ಬಯಲು ನಾಡಿನಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ಮೇಲೆ ಮಲೆನಾಡು ಜಿಲ್ಲೆಗಳ ಇತಿಹಾಸದಲ್ಲಿ ಒಂದು ಹೊಸ ಯುಗವೇ ಆರಂಭವಾಯಿತು. ಆ ಭಾಗದಲ್ಲಿ ಬಹಳ ಶತಮಾನಗಳ ಕಾಲದಿಂದ ಆಳ್ವಿಕೆ ಮಾಡಿಕೊಂಡು ಬಂದಿದ್ದ ಹೊಯ್ಸಳರ, ಆಳುಪರ, ಸಾಂತರರ, ತರ್ಯಲ್ಲರ, ಸೇನಾವಾರರ ಕಣ್ಮರೆ ಮತ್ತು ಅವರ ಸ್ಥಾನದಲ್ಲಿ ವಿಜಯನಗರದ ಅರಸರ ಪ್ರತಿನಿಧಿಗಳ ಆಳ್ವಿಕೆ ಹಾಗೂ ಹಲವು ಚಿಕ್ಕ ಪುಟ್ಟ ಹೊಸ ರಾಜಮನೆತನಗಳ ಉದಯ, ಇವುಗಳೇ ವಿಜಯನಗರ ಆಳ್ವಿಕೆಯಲ್ಲಿ ಮಲೆನಾಡು ಪ್ರದೇಶಗಳ ಮೇಲೆ ಆದ ಮುಖ್ಯ ರಾಜಕೀಯ ಪರಿಣಾಮಗಳಾಗಿವೆ. ವಿಜಯನಗರ ಚಕ್ರವರ್ತಿಗಳ ಪ್ರತಿನಿಧಿಗಳ ನೇಮಕ ಮತ್ತು ಅವರ ಆಡಳಿತಗಳು ಈ ಪ್ರದೇಶದಲ್ಲಿ ವಿಜಯನಗರದ ರಾಜಕೀಯ ಮೌಲ್ಯದ ಬೆಳವಣಿಗೆಗೆ ಕಾರಣವಾದವು. ಹೀಗೆ ಕೇಂದ್ರೀಕರಣ ಮತ್ತು ವಿಕೇಂದ್ರೀಕರಣ ಸಮತೋಲನ ರಾಜಕೀಯ ವ್ಯವಸ್ಥೆ ಆ ಭಾಗದಲ್ಲಿ ಬಳಕೆಗೆ ಬಂದಿತು. ಈ ಹಿನ್ನೆಲೆಯ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಅನೇಕ ರಾಜ ಮನೆತನಗಳು ಈ ಭಾಗದಲ್ಲಿ ಉದಯವಾದವು. ಅವುಗಳಲ್ಲಿ ಬಹಳ ಪ್ರಮುಖವಾದುದು ಕೆಳದಿನಾಯಕರ ಮನೆತನ. ಇದಲ್ಲದೆ, ಕಳಸ – ಕಾರ್ಕಳ ಪ್ರಭುಗಳು (ಕ್ರಿ.ಶ. ೧೧೫೪-೧೨೯೭ ಮೊದಲ ಹಂತ ಹಾಗೂ ಕ್ರಿ.ಶ. ೧೪೧೯-೧೬೦೯ ಎರಡನೇ ಹಂತ), ಬಲಂನಾಯಕರು (ಬೇಲೂರು), ದಾನಿವಾಸ ಒಡೆಯರು, ಬಂಗವಾಡಿಯ ಬಂಗರು, ಪುತ್ತಿಗೆ ಬಲ್ಲಾಳರು, ಮೂಡಬಿದಿರೆಯ ಚೌಟರು, ವೇಣೂರಿನ ಅಜಿಲರು, ಮೂಲಿಕೆಯ ಸಾಮಂತರು, ಸುರಾಲಿನ ತೋಳಹರ, ಸಂಗೀತಪುರ ಮತ್ತು ಗೇರು ಸೊಪ್ಪೆಯ ಸಾಳ್ವರನ್ನೂ ಹೆಸರಿಸಬಹುದು. ಈ ಅರಸು ಮನತನಗಳಲ್ಲಿ ಕೆಲವರು ಪ್ರಬಲವಾಗಿ ರಾಜ್ಯವಾಳಿ ಕ್ರಿ.ಶ. ೧೫೬೫ರ ನಂತರ ಸ್ವತಂತ್ರರಾದರು. ಇನ್ನೂ ಕೆಲವರು ಈ ಸ್ವತಂತ್ರ ರಾಜಮನೆತನಗಳ ಅಧೀನಕ್ಕೆ ಒಳಪಟ್ಟರು. ಈ ಹಿನ್ನೆಲೆಯಲ್ಲಿ ಈ ರಾಜ ಮನೆತನಗಳ ರಾಜಕೀಯ ಇತಿಹಾಸವನ್ನು ಪರಾಮರ್ಶಿಸಿದಾಗ ದಾನಿವಾಸ ಒಡೆಯರನ್ನು ಆರಂಭದಿಂದ ಅಂತ್ಯದವರೆಗೆ ಸ್ವತಂತ್ರವಾಗಿ ಆಡಳಿತ ಮಾಡದ ಗುಂಪಿಗೆ ಸೇರಿಸಬಹುದು.

ದಾನಿವಾಸವು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿದೆ. ಚಿಕ್ಕಮಗಳೂರಿನ ವಾಯುವ್ಯಕ್ಕೆ ೮೮ ಕಿ.ಮೀ. ತರೀಕೆರೆಯ ಪಶ್ಚಿಮಕ್ಕೆ ೫೪ ಕಿ.ಮೀ., ಭದ್ರಾವತಿಯ ದಕ್ಷಿಣಕ್ಕೆ ೪೨ ಕಿ.ಮೀ. ದೂರದಲ್ಲಿದೆ. ನರಸಿಂಹರಾಜಪುರದ ಸನಿಹವೆ ಇರುವ ೪೦೦ ವರ್ಷಗಳ ಹಿಂದಿನ ದಾನಿವಾಸವನ್ನು ಹಳೆದಾನಿವಾಸ ಎಂದು ಕರೆಯುವರು. ಆದರೆ ಈಗ ಅದು ನೀರಿನಲ್ಲಿ ಮುಳುಗಿಹೋಗಿದೆ. ಹಲವು ಶತಮಾನಗಳ ಹಿಂದೆ ದಾನಿವಾಸವು ಒಂದು ಚಿಕ್ಕ ಮನೆತನದ ಆಡಳಿತ ಕೇಂದ್ರವಾಗಿದ್ದು ಹೊಯ್ಸಳ ವಿಜಯನಗರ – ಕೆಳದಿ ನಾಯಕರಿಗೆ ಅಧೀನವಾಗಿ ಆಡಳಿತ ನಡೆಸಿದ್ದ ಘಟಕವಾಗಿ ಕಂಡುಬರುತ್ತದೆ. ಇಂತಹ ಚಿಕ್ಕ ಮನೆತನದ ಇತಿಹಾಸವನ್ನು ರಚಿಸಲಿಕ್ಕೆ ಆಧಾರಗಳ ಕೊರತೆ ಕಂಡು ಬರುತ್ತದೆ. ಇವರ ಸಮಕಾಲೀನರಾಗಿ ಆಡಳಿತ ನಡೆಸುತ್ತಿದ್ದ ಕೆಳದಿ ನಾಯಕರ ಇತಿಹಾಸದಲ್ಲಾಗಲೀ ಅಥವಾ ಇನ್ನಿತರೆ ಸಮಕಾಲೀನ ಮನೆತನಗಳ ಚರಿತ್ರೆಯಲ್ಲಾಗಲೀ ಇವರ ಉಲ್ಲೇಖ ಕಂಡುಬಂದಿಲ್ಲ. ಆದಾಗ್ಯೂ ಈ ಮನೆತನಕ್ಕೆ ಸಂಬಂಧಿಸಿದ ಮೂರು ಶಿಲಾ ಶಾಸನಗಳು ಹಾಗೂ ಆರು ತಾಮ್ರ ಶಾಸನಗಳು ಕ್ರಮವಾಗಿ ರೈಸರ ಎಪಿಗ್ರಾಫಿಯಾ ಕರ್ನಾಟಿಕಾದ ಆರನೇ ಸಂಪುಟದಲ್ಲೂ ಮತ್ತು ಎಂ.ಎ.ಆರ್. ೧೯೩೧ರ ಸಂಪುಟದಲ್ಲೂ ಪ್ರಕಟವಾಗಿವೆ. ಈ ಶಾಸನಗಳನ್ನು ಹೊರತು ಪಡಿಸಿದರೆ ಕೆಳದಿ ಅರಸರ ಕೆಲಶಾಸನಗಳಲ್ಲಿ ದಾನಿವಾಸ ಹೆಸರಿನ ಉಲ್ಲೇಖ ಅಲ್ಲಲ್ಲಿ ಕಂಡುಬರುತ್ತದೆ. ಮತ್ತು ಹೊಳೆಹೊನ್ನೂರು ಕೈಫಿಯತ್ತು, ಶೃಂಗೇರಿ ಕೈಫಿಯತ್ತಿನಲ್ಲಿ ದಾನಿವಾಸದ ಹೆಸರು ಉಲ್ಲೇಖವಾಗಿದೆ. ಸಮಕಾಲೀನ ಸಾಹಿತ್ಯದಲ್ಲಿ ಎಲ್ಲಿಯೂ ಕೂಡಾ ಇವರ ಇತಿಹಾಸ ದಾಖಲಾಗಿಲ್ಲ. ಆದುದರಿಂದ ಇವರ ಒಂಭತ್ತು ಶಾಸನಗಳ ಆಧಾರದಿಂದ ಈ ಮನೆತನದ ಹುಟ್ಟು, ಪ್ರಗತಿ ಮತ್ತು ಅಂತ್ಯವನ್ನು ಗುರ್ತಿಸಲು ಪ್ರಯತ್ನಿಸಲಾಗಿದೆ. ಈ ಒಂಭತ್ತು ಶಾಸನಗಳಲ್ಲಿ ಮೂರು ತಾಮ್ರಶಾಸನಗಳು ನಂಬಿಕೆಗೆ ಅರ್ಹವಾಗಿಲ್ಲದಿರುವುದು ತಿಳಿಯುತ್ತದೆ.

ಎಪಿಗ್ರಾಫಿಯಾ ಕರ್ನಾಟಿಕ ಆರನೇ ಸಂಪುಟದ ಕೊಪ್ಪ ತಾಲೂಕಿನ ೨೧ನೇ ಶಾಸನವು ಶಾಲಿವಾಹನ ಶಕ ೧೩೫೫ ಶುಕ್ಲ, ಸಂವತ್ಸರ ಚೈತ್ರಶುದ್ಧ ೨ ಗುರುವಾರ ಎಂದು ಆರಂಭವಾಗುತ್ತದೆ. ಆದರೆ ಶಾಲಿವಾಹನ ಶಕ ೧೩೫೫ರಲ್ಲಿ ಪ್ರಮೋದಿನ್ ಸಂವತ್ಸರವು ಇದ್ದು, ಉಲ್ಲೇಖವಾಗಿರುವ ಶುಕ್ಲ ಸಂವತ್ಸರವು ಶಾಲಿವಾಹನ ಶಕ ೧೩೭೧ಕ್ಕೆ ಸರಿಹೊಂದುತ್ತದೆ.

ಕೊಪ್ಪ ೨೨ನೇ ಸಂಖ್ಯೆಯ ಶಾಸನವು ಶಾ.ಶಕ. ೧೪೦೭ ಪ್ರಜೋತ್ಪತ್ತಿ ಸಂವತ್ಸರ ಚೈತ್ರ ಬಹುಳ ೭ ಆದಿವಾರದಲ್ಲಿ ಹುಟ್ಟಿದೆ. ಶಾ.ಶಕ ೧೪೦೭ ರಲ್ಲಿ ವಿಶ್ವಾವಸು ಸಂವತ್ಸರವಿದ್ದು ಶಾ.ಶಕ ೧೪೩೩ ಕ್ಕೆ ಪ್ರಜೋತ್ಪತ್ತಿ ಸಂವತ್ಸರ ಬರುತ್ತದೆ. ಅದೇ ರೀತಿ ಕೊಪ್ಪ ೨೩ನೇ ಶಾಸನದಲ್ಲಿ ಶಾ.ಶಕ. ೧೪೦೫ ಶುಕ್ಲ ಸಂವತ್ಸರವಿದ್ದು ಆ ವರ್ಷ ಶೋಭನ ಸಂವತ್ಸರ ಬರುತ್ತದೆ. ಶುಕ್ಲ ಸಂವತ್ಸರವು ೧೪೩೧ ಕ್ಕೆ ಸರಿಹೊಂದುತ್ತದೆ. ಆದುದರಿಂದ ಕೊಪ್ಪ ತಾಲ್ಲೂಕಿನ ೨೧, ೨೨ ಹಾಗೂ ೨೩ನೇ ಸಂಖ್ಯೆಯ ಶಾಸನಗಳು ಕಾಲ, ಸಂವತ್ಸರ, ವಾರ, ತಿಥಿಗಳಲ್ಲಿ ಬಹಳ ವ್ಯತ್ಯಾಸ ಕಂಡುಬರುವುದರಿಂದ ಇವುಗಳ ನಂಬಿಕೆಗೆ ಅರ್ಹವಲ್ಲ ಎಂದು ತೀರ್ಮಾನಿಸಬಹುದು.

ಈ ಮನೆತನದ ಉಗಮವು ಅಸ್ಪಷ್ಟವಾಗಿದೆ. ಆದಾಗ್ಯೂ, ಕೊಪ್ಪ ತಾಲೂಕು ಲಿಂಗಾಪುರ ಗ್ರಾಮದ ಶಿಲಾಶಾಸನವು ಸ್ವಲ್ಪ ಬೆಳಕನ್ನು ಚೆಲ್ಲುತ್ತದೆ. ಇದರಲ್ಲಿ

ಹಳೇಬೀಡ ಶ್ರೀ ವೀರ ಹೊಯಿಸಳ ಬಲ್ಲಾಳ ಮಹಾರಾಯರು ನಮಗೆ
ವಂಶಾನ್ವಯವಾಗಿ ನಾಯಕತನಕೆ ಪಾಲಿಸಿದ ದಾನಿವಾಸ ಸೀಮೆ.[1]

ಹೊಯ್ಸಳರ ಆಡಳಿತವನ್ನು ನೋಡಿದಾಗ ಅವರ ರಾಜ್ಯಾಡಳಿತವು ಒಂದು ಏಕೀಕೃತ ರಾಜ್ಯಕ್ಕಿಂತ, ಊಳಿಗಮಾನ್ಯ ಒಕ್ಕೂಟ ರಚನೆಯನ್ನು ಹೊಂದಿದ್ದು ಮಾಂಡಳಿಕ ವ್ಯವಸ್ಥೆಗೆ ಹೆಚ್ಚಿನ ಒತ್ತುಕೊಟ್ಟಿತು.[2]ಈ ಹಿನ್ನೆಲೆಯನ್ನಿಟ್ಟುಕೊಂಡು ನೋಡಿದಾಗ ದಂಡನಾಯಕರು ಮತ್ತು ಮನ್ನೆಯರು ಭೂಮಿಕಾಣಿಕೆಯನ್ನು ಅನುವಂಶಿಕವಾಗಿ ಪಡೆಯುತ್ತಿದ್ದರು.[3]ಆದುದರಿಂದ ಮೇಲಿನ ಶಾಸನದಲ್ಲಿ ತಿಳಿಸಿದಂತೆ ದಾನಿವಾಸ ಒಡೆಯರಿಗೆ ಹೊಯಿಸಳ ವೀರಬಲ್ಲಾಳನಿಂದ ದಾನಿವಾಸ ಸೀಮೆಯು ಪ್ರಾಪ್ತವಾಯಿತೆಂದು ಸ್ಪಷ್ಟವಾಗುತ್ತದೆ. ಅನುವಂಶಿಕವಾಗಿ ಈ ಸೀಮೆಯನ್ನು ಪಡೆಯಬೇಕಾದರೆ ಒಡೆಯರ ಪೂರ್ವಜರು ಹೊಯ್ಸಳರ ರಾಜ್ಯಾಡಳಿತದಲ್ಲಿ ಅಧಿಕಾರಿಗಳಾಗಿಯೊ ಅಥವಾ ದಂಡನಾಯಕರಾಗಿಯೊ ಸೇವೆಯನ್ನು ಸಲ್ಲಿಸಿರಬೇಕು. ಹೀಗೆ ಹೊಯ್ಸಳ ದೊರೆ ವೀರಬಲ್ಲಾಳನಿಂದ ದಾನಿವಾಸ ಸೀಮೆಯನ್ನು ಪಡೆದುಕೊಂಡ ಇವರು ಆ ಸಾಮ್ರಾಜ್ಯ ಪತನಹೊಂದಿದ ನಂತರ ಸ್ವತಂತ್ರರಾಗಿ ಆ ಸೀಮೆಯಲ್ಲಿ ಕೆಲಕಾಲ ಆಳ್ವಿಕೆ ನಡೆಸಿರಬಹುದು. ಇದನ್ನು ಹೊರತುಪಡಿಸಿದರೆ ಕ್ರಿ.ಶ. ೧೫೫೩ರ ವರೆಗೆ ಆಧಾರಗಳ ಕೊರತೆಯಿಂದ ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ.

ವಿಜಯನಗರದವರು ಮಲೆನಾಡು ಭಾಗದಲ್ಲಿ ಪ್ರಭಾವಶಾಲಿಗಳಾದಾಗ ದಾನಿವಾಸ ಸೀಮೆಯಲ್ಲಿ ಆಳ್ವಿಕೆ ಮಾಡುತ್ತಿದ್ದ ಒಡೆಯರು ಅವರಿಗೆ ನಿಷ್ಠರಾಗಿ ನಡೆದುಕೊಳ್ಳಲಾರಂಭಿಸಿದರು ಎಂಬುದನ್ನು ಶಾಸನವೊಂದು ದಾಖಲಿಸುತ್ತದೆ.[4]

“ಶಾಲಿವಾಹನ ಶಕೆ ೧೪೭೪ನೇ ಸಂದ ವರ್ತಮಾನ ಪರಿಧಾವಿ ಸಂವತ್ಸರ ಪಾಲ್ಗುನ ಶುದ್ಧ ೧೦ ಗುರುವಾರದಲು ಶ್ರೀ ಮನ್ಮಹಾರಾಜಾಧಿರಾಜ ರಾಜ ಪರಮೇಶ್ವರ ಶ್ರೀ ವೀರ ಪ್ರತಾಪ ಶ್ರೀ ಸದಾಶಿವ ಮಹಾರಾಯರು ಹಂಪೆ ನೆಲೆವೀಡಿನ ಸುಕ್ಷೇತ್ರದ ವಿದ್ಯಾನಗರೀ ಸಿಂಹಾಸನದಲಿ ಸಾಮ್ರಾಜ್ಯವಾಳುವ ಕಾಲದಲಿ ಶ್ರೀಮತ್ ದಾನಿವಾಸದ ವಿರೂಪಾಕ್ಷರಸರ ಮಗ ಚಿಂನರಾಯ ವಡೆಯರ ಮಗ ಲಿಂಗಣ ನಾಯಕರು ಮಾಡಿದ ದೇವತಾ ಪ್ರತಿಷ್ಠೆ ಬ್ರಾಹ್ಮರ ಸತ್ರ ಧರ್ಮ ಪ್ರತಿಪಾಲನ ಶಾಸನ.”

ಇದನ್ನಾಧರಿಸಿ ಹೇಳುವುದಾದರೆ ಹೊಯ್ಸಳರು ನೀಡಿದ ಗ್ರಾಮ ಕಾಣಿಕೆಯನ್ನು ವಿಜಯನಗರದ ಚಕ್ರವರ್ತಿಗಳು ಮುಂದುವರಿಸಿದರು ಮತ್ತು ದಾನಿವಾಸ ಒಡೆಯರು ವಿಜಯನಗರದ ಚಕ್ರವರ್ತಿಗಳಿಗೆ ದೈಹಿಕವಾಗಿ ಸೈನಿಕ ಸೇವೆ ಮತ್ತು ಪೊಗದಿ ಕೊಡುತ್ತಾ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸುತ್ತಿದ್ದರು.

ಹೀಗೆ ಪ್ರಗತಿಯತ್ತ ಸಾಗುತ್ತಿದ್ದ ದಾನಿವಾಸ ಒಡೆಯರಿಗೆ ಹಣಕಾಸಿನ ಬಿಕ್ಕಟ್ಟು ತಲೆದೋರಿತು. ಅದನ್ನು ನಿವಾರಿಸಿಕೊಳ್ಳಲು ಅವರು ಬಾಳೇಹಳ್ಳಿ ಮಠದಿಂದ ೧೨೦೦೦ ವರಹಗಳನ್ನು ಸಾಲವಾಗಿ ಪಡೆದರು. ಈ ಸಾಲದ ಪತ್ರವು ಕೊಪ್ಪದ ಬಸವಯ್ಯನಲ್ಲಿರುವುದು ಕಂಡು ಅದನ್ನು ದಾನಿವಾಸ ಒಡೆಯನಾದ ಚಂನವೀರಣ್ಣ ನಾಯಕನು ಅವನಿಂದ ಪಡೆದುಕೊಂಡು ತಮ್ಮ ಪೂರ್ವಜರು ಮಾಡಿದ ಸಾಲಕ್ಕೆ ಪ್ರತಿಯಾಗಿ ಆ ಮನೆತನಕ್ಕೆ ಸೇರಿದ ಲಿಂಗಣ್ಣನಾಯಕ, ಮಲ್ಲಣ್ಣನಾಯಕ, ಚಿಕ್ಕಮಲ್ಲಣ್ಣನಾಯಕ ಹಾಗೂ ಪ್ರಜೆಗಳೊಡಗೂಡಿ ಬಾಳೆಹಳ್ಳಿ ಮಠಕ್ಕೆ ತಮ್ಮ ಸೀಮೆಯೊಳಗಣ ಮೂರು ಗ್ರಾಮಗಳನ್ನು ಬಿಟ್ಟುಕೊಟ್ಟರು.[5]ಈ ಶಾಸನದಲ್ಲಿ ಉಲ್ಲೇಖವಾಗಿರುವ ಚಂನವೀರಣ್ಣ ನಾಯಕ, ಲಿಂಗಣ್ಣನಾಯಕ, ಮಲ್ಲಣ್ಣನಾಯಕ ಮತ್ತು ಚಿಕ್ಕಮಲ್ಲಣ್ಣನಾಯಕ ಈ ಮನೆತನಕ್ಕೆ ಸೇರಿದ ಸಹೋದರರಾಗಿದ್ದು ಇವರು ತಮ್ಮ ಪೂರ್ವಜರಾದ ವಿರೂಪಾಕ್ಷ ಒಡೆಯರ್, ಚಂನರಾಯ ಒಡೆಯರ್, ಅರಸಪ್ಪ ಒಡೆಯರ್‌ಮಾಡಿದ ಸಾಲಕ್ಕೆ ತಾವು ಹೊಣೆಯಾಗಿ ಅದನ್ನು ತೀರಿಸುವುದರ ಮುಖಾಂತರ ಋಣಮುಕ್ತರಾದರು. ಇದರಿಂದ ಮಠಗಳು ಕೂಡಾ ಆ ಕಾಲದಲ್ಲಿ ಸಾಲ ಕೊಡುವ ಕೇಂದ್ರಗಳಾಗಿದ್ದವು ಮತ್ತು ಅವುಗಳು ಇಂದಿನ ಕಾಲದ ಬ್ಯಾಂಕುಗಳಂತೆ ಕಾರ್ಯವನ್ನು ನಿರ್ವಹಿಸುತ್ತಿದ್ದವೆಂದು ಹೇಳಬಹುದು ಹಾಗೂ ಬಾಳೆಹಳ್ಳಿ ಮಠವು ಅತ್ಯಂತ ಶ್ರೀಮಂತ ಮಠವಾಗಿತ್ತೆಂದು ಇದರಿಂದ ಗೊತ್ತಾಗುತ್ತದೆ.

ದಾನಿವಾಸ ಒಡೆಯರ ವಂಶಾವಳಿ (ಶಾಸನಗಳ ಆಧಾರದಿಂದ)

ವಿರೂಪಾಕ್ಷರಸರು
|
ಚಂನರಾಯ ಒಡೆಯರ್‌
|
ಲಿಂಗಣ ನಾಯಕ (ಕ್ರಿ.ಶ. ೧೫೫೩)
|
ಅರಸಪ್ಪ ಒಡೆಯರ್ (ಕ್ರಿ.ಶ. ೧೫೭೦)
|
ಚಂನವೀರಣ ನಾಯಕ (೧೫೭೦)        ಲಿಂಗನಾಯಕ ಮಲ್ಲಣ್ಣ ನಾಯಕ
ಚಿಕ್ಕಮಲಂಣ ನಾಯಕ
|
ಚಿಕ್ಕವೀರಪ್ಪ ಒಡೆಯರ್
|
ಚಂನವೀರಪ್ಪ ಒಡೆಯರ್ (ಕ್ರಿ.ಶ. ೧೫೮೮)

ದಾನಿವಾಸ ಒಡೆಯರು ರಾಜಕೀಯವಾಗಿ ಅತ್ಯಂತ ಪ್ರಬಲ ಶಕ್ತಿಯಾಗಿ ಮೆರೆಯದಿದ್ದರೂ ಸಾಂಸ್ಕೃತಿಕವಾಗಿ ಪ್ರಗತಿ ಸಾಧಿಸಿದ್ದರೆಂದು ಹೇಳಬಹುದು. ಇವರು ಮೂಲತಃ ಶೈವ, ವೀರಶೈವರಾಗಿದ್ದು ಆ ಧರ್ಮದ ಪ್ರಗತಿಗೆ ಸೇವೆ ಸಲ್ಲಿಸಿರುವುದು ಕಂಡು ಬರುತ್ತದೆ. ಉದಾಹರಣೆಗೆ: ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕು ಎಡೆಯೂರು ಮಠದ ಆವರಣದಲ್ಲಿ ಸಿದ್ಧಲಿಂಗ ಶಿವಯೋಗಿಗಳ ಕೀರ್ತಿಯನ್ನು ಉದ್ಘೋಷಿಸುವ ಶಾಸನದಲ್ಲಿ[6]ದಾನಿವಾಸ ಒಡೆಯರು ಸಿದ್ಧಲಿಂಗೇಶ್ವರರನ್ನು

ಜ್ಞಾನಕ್ರಿಯಾಸ್ವರೂಪನೂ ಸರ್ವಾಂಗಲಿಂಗಿ ಷಟ್ಸ್ಥಲಗ್ನಾನಿ ಸರ್ವಾಚಾರ ಸಂಪನ್ನ
ಪಾದೋದಕ ಪ್ರಸಾದ ಪ್ರತಿಷ್ಠಾಚಾರ್ಯರೂ ಅಷ್ಠಾವರಣಾಲಂಕರಣ ದ್ವೈತಾದ್ವೈತಿ
ತಿಮಿರಮಾರ್ತ್ತಂಡನುಂ ಯಿಂತಪ್ಪ ದಿವ್ಯಶಿವಯೋಗಿ ಸಿದ್ಧಲಿಂಗೇಶ್ವರ

ಎಂದು ಕೊಂಡಾಡಿದ್ದಾರೆ. ಆ ವರ್ಣನೆ ಸಿದ್ದಲಿಂಗ ಯತಿಗಳ ವ್ಯೋಮಸದೃಶ ವ್ಯಕ್ತಿತ್ವವನ್ನು ಅಭಿವ್ಯಕ್ತಗೊಳಿಸುತ್ತದೆ.

ತೋಂಟದ ಸ್ವಾಮಿಯ ಪಾದ ಪದ್ಮಾರಾಧಕರಾದ ದಾನಿವಾಸ ನಿವಾಸಿಗಳಾದ
ಚಂನರಾಯ ಒಡೆಯರು. ಚಂನರಾಯ ವಡೆಯರ ಮಕ್ಕಳು ಲಿಂಗಪ್ಪ ವಡೆಯರು
ಲಿಂಗಪ್ಪ ವಡೆಯರ ಮಕ್ಕಳು ಪಾದೋದಕ ಪ್ರಸಾದ ಸಂಪನ್ನರಾದ ಚಂನವೀರಪ್ಪ
ವಡೆಯರು ಅವರ ಸತಿ ಪಾರ್ವತಮ್ಮ ದಂಪತಿಗಳು ತೋಂಟದ ಸ್ವಾಮಿಗೆ
ಕಲ್ಲುಮಟವನ್ನು ಕಟ್ಟಿಸಬೇಕೆಂದು… ಯೆಡೆಯೂರಿಗೆ ಬಿಜಂಗೆಯಿದು

ಎಂಬ ವಿವರದಿಂದ[7]ದಾನಿವಾಸದ ಅರಸ ಚಂನವೀರಪ್ಪ ಒಡೆಯ ತೋಂಟದ ಸಿದ್ಧ ಲಿಂಗೇಶ್ವರರ ಪರಮಭಕ್ತನಾಗಿದ್ದು ಆ ಸ್ವಾಮಿಗೆ ಕಲ್ಲಿನಿಂದಲೇ ಮಠವನ್ನು ಕಟ್ಟಿಸಿ ಕೊಡುವುದರ ಮುಖಾಂತರ ತನ್ನ ಜೀವನವನ್ನು ಸಾರ್ಥಕಗೊಳಿಸಿ ಕೊಂಡಿರುವುದು ಸ್ಪಷ್ಟವಾಗುತ್ತದೆ. ಅಲ್ಲದೆ ಸ್ವಾಮಿಯ ಪೂಜೆಗೆ ಸೀಮೆಯ ಮೇಲೆ ಸಂಗ್ರಹಿಸಿದ ನಂದಾದೀಪದ ಕಾಣಿಕೆಯನ್ನು ಅರ್ಪಿಸಿರುವುದು. ಮಠಕ್ಕೆ ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆಗಾಗಿ ಅಡಿಗೆ ಮನೆ, ಉಗ್ರಾಣ ಮುಂತಾದುವನ್ನು ನಿರ್ಮಿಸಿ ಅನುಕೂಲ ಕಲ್ಪಿಸಿರುವುದು ತಿಳಿದು ಬರುತ್ತದೆ.[8]ಈ ರೀತಿ ಅರಸರು ಸಮಾಜದಲ್ಲಿ ಉತ್ತಮಸ್ಥಾನವನ್ನು ಗಳಿಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ತಮ್ಮಲ್ಲಿ ಹುದುಗಿದ್ದ ಪಾಪ ಪ್ರಜ್ಞೆಯನ್ನು ನಿವಾರಿಸಿಕೊಳ್ಳುವುದಕ್ಕ ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವುದು ಆ ಕಾಲದ್ಲಿ ಸರ್ವೇಸಾಮಾನ್ಯವಾದ ಸಂಗತಿಗಳಾಗಿದ್ದವು.[9]

ರಾಜರು ಯಾವುದೇ ಒಂದು ಧರ್ಮದ ಪಕ್ಷಪಾತಿಯಾದರೆ ಸಮಾಜದಲ್ಲಿ ಅನಿಷ್ಟ ಪರಿಣಾಮಗಳುಂಟಾಗುತ್ತವೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಆಡಳಿತ ದೃಷ್ಟಿಯಿಂದ ಅವರು ತಮ್ಮ ಒಲವು ಎತ್ತಕಡೆಗಿದೆಯೋ ಆ ಕಡೆಗಾಗಲೀ, ಯಾವ ವರ್ಗವು ಪ್ರಧಾನವಾಗಿದೆಯೋ ಆ ಕಡೆಗಾಗಲಿ ನಿಲ್ಲುತ್ತಿರಲಿಲ್ಲ. ಇದರ ಫಲವಾಗಿ ವಿಶೇಷವಾದ ಧಾರ್ಮಿಕ ಸಹಿಷ್ಣುತೆಯ ನೀತಿ ಹಲವಾರು ಶತಮಾನಗಳಿಂದ ಸಾಗಿ ಬಂದಿದೆ. ಸರ್ಕಾರದ ಸಂಪನ್ಮೂಲವನ್ನು ಆಯಾ ಧರ್ಮಗಳಿಗೆ ನಿಗದಿಪಡಿಸುವುದರ ಮೂಲಕ ಪೂಜಾಸ್ಥಳದ ನಿರ್ಮಾಣ ಮತ್ತು ಅವುಗಳ ಪಾಲನೆಗಾಗಿ ದತ್ತಿಗಳ ನೀಡುವಿಕೆ ಸರ್ವೇಸಾಮಾನ್ಯವಾದ ಸಂಗತಿಗಳು. ಈ ಹಿನ್ನೆಲೆಯನ್ನು ಪರಿಶೀಲಿಸಿದಾಗ ದಾನಿವಾಸ ಒಡೆಯರು ಇಂತಹ ಪರಂಪರೆಯನ್ನು ಮುಂದುವರಿಸಿದ್ದರು.

ತಾತ್ವಿಕ ದೃಷ್ಟಿಯಿಂದ ವೀರಶೈವಧರ್ಮ ದೇವಾಲಯ ನಿರ್ಮಾಣವನ್ನು ನಿರಾಕರಿಸಿದರೂ ಕೂಡ ವೀರಶೈವರಾಗಿದ್ದ ದಾನಿವಾಸ ಒಡೆಯರು ದೇವಾಲಯ ನಿರ್ಮಾಣವನ್ನು ತಿರಸ್ಕರಿಸಲಿಲ್ಲ. ಉದಾರ ದೃಷ್ಟಿಯಿಂದ ಅವುಗಳಿಗೂ ಪ್ರೋತ್ಸಾಹ ನೀಡಿ ಬೆಳೆಸಿದರು. ಜೀವನದಲ್ಲಿ ಒಂದಾದರೂ ಗುಡಿಯನ್ನು ಕಟ್ಟಿಸಬೇಕು ಇಲ್ಲವೆ ಕಟ್ಟಿಸಿದ ಗುಡಿಗಳಿಗೆ ದಾನವನ್ನಾದರೂ ಮಾಡಬೇಕು ಎಂಬುದು ಅವರ ಭಾವನೆಯಾಗಿತ್ತು. ಆದ್ದರಿಂದ ಅವರು ತಮ್ಮ ರಾಜಧಾನಿಯಾದ ದಾನಿವಾಸದಲ್ಲಿ ದೇವಾಲಯ ನಿರ್ಮಿಸಿರುವುದು ಶಾಸನದಲ್ಲಿ ಉಲ್ಲೇಖವಾಗಿದೆ.

ಉದಾ: ದಾನಿವಾಸದ ಲಿಂಗಣ ನಾಯಕನು ಕ್ರಿ.ಶ. ೧೫೫೩ರಲ್ಲಿ ದಾನಿವಾಸ ಪಟ್ಟಣದಲ್ಲಿ ವಿರೂಪಾಕ್ಷ ಲಿಂಗ ಪ್ರತಿಷ್ಠೆಯನ್ನು ಮಾಡಿಸಿ ಬ್ರಾಹ್ಮಣರ ಸತ್ರಕ್ಕೆ ಗುಳ್ಳದ ಮಾನಿಯ ಗ್ರಾಮದೊಳಗೆ ಹಾನಂಬಿಯಿದ ಪಡುವಣ ೨೫ ಖಂಡುಗದ ಭೂಮಿಯನ್ನು ಬಿಟ್ಟನು.[10]ಮತ್ತು ಅಲ್ಲಿಯೇ ಬಸವೇಶ್ವರ ದೇವರ ಗುಡಿಯನ್ನು ಕೂಡಾ ಕಟ್ಟಿಸಿದನು.[11]

ಇಂತಹ ದೇವಾಲಯಗಳಲ್ಲಿ ಅನೇಕ ರೀತಿಯ ಸೇವೆಗಳು ನಡೆಯುತ್ತಿದ್ದವು. ಜಾತ್ರೆಗಳು, ಉತ್ಸವಗಳು ಆಚರಿಸಲ್ಪಡುತ್ತಿದ್ದವು. ಮತ ಧರ್ಮಗಳನ್ನು ಜೀವಂತವಾಗಿ ಇಡಲು ದೇವಾಲಯ ಮತ್ತು ಅದರ ಆವರಣದ ಒಳಗೆ, ಹೊರಗೆ, ಇಂತಹ ಧಾರ್ಮಿಕ ಕ್ರಿಯೆಗಳು ಅತ್ಯಾವಶ್ಯಕವಾಗಿದ್ದವು. ಉದಾ: ಅಮೃತಪಡಿ ಸೇವೆ[12], ನಂದಾದೀಪದ ಸೇವೆ[13]ಇತ್ಯಾದಿ.

ಈ ಸೇವೆಗಳಿಗೆ ದಾನಿಗಳು ಹಣವನ್ನು ನಿಗದಿಗೊಳಿಸುತ್ತಿದ್ದರು. ಉದಾಹರಣೆಗೆ : ದಾನಿವಾಸ ಒಡೆಯರು ವಿರೂಪಾಕ್ಷದೇವರ ಅಮೃತಪಡಿ ಸೇವೆಗೆ ೧೦ ಖಂಡುಗ ಭೂಮಿಯನ್ನು, ಬಸವೇಶ್ವರ ದೇವರ ಅಮೃತಪಡಿ ಮತ್ತು ನಂದಾದೀಪದ ಸೇವೆಗೆ ೫೦ ಖಂಡುಗ ಭೂಮಿಯನ್ನು ಬಿಟ್ಟರು.[14]ಇದರ ಜೊತೆಗೆ ಸಮಾಜದಲ್ಲಿನ ಜನರಿಗೆ ಉಪಯುಕ್ತವಾದ ಕಾರ್ಯಕ್ಕೆ ಹಣವನ್ನು ತೊಡಗಿಸುವುದು ಧರ್ಮವೆಂದು ಭಾವಿಸಿದ್ದರು. ಉದಾಹರಣೆಗೆ : ಕೆರೆಗಳ ನಿರ್ಮಾಣ. ಇವರು ದಾನಿವಾಸದಲ್ಲಿ ಕೆರೆಯೊಂದನ್ನು[15]ನಿರ್ಮಿಸಿ ಪಟ್ಟಣದ ನೀರಿನ ತೊಂದರೆಯನ್ನು ನಿವಾರಿಸಿದ್ದರು.

ಇವರು ಪರಂಪರಾನುಗತವಾಗಿ ಸಮಾಜದಲ್ಲಿದ್ದ ನಂಬುಗೆಗಳನ್ನು ಉಳಿಸಿಕೊಂಡರು. ಸಮಾಜದಲ್ಲಿ ಪಾಪ-ಪುಣ್ಯ, ಸ್ವರ್ಗ ನರಕದ ಕಲ್ಪನೆ ಬಹು ಪ್ರಾಚೀನ ಕಾಲದಿಂದಲೂ ಬೆಳೆದುಬಂದಿದೆ. ಇವರ ಅನೇಕ ಶಾಸನಗಳ ಕೊನೆಯಲ್ಲಿ ಭೂದಾನವನ್ನು ಕೊಟ್ಟವನು ಸ್ವರ್ಗಕ್ಕೆ ಹೋದರೆ, ಅದನ್ನು ರಕ್ಷಿಸಿದವನು ದೇವರ ಬಳಿಯೇ ಹೋಗುತ್ತಾನೆ. ಹಾಗೆಯೇ ದಾನವನ್ನು ಅಪಹರಿಸುವುದು ಮಹಾಪಾಪ. ಅವನಿಗೆ ಸ್ತ್ರೀ ಹತ್ಯೆ ಮತ್ತು ಗೋವುಗಳನ್ನು ಕೊಂದಷ್ಟು ಪಾಪ ಬರುತ್ತದೆ.[16]ಆದುದರಿಂದ ದಾನಿವಾಸ ಒಡೆಯರು ದಾನವನ್ನು ಒಂದು ಪ್ರಮುಖ ಮೌಲ್ಯವನ್ನಾಗಿ ತಮ್ಮ ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು.

ದಾನಿವಾಸ ಒಡೆಯರ ಸೀಮೆಯ ವ್ಯಾಪ್ತಿಯಲ್ಲಿ ನಷ್ಟಸಂತಾನ ಜಮೀನುಗಳೇನಾದರೂ ಇದ್ದರೆ ಅಂಥವುಗಳನ್ನು ಅರಮನೆಯವರು ತೆಗೆದುಕೊಳ್ಳುವ ಪರಿಪಾಠವಿತ್ತು. ಉದಾಹರಣೆಗೆ :

ಬಾಳೆ ಪಾಲ ಬಂದಪ್ಪನ ಮಗ ಲಿಂಗಣನು ನಷ್ಟ ಸಂತಾನ ವಾಹೋದ ಸಂಮಂಧ ಆತನ ಭೂಮಿ ನಾಗಲಾಪುರದ ಗ್ರಾಮದೊಳಗೆ ತೆಂಗಿನ ಹಿತ್ತಲಗದ್ದೆ ಖಂಡುಗ ವಂಭತ್ತು ಭೀಜವರಿ | ಅ ಭೂಮಿ ನಂಮ ಅರಮನೆಗೆ ಹರವರಿಯಾಗಿ ಬಂದ ಸಂಬಂಧ.[17]ಬಾಳೆ ಪಾಲ ತಂಮಯನ ಮಗ ನರಸಪ್ಪನು ನಷ್ಟಸಂತಾನವಾಗಲು ಹೋದ ಸಂಮಂಧ ಎಂಟು ಖಂಡುಗ ಬಿಜವರಿ ಭೂಮಿ ನಂಮ ಅರಮನೆಗೆ ಹರವರಿಯಾಗಿ ಬಂಧ ಸಂಮಂಧ.[18]

ಈ ರೀತಿ ಪಡೆದುಕೊಂಡ ಭೂಮಿಯಿಂದಲೂ ದಾನಿವಾಸದ ಒಡೆಯರು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಖಜಾನೆಯನ್ನು ಭರ್ತಿ ಮಾಡಿಕೊಳ್ಳುತ್ತಿದ್ದರು. ಪ್ರಾಯಶಃ ಪರಿಸ್ಥಿತಿಯ ಒತ್ತಡದಿಂದ ತಾವು ಸಂಕಷ್ಟಕ್ಕೆ ಸಿಲುಕಿಕೊಂಡಾಗ ಅದನ್ನು ಪರಿಹರಿಸಿಕೊಳ್ಳಲು ತಮ್ಮಲ್ಲಿದ್ದುದನ್ನು ಶ್ರೀಮಂತರಿಗೋ ಅಥವಾ ಮಠಗಳಿಗೋ ಮಾರುತ್ತಿದ್ದರು. ಇಂತಹ ಪರಿಪಾಠ ಚಿಕ್ಕಪುಟ್ಟ ಮನೆತನಗಳಲ್ಲಿ ಸರ್ವೇಸಾಮಾನ್ಯವಾದ ಸಂಗತಿಯಾಗಿದೆ. ಉದಾಹರಣೆಗೆ : ತುಮಕೂರು ಜಿಲ್ಲೆಯಲ್ಲಿ ೨೫೦ ವರ್ಷಗಳ ಸುದೀರ್ಘ ಆಳ್ವಿಕೆ ನಡೆಸಿದ ಹಾಗಲವಾಡಿ ನಾಯಕರು ತಮ್ಮ ಕೊನೆಯ ದಿನಗಳಲ್ಲಿ ಹೈದರಾಲಿಯ ಒತ್ತಡಕ್ಕೆ ಸಿಲುಕಿ ಹಣವನ್ನು ನೀಡಬೇಕಾಗಿ ಬಂದಾಗ ಈ ಪರಿಸ್ಥಿತಿ ತಲೆದೋರಿತ್ತು. ಇದೇ ರೀತಿ ದಾನಿವಾಸ ಒಡೆಯರು ಕೂಡಾ ನಷ್ಟ ಸಂತಾನದಿಂದ ವಶಪಡಿಸಿಕೊಂಡಿದ್ದ ಭೂಮಿಯನ್ನು ಶ್ರೀಮಂತರಾಗಿದ್ದ ಗೇರುಸೊಪ್ಪೆಯ ಜೈನಮಠದ ಸಮಂತ ಭದ್ರದೇವರ ಶಿಷ್ಯ ಗುಣಭದ್ರದೇವರು ಇವರ ಶಿಷ್ಯ ವೀರಸೇನದೇವರಿಗೆ ಕ್ರಯಕ್ಕೆ ನೀಡಿದ ಸಂಗತಿ ನಾಲ್ಕು ಶಾಸನಗಳಲ್ಲಿ ದಾಖಲಾಗಿದೆ. ಹೀಗೆ ದಾನಿವಾಸದ ಚಂನವೀರಪ್ಪ ಒಡೆಯರು ಬೇರೆ ಬೇರೆ ಕಾಲಗಳಲ್ಲಿ ಒಟ್ಟು ೩೭ ಖಂಡುಗದ ಭೂಮಿಯನ್ನು ೧೪೨ ವರಹಗಳಿಗೆ ಗೇರುಸೊಪ್ಪೆಯ ವೀರಸೇನ ದೇವರಿಗೆ ಮಾರಾಟ ಮಾಡಿ ತಮ್ಮ ಹಣಕಾಸಿನ ಬಿಕ್ಕಟ್ಟನ್ನು ಬಗೆಹರಿಸಿಕೊಂಡರು.[19]ಇದು ಈ ಮನೆತನ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಅವನತಿಯತ್ತ ಸಾಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ.

ಇವರ ಪ್ರಮುಖ ಆದಾಯ ಕೃಷಿಯಿಂದ ಬರುತ್ತಿತ್ತು. ತಮ್ಮ ಸೀಮೆಯ ವ್ಯಾಪ್ತಿಯ ಸಮಸ್ತ ಭೂ ಒಡೆತನ ಇವರಿಗೆ ಸೇರಿತ್ತು. ಆದರೆ ವಾಸ್ತವವಾಗಿ ಅವರು ಖಾಸಗಿ ಒಡೆತನವನ್ನು ರಕ್ಷಿಸುತ್ತಿದ್ದರು. ಮತ್ತು ಅದಕ್ಕೆ ಮನ್ನಣೆಕೊಟ್ಟಿದ್ದರು ಎಂಬುದಕ್ಕೆ ಉದಾಹರಣೆಯಾಗಿ ಗೇರುಸೊಪ್ಪೆ ಜೈನಮಠದ ವೀರಸೇನದೇವರಿಗೆ ಭೂಮಿಯನ್ನು ನೀಡಿ ನಿಧಿ, ನಿಕ್ಷೇಪ, ಜಲ, ಪಾಷಾಣ, ಅಕ್ಷೀಣಿ, ಆಗಾಮಿ, ಸಿದ್ಧ, ಸಾಧ್ಯಗಳೆಂಬ ಅಷ್ಟ ಭೋಗ ತೇಜ ಸ್ವಾಮ್ಯವನ್ನು ಅನುಭವಿಸಿಕೊಂಡು ಹೋಗಬಹುದೆಂದು ಉಲ್ಲೇಖವನ್ನು ನೋಡಬಹುದು.[20]

ದಾನಿವಾಸ ಒಡೆಯರು ಹೊಯ್ಸಳರ ಕಾಲದಲ್ಲಿ ಒಂದು ಸೀಮೆಯ ನಾಯಕತ್ವವನ್ನು ವಹಿಸಿಕೊಂಡು ವಿಜಯನಗರದ ಅರಸರ ಕಾಲದಲ್ಲಿ ಅವರಿಗೆ ನಿಷ್ಠರಾಗಿ ಸಾಕಷ್ಟು ಪ್ರಗತಿಯ ಜೊತೆಗೆ ಕಷ್ಟ ನಷ್ಟಗಳನ್ನು ಅನುಭವಿಸಿದರು. ಕ್ರಿ.ಶ. ೧೫೫೮ ನಂತರ ತಮ್ಮ ಸೀಮೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲವೆಂದು ತೋರುತ್ತದೆ. ಆ ವೇಳೆಗೆ ಅವರ ರಾಜ್ಯದ ಪಶ್ಚಿಮದಲ್ಲಿ ತರೀಕೆರೆ ನಾಯಕರು ಪ್ರಬಲರಾಗಿದ್ದರು. ಉತ್ತರದಲ್ಲಿ ಕೆಳದಿ ನಾಯಕರು ಸದೃಢವಾಗಿ ಬೆಳೆದು ತಮ್ಮ ರಾಜ್ಯವನ್ನು ಕರಾವಳಿವರೆಗೂ ವಿಸ್ತರಿಸಿದ್ದರು. ತಾಳೀಕೋಟೆಯ ಕದನದ ನಂತರ ಸ್ವತಂತ್ರರಾದ ಕೆಳದಿಯವರು ಗೇರುಸೊಪ್ಪೆಯ ಬೈರವರಾಣಿ, ಸ್ವಾದಿ ಅರಸರು, ಸಂತೆ ಬೆನ್ನೂರು ನಾಯಕರು ಮುಂತಾದವರನ್ನು ಸೋಲಿಸಿ ತಮ್ಮ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ಇಂತಹ ದೊಡ್ಡ ಅರಸು ಮನೆತನಗಳೇ ಕೆಳದಿಯವರ ಪಾಲಾದಾಗ ಚಿಕ್ಕ ಮನೆತನವಾದ ದಾನಿವಾಸದವರ ಬಗೆಗೆ ಹೇಳುವುದೇನಿದೆ. ಈ ಮನೆತನದ ಕೊನೆಯ ಒಡೆಯನಾದ ಚಂನವೀರಪ್ಪನು ಕೆಳದಿಯ ಹಿರಿಯ ವೆಂಕಟಪ್ಪ ನಾಯಕನಿಗೆ ತನ್ನ ಸೀಮೆಯನ್ನು ಒಪ್ಪಿಸಿರಬಹುದು. ಏಕೆಂದರೆ ಹಿರಿಯ ವೆಂಕಟಪ್ಪ ದಾನಿವಾಸ ಸೀಮೆಯಿಂದ ೧೦೦೦ ವರಹಗಳನ್ನು ಸಂಗ್ರಹಿಸಿದ್ದಾನೆಂದು ಅಂಶ ಹೊಳೆಹೊನ್ನೂರು ಕೈಫಿಯತ್ತಿನಿಂದ ತಿಳಿಯುತ್ತದೆ.[21]ಆದ್ದರಿಂದ ಹಿರಿಯ ವೆಂಕಟಪ್ಪ ನಾಯಕನೇ ದಾನಿವಾಸವನ್ನು ಆಕ್ರಮಿಸಿಕೊಂಡನೆಂದು ಹೇಳಲು ಸಾಧ್ಯವಾಗುತ್ತದೆ. ಕ್ರಿ.ಶ. ೧೬೦೭ರ ನಂತರ ಸುಮಾರು ೧೦೦ ವರ್ಷಗಳ ಕಾಲ ಕೆಳದಿ ಅರಸರ ಹಲವಾರು ಶಾಸನಗಳು[22]ದಾನಿವಾಸ ಕೆಳದಿರಾಜ್ಯದ ಒಂದು ಪ್ರಮುಖ ಆಡಳಿತ ಭಾಗ ಎಂದು ಹೇಳುತ್ತವೆ. ಆದ್ದರಿಂದ ಕೆಳದಿಯವರಿಗೆ ರಾಜ್ಯವನ್ನು ಒಪ್ಪಿಸಿದ ದಾನಿವಾಸದವರು ಕ್ರಮೇಣ ಯಾವುದೇ ಸ್ವತಂತ್ರ ನಿರ್ಧಾರದ ರಾಜಕೀಯ ಅಧಿಕಾರವಿಲ್ಲದೆ ಜೀವನ ಸಾಗಿಸಿರಬಹುದು ಎಂದು ಹೇಳಲು ಅವಕಾಶ ಉಂಟು.

ಒಟ್ಟಿನಲ್ಲಿ ಹೇಳುವುದಾದರೆ, ದಾನಿವಾಸ ಒಡೆಯರ ಮನೆತನ ಅತಿ ಚಿಕ್ಕದಾದರೂ ಅವರ ಉದಾರ ನೀತಿಯಂದ, ಉದಾತ್ತ ಧರ್ಮವನ್ನು ಸ್ವೀಕರಿಸಿ ಅದಕ್ಕೆ ನಿಷ್ಠರಾಗಿ ಬದುಕಿ ಕರ್ನಾಟಕದ ಸಣ್ಣ ಪ್ರಾದೇಶಿಕ ಮನೆತನವೊಂದರ ಇತಿಹಾಸದಲ್ಲಿ ತಮ್ಮದೇ ಆದ ನೆರಳನ್ನು ಬಿಟ್ಟುಹೋಗಿದ್ದಾರೆ. ಬಲಾಢ್ಯವೆನಿಸಿದ ‘ವಿಜಯನಗರದಂತಹ ಸಾಮ್ರಾಟರ ಸಾಂಸ್ಕೃತಿಕ ಪರಂಪರೆಯನ್ನು ಭದ್ರಗೊಳಿಸುತ್ತಾ ಆ ಪರಂಪರೆಯನ್ನು ಸಂಘಟಿಸುವಲ್ಲಿ ಅತಿ ಕಿರಿಯ ಮನೆತನವಾದರೂ ಶ್ರಮಿಸಿ ಆ ಭಾಗದಲ್ಲಿ ಸಮನ್ವಯ ಸಂಸ್ಕೃತಿಯನ್ನು ಸಾಧ್ಯವಾಗಿಸಿದ ಕೀರ್ತಿ ಇವರಿಗೆ ಸಲ್ಲುತದೆ. ವೀರಶೈವರಾಗಿದ್ದ ಇವರು ಎಡೆಯೂರ ಸಿದ್ಧಲಿಂಗೇಶ್ವರರ ಪರಮ ಭಕ್ತರಾಗಿದ್ದು ಎಡೆಯೂರಿನಲ್ಲಿ ಕಲ್ಲುಮಠವನ್ನು ಕಟ್ಟಿಸಿ, ತಮ್ಮ ಸೇವೆಯನ್ನು ಚಿರಸ್ಥಾಯಿಯಾಗಿಸಿದ್ದಾರೆ. ಅತಿ ಶ್ರೀಮಂತ ರಾಜಮನೆತನವಾಗದಿದ್ದರೂ ಕೂಡ ತನ್ನ ಇತಿ ಮಿತಿಯಲ್ಲಿ ಇದು ಮಲೆನಾಡ ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ಸಲ್ಲಿಸಿರುವುದು ಗಮನಾರ್ಹ.

(ಈ ಮನೆತನದ ಬಗ್ಗೆ ಮೊದಲು ಮಾಹಿತಿ ನೀಡಿದ ತುಮಕೂರಿನ ವೈದ್ಯರಾದ ಡಾ. ಬಿ. ನಂಜುಂಡಸ್ವಾಮಿಯವರಿಗೆ ವಂದನೆಗಳು.)

 

[1]ಎ.ಕ. (ಎಪಿಗ್ರಾಫಿಯಾ ಕರ್ನಾಟಕ) VI ಕೊಪ್ಪ ೧೭. ಲಿಂಗಾಪುರ.

[2]ಷೇಖ್ ಅಲಿ (ಸಂ) – ಹೊಯ್ಸಳರ ರಾಜ್ಯಾಡಳಿತ, ಕರ್ನಾಟಕ ಚರಿತ್ರೆ ಸಂ. ೨. ಪು.೧೩೯ ಕನ್ನಡ ವಿ.ವಿ. ಪ್ರಸಾರಾಂಗ. ಹಂಪೆ.

[3]ಎ.ಕ. ೫ (ಹೊಸ) ಮೈ, ೧೩೦ ತಿ.ನ.೮೮.

[4]ಎ.ಕ. VI ಕೊಪ್ಪ ೧೭.

[5]ಎ.ಕ. VI ಕೊಪ್ಪ ೫.

[6]ಎ.ಕ. ೧೨ ಹೊಸ ಆವೃತ್ತಿ, ಕುಣಿಗಲ್ ೪೯.

[7]ಅದೇ.

[8]ಅದೇ.

[9]ಕೆ.ಎನ್. ಚಿಟ್ನಿಸ್ ವೀರಶೈವ ಮಠಾಸ್ ಇನ್ ಕೆಳದಿ ಕಿಂಗ್‌ಡಂ ಪು. ೨-೪.

[10]ಎ.ಕ. VI ಕೊಪ್ಪ ೧೭.

[11]ಅದೇ.

[12]ಅದೇ.

[13]ಅದೇ.

[14]ಅದೇ.

[15]ಅದೇ.

[16]ಎಂ.ಎ.ಆರ್. ೧೯೩೧ ಪು.೧೦೫, ೧೦೯, ೧೧೧.

[17]ಎಂ.ಎ.ಆರ್. ೧೯೩೧ ಪು.೧೦೫, ೧೦೯.

[18]ಅದೇ ಪು. ೧೦೮.

[19]ಎಂ.ಎ.ಆರ್. ೧೯೩೧ ಪು.೧೦೪, ೧೦೫, ೧೦೮, ೧೧೦.

[20]ಅದೇ ಪು. ೧೦೫, ೧೦೯, ೧೧೧.

[21]ಕಲಬುರ್ಗಿ ಎಂ.ಎಂ. (ಸಂ) – ಕರ್ನಾಟಕ ಕೈಫಿಯತ್ತುಗಳು ಪು. ೨೧೯.

[22]ನೋಡಿ ವೆಂಕಟೇಶ ಜೋಯಿಸ ಕೆಳದಿ (ಸಂ) – ಕೆಳದಿ ಅರಸರ ಶಾಸನ ಸಂಪುಟ.