ಸೂಕ್ಷ್ಮ ಅಧ್ಯಯನಗಳಿಗೆ ಒತ್ತು ಕೊಡುತ್ತಿರುವ ಇಂದಿನ ಶೈಕ್ಷಣಿಕ ಸಂದರ್ಭದಲ್ಲಿ ಪ್ರಾದೇಶಿಕ ಅಧ್ಯಯನವು ಸಾಕಷ್ಟು ಮಹತ್ವವನ್ನು ಪಡೆದಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಭೌಗೋಲಿಕ ಮತ್ತು ರಾಜಕೀಯ ಪರಿಸರದ ಕನಿಷ್ಟ ಜ್ಞಾನವಾದರೂ ಇರುವುದು ಅತ್ಯಗತ್ಯ. ಒಬ್ಬ ವ್ಯಕ್ತಿ ಮೊದಲು ತನ್ನ ಆವರಣದಲ್ಲಿ ನೆಲೆಯೂರಿ ನಂತರ ಯಾವ ವಿಶಾಲ ಪ್ರದೇಶದ ಭಾಗ ತಾನಾಗಿರುವನೋ ಅದನ್ನು ಅರಿಯಲು ತೊಡಗಬೇಕಾಗುತ್ತದೆ.

ಅದಕ್ಕೂ ಮಿಗಿಲಾಗಿ ಒಬ್ಬನ ಐತಿಹಾಸಿಕ ಗೃಹಿಕೆಗಳು ನಿಜ ಸುಳ್ಳುಗಳ ಸಮ್ಮಿಶ್ರಣವಾಗಿರದೇ ಸರಿಯಾದ ರೀತಿಯಲ್ಲಿ ಇರಬೇಕಾದದ್ದು ಕೂಡ ಅತ್ಯವಶ್ಯ. ಸ್ಥಾನಿಕ ಅಧ್ಯಯನಗಳು ನಮ್ಮ ಐತಿಹಾಸಿಕ ಬೇರುಗಳನ್ನು ಅರ್ಥೈಸಲು ಹಾಗೂ ಇದನ್ನು ಒಂದು ಪ್ರದೇಶದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಕಾಸದ ಹಿರಿಯ ಆಯಾಮಕ್ಕೆ ಜೋಡಿಸಲು ಅನುವು ಮಾಡಿಕೊಡುತ್ತವೆ. ಈ ಅರ್ಥದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಶಿವಮೊಗ್ಗದ ಇತಿಹಾಸ ವೇದಿಕೆಗಳು ಸೇರಿ ಸಂಘಟಿಸಿದ ಮಲೆನಾಡಿನ ಸ್ಥಾನಿಕ ಅರಸರುಮನೆತನಗಳ ಕುರಿತ ಈ ಎರಡು ದಿನಗಳ ವಿಚಾರ ಸಂಕಿರಣವು ಹೊಸ ರೀತಿಯ ಸಂಶೋಧನೆಯನ್ನು ಬೆಳೆಸುವಲ್ಲಿ ಹಾಗೂ ಈ ಪ್ರದೇಶದ ಮತ್ತು ಜನರ ವಿಭಿನ್ನ ಅಂಶಗಳ ಕುರಿತು ಬೆಳಕು ಚೆಲ್ಲುವಲ್ಲಿ ಬಹುಕಾಲ ಉಳಿಯಬಲ್ಲ ತನ್ನ ಸಾಧನೆಯನ್ನು ಮಾಡಿದ.

ಆದರೆ ಪ್ರಾದೇಶಿಕ ರಾಜಕೀಯ ಮತ್ತು ಸಾಂಸ್ಕೃತಿಕ ಅಧ್ಯಯನಗಳು ಸಾಂಪ್ರದಾಯಿಕ ಮಿತಿಗಳನ್ನು ಬಿಟ್ಟು ಮೇಲೆ ಏರಬೇಕಾದದ್ದು ಅವಶ್ಯಕ. ಈ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಸಾಧಾರಣವಾಗಿ ಪುರಾಣಗಳು ದಂತಕಥೆಗಳು ಹಾಗೂ ಸ್ಥಾನಿಕ ಅರಸರ ಶೌರ್ಯದ ವೈಭವೀಕರಣಗಳೇ ತುಂಬಿರುತ್ತವೆ. ಸ್ಥಾನಿಕ ರಾಜರನ್ನು ವೈಭವೀಕರಿಸುವುದು ಹಾಗೂ ಕಲೆ ಮತ್ತು ವಾಸ್ತುಶಿಲ್ಪಗಳನ್ನು ತೀರ ಆಧ್ಯಾತ್ಮಿಕವಾದ ನೆಲೆಯಲ್ಲೇ ಸರಳೀಕರಿಸುವದು ಇವೆಲ್ಲ ಇಂದಿನ ಇತಿಹಾಸದ ಅಧ್ಯಯನದಲ್ಲಿ ನಾವೆಲ್ಲಾ ಸಾಮಾನ್ಯವಾಗಿ ಮಾಡುತ್ತಿರುವ ಹಾಗೂ ಪಡೆಯುತ್ತಿರುವ ಶಿಕ್ಷಣಕ್ಕೆ ಅನುಗುಣವಾಗಿಯೇ ಇದೆ. ಇದು ಒಂದು ಹಂತದವರೆಗೆ ಸ್ಥಾನಿಕ ಇತಿಹಾಸಕ್ಕೆ ಅಗತ್ಯ ಎಂದು ಕಂಡರೂ ಇದರಲ್ಲಿ ಪ್ರಾದೇಶಿಕ ಭಾವನೆಗಳು ಸೇರಿಕೊಂಡಿರುವುದರಿಂದ ವ್ಯಕ್ತಿನಿಷ್ಟ ಪೂರ್ವಾಗ್ರಹ ಇದರಲ್ಲಿ ಸೇರಿಕೊಂಡು ಕೆಲವೊಮ್ಮೆ ಅತಿಯಾಗಿಬಿಡಬಹುದು.

ಸಂಪೂರ್ಣ ವಸ್ತುನಿಷ್ಟತೆ ಕೂಡ ಅಸಾಧ್ಯವಾದ ಕಲ್ಪನೆಯೇ ಆದರೂ ತಮ್ಮ ವಿಷಯದ ಕುರಿತು ಆದಷ್ಟು ನಿಷ್ಪಕ್ಷಪಾತೀ ಹಾಗೂ ತಟಸ್ಥ ಧೋರಣೆಯನ್ನು ವಿದ್ವಾಂಸರು ತಳೆಯಬೇಕು. ಅದರಲ್ಲೂ ಪ್ರಾದೇಶಿಕ ಇತಿಹಾಸ ತಜ್ಞರಿಗೆ ಇಂಥ ಪೂರ್ವಾಗ್ರಹಗಳಿಂದ ತಪ್ಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲಿ ಪ್ರಸ್ತುತ ಸಂದರ್ಭದಲ್ಲಿ ವ್ಯಕ್ತಿ ನಿಷ್ಠತೆ ಹಾಗೂ ವಸ್ತುನಿಷ್ಠತೆಗಳ ಕುರಿತು ಚರ್ಚಿಸುವುದು ಅಷ್ಟು ಸೂಕ್ಷವಲ್ಲ, ಆದರೂ ಹೊಸ ಸಾಧ್ಯತೆಗಳನ್ನು ಸೃಷ್ಟಿಸುವ ಪೂರ್ವದಲ್ಲಿ ಪ್ರಾದೇಶಿಕ ಇತಿಹಾಸದ ಕೆಲ ಮಿತಿಗಳನ್ನು ಗುರುತಿಸುವುದು ಸೂಕ್ತವಾಗಿದೆ.

ಸ್ಥಾನಿಕ ಇತಿಹಾಸಗಳಿಗೆ ತಮ್ಮದೇ ಆದ ಸಮಸ್ಯೆಗಳು ಹಾಗೂ ಸಾಧ್ಯತೆಗಳು ಇವೆ. ಈ ಇತಿಹಾಸಕ್ಕೆ ತನ್ನದೇ ಆದ ಅನ್ವೇಷಣಾ ವಿಧಾನಗಳು ಹಾಗೂ ಸಂಶೋಧನಾ ತಂತ್ರಗಳು ಇವೆ. ಯಾರು ಹೇಗೆ ಇದನ್ನು ಅನುಸರಿಸುತ್ತಾರೆ ಎಂಬುದು ಅವರವರ ಒಲವಿಗೆ ಬಿಟ್ಟಿದ್ದು. ಈ ಕುರಿತು ಗಂಭೀರವಾಗಿ ಆಲೋಚಿಸುವವರಿಗೆ ಇತಿಹಾಸದ ಹೊಸ ಸಂಶೋಧನಾತಂತ್ರಗಳು ಆವಿಷ್ಕಾರವಾಗಿ ಹೊಸ ಸಾಧ್ಯತೆಗಳು ತೆರೆದಿವೆ. ಸಬಾಲ್ಟರ್ನ ಅಧ್ಯಯನ ಇದರಲ್ಲಿ ಒಂದು ವಿಧವಾದರೆ ಮೌಖಿಕ ಇತಿಹಾಸವು ಸ್ಥಾನಿಕ ಅಧ್ಯಯನಗಳ ನಿಟ್ಟಿನಿಂದ ಮತ್ತೊಂದು ಮಾರ್ಗದರ್ಶಕವಾಗಿದೆ. ಇಂತಹ ಹೊಸ ಬೆಳವಣಿಗೆಗಳು ಪ್ರಾದೇಶಿಕ ಇತಿಹಾಸಕ್ಕೆ ಅಪಾರ ಅವಕಾಶ ವನ್ನು ಸೃಷ್ಟಿಸಿವೆ. ಈ ಹೊಸ ಬೆಳವಣಿಗೆಗಳನ್ನು ನಾವು ಗಮನಿಸಿದಾಗ ನಂಬಲಿಕ್ಕೆ ಅಸಾಧ್ಯವಾದ ರೀತಿಯಲ್ಲಿ ನಾವು ಸೂಕ್ಷ್ಮ ಅಧ್ಯಯನಗಳನ್ನು ನಡೆಸಲು ಸಮರ್ಥರಾಗಿದ್ದೇವೆಂದು ಅರಿವಿಗೆ ಬರುತ್ತದೆ.

ಈವರೆಗೆ ಅಷ್ಟಾಗಿ ಪ್ರಚಲಲಿತದಲ್ಲಿ ಬರದ ಹಾಗೂ ಪ್ರಾದೇಶಿಕ ಅಧ್ಯಯನವನ್ನು ಇನ್ನೂ ಗಂಭೀರವಾಗಿ ನಡೆಸಬಹುದಾದ ಕೆಲ ಮಾರ್ಗಗಳನ್ನು ಇಲ್ಲಿ ಉಲ್ಲೇಖಿಸಬಹುದು. ಪ್ರಾರಂಭದಲ್ಲಿ ಐತಿಹಾಸಿಕ ಭೂಗೋಲದ ಅನ್ವೇಷಣೆಯನ್ನು ನಡೆಸಬಹುದು. ಈ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ನಡೆಯದೇ ಇರುವುದು ಈ ಅಧ್ಯಯನದ ಒಂದು ಸವಾಲು ಕೂಡ ಆಗಿದೆ. ನಮಗೆ ಸಿಗುವ ಆಧಾರಗಳು ಈ ಅರಸರ ರಾಜ್ಯದ ಗಡಿಗಳ ಕುರಿತು ಒಮ್ಮತದ ಮಾಹಿತಿಯನ್ನು ಕೊಡದಿರುವುದು ಒಂದು ಮುಖ್ಯ ತೊಡಕಾಗಿದೆ. ಬಹುಬಾರಿ ಒಂದು ರಾಜ್ಯದ ಗಡಿ ಇನ್ನೊಂದರಲ್ಲಿ ಸುಲಭ. ಆದರೆ ಅವರ ರಾಜ್ಯದ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸುವುದು ಕಷ್ಟ. ಈಗ ಸಿಕ್ಕುವ ಆಕಾರಗಳನ್ನೇ ಇಟ್ಟುಕೊಂಡು ಅವುಗಳ ನಕಾಶೆ ತಯಾರಿಸಿ ರಾಜವಂಶ ಹಾಗೂ ಕಾಲಾನುಕ್ರಮಣಿಕೆಗಳಲ್ಲಿ ಅವನ್ನು ನಿರೂಪಿಸುವ ಕೆಲಸ ಆಗಬೇಕು.

ಮತ್ತೊಂದು ಆಸಕ್ತಿ ಪೂರ್ಣಕ್ಷೇತ್ರ ಎಂದರೆ ಸ್ಥಳನಾಮಗಳ ಅಧ್ಯಯನ. ಸ್ಥಳಗಳನ್ನು ಗುರುತಿಸಿ ಅವುಗಳ ಮೂಲದ ಕುರಿತು ವಿಶ್ಲೇಷಣೆ ನಡೆಸಬಹುದು. ಈ ಸ್ಥಳನಾಮಗಳನ್ನು ಒಂದು ನಗರೀಕರಣದ ಸಂರ್ಭದಲ್ಲಿ ಅಧ್ಯಯನಕ್ಕೊಳಪಡಿಸಿ, ಆಯಾ ಪ್ರದೇಶದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಪ್ರಗತಿಯ ಕುರಿತು ಕೂಡ ನಾವು ತಿಳಿದುಕೊಳ್ಳಬಹುದು.

ಜನಸಂಖ್ಯೆ ಅಧ್ಯಯನದ ಮೇಲೆ ಕೂಡ ವಿಪುಲ ಕೆಲಸವನ್ನು ನಡೆಸಬಹುದು. ಜನಸಂಖ್ಯೆ ಅಧ್ಯಯನದಲ್ಲಿ ಕೇವಲ ಜನಸಂಖ್ಯೆಯ ಕುರಿತು ಅಧ್ಯಯನ ಮಾತ್ರ ಇರುವುದಿಲ್ಲ, ಜೊತೆಗೆ ಆ ಜನರ ಸಾಮಾಜಿಕ, ಸಾಂಸ್ಕೃತಿಕ ಹಿನ್ನಲೆಯ ಕುರಿತು ಅಧ್ಯಯನ ನಡೆಸಲು ವಿಪುಲ ಅವಕಾಶವಿದೆ. ಆಧುನಿಕ ಪೂರ್ವಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದ ವಲಸೆಗಳನ್ನು ಕುರಿತ ಅಧ್ಯಯನಗಳನ್ನು ಖಂಡಿತವಾಗಿ ಉಪೇಕ್ಷಿಸಬಾರದು. ವಿವರಣೆಗಳಿಗೆ ನಿಲುಕದ ಹಳ್ಳಿ ಪಟ್ಟಣಗಳ ನಾಶ, ನಗರ ಕೇಂದ್ರಗಳ ಅವನತಿಯನ್ನು ವಿವರಿಸಬೇಕಾಗುತ್ತದೆ. ಏಕೆ ಜನಸಂಖ್ಯಾಭರಿತ ಪ್ರಾದೇಶಗಳು ನಿರ್ಜನವಾಗುತ್ತವೆ. ಹಾಗೂ ಜನರು ಏಕೆ ಬಹು ಸಂಖ್ಯೆಯಲ್ಲಿ ವಲಸೆ ಹೋಗುತ್ತಾರೆ ಎಂಬ ಪ್ರಶ್ನೆ ಆಸಕ್ತಿ ಪೂರ್ಣವಾದ ಉತ್ತರಗಳನ್ನು ನೀಡಬಲ್ಲದು. ಉತ್ತರವಾಗಿ ಬರ, ಸಾಂಕ್ರಮಿಕ ರೋಗ ಮುಂತಾದವು ಕಂಡು ಬರುತ್ತವೆ. ಹಾಗಾಗಿ ಇಂಥ ಪ್ರತ್ಯೇಕ ಕಾರಣಗಳೇ ಮತ್ತೊಂದು ವಿವರವಾದ ಅಧ್ಯಯನಕ್ಕೆ ದಾರಿ ಮಾಡಿಕೊಡುತ್ತವೆ.

ಐತಿಹಾಸಿಕ ಸಮಾಜ ಶಾಸ್ತ್ರವು ತ್ವರಿತವಾಗಿ ಬೆಳೆಯುತ್ತಿರುವ ಮತ್ತೊಂದು ಕ್ಷೇತ್ರವಾಗಿದೆ. ಜಾತಿ ಮತ್ತು ವರ್ಗಗಳ ಅಧ್ಯಯನ ಹಾಗೂ ಸೂಕ್ಷ್ಮ ಹಾಗೂ ಸ್ಥೂಲ ಮಟ್ಟದ ಸಾಮಾಜಿಕ ವ್ಯವಸ್ಥೆಗೆ ಅವುಗಳ ಪ್ರಸ್ತುತತೆಗಳನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ಹಾಗೂ ಸಾಮಾಜಿಕ ಸಂಬಂಧಗಳಲ್ಲಿ ಆಂತರಿಕ ತಳಮಳಗಳನ್ನು ಕೂಡ ತಿಳಿದುಕೊಳ್ಳಬಹುದಾಗಿದೆ. ಲಿಂಗ ಅಧ್ಯಯನಗಳು ಕೂಡ ಕೇವಲ ಸಂತ್ರಸ್ತ ವರ್ಗಗಳ ಕುರಿತು ಮಾತ್ರವಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಸ್ತ್ರೀ ಪುರುಷ ಸಂಬಂಧಗಳ ಚಲನಶೀಲತೆಯನ್ನು ತಿಳಿದುಕೊಳ್ಳಲು ಸಹ ಕರಿಸುತ್ತವೆ.

ಇಂದು ಪ್ರಚಲಿತದಲ್ಲಿ ಬರುತ್ತಿರುವ ‘ನ್ಯೂ ಹಿಸ್ಟರಿಸಿಸಂ’ ಎಂಬ ಮಾರ್ಗದಲ್ಲಿ ಸಂಸ್ಕೃತಿಯನ್ನು ಸಾಹಿತ್ಯ, ಜಾನಪದ ಹಾಗೂ ಪೂಜಾ ಪಂಥಗಳ ಮೂಲಕ ಅಧ್ಯಯನ ಮಾಡುವ ಒಲವು ಬೆಳೆಯುತ್ತಿದೆ. ಸಾಂಪ್ರದಾಯಿಕ ಇತಿಹಾಸದ ಆಕರದಲ್ಲಿ ಅಷ್ಟಾಗಿ ಕಾಣಸಿಗದ ಈ ಉಪೇಕ್ಷಿತ ವಿಷಯಗಳು ಇದರಿಂದಾಗಿ ಮಹತ್ವ ಪಡೆಯುತ್ತಿವೆ. ಸಾಂಸ್ಕೃತಿಕ ಮಾನವಶಾಸ್ತ್ರ, ಪರಿಸರ ಮತ್ತು ಜೀವಾವಲಂಬನೆಯ ಅಧ್ಯಯನಗಳು ಕೂಡ ಇತಿಹಾಸದಲ್ಲಿ ಇಲ್ಲಿಯವರೆಗೆ ಬಳಸಿಕೊಳ್ಳದ ಕ್ಷೇತ್ರಗಳಾಗಿದ್ದು ಇನ್ನು ಮುಂದಾದರೂ ಅವನ್ನೂ ಬಳಸಿಕೊಳ್ಳಬಹುದಾಗಿದೆ.

ಆಡಳಿತ ವ್ಯವಸ್ಥೆಯನ್ನು ಕುರಿತ ಕೃತಿಗಳು ಸಾಮಾನ್ಯವಾಗಿವೆ. ಆದರೆ ರಾಜ್ಯ ನಿರ್ಮಾಣ ಹಾಗೂ ಬುಡಕಟ್ಟು ಹಂತದಿಂದ ರಾಜ್ಯದ ಹಂತಕ್ಕೆ ನಡೆದ ಸ್ಥಿತ್ಯಂತರಗಳ ಕುರಿತ ಅಧ್ಯಯನ ಅಷ್ಟಾಗಿ ನಡೆದಿಲ್ಲ. ಅಂಥ ‘ಸೂಕ್ಷ್ಮ’ ಅಧ್ಯಯನಗಳಿಂದ ಪ್ರಾದೇಶಿಕ ಚಿಕ್ಕ ಪುಟ್ಟ ನಾಯಕರು ಅಥವಾ ಸಾಮಂತರು ಹಾಗೂ ಅವರ ಮೇಲಿನ ಸ್ವಾಮಿಗಳ ಸಂಕೀರ್ಣ ಸಂಬಂಧವನ್ನು ಅರಿಯಲು ಕೆಲ ಒಳನೋಟಗಳನ್ನು ಪಡೆಯಬಹುದು. ಇಂಥ ಅಧ್ಯಯನಗಳು ಒಂದು ರಾಜ್ಯ ಸಾಮಂತಶಾಹಿ (ಫ್ಯೂಡಲ್) ಆಗಿತ್ತೇ? ಸೈನ್ಯ ಕೇಂದ್ರಿತವಾಗಿತ್ತೆ ಅಥವಾ ಸೆಗ್ಮೆಂಟರಿ ಹಾಗೂ ಧಾರ್ಮಿಕ ಅಧಿಕಾರವಾಗಿತ್ತೆ ಎಂಬುದನ್ನು ತಿಳಿಸಬಹುದು. ಅಂಥ ಅಧ್ಯಯನಗಳನ್ನು ಮಾಡುವಾಗ ಅವುಗಳ ಪೂರಕ ಅಂಶಗಳಾದ ನ್ಯಾಯ ಪದ್ಧತಿ, ಆಡಳಿತ ಯಂತ್ರ ಮುಂತಾದ ವಿಷಯಗಳು ಆಯಾ ಕ್ಷೇತ್ರಕ್ಕೇ ಸಂಬಂಧಿಸಿ ಬೆಳಕಿಗೆ ಬರುತ್ತವೆ.

ಆರ್ಥಿಕ ಪರಿಸ್ಥಿತಿ ಮತ್ತು ಬೆಳವಣಿಗೆಗಳು ನಮ್ಮ ಅಧ್ಯಯನಕ್ಕೆ ಅಪಾರ ಅವಕಾಶವನ್ನು ಸೃಷ್ಟಿಸುತ್ತವೆ. ಭೂಕಂದಾಯ, ನೀರಾವರಿ, ಅಳತೆ ಪದ್ಧತಿ, ವ್ಯಾಪಾರ, ನಾಣ್ಯ ಪದ್ಧತಿ ಎಲ್ಲವೂ ಆರ್ಥಿಕ ಬೆಳವಣಿಗೆಯ ಸೂಚನೆಗಳಾಗಿವೆ. ಇವುಗಳಲ್ಲಿ ಪ್ರತಿಯೊಂದನ್ನು ಪ್ರತ್ಯೇಕವಾಗಿ ಅಧ್ಯಯನಕ್ಕೊಳಪಡಿಸಬಹುದಾಗಿದೆ. ಭೌತಿಕ ಸಂಪನ್ಮೂಲಗಳ ಸಾಗಣೆ, ವಿತರಣೆ, ಉಪಭೋಗ ಹಾಗೂ ಹಂಚಿಕೆ ಮುಂತಾದವು ಆರ್ಥಿಕ ಬೆಳವಣಿಗೆಯ ಮಾಪನವನ್ನು ರೂಪಿಸಲು ಅತ್ಯವಶ್ಯವಾಗಿವೆ. ಇದರ ಮೂಲಕ ಒಂದು ಕಾಲದಲ್ಲಿ ಎಷ್ಟು ಪ್ರಗತಿಯನ್ನು ಸಾಧಿಸಲಾಯಿತು ಎಂಬುದನ್ನು ತಿಳಿದುಕೊಳ್ಳಬಹುದು. ವ್ಯಾಪಾರ, ತಂತ್ರಜ್ಞಾನ ಹಾಗೂ ಕೈಗಾರಿಕೆಗಳ ಬೆಳವಣಿಗೆ ಕೂಡ ಒಂದು ಕಾಲದಲ್ಲಿ ಸಾದಿತವಾದ ಅಭಿವೃದ್ಧಿಯನ್ನು ಸೂಚಿಸುತ್ತವೆ.

ಈ ಮೇಲಿನ ಕ್ಷೇತ್ರದ ಸಂಬಂಧಿಸಿ ಇರುವ ಆಕರಗಳ ಒಂದು ವ್ಯವಸ್ಥಿತ ಅಧ್ಯಯನ ಆಯಾ ಸೂಕ್ಷ್ಮ ಪ್ರದೇಶದ ಕುರಿತು ಹೊಸ ಮಾಹಿತಿಯನ್ನು ನೀಡುವುದಷ್ಟೇ ಅಲ್ಲದೇ ಐತಿಹಾಸಿಕ ತಥ್ಯಾಂಶಗಳನ್ನು ಅರಿಯಲೂ ಸಹಾಯವಾಗುತ್ತವೆ. ಇವು ನಾವು ಈಗಾಗಲೇ ಕಟ್ಟಿಕೊಂಡ ಸುವರ್ಣಯುಗದ ಭ್ರಮೆಯನ್ನು ಒಡೆಯಲೂಬಹುದು. ಇಲ್ಲಿ ಕೇವಲ ಕೆಲವು ಕ್ಷೇತ್ರಗಳನ್ನು ಮಾತ್ರ ಸೂಚಿಸಲಾಗಿದೆ. ವಾಸ್ತವವಾಗಿ ಇನ್ನೂ ಅನೇಕ ಕ್ಷೇತ್ರಗಳು ಕೂಡ ಇಲ್ಲಿ ಹೆಸರಿಸದೇ ಉಳಿದಿವೆ. ಹಾಗೂ ಅವೂ ಮಹತ್ವದ್ದಾಗಿವೆ. ಒಬ್ಬ ವಿದ್ವಾಂಸನ ಪ್ರತಿಭೆಯು ಇಂಥ ಉಪೇಕ್ಷಿತ ಕ್ಷೇತ್ರಗಳನ್ನು ದುಡಿಸಿಕೊಂಡು ನಮ್ಮ ಜ್ಞಾನದ ಸೀಮೆಯನ್ನು ವಿಸ್ತರಿಸುತ್ತದೆ ಎಂದು ಹೇಳಬಹುದು.

ಅಂತ್ಯದಲ್ಲಿ ಒಂದು ಎಚ್ಚರಿಕೆಯ ಮಾತೂ ಅಗತ್ಯ. ಸೂಕ್ಷ್ಮ ಪ್ರದೇಶದ ಅಧ್ಯಯನವನ್ನು ನಡೆಸಲು ಒಬ್ಬ ವಿದ್ವಾಂಸನು ಸರಿಯಾದ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಅವನು ಈ ವೃತ್ತಿಯಲ್ಲಿ ತರಬೇತಿ ಹೊಂದಿರಬೇಕಾಗುತ್ತದೆ. ಆಗ ಮಾತ್ರ ಆತನು ತನ್ನ ವಿಶ್ಲೇಷಣೆಯಲ್ಲಿ ಪರಿಪೂರ್ಣತೆ ಸಾಧಿಬಹುದು. ಅದಿಲ್ಲದಿದ್ದರೆ ಅವನು ಸಾರ್ವಜನಿಕರಿಗೆ ಸುಳ್ಳು ಮಾಹಿತಿಗಳನ್ನು ನೀಡುತ್ತಿರುತ್ತಾನೆ. ಆತನು ನಿಷ್ಪಕ್ಷಪಾತಿಯಾಗಿ ತನ್ನ ನಿರ್ಣಯಗಳನ್ನು ಅಳೆಯಬೇಕು. ಇದು ಏಕೆ ಅತ್ಯಗತ್ಯ ಎಂದರೆ ಪ್ರಾದೇಶಿಕ, ಸ್ಥಾನಿಕ ಅಧ್ಯಯನಗಳಲ್ಲಿ ತೀರ ಸಂಕುಚಿತ ಆಸಕ್ತಿಗಳು ಹಾಗೂ ಭಾವನೆಗಳು ನೈಜ ಇತಿಹಾಸವನ್ನೂ ಕೊಲ್ಲಬಹುದು. ಅದು ಪ್ರಾದೇಶಿಕ ದುರಹಂಕಾರ ಹಾಗೂ ಉಪರಾಷ್ಟ್ರೀಯತೆಗೆ ದಾರಿ ಮಾಡಬಹುದು.

ಹಾಗಾಗಿ ಹೊಸ ಮಾಹಿತಿಯನ್ನು ಪಡೆಯುವ ಅದ್ಭುತ ಅವಕಾಶವನ್ನು ಕಲ್ಪಿಸುವ ಈ ಪ್ರಾದೇಶಿಕ ಅಧ್ಯಯನಗಳು ಬಹುಜನರ ಹಿತಾಸಕ್ತಿಗೆ ಧಕ್ಕೆ ತರೂ ಬಲ್ಲವು. ಈ ಎಚ್ಚರಿಕೆ ಹಾಗೂ ವಿಮರ್ಶಾತ್ಮಕ ಸತೋಲನೆಯಿಂದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಸಾಮಾನ್ಯ ಮಾಹಿತಿಯನ್ನು ಉಪೇಕ್ಷಿತ ಪ್ರದೇಶದ ಕುರಿತು ಪಡೆದು ಅದ್ಭುತ ನಡೆಸಿ ಇಡಬೇಕೆಂದಲ್ಲ. ಈ ಪ್ರತ್ಯೇಕ ಮಾಹಿತಿಗಳನ್ನು ಒಂದು ಸೈದ್ಧಾಂತಿಕ ಚೌಕಟ್ಟಿನಲ್ಲಿ ಇತಿಹಾಸದ ಪೂರ್ಣ ಜ್ಞಾನದಲ್ಲಿ ಅರಿಯಬೇಕು.

ಕೊನೆಯದಾಗಿ ಆಕರದ ಕುರಿತು ಒಂದು ಮಾತನ್ನು ಪ್ರಸ್ತಾಪಿಸಲೇಕು. ಪ್ರಾದೇಶಿಕ ಅಧ್ಯಯನಕ್ಕೆ ಸಂಬಂಧಿಸಿ ಮಾಹಿತಿಯನ್ನು ಸಂಗ್ರಹಿಸುವುದು ವಿದ್ವಾಂಸರಿಗೆ ಅಗಾಧವಾದ ಕೆಲಸವಾಗಿದೆ. ನಮಗೆ ಸಿಗುವ ಆಧಾರ ತೀರ ಅತ್ಯಲ್ಪವಾಗಿರಬಹುದು, ಅಪೂರ್ಣವಾಗಿರಬಹುದು, ತಪ್ಪಾಗಿರಬಹುದು ಅಥವಾ ಕೆಲವೊಮ್ಮೆ ದಾರಿ ತಪ್ಪಿಸುವಂತೆಯೂ ಇರಬಹುದು. ಸಂಶೋಧಕರು ಆಗಾಗ್ಗೆ ಇಂಥ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಎಷ್ಟು ಚೆನ್ನಾಗಿ ಹಾಗೂ ಪ್ರಾಮಾಣಿಕವಾಗಿ ಇಂಥ ತೊಡಕನ್ನು ಬಿಡಿಸಿಕೊಳ್ಳುತ್ತಾರೆ ಎಂಬುದು ಅವರವರ ಚಾರಿತ್ರ‍್ಯಕ್ಕೆ ಬಿಟ್ಟಿದ್ದು. ಈ ಸಂಬಂಧಿಸಿ ಒಂದು ಹೇಳಿಕೆಯನ್ನು ಉದ್ಧರಿಸುವ ಮೂಲಕ ಮಾತನ್ನು ಮುಗಿಸುತ್ತೇನೆ. ‘ಇತಿಹಾಸವನ್ನು ಸುಳ್ಳನ್ನಾಗಿಮಾಡುವವರಿಗೆ ದೈವೀ ಶಿಕ್ಷೆ ಕಾದಿದೆ.’

ಅನುವಾದ: ರಾಜಾರಾಮ ಹೆಗಡೆ