ಪಯ್ವರ : ಪಯ್ವರನ ಉಲ್ಲೇಖ ದೊರೆತಿರುವುದು ಒಂದೇ ಒಂದು ಶಾಸನದಲ್ಲಿ, ಅದು ಕ್ರಿ.ಶ. ೧೦೧೭ರ ಕನವಳ್ಳಿ ಸಿರಿಯಾಗರನ ಶಾಸನದಲ್ಲಿ.[1] ತೃಟಿತ ಶಾಸನವಾದಾಗ್ಯೂ ಇಲ್ಲಿ ಈತ ಸಿರಿಯಾಗರನ ತಂದೆ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲೇ ಈತನ ಪತ್ನಿ ಚಾರಕಬ್ಬೆಯ ಉಲ್ಲೇಖವೂ ಇದೆ. ಆದರೆ ಈತ ರಾಜ್ಯಭಾರ ಮಾಡಿದ ಕಾಲ ಯಾವುದು ಎಂಬುದು ಸ್ಪಷ್ಟವಿಲ್ಲ. ಬಹುಶಃ ಶಾಂತಿವರ್ಮನ ನಂತರ ಕೆಲಕಾಲ ಈತ ಬೆಳ್ಹುಗೆ ಭಾಗದಲ್ಲಿ ಆಳ್ವಿಕೆ ನಡೆಸಿರಬಹುದಾದ ಸಾಧ್ಯತೆಯಿದೆ. ಕ್ರಿ.ಶ. ೧೦೬೮-೬೯ರ ಶಾಸನದಲ್ಲಿ[2] ಹಾಗೂ ಕ್ರಿ.ಶ. ೧೦೭೧ರ ಶಾಸನದಲ್ಲಿ[3] ಪಯ್ವರ ಬರುತ್ತಾನಾದರೂ ಆತನಿಗೂ ಈ ವಂಶದ ಪಯ್ವರನಿಗೂ ಸಂಬಂಧವಿರುವ ಸಾಧ್ಯತೆಯಿಲ್ಲ. ಈ ಕಾಲದ ಶಾಸನಗಳು ಮಾಟೂರ ವಂಶದ ಸತ್ಯಾಶ್ರಯ, ವಿಜಯಾದಿತ್ಯನನ್ನು ಉಲ್ಲೇಖಿಸಿದೆ.

ಸಿರಿಯಾಗರ: ಈ ಹಿಂದೆ ಈತ ಪಯ್ವರನ ಮಗ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಕ್ರಿ.ಶ. ೧೦೧೭ರ ಕನವಳ್ಳಿ ಶಾಸನವು ಸಿರಿಯಾಗರ ಎರಡೆಪ್ಪತ್ತರ ಮನ್ನೆಯ ಹಾಗೂ ಐದು ಹನ್ನೆರಡರ ಆಳ್ವಿಕೆ ನಡೆಸುತ್ತಿದ್ದುದನ್ನು ಉಲ್ಲೇಖಿಸಿದೆ.[4] ಇದೇ ಶಾಸನ ಇವನನ್ನು ‘ಮಲೆಗೆ ಮಾರ್ತ್ತಂಡ, ಸಮರ ಪ್ರಚಂಡ, ನುಡಿದಂತೆ ಗಂಡ’ ಎಂದೆಲ್ಲ ಹೊಗಳಿವೆ. ಮುಂದಿನ ಸಾಲು ಅಪೂರ್ಣವಾಗಿದ್ದು ಶಾಸನದ ವಿಷಯೋದ್ದೇಶ ತಿಳಿಯುವುದಿಲ್ಲ. ಅಂತೆಯೇ ಈ ಸಿರಿಯಾಗರನ ಆಳ್ವಿಕೆಯ ಕಾಲ ಕೂಡ ಸ್ಪಷ್ಟವಾಗಿಲ್ಲ. ಕ್ರಿ.ಶ. ೧೦೮೮ರ ಇನ್ನೊಂದು ಶಾಸನ ಈ ಸಿರಿಯಾಗರನನ್ನು ಹೆಸರಿಸಿದೆ.[5] ಆದರೆ ಈ ಹೊತ್ತಿಗೆ ಈತ ರಾಜ್ಯಾಡಳಿತದ ಚುಕ್ಕಾಣಿ ಹಿಡಿದಿರಲಿಲ್ಲ. ಬದಲಿಗೆ ಮಾಟೂರ ವಿಜಯಾದಿತ್ಯನ ಆಡಳಿತದಲ್ಲಿ ಅವನಿಗಿಂತಲೂ ಹಿರಿಯನಾಗಿದ್ದಾನಷ್ಟೆ. ಆದರೆ ಈ ಕನವಳ್ಳಿ ಶಾಸನಕ್ಕೂ (ಕ್ರಿ.ಶ. ೧೦೧೭) ಕ್ರಿ.ಶ. ೧೦೮೮ರ ನಡುವಿನ ಅಂತರದಲ್ಲಿ ಈ ವಂಶದ ಇನ್ನೂ ನಾಲ್ಕು ಜನ ಅರಸರು ಎಡೆನಾಡ ಭಾಗದಲ್ಲಿ ಆಳ್ವಿಕೆ ನಡೆಸಿದುದರ ಉಲ್ಲೇಖವಿದೆ. ಆದರೆ ಅವರು ಯಾರೂ ಬೆಳ್ಹುಗೆ ಭಾಗವನ್ನಾಗಲೀ, ಐದು-ಹನ್ನೆರಡರ ಮನ್ನೆಯಗಳನ್ನಾಗಲೀ ಆಳಿದಂತೆ ಉಲ್ಲೇಖವಿಲ್ಲ. ಬಹುಶಃ ಸಿರಿಯಾಗರ ಪಯ್ವರನ ನಂತರ ಕೆಲಕಾಲ ಬೆಳ್ಹುಗೆಯಷ್ಟನ್ನೇ ಆಳಿರಬಹುದು.

ಮದೇವೂರ ಸಾಂತಯ್ಯ : ಕ್ರಿ.ಶ. ೧೦೧೭ರಿಂದ ಕ್ರಿ.ಶ. ೧೦೩೧ ರ ವರೆಗೂ ಸಿರಿಯಾಗರ ಎಡೆನಾಡನ್ನು ಪ್ರತಿನಿಧಿಸುತ್ತಿದ್ದು, ತದನಂತರ ಇದೇ ವಂಶದ ಸಾಂತಯ್ಯನಿಗೆ ಬಿಟ್ಟುಕೊಟ್ಟಂತೆ ಕಾಣುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಾಟೂರ ವಂಶೀಯ ಅರಸನೊಬ್ಬನಿಗೆ ‘ಮದೇವೂರ’ ಸೇರಿಕೊಂಡಿದ್ದು. ಕ್ರಿ.ಶ. ೧೦೩೨ರ ಎಡೆನಾಡಿನ ಕೆಲವು ಶಾಸನಗಳು ಸಾಂತಯ್ಯನನ್ನು ಮದೇವೂರ ಸಾಂತಯ್ಯ ಎಂದೇ ಕರೆದಿವೆ.[6] ಸಾಂತಯ್ಯ ಮಾಟೂರು ವಂಶಕ್ಕೆ ಹೇಗೆ ಸಂಬಂಧಿ ಎಂಬುದು ಅಸ್ಪಷ್ಟವಾಗಿದೆ.

ಬಿ.ಆರ್. ಗೋಪಾಲರು ಕ್ರಿ.ಶ. ೧೦೩೨ರ ಶಾಸನಗಳನ್ನು ಗಮನಿಸಿ ಕ್ರಿ.ಶ. ೧೦೩೩ರಲ್ಲಿ ಬರುವ ಆಲಯ್ಯನ ತನಕ ಈ ಸಾಂತಯ್ಯ ಆಳ್ವಿಕೆ ನಡೆಸಿರಬಹುದು ಎಂದಿದ್ದಾರೆ.[7]ಕ್ರಿ.ಶ. ೧೦೩೨ರ ಒಟ್ಟು ಐದು ಶಾಸನಗಳು ಒಂದೇ ಕಡೆ ದೊರೆತಿವೆ. ಅವು ವೀರಗಲ್ಲುಗಳಾಗಿದ್ದು ತುರು ಸಂಬಂಧಿ ಕಾಳಗಗಳನ್ನು ಚಿತ್ರಿಸಿವೆ. ಈ ಕದನದಲ್ಲಿ ಮಡಿದವರ ನೆನಪಿಗಾಗಿ ನಿಲ್ಲಿಸಿದ ಸ್ಮಾರಕಗಳು ಇವು. ಇಲ್ಲಿ ಶಾಸನಗಳ ವಿಷಯ ಒಂದೇ ಆದರೂ ಮಡಿದ ವ್ಯಕ್ತಿಗಳು ಬೇರೆ ಬೇರೆ. ಇಲ್ಲಿ ಪೆರ್ಗಡೆ ಮಾದಿಣಯ್ಯನಿಗೂ, ಕದಂಬ ನಾರಾಯಣನಿಗೂ ಘರ್ಷಣೆ ನಡೆದಂತೆ ದಾಖಲಿಸಿದ್ದು, ಕದಂಬರ ಸಾಂತಯ್ಯನೂ ಯುದ್ಧದಲ್ಲಿ ಪಾಲ್ಗೊಂಡಂತೆ ಉಲ್ಲೇಖವಿದೆ. ಇಲ್ಲಿ ಮಾಟೂರು ಸಾಂತಯ್ಯನು ನೇರವಾಗಿ ಈ ಘರ್ಷಣೆಯಲ್ಲಿ ಭಾಗಿಯಾಗಿಲ್ಲ. ಶಾಸನಗಳು ಈತನಿಗೆ ವಿಶೇಷ ಬಿರುದನ್ನೇನೂ ನೀಡಿದಲ್ಲ ಆದರೆ ಈತ ಮಾಟೂರ ವಂಶಸ್ಥ ಎಂಬುದು ಸ್ಪಷ್ಟವಾಗಿದೆ.

ಆಲಯ್ಯ : ಕ್ರಿ.ಶ. ೧೦೩೨ರ ಒಂದು ಶಾಸನವನ್ನು ಬಿ.ಎಲ್.ರೈಸರು ಆಲಯ್ಯನ ಶಾಸನ ಎಂದಿದ್ದಾರೆ.[8] ಈ ಶಾಸನದಲ್ಲಿ[9]ಮಾಟೂರ ವಂಶೋದ್ಭವ xxx ಜೋಳವಂಸ, ನಂದನವನಚ್ಛತ್ರ ಸರಾಕಾಗತತನುತ್ರಂ ಹxxx ನಾಶ್ರಿತ ಜನಕಾಂಚನ ದರ್ಪಣಧ್ವಜ ಸುರತಮxxx ಬ್ರಹ್ಮಕ್ಷತ್ರಿಯ ಸೂತ್ರಧಾರ ಸಾಮಂತ ಗೋಪಾxxx ಲಬ್ಧವರ ಪ್ರಸಾದ ನಾಮಾದಿ ಸಮಸ್ತ ಪ್ರಸಸ್ತಿ ಸಹಿತxxxಯ್ಯ ದೇವನು….’ ಎಂದಿದೆ. ಹೆಸರು ಸ್ಪಷ್ಟವಾಗಿಲ್ಲವಾದಾಗ್ಯೂ ಇದು ಆಲಯ್ಯನ ಶಾಸನವೆಂದು ಊಹಿಸಬಹುದು. ಅಸ್ಪಷ್ಟವಾಗಿರುವ ಈ ಶಾಸನದ ವಿಷಯ ಸಾರೆಗ್ರಾಮದ ಬ್ರಾಹ್ಮಣರ ಕುರಿತಾಗಿದೆ. ಸಾಂತಯ್ಯ ಹಾಗೂ ಆಲಯ್ಯ ಒಂದೇ ಕಾಲದಲ್ಲಿ ಇದ್ದಂತೆ ಕಂಡು ಬರುತ್ತಿದೆ. ಅಥವಾ ತೀರಾ ಕಿರಿದಾದ ಅವಧಿಯಲ್ಲಿ ಸಾಂತಯ್ಯ, ನಂತರ ಆಲಯ್ಯ ಅಧಿಕಾರಕ್ಕೆ ಬಂದಿರಬೇಕು. ಈ ಆಲಯ್ಯನ ಕುರಿತಾದ ಎರಡನೇ ಶಾಸನದ ಕಾಲಮಾನದಲ್ಲಿಯೂ ಅಸ್ಪಷ್ಟತೆ ಇದೆ.[10] ಇಲ್ಲಿ ‘ಶಕನೃಪಕಾಳಾತೀತ ಸಂವತ್ಸರ ಶತಂಗಳ್‌೯೫೮ನೆ ಅಂಗೀರಸ ಸಂವತ್ಸರದ ಪುಷ್ಯ ಹುಣ್ಣಮಿ ವಡ್ಡವಾರದ ಉತ್ತರಾಯಣ ಸಂಕ್ರಾಂತಿ’ ಎಂದಿದೆ. ಈ ಶಕ ೯೫೯ ಅಂಗೀರಸ ಸಂವತ್ಸರವಲ್ಲ, ಆಂಗೀರಸ ಸಂವತ್ಸರ ಶಕ ೯೫೪ ಪುಷ್ಯ ತಿಂಗಳು ಬಂದಿದ್ದರಿಂದ ಕ್ರಿ.ಶ. ೧೦೩೩ ಆಗುತ್ತದೆ. ಇಲ್ಲಿ ಸಂವತ್ಸರವನ್ನು ಗಮನಿಸಿ ವರುಷವನ್ನು ಗುರುತಿಸಿಕೊಂಡಾಗ, ಆಲಯ್ಯ ಕ್ರಿ.ಶ. ೧೦೩೩ ರಲ್ಲಿ ಕದಂಬ ಕುಂದಮನೊಂದಿಗೆ ಕಾದು ಮರಣ ಹೊಂದಿದ ಎಂದು ತಿಳಿಯಬೇಕು. ಅಂದಾಗ ಈತನೂ ಸಾಂತಯ್ಯನಂತೆ ತೀರಾ ಕಡಿಮೆ ಅವಧಿಯಲ್ಲಿ ಆಳ್ವಿಕೆ ನಡೆಸಿ ಮಡಿದಂತಿದೆ. ಅಥವಾ ಈತ ಎಡೆನಾಡ ಭಾಗದಿಂದ ಇನ್ನೂ ಹಿಂದಿನಿಂದಲೂ ಅಧಿಕಾರಿಯಾಗಿದ್ದು ಶಾಸನಗಳು ದಾಖಲಿಸಿಲ್ಲದಿರಬಹುದು. ಆಲಯ್ಯ ಬನವಾಸಿ ಹಾಗೂ ಸಾಂತಳಿಗೆಯನ್ನು ಅನೇಕ ಚ್ಛತ್ರಚ್ಛಾಯೆಯಿಂದಾಳುತ್ತಿದ್ದ ಎಂದು ಕ್ರಿ.ಶ. ೧೦೩೩ರ ಅದೇ ಶಾಸನ ದಾಖಲಿಸಿದೆ. ಈ ಅಂಶವನ್ನು ಗಮನಿಸಿದಾಗ ಆಡಳಿತಾನುಕೂಲದ ದೃಷ್ಟಿಯಿಂದ ಸಾಂತಯ್ಯ, ಆಲಯ್ಯ ಬೇರೆ ಬೇರೆ ವಿಭಾಗಗಳನ್ನು ನಿರ್ದೇಶಿಸುತ್ತಿರುವ ಸಾಧ್ಯತೆಯಿದೆ. ಇಲ್ಲಿ ಉಲ್ಲೇಖವಾದ ಶಕ ೯೫೯ ಬಹುಶಃ ಶಾಸನ ಕಾಲವೆನ್ನಿಸುತ್ತದೆ. ಈ ಶಾಸನದ ವಿಷಯ ಆಲಯ್ಯನ ಮಗ ಜಯಸಿಂಘನನ್ನು ಕೇಂದ್ರೀಕರಿಸಿದೆ. ಇಲ್ಲಿ ಆಲಯ್ಯನನ್ನು ಪರಸೈನ್ಯಭೈರವ, ರಿಪುಬಳಮಲ್ಲ, ಸಮರೈಕವೀರ, ಪರಾಕ್ರಮಸಿಂಗ, ತೊಲಗದಗಂಡ, ಶೌರ್ಯಾಗಾರ ಎಂದೆಲ್ಲ ಹೊಗಳಿದೆ. ಆತ ಎಡೆನಾಡಿನ ಕುಪ್ಪಗಡ್ಡೆ ಬಯಲಲ್ಲಿ ಕುಂದಮನೊಡನೆ ಹೋರಾಡದ ಘೋರ ಚಿತ್ರಣವನ್ನು ಕೂಡ ಶಾಸನ ಕವಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಇದೇ ಶಾಸನವನ್ನು ಬಿ.ಆರ್. ಗೋಪಾಲರು ಕ್ರಿ.ಶ. ೧೦೩೭ ಡಿಸೆಂಬರ್‌೨೪ ಎಂದು ಗುರುತಿಸಿದ್ದಾರೆ.[11]

ಜಯಸಿಂಘದೇವ : ಆಲಯ್ಯನ ಕುರಿತಾದ ಶಾಸನದಲ್ಲಿಯೇ ಆತನ ಮಗ ಜಯಸಿಂಘನ ಉಲ್ಲೇಖವಿದೆ.[12] ಈ ಶಾಸನ ಸಮಸ್ತಶಾಸ್ತ್ರ ಪಾರಾವರ, ಗಣಿಕಾಮನೋಜ, ಅಶ್ವವಿದ್ಯಾದಿತ, ಪಾಕಶಾಸನ, ಗೀತಕಂಜಾಸನ, ವಿವಿಧ ಬುಧ ಮಾಗಧ ಚಿಂತಾಮಣಿ ಇನ್ನೂ ಮುಂತಾಗಿ, ತದನಂತರ ಈತನ ಶೌರ್ಯವನ್ನು ಹೊಗಳುತ್ತ ಅನೇಕ ಮನ್ನೆಯ ಅರಸರನ್ನು ಸಾಮಂತ, ಮಾಂಡಳೀಕರನ್ನು, ಮಲೆ ಅರಸರನ್ನು, ಬೇಡ, ಕುರುಬರನ್ನು ಹತ್ತಿಕ್ಕಿದ್ದ ಎಂದಿದೆ. ಮುಂದೆ ತನ್ನ ತಂದೆ ಆಲಯ್ಯನ ನೆನಪಿಗಾಗಿ ಕುಪ್ಪಗಡ್ಡೆಯಲ್ಲಿ ಆಲೇಶ್ವರ ನಿರ್ಮಿಸಿ ಎಡೆನಾಡ ಬಳಿಯ ‘ಗೆದೆಯ’ ಗ್ರಾಮವನ್ನು ದೇವರ ನಿತ್ಯ ನೈಮಿತ್ಯಗಳಿಗಾಗಿ ದಾನಬಿಟ್ಟ ಉಲ್ಲೇಖ ಬರುತ್ತದೆ. ಆಲಯ್ಯನ ನಂತರ ಜಯಸಿಂಘದೇವನೂ ತೀರಾ ಕಡಿಮೆ ಅವಧಿ ಆಡಳಿತ ನಡೆಸಿದಂತೆ ಕಂಡುಬರುತ್ತದೆ. ಕ್ರಿ.ಶ. ೧೦೪೦ರ ಹೊತ್ತಿಗೆ ಮತ್ತೆ ಕದಂಬರು ಈ ಭಾಗವನ್ನು ಆಕ್ರಮಿಸಿಕೊಂಡಿರುವ ದಾಖಲೆಯಿದೆ.[13]

ಸತ್ಯಾಶ್ರಯ : ಕ್ರಿ.ಶ. ೧೦೩೩ರಲ್ಲಿ ಕಾಣಿಸಿಕೊಂಡ ಜಯಸಿಂಘದೇವನ ನಂತರ ಸುಮಾರು ಇಪ್ಪತ್ನಾಲ್ಕು ವರ್ಷಗಳನಂತರ ಅಂದರೆ ಕ್ರಿ.ಶ. ೧೦೫೭ರ[14]ಶಾಸನವೊಂದರಲ್ಲಿ ಈ ವಂಶದ ಸತ್ಯಾಶ್ರಯನ ಉಲ್ಲೇಖ ಸಿಗುತ್ತದೆ. ಈ ಶಾಸನ “….ಸಮಧಿಗತ ಪಂ(ಚ) ಮಹಾಸಬ್ಧ(ಮ)ಹಾ ಮಣ್ಡಳೇಸ್ವರಂ ಬ್ರಹ್ಮಕ್ಷತ್ರಿಯ ಸೂತ್ರಧಾರಿ ನನ್ದನ ವನಚ್ಛತ್ರ ಹಯಲಾಂಚನ ದರ್ಪ್ಪಣಧ್ವಜ ವಿರಾಜಮಾನ ಕಾಲೀನ ಹಿವ್ಛತ್ರಾವತಾರಂ ನೇಕಾಂಗ ವೀರಂ ಮಾಟೂರ ವಂಶೋದ್ಭವಂ ಪರಿವಾರ ಸಮುದ್ಭಘನದಿದನ್ತೆಗಣ್ಣ ಕೀರ್ತ್ತಿಯ ದಡ್ಡೆನಾಮಾದಿ ಸಮಸ್ತ ಪ್ರಸಸ್ತಿ ಸಹಿತಂ ಶ್ರೀ ಮ್ನಮ ಹಾ ಮಣ್ಡಳೇಶ್ವರಂ ಸತ್ಯಾಶ್ರಯ ದೇವಮ್‌ ||” ಎಂದಿದೆ. ಈ ಶಾಸನ ಕಲ್ಯಾಣಿ ಚಾಲುಕ್ಯ ತ್ರೈಲೋಕ್ಯ ಮಲ್ಲದೇವನ ಕಾಲದ್ದು. ಶಾಸನದಲ್ಲಿ ಎಡೆನಾಡಿನ ಚೀಲನೂರು ಬಮ್ಮ ಗಾವುಂಡನಿಗೆ ಸತ್ಯಾಶ್ರಯ ಕಾರುಣ್ಯಗೈದು ಮೂರು ಊರಿನ ಗಾವುಂಡಿಕೆಯನ್ನು ವಹಿಸಿಕೊಟ್ಟಂತೆ ದಾಖಲಿಸಿದೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಡೆನಾಡಿನ ಅನೇಕ ಗಾವುಂಡರನ್ನು ಪಡೆವಳರನ್ನು ಶಾಸನ ಹೆಸರಿಸಿದೆ. ಸತ್ಯಾಶ್ರಯನ ಕುರಿತು ದೊರೆತ ಶಾಸನ ಕೂಡ ಇದೊಂದೆ. ಈತ – ಕೂಡ ಈ ವಂಶಕ್ಕೆ ಹೇಗೆ ಸಂಬಂಧಿಸಿದ್ದಾನೆಂಬುದು ಸ್ಪಷ್ಟವಾಗಿಲ್ಲ.

ವಿಜಯಾದಿತ್ಯದೇವ : ಕ್ರಿ.ಶ. ೧೦೧೭ ರಿಂದ ಕ್ರಿ.ಶ. ೧೦೮೮ರ ನಡುವಿನ ಅವಧಿಯಲ್ಲಿ ಬೆಳ್ಹುಗೆ ಭಾಗದಲ್ಲಿ ಮಾಟೂರ ವಂಶೀಯರ ಶಾಸನಗಳು ದೊರೆಯುವುದಿಲ್ಲ. ಕ್ರಿ.ಶ. ೧೦೮೮ರ ಉಕ್ಕುಂದ ಶಾಸನ ಈ ವಂಶದ ವಿಜಯಾದಿತ್ಯ ದೇವನನ್ನು ಹೆಸರಿಸಿದೆ.[15] ಇಲ್ಲಿ ಈತನನ್ನು “….ಸ್ವಸ್ತಿ ಸಮಧಿಗತ ಪಂಚ ಮಹಾಸಬ್ದ ಮಹಾಮಣ್ಡಳೇಸ್ವರಂ ತ್ರಿಕುನ್ದಪುರವರಾದೀಸ್ವರಂ ಬ್ರಹ್ಮಕ್ಷತ್ರಿಯ ಸಿಖಾಮಣಿ ಸುಭಟಸಿರೋಮಣಿ ಮಾಟೂರ ವಂಸೋದ್ಭವಂ ಯುವತೀ ಜನ ಚಿತ್ತೋದ್ಭವಂ ನನ್ದನವನಚ್ಛತ್ರ ಹಯಲಾಂಚನಂ ದತ್ತಾರ್ತ್ಥಿ ಕಾಂಚನ ದರ್ಪಣ ಧ್ವಜ ವಿರಾಜಮಾನಂ ದಾನಕಾನೀನ ನಹಿಚ್ಛತ್ರಾವತಾರನೇಕಾಂಗ ವೀರಂ ಸಾಹಸೋತ್ತುಂಗ ನಯ್ಯನ ಸಿಂಗ ನಾಮಾದಿ ಸಮಸ್ತ ಪ್ರಸಸ್ತಿ ಸಹಿತಂ ಶ್ರೀ ಮನ್ಮಹಾ ಮಣ್ಡಳೇಸ್ವರಂ ವಿಜೆಯಾದಿತ್ಯ ದೇವ…..” ಎಂದೆಲ್ಲ ಹೇಳಿದೆ. ಶಾಸನೋಲ್ಲೇಖದ ಅನ್ವಯ ಈತ ಬೆಳ್ಹುಗೆ ಪ್ರದೇಶದ ಮಂಡಳೇಶ್ವರ ಎಂಬುದು ಸ್ಪಷ್ಟವಾಗಿದೆ. ಹಾಗೆಯೇ ಈ ಹೊತ್ತಿಗೆ ಅಧಿಕಾರದಲ್ಲಿರಲಿಲ್ಲ. ಈ ಶಾಸನದ ಕಾಲದಲ್ಲಿ ಆರನೆಯ ವಿಕ್ರಮಾದಿತ್ಯನ ಆಳ್ವಿಕೆ ಇತ್ತು. ಜೆ.ಎಂ.ನಾಗಯ್ಯನವರು ವಿಜಯಾದಿತ್ಯನನ್ನು ಕಲ್ಯಾಣಿ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಮುಖ್ಯ ಮಾಂಡಳೀಕ ಎಂದು ಹೆಸರಿಸಿದ್ದಾರೆ.[16] ಈ ಉಕ್ಕುಂದ ಶಾಸನದನ್ವಯ ವಿಜಯಾದಿತ್ಯ ಬೆಳ್ಹುಗೆ ಎಪ್ಪತ್ತು, ಎಡೆನಾಡೆಪ್ಪತ್ತು, ಮೂಗುನ್ದ ಹನ್ನೆರಡು, ತಡೆಯೂರು ಹನ್ನೆರಡು, ಕಲ್ವತ್ತಿ ಏಳು, ಸೀವಟ್ಟಿದೂರು, ಹೆದ್ದಸೆ, ಕನ್ನವಳ್ಳಿ ಇನ್ನಿತರ ಮನ್ನೆಯಗಳನ್ನಾಳುತ್ತಿದ್ದ ಎಂಬುದು ಸ್ಪಷ್ಟವಾಗಿದೆ. ಈ ಶಾಸನದ ವಿಷಯ ಉಕ್ಕುಂದದ ದಾಸಗಾವುಂಡ ಶಿವಾಲಯ ನಿರ್ಮಿಸಿದ್ದು. ಈ ಗಾವುಂಡನಿಗೆ ಮಾಟೂರ ಸಿರಿಯಾಗರ ಕೆಲವು ತೆರಿಗೆ ಬಿಟ್ಟು ಕೊಟ್ಟನ್ನು ಹೇಳಿದೆ. ಇಲ್ಲಿ ಆರನೆಯ ವಿಕ್ರಮಾದಿತ್ಯನ ಮಹಾ ದಂಡನಾಯಕ ಸೋಮೇಶ್ವರ ಭಟ್ಟ ಎರಡಾರುನೂರು ಹಾಗೂ ಬನವಾಸಿ ಪ್ರಾಂತ್ಯಗಳನ್ನಾಳುತ್ತಿದ್ದುದನ್ನು ಉಲ್ಲೇಖಿಸಿದೆ. ಈ ವಿಜಯಾದಿತ್ಯ ಕೂಡ ಮಾಟೂರ ವಂಶಕ್ಕೆ ಹೇಗೆ ಸಂಬಂಧಿ ಎಂಬುದು ಅಸ್ಪಷ್ಟವಾಗಿದೆ.

ಇವರ ಕಡೆಯ ಶಾಸನ ಬೆಳ್ಹುಗೆ ಭಾಗದ ಉಕ್ಕುಂದದಲ್ಲಿ ದೊರೆತಿದ್ದು, ಅಲ್ಲಿ ಕಾಲ ಮತ್ತು ಅರಸನ ಹೆಸರು ಎರಡೂ ಅಸ್ಪಷ್ಟವಾಗಿದೆ. ಶಾಸನ ಸಂಪಾದಕರು ಲಿಪಿಯಾಧಾರದಿಂದ ಇದು ಹನ್ನೆರಡನೆ ಶತಮಾನದ ಶಾಸನ ಎಂದಿದ್ದಾರೆ.[17] ಎಡೆನಾಡ ಭಾಗದ ತಾಳಗುಪ್ಪೆ ಗ್ರಾಮದ ಒಂದು ಶಾಸನ[18] ಕ್ರಿ.ಶ. ೧೧೨೭ಕ್ಕೆ ಸೇರಿದ್ದು ಇಲ್ಲೂ ಮಾಟೂರ ಮಾಂಡಳೀಕನ ಹೆಸರು ಅಲಭ್ಯವಾಗಿದೆ.

ಒಟ್ಟಾರೆ ಈ ಎಲ್ಲ ಶಾಸನಗಳನ್ವಯ ಹೆಚ್ಚೆಯ ಅರಸರು ಕ್ರಿ.ಶ. ೯೦೩ ರಿಂದ ಕ್ರಿ.ಶ. ೧೧೨೭ರ ವರೆಗೆ ಸ್ಪಷ್ಟವಾಗಿ ಎಡೆನಾಡು ಹಾಗೂ ಬೆಳ್ಹುಗೆ ಪ್ರದೇಶವನ್ನೂ, ಕೆಲವು ಮನ್ನೆಯಗಳನ್ನು ನಿರಂತರವಾಗಿ ಆಳಿದ್ದು ತಿಳಿದುಬರುತ್ತದೆ. ಬೆಳ್ಹುಗೆಯ ಕನವಳ್ಳಿ, ಎಡೆನಾಡನ ಹೆದ್ದಸೆ ಇವರ ತಾತ್ಕಾಲಿಕ ಆಡಳಿತ ಕೇಂದ್ರಗಳಾಗಿರುವ ಸಾಧ್ಯತೆ ಇದೆ.

ಮಾಟೂರ ವಂಶೀಯರ ಆಡಳಿತ ವ್ಯಾಪ್ತಿಗೊಳಪಟ್ಟ ಪ್ರದೇಶ

ಶಾಸನಗಳು ಸ್ಪಷ್ಟವಾಗಿ ಈ ಅರಸರು ಇಂತಿಂತಹ ಪ್ರದೇಶಗಳ ಆಡಳಿತ ಹೊಂದಿದ್ದರು ಎಂದು ಸೂಚಿಸಿವೆ. ಮುಖ್ಯವಾಗಿ ಇವರು ಧಾರವಾಡ ಜಿಲ್ಲೆಯ ಹಾವೇರಿ, ರಾಣೇಬೆನ್ನೂರು ಹಾಗೂ ಹಿರೇಕೆರೂರು ತಾಲ್ಲೂಕಿನ ವ್ಯಾಪ್ತಿಲ್ಲಿಯೂ, ಶಿವಮೊಗ್ಗ ಜಿಲ್ಲೆಯ ಸೊರಬ, ಸಾಗರ, ಶಿಕಾರಪುರ, ತೀರ್ಥಹಳ್ಳಿ, ಹೊಸನಗರದ ಕೆಲಭಾಗಗಳನ್ನೂ ಆಳುತ್ತಿದ್ದರು.

ಎಡೆನಾಡು-೭೦: ಬನವಾಸಿ ೧೨೦೦೦ ಪ್ರಾಂತ್ಯದಲ್ಲಿ ಬರುವ ಮುಖ್ಯ ಉಪವಿಭಾಗ ಈ ಎಡೆನಾಡು-೭೦ ಈ ಭಾಗವನ್ನು ಸ್ಪಷ್ಟವಾಗಿ ಇದುವರೆಗೆ ಗುರುತಿಸಿದಂತೆ ಕಂಡು ಬರುತ್ತಿಲ್ಲ. ಮೈಸೂರು ಜಿಲ್ಲೆಯ ನಂಜನಗೂಡು, ಚಾಮರಾಜನಗರ, ತೀ. ನರಸೀಪುರ, ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕ್ ಶಾಸನಗಳು ಎಡೆನಾಡು, ಎಡತೊರೆನಾಡು ಎಂದಿವೆ.[19] ಎಡೆನಾಡಿನ ಮೊದಲ ಉಲ್ಲೇಖ ೭-೮ನೇ ಶತಮಾನದ ಬಸವನಪುರದ ಶಾಸನದಲ್ಲಿ ಕಂಡು ಬರುತ್ತದೆ.[20] ಎಡೆನಾಡು, ಎಡತೊರೆನಾಡು ಒಂದೇ ಆಗಿದ್ದು ಎರಡು ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಈ ಎಡೆನಾಡೆಪ್ಪತ್ತು, ಮೇಲೆ ಉಲ್ಲೇಖಿಸಲಾದ ಎಡೆನಾಡು, ಎಡತೊರೆನಾಡು ಪ್ರಾದೇಶಿಕವಾಗಿ ಬೇಎ ಬೇರೆ. ಎಡೆನಾಡು, ಎಡತೊರೆನಾಡು ಪದದ ನಿಷ್ಪತ್ತಿ ಹೀಗಿದೆ. ಎಡ(ಡೆ)+ತೊ (ದೊ)ರೆ+ನಾಡು. ಎಡ ಎಂದೆ ಎಡೆಯಲ್ಲಿ ಇರುವ ಸ್ಥಳಗಳೆಂದೂ, ಎಡತೊರೆ, ಎಡ ದೊರೆ ಎಂದರೆ ಎರಡು ನದಿಗಳ ನಡುವಿನ ಪ್ರದೇಶ ಎಂದೂ, ರಾಜ್ಯದ ಎಡಕ್ಕೆ ಇರುವ ನಾಡು ಎಂದೂ ತಿಳಿಯಬಹುದು.[21] ಎಡೆನಾಡು ಎಂಬುದು ಆಡಳಿತಾಂಗ ವಿಭಾಗವಲ್ಲದೇ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶವನ್ನು ಸಹ ಸೂಚಿಸುತ್ತದೆ.[22] ಈ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು, ಶಾಸನಾಧಾರ ಬಳಸಿಕೊಂಡು ಬನವಾಸಿ ೧೨೦೦೦ದ ವ್ಯಾಪ್ತಿಯಲ್ಲಿ ಬರುವ ಎಡೆನಾಡು-೭೦ನ್ನು ಗುರುತಿಸಲಾಗಿದೆ. (ನಕಾಶೆ ನೋಡಿ)

ಈ ಎಡೆನಾಡೆಪ್ಪತ್ತನ್ನು ಶಿವಮೊಗ್ಗ ಜಿಲ್ಲಾ ಶಾಸನಗಳು ಸೂಚಿಸಿರುವ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ನಕಾಶೆಯ ಮೂಲಕ ಹೀಗೆ ಗುರುತಿಸಬಹುದು. ಪಶ್ಚಿಮಕ್ಕೆ ವರದಾನದಿ, ದಕ್ಷಿಣಕ್ಕೆ ಮಾವಿನ ಹೊಳೆ ಹಾಗೂ ಸಾಂತಳಿಗೆ ನಾಡು. ಪುರ್ವಕ್ಕೆ ದಂಡಾವತಿ ನದಿ, ಜಿಡ್ಡುಳಿಗೆ ನಾಡು ಹಾಗೂ ನಾಗರ ಖಂಡ ಎಪ್ಪತ್ತು. ಉತ್ತರಕ್ಕೆ ಬನವಾಸಿ, ಹಾನಗಲ್ಲು-ಐನೂರು. ಈ ಪ್ರದೇಶಗಳ ನಡುವಿನ ಅಥವಾ ವರದಾ, ದಂಡಾವತಿ, ಮಾವಿನ ಹೊಳೆ ನಡುವಿನ ಸೊರಬ ಮತ್ತು ಸಿರಸಿ ತಾಲ್ಲೂಕಿನ ಹಳ್ಳಿಗಳೇ ಎಡೆನಾಡು ಪ್ರದೇಶ. ಹಾಗಾಗಿ ಈ ಎಡದೊರೆ-೭೦ ಹಾಗೂ ಈ ಎಡೆನಾಡು-೭೦ ಪ್ರಾದೇಶಿಕವಾಗಿ ಬೇರೆ, ಬೇರೆ ಎಂದು ಸ್ಪಷ್ಟವಾಗಿದೆ. ಎಡದೊರೆ-೭೦ರ ಉಲ್ಲೇಖ ಶಿಕಾರಿಪುರ, ಹೊನ್ನಾಳಿ, ಶಿವಮೊಗ್ಗ ತಲ್ಲೂಕಿನ ಶಾಸನಗಳಲ್ಲಿ ಕಂಡುಬರುತ್ತದೆ.

ಬೆಳ್ಹುಗೆ-೭೦ : ಎರಡಾರು ನೂರರಲ್ಲಿ ಬರುವ ಪುಲಿಗೆರೆ ಮುನ್ನೂರರ ಉಪವಿಭಾಗವಿದು. ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಕೆಲಗ್ರಾಮಗಳನ್ನು ಹೊಂದಿತ್ತು. ಹಿಂದಿನ ಬೆಳ್ಹುಗೆ ಗ್ರಾಮವೇ ಇಂದು ‘ಬೆಳ್ವಾಗಿ’ ಹೆಸರಿನಿಂದ ಕರೆಯಲ್ಪಡುತ್ತಿದೆ. ಇದು ಎಪ್ಪತ್ತು ಗ್ರಾಮಗಳಿಗೆ ಮುಖ್ಯಗ್ರಾಮ. ನೇರಲಿಗೆ, ಕನ್ನವಳ್ಳಿ, ಗಳಗನಾಥ, ನೆಗಳೂರು, ಹೊನ್ನತ್ತಿ ಇವೂ ಮುಖ್ಯ ಗ್ರಾಮಗಳು.[23] ಬೆಳ್ಹುಗೆ, ಬೆಳ್ಗುಹೆ-೭೦ರಲ್ಲಿ ಗುತ್ತವೊಳಲ್ (ಗುತ್ತಲ) ಕೂಡ ಇತ್ತು. ಕ್ರಿ.ಶ. ೯೯೧ರ ಶಾಸನವೊಂದು[24] ಬಲ್ಲುಗ ಎಂಬ ಹೆಸರನ್ನು ಸೂಚಿಸಿದೆ. ಈ ಬಲ್ಲುಗ ಬೆಳ್ಹುಗೆಯಾಗಿರವ ಸಾಧ್ಯತೆಯಿದೆ.

ಮೂಗುನ್ದ-೧೨ : ಬನವಾಸಿ ೧೨೦೦೦ದ ಉಪವಿಭಾಗವಾಗಿದೆ. ಇಂದಿನ ಹಿರೇಕೆರೂರು (ಧಾರವಾಡ .ಜಿ.) ತಾಲ್ಲೂಕಿನ ಚಿನ್ನಮುಳಗುಂದವೇ ಅಂದಿನ ಮೂಗುನ್ದ ಎನ್ನಲಾಗಿದೆ.[25]

ತಡೆಯೂರು-೧೨: ಧಾರವಾಡ ಜಿಲ್ಲಾ ರಾಣೇಬೆನ್ನೂರು ತಾಲ್ಲೂಕಿನ ಉಕ್ಕುಂದ ಶಾಸನದಲ್ಲಿ ಇದರ ಉಲ್ಲೇಖ ‘ತಡೆಯೂರು ಪನ್ನೆರಡುಂ’ ಎಂದು ಬರುತ್ತದೆ. ಇದೂ ಬನವಾಸಿ ೧೨೦೦೦ ದೊಳಗೆ ಇತ್ತು.[26]

ಪುಲಿವಟ್ಟ-೧೨: ಈ ಭಾಗಕೂಡ ಎರಡಾರುನೂರರಲ್ಲಿ ಒಂದಾಗಿರಬೇಕು. ಇದರ ವ್ಯಾಪ್ತಿ ಬಗ್ಗೆ ಸ್ಪಷ್ಟವಿಲ್ಲ.

ತಂದವೂರು-೧೨: ಇದನ್ನು ಗುರುತಿಸಲಾಗಿಲ್ಲ.

ಗೆದೆಯ-೧೨: ಈ ವಿಭಾಗದ ಬಗ್ಗೆಯೂ ಹಿಂದೆ ಎಲ್ಲೂ ಸ್ಪಷ್ಟವಾದಂತಿಲ್ಲ. ಆದರೆ ಕ್ರಿ.ಶ. ೧೦೩೩ರ ಶಾಸನವೊಂದು[27]ಎಡೆನಾಡೆಪ್ಪತ್ತರ ಬಳಿಯ ‘ಗೆದೆಯ’ ಎಂದಿದೆ. ಎಡೆನಾಡಿಗೆ ತಾಗಿದಂತಿರುವ ‘ಜಡೆ’ಗ್ರಾಮಕ್ಕೆ ‘ಜದೆಯ’ ಎಂಬ ಉಲ್ಲೇಖವಿದೆ. ಜೆಡೆಯ>ಗೆದೆಯ ಒಂದೇ ಆಗಿರುವ ಸಾಧ್ಯತೆಯಿದೆ. ಇದರ ಸುತ್ತ ಎಡೆನಾಡು ನಾಗರಖಂಡ, ಪಾನುಗಲ್ಲು ಮುಂತಾದ ಉಪವಿಭಾಗಗಳಿವೆ.

ಸಾಂತಳಿಗೆ-೧೦೦೦: ಕೆಲವರು ಈ ಸಾಂತಳಿಗೆ ಸಾವಿರವನ್ನು ಸತ್ತಳಿಗೆ ಸಾವಿರ ಎಂದು ಗುರುತಿಸಿದ್ದಾರೆ.[28]ಆದರೆ ಹಲವಾರು ಶಾಸನಗಳನ್ವಯ ಇವೆರಡೂ ಬೇರೆ ಬೇಎ. ಸಾಂತರರು ನೆಲೆನಿಂತ ಪ್ರದೇಶಕ್ಕೆ ಸಾಂತಳಿಗೆ ನಾಡು ಎನ್ನಲಾಗುತ್ತಿದೆ. ಇದು ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರದ ಕೆಲಭಾಗಗಳನ್ನೊಳಗೊಂಡಿತ್ತು.[29]

ಸತ್ತಳಿಗೆ-೭೦: ಕ್ರಿ.ಶ. ೧೦೮೮ರ ಉಕ್ಕುಂದದ ಶಾಸನ ಸತ್ಯಳ್ಗೆ ಎಪ್ಪತ್ತರ ಬಳಿಯ ಬಾಡ ಒರ್ಕುಂದ ಎಂದಿದೆ.[30] ಈ ಸತ್ತಳಿಗೆ ಎಪ್ಪತ್ತು ಬನವಾಸಿ ೧೨೦೦೦ದ ಉಪವಿಭಾಗ. ಸತ್ತಳಿಗೆ ಎಂಬುದು ಈಗಿನ ಧಾರವಾಡ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಸಾತೇನಹಳ್ಳಿ ಇರಬೇಕೆಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಈ ವಿಭಾಗವು ರಾಣೇಬೆನ್ನೂರು ತಾಲ್ಲೂಕಿನ ಕೆಲ ಭಾಗಗಳ ನ್ನೊಳಗೊಂಡಿತ್ತು.[31]

ಇಷ್ಟಲ್ಲದೆ ಮಾಟೂರ ಅರಸರು ಕಲ್ವತ್ತಿ ಏಳು, ಸೀವಟ್ಟಿದೂರು, ಹೆರ್ದೆಸೆ, ಕನ್ನವಳ್ಳಿ ಮನ್ನೆಯಗಳನ್ನಾಗಳುತ್ತಿದ್ದುದು ಶಾಸನಗಳಲ್ಲಿ ಉಕ್ತವಾಗಿದೆ. ಈ ಕಲ್ಪತ್ತಿ ಹಾಗೂ ಸೀವಟ್ಟಿದೂರು ಯಾವುದೆಂದು ಸ್ಪಷ್ಟವಾಗಿಲ್ಲ. ಅದೇ ಹೆರ್ದೆಸೆ ಈಗಿನ ಹೆಚ್ಚೆ ಸೊರಬ ತಾಲ್ಲೂಕಿನ ಒಂದು ಗ್ರಾಮ. ಇವರ ಒಂದು ಶಾಸನ ಎರಡೆಪ್ಪತ್ತು ಹಾಗೂ ಐದು ಹನ್ನೆರಡು ಎಂದು ಕರೆದಿವೆ. ಈ ಎರಡೆಪ್ಪತ್ತನ್ನು ಎಡೆನಾಡೆಪ್ಪತ್ತು + ಬೆಳ್ಹುಗೆ ಎಪ್ಪತ್ತು ಎಂದು ಗುರುತಿಸಿಕೊಳ್ಳಬೇಕಾಗಿದೆ. ಅದೇ ರೀತಿ ಐದು ಹನ್ನೆರಡನ್ನು ಮುಗುನ್ದ ಹನ್ನೆರಡು +ತಡೆಯೂರು ಹನ್ನೆರಡು + ತಂದವೂರು ಹನ್ನೆರಡು+ಪುಲಿವಟ್ಟು ಹನ್ನೆರಡು ಹಾಗೂ ಗೆದೆಯ ಹನ್ನೆರಡು ಎಂದು ತಿಳಿಯಬಹುದು. ಇದಕ್ಕೆ ಆಧಾರ ಈ ಮಾಟೂರ ಅರಸರ ಶಾಸನಗಳಲ್ಲಿ ಇವು ಉಲ್ಲೇಖಗೊಂಡಿವೆ. ಈ ತಡೆಯೂರು,[32] ತಲೆಯೂರು,[33] ತಲೆವೂರು[34] ಈಗ ತಲ್ಲೂರು ಆಗಿದೆ. ಪರಿವೀಕ್ಷಣಾ ಸಮಯದಲ್ಲಿ ಈ ಗ್ರಾಮ ಮಾಟೂರು ಅರಸರಷ್ಟು ಹಳೆಯ ಊರು ಎಂಬುದಕ್ಕೆ ಅಲ್ಲಿನ ಕೆಲ ಅವಶೇಷಗಳು ಆಧಾರವಾಗಿವೆ. ಹಾಗಾಗಿ ಈ ತಡೆಯೂರು ಹನ್ನೆರಡೆಂದರೆ ಇದೇ ತಲ್ಲೂರೆ? ಆದರೆ ಇದು ನಾಗರಖಂಡದ ವ್ಯಾಪ್ತಿಯಲ್ಲಿದೆ. ಅಥವಾ ಆ ಸೀಮೆಯಲ್ಲಿನ ಇನ್ನೊಂದು ಕಿರುವಿಭಾಗವೂ ಆಗಿರಬಹುದು. ಇದು ಸೊರಬ ತಾಲ್ಲೂಕಿಗೆ ಸೇರಿದ ಒಂದು ಗ್ರಾಮ.

ಮಾಟೂರ ಅರಸರುಗಳ ಶಾಸನದನ್ವಯ ಮಾಚಿದೇವ, ಶಾಂತಿವರ್ಮ, ಸಿರಿಯಾಗರ, ಆಲಯ್ಯ ಹಾಗೂ ವಿಜಯಾದಿತ್ಯ ಈ ಎಡೆನಾಡು ಹಾಗೂ ಬೆಳ್ಹುಗೆಯನ್ನಲ್ಲದೆ ಸತ್ಯಳ್ಗೆ, ಸಾಂತಳಿಗೆ ಪ್ರದೇಶವನ್ನು ಕೆಲಕಾಲ ಸ್ವಾಮ್ಯಕ್ಕೆ ತೆಗೆದುಕೊಂಡಿದ್ದು ಸ್ಪಷ್ಟವಾಗಿದೆ. ಆದರೆ ಈ ಎಲ್ಲ ಅರಸರುಗಳು ನಿರಂತರವಾಗಿ ಎಡೆನಾಡಿನ ಸ್ವಾಮ್ಯವನ್ನು ಉಳಿಸಿಕೊಂಡಿದ್ದರು. ಕ್ರಿ.ಶ. ೯೩೮ರ ಶಾಸನದ ಪ್ರಕಾರ ಮಾಚಿ ಎಡೆನಾಡಿನಿಂದ ಬನವಾಸಿಯನ್ನು ಪ್ರತಿನಿಧಿಸುತ್ತಿದ್ದುದು,[35] ನಂತರ ಆತ ಈ ಭಾಗದಲ್ಲಿ ಕ್ರಿ.ಶ. ೯೫೮ರ ವರೆಗೂ ಕಂಡು ಬರುತ್ತಾನೆ.[36] ಆದರೆ ಈ ನಡುವೆ ಕ್ರಿ.ಶ. ೯೫೧ ರಲ್ಲಿ ಕುರುವರನ ಮಗ ಚಿಕ್ಕಶಂಭು ಎಂಬ ವ್ಯಕ್ತಿ ಎಡೆನಾಡನ್ನು ಪ್ರತಿನಿಧಿಸುತ್ತಿದ್ದುದು ಕಂಡು ಬರುತ್ತದೆ[37],ಆದರೆ ಎಷ್ಟುಕಾಲ ಇತ್ಯಾದಿ ಸ್ಪಷ್ಟವಾಗಿಲ್ಲ. ಕ್ರಿ.ಶ. ೯೩೧ರ ಹೊತ್ತಿಗೆ ಇದೇ ಮಾಚಿದೇವನ ಕುರಿತಾದ ಶಾಸನ ಸತ್ಯಳ್ಗೆ ಭಾಗದಲ್ಲಿ ದೊರೆತಿದೆ. ಆದರೆ ಈತನ ವ್ಯಾಪ್ತಿ, ಅಧಿಕಾರದ ಕುರಿತು ಸ್ಪಷ್ಟತೆ ದೊರೆತಿಲ್ಲ.[38] ಕ್ರಿ.ಶ. ೯೫೮ರ ಹೊತ್ತಿಗೆ ಈ ವಂಶದ ಶಾಂತಿವರ್ಮ ಬೆಳ್ಹುಗೆ ಭಾಗದ ಶಾಸನದಲ್ಲಿ ಕಂಡು ಬರುತ್ತಾನೆ.[39] ಅಲ್ಲಿ ಶಾಂತಿವರ್ಮ ವರದಾ ನದಿಯ ಸೀಮೆಯನ್ನಿಟ್ಟುಕೊಂಡು ಬನವಾಸಿ ಪ್ರಾಂತ್ಯಕ್ಕೆ ಅಧಿಕಾರಿಯಾಗಿದ್ದ ಸುಳಿವು ಸಿಗುತ್ತದೆ. ಈ ವರದಾನದಿ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಪ್ರದೇಶವಲ್ಲದೇ ಧಾರವಾಡ ಜಿಲ್ಲಾ ಹಿರೇಕೆರೂರು, ಹಾನಗಲ್‌ ತಾಲ್ಲೂಕಿನಲ್ಲಿಯೂ ಹರಿಯುತ್ತದೆ. ಹಾಗಾಗಿ ಇವನ ಅಧಿಕಾರ ವ್ಯಾಪ್ತಿ ಮೇಲೆ ಸೂಚಿಸಿದ ಹಲವು ಪ್ರದೇಶಗಳಿಗೂ ವ್ಯಾಪಿಸಿತ್ತು. ನಂತರ ಈತನ ಕುರಿತಾದ ಕ್ರಿ.ಶ. ೯೯೧ರ ಶಾಸನದನ್ವಯ ಇವನು ಎಡೆನಾಡು, ಸಾಂತಳಿಗೆ ಪ್ರದೇಶವನ್ನಾಳುತ್ತಿದ್ದುದು ಸ್ಪಷ್ಟವಾಗಿದೆ.[40] ಈ ಹೊತ್ತಿಗಾಗಲೇ ಬನವಾಸಿ ಪ್ರಾಂತ್ಯದ ಮಾಂಡಳೀಕತ್ವ ಕದಂಬರ ಹಿಡಿತದಲ್ಲಿದ್ದುದಕ್ಕೆ ಅನೇಕ ಶಾಸನಗಳು ಆಧಾರವಾಗಿವೆ. ಬಿ.ಆರ್.ಗೋಪಾಲರು-ಕುಂದಮನ ನಂತರ ಸಾಂತಳಿಗೆ ಭಾಗ ಮಾಟೂರು ಆಲಯ್ಯನಿಗೆ ಸೇರಿರಬೇಕು ಎನ್ನುತ್ತಾರೆ.[41] ಆಲಯ್ಯ ಕ್ರಿ.ಶ. ೧೦೩೩ರ ಹೊತ್ತಿಗೆ ಈ ಸಾಂತಳಿಗೆ ಹಾಗೂ ಬನವಾಗಿ ಎರಡೂ ಪ್ರದೇಶಗಳನ್ನು ಆಳುತ್ತಿದ್ದ ಸೂಚನೆ ಇದೆ. ಅದೇ ಸಮಯದಲ್ಲಿ ಆತ ಕದಂಬ ಕುಂದಮನೊಡನೆ ಹೋರಾಡಿ ಮಡಿದ ಉಲ್ಲೇಖವಿದೆ.[42] ತದನಂತರ ಮಾಟೂರ ಅರಸರಿಗೆ ಕೆಲಕಾಲ ಬನವಾಸಿ, ಸಾಂತಳಿಗೆ ಪ್ರಾಂತ್ಯ ಕೈ ತಪ್ಪಿರಬೇಕು. ಆ ಸಮಯದಲ್ಲಿ ಇವರು ನಮಗೆ ಬೆಳ್ಹುಗೆ ಭಾಗದಲ್ಲಿ ಕಂಡುಬರುತ್ತಾರೆ. ಕ್ರಿ.ಶ. ೧೦೫೭ರ ತನಕವೂ ಎಡೆನಾಡ ಭಾಗದಲ್ಲಿ ಈ ಅರಸರು ಗೋಚರಿಸುವುದಿಲ್ಲ. ಮುಂದೆ ಸತ್ಯಾಶ್ರಯ ಮತ್ತೆ ಈ ಭಾಗದ ಸ್ವಾಮ್ಯತೆ ಪಡೆಯುತ್ತಾನೆ.[43] ಮುಂದೆ ಕ್ರಿ.ಶ. ೧೦೮೮ರ ತನಕ ಇವರು ಬೆಳ್ಹುಗೆ, ಎಡೆನಾಡಿನಲ್ಲಿದ್ದುದಕ್ಕೆ ಶಾಸನಾಧಾರಗಳಿವೆ.[44] ಎಡೆನಾಡಿನ ಸ್ವಾಮ್ಯ ಕ್ರಿ.ಶ. ೧೧೨೭ರ ತನಕ ದೊರೆಯುತ್ತದೆ.[45]

 

[1]ಅದೇ

[2]ಸೌ.ಇಂ.ಇ. ನಂ. ೭ ಶಾಸನ ಸಂಖ್ಯೆ – ೪೪, ೪೫ ಕ್ರಿ.ಶ. ೧೦೬೮-೬೯.

[3]ಇಂ.ಎಂ. – XIPP ೧೮೩ ಋಈಮಧ

[4]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೪೩, ಕನವಳ್ಳಿ, ಹಾವೇರಿ ಧಾರವಾಡ ಕ್ರಿ.ಶ. ೧೦೧೭.

[5]ಅದೇ ಶಾಸನ ಸಂಖ್ಯೆ ೯೩, ಉಕ್ಕುಂದ, ರಾಣೇಬೆನ್ನೂರು, ಧಾರವಾಡ ಕ್ರಿ.ಶ. ೧೦೮೮.

[6]ಎ.ಕ.VIII ನಂ.೬೬ ರಿಂದ ೬೪, ಗುಡವಿ, ಸೊರಬ, ಶಿವಮೊಗ್ಗ, ಕ್ರಿಶ. ೧೦೩೨.

[7]ಬಿ.ಆರ್.ಗೋಪಾಲ್‌- ಹಿಂದೆ ಉಲ್ಲೇಖಿಸಿರುವುದು, ಪು. ೧೪೪.

[8]ಎ.ಕ.VI-VIII ಟ್ರಾನ್ಸ್‌ಲೇಷನ್‌ವಿಭಾಗ ಪು.ಸಂ. ೩೧

[9]ಎ.ಕ.VIII ನಂ. ೧೯೧, ಸಾರೇಕೊಪ್ಪ, ಸೊರಬ, ಶಿವಮೊಗ್ಗ, ಕ್ರಿಶ. ೧೦೩೨.

[10]ಅದೇ.ನಂ. ೧೮೪, ಕುಪ್ಪಗಡ್ಡೆ, ಕ್ರಿ.ಶ.೧೦೩೩.

[11]ಬಿ.ಆರ್.ಗೋಪಾಲ್ – ಹಿಂದೆ ಉಲ್ಲೇಖಿಸಿದ್ದು, ಪು.ಸಂ. ೧೪೨

[12]ಎ.ಕ.VIII ನಂ-೧೮೪ ಕುಪ್ಪಗಡ್ಡೆ, ಸೊರಬ, ಶಿವಮೊಗ್ಗ, ಕ್ರಿಶ. ೧೦೩೩.

[13]ಬಿ.ಆರ್.ಗೋಪಾಲ್ – ಹಿಂದೆ ಉಲ್ಲೇಖಿಸಿದ್ದು, ಪು.ಸಂ. ೧೪೨

[14]ಎ.ಕ.VIII ನಂ.-೫೦೦, ಚೀಲನೂರು, ಸೊರಬ, ಶಿವಮೊಗ್ಗ, ಕ್ರಿಶ.

[15]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೯೩, ಉಕ್ಕುಂದ, ರಾಣೆಬೆನ್ನೂರು, ಧಾರವಾಡ. ಕ್ರಿ.ಶ. ಸಂ. ೨೨೭.

[16]ಜೆ.ಎಂ. ನಾಗಯ್ಯ – ಆರನೆಯ ವಿಕ್ರಮಾದಿತ್ಯನ ಶಾಸನಗಳು, ಬೆಳಗಾವಿ, ೧೯೯೧, ಪು.ಸಂ. ೨೨೭.

[17]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೩೪೬, ಉಕ್ಕುಂದ, ರಾಣೆಬೆನ್ನೂರು, ಧಾರವಾಡ. ಕ್ರಿ.ಶ. ಸಂ. ೧೨.

[18]ಎ.ಕ.VIII ನಂ. ೨೨೦, ತಾಳಗುಪ್ಪೆ, ಸೊರಬ, ಶಿವಮೊಗ್ಗ, ಕ್ರಿಶ. ೧೧೨೭.

[19]ಇತಿಹಾಸ ದರ್ಶನ ಸಂ-೧೨ (೧೯೯೭) ಪು.ಸಂ.೧೫೭.

[20]ಅದೇ.

[21]ಅದೇ.

[22]ಅದೇ.

[23]ಜೆ.ಎಂ.ನಾಗಯ್ಯ – ಹಿಂದೆ ಉಲ್ಲೇಖಿಸಿದ್ದು, ಪು. ೧೦೭.

[24]ಎ.ಕ .VIII ನಂ. ೪೭ ಹೆಚ್ಚೆ, ಸೊರಬ ಶಿವಮೊಗ್ಗ – ಕ್ರಿ.ಶ. ೯೯೧.

[25]ಜೆ.ಎಂ.ನಾಗಯ್ಯ – ಹಿಂದೆ ಉಲ್ಲೇಖಿಸಿದ್ದು, ಪು-೧೧೪.

[26]ಅದೇ, ಪು.೧೧೨.

[27]ಎ.ಕ. VIII ನಂ. ೧೮೪, ಕುಪ್ಪಗಡ್ಡೆ, ಸೊರಬ, ಕ್ರಿ.ಶ. ೧೦೩೩

[28]ಸೌ.ಇಂ.ಇ. ೧೮. ಜಿಯಾಗ್ರಾಫಿಕಲ್ ಡಿವಿಜನ್, ಪು.ಸಂ. XXVII.

[29]ಜೆ.ಎಂ.ನಾಗಯ್ಯ – ಹಿಂದೆ ಉಲ್ಲೇಖಿಸಿದ್ದು, ಪು-೧೧೧.

[30]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೯೩, ಉಕ್ಕುಂದ, ರಾಣೆಬೆನ್ನೂರು, ಧಾರವಾಡ. ಕ್ರಿ.ಶ. ಸಂ. ೧೦೮೮.

[31]ಅದೇ, ಜಿಯಾಗ್ರಾಫಿಕಲ್‌ಪು.ಸಂ. XXIV

[32]ಎ.ಕ. VIII ನಂ. ೨೮೯ ತಲ್ಲುಕು, ತೊರಬ, ಶಿವಮೊಗ್ಗ, ಕ್ರಿ.ಶ. ೧೧೩೮.

[33]ಅದೇ, ನಂ. ೨೮೮, ಕ್ರಿ.ಶ?

[34]ಅದೇ, ನಂ. ೨೮೭, ಕ್ರಿ.ಶ. ೧೧೬೩

[35]ಅದೇ, ನಂ. ೭೦, ಓಟೂರು, ಕ್ರಿ.ಶ. ೯೩೮

[36]ಅದೇ, ನಂ. ೫೦೧, ಕಿ

[37]ಅದೇ, ನಂ. ೫೭೦. ಕೈಸೋಡಿ, ಕ್ರಿ.ಶ. ೯೫೧.

[38]ಧಾ.ಜಿ.ಶಾ.ಸೂ. (೧೯೭೦-೭೧) ನಂ.೨೮ ಅರಳೀಕಟ್ಟೆ, ಹೀರೇಕೆರೂರು, ಧಾರವಾಡ, ಕ್ರಿ.ಶ. ೯೩೧

[39]ಸೌ.ಇಂ.ಇ. ನಂ. ೧೮, ಶಾಸನ ಸಂಖ್ಯೆ – ೩೦೫, ದೇವಗೇರಿ, ಹಾವೇರಿ, ಧಾರವಾಡ, ಕ್ರಿ.ಶ.?

[40]ಎ.ಕ. VIII ನಂ. ನಂ.೪೭೭ ಹೆಚ್ಚೆ, ಸೊರಬ ಶಿವಮೊಗ್ಗ ಕ್ರಿ.ಶ.೯೯೧.

[41]ಬಿ.ಆರ್.ಗೋಪಾಲ – ಹಿಂದೆ ಉಲ್ಲೇಖಿಸಿರುವುದು, ಪು. ೧೪೨.

[42]ಎ.ಕ. VIII ನಂ. ೧೮೪. ಕುಪ್ಪಗಡ್ಡೆ, ಸೊರಬ ಶಿವಮೊಗ್ಗ ಕ್ರಿ.ಶ ೧೦೩೩.

[43]ಅದೇ, ನಂ.೫೦೦, ಚೀಲನೂರು, ಕ್ರಿ.ಶ. ೧೦೫೭.

[44]ಸೌ.ಇಂ.ಇ. ನಂ. ೧೮, ಶಾಸನ ಸಂಖ್ಯೆ – ೯೩, ಉಕ್ಕುಂದ, ರಾಣೆಬೆನ್ನೂರು, ಧಾರವಾಡ. ಕ್ರಿ.ಶ. ೧೦೮೮.

[45]ಎ.ಕ. VIII ನಂ. ೨೨೦. ತಾಳಗುಪ್ಪ, ಸೊರಬ, ಶಿವಮೊಗ್ಗ ಕ್ರಿ.ಶ.೧೧೨೭.