ವಿಜಯನಗರ ಅರಸೊತ್ತಿಗೆಯ ಕೊನೆಯ ಕಾಲದಲ್ಲಿ ಅನೇಕ ಪಾಳೇಪಟ್ಟುಗಳು ಅಸ್ತಿತ್ವಕ್ಕೆ ಬಂದವೆಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಅದರಂತೆ ಕರ್ನಾಟಕದ ಅರೆ ಮಲೆನಾಡಿನ ಭಾಗವಾಗಿದ್ದ ಈಗಿನ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ, ಸಂತೇಬೆನ್ನೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಗಳಲ್ಲಿ ೧೬ರಿಂದ ೧೮ನೇ ಶತಮಾನದವರೆಗೆ ಪಾಳೇಪಟ್ಟು ಕಟ್ಟಿ ಆಡಳಿತ ನಡೆಸಿದ ಒಂದು ರಾಜವಂಶಕ್ಕೆ ಬಸವಾಪಟ್ಟಣ, ಸಂತೇಬೆನ್ನೂರು, ತರೀಕೆರೆ, ಪಾಳೆಯಗಾರರೆಂದು ಕರೆಯಲಾಗಿದೆ. ಈ ಮೂರು ಪಾಳೇಪಟ್ಟಿನ ಆಡಳಿತಗಾರರು ಒಂದೇ ವಂಶದವರಾಗಿದ್ದು ಈ ಪಾಳೆಯಪಟ್ಟು ಬಸವಾಪಟ್ಟಣದಿಂದ ಆರಂಭವಾಗಿರುವುದಾಗಿ ದಾಖಲೆಗಳು, ಕೈಫಿಯತ್ತುಗಳೀಂದ ತಿಳಿದುಬರುತ್ತದೆ. ನಂತರ ಅವರು ಸಂತೇಬೆನ್ನೂರನ್ನು ಕೇಂದ್ರವಾಗಿಟ್ಟುಕೊಂಡು ವಿಜಯನಗರ ಅರಸರ ಅಧೀನರಾಗಿಯೂ, ಅನಂತರ ಸ್ವತಂತ್ರರಾಗಿಯೂ ಮುಂದೆ ತರೀಕೆರೆಗೆ ಹೋಗಿ ನೆಲೆನಿಂತು ಅಲ್ಲಿಯೂ ಸಹ ತಾವು ಸಂತೇಬೆನ್ನೂರು ನಾಯಕರೆಂದೇ ಹೇಳಿಕೊಂಡು ಆಡಳಿತ ನಡೆಸಿರುತ್ತಾರೆ. ಈಗ ಲಭ್ಯವಿರುವ ಅವರ ೫೦ ಶಾಸನಗಳಲ್ಲಿ ಅವರು ಬಸವಾಪಟ್ಟಣ, ತರೀಕೆರೆಗಳಿಂದ ಹೊರಡಿಸಿರುವ ಶಾಸನಗಳಲ್ಲೂ ಸಹ ತಮ್ಮನ್ನು ಸಂತೇಬೆನ್ನೂರು ನಾಯಕರೆಂದೇ ಕರೆದುಕೊಂಡಿರುವುದರಿಂದಲೂ, ಅವರು ತಮ್ಮನ್ನು ಪಾಳೇಗಾರರೆಂದು ಹೇಳಿಕೊಳ್ಳದೇ ಇರುವುದರಿಂದಲೂ, ಅವರನ್ನು ಬಸವಾಪಟ್ಟಣ, ತರೀಕೆರೆ, ಸಂತೇಬೆನ್ನೂರು ಪಾಳೆಯಗಾರರೆಂದು ಪ್ರತ್ಯೇಕವಾಗಿ ಕರೆಯುವ ಬದಲು ಒಟ್ಟಿನಲ್ಲಿ ಅವರನ್ನು ಸಂತೇಬೆನ್ನೂರು ನಾಯಕರೆಂದೇ ಕರೆಯುವುದು ಸಮಂಜಸವಾಗಿದೆ. ವಿಶ್ವಕೋಶ[1]ದಲ್ಲಿ ಇವರನ್ನು ಸಂತೇಬೆನ್ನೂರು ಅರಸರೆಂದೇ ನಮೂದಿಸಲಾಗಿದೆ.

ಕರ್ನಲ್ ಮಕೆಂಜಿ, ಫ್ರಾನ್ಸಿಸ್ ಬುಕಾನನ್,, ಎಂ.ಎಸ್.ಪುಟ್ಟಣ್ಣನವರು, ವಿಶ್ವಕೋಶ ಗೆಜೆಟಿಯರ್ಗಳಲ್ಲಿ, ಚಿತ್ರದುರ್ಗ, ಬಖೈರ್ ಮುಂತಾದ ಇತ್ತೀಚನ ಸಂಪಾದನಾ ಕೃತಿಗಳಲ್ಲಿ ವಿಜಯನಗರೋತ್ತರದ ಚಿಕ್ಕಪುಟ್ಟ ಅರಸರನ್ನು ಪಾಳೆಯಗಾರರೆಂದೇ ಸಂಬೋಧಿಸಿರುವುದು ಕಂಡುಬರುತ್ತದೆ. ಶಾಸನಗಳು ಸಮಕಾಲೀನ ಅಧಿಕೃತ ದಾಖಲೆಗಳಾಗಿರುವುದರಿಂದ ಅದರಲ್ಲಿ ತಿಳಿಸಿರುವ ಪ್ರಕಾರ ಅವರುಗಳನ್ನು ನಾಯಕರೆಂದೇ ಕರೆಯುವುದು ಸೂಕ್ತವೆನಿಸುತ್ತದೆ. ಈ ಹಿನ್ನೆಲೆಯಲ್ಲಿ ನಾವು ಸಂತೇಬೆನ್ನೂರು ನಾಯಕರ ಶಾಸನವನ್ನು ಪರಿಶೀಲಿಸಿದಾಗ ಅವರು ಎಲ್ಲಿಯೂ ತಮ್ಮನ್ನು ಪಾಳೆಯಗಾರರೆಂದೂ, ತಮ್ಮ ರಾಜ್ಯವನ್ನು ಪಾಳೆಯಪಟ್ಟೆಂದೂ ಕರೆದುಕೊಂಡಿಲ್ಲ. ಈ ಆಧಾರದ ಮೇಲೆ ಇವರನ್ನು ಪಾಳೆಯಗಾರರೆಂದು ಕರೆಯದೆ ಸಂತೇಬೆನ್ನೂರು ನಾಯಕರೆಂದೂ, ಅವರ ರಾಜ್ಯವನ್ನು ಪಾಳೆಪಟ್ಟೆನ್ನದೆ ಸಂಸ್ಥಾನವೆಂದು ಕರೆಯುವುದು ಸಮಂಜಸವೆನಿಸುತ್ತದೆ.

ಈ ನಾಯಕರಿಗೆ ಸಂಬಂಧಿಸಿದಂತೆ ಈವರೆಗೆ ಸಮಗ್ರ ಅಧ್ಯಯನ ಯಾವುದೂ ನಡೆದಿಲ್ಲ. ಇತಿಹಾಸ ದಾಖಲೆಗಳು, ಕೈಫಿಯತ್ತುಗಳು, ಬಖೈರುಗಳು, ಗೆಜೆಟಿಯರುಗಳು, ವಿಶ್ವಕೋಶಗಳು, ಶಾಸನ ಸಂಪುಟಗಳು ಮತ್ತು ಈವರೆಗೆ ಪ್ರಕಟವಾದ ಕೆಲವು ಪುಸ್ತಕಗಳು, ಸ್ಮರಣ ಸಂಚಿಕೆಗಳು, ಪತ್ರಿಕೆಗಳು ಈ ನಾಯಕರ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ಒದಗಿಸುತ್ತಿದ್ದರೂ, ಅವುಗಳಲ್ಲಿರುವ ಪರಸ್ಪರ ವಿರೋಧಾಭಾಸದ ನಿರೂಪಣೆಗಳಿಂದ ಅವರ ಇತಿಹಾಸ ಇನ್ನಷ್ಟು ಕಗ್ಗಂಟಾಗಿದೆ. ಮುಖ್ಯವಾಗಿ ಸಂತೇಬೆನ್ನೂರು ನಾಯಕರ ಇತಿಹಾಸವನ್ನು ಮೇಲ್ಕಂಡ ಆಕರಗಳಲ್ಲದೆ ಅವರ ಕಾಲದ ಶಿಲ್ಪಗಳು, ಸ್ಮಾರಕಗಳು, ದೇವಾಲಯಗಳು, ಕೊಳ, ಕೆರೆ-ಕಟ್ಟೆಗಳು, ಕೋಟೆ ಕೊತ್ತಲುಗಳು, ಉಪಯೋಗಿಸಿದ ನಾಣ್ಯಗಳು, ಅವರ ಕಾಲದ ಸಾಹಿತ್ಯ, ಲಾವಣಿ ಮತ್ತು ಜಾನಪದ ಕಲೆಗಳಿಂದ ತಿಳಿಯಬಹುದಾಗಿದೆ.

ವಂಶಾವಳಿ : ಈ ನಾಯಕರ ವಂಶಾವಳಿಯ ಬಗ್ಗೆ ಅನೇಕ ರೀತಿಯ ಗೊಂದಲಗಳಿವೆ. ಇದನ್ನು ತಯಾರಿಸಲು ಹೊರಟಾಗ ಉತ್ಸಂಗಿ ವೇಂಟಿಕೆ ಸಲ್ಲುವ ಸಂತೇಬೆನ್ನೂರು ಶೀಮೆ ಕೈಫಿಯತ್ತು[2] ಮತ್ತು ಈ ವಂಶದ ರಂಗಪ್ಪ ನಾಯಕರು ಬರೆಯಿಸಿದ ತರೀಕೆರೆ ಕೈಫಿಯತ್ತು[3]ಗಳಲ್ಲಿ ಒಂದೊಂದು ರೀತಿ ವಂಶಾವಳಿಗಳನ್ನು ಕಾಣಬಹುದು. ಈ ವಂಶದ ಇತಿಹಾಸದ ಕುರಿತಾದ ಸರಜಾ ಹನುಮೇಂದ್ರ ಯಶೋವಿಲಾಸಂ[4] ಕತೃ ಕೃಷ್ಣಶರ್ಮ ಇನ್ನೊಂದು ರೀತಿ ವಂಶಾವಳಿಯನ್ನು ಕೊಡುತ್ತಾನೆ. ತರೀಕೆರೆಯ ಪಾಳೆಯಗಾರರು[5] ಪುಸ್ತಕ ಬರೆದ ಪಿ.ಅಬ್ದುಲ್ ಸತ್ತಾರ್ ಒಂದು ಬಗೆಯ ವಂಶಾವಳಿ ಕೊಟ್ಟರೆ, ಹೊನ್ನ ಬಿತ್ತೇವು ಹೊಲಕೆಲ್ಲಾ[6] ಸ್ಮರಣ ಸಂಚಿಕೆಯಲ್ಲಿ ಮತಿಘಟ್ಟ ಕೃಷ್ಣಮೂರ್ತಿ ಇನ್ನೊಂದು ತರಹೆ ವಂಶಾವಳಿ ಸೂಚಿಸುತ್ತಾರೆ. ಸರ್ಕಾರಿ ಗೆಜೆಟಿಯರುಗಳು,[7] ವಿಶ್ವಕೋಶ[8]ಗಳಲ್ಲಿ ಬೇರೊಂದು ತರಹೆ ವಂಶಾವಳಿ ಬರೆಯಲಾಗಿದೆ. ಲಭ್ಯವಿರುವ ಅವರ[9] ಇನ್ನೊಂದು ತರಹೆ ವಂಶಾವಳಿಯನ್ನು ಒದಗಿಸುತ್ತವೆ. ಮೇಲ್ಕಂಡ ಎಲ್ಲಾ ದಾಖಲೆಗಳು, ಕೈಫಿಯತ್ತುಗಳು, ಶಾಸನಗಳನ್ನು ಅಧ್ಯಯನ ಮಾಡಿ ಹೆಚ್ಚಾಗಿ ಶಾಸನಾಧಾರಗಳಿಂದ ಈ ವಂಶದ ವಂಶವೃಕ್ಷವನ್ನು ನಾನು ಬೇರೆಯೇ ಗುರುತಿಸಿರುತ್ತೇನೆ. (ಅನುಬಂಧ-೧ ನೋಡಿ)

ವಂಶದ ಮೂಲ : ಈ ವಂಶದ ಮೂಲದ ಬಗೆಗೂ ಅನೇಕ ರೀತಿಯ ಭಿನ್ನಾಭಿಪ್ರಾಯವಿದೆ. ೧೬ನೇ ಶತಮಾನದ ಆದಿಭಾಗದಲ್ಲಿ ವಿಜಯನಗರ ಅರಸರ ಸೈನ್ಯ ಪಡೆಯ ಮುಖ್ಯಸ್ಥನಾಗಿದ್ದ ಧರ್ಮರಾಜನೆಂಬುವನು ಬೇಟೆಯಾಡುತ್ತಾ ಈಗಿರುವ ಬಸವಾಪಟ್ಟಣ ಪ್ರಾಂತ್ಯಕ್ಕೆ ಬಂದನೆಂದೂ, ಅಲ್ಲಿ ಓರ್ವ ಬೇಡರ ಯುವತಿಯನ್ನು ಕಂಡು ಆಕೆಯನ್ನು ಮದುವೆಯಾಗಲು ಬಯಸಿದನೆಂದೂ, ಆದರೆ ಆಕೆಯ ತಂದೆ ಬೇರೆ ಜಾತಿಗೆ ಸೇರಿದ ಈತನಿಗೆ ಮಗಳನ್ನು ಕೊಡಲು ಒಪ್ಪದೆ, ನಂತರ ಆಕೆಯಲ್ಲಿ ಹುಟ್ಟಿದ ಮಕ್ಕಳಿಗೆ ಮುಂದೆ ಆಡಳಿತ ವಹಿಸಿಕೊಟ್ಟಲ್ಲಿ ಮಾತ್ರ ಈ ಮದುವೆಗೆ ಸಮ್ಮತಿಸುವೆನೆಂದು ಹೇಳಿದ ಮೇರೆಗೆ ಆ ಕರಾರಿಗೆ ಒಪ್ಪಿ ಆತ ಆ ಬೇಡರ ಯುವತಿಯನ್ನು ಮದುವೆಯಾಗಿ ಬಸವಾಪಟ್ಟಣದಲ್ಲಿ ನೆಲೆನಿಂತು, ಅಲ್ಲಿ ಒಂದು ಪಾಳೇಪಟ್ಟು ಕಟ್ಟಿದನೆಂದು ಹೇಳಲಾಗುತ್ತದೆ. ಈತನಿಗೆ ಕೆಂಗಣ್ಣ ಮತ್ತು ರಾಮಪ್ಪ ಎಂಬ ಈರ್ವರು ಮಕ್ಕಳು ಹುಟ್ಟಿದರು. ಹೀಗೆ ಈ ವಂಶದ ಮೂಲಪುರುಷ ಧರ್ಮರಾಜನೆಂದು ವಿಶ್ವಕೋಶಗಳಲ್ಲಿ, ಗೆಜೆಟಿಯರುಗಳಲ್ಲಿ, ಪತ್ರಿಕೆಗಳಲ್ಲಿ ಉಲ್ಲೇಖವಿದ್ದರೆ, ಧರ್ಮರಾಜ ಈ ವಂಶದ ಮೂಲ ಪುರುಷ ಎನ್ನುವುದು ಒಂದು ಕಟ್ಟು ಕಥೆ ಎನ್ನುತ್ತಾರೆ.[10]ತರೀಕೆರೆಯ ಪಾಳೆಯಗಾರರು ಪುಸ್ತಕ ಬರೆದ ಪಿ.ಅಬ್ದುಲ್ ಸತ್ತಾರ್. ಪ್ರಾಯಶಃ ಈ ಪ್ರದೇಶದಲ್ಲಿ ದೂಮಗುಡ್ಡ ಹೆಸರಿನ ಒಂದು ಗುಡ್ಡವಿದ್ದುದರಿಂದ ಯಾರೋ ಇಂತಹ ಒಂದು ಕಟ್ಟು ಕಥೆ ಹರಡಿದ್ದಾರೆಂದು ಹೇಳುವ ಅವರು ಈ ವಂಶದ ಮೂಲ ಪುರುಷನ ಹೆಸರು ಐತಿಹಾಸಿಕವಾಗಿ ರಾಮಕೋಟೆ ಹನುಮಪ್ಪ ನಾಯಕನೆಂದೂ, ಆತ ಹುಚ್ಚಂಗಿ ದುರ್ಗದ ಕಡೆಯಿಂದ ಬಸವಾಪಟ್ಟಣ ಕಡೆಗೆ ಬಂದವನೆಂದೂ ತರೀಕೆರೆ ಕೈಫಿಯತ್ತಿ[11]ನಂತೆ ಅಭಿಪ್ರಾಯಪಡುತ್ತಾರೆ.

ಉತ್ಸಂಗಿ ವೆಂಟಿಕೆ ಸಲ್ಲುವ ಸಂತೇಬೆನ್ನೂರು ಶೀಮೆ ಕೈಫಿಯತ್ತಿನಲ್ಲಿ ಕೃಷ್ಣರಾಯರ ಅಳಿಯ ರಾಮರಾಯರು ಪೃಥ್ವಿ-ಸಾಮ್ರಾಜ್ಯ ಆಳುತ್ತಿರಲು ಹನುಮಪ್ಪ ನಾಯಕರಿಗೆ ಉತ್ಸಂಗಿ ವೆಂಟಿಕೆ ಸಲ್ಲುವ ಮದಕರಿ ನಾಡನ್ನು ಅಮರಮಾಗಣಿಯಾಗಿ ದಯಪಾಲಿಸಿದ್ದರಿಂದ ಈ ಹನುಮಪ್ಪ ನಾಯಕನು ಮದಕರಿ ನಾಡಿನ ಸ್ಥಳವಿನ ಚಿಕ್ಕಕೂಗಲ್ಲೂರುಯೆಂಬ ಸ್ಥಳದಲ್ಲಿದ್ದುಕೊಂಡುಯಿರಲಾಗಿ, ಅಲ್ಲಲ್ಲಿ ಹನುಮಂತದೇವರು ಆತಗೆ ನಿಜರೂಪ ತೋರಿದ್ದರಿಂದ ಯೀತನು ರೋಮ ಪುಳಕಿತನಾಗಿ, ಯೀ ದೇವರ ಕುಲದೇವತೆಯಾಗಿ ನಡಕೊಂಡ ಕಾರಣ ರೋಮಕೋಟಿ ಹನುಮಪ್ಪ ನಾಯಕ ಎಂದು ಕರೆಯಲ್ಪಟ್ಟಿತೆಂದೂ ಈ ಹನುಮಪ್ಪ ನಾಯಕನ ಮಕ್ಕಳು ಕೆಂಗಪ್ಪನಾಯಕ ಹುಚ್ಚಪ್ಪನಾಯಕರು ಬೇಟೆಯಾಡುತ್ತಾ ಮದಕರಿ ಶೀಮೆ ವಳಿತವಾದ ರಂಗಾಪುರ ಗ್ರಾಮದ ಬಳಿ ಬರಲು ಆ ಸ್ಥಳದಲ್ಲಿ ಮೊಲವು ಯೆದ್ದು (ಬೇಟೆ) ನಾಯಿ ಮೇಲೆ ತಿರುಗಿ ಬಿದ್ದು ಕಡಿದುದರಿಂದ ಯೀ ಸ್ಥಳವು ಗಂಡುಭೂಮಿ ಎಂಬುದಾಗಿ ಗುರುತು ಮಾಡಿಸಿ, ಅಲ್ಲಿಂದ ಮುಂದಕ್ಕೆ ಬೇಟೆ ಆಡುತ್ತಾ ಹೋಗುತ್ತಾ ಯಿದ್ದಲ್ಲಿ ವಿಶ್ರಮಿಸಿ ಕೊಂಡಾಗ ಆತನ ಕನಸಿನಲ್ಲಿ ವೃಷಬೇಶ್ವರರು ಕಾಣಿಸಿಕೊಂಡು, ಭವಿಷ್ಯೋತ್ತರ ಶುಭ ಸೂಚನೆ ಹೇಳಿ, ನಿಧಿಯಿರುವ ಸ್ಥಳ ಸೂಚಿಸಿದಲ್ಲದೆ, ವರವನ್ನು ಕೊಟ್ಟರು. ತಮ್ಮ ಸ್ವಪ್ನ ಸೂಚನೆಯಂತೆ ಮುಂದು ಗಂಡುಭೂಮಿ ಎಂದು ಗುರುತು ಮಾಡಿದ ಸ್ಥಳದಲ್ಲಿ ಕೋಟೆಕಟ್ಟಿಸಿ ರಂಗಾಪುರ ಎಂಬ ಸ್ಥಳಕ್ಕೆ ಸಂತೇಬೆನ್ನೂರು ಎಂದು ಹೆಸರಿಟ್ಟು ಅಲ್ಲಿ ರಾಮಚಂದ್ರಸ್ವಾಮಿ ದೇವಸ್ಥಾನವನ್ನು, ಅದರ ಮುಂದೆ ರಾಮತೀರ್ಥ ಎಂಬ ಸರೋವರವನ್ನು ಕಟ್ಟಿಸಿ ಧರ್ಮದಿಂದ ರಾಜ್ಯ ಸ್ಥಾಪನೆ ಮಾಡಿ ಶಾ.ಶಕ ೧೪೮೦ನೇ ಕಾಳಾಯುಕ್ತಿ ಸಂವತ್ಸರದಿಂದ ಶಾ.ಶಕ೧೪೮೯ನೇ ಪ್ರಭವ ಸಂವತ್ಸರದವರೆಗೆ ಆಳುತ್ತಾ ಬಂದನು. ಹೀಗೆ ಸಂತೇಬೆನ್ನೂರು ಕೈಫಿಯತ್ತು[12] ಈ ಪಾಳೇಪಟ್ಟಿನ ಉದಯದ ಕಥೆ ತಿಳಿಸುತ್ತದೆ. ತರೀಕೆರೆ ಕೈಫಿಯತ್ತಿನಲ್ಲಿ ಇದೇ ಕಥೆಯೇ ಪುನರಾವರ್ತಿತವಾಗಿದ್ದು ಅಲ್ಲಿ ಸಂತೇಬೆನ್ನೂರು ಬದಲು ಬಸವಾಪಟ್ಟಣ ಕಟ್ಟಿಸಿದ್ದಾಗಿ ಹೇಳಲಾಗಿದೆ. ಬಸವಾಪಟ್ಟಣವನ್ನು ಕ್ರಿ.ಶಕ ೧೫೫೨ರಲ್ಲಿ ಕಟ್ಟಿಸಿದ್ದಾಗಿ ಅದು ತಿಳಿಸುತ್ತದೆ.[13] ರಂಗಾಪುರವನ್ನು ಸಂತೇಬೆನ್ನೂರೆಂದು ಹೆಸರಿಟ್ಟಿದ್ದು ಕ್ರಿ.ಶ. ೧೫೬೪ರಲ್ಲಿ ಎಂದು ಸಂತೇಬೆನ್ನೂರು ಕೈಫಿಯತ್ತು ತಿಳಿಸುತ್ತದೆ. [14]

ಕವಿಕೃಷ್ಣಶರ್ಮ ತಮ್ಮ ಕೃತಿಯಲ್ಲಿ ಈ ವಂಶದ ಮೂಲಪುರುಷ ಕುಮಾರ ನರೇಂದ್ರ ಎಂದು ಉಲ್ಲೇಖಿಸಿದ್ದಾರೆ.[15]ತಮ್ಮ ಪ್ರಭುವಿನ ಹೊಗಳುವಿಕೆಯೇ ಮೂಲ ಉದ್ದೇಶವಾಗಿಟ್ಟುಕೊಂಡು ರಚಿಸಿದ ಕಾವ್ಯ ಇದಾಗಿರುವುದರಿಂದ ಕವಿ ಇದರಲ್ಲಿ ಕಲ್ಪನೆಗೆ ಹೆಚ್ಚು ಮಹತ್ವ ಕೊಟ್ಟಿರಬಹುದೆನ್ನಿಸುತ್ತದೆ.

ಶ್ರೀ ಕೂಡ್ಲಿ ಶೃಂಗೇರಿ ಮಠದ ಹಳೇ ಕಡತ[16]ದಲ್ಲಿ ಅನೇಕ ರಾಜವಂಶಗಳ ಕುರಿತು ಬರೆಯುತ್ತಾ ‘ತರೀಕೆರೆ ಅರಸುಗಳ ಪೂರ್ವವಂಶ’ ಎಂಬ ಶೀರ್ಷಿಕೆಯಲ್ಲಿ ಈ ವಂಶವನ್ನು ಹೀಗೆ ಉಲ್ಲೇಖಿಸುತ್ತಾರೆ. ರಾಮಕೋಟೆ ಹನುಮಪ್ಪನಾಯಕ, ಹುಚ್ಚಹನುಮಪ್ಪಾ ನಾಯಕ, ನಾಯಕ, ಕೆಂಚಣ್ಣ ನಾಯಕ, ಬಾಲಹನುಮಪ್ಪ ನಾಯಕ ಇವರು ಎಂಟು ಜನ ಅಣ್ಣ ತಮ್ಮಂದಿರು, ೫ನೇ ಹನುಮಪ್ಪ ನಾಯಕನಿಗೆ ಗಂಗಪ್ಪನೆಂಬ ಮಗ ಈ ಒಂಭತ್ತು ಜನಗಳು ರಾಜ ಭೀತಿಯಿಂದ ಗೋಪಮಂದಿರದಲ್ಲಿ ಅಡಗಿದ್ದರು. ಒಂದು ಸಂದರ್ಭದಲ್ಲಿ ಕೆಂಗಣ್ಣ ನಾಯಕ ಬೇಟೆಯಾಡಿ ದಣಿದು ಅರಣ್ಯದಲ್ಲಿ ಮಲಗಿದ್ದನು. ಅಲ್ಲಿದ್ದ ವೃಷಬೇಶ್ವರರು ಸ್ವಪ್ನದಲ್ಲಿ ಕಾಣಿಸಿಕೊಂಡು ತನ್ನ ಹೆಸರಿನಲ್ಲಿ ಒಂದು ಪಟ್ಟಣ ನಿರ್ಮಾಣ ಮಾಡಲು ಆಜ್ಞೆ ಇತ್ತರು. ಆಗ ಬಸವಾಪಟ್ಟಣ ನಿರ್ಮಾಣ ಮಾಡಿದರು. ಆಮೇಲೆ ಬಹು ರಾಜ್ಯ ಕಟ್ಟಿದರು. ಕೆಂಚಪ್ಪ ನಾಯಕರಿಗೆ ಇಮ್ಮಡಿ, ಮುಮ್ಮಡಿ ಎಂಬಿಬ್ಬರು ಮಕ್ಕಳು. ಇಮ್ಮಡಿಗೆ ರಾಮಕೃಷ್ಣ, ಲಕ್ಷ್ಮಣ, ನಿಚ್ಚ ಮದುವಣಿಗ, ಹನುಮಪ್ಪ ಎಂಬ ಐದು ಮಕ್ಕಳು; ಮಗ ಸರಜಾ ಹನುಮಪ್ಪ ನಾಯಕ, ಮಗ ವೀರ ಹನುಮಪ್ಪ ನಾಯಕ, ಮಗ ಸೀತಾರಾಮಪ್ಪ ನಾಯಕರು ಎಂದು ಬರೆಯಲಾಗಿದೆ. [17]

ನಮಗೆ ದೊರೆತ ಈ ನಾಯಕರ ಶಾಸನ ಕೂಡ್ಲಿ – ೪೭ರಂತೆ ಶಾ.ಶಕ ೧೪೮೦ (ಕ್ರಿ.ಶ. ೧೫೫೮) ರಲ್ಲಿ ಸಂತೇಬೆನ್ನೂರು ಯಿಮ್ಮಡಿ ಸೀತಾರಾಮಪ್ಪ ನಾಯಕರ ಪುತ್ರರಾದ ಹನುಮಪ್ಪ ನಾಯಕರು ಶೃಂಗೇರಿ ವಿದ್ಯಾರಣ್ಯ ಭಾರತಿ ಸ್ವಾಮಿಗಳಿಗೆ ಬರೆಸಿಕೊಟ್ಟ ಭೂದಾನ ಪಟ್ಟಿ ಎಂದು ಬರೆಯಲಾಗಿದೆ. ಇದರಂತೆ ಯಿಮ್ಮಡಿ ಸೀತಾರಾಮಪ್ಪ ಈ ವಂಶದ ಮೂಲ ನಾಯಕನೇ ಎಂದು ಸಂದೇಹ ಬರುತ್ತದೆ. ಇದೇ ಶಾಸನದಲ್ಲಿ ತಮ್ಮ ಹಿರಿಯರು ಕಟ್ಟಿಸಿಕೊಟ್ಟ ಕೂಡಲಿ-ಶೃಂಗೇರಿ ಮಠ ಧರ್ಮಕ್ಕೆಂದು ಇರುವುದರಿಂದ ಇವರಿಗಿಂತ ಹಿಂದೆ ಬೇರೆ ನಾಯಕರು ಆಡಳಿತ ನಡೆಸಿರಬೇಕೆಂದು ಕುರುಹು ಸಿಗುತ್ತದೆ.

ವಂಶ : ಈ ವಂಶದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಅಭಿಪ್ರಾಯ ವ್ಯಾಖ್ಯಾನ ಮಂಡಿಸಿದ್ದು ಈ ವಂಶದ ಮೂಲದ ಬಗ್ಗೆ ಸ್ಪಷ್ಟವಾಗಿ ಗುರುತಿಸುವುದು ಕಷ್ಟವಾಗಿದೆ. ಕೂಡ್ಲಿ ೪೭[18]ಶಾಸನ ಶ್ರೀಮತ್ ಸಂತೇಬೆನ್ನೂರು ರಾಮಚಂದ್ರ ದೇವರ ಪಾದ ಪದ್ಮಾರಾಧಕರಾದ ಹನುಮಂತದೇವರ ನಿಜಭಕ್ತರಾದ, ವಾಲ್ಮೀಕಿ ಗೋತ್ರದ ಪೂವಾಲಾನ್ವಯ ಎಂದು ಈ ರಾಜವಂಶದ ಪ್ರವರವನ್ನು ತಿಳಿಸುತ್ತದೆ. ಚನ್ನಗಿರಿ-೬೨[19] ಶಾಸನ ಮತ್ತಿತರ ತರೀಕೆರೆ ಶಾಸನಗಳಲ್ಲಿ ಪೂವಲ ವಂಶೋದ್ದಾರಕರೆಂದು ಕರೆದುಕೊಂಡಿದ್ದಾರೆ. ಇದರಿಂದ ಇವರು ಬೇಡರ ಕುಲದವರು ಎಂದು ತಿಳಿಯಬಹುದು. ಇವರ ಕುರಿತು ಒಂದು ಕೈ ಬರಹ ಹಳೇ ಪ್ರತಿಯಲ್ಲಿ ‘ವಾಲ್ಮೀಕಿ ವರ್ಣಾಶ್ರಮ ಭಾಸ್ಕರ’ ಎಂದು ನಿರೂಪಿಸಿದ್ದು ತಾವು ಪುರಾಣ ಪ್ರಸಿದ್ಧ ಆದಿಕವಿ ವಾಲ್ಮೀಕಿ ವಂಶಸ್ಥರೆಂದು ಹೇಳುತ್ತಾರೆ. ಪೌರಾಣಿಕ ಪ್ರಸಿದ್ಧಿ ಪಡೆದ ಬೇಡರ ಕಣ್ಣಪ್ಪ ಈ ವಂಶಸ್ಥನೆಂದು ಅವನಿಂದ ಬೆಳೆದ ಈ ವಂಶ ಅಭಿವೃದ್ಧಿಯಾಗಿ ೨೮ ಬೆಡಗುಗಳಾದವೆಂದೂ, ಇವುಗಳಲ್ಲಿ ‘ಪುವ್ವಲ’ ಎಂದರೆ ಬೆಡಗು ಅಂದರೆ ಶಾಖೆ ಎಂದೂ ಹೇಳಲಾಗುತ್ತದೆ. ಇನ್ನೊಂದು ಅರ್ಥದಲ್ಲಿ ಪುವ್ವಲ ಅಂದರೆ ‘ ಸುಂದರ’ ಎಂದೂ ಅರ್ಥೈಸಲಾಗಿದೆ.[20] ಪೂವ್ವಲ ಎಂದರೆ ಸೂರ್ಯ ಎಂದೂ ಅರ್ಥವಿದೆ. ಇವರು ಸೂರ್ಯವಂಶದವರೆಂದು ಕೃಷ್ಣಶರ್ಮನ ಅಭಿಪ್ರಾಯ.[21]ರಾಜಭಕ್ತಿ ಪ್ರತೀಕವಾಗಿ ಈ ರೀತಿ ಕರೆದಿರಬಹುದೆಂದು ಸಂಪಾದಕಿ ವೈ.ಸಿ.ಭಾನುಮತಿ ಅಭಿಪ್ರಯಪಡುತ್ತಾರೆ.[22]

ಕೆಲವು ಶಾಸನಗಳಲ್ಲಿ ಮಾವಲ ವಂಶೋದ್ಧಾರಕರೆಂದು ಬಂದಿದ್ದು ಇದು ಪುವ್ವಲದ ತದ್ಭವ ಎಂದು ಒಂದು ವಾದವಿದ್ದರೆ, ಮಾವಲ ದೇಶದ ಮೂಲದಿಂದ ಬಂದವರೆಂಬ ಅರ್ಥವೂ ಇದಕ್ಕೆ ಬರುತ್ತದೆಂದು ಇನ್ನೊಂದು ವಾದವಿದೆ. ಹೀಗೆ ವಾಲ್ಮೀಕಿ ಗೋತ್ರದ, ಬೇಡ ಜನಾಂಗದ ಬೇಟೆ, ಶಿಕಾರಿ ಮೂಲವೃತ್ತಿಯಾಗಿ ಮಾಡಿಕೊಂಡಿದ್ದ ಈ ಜನರು ಒಂದು ಕಡೆ ವರ್ಷಪೂರ್ತಿ ಇರುತ್ತಿರಲಿಲ್ಲ. ತಮ್ಮ ಅವಶ್ಯಕತೆಗೆ ಅನುಸಾರವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಗುಳೇ ಹೋಗುವುದು ಈ ಜನಾಂಗದ ಪದ್ಧತಿ, ವಾಡಿಕೆ. ಹೀಗೆ ಈ ಜನಾಂಗದ ಮೂಲ ಪುರುಷ ಬಸವಾಪಟ್ಣಕ್ಕೆ ಬೇಟೆಗೆ ಬಂದಾಗ, ಈ ಪ್ರಾಂತ್ಯದಲ್ಲಿ ನೆಲೆನಿಂತು ಪಾಳೇಪಟ್ಟು ಕಟ್ಟಿರಬೇಕು ಎಂದು ಧಾರಾಳವಾಗಿ ಭಾವಿಸಬಹುದು. ಈ ಬೇಡರ ನಾಯಕ ಮುಂದಾಳುವಾಗಿ ಮುಂದೆ ತನ್ನನ್ನು ನಾಯಕನೆಂದು ಕರೆದುಕೊಂಡಿದ್ದಾನೆ.

ಮನೆದೈವ : ಇವರು ಹೊರಡಿಸಿದ ಅನೇಕ ಶಾಸನಗಳಲ್ಲಿ ‘ಸಂತೇಬೆನ್ನೂರು ರಾಮಚಂದ್ರ ದೇವರ ಪಾದ ಪದ್ಮಾರಾಧಕರಾದ ಹನುಮಂತರ ದೇವರ ನಿಜಭಕ್ತರಾದ’ ಎಂದು ಹೊಗಳಿ ತಮ್ಮ ಶಾಸನ ಬರೆಯಿಸಿರುತ್ತಾರೆ. ಕೈಫಿಯತ್ತಿನ[23]ಉಲ್ಲೇಖದಂತೆ ಇವರ ಮನೆದೈವ ಸಂತೇಬೆನ್ನೂರು ಶ್ರೀ ರಾಮಚಂದ್ರ ದೇವರೆಂದೂ, ಇವರು ಅದರ ಸಮೀಪ ಇರುವ ಚಿಕ್ಕಕೋಗಲೂರು ಹನುಮಂತ ದೇವರ ಭಕ್ತರೆಂದೂ ತಿಳಿದುಬರುತ್ತದೆ. ಇವರ ಕುರಿತು ಬರೆದ ಅನೇಕ ಗ್ರಂಥಗಳಲ್ಲಿ, ಗೆಜೆಟಿಯರ್ಗಳಲ್ಲಿ, ವಿಶ್ವಕೋಶದಲ್ಲಿ ಸಂತೇಬೆನ್ನೂರಲ್ಲಿ ಶ್ರೀರಂಗನಾಥ ಸ್ವಾಮಿ ದೇವಾಲಯವಿತ್ತು., ಅದು ಇವರ ಇಷ್ಟದೈವ ಎಂಬ ರೀತಿ ಬರೆಯಲಾಗಿದೆ.[24] ಆದರೆ ಇದು ತಪ್ಪೆಂದು ಅವರು ಶಾಸನ ಖಚಿತಪಡಿಸುತ್ತದೆ. ಇವರ ಕೈಫಿಯತ್ತಿನಂತೆ ತೊಪೇನಹಳ್ಳಿ ರಂಗನಾಥಸ್ವಾಮಿ, ದೇವರಹಳ್ಳಿ ಉಡಮರಡಿ ರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಇವರು ಮಾಡಿಸಿದ್ದಾಗಿಯೂ, ಸಂತೇಬೆನ್ನೂರ ರಾಮಚಂದ್ರ ದೇವಸ್ಥಾನ ಮುಂದೆ ಬಿಜಾಪುರ ಸುಲ್ತಾನರ ಕಡೆಯಿಂದ ನಾಶಮಾಡಲ್ಪಟ್ಟ ಮೇಲೆ ರಂಗನಾಥಸ್ವಾಮಿಯನ್ನು ಮನೆದೇವರಾಗಿ ಮಾಡಿಕೊಂಡಿರಬಹುದೆಂದು ತಿಳಿಯಬಹುದು. ಸಂತೇಬೆನ್ನೂರಿಂದ ಈ ನಾಯಕರು ತರೀಕೆರೆಗೆ ಹೋಗಿ ನೆಲೆನಿಂತ ಮೇಲೆ ಕಳಸಾಪುರದ ರಂಗನಾಥ ಸ್ವಾಮಿಯನ್ನು ಮನೆದೇವರಾಗಿ ಮಾಡಿಕೊಂಡಿದ್ದಾಗಿಯೂ ತಿಳಿದುಬರುತ್ತದೆ. ತರೀಕೆರೆಗೆ ಬಂದ ನಂತರ ಹೊರಕೆರೆ ರಂಗನಾಥ ಸ್ವಾಮಿಗೂ, ಅಲ್ಲದೆ ಯಗಟಿ ಮಲ್ಲಿಕಾರ್ಜುನ ಸ್ವಾಮಿಯನ್ನು ಆರಾಧಿಸಿ, ಪೂಜಿಸುತ್ತಿದ್ದುದಾಗಿ ತಿಳಿದುಬರುತ್ತದೆ. ಪ್ರಸಿದ್ಧ ಕದರ ಮಂಡಳಿಗೆಯ ಆಂಜನೇಯ ಸ್ವಾಮಿ ದೇವಸ್ಥಾನವಲ್ಲದೆ ಅನೇಕ ಆಂಜನೇಯ ಸ್ವಾಮಿ ದೇವಸ್ಥಾನಗಳಿಗೆ ದತ್ತಿ, ದಾನ, ನೀಡಿ ತಾವು ಹನುಮಂತನ ನಿಜಭಕ್ತರೆಂದು ತೋರಿಸಿಕೊಂಡಿದ್ದಾರೆ.

ರಾಜ್ಯಭಾರ : ಬಸವಾಪಟ್ಟಣ, ಸಂತೇಬೆನ್ನೂರು, ತರೀಕೆರೆಯ ನಾಯಕರೆಂದು ಕರೆಯಲ್ಪಟ್ಟು ಇವರು ೧೬ನೇ ಶತಮಾನದ ಆದಿಭಾಗದಲ್ಲಿ ವಿಜಯನಗರದ ಸಾಮಂತರಾಗಿದ್ದು, ಆ ಸಾಮ್ರಾಜ್ಯದ ಪತನಾನಂತರ, ತಾವೇ ಸ್ವತಂತ್ರರಾಗಿ, ನಂತರ ಬಿಜಾಪುರದ ಆದಿಲ್ ಷಾಹಿ, ಕೆಳದಿ, ಚಿತ್ರದುರ್ಗ ಪಾಳೇಗಾರರ ಹಾಗೂ ಕೆಲಕಾಲ ಹೈದರ್, ಟಿಪ್ಪು, ಮರಾಠ, ಮೈಸೂರು ಅರಸರ ಅಧೀನರಾಗಿ ನಂತರ ಬ್ರಿಟಷ್ ಆದಿಪತ್ಯ ಆರಂಭವಾದಾಗ ಅವರ ವಿರುದ್ಧವೂ ಹೋರಾಡಿ ತಮ್ಮ ಅಸ್ತಿತ್ವ ಕಳೆದುಕೊಂಡು ಮೂರು ಶತಮಾನಗಳ ಕಾಲ ನಮ್ಮ ನಾಡಿನಲ್ಲಿ ಈಗಿನ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ಹಾಸನ, ಹಾವೇರಿ ಜಿಲ್ಲೆಗಳಿಗೆ ಒಳಪಟ್ಟ ಪ್ರದೇಶದಲ್ಲಿ ಆಳ್ವಿಕೆ ನಡೆಸಿದರೆಂದು ಶಾಸನಗಳನ್ನೊಳಗೊಂಡಂತೆ ಐತಿಹಾಸಿಕ ದಾಖಲೆಗಳಿಂದ ನಮಗೆ ತಿಳಿದುಬರುತ್ತದೆ.

ಬಸವಾಪಟ್ಟಣದಲ್ಲಿ ತಮ್ಮ ವಂಶದ ಪಾಳೇಪಟ್ಟು ಆರಂಭಿಸಿದ ಈ ನಾಯಕರು ತಮ್ಮ ಆಡಳಿತವನ್ನು ಅಲ್ಲಿ ಸುಮಾರು ೮೦ ವರ್ಷಗಳೂ, ನಂತರ ವಿಜಯನಗರ ಅರಸರಿಂದ ಮಾಗಣಿ ಪಡೆದ ಸಂತೇಬೆನ್ನೂರಿಂದ ಒಂದು ಶತಮಾನ ಕಾಲವೂ, ಅನಂತರ ತರೀಕೆರೆ, ಬಾಣಾವರಗಳಿಗೂ ತಮ್ಮ ರಾಜಧಾನಿ ಬದಲಾಯಿಸಿ ತರೀಕೆರೆಯಿಂದ ೧೫೦ ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿ ತಮ್ಮ ರಾಜ್ಯವನ್ನು ಪೂರ್ವದ ಚಿತ್ರದುರ್ಗದಿಂದ, ಪಶ್ಚಿಮದ ಈಗಿನ ತೀರ್ಥಹಳ್ಳಿ ತಾಲ್ಲೂಕು ಕಾವಲು ದುರ್ಗದವರೆಗೂ, ದಕ್ಷಿಣದ ಬಾಬಾ ಬುಡನ್ ಗಿರಿ ತಪ್ಪಲಿನಿಂದ ಉತ್ತರದ ಈಗಿನ ಹಾವೇರಿ ಜಿಲ್ಲಾ ಕದರಮಂಡಲಿಗೆ ವ್ಯಾಪ್ತಿವರೆಗೂ ರಾಜ್ಯ ವಿಸ್ತರಿಸಿ, ತಮ್ಮ ಆಡಳಿತ ನಡೆಸುತ್ತಿದ್ದರೆಂದು ಶಾಸನಾಧಾರಗಳಿಂದ ತಿಳಿದುಬರುತ್ತದೆ. (ಅನುಬಂಧ -೩ ನೋಡಿ)

ಸಂತೇಬೆನ್ನೂರು, ನಂತರ ತರೀಕೆರೆ ಕೇಂದ್ರವಾಗಿಟ್ಟುಕೊಂಡು ಅಲ್ಲಿ ನೆಲೆನಿಂತ ಈ ನಾಯಕರು ಹೈದರನ ದಂಡಯಾತ್ರೆವರೆಗೂ ಸ್ವತಂತ್ರರಾಗಿ ತಮ್ಮ ಆಡಳಿತ ನಡೆಸಿದರು. ಹೈದರ್ ತರೀಕೆರೆ ಗೆದ್ದು ಪೊಗದಿ ಕೊಡಲು ಒಪ್ಪಿದಾಗ ಇವರಿಗೆ ಆಡಳಿತ ಮರಳಿ ಬಿಟ್ಟುಕೊಟ್ಟನು. ಆದರೆ ಖಂಡಣಿ ಹಣವನ್ನು ಕ್ಲುಪ್ತ ಕಾಲಕ್ಕೆ ಪಾವತಿಸದೆ ಇದ್ದುದರಿಂದ ಹೈದರ್ ಇವರನ್ನು ಪದಚ್ಯುತಿಗೊಳಿಸಿ ಅವರ ಪ್ರಾಂತ್ಯವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಹೀಗೆ ಇವರ ಸ್ವತಂತ್ರ ಸ್ಥಾನಮಾನಕ್ಕೆ ಚ್ಯುತಿ ಬಂದಿತು.

ಶಾಸನಗಳು : ಈ ನಾಯಕರು ಬರೆಯಿಸಿದ ಒಟ್ಟು ೨೬ ಶಾಸನಗಳನ್ನು ಬಿ.ಎಲ್.ರೈಸರು ತಮ್ಮ ಶಾಸನ ಸಂಪುಟಗಳಲ್ಲಿ[25]ದಾಖಲಿಸಿದ್ದು, ಈಚೆಗೆ ಪೂನಾದ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿಯಲ್ಲಿ ಒಂದು ಶಾಸನ[26]ಇರುವುದನ್ನು ಸಂಶೋಧಕ ಕೆಳದಿ ಗುಂಡಾಜೋಯ್ಸರು ಪತ್ತೆ ಮಾಡಿದ್ದಾರೆ. ಹಾಗೆಯೇ ನೂತನ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕು ಕದರ ಮಂಡಳಿಗೆ ದೇವಸ್ಥಾನದ ಗರುಡಗಂಭದಲ್ಲಿಯೂ ಒಂದು ಶಾಸನ[27] ಇರುವುದು ಬೆಳಕಿಗೆ ಬಂದಿದೆ. ಇದಲ್ಲದೆ ಮೈಸೂರು ಪ್ರಾಚ್ಯ ಸಂಶೋಧನಾ ಇಲಾಖೆ ತನ್ನ ವಾರ್ಷಿಕ ವರದಿಯಲ್ಲಿ ೩ ಶಾಸನಗಳನ್ನು[28]ಪ್ರಕಟಿಸಿದೆ. ಶ್ರೀ ಕೂಡ್ಲಿ- ಶೃಂಗೇರಿ ಸಂಸ್ಥಾನದ ಪ್ರಾಚೀನ ಶಾಸನ ಲೇಖನ ಸಂಗ್ರಹ ಸಂ. ೧ರಲ್ಲಿ ಈ ನಾಯಕರಿಗೆ ಸಂಬಂಧಿಸಿದ ೧೫ ಶಾಸನಗಳು[29] ಪ್ರಕಟಿಸಲ್ಪಟ್ಟಿವೆ. ಇವುಗಳಲ್ಲದೆ ಶ್ರೀ ಶೃಂಗೇರಿ ಮಠದ ಶಾಸನ ಸಂಪುಟದಲ್ಲಿ ಒಂದು ಶಾಸನ[30]ಈ ನಾಯಕರದ್ದು ಪ್ರಸಿದ್ಧಿಸಲ್ಪಟ್ಟಿದ್ದು ಶೃಂಗೇರಿ ಮಠದ ಕಡತಗಳಲ್ಲಿ ೩ ಶಾಸನ[31]ಇರುವುದನ್ನು ಸಂಶೋಧಕ ಎ.ಕೆ.ಶಾಸ್ತ್ರಿ ಇತ್ತೀಚೆಗೆ ಗುರುತಿಸಿದ್ದಾರೆ. ಹೀಗೆ ಈ ನಾಯಕರದೆನ್ನಲಾದ ಒಟ್ಟು ೫೦ ಶಾಸನಗಳು ಈಗ ಲಭ್ಯವಾಗಿದೆ.

ಈಗ ದೊರೆತಿರುವ ೫೦ ಶಾಸನಗಳಲ್ಲಿ ೨೦ ಶಿಲಾಶಾಸನಗಳೂ, ೧೦ ತಾಮ್ರ ಶಾಸನಗಳೂ ಆಗಿದ್ದು, ಉಳಿದ ೨೦ ಶಾಸನಗಳು ಕಾಗದದಲ್ಲಿ ಬರೆದ ಸನ್ನದುಗಳಾಗಿದೆ. ಬಿ.ಎಲ್.ರೈಸರು ಪ್ರಕಟಿಸಿರುವ ಈ ನಾಯಕರದೆನ್ನಲಾದ ೨೬ ಶಾಸನಗಳಲ್ಲಿ[32] ಶಿವಮೊಗ್ಗ ೧೦೭-೧೦೮[33], ಹೊನ್ನಾಳಿ[34], ಶಾಸನಗಳಲ್ಲಿ ಸಂತೇಬೆನ್ನೂರು ನಾಯಕರ ಹೆಸರನ್ನು ಹೋಲುವ ಹೆಸರುಗಳು ಬಂದಿದ್ದರೂ ಅವರೇ ಅಭಿಪ್ರಾಯಪಡುವಂತೆ ಅವು ಈ ನಾಯಕರ ಶಾಸನಗಳಾಗಿರುವುದು ಅನಮಾನ. ಆದ್ದರಿಂದ ಇವು ಕೂಟ ಶಾಸನಗಳೆಂದು ಧಾರಾಳವಾಗಿ ಹೇಳಬಹುದಾಗಿದೆ. ಇನ್ನು ಚನ್ನಗಿರಿ -೪೭[35]ಶಾಸನದಲ್ಲಿ ಸಂತೇಬೆನ್ನೂರು ನಾಯಕರ ಹೆಸರಾಗಲೀ, ಕಾಲವಾಗಲೀ ನಮೂದಾಗದೇ ಇದ್ದರೂ ರೈಸರು ಇದನ್ನು ಸಂತೇಬೆನ್ನೂರು ನಾಯಕರದೆಂದು ಹೇಗೆ ನಿರ್ಣಯಿಸಿದರೋ ತಿಳಿದು ಬಂದಿಲ್ಲ. ಇವ್ಯಾವೂ ಸಂತೇಬೆನ್ನೂರು ನಾಯಕರ ಶಾಸನಗಳಲ್ಲ. ಹಾಗೆಯೇ ತರೀಕೆರೆ ಶಾಸನ – ೨೪[36], ಅದೇ ತರೀಕೆರೆ ಶಾಸನ – ೨೧[37]ರ ನಕಲೂ, ತರೀಕೆರೆ ಶಾಸನ-೨೩[38]-೨೨[39] ರ ನಕಲೂ ಆಗಿದೆ. ಮೇಲ್ಕಂಡ ಶಾಸನಗಳಿಂದ ಸಂತೇಬೆನ್ನೂರು ನಾಯಕರ ಕಾಲ, ಆಡಳಿತ ನಡೆಸಿದ ನಾಯಕರ ಹೆಸರು, ವಂಶಾವಳಿ, ಲಾಂಛನ, ಮುದ್ರೆ, ಅಂಕಿತ, ಕಟ್ಟಿಸಿದ ಮತ್ತು ಜೀರ್ಣೋದ್ಧಾರ ಮಾಡಿದ ದೇವಸ್ಥಾನ, ಕೊಳ, ಕೆರೆ ಮುಂತಾದವುಗಳೂ, ಕೊಟ್ಟ ದತ್ತಿ, ದಾನ, ಬಳಸಿದ ನಾಣ್ಯ, ಅಳತೆ, ತೂಕ, ಆಡಳಿತ ವ್ಯಾಪ್ತಿಗಳಲ್ಲದೆ ಇವರ ಅಧಿಕಾರಿಗಳು, ಮಂತ್ರಿಗಳು, ಕಾರ್ಯಕರ್ತರು, ಮುಂತಾದವರ ಹೆಸರುಗಳು ಹೀಗೆ ಅನೇಕ ವಿವರಗಳನ್ನು ಪಡೆಯಬಹುದಾಗಿದೆ. ಈ ನಾಯಕರು ಬಸವಾಪಟ್ಟಣ, ಸಂತೇಬೆನ್ನೂರು, ತರೀಕೆರೆಯಿಂದ ಆಳ್ವಿಕೆ ನಡೆಸಿದರೂ, ಈ ಕೇಂದ್ರ ಸ್ಥಳಗಳಲ್ಲಿ ಅವರ ಒಂದು ಶಾಸನಗಳೂ ಇಲ್ಲದಿರುವುದು ಅಚ್ಚರಿಯ ಸಂಗತಿಯಾಗಿದೆ.

ಅವರ ಶಿಲಾ ಶಾಸನಗಳಿಗಿಂತ ತಾಮ್ರ ಶಾಸನಗಳು ಹೆಚ್ಚು ಸ್ಪಷ್ಟವಾಗಿ, ವಿವರವಾಗಿ ಬರೆಯಲ್ಪಟ್ಟಿವೆ. ಹೆಚ್ಚು, ಹಾಳೆ ಇರುವ ತಾಮ್ರ ಶಾಸನಗಳನ್ನು ವಿಜಯನಗರ ಅರಸರ ಲಾಂಛನವಾಗಿದ್ದ ‘ವರಾಹ’ ಬಳೆಯಿಂದಲೇ ಬಂಧಿಸಿದ್ದು,[40]ಅವರ ಅಧೀನರಾಗಿದ್ದ ಈ ನಾಯಕರೂ ಅವರ ಲಾಂಛನಗಳನ್ನು ಮುಂದುವರೆಸಿಕೊಂಡು ಬಂದಿದ್ದಾಗಿ ತಿಳಿದುಬರುತ್ತದೆ. ಅವರ ತಾಮ್ರ ಶಾಸನಗಳಲ್ಲಿ ತಮ್ಮ ಮನೆದೈವ ‘ಶ್ರೀರಾಮ’[41]ಎಂಬ ಅಂಕಿತವನ್ನು ಉಪಯೋಗಿಸಿರುವುದು ಕಂಡುಬರುತ್ತದೆ. ಅವರ ಶಾಸನಗಳಲ್ಲಿ ಇಮ್ಮಡಿ, ಮುಮ್ಮಡಿ, ನಿಚ್ಚಮದುವಣಿಗ, ಸರಜಾ, ಕೆಂಗಾ ಎಂಬ ಹೆಸರು ಬಂದಿದ್ದು ಇವು ಅವರ ಬಿರುದುಗಳು ಎನ್ನಲಾಗಿದೆ. ಶಾಸನ-೨೧ರಲ್ಲಿ[42]ಶ್ರೀ ವೀರಪ್ರತಾಪ ಶ್ರೀವೆಂಕಟಪತಿ ದೇವರು ಸಿಂಹಾಸನಾ ರೂಢರಾದ ಕಾಲದಲ್ಲಿ ಅವರ ‘ದಕ್ಷಿಣ ಭುಜದಂಡರಾದ’ ಸಂತೇಬೆನ್ನೂರು ಪೂವರಿಕೆಂಗಪ್ಪ ನಾಯಕರ ಪುತ್ರರಾದ ಹಿರಿಯ ಹನುಮಪ್ಪ ನಾಯಕರ ಸಹೋದರ ಬಾಲಗಿರಿ ನಾಯಕರು ಎಂದು ಬಂದಿರುವುದರಿಂದ ಇದು ಅವರಿಗೆ ಸಂದ ಬಿರುದೆ? ಅಥವ ಅವರಿಗೆ ದೊರೆತ ಗೌರವವೇ? ಎಂಬ ಪ್ರಶ್ನೆ ಮೂಡುತ್ತದೆ. ವಿಶ್ವಕೋಶದಲ್ಲಿ ಸರ್ಜಾ ಎಂಬ ಬಿರುದು ಈ ನಾಯಕರಿಗೆ ಹೈದರಾಲಿ ಕೊಟ್ಟಿದ್ದಾಗಿ ನಮೂದಿಸಲಾಗಿದೆ. [43]ಇದು ತಪ್ಪು, ಹೈದರಾಲಿ ಕಾಲ ಕ್ರಿ.ಶ. ೧೭೨೧-೨ ಅದಕ್ಕಿಂತ ಪೂರ್ವದ ಶಾಸನಗಳಲ್ಲೆ ಈ ಸರ್ಜಾ ಬಿರುದು ಪ್ರಯೋಗವಾಗಿದೆ. [44] ಈ ಬಿರುದು ಬಿಜಾಪುರದ – ಆದಿಲ್ ಷಾಹಿ ಸುಲ್ತಾನರು ಸಂತೇಬೆನ್ನೂರು ನಾಯಕರಿಗೆ ಕೊಟ್ಟದ್ದಾಗಿ ಕೈಫಿಯತ್ತು ತಿಳಿಸುತ್ತದೆ.

ಈ ನಾಯಕರ ವಂಶದಲ್ಲಿ ಕೆಂಗಪ್ಪ ನಾಯಕ. ಕೆಂಗಾಹನುಮಪ್ಪ ನಾಯಕ, ಹನುಮ ನಾಯಕ, ಹನುಮಪ್ಪ ನಾಯಕ ಎಂಬ ಹೆಸರುಗಳು ಅನೇಕ ಸಾರೆ ಬಂದಿದ್ದು ಆ ಹೆಸರೇ ಒಬ್ಬನೇ ವ್ಯಕ್ತಿಯದಾಗಿರುವ ಸಾಧ್ಯತೆಯೂ ಇದೆ.

 

[1]ಕರ್ನಾಟಕ ಕನ್ನಡ ವಿಷಯ ವಿಶ್ವಕೋಶ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು ಪುಟ. ೧೪೬೩ (ಕಕವಿವಿ)

[2]ಕರ್ನಾಟಕ ಕೈಫಿಯತ್ತುಗಳು : ಕನ್ನಡ ವಿಶ್ವವಿದ್ಯಾಲಯ ಹಂಪಿ, ಕಲಬುರ್ಗಿ ಎಂ.ಎಂ. ೧೯೯೪ (ಕ.ಕೈ)

[3]ಅಬ್ದುಲ್ ಸತ್ತಾರ್ ಪಿ. (ಸಂಗ್ರಹ) “ತರೀಕೆರೆ ಸಂಸ್ಥಾನದ ಕೈಫಿಯತ್ತು ತರೀಕೆರೆ ಪಾಳೆಗಾರರು’ ಪುಟ – ೪೭ (ತ.ಕ್ಕೆ)

[4]ಸರಜಾ ಹನುಮೇಂದ್ರ ಯಶೋವಿಲಾಸಂ ಮೈ.ವಿ. ಮೈಸೂರು ಪುಟ. ೪ (ಸಹಯವಿ)

[5]ಅಬ್ದುಲ್‌ಸತ್ತಾರ್. ಪಿ. ತರೀಕೆರೆಯ ಪಾಳೆಯಗಾರರು ಲೋಕಪಾವನಿ ಪ್ರಕಾಶನ – ಪಾಂಡರಪುರ – ವಂಶಾವಳಿ ಅನುಬಂಧ

[6]ಮತ್ತಿಘಟ್ಟ ಕೃಷ್ಣಮೂರ್ತಿ ಹೊನ್ನಬಿತ್ತೇವು ಹೊಲಕ್ಕೆಲ್ಲಾ ಸ್ಮರಣ ಸಂಚಿಕೆ – ತರೀಕೆರೆ – ೧೯೬೭ ತರೀಕೆರೆಯ ಪಾಳೆಯಗಾರರು (ತ.ಪಾ.) ಪುಟ. ೭೦

[7]ರೈಸ್ ಗೆಜೆಟಿಯರ್ ಸಂಪುಟ. ಪುಟ ೭

[8]ಕ.ಕ.ವಿ.ವಿ.

[9]ರೈಸರ ಏಪಿಗ್ರಾಫಿಯಾ ಕರ್ನಾಟಕದಲ್ಲಿ (ಎ.ಕ) ಪ್ರಕಟವಾದ ಮತ್ತಿತರ ಈ ನಾಯಕರ ಶಾಸನಗಳು

[10]ತ.ಪಾ ಪುಟ – ೫

[11]ತರೀಕೆರೆ ಸಂಸ್ಥಾನದ ಕೈಫಿಯತ್ತು ರಂಗಪ್ಪನಾಯ್ಕರು ಬರಿಸಿದ್ದು ತ.ಪಾ.

[12]ಕ.ಕೈ.

[13]ತರೀಕೆರೆ ಸಂಸ್ಥಾನದ ಕೈಫಿಯತ್ತು ರಂಗಪ್ಪನಾಯ್ಕರು ಬರಿಸಿದ್ದು ತ.ಪಾ.

[14]ಉತ್ಸಂಗಿ ವೆ….. ಸಲ್ವ ಸಂತೇಬೆನ್ನೂರು ಕೈಫಿಯತ್ತು ಕ.ಕೈ. ಪುಟ – ೪೨೫

[15]ಸ.ಹ.ಯ.ವಿ. ಪುಟ-೪

[16]ಶ್ರೀ ಕೂಡ್ಲಿ-ಶೃಂಗೇರಿಮಠದ ಪ್ರಾಚೀನ ಶಾಸನ ಲೇಖನ ಸಂಗ್ರಹ ಭಾಗ-೧ ಕೂಡ್ಲಿ (ಪ್ರಕಟಣೆ ೧೯೬೫) (ಶ್ರೀ ಕೂಡ್ಲಿ ಶೃಂಗೇರಿ ಮಠದ ಶಾಶನಗಳು)

[17]ಅದೇ

[18]ಅದೇ

[19]ಏ.ಕ.ಸಂ. ೭ (ಶಿವಮೊಗ್ಗ ಭಾಗ-೧)

[20]ತ.ಪಾ. ಪುಟ-೯

[21]ಸ.ಹ.ಯ.ವಿ. ಪುಟ – ೩

[22]ಅದೇ ಪೀಠಿಕೆ XVIII

[23]ಉತ್ಸಂಗಿ ವೇಂಟಿಕೆ ಸಲ್ಲುವ ಸಂತೇಬೆನ್ನೂರು ಕೈಫಿಯತ್ತು ಕ.ಕೈ.ಹಂಪಿ.

[24]ಕ.ಕ.ವಿ.ವಿ. ಪು.೮

[25]ಏ.ಕ. ಸಂಪುಟಗಳು ೬.೭.೧೧.೧೨

[26]ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ ತ್ರೈಮಾಸಿಕ ವರದಿ ಸಂ. ೧೮

[27]ಸೌತ್ ಇಂಡಿಯನ್ ಇನ್ಸ್‌ಸ್ಕ್ರಿಪ್‌ಷನ್ಸ್ (ಸೌ.ಇಂ.ಇ.)

[28]ಮೈಸೂರು ಪ್ರಾಚ್ಯ ಸಂಶೋಧನಾ ಇಲಾಖಾ ವರದಿ ೧೯೨೫-೧೯೨೭

[29]ಶ್ರೀ ಕೂಡ್ಲಿ ಶೃಂಗೇರಿ ಮಠದ ಶಾಸನಗಳು

[30]ಸೆಲಕ್ಷನ್‌ಫ್ರಂ ದಿ ರೆಕಾರ್ಡ್ಸ್ ಆಫ್‌ದಿ ಶೃಂಗೇರಿ ಮಠ ಸಂ. ೧ (೧೯೨೭) ಶೃಂಗೇರಿ

[31]ಎ.ಕೆ.ಶಾಸ್ತ್ರಿ, ಶೃಂಗೇರಿ ಮಠದ ಕಡತಗಳು (ಕಡತ ೧೦೨, ೧೨೨, ೧೬೭)

[32]ಎ.ಕ. ಸಂ. ೬.೭.೧೧.೧೨

[33]ಎ.ಕ. ಸಂ.೭ (ಶಿವಮೊಗ್ಗ ಭಾಗ – ೧, ಶಿವಮೊಗ್ಗ ತಾ. ನಾಗಸಮುದ್ರ ಶಾಸನಗಳು)

[34]ಅದೇ (ಹೊನ್ನಳ್ಳಿ ತಾಲ್ಲೂಕು ದಾಸರಹಟ್ಟಿ ಶಾಸನ)

[35]ಅದೇ (ಚನ್ನಗಿರಿ ತಾಲೂಕು ಹಿರೇಮಾಡಾಳು ಶಾಸನ)

[36]ಎ.ಕ. ಸಂ. ೬ (ಕಡೂರು – ತರೀಕೆರೆ ತಾಲ್ಲೂಕು ತಾಮ್ರ ಶಾಸನ)

[37]ಅದೇ

[38]ಅದೇ

[39]ಅದೇ

[40]ಅದೇ

[41]ಅದೇ

[42]ಅದೇ

[43]ಅದೇ

[44]ಕ.ಕ.ವಿ.ವಿ. ಪುಟ – ೭೨೨