ಲಿಂಗರಾಜನಿಗೆ ಸೀಮೆಗಳು ಹೆಚ್ಚಾದವು ಎಂಬ ಭೀತಿ-ಅಸೂಯೆಯಿಂದ ಅವನನ್ನು ಗಾದಿಗೆ ಕೂರಿಸಿದ ಹೈದರನು ಕೊಡಗಿನ ಆಳ್ವಿಕೆಯಲ್ಲಿದ್ದ ಅಮರಸುಳ್ಯ, ಪಂಜ, ಬೆಳ್ಳಾರೆ, ಮಾಗಣೆಗಳನ್ನು, ಏಳುಸಾವಿರ ಸೀಮೆಯನ್ನು ತನ್ನ ವಶಕ್ಕೆ ತೆಗೆದುಕೊಂಡನು. ಇದೇ ಹೊತ್ತಿನಲ್ಲಿ ಅಂದರೆ ಕ್ರಿ.ಶ. ೧೭೮೦ರಲ್ಲಿ ಲಿಂಗರಾಜನು ತೀರಿಹೋಗುವನು. ಇವನು ಸಾಯು ಹೊತ್ತಿಗೆ ಇವನಿಗೆ ೧೬ ವರ್ಷದ ವೀರರಾಜೇಂದ್ರ ಹಾಗೂ ಅವನ ತಮ್ಮ ಲಿಂಗರಾಜ ಎಂಬ ಸಣ್ಣ ಮಕ್ಕಳಿದ್ದದ್ದು ಹೈದರನಿಗೆ ತನ್ನ ಆಕಾಂಕ್ಷೆಗಳನ್ನು ಪೂರ್ಣಮಾಡಿಕೊಳ್ಳಲು ಸಾಧ್ಯವಾಯಿತು. ಆ ಇಬ್ಬರು ಮಕ್ಕಳನ್ನು ಹೈದರನು ಗೊರೂರಿಗೆ ಸಾಗಿಸಿ ಸುಬ್ಬರಸಯ್ಯ ಎಂಬ ಬ್ರಾಹ್ಮಣನನ್ನು ಅಮಲ್ದಾರ್ (ಕಮಿಷನರ್)ನಾಗಿ ಕೊಡಗನ್ನು ಉಸ್ತುವಾರಿ ಮಾಡಲು ನೇಮಿಸಿದನು. ಮಡಿಕೇರಿ ಕೋಟೆಯಲ್ಲಿ ತನ್ನ ಸೈನ್ಯವನ್ನು ಇಟ್ಟನು. ಇದನ್ನು ಪ್ರತಿಭಟಿಸಿದ ಕೊಡಗರ ದಂಗೆಯನ್ನು ಸದೆಬಡಿದನು. ಆದರೆ ದಂಗೆ ಸಂಪೂರ್ಣವಾಗಿ ಶಮನವಾಗಲಿಲ್ಲ. ೧೭೮೨ರಲ್ಲಿ ಹೈದರನು ಇಂಗ್ಲಿಶ್ ಅಧಿಕಾರಿ ಕೂಟ್‌ನ ನೇತೃತ್ವದಲ್ಲಿನ ಸೈನ್ಯವನ್ನು ಎದುರಿಸಲು ಆರ್ಕಾಟಿಗೆ ಹೋಗುವ ಹೊತ್ತಿಗೆ ಕೊಡಗಿನವರು ಹೈದರನ ಸೈನಿಕರ ಠಾಣ್ಯವನ್ನು ಮುತ್ತಿ ಅವರನ್ನು ದೋಚಿದರು. ಅದೇ ವರ್ಷ ಹೈದರನು ಕಾಯಿಲೆಯಿಂದ ಆರ್ಕಾಟಿನಲ್ಲೇ ಮರಣ ಹೊಂದಿದನು. ಆರ್ಕಾಟಿನ ಯುದ್ಧವು ಮುಗಿಯದ್ದರಿಂದ ಹೈದರನ ಮಗ ಟಿಪ್ಪುವಿಗೆ ಕೂಡಲೆ ಕೊಡಗಿಗೆ ಬರಲಾಗಲಿಲ್ಲ. ಹೀಗಾಗಿ ಒಂದೆರಡು ವರ್ಷ ಟಿಪ್ಪುವು ಕೊಡಗಿನ ಮೇಲೆ ಹತೋಟಿಯನ್ನು ಕಳೆದುಕೊಳ್ಳುವನು. ೧೭೮೩ರಲ್ಲಿ ಗೊರೂರಿನಲ್ಲಿದ್ದ ರಾಜಮನೆತನದವರನ್ನು ಹಾಗೂ ರಾಜಕುಮಾರರ ಪಿರಿಯಾಪಟ್ಟಣದಲ್ಲಿಟ್ಟು ಅವರ ಖರ್ಚಿಗೆ ವರ್ಷವೊಂದಕ್ಕೆ ಮುನ್ನೂರು ಪಗೋಡ (ಸುಮಾರು ಸಾವಿರದ ಇನ್ನೂರು ರೂಪಾಯಿ)ಗಳನ್ನು ಕೊಟ್ಟನು. ರಾಜಕುಮಾರರ ತಾಯಿ ದೇವಾಂಬಿಕೆ ಸೇರಿದಂತೆ ಅನೇಕರು ಸಿಡುಬುರೋಗದಿಂದ ಅಲ್ಲೇ ಮರಣ ಹೊಂದಿದರು. ವೀರರಾಜನ ದೊಡ್ಡಪ್ಪ ಅಪ್ಪಾಜಿರಾಜನ ಪುತ್ರಿ ದೇವಮ್ಮಾಜಿ ಹಾಗೂ ತಂಗಿ ನೀಲಮ್ಮಾಜಿಯನ್ನು ಟಿಪ್ಪುವು ತನ್ನ ಜನಾನಕ್ಕೆ ಸೇರಿಸಿದನು.

೧೭೮೩ ಮತ್ತು ೧೭೮೪ರಲ್ಲಿ ಇಂಗ್ಲಿಷರು ಜನರಲ್ ಮ್ಯಾಥ್ಯೂಸ್‌ನ ನೇತೃತ್ವದಲ್ಲಿ ಹಿಡಿದುಕೊಂಡಿದ್ದ ನಗರದ ಕೋಟೆಯನ್ನು, ಮಂಗಳೂರಿನ ಕೋಟೆಯನ್ನು ಮುತ್ತಿಗೆ ಹಾಕಿ ವಶಮಾಡಿಕೊಂಡ ಟಿಪ್ಪುವಿನೊಂದಿಗೆ ೧೭೮೫ರಲ್ಲಿ ಬ್ರಿಟಿಶರು ಶಾಂತಿ ಒ‌ಪ್ಪಂದವನ್ನು ಮಾಡಿಕೊಂಡರು. ವಾಪಾಸ್ಸು ಕೊಡಗಿನ ಮಾರ್ಗವಾಗಿ ಬರುವಾಗ ಹೈದರನ ಕಾಲದಲ್ಲಿದ್ದಂತೆ ಕೊಡಗಿನ ಜನ ನಡೆದುಕೊಳ್ಳದಿದ್ದರೆ ಮತಾಂತರ ಮಾಡುವುದಾಗಿ ಕೊಡಗರನ್ನು ಬೆದರಿಸಿದನು. ಈ ಸಂದರ್ಭದಲ್ಲೇ ಮಣ್ಣಿನಲ್ಲಿ ಕಟ್ಟಲಾಗಿದ್ದ ಮಡಿಕೇರಿಯ ಕೋಟೆಯನ್ನು ಕಲ್ಲಿನಿಂದ ಕಟ್ಟಲು ಏರ್ಪಾಡು ಮಾಡಿದನು. ಕೋಟೆಯ ಯಜಮಾನಿಕೆಯನ್ನು ಜಾಫರ್ ಕುಲಿಬೇಗ್ ಎಂಬ ಸರದಾರನಿಗೆ ವಹಿಸಿ, ಮಡಿಕೇರಿಯನ್ನು ಜಾಫರ್‌ಬಾದ್ ಎಂದು ಕರೆದನು. ಹಾಗೆಯೇ ಚೆಪ್ಪುನಾಡಿನ ಅರಮನೆಗೇರಿ, ಕುಶಾಲನಗರ ಮತ್ತು ಭಾಗಮಂಡಲಗಳಲ್ಲಿ ಕೋಟೆಗಳನ್ನು ಕಟ್ಟಿ ತನ್ನ ಸೈನ್ಯದ ತುಕಡಿಗಳನ್ನಿಟ್ಟನು. ಆದರೂ ಕೊಡಗಿನ ಜನರು ೧೭೮೫ರಲ್ಲಿ ಬಂಡೆದ್ದರು. ಟಿಪ್ಪುವಿನ ಸರದಾರ ಜಮಲಾಬ್ದೀನನ ನೇತೃತ್ವದಲ್ಲಿ ಕೊಡಗಿನ ಜನರ ಬಂಡಾಯವನ್ನು ಅಡಗಿಸಲು ಟಿಪ್ಪುವು ವಿಫಲಯತ್ನ ನಡೆಸಿದನು. ಆದಕಾರಣ, ಟಿಪ್ಪುವು ತಾನೇ ಸ್ವತಃ ಸೇನೆ ತೆಗೆದುಕೊಂಡು ಕೊಡಗಿಗೆ ಪ್ರವೇಶಿಸಿದನು. ಈ ಬಾರಿ ಅವನು ಫ್ರೆಂಚ್ ಅಧಿಕಾರಿ ಲಾಲಿಯನ್ನು ಪಶ್ಚಿಮದ ಮತ್ತು ದಕ್ಷಿಣದ ಮೂಲಕ್ಕೆ ಮಲೆನಾಡುಗಳಿಗೂ, ಹುಸೇನ್ ಅಲಿಬಾದ್ ಭಕ್ಷಿಯನ್ನು ಉತ್ತರ ಕೊಡಗಿಗೂ, ಮೀರ್‌ಮಹಮ್ಮದ್‌ನನ್ನು ಭಾಗಮಂಡಲನಾಡಿಗೂ ಹಾಗೂ ಇಮಾಮ್‌ಖಾನನ್ನು ಕುಶಾಲನಗರದ ಕಡೆ ಕಳಿಸಿ ಕಾಡುಮೇಡುಗಳಲ್ಲಿದ್ದ ಜನರನ್ನು ಅಯ್ಯಂಗೇರಿ ಗ್ರಾಮದಲ್ಲಿರುವ ದೇವರುಪರಂಬಿನಲ್ಲಿ ಸೇರಿಸುವ ಏರ್ಪಾಡು ಮಾಡುತ್ತಾನೆ. ಅಲ್ಲಿ ಅವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಅವರೆಲ್ಲರನ್ನು ಸಾಮೂಹಿಕ ಮತಾಂತರ ಮಾಡಿ ಶ್ರೀರಂಗಪಟ್ಟಣಕ್ಕೆ ಎತ್ತಿಕೊಂಡು ಹೋಗುವನು. ಜಿ. ರಿಕ್ತರನು ಮತಾಂತರ ಹೊಂದಿದ ಕೊಡಗಿನ ಜನರ ಸಂಖ್ಯೆ ೮೫,೦೦೦ ಎಂದರೆ ಎಂ.ಎನ್. ಶ್ರೀನಿವಾಸ್ ಹಾಗೂ ಕೆ.ಕೆ. ಸುಬ್ಬಯ್ಯನವರು ಆ ಸಂಖ್ಯೆ ೧೨,೦೦೦ ಎಂದಿದ್ದಾರೆ ಎನ್ನುವುದು ಗಮನಾರ್ಹವಾಗಿದೆ. ನಂತರ ಕೊಡಗಿನಲ್ಲಿ ಪಾಳು ಬಿದ್ದ ವ್ಯವಸಾಯ ಕ್ಷೇತ್ರಗಳನ್ನು, ಭೂ ಹಿಡುವಳಿಗಳನ್ನು ಮೈಸೂರು ಮೂಲದ ಮುಸಲ್ಮಾನರಿಗೆ ಜಹಗೀರು ನೀಡಿದನು. ಹಾಗೆಯೇ ಕೊಡಗರ ಭೂಮಿ ವ್ಯವಸಾಯ ಮಾಡುತ್ತಿದ್ದ ಹೊಲೆಯರನ್ನು (ಜಮ್ಮದಾಳು) ಅವರಿಗೆ ಕೊಟ್ಟನು. ಕೃಷಿ ಕಾರ್ಮಿಕರ ಸಂಖ್ಯೆ ಕಡಿಮೆ ಇದ್ದ ಕಾರಣ ಬಳ್ಳಾರಿಯ ಅದವಾನಿ ಸೀಮೆಯಿಂದ ರೈತರನ್ನು ಕರೆಸಿ ಇಲ್ಲಿಯ ಭೂಮಿಯನ್ನು ಸಾಗುವಳಿ ಮಾಡಲು ವ್ಯವಸ್ಥೆ ಮಾಡಿದನು. ಈ ಬಾರಿಗೆ ಕೊಡಗಿನ ಉಸ್ತುವಾರಿಯನ್ನು ನೋಡಲು ನಾಗಪ್ಪಯ್ಯ ಎಂಬ ಬ್ರಾಹ್ಮಣನನ್ನು (ಇವನು ಹೈದರನ ಅಮಲ್ದಾರನಾಗಿದ್ದ ಸುಬ್ಬರಸಯ್ಯನ ಸೋದರ ಸಂಬಂಧಿ) ಎಂಬವನನ್ನು ನೇಮಿಸಿದನು. ಆದರೆ ನಾಗಪ್ಪಯ್ಯ ಅವನನ್ನು ವಂಚಿಸಿ ಟಿಪ್ಪುವಿನ ಸೈನಿಕರಿಂದ ತಪ್ಪಿಸಿಕೊಂಡು ಮಲಬಾರಿನ ಕೋಟೆ ರಾಜನ ಬಳಿ ಆಶ್ರಯಕ್ಕಾಗಿ ಓಡಿ ಹೋಗುವನು.

ಈ ಎಲ್ಲಾ ಘಟನೆಗಳ ನಡುವೆ ಇಸ್ಮಾಯಿಲ್‌ಖಾನ್ ಹಾಗೂ ಹೊಂಬಾಳೆ ನಾಯಕ ಎನ್ನುವ ಟಿಪ್ಪುವಿನ ಸರದಾರರ ನೆರವಿನಿಂದ ೧೭೮೮ ರಲ್ಲಿ ವೀರರಾಜ ತನ್ನ ಪತ್ನಿ, ಇಬ್ಬರು ತಮ್ಮಂದಿರಾದ ಲಿಂಗರಾಜ ಹಾಗೂ ಅಪ್ಪಾಜಿ ಇವರೊಂದಿಗೆ ಪಿರಿಯಾಪಟ್ಟಣದಿಂದ ಕೊಡಗಿಗೆ ತಪ್ಪಿಸಿಕೊಂಡು ಹೋಗುತ್ತಾನೆ (ವೀರರಾಜ ಅಧಿಕಾರವನ್ನು ಮತ್ತೆ ಗಳಿಸಿಕೊಂಡ ಮೇಲೆ ಹೊಂಬಾಳೆ ನಾಯಕನಿಗೆ ಅಳಿದು ಹೋದ ಬೋನಿಕ ಮುತ್ತಣ್ಣನ ಎರಡುಸಾವಿರ ಭಟ್ಟಿಭೂಮಿಯನ್ನು ಕಾಂತೂರು ಮೂರ್ನಾಡುವಿನಲ್ಲಿ ನೀಡಿ ಅವನನ್ನು ತನ್ನ ದಿವಾನನ್ನಾಗಿ ನೇಮಿಸಿಕೊಂಡನು. ಇಸ್ಮಾಯಿಲ್ ಖಾನನಿಗೆ ಚೆವ್ವತ್ತುನಾಡು ಕುಂದಗ್ರಾಮದಲ್ಲಿ ಸಾವಿರ ಭಟ್ಟಿ ಭೂಮಿಯನ್ನು ಜಹಗೀರಾಗಿ ನೀಡಿದನು). ಮತ್ತೆ ಅಧಿಕಾರವನ್ನು ಪಡೆಯುವ ಸಂದಭ್ದಲ್ಲಿ ವೀರರಾಜನು ತನ್ನ ಪರಿವಾರದವರ ಸುರಕ್ಷತೆಗಾಗಿ ನಾಲ್ಕು ನಾಡಿನಲ್ಲಿ “ಅರಮನೆ”ಯೊಂದನ್ನು ಕಟ್ಟುವನು. ಟಿಪ್ಪು ಮತ್ತು ವೀರರಾಜನ ನಡುವಣ ಯುದ್ಧವನ್ನು ೧೯ನೇ ಶತಮಾನದ ರಿಕ್ತರಿನಿಂದ ೨೦ನೇ ಶತಮಾನದ ಐ.ಮಾ. ಮುತ್ತಣ್ಣನವರೆಗಿನ ಹೆಚ್ಚಿನ ವಿದ್ವಾಂಸರು “ಹಿಂದು-ಮುಸ್ಲಿಂ” ಹೋರಾಟವೆಂದೇ ಕರೆದದ್ದನ್ನು ನಾವಿಲ್ಲಿ ಗಮನಿಸಬೇಕು. ಹೈದರ ಮತ್ತು ಟಿಪ್ಪುವು ಕೊಡಗಿನ ಆಡಳಿತ ನೋಡಿಕೊಳ್ಳಲು ಸುಬ್ಬರಸಯ್ಯ ಮತ್ತು ನಾಗಪ್ಪಯ್ಯ ಎಂಬವರನ್ನು ನೇಮಿಸಿದ್ದು ಅಥವಾ ವೀರರಾಜನು ಬಂದೀಖಾನೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಇಸ್ಮಾಯಿಲ್‌ಖಾನನ ಪ್ರಕರಣ ಇಲ್ಲಿ ಮುಖ್ಯವಾಗುತ್ತದೆ. (ಹೈದರ್‌ಟಿಪ್ಪವಿಗೆ ಪೂರ್ಣಯ್ಯ ಪಂಡಿತ ಎನ್ನುವ ಬ್ರಾಹ್ಮಣ ಪ್ರಧಾನಿಯಾಗಿದ್ದ ಕಥೆಯೂ ಇಲ್ಲಿ ಮುಖ್ಯವಾಗಿದೆ) ಏಕೆಂದರೆ ಹೈದರ್-ಟಿಪ್ಪು ಮುಸಲ್ಮಾನರಾದರೂ ಬ್ರಾಹ್ಮಣರನ್ನೇ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ನೆಚ್ಚಿಕೊಂಡಿರುವುದು ಕಂಡುಬರುತ್ತದೆ. ಒಂದು ವೇಳೆ ಮುಸ್ಲಿಂ-ಹಿಂದೂ ‘ದ್ವೇಷ’ ಇದ್ದದ್ದೇ ಆಗಿದಿದ್ದರೆ ಇಸ್ಮಾಯಿಲ್ ‌ಖಾನ ವೀರರಾಜನಿಗೆ ಸಹಾಯ ಮಾಡುವುದಾಗಲಿ ಅಥವಾ ವೀರರಾಜ ಅವನಿಗೆ ಜಹಗೀರು ಕೊಡುವುದಾಗಲಿ ಸಾಧ್ಯವಿರಲಿಲ್ಲ. ೧೭೮೮ರಿಂದ ೧೭೯೦ ರವರೆಗೆ ವೀರರಾಜನನ್ನು ಬಂಧಿಸುವ ಪ್ರಯತ್ನವನ್ನು ಟಿಪ್ಪುವಿನ ಸೈನಿಕರು ಮಾಡಿದರೂ ಅದರಲ್ಲಿ ಟಿಪ್ಪುವು ಸಫಲನಾಗಲಿಲ್ಲ. ಆದರೆ ವೀರರಾಜನು ೧೭೮೯ ರಲ್ಲಿ ಕುಶಾಲನಗರದ ಕೋಟೆಯನ್ನು ಹಾಗೂ ಚೆಪ್ಪುನಾಡಿನ ಕೋಟೆಯನ್ನು ವಶಪಡಿಸಿಕೊಂಡು ತನ್ನ ಬಲವರ್ಧಿಸತೊಡಗಿದನು. ೧೭೯೦ರಲ್ಲಿ ವೀರರಾಜನು ಭಾಗಮಂಡಲದ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಸಫಲನಾದನು. ವೀರರಾಜೇಂದ್ರನು ಇದೇ ಸಮಯದಲ್ಲಿ ಹೊಂಬಾಳೆ ನಾಯಕನ ಮೂಲಕ ಟಿಪ್ಪುವಿನ ಕೈಯಲ್ಲಿದ್ದ ತುಳುಸೀಮೆಯ ಭಾಗಗಳನ್ನು ವಶಪಡಿಸಿಕೊಂಡನು. ಹಾಗೆಯೇ ಮಂಡೆಪಂಡ ಅಪ್ಪಯ್ಯ ಹಾಗೂ ನಗರಹಳ್ಳಿ ಪುಟ್ಟೇಗೌಡನ ಮೂಲಕ ಮಂಜರಾಬಾದ್ ಸೀಮೆಯ ಕೆಲವು ಭಾಗಗಳನ್ನು ವಶಪಡಿಸಿಕೊಂಡನು. ಮಂಜರಾಬಾದ್ ಬಳಿಯ ಅರಕೆರೆಯಲ್ಲಿ ಒಂದು ಮಣ್ಣು ಕೋಟೆ ಕಟ್ಟಿಸಿ, ಆ ಠಾಣ್ಯದ ಸರದಾರನಾಗಿ ನಗರಹಳ್ಳಿ ಪುಟ್ಟೇಗೌಡನನ್ನು ರಾಜನು ನೇಮಿಸಿದನು. ಆ ಸೀಮೆಯ ಗಡಿಭದ್ರತೆಯನ್ನು ನೋಡಿಕೊಳ್ಳಲು ಮಂಡೇಪಂಡ ಅಪ್ಪಯ್ಯನನ್ನು ಇವನು ನೇಮಿಸಿದನು.

೧೭೯೧ರ ಏಪ್ರೀಲ್‌ನ ವೇಳೆಗೆ ಮಡಿಕೇರಿ ಕೋಟೆಯೊಂದು ಬಿಟ್ಟು ಮಿಕ್ಕ ಕೋಟೆಗಳೆಲ್ಲವೂ ವೀರರಾಜನ ವಶವಾಗಿದ್ದವು. ಮಡಿಕೇರಿಯನ್ನು ವಶಪಡಿಸಿಕೊಳ್ಳಲು ವೀರರಾಜನು ಮುತ್ತು ಭಟ್ಟ ಎಂಬವನನ್ನು ಕುದುರೆಗಳನ್ನು ಹಾಗೂ ಮತ್ತಿತರ ಸಾಮಾನುಗಳನ್ನು ಖರೀದಿಸಲು ತಲಚೇರಿಗೆ ಕಳಿಸಿದನು. ಆ ಸಂದರ್ಭದಲ್ಲಿ ತಲಚೇರಿಯ ಮುಖ್ಯಾಧಿಕಾರಿಯಾಗಿದ್ದ ರಾಬರ್ಟ್‌ಟೇಲರನು ಮುತ್ತುಭಟ್ಟನ ಮೂಲಕ ಟಿಪ್ಪುವಿನ ವೈರಿಯಾದ ವೀರರಾಜನನ್ನು ಸ್ನೇಹ ಒಪ್ಪಂದಕ್ಕೆ ಹೇಳಿಕಳಿಸುತ್ತಾನೆ. ವೀರರಾಜನಿಗೆ ಬೇಕಾದ ಸರಂಜಾಮುಗಳೆಲ್ಲವನ್ನು ಬ್ರಿಟಿಷರು ಕೊಡಲು ಕೂಡ ಒಪ್ಪಿಕೊಳ್ಳುತ್ತಾರೆ. ಇದಕ್ಕೆ ವೀರರಾಜನು ಸ್ಪಂದಿಸಿ “ಸೂರ್ಯ ಚಂದ್ರ” ಇರುವ ತನಕ ಈ ಮಿತ್ರತ್ವ ಸ್ಥಿರವಾಗಿರುತ್ತದೆ ಎಂದು ಉತ್ತರಿಸುವನು.

ಈ ಹೊತ್ತಿಗಾಗಲೆ ಟಿಪ್ಪುವಿಗೆ ತಿರುವಾಂಕೂರು ರಾಜ, ಮರಾಠ ಅರಸರು ಮತ್ತು ನಿಜಾಮ ಇವರೆಲ್ಲರೂ ಶತ್ರುಗಳಾಗಿದ್ದರು. ಬೊಂಬಾಯಿ ಸೈನ್ಯವೂ ಹಡಗಿನಲ್ಲಿ ತಲಚೇರಿಗೆ ಬಂದಿಳಿದು ಕೊಡಗನ್ನು ಹಾದು ಮೈಸೂರಿಗೆ ಹೋಗಬೇಕಾಗಿದ್ದರಿಂದ ಕೊಡಗು ಬ್ರಿಟಿಷರಿಗೆ ಅನಿವಾರ‍್ಯವಾದ ಸ್ಥಳವಾಗಿತ್ತು. ಈ ಸಂದರ್ಭದಲ್ಲೇ ವೀರರಾಜನನ್ನು ತಲಚೇರಿಗೆ ಕರೆಸಿ ರಾಬರ್ಟ್‌ಟೈಲರನು ಸನ್ಮಾನವನ್ನು ಮಾಡುವನು. ತಲಚೇರಿಯಲ್ಲಿ ಕೊಡಗು ರಾಜನಿಗೂ ಹಾಗೂ ಬ್ರಿಟಿಷರಿಗೆ ಮೈತ್ರಿ ಒಪ್ಪಂದವಾಯಿತು. ೧೭೯೦ನೇ ಇಸವಿ ಅಕ್ಟೋಬರ್ ೧೬ರಂದು ಈ ಮೈತ್ರಿಗೆ ಉಭಯ ಕಡೆಗಳಿಂದಲೂ ಸಹಿ ಹಾಕಲಾಯಿತು.

ವೀರರಾಜನ ಮುಂದೆ ಇದ್ದಂತಹ ಒಂದೇ ಒಂದು ಗುರಿ ಎಂದರೆ ಅದು ಮಡಿಕೇರಿಯನ್ನು ವಶಮಾಡಿಕೊಳ್ಳುವುದೇ ಆಗಿತ್ತು. ಈ ಕಾರಣದಿಂದ ಅವನು ಜಾಫರ್ ಕುಲಬೇಗನ ನೇತೃತ್ವದಲ್ಲಿದ್ದ ಮಡಿಕೇರಿ ಕೋಟೆಗೆ ಆಹಾರ ಧಾನ್ಯಗಳು ಹೋಗದಂತೆ ತಡೆಯುವನು. ಇಂಥಹ ಸಂದರ್ಭದಲ್ಲಿ ಟಿಪ್ಪುವು ಖಾದರ್‌ಖಾನನ ಕೈಸಗಿ ಎಂಬ ಸೈನ್ಯಾಧಿಕಾರಿ ಜೊತೆಗೆ ಸೈನ್ಯವನ್ನು, ಆಹಾರವನ್ನು ಮಡಿಕೇರಿಗೆ ಕಳಿಸುವನು. ರಸ್ತೆಯಲ್ಲೇ ವೀರರಾಜನ ಸೈನಿಕರು ಅವನನ್ನು ತಡೆಯುವ ಸಂದರ್ಭದಲ್ಲಿ ಖಾನನು ತನನ್ ೫೦೦ ಸಂಗಡಿಗರನ್ನು ಕಳೆದುಕೊಳ್ಳುವನು. ವೀರರಾಜನ ಸೈನಿಕರು ಖಾದರ್‌ಖಾನನ್ನು ಬಂಧಿಸುವರು. ಯಾವುದೇ ಕಾರಣಕ್ಕೂ ಖಾದರ್‌ಖಾನನನ್ನು ಕೊಲ್ಲಬಾರದೆಂದು ವೀರರಾಜನು ತನ್ನ ಸೈನಿಕರಿಗೆ ತಾಕೀತು ಮಾಡಿದ್ದನು. ಅದಕ್ಕೊಂದು ಬಲವಾದ ಕಾರಣವೂ ಇದ್ದಿತು. ಟಿಪ್ಪುವು ವೀರರಾಜನ ಕುಟುಂಬದವರನ್ನು ಗೊರೂರಿನಿಂದ ಪಿರಿಯಾಪಟ್ಟಣ ಕೋಟೆಗೆ ಸಾಗಿಸುವ ಸಂದರ್ಭದಲ್ಲಿ ವೀರರಾಜನ ಮೂವರು ಸಹೋದರಿಯನ್ನು ತನ್ನ ಜನಾನಕ್ಕೆ ಕಳಿಸುವನು. ಅವರಲ್ಲಿ ದೇವಮ್ಮಾಜಿಗೆ ಮೆಹ್ತಾಬ್ (ಚಂದ್ರ) ಎಂದೂ ಹಾಗೂ ನೀಲಮ್ಮಾಜಿಗೆ ಅಫ್ತಾಬ್‌(ಸೂರ್ಯ) ಎಂದೂ ನಾಮಕರಣ ಮಾಡಿದ. ಮೂರನೆಯವಳನ್ನು ತನ್ನ ಆಫ್ತ ಖಾದರ್‌ಖಾನನಿಗೆ ಬಹುಮಾನವಾಗಿ ನೀಡಿದನು. ಆದರೆ ಖಾದರ್‌ಖಾನನು ಅವಳನ್ನು ಬಹಳ ಗೌರವದಿಂದ ಕಂಡು, ಅವಳ ಜಾತಿಯವಳನ್ನೇ ಪರಿಚಾರಿಕೆಯನ್ನಾಗಿ ನೇಮಿಸಿದನು. ವೀರರಾಜನು ಪಿರಿಯಾಪಟ್ಟಣದಿಂದ ತಪ್ಪಿಸಿಕೊಂಡು ಹೋದ ಸಂದರ್ಭದಲ್ಲಿ ಖಾದರ್‌ಖಾನನು ರಹಸ್ಯವಾಗಿ ವೀರರಾಜನ ತಂಗಿಯನ್ನು ವೀರರಾಜನ ಬಳಿಗೆ ಕಳಿಸಿಕೊಡುವನು. ತನ್ನ ತಂಗಿಯ “ಮಾನ” ಉಳಿಸಿದ ಖಾದರ್‌ಖಾನನಿಗೆ ಜೀವಭಿಕ್ಷೆ ದೊರೆತದ್ದು ಹೀಗೆ. ಬರಿಗೈಯಲ್ಲಿ ವಾಪಾಸ್ಸು ಹೋದರೆ ಸುಲ್ತಾನ ತನ್ನನ್ನು ಮತ್ತು ತನ್ನ ಪರಿವಾರದವರನ್ನು ಕೊಂದುಬಿಡುವನು ಎಂದು ರಾಜನಲ್ಲಿ ವಿನಂತಿಸಿದಾಗ ಖಾದರ್‌‌ಖಾನನನ್ನು ತನ್ನ ಆಹಾರ -ಸರಂಜಾಮು ಸಮೇತ ಮಡಿಕೇರಿಗೆ ಕಳಿಸಿಕೊಡುವನು. ಆಹಾರ ಸಾಮಗ್ರಿಗಳು ಮುಗಿದ ನಂತರ ಮಡಿಕೇರಿ ಕೋಟೆಯ ಕಿಲ್ಲೇದಾರ ಜಾಫರ್‌ಕುಲಿಬೇಗನು ಸುಲ್ತಾನ ಸಾಮಾನು ಸರಂಜಾಮು, ಯುದ್ದೋಪಕರಣಗಳನ್ನು ರಾಜನಿಗೆ ಒಪ್ಪಿಸಿ ಶ್ರೀರಂಗಪಟ್ಟಣಕ್ಕೆ ವಾಪಾಸ್ಸು ಹೊಡುವರು. ಆ ಹೊತ್ತಿನಲ್ಲಿ ಮೂರು ತಿಂಗಳಿಂದ ಸಂಬಳವಿಲ್ಲದೆ ಪರದಾಡುತ್ತಿದ್ದ ಟಿಪ್ಪುವಿನ ಸೈನಿಕರಿಗೆ ಒಂದು ಸಾವಿರ ವರಹವನ್ನು ಇನಾಮ್‌ಆಗಿ ವೀರರಾಜನು ನೀಡಿದ್ದು ಗಮನಾರ್ಹವಾಗಿದೆ. ಹೀಗೆ ಅನಾಯಾಸವಾಗಿ ಮಡಿಕೇರಿ ಕೋಟೆ ವೀರರಾಜನ ಕೈವಶವಾಯಿತು. ಟಿಪ್ಪುವಿನ ಮರಣಾನಂತರ ವೀರರಾಜನು ೧೮೦೫ನೇ ಇಸವಿಯಲ್ಲಿ ಖಾದರ್‌ಖಾನನ ಕೈಸಗಿಗೆ ಅಮ್ಮತ್ತಿನಾಡು ಬಳಗುಂದ ಗ್ರಾಮದಲ್ಲಿ ೨೫೦೦ ಭಟ್ಟಿ ಭೂಮಿ (ನೂರ ಭಟ್ಟಿಯು ಮೂರು ಎಕರೆಗೆ ಸಮ)ಯನ್ನು ಹಾಗೂ ೫೦೦ ರೂಪಾಯಿ ಮಾಶಾಸನವನ್ನು ನೀಡುವನು. ರೂ. ೧೨೦ ಅನ್ನು ಕುದುರೆ ವೇತನವನ್ನು ಆತ ನೀಡುತ್ತಿದ್ದನು. ಈ ವೇತನಗಳನ್ನು ೧೯೨೧ನೇ ಇಸವಿಯವರೆಗೂ ಸಲ್ಲುತ್ತಿದ್ದವೆಂದು ಡಿ.ಎನ್. ಕೃಷ್ಣಯ್ಯನವರು ಬರೆದಿದ್ದಾರೆ. ಖಾದರ್‌ಖಾನನಿಗೆ ತೋರಿಸಿದ ಔದಾರ‍್ಯ ಪ್ರಸಂಗವು ಬ್ರಿಟಿಷರಿಗೆ ವೀರರಾಜನ ಬಗ್ಗೆ ಸಂಶಯ ಉಂಟು ಮಾಡಿತು. ಆದರೆ ವೀರರಾಜನು ಬ್ರಿಟಿಷರನ್ನು ಸಮಾಧಾನ ಪಡಿಸಿ ಅವರ ವಿಶ್ವಾಸವನ್ನು ಸಂಪಾದಿಸುವಲ್ಲಿ ಸಫಲನಾಗುವನು.

ಮಡಿಕೇರಿಯನ್ನು ವಶಪಡಿಸಿಕೊಂಡ ವೀರರಾಜನಿಗೆ ಇದ್ದ ಇನ್ನೊಂದು ಜವಾಬ್ದಾರಿ ಏನೆಂದರೆ ತನಗೆ ಸಹಾಯ ಮಾಡಿದ ಬ್ರಿಟಿಷರೊಂದಿಗೆ ಸೇರಿಕೊಂಡು ಟಿಪ್ಪುವನ್ನು ಕೊನೆಗೊಳಿಸುವುದೇ ಆಗಿತ್ತು. ಈ ಕಾರಣದಿಂದ ಬೊಂಬಾಯಿಯಿಂದ ತಲಚೇರಿ ಮೂಲಕ ಸೈನ್ಯ ತಂದ ಅಬರ್‌ಕ್ರಾಂಟಿಯು ಕೊಡಗಿನ ಮೂಲಕ ಮೈಸೂರಿಗೆ ಹಾದು ಹೋಗಲು ಹೆಗ್ಗಳದ ಘಟ್ಟವನ್ನು ಸರಿಪಡಿಸಿ, ಬ್ರಿಟಿಷರಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುವನು. ಫಿರಂಗಿ ಎಳೆಯಲು ಎತ್ತುಗಳು ಬೇಕಾದಾದ್ದರಿಂದ ಟಿಪ್ಪುವಿನ ರಾಜ್ಯದಿಂದ ಎತ್ತುಗಳನ್ನು ಲೂಟಿ ಮಾಡಿ ಬ್ರಿಟಿಷರಿಗೆ ನೀಡುವನು. ಅಂಥ ಗಟ್ಟಿಮುಟ್ಟಾದ ಸಾವಿರದ ನೂರ ಹನ್ನೊಂದು ಎತ್ತುಗಳನ್ನು ಅವನು ತಲಚೇರಿಗೆ ಕಳಿಸಿದನು. ಈ ಕಡೆಯಿಂದ ಅಬರ್‌ಕ್ರಾಂಟಿಯು ಪಿರಿಯಾಪಟ್ಟಣದ ಮೂಲಕ ಶ್ರೀರಂಗಪಟ್ಟಣದ ಮೂಲಕ ದಾಳಿ ಮಾಡಲು ಪ್ರಯತ್ನಿಸಿದರೆ ಆ ಕಡೆಯಿಂದ ಕಾರ್ನವಾಲಿಸನು ಬೆಂಗಳೂರು ಕಡೆಯಿಂದ ದಾಳಿ ಮಾಡಲು ಯತ್ನಿಸುವನು. ೧೭೯೧ ರಲ್ಲಿ ಈ ಹೊತ್ತಿನಲ್ಲಿ ಮಳೆಗಾಲ ಆರಂಭವಾದ್ದರಿಂದ ಅಬರ್‌ಕ್ರಾಂಟಿಯು ತಲಚೇರಿಯಲ್ಲಿ ತನ್ನ ಸೈನ್ಯವನ್ನು ಬಿಟ್ಟು ಬೊಂಬಾಯಿಗೆ ಹಿಂದುರಿಗಿದನು. ೧೭೯೧ರಲ್ಲಿ ಅಬರ್‌ಕ್ರಾಂಟಿಯು ಕೊಡಗಿನ ಬೇಟೋಳಿ-ಮಗ್ಗುಲ ಗ್ರಾಮಗಳು ಸಂಧಿಸುವ ಮೈದಾನದಲ್ಲಿ ಇಳಿದುಕೊಂಡ ಸಂದರ್ಭದಲ್ಲಿ ವೀರರಾಜನು ಅವನನ್ನು ಭೇಟಿ ಮಾಡಿದ್ದನು. ಆ ನೆನಪಿಗೆ ೧೭೯೨ ರಲ್ಲಿ ವೀರರಾಜನು ತನ್ನ ಹೆಸರಿನಲ್ಲಿ ಪೇಟೆಯೊಂದನ್ನು ಅಲ್ಲಿ ಕಟ್ಟಿ ಅದನ್ನು ವೀರರಾಜೇಂದ್ರಪೇಟೆ ಎಂದು ಕರೆದನು. ಈಗ ಆ ಸ್ಥಳವನ್ನು ಜನರು ವಿರಾಜಪೇಟೆ ಎಂದು ಕರೆಯುತ್ತಾರೆ. ಇದೇ ಸಂದರ್ಭದಲ್ಲಿ ಟಿಪ್ಪುವು ವೀರರಾನನ್ನು ಒಲಿಸಿಕೊಳ್ಳಲು ತಾನೇ ಸಹಿಹಾಕಿದ ಪತ್ರವೊಂದನ್ನು ಕಳಿಸಿದನು. ತನ್ನ ಮಂತ್ರಿಗಳಾದ ಮೀರ್ ಸಾದಕ ಹಾಗೂ ಪೂರ್ಣಯ್ಯನವರಿಂದ ಕೂಡ ಪತ್ರಗಳನ್ನು ಬರೆಸಿದನು. ಈ ಮಧ್ಯೆ ಖಾದರ್‌ಖಾನ್‌ಖೈಸಗೆಯನ್ನು ಟಿಪ್ಪುವು ರಾಯಭಾರ ಮಾಡಲು ಕಳಿಸಿದರೂ ವೀರರಾಜನು ಟಿಪ್ಪುವಿನ ಆಹ್ವಾನವನ್ನು ತಿರಸ್ಕರಿಸುತ್ತಾನೆ.

೧೭೯೨ ರಲ್ಲಿ ಜನರಲ್ ಅಬರ್‌ಕ್ರಾಂಟಿಯು ಶ್ರೀರಂಗಪಟ್ಟಣದ ಬಳಿ ಟಿಪ್ಪುವನ್ನು ಸೋಲಿಸಿದನು. ಶ್ರೀರಂಗಪಟ್ಟಣದ ಮೇಲೆ ಇನ್ನೇನು ಅಂತಿಮ ಆಕ್ರಮಣ ಮಾಡಬೇಕೆನ್ನುವ ವೇಳೆಗೆ ಟಿಪ್ಪುವು ಕಾರ್ನವಾಲಿಸ, ಪೇಶ್ವೆ ಹಾಗೂ ನಿಜಾಮ ಇವರ ಬಳಿ ಶಾಂತಿ ಒಪ್ಪಂದವನ್ನು ಮಾಡಿಕೊಂಡನು. ತಾನು ಗೆದ್ದುಕೊಂಡ ಪ್ರದೇಶಗಳನ್ನು, ಕೋಟ್ಯಾಂತರ ರೂಪಾಯಿಗಳನ್ನು ಯುದ್ದ ಖಚಿಗಾಗಿ ಬ್ರಿಟಿಷ್‌ಮಿತ್ರ ಕೂಟಗಳಿಗೆ ಕೊಡಬೇಕೆಂದೂ, ಸೆರೆಯಾಳಾಗಿರುವ ವಿರೋಧಿ ರಾಜರ ಸೈನಿಕರನ್ನು ಬಿಡಬೇಕೆಂದು ಹಾಗೂ ಅಂತಿಮವಾಗಿ ಈ ಶರತ್ತುಗಳನ್ನು ಪೂರೈಸುವ ಭರವಸೆಗಾಗಿ ತನ್ನಿಬ್ಬರು ಗಂಡುಮಕ್ಕಳಾದ ಮಾಯುಜುದ್ದೀನ್ ಹಾಗೂ ಅಬ್ದುಲ್ ಖಾಲಿಬ್ ಅವರನ್ನು ಒತ್ತೆಯಿಡುವ ೧೭೯೨ರ ಒಪ್ಪಂದಕ್ಕೆ ಟಿಪ್ಪುವು ಒಪ್ಪಿಕೊಳ್ಳುತ್ತಾನೆ. ಈ ಶರತ್ತಿನಲ್ಲಿ ಕೊಡಗಿನ ಪ್ರಸ್ತಾಪ ಇಲ್ಲದ್ದನ್ನು ವೀರರಾಜನು ಆಕ್ಷೇಪಿಸುತ್ತಾನೆ. ವೀರರಾಜನ ಆಕ್ಷೇಪವನ್ನು ಸಹಾನುಭೂತಿಯಿಂದ ಅಬರ್‌ಕ್ರಾಂಟಿಯು ಕಾರ್ನವಾಲಿಸನಿಗೆ ತಿಳಿಸುವ. ಆಗ ಕಾರ್ನವಾಲಿಸನು ಕೊಡಗಿನ ರಾಜನ ಜೊತೆಗೆ ಯುದ್ದ ಮಾಡದೆ ಸ್ನೇಹದಿಂದಿರಬೇಕೆಂದು ಟಿಪ್ಪುವಿಗೆ ತಾಕೀತು ಮಾಡುವನು. ಆದರೆ ಟಿಪ್ಪುವು ಇದಕ್ಕೆ ಒಪ್ಪದಿದ್ದಾಗ ಕಾರ್ನವಾಲಿಸನು ಟಿಪ್ಪುವಿನ ಕೋಟೆಯನ್ನು ಮುತ್ತಲು ಆರಂಭಿಸಿದನು. ಆಗ ಟಿಪ್ಪು ಸುಲ್ತಾನನು ಮತ್ತೊಮ್ಮೆ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಳ್ಳುತ್ತಾನೆ. ಆದರೆ ಈ ಒಪ್ಪಂದವು ಬಹಳ ಕಾಲದವರೆಗೆ ನಿಲ್ಲಲಿಲ್ಲ. ಕೊಡಗಿನ ರಾಜನು ಯಾವ ಕಾಲದಲ್ಲಾದರೂ ಬ್ರಿಟಿಷರೊಡನೆ ಸೇರಿ ನನಗೆ ಮುಳುವಾಗುವನೆಂದು ಭಾವಿಸಿದ ಟಿಪ್ಪುವು ತನ್ನ ನಾಲ್ಕು ಜನ ಭಂಟರನ್ನು ವೀರರಾಜೇಂದ್ರನನ್ನು ಕೊಲ್ಲಿಸಲು ಕಳಿಸಿದನು. ಈ ನಾಲ್ವರಲ್ಲಿ ಒಬ್ಬನಾದ ಮುಸ್ಲಿಂ ಯುವಕನು ಈ ವಿಚಾರವನ್ನು ವೀರರಾಜೇಂದ್ರನಿಗೆ ಮೊದಲೇ ತಿಳಿಸಿದ್ದರಿಂದ ಕೊಲೆಗಡುಕರನ್ನು ಮುಂಚಿತವಾಗಿಯೇ ಬಂಧಿಸಲು ಸಾಧ್ಯವಾಯಿತು. ಬದುಕುಳಿದ ವೀರರಾಜೇಂದ್ರನನ್ನು ಇಂಗ್ಲೆಂಡಿನಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಯ ಡೈರೆಕ್ಟರುಗಳು ಶ್ಲಾಘಿಸಿರುವುದು ಗಮನಾರ್ಹ. ಇದರೊಂದಿಗೆ ಟಿಪ್ಪುವಿನ ಫ್ರೆಂಚ್ ಸಂಬಂಧಗಳು ಸೇರಿದಂತೆ ಟಿಪ್ಪುವಿನ “ಬ್ರಿಟಿಷ್ ವಿರೋಧಿ” ಚಟುವಟಿಕೆಗಳ ಹಿನ್ನೆಲೆಯಲ್ಲಿ ನಾಲ್ಕನೆಯ ಮೈಸೂರು ಯುದ್ಧವು ನಡೆದು ೧೭೯೯ರಲ್ಲಿ ಟಿಪ್ಪುವು ಮರಣ ಹೊಂದುನು.

ಟಿಪ್ಪುಸುಲ್ತಾನನ ಮರಣಾನಂತರ ಕೊಡಗಿನ ರಾಜನು ತಮಿಳುನಾಡಿನಲ್ಲಿ ಮತ್ತು ಮಹಾರಾಜದುರ್ಗದಿಂದ ಹೆಗ್ಗಡದೇವನ ಕೋಟೆಯವರೆಗೆ ಹಿಡಿದುಕೊಂಡ ಸೀಮೆಗಳನ್ನು ಕಂಪನಿ ಸರಕಾರಕ್ಕೂ ಹಾಗೂ ಮೈಸೂರ್ ರಾಜನಿಗೂ ವಹಿಸಿಕೊಟ್ಟನು. ಆ ಸಂದರ್ಭದಲ್ಲಿ ತನ್ನ ರಾಜ್ಯಕ್ಕೆ ಪರಿಯಾಪಟ್ಟಣ, ಬೆಟ್ಟದಪುರ ಮತ್ತು ಅರ್ಕಲಗೋಡು ಸೀಮೆಗಳನ್ನು ಸೇರಿಸಿ ಹೊಸ ಸರಹದ್ದನ್ನು ನಿರ್ಮಿಸಿಕೊಳ್ಳಬಹುದೆಂದು ಯೋಚಿಸಿದ್ದನು. ಹಾಗೆಯೇ ತುಳುನಾಡಿನಲ್ಲಿ ಹಿಂದೆ ತನ್ನ ರಾಜ್ಯಕ್ಕೆ ಸೇರಿದ್ದ ಅಮರಸುಳ್ಯ ಮಾಗಣೆಗಳ ಜತೆಗೆ ಬೆಳ್ಳಾರೆ ಮತ್ತು ಮಂಗಳೂರು ತಾಲೂಕಿನವರೆಗಿನ ಸೀಮೆಗಳನ್ನು ಬಿಟ್ಟುಕೊಡಬಹುದೆಂದು ಭಾವಿಸಿದ್ದನು. ಆದರೆ ಅವನ ಅಪೇಕ್ಷೆಯು ಈಡೇರಲಿಲ್ಲ. ಬದಲಿಗೆ ಬೆಳ್ಳಾರೆ ಸುತ್ತಮುತ್ತಲಿರುವ ಹತ್ತಾರು ಗ್ರಾಮಗಳು ಮಾತ್ರ ವೀರರಾಜೇಂದ್ರನ ವಶಕ್ಕೆ ಬರುತ್ತವೆ.

೧೭೯೯ರಲ್ಲಿ ಟಿಪ್ಪುವಿನ ಮರಣದೊಂದಿಗೆ ತುಳು ಪ್ರದೇಶದ ಅನೇಕ ಭಾಗಗಳನ್ನು ವೀರರಾಜೇಮದ್ರನು ವಶಪಡಿಸಿಕೊಂಡನಾದರೂ ಅಲ್ಲೆಲ್ಲಾ ಅವನ ಅಧಿಪತ್ಯವೂ ಮುಂದುವರಿಯಲಿಲ್ಲ. ಆದರೆ ಬ್ರಿಟೀಷರು ವೀರರಾಜನನ್ನು ಪೂರ್ಣ ಪ್ರಮಾಣದ ರಾಜನನ್ನಾಗಿ ಅಂಗೀಕರಿಸಿ, ಅವನನ್ನು ಗೌರವಿಸಿದರು. ಟಿಪ್ಪುವಿನ ಮರಣಾನಂತರ ಅವನ ಮಂತ್ರಿ ಪೂರ್ಣಯ್ಯ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಮೈಸೂರಿನ ದಿವಾನನಾದನು. ಒಂದರ್ಥದಲ್ಲಿ ವೀರಶೈವನಾದ ವೀರರಾಜನಿಗೂ ಈ ಬ್ರಾಹ್ಮಣ ದಿವಾನನಿಗೂ ಸಂಬಂಧ ಹಿಂದಿನಿಂದಲೇ ಒಳ್ಳೆಯದಿರಲಿಲ್ಲ. ಈ ಕಾರಣಕ್ಕಾಗಿ ಟಿಪ್ಪುವಿನ ಮರಣಾನಂತರ ಕೊಡಗಿಗೆ ದಕ್ಕಬೇಕೆಂದುಕೊಂಡಿದ್ದ ಪಿರಿಯಾಪಟ್ಟಣವು ಮೈಸೂರಿನ ಪಾಲಾಯಿತು. ಇವೆಲ್ಲದರ ನಡುವೆ ವೀರರಾಜನು ೧೭೯೯ರಿಂದ ೧೮೦೯ ರವರೆಗೆ ಕೊಡಗಿನ ಆಡಳಿತಕ್ಕೆ ಒಂದು ಸ್ವರೂಪವನ್ನು ಕೊಟ್ಟನು. ೧೮೦೧ರಲ್ಲಿ ತನ್ನಮೊದಲನೆಯ ಹೆಂಡತಿಯಿಂದ ಪಡೆದ ರಾಜಮ್ಮಾಜಿಯನ್ನು ಗೋವೆಯ ಸೋದೆರಾಜ ಬಸವಲಿಂಗನಿಗೆ ಮದುವೆ ಮಾಡಿಕೊಟ್ಟನು. ೧೮೦೪ರ ವೇಳೆಯಲ್ಲಿ ಬ್ರಿಟಿಷರು ವೀರರಾಜನು ಬ್ರಿಟಿಷ್ ತಮಗೆ ಮಾಡಿದ ಸೇವೆಗೆ ಪ್ರತಿಫಲವಾಗಿ ಮಂಗಳೂರು ಪ್ರದೇಶಕ್ಕೆ (ತುಳು) ಸೇರಿದ ಕೆಲವು ಭಾಗಗಳನ್ನು ಹಿಂದಿರುಗಿಸಿದರು.

ವೀರರಾಜನಿಗೆ ಗಂಡುಮಕ್ಕಳಿರಲಿಲ್ಲ. ಅವನ ಎರಡನೆಯ ಹೆಂಡತಿಗೆ ೪ ಮಂದಿ ಹೆಣ್ಣುಮಕ್ಕಳಿದ್ದರು. ಹೀಗಾಗಿ ಉತ್ತಾರಾಧಿಕಾರಿಯ ಚಿಂತೆ ಅವನನ್ನೂ ಕಾಡತೊಡಗಿತು. ರಾಜಶೇಖರಪ್ಪ, ಶಿಶುಶೇಖರಪ್ಪ ಹಾಗೂ ಚಂದ್ರಶೇಖರಪ್ಪ ಎಂಬ ಮೂರು ಗಂಡುಮಕ್ಕಳು ವೀರರಾಜನು “ಇಟ್ಟುಕ್ಕೊಂಡವಳ” ಪುತ್ರರಾಗಿದ್ದರಿಂದ ಅವರಿಗೆ ರಾಜ್ಯಾಧಿಕಾರ ಸಿಗುವಂತಿರಲಿಲ್ಲ. ಹೀಗಾಗಿ ಆತನೊಂದು ‘ವಿಲ್’ ಬರೆಯುತ್ತಾನೆ. ಅದರ ಪ್ರಕಾರ ನಾಲ್ಕು ಮಂದಿ ಹೆಣ್ಣುಮಕ್ಕಳಲ್ಲಿ ಕಿರಿಯವಳಾದ ದೇವಮ್ಮಾಜಿಯು ತನ್ನ ಮರಣದ ನಂತರ ರಾಣಿಯಾಗಬೇಕು. ಅವಳಿಗೆ ಜನಿಸುವ ಪುತ್ರನಿಗೆ “ವೀರರಾಜ” ಎಂದು ಹೆಸರಿಡಬೇಕು. ಒಂದು ವೇಳೆ ಅವಳಿಗೆ ಗಂಡುಮಕ್ಕಳಿಲ್ಲದಿದ್ದರೆ ಉಳಿದ ಮೂವರು ಪುತ್ರಿಯರಲ್ಲಿ ಹುಟ್ಟು ‘ಗಂಡು’ ರಾಜ್ಯದ ಉತ್ತರಾಧಿಕಾರಿಯಾಗಬೇಕು ಎಂದಿತ್ತು. ಅವನ ಪ್ರೀತಿಯ ರಾಣಿ ಮಹದೇವರಾಣಿ ೧೮೦೭ರಲ್ಲಿ ನಿಧನ ಹೊಂದಿದ್ದರಿಂದಾಗಿ ಅವನು ‘ವಿಲ್’ ಬರೆದನು. ಈ ‘ವಿಲ್’ಗೆ ಬ್ರಿಟಿಷ್ ಅಧಿಕಾರಿಗಳಾದ ಮೈಸೂರಿನ ರೆಸಿಡೆಂಟನಾದ ಕೋಲ್ ಹಾಗೂ, ರಾಜನ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದ ಡಾ. ಇಂಗ್ಲೆಡ್ಯೂ ಅವರ ಸಮ್ಮತಿಯಿತ್ತು. ೧೮೦೭ರಿಂದ ೧೮೦೯ರವರೆಗೆ ಅಂದರೆ ವೀರರಾಜನು ಸಾಯುವವರೆಗೆ ತನ್ನ ಅಧಿಕಾರಕ್ಕೆ ಸಂಚಕಾರ ತರುತ್ತಾರೆ ಎಂದು ಸಂಶಯಿಸಿದ ನೂರಾರು ಜನ ಕೊಡಗರನ್ನು ಹಾಗೂ ತನ್ನ ಬಂಧುಗಳನ್ನು ಸಾಯಿಸಿಬಿಡುತ್ತಾನೆ. ತನ್ನ ತಮ್ಮ ಲಿಂಗರಾಜನನ್ನು ಆತ ನಂಬುತ್ತಿರಲಿಲ್ಲ. ಆದರೆ ಲಿಂಗರಾಜನು ವೀರರಾಜನು ಬದುಕಿರುವವರೆಗೂ ವಿಧೇಯನಾಗಿದ್ದನು. ೧೮೦೯ರಲ್ಲಿ ವೀರರಾಜನ ನಿಧನದ ನಂತರ ೧೦ ವರ್ಷದ ಅವನ ಮಗಳು ದೇವಮ್ಮಾಜಿ ಕೊಡಗಿನ ಸಿಂಹಾಸನವನ್ನೇರುವಳು. ೧೮೦೯ರಿಂದ ೧೮೧೧ ರವರೆಗೆ ಲಿಂಗರಾಜನು ಅವಳಿಗೆ ‘ಗಾರ್ಡಿಯನ್’ ಆಗಿ ರಾಜ್ಯದ ಯೋಗಕ್ಷೇಮ ನೋಡಿಕೊಂಡನು. ೧೮೧೧ರ ವೇಳೆಗೆ ಆತನು ಬ್ರಿಟಿಶ್ ಅಧಿಕಾರಿಗಳ ಮನವೊಲಿಸಿ ತಾನೇ ಪೂರ್ಣಪ್ರಮಾಣದ ರಾಜನಾಗುತ್ತಾನೆ. ಹಾಗೆಯೇ ರಾಜ್ಯದ ಆಂತರಿಕ ಆಡಳಿತಕ್ಕೆ ಹೊಸ ರೂಪರೇಖೆಯನ್ನು ನೀಡಿದನು. ೧೮೨೦ರಲ್ಲಿ ಈತನ ಮರಣದ ನಂತರ ಈತನ ಮಗ ಚಿಕ್ಕವೀರರಾಜನು ಕೊಡಗಿನ ರಾಜ್ಯದ ಉತ್ತಾರಾಧಿಕಾರಿಯಾಗುತ್ತಾನೆ. ಆದರೆ, ಇವನಿಗೆ ದೇವಮ್ಮಾಜಿ ಹಾಗೂ ಅವಳ ಗಂಡ ಚೆನ್ನ ಬಸವನ ಮೇಲೆ ಅತೀವ ಸಂಶಯವಿತ್ತು. ಏಕೆಂದರೆ ಎಂದಾದರೂ ಅವರು ತನ್ನ ರಾಜ್ಯಕ್ಕೆ ವಾರಸುದಾರರಾದರೆ ಎನ್ನುವ ಚಿಂತೆ ಅವನನ್ನು ಬಾಧಿಸತೊಡಗಿತ್ತು. ಚೆನ್ನಬಸವ ಮೂಲತಃ ಸ್ಥಳೀಯ ಕೊಡಗನಾಗಿದ್ದ. ದೇವಮ್ಮಾಜಿಯನ್ನು ಮದುವೆಯಾದ ಮೇಲೆ ಆತ ಲಿಂಗಾಯಿತನಾದ. ಕೊನೆಗೊಂದು ದಿನ ಇವರಿಬ್ಬರನ್ನು ನಾಶಮಾಡಬೇಕೆಂದು ತೀರ್ಮಾನ ತೆಗೆದುಕೊಂಡ ಚಿಕ್ಕವೀರರಾಜನ ವಿಚಾರವು ಈ ದಂಪತಿಗಳಿಗೆ ತಿಳಿಯುತ್ತದೆ. ಹೀಗಾಗಿ ೧೮೩೩ರ ವೇಳೆಗೆ ಈ ದಂಪತಿಗಳು ಕೊಡಗಿನಿಂದ ತಪ್ಪಿಸಿಕೊಂಡು ಬ್ರಿಟಿಷರ ಆಶ್ರಯ ಪಡೆಯುತ್ತಾರೆ. ಬ್ರಿಟಿಷರೂ ಈ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡರು. ಹಳೇ ಓರಿಯಂಟಲಿಸ್ಟರು (Orientalist) ಹಾಗೂ ಸಾಮ್ರಾಜ್ಯಶಹಿ ಚರಿತ್ರೆಕಾರರು ವರ್ಣಿಸಿದ ಹಾಗೆ “ಲಿಂಗರಾಜನು ಕ್ರೂರಿಯಾಗಿದ್ದನು; ಕಾಮುಕನಾಗಿದ್ದನು; ಹೆಂಗಸರ ಮೊಲೆ ಹಾಲನ್ನು ಕುಡಿಯುತ್ತಿದ್ದನು; ವ್ಯಭಿಚಾರಿಯಾಗಿದ್ದನು”. ಎನ್ನುವ ಕಾರಣಗಳಿಂದಾಗಿ ಕೊಡಗನ್ನು “ಕತ್ತಲಿನಿಂದ” ಪಾರು ಮಾಡಲು ಬ್ರಿಟಿಷರು ತೀರ್ಮಾನಿಸಿದರು.

೧೮೩೪ರ ಏಪ್ರಿಲ್‌೪ರಂದು ಕೊಡಗನ್ನು ಮುತ್ತಿಗೆ ಹಾಕಲು ಬ್ರಿಗೇಡಿಯರ್ ಲಿಂಡ್ಸೆ ಹಾಗೂ ಅವನ ಸಹಾಯಕ ಕರ್ನಲ್ ಫ್ರೇಸರನ ನೇತೃತ್ವದಲ್ಲಿ ಬ್ರಿಟಿಶರ ಸೈನ್ಯ ಹೊರಡುತ್ತದೆ. ಕೊಡಗಿನ ಸೈನ್ಯವು ಯಾವುದೇ ಹೋರಾಟವಿಲ್ಲದೆ ಶರಣಾಗತವಾಯಿತು. ರಾಜನ ಸುತ್ತಮುತ್ತಲಿದ್ದ ೮-೧೦ ಮಂದಿ ಸತ್ತದ್ದು ಬಿಟ್ಟರೆ ಇದೊಂದು ರಕ್ತರಹಿತ ಬದಲಾವಣೆಯೇ ಸರಿ. ಏಪ್ರಿಲ್ ೫ರಂದು ರಾಜನ ದಿವಾನನಾದ ಅಪ್ಪಾರಂಡ ಬೋಪುವು ತನ್ನ ೪೦೦ ಜನ ಕೊಡಗಿನ ಸೈನಿಕರನ್ನು ಕರೆದುಕೊಂಡು ಕರ್ನಲ್ ಫ್ರೇಸರನಿಗೆ ಶರಣಾಗುವನು. ಹಾಗೆಯೇ ಬ್ರಿಟಿಶ್ ಸೈನ್ಯವನ್ನು ರಾಜಧಾನಿ ಮಡಿಕೇರಿಗೆ ಕರೆದುಕೊಂಡು ಬರುವನು. ಬ್ರಿಟಿಶರು ವೀರರಾಜನನ್ನು ಅವನ ಪತ್ನಿಯರು, ದಾಸಿರಯರೊಂದಿಗೆ ಕಾಶಿಗೆ ಗಡೀಪಾರು ಮಾಡುವರು. ಬ್ರಿಟಿಶರ ಅರಸೊತ್ತಿಗೆ ಶುರುವಾದದ್ದೇ ಹೀಗೆ. ಕರ್ನಲ್ ಫ್ರೇಸರನ ಫರ್ಮಾನಿನೊಂದಿಗೆ ಬ್ರಿಟಿಷರ ಆಡಳಿತ ಅಧಿಕೃತವಾಗಿ ಆರಂಭವಾಗುತ್ತದೆ. ಕೊಡಗಿನ ಮೊದಲ ಬ್ರಿಟಿಷ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಫ್ರೇಸರನ ಫರ್ಮಾನು ೧೮೩೪ ರ ಮೇ ೭ ರಂದು ಘೋಷಿಸಲ್ಪಟ್ಟಿತು. ಅದರ ಪ್ರಕಾರ “ಕೊಡಗಿನ ಮೂಲನಿವಾಸಿಗಳ ಸರ್ವಸಮ್ಮತವಾದ ತೀರ್ಮಾನದಂತೆ ಕೊಡಗನ್ನು ರಕ್ಷಿಸಲೋಸುಗ ಬ್ರಿಟಿಶರು ಕೊಡಗನ್ನು ತಮ್ಮ ಕಕ್ಷೆಗೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ರಾಜ್ಯವಾಳುತ್ತಿದ್ದ ವೀರರಾಜೇಂದ್ರ ಒಡೆಯನ ಅಧಿಕಾರವು ಗೌರವಾನ್ವಿತ ಕಂಪನಿಯ ಕೈಗೆ ಹಸ್ತಾಂತರವಾಗಿದೆ. ಯಾವುದೇ ಕಾರಣಕ್ಕೂ ಮುಂದೆ ಎಂದೆಂದಿಗೂ ಸ್ಥಳೀಯ ಆಡಳಿತಕ್ಕೆ ಅಧಿಕಾರವನ್ನು ಹಸ್ತಾಂತರಿಸುವುದಿಲ್ಲ ಎಂಬುದನ್ನು ಮೂಲನಿವಾಸಿಗಳಿಗೆ ಈ ಮೂಲಕ ಮನದಷ್ಟು ಮಾಡುತ್ತಿದ್ದೇವೆ. ಹಾಗೆಯೆ ಇಲ್ಲಿನ ಜನ ದೈನಂದಿನ (ಸಿವಿಲ್) ಹಾಗೂ ಧಾರ್ಮಿಕ ಆಚರಣೆಗಳನ್ನು ಗೌರವಿಸಲಾಗುತ್ತದೆ. ಇದರೊಂದಿಗೆ ಇಲ್ಲಿನ ಜನರ ರಕ್ಷಣೆ, ಹಿತರಕ್ಷಣೆ ಮತ್ತು ಸಂತೋಷವನ್ನು ಕಾಪಾಡಲು ಬ್ರಿಟಿಶ್ ಸರಕಾರ ಕಟಿಬದ್ಧವಾಗಿದೆ”. ಇದರೊಂದಿಗೆ “ಗೋಹತ್ಯೆ”ಯನ್ನು “ನಿಷೇಧ” ಮಾಡಲು ಬ್ರಿಟಿಶರು ಒಪ್ಪಿಕೊಳ್ಳುತ್ತಾರೆ. ಇದರಿಂದಾಗಿ ಸ್ಥಳೀಯರಿಗೆ ಒಂದು ರೀತಿಯ “ಸ್ವಾತಂತ್ರ‍್ಯ” ಹಾಗೂ ಮನ್ನಣೆ ಸಿಕ್ಕಿತು ಎಂದು ಬಿ.ಡಿ. ಗಣಪತಿಯವರಂಥ ಇಪ್ಪತ್ತನೆ ಶತಮಾನದ ಅನೇಕ ಲೇಖಕರು ಬರೆದಿದ್ದಾರೆ. ಈ ಸಂದರ್ಭದಲ್ಲಿ, ಕೊಡಗಿನಲ್ಲಿ ಆ ಕಾಲದಲ್ಲಿ ನೆಲೆಸಿದ್ದ ಮೋಗ್ಲಿಂಗ್ ಎಂಬ ವಿದ್ವಾಂಸ ಹಾಗೂ ಪಾದ್ರಿಯು ೧೮೫೬ನೆಯ ಇಸವಯಲ್ಲಿ ಕಲ್ಕತ್ತಾ ರಿವ್ಯೂ ಎಂಬ ಜರ್ನಲಿನಲ್ಲಿ ಕೊಡಗಿನ ಚರಿತ್ರೆಗೆ ಸಂಬಂಧಿಸಿದಂತೆ ಕೆಲವು ಉಲ್ಲೇಖಗಳನ್ನು ಮಾಡಿದ್ದಾನೆ. ಅವುಗಳಲ್ಲೊಂದು “ಗೋಹತ್ಯೆ ನಿಷೇಧ” ಕುರಿತದ್ದಾಗಿದೆ. ಆ ಬರಹವು ಗೋಹತ್ಯೆ ನಿಷೇಧವು ಆ ಹೊತ್ತಿನಲ್ಲಿ ಕೇವಲ ಮಡಿಕೇರಿಯಲ್ಲಿ ಚಾಲ್ತಿಯಲ್ಲಿತ್ತು ಎಂದು ತಿಳಿಸುತ್ತದೆ. ಗೋಮಾಂಸಕ್ಕಾಗಿ ಯಾವಾಗಲೂ ಹಾತೊರೆಯುತ್ತಿದ್ದ ಯೂರೋಪಿಯನ್ ಸೈನಿಕರ ಹೊಟ್ಟೆಗೆ ಗೋಮಾಂಸವನ್ನು ಮಡಿಕೇರಿಯಿಂದ ಇಪ್ಪತ್ತು ಮೈಲು ದೂರವಿದ್ದ ಫ್ರೇಸರ್‌ಪೇಟೆಯಿಂದ ಪೂರೈಸಲಾಗುತ್ತಿತ್ತು ಎಂದು ಮೋಗ್ಲಿಂಗ್ ಬರೆದಿದ್ದಾರೆ. ಹೀಗಾಗಿ “ಗೋಹತ್ಯೆ ನಿಷೇಧ”ವು ಅನುಷ್ಠಾನಗೊಳ್ಳಲಿಲ್ಲ. ಜನರು ಕೂಡ ಇದನ್ನು ಕಂಡು ಕಾಣದಂತೆ ಒಪ್ಪಿಕೊಂಡರು. ಒಟ್ಟಿನಲ್ಲಿ ಹಾಲೇರಿ ಅರಸರ ಆಳ್ವಿಕೆ ಒಂದು ತೆರೆ ಬಿದ್ದಿತು. ೧೮೩೪ರ ನಂತರ ಕೊಡಗರ ಹಾಗೂ ಬ್ರಿಟಿಷರ ಸಾರಥ್ಯದಲ್ಲಿ ರಾಜ್ಯಾಧಿಕಾರವು ಮುಂದುವರಿಯಿತು. ಕೊಡಗು ರಾಜ್ಯವು ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯಲ್ಲಿ ಹೊಂದಿದ್ದ ಚೀಫ್ ಕಮಿಷನರ್‌ನ ನೇರ ಆಳ್ವಿಕೆಯಲ್ಲಿತ್ತು. ಅವನ ಆಜ್ಞಾವರ್ತಿಯಾಗಿ ಮಡಿಕೇರಿಯಲ್ಲಿ ನೆಲೆಸಿದ್ದ ಯುರೋಪಿಯನ್‌ಕಮಿಷನರ್‌ಇರುತ್ತಿದ್ದ. ಇವನಿಗೆ ಇಬ್ಬರು ಅಸಿಸ್ಟೆಂಟ್ ಕಮಿಷನರ್‌ಗಳಿದ್ದರು. ಇವರಿಬ್ಬರೂ ಕೊಡಗಿನ ಆಂತರಿಕ ವ್ಯವಹಾರವನ್ನು ನೋಡಿಕೊಳ್ಳಲು ಸಹಕಾರಿಯಾಗಿದ್ದರು. ಇವರನ್ನು ಮೊದಲನೆಯ ಹಾಗೂ ಎರಡನೆಯ ಅಸಿಸ್ಟೆಂಟ್ ಕಮಿಷನರ್‌ಗಳೆಂದು ಕರೆಯಲಾಗುತ್ತಿತ್ತು. ಮೊದಲನೆಯ ಅಸಿಸ್ಟೆಂಟ್ ಕಮಿಷನರಾಗಿ ಯಾವಾಗಲೂ ಒಬ್ಬ ಯುರೋಪಿಯನ್ ಇರುತ್ತಿದ್ದನು. ಆದರೆ ಎರಡನೆಯ ಅಸಿಸ್ಟೆಂಟ್ ಕಮಿಷರನ್ನಾಗಿ ಒಬ್ಬ “ಕೊಡವ”ನೇ ಆಗಿರಬೇಕೆಂಬ ಒಪ್ಪಂದವು ಭಾರತವು ಸ್ವಾತಂತ್ರ‍್ಯ ವಾಗುವವರೆಗೂ ಚಾಲ್ತಿಯಲ್ಲಿತ್ತು.

* * *

ವೀರರಾಜನ ಗಡೀಪಾರಿನ ನಂತರ ಕೊಡಗಿನ ಗದ್ದುಗೆಯ ಬಗ್ಗೆ ಆಸೆ ಇರಿಸಿಕೊಂಡವರಲ್ಲಿ ಪ್ರಮುಖನಾದವನು ಚೆನ್ನಬಸವ. ರಾಜನ ಗಡೀಪಾರು ಆಗುವವರೆಗೆ ತನ್ನ ಪತ್ನಿಯೊಂದಿಗೆ ಬೆಂಗಳೂರಿನಲ್ಲಿದ್ದ ಚೆನ್ನಬಸವನು ಅಪ್ಪಂಗಳದಲ್ಲಿದ್ದ ತನ್ನ ‘ಅರಮನೆ’ ವಾಪಾಸ್ಸಾಗುವನು. ಅರಸನ ವಂಶಜರಲ್ಲಿ ಉಳಿದುಕೊಂಡವರಲ್ಲಿ ತಾನೊಬ್ಬನೇ ಎಂದುಕೊಂಡ ಅವನು ತನ್ನನ್ನು ‘ಅರಸು’ ಎಂದೇ ಕರೆದುಕೊಳ್ಳಲಾರಂಭಿಸಿದನು. ಅಪ್ಪಂಗಳದಲ್ಲಿರುವ ತನ್ನ ಅರಮನೆ ‘ಕೊಟ್ಟಿಗೆ’ಯ ರೀತಿಯಲ್ಲಿರುವುದರಿಂದ ತನಗೆ ಮಡಿಕೇರಿ, ಹಾಲೇರಿ ಅಥವಾ ನಾಲ್ಕು ನಾಡಿನಲ್ಲಿರುವ ಅರಮನೆಗಳಲ್ಲೊಂದನ್ನು ನೀಡಬೇಕೆಂದು ಬ್ರಿಟಿಷರನ್ನು ಬೇಡಿಕೊಂಡನು. ಹಾಗೆಯೇ ಈ ಹಿನ್ನಲೆಯಲ್ಲಿ ತನ್ನನ್ನು ರಾಜನನ್ನಾಗಿ ಮುಂದುವರಿಸಬೇಕೆಂದೂ ಬ್ರಿಟಿಷರನ್ನು ಗೋಗರೆಯತೊಡಗಿದನು. ಆದರೆ ಬ್ರಿಟಿಷರ ಹಿಂದೆ ನಿಂತ ಕೊಡವ ಮುಖಂಡರು ಚೆನ್ನಬಸವನಿಗೇನಾದರೂ ಈ ರೀತಿಯ ಸ್ಥಾನಮಾನ ನೀಡಿದರೆ ರಾಜ್ಯದಲ್ಲಿ ಮತ್ತೆ “ಕ್ಷೋಭೆ” ಉಂಟಾಗುವುದು ಖಂಡಿತಾ ಎಂದು ಬ್ರಿಟಿಷರ ಮನ ಒಲಿಸುವಲ್ಲಿ ಸಫಲರಾದರು.

ಚಿಕ್ಕವೀರರಾಜನಿಗೆ ಬಹಳ ಆಪ್ತನಾಗಿದ್ದ “ಕುಂಟ” ಬಸವ ಎನ್ನುವ ದಿವಾನ ಕೊಡವರ ನಡುವೆ ಅಪ್ರಿಯನಾಗಿದ್ದನು. ಇವನು ಕೆಳಜಾತಿಯಿಂದ ಬಂದ ನಾಯಿ ನೋಡುವ ಹುಡುಗನಾಗಿದ್ದವನು. ನಂತರ ಬೇರೆ ಬೇರೆ ಹಂತಗಳಲ್ಲಿ ಮೇಲೇರಿ, ಕೊನೆಗೆ ರಾಜನಿಗೆ ಆಪ್ತನಾಗಿ ರಾಜ್ಯಾಧಿಕಾರದ ಪ್ರಮುಖ ಬಿಂದುವಾಗಿದ್ದವನು. ಈ ಹಿನ್ನೆಲೆಯಿಂದಾಗಿ ಪ್ರಬಲ ಜಾತಿಗಳಿಗೆ ಸೇರಿದ ದಿವಾನರಾದ ಬೋಪು ಹಾಗೂ ಪೊನ್ನಪ್ಪ ಅವರುಗಳಿಗೆ ಬಸವನನ್ನು ಕಂಡರೆ ಅಷ್ಟಕಷ್ಟೆ ಇತ್ತು. ಬ್ರಿಟಿಷರು ಕೊಡಗನ್ನು ಆಕ್ರಮಣ ಮಾಡುವ ಹೊತ್ತಿಗೆ ಇವನ ಕೊಲೆಯಾಗುತ್ತದೆ. ಚಿಕ್ಕವೀರರಾಜನೇ ಅವನನ್ನು ಕೊಲೆಮಾಡಿದನೆಂಬ ಪ್ರತೀತಿ ಕೂಡ ಇದೆ. ಬ್ರಿಟಿಷರು ಬಂದ ಮೇಲೆ ಬೋಪು ಮತ್ತು ಪೊನ್ನಪ್ಪ ಇವರುಗಳು ದಿವಾನರಾಗಿಯೆ ಮುಂದುವರಿದು, ಸಕಲ ಅಧಿಕಾರಗಳನ್ನು ಹಾಗೂ ಆಸ್ತಿಪಾಸ್ತಿಗಳನ್ನು ಗಳಿಸಿಕೊಳ್ಳುತ್ತಾರೆ. ಬದುಕಿ ಉಳಿದಿದ್ದ ಬ್ರಾಹ್ಮಣ ಸಮುದಾಯದ ಲಕ್ಷ್ಮೀನಾರಾಯಣ ಎನ್ನುವ ದಿವಾನನಿಗೆ ಈ ಸಂದರ್ಭದಲ್ಲಿ ಯಾವ ಅಧಿಕಾರವೂ ಸಿಗುವುದಿಲ್ಲ. ಹೀಗಾಗಿ ಅವನು ಸುಳ್ಯ-ಪುತ್ತೂರಿನ “ಗೌಡರನ್ನು ಬ್ರಿಟಿಶರ ವಿರುದ್ಧ ಎತ್ತಿ ಕಟ್ಟಿದ” ಎಂದು ರಿಕ್ತರ್ ಬರೆದಿದ್ದಾರೆ.

ವಾಸ್ತವವಾಗಿ, ಬ್ರಿಟಿಶರು ಕೊಡಗನ್ನು ಆಕ್ರಮಿಸಿಕೊಂಡ ಮೇಲೆ ಕೊಡಗಿಗೆ ಸೇರಿದ್ದ ಅಮರಸುಳ್ಯ ಪುತ್ತೂರು ಮತ್ತು ಬಂಟ್ವಾಳವನ್ನು ಮಂಗಳೂರಿನ ಬ್ರಿಟಿಶರ ವಶಕ್ಕೆ ಒಪ್ಪಿಸುವರು. ಸಮಸ್ಯೆ ಆರಂಭವಾದದ್ದೇ ಇಲ್ಲಿಂದ ಎನ್ನುವುದು ನಾನು ಹೇಳಲಿರುವ ಅಮರ ಸುಳ್ಯ “ದಂಗೆ”ಗೆ ಪೂರಕವಾದ ಕಾರಣವಾಗಿದೆ. ಕೊಡಗಿನ ಆಡಳಿತದಲ್ಲಿ ಈ ಭಾಗದ ರೈತರು ಎಲ್ಲರಂತೆ ತಮ್ಮಲ್ಲಿರುವ ವಸ್ತು-ಆಹಾರ ಧಾನ್ಯಗಳನ್ನು ಕಂದಾಯವೆಂದು ಪಾವತಿಸುತ್ತಿದ್ದರು. ಆದರೆ ಮಂಗಳೂರಿನ ಆಡಳಿತವು ಅವರಿಂದ “ಹಣ”ದ ರೂಪದಲ್ಲಿ “ಕಂದಾಯ” ಪಡೆಯುತ್ತಿತ್ತು. ಅದು ಕೂಡ ಬಹಳ ದೊಡ್ಡ ಮೊತ್ತವಾಗಿತ್ತು. ಇದರ ವಿರುದ್ಧ ಅನೇಕ ಬಾರಿ ಅಧಿಕಾರಿಗಳಿಗೆ ಪುಕಾರು ನೀಡಿದರೂ, ಸರಕಾರ ನಿರ್ಲಿಪ್ತವಾಗಿತ್ತು. ಕೊನೆಗೊಂದು ದಿನ ಇಲ್ಲಿನ ರೈತರು ದಂಗೆಯೆದ್ದರು. ದಂಗೆಯ ಪರಿಣಾಮವಾಗಿ, ೧೮೩೭ರಲ್ಲಿ ಸುಮಾರು ಒಂದು ವಾರಗಳ ಕಾಲ ಮಂಗಳೂರು ನಗರ ರೈತರ ಕೈಯಲ್ಲಿತ್ತು. ಬ್ರಿಟಿಷ್ ಬರಹಗಾರರು ಇವೆಲ್ಲಾ “ಗೌಡರ ದಂಗೆ” ಎಂದು ಬಣ್ಣಿಸಿದ್ದುಂಟು. ಬ್ರಿಟಿಷ್ ಅರಸರು ಈ ಪ್ರತಿಭಟನೆಯನ್ನು ಕೊಡವ ಮತ್ತು ಗೌಡರ ನಡುವಿನ ಹೋರಾಟ ಎನ್ನುವ ರೀತಿಯಲ್ಲಿ ಬಿಂಬಿಸಿ, ತಮ್ಮ ರಾಜಕೀಯ ಚದುರಂಗಾಟದಲ್ಲಿ ಸಫಲರಾದರು. ಈ ಪ್ರತಿಭಟನೆಯನ್ನು ದಿವಾನ್ ಬೋಪು ಹಾಗೂ ಕೊಡಗಿನ ಜಮ್ಮ ರೈತರು ಬ್ರಿಟಿಷರ ಸಹಾಯದಿಂದ ಹತ್ತಿಕ್ಕಿದರು. ಇದನ್ನು ಹತ್ತಿಕ್ಕಲು ಇವರಿಗೆ ಇನ್ನೊಂದು ಮುಖ್ಯವಾದ ಕಾರಣವೂ ಇತ್ತು. ಅದೇನೆಂದರೆ, ಇದು ವಾಸ್ತವವಾಗಿ ಸುಳ್ಯ-ಪುತ್ತೂರಿನ ರೈತರ ಹೋರಾಟವಾದರೂ, ಈ ಹೋರಾಟಕ್ಕೆ ಹಾಲೇರಿ ಅರಸರ ವೀರಶೈವ ಲಿಂಗಾಯಿತ ಸಂಬಂಧಿಗಳ ಬೆಂಬಲವಿತ್ತು. ಒಂದು ವೇಳೆ ಮಂಗಳೂರನ್ನು ಗೆದ್ದ ಹಾಗೆ ಇವರು ಕೊಡಗನ್ನು ಗೆದ್ದು ಬಿಟ್ಟರೆ ತಮ್ಮ ಸ್ಥಾನಕ್ಕೆ ಸಂಚಕಾರ ಬರಬಹುದೆಂಬ ಅವ್ಯಕ್ತ ಭಯ ಈ ದಿವಾನರಿಗೆ ಇತ್ತು. ಹೀಗಾಗಿ ಇವರು ಜೀವವಿಟ್ಟು ಈ ಹೋರಾಟವನ್ನು ಹತ್ತಿಕ್ಕಿದರು ಎಂಬ ರೀತಿಯ ವಿವರಣೆಯನ್ನು ನಾವು ಮೋಗ್ಲಿಂಗ್‌ನ ಬರವಣಿಗೆಯಲ್ಲಿ ನೋಡಬಹುದು. ಪರಿಣಾಮವಾಗಿ, ಹೋರಾಟದ ನೇಪತ್ಯದಲ್ಲಿದ್ದ ಚಿಕ್ಕವೀರರಾಜನ ಸಂಬಂಧಿಕರಾದ ಸ್ವಾಮಿ ಅಪರಂಪಾರ, ಕಲ್ಯಾಣ ಬಸವ ಮತ್ತು ಪುಟ್ಟಬಸವ ಮುಂತಾದ ಹಾಲೇರಿ ವಂಶಜರು ಕೊಡಗನ್ನು ಮತ್ತೆ ವಶಪಡಿಸಿಕೊಳ್ಳುವಲ್ಲಿ ವಿಫಲರಾದರು. “ದಿವಾನ್”ನಾಗಿದ್ದ ಲಕ್ಷ್ಮೀನಾರಾಯಣನನ್ನೂ ಬೆಂಗಳೂರಿನ ಸೆರೆಮನೆಗೆ ಕಳಿಸಲಾಯಿತು. ಕೆದಂಬಾಡಿ ರಾಮೇಗೌಡ, ಚೆಟ್ಟಿಕುಡಿಯ, ಗುಡ್ಡೇಮನೆ ಅಪ್ಪಯ್ಯ ಮುಂತಾದ ಗೌಡ ಹಾಗೂ ಕುಡಿಯ ಸಮುದಾಯಗಳ ರೈತ ಮುಖಂಡರು ಭಿನ್ನಭಿನ್ನ ಜಾತಿಗಳಿಗೆ ಸೇರಿದ ರೈತರು ಬ್ರಿಟಿಷರಿಂದ ಹತರಾಗುತ್ತಾರೆ. ಹಾಲೇರಿ ಅರಸರ ಆಳ್ವಿಕೆಯೂ ಈ ಮೂಲಕ ಕೊನೆಗೊಳ್ಳುತ್ತದೆ.