ಕ್ರಿಸ್ತಶಕ ೬ನೇ ಶತಮಾನದಲ್ಲಿ ಕದಂಬರು ಚಾಲುಕ್ಯರಿಗೆ ಸೋತು ಅವರ ಮಾಂಡಳಿಕರಾದರು. ಆಗ ಕದಂಬರ ರಾಜ್ಯವು ಒಡೆದು ಅವರ ವಂಶದವರಿಂದಲೇ ಆಳ್ವಿಕೆಗೊಳಗಾಗಿದ್ದ ಪ್ರದೇಶಗಳು ಚಿಕ್ಕ – ಚಿಕ್ಕ ರಾಜ್ಯಗಳಾಗಿ ಅಸ್ತಿತ್ವಕ್ಕೆ ಬಂದವು ಅಥವಾ ಕಾಲಗತಿಯಲ್ಲಿ ಬನವಾಸಿಯ ಮೂಲ ಕದಂಬರು ಹಲವಾರು ಟಿಸಿಲುಗಳಾಗಿ ಬೇರೆ-ಬೇರೆ ಪ್ರದೇಶಗಳಿಗೆ ಹೋಗಿ ನೆಲಸಿ ಅಲ್ಲಿಯೆ ಆಳ್ವಿಕೆ ಮಾಡತೊಡಗಿರಬೇಕು. ಹೀಗೆ ಆಳ್ವಿಕೆ ಮಾಡಿದವರಲ್ಲಿ ಸಕಲೇಶಪುರ ಮತ್ತು ಸೋಮವಾರ ಪೇಟೆ (ಕೊಡಗು) ಪ್ರದೇಶಗಳಲ್ಲಿ ನೆಲೆಸಿ ಆಳಿದ ಸಕಲೇಶಪುರದವರೆಂದು ಹೆಸರಿಸಲ್ಪಡಬಹುದಾದ ಕದಂಬರೂ ಸಹ ಒಬ್ಬರು. ಇವರನ್ನು ಮಂಜ್ರಾಬಾದ್ ಕದಂಬರು ಅಥವಾ ಬೇಲೂರು ಕದಂಬರೆಂದೂ ಕರೆಯುತ್ತಾರೆ. ಈ ಹಿಂದೆ ಸಕಲೇಶಪುರಕ್ಕೆ ಸಮೀಪದಲ್ಲೇ ಇರುವ ಟಿಪ್ಪುವಿನದೆಂದು ಹೇಳಲಾದ ಮಂಜ್ರಾಬಾದ್ ಕೋಟೆಯಿಂದಾಗಿ ಅದನ್ನು ಮಂಜ್ರಾಬಾದ್ ತಾಲ್ಲೂಕೆಂದು ಕರೆದಿದ್ದರು. ಆದ್ದರಿಂದಲೇ ಈ ಪರಿಸರದಲ್ಲಿ ಆಳ್ವಿಕೆ ಮಾಡಿದ ಕದಂಬರನ್ನು ಮಂಜ್ರಾಬಾದ್ ಕದಂಬರೆಂದು ಕರೆಯಲಾಗುತ್ತದೆ. ಜಾರ್ಜ್ ಮೊರೆಸ್ ಅವರು ಇವರನ್ನು ಬೇಲೂರು ಕದಂಬರೆಂದು ಕರೆಯಲು ಕಾರಣ ಈ ಅರಸರು ಪಶ್ಚಿಮ ದಿಕ್ಕಿನಲ್ಲಿ ಇರುವ ಇಂದಿನ ಹಳ್ಳಿ ಹಾಲೆಬೇಲೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದುದೇ ಆಗಿದೆ.[1](ನಕಾಶೆ ನೋಡಿ)

ದೇವ ದೇವ ಮಹಾರಾಜ (ಕದಂಬರಸ)

ಮೊದಲ ಅರಸನನ್ನು ದೇವ ದೇವ ಮಹಾರಾಜನೆಂದು ಗುರುತಿಸಲಾಗಿದೆ. ಈತನು ೧೧ನೇ ಶತಮಾನದ ಸುಮಾರಿಗೆ ಬಲಶಾಲಿಗಳಾಗಿದ್ದ ಗಂಗರ ಪ್ರಭಾವವಲಯ ಮಂಕಾದಂತೆ ಸ್ವತಂತ್ರ ರಾಜ್ಯವನ್ನೆ ಸ್ಥಾಪಿಸುವ ಕನಸು ಕಂಡನು. ಈತನಿಗೆ ಸಂಬಂಧಿಸಿದ ಹಲಸುಲಿಗೆ ಶಾಸನವೊಂದರಲ್ಲಿ[2] ಪಲ್ಪಸೆಟ್ಟಿ ಎಂಬಾತ ‘ವೆಳೆಯೆಳ್ದು’ ಸತ್ತಾಗ ದತ್ತಿ ಕೊಟ್ಟ ಸಂಗತಿ ಬಂದಿದೆ. ಶಾಸನದಲ್ಲಿ ತೇದಿ ಇಲ್ಲದಿದ್ದರೂ ಬಿ.ಎಲ್. ರೈಸ್ ಅವರು ಇದರ ಕಾಲವನ್ನು ಕ್ರಿ.ಶ. ೧೦೦೦ ಎಂದಿದ್ದಾರೆ.[3] ಈ ಶಾಸನದಲ್ಲಿ ‘ದೇವ ದೇವ ಮಾಹಾರಾಜ’ ಎಂಬ ಹೆಸರಿದ್ದು ಈತನೇ ದತ್ತಿಯನ್ನು ಕೊಟ್ಟ ‘ಕದಂಬರಸ’ ಆಗಿರಲು ಸಾಧ್ಯ[4] ‘ದೇವ ದೇವ ಮಾಹಾರಾ (ಅ)ಜ’ ಎಂಬ ಹೆಸರು ಗಮನಾರ್ಹವಾಗಿದ್ದು ‘ದೇವವರ್ಮ’ ಎಂಬುದಕ್ಕೆ ಹತ್ತಿರವಾಗಿದೆ.[5]

ಮಲಪರಾಜ

ಕ್ರಿ.ಶ. ೧೦೨೫ಕ್ಕೆ ಸೇರಿದ ಕಣತೂರಿನ ಶಾಸನದಲ್ಲಿ ಯಾವುದೊ ಕದಂಬ ರಾಜನ ಹೆಸರು ಅಳಿಸಿಹೋಗಿದೆಯೆಂದು ಎಪಿಗ್ರಾಫಿಯ ಕರ್ನಾಟಿಕದ ಪೀಠಿಕಾ ಭಾಗದಲ್ಲಿ ಅಭಿಪ್ರಾಯ ಪಡಲಾಗಿದೆ.[6]ಆದರೆ ಸರಿಯಾಗಿ ಶಾಸನ ಅಧ್ಯಯನ ಮಾಡಿದಾಗ ರಾಜನ ಹೆಸರು ಗೋಚರವಾಗುತ್ತದೆ. ಶಾಸನದಲ್ಲಿ ‘ಸಿಂಹಲಾಂಚನ ವನರಾಜ ಸಮಸ್ತ ಪ್ರತಿ ರಾಜ್ಯ…. ಸಿಂಗ… ನಗರಾಧಿನಾ…. ತ್ರ… ಕುಲೋದಯಾದ್ರಿ ಸಮಾನನಪ್ಪ ಶ್ರೀಮದ್ ಮಲಪರಾಜ…… ಮಲೆಪರಾದಿತ್ಯಂ.[7] ಎಂದಿರುವುದರಿಂದ ಪ್ರಸ್ತುತ ಅರಸನ ಹೆಸರು ‘ಮಲಪರಾಜ’ ಎಂದು ಸ್ಪಷ್ಟವಾಗುತ್ತದೆ.

ಕಣತೂರಿನ ಈ ಶಾಸನ ವ್ಯಕ್ತಿಯೋರ್ವನಿಗೆ ‘…..ಮಹಾರಾಜಂ ಆನೆಯನೇರಿಸಿ ಸೆಟ್ಟಿವಟ್ಟಮ ಕಟ್ಟಿಕೊಟ್ಟ’ ಸಂಗತಿ ತಿಳಿಸುತ್ತದೆ. ಇನ್ತಪ್ಪುದಕ್ಕೆ ಸಾಕ್ಷಿಗಳು’ ಎಂದು ಹಲವಾರು ಜನರನ್ನು ಹೆಸರಿಸಿದೆ ಶಾಸನದಲ್ಲಿ ‘ಮಾಹಾರಾಜ’ ಎಂದು ಉಲ್ಲೇಖಿಸಲ್ಪಟ್ಟಿರುವುದು ಗಮನಾರ್ಹ. ಜೊತೆಗೆ ಈ ರಾಜನು ಗಂಗರ ಅಧೀನ ಸಾಮಂತನಾಗಿದ್ದ ಕುರುಹಾಗಿ ಹಾಗೂ ತನಗಿಂತ ಹರಿಯ ವ್ಯಕ್ತಿಯ ಹೆಸರು ಬಿರುದುಗಳನ್ನು ಧರಿಸುವುದು ಗೌರವದ ವಿಷಯವಾದ್ದರಿಂದ ‘ಪೆರ್ಮಾಡಿ’ ಎಂಬ ಬಿರುದನ್ನು ಸಹ ಧರಿಸಿದ್ದಾನೆ. ‘ವಿದಿತ ಪೆರ್ಮ್ಮಾಡಿ ಪರ’ ಎಂದಿರುವುದನ್ನು ಗಂಗರ ಬೆಂಬಲಗ (ಪೆರ್ಮ್ಮಾಡಿ ಪರ) ಅಥವಾ ಖ್ಯಾತಪೆರ್ಮ್ಮಾಡಿ/ಪೆರ್ಮ್ಮಾಡಿ ಎಂದು ಹೆಸರುವಾಸಿಯಾದ (ವಿದಿತ ಪೆರ್ಮ್ಮಾಡಿ) ಎಂದಾದರೂ ತೆಗೆದುಕೊಳ್ಳಬಹುದು. ಇವನ ಸಮಕಾಲೀನನಾದ ಹೊಯ್ಸಳ ಅರಸ ಎರಡನೆಯ ನೃಪಕಾಮನನ್ನು ಮೂಡಿಗೆರೆ ಶಾಸನದಲ್ಲಿ[8]‘ರಾಚಮಲ್ಲ ಪೆರ್ಮಾನಡಿ ಯೆನಿಪ ಕಾಮ ಹೊಯ್ಸಳ’ ಎಂದು ವರ್ಣಿಸಲಾಗಿದೆ. ಮಲಪರಾಜ ಮತ್ತು ನೃಪಕಾಮ, ಮೊದಲಿಗೆ ಗಂಗರ ಸಾಮಂತರಾದುದರಿಂದ ಅವರ ಬಿರುದುಗಳನ್ನು ಇಬ್ಬರೂ ಅನುಕರಿಸಿದ್ದಾರೆ.

ಚಾಗಿ ಮಹಾರಾಜ

ಕದಂಬರ ವಂಶಾವಳಿಯ ವಿವರವನ್ನು ಸಕಲೇಶಪುರ ೪೫ನೆಯ ಸಂಖ್ಯೆಯ ಶಾಸನವು[9] ನೀಡುತ್ತದೆ. ಇದರ ಪ್ರಕಾರ ಮನುಜ ಮನೋಜೇಂದ್ರ ಸಿದ್ಧನಾಗಿ ಚಾಗಿ ಮಹಾರಾಜ ಹಾಗೂ ಆತನೇ ಮಗನೇ (ತನಯಂ), ಭೂಭವನದೊಳು ಅನುಪಮ ಕೀರ್ತ್ತಿ ಪ್ರತಪವನ್ನು ಪಡೆದ ದುದ್ದರಸ. ಅವನ ಹೆಂಡತಿ ಮೇಚಲರಸಿಗೆ ಮೂರು ಜನ ಮಕ್ಕಳು ಜನಿಸಿದರು. ಸಾರ್ಥಿಗನೃಪ, ಚಾಗಿಮಹಾರಾಜ ಮತ್ತು ದಯಾಸಿಂಹನೃಪ.

ಚಾಗಿ ಮಹಾರಾಜನ ಬಗ್ಗೆ ಹೆಚ್ಚಿನ ವಿವರಗಳು ಈ ಶಾಸನದಲ್ಲಿ ದೊರೆಯಲಾರದು. ಚಾಗಿ ಮಹಾರಾಜನ ಹೆಸರನ್ನೇ ಅವನ ಮೊಮ್ಮಗನಿಗೆ ಇಟ್ಟಿರುವ ಸಂಗತಿ ತಿಳಿದು ಬರುತ್ತದೆ. ಆದರೆ ಇಲ್ಲಿನ ಒಂದನೇ ಚಾಗಿಮಹಾರಾಜ ಮತ್ತು ದಿನಾಂಕವಿಲ್ಲದ ಹೆಗ್ಗಡೆದೇವನಕೋಟೆಯ ಶಾಸನ ಸಂಖ್ಯೆ ೧೧೦ ರಲ್ಲಿ ಬಂದಿರುವ ಚಾಗಿಮಹಾರಾಜ ಇಬ್ಬರೂ ಒಂದೇ ಆಗಿರಲು ಸಾಧ್ಯವಿದೆ.[10] ಎಂದು ಎಫಿಗ್ರಾಫಿಯ ಕರ್ನಾಟಕದ ೯ನೇ ಸಂಪುಟದಲ್ಲಿ ಅಭಿಪ್ರಾಯಪಡಲಾಗಿದೆ. ಈ ಬಗ್ಗೆ ಶಾಸನವನ್ನ ಪರಿಶೀಲಿಸಿದಾಗ ಬಯಲ್ನಾಡಿನ ಚಾಗಿ ಆಳುತ್ತಿರುವಾಗ ಮಣೆಲಿಯ ಸತ್ತಿಯಾ ರಮಣ ಎಂಬಾತ ಕಟಾಗಿ ಕಾಳಗದಲ್ಲಿ ಪಾಲ್ಗೊಂಡು ಸತ್ತ, ‘ಇನ್ನೂರು ಬತ್ತದ ಮಣ್ಮಂ ಕಲ್ನಾಡಾಗಿ’ ಪಡೆದ ಆತನ ಮಕ್ಕಳು ಅದರ ವಾರಸುದಾರರು ಎಂಬ ವಿಷಯವಿದೆ. ಆದರೆ ಇಲ್ಲಿ ಉಲ್ಲೇಖಿತ ಬಯಲ್ನಾಡಿನ ಚಾಗಿಗೆ ಮಹಾರಾಜ ಎಂಬ ಬಿರುದು ಇಲ್ಲದಿರುವುದನ್ನು ಗಮನಿಸಬೇಕು. ಜೊತೆಗೆ ಬಯಲ್ನಾಡು-ಐದುಮುನೂರು ಪ್ರದೇಶಗಳನ್ನು ಆಳುತ್ತಿದ್ದ ಬಯಲ್ನಾಡಿನ ಕದಂಬರಸರಾದ ರವಿವರ್ಮ್ಮ (ಕ್ರಿ.ಶ. ೯೯೮-೯೯) ಮತ್ತು ರವಿವರ್ಮ (ಕ್ರಿ.ಶ. ೧೦೭೯)ರ ನಡುವೆ ಚಾಗಿ ಇದ್ದನೆಂದು ಗುರುತಿಸುವುದನ್ನು[11] ಪ್ರಶ್ನಿಸಬೇಕಾಗುತ್ತದೆ. ಕ್ರಿ.ಶ. ೧೦೯೫ ರಲ್ಲಿದ್ದ ದಯಾಸಿಂಹನಿಗಿಂತ ಸುಮಾರು ೬೦ ವರ್ಷಗಳ ಹಿಂದೆ ಆತನ ಅಜ್ಜ ಚಾಗಿ ಮಹಾರಾಜ ಆಳುತ್ತಿದ್ದನೆಂದು ಹೇಳಬಹುದಾಗಿದ್ದು, ಪ್ರಾಯಶಃ ಕ್ರಿ.ಶ. ೧೦೭೦ ರವರೆಗೂ ಆಳಿದ ತರುವಾಯ ದುದ್ದಮಹಾರಾಜನು ಅರಸನಾದನೆಂದು ಊಹಿಸಬಹುದು.

ರಾಜೇಂದ್ರಪುರದ ಕ್ರಿ.ಶ. ೧೦-೧೧ನೇ ಶತಮಾನದ ಶಾಸನವೊಂದು[12] ವಾಮಶಿವದೇನ ಮಗನಾದ ಚಾಮ (ಚಾವಂ)ನನ್ನು ‘ಕದಂಬರಾಜ್ಯ ಮೂಳಸ್ತಂಭಂ’ ಎಂದು ವಣಿಸಿದೆ. ಬಹುಶಃ ಈತ ಸೈನ್ಯದ ಹಿರಿಯ ಅಧಿಕಾರಿಯಾಗಿರಬೇಕೆಂದು ಊಹಿಸಬಹುದಾದರೂ, ಚಾಗಿ ಮಹಾರಾಜನನ್ನೆ ಚಾಮ (ಚಾವಂ) ಎಂದು ಕರೆಯುತ್ತಿರಬಹುದು ಎಂಬ ಅನುಮಾನವೂ ಸಹ ಕಾಡುತ್ತದೆ.

ದುದ್ದರಸ ಮತ್ತು ಅರಸಿ ಮೇಚಲದೇವಿ

ಕದಂಬ ವಂಶಜನಾದ ದುದ್ದರಸನ ಬಗ್ಗೆ ಬೆಲುಹೂರು ಶಾಸನದಲ್ಲಿ ಹೆಚ್ಚಿನ ಮಾಹಿತಿ ದೊರೆಯದು. ಆದರೆ ಆತನ ಪತ್ನಿ ‘ಪಂಕಜನಾಭಂಗೆ’ (ವಿಷ್ಣುವಿಗೆ) ಭಕ್ತೆಯಾದ ಮೇಚಲ ದೇವಿಯ ಗುಣಗಾನ ಮಾಡಲಾಗಿದೆ. ‘ಅತಿ ಚತುರೋಕ್ತಿಯೊಳೆ ಸರಸ್ವತಿಗಂ ಮಿಗಿಲೆನಿಸಿ ಭುವನದೊಳು ಧರ್ಮ ಪ್ರತತಿಗೆ ನೆಲೆಯಾಗಿ ಮಹಾಸತಿ ಮೇಚಲದೇವಿ ಸಂತತಂ ಸೊಗಯಿಸುಗುಂ’[13]ಎಂದು ವರ್ಣಿಸಲ್ಪಟ್ಟಿದ್ದಾಳೆ. ಹೀಗೆ ಪ್ರಾಚೀನ ಕಾಲದಲ್ಲಿಯೆ ಉನ್ನತ ವಿದ್ಯಾವಂತೆಯಾದ ಈಕೆ ದಾನಧರ್ಮದಲ್ಲಿ ಮುಂದಾಗಿ ಕೆರೆಯೊಂದನ್ನು ಕಟ್ಟಿಸಿ ಅದಕ್ಕೆ ಮೇಚಲ ಸಮುದ್ರವೆಂಬ ಹೆಸರಿಡುತ್ತಾಳೆ. ‘ಸರಸಿಜ ಸಂಕುಳದಿಂದಂ ತರದಿಂ ತುಂಬಿಗಳ ಹಂಸೆಗಳ ಬಳಗ ದಿನಚ್ಚರಿಯೆನಿಸಿ ತೋರ್ಪ್ಪುದಿನ್ತೀ ಧರಣಿಗೆ ಮೇಚಲ ಸಮುದ್ರವೆಂಬ ತಟಾಕಂ’.[14]ಎಂದು ಕೆರೆಯನ್ನು ವರ್ಣಿಸಲಾಗಿದೆ.

ಪುಣ್ಯಕಥನ ಪುರಾಣ ಪ್ರಸಂಗದಲ್ಲಿ ಆಸಕ್ತಿ ತೋರುವ ಮೇಚಲದೇವಿ ಬೆಲುಹೂರ ಮಹಾಗ್ರಹಾರದ್ಲಿ ‘ದೇವಾಲಯಮಂ ಮಾಡಿಸಿಯಲ್ಲಿ ಶ್ರೀ ವಾಸುದೇವರಂ ಸುಪ್ರತಿಷ್ಠಿತಂ’ ಮಾಡಿದಳೆಂದು ‘ದೇವರಂಗಭೋಗ ಪೂಜಾ ವಿಧಾನ ನಿತ್ಯ ನೈವೇದ್ಯಕ್ಕಂ’ ಮತ್ತು ‘ಚೈತ್ರ ಪವಿತ್ರ’ ಮುಂತಾದ ಹಬ್ಬಗಳ ಸಲುವಾಗಿ ಭೂಮಿಯನ್ನು ಆಗ ಇದ್ದ ಬೆಲೆಗೆ ಕೊಂಡು (ಭೂಮಿಯಂ ಸಲುವ ಕ್ರಯದಲು ಹೊನ್ನಂಕೊಟ್ಟು) ಅದನ್ನೆ ದೇವಾಲಯಕ್ಕೆ ದತ್ತಿ ನೀಡಿದ್ದಾಳೆ. ‘ಕುಂಬಾರನ ಹಳ್ಳಿಯನ್ನು ಅರಸಿಯರಪುರ ಮಾಡಿ, ಅದನ್ನು ಐದು ಜನ ಬ್ರಾಹ್ಮಣರಿಗೆ ದತ್ತಿಯಾಗಿ ಧಾರಾಪೂರ್ವಕ ಕೊಟ್ಟಿದ್ದಾಳೆ. ಇಂತಹ ದಾನಶೀಲೆಯಾದ ಮೇಚಲದೇವಿಯು ‘ಬಂಕಿ ಬಳರಿತ ಮಹಿಪಂಗಂ’ ಮಗಳೆಂದು ತಿಳಿಯುತ್ತದೆ. ಈ ವ್ಯಕ್ತಿ ಬಂಕಿ ಅರಸನೇ ಆದರೆ ಈತನನ್ನು ಹೆಗ್ಗಡೆದೇವನಕೋಟೆಯ ಸೋಗಳ್ಳಿಯ ಶಾಸನದಲ್ಲಿ ಬರುವ ಬಂಕಿಯರಸನೊಂದಿಗೆ ಸಮೀಕರಿಸಬಹುದು[15] ಎನ್ನಲಾಗಿದೆ. ಇಲ್ಲಿ ಬರುವ ಬಂಕಿಯರಸನ ಹರಿಯ ಎನ್ನುವವನನ್ನು ಸೋವಯ್ಯ ಎನ್ನುವಾತ ಎದುರಿಸಿದ ಸಂಗತಿ ಬರುತ್ತದೆ.[16] ಆದರೆ ಸಕಲೇಶಪುರದ ನೆರೆಯ ಪ್ರದೇಶವಾದ ತುಳುನಾಡಿನಲ್ಲಿ ಆಳ್ವಿಕೆ ಮಾಡಿದ ಮಧ್ಯಯುಗೀನ ಆಳುಪರಲ್ಲಿಯೂ ಸಹ ಬಂಕಿದೇವರು ಬರುವುದನ್ನು ಗಮನಿಸಬಹುದು.[17]

ಜೂಜರಸನ ಶಾಸನ : ದುದ್ದರಸನ ಮರಣದ ಬಗ್ಗೆ ಸೋಮವಾರಪೇಟೆಯ ಯಡೂರಿನ ಸುಗ್ಗಿದೇವರ ಗುಡಿಯಲ್ಲಿರುವ ಶಾಸನ[18] ಅಪೂರ್ವ ಮಾಹಿತಿಯನ್ನು ನೀಡುತ್ತದೆ. ಅದು ದುದ್ದರಸನನ್ನು ‘ಬಲೀಂದ್ರ ಕುಲ ಕಮಲ ಮಾರ್ತ್ತಂಡೆ’, ‘ಬಲಿಯರ ಭೀಮ’ ಎಂದು ವರ್ಣಿಸುತ್ತದೆ. ಈ ಬಿರುದುಗಳಾವುವೂ ಕದಂಬರಿಗೆ ಸಂಬಂಧಿಸಿದವುಗಳಲ್ಲವಾದ್ದರಿಂದ ಅನುಮಾನ ಮೂಡುತ್ತದೆ. ಜೊತೆಗೆ ಇಲ್ಲಿಯ ದುದ್ದರಸನು ಹಿಟ್ಟಿಯರಸ ಹಾಗೂ ಜುಂಜಲದೇವಿಯರ ಮಗನೆಂದು ಹೇಳಿದೆ. ಅಲ್ಲದೆ ಈತನ ಪತ್ನಿ ಚಿಕಲದೇವಿ. ಆದರೆ ಹಾಲೆಬೇಲೂರು ಶಾಸನದಲ್ಲಿ ಹೇಳುವ ದುದ್ದರಸನ ತಂದೆಯ ಹೆಸರು ಚಾಗಿ ಮಹಾರಾಜ. ಪತ್ನಿಯ ಹೆಸರು ಮೇಚಲರಸಿ. ಆದ್ದರಿಂದ ಯಡೂರಿನ ಶಾಸನದಲ್ಲಿ ಉಲ್ಲೇಖಿತ ದುದ್ದರಸ ಕದಂಬ ವಂಶದವನಾಗದೆ ಬೇರೊಂದು ವಂಶಕ್ಕೆ ಸೇರಿದ್ದಾನೆ[19] ಎಂಬ ಭಿನ್ನ ಅಭಿಪ್ರಾಯವಿದೆ. ಆದಾಗ್ಯೂ ಬಿ.ಎಲ್.ರೈಸ್ ಅಭಿಪ್ರಾಯಿಸಿದಂತೆ ‘ದುದ್ದರಸ’ ಎಂಬ ಹೆಸರಿನ ಸಾಮ್ಯದ ಮೇಲೆ, ಎರಡು ಶಾಸನಗಳ ತೇದಿಯೂ ಕ್ರಿ.ಶ. ೧೦೯೫ ಆಗಿರುವುದರಿಂದ[20] ಹಾಗೂ ಅಕ್ಕಪಕ್ಕದ ಹೊಂದಿದಂತಿರುವ ಪ್ರದೇಶದ ಆಧಾರದ ಮೇಲೆ ಇಬ್ಬರೂ ಒಂದೇ ಕದಂಬರ ವಂಶಕ್ಕೆ ಸೇರಿದವರೆಂದು ತಿಳಿಯಬಹುದು. ಮಿಕ್ಕೆಲ್ಲ ಅನುಮಾನಗಳಿಗೆ ಕೆಳಕಂಡಂತೆ ಊಹಿಸಿ ಸಮಾಧಾನ ಕಂಡುಕೊಳ್ಳಬಹುದು.

ಹಾಲೆ ಬೇಲೂರು ಶಾಸನದಲ್ಲಿ[21] ಹೇಳಲಾದ ದುದ್ದರಸನ ತಂದೆಯ ಹೆಸರಾದ ‘ಚಾಗಿ ಮಹಾರಾಜ’ ಎಂಬುದು ಹಿಟ್ಟಿಯರಸನ ಬಿರುದಾಗಿರಬಹುದು. ಆದ್ದರಿಂದ ಚಾಗಿ ಮಹಾರಾಜ ಎಂದು ಜನಪ್ರಿಯನಾಗಿದ್ದರೂ, ಹಿಟ್ಟಿಯರಸ ಎಂಬ ಮುಲ ಹೆಸರನ್ನೆ ಶಾಸನದ ನಿರ್ಮಾತೃ ಜೂಜರಸ ಬಳಸಿಕೊಂಡಿದ್ದಾನೆ. ಹಾಲೇಬೇಲೂರು ಶಾಸನದಲ್ಲಿ ಚಾಗಿ ಮಹಾರಾಜನ (ಹಿಟ್ಟಿಯರಸ) ಪತ್ನಿಯ ಉಲ್ಲೇಖವಿಲ್ಲ. ಆದರೆ ಯಡೂರು ಶಾಸನದಲ್ಲಿ[22] ಉಲ್ಲೇಖವಾಗಿದ್ದು,ಜುಂಜಲದೇವಿಯೆಂದು ತಿಳಿದುಬರುತ್ತದೆ. ಅವರಿಗೆ ಜನಿಸಿದ ದುದ್ದರಸ ಹಿರಿಯ ಮಗನಾಗಿದ್ದು, ಜೂಜರಸ ಕಿರಿಯವನಾಗಿರಬೇಕು. ಆತ ಸೋಮವಾರಪೇಟೆ ಪ್ರದೇಶದ ಕದಂಬ ಭಾಗಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತು ಅಲ್ಲಿಯೆ ಆಳ್ವಿಕೆ ಮಾಡುತ್ತಿರಬಹುದು. ದುದ್ದರಸ ಹಿರಿಯವನಾದ್ದರಿಂದ ‘ಶಿವಲೋಕ ಪ್ರಾಪ್ತನಾಗಲ್, ಸಹೋದರಂ ಜೂಜರಸಂ ಸ್ನೇಹದಿಂದ ಪರೋಕ್ಷವಿನೆಯಂ ಗೆಯ್ದು ವೀರಸಾಸನಮಂ ಬರೆಯಿಸಿದಂ’[23]ಎಂದು ಒಂದು ಶಾಸನದಲ್ಲಿ ವರ್ಣಿಸಲಾಗಿದೆ.

ದಯಾಸಿಂಹನೃಪ

ದುದ್ದರಸನ ನಂತರ, ಅವನ ಮೂರು ಮಕ್ಕಳಲ್ಲಿ ಕಿರಿಯವನಾದ ತ್ರಿಭುವನಮಲ್ಲ ದಯಾಸಿಂಹ ಮಹಾರಾಜನು ಸಿಂಹಾಸವನ್ನೇರಿದನು. ಹಾಲೇಬೇಲೂರಿನ ಶಾಸನವು[24] ಈತನ ರಾಜಗೌರವ ಮತ್ತು ವ್ಯಕ್ತಿತ್ವವನ್ನು ವರ್ಣಿಸುತ್ತದೆ. ದಯಾಸಿಂಹನಿಗೆ ಸಾರ್ತ್ಥಿಗನೃಪ ಮತ್ತು ಚಾಗಿಮಹಾರಾಜ ಎಂಬ ಹಿರಿಯ ಅಣ್ಣಂದಿರಿದ್ದರೂ, ಅವರಿಗಿಂತಲೂ ಶೂರನು, ಧೀರನು, ಧೀಮಂತನು ಇವನಾಗಿದ್ದರಿಂದ ಪಟ್ಟದ ಪ್ರಭುತ್ವ ಇವನಿಗೆ ದೊರೆತಿರಬೇಕೆಂದು ತೋರುತ್ತದೆ. ಈಗಿನ ಹಾಲೆಬೇಲೂರಿನಲ್ಲಿ ವಾಸುದೇವ (ಕೇಶವ/ಚೆನ್ನಕೇಶವ) ದೇವಾಲಯವನ್ನು ಕಟ್ಟಿಸಿ ಕುಂಬಾರನಹಳ್ಳಿಯನ್ನು ಅರಸಿಯಪುರವೆಂದು ಕರೆದು ಐದು ಜನ ಹಾರುವರಿಗೆ ದತ್ತಿಯಾಗಿತ್ತದ್ದು, ದಯಾಸಿಂಹನ ತಾಯಿಯೆಂದು (ಮೇಚಲರಸಿ) ಶಾಸನದಲ್ಲಿ ಉಲ್ಲೇಖಿತವಾಗಿದ್ದರೂ, ಇದು ತನ್ನ ತಾಯಿಯ ಪರವಾಗಿ, ಅವಳ ಹೆಸರಿನಲ್ಲಿ ಮತ್ತು ಮಾತಾಭಕ್ತಿಯ ಕುರುಹಾಗಿ ದಯಾಸಿಂಹನಿಂದಲೇ ಆಗಿದೆ.

‘ಶ್ರೀಮತ್ ಕದಂಬವಂಶಸಿಖಾಮಣಿ’ಯೆಂದು ಕದಂಬ ಕುಳಕಮಳ ಮಾರ್ತ್ತಣ್ಡ’ನೆಂದು ಹೆಸರುವಾಸಿಯಾದ ದಯಾಸಿಂಹನೃಪ ಸಮಧಿಗತ ಪಂಚಮಹಾಶಬ್ದ ಮಹಾ ಮಂಡಳೇಶ್ವರನೂ ಹೌದು. ವೈರಿಗಳನ್ನು ಯುದ್ಧದಲ್ಲಿ ಸೋಲಿಸಿದನೆಂದು ಹೇಳಲಾಗಿದ್ದರೂ ಶ್ರೀಪಾಲನನ್ನು ಮಾತ್ರ ಸೋಲಿಸಿದ ಉಲ್ಲೇಖ ಬರುತ್ತದೆ. ಶ್ರೀಪಾಲ ಬಹುದೊಡ್ಡ ಸೈನ್ಯವನ್ನೇ ಹೊಂದಿದ್ದರೂ (ಅತಿ ಬಹಳ ಬಳವ್ಯೂಹ) ಸಹ ಆತನನ್ನು ಯುದ್ಧದಲ್ಲಿ ಕೊಂದನೆಂಬ ಪ್ರಸ್ತಾಪವಿದೆ. ದಯಾಸಿಂಹನು

ಪ್ರಚಂಡ ದೋರ್ದ್ದಂಡ ಮಣ್ಣಳಾಗ್ರ
ಖಣ್ಡಿತಾರಾತಿ ಮಣ್ಡಳಿಕ ಸೈನ್ಯ ಸಂಘಾತ
ಮದಾರಾತಿ ಮಣ್ಡಳಿಕ
ನಿರ್ಗ್ಛಾತ ಕ್ರೂರಾತಾತಿ ಮಣ್ಡಳಿಕ
ದರ್ಪದಳ ಸಮರ ಕೇಳಿ ಪ್ರಳಯ ಕಾಳಭೈರವ
ಉರ್ದ್ದಣ್ಣ ಮಣ್ಡಳಿಕ ವೇದಣ್ಣ ಕಣ್ಟೀರವ[25]

ನಾದ್ದರಿಂದಲೇ ತನ್ನ ಅಧಿರಾಜನಾದ ಆರನೆಯ ವಿಕ್ರಮಾದಿತ್ಯನ ‘ತ್ರಿಭುವನಮಲ್ಲ’ ಎಂಬ ಬಿರುದನ್ನು ಧರಿಸಿದ್ದಾನೆ. ಈ ಶಾಸನದ ಕಾಲ ಕ್ರಿ.ಶ. ೧೦೯೫ ನ್ನು ಗಮನದಲ್ಲಿಟ್ಟುಕೊಂಡು, ಹೊಯ್ಸಳ ವಿಷ್ಣುವರ್ಧನನ (ಕ್ರಿ.ಶ. ೧೧೦೮-೧೧೪೧) ಕ್ರಿ.ಶ. ೧೧೧೭ನೇ ಇಸವಿಯ ಶಾಸನವೊಂದನ್ನು[26] ಅಧ್ಯಯನ ಮಾಡಿದಾಗ ವಿಷ್ಣುವರ್ಧನನ ಈ ಶಾಸನಕ್ಕೆ ಕ್ರಿ.ಶ. ೧೦೯೫ರ ದಯಾಸಿಂಹನ ಶಾಸನ ಮಾದರಿಯಾಗಿರುವುದು, ಆರಂಭಿಕ ಪದ್ಯ ಒಂದೇ ಆಗಿರುವುದು ‘ಸ್ತುತಿ’ ಹೆಸರಿನ ಬದಲಾವಣೆಯೊಂದನ್ನು ಬಿಟ್ಟು ಒಂದೇ ಆಗಿರುವುದು ಮತ್ತು ವಿಷ್ಣುವರ್ಧನನು ದಯಾಸಿಂಹನು ಬಿರುದುಗಳನ್ನು ಅನುಸರಿಸುವುದೇ ಮುಂತಾದ ಸಾಮ್ಯಗಳು ಸೋಜಿಗ ಹುಟ್ಟಿಸುತ್ತವೆ.

ದಯಾಸಿಂಹ ಧರಿಸಿರುವ ‘ರಾಜಮಾಂಧಾತ’ ಎಂಬ ಬಿರುದನ್ನು ಕ್ರಿ.ಶ. ೧೦೬೨-೬೩ರಷ್ಟು ಹಿಂದೆಯೆ ಹೊಯ್ಸಳ ವಿನಯಾದಿತ್ಯ ‘ರಾಜಮಾಂನ್ಥಾತನೃಪಂ’ ಎಂದು ಧರಿಸಿರುವುದನ್ನು ಸಹ ಉಲ್ಲೇಖಿಸಬೇಕಾಗುತ್ತದೆ.[27] ಹೀಗೆ ದಯಾಸಿಂಹ ಕೇವಲ ‘ಸಮರಪ್ರಚಣ್ಡ’ನಾಗಿರಲಿಲ್ಲ. ‘ಪಾವನಚರಿತ್ರೆಯು ಮಪ್ಪ ಮೇಚಲದೇವಿಯರ ಪುತ್ರನಾಗಿ[28] ಗೀತ, ವಾದ್ಯ, ನೃತ್ಯ, ಇವುಗಳಿಗೆ ತನ್ನ ಆಸ್ಥಾನದಲ್ಲಿ ಮಹತ್ವದ ಸ್ಥಾನ ನೀಡಿದ್ದು ಕವಿ ಕಲಾವಿದರಿಗೆ ಆಶ್ರಯವನ್ನು ನೀಡುವ ಸಹೃದಯಿಯೂ ಆಗಿದ್ದನು. ಕಾವ್ಯ, ನಾಟಕ, ವಿಚಾರ ಪ್ರಸಂಗಗಳಲ್ಲಿ ಆಸಕ್ತಿ ಹೊಂದಿದ್ದನು. ತರ್ಕಶಾಸ್ತ್ರ, ವ್ಯಾಕರಣ, ಚಿತ್ರಕಲೆ ಮುಂತಾದ ೬೪ ಕಲೆಗಳಲ್ಲಿ ಪಾರಂಗತಿ ಹೊಂದಿದ್ದನಲ್ಲದೆ ‘ಸಮಸ್ತ ಆಗಮ ಪ್ರಬುದ್ಧನೂ’ ಆಗಿದ್ದನು.

ರಾಜಧಾನಿ : ಹಾಲೇ ಬೇಲೂರು ಕದಂಬರು ತಮ್ಮನ್ನು ‘ತ್ರಿಪುರಾದೀಶ್ವರ’ರೆಂದು ಕರೆದುಕೊಂಡಿದ್ದಾರೆ.[29] ಉಲ್ಲೇಖಿತ ‘ತ್ರಿಪುರ’ ಮೂಲ ಕದಂಬರ ದಕ್ಷಿಣಭಾಗದ ರಾಜಧಾನಿಯಾಗಿದ್ದ ತ್ರಿಪರ್ವತವೆಂದೂ ಊಹಿಸಬಹುದು. ಈ ತ್ರಿಪರ್ವತವೇ ಈಗನ ಹಳೇಬೀಡು[30] ಎಂಬ ಅಭಿಪ್ರಾಯವೂ ಇದೆ. ಈ ತ್ರಿಪರ್ವತವೇ ಆಗಿದ್ದರೆ, ಮೊದಲಿಗೆ ಕದಂಬ ಶಾಖೆ ಅಲ್ಲಿಗೆ ಬಂದು ಆಳ್ವಿಕೆಯನ್ನು ಪ್ರಾರಂಭಿಸಿರಬೇಕು. ನಂತರ ಹೊಯ್ಸಳರ ಒತ್ತಡದಿಂದ ಇನ್ನೊಂದು ಬನವಾಸಿಗೆ (ಮೂಲ ಬನವಾಸಿಯಲ್ಲ ಸಕಲೇಶಪುರದಲ್ಲಿರು ಬನವಾಸಿ) ತಮ್ಮ ರಾಜಧಾನಿಯನ್ನು ಬದಲಾಯಿಸಿರಬೇಕೆಂದು ಊಹಿಸಬಹುದು. ಆದಾಗ್ಯೂ ‘ತ್ರಿಪುರ’ ಎನ್ನುವುದನ್ನು ಉಲ್ಲೇಖಿಸುವ ಶಾಸನ ನಂತರದ ಕಾಲಾವಧಿಯದೆ ಅಂದರೆ ಕ್ರಿ.ಶ. ೧೦೯೫ರದೆಂದು ಅನುಮಾನಿಸಲು ಅಡ್ಡಿಯಿಲ್ಲ. ಅವರು ಮೂಲ ರಾಜಧಾನಿಯ ನೆನಪು ಮಾಸದೆ ಅದೆ ಹೆಸರನ್ನೆ ತಮ್ಮ ಹೊಸ ರಾಜಧಾನಿಗೆ ಇಟ್ಟಿರಬೇಕು. ಅಂತೆಯೆ ತಮ್ಮನ್ನು ‘ಬನವಾಸಿಪುರವರಾಧೀಶ್ವರ’[31]ರೆಂದೂ ಕರೆದುಕೊಂಡಿದ್ದಾರೆ. ಇದು ಸೊಸೆವೂರಿನಿಂದ ಕೇವಲ ೩೨ ಕಿ.ಮೀ. ದೂರದಲ್ಲಿದ್ದುದರಿಂದ ಈಗಾಗಲೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಹೊಯ್ಸಳರ ದೃಷ್ಟಿಗೆ ತಾಕಿರಲೇಬೇಕು. ಹೀಗಾಗಿಯೇ ಹೊಯ್ಸಳ ನೃಪಕಾಮನ ಎರಡು ಶಾಸನಗಳು ಬನವಾಸಿಯ ಪಕ್ಕದ ಗ್ರಾಮವಾದ ರಾಜೇಂದ್ರಪುರದಲ್ಲಿ ಕಂಡು ಬರುತ್ತವೆ. ಕ್ರಿ.ಶ. ೧೦೨೨-೨೩ನೇ ಇಸವಿಗೆ ಇಸವಿಗೆ ಸೇರಿದ ಒಂದು ಶಾಸನದಲ್ಲಿ ನೃಪಕಾಮನೇ ಚೋಳರ ಮೇಲೆ ಯುದ್ಧ ಮಾಡಿದುದರ[32] ಉಲ್ಲೇಖವಿದೆ. ಬಹುಶಃ ಚೋಲಸಾಮ್ರಾಟ ‘ರಾಜೇಂದ್ರ ಚೋಳ ಪೃಥಿವೀ ಮಹಾರಾಜ’ ಅಂದರೆ ಒಂದನೇ ರಾಜೇಂದ್ರ ಚೋಳ (ಆಳ್ವಿಕೆ ಕಾಲಾವಧಿ ಕ್ರಿ.ಶ. ೧೦೧೨-೪೪) ನೇ ದುರ್ದೆಸೆಯಲ್ಲಿದ್ದ ಕದಂಬರನ್ನು ಒಳಗೊಂಡು ಬನವಾಸಿಯನ್ನು ರಕ್ಷಿಸುವ ಕೆಲಸ ಮಾಡಿರಬೇಕು ಅಥವಾ ಕೊಡಗಿನ ಮೂಲಕ ತಮ್ಮ ಉತ್ತರದಲ್ಲಿದ್ದ ಕದಂಬರ ರಾಜ್ಯವನ್ನು ಆಕ್ರಮಿಸುತ್ತ ಹೊಯ್ಸಳರ ರಾಜ್ಯಕ್ಕೆ ಸಮೀಪಿಸುತ್ತಿರುವುದು ಕಂಡುಬರುತ್ತದೆ. ಆದರೆ ಮುಂದೆ ಕ್ರಿ.ಶ. ೧೦೨೭ರಲ್ಲಿ ಬನವಾಸಿಯ ಮೇಲೆ ಯಾರೊ ವೈರಿಗಳು[33] (ಹೆಸರು ಅಳಿಸಿಹೋಗಿದೆ) ಬಿದ್ದು ಕಾದುತ್ತಿರುವಾಗ ಜನತೆಯನ್ನು ರಕ್ಷಿಸುವ ಉದ್ದೇಶದಿಂದ ಹೊಯ್ಸಳ ನೃಪಕಾಮ ಮಹಾರಾಜನೆ ಬಂದಿದ್ದು, ಬನವಾಸಿ ಹೊಯ್ಸಳರ ಕೃಪಾಕಟಾಕ್ಷದಲ್ಲಿ ಉಳಿಯುವ ಸ್ಥಿತಿ ಒದಗಿರಬೇಕು. ಹೀಗಾಗಿಯೆ ಮತ್ತೊಮ್ಮೆ ಅವರ ಪ್ರಭಾವದಿಂದ ಮುಕ್ತರಾಗಲು ತಮ್ಮ ರಾಜಧಾನಿಯನ್ನು ಹಾಲೇಬೇಲೂರಿಗೆ (<ಹಾರುವ ಬೇಲುಹೂರು?) ವರ್ಗಾಯಿಸಿರಬೇಕು ಎಂಬ ಸಂಗತಿಯನ್ನು ಕಲ್ಪಿಸಿಕೊಳ್ಳಬಹುದು. ಅಂತೆಯೆ ಸಂಶೋಧಕರಲ್ಲಿ ಇವರು ಬೇಲೂರು ಕದಂಬರೆಂದು[34] ಹೆಸರುವಾಸಿಯಾಗಿದ್ದರೂ, ಸೂಕ್ಷ್ಮವಾಗಿ ಒಂದು ಅನುಮಾನ ಕಾಡದೆ ಇರಲಾರದು. ಅದೆಂದರೆ, ಹೊಯ್ಸಳ ವಿಷ್ಣುವರ್ಧನನ ಚೆನ್ನಕೇಶವ ದೇವಾಲಯ ನಿರ್ಮಾಣ ಶಾಸನಕ್ಕೂ[35] ಮಾದರಿಯಾದ ದಯಾಸಿಂಹ ಮಹಾರಾಜನ ಸುಂದರ ಶಾಸನ ಹಾಲೆ ಬೇಲೂರಿನಲ್ಲಿ ದೊರೆತಿದೆಯಾದರೂ, ಅದನ್ನೂ ಒಳಗೊಂಡು ಅವರ ಇತರ ಯಾವುದೇ ಶಾಸನದಲ್ಲಿ ಬೇಲೂರು (ಹಾಲೆ ಬೇಲೂರು/ಹಾರುವ ಬೆಲುಹೂರು/ ಬೆಲುಹೂರು) ರಾಜಧಾನಿಯಾಗಿದ್ದುದರ ಬಗ್ಗೆ ಉಲ್ಲೇಖವಿಲ್ಲ. ಬದಲಿಗೆ ಅದು ಮಹಾಗ್ರಹಾರವಾಗಿದ್ದುದರ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ. ಆದ್ದರಿಂದ ಕದಂಬರು ತಮ್ಮ ಕೊನೆ ಕಾಲದಲ್ಲಿ ಮಹಾಗ್ರಹಾರವಾಗಿದ್ದ ಹಾರುವ ಬೆಲುಹೂರದಲ್ಲಿ ವಾಸಮಾಡ ತೊಡಗಿದರೇ? ಎಂಬ ಭಾವನೆಯೂ ಬರುತ್ತದೆ.

ಮಲೆಪರು ಯಾರು?

ಮಲೆ ಎಂಬ ಹೆಸರೇ ಗುಡ್ಡಗಾಡನ್ನು (ಗುಡ್ಡ + ಕಾಡು), ಮಲೆನಾಡನ್ನು ಸೂಚಿಸುತ್ತದೆ. ಹೊಯ್ಸಳರು ಸಹ ಸಕಲೇಶಪುರ – ಮೂಡಿಗೆರೆಯ ದಟ್ಟಡವಿಯಿಂದ ಬಂದವರಾದ್ದರಿಂದ ಮಲೆನಾಡಿನವರು, ಮಲೆಪರಾಗಿದ್ದರು ಎನ್ನಲಡ್ಡಿಯಲ್ಲ. ಆದರೆ ಹೊಯ್ಸಳರು ತಮ್ಮನ್ನು ಎಲ್ಲಿಯೂ ಮಲೆಪರೆಂದು ಗುರುತಿಸಿಕೊಂಡಿಲ್ಲ. ಬದಲಿಗೆ ಮಲೆಪರ ಸಂಹಾರಕರು ಅಥವಾ ಅವರನ್ನು ಸದೆಬಡಿದವರು ತಾವೆಂಬ ಅರ್ಥದಲ್ಲಿ ‘ಮಲೆಪರೊಳ್ಗಂಡ’[36]ಎಂಬ ಬಿರುದನ್ನು ಧರಿಸಿರುವುದನ್ನು ಹಲವಾರು ಶಾಸನಗಳಲ್ಲಿ ಗಮನಿಸುತ್ತೇವೆ. ಹೊಯ್ಸಳ ವಿನಯಾದಿತ್ಯನಾದರೊ ಕ್ರಿ.ಶ. ೧೦೯೭ರ ಹಳೇಬೀಡಿನ ಶಾಸನದಲ್ಲಿ ತನ್ನನ್ನು ಈ ರೀತಿ ಕರೆದುಕೊಂಡಿದ್ದಾನೆ.

ಬಲಿದೊಡೆ ಮಲೆದೊಡೆ ಮಲೆಪರ ತಲೆಯೊಳ್‌ಬಾಳಿಡುವನುದಿತಭಯ
ರಸವಶದಿಂ ಬಲಿಯದ ಮಲೆಯದ ಮಲೆಪರ ತಲೆಯೊಲು ಕೈಯ್ಯಿಡು
ವನೊಡನೆ ವನಯಾದಿತ್ಯ[37]

ಅಂದರೆ ಅಹಂಕಾರಿಗಳಾದ, ತನ್ನನ್ನು ವಿರೋಧಿಸುವ ಮಲೆಪರ ತಲೆಗಳನ್ನು ಕತ್ತಿಯಿಂದ ಚೆಂಡಾಡುವನೆಂದು, ಆದರೆ ಯಾವ ಮಲೆಪರಿಗೆ ಅಹಂಕಾರವಿಲ್ಲ ಮತ್ತು ತನ್ನನ್ನು ವಿರೋಧಿಸುವುದಿಲ್ಲ ಅವರನ್ನು ರಕ್ಷಿಸಿ ಕಾಪಾಡುವನೆಂದು ಹೇಳಲಾಗಿದೆ. ಹೀಗಿರುವಾಗ ಬಲಿದ ಮಲೆಪರ ಅಂದರೆ ಯಾರು ಎಂಬ ಪ್ರಶ್ನೆ ಮೂಡುವುದು ಸಹಜ.

ಹೊಯ್ಸಳರ ಪ್ರಭುತ್ವವನ್ನು ವಿರೋಧಿಸುವವರು ಅಂದರೆ ಅವರು ಸಂಘಟಿತ ರಾಜವಂಶಕ್ಕೆ ಸಂಬಂಧ ಪಟ್ಟಿರುವರಾಗಿರಲೇಬೇಕು ಎಂಬುದು ದಿಟ ಎಂಬ ಅಭಿಪ್ರಾಯವನ್ನು ಇಟ್ಟುಕೊಂಡು ಸಂಶೋಧನೆಯಲ್ಲಿ ತೊಡಗಿದಾಗ ಕದಂಬರೇ ಮಲೆರರಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಕ್ರಿ.ಶ. ೧೦೨೫ ಕ್ಕೆ ಸೇರಿದ ಕಣತೂರಿನ ಶಾಸನದಲ್ಲಿ ‘ಮಲೆಪರ ಸೂರ್ಯ’, ‘ಮಲೆಪರಾದಿತ್ಯಂ’ ಎಂದು ಹೆಸರುವಾಸಿಯಾದ ಕದಂಬರ ಅರಸ ಮಲಪರಾಜನ ಉಲ್ಲೇಖವಿದೆ.[38] ಈತನು ವ್ಯಕ್ತಿಯೋರ್ವನಿಗೆ ಆನೆಯನೇರಿಸಿ ಸೆಟ್ಟಿ ಪದವಿಯನ್ನು ನೀಡಿ ಜಮೀನು ನೀಡಿದ ಸಂಗತಿ ಬರುತ್ತದೆ. ಈ ಶಾಸನದಲ್ಲಿ ಆತನದು ಸಿಂಹಲಾಂಛನವೆಂದು, ವನರಾಜನೆಂದು ವರ್ಣಿಸಲ್ಪಟ್ಟಿರುವುದನ್ನು ಕ್ಷಣ ನಿಂತು ಯೋಚಿಸಬೇಕಾಗುತ್ತದೆ. ಸಿಂಹ ಇಡೀ ಕಾಡಿಗೆ ರಾಜನಿದ್ದಂತೆ, ತಾನೂ ಸಹ ಇಡೀ ಗುಡ್ಡಗಾಡಿಗೆ ನಾಯಕ, ರಾಜ, ಸೂರ್ಯ, ಎಂಬುದನ್ನು ‘ಶ್ರೀಮದ್ ಮಲಪರಾಜ… ಮಲೆಪರಾದಿತ್ಯಂ’ ಹೆಸರಿನ ಮೂಲಕವೂ ಅರ್ಥೈಸಿದ್ದಾನೆ. ಹೋಲಿಕೆಯ ಹೆಸರಾಗುವ ಸಾಧ್ಯತೆಗೆ ‘ಶ್ರೀ ಮದ್ ಮಲಪರಾಜ’ ಉತ್ತಮ ಉದಾಹರಣೆಯಾಗುವ, ಇದರಿಂದ ಜೊತೆಗೆ ಕದಂಬರೇ ಸ್ವತಃ ಮಲೆಪರಾಗಿದ್ದರು ಎಂಬ ಮಹತ್ವದ ಮಾಹಿತಿ ದೊರಕುತ್ತದೆ.

ಸೋಮವಾರಪೇಟೆ ತಾಲ್ಲೂಕಿನ ಯೆಡೂರಿನ ಸುಗ್ಗಿದೇವರ ಗುಡಿಯಲ್ಲಿ ಚಾಗಿ ಮಹಾರಾಜನ (ಹಿಟ್ಟಿಯರಸ) ಮಗನಾದ ದುದ್ದರಸನ ಸ್ಮರಣಾರ್ಥ ಆತನ ಸಹೋದರ ಜೂಜರಸ ‘ವೀರಸಾಸನ’ ಬರೆಯಿಸಿದ್ದಾನೆ.[39] ಇಲ್ಲಿಯ ದುದ್ದರಸನ ಅನೇಕ ನಾಮಾವಳಿಯಲ್ಲಿ

ಬಲಿನ್ದ್ರ ಕುಲಕಮಲ ಮಾರ್ತ್ತಣ್ಡ
ಚತುರ್ಮ್ಮುಖಗಣ್ಡ
ಸರಣಾಗತ ವಜ್ರಪಂಜರ
ವೈರಿ ಗನ ಕೇಸರಿ
ಲಿಯರ ಭೀಮ ಸಂಗ್ರಾಮ ರಾಮ ಮಲೆಪರ ನಂದನವನಂ[40]

ಬರುತ್ತದೆ. ಈ ಶಾಸನದಲ್ಲಿ ದುದ್ದರಸನ ಅನೇಕ ಬಿರುದುಗಳಲ್ಲಿ ‘ಮಲೆಪರ ನಂದನವನ’ ಎಂಬ ಬಿರುದೂ ಕಂಡುಬರುತ್ತದೆ. ದುದ್ದರಸನನ್ನು ಮಲೆಪರ ಮುಖ್ಯಸ್ಥನೆಂದು ಅವರನ್ನು ಸದಾ ಸಂತೋಷದಲ್ಲಿಡುವ ನಂದವನವೆಂಬ (Pleasure Garden) ಅರ್ಥ ಬರುವ ರೀತಿಯಲ್ಲಿ ವರ್ಣಿಸಲಾಗಿದೆ. ಮಲಪೆರ ನಂದನವನ ಎಂದರೆ ಮಲೆನಾಡುಗಳ ಪತಿ ಅಥವಾ ಒಡೆಯರಿಗೆ ನಂದನವನದಂತೆ ಆಶ್ರಯಕೊಡುವವನು ಎಂದೂ ಸಹ ಅರ್ಥ ಮಾಡಬಹುದು.

ಅಂದರೆ ಕದಂಬರೇ ವಿನಯಾದಿತ್ಯನ ಶಾಸನದ ಮಲೆಪರಾಗಿದ್ದರು ಎಂಬ ಬಗ್ಗೆ ಅಮೂಲ್ಯ ಮಾಹಿತಿಯನ್ನು ದಾಖಲಿಸಿ ಮೇಲೆ ಉಲ್ಲೇಖಿಸಿದ ಶಾಸನಗಳು ತಮ್ಮಷ್ಟಕ್ಕೆ ತಾವೇ ಮಹತ್ವವನ್ನು ಪಡೆದಿರುವುದು ಗಮನಾರ್ಹ.

ಹಾಲೆಬೇಲೂರು ವಾಸುದೇವ (ಚೆ‌ನ್ನಕೇಶವ?) ವಿಗ್ರಹ : ಸ್ಥಳೀಯರಿಂದ ಚೆನ್ನಕೇಶವ ಎಂದು ಕರೆಯಲ್ಪಡುವ ಈ ಶಿಲ್ಪವು ಶಾಸನದಲ್ಲಿ[41] ಉಲ್ಲೇಖಿಸಿದಂತೆ ವಾಸುದೇವ ವಿಗ್ರಹವಾಗಿದೆ. ಇದು ಸುಮಾರು ೫ ಅಡಿ ಎತ್ತರವಾಗಿದ್ದು, ಕಪ್ಪು ಶಿಲೆಯ (Post Stone) ಸುಂದರ ಹಸನ್ಮುಖ ಭಾವವನ್ನು ಹೊಂದಿದೆ. ವಾಸುದೇವು ನಿಂತ ಭಂಗಿಯಲ್ಲಿದ್ದು, ಬಲಗೈನ ಮುಂಭಾಗದಲ್ಲಿ ದಂಡ (ಗದೆ)ವಿದೆ. ಅದರ ಹಿಂಭಾಗದಲ್ಲಿ ಶಂಖವಿದೆ. ಎಡಗೈನ ಹಿಂಭಾಗದಲ್ಲಿ ಚಕ್ರವು ಮತ್ತು ಅದರ ಮುಂಭಾಗದಲ್ಲಿ ಪದ್ಮವಿದೆ. ಅವನ ಎಡಬಲದಲ್ಲಿ ಸಖಿಯರಿದ್ದಾರೆ. ಆಂಜನೇಯನ ಪೀಠದ ಮೇಲೆ ವಾಸುದೇವನನ್ನು ನಿಲ್ಲಿಸಲಾಗಿದ್ದು, ಪೀಠದ ಮುಂಭಾಗದಲ್ಲಿ ಆಂಜನೇಯನು ಎಡಗೈಯಲ್ಲಿ ಬೆಟ್ಟವನ್ನು ಎತ್ತಿಕೊಂಡು ಹಾರುತ್ತಿರುವ ಚಿತ್ರವಿದೆ. ವಾಸುದೇವನ ತಲೆಯ ಹಿಂಭಾಗದಲ್ಲಿ ಕೀರ್ತಿಮುಖವಿದೆ. ಶಂಕುವಿನಾಕಾರದ ಕಿರೀಟವಿದ್ದು, ಇದು ಸಾಲಿಗ್ರಾಮದ ಯೋಗನರಸಿಂಹನನ್ನು ನೆನಪಿಸುತ್ತದೆ. ಪ್ರಭಾವಳಿಯು ವಿಷ್ಣುವಿನ ದಶಾವತರಾದ ಚಿತ್ರಗಳನ್ನು ಹೊಂದಿರದೆ ಇರುವುದು ಕಂಡು ಬರುತ್ತದೆ. ವಿಗ್ರಹಕ್ಕೆ ಸ್ವಲ್ಪ ಹಾನಿಯಾಗಿದ್ದರೂ, ಅದರ ಪ್ರತಿಯೊಂದು ಅಂಗಾಂಗಗಳೂ ಸೂಕ್ಷ್ಮ ಕೆತ್ತನೆಯಿಂದ ಕೆತ್ತಲ್ಪಟ್ಟಿರುವುದು, ಅದೂ ಬೇಲೂರು ಚೆನ್ನಕೇಶವ (೧೧೮೮ರಲ್ಲಿ)ನನ್ನು ಕೆತ್ತುವ ಮುಂಚೆಯೆ ಸ್ಥಳೀಯ ಕದಂಬರಿಂದ (ಕ್ರಿ.ಶ. ೧೦೯೫ ರಲ್ಲಿ) ನಿರ್ಮಿಸಲ್ಪಟ್ಟಿರುವುದು ಗಮನಾರ್ಹವಾದುದು. (ಛಾಯಾಚಿತ್ರ ನೋಡಿ)

ಶಾಸನ ಶಿಲ್ಪ

ಹಾಲೆಬೇಲೂರಿನ ವಾಸುದೇವ ದೇವಾಲಯದ ಹಿಂಭಾಗದಲ್ಲಿ ದೇವಾಲಯದ ನಿರ್ಮಾಣ ಮತ್ತು ದತ್ತಿಗೆ ಸಂಬಂಧಿಸಿದ ಶಾಸನವಿದೆ. ಇದನ್ನು ಪೀಠದ ಮೇಲೆ ನಿಲ್ಲಿಸಲಾಗಿದ್ದು ಇದು ಅರ್ಧ ಅಡಿ ಅಗಲ ಮತ್ತು ಆರೂವರೆ ಅಡಿ ಎತ್ತರವಿದೆ. ಶಾಸನದ ಎರಡೂ ಕೊನೆಯಲ್ಲಿ ಅರೆಗಂಭದ ಮಾದರಿಯಿದ್ದು, ನಡುವೆ ಶಾಸನ ಕೆತ್ತಲಾಗಿದೆ. ಶಾಸನದ ಮೇಲೆ ಚಾಚಿದ್ದ ಪಟ್ಟಿ ಬಂದಿದ್ದು, ಅದರ ಮೇಲೆ ತ್ರಿಭಂಗದಲ್ಲಿ ನಿಂತ ವಾಸುದೇವನ ಚಿತ್ರವಿದೆ. ಅವನ ಎಡಭಾಗಕ್ಕೆ ಹಸು ಮತ್ತು ಕರುವನ್ನು ಚಿತ್ರಿಸಲಾಗಿದೆ. ಸುತ್ತುವರಿದಂತೆ ಅಲಂಕೃತವಾದ ಕೀರ್ತಿಮುಖ ಬಂದಿದ್ದು ಶಾಸನವು[42] ಮಾರ್ಚ್‌೯೧೪. ೧೦೯೫ರ ಇಸವಿಗೆ ಸೇರಿದೆ. (ಛಾಯಾ ಚಿತ್ರ ನೋಡಿ)

 

[1]ಜಾರ್ಜ್‌ಎಂ. ಮೊರೆಸ್, ದಿ ಕದಂಬ ಕುಲ – ಎ ಇಸ್ಟರಿ ಆಫ್ ಏನ್ಸಿಯಂಟ್ ಅಂಡ್ ಮೆಡಿವಲ್‌ಕರ್ನಾಟಕ ಪುಟ – ೨೨೪.

[2](ಎಪಿಗ್ರಾಫಿಯಾ ಕರ್ನಾಟಿಕಾ)-೯, ಪರಿಷ್ಕೃತ ಮುದ್ರಣ, ಸಕಲೇಶಪುರ-೧೪, ಹಲಸುಲಿಗೆ, ಸುಮಾರು ೧೦-೧೧ನೇ ಶತಮಾನ.

[3]ಎ.ಕ. – ೫. ಮಂಜ್ರಾಬಾದ್ – ೩೫.

[4]ಎ.ಕ. – ೯, ಪೀಠಿಕೆ X/vi

[5]ಅದೇ.

[6]ಅದೇ.

[7]ಎ.ಕ.-೮, ಆಲೂರು – ೮, ಮಾರ್ಚ್‌೯೧೬, ೧೦೨೫.

[8]ಎ.ಕ.-೮, ಮೂಡಿಗೆರೆ – ೧೯

[9]ಎ.ಕ.-೯, ಸಕಲೇಶಪುರ – ೪೫, ೧೪ ಮಾರ್ಚ್‌೯ ೧೦೯೫.

[10]ಎ.ಕ.-೨, ಪೀಠಿಕೆ, x/vii

[11]ಅದೇ.

[12]ಎ.ಕ.-9, ಸಕಲೇಶಪುರ – ೩೬.

[13]ಎ.ಕ.-೯, ಸಕಲೇಶಪುರ – ೪೫, ೧೪ ಮಾರ್ಚ್‌೧೦೯೫.

[14]ಅದೇ.

[15]ಎ.ಕ.-೯, ಪೀಠಿಕೆ x/vii

[16]ಎ.ಕ.-೩, ೧೩೫-ಹೆಗ್ಗಡೆದೇವನ ಕೋಟೆ.

[17]ರಮೇಶ್.ಕೆ.ವಿ. ತುಳುನಾಡಿನ ಇತಿಹಾಸ ಪುಟ. ೫೨

[18]ಎ.ಕ.-೧, ಸೋಮವಾರ ಪೇಟೆ – ೬೨, ೬ ಜುಲೈ ೧೦೯೫.

[19]ಎ.ಕ.-೧, ಪೀಠಿಕೆ ಪುಟ xxxi

[20]ಎ.ಕ.-೧ ಪೀಠಿಕೆ ಪುಟ x x vi

[21]ಎ.ಕ.-೯ ಸಕಲೇಶಪುರ – ೪೫, ೧೪ ಮಾರ್ಚ್ ೧೦೯೫.

[22]ಎ.ಕ.-೧, ಸೋಮವಾರ ಪೇಟೆ -೬೨, ೬ ಜುಲೈ ೧೦೯೫.

[23]ಅದೇ.

[24]ಎ.ಕ.-೯, ಸಕಲೇಶಪುರ – ೪೫, ೧೪ ಮಾರ್ಚ್‌೧೦೯೫.

[25]ಅದೇ.

[26]ಎ.ಕ.-೦, ಬೇಲೂರು-೧೬,ಮಾರ್ಚ್ ೯೧೦, ೧೧೧೭.

[27]ಎ.ಕ.-೯, ಹಳೇಬೀಡು-೩೩೫, ೧೦೬೨-೬೩.

[28]ಎ.ಕ.-೯, ಸಕಲೇಶಪುರ – ೪೫, ೧೪ ಮಾರ್ಚ್‌೧೦೯೫.

[29]ಎ.ಕ.-೧, ಸೋಮವಾರ ಪೇಟೆ – ೬೨, ೬ ಜುಲೈ ೧೦೯೫.

[30]ಜಾಜ್‌ಎಂ. ಮೊರೆಸ್, ಹಿಂದೆ ಉಲ್ಲೇಖಿಸಿದ್ದು, ಪುಟ – ೨೨೪.

[31]ಎ.ಕ.-೯, ಸಕಲೇಶಪುರ – ೪೫, ೧೪ ಮಾರ್ಚ್‌೯ ೧೦೯೫.

[32]ಎ.ಕ.-೯, ಸಕಲೇಶಪುರ – ೩೪, ೧೦೨೨-೨೩.

[33]ವೈರಿಯ ಹೆಸರು ಅಳಿಸಿಹೋಗಿರಬಹುದಾದರೂ, ಆತ ಗಂಗ ವಂಶದ ನೀತಿಮಹಾರಾಜನೆ ಆಗಿದ್ದಾನೆ ಎಂದು ಊಹಿಸಿಕೊಳ್ಳಬಹುದಾಗಿದ್ದು, ಗುಳೆ ಹೊರಟು ಬಂದು ಇಲ್ಲಿ ಬಿಡಾರ ಹೂಡಿದಾಗ ವೈರಿಯಾಗಿ ಕಂಡು ಬಂದು ಸ್ಥಳೀಯ ಪ್ರತಿಭಟನೆ ಎದುರಾಗಿರಬೇಕು.

[34]ಜಾರ್ಜ್‌ಎಂ. ಮೊರೆಸ್, ಹಿಂದೆ ಉಲ್ಲೇಖಿಸಿದ್ದು, ಪು ೨೨೪.

[35]ಎ.ಕ.-೯, ಬೇಲೂರು ೧೬, ಮಾರ್ಚ್‌೧೦, ೧೧೧೭.

[36]ಎ.ಕ.-೯, ೯೬, ೯೯, ೧೩೪, ೧೪೫, ೧೬೩, ೧೬೮ ಮತ್ತು ಇತರ ಶಾಸನಗಳು.

[37]ಎ.ಕ.-೯, ಬೇಲೂರು – ೩೪೧, ೧೦೯೭-೯೮.

[38]ಎ.ಕ.-೮, ಆಲೂರು-೮, ಮಾರ್ಚ್‌೧೬, ೧೦೨೫.

[39]ಎ.ಕ.-೧, ಸೋಮವಾರ ಪೆಟೆ – ೬೨, ೬ ಜುಲೈ ೧೦೯೫.

[40]ಅದೇ.

[41]ಎ.ಕ.-೯, ಸಕಲೇಶಪುರ – ೪೫, ಪುಟ – ೫೨೬, ಕ್ರಿ.ಶ. ೧೦೯೫.

[42]ಅದೇ.