ಹಾಲೇರಿ ವಂಶದ ಬಗ್ಗೆ ಪ್ರಥಮ ಬಾರಿ ಪ್ರಸ್ತಾಪಿಸಿದ ಗ್ರಂಥ ರಾಜೇಂದ್ರನಾಮೆ,ಹಾವೇರಿ ವಂಶದ ದೊಡ್ಡ ವೀರರಾಜೇಂದ್ರ ಒಡೆಯನು ಈ ಗ್ರಂಥವನ್ನು ೧೮೦೭ರಲ್ಲಿ ಬರೆಯಿಸಿದನು. ಹಾಲೇರಿ ಅರಸರ ಬಗ್ಗೆ ಉಲ್ಲೇಖ ಮತ್ತು ಚರ್ಚೆ ಮಾಡಿರುವ ಗ್ರಂಥಗಳಲ್ಲಿ ಮುಖ್ಯವಾದುದು ಕಾನರ್ ೧೮೧೭ರಲ್ಲಿ ಬರೆದ ಮೆಮೈರ್ ಆಫ್ ದಿ ಕೊಡಗು ಸರ್ವೆ, ೧೮೫೫ರಲ್ಲಿ ಮೋಗ್ಲಿಂಗನು ಬರೆದ ಕೂರ್ಗ್‌‌ ಮೈಮೈರ್, ೧೮೭೧ರಲ್ಲಿ ರಿಕ್ತರನು ಬರೆದ ಕೂರ್ಗ್‌‌ ಗೆಜೆಟಿಯರ್, ೧೮೭೮ರಲ್ಲಿ ಲೀವೀಸ್‌ರೈಸ್‌ನು ಬರೆದ ಮೈಸೂರ್ ಆಂಡ್ ಕೂರ್ಗ್‌‌ಗೆಜೆಟಿಯರ್, ೧೯೦೯ರಲ್ಲಿ ಲೀವೀಸ್ ರೈಸ್ ಪ್ರಕಟಿಸಿದ “ಮೈಸೂರು ಆಂಡ್ ಕೂರ್ಗ್‌ಫ್ರಂದಿ ಇನಸ್ಕ್ರಿಪ್ಷನ್ಸ್”, ೧೯೨೪ರಲ್ಲಿ ನಡಿಕೇರಿಯಂಡ ಚಿಣ್ಣಪ್ಪ ಬರೆದ ಪಟ್ಟೋಲೆ ಪಳಮೆ ಹಾಗೂ ೧೯೭೪ ರಲ್ಲಿ ಡಿ.ಎನ್. ಕೃಷ್ಣಯ್ಯ ಬರೆದ ಕೊಡಗಿನ ಇತಿಹಾಸ. ಕ್ರಿ.ಶ. ೧೬೦೦ ರಿಂದ ೧೮೩೪ರ ತನಕ ಅಂದರೆ ಸುಮಾರು ಇನ್ನೂರು ವರ್ಷಗಳ ಕಾಲ ಹಾಲೇರಿ ಅರಸರು ಕೊಡಗಿಗೆ ಒಂದು ಭೌಗೋಳಿಕ ಸ್ವರೂಪ ಕೊಟ್ಟರು. ಭಿನ್ನ ಭಿನ್ನ ಭೂ ಭಾಗಗಳನ್ನು ಒಂದು ಕಡೆ ಸೇರಿಸಿ ರಾಜ್ಯವ್ಯವಸ್ಥೆಯನ್ನು ಬಲಪಡಿಸಿದರು. ಪ್ರಸ್ತುತ ಪ್ರಬಂಧವು ಹಾಲೇರಿ ಅರಸರು ಯಾವ ರೀತಿಯಲ್ಲಿ ಹಾಗೂ ಯಾವ ಸಂದರ್ಭದಲ್ಲಿ ರಾಜ್ಯ ವ್ಯವಸ್ಥೆಯನ್ನು ಕ್ರೋಢೀಕರಿಸಿ ಕೊಡಗಿನ ರಾಜ್ಯಾಧಿಕಾರವನ್ನು ಒಂದು ಶಕ್ತಿಯನ್ನಾಗರಿಸಿದರು ಎಂಬುದರ ಬಗ್ಗೆ ಚರ್ಚೆ ಮಾಡುತ್ತದೆ.

“ಕೊಡಗು” ಎನ್ನುವ ಪ್ರಾಂತ್ಯ ಬ್ರಿಟಿಷರು ಆಡಳಿತ ವಹಿಸಿಕೊಳ್ಳುವವರೆಗೂ ಒಂದೇ ರೀತಿಯ ಭೂ ಪ್ರದೇಶವನ್ನು ಹೊಂದಿರಲಿಲ್ಲ. ಬೇರೆ ಬೇರೆ ಕಾಲಘಟ್ಟದಲ್ಲಿ ಕೊಡಗು ಬೇರೆ ಬೇರೆ ರೀತಿಯ ಭೌಗೋಲಿಕ ಅಸ್ತಿತ್ವವನ್ನು ಹಾಗೂ ರಾಜಕೀಯ ಹಿನ್ನೆಲೆಯನ್ನು ಹೊಂದಿತ್ತು. ಪ್ರಾಚೀನ ಕಾಲದಿಂದ ಬ್ರಿಟಿಷರವರೆಗೆ ಕೊಡಗಿನ ಬೇರೆ ಬೇರೆ ಭೂ ಭಾಗಗಳು ಗಂಗ, ಚೋಳ, ಕದಂಬ, ಹೊಯ್ಸಳ, ಚಾಲುಕ್ಯ ಹಾಗೂ ವಿಜಯನಗರ ಅರಸರ ಸಾಮಂತ ಮಹಾಶಯರ ಆಳ್ವಿಕೆಗೆ ಒಳಪಟ್ಟಿತ್ತು. ಕೊಂಗಾಳ್ವ ಮತ್ತು ಚೆಂಗಾಳ್ವರೂ ಕೊಡಗನ್ನು ಆಳಿದರು. ಇವರ ಕಾಲದಲ್ಲಿ ಈಗಿನ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಕೊಡಗಿನ ಭೂಪಟದಲ್ಲಿತ್ತು. ಹಾಲೇರಿ ಲಿಂಗಾಯಿತ ಅರಸರ ಕಾಲದಲ್ಲಿ ಕೊಡಗು ಭೂ ಪ್ರದೇಶಕ್ಕೆ ಏಳುಸಾವಿರ ಸೀಮೆ ಪ್ರದೇಶಗಳು (ಈಗಿನ ಸೋಮವಾರಪೇಟೆ ತಾಲೂಕು) ಸೇರಿತು. ೧೮ನೇ ಶತಮಾನದ ಅಂತ್ಯದಲ್ಲಿ ಹೈದರ್‌ಅಲಿ ಮತ್ತು ಟಿಪ್ಪುಸುಲ್ತಾನರು ಕೂಡ ಕೊಡಗನ್ನು ಆಳಿದರು. ೧೮೩೪ಕ್ಕಿಂತ ಮೊದಲು ಕೊಡಗು ಈಗಿನ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ-ಪುತ್ತೂರಿನವರೆಗೂ ಚಾಚಿತ್ತು. ೧೮೩೪ರಲ್ಲಿ ಬ್ರಿಟಿಷರು ಕೊಡಗನ್ನು ಆಕ್ರಮಿಸಿಕೊಂಡ ನಂತರ ಸುಳ್ಯ, ಪುತ್ತೂರು ಮುಂತಾದ ಪ್ರದೇಶಗಳನ್ನು ಮದ್ರಾಸ್ ಪ್ರೆಸಿಡೆನ್ಸಿಯ ಆಡಳಿತಾಂಗಕ್ಕೆ ಹಸ್ತಾಂತರಿಸಿದರು. ಈಗ ನಾವು ಕಾಣುತ್ತಿರುವ ಕೊಡಗು ೧೮೩೪ರಲ್ಲಿ ಬ್ರಿಟಿಷರು ತಮ್ಮ ನೇರ ಆಳ್ವಿಕೆಗೆ ವಶಪಡಿಸಿಕೊಂಡ ಭೂಭಾಗವೇ ಆಗಿದೆ.

ಹಾಲೇರಿ ಅರಸರು ಈಗಿನ ಶಿವಮೊಗ್ಗ ಜಿಲ್ಲೆಯಲ್ಲಿರುವ ಇಕ್ಕೇರಿಗೆ ಸೇರಿದವರೆಂದು ಹೇಳಲಾಗಿದೆ. ಸುಮಾರು ೧೬ನೇ ಶತಮಾನದ ಮಧ್ಯಭಾಗದಲ್ಲಿ ಕೆಳದಿ ಚೌಡಪ್ಪನಾಯಕನ ಮಗ ಸದಾಶಿವನಾಯಕನು ವಿಜಯನಗರದ ಚಕ್ರವರ್ತಿಯಾಗಿದ್ದ ಸದಾಶಿವರಾಯನಿಂದ ಬಾರಕೂರು, ಮಂಗಳೂರು ಮತ್ತು ಚಂದ್ರಗುತ್ತಿಗಳ ಮೇಲಿನ ಅಧಿಕಾರವನ್ನು ಪಡೆದನು. ವಿಜಯನಗರದ ಅರಸರು ದಖ್ಖನ್ನಿನ ಸುಲ್ತಾನರಿಂದ ಸೋಲಿಸಲ್ಪಟ್ಟ ಮೇಲೆ ಇಕ್ಕೇರಿ ಅರಸರು ಉತ್ತರಕನ್ನಡದ ಹೊನ್ನಾವರದಿಂದ ದಕ್ಷಿಣಕನ್ನಡದ ಚಂದ್ರಗಿರಿ ನದಿಯವರೆಗೆ ಪಶ್ಚಿಮ ಘಟ್ಟಗಳನ್ನೆಲ್ಲಾ ತಮ್ಮ ಆಳ್ವಿಕೆಗೆ ಒಳಪಡಿಸಿದರು. ಕ್ರಿ.ಶ. ೧೫೮೨ ರಿಂದ ೧೬೨೯ ರವರೆಗೆ ಈ ಭಾಗಗಳನ್ನೆಲ್ಲಾ ವೆಂಕಟಪ್ಪನಾಯಕ ತನ್ನ ಕೈಗೆತ್ತಿಕೊಂಡನು. ಈಗ ಕೊಡಗಿನಲ್ಲಿರುವ “ಹಾಲೇರಿ”ಗೆ ಇಕ್ಕೇರಿಯ ಲಿಂಗಾಯಿತ ಜಂಗಮ ಅರಸರ ವಂಶಸ್ಥರು ಬಂದದ್ದೂ ಈ ಕಾಲದಲ್ಲಿಯೇ.

ಸುಮಾರು ೧೬ನೇ ಶತಮಾನದ ಕೊನೆಯ ಭಾಗದಲ್ಲಿ ಅಥವಾ ೧೭ನೇ ಶತಮಾನದ ಆರಂಭದಲ್ಲಿ ಈಗಿನ ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿನ ಭಾಗಗಳನ್ನು ಬಹಳ ಸಡಿಲವಾದ ಅರ್ಥದಲ್ಲಿ ಕೊಡಗೆಂದು ಕರೆಯಲಾಗುತ್ತಿತ್ತು. ಈಗ ಮಡಿಕೇರಿಯೆಂದು ಕರೆಯಲಾಗುತ್ತಿರುವ ಭೂಭಾಗದಲ್ಲಿ ನಿಬಿಡವಾದ ಕಾಡುಗಳಿದ್ದವು ಹಾಗೂ ಜನರ ವಸತಿಯೇ ಇರಲಿಲ್ಲ ಎಂದು ಡಿ.ಎನ್. ಕೃಷ್ಣಯ್ಯನವರು ಬರೆಯುತ್ತಾರೆ. ಆ ಕಾಲದಲ್ಲಿ ಈ ಭೂ ಭಾಗಗಳನ್ನು ಸಣ್ಣಪುಟ್ಟ ನಾಯಕ ಪಾಳೇಗಾರರು ಆಳುತ್ತಿದ್ದರು. ದಕ್ಷಿಣದ ಅಂಜಿಗೇರಿ ನಾಡನ್ನು ಚಿಟ್ಟಪ್ಪ ನಾಯಕನು ಆಳಿದರೆ, ಭಾಗಮಂಡಲ ಅಥವಾ ತಾವುನಾಡಿನಲ್ಲಿ ಕರ್ಣೆಂಬಾಹು ಎನ್ನುವ ನಾಯಕನು ಆಳುತ್ತಿದ್ದನು. ಪಕ್ಕದ ಮಲೆಯಾಳ ಪ್ರದೇಶದಿಂದ ಬಂದು ತಾವುನಾಡನ್ನು ವಶಪಡಿಸಿಕೊಂಡ ಇವನು ನಾಯಕರ ಸಂತತಿಯವನು. ಈ ಸಂದರ್ಭದಲ್ಲಿ ಇಕ್ಕೇರಿಯಿಂದ ಜಂಗಮನೊಬ್ಬನು ಮಡಿಕೇರಿಯಿಂದ ಏಳು ಮೈಲುಗಳ ದೂರದಲ್ಲಿರುವ ಪ್ರದೇಶಕ್ಕೆ ಬರುವನು. ತನ್ನ ಸಣ್ಣ ಪರಿವಾರದೊಂದಿಗೆ ಬಂದ ಈತನ ಹಾಗೂ ಈತನ ಸಂಗಡಿಗರ ಖರ್ಚಿಗೋಸ್ಕರ ಒಕ್ಕಲು ಕಣದಿಂದ ಪತ್ತಾಯಕ್ಕೆ ಹಾಕಿ ಕೊನೆಯಲ್ಲಿ ಉಳಿದಿದ್ದ ಭತ್ತವನ್ನು ತಾವಾಗಿಯೇ ಕೊಡುವುದಕ್ಕೆ ಪ್ರಾರಂಭಿಸಿದರು. ಇದನ್ನು “ಧೂಳಿ ಭತ್ತತೆರಿಗೆ” ಎಂದು ಕರೆಯಲಾಯಿತು. ಈ ಜಂಗಮನ ಹೆಸರು ವೀರರಾಜ. ತನ್ನ ಪ್ರಭಾವವು ಹೆಚ್ಚಿದ ಕೂಡಲೆ ವೀರರಾಜನು ಜನರು ತಮ್ಮಿಚ್ಛೆಯ ಮೇರೆಗೆ ಕೊಡುತ್ತಿದ್ದ ಧೂಳಿ ಭತ್ತದ ಬದಲಾಗಿ ಪ್ರತಿ ಮನೆಗೂ ವರ್ಷ ವಂದಕ್ಕೆ ಒಂದೂವರೆ ಭಟ್ಟಿ ಅಕ್ಕಿ ಮತ್ತು ಒಂಭತ್ತು ಆಣೆ ಎಂಟು ಪೈಸೆ ಹಣವನ್ನು “ಕಂದಾಯವಾಗಿ” ನಿಗದಿ ಮಾಡಿದನು. ಆ ಹೊತ್ತಿಗೆ ಇವನು ಕೊಡಗಿನ ಪಾಡಿನಾಲ್ಕು ನಾಡಿನಲ್ಲಿ ಪ್ರಭಾವಶಾಲಿಯಾಗಿದ್ದ ಮಲೆಯಾಳಂ ಪ್ರದೇಶದ ಜನರನ್ನು, ತಾವುನಾಡು, ಚೆಂಗುನಾಡು ಮತ್ತು ಸೂರ್ಲಬ್ಬಿ ಮುತ್ತ ನಾಡುವಿನಲ್ಲಿ ಪ್ರಭಾವಶಾಲಿಯಾಗಿದ್ದ ತುಳು ಗೌಡ ಹಾಗೂ ಬಂಟರನ್ನು ತನ್ನೆಡೆಗೆ ಸೆಳೆದುಕೊಂಡನು. ಇನ್ನುಳಿದಂತಿರುವವರು ಕೊಡವರು. ರಿಕ್ತರನು ಇವರನ್ನು “ಮಿಶ್ರ ಜನಾಂಗೀಯ” (ಮಿಕ್ಸೆಡ್‌ರೇಸ್) ಪಂಗಡದವರೆಂದು ಕರೆದಿದ್ದಾನೆ. ಎತ್ತರ ಮತ್ತು ಬಣ್ಣಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಹೊಂದಿರುವ ಈ ಪಂಗಡವು ಕಾಕಸೀಯನ್ ಮತ್ತು ಮಂಗೋಲಿಯನ್ ಗುಣಲಕ್ಷಣಗಳನ್ನೂ ಹೊಂದಿವೆಯೆಂದು ಬರೆದಿದ್ದಾನೆ. ವಿವಿಧ ಹಿನ್ನೆಲೆಯ ಈ ಬುಡಕಟ್ಟು ಜನರ ಒಕ್ಕದ (ಅವಿಭಕ್ತ ಕುಟುಂಬ) ಹೆಸರುಗಳು ಮೈಸೂರು, ತಮಿಳು, ಮಲೆಯಾಳಂ ಹಾಗೂ ತುಳು ಮೂಲಗಳನ್ನು ಹೊಂದಿವೆಯೆಂದು ತಿಳಿದುಬರುತ್ತದೆ. ಬಹಳ ಜನರ “ಅಪರಿಚಿತರು” ಕೊಡವರಾಗಿ ಪರಿವರ್ತಿತರಾಗುತ್ತಿದ್ದರೆಂಬ ಅಂಶವನ್ನು ರಿಕ್ತರ್ ಬರೆಯುತ್ತಾನೆ. ಇವರನ್ನು ಕೂಡ ವೀರರಾಜ ಒಲಿಸಿಕೊಂಡು ರಾಜ್ಯಾಧಿಕಾರಕ್ಕೆ ಭದ್ರ ಬುನಾದಿಯನ್ನು ಹಾಕಿದನು.

ಇವನು ನೆಲೆಸಿದ ಪ್ರದೇಶವನ್ನು ಹಾಲೇರಿ ಎಂದು ಕರೆಯುತ್ತಾರೆ. ಹಾಲೇರಿಯು ಇವನ ರಾಜಧಾನಿಯಾದ್ದರಿಂದ ಇವನ ವಂಶದ ಅರಸರಿಗೆ ಹಾಲೇರಿ ಅರಸರು ಎಂದು ಕರೆಯುತ್ತಾರೆ. ಈ ಅರಸರು ತಮ್ಮ ಕೆಲವು ಶಾಸನಗಳಲ್ಲಿ ಹಾಲೇರಿಯನ್ನು ಸಂಸ್ಕೃತದಲ್ಲಿ “ಕ್ಷೀರಸಾಗರ” ಎಂದು ಕರೆದಿದ್ದಾರೆ ಎನ್ನುವ ಅಂಶವು ಲೀವಿಸ್ ರೈಸ್ ಅವರ “ಮೈಸೂರು ಆಂಡ್ ಕೂರ್ಗ್‌ಫ್ರಂ ದಿ ಇನ್‌ಸ್ಕ್ರಿಪ್ಷನ್ಸ್‌ದಲ್ಲಿಉಲ್ಲೇಖವಾಗಿದೆ. ವೀರರಾಜನು ಹಾಲೇರಿಯಲ್ಲಿದ್ದ ತನ್ನ ಮನೆಯಲ್ಲಿ ಪಹರೆ ಕಾಯುವುದಕ್ಕೆ ಹದಿನೈದು ದಿನಗಳಿಗೊಂದು ತಂಡದಂತೆ ತಿಂಗಳಿಗೆ ಪಹರೆ ಕಾಯುವುದಕ್ಕೆ ಎರಡು ತಂಡಗಳ ಜನರನ್ನು ಏರ್ಪಡಿಸಿಕೊಂಡನು. “ಮೈ ತುಂಬ ಬೂದಿ ಬಡಿದುಕೊಂಡು ಸನ್ಯಾಸಿಯಂತೆ ನಟಿಸಿಕೊಂಡಿದ್ದ” ಇವನನ್ನು “ಬೂದಿಚಾವಡಿಸ್ವಾಮಿ” ಎಂದು ಕರೆಯುತ್ತಿದ್ದರೆಂದು ನಡಿಕೇರಿಯಂಡ ಚಿಣ್ಣಪ್ಪನವರು ೧೯೨೪ರಲ್ಲಿ ತಮ್ಮ ಪಟ್ಟೊಲೆ-ಪಳಮೆ ಯಲ್ಲಿ ಬರೆದಿದ್ದಾರೆ. ಬೂದಿಚಾವಡಿಸ್ವಾಮಿ ವಾಸಿಸುತ್ತಿದ್ದ ಸ್ಥಳಕ್ಕೆ “ಚಾವಡಿ” ಎಂಬ ಹೆಸರಿದೆ. ಅಲ್ಲಿ ಪಹರೆ ಮಾಡುತ್ತಿದ್ದವರನ್ನು “ಚಾವಡಿಕಾರರು” ಎಂದು ಕರೆಯುತ್ತಾರೆ. ಈ ಚಾವಡಿಕಾರರು ೧೮ನೆಯ ಶತಮಾನದ ಕೊನೆಯ ಭಾಗದಲ್ಲಿ “ಜಮ್ಮ” ಎನ್ನುವ ಭೂ ಹಿಡುವಳಿಯನ್ನು ಹೊಂದಿದ್ದರು. ೧೮೧೧ ರಲ್ಲಿ ಲಿಂಗರಾಜನು ಹೊರಡಿಸಿದ ಹುಕುಂನಾಮಗಳ ಪ್ರಕಾರ ಜಮ್ಮ ಹಿಡುವಳಿದಾರರು ಮಾಡುತ್ತಿದ್ದ ಇಂಥ ಸೇವೆಯನ್ನು “ಅರಮನೆ ಚಾಕ್ರಿ” ಎಂದು ಕರೆಯಲಾಗುತ್ತಿತ್ತು. ಈ ಅರಮನೆ ಚಾಕ್ರಿ ಮಾಡುತ್ತಿದ್ದವರಿಗೆ ನೀಡಿದ ಜಮ್ಮ ಸನ್ನದು ನಿರೂಪಗಳು (ಜಮ್ಮ ಭೂ ಹಿಡುವಳಿಯನ್ನು ನ್ಯಾಯ ಸಮ್ಮತಗೊಳಿಸುವ ರಾಜ ಮುದ್ರೆಯಿರುವ ದಾಖಲೆ) ಇದನ್ನು “ಹಿಟ್ಟಿ ಬಿಟ್ಟಿ ಚಾಕ್ರಿ” ಎಂದು ವಿವರಿಸುತ್ತವೆ. ನಂತರದ ದಿನಗಳಲ್ಲಿ ಪಹರೆಯ ಸೈನಿಕರನ್ನೆಲ್ಲಾ ಚಾವಡಿಕಾರರೆಂದೇ ಕರೆಯಲಾಗುತಿತ್ತು. ಇವರ ಸಮವಸ್ತ್ರವು ಮೊಣಕಾಲಿನವರೆಗಿನ ಕರಿಕುಪ್ಪಸ ಮತ್ತು ಬೇಸಿಗೆಯಲ್ಲಿ ಖಾಕಿ ಬಣ್ಣದ ಕುಪ್ಪಸ, ಕರಿದಟ್ಟಿ ಮತ್ತು ತಲೆಗೆ ಕರಿಬಣ್ಣದ ರುಮಾಲನ್ನು ಒಳಗೊಂಡಿತ್ತು ಎಂದು ಡಿ.ಎನ್. ಕೃಷ್ಣಯ್ಯನವರು ವಿವರಿಸಿದ್ದಾರೆ. ಒಂದು ರಾಜ್ಯ ವ್ಯವಸ್ಥೆಯನ್ನು ಹುಟ್ಟು ಹಾಕುವುದರ ಮೂಲಕ ಹಾಲೇರಿ ಅರಸನು ತಾನು ಕೊಡಗಿನ ರಾಜನೆಂದು ಘೋಷಿಸಿಕೊಂಡನು. ತಾವು ನಾಡಿನ ಮಲೆಯಾಳಿ ಮೂಲದ ಕರ್ಣೆಂಬಾಹುವು ಹಾಗೂ ಇತರ ಸಣ್ಣಪುಟ್ಟ ನಾಯಕರು ಹಾಲೇರಿ ಅರಸನಿಗೆ ತಮ್ಮ ತಮ್ಮ ನಾಡುಗಳಿಂದ ದೊರೆಯುವ ಕಂದಾಯದಲ್ಲಿ ನಾಲ್ಕರಲ್ಲಿ ಒಂದಂಶ ಕೊಡುವ ಮತ್ತು ನಾಲ್ಕರಲ್ಲಿ ಮೂರಂಶ ತಾವು ಇಟ್ಟುಕೊಳ್ಳುವ ಶರತ್ತಿನ ಮೇಲೆ ಶರಣಾಗತರಾದರು. ವೀರರಾಜನ ಪ್ರಾಬಲ್ಯವು ಹೆಚ್ಚಾಗುತ್ತಾ ಬಂದ ಹಾಗೆ ಈ ನಾಯಕರುಗಳ ಅಧಿಕಾರವು ಅಳಿದುಹೋಯಿತು. ಹೀಗೆ ಕ್ರಿ.ಶ. ಸುಮಾರು ೧೬೦೦ ಸಮಯಕ್ಕೆ ವಿವಿಧೆಡೆಗಳಲ್ಲಿ ಹರಡಿದ್ದ ಭೂ ಭಾಗಗಳನ್ನು ಒಂದು ಆಡಳಿತದ ಕೆಳಗೆ ತರಲಾಯಿತು. ಇದನ್ನು ಕೊಡಗು ಸೀಮೆಯೆಂದು ಕರೆಯಲಾಯಿತು. ೧೮೩೪ರವರೆಗೆ ಈ ಇಡೀ ಪ್ರದೇಶದ ಅಧಿಪತ್ಯವನ್ನು ಹಾಲೇರಿ ಅರಸರು ವಹಿಸಿಕೊಂಡರು.

ಹಾಲೇರಿ ಅರಸುಮನೆತನದ ಹದಿಮೂರು ಮಂದಿ ಕೊಡಗನ್ನು ಆಳಿದರು ಮತ್ತು ಅವರಲ್ಲಿ ಚಿಕ್ಕಪ್ರಾಯದ ಒಬ್ಬ ಮಹಿಳೆಯೂ ಇದ್ದಳು ಎಂದು ಡಿ.ಎನ್. ಕೃಷ್ಣಯ್ಯನವರು ಬರೆಯುತ್ತಾರೆ. ಆದರೆ, ೧೭೭೪-೭೫ರಲ್ಲಿ ಕೊಡಗನ್ನು ಒಂದು ವರ್ಷ ಆಳಿದ ಅಪ್ಪಾಜಿರಾಜನ ಆಳ್ವಿಕೆಯನ್ನು ಗಣನೆಗೆ ತೆಗೆದುಕೊಂಡರೆ ಕೊಡಗನ್ನು ಆಳಿದವರ ಸಂಖ್ಯೆ ಹದಿನಾಲ್ಕಾಗುತ್ತದೆ. ಹಾಲೇರಿ ಅರಸರ ವಂಶಾವಳಿ ಪಟ್ಟಿಯ ವಿವರಗಳು ಹೀಗಿವೆ:

ಹಾಲೇರಿ ರಾಜವಂಶ

10_270_MAM-KUH

ಪ್ರಸ್ತುತ ಪ್ರಬಂದವು ಕೊಡಗು ರಾಜ್ಯದ ಉಗಮ ಹೇಗಾಯಿತು ಮತ್ತು ಅದು ಯಾವ್ಯಾವ ಶಕ್ತಿಗಳಿಂದ ಬಲಿಷ್ಠವಾಯಿತೆಂಬುದನ್ನು ಚರ್ಚಿಸುತ್ತದೆ. ಹಾಗೆಯೇ ಕೊಡಗು ಭೌಗೋಳಿಕವಾಗಿ ತನ್ನ ನಕಾಶೆಯನ್ನು ಏಳುಸಾವಿರ ಸೀಮೆಯಿಂದ (ಈಗಿನ ಸೋಮವಾರಪೇಟೆ ತಾಲೂಕು) ಅಮರ ಸುಳ್ಯದವರೆಗೆ-ಪಂಚೆ-ಬೆಲ್ಲಾರೆಯವರೆಗೆ ವಿಸ್ತರಿಸಿದ ಬಗೆಗಳನ್ನು ವಿವರಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ೧೭೭೫ ರಿಂದ ೧೭೭೯ ರವರೆಗೆ ವೈನಾಡಿನ ಕಲ್ಪಾತಿ ಪ್ರದೇಶಗಳೂ ಕೊಡಗಿನ ಕೆಳಗೇ ಇತ್ತೆಂಬ ವಿವರಗಳನ್ನು ಇಲ್ಲಿ ಚರ್ಚಿಸಲಾಗುವುದು. ಇಕ್ಕೇರಿಯ ರಾಜಕೀಯದಿಂದ ದೂರಬಂದು ಹಾಲೇರಿಯಲ್ಲಿ ಜಂಗಮ ಅರಸನು ರಾಜ್ಯವನ್ನು ಸ್ಥಾಪಿಸಿ ಅಲ್ಲಿಂದ ದೂರ ಬಂದರೂ ಅವನನ್ನು ಇಕ್ಕೇರಿಯ ರಾಜಕೀಯವು ಬಿಡಲಿಲ್ಲ. ಕೊಡು-ತೆಗೆದುಕೊಳ್ಳುವ ಸಂಬಂಧ ಮುಂದುವರಿಯಿತು. ಡಿ.ಎನ್. ಕೃಷ್ಣಯ್ಯನವರು ಇಕ್ಕೇರಿ ನಾಯಕರ ಚರಿತ್ರೆಯನ್ನು ಉಲ್ಲೇಖಿಸುತ್ತಾ ಅದರಲ್ಲಿ ಕೊಡಗಿನ ಅರಸರಿಗೂ ಹಾಗೂ ಕ್ರಿ.ಶ. ೧೫೮೨ರಿಂದ ೧೬೨೯ ರವರೆಗೆ ಆಳಿದ ಇಕ್ಕೇರಿಯ ಆರನೆಯ ನಾಯಕನಾದ ಮೊದಲನೆಯ ವೆಂಕಟಪ್ಪ ನಾಯಕನಿಗೂ ಇರುವ ಸಂಬಂಧವನ್ನು ವಿವರಿಸಿದ್ದಾರೆ. ಈಗಿನ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಭಾಗಗಳನ್ನು ವಶಪಡಿಸಿಕೊಂಡು ದೇವರ ದರ್ಶನಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಾಯಕ ಬಂದ ಸಂದರ್ಭದಲ್ಲಿ ಕೊಡಗನ್ನು ವಶಪಡಿಸಿಕೊಳ್ಳಲು ತನ್ನ ಸೈನ್ವಯನ್ನು ಕಳಿಸಿ ಕೊಡುತ್ತಾನೆ. ಆಗ ಕೊಡಗನ್ನು ಆಳುತ್ತಿದ್ದ ಅಪ್ಪಾಜಿರಾಜನು ವೆಂಕಟಪ್ಪನಾಯಕನಿಗೆ ಕಪ್ಪಕಾಣಿಕೆಗಳನ್ನು ಕೊಟ್ಟು ಅವನ ಅಧಿಪತ್ಯವನ್ನು ಒಪ್ಪಿಕೊಂಡನು. ಇದಾದ ನಂತರ ಕ್ರಿ.ಶ. ೧೬೨೯ರಿಂದ ೧೬೪೫ರವರೆಗೆ ಇಕ್ಕೇರಿಯ ವೀರಭದ್ರ ನಾಯಕನ ಸೇನಾಪತಿ ಶಿವಪ್ಪನಾಯಕನು ಕಾರ್ಕಳದ ಭೈರರಸರನ್ನು ಸೋಲಿಸಿ, ನೀಲೇಶ್ವರ ನದಿಯನ್ನು ದಾಟಿ ಮಲೆಯಾಳಿ ಅರಸನ ವಿರುದ್ಧ ಯುದ್ಧ ಸಾರಿದನು. ಈ ಸಂದರ್ಭದಲ್ಲಿ ಕೊಡಗಿನ ಅರಸ ಮುದ್ದುರಾಜನು ಮಲೆಯಾಳಿ ಅರಸನಿಗೆ ಸಹಾಯ ಮಾಡುವನು. ನಾಯಕನು ಇವರಿಬ್ಬರನ್ನು ಸೋಲಿಸುವನು. ನಂತರ ಶಿವಪ್ಪನಾಯಕನು ಕೊಡಗನ್ನು ಸುಲಿಗೆ ಮಾಡಿ ರಾಜನನ್ನು ಬಂಧಿಸುವನು. ಆಗ ರಾಜನ ಪತ್ನಿಯು ಅರ್ಕಲಗೂಡಿನಲ್ಲಿ ಆಳುತ್ತಿದ್ದ ಬೇಲೂರಿನ ಕೃಷ್ಣಪ್ಪನಾಯಕನ ಸಹಾಯದಿಂದ ಶಿವಪ್ಪನಾಯಕನಲ್ಲಿ ಬೇಡಿಕೊಂಡು ತನ್ನ ಪತಿಯನ್ನು ಉಳಿಸಿಕೊಂಡಳು. ಅವನು ಇಕ್ಕೇರಿಗೆ ಕಪ್ಪ ಕಾಣಿಕೆ ಕೊಡುವುದಾಗಿ ಒಪ್ಪಿಕೊಂಡನು.

೧೬೪೫ರಲ್ಲಿ ಶಿವಪ್ಪನಾಯಕನು ಇಕ್ಕೇರಿಯ ದೊರೆಯಾದ ಸಂದರ್ಭದಲ್ಲಿ ಮುದ್ದರಾಜನು ಅವನನ್ನು ಸಂದರ್ಶಿಸಲು ಅವನ ರಾಜಧಾನಿ ಬಿದನೂರಿಗೆ ಹೋಗಿದ್ದನು. ಆ ಸಂದರ್ಭದಲ್ಲಾದ ಪ್ರತೀತಿಯನ್ನು ಡಿ.ಎನ್. ಕೃಷ್ಣಯ್ಯನವರು ಬರೆಯುತ್ತಾರೆ. ಶಿವಪ್ಪನಾಯಕನು ಮುದ್ದುರಾಜನಿಗೆ ಏನಾದರೂ ಅನುಗ್ರಹ, ಸಹಾಯ ಕೇಳಬಹುದೆಂದಾಗ ಮುದ್ದು ರಾಜನು ಎಲ್ಲವೂ ನನ್ನ ಬಳಿ ಇದೆ ಎಂದನು. ಆದರೂ ನಾಯಕನ ಒತ್ತಾಯದಿಂದ ತನಗೆ ಪುತ್ರನಿಲ್ಲದಿರುವ ಕೊರತೆಯನ್ನು ತಿಳಿಸುವನು. ಆಗ ಶಿವಪ್ಪನಾಯಕನು ತನ್ನ ವಂಶದ ಕುಲದೈವವಾದ ಕೆಳದಿಯ ರಾಮೇಶ್ವರನನ್ನು ಧ್ಯಾನಿಸಿ ಒಂದು ಚಿನ್ನದ ಕಾಲು ದೀಪವನ್ನು ಮಾಡಿಸಿದನು. ಆ ಮೇಲೆ ಆ ದೀಪಕ್ಕೆ ಹಸುವಿನ ತುಪ್ಪವನ್ನು ಹಾಕಿ ಬತ್ತಿಯನಿಟ್ಟು ಅದನ್ನು ಉರಿಸಿ ಆ ದೀಪವನ್ನು ಒಂದು ವರ್ಷ ಮತ್ತು ಒಂದು ದಿವಸ ಉರಿಕೆಡದಂತೆ ನೋಡಿಕೊಂಡರೆ ದೇವರು ಪುತ್ರನನ್ನು ಅನುಗ್ರಹಿಸುವನೆಂದು ತಿಳಿಸುವನು. ಮುದ್ದು ರಾಜನು ಹಾಗೆಯೇ ಮಾಡಿದನು ಹಾಗೂಪುತ್ರನನ್ನು ಪಡೆದನು ಶಿವಪ್ಪನಾಯಕನು ತನ್ನ ಪ್ರಾರ್ಥನೆಯಂತೆ ಮುದ್ದು ರಾಜನಿಗೆ ಒಬ್ಬ ಪುತ್ರನ ಜನನವಾದುದನ್ನು ತಿಳಿದು ಬಹಳ ಸಂತೋಷಪಟ್ಟು ಆ ಮಗುವಿಗೆ (ದೊಡ್ಡವೀರಪ್ಪ) ಹಾಲು-ಬೆಣ್ಣೆ ಒದಗಿಸುವದಕ್ಕೋಸ್ಕರವೆಂದು ತನ್ನ ಸ್ವಾಧೀನದಲ್ಲಿದ್ದ ದಕ್ಷಿಣಕನ್ನಡ ಜಿಲ್ಲೆಯ ಪಶ್ಚಿಮ ಗಟ್ಟಗಳಿಗೆ ಮುಟ್ಟಿಕೊಂಡಿದ್ದ ಕೆಲವು ಗ್ರಾಮಗಳನ್ನು ಬಹುಮಾನವಾಗಿ ಕೊಟ್ಟನು. ಹಾಲು ಅಥವಾ ಅಮೃತಕ್ಕೆಂದು ಕೊಟ್ಟ ಆ ಗ್ರಾಮಗಳ ಗುಂಪಾದ ಮಾಗಣೆಗೆ ಅಮೃತ ಮಾಗಣೆಯೆಂದು ಹೆಸರಾಯಿತು. ಈ ಅಮೃತ ಮಾಗಣೆಯೇ ಜನರ ಬಾಯಲ್ಲಿ ಅಮರ ಮಾಗಣೆಯಾಯಿತು ಎಂದು ಡಿ.ಎನ್. ಕೃಷ್ಣಯ್ಯ ತಿಳಿಸುತ್ತಾರೆ.

ಮುದ್ದುರಾಜನ ಕಾಲಾವಧಿಯಲ್ಲಿ (೧೬೩೩-೧೬೮೭) ರಾಜಧಾನಿಯು ಹಾಲೇರಿಯಿಂದ ಕೊಡಗಿನ ಮಧ್ಯಭಾಗದಲ್ಲಿರುವ ಸ್ಥಳಕ್ಕೆ ಬದಲಾವಣೆಯಾಯಿತು. ಹಾಲೇರಿಯನ್ನು ಶತ್ರುಗಳು ಸುಲಭವಾಗಿ ಪ್ರವೇಶಿಸಲು ಸಾಧ್ಯವಿರುವುದರಿಂದ ರಾಜನಿಗೊಂದು ಆಯಕಟ್ಟಿನ ಪ್ರದೇಶದ ಅಗತ್ಯ ಬಹಳಷ್ಟಿತ್ತು. ಈ ಸಂದರ್ಭದಲ್ಲಿ ಬಹುತೇಕ ಎಲ್ಲಾ ರಾಜವಂಶದ ಮೂಲಕ್ಕೆ ಸಂಬಂಧಿಸಿದಂತಿರುವ ಸಾಮಾನ್ಯ ಕಥೆ ಪ್ರತೀತಿ ಇಲ್ಲಿ ಕೂಡ ನಾವು ನೋಡಬಹುದು. ಮುದ್ದುರಾಜ ಈಗ ಮಡಿಕೇರಿ ಇರುವ ಜಾಗದಲ್ಲಿ ದಟ್ಟ ಅರಣ್ಯಗಳ ಮಧ್ಯೆ ತನ್ನ ಬೇಟೆ ನಾಯಿಗಳನ್ನು ಕಾಡು ಪ್ರಾಣಿಗಳ ಮೇಲೆ ಛೂ ಬಿಟ್ಟನು. ಆದರೆ ಒಂದು “ಗಂಡು” ಮೊಲವು ಬೇಟೆ ನಾಯಿಯನ್ನು ಬೆದರಿಸಿಕೊಂಡು ಬಂದಿತು. ಇದನ್ನು ಆಶ್ಚರ‍್ಯಚಕಿತನಾಗಿ ನೋಡಿದ ಮುದ್ದುರಾಜನು ಇದು “ಗಂಡು” ನೆಲವೆಂದು ಇಲ್ಲಿಯೇ ಕೋಟೆ ಮತ್ತು ಅರಮನೆಯನ್ನು ಕಟ್ಟಿಸುವನು. ಗುಡ್ಡದ ಮೇಲ್ಭಾಗವನ್ನು ಸಮತಟ್ಟು ಮಾಡಿ ಕಲಿಸಂದ ೪೭೮೩ನೇ ದುರ್ಮತಿ ಸಂವತ್ಸರದಲ್ಲಿ ಎಂದರೆ ಕ್ರಿ.ಶ. ೧೬೮೧ರಲ್ಲಿ ಮಣ್ಣಿನಿಂದ ಕೋಟೆಯನ್ನು ಕಟ್ಟಿಸಿ ಅದರ ಸುತ್ತಲೂ ಕಂದಕ ತೆಗೆಸಿ ಒಳಗೆ ಅರಮನೆಯನ್ನು ಕಟ್ಟಿಸಿದನು. ಈ ಪ್ರದೇಶವನ್ನು ಜನರು ಮುದ್ದುರಾಜಕೇರಿ ಎಂದು ಕರೆದರು. ನಂತರ ಅದು ಮಡಿಕೇರಿಯಾಯಿತು. ನಂತರ ಅವನ ಚಾವಡಿಕಾರರು, ಪರಿವಾರದವರು, ಅರಮನೆ ಉದ್ಯೋಗಸ್ಥರು, ವ್ಯಾಪಾರಸ್ಥರು ಮಡಿಕೇರಿಗೆ ಬಂದು ನೆಲೆ ನಿಂತರು. ಕೋಟೆಯ ಮುಂಭಾಗದ ಕಣಿವೆಯಲ್ಲೂ, ದಕ್ಷಿಣ ಭಾಗದ ಕಣಿವೆಯಲ್ಲೂ ಮನೆಗಳನ್ನು ಕಟ್ಟಿ ಜನರು ನೆಲಸಿದರು. ಹೀಗೆ ಮಡಿಕೇರಿಯ ಸ್ಥಾಪನೆ ೧೬೮೧ರಲ್ಲಿ ಆಯಿತು. ಆದರೂ ಈ ಕಾಲದಲ್ಲಿ ಕೊಡಗಿನ ದಕ್ಷಿಣ ಭಾಗದಲ್ಲಿರುವ ಕಿಗ್ಗಟ್ಟು ನಾಡಿನ ಅಂಜಿಗೇರಿ ನಾಡಿನಲ್ಲಿ ಕಟ್ಟೇಮನೆ ಚಿಟ್ಟಪ್ಪನಾಯಕ, ಹತ್ತುಗಟ್ಟು ನಾಡಿನಲ್ಲಿ ಮಾಚಂಗಳ ನಾಯಕ, ಮತ್ತೂರಿನಲ್ಲಿ ಮುಕ್ಕಾಟಿ ನಾಯಕರು ಅಧಿಕಾರ ನಡೆಸಿಕೊಂಡಿದ್ದರು ಮತ್ತು ಪರಸ್ಪರ ಕಚ್ಚಾಡಿ ಕೊಂಡಿದ್ದರು. “ಕೊಡಗು” ಎನ್ನುವ ರಾಜ್ಯದ ಕಲ್ಪನೆಯಿಲ್ಲದ ಕಾಲವದು.ಆದರೆ ಅಂತಹ ಒಂದು ರಾಜ್ಯವನ್ನು ಹಂತ ಹಂತವಾಗಿ ಕಟ್ಟುತ್ತಿದ್ದ ಹಾಲೇರಿ ಅರಸರು ನಂತರದ ದಿನಗಳಲ್ಲಿ ಹತ್ತಿಪ್ಪತ್ತು ಕಿ.ಮೀ. ಗೋಬ್ಬ ಇದ್ದ ಪಾಳೇಗಾರರನ್ನು ಇಲ್ಲದಂತೆ ಮಾಡಿ ಕೇಂದ್ರಿಕೃತ ವ್ಯವಸ್ಥೆಗೊಂದು ಅಡಿಪಾಯ ಹಾಕಿದರು.

ಪ್ರಬಂಧದ ಈ ಭಾಗವು ಹಾಲೇರಿ ವಂಶದ ಕೊಡಗಿನ ಅರಸರು ತಮ್ಮ ನೆರೆಯ ರಾಜ್ಯಗಳೊಂದಿಗೆ ಹೊಂದಿದ್ದ ರಾಜತಾಂತ್ರಿಕ ಸಂಬಂಧಗಳನ್ನು ವಿವರಿಸುತ್ತದೆ. ಕೊಡಗಿನ ಅರಸು ಗಾದಿಗೆ ಹಾಲೇರಿ ವಂಶದ ಅನೇಕೆ ಅರಸರ ಕಣ್ಣೀರುತ್ತದೆ. ಎಲ್ಲಾ ರಾಜ್ಯಗಳಲ್ಲೂ ಅಧಿಕಾರಕ್ಕಾಗಿ ನಡೆದ ಹೋರಾಟ ಇಲ್ಲಿ ಕೂಡಾ ನಡೆಯುತ್ತದೆ. ಈ ಸಂದರ್ಭಗಳಲ್ಲಿ ಬ್ರಿಟಿಶರನ್ನೊಳಗೊಂಡಂತೆ ಹೈದರ್-ಟಿಪ್ಪು ಮೊದಲಾದ ಅರಸರನ್ನು ಉಪಯೋಗಿಸಿ ಕೊಡಗಿನ ತಮ್ಮ ಶತ್ರುಗಳನ್ನು ನಿಗ್ರಹಿಸಲು ಪ್ರಯತ್ನ ಪಟ್ಟಿರುವುದನ್ನು ನಾವು ನೋಡಬಹುದು “ಭಾರತೀಯ” ಎನ್ನುವ ಅಥವಾ “ಕರ್ನಾಟಕ” ಅಥವಾ ಇನ್ಯಾವುದೇ “ರಾಷ್ಟ್ರೀಯತೆ” ಯ ಪ್ರಶ್ನೆಗಳು ಉದ್ಭವಿಸದ ಸುಮಾರು ೩೦೦ ವರ್ಷಗಳ ಹಿಂದೆ ಈ ರೀತಿಯ ಸಂಕೀರ್ಣ ಹೋರಾಟಗಳ ಮಾದರಿಗಳನ್ನು ನಾವಿಲ್ಲಿ ಅವಲೋಕಿಸಬಹುದು. ಈ ಎಲ್ಲದರ ಮಧ್ಯೆ ರಾಜ್ಯಾಧಿಕಾರವು ಕೊಡಗಿನಲ್ಲಿ ಒಂದು ವ್ಯವಸ್ಥೆಯಾಗಿ ಬೆಳೆದುದನ್ನು ಈ ಭಾಗದಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ. ಇದನ್ನೊಂದು ವ್ಯವಸ್ಥೆಯಾಗಿ ರೂಪಿಸಲು ನೆರೆಯ ಬಲಿಷ್ಠ ರಾಜ್ಯಗಳೊಂದಿಗಿನ ಸಂಕೀರ್ಣ ಸಂಬಂಧಗಳೇ ಪ್ರಮುಖ ಕಾರಣಗಳಾಗಿದ್ದುದನ್ನು ನಾವು ಅವಲೋಕಿಸಬಹುದು. ಹೀಗಾಗಿ ಕೊಡಗಿನ ಲಿಂಗಾಯಿತ ಜಂಗಮ ಅರಸರು ಮೈಸೂರು ಅರಸರೊಂದಿಗೆ (೧೬೭೨ ರಿಂದ ೧೭೦೪ರವರೆಗೆ ಆಳಿದ ಚಿಕ್ಕ ದೇವರಾಜ ಅರಸನಿಂದ ೧೭೯೯ ರಲ್ಲಿ ಬ್ರಿಟಿಶರಿಂದ ಅರಸರೊಂದಿಗೆ ಹಾಗು ಬ್ರಿಟಿಷ್‌ರೊಂದಿಗೆ ಹೊಂದಿದ್ದ ರಾಜಕೀಯದ ಹಾವು ಏಣಿ ಆಟವು ಇಲ್ಲಿ ಮುಖ್ಯವಾಗುತ್ತದೆ. ಪ್ರಸ್ತುತ ಪ್ರಬಂಧದ ವ್ಯಾಪ್ತಿಯಲ್ಲಿ ಬರುವ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕ್ಕೊಂಡು ವಸಾಹತು ಪೂರ್ವ ಕಾಲದ (ಮಧ್ಯಯುಗೀನೋತ್ತರ) ರಾಜಕೀಯ ಸಂಬಂಧಗಳನ್ನು ವಿವರಿಸಲು ಇಲ್ಲಿ ಯತ್ನಿಸಿದ್ದೇನೆ.

ಹಾಲೇರಿಯಿಂದ ಮಡಿಕೇರಿಗೆ ರಾಜಧಾನಿಯನ್ನು ಬದಲಾಯಿಸಿದ ಮುದ್ದುರಾಜನು ತನ್ನ ಮೊದಲನೆಯ ಮಗ ದೊಡ್ಡ ವೀರಪ್ಪನಿಗೆ ಯುವರಾಜ ಪಟ್ಟ ಕಟ್ಟಿದನು. ತನ್ನ ಎರಡನೆಯ ಮಗ ಅಪ್ಪಾಜಿರಾಜನನ್ನು ಹಾಲೇರಿ ಅರಮನೆಯಲ್ಲಿರಿಸಿ ಆ ನಾಡನ್ನು ಅವನಿಗೆ ಜಹಗೀರು ನೀಡಿದನು. ಹಾಗೆಯೇ ಮೂರನೆಯ ಮಗ ನಂದರಾಜನಿಗೆ ಹೊರ ಮಲೆನಾಡಿನಲ್ಲಿ ಅರಮನೆ ಕಟ್ಟಿಸಿ ಆ ನಾಡನ್ನು ಅವನಿಗೆ ಜಹಗೀರು ನೀಡಿದನು. ಹೀಗೆ ಹಾಲೇರಿ ಅರಸರು ಮಡಿಕೇರಿ ಮತ್ತು ಹೊರಮಲೆಗಳಲ್ಲೂ ತಮ್ಮ ಅಧಿಕಾರವನ್ನು ವಿಸ್ತರಿಸಿದರು. ದೊಡ್ಡ ವೀರಪ್ಪನ ಕಾಲದಲ್ಲಿಯೇ ಹಾಲೇರಿ ಮೂಲದ ಕೊಡಗಿನ ರಾಜ್ಯದ ಬಾಹ್ಯ ಹಾಗೂ ಆಂತರಿಕ ಶತ್ರುಗಳನ್ನು ಹದ್ದು ಬಸ್ತಿಗೆ ತರಲಾಯಿತು.

ಕ್ರಿ.ಶ. ೧೬೭೨ರಿಂದ ೧೭೦೪ ರವರೆಗೆ ಮೈಸೂರಿನ ಅರಸನಾಗಿದ್ದ ಚಿಕ್ಕ ದೇವರಾಜನಿಗೂ ಹಾಗೂ ಕೊಡಗಿನ ದೊಡ್ಡ ವೀರಪ್ಪನಿಗೂ ನಡೆದ “ಪಾಲುಪರೆ ಯುದ್ದ” ವು ಕೊಡಗಿನ ರಾಜಕೀಯ ಚರಿತ್ರೆಯಲ್ಲಿ ನಿರ್ಣಾಯಕವಾದ ಅಂಶವಾಗಿದೆ. ಚಿಕ್ಕದೇವರಾಜನು ಕೊಯಂಬತ್ತೂರು ಹಾಗೂ ಮೈಸೂರಿನ ಉತ್ತರದ ಸೀಮೆಗಳನ್ನು ಗೆದ್ದು ಕೊಡಗನ್ನು ವಶಪಡಿಸಿಕೊಳ್ಳಲು ಕೊಡಗಿನ ಆಗ್ನೇಯ ದಿಕ್ಕಿನಲ್ಲಿರುವ ಬಾಳೆಲೆಯ ಬಳಿಯಿರುವ ಪಾಲುಪರೆಯ ಮೈದಾನದಲ್ಲಿ ತನ್ನ ಸೈನ್ಯವನ್ನು ನಿಲ್ಲಿಸಿದನು. ಅನಿರೀಕ್ಷಿತವಾಗಿ ಬೆಳಗಿನ ಜಾವದಲ್ಲೇ ಕೊಡಗಿನ ಸೈನಿಕರು ಮೈಸೂರಿನ ಸೈನಿಕರ ಮೇಲೆ ಆಕ್ರಮಣ ಮಾಡಿ ಸುಮಾರು ೧೫೦೦ ಸೈನಿಕರನ್ನು ಕೊಂದುಬಿಟ್ಟರು. ಪಾಲಪರೆ ಯುದ್ದದಿಂದಾಗಿ ಕೊಡಗಿನ ಅರಸನಿಗೆ ತನ್ನ ಅಧಿಕಾರವನ್ನು ವಿಸ್ತರಿಸಲು ಸಾಧ್ಯವಾಯಿತು.

ಹಾಲೇರಿ ಅರಸರು ಲಿಂಗಾಯಿತರಾದರೂ ತಮ್ಮ ಹೆಣ್ಣು ಮಕ್ಕಳಿಗೆ ಕೊಡಗಿನವರನ್ನೇ ಮದುವೆ ಮಾಡಿಕೊಡುತ್ತಿದ್ದದ್ದು ವಾಡಿಕೆಯಲ್ಲಿತ್ತು. ಚೆಪ್ಪು ನಾಡಿನ ಸಾಮಾನ್ಯ ಕುಟುಂಬದಿಂದ ಬಂದ ಉತ್ತು ಎಂಬ ವೀರನಿಗೆ ಮುದ್ದುರಾಜನು ತನ್ನ ಮಗಳು ನೀಲಮ್ಮಾಜಿಯನ್ನು ವಿವಾಹ ಮಾಡಿ ಲಿಂಗಾಯಿತ ದೀಕ್ಷೆ ನೀಡಲಾಯಿತು. ಅವನಿಗೆ ಚಿಪ್ಪು ನಾಡಿನ ಉಸ್ತುವಾರಿಯನ್ನು ನೀಡಲಾಯಿತು. ತೀರಾ ಸಾಮಾನ್ಯ ವಂಶದಿಂದ ಬಂದ ಅವನನ್ನು ಚೆಪ್ಪು ನಾಡಿನ ಕೊಡಗರು ಮುಖ್ಯಸ್ಥನೆಂದು ಒಪ್ಪಿಕೊಳ್ಳದ್ದರಿಂದ ಅವನು ದೌರ್ಜನ್ಯದಿಂದ ಆಳಲು ಆರಂಭಿಸಿದನು. ತನಗೆ ವಿರೋಧವಾಗಿದ್ದ ಐಚೆಟ್ಟಿ, ಬಾಚೆಟ್ಟಿ ಕುಟುಂಬಗಳ ‘ಐನ್’ ಮನೆಗಳನ್ನು (ಅವಿಭಕ್ತ ಕುಟುಂಬದ ಮನೆ) ಈತ ಸುಟ್ಟು ಹಾಕಿ ಬಿಟ್ಟನು. ವಿರೋಧಿಗಳ ನಾಶದಲ್ಲಿ ನಿರತನಾಗಿದ್ದ ಈತನಿಗೆ ಈತನ ಭಾವ ದೊಡ್ಡ ವೀರಪ್ಪ ಹೇಳಿದ ಎಚ್ಚರಿಕೆ ಮಾತುಗಳು ರುಚಿಸಲಿಲ್ಲ. ಪರಿಣಾಮವಾಗಿ ಉತ್ತುನಾಯಕನು ಮಲೆಯಾಳಿ ಕೋಟಂಗದ ವೀರವರ್ಮನೊಂದಿಗೆ ಸೇರಿದನು. ಇವರಿಬ್ಬರು ಮೈಸೂರಿನ ಚಿಕ್ಕದೇವರಾಜ ಕೊಡಗನ್ನು ಆಕ್ರಮಿಸಬೇಕೆನ್ನುವ ಹೊತ್ತಿನಲ್ಲಿ ದೊಡ್ಡವೀರಪ್ಪನನ್ನು ಸೋಲಿಸಲು ಯತ್ನಿಸಿ ವಿಫಲರಾದರು. ಪರಿಣಾಮವಾಗಿ ವೀರವರ್ಮ ಅವನ ಸೈನಿಕರೊಡನೆ ಸತ್ತರೆ ಉತ್ತನಾಯಕನು ಕೇರಳದ ಬೈತೂರಿಗೆ ಓಡಿಹೋಗುತ್ತಾನೆ. ಇವನ ಮರಣದ ನಂತರದ ಎಷ್ಟೋ ವರ್ಷಗಳ ನಂತರ ಇವನ ವಂಶಜರು ಮತ್ತೆ ಚೆಪ್ಪುನಾಡಿನ ಅರಮೇರಿಗೆ ಬಂದು ನೆಲಸಿದರು. ಇವರು ನಾಯಕನ ಸಂತತಿಯವರಾದ್ದರಿಂದ ಇವನ್ನು “ನಾಯಕಂಡ” ಮನೆಯವರೆಂದು ಕರೆಯುತ್ತಾರೆ.

ಉತ್ತುನಾಯಕನ ರೀತಿಯ ಕೊಡಗಿನ ಸ್ಥಳೀಯ ನಾಯಕರ ಸಾಲಿನಲ್ಲಿ ಸೇರುವವರಲ್ಲಿ ಅಂಜಿಗೇರಿ ನಾಡಿನ ಅಚ್ಚುನಾಯಕ ಹಾಗೂ ಕಡಿ ಮತ್ತು ನಾಡಿನ ಕೊಳ್ಳಕೊಂಗಿ ನಾಯಕರು ಪ್ರಮುಖರು. ಇವರು ದೊಡ್ಡ ವೀರಪ್ಪನಿಗೆ ಕಪ್ಪ ಕೊಡದೆ “ಸ್ವತಂತ್ರ” ರಾಗಿರಲು ಇಷ್ಟ ಪಟ್ಟವರು. ಈ ಸಂದರ್ಭದಲ್ಲಿ ಕಲಿಸಂದ ೪೮೧೯ನೆ ೫ರ ಸಂವತ್ಸರ (ಕ್ರಿ.ಶ. ೧೭೧೮ ನೇ ಇಸವಿ)ದಲ್ಲಿ ನಾಲ್ಕುನಾಡು ನಾಲಡಿ ಗ್ರಾಮದ ಪರದಂಡ ಪೊನ್ನಪ್ಪ ಎಂಬ “ಕಾರ್ಯಕಾರನ” (ಸೇನಾಪತಿ) ನೇತೃತ್ವದಲ್ಲಿ ದೊಡ್ಡ ವೀರಪ್ಪನು ಸೈನ್ಯವೊಂದನ್ನು ಕಳಿಸಿ ಅಚ್ಚುನಾಯಕ ಕೊಡಗು ರಾಜನ ಕೈಲಿ ಹತನಾದರೆ, ಅಚ್ಚುನಾಯಕನಿಗೆ ಕಾರಾಗೃಹದ ಶಿಕ್ಷೆಯಾಗುವುದು. ಕಾರ್ಯಕಾರ ಪೊನ್ನಪ್ಪ ಇದರಿಂದಾಗಿ ರಾಜನ ದಿವಾನನಾಗುವನು. ಹಾಗೆಯೇ ಚೆಪ್ಪು ನಾಡು ಕುಂಜಲಗೇರಿ ಗ್ರಾಮದಲ್ಲಿ ಕೊಳ್ಳಕೊಂಗಿ ನಾಯಕನಿಗೆ ಸೇರಿದ ಐನೂರು ಭಟ್ಟಿ ಭೂಮಿ (ನೂರು ಭಟ್ಟಿ ಭೂಮಿ ಎಂದರೆ ಎನ್ನುವ ವಂಶದ ಕುಲಕ್ಕೆ ಸೇರಿದ ಸಾವಿರ ಭಟ್ಟಿ ಭೂಮಿಯನ್ನು ದಿವಾನನ ಕೋರಿಕೆಯಂತೆ ರಾಜನು ಅವನಿಗೆ ನೀಡುವನು. ಇದಲ್ಲದೆ ಈ ಭೂಮಿಯನ್ನು ಸಾಗುವಳಿ ಮಾಡುವುದಕ್ಕೆ ಹತ್ತು ಕುಟುಂಬ ಜಮ್ಮದ ಹೊಲೆಯರಿಗೆ, ನೂರು ವರಹ ಕಂಠೀರಾಯ ಹಣವನ್ನು ನೀಡಿದನು (ಈ ಪದ್ಧತಿಯ ಬಗ್ಗೆ ಈ ಪ್ರಬಂಧದ ಮುಂದಿನ ಭಾಗದಲ್ಲಿ ಚರ್ಚಿಸಲಾಗಿದೆ). ಮುಕ್ಕಾಟಿರ ಭೂಮಿಯಲ್ಲಿ ಇವರು ನೆಲೆ ನಿಂತದ್ದರಿಂದ ಪರದಂಡ ಮನೆಗೆ ಸೇರಿದ ಪೊನ್ನಪ್ಪನವರ ಕುಟುಂಬದವರನ್ನು ನಂತರ “ಮುಕ್ಕಾಟರ” ಮನೆಯವರೆಂದು ಕರೆಯಲಾಯಿತು ಎಂದು ಡಿ.ಎನ್.ಕೃಷ್ಣಯ್ಯ ಅವರು ಬರೆಯುತ್ತಾರೆ. ಕೊಳ್ಳಕೊಂಗಿ ನಾಯಕನ ಅಳಿದುಳಿದ ಸಂತತಿಯವರನ್ನು ಅವರು ನಾಯಕರ ಸಂತತಿಗೆ ಸೇರಿದ ಕಾರಣಕ್ಕಾಗಿ “ನಾಯಕಂಡ” ಮನೆಯವರೆಂದು ಕರೆಯುತ್ತಾರೆ. ಉತ್ತುನಾಯಕನ ಸಂತತಿಯವರಿಗೂ “ನಾಯಕಂಡ” ಮನೆ ಹೆಸರಿದ್ದರೂ, ಅದಕ್ಕೂ ಮತ್ತು ಕೊಳ್ಳಕೊಂಗಿ ನಾಯಕನ ಸಂತತಿಗೂ ಸಂಬಂಧವಿಲ್ಲ ಎಂದು ಡಿ.ಎನ್. ಕೃಷ್ಣಯ್ಯ ವಿಶ್ಲೇಷಿಸಿದ್ದಾರೆ:

ಕೊಡಗಿನ ಒಳಗಿನ ಹಾಗೂ ಹೊರಗಿನ ತನ್ನ ಶತ್ರುಗಳನ್ನು ಹದ್ದು ಬಸ್ತಿಗೆ ತಂದನಂತರ ದೊಡ್ಡ ವೀರಪ್ಪನ ಚಟುವಟಿಕೆ ಕೊಡಗನ್ನು ವಿಸ್ತರಿಸುವುದಕ್ಕೆ ಮೀಸಲಾಯಿತು. ಕೊಡಗಿನ ನೆರೆ ರಾಜ್ಯವಾಗಿದ್ದ ಬೇಲೂರು ನಾಯಕರ ಏಳುಸಾವಿರ ಸೀಮೆ (ಇದು ಹೆಚ್ಚು ಕಡಿಮೆ ಈಗಿನ ಸೋಮವಾರಪೇಟೆ ತಾಲೂಕು)ಯನ್ನು ವಶಪಡಿಸಿಕೊಳ್ಳಲು ಮೈಸೂರು ಅರಸ ಚಿಕ್ಕ ದೇವರಾಜ ಹೊಂಚು ಹಾಕುತ್ತಿದ್ದನು. ಆ ಹೊತ್ತಿಗೆ ದೊಡ್ಡ ವೀರಪ್ಪನೆ ಏಳುಸಾವಿರ ಸೀಮೆಯನ್ನು ಗೆದ್ದು ತನ್ನ ತೆಕ್ಕೆಗೆ ಸೇರಿಸಿಕೊಂಡನು. ಮೈಸೂರು ಅರಸನು ಬೇಲೂರಿನ ಉತ್ತರಭಾಗವನ್ನು ಗೆದ್ದುಕೊಂಡನು. ಆದರೆ ಏಳು ಸಾವಿರ ಸೀಮೆಗೆ ಸಂಬಂಧಿಸಿದಂತೆ ಕೊಡಗಿನ ಮತ್ತು ಮೈಸೂರಿನ ಅರಸರ ನಡುವೆ ಮತ್ತೆ ವೈಷಮ್ಯ ಬಂದಿತು. ಈ ವೈಮನಸ್ಸುಗಳ ನಡುವೆಯೂ ಈ ಇಬ್ಬರು ಅರಸರು ಒಂದು ಒಮ್ಮತಕ್ಕೆ ಬಂದರು. ಇದರ ಪ್ರಕಾರ ಏಳುಸಾವಿರ ಸೀಮೆ ಅಧಿಕಾರವು ಮೈಸೂರು ಅರಸನಿಗೆ ಕೊಡಬೇಕಿತ್ತು. ಹೀಗೆ ದೊಡ್ಡ ವೀರಪ್ಪನ ಕಾಲದಲ್ಲಿ ಕೊಡಗಿನ ವಿಸ್ತೀರ್ಣ ದೊಡ್ಡದಾಗುತ್ತಾ ಹೋಯಿತು. ಕೊಡಗು ಒಂದು ವ್ಯವಸ್ಥಿತ ರಾಜ್ಯವ್ಯವಸ್ಥೆಯ ಆಳ್ವಿಕೆಗೆ ಬಂದಿತು.

ಕೆಳದಿರಾಜರ ಚರಿತ್ರೆ ಪ್ರಕಾರ ಅಮರ ಸುಳ್ಯ ಮಾಗಣೆಯು ದೊಡ್ಡವೀರಪ್ಪನ ಜನನದ ಸಂತೋಷದಿಂದ ಇಕ್ಕೇರಿ ಅರಸರು ಮುದ್ದುರಾಜನಿಗೆ ಬಳುವಳಿ ನೀಡಿದ್ದರೆಂಬುದನ್ನು ನಾನು ಈಗಾಗಲೇ ವಿವರಿಸಿದ್ದೇನೆ. ರಾಜೇಂದ್ರನಾಮೆಯು ಕೂಡ ಅಮರ ಸುಳ್ಯನ್ನು ಇಕ್ಕೇರಿ ಅರಸರೇ ನೀಡಿದರೆಂದು ವಿರಿಸಿದರೂ ಚಾರಿತ್ರಿಕ ಹಿನ್ನಲೆಗಳು ಮತ್ತು ಘಟನೆಗಳೇ ಬೇರೆ ಇರುವುದನ್ನು ನಾವು ನೋಡಬಹುದು. ಇದರ ಪ್ರಕಾರ ೧೭೧೪ ರಿಂದ ೧೭೩೯ ರವರೆಗೆ ಇಕ್ಕೇರಿಯಲ್ಲಿ ಆಳಿದ ಎರಡನೆಯ ಸೋಮಶೇಖರ ಮಲಬಾರಿನ ಉತ್ತರ ಭಾಗದಲ್ಲಿದ್ದ ಚರಕಲೆ ರಾಜ್ಯವನ್ನು ವಶಪಡಿಸಿಕೊಳ್ಳಲು ಸೈನ್ಯ ತಂದನು. ಚರಕಲೆ ರಾಜ್ಯದ ಅರ್ಧಭಾಗವನ್ನು ವಶಪಡಿಸಿಕೊಂಡು ಮುಂದೆ ಸಾಗುತ್ತಿದ್ದಾಗ ಚರಕಲೆ ಅರಸ ವೀರವರ್ಮನು ಕೊಡಗಿನ ದೊಡ್ಡವೀರಪ್ಪನ ಮಧ್ಯಸ್ತಿಕೆಯನ್ನು ಕೋರಿದನು. ದೊಡ್ಡ ವೀರಪ್ಪ ಹಾಗೂ ಇಕ್ಕೇರಿಯ ಅರಸರಿಬ್ಬರೂ “ಸ್ವಕೀಯಸ್ಥ” (ಲಿಂಗಾಯಿತ) ರಾಗಿದ್ದರಿಂದ ಇದು ಸಾಧ್ಯ ಎಂದು ದೊಡ್ಡವೀರಪ್ಪನಿಗೆ ವೀರವರ್ಮ ಮನವರಿಕೆ ಮಾಡಿದನು. ಈಗಾಗಲೇ ಬಹಳಷ್ಟು ಸೈನ್ಯ ಮತ್ತು ಹಣ ಕಳೆದುಕೊಂಡಿದ್ದರಿಂದ ಸೋಮಶೇಖರನು ವೀರವರ್ಮ ೧೮ ಲಕ್ಷ ರೂಪಾಯಿ ಕೊಡುವುದಾದರೆ ಮತ್ತು ಅದಕ್ಕೆ ದೊಡ್ಡ ವೀರಪ್ಪ ಜಾಮೀನು ನಿಲ್ಲುವುದಾದರೆ ಒಪ್ಪಂದ ಸಾಧ್ಯವೆಂದು ದೊಡ್ಡವೀರಪ್ಪನಿಗೆ ತಿಳಿಸುವನು, ಹಾಗೆಯೇ, “ಮಲೆಯಾಳದ ರಾಜರು ಮೋಸಗಾರರು, ಆಡಿದ ಮಾತು ಕೊಟ್ಟ ನಂಬಿಕೆಗೆ ಸರಿಯಾಗಿ ನಡೆಸುವವರಲ್ಲ. ಅವರ ಕರಾರುನಾಮೆಯನ್ನು ನಂಬಿ ಈ ಹಣಕ್ಕೆ ನೀವು ಹೊಣೆಯಾಗಬೇಡಿ” ಎಂದು ಕೂಡ ದೊಡ್ಡವೀರಪ್ಪನನ್ನು ಎಚ್ಚರಿಸುವನು. ಆರಂಭದಲ್ಲಿ ಅರ್ಧ ಹಣವನ್ನು ವೀರವರ್ಮನು ಸಂದಾಯ ಮಾಡಿದರೂ ಉಳಿದರ್ಧ ಹಣನೀಡಲು ಸತಾಯಿಸಿ ಕೊಡಗು ರಾಜನನ್ನು ಈತ ಮೋಸ ಮಾಡಿಬಿಟ್ಟನು. ಇದರಿಂದ ನೊಂದ ದೊಡ್ಡ ವೀರಪ್ಪ ಆಡಿದ ಮಾತಿಗಾಗಿ ತನ್ನ ಖಜಾನೆಯಿಂದ ಉಳಿದ ಒಂಭತ್ತು ಲಕ್ಷ ರೂಪಾಯಿಗಳನ್ನು ಸೋಮಶೇಖರನಿಗೆ ನೀಡುತ್ತಾನೆ. ಸೋಮಶೇಖರನು ದೊಡ್ಡವೀರಪ್ಪನ ಪ್ರಾಮಾಣಿಕತೆಯನ್ನು ಮೆಚ್ಚಿ ಅಮರಮಾಗಣೆಯನ್ನು ಉಚಿತವಾಗಿ ಕೊಟ್ಟನೆಂದು ರಾಜೇಂದ್ರನಾಮೆ ತಿಳಿಸುತ್ತದೆ. ಕಾವೇರಿಯಮ್ಮನ ಪೂಜೆಗೆ ಕೊಡಗಿನಲ್ಲಿ ತೆಂಗಿನ ಕಾಯಿಯಿಲ್ಲದ್ದರಿಂದ ಭಾಗಮಂಡಲಕ್ಕೆ ಸಮೀಪವಿರುವ ಸುಳ್ಯ ಮಾಗಣೆಯನ್ನು ಕಾವೇರಮ್ಮನ ದೇವಸ್ಥಾನದ ಭಂಡಾರದಿಂದ ದೊಡ್ಡವೀರಪ್ಪನು ಇಕ್ಕೇರಿ ಅರಸನಿಂದ ಕ್ರಯಕ್ಕೆ ತೆಗೆದುಕೊಳ್ಳುವನು. ಹೀಗೆ ಕೊಡಗಿಗೆ ಅಮರ ಸುಳ್ಯ ಮಾಗಣೆಯು ಸೇರಿತು. ದೊಡ್ಡ ವೀರಪ್ಪ “ಹುಟ್ಟಿದ” ಕಾರಣಕ್ಕಾಗಿ ಈ ಭಾಗಗಳು ಕೊಡಗಿಗೆ ಸೇರಿತೊ ಅಥವಾ ದೊಡ್ಡವೀರಪ್ಪನ “ಪ್ರಾಮಾಣಿಕತೆಗಾಗಿ” ಈ ಭಾಗಗಳು ಕೊಡಗಿಗೆ ಸೇರಿತೊ ಎನ್ನುವುದಕ್ಕಿಂತ ಕೊಡಗಿನ ರಾಜಕೀಯ ಭೂಪಟದಲ್ಲಿ ಅಮರ ಸುಳ್ಯಭಾಗವು ಸೇರಿದ್ದು ಕೊಡಗಿನ ರಾಜಕೀಯ ಚರಿತ್ರೆಯ ಮುಖ್ಯ ಮೈಲುಗಲ್ಲೆಂದು ನಾವು ಹೇಳಬಹುದು.

೧೭೩೬ ರಲ್ಲಿ ತೀರಿಹೋದ ದೊಡ್ಡ ವೀರಪ್ಪನ ನಂತರ ೧೭೬೬ ರವರೆಗೆ ಅವನ ಮೊಮ್ಮಗ ಚಿಕ್ಕವೀರಪ್ಪ ಒಡೆಯನು ಕೊಡಗಿನ ರಾಜನಾದನು (ದೊಡ್ಡವೀರಪ್ಪನ ಮಗ ಅಪ್ಪಾಜಿರಾಜನು “ಸಾಮಾನ್ಯ ಸ್ತ್ರೀ” ಯ ಸಂಪರ್ಕ ಮಾಡಿದ್ದರಿಂದ ಆತನ ಪಟ್ಟದರಾಣಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಕಾರಣಕ್ಕಾಗಿ ಆತನಿಗೆ ೧೨ ವರ್ಷ ಕಾರಾಗೃಹವಾಗುತ್ತದೆ. ಅಪ್ಪಾಜಿರಾಜ ಕಾರಾಗೃಹದಲ್ಲೇ ಸತ್ತು ಹೋಗುವನು). ಚಿಕ್ಕ ವೀರಪ್ಪನ ಕೊನೆಯ ವರ್ಷಗಳಲ್ಲಿ ಅಂದರೆ ೧೭೬೧ರಲ್ಲಿ ಮೈಸೂರಿನಲ್ಲಿ ನವಾಬ ಹೈದರಾಲಿಖಾನನು ಮೈಸೂರು ಒಡೆಯರ್ ಅರಸರನ್ನು ಓಡಿಸಿ ತಾನೇ ಅರಸನಾದನು. ಸಣ್ಣ ಪುಟ್ಟ ಪಾಳೇಗಾರರನ್ನೂ ಸುಲಭವಾಗಿ ಸೋಲಿಸಿದ ಹೈದರ್ ಕೊನೆಗೆ ಇಕ್ಕೇರಿ ಸಂಸ್ಥಾನವನ್ನು ವಶಪಡಿಸಿಕೊಳ್ಳುವನು. ಸಹಜವಾಗಿಯೇ ಇಕ್ಕೇರಿಯೊಂದಿಗೆ ಒಳ್ಳೆಯ ಸಂಬಂಧವಿಟ್ಟುಕೊಂಡಿದ್ದ ಕೊಡಗು ಸಂಸ್ಥಾನವು ಬಲಹೀನವಾಯಿತು. ಈ ಹಿನ್ನಲೆಯಲ್ಲೇ ಹೈದರನು ಕೊಡಗು ಮತ್ತು ಮೈಸೂರು ರಾಜರಿಬ್ಬರಿಗೂ ತೆರಿಗೆ ಸಲ್ಲುತ್ತಿದ್ದ ಏಳುಸಾವಿರ ಸೀಮೆಯ ಮೇಲೆ ತಗಾದೆ ತೆಗೆದನು. ಆ ಸೀಮೆಯ ಭೂ ಭಾಗಗಳು ಮೈಸೂರಿಗೂ ಸೇರಬೇಕೆಂದ ನವಾಬನ ಮಾತನ್ನು ಮನ್ನಿಸಿ ಕೊಡಗು ರಾಜನು ಬೆಮ್ಮತ್ತಿ, ಮಲ್ಲಿಪಟ್ಟಣ, ಹೊಸೂರು ಎಂಬ ಪ್ರದೇಶಗಳನ್ನು ನವಾಬನಿಗೆ ನೀಡುವನು. ಆದರೆ ತನಗೆ ಹಣವೂ ಬರಬೇಕೆಂದು ತನ್ನ ಸೈನ್ಯಾಧಿಕಾರಿ ಫಜರುಲ್ಲಾಖಾನನನ್ನು ಕೊಡಗು ಸಂಸ್ಥಾನದ ಮೇಲೆ “ಜಗಳ”ಕ್ಕೆ ಕಳಿಸಿದನು. ೧೭೬೫ ರಲ್ಲಿ ಕೊಡಗಿದ್ದ ಉಬ್ಬರ್‌ಗಂಡಿ ಮಾಳದಲ್ಲಿ ನಡೆದ ಸಣ್ಣ ಯುದ್ದದಲ್ಲಿ ಖಾನನು ಸೋತು ಕೊಡಗಿನ ಉತ್ತರದಲ್ಲಿರುವ ಐಗೂರು ಸೀಮೆಗೆ ಓಡಿಹೋದನು. ಪರಿಣಾಮವಾಗಿ ಹೈದರನು ಶಾಂತಿ ಒಪ್ಪಂದಕ್ಕೆ ಬಂದು ಉಚ್ಚಂಗಿ ಸಂಸ್ಥಾನವನ್ನು ಕೊಡಗಿಗೆ ಬಿಟ್ಟು ಕೊಡುವುದಾಗಿ ಮಾತುಕೊಟ್ಟನು. ಆದರೆ ಈ ಒಪ್ಪಂದವು ಅನುಷ್ಠಾನಕ್ಕೆ ಬರುವ ಮೊದಲೇ ಅಂದರೆ ೧೭೬೬ರಲ್ಲಿ ಚಿಕ್ಕ ವೀರಪ್ಪ ತೀರಿ ಹೋಗುತ್ತಾನೆ. ಅವನಿಗೆ ಮಕ್ಕಳಿಲ್ಲದ್ದರಿಂದ ಹಾಲೇರಿಯ ಅಪ್ಪಾಜಿರಾಜನ (ದೊಡ್ಡವೀರಪ್ಪನ ತಮ್ಮ) ಮಗ ಮುದ್ದುರಾಜ ಮತ್ತು ಹೊರಮಲೆ ನಂದರಾಜನ (ದೊಡ್ಡವೀರಪ್ಪನ ತಮ್ಮ) ಮಗ ಮುದ್ದಯ್ಯ ಇವರುಗಳು ಜಂಟಿಯಾಗಿ ೧೭೬೬ ರಿಂದ ೧೭೭೦ ರವರೆಗೆ ಕೊಡಗನ್ನು ಅನ್ಯೋನ್ಯವಾಗಿ ಆಳಿದರು. ಇವರ ಕಾಲದಲ್ಲಿ ಹೈದರ್‌ನನ್ನು ತಮಗೆ ಕೊಡಬೇಕಾಗಿದ್ದ ಉಚ್ಛಂಗಿ ಸಂಸ್ಥಾನವನ್ನು ಕೇಳಿದರೂ ಹೈದರನು ಅದನ್ನು ಕೊಡಲೊಪ್ಪಲಿಲ್ಲ. ಆಗ ಅಪ್ಪಾಜಿರಾಜನ ಎರಡನೆಯ ಮಗ ಲಿಂಗರಾಜ (ಮುದ್ದುರಾಜನ ತಮ್ಮ) ಏಳುಸಾವಿರ ಸೀಮೆಯಲ್ಲಿ ಫಜಲ್‌ಉಲ್ಲಾಖಾನನನ್ನು ಸೋಲಿಸಿದನು. ಆದರೆ ಈ ಯುದ್ಧದಲ್ಲಿ ಕೊಡಗು ರಾಜನ ದಳವಾಯಿಗಳಾಗಿದ್ದ ಕನ್ನಂಡ ದೊಡ್ಡಯ್ಯ ಮತ್ತು ಅಪ್ಪಚ್ಚಿರ ಮಂದಣ್ಣನವರು ಸತ್ತುಹೋಗುತ್ತಾರೆ. ಅಪಾರವಾದ ಶಸ್ತ್ರಾಸ್ತ್ರಗಳನ್ನು, ಸೈನ್ಯವು ಬಿಟ್ಟುಹೋದ ಸಾಮಾನು ಸರಂಜಾಮು, ಪಣದೊಂದಿಗೆ ಕೊಡಗಿನ ಸೈನಿಕರು ವಾಪಾಸ್ಸಾಗುತ್ತಾರೆ. ಹೈದರನು ಶಾಂತಿಯನ್ನು ಬಯಸಿದ ಪರಿಣಾಮವಾಗಿ ಅವನು ನಗರ ಪ್ರಾಂತ್ಯಕ್ಕೆ ಹೊಂದಿಕೊಂಡಿದ್ದ ಪಂಜೆ ಮತ್ತು ಬೆಳ್ಳಾರೆ ಪ್ರದೇಶಗಳನ್ನು ಕೊಡಗಿಗೆ ಬಿಟ್ಟುಕೊಟ್ಟನು. ಈ ಸಂದರ್ಭದಲ್ಲಿ ಕೊಡಗು ಏಳುಸಾವಿರಸೀಮೆ, ಅಮರಸುಳ್ಯಮಾಗಣೆ ಹಾಗೂ ಪಂಜೆ-ಬೆಳ್ಳಾರೆಯನ್ನು ಹೊಂದಿದ್ದ ವಿಶಾಲವಾದ ಪ್ರಬಲ ರಾಜ್ಯವಾಗಿತ್ತೆಂದರೆ ತಪ್ಪಾಗಲಾರದು. ಸುಮಾರು ೧೫೦ ವರ್ಷಗಳ ಕಾಲ ಯಾವುದೇ ಅಡೆತಡೆಗಳಿಲ್ಲದೆ ಹೆಚ್ಚು ಕಡಿಮೆ ಸ್ವತಂತ್ರರಾಗಿ ಕೊಡಗು ಅರಸರು ಆಳ್ವಿಕೆ ಮಾಡಿದರೂ ರಾಜಕೀಯ ಚದುರಂಗಾಟದಲ್ಲಿ ಇವರು ಹಿನ್ನಡೆಯನ್ನು ಅನುಭವಿಸಬೇಕಾಯಿತು. ಅದು ೧೭೭೫ರಲ್ಲಿ ಹೈದರ್‌ಅಲಿಯ ರಾಜಕೀಯ ಆಟದಿಂದ ಆರಂಭವಾಗಿ ೧೮೩೪ರಲ್ಲಿ ಕೊಡಗು ಬ್ರಿಟಿಷರ ಕೈ ಸೇರುವವರೆಗೂ ನಡೆಯಿತು. ಹೈದರ್ ಅಥವಾ ಟಿಪ್ಪುವನ್ನು “ಭಾರತದ ಸ್ವಾತಂತ್ರ‍್ಯ ಹೋರಾಟಗಾರರೆಂದು” ಹೇಳುವ ಹೊತ್ತಿನಲ್ಲೇ ೧೮ ನೇ ಶತಮಾನದ ಕೊಡಗಿಗೆ ಅವರು ಬ್ರಿಟಿಷರಷ್ಟೇ ಪರಕೀಯರಾಗಿದ್ದರು. ಹೈದರ್‌ಟಿಪ್ಪುವಾಗಲಿ ಅಥವಾ ಬ್ರಿಟಿಷರಾಗಲಿ ಕೊಡಗು ಅರಸರಿಗೆ ತಮ್ಮ ಆಂತರಿಕ ರಾಜಕೀಯ ಪ್ರಶ್ನೆಗಳನ್ನು ಇತ್ಯರ್ಥ ಮಾಡಿಕೊಳ್ಳಲು ಇದ್ದ ರಾಜಕೀಯ ಶಕ್ತಿಗಳೇ ವಿನಹ ಭಾರತೀಯ ಅಥವಾ ಕರ್ನಾಟಕದ ರಾಷ್ಟ್ರೀಯತೆಯ ಪ್ರಶ್ನೆಗಳಾಗಿ ಉಳಿದಿರಲಿಲ್ಲ. ಹಾಲೇರಿ ಮೂಲದ ಕೊಡಗು ಅರಸರ ಆಳ್ವಿಕೆಯ ಅಧಿಕಾರ ಮೋಹ ಹಾಗೂ ಗೊಂದಲಗಳು ಒಂದು ವಿಶಿಷ್ಟ ಬಗೆಯ ಸಂಕೀರ್ಣತೆಯನ್ನು ಹುಟ್ಟುಹಾಕಿದವು. ಈ ಹಿನ್ನೆಲೆಯಲ್ಲಿ ಚರಿತ್ರೆಯ ಕೆಲವು ವಿವರಗಳನ್ನು ಇಲ್ಲಿ ಚರ್ಚಿಸಲಾಗಿದೆ.

ವಿಶಾಲವಾದ ಭೌಗೋಳಿಕ ಪ್ರದೇಶಗಳನ್ನು ಏಳುಸಾವಿರ ಸೀಮೆಯಿಂದ ಪಂಜೆ-ಬೆಳ್ಳಾರೆಯವರೆಗೆ ವಿಸ್ತರಿಸಿದ್ದ ಹಾಲೇರಿ ಅರಸರಾದ ಮುದ್ದು ರಾಜ ಮತ್ತು ಹೊರಮಲೆ ಅರಸರಾದ ಮುದ್ದಯ್ಯನವರು ೧೭೭೦ ರಲ್ಲಿ ತೀರಿಹೋದರು. ಈ ಘಟ್ಟದಿಂದ ಪೂರ್ಣ ಪ್ರಮಾಣದ ದಾಯಾದಿ ಕಲಹ ಆರಭವಾಗುತ್ತದೆ. ಹಾಲೇರಿಯ ಲಿಂಗರಾಜನಿಗೆ ಅವನ ಅಣ್ಣಮುದ್ದುರಾಜನ ಮಗನನ್ನು ಕೊಡಗಿನ ಗಾದಿಗೆ ಕೂರಿಸಬೇಕೆಂದಿದ್ದರೆ, ಹೊರಮಲೆ ಅರಸ ಮುದ್ದಯ್ಯನ ಮಗ ಮಲ್ಲಯ್ಯನು ತನ್ನ ಮಗ ದೇವಪ್ಪರಾಜನನ್ನು ಮುಂದಿನ ರಾಜನನ್ನಾಗಿ ಮಾಡಬೇಕೆಂದು ಆಸೆಪಟ್ಟನು. ದೇವಪ್ಪರಾಜನಿಗೆ ಜನರ ಬೆಂಬಲ ಹೆಚ್ಚಿದ್ದರಿಂದ ಅವನೇ ಕೊಡಗಿನ ರಾಜನಾದನು. ಈ ಘಟ್ಟದಿಂದ ದ್ವೇಷಾಸೂಯೆಗಳು ಪ್ರಖರವಾಗಿ ಆರಂಭವಾದವು. ಉಳಿದವರ ಮೇಲೆ ರಾಜನ ನಿರ್ಬಂಧಗಳು ಹೆಚ್ಚಾದೊಡನೆ ಲಿಂಗರಾಜನು ತನ್ನ ಮಗ ವೀರರಾಜ ಹಾಗೂ ತನ್ನ ಅಣ್ಣನ ಮಗ ಅಪ್ಪಾಜಿಯನ್ನು ಕರೆದುಕೊಂಡು ಪಕ್ಕದ ಐಗೂರು ಸೀಮೆಗೆ ಪಲಾಯನ ಮಾಡಿದನು. ಮಡಿಕೇರಿಯ ಸಿಂಹಾಸನವನ್ನು ಪಡೆಯಲು ಹೈದರನ ಸಹಾಯವನ್ನು ಲಿಂಗರಾಜನು ಕೇಳಿದನು. ಹೈದರನು ತನಗೆ ಸಿಕ್ಕ ಅವಕಾಶವನ್ನು ಬಿಡಲಿಲ್ಲ. ಪರಿಣಾಮವಾಗಿ, ಲಿಂಗರಾಜನು ತನ್ನ ಮಕ್ಕಳೊಡನೆ ಶ್ರೀರಂಗಪಟ್ಟಣಕ್ಕೆ ಹೋಗಿ ಹೈದರನ ಆಶ್ರಯವನ್ನು ಪಡೆದನು. ಹಾಗೆಯೇ ಲಿಂಗರಾಜನು ಹೈದರಾಲಿಯ ಸೈನಿಕರ ಜೊತೆಗೆ ಕೊಡಗಿನ ಗಡಿ ಬಾಳೆಲೆಗೆ ದಂಡೆತ್ತಿ ಹೋದನು. ಕ್ರಿ.ಶ. ೧೭೭೩ರಲ್ಲಿ ಹೈದರಾಲಿ-ಲಿಂಗರಾಜರ ಸೈನ್ಯ ಸೋತು ಪಕ್ಕದ ಅರಕಲಗೋಡಿಗೆ ಹಿಮ್ಮೆಟ್ಟಿತ್ತು. ಈ ಸಂದರ್ಭದಲ್ಲಿ ಲಿಂಗರಾಜನು ಕಿಗಟ್ಟುನಾಡಿನ ಕೊಡಗರೊಂದಿಗೆ ಗುಪ್ತ ಒಪ್ಪಂದವನ್ನುಮಾಡಿಕೊಂಡು ಅವರೆಲ್ಲರೂ ತನ್ನ ಪರವಹಿಸುವಂತೆ ಮಾಡಲು ಸಫಲನಾದನು. ಬಲದಿಂದ ಸಾಧಿಸಲಿಕ್ಕಾಗದ್ದನ್ನು ಬೆನ್ನಿಗೆ ಇರಿಯುವ ಮೂಲಕ ಸಾಧಿಸಲಾಯಿತೆಂದು ರಿಕ್ತರನು ಈ ಸಂದರ್ಭವನ್ನು ಉಲ್ಲೇಖಿಸಿ ಬರೆಯುವನು. ಸಹಜವಾಗಿಯೇ ಹೈದರಾಲಿ-ಲಿಂಗರಾಜನ ಸೈನ್ಯವು ಯಾವುದೇ ಪ್ರತಿರೋಧವಿಲ್ಲದೆ ಮಡಿಕೇರಿಯನ್ನು ಪ್ರವೇಶಿಸುತ್ತದೆ. ಈಗ ಕೊಡಗು ಬಿಟ್ಟು ಓಡುವ ಸರದಿ ದೇವಪ್ಪರಾಜನದಾಗುತ್ತದೆ. ಇವನ ಜೀವ ಉಳಿಸಲು ಮಲೆಯಾಳದ ಕೋಟೆ ರಾಜನ ಬಳಿಗೆ ಓಡಿ ಹೋಗುತ್ತಾನೆ. ಆದರೆ ದೊಡ್ಡ ವೀರಪ್ಪನ ಬಗ್ಗೆ ಬಹಳ ದ್ವೇಷ ಇಟ್ಟುಕೊಂಡಿದ್ದ ಕೋಟೆ ರಾಜನು ದೇವಪ್ಪರಾಜನಿಗೆ ತನ್ನಲ್ಲಿರುವ ದುಡ್ಡು ಕೊಟ್ಟರೆ ಜೀವ ಸಹಿತ ಬಿಡುವೆನೆಂದು ಆಗ್ರಹಿಸುವನು. ಬಡಪಾಯಿ ದೇವಪ್ಪ ರಾಜನು ತನ್ನಲ್ಲಿದ್ದ ೪೦,೦೦೦ ರೂಪಾಯಿಗಳನ್ನು ಕೋಟೆ ರಾಜನಿಗೆ ಕೊಟ್ಟು ಮರಾಠರ ಸೀಮೆಯಲ್ಲಿ ಆಶ್ರಯ ಪಡೆಯಲು ಓಡಿಹೋಗುತ್ತಿದ್ದಾಗ ಹೈದರಾಲಿಯ ಸೈನಿಕರಿಗೆ ತುಂಗಭದ್ರಾ ನದಿಯ ಬಲದಂಡೆಯಲ್ಲಿದ್ದ ಹರಿಹರದಲ್ಲಿ ಸಿಕ್ಕಿ ಬೀಳುವನು. ಕ್ರಿ.ಶ. ೧೭೭೪ರಲ್ಲಿ ಹೈದರಾಲಿಯು ದೇವಪ್ಪ ರಾಜನನ್ನು ಮತ್ತು ಅವನ ಕುಟುಂಬದ ಎಲ್ಲಾ ಸದಸ್ಯರನ್ನು ಶ್ರೀರಂಗಪಟ್ಟಣದಲ್ಲಿ ಕೊಂದುಬಿಡುವನು. ದೇವಪ್ಪರಾಜನ ಮರಣದೊಂದಿಗೆ ಹೊರಮಲೆ ವಂಶ ನಾಶವಾಗುತ್ತದೆ. ಈಸಂದಭ್ದಲ್ಲಿ ಹೈದರಾಲಿಯು ತನ್ನ ಯುದ್ಧವೆಚ್ಚವನ್ನು ತುಂಬಿಕೊಡಲು ವರ್ಷಂಪ್ರತಿ ೨೪,೦೦೦ ರೂಪಾಯಿಗಳನ್ನು ಕೊಡಗು ರಾಜನಿಂದ ತೆಗೆದುಕೊಳ್ಳುವ ಒಪ್ಪಂದ ಮಾಡಿಕೊಳ್ಳುತ್ತಾನೆ. ಕೊಡಗಿನ ಬೊಕ್ಕಸ ಬರಿದಾದ ಕಾರಣವನ್ನು ಮುಂದೊಡ್ಡಿ ಬಹಳ ಕಾಲದ ಹಿಂದೆ ಕೈತಪ್ಪಿದ ವೈನಾಡಿನ ಕಲ್ಪಾತಿ ಪ್ರದೇಶವನ್ನು ಕೊಡಗಿಗೆ ಮತ್ತೆ ಸೇರಿಸಿಕೊಳ್ಳುವುದಾದರೆ ಅದರಿಂದ ಬರುವ ತೆರಿಗೆಯಿಂದ ೨೪,೦೦೦ ರೂಪಾಯಿಗಳನ್ನು ಭರಿಸಬಹುದೆಂದು ಲಿಂಗರಾಜನು ಹೈದರನಿಗೆ ತಿಳಿಸುತ್ತಾನೆ. ಅಂತೆಯೇ ೧೭೭೪ರಲ್ಲಿ ಲಿಂಗರಾಜನು ಅಪ್ಪಾಜಿರಾಜನಿಗೆ ಅಧಿಕಾರ ವಹಿಸಿ, ಮೂರುಸಾವಿರ ಸೈನಿಕರೊಂದಿಗೆ ಕಲ್ಪಾತಿಯನ್ನು ವಶಪಡಿಸಿಕೊಂಡು, ಅಲ್ಲಿ ಒಂದು ಕೋಟೆ ಕಟ್ಟಿ, ಅಲ್ಲೇ ಒಂದು ವರ್ಷ ಇದ್ದು ಮರಳಿದನು. ಆನಂತರ ಆ ಕೋಟೆಯಲ್ಲಿ ಕಗ್ಗೋಡು ನಾಡಿನ ಬಂಟ ಸಮುದಾಯದ ಅಣ್ಣಪ್ಪನ ಅಪ್ಪಯ್ಯನೆಂಬ ಸರದಾರನ ಕೆಳಗೆ ಎರಡುಸಾವಿರ ಸೈನಿಕರನ್ನಿರಿಸಿ, ಕೋಟೆಯ ಯಜಮಾನ್ಯವನ್ನು ಎಡೆನಾಲ್ಕುನಾಡಿನ ಮಂಜುಡ ಅಪ್ಪಯ್ಯನಿಗೆ ವಹಿಸಿ ಉಳಿದವರೊಂದಿಗೆ ಕೊಡಗಿಗೆ ಬಂದನು. ಆ ಹೊತ್ತಿನಲ್ಲಿ ಅಂದರೆ ೧೭೭೫ ರಲ್ಲಿ ಅಪ್ಪಾಜಿರಾಜನು ನಿಧನ ಹೊಂದಿದ್ದರಿಂದ ಲಿಂಗರಾಜನೇ ಆಡಳಿತ ವಹಿಸಿಕೊಂಡು ಕೊಡಗಿನ ಅರಸನಾದನು. ಕ್ರಿ.ಶ. ೧೭೭೫ ರಿಂದ ೧೭೭೯ರವರೆಗೆ ಕಲ್ಪಾನೆ ಪ್ರದೇಶ ಕೊಡಗಿನರಸನ ಕೆಳಗಿರುತ್ತದೆ. ೧೭೭೯ರಲ್ಲಿ ಅದನ್ನು ಮತ್ತೆ ಮಲೆಯಾಳಿ ಅರಸರು ವಶಪಡಿಸಿಕೊಳ್ಳುತ್ತಾರೆ. ಅದನ್ನು ಮರುವಶಮಾಡಲು ಅಪ್ಪಾಜಿರಾಜನ ಇಬ್ಬರು ಮಕ್ಕಳನ್ನು ಕಳಿಸಿದರೂ ಪ್ರಯೋಜನವಾಗಲಿಲ್ಲ. ಬದಲಿಗೆ ಆ ಇಬ್ಬರು ಮಕ್ಕಳೂ ಕೋಟೆರಾಜನಿಂದ ಹತರಾಗುವರು. ೧೭೭೫ರಲ್ಲಿ ಅಪ್ಪಾಜಿರಾಜನ ಮರಣ ಹಾಗೂ ೧೭೭೯ ರಲ್ಲಿ ಅವನಿಬ್ಬರ ಮಕ್ಕಳ ಹತ್ಯೆ ಕಾಕತಾಳೀಯ ಎಂದೆನ್ನಿಸಿದರೂ ಅಂತಿಮವಾಗಿ ಅದರಿಂದ ಲಿಂಗರಾಜನ ವಂಶವೇ ಕೊಡಗಿನ ವಾರಸುರದಾರರಾಗಲು ಸಾಧ್ಯವಾಯಿತು.