ಸಂತೇಬೆನ್ನೂರು ನಾಯಕರ ಕಾಲದ ಸಾಹಿತ್ಯ

ಸಂತೇಬೆನ್ನೂರು ನಾಯಕರ ಆಡಳಿತ ಬಾಷೆ ಕನ್ನಡವಾಗಿತ್ತು. ಅವರ ಎಲ್ಲಾ ಶಾಸನಗಳೂ ಕನ್ನಡದಲ್ಲಿಯೇ ಇವೆ. ಎರಡು ಶಾಸನಗಳಲ್ಲಿ ಮಾತ್ರ ನಾಗರೀ ಲಿಪಿ ಬಳಸಿರುತ್ತಾರೆ.

ಕನ್ನಡದ ಪ್ರಮುಖ ಚಾರಿತ್ರಿಕ ಕಾವ್ಯಗಳಾದ ಕೆಳದಿನೃಪವಿಜಯ, ಕಂಠೀರವ ನರಸರಾಜ ವಿಜಯ, ಚಿಕ್ಕ ದೇವರಾಜ ವಿಜಯಗಳಲ್ಲಿ ಈ ನಾಯಕರ ಕುರಿತು ಹಲವು ಮಾಹಿತಿಗಳು ದೊರೆಯುತ್ತವೆ. ೧೭ನೇ ಶತಮಾನದ ಉತ್ತರಾರ್ಧದಲ್ಲಿದ್ದ ಕೃಷ್ಣಶರ್ಮ ಎಂಬ ಭಾರದ್ವಾಜ ಗೋತ್ರದ ಬ್ರಾಹ್ಮಣ ಕವಿ ‘ಸರಜಾ ಹನುಮೇಂದ್ರ ಯಶೋವಿಲಾಸಂ’ ಎಂಬ ಕಂದ-ವೃತ್ತ-ಷಟ್ಪದಿ-ಸಾಂಗತ್ಯ ಗದ್ಯಗಳಿಂದ ಕೂಡಿದ ವಿಶಿಷ್ಟ ಚಂಪೂ ಶೈಲಿಯಲ್ಲಿ ಈ ನಾಯಕರ ವಂಶಾವಳಿ ಕುರಿತು ಒಂದು ಗ್ರಂಥ ಬರೆದಿದ್ದಾನೆ. ಈ ಕಾವ್ಯವು ತರೀಕೆರೆ ಎರಡನೇ ಸರಜಾ ಹನುಮನ ಕುರಿತಾಗಿದೆ. ಕಾವ್ಯಕ್ಕೆ ಹೆಚ್ಚು ಇಂಬುಕೊಟ್ಟು ಈ ಗ್ರಂಥ ಚಾರಿತ್ರಿಕ ಇತಿಹಾಸಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿಲ್ಲ. ಇದು ಕಲ್ಪನೆ ಹಾಗೂ ಇತಿಹಾಸ ಮಿಶ್ರಿತವಾದ ಕಾವ್ಯ. ಕವಿ ತರೀಕೆರೆಯಲ್ಲಿ ನೆಲೆಸಿದ್ದು ಆ ನಾಯಕನ ಆಸ್ಥಾನದಲ್ಲಿ ಕೆಲಕಾಲ ಇದ್ದು ತನ್ನ ಕಣ್ಣಳತೆಗೆ ಸಿಕ್ಕಿದ ಅನುಭವಗಳನ್ನು ಕಾವ್ಯದಲ್ಲಿ ದಾಖಲಿಸಿದ್ದಾನೆ. ಇದನ್ನು ಮೈಸೂರು ವಿಶ್ವವಿದ್ಯಾನಿಲಯ ಈಚೆಗೆ ಪ್ರಕಟಿಸಿದ್ದು

[1] ಇದರ ಮೂರು ಮೂಲ ಪ್ರತಿಗಳು ಮೈಸೂರಿನಲ್ಲಿವೆ. [2]

ಈ ಕಾವ್ಯದಲ್ಲಿ ಕಂದ ವೃತ್ತಗಳು ವಿರಳವಾಗಿಯೂ, ಸಾಂಗತ್ಯ ಪ್ರಮುಖವಾಗಿಯೂ ಕಾಣಿಸಿಕೊಂಡಿದೆ. ಇದರಲ್ಲಿ ೫ ಆಶ್ವಾಸಗಳಿವೆ. ಮೊದಲ ಆಶ್ವಾಸದಲ್ಲಿ ಸರಜಾ ಹನುಮಪ್ಪ ನಾಯಕನ ವಂಶಾವಳಿಯ ಮೂಲ ಹಾಗೂ ಅವರ ಸಾಹಸ. ದ್ವಿತೀಯ ಆಶ್ವಾಸದಲ್ಲಿ ಹನುಮಪ್ಪ ನಾಯಕ, ಆತನ ಪತ್ನಿ ಗಂಗಾಬಿಕೆ, ಬಗ್ಗೆ ವರ್ಣನೆ, ತೃತೀಯ ಆಶ್ವಾಸದಲ್ಲಿ ರಾಜಪರಿವಾರದ ಬೇಟೆಯ ವರ್ಣನೆ, ಚತುರ್ಥ ಆಶ್ವಾಸದಲ್ಲಿ ಸರಜಾ ಹನುಮ ಯಗಟಿ ಮಲ್ಲಿಕಾರ್ಜುನ ಜಾತ್ರೆಗೆ ಹೋದ ವಿವರ, ಪಂಚಮ ಆಶ್ವಾಸದಲ್ಲಿ ರಾಜ್ಯಭಾರ ವರ್ಣನೆ ಇದ್ದು ಈ ಕೃತಿಯು ಆ ಕಾಲದ ಚಾರಿತ್ರಿಕ, ಸಾಹಿತಿಕ ಸಂಗತಿ ತಿಳಿಸುತ್ತಿದ್ದು ತನ್ನದೇ ಆದ ಸ್ಥಾನವನ್ನು ಕನ್ನಡ ಐತಿಹಾಸಿಕ ಕಾವ್ಯಗಳ ಸಾಲಿನಲ್ಲಿ ಪಡೆಯುತ್ತದೆ. ಕವಿಯ ಕಾಲ ಸು. ೧೭೦೦ ಎಂದು ಕವಿ ಚರಿತೆಕಾರರು ನಿರ್ಣಯಿಸಿದ್ದಾರೆ. ಕವಿಯ ಪಿತಾಮಹ ಅಪ್ಪಾಜಿ ಮೈಸೂರು ಅರಮನೆಯ ದ್ವಾರಾಧ್ಯಕ್ಷನಾಗಿದ್ದನೆಂದೂ, ಅವರು ಮೂಲ ತಮಿಳುನಾಡಿನ ಅಚ್ಚ ವೆಂಗಿ ಪುರದವರೆಂದು ತಿಳಿದು ಬರುತ್ತದೆ.

ಫ್ರಾನ್ಸಿಸ್ ಬುಕಾನನ್ ಹಾಗೂ ಕರ್ನಲ್ ಮೆಕೆಂಜಿಯವರು ಈ ನಾಯಕರ ಬಗ್ಗೆ ಹಲವಾರು ಮಾಹಿತಿಗಳನ್ನು ಕಲೆಹಾಕಿ ತಮ್ಮ ಪ್ರವಾಸಿ ಕಥನ,[3] ಕೈಫಿಯತ್ತು ಸಂಗ್ರಹ[4]ಗಳಲ್ಲಿ ಪ್ರಕಟಿಸಿದ್ದಾರೆ. ಬಿ.ಎಲ್.ರೈಸ್ರವರು ತಮ್ಮ ಶಾಸನ ಸಂಫುಟದಲ್ಲಿ ಈ ನಾಯಕರ ೨೬ ಶಾಸನ ಸಂಗ್ರಹಿಸಿ ಪ್ರಕಟಿಸಿದ್ದಾರೆ. ಇವುಗಳಿಂದ ಆಗಿನ ಕಾಲದ ಆಡಳಿತ, ಕೃಷಿ ಪದ್ಧತಿ, ವಾಣಿಜ್ಯ, ವ್ಯವಹಾರ, ಜನಜೀವನ, ಧಾರ್ಮಿಕ-ಜೀವನ, ಸಾಹಿತ್ಯ ಕಲೆ ಇತ್ಯಾದಿ ವಿವರ ತಿಳಿಯಬಹುದಾಗಿದೆ.

ಈ ವಂಶದ ರಂಗಪ್ಪನಾಯಕ ಮತ್ತು ಆತನ ಮಗ ಸರ್ಜಪ್ಪ ನಾಯಕನ ಕುರಿತು ಅನೇಕ ಲಾವಣಿಗಳು, ಜಾನಪದ ಕಥೆಗಳು ಜನರ ಬಾಯಲ್ಲಿ ಈಗಲೂ ಇದ್ದು, ಇವುಗಳಲ್ಲಿ ಕೆಲವನ್ನು ಪಾಳೇಯಗಾರರ ಪದಗಳು ಕೃತಿಯಲ್ಲಿ ಖ್ಯಾತ ಜನಪದ ಸಂಗ್ರಾಹಕ ಕ.ರಾ.ಕೃ. ಅವರೂ, ಗೀತೆಗಳು ಹಾಗೂ ನಾಡಪದಗಳು ಎಂಬ ಪುಸ್ತಕಗಳಲ್ಲಿ ಖ್ಯಾತ ಜಾನಪದ ಸಂಗ್ರಾಹಕ ಮತಿಘಟ್ಟ ಕೃಷ್ಣಮೂರ್ತಿ ಅವರೂ ಪ್ರಕಟಿಸಿರುವುದಲ್ಲದೆ ‘ಹೊನ್ನ ಬಿತ್ತೇವು ಹೊಲಕೆಲ್ಲಾ’ ಸ್ಮರಣ ಸಂಚಿಕೆಯಲ್ಲಿ ಮತಿಘಟ್ಟ ಕೃಷ್ಣಮೂರ್ತಿ ಕೆಲವು ಲಾವಣಿಗಳನ್ನು ಪ್ರಕಟಿಸಿದ್ದಾರೆ. ಡಾ. ಚಂದ್ರಶೇಖರ ಕಂಬಾರರು ‘ಮಾಸಾಮಿಧೀರ’ ಎಂತ ತಮ್ಮ ಸಂಗ್ರಹದಲ್ಲಿ ಈ ನಾಯಕರ ಒಂದು ಲಾವಣಿ ಸಂಪಾದಿಸಿ ಪ್ರಕಟಿಸಿದ್ದಾರೆ.

ಸಮಾಜ ಮತ್ತು ಆಡಳಿತ

ಇವರಲ್ಲಿ ಬಹುಪತ್ನಿತ್ವ ರೂಢಿಯಲ್ಲಿತ್ತು. ಹಾಗೆಯೇ ಸಹಗಮನ ಪದ್ಧತಿಯೂ ಇತ್ತು. ಆದರೆ ಇದು ಕಡ್ಡಾಯವಾಗಿರಲಿಲ್ಲ. ಇವರು ಮೃತರಾದಾಗ ವೈದಿಕ ಪದ್ಧತಿಯಂತೆ ಶವವನ್ನು ಸುಡುವ ಪದ್ಧತಿ ಇತ್ತು. ಸಂತೆಬೆನ್ನೂರು ನಾಯಕರಿಗೆ ಸಂಬಂಧಿಸಿದಂತೆ ವೀರಗಲ್ಲು-ಮಾಸ್ತಿಕಲ್ಲುಗಳು ಇರುವುದು ಗಮನಕ್ಕೆ ಬಂದಿಲ್ಲ.

ಅಳತೆ-ನಾಣ್ಯ-ತೂಕ : ಇವರು ವಿಜಯನಗರದ ಅಳತೆ, ನಾಣ್ಯ, ತೂಕವನ್ನು ಅನುಸರಿಸುತ್ತಿದ್ದರು. ಅವರು ವರಹ, ಗದ್ಯಾಣ, ಫಣ, ಹಣ, ಕಾಸು, ನಾಣ್ಯಗಳು ಖಂಡುಗ, ಕೊಳಗ, ಬಳ್ಳ, ಸೊಲಗ, ಮಣ, ಮಾನ ಧಡಿಯ ಪಂಚೇರು ಇತ್ಯಾದಿ ಅಳತೆ ತೂಕದ ಮಾನಗಳನ್ನು ಅನುಸರಿಸುತ್ತಿದ್ದರು.

ಭೂ ಕಂದಾಯವನ್ನು ಆದಾಯದ ೧/೬ ಭಾಗದಷ್ಟು ವಸೂಲಿ ಮಾಡುತ್ತಿದ್ದರು. ಪ್ರಜಾಭಿಪ್ರಾಯಕ್ಕೆ ವಿರೋಧವಾಗಿ ನಡೆಯದೆ, ಗ್ರಾಮಾಡಳಿತವನ್ನು ‘ಬಾರಬಲೂತಿ’ ಪದ್ಧತಿಯಂತೆ ನಡೆಸುತ್ತಿದ್ದರು. ಅನೇಕ ಕೆರೆ-ಕಟ್ಟೆಗಳು, ದೇವಾಲಯ, ಛತ್ರಗಳನ್ನು ನಿರ್ಮಿಸಿದ್ದರು. ಈ ನಾಯಕರು ದೈನಂದಿನ ಆಡಳಿತ ವ್ಯವಹಾರ ನಡೆಸಲು ಒಳ್ಳೆ ಮಂತ್ರಿ ಮಂಡಳ ಹೊಂದಿದ್ದರು. ಪ್ರಧಾನಿ, ಮಂತ್ರಿ, ಭಂಡಾರಿ, ದಂಡನಾಯಕ, ದಳವಾಯಿ, ಕಾರ್ಯಕರ್ತ, ಪಟ್ಟಣಶೆಟ್ಟಿ, ರಾಯಸದವ, ಶಾನುಭೋಗ, ಪಟೇಲ, ಗೌಡ, ತಳವಾರ ಇತ್ಯಾದಿ ಅಧಿಕಾರಿಗಳು ಇದ್ದರು. ಉತ್ತಮ ಸೈನ್ಯ ಪಡೆ ಇವರದಾಗಿತ್ತು.

ರಾಜ್ಯವನ್ನು ವೇಂಠೆ, ನಾಡು, ಶೀಮೆ, ಹೋಬಳಿ, ಗ್ರಾಮ, ಇತ್ಯಾದಿಯಾಗಿ ವಿಂಗಡಿಸಿ ರಾಜ್ಯಪಾಲನೆ ಮಾಡಿದರು. ಇವುಗಳಿಗೆ ಸಂಬಂಧಿಗಳನ್ನು ಹಾಗೂ ಅರಸು ಮನೆತನದವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆಡಳಿತ ನಿರ್ವಹಣೆ ನಡೆಸುತ್ತಿದ್ದರು.

ಸಮಾರೋಪ : ವಿಜಯನಗರ ಸಾಮ್ರಾಜ್ಯದ ಪತನಾನಂತರ ಅಸ್ಥಿತ್ವಕ್ಕೆ ಬಂದ ಸಂಸ್ಥಾನಗಳಲ್ಲಿ ಸಂತೇಬೆನ್ನೂರು ಸಂಸ್ಥಾನವೂ ಒಂದಾಗಿದ್ದು, ಬಸವಾಪಟ್ಟಣ, ಸಂತೇಬೆನ್ನೂರು, ತರೀಕೆರೆಗಳನ್ನು ರಾಜಧಾನಿ ಮಾಡಿಕೊಂಡು ಸುಮಾರು ಮೂರುನೂರು ಸಂವತ್ಸರಗಳ ಅವಧಿಯಲ್ಲಿ ಕೆಲಕಾಲ ಸ್ವತಂತ್ರವಾಗಿಯೂ ಅಲ್ಲದೆ, ವಿಜಯನಗರ, ಆದಿಲ್ ಶಾಹಿ, ಮರಾಠರು, ಮೊಗಲರು, ಕೆಳದಿ, ಚಿತ್ರದುರ್ಗ, ಹೈದರ್ಟಿಪ್ಪು ರವರ ಅಧೀನವಾಗಿಯೂ ಆಳಿದ ಈ ವಂಶ ಬ್ರಿಟೀಷರು ಈ ನೆಲದೊಳಗೆ ಬಂದ ಮೇಲೆ ತನ್ನ ಅಸ್ಥಿತ್ವವನ್ನು ಕೆಳದುಕೊಂಡಿತು. ಸುಮಾರು ೨೫ ನಾಯಕರು[5] ಈ ಸಂಸ್ಥಾನದಲ್ಲಿ ಆಡಳಿತ ನಡೆಸಿ ಅನೇಕ ಜನೋಪಕಾರಿ ಕೆಲಸ ಮಾಡಿದ್ದಾರೆ.

ಸಮಕಾಲೀನ ಅರಸರು, ಸುಲ್ತಾನರು, ಪೇಶ್ವೆಗಳು, ಪಾಳೇಗಾರರೊಂದಿಗೆ ಯುದ್ಧ ಮಾಡಿ ಸೋತ ಈ ನಾಯಕರು ಮುಂದೆ ಅವರ ಅಧೀನರಾಗಿ ರಣದುಲ್ಲಾಖಾನ್ ಜೊತೆಗೆ, ಮರಾಠರು, ಕೆಳದಿ, ಚಿತ್ರದುರ್ಗ, ಹರಪನಹಳ್ಳಿ, ಹಾಗಲವಾಡಿ, ಐಗೂರು, ಕೊಡಗು, ಬೆಂಗಳೂರು, ಮೈಸೂರು ಮುಂತಾದ ಆಡಳಿತದವರೊಂದಿಗೆ ನಡೆದ ಯುದ್ಧದಲ್ಲಿ ಅವರ ಪರವಾಗಿ ಭಾಗವಹಿಸಿದ್ದಾಗಿ ತಿಳಿದು ಬರುತ್ತದೆ. ಇವರು ಸೋತ ಅನೇಕ ಕಡೆ ಬಾಂಧವ್ಯ ಬೆಳೆಸಿ ತಮ್ಮ ಅಸ್ತಿತ್ವ ಮುಂದುವರೆಸಿಕೊಂಡು ಬಂದಿರುವುದನ್ನು ಕಾಣಬಹುದು.

ಹೀಗೆ ಉತ್ತಮ ರಾಜಕೀಯ ವ್ಯವಸ್ಥೆ ಸ್ಥಾಪಿಸಿ, ಕರ್ನಾಟಕದ ಸಮನ್ವಯ ಸಂಸ್ಕೃತಿಯನ್ನು ಮತ್ತು ಸಾಮಾಜಿಕ ವೈವಿಧ್ಯತೆಯನ್ನು ಪೋಷಿಸುತ್ತಾ ಕಲೆ ಮತ್ತು ಸಾಹಿತ್ಯ, ಮಾಧ್ಯಮವನ್ನು ಪ್ರೋತ್ಸಾಹಿಸಿ ತಮ್ಮ ಇತಿ-ಮಿತಿಯೊಳಗೆ ದೇಶಕ್ಕಾಗಿ ಉತ್ತಮ ಕಾಣಿಕೆ ನೀಡಿ ಒಂದು ಕಾಲದಲ್ಲಿ ವೈಭವವಾಗಿ ಮೆರೆದ ಸಂತೇಬೆನ್ನೂರು ನಾಯಕರ ಸಂಸ್ಥಾನ ಈಗ ನಾಮ ಮಾತ್ರ ಪಳೆಯುಳಿಕೆಯಾಗಿ ನಿಮ್ಮ ಮುಂದೆ ನಿಂತಿದೆ.

06_270_MAM-KUH * ಈ ವಂಶವೃಕ್ಷವನ್ನು ಸಂತೇಬೆನ್ನೂರು ನಾಯಕರ ಶಾಸನಗಳು, ಸಂತೇಬೆನ್ನೂರು ಮತ್ತು ತರೀಕೆರೆ ಕೈಫಿಯತ್ತುಗಳು, ಕುಟುಂಬದ ಕುಲ ಪುರೋಹಿತ ಮೂಲಗಳು, ಸರಜಾ ಹನುಮೇಂದ್ರ ಯಶೋವಿಲಾಸ ಹಾಗೂ ಇನ್ನಿತರ ಈ ವಂಶದ ದಾಖಲೆಗಳನ್ನು ಸಮನ್ವಯಗೊಳಿಸಿ ರಚಿಸಲಾಗಿದೆ. ಈ ವಂಶಾವಳಿಯನ್ನು ಇನ್ನಷ್ಟು ವ್ಯಾಪಕ ಸಂಶೋಧನೆ ಮತ್ತು ಅಧ್ಯಯನಗಳಿಂದ ಗಟ್ಟಿಗೊಳಿಸಿದಲ್ಲಿ ಇದು ಬದಲಾವಣೆಗೊಳಪಡುವ ಸಾಧ್ಯತೆಯೂ ಇದೆ.

** ಇದಲ್ಲದೆ ಇನ್ನೂ ಈ ಸಂತತಿಗೆ ಸೇರಿದ ಹಲವಾರು ನಾಯಕರ ಹೆಸರುಗಳು ಶಾಸನಗಳಲ್ಲಿ ಕೈಫಿಯತ್ತುಗಳಲ್ಲಿ ಉಲ್ಲೇಖವಾಗಿದ್ದರೂ ಅವರುಗಳೂ ಸಹ ಈ ಪಾಳೇಪಟ್ಟಿನ ಬೇರೆ ಬೇರೆ ಸ್ಥಳಗಳಿಂದ ಆಡಳಿತ ನಡೆಸಿರುವುದಾಗಿ ತಿಳಿದು ಬರುತ್ತದೆ. ಉದಾ: ತಿಮ್ಮಣ್ಣ ನಾಯಕ, ಪ್ರಾಣಪ್ಪನಾಯಕ, ಕಿಟ್ಟಪ್ಪನಾಯಕ, ನಾಗಪ್ಪನಾಯಕ, ನಂಜಪ್ಪನಾಯಕ, ಇತ್ಯಾದಿ, ಇವರುಗಳ ಅವಧಿ ಮತ್ತು ಆಡಳಿತಗಳ ಬಗ್ಗೆ ಇನ್ನಷ್ಟು ಸಂಶೋಧನೆ ಆಗಬೇಕಿದೆ.

*** ಒಂದೇ ಕಾಲದಲ್ಲಿ ಈರ್ವರು ನಾಯಕರ ಹೆಸರು ನಮೂದಾಗಿದ್ದರೆ ಅವರು ಬೇರೆ ಬೇರೆ ಪ್ರಾಂತ್ಯದಿಂದ ಆಳ್ವಿಕೆ ನಡೆಸುತ್ತಿದ್ದಾರೆಂದು ಭಾವಿಸಬೇಕು.

 

ಅನುಬಂಧ-೨

1. ಸಂತೇಬೆನ್ನೂರು ನಾಯಕರು ಕಟ್ಟಿಸಿದ ಮತ್ತು ಜೀರ್ಣೋದ್ಧಾರ ಮಾಡಿಸಿದ ದೇವಾಲಯಗಳು

೧.         ಸಂತೇಬೆನ್ನೂರು ಶ್ರೀರಾಮಚಂದ್ರ ದೇವಸ್ಥಾನ
೨.         ಚಿಕ್ಕ ಕೋಗಲೂರು ಆಂಜನೇಯಸ್ವಾಮಿ ದೇವಸ್ಥಾನ
೩.         ಬಾಗೂರು ಲಕ್ಷ್ಮೀದೇವರ ದೇವಸ್ಥಾನದ ಜೀರ್ಣೋದ್ದಾರ
೪.         ಹೊರಕೇರಿ ದೇವರಪುರದ ರಂಗನಾಥ ಸ್ವಾಮಿ ದೇವಾಲಯ
೫.         ಬುಳ್ಳಾಪುರ ಆಂಜನೇಯ ಸ್ವಾಮಿ ದೇವಸ್ಥಾನ
೬.         ಕದರ ಮಂಡಳಿಗೆ ಹನುಮಂತ ದೇವರ ದೇವಸ್ಥಾನ ಜೀರ್ಣೋದ್ಧಾರ
೭.         ಕಲ್ಲೋಡು ಹನುಮಂತ ದೇವರ ದೇವಸ್ಥಾನ
೮.         ಹಿರೇಮಾಡಾಳ ಮಲ್ಲೇಶ್ವರ ದೇವಾಲಯ
೯.         ಕಲ್ಲತ್ತನಗಿರಿ ಕಲ್ಲತ್ತಿವೀರನ ದೇವಸ್ಥಾನ
೧೦.       ಹನುಮಸಾಗರದ ಸದಾಶಿವಸ್ವಾಮಿ ದೇವಸ್ಥಾನ (ಪ್ರಧಾನಿ ಕಳಸಪ್ಪಯ್ಯ)
೧೧.       ತೀರ್ಥರಾಜಪುರ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ತೀರ್ಥಹಳ್ಳಿ)
೧೨.       ದೇವರಹಳ್ಳಿ ರಂಗನಾಥಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ
೧೩.       ಕಾಮನದುರ್ಗದ ಚಿನ್ನರಾಯಸ್ವಾಮಿ ದೇವಸ್ಥಾನ
೧೪.       ಯಗಟಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ

II. ಸಂತೇಬೆನ್ನೂರು ನಾಯಕರು ಕಟ್ಟಿಸಿದ ಕೆರೆಗಳು

೧. ಸಂತೇಬೆನ್ನೂರು ಪುಷ್ಕರಣಿ ೨. ಸಂತೇಬೆನ್ನೂರು ಕೆರೆ ೩. ಹಿರೇಕೋಗಲೂರು ಕೆರೆ ೪. ತಣಗೆರೆ ಕೆರೆ ೫. ಸಿದ್ದನಮಠದ ಕೆರೆ ೬. ಪುದಿಕೆರೆ ಕೆರೆ ೭. ಬೆಳ್ಳಿಗನೂಡು ಕೆರೆ ೮. ಕುಳೇನೂರು ಕೆರೆ ೯. ಕಂಚುಗಾರನಹಳ್ಳಿ ಕೆರೆ ೧೦. ಸಾಸ್ವೆಹಳ್ಳಿ ಕೆರೆ ೧೧. ಹೊಸಹಳ್ಳಿ ಕೆರೆ ೧೨. ಅಮರಗಿರಿ ಕೆರೆ ೧೩. ಹೊದಿಗೆರೆ ಕೆರೆ ೧೪. ಹಾರ್ನಳ್ಳಿ ಕೆರೆ

III. ಸಂತೇಬೆನ್ನೂರು ನಾಯಕರು ಕಟ್ಟಿಸಿದ ಕೋಟೆಗಳು

೧. ಬಸವಾಪಟ್ಟಣ ಕೋಟೆ ೨. ಸಂತೇಬೆನ್ನೂರು ಕೋಟೆ ೩. ತರೀಕೆರೆ ಕೋಟೆ ೪. ಅಜ್ಜಂಪುರ ಕೋಟೆ ೫. ಹರಿಹರ ಕೋಟೆ ೬. ಕಾಮನದುರ್ಗ ೭. ರಂಗಯ್ಯನಗಿರಿ ೮. ಹನುಮಯ್ಯನದುರ್ಗ

ಇವುಗಳಲ್ಲದೆ ಇನ್ನು ಅನೇಕ ದೇವಾಲಯಗಳು ಕೆರೆ ಕಟ್ಟೆಗಳು ಕೋಟೆ ಗಿರಿ ದುರ್ಗವನ್ನು ಜೀರ್ಣೋದ್ಧಾರ ಮಾಡಿಸಿ ಕಟ್ಟಿಸಿದ್ದಾಗಿ ತಿಳಿದು ಬರುತ್ತದೆ.

IV. ಸಂತೇಬೆನ್ನೂರು ನಾಯಕರು ಆಳಿದ ಸೀಮೆಗಳು

೧. ಬಸವಾಪಟ್ಟಣ ೨. ಸಂತೇಬೆನ್ನೂರು ೩. ತರೀಕೆರೆ ೪. ದುಮ್ಮಿ ೫. ಹೊಳೆಹೊನ್ನೂರು ೬. ಮಹಾದೇವಪುರ ೭. ಯರಗುಪ್ಪ ೮. ಯಡತೊರೆ ೧೦. ಕಾತೂರು ೧೧. ಆಯನೂರು ೧೨.ಗಾಜನೂರು ೧೩. ವಿಭೂತಿಪುರ ೧೪. ಬೆಂಡುಗ ೧೫. ರಟ್ಟೇಹಳ್ಳಿ ೧೫. ಹೊಳಲ್ಕೆರೆ ೧೭. ಹೊಸದುರ್ಗ ೧೮. ಮಂಜುರಾಬಾದ್

V. ಈ ನಾಯಕರು ಬರೆಸಿದ ಶಾಸನಗಳು ಇರುವ ಸ್ಥಳಗಳು

೧. ಮಂಟರಘಟ್ಟ ೨. ಹೊಸಳ್ಳಿ ೩. ಚಿಕ್ಕಗಂಗೂರು ೪. ಗೊಪ್ಪೇನಹಳ್ಳಿ ೫. ಬಾಗೂರು ೬. ವಡೆಯರಹಳ್ಳಿ ೭. ತಾಳ್ಯ ೮. ಬುಳ್ಳಾಪುರ ೯. ಕದರ ಮಂಡಲಗಿ ೧೦. ಕಲ್ಲೋಡು ೧೧. ಹಿರೇಕೋಗಲೂರು ೧೨. ಅಣ್ಣಾಪುರ ೧೩. ಹಿರೇಮಾಡಾಳ್ ೧೪. ಗರಗ ೧೫. ಆಲದಹಳ್ಳಿ ೧೬. ಬೆಂಡುಗ ೧೭. ಹುಲಿತಿಮ್ಮಾಪುರ ೧೮. ಅರಸಿನ ಕೊಪ್ಪ ೧೯. ತಾಳೀಕಟ್ಟೆ

VI. ಈ ನಾಯಕರು ದಾನ ಕೊಟ್ಟ ಹಳ್ಳಿಗಳು

೧. ಹರಕೆರೆ ಹೋಬಳಿ ಪಂಚಗ್ರಾಮ ೨. ಸನ್ಯಾಸಿ ಕೊಪ್ಪ ೩. ದಂದೂರು ೪. ದೇಮಾಪುರ ೫. ಹಿರೇಕಾತೂರು ೬. ಚಿಕ್ಕಕಾತೂರು ೭. ಹಾದಿಕೆರೆ ೮. ಕುಂಟನ ಸ್ಥಳ ೯. ಅಮೃತಾಪುರ ೧೦. ದೋರನಾಳ್ ೧೧. ದುಗ್ಗನಹಾಳ್ ೧೨. ಮಲವ್ ಗೊಪ್ಪ ೧೩. ಜಾವಳ್ಳಿ ೧೪. ಭಾರತೀಪುರ ೧೫. ಗರಗ ೧೬. ಹಂಗರ ಹಾಳ್ ೧೭. ಗೋವಿಂದಾಪುರ ೧೮. ತೀರ್ಥರಾಜಪುರ ೧೯. ತಿಮ್ಮಾಪುರ ೨೦. ರಾಮಚಂದ್ರಾಪುರ

ಅನುಬಂಧ – ೩

ಗ್ರಂಥ ಋಣ
ಶಾಸನಗಳು

೧. ರೈಸ್ ಬಿ.ಎಲ್., ಎಪಿಗ್ರಾಫಿಯಾ ಕರ್ನಾಟಕ ಸಂ. ೬.೭.೧೧.೧೨ – ೧೯೦೨
೨. ಸೌತ್ ಇಂಡಿಯನ್ ಇನ್‌ಸ್ಕ್ರಿಪ್‌ಷನ್ಸ್ ಸಂ. ೧೮
೩. ಮೈಸೂರು ಪುರಾತತ್ವ ಇಲಾಖೆಯ ವಾರ್ಷಿಕ ವರದಿ ೧೯೦೮ ರಿಂದ ೧೯೫೬
೪. ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ ಪೂನಾ ತ್ರೈಮಾಸಿಕ ಅಕ್ಟೋಬರ್ ೧೯೩೭
೫. ಶ್ರೀ ಮಜ್ಜಗದ್ಗುರು ಶ್ರೀ ಕೂಡ್ಲಿ – ಶೃಂಗೇರಿ ಸಂಸ್ಥಾನದ ಪ್ರಾಚೀನ ಶಾಸನ ಲೇಖನ ಸಂಗ್ರಹ ಭಾಗ.೧-೧೯೬೫
೬. Selections from the Records of The sringeri Mutt Vol.I. (1927)

ಸಮಕಾಲೀನ ಕೃತಿಗಳು

೧. ಗೋವಿಂದ ವೈದ್ಯ : ಕಂಠೀರವ ನರಸರಾಜ ವಿಜಯಂ
ಸಂ. ಶಾಮಶಾಸ್ತ್ರಿ ಮೈಸೂರು ವಿಶ್ವವಿದ್ಯಾನಿಲಯ ಮೈಸೂರು – ೧೯೭೧

೨. ತಿರುಮಲಾಚಾರ್ಯ – ಚಿಕ್ಕದೇವರಾಯ ವಂಶಾವಳಿ
ಸಂ. ಮ.ಬಾ.ಬೋಯಿ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು – ೧೯೯೯

೩. ತಿ.ತಾ.ಶರ್ಮ ಕಂಠೀರವ ನರಸರಾಜ ವಿಜಯ
ಮೈಸೂರು ವಿಶ್ವವಿದ್ಯಾನಿಲಯ ಮೈಸೂರು ೧೯೭೪

೪. ಲಿಂಗಣ್ಣ ಕವಿ ಕೆಳದಿ ನೃಪ ವಿಜಯಂ
ಸಂ.ಆರ್.ಶಾಮಾಶಾಸ್ತ್ರಿ ಮೈಸೂರು ವಿಶ್ವವಿದ್ಯಾನಿಲಯ ಮೈಸೂರು – ೧೯೭೩

೫. ಕೃಷ್ಣಶರ್ಮ : ಸರಜಾ ಹನುಮೇಂದ್ರ ಯಶೋ ವಿಲಾಸಂ
ಸರಿ. ವೈ.ಸಿ. ಭಾನುಮತಿ – ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು – ೧೯೯೬

ವಿಶ್ವಕೋಶಗಳು – ಕೈಫಿಯತ್ತುಗಳು

೧. ನಾಯಕ ಹಾ.ಮಾ. (ಸಂ) ಕರ್ನಾಟಕ ಕನ್ನಡ ವಿಷಯ ವಿಶ್ವಕೋಶ
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ೧೯೭೯

೨. ನಾಯಕ ಹಾ.ಮಾ. (ಸಂ) ಕನ್ನಡ ವಿಶ್ವಕೋಶ ಸಂಪುಟ

೩. ಕಲಬುರ್ಗಿ ಎಂ.ಎಂ., (ಸಂ) ಕರ್ನಾಟಕ ಕೈಫಿಯತ್ತುಗಳು ಕನ್ನಡ ವಿ.ವಿ. ಹಂಪಿ – ೧೯೯೭

Gazeteers/Travelers Report

೧. Rice B.L.: Mysore Gazetteer vol. ೧ & ೨ London – z೨.

೨. Hayavadana Rao C : Mysore Gazetteer Vol. V. Bangalore – ೧೯೩೦ z೩.

೩. Abishankar K. : Shimoga Gazetteer, Chikkamagalur Gazetteer, Tummkur Gazetteer- ೧೯೬೯

೪. Suryanatha Kamanth – Karnataka State Gazetter – ೧೯೮೪

೬. ಸೂರ್ಯನಾಥ ಕಾಮತ್ – ಕರ್ನಾಟಕ ರಾಜ್ಯ – ಗ್ಯಾಝೆಟಿಯರ್

೭. Francis Buchanan – A Journey from Madras throught countries of Mysore Coorg and Malabar in Vol. Madras (೧೯೮೮ edition)

ಸ್ಮರಣ ಸಂಚಿಕೆಗಳು

. ಹೊನ್ನಬಿತ್ತೇವು ಹೊಲಕೆಲ್ಲ
ಜಾನಪದ ಸಾಹಿತ್ಯ ಸಮ್ಮೇಳನ : ತರೀಕೆರೆ

೨. ಲಕ್ಷ್ಮಣ ತೆಲಗಾವಿ : ಹರತಿ ಸಿರಿ
ಹೆಚ್.ವಿ.ವೀರನಾಯಕ ನೆನಪಿನ ಸಂಪುಟ
ಹರತೀಕೋಟೆ (೧೯೮೭)

೩. ಇತಿಹಾಸ ದರ್ಶನ ಸಂಪುಟಗಳು
ಕರ್ನಾಟಕ ಇತಿಹಾಸ ಅಕಾಡೆಮಿ
ಬೆಂಗಳೂರು

ವಂಶಾವಳಿ ಚರಿತ್ರೆಗಳು

೧. ಪಿ. ಅಬ್ದುಲ್‌ಸತ್ತಾರ್: ತರೀಕೆರೆಯ ಪಾಳೆಯಗಾರರು
ಶ್ರೀ ಲೋಕ ಪಾವತಿ ಪ್ರಕಾಶನ ಪಾಂಡವರಪುರ (೯೭)

೨. ಎಂ.ಎಸ್. ಪುಟ್ಟಣ್ಣ : ಚಿತ್ರದುರ್ಗದ ಪಾಳೆಯಗಾರರು
ಕಾವ್ಯಾಲಯ : ಮೈಸೂರು (೧೯೯೭)

೩. ಕುಂ.ಬಾ. ಸದಾಶಿವಪ್ಪ : ಹರಪನಹಳ್ಳಿ ಪಾಳೆಯಗಾರರು
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು (೧೯೯೬)

೪. ಡಿ.ಎನ್.ಯೋಗೀಶ್ವರಪ್ಪ – ಹಾಗಲವಾಡಿ ನಾಯಕರು
ಕನ್ನಡ ವಿಶ್ವವಿದ್ಯಾನಿಲಯ, ಹಂಪಿ (೧೯೯೯)

೫. ಕೆಳದಿ ಗುಂಡಾಜೋಯ್ಸ : ಕೆಳದಿ ಅರಸರು
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು (೧೯೮೦)

ಕನ್ನಡ ಕೃತಿಗಳು

೧. ಕೃಷ್ಣರಾವ್ ಎಂ.ವಿ. ಕರ್ನಾಟಕ ಇತಿಹಾಸ ದರ್ಶನ
ಬೆಂಗಳೂರು (೧೯೭೧)

೨. ದೀಕ್ಷಿತ್ ಜಿ.ಎಸ್.(ಸಂ). ಕೆಳದಿ ಐತಿಹಾಸಿಕ ನಿಬಂಧನಗಳು
ಕೆಳದಿ ವಸ್ತುಸಂಗ್ರಹಾಲಯ (೧೯೮೯) ಕೆಳದಿ

೩. ವೆಂಕಟೇಶ ಜೋಯಿಸ್ ಕೆ.ಜಿ. ಕೆಳದಿ ಶಾಸನಗಳ ಸಾಂಸ್ಕೃತಿಕ ಅಧ್ಯಯನ
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು (೧೯೯೬)

೪. ನಂಜುಂಡ ಸ್ವಾಮಿ ವಿ.ಎಸ್. ಕರ್ನಾಟಕ ಪಾಳೆಗಾರರು ಮತ್ತು ಒಡೆಯರ ಇತಿಹಾಸ
ಸಮಾಜ ಪುಸ್ತಕ ಭಂಡಾರ, ಧಾರವಾಡ (೧೯೮೬)

೫. ಶಾಸ್ತ್ರಿ ಬಿ.ಎನ್. ಕರ್ನಾಟಕದ ಪರಂಪರೆ ಕರ್ನಾಟಕ ಸರ್ಕಾರ, ಬೆಂಗಳೂರು (೧೯೭೦)

ಜಾನಪದ

೧. ಕ.ರಾ.ಕೃ. ಪಾಳೆಯಗಾರರ ಪದಗಳು
ಜನಪದ ಸಾಹಿತ್ಯ ಅಕಾಡೆಮಿ

೨. ಮತಿಘಟ್ಟ ಕೃಷ್ಣಮೂರ್ತಿ ಗೀತೆಗಳು

೩. ಮತಿಘಟ್ಟ ಕೃಷ್ಣಮೂರ್ತಿ – ‘ನಾಡಪದಗಳು
ಗುರುಮೂರ್ತಿ ಪ್ರಕಾಶನ, ಬೆಂಗಳೂರು (೧೯೭೫)

ಅಪ್ರಕಟಿತ ಹಸ್ತಪ್ರತಿಗಳು

೧. ಯಶೋದಮ್ಮ ನಾಗತಿ ಸ್ವಹಸ್ತದ ಕೈ ಬರೆಹ ಪುಸ್ತಕ

೨. ಸಂತೇಬೆನ್ನೂರು ಇತಿಹಾಸ ಸಂತೇಬೆನ್ನೂರು ನಾಡಿಗ್ ವಂಶಸ್ಥರಲ್ಲಿರುವ ಕೈಬರಹ ಪುಸ್ತಕ

೩. ಶೃಂಗೇರಿ ಮಠದ ಕಡತಗಳು

ಇತರೆ

೧. ಶ್ರೀನಿವಾಸರಾವ್ ಕೊರಟೆ : ಮೂರು ಹಿಡಿ ಹೂ

೨. ನರಸಿಂಹಾಚಾರ್ ಆರ್. ಕರ್ನಾಟಕ ಕವಿ ಚರಿತ್ರೆ ಸಂ. ೨
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು (೧೯೭೩)

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಸ.ಹ.ಯ.ವಿ.

[2]೧. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಸ್ತಭಂಡಾರ ಪ್ರತಿ ಕೆ.ಬಿ.-೫೩

೨. ಶ್ರೀ ಮನ್ಮಹಾರಾಜರ ಸಂಸ್ಕೃತ ಭಂಡಾರದ ಓಲೆ ಪ್ರತಿ ಡಿ. ೧೧೬೩

೩. ಶ್ರೀ ಮನ್ಮಹಾರಾಜರ ಸಂಸ್ಕೃತ ಭಂಡಾರದ ಕಾಗದ ಪ್ರತಿ ಡಿ. ೧೧೬೪

[3]ಪ್ರಾನ್ಸಿಸ್ ಬುಕಾನನ್, ಎ ಜರ್ನಿ ಫ್ರಂ ಮದ್ರಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರು ಕೂರಗ್ ಅಂಡ್ ಮಲಬಾರ್ ೧೯೮೮, (ಪುನ ಮುದ್ರಣ) ಏಶಿಯನ್ ಪಬ್ಲಿಷರ‍್ಸ್

[4]ಮೆಕೆಂಜಿ ಸಂಗ್ರಹದ ಕೈಫಿಯತ್ತುಗಳು, ಕರ್ನಾಟಕ ಕೈಫಿಯತ್ತುಗಳು, ಕನ್ನಡ ವಿಶ್ವವಿದ್ಯಾಲಯ ಹಂಪಿ

[5]ವಂಶವೃಕ್ಷ (ಈ ಲೇಖನದ ಅನುಬಂಧ ೧ ನೋಡಿ)