. ಹದಿನೆಂಟನೇ ಶತಮಾನದಲ್ಲಿದ್ದ ವೆಂಕಟಪ್ಪನಾಯಕನ ಸಚಿವನಾದ ಸೂರ್ಯಾಂಕ ವಿರಚಿತ ಕವಿ ಕಂಠಾಭರಣ ಕೃತಿಯಲ್ಲಿ ಉಲ್ಲೇಖವು ಕಂಡು ಬಾರದಿದ್ದರೂ ಶ್ರೀಮನ್ಮಹಾರಾಜರ ವಂಶಾವಳಿಯಲ್ಲಿ ‘ಬಲ್ಲಾ ಐಗೂರು’ ಹಾಗೂ ‘ಬಳ್ಳಂ’ ಎಂದರೆ ಮಂಜರಾಬಾದಿನ ಐಗೂರು ಎಂಬುದಾಗಿ ಕರೆಯಲಾಗಿದೆ. ಕೆಳದಿ ಸಂಶೋಧನಾಲಯದಲ್ಲಿ ಲಭಿಸಿದ೧೬೨೫ರ ಹಳೆಯ ಮೈಸೂರು ಸಂಸ್ಥಾನದ ನಕ್ಷೆಯಲ್ಲಿ ‘ಬಾಲಂ ಐಗೂರು’ ಎಂಬುದಾಗಿ ಉಲ್ಲೇಖಗೊಂಡಿವೆ. The Mysore Letters and Dispatches of The Duke of Wellington (೧೭೯೯-೧೮೦೫) ನಲ್ಲಿರುವ (Extract of a letter from Lient, colonel Meignan, to the Honourable Colonel Wellesley, Mangalore Dated April 19th 1800) ಪತ್ರದಲ್ಲಿಯೂ “ಬಲ್ಲಂ ರಾಜಾ” (Bullum Rajah) ಎಂಬುದಾಗಿ ಹೆಸರಿಸಿದೆ.[6] ಮೈಸೂರಿನ ಇತಿಹಾಸಕಾರ ಎಂ. ಶಾಮರಾಯರು ತಮ್ಮ Modern Mysore ಕೃತಿಯಲ್ಲಿ Among the refractory Palegars against whom military operations now became necessary was the Palegar Aigur or Manjarabad or Ballam Raja as he was varionsly called- ಈ ರೀತಿ ನಿರೂಪಿಸಿದ್ದಾರೆ. ಕರ್ನಾಟಕದ ಕೈಫಿಯತ್ತುಗಳಲ್ಲಿ ಮೆಕಂಜೀ ಸಂಪುಟ ೩೩೨ನೆ ವಸುಧಾರೆ ಗ್ರಾಮದ ಕೈಫಿಯತ್ತು ಮತ್ತು ೩೫೩ ನೆಯ ಮರದಾಳ ಕೈಫಿಯತ್ತಿನಲ್ಲಿಯೂ ಈ ಕುರಿತು ಹಲವು ಅಸ್ಪಷ್ಟ ಮಾಹಿತಿಗಳು ಕಂಡುಬರುತ್ತವೆ.[7]

ಬೇಲೂರು ಪಾಳೆಯಪಟ್ಟು

೩೩೨ ನೆಯ ಮೆಕಂಝಿ ಸಂಪುಟದ ವಸುಧಾರೆ ಗ್ರಾಮದ ಕೈಫಿಯತ್ತಿನಲ್ಲಿ.

……ಆಮೇಲೆ ರಾಮರಾಯರ ಪ್ರಭುತ್ವದಲ್ಲಿಯೂ ಬೇಲೂರು ಶೀಮೆಯು ಅಮರ ಮಾಗಣಿಯಾಗಿ ವಬ್ಬಕ್ಷತ್ರಿಯರ ವಿಕ್ರಮರಾಯನು ಆನೆಗೊಂದೀ ಸಂಸ್ಥಾನದಲ್ಲಿ ಬಹಳ ದಿವಸಾ ಕಾದುಕೊಂಡು ಯಿದ್ದದರಿಂದ ಯೀತಗೆ ತುಂಟರು ಯೀ ವಿಕ್ರಮರಾಯನು ರಾಮರಾಯನ ಕೆಳಗೆ ಪ್ರಭುತ್ವ ಮಾಡಿ ಆಮೇಲೆ ಸ್ವರ್ಗಸ್ಥನಾದನು. ಇವನಿಗೆ ಸಂತಾನವಿಲ್ಲವಾದ್ದರಿಂದ ಶೀಮೆಯಾವತ್ತು ಆನೆಗೊಂದಿಯವರು ಜಪ್ತಿ ಮಾಡಿಕೊಂಡರು. ಆಮೇಲೆ ಆನೆಗುಂದಿ ಸಂಸ್ಥಾನದಲ್ಲಿ ಸಂಗೀತಗಾರ ಬಿಕಾರಿ ರಾಮಪ್ಪ ಎಂಬುವನು ವಿಧ್ಯದಲ್ಲಿ ಅರಸುಗಳಿಗೆ ಮೆಚ್ಚಿಸಿದ್ದರಿಂದ ಅರಸುಗಳು ಯಿವನಿಗೆ ಬೇಲೂರು ಪೈಕಿ ಕಸಬಾ ಬೇಲೂರು ೪೦ ಸಾವಿರದ ಅಮರ ಮಾಗಣಿಯಾಗಿ ಕೊಟ್ಟರು. ಅವನು….. ವರುಷ ಪ್ರಭುತ್ವವನ್ನು ಮಾಡಿದನು. ಇವನಿಗೆ ಇಬ್ಬರು ಹೆಂಡತಿಯರು. ಇದರಲ್ಲಿ ಒಬ್ಬಳು ನಗರದ ಸಂಸ್ಥಾನದ ಪ್ರಧಾನಿ ಮಗಳು ೧.[8] ಯರಡನೆ ಯವಳು ವೈಗುರು (ಐಗೂರು) ಗೋಪಾಲನಾಯಕ ಯಂಬವನು ಅರಸು ಪ್ರಧಾನಿ ಮಗಳು ೨. ಯೀ ಮೇರಿಗೆ ಇರುವಾಗೆ ಬಿಕಾರಿ ರಾಮಪ್ಪಯ್ಯನು ಮೃತವಾದ ಮೇಲೆ ವೈಗೂರು (ಐಗೂರು) ಗೋಪಾಲ ನಾಯಕ ಯಂಬವನು ಶೀಮೆ ಯಾವತ್ತು ತಂನ ಸ್ವಾಧೀನ ಮಾಡಿಕೊಂಡು ೧ ವಂದು ವರುಷ ಪ್ರಭುತ್ವ ಮಾಡಿದನು….

ಬೇಲೂರು ನಾಯಕರ ಕುರಿತು ಶಾಸನಾಧಾರಗಳು

೧೫೬೫ರ ವಿಜಯನಗರ ಪತನದ ಅನಂತರ ಕರ್ನಾಟಕದ ಬಹು ಪ್ರದೇಶಗಳು ವಿವಿಧ ಪ್ರಾಂತ್ಯಾಡಳಿತದ ದೆಸೆಯಿಂದ ಪುಂಡರ ಧಾಳಿಗಳಿಗೆ ತುತ್ತಾದವು. ಆಯಾ ಸ್ಥಾನಿಕ ಬಲಾಢ್ಯ ಗುಂಪಿನವರು ರೈತರನ್ನೇ ಸೈನಿಕರನ್ನಾಗಿ ಪರಿವರ್ತಿಸಿಕೊಂಡು ಹೋರಾಟ ನಡೆಸುತ್ತಾ ಪ್ರಬಲ ರಾಗಿದ್ದರು. ಇವರು ತಮಗಿಂತ ಬಲಿಷ್ಟರು ಮೇಲೇರಿದಂತೆಲ್ಲಾ ಶರಣಾಗತರಾಗಿದ್ದುಕೊಂಡು ಅವರಿಗೆ ಕಪ್ಪ ಕಾಣಿಕೆಯಿತ್ತು ಅಧೀನರಾಗಿರುತ್ತಿದ್ದರು. ಬೇಲೂರು ಪ್ರಾಂತ್ಯವೂ ಈ ಸರಣಿಯಲ್ಲಿ ವಿಜಯನಗರದ ಅನಂತರ ಕೆಳದಿಯ ಸಾಮಂತವಾಗುಳಿಯಿತು. ಬೇಲೂರ ಪಾಳೆಯ ಪಟ್ಟು ಕುರಿತು ಮೂಲ ಇತಿಹಾಸದಲ್ಲಿ ಹಲವಾರು ಜಿಜ್ಞಾಸೆಗಳಿವೆ. ಶ್ರೀ ಮನ್ಮಹಾರಾಜರ ವಂಶಾವಳಿಯಲ್ಲಿ ಬಾಲಂ ಪಾಳೆಯಗಾರ ಮಂಚಯ್ಯ ನಾಯಕನ ಮಗ ಹಿರಿಯ ಸಿಂಗಪ್ಪನಾಯಕನು ‘ಮಣಿನಾಗಪುರ’ ನಾಮಾಂಕಿತದಲ್ಲಿ ಐಗೂರು ಸಂಸ್ಥಾನವನ್ನು ಆಳಿದವನೆಂದು ಹೇಳಿದೆ. ಈ ಪಾಳೆಯಪಟ್ಟಿಗೆ “ಬಲ್ಲಾ ಐಗೂರು” ಎಂಬುದಾಗಿಯೂ ಉದ್ಧರಿಸಿದೆ.[9]ಸಂಖ್ಯೆ ೩೩೨ನೇ ಮೆಕಂಜೀ ಸಂಪುಟ ಹಾಗೂ ಎ.ಕ.V (ಎಫಿಗ್ರಾಫಿಯಾ ಕರ್ನಾಟಿಕ ಮೊದಲ ಆವೃತ್ತಿ) ಸಂಪುಟದಲ್ಲಿ ಪ್ರಸ್ತಾಪಿಸಿದಂತೆ ರಾಮದಾಸನೆಂಬ ವಿಜಯನಗರದ ಸಂಗೀತ ವಿದ್ವಾಂಸನನಿಲ್ಲಿ ಮೂಲ ಪುರುಷನನ್ನಾಗಿಸಿದೆ.[10] ಈ ಕುರಿತ ವಂಶವೃಕ್ಷವನ್ನೂ ಅನುಬಂಧದಲ್ಲಿ ನೀಡಲಾಗಿದೆ. ಕೆಳದಿ ನೃಪವಿಜಯದಲ್ಲಿ ಕವಿ ಲಿಂಗಣ್ಣನು ೧೧ನೇ ಆಶ್ವಾಸದಲ್ಲಿ ಬೇಲೂರು ನಾಯಕರ ಕುರಿತು ಮಾಹಿತಿಗಳನ್ನು ಉಲ್ಲೇಖಿಸಿದ್ದಾನೆ. ಅಡಪ (ಹಡಪ) ಬಯ್ಯಪ್ಪನ ಮಗ ಎರ‍್ರ ಕೃಷ್ಣಪ್ಪ ನಾಯಕನು ಈ ಪಾಳೆಯ ಪಟ್ಟಿನ ಮೂಲ ಸಂಸ್ಥಾಪಕನೆಂಬುದಾಗಿ ಪ್ರಸ್ತಾಪಿಸಲಾಗಿದೆ. ಶ್ರೀರಂಗಪಟ್ಟಣದಲ್ಲಿ ನನ್ನ ಸಮೀಕ್ಷಾ ಸಂಶೋಧನೆಯಲ್ಲಿ ಲಭಿಸಿದ ಕೃಷ್ಣದೇವರಾಯನ ದಿನಚರಿ ಓಲೆಗರಿ ಹಸ್ತಪ್ರತಿಯಲ್ಲಿಯೂ ಬಯ್ಯಪ್ಪನಾಯಕನ ಸಂಗತಿಯು ಬಂದಿದೆ.

ಶಾಸನಾಧಾರದಲ್ಲಿ ಬೇಲೂರು ಬಲಂ ನಾಯಕರನ್ನು ಕುರಿತು ಅರಕಲಗೂಡು ಶಾಸನ ಸಂ.೨೦ ರಲ್ಲಿ “ಮಣಿನಾಗ ಪುರವರಾಧೀಶ್ವರ ಸಿಂಧುಗೋವಿಂದ ಧವಳಾಂಕಭೀಮ ದಿನಕರಗಂಡ ಬರೀದ ಸಪ್ತಾಂಗ ಹರಣ ಸಂಗ್ರಾಮ ಧನಂಜಯ ಸಾಹಸ ವಿಕ್ರಮಾರ್ಕ ದೀನರಾಧೇಯೇತ್ಯಾದಿ ಬಿರುದರಾಜಿ ವಿರಾಜಮಾನರಾದ” ಎಂಬುದಾಗಿ ವರ್ಣಿಸುತ್ತದೆ. ಹೊಳಲ್ಕೆರೆ ೨೧ನೇ ಶಾಸನದ ಮೇರೆಗೆ ಎರ‍್ರ ಕೃಷ್ಣಪ್ಪನಾಯಕನ ಮಗ ವೆಂಕಟಾದ್ರಿನಾಯಕನು ಹಡಪದವನಾಗಿದ್ದು ಅಮರ ಮಾಗಣಿಯಾಗಿ ಬಾಗೂರು ಸೀಮೆಯನ್ನು ಪಡೆದುಕೊಂಡನು. ಎ.ಕ. V ಹಾಸನ ೭; ಪರಿಷ್ಕೃತ VIII ಹಾಸನ ೯; ಎ.ಕ. V ಹಾಸನ ೨; ಪರಿಷ್ಕೃತ VIII ಹಾಸನ ೨ ರಲ್ಲಿ ಉಲ್ಲೇಖಿಸಿದ ಅಡಪ್ಪನ ಬಯ್ಯಪ್ಪ ಎಂಬುದರಲ್ಲಿ “ಅಡಪ್ಪ” ಎಂಬುದು “ಹಡಪ” ಎಂಬುದಾಗಿ ಡಾ. ಬಿ.ಆರ್. ಗೋಪಾಲ್‌ರವರು ಅಭಿಪ್ರಾಯಪಟ್ಟಿದ್ದಾರೆ. ಇದೇ ಶಾಸನಗಳಲ್ಲಿ ಹಾಸನ ಸೀಮೆಯನ್ನು ಕೃಷ್ಣಪ್ಪನಾಯಕನಿಗೆ “ಅಮರನಾಯಕತನ” ವಾಗಿ ನೀಡಿದ ಸಂಗತಿಯಿದೆ. ಎ.ಕ. V ಬೇಲೂರು ೧೨ IX ಪರಿಷ್ಕೃತ ಬೇಲೂರು ೬೬ರ ಶಾಸನದಲ್ಲಿ ‘ಹಡಪ’ ಪ್ರಸ್ತಾಪವಿದ್ದು ವೆಂಕಟಾದ್ರಿ ನಾಯಕನ ತಾತ ಪೋತನಾಯಕನೆಂದು ಉದ್ಗರಿಸಿದೆ. ಈ ಆಧಾರದಿಂದ ವಂಶವು ಈ ರೀತಿ ವ್ಯಕ್ತಪಡುತ್ತದೆ.

ಪೋತನಾಯಕ
|
ಎರ‍್ರ ಕೃಷ್ಣಪ್ಪನಾಯಕ
|
ವೆಂಕಟಾದ್ರಿನಾಯಕ

ಎ.ಕ.V ಹಾಸನ ೭; ಪರಿಷ್ಕೃತ VIII ಹಾಸನ ೯; ಎ.ಕ. ಹಾಸನ ೨; ಪರಿಷ್ಕೃತ VIII ಹಾಸನ ೨ ಎರ‍್ರ ಕೃಷ್ಣಪ್ಪನಾಯಕನನ್ನು ಬಯ್ಯಪ್ಪನಾಯಕನ ಮಗನೆಂದು ಉದ್ಧರಿಸಿ, ಎ.ಕ. ಪರಿಷ್ಕೃತ VIII ಹಾಸನ ೪೭ರ ಹೊಳೇನರಸೀಪುರದ ತಾಮ್ರ ಶಾಸನ (ಕಾಲ ೧೫೬೩) ದ ಪ್ರಕಾರ ಕೃಷ್ಣಪ್ಪನಾಯಕನ ವಂಶವು ಈ ರೀತಿಯಾಗಿದೆ.

ಗಿರಿಯಪ್ಪನಾಯಕ
|
ತಿಮ್ಮಪ್ಪನಾಯಕ
|
ಬಯ್ಯಪ್ಪನಾಯಕ
|
ಕೃಷ್ಣಪ್ಪನಾಯಕ

ಎ.ಕ.V ಬೇಲೂರು ೨೨ IV ಪರಿಷ್ಕೃತ ಬೇಲೂರು ೧೪೩ರ ಶಾಸನದಿಂದ ಕೃಷ್ಣಪ್ಪನಾಯಕನ ಪುತ್ರ ವೆಂಕಟಾದ್ರಿನಾಯಕನನ್ನು ಕುರಿತು ಹಲವಾರು ಸಂಗತಿಗಳು ೧೫೮೦ರ ಕಾಲಮಾನದ ವ್ಯತ್ಯಾಸದಲ್ಲಿ ಸುಮಾರು ೫೦ ವರ್ಷಗಳ ಅಂತರವು ಗೋಚರಿಸುತ್ತಿದ್ದು, ನಿರ್ಧಾರಕ್ಕೆ ಬರಲು ಅಸಾಧ್ಯವಾಗಿರುವುದರಿಂದ ಕ್ರಿ.ಶ. ೧೫೫೯ರ ಶಾಸನದಲ್ಲಿ ಉಕ್ತವಾಗಿರುವಂತೆ ಹಾಗೂ ಇದೇ ಪ್ರಥಮವಾಗಿದ್ದು ೧೫೫೫ ರಲ್ಲಿ ಬೇಲೂರು ನಾಯಕರ ವಂಶಪರಂಪರೆ ಆರಂಭಗೊಂಡಿತೆಂದು ಗೊತ್ತು ಮಾಡಬಹುದಾಗಿದೆ. ಎ.ಕ.V ಹಾಸನ ೪೧; VIII ಪರಿಷ್ಕೃತ ಆಲೂರು ೧ ವೆಂಕಟಾದ್ರಿ ನಾಯಕನ ಮಗ ಕೃಷ್ಣಪ್ಪನಾಯಕನನ್ನು ಹೆಸರಿಸಿದೆ. ಕೆಳದಿ ಶಿವಪ್ಪನಾಯಕನಿಂದ ವಿಜಯನಗರ ಶ್ರೀರಂಗರಾಯನಿಗೆ ಸಕ್ಕರೇಪಟ್ಟಣದ ಆಧಿಪತ್ಯ ನೀಡಿದಾಗ ಈತನ ಅಧೀನದಲ್ಲಿದ್ದಾಗಲೇ ದತ್ತವಾದ ಶಾಸನವಿರಬಹುದಾಗಿದೆ. ಎ.ಕ. V ಬೇಲೂರು ೨೨; IX ಬೇಲೂರು (ಪರಿಷ್ಕೃತ) ೧೪೬ರ ಶಾಸನದಲ್ಲಿ ಕೃಷ್ಣಪ್ಪನಾಯಕನ ಮಗ ವೆಂಕಟಾದ್ರಿನಾಯಕನು ೧೫೮೦ ರವರೆಗೆ ಆಳಿದನೆಂದು ಹೇಳಿದೆ. ಇದರಿಂದ ಯರ‍್ರ ಕೃಷ್ಣಪ್ಪನಾಯಕನ ಪುತ್ರ ವೆಂಕಟಾದ್ರಿನಾಯಕ ಹಾಗೂ ಈತನ ಮಗನೇ ಇಮ್ಮಡಿ ಕೃಷ್ಣಪ್ಪನಾಯಕ ಮತ್ತು ಈತನ ಮಗ ಇಮ್ಮಡಿ ವೆಂಕಟಾದ್ರಿ ನಾಯಕನೆಂಬುದಾಗಿಯೂ ವ್ಯಕ್ತವಾಗುತ್ತದೆ. ೧೬೨೨ ಮತ್ತು ೧೬೨೫ರ ಎ.ಕ. (ಪರಿಷ್ಕೃತ) ಹಾಸನ ೨೦೫ ಮತ್ತು ಅರಕಲಗೂಡು ೬ನೇ ಸಂಖ್ಯೆಗಳ ಶಾಶನಗಳಲ್ಲಿಯೂ ಇದರ ಪ್ರಸ್ತಾಪಗಳಿವೆ. ಈ ಕಾರಣದಿಂದ ಎ.ಕ. ಬೇಲೂರು ೨೨ ಮತ್ತು IV ಪರಿಷ್ಕೃತ ೧೪೬ (ಕ್ರಿ.ಶ. ೧೬೨೬) ರ ಶಾಸನಗಳಲ್ಲಿರುವ ಕೃಷ್ಣಪ್ಪನ ಪುತ್ರ ವೆಂಕಟಾದ್ರಿಯು ಇಮ್ಮಡಿ ಕೃಷ್ಣಪ್ಪ ನಾಯಕನಾಗಿದ್ದು ೧೬೨೫ರ ವರೆಗೂ ಇದ್ದುದ್ದರಿಂದ ಈ ತರುವಾಯ ಇಮ್ಮಡಿ ವೆಂಕಟಾದ್ರಿ ನಾಯಕನು ಉತ್ತರಾಧಿಕಾರಿಯಾಗಿ ಆಳಿದ್ದು ಕಂಡುಬರುತ್ತದೆ. ಎ.ಕ. V ಅರಕಲಗೂಡು ೮೩ VIII ಪರಿಷ್ಕೃತ ೮ ಇದಕ್ಕೆ ಸಮರ್ಥನೆ ನೀಡುವುದರಿಂದ ಎ.ಕ. V ಹಾಸನ ೪೧ VIII ಪರಿಷ್ಕೃತ ಆಲೂರು ೧ ರಲ್ಲಿ ಉಲ್ಲೇಖಿಸಿದ ಕೃಷ್ಣಪ್ಪನಾಯಕನೇ ಇಮ್ಮಡಿ ಕೃಷ್ಣಪ್ಪನಿರಬೇಕು. ಎ.ಕ. V ಅರಕಲಗೂಡು ೫೭ VIII ರಿವಿಜನ್ ಅದೇ ೭೯ ರಲ್ಲಿ ಕೃಷ್ಣಪ್ಪನಾಯಕನ ಪುತ್ರ ಲಕ್ಷ್ಮಪ್ಪನಾಯಕನ ಪುತ್ರ ನರಸಿಂಹನಾಯಕ ಎಂದಿದೆ. ಈತನಿಗೆ ರಂಗಪ್ಪನಾಯಕನೆಂಬ ಹಿರಿಯ ಸಹೋದರನಿರುವುದೂ ಕಂಡುಬರುತ್ತದೆ. ಹಾಸನ ಶಾಸನ ನಂ ೨೦೫; ಅರಕಲಗೂಡು ೬ರ ಲಕ್ಷ್ಮೀಪುರದ ಶಾಸನವು ೧೬೦೩ ರಲ್ಲಿ ಲಕ್ಷ್ಮಪ್ಪನಾಯಕನ ನಾಮಾಂಕಿತದಲ್ಲಿ ಹೊಸ ಗ್ರಾಮವಿರುವುದನ್ನು ಹೇಳುತ್ತದೆ, ಈತನು ನರಸಿಂಹನಾಯಕ ಪುತ್ರನಿರಬಹುದಾಗಿದೆ. ಎ.ಕ. XV ಹಾಸನ ೭೨ ಪರಿಷ್ಕೃತ VIII ಹಾಸನ ೫೫ರ ಮೇರೆಗೆ ರಂಗಪ್ಪನಾಯಕನ ಮಗ ನರಸಿಂಹ ನಾಯಕನು ಗ್ರಾಮವೊಂದನ್ನು ನೀಡಿದ ಉಲ್ಲೇಖವಿದೆ. ಉಪಲಬ್ಧವಿರುವ ಶಾಸನದಿಂದ ಬೇಲೂರು ನಾಯಕರ ವಂಶಾವಳಿ ಈ ಕೆಳಗಿನಂತೆ ಕಂಡುಬರುತ್ತದೆ.

07_270_MAM-KUH ಎ.ಕ. (ಪರಿಷ್ಕೃತ) VIII ಅರಕಲಗೂಡು ೧೬ರ ಹೆಬ್ಬಾಳೆ ಶಾಸನವು ಇದನ್ನು ಸಮರ್ಥಿಸುತ್ತದೆ. ಈ ನಾಯಕರು ಕಾಶ್ಯಪಗೋತ್ರದ ಆಪಸ್ತಂಭ ಸೂತ್ರದವರೆಂದು ಹೇಳಿಕೊಂಡಿದ್ದಾರೆ. ಶಾಸನಗಳಲ್ಲಿ ‘ಚಂದ್ರಶೇಖರ ಪ್ರಸನ್ನ’, ‘ವೆಂಕಟಾದ್ರಿ’, ‘ಶ್ರೀ ಕೃಷ್ಣ’ ಎಂಬ ಅಂಕಿತಗಳಿವೆ.

ಖಚಿತ ಆಕರಗಳು ಸಂಶೋಧನೆಯಲ್ಲಿ ಕಂಡು ಬರುವವರೆಗು ಪ್ರಕೃತ ಎ.ಕ. ಸಂಪುಟ ೫ ಹಾಗೂ ತುಲನಾತ್ಮಕ ವಿವರಣೆಗಳೊಂದಿಗೆ ಬೇಲೂರು ಪಾಳೆಯ ಪಟ್ಟಿನ ಇತಿಹಾಸವನ್ನು ಸಿದ್ಧಪಡಿಸಲಾಗಿದೆ. ಎರ‍್ರ ಕೃಷ್ಣಪ್ಪನಾಯಕನ ರಾಜಕೀಯ ಇತಿಹಾಸಗಳು ಅಸ್ಪಷ್ಟವಾಗಿವೆ, ಈತನ ಅನಂತರ ೧೫೬೬ ರಿಂದ ೧೫೮೪ರವರೆಗೆ ವೆಂಕಟಾದ್ರಿನಾಯಕನೂ ಆಳಿದನು. ಹಲವು ಮೂಲಗಳು ಈತನಿಗೆ ಕೃಷ್ಣಪ್ಪನಾಯಕ ಹಾಗೂ ಚಿಕ್ಕನಾಯಕನೆಂಬ ಇಬ್ಬರು ಮಕ್ಕಳಿರುವುದನ್ನು ಹೇಳುತ್ತವೆ,[11] ಕ್ರಿ.ಶ. ೧೫೮೮ ರಿಂದ ೧೬೨೫ರ ವರೆಗೆ ಆಡಳಿತ ನಡೆಸಿದ ಕೃಷ್ಣಪ್ಪನಾಯಕನ ಕಾಲದಲ್ಲಿ ಮೈಸೂರಿನ ಅರಸರೊಂದಿಗೆ ವೈಮನಸ್ಸುಂಟಾಯಿತು. ೧೫೭೮ ರಿಂದ ೧೬೧೭ರವರೆಗೆ ಮೈಸೂರು ರಾಜ ಒಡೆಯರ ಅಧೀನದಲ್ಲಿತ್ತು. ೧೬೦೮ರಲ್ಲಿ ಬೇಲೂರಿನ ಕೃಷ್ಣಪ್ಪನಾಯಕ, ಗ್ರಾಮದ ವೀರರಾಜಯ್ಯ, ಮೂಗೂರು ಬಾಲಲೋಚನೆ, ಯಳಂದೂರು ಇಂಮ್ಮಡಿ ರಾಜನಾಯಕ ಮತ್ತು ಉಮ್ಮತ್ತೂರು ಮಲ್ಲರಾಜಯ್ಯ ಮುಂತಾದವರು ಸೇನೆಯೊಂದಿಗೆ ಶ್ರೀರಂಗಪಟ್ಟಣವನ್ನು ಸಾಧಿಸಲು ಕುಣಿಗಲ್‌ನಲ್ಲಿ ಸೇರಿಕೊಂಡು ಪಿತೂರಿ ನಡೆಸಿದ್ದು, ರಾಜ ಒಡೆಯರು ಇದನ್ನು ಎದುರಿಸಿ ಹಿಮೆಟ್ಟಿಸಿದ್ದರಿಂದ ಬೇಲೂರು ಗ್ರಾಮ ಇವರ ಸ್ವಾಧೀನವಾಯಿತು.[12] ಶ್ರೀಮನ್ಮಹಾರಾಜರ ವಂಶಾವಳಿ ಭಾಗ I ಪುಟ ೪೪; ಇತರ ಮೂಲವೊಂದರಲ್ಲಿ ೧೬೪೦ ರವರೆಗೂ ಬೇಲೂರು ಬಿಜಾಪುರದ ಆಧೀನದಲ್ಲಿರುವುದು ಕಂಡು ಬರುತ್ತದೆ. ೧೬೨೬-೧೬೪೩ ರಲ್ಲಿದ್ದ ವೆಂಕಟಾದ್ರಿನಾಯಕನನ್ನು “ತುರುಕದಳ ಮಿರಾಡ” ಎಂದು ಕರೆಯಲಾಯಿತು. ೧೬೩೪ ರಲ್ಲಿ ಮೈಸೂರಿನ ಚಿಕ್ಕದೇವರಾಯ ಒಡೆಯರು ಐಗೂರು ಕೃಷ್ಣಪ್ಪನಾಯಕ ಹಾಗೂ ಬೇಲೂರು ವೆಂಕಟಾದ್ರಿನಾಯಕನನ್ನು ನಿಗ್ರಹಿಸಿದ ಸಂಗತಿ ಇದೆ.

ಕೆಳದಿ ನೃಪವಿಜಯದಲ್ಲಿ ಬೇಲೂರು

೧೬೪೩-೧೬೫೪ ರಲ್ಲಿದ್ದ ಕೃಷ್ಣಪ್ಪನಾಯಕನ ಕಾಲದಲ್ಲಿ ೧೬೪೫-೧೬೬೦ ರವರೆಗೆ ಕೆಳದಿ ರಾಜ್ಯದ ಶಿವಪ್ಪನಾಯಕನನ್ನು ಕುರಿತು ಕೆಳದಿ ನೃಪವಿಜಯದಲ್ಲಿ ಕವಿ ಲಿಂಗಣ್ಣನೇ ನಿರೂಪಿಸಿದಂತೆ.

ವಸುಧಾರೆಯ ಕೋಂಟೆಯನಾ
ವಸುಧೀಶಂ ಕೊಂಡು ಸಕ್ಕರೆಯ ಪಟ್ಟಣಮಂ
ಮಿಸುಗುವ ಹಾಸನ ಬೇಲೂ
ರಸದೃಶಕೋಂಟೆಗಳನಾನೃಪಂ ವಶಗೈದು
ಮಾಯಾವಾದಿಗಳಧಿಕ ಸ
ಹಾಯದೆ ಬಹು ಸೈನ್ಯಸಹಿತಿದಿರ್ಚಿದ ರಣಗಾಂ
ಗೇಯ ಬೇಲೂರ ಕೃಷ್ಣಪ
ನಾಯಕನಂ ಯುದ್ಧ ರಂಗದೊಳ್‌ಸೋಲಿಸಿದಂ
ಮಗುಳಾ ಕೃಷ್ಣಪ್ಪರಾಯನ
ಮಗನೆನಿಸುವ ವೆಂಕಟಾದ್ರಿನಾಯಕನುರ್ವಿ
ಮಿಗೆ ಕೈಗೈಯಲ್ಕಂ ಪಿಡಿ
ದಗಣಿತ ತತ್ಸೈನ್ಯ ಜಾಲಮಂ ನೋಯಿಸಿದಂ

ಕ್ರಿ.ಶ. ೧೬೪೩ ರಿಂದ ೧೬೫೪ ರವರೆಗೆ ಕೃಷ್ಣಪ್ಪನಾಯಕನೂ ೧೬೫೫ ರಿಂದ ೧೬೭೦ ರವರೆಗೆ ವೆಂಕಟಾದ್ರಿನಾಯಕನೂ ಇರುವುದು ವ್ಯಕ್ತಪಡುತ್ತದೆ. ಕೆಳದಿ ನೃಪವಿಜಯ ಕ’ ಪ್ರತಿಯಲ್ಲಿ ಸರ್ವಜಿತ್ಸಂವತ್ಸರದಿಂ ಸಾಹಸಂಗೈದು ಖರ ಸಂವತ್ಸರದಿ ಮತ್ತು ಹೇವಿಳಂಬಿ ಸಂವತ್ಸರದೊಳ್‌ಎಂಬುದಾಗಿಯೂ ಕಾಲಮಾನದ ಉಲ್ಲೇಖವಿದೆ. ಕೆ.ನೃ.ವಿ.ದಲ್ಲಿ ಉಕ್ತಿಸಿದ ಶಿವಪ್ಪನಾಯಕನ ಪಟ್ಟಾಭಿಷೇಕ ಕಾಲ ಶಾಲಿವಾಹನ ಶಕ ೧೫೬೮ ಪಾರ್ಥಿವ ಸಂವತ್ಸರವಾಗುತ್ತದೆ. ಇಲ್ಲಿಂದ ಗಣನೆಗೆ ತೆಗೆದುಕೊಂಡಲ್ಲಿ ಸರ್ವಜಿತ್‌ಸಂವತ್ಸರ ಕ್ರಿ.ಶ. ೧೬೪೮, ಖರ ಸಂವತ್ಸರ ೧೬೫೨, ಹೇವಿಳಂಬಿ ಸಂ, ೧೬೫೮ ಆಗುತ್ತದೆ. ಇದರ ಮೇರೆಗೆ ೧೬೪೮ ರಿಂದ ೧೬೫೨ ರವರೆಗೆ ಕೃಷ್ಣಪ್ಪನಾಯಕನನ್ನು ಕೆಳದಿ ಅರಸು ಸೋಲಿಸಿದ್ದು (ಸಕ್ಕರೇ ಪಟ್ಟಣ, ಹಾಸನ ಬೇಲೂರನ್ನು ಅಧೀನಪಡಿಸಿಕೊಂಡು) ೧೬೫೮ ರಲ್ಲಿ ವೆಂಕಟಾದ್ರಿ ನಾಯಕನನ್ನು ಜಯಿಸಿರುವುದು ಕಂಡುಬರುತ್ತದೆ.

ಶಿವತತ್ವರತ್ನಾಕರದಲ್ಲಿ ಶಿವಪ್ಪನಾಯಕನ ಮೈಸೂರು ದಂಡಯಾತ್ರೆ

ಪ್ರಸಿದ್ಧ ವಿಶ್ವಕೋಶ ಹಾಗೂ ಕೆಳದಿ ಅರಸು ಬಸವರಾಜ ವಿರಚಿತ ಶಿವತತ್ವರತ್ನಾಕರದಲ್ಲಿ-

ಶಾಸ್ತ್ರಲೋಕಾಗತೈರೇವ ಮುಪಾಯೈಶ್ಶಿವಭೂಪತಿಃ ||೧೦೨||
ವೇಲಾಪುರಾಖ್ಯಂ ಪ್ರಾಕಾರಂ ಸಹಸಾ ಸ್ವಯಮಗ್ರಹೀತ್ |
ತತೊsಗ್ರಹೀತರೇಣೈವ ರಿಪುಂ ತನ್ಮಧ್ಯವರ್ತಿನಮ್ ||೧೦೩||
ಶ್ರೀರಂಗಸಾರ್ವಭೌಮಸ್ತಂ ಶೃತ್ವೋದಂತಂ ಪ್ರಹರ್ಷಿತಃ |
ವೇಲಾಪುರಂ ಸಮಾಯಾತಃ ಶಿವಭೂಪದಿದೃಕ್ಷಯಾ ||೧೦೪||
ತತಸ್ಸಮಾಗತಸ್ತೇನ ಪ್ರಾಪ್ಯ ತದ್ದರ್ಶನೋತ್ಸವಮ್ |
ಸಂತೋಷಿತ: ಪರಾಕ್ರಾಂತಃ ಸ್ಥಾನಪ್ರತ್ಯರ್ಪಣಾದ್ಬಹು ||೧೦೫||
ಆದಿಶದ್ಬಿರುದಾನ್ಯಸ್ಮೈ ಸಾರ್ವಭೌಮೋ ಮಹೀಭೃತೇ |
ರಾಮಬಾಣಭಿಧಾನಂ ಚ ವಾರಣಂ ಪರವಾರಣಮ್ || ೧೦೬ ||
ಅಮೂಲ್ಯಮಿಂದ್ರನೀಲಸ್ಯ ಕರ್ಣಾಭರಣಮೇವಚ |
ಮುಕ್ತಾಫಲಮನರ್ಘಂ ಚ ಬಿರುದೇ ಶಂಕ ಚಕ್ರಕೇ || ೧೦೭ ||
ಜಗಜ್ಝಂಪಾಭಿಧಂ ಛತ್ರಂ ಶಾತ್ರವಂ ಚಾಪಿ ಮಸ್ತಕಮ್ |
ಏವಮಾದೀನಿ ಬಿರುದಾನ್ಯರ್ಪಯಯಿತ್ವಾಂ ಶುಕಾದಿಭಿಃ || ೧೦೮ ||
ಬಹುಧಾ ಮಾನಯಾಮಾಸ ಶಿವಭೂಪಂ ಮಹೀಪತಿಃ |
ಕೀರ್ತ್ಯಾ ಶಿವಮಹೀಪಾಲಃ ಸ್ಥಾನಪ್ರತ್ಯರ್ಪಣೋತ್ಥಯಾ || ೧೦೯ ||
ಸಾರ್ವಭೌಮಃ ಪರಾಕ್ರಾಂತ ನಿಜಸ್ಥಾನಾದಿಕಸ್ತಥಾ |
ತೌಚ ಸ್ವಸ್ವೇಪ್ಸಿತಾವಾಪ್ತ್ಯಾ ತದಾಭೂತಂ ಪ್ರಹರ್ಷಿತೌ || ೧೧೦ ||[13]

ಲಿಂಗಣ್ಣ ಕವಿಯ ಕೆಳದಿ ನೃಪವಿಜಯದಲ್ಲಿ

ವ|| ಇಂತು ನೆಗಳ್ತೆವೆತ್ತ ಭುಜಬಲಪ್ರತಾಪಾತಿಶಯದಿಂದ ಸದ್ಧರ್ಮದಿಂ ರಾಜ್ಯವ ನಾಳುತಿರ್ದಾ ಶಿವಪ್ಪನಾಯಕಂ ವಿಕಾರಿಸಂವತ್ಸರದಲ್ಲಿ ರಾಯಸಂಸ್ಥಾನವನು ದೂರಿಸಲ್ವೇಳ್ಕಂದು ಮನಂದಂದು ಸೋದೆ ಬಿಳಿಗೆ ತರಿಕೆರೆ ಹರಪುರ ಮುಂತಾದ ನಾಡದೊರೆಗಳ ಸೈನ್ಯ ಸ್ವಸೈನ್ಯಂ ವೆರಸು ತೆರಳ್ದು ಬೇಲೂರಂ ತೆಗೆದುಕೊಂಡು ಶ್ರೀರಂಗರಾಯರ್ಗಿತ್ತು ರಾಯಸಂಸ್ಥಾನಮಂ ನೆಲೆಗೊಳಿಸಿ ನಿಲಿಸಿ ತದ್ರಾಯರಿಂ ಶಂಖ ಚಕ್ರ ಸ್ಥೂಲ ನೀಲ ಪರಿಶೋಭಿತ ವಜ್ರ ಖಚಿತ ಕರ್ಣಾಭರಣಂ ಮುಂತಾದ ಬಿರುದುಗಳಂ ಪಡೆದು ರಾಮಬಾಣನೆಂಬಾನೆಯಂ ಕೊಡಲದಂ ಪರಿಗ್ರಹಿಸಿ ನಿಲಿಸಿ ಪಟ್ಟಣದ ಮುಖಕ್ಕೆ ದಂಡಂ ತೆರಳ್ದೈದಿಗ್ರಾಮದ ಸಮೀಪಮಂ ಸಾರ್ದು ಪಾಳೆಯವನಿಳಿದಿರಲಾ ಪ್ರಸ್ತಾವದೊಳ್.

ಚಂ|| ಮಾ|| ಘನತರದುರ್ಮದಾಂಧ ಮಹಿಸೂರ ಮಹೀಪನ ನೇಮದಿಂ
ವನದಿ ಯುಗಾಂತದೊಳ್ ಕವಿವವೊಲ್‌ ಬಹುಸೈನ್ಯ ಸಮೇತನಾಗಿ ಭೋಲಿಕೆ ನೊದವಿ
ತನ್ನುವಂ ಪಿಡಿಯಲೈದಿದ ತ್ದಳವಾಯಿ ಹಂಪವ
ರ್ಯನನೆಸೆವಾಜಿಯೊಳ್ ಪಿಡಿದು ತಾಂ ಜಯಲಕ್ಷ್ಮಿಯನಾಂತನಾ ನೃಪ. ಕೆ.ನೃ.ವಿ. [14]

ಶಿವತತ್ವರತ್ನಾಕರ ಹಾಗೂ ಕೆಳದಿ ನೃಪವಿಜಯದಲ್ಲಿ ಪ್ರಸ್ತಾಪಿಸಿದಂತೆ ಬೇಲೂರನ್ನು ಕುರಿತು ಹಲವು ಮಾಹಿತಿ ಸಿಕ್ಕುತ್ತವೆ. ಕೆ.ನೃ.ವಿ.ನಲ್ಲಿ ಹೇಳಿದ ವಿಕಾರಿ ಸಂವತ್ಸರ ಅದೇ ಕೃತಿಯಲ್ಲಿರುವ ಮಾಹಿತಿಯಂತೆ ಕ್ರಿ.ಶ. ೧೬೬೦ ಆಗುತ್ತದೆ. ಪ್ರಸಿದ್ಧ ಅಧಿಪತಿ ಶಿವಪ್ಪನಾಯಕನು ವಿಜಯನಗರದಿಂದ ಆಶ್ರಯ ಪಡೆಯಲು ಕೆಳದಿ ಅಧಿಪತಿಗೆ ಮೊರೆ ಹೊಕ್ಕ ಶ್ರೀರಂಗರಾಯನಿ ಗೋಸುಗವೇ ಬೇಲೂರನ್ನು ಸ್ವಾಧೀನಪಡಿಸಿಕೊಂಡು ಸಕ್ಕರೆಪಟ್ಟಣದ ಆಧಿಪತ್ಯ ನೀಡಿರುವುದು ಕಂಡು ಬರುತ್ತದೆ, ಎ, ಕ, V ಬೇಲೂರು ೮೧-೮೨ರ ಶಾಸನಗಳಲ್ಲಿಯೂ ಈ ಕುರಿತು ಮಾಹಿತಿ ಲಭಿಸುತ್ತದೆ,[15] ಕೆ.ನೃ.ವಿ. “ಗಮ” ಪ್ರತಿಯಲ್ಲಿಯೂ ಇದಕ್ಕೆ ಸಮರ್ಥನೆಯಿದೆ. ಶ್ರೀಮನ್ಮಹಾರಾಜನ ವಂಶಾವಳಿಯಲ್ಲಿ ೧೬೬೪ರಲ್ಲಿ ಮೈಸೂರಿನ ದೊಡ್ಡದೇವರಾಯ ಒಡೆಯನು ಕೆಳದಿ ಶಿವಪ್ಪನಾಯಕನಿಂದ ಹಾಸನ, ಸಕ್ಕರೇಪಟ್ಟಣ, ವಸ್ತಾರೆಗಳನ್ನು ಜಯಿಸಿ ಖಂಡಣಿ ಹಣ ಬರುವಂತೆ ಏರ್ಪಡಿಸಿದನೆಂದು ಹೇಳುತ್ತದೆ. ಆದರೆ ಲಭಿಸಿದ ಆಕರಗಳು ೧೬೬೦ರಲ್ಲಿ ಬೇಲೂರು ಹಾಗೂ ಮೈಸೂರನ್ನು ಶಿವಪ್ಪನಾಯಕನು ಸಾದಿಸಿರುವುದಕ್ಕೆ ಸಮರ್ಥನೆ ನೀಡುತ್ತವೆ. ಲಂಡನ್ ಪ್ರತಿ ಹೊರತಾಗಿ “ಮ” ಪ್ರತಿಯೂ ಇದನ್ನು ದೃಢೀಕರಿಸುತ್ತದೆ. ದಿ ಆನಲ್ಸ್‌ಆಫ್ ಮೈಸೂರ್‌ರಾಯಲ್ ಫ್ಯಾಮಿಲಿಯಲ್ಲಿ ದಳವಾಯಿ ಕುಮಾರಯ್ಯನು ಶಿವಪ್ಪನನ್ನು ಸೋಲಿಸಿದನೆಂದು ಹೇಳುತ್ತದೆ. ಕುಮಾರಯ್ಯನ ಹೆಸರು ಎಲ್ಲಿಯೂ ಕಂಡುಬರುವುದಿಲ್ಲವೆಂದು ಮೈಸೂರು ಪುರಾತತ್ವ ವರದಿ ೧೯೪೨ ತಿಳಿಸುತ್ತದೆ. ಹಲವು ಇಂಗ್ಲೀಷ್ ದಾಖಲೆಗಳು ನೀಡಿದ ಸಮರ್ಥನೆಯೂ ಗಮನಾರ್ಹವಾಗಿದೆ[16] ಅದೇ ಕೆ.ನೃ.ವಿ.ದಲ್ಲಿ ಈ ಕೆಳಗಿನಂತೆ ಇದೆ.

………..ಪಟ್ಟಣದವರ್ ಮೇರೆವರಿದೆಡೆಯಾಡದಂತು ಶ್ರೀರಂಗರಾಯರ ಸಮೀಪದೊಳ್ ಗಡಿಮುಖದೊಳ್ ಸೈನ್ಯ ಸಹಿತಮಳಿಯ ಶಿವಲಿಂಗನಾಯಕನಂ ನಿಲಿಸಿ ಪರಾಕ್ರಮಾತಿಶಯದಿಂ ರಾಜ್ಯಂಗೆಯ್ಯುತಿರ್ದನಂತುಮಲ್ಲದೆಯುಂ

ಇದರಿಂದ ವಿಜಯನಗರ ಶ್ರೀರಂಗರಾಯನಿಗೆ ಮೈಸೂರು ಅರಸರಿಂದ ಉಪಟಳವಾಗದಂತೆ ಕೆಳದಿ ಇಮ್ಮಡಿ ವೆಂಕಟಪ್ಪನಾಯಕನ್ನು ಶಿವಲಿಂಗನಾಯಕನ ಮುಖಾಂತರ ೧೬೬೧-೬೨ ರಲ್ಲಿ ಗಡಿಯಲ್ಲಿ ಭದ್ರತಾ ಪಡೆಯನ್ನಿಟ್ಟಿದ್ದನು. ೧೬೬೪ ರಲ್ಲಿ ಬೇಲೂರಿನ ರಕ್ಷಣೆಗಾಗಿ ಕೆಳದಿ ಸೋಮಶೇಖರನಾಯಕನು ಮೈಸೂರವರನ್ನು ಹಿಮ್ಮೆಟ್ಟಿಸಿದನು.

ಬೇಲೂರು ಕೃಷ್ಣಪ್ಪನಾಯಕ IV (?)

೧೬೮೨-೮೩ ರಲ್ಲಿ ಬೇಲೂರು ಕೃಷ್ಣಪ್ಪನಾಯಕನು ಮೈಸೂರು ಅರಸರನ್ನು ಕಡೆಗಣಿಸಿ ಚಿಕ್ಕದೇವರಾಜನು ಮರಾಠರೊಡನೆ ಯುದ್ಧಕ್ಕೆ ತೊಡಗಿದಾಗ ಕೆಳದಿ ಅರಸರೊಂದಿಗೆ ಸೇರಿ ಮೈಸೂರು ಸೈನ್ಯವನ್ನು ಎದುರಿಸಿದನು. ೧೬೯೮ರಲ್ಲಿ ಚಿಕ್ಕ ದೇವರಾಜನಿಂದ ಬೇಲೂರ ತಿರುಗಿ ಆಧೀನಕ್ಕೆ ಬಂದಿತು. ಅಂತೆಯೇ ೧೬೯೩ ರಲ್ಲಿ ಮೈಸೂರಿನ ಹಲವು ಪ್ರದೇಶಗಳೊಂದಿಗೆ ಬಾಲಂ ನಾಯಕರ ಆಧೀನದಲ್ಲಿದ್ದ ೭೦೦೦ ಸೀಮೆ ಪ್ರದೇಶವು ಚಿಕ್ಕದೇವರಾಜ ಒಡೆಯರು ಹಾಗೂ ಕೊಡಗಿನ ದೊಡ್ಡವೀರಪ್ಪ ಒಡೆಯರ ಧಾಳಿಗೆ ತುತ್ತಾಯಿತು. ೧೬೯೪ ರಲ್ಲಿ ಕೆಳದಿ ಮತ್ತು ಮೈಸೂರಿನ ಒಡೆಯರಿಂದ ಬಾಲಂ ನಾಯಕರಿಗೆ ಆರುನಾಡುಗಳು ಒಪ್ಪಂದದ ಮುಖಾಂತರ ಲಭಿಸಿದುವು.[17]

ಕವಿ ಲಿಂಗಣ್ಣನ ಕೃತಿಯಲ್ಲಿ ಬೇಲೂರು ಅರಕಲಗೂಡು ಇತಿಹಾಸಗಳು

ಕೆಳದಿ ನೃಪವಿಜಯ ದಶಮಾಶ್ವಾಸದಲ್ಲಿ –

ಇಂತು ಬೇಲೂರ ಸಂಸ್ಥಾನದೊಳುನ್ಮದಾವಸ್ಥೆಯಿಂದ ವ್ಯವಸ್ಥಿತವಾಗಿ ವರ್ತಿಸುತಿರ್ದ ವೆಂಕಟದ್ರಿನಾಯಕನಂ ಕದಲ್ಚಿ ತದನುಜ ಗೋಪಾಲನಾಯಕನಂ ಸಂಸ್ಥಾನದೊಳ್ ನಿಲಿಸಲ್ ತದೀಯನಿಯೋಗಿ ಮಲ್ಲಪನ ಕುಮುಂತ್ರದಿಂದೈದಿದಮಾಯಾವಿಗಳ ಸೈನ್ಯಮಂ ಕೂಡಿಕೊಂಡೈದಿದ ಸುಬ್ಬರಾಯನೆಂಬ ಸೇನಾಧಪತಿಯಂ ಅರಾಯಪಾಳ್ಯದ ಚನ್ನವೀರಪ್ಪನ ಮುಖದಿಂ ರಣರಂಗದದೊಳ್ಪಿಂದೆಗೆಸಿ ಗೋಪಾಲನಾಯಕನಂ ಸಂಸ್ಥಾನದೊಳ್ ನಿಲಿಸೆ ಪರಮ ಪ್ರಖ್ಯಾತಿಯಂ ಪಡೆದನಂತುಮಲ್ಲದೆಯುಂ[18] ಕೆಳದಿ ನೃಪವಿಜಯದಲ್ಲಿ ಪ್ರಸ್ತಾಪಿಸಿದ ಬೇಲೂರು ಗೋಪಾಲನಾಯಕನು ವೆಂಕಟಾದ್ರಿನಾಯಕನ ಅನುಜನಾಗಿರುವುದು ವ್ಯಕ್ತಪಡುತ್ತದೆ. ಶಾಸನಗಳಲ್ಲಿ ಕಂಡುಬಾರದಿರುವ ಈತನು ಕ್ರಿ.ಶ. ೧೭೦೮-೧೭೫೧ ರಲ್ಲಿದ್ದಿರಬಹುದೆಂದು ತೋರುತ್ತದೆ. ಈತನ ಹೆಸರು ವಂಶಾವಳಿಯಲ್ಲಿಯೂ ಬಾರದಿರುವುದು ಗಮನಾರ್ಹವಾಗಿದೆ.

ಏಕಾದಶಾಶ್ವಾಸದಲ್ಲಿ :

ವರನಾನಾಜೀರಾಯನ
ನಿರೂಪದಿಂದಧಿಕಮಾದ ಸೈನ್ಯಸಮೂಹಂ |
ವೆರಸು ಗೋಪಾಲರಾಯಂ
ತೆರಳ್ದೈತಂದೊಡನೆ ನಿಲಲವಂ ಗಡಿಮುಖದೊಳ್ || ೭೫ ||

ವರ ಮೈಸೂರು ಮುಖಕ್ಯಂ
ಮೆರೆವಾ ಗೋಪಾಲರಾಯನಂ ಬಲಸಹಿತಂ |
ತೆರಳಿಸಿ ನಿಜರಾಜ್ಯವನಂ
ದುರೆ ರಕ್ಷಿಸಿ ಜಸವನಾಂಕನಾ ನೃಪತಿಲಂ || ೭೯ ||

ಇಂತು ದಾಳಿಯಿಡುತ್ರೈದಿದ ಗೋಪಾಲರಾಯನಂ
ಹೊರದೆಗೆಸಿ ರಾಜ್ಯಂಗೆಯ್ಯುತ್ತಿರ ಲೊಂದವಸರದೊಳ್ ||
ಬೇಲೂರು ಕೃಷ್ಣಪೇಂದ್ರಂ

ಮೂಲಚ್ಯುತನಾಗಿ ಬಂದು ಕೊಡಗಿನ ದೆಸೆಯಿಂ |
ಮೇಲಹ ಕಳಸದ ಕೋಟೆಯೊ
ಳಾಲೋಚಿಸುತಲ್ಲಿ ನಿಂದು ತನ್ನಯ ಕಥೆಯಂ || ೮೧ ||

ಚನ್ನಬಸವೇಂದ್ರನೆಡೆಗಂ
ಬಿನ್ನಪವಂ ಬರೆದು ನಿಮ್ಮ ಪೊಂದಿದ ಸುತನಾ |
ದೆನ್ನಂ ಸಂಸ್ಥಾನದೊಳಂ
ಚೆನ್ನಾಗಿರೆ ನಿಲಿಸೆ ಪೊರೆಯಬೇಹುದೆನುತ್ತುಂ || ೮೨ ||

ಬಿನ್ನವಿಸಿ ಕಳುಪೆ ಲಾಲಿಸಿ
ತನ್ನಂ ಮರೆವೊಕ್ಕನಾವನಾಗಿರಲವನಂ |
ನನ್ನಿಯುದ್ಧರಿಪುದಿದು ನೃಪ
ರನ್ನರ್ಗ ನೀತಿಯೆಂದು ನಿಶ್ಚಯಿಸುತ್ತುಂ || ೮೩ ||

ಇಂತೆಂದು ನಿಶ್ಚಯಂಗೆಯ್ದೊಡನೆ ರಾಯಸದ ಶಂಕರನಾರಾಯಣಯ್ಯನೊಡನೆ ಭೂರಿ ಸೈನ್ಯಮಂ ತೆರಳ್ಚಿಸಿ ಕಳುಹಿ ಬಲಮಂ ವೇಢೈಸಿದ ಕೊಡಗ ಸೈನ್ಯಮಂ ಪಿಂದೆಗೆಸಿಯಾ ಕೊಡಗರ ವೀರರಾಜನಂ ನಾನಾ ವಿಧ ನಯ ಭಯೋಕ್ತಿಗಳಿಂದೊಡಬಡಿಸಿ ಕುಮಾರ ಕೃಷ್ಣಪ್ಪನಾಯಕನಂ ಭಲ್ಯದಿಂ ಹೊರದೆಗೆಸಿ ತಮ್ಮಂ ಮರೆವೊಕ್ಕ ಕೃಷ್ಣಪ್ಪನಾಯಕನಂ ಬೇಲೂರ ಸಂಸ್ಥಾನದ ರಾಜತ್ವಕ್ಕೆ ನಿಲಿಸೆ ಪರಮ ಪ್ರಖ್ಯಾತಿಯಂ ಪಡೆದನಂತುಮಲ್ಲದೆಯುಂ[19]

ಬೇಲೂರು ಪಾಳೆಯಪಟ್ಟಿನ ಅಂತ್ಯ

ಕ್ರಿ.ಶ. ೧೬೭೨-೧೬೯೨ ರಲ್ಲಿ ಬೇಲೂರು ನಾಯಕರು ಕೆಳದಿ ರಾಣಿ ಚೆನ್ನಮ್ಮಾಜಿ ಹಾಗೂ ಗೋಲ್ಕೊಂಡ, ಬಿಜಾಪುರದವರೊಂದಿಗೆ ಕೂಡಿಕೊಂಡು ವಸುಧಾರೆ ಮತ್ತು ಹಲವು ಪ್ರಾಂತಗಳನ್ನು ಮೈಸೂರಿಂದ ವಶಪಡಿಸಿಕೊಂಡರು.[20] ೧೬೯೩-೧೭೦೦ ರಲ್ಲಿ ಬೇಲೂರಿಗೆ ಸೇರಿದ ೭೦೦೦ ಸೀಮೆಗಳು[21] ಹಾಗೂ ಶನಿವಾರಸಂತೆ ಹೋಬಳಿಯು ಮೈಸೂರು ಹಾಗೂ ಕೊಡಗಿನ ಸೈನ್ಯದ ಧಾಳಿಗೆ ತುತ್ತಾಯಿತು. ೧೬೯೪ರಲ್ಲಿ ಕೆಳದಿ ಮತ್ತು ಮೈಸೂರಿನ ಒಪ್ಪಂದದಲ್ಲಿ ಬಾಲಂ ನಾಯಕರಿಗೆ ಆರು ನಾಡುಗಳು ಲಭಿಸಿದುವು. ೧೬೮೫ ರಿಂದ ೧೬೯೨ ರವರೆಗೆ ಕೃಷ್ಣಪ್ಪನಾಯಕನೂ ೧೭೦೮ ರಿಂದ ೧೭೫೧ ರವರೆಗೆ ವೆಂಕಟಾದ್ರಿನಾಯಕನೂ ಅದಿಕಾರ ನಡೆಸಿದರು. ೧೭೬೩ ರಲ್ಲಿ ೭೦೦೦ ಸೀಮೆಯ ಭಾಗವೊಂದು ಬೇಲೂರಿನ ಕೈಬಿಟ್ಟು ಹೈದರನ ವಶವಾಯಿತು. ಈ ನಾಯಕರು ನವಾಬಹೈದರನಿಗೆ ವಾರ್ಷಿಕವಾಗಿ ೫೦೦೦ ಪಗೋಡ ಪೊಗದೆ ಸಲ್ಲಿಸುವಂತಾಯಿತು. ೧೭೯೨ ರಲ್ಲಿ ಕೃಷ್ಣಪ್ಪನಾಯಕನು ಟಿಪ್ಪು ವಿರುದ್ಧವಾಗಿ ಪರಶುರಾಂ ಭಾವೋನೊಂದಿಗೆ ಸೇರಿ ಕಾರನ್ ವಾಲೀಸ್ ಪರವಾಗಿ ಸಮರತಂತ್ರಕ್ಕೆ ಒಳಗಾಗಬೇಕಾಯಿತು. ಈ ಕಾರಣ ನಾಯಕನು ಭಯದಿಂದ ಕೊಡಗಿಗೆ ಓಡಿಹೋಗಿದ್ದರಿಂದ ಅನಾಯಕತ್ವ ವುಂಟಾಯಿತು. ಕಾಲಕ್ರಮೇಣ ಬ್ರಿಟೀಷ್ ಹಾಗೂ ಟಿಪ್ಪುವಿನ ಒಪ್ಪಂದದಲ್ಲಿ ನಾಯಕನಿಗೆ ತಿರುಗಿ ಕೆಲವೇ ಪ್ರಾಂತ್ಯದ ಆಡಳಿತ ಲಭಿಸಿತು. ಟಿಪ್ಪುವು ಬಾಲಂನ ಉಳಿದ ಪ್ರಾಂತವನ್ನು ತನ್ನ ಅಧೀನದಲ್ಲಿರಿಸಿಕೊಂಡು ಕೋಟೆಯನ್ನು ನಿರ್ಮಿಸಿ ಅದಕ್ಕೆ “ಮಂಜಿರಾಬಾದ್” ಎಂಬುದಾಗಿ ನಾಮಕರಣ ಮಾಡಿದನು.

ಐಗೂರು ವೆಂಕಟಾದ್ರಿನಾಯಕ

ದಿ ೧೦-೯-೧೮೦೦ ರಲ್ಲಿ ಶ್ರೀರಂಗಪಟ್ಟಣ ಪತನವಾದ ನಂತರ ಬ್ರಿಟೀಷರ ವಿರೋಧಿಯಾಗಿದ್ದ ಧೋಂಡಿಯಾ ವಾಘನ ತರುವಾಯ ೧೮೦೨ ರಲ್ಲಿ ಕೃಷ್ಣಪ್ಪನಾಯಕನ ಮಗ ವೆಂಕಟಾದ್ರಿನಾಯಕನು ಐಗೂರನ್ನು ಕೇಂದ್ರವನ್ನಾಗಿಸಿಕೊಂಡು ಬ್ರಿಟೀಷ್ ಪ್ರಭುತ್ವವನ್ನು ಎದುರಿಸಿ ಮಂಜರಾಬಾದಿನ ಸಮೀಪ ಅರಣ್ಯ ಮಧ್ಯದಲ್ಲಿರುವ ಅರಕೆರೆ ಕೋಟೆಯನ್ನು ಭದ್ರಪಡಿಸಿ ಅಲ್ಲಿಯೇ ನಿಂತನು. ಲೆಫ್ಟಿನೆಂಟ್ ಕರ್ನಲ್ ಮಾಂಟ್ರಿಗ್ಯೂರನು ದಂಡೆತ್ತಿ ಅರಕೆರೆ ಕೋಟೆಯನ್ನು ಹಿಡಿದು ಅದನ್ನು ನಾಶಪಡಿಸಿದನು. ಆದರೂ ನಾಯಕನು ಪುನಹ ಕೋಟೆಯನ್ನು ವಶಪಡಿಸಿಕೊಂಡನು, ಕರ್ನಲ್‌ಆರ್ಥರ್‌ವೆಲ್ಲಸ್ಲಿಯು ಈತನನ್ನು ಸೆರೆಹಿಡಿಯಲು ನಿರ್ಧರಿಸಿ ಮೈಸೂರಿನ ಒಡೆಯರೊಂದಿಗೆ ನಾಯಕನನ್ನು ಹುಡುಕಿಸಿ ಅವನ ಕಡೆಯ ಹಲವು ಸೈನಿಕರನ್ನು ಕೈಸೆರೆ ಹಿಡಿದನು.[22] ಇದರಿಂದ ನಾಯಕನಿಗೆ ದಿಕ್ಕು ತೋಚದಂತಾಗಿ ಕಾಡಿಗೆ ಓಡಿಹೋದನು. ೧೮೦೨ನೇ ಫೆಬ್ರುವರಿಯಲ್ಲಿ ಒಂದು ದಿನ ಹಳ್ಳಿಯೊಂದರಿಂದ ತನಗೆ ಬೇಕಾದುದನ್ನು ತರಿಸಲು ನಾಯಕನು ತನ್ನವರನ್ನು ಕಳುಹಿಸಿದ್ದನು. ಈ ಸುಳಿವನ್ನು ತಿಳಿದ ಶತ್ರುಗಳು ನಾಯಕನನ್ನು ಹಾಗೂ ಅವನ ಕಡೆಯವರನ್ನು ಸೆರೆ ಹಿಡಿದು ಪೂರ್ಣಯ್ಯನ ಸಲಹೆ ಮೇರೆ ಉಗ್ಗಿಹಳ್ಳಿಯಲ್ಲಿ ಗಲ್ಲಿಗೇರಿಸಿ ೧೦-೨-೧೮೦೨ ರಂದು ವೆಂಕಟಾದ್ರಿನಾಯಕನ ಪ್ರಾಣಹರಣ ಮಾಡಿದರು.

 

[1]ಕೆಳದಿ ಸಂಶೋಧನಾಲಯದ ಅಂಗವಾಗಿ ಪ್ರಾಚೀನ ಹಸ್ತಪ್ರತಿ ಸರ್ವೇಕ್ಷಣೆಯಲ್ಲಿ ಡಾ. ವಿ.ಎಸ್.ಎಸ್. ಆಚಾರ್ಯರವರಿಂದ ಇದರ ಓಲೆಗರಿ ಹಸ್ತಪ್ರತಿ ನನಗೆ ಲಭಿಸಿದ್ದು, ಇದನ್ನು ಪ್ರೊ. ಎಂ.ವಿ. ಸೀತಾರಾಮಯ್ಯನವರಲ್ಲಿ ಪ್ರಸ್ತಾಪಿಸಿದಾಗ ತುಂಬಾ ಸಂತೋಷದಿಂದ ಪ್ರಕಟಣೆಗೆ ಒಪ್ಪಿದ್ದರಿಂದ ಪ್ರಕಟವಾಯಿತು. ಇದಕ್ಕೆ ಅವರಿಗೆ ಕೃತಜ್ಞತೆಗಳು.

[2]ಕೆಳದಿ ಇತಿಹಾಸ ಸಂಶೋಧನಾಲಯದಲ್ಲಿ ಈ ಕುರಿತು ಓಲೆಗರಿ ಹಸ್ತಪ್ರತಿಯೊಂದಿದ್ದು ಹಲವು ಕೀರ್ತನೆಗಳು ತಿರುಪತಿಯಿಂದ ಪ್ರಕಟವಾಗು ‘ಸಪ್ತಪದಿ’ಯಲ್ಲಿ ಪ್ರಕಟವಾಗಿವೆ.

[3]ಕೆಳದಿ ಬಸವರಾಜ ಸಂಕಲಿಸಿದ “ಆ ೭;ತ೧೪; ಶ್ಲೋ ೧೦೩ ಮತ್ತು ೧೦೪, ಕನ್ನಡ ಅನುವಾದ ಪ್ರಸಾರಾಂಗ; ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ೧೯೯೯ ಮತ್ತು Shiva Tatwa Ratnakara Critical Study; Keladi Musehum VHRB.

[4]ಎಂ.ಎ.ಆರ್. (ಮೈಸೂರ್ ಅರ್ಕಿಯಾಲಾಜಿಕಲ್ ರಿಪೋರ್ಟ್‌) ೧೯೨೬ ಪುಟ. ೩೮; EC.Vol.V P II P.

[5] “ಸಿಂಧು ಗೋವಿಂದ ಹಿಮಕರಗಂಧ ಧವಲಾಂಕ ಭೀಮ “ಮಣಿನಾಗಪುರವರಾಧೀಶ್ವರ ಬಲೀಯದ ಸಪ್ತಾಂಗಹರಣ” (ಕನಕ ಸಿರಿ, ಪು.೫೫೦. “ಕೊಡಗಿನ ಶಾಸನ ಸಂಪತ್ತು”; ಶ್ರೀ M.G. ನಾಗರಾಜ್ ಲೇಖನ)

[6] The Mysore Letters and Dispatches of the Duke of Wellington ೧೯೯೯-೧೮೦೫; ಪುಟ ೬೪-೬೫.

[7]ಡಾ. ಎಂ.ಎಂ. ಕಲ್ಬುರ್ಗಿ: ಕರ್ನಾಟಕ ಕೈಫಿಯತ್ತುಗಳು; ಸಂ: ಕನ್ನಡ ವಿಶ್ವವಿದ್ಯಾಲಯ ಹಂಪಿ: ಪು ೧೧೯ ಮತ್ತು ೩೫೫.

[8]ಅದೇ ‘ಪು.೧೧೯; ಇಲ್ಲಿ ಹೇಳಿದ ನಗರ ಸಂಸ್ಥಾನ ಕೆಳದಿ ಸಂಸ್ಥಾನವಾಗಿದ್ದ ಈ ಸಂಗತಿ ಆಸಕ್ತಿಯುಂಟು ಮಾಡಿದೆ.೮ ಇಲ್ಲಿ ಹೇಳಿದ ಬಿಕಾರಿ ರಾಮಪ್ಪನಿಗೆ ವೀಣೆರಾಮಪ್ಪನೆಂತಲು ಹೆಸರಿರುವುದು ಕಂಡು ಬರುತ್ತದೆ.

[9]ಶ್ರೀ ಮನ್ಮಹಾರಾಜರ ವಂಶಾವಳಿ ಪು.೨೩೦; (ಬಳ್ಳಂ ಎಂದರೆ ಮಂಜರಾಬಾದಿನ ಐಗೂರು; ಭಾಗ ೨ ಪು. ೧೪;) ಎ.ಕ. xv ಬೇಲೂರು ಶಾ. ನಂ. ೫೭ ಮತ್ತು IX ಪರಿಷ್ಕೃತ ಬೇಲೂರು ೧೧ ರ ಶಾಸನದಲ್ಲಿಯೂ ಈತನ ಉಲ್ಲೇಖವಿದ್ದು ಮಂಚಯ್ಯನಾಯಕನು ಕೃಷ್ಣದೇವರಾಯನ ಮಗನೆಂದು ಹೇಳಿದೆ.

[10] Ramadas a descendant of the famous scholar, Musiciam and poet Vanikuntadasa of Belur (ಪು. ೮೦, ಎಂ.ಎ.ಆರ್. ೧೯೩)

[11]ಎ.ಕ. (ಎಪಿಗ್ರಾಫಿಯಾ ಕರ್ನಾಟಿಕಾ) V

[12] Hayavadan Rao; History of Mysore Vol. I

[13]ಶಿವತತ್ವರತ್ನಾಕರ ೭ನೆಯ ಕಲ್ಲೋಲ ೧೪ನೆ ತರಂಗ.

[14]ಕೆ.ನೃ.ವಿ. VII ಆಶ್ವಾಸ;

[15]ಸಕ್ಕರೇಪಟ್ಟಣದ ಶ್ರೀರಂಗನಾಥದೇವರಿಗೆ ಕೆಳದಿ ಅರಸರು ಮಾಡಿಸಿಕೊಟ್ಟ ಆಭರಣಗಳು ತಾಲ್ಲೂಕು ಖರ್ಜಾನೆಯಲ್ಲಿರುವುದನ್ನು ಕನ್ವಿನರ್ ನನಗೆ ತಿಳಿಸಿದ್ದಾರೆ.

[16] Poenzya’s Letter in The Nayakas of Madhura P.90; Transcripts cited in Foster – English Factories in India, (1651-54) Intro PP XXV-XXXIII.

[17]ಶ್ರೀಮನ್ಮಹಾರಾಜರ ವಂಶಾವಳಿಯಲ್ಲಿ ಪ್ರಮೋದತ ಸಂ. ೮ ಆಷಾಢ ಶುದ್ಧ ೮ (೧೬೯೦) ರಲ್ಲಿ ಶವಪ್ಪನಾಯಕನಿಂದ ಸಕ್ಕರೇಪಟ್ಟಣ, ಶ್ರಾವಣ ಶು ೩ರಲ್ಲಿ ಬೇಲೂರು, ಆಶ್ವಯುಜ ಶು ೫ ರಲ್ಲಿ ಶಾಸನವನ್ನು ಸಾಧಿಸಿದರು ಎಂದಿದೆ, ಆದರೆ ಶಿವಪ್ಪನಾಯಕನು ೧೬೬೧ರಲ್ಲಿಯೇ ಶಿವಸಾಯುಜ್ಯ ಹೊಂದಿದ್ದನು.

[18]ಕೆ.ನೃ.ವಿ X ಆಶ್ವಾಸ.

[19]ಕೆ.ನೃ.ವಿ. ಕೃತಿಯ ಏಕಾದಶಾಶ್ವಾಸದ ಕುಂಟ ಪಂಕ್ತಿಯಲ್ಲಿ ಅರಕಲಗೂಡು ಹಾಗೂ ಬೇಲೂರು ಕುರಿತ ಇತಿಹಾಸದ ಉಲ್ಲೇಖಗಳು. ಈ ಲೇಖನದ ಕೊನೆಯಲ್ಲಿರುವ ಅನುವಾದ ನೋಡಿ.

[20]ಕೆ.ನೃ.ವಿ. IX ಆಶ್ವಾಸ; ರಾಮರಾಜೀಯಮು (ಎಸ್.ಕೆ.ಅಯ್ಯಂಗಾರ್ ಪು. ೩೧೨)

[21]೭೦೦೦ ವರಹ ರೇವನ್ಯೂ ಆದಾಯ ಪ್ರದೇಶಗಳಿಗೆ ೭೦೦೦ ಸೀಮೆ ಎಂದು ಹೆಸರುಂಟಾಗಿದೆ. ಸಾರಂಗ ಶ್ರೀ ವೀರಶೈವ ಅರಸುಮನೆತನಗಳ ಅಧ್ಯಯನದಲ್ಲಿರುವ ಶ್ರೀ M. G. ನಾಗರಾಜ್ ರವರ “ಕೊಡಗಿನ ಹಾಲೇರಿ ಅರಸು ಮನೆತನ” ಲೇಖನವನ್ನೂ ನೋಡಿರಿ.

[22]ಅರ್ಥರ್‌ವೆಲ್ಲಸ್ಲಿಯ ೧೦-೪-೧೮೦೦ರ ಪತ್ರವೊಂದರಲ್ಲಿ ಬೇಲೂರು ಕೃಷ್ಣಪ್ಪನಾಯಕನನ್ನು ಕುರಿತ ಪ್ರಸ್ತಾಪವು ಗಮನಾರ್ಹವಾಗಿದೆ. ಅನುಬಂಧ ನೋಡಿರಿ.