ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಪರಿಸ್ಥಿತಿ

ವಿವಿಧ ಅಂಗಗಳಲ್ಲಿ ಇವರ ಕಾರ್ಯವೈಖರಿಯನ್ನು ಗುರುತಿಸುವ ಮುನ್ನ, ಇವರಿಗೆ ಸಂಬಂಧಿಸಿದ ಶಾಸನ ಸ್ವರೂಪವನ್ನು ಪರಿಚಯಿಸಿ ಕೊಳ್ಳುವುದು ಅವಶ್ಯ. ಈವರೆಗೆ ಒಟ್ಟು ಇಪ್ಪತ್ನಾಲ್ಕು ಶಾಸನಗಳು ದೊರೆತಿದ್ದು, ಅವು ಶಿವಮೊಗ್ಗ ಜಿಲ್ಲೆ, ಧಾರವಾಡ ಜಿಲ್ಲೆಗೆ ಸಂಬಂಧಿಸಿವೆ. ಇವುಗಳಲ್ಲಿ ಕೆಲವು ಶಾಸನಗಳು ಸೌತ್ ಇಂಡಿಯನ್ ಇನ್‌ಸ್ಕ್ರಿಪ್ಷನ್‌ ಸಂಖ್ಯೆ-೧೮ರಲ್ಲಿಯೂ, ಧಾರವಾಡ ಜಿಲ್ಲಾ ಶಾಸನಸೂಚಿಯಲ್ಲೂ, ಎಪಿಗ್ರಾಫಿಯಾ ಕರ್ನಾಟಕ-ಸಂಖ್ಯೆ : VIII ರಲ್ಲಿಯ ದೊರೆತಿವೆ. ಸ್ಪಷ್ಟವಾಗಿ ಇವು ಬೆಳ್ಹುಗೆ-೭೦, ಎಡೆನಾಡು-೭೦ರ ಭಾಗಕ್ಕೆ ಸೇರಿವೆ. ಇಲ್ಲಿ ಮೂರು ಶಾಸನಗಳು ಮಾತ್ರ ಹಿರೇಕೆರೂರು ಭಾಗಕ್ಕೆ ಸೇರಿವೆ. ಈ ಭಾಗ ಬಹುತೇಕ ಸತ್ತಳಿಗೆ-೭೦ಕ್ಕೆ ಸೇರಿತ್ತೆನಿಸಿದೆ. ಇಲ್ಲಿ ಒಂಬತ್ತು ಶಾಸನಗಳು ರಾಷ್ಟ್ರಕೂಟರ ಕಾಲಕ್ಕೆ ಸೇರಿದ್ದು ಉಳಿದವು ಕಲ್ಯಾಣಿ ಚಾಲುಕ್ಯರ ಕಾಲದವು. ಶೈವ ಸ್ತುತಿಯನ್ನೊಳಗೊಂಡು ಎಲ್ಲವೂ ಕನ್ನಡ ಲಿಪಿಯಲ್ಲಿವೆ. ಮೂರು ಪ್ರತ್ಯೇಕ ಪ್ರಕಾರಗಳಲ್ಲಿ ಗೋಸಹಸ್ರ ಶಾಸನಗಳೂ ಇವೆ. ಹಾಗೆಯೇ ಇವರ ಶಾಸನಗಳಲ್ಲಿ ಕೆಲವು ಅಪೂರ್ಣ ಹಾಗೂ ತೃಟಿತಗೊಂಡಿವೆ.

ಕ್ರಿ.ಶ. ೯೫೮ರ ದೇವಗೆರಿ ಶಾಸನ ‘ಭೂತಗೊಳ್‌ದಾನ’ವನ್ನು ಉಲ್ಲೇಖಿಸಿದೆ.[1] ಇದೊಂದು ಅಪರೂಪದ ಸಂಗತಿ. ಹತ್ತನೇ ಶತಮಾನದ ಸಮಾಜದಲ್ಲಿ ಈ ಭೂತ, ಪ್ರೇತಗಳ ಕುರಿತು ಜನಸಾಮಾನ್ಯನ ಕಲ್ಪನೆ, ಅದಕ್ಕೆ ಅರಸನ ಪ್ರತಿಕ್ರಿಯೆ ಹೇಗಿತ್ತು ಎಂಬುದಕ್ಕೆ ಈ ಶಾಸನ ಅತ್ಯುತ್ತಮ ನಿದರ್ಶನ. ಕ್ರಿ.ಶ. ೯೭೨ರ ಇನ್ನೊಂದು ಶಾಸನ ಮತ್ತೊಂದು ವಿಶಿಷ್ಟ ಸಂಗತಿಯನ್ನು ಚಿತ್ರಿಸಿದೆ. ಇಲ್ಲಿ ಒಬ್ಬ ಸಾಮಾನ್ಯ ಪ್ರಜೆಯ ಸ್ವಾಮಿನಿಷ್ಠೆ ಹಾಗೂ ಅರಸನ ಮೇಲಿನ ಆದಮ್ಯ ನಂಬುಗೆ, ವಿಶ್ವಾಸದ ಪರಿ ಯಾವ ರೀತಿ ಇತ್ತು ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ.[2] ಈ ಶಾಸನವನ್ನು ‘ವೇಳೆವಾಳಿ’ ಪ್ರಸಂಗ ವೆಂದು ಕರೆಯಬಹುದು. ಈ ಶಾಸನದ ಕಂಡರಿಕೆ ಕೂಡ ಅತ್ಯಂತ ನೈಜವಾಗಿದ್ದು, ಆ ಕಾಲದ ಶಿಲ್ಪಿಗಳ ಕಲಾ ನೈಪುಣ್ಯಕ್ಕೆ ಹಿಡಿದ ಕನ್ನಡಿಯಂತಿವೆ. ಕ್ರಿ.ಶ. ೧೦೩೩ರ ಕುಪ್ಪಗಡ್ಡೆ ಶಾಸನ[3] ಈ ದೃಷ್ಟಿಯಿಂದ ಅತ್ಯಂತ ಗಮನಸೆಳೆಯುವಂತಾದ್ದು. ಇಲ್ಲಿ ಮಾಟೂರ ಆಲಯ್ಯ ಹಾಗೂ ಜಯಸಿಂಘದೇವನ ಸಾಹಸ ಚಿತ್ರಣವನ್ನು ಚಂಪಕ, ಮತ್ತೇಭವಿಕ್ರೀಡಿತ ವೃತ್ತ ಬಳಸಿ ಶ್ರೀಮಂತಗೊಳಿಸಲಾಗಿದೆ. ಆಲಯ್ಯನ ಸಾವನ್ನು ಉಲ್ಲೇಖಿಸಿರುವ ಈ ಶಾಸನದ ಕರ್ತೃ ಕವಿರಾಜ ಕಪ್ಪಣಭಟ್ಟ.

ರಾಷ್ಟ್ರಕೂಟ ಹಾಗೂ ಕಲ್ಯಾಣಿ ಚಾಲುಕ್ಯಕಾಲದ ಶಾಸನಗಳ ರಚನೆಯೇ ವಿಶೇಷವಾದದ್ದು. ಇಲ್ಲಿ ಶಿಲ್ಪಿಗಳು ಒಂದು ದೇಗುಲಕ್ಕೆ ನೀಡುವ ಪ್ರಾಮುಖ್ಯತೆಯನ್ನೇ ಶಾಸನಫಲಕಗಳನ್ನು ರಚಿಸುವುದರಲ್ಲೂ ತೋರಿದ್ದಾರೆ. ಅದರಲ್ಲೂ ವೀರಗಲ್ಲುಗಳು ಹಾಗೂ ಗೋಸಾಸಗಳ ರಚನೆ ಅತ್ಯಂತ ಗಮನ ಸೆಳೆವಂತಿರುತ್ತವೆ. ಓಟೂರು, ಕೆರೆಹಳ್ಳಿ, ಹೆಚ್ಚೆ ಶಾಸನಗಳನ್ನು ಇಲ್ಲಿ ಉದಾಹರಿಸಬಹುದು. ಇವರ ಶಾಸನಗಳನ್ನು ಕಂಡರಿಸಿದ ಶಿಲ್ಪಿಗಳು ಕಟುಕೋಜ,[4] ಚಾಮುಂಡೋಜ,[5] ಮಾಚೋಜ[6] ಬಿಯಳ[7] ಈ ನಾಲ್ವರು ಶಾಸನ ರೂವಾರಿಗಳು. ಕಪ್ಪಣಭಟ್ಟ[8], ಭರತಯ್ಯ[9],ಪಿಟ್ಟಪ್ಪಯ್ಯ,[10] ಮಾರಯ್ಯ,[11] ಬೀಚ,[12] ನಾಕಯ್ಯ,[13] ಇವರುಗಳು ಶಾಸನಪಾಠದ ರಚನಾಕಾರರು.

ಶಾಸನಗಳು ಆಯಾಕಾಲದ ಅಧಿಕಾರ ವರ್ಗ, ಅವರ ಬಿರುದು ಸ್ಥಾನಮಾನದ ಪ್ರಸ್ತಾಪ, ಗ್ರಾಮೀಣ ರಾಜಕೀಯ ಸ್ವರೂಪ, ಧಾರ್ಮಿಕ ಸಂಗತಿ ಇತ್ಯಾದಿ ಹಲವಾರು ಐತಿಹಾಸಿಕ ಸಂಗತಿಗಳನ್ನು ದಾಖಲಿಸುತ್ತವೆ. ಉದಾಹರಣೆಗೆ ಅಧಿಕಾರ ವರ್ಗ: ಕ್ರಿಶ.೯೩೯ರಲ್ಲಿನ ಹೆಚ್ಚೆ ಶಾಸನದನ್ವಯ, ಆ ಹೊತ್ತಿಗೆ ಬನವಾಸಿ ಪ್ರಾಂತ್ಯದ ಮಾಂಡಳೀಕ ಕದಂಬ ಚಟ್ಟಯ್ಯನೆಂದು ದಾಖಲಿಸಿದೆ. [14] ಕ್ರಿ.ಶ. ೯-೧೦ರ ಕದರ ಮಂಡಲಗಿ ಶಾಸನದನ್ವಯ ಬನವಾಸಿ ಪ್ರಾಂತ್ಯಕ್ಕೆ ಬೆಳ್ಹುಗೆ ಪ್ರದೇಶದಿಂದ ಆಯಿಚವರ್ಮ ಮಾಂಡಳೀಕ[15]. ಕ್ರಿ.ಶ. ೧೦೩೨ರ ಗುಡವಿ ಶಾಸನದಲ್ಲಿ ಕದಂಬಯ್ಯದೇವ ಬನವಾಸಿ ಆಳುತ್ತಿದ್ದುದು, ಪೆರ್ಗಡೆ ಮಾದಿಣಯ್ಯ ಇವನ ಮೇಲೆ ಯುದ್ಧಕ್ಕೆ ಬಂದದ್ದು ದಾಖಲಾಗಿದೆ[16] ಕ್ರಿ.ಶ. ೧೦೮೮ರ ಉಕ್ಕುಂದದ ಶಾಸನ ಎರಡಾರುನೂರರ ಹಾಗೂ ಬನವಾಸಿ ಪ್ರಾಂತ್ಯದ ದಂಡನಾಯಕನಾಗಿದ್ದ ಸೋಮೇಶ್ವರ ಭಟ್ಟನನ್ನು ಉಲ್ಲೇಖಿಸಿದೆ. [17] ಹೀಗೆ ಈ ಶಾಸನಗಳು ಅಂದಿನ ಗಾವುಂಡರು, ಪೆರ್ಗಡೆಗಳು, ಮಹಾಜನರು ಮುಂತಾದವರನ್ನು ದಾಖಲಿಸಿವೆ.

ಕ್ರಿ.ಶ. ೯೩೮ರ ಓಟೂರು ಶಾಸನ ಶೈವಗುರು ಈಶ್ವರಯ್ಯನನ್ನೂ,[18] ಕ್ರಿ.ಶ. ೯೩೯ರ ಹೆಚ್ಚೆ ಶಾಸನ ರುದ್ರಶಕ್ತಿ ಪಂಡಿತರನ್ನು,[19] ಕ್ರಿ.ಶ. ೧೦೮೮ರ ಉಕ್ಕುಂದ ಶಾಸನ ಗಂಗರಸಿ ಪಂಡಿತರ ಶಿಷ್ಯ ಸಿಂಘ ಪಂಡಿಗರನ್ನೂ,[20] ೯-೧೦ನೇ ಶತಮಾನದ ಕದರಮಂಡಲಗಿ ಶಾಸನ ಜಿನಮುನಿ ವೃಷಭ ನಂದಿ ಗೊರವರು ಹಾಗೂ ತಿರಳನಂದಿ ಗೊರವರನ್ನು ಉಲ್ಲೇಖಿಸುತ್ತಿವೆ. [21] ಆಯಾ ಕಾಲದ ಗುರು ಪರಂಪರೆಯ ಚಿತ್ರಣಕ್ಕೆ ಈ ಶಾಸನಗಳು ಉದಾಹರಣೆಯಾಗಿವೆ.

ಇವರ ಶಾಸನಗಳಲ್ಲಿ ‘ಪಡೆವಳ’ರ ಬಗ್ಗೆ ಉಲ್ಲೇಖಗಳಿರುವುದು ಗಮನಾರ್ಹವಾಗಿದೆ. ಕ್ರಿ.ಶ. ೯೫೮ರ ಕಿರುಗುಣಿಸೆ ಗ್ರಾಮದ ಶಾಸನದಲ್ಲಿ. ಪಡೆವಳರ ‘ಅರಿಗ’ ಎಂಬಾತ ‘ಎಲಸಿ’ ಗ್ರಾಮವನ್ನು ಗೋಸಹಸ್ರವಿರಿಸಿಕೊಟ್ಟಂತೆ ಉಲ್ಲೇಖಿಸಿದೆ.[22] ಇಲ್ಲಿ ಶಾಸನದ ವಿಷಯ ಅಸ್ಪಷ್ಟವಾದಾಗ್ಯೂ ‘ಪಡೆವಳ’ರು ಇದ್ದ ಉಲ್ಲೇಖ ಮುಖ್ಯವಾಗಿದೆ. ಬಹುಶಃ ಖಾಸಗಿ ಪಡೆವಳರು ಯುದ್ಧ ಸಮಯದಲ್ಲಿ ಸೈನ್ಯ ಒದಗಿಸುತ್ತಿದ್ದರೆಂದು ಕಾಣುತ್ತದೆ. ಇದೇ ಗ್ರಾಮದ ಸಮೀಪ ಇನ್ನೊಂದು ಗ್ರಾಮದ ಕ್ರಿ.ಶ. ೧೦೫೭ರ ಶಾಸನ ಕೂಡ ಕೆಲವು ಪಡೆವಳರನ್ನು ಉಲ್ಲೇಖಿಸಿದೆ.[23]

ಪ್ರಾಚೀನ ದಿನಗಳಲ್ಲಿನ ಸಾರ್ವತ್ರಿಕ ಹಾಗೂ ಸಾಮಾನ್ಯ ಸಂಗತಿ ಎಂದರೆ ಬಹುಶಃ ಧಾರ್ಮಿಕ ಸಂಗತಿ ಎನ್ನಿಸುತ್ತದೆ. ಹೆಚ್ಚಿನ ಶಾಸನಗಳು ಅನೇಕ ಧಾರ್ಮಿಕ ಸಂಗತಿಗಳನ್ನು ಉಲ್ಲೇಖಿಸಿವೆ. ಉದಾಹರಣೆಗಾಗಿ, ಕ್ರಿ.ಶ. ೯-೧೦ನೇ ಶತಮಾನದ ಕದರಮಂಡಲಗಿ ಶಾಸನ- ಅಲ್ಲಿನ ಬಸದಿಯೊಂದಕ್ಕೆ ಕೆಲವು ದಾನ ನೀಡಿದ್ದನ್ನು ಹೇಳಿದೆ.[24] ಕ್ರಿ.ಶ. ೧೦೮೮ರ ಉಕ್ಕುಂದದ ಶಾಸನವು ಶಿವಾಲಯ ನಿರ್ಮಿಸಿದ ಇಲ್ಲಿನ ಗಾವುಂಡರಿಗೆ ಇವರು ಭೂದಾನ ನೀಡಿದ್ದನ್ನು ಉಲ್ಲೇಖಿಸಿದೆ.[25] ಕ್ರಿ.ಶ. ೯೩೮ರ ಓಟೂರು ಗ್ರಾಮದ ಶಾಸನ ಇಲ್ಲಿ ನಿರ್ಮಾಣವಾದ ಶಿವಾಲಯ ಹಾಗೂ ಕೆಲವು ಮೂರ್ತಿಗಳ ಸ್ಥಾಪನೆ ಕುರಿತು ಉಲ್ಲೇಖಿಸಿದೆ.[26] ಇಲ್ಲಿ ಈ ಅರಸರು ದೇವರಿಗಾಗಿ ಭೂದಾನ ನೀಡಿದ್ದಾರೆ. ಕ್ರಿ.ಶ. ೯೩೯ರ ಹೆಚ್ಚೆ ಶಾಸನ ಒಂದು ಶಿವಾಲಯದ ನಿರ್ಮಾಣವನ್ನು ಕುರಿತು ಪ್ರಸ್ತಾಪಿಸುತ್ತ, ಆ ದೇವರ ಅಂಗಭೋಗ, ರಂಗಭೋಗ, ಚೈತ್ರ, ಪವಿತ್ರಾದಿ, ಖಂಡಸ್ಫುಟಿತ ಜೀರ್ಣೋದ್ಧಾರಕ್ಕಾಗಿ, ತಪೋಧನರ ಆಹಾರಕ್ಕಾಗಿ ‘ಕುಳುಗ’ ಗ್ರಾಮವನ್ನು ಬಿಟ್ಟಂತೆ ಉಲ್ಲೇಖಿಸಿದೆ.[27] ಕ್ರಿ.ಶ. ೧೦೩೩ರ ಕುಪ್ಪಗಡ್ಡೆ ಶಾಸನದಲ್ಲಿ ಜಯಸಿಂಘದೇವ ತನ್ನ ತಂದೆ ಆಲಯ್ಯನ ನೆನಪಿಗಾಗಿ ‘ಆಲೇಶ್ವರ’ ನಿರ್ಮಿಸಿದ್ದು, ದೇಗುಲದ ಪೂಜಾ ನೈಮಿತ್ಯಕ್ಕಾಗಿ ಭೂದಾನ ನೀಡಿದ್ದನ್ನು ಉಲ್ಲೇಖಿಸಿದೆ.[28] ಹೀಗೆ ಇವರ ಶಾಸನಗಳಲ್ಲಿ ಇನ್ನೂ ಅನೇಕ ದೇಗುಲಗಳ ನಿರ್ಮಾಣದ ಕುರಿತು ಉಲ್ಲೇಖಗಳು ದೊರೆಯುತ್ತವೆ.

ಇವರ ಸಾಮಾಜಿಕ ಕಾರ್ಯಗಳಲ್ಲಿ ಉದಾಹರಿಸಬಹುದಾದ ಸಂಗತಿಗಳೆಂದರೆ, ಕ್ರಿ.ಶ. ೯೫೪ರಲ್ಲಿ ಮುಟ್ಟುಗುಪ್ಪೆ ಗ್ರಾಮವನ್ನು ಮಹಾಜನರಿಗಾಗಿ ಬಿಟ್ಟುಕೊಟ್ಟಿದ್ದು.[29] ಕ್ರಿ.ಶ. ೯೩೮ರಲ್ಲಿ ಓಟೂರು ಗ್ರಾಮದಲ್ಲಿ ಒಂದು ಭಾವಿ ತೆಗೆಸಿದ ಉಲ್ಲೇಖ.[30]ಕ್ರಿ.ಶ. ೯೦೩ರಲ್ಲಿ ಕೆರೆಹಳ್ಳಿ ಗ್ರಾಮದಲ್ಲಿ ಒಂದು ಕೆರೆ ತೋಡಿಸಿದ ಸಂಗತಿ.[31] ಕ್ರಿ.ಶ. ೯೫೪ರಲ್ಲಿ ಕಕ್ಕರಶಿಯ ಒಂದು ಕೆರೆಯ ಜೀರ್ಣೋದ್ಧಾರ.[32] ಕ್ರಿ.ಶ. ೯೭೨ ರಲ್ಲಿ ಒಡೆಯನಿಗೆ ಪುತ್ರ ಪ್ರಾಪ್ತಿಯನ್ನು ಬಯಸಿ ಪ್ರಾಣಾರ್ಪಣ ಮಾಡಿದ ಹೆಚ್ಚೆಯ ‘ಆಕಟೆ’ ವಂಶದವರಿಗಾಗಿ ಭೂದಾನ ನೀಡಿದ್ದು.[33] ಹೀಗೆ ಇನ್ನೂ ಅನೇಕ ಸಾಮಾಜಿಕ ಸಂಗತಿಗಳು ಇವರ ಶಾಸನಗಳಲ್ಲಿ ದಾಖಲಾಗಿವೆ.

ಆ ಕಾಲದಲ್ಲಿದ್ದ ಅಗ್ರಹಾರಗಳು, ಮಠಗಳು, ಮಹಾಜನರ ಪಾತ್ರ, ಅವರ ಹಾಗೂ ಜನ ಸಾಮಾನ್ಯರ ಸ್ಥಿತಿ ಇತ್ಯಾದಿ ವಿಚಾರಗಳೆಲ್ಲವೂ ಇವರ ಶಾಸನಗಳಲ್ಲಿ ಉಲ್ಲೇಖಗೊಂಡಿವೆ. ಹೀಗೆ ನಿರಂತರವಾಗಿ ಸುಮಾರು ಇನ್ನೂರು ವರುಷಗಳಷ್ಟು ಕಾಲ ತಮ್ಮ ಆಡಳಿತ ಕಷೇತ್ರಗಳಿಗೆ ವಿವಿಧ ರೀತಿಯ ಸೇವೆ ಸಲ್ಲಿಸಿದ ಮಾಟೂರ ಅರಸರಿಗೆ, ಕಲ್ಯಾಣಿ ಚಾಲುಕ್ಯ ಹಾಗೂ ಕದಂಬರ ವೈವಾಹಿಕ ಸಂಬಂಧದ ಕಾರಣವಾಗಿ ಬಹುಶಃ ಈ ಭಾಗಗಳ ಒಡೆತನಕ್ಕೆ ಕೈ ಬಿಟ್ಟಿರಬೇಕು. ಅಲ್ಲದೆ ಬನವಾಸಿ ಪ್ರದೇಶ ಕ್ರಿ.ಶ. ೪ನೇ ಶತಮಾನದಿಂದಲೇ ಕದಂಬರ ಒಡೆತನದಲ್ಲಿದ್ದು, ನಂತರದಲ್ಲಿ ಕೈತಪ್ಪಿದ್ದರೂ ಕೂಡ ಮತ್ತೆ ಮತ್ತೆ ಹಕ್ಕು ಸ್ಥಾಪನೆಗಾಗಿ ಹೋರಾಟ, ಪ್ರಯತ್ನ ನಡೆಸುತ್ತಿದ್ದುದು ಶಾಸನಗಳಿಂದ ತಿಳಿಯುತ್ತದೆ. ನಡುನಡುವೆ ಅವರು ಇದರಲ್ಲಿ ಯಶಸ್ಸನ್ನೂ ಕಂಡಿದ್ದರು. ಇಷ್ಟಾಗಿ ಮಾಟೂರ ಅರಸರು ಮಾಂಡಳೀಕ ಪದವಿಗೇರಿದ್ದರು. ಆದರೆ ಆಗಲೂ ಮೂಲ ಪ್ರದೇಶದ ಸ್ವಾಮ್ಯವನ್ನಷ್ಟೇ ಅವರಿಗೆ ಉಳಿಸಿಕೊಳ್ಳಲು ಸಾಧ್ಯವಾಯಿತು. ಕ್ರಿ.ಶ. ೧೧೯೮ರ ಹೊತ್ತಿಗಾಗಲೇ ಇವರ ಮುಖ್ಯ ನೆಲೆಯಾದ ಹೆದ್ದಸೆಯನ್ನು ನೇಮಯ್ಯ ನೆಂಬುವನು ಆಕ್ರಮಿಸಿಕೊಂಡ ಉಲ್ಲೇಖ ಶಾಶನದಲ್ಲಿದೆ.[34] ಆ ಹೊತ್ತಿಗೆ ಮಲ್ಲಯ್ಯ ಎಂಬುವನು ಎಡೆನಾಡ ಅಧಿಕಾರಿಯಾಗಿದ್ದ. ಇದು ಕದಂಬ ಕಾಮದೇವನ ಕಾಲದ ಶಾಸನ.

ಹೆಚ್ಚೆ ಅರಸರ ಶಾಸನಗಳಲ್ಲಿನ ಕೆಲಪ್ರದೇಶಗಳ ಅಧ್ಯಯನ

ಇವರ ಶಾಸನಗಳು ದೊರೆತ ಪ್ರದೇಶ ಹಾಗೂ ಶಾಸನೋಲ್ಲೇಖದ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಅಧ್ಯಯನ ಮಾಡಲಾಗಿದೆ. ಮುಖ್ಯವಾಗಿ ಇಲ್ಲಿ ಎಡೆನಾಡ ಭಾಗದ ಪ್ರದೇಶಗಳನ್ನು ಗಮನಿಸಲಾಗಿದೆ.

ಹೆಚ್ಚೆ : ಮಾಟೂರ ವಂಶೀಯರ ಮಹತ್ವಪೂರ್ಣ ಶಾಸನ ದೊರೆತ ಸ್ಥಳ ಹಾಗೂ ಇವರ ಎಡೆನಾಡಿನ ಪ್ರಮುಖ ಕೇಂದ್ರ. ಕ್ರಿ.ಶ. ೪೦೦ರ ಹೊತ್ತಿಗೆ ಅಸ್ತಿತ್ವದಲ್ಲಿದ್ದ ಗ್ರಾಮ. ಪೆರ್ದಸೆ, ಹೆದ್ದಸೆ ಮುಂತಾದ ಹೆಸರಿನಿಂದ ಕರೆಯಲ್ಪಟ್ಟ ಇದು ಪ್ರಸ್ತುತ ಹೆಚ್ಚೆ ಎನಿಸಿಕೊಳ್ಳುತ್ತಿದೆ.

ಇಲ್ಲಿ ಈ ಅರಸರ ಒಟ್ಟು ಮೂರು ಶಾಸನಗಳು ದೊರೆತಿವೆ. ಕ್ರಿ.ಶ. ೯೩೯ರ ಶಾಸನದನ್ವಯ ಇಲ್ಲಿನ ಶ್ರೀಕಂಠದೇಗುಲದ ಪೂಜಾ ನೈಮಿತ್ಯಕ್ಕಾಗಿ ಭೂದಾನ ಹಾಗೂ ಗ್ರಾಮದಾನ ಬಿಟ್ಟಿದ್ದನ್ನು ಉಲ್ಲೇಖಿಸಿದೆ.[35] ಈ ದೇಗುಲ ಪ್ರಸ್ತುತ ನೀಲಕಂಠದೇಗುಲ ಎನಿಸಿಕೊಳ್ಳುತ್ತಿದ್ದು, ಮೂಲಗರ್ಭಗೃಹ ಉಳಿದಿದೆ. ೧೧೯” x ೧೧೯” x ೯೨” ಅಳತೆಯಲ್ಲಿರುವ ಈ ಗರ್ಭಗೃಹದ ಇದೇ ಕಾಲದ ಬೃಹತ್ ಶಿವಲಿಂಗ ಹಾಗೂ ಜೀರ್ಣೋದ್ಧಾರಗೊಂಡ ಮುಂಭಾಗದಲ್ಲಿನ ಎರಡು ಕಂಬ (೭೬” ಎತ್ತರ)ಗಳಲ್ಲದೆ, ದೇವಳಕ್ಕೆ ಸಂಬಂಧಿಸಿದ ಇನ್ನೂ ಅನೇಕ ಅವಶೇಷಗಳು ಇದೇ ಆವರಣದಲ್ಲಿವೆ. ಹಲವಾರು ಮೂರ್ತಿಶಿಲ್ಪಗಳು ಇಲ್ಲಿದ್ದು, ಹೆಚ್ಚಿನವು ವಿಜಯನಗರ ಕಾಲಕ್ಕೆ ಸೇರಿವೆ. ಈ ಗ್ರಾಮದಲ್ಲಿನ ಇನ್ನೂ ಕೆಲವು ಪಾಳು ದೇಗುಲಗಳಲ್ಲಿನ ಅವಶೇಷಗಳು ಕೂಡ ರಾಷ್ಟ್ರಕೂಟರ ಕಾಲಕ್ಕೆ ಸೇರುವಂತಾದ್ದು. ಊರಸುತ್ತ ಕೋಟೆಯ ಅವಶೇಷವಿದ್ದು, ಅದು ಮಣ್ಣಿನಿಂದ ನಿರ್ಮಾಣವಾಗಿದೆ. ಈ ಕೋಟೆಯ ಸಮೀಪ ದಪ್ಪ ಇಟ್ಟಿಗೆಯ ತುಂಡುಗಳು ಸಿಗುತ್ತಿವೆ. ಈ ಊರಿನ ಪ್ರಾಚೀನ ಕೆರೆ ಬೃಹದತ್ತಾಗಿದ್ದು, ಹನ್ನೆರಡು ಊರಿನ ಕೆರೆಯ ಹೆಚ್ಚಾದ ನೀರು ಕಾಲುವೆ ಮುಖಾಂತರ ಈ ಕೆರೆಗೆ ಸೇರುವಂತೆ ಯೋಜಿಸಿದ್ದು ಗಮನಾರ್ಹ.

ಕುಪ್ಪಗಡ್ಡೆ : ಶಾಸನಗಳು ಈ ಗ್ರಾಮವನ್ನು ಶ್ರೀಮದನಾದಿ ಅಗ್ರಹಾರ ಎಂದಿವೆ. ಪುಷ್ಪಗಡ್ಡೆ, ಪುಷ್ಟರಕಾಟ[36] ಇವು ಇದರ ಪ್ರಾಚೀನ ಹೆಸರು. ಮಾಟೂರ ಅರಸರಿಗೆ ಸಂಬಂಧಿಸಿದ ಇಲ್ಲಿನ ನೃಸಿಂಹ ದೇಗುಲದ ಆವರಣದಲ್ಲಿದೆ. ಕ್ರಿ.ಶ. ೧೦೩೩ರ ಜಯಸಿಂಘದೇವ ನಿರ್ಮಿಸಿದ ಆಲೇಶ್ವರ ದೇಗುಲವೂ ಇಲ್ಲೇ ಇದೆ. ಪೂರ್ಣ ಅವನತಿ ಹೊಂದಿರುವ ಈ ಗುಡಿಯ ಗರ್ಭಗೃಹದ ಅಳತೆ ೧೧೩” x ೧೧೩” x ೧೧೩”. ಇಲ್ಲಿನ ಶಿವಲಿಂಗ ಕೂಡ ಹೆಜ್ಜೆಯ ಶಿವಲಿಂಗದ ಅಳತೆಯಲ್ಲಿದೆ. ಈ ಗುಡಿ ವಿಸ್ತಾರದಲ್ಲಿ ಹಿರಿದಾಗಿತ್ತೆನ್ನಲು ಅಡಿಪಾಯದ ಅವಶೇಷಗಳಿವೆ. ಇದೇ ಆವರಣದಲ್ಲಿಆಲೇಶ್ವರ ಗುಡಿಗೆ ಸೇರಿದ ಮೂಲ ಬಸವ ವಿಗ್ರಹವಿದೆ. ನರಸಿಂಹ ಗುಡಿಯೊಳಗಿನ ವಿಗ್ರಹವು ಕ್ರಿ.ಶ. ೫ನೇ ಶತಮಾನಕ್ಕೆ ಸೇರಿದ್ದೆಂದು ಅ.ಸುಂದರರು ಉಲ್ಲೇಖಿಸಿದ್ದಾರೆ.[37] ಇಲ್ಲಿನ ಅನಂತಶಯನ ಮೂರ್ತಿ ಹಾಗೂ ರಾಮೇಶ್ವರ ಗುಡಿಯ ಬಳಿ ಇರುವ ಗಜಲಕ್ಷ್ಮಿ ಫಲಕ ಕೂಡ ೫-೭ನೇ ಶತಮಾನದ್ದೆಂದು ಸುಂದರರು ತಿಳಿಸಿದ್ದಾರೆ.[38] ಇದೇ ಆವರಣದಲ್ಲಿ ಸುಮಾರು ೨.೫” x ೩” ದಪ್ಪದ, ೭” x ೮” ಅಗಲದ ಇಟ್ಟಿಗೆ ತುಂಡುಗಳು ದೊರೆಯುತ್ತಿವೆ. ಈ ಅವಶೇಷಗಳೊಂದಿಗೆ ಇನ್ನೂ ಅನೇಕ ಮೂರ್ತಿಶಿಲ್ಪಗಳೂ ಇದ್ದು ಅವು ಕಲ್ಯಾಣಿ ಚಾಲುಕ್ಯ ಹಾಗೂ ವಿಜಯನಗರ ಕಾಲದ ಶಿಲ್ಪಗಳು. ಪೂರ್ಣಪ್ರಮಾಣದ ಚಾಲುಕ್ಯ ಶೈಲಿಯ ರಾಮೇಶ್ವರ ಗುಡಿ ಇಲ್ಲಿನ ಬೃಹತ್ ಕೆರೆಯ ಸಮೀಪವಿದೆ. ಕೆರೆಯಲ್ಲಿನ ತೂಬುಸ್ತಂಭದ ಗಜಲಕ್ಷ್ಮಿ ಫಲಕ ಕೂಡ ೭-೮ನೇ ಶತಮಾನಕ್ಕೆ ಸೇರುವಂತಾದ್ದು. ಊರ ಹೊರಗಿನ ಬಸವ ದೇಗುಲದ ಗರ್ಭಗೃಹ ಗಜಪೃಷ್ಠಾಕಾರದಲ್ಲಿದೆ. ಇಲ್ಲಿನ ದ್ವಾರ ಶಾಖೆ ರಾಷ್ಟ್ರಕೂಟ ಕಾಲದ ವಿನ್ಯಾಸವನ್ನು ಹೊಂದಿದೆ. ಇಲ್ಲಿಯೇ ಹನ್ನೊಂದು ಗೋಸಾಸ ಕಲ್ಲುಗಳಿವೆ.

ಓಟೂರು : ಕ್ರಿ.ಶ. ೯೩೮ರ ಮಾಚಿ ಅರಸನ ಶಾಸನ[39] ದೊರೆತ ಗ್ರಾಮ. ಈ ಶಾಸನ ಅಲ್ಲಿ ಒಂದು ಶಿವಾಲಯ, ಮಾಧವ, ಆದಿತ್ಯ ವಿಗ್ರಹಗಳ ಸ್ಥಾಪನೆ ಕುರಿತು ಉಲ್ಲೇಖಿಸಿದೆ. ಪ್ರಸ್ತುತ ಆ ಶಿವಾಲಯ ಜೀರ್ಣೋದ್ಧಾರ ಗೊಂಡಿದ್ದು, ಮಾಧವನ ಮೂರ್ತಿಕಾಣುತ್ತಿಲ್ಲ. ಆದಿತ್ಯ ವಿಗ್ರಹವಿದ್ದು ಅದರ ಕಾಲಮಾನದಲ್ಲಿ ಜಿಜ್ಞಾಸೆ ಇದೆ. ಬಹುತೇಕ ಅದು ವಿಜಯನಗರ ಕಾಲದ ಶಿಲ್ಪವೆನಿಸುತ್ತದೆ. ಇದೇ ದೇಗುಲದ ಎದುರು ಹಾಗೂ ಆವರಣದಲ್ಲಿ ರಾಷ್ಟ್ರಕೂಟ ಕಾಲದ ಕೆಲ ಅವಶೇಷಗಳು ಇವೆ. ಒಂದೇ ಕಡೆ ಹತ್ತು ಗೋಸಾಸ ಕಲ್ಲುಗಳೂ ಇವೆ. ಊರೊಳಗಿನ ಭೂತಪ್ಪನ ಬನದೊಳಗೆ ರಾಷ್ಟ್ರಕೂಟ ಕಾಲಕ್ಕಿಂತ ತುಸು ಮುಂಚಿನದೆನ್ನಬಹುದಾದ ಸ್ತಂಭ (೪೬” ಎತ್ತರ, ೨೭” ಸುತ್ತಳತೆ) ಮಹಿಷ ಮರ್ದಿನಿ ತೋರಣ ಫಲಕ, ಕೋಣನ ತಲೆ ಶಿಲ್ಪ ಕಂಡು ಬರುತ್ತಿದೆ. ಇಲ್ಲಿಯ ಮಣ್ಣಿನಲ್ಲಿ ೩’ ದಪ್ಪ ಹಾಗೂ ೮’ ಅಗಲದ ಇಟ್ಟಿಗೆ ತುಂಡುಗಳು ಇವೆ.

ಕೆರೆಹಳ್ಳಿ : ಹೆಚ್ಚೆ ಅರಸರ ಮೊದಲ ಶಾಸನವಿರುವ ಗ್ರಾಮ.ಕ್ರಿ.ಶ. ೯೦೩ರ ಇಲ್ಲಿನ ಶಾಸನ ಒಂದು ಶಿವಾಲಯ ಹಾಗೂ ಕೆರೆ ನಿರ್ಮಾಣದ ಕುರಿತು ಉಲ್ಲೇಖಿಸಿದೆ.[40] ಅಂತೆಯೇ ಇಲ್ಲಿ ಒಂದು ಬೃಹತ್‌ಕೆರೆಯ ಬಳಿ ಮೂಲ ಅಳತೆ ಕಳೆದುಕೊಂಡ ಶಿವಾಲಯವಿದೆ. ಈ ದೇಗುಲದ ಆವರಣ ಹಾಗೂ ಸಮೀಪದ ಹೊನ್ನಗುಡ್ಡದಲ್ಲಿ ೮” ಅಗಲ, ೩” ದಪ್ಪದ ಇಟ್ಟಿಗೆ ತುಂಡುಗಳಿವೆ.

ಕುಳುಗ : ಕ್ರಿ.ಸ.೯೩೯ರ ಹೆಚ್ಚೆಶಾಸನದಲ್ಲಿ[41] ಈ ಗ್ರಾಮದ ಉಲ್ಲೇಖವಿದೆ. ಈ ಗ್ರಾಮವನ್ನು ಹೆಚ್ಚೆಯ ಶ್ರೀಕಂಠ ದೇಗುಲದ ಪೂಜಾ ನೈಮಿತ್ಯಕ್ಕಾಗಿ ದಾನಬಿಟ್ಟಿದೆ. ಇಲ್ಲಿಯೂ ಸಾಕಷ್ಟು ಪ್ರಾಚೀನ ಅವಶೇಷಗಳಿದ್ದು ರಾಷ್ಟ್ರಕೂಟ ಕಾಲದ ಎರಡು ಗಜಲಕ್ಷ್ಮಿ ಫಲಕ ಗಮನ ಸೆಳೆಯುವಂತಿದೆ. ಇನ್ನೂ ಕೆಲವು ಕಲ್ಯಾಣಿ ಚಾಲುಕ್ಯರ ಅವಧಿಗೆ ಸೇರಿದ ದೇಗುಲ, ಮೂರ್ತಿಶಿಲ್ಪಗಳು ಅವನತಿ ಗೊಂಡಿವೆ. ಕಾಡಂಚಿನ ಒಂದೆಡೆ ದಪ್ಪ ಇಟ್ಟಿಗೆಗಳ ಅವಶೇಷ ಕೂಡ ಸಾಮಾನ್ಯವಾಗಿದೆ.

ಕಕ್ಕರಸಿ : ಕ್ರಿ.ಶ. ೯೫೪ರ ಮಾಚಿ ಅರಸನ ಶಾಸನ[42] ದೊರೆತ ಸ್ಥಳ. ಈ ಶಾಸನ ಇಲ್ಲಿ ಒಂದು ಕೆರೆಯನ್ನು ಜೀರ್ಣೋದ್ಧಾರ ಮಾಡಿದ ಬಗ್ಗೆ ಹಾಗೂ ಒಂದು ಶಿವಾಲಯವನ್ನು ಉಲ್ಲೇಖಿಸಿದೆ. ಪ್ರಸ್ತುತ ಶಿವಾಲಯ ಜೀರ್ಣೋದ್ಧಾರಗೊಂಡಿದ್ದು. ಅಲ್ಲಿನ ಬಸವ ವಿಗ್ರಹ ಮೂಲದ್ದಾಗಿದೆ. ಇದೇ ದೇಗುಲದ ಸಮೀಪ ಮೂರು ಗೋಸಾಸಗಳಿವೆ.

ಮುಟಗುಪ್ಪೆ : ಕ್ರಿ.ಶ. ೯೫೪ರ ಕಕ್ಕರಸಿ ಶಾಸನ[43]ದಲ್ಲಿ ಈ ಮುಟ್ಟಗುಪ್ಪೆಯ ಉಲ್ಲೇಖವಿದೆ. ಈ ಗ್ರಾಮದ ಪರಿವೀಕ್ಷಣೆಯ ಸಮಯದಲ್ಲಿ ಸುಮಾರು ೪ ಅಡಿ ಎತ್ತರದ ರಾಷ್ಟ್ರಕೂಟ ಅವಧಿಗೆ ಸೇರಬಹುದಾದ ಒಂದು ಮಹಿಷ ಮರ್ದಿನಿ ವಿಗ್ರಹ, ಓಟೂರಿನಲ್ಲಿದ್ದಂತಹ ಒಂದು ಕಿರು ಸ್ಮಾರಕ ಸ್ತಂಭ ಕೆರೆಯ ಸಮೀಪ ಹಾಗೂ ಮಠದ ಜಾಗೆಯಲ್ಲಿ ಕೆಲ ಶಿವಲಿಂಗ, ಪಾಳುಗುಡಿಗಳೂ ಇವೆ. ಇಲ್ಲೆ ರಾಷ್ಟ್ರಕೂಟ ಕಾಲದ ದ್ವಾರಶಾಖೆಯೊಂದನ್ನು ನಂತರದ ಕಾಲದಲ್ಲಿ ಲಿಂಗಮುದ್ರೆಕಲ್ಲಾಗಿ ಮಾರ್ಪಡಿಸಲಾಗಿದೆ.

ಗುಡವಿ : ಕ್ರಿ.ಶ. ೧೦೩೨ರ ಒಟ್ಟು ಐದು ಶಾಸನಗಳು ಇರುವ ಸ್ಥಳ.[44] ಇಲ್ಲಿಯೂ ಕೆಲ ಶಿವಾಲಯಗಳಿದ್ದು, ಜೀರ್ಣೋದ್ಧಾರಗೊಂಡಿವೆ. ಈ ಗ್ರಾಮದಲ್ಲಿ ವೀರಗಲ್ಲುಗಳ ಸಂಖ್ಯೆ, ಅದರಲ್ಲೂ ತುರುಕಾಳಗದ ಚಿತ್ರಣ ಹೊತ್ತ ವೀರಗಲ್ಲುಗಳು ಹೆಚ್ಚಿವೆ. ಇದನ್ನು ಗಮನಿಸಿದಾಗ ಈ ಗ್ರಾಮದಲ್ಲಿ ಅತಿಹೆಚ್ಚು ಘರ್ಷಣೆಗಳು ಘಟಿಸಿದ್ದು ಸ್ಪಷ್ಟ. ಅದರಲ್ಲೂ ಈ ಗ್ರಾಮ ಬನವಾಸಿಗೆ ಹತ್ತಿರದಲ್ಲಿದೆ ಎಂಬುದನ್ನು ಗಮನದಲ್ಲಿಡಬೇಕು.

ಚೀಲನೂರು : ಕ್ರಿ.ಶ. ೧೦೫೭ರ ಶಾಸನ[45]ವಿರುವ ಗ್ರಾಮ. ಇಲ್ಲಿನ ಶಿವದೇಗುಲವೊಂದರಲ್ಲಿ ಈ ಶಾಸನವಿದೆ. ಶಿವದೇಗುಲ ಇತ್ತೀನದಾಗಿದ್ದು, ಊರ ಹೊರಗೆ ಒಂದು ರಾಷ್ಟ್ರಕೂಟರ ಕಾಲದ ಗಜಲಕ್ಷ್ಮಿ ಫಲಕ ಹಾಗೂ ದಪ್ಪ ಇಟ್ಟಿಗೆ ತುಂಡುಗಳು ಕಂಡಿವೆ.

ಇಷ್ಟಲ್ಲದೇ ಇವರ ಶಾಸನ ಸೂಚಿಸಿರುವ ಇನ್ನೂ ಅನೇಕ ಪ್ರದೇಶಗಳಲ್ಲಿ ರಾಷ್ಟ್ರಕೂಟ ಹಾಗೂ ಅದಕ್ಕಿಂತ ಪ್ರಾಚೀನವಾದ ಅವಶೇಷಗಳು ದೊರೆತಿವೆ. ಈ ಎಡೆನಾಡ ಭಾಗದ ಹೆಚ್ಚಿನ ಗ್ರಾಮಗಳಲ್ಲಿ ದಪ್ಪ ಇಟ್ಟಿಗೆ, ಚಪ್ಪಟೆ ಹೆಂಚಿನ ಅವಶೇಷ ಸಾಮಾನ್ಯ ಎನಿಸಿದೆ. ಮುಖ್ಯವಾಗಿ ಮಾಟೂರು ಅರಸರ ಸಂಬಂಧಿ ದೇಗುಲಗಳು ಯಾವುವೂ ಪೂರ್ಣ ಪ್ರಮಾಣದಲ್ಲಿಲ್ಲ. ಹೆಚ್ಚಾಗಿ ಅವು ಅವನತಿ ಹಂತದಲ್ಲಿವೆ. ಇವರ ಕಾಲದ ಶಾಸನಗಳ ಶೈಲಿ ವಿಶಿಷ್ಟವಾಗಿದ್ದು ಪೂರ್ಣಕುಂಭ, ದ್ರಾವಿಡ ಶೈಲಿಯ ಗೋಪುರದ ಉಬ್ಬು ಚಿತ್ರಣಗಳನ್ನು ಕೆಲವೊಮ್ಮೆ ಇವರ ಲಾಂಛನದ ಚಿಹ್ನೆಯನ್ನೂ ಹೊಂದಿದೆ. ಹೆಚ್ಚೆ, ಕೆರೆಹಳ್ಳಿ, ಓಟೂರು ವೀರಗಲ್ಲುಗಳಂತೂ ಅತ್ಯಂತ ನೈಜ ಯುದ್ಧ ಸನ್ನಿವೇಶದ ಚಿತ್ರಣಗಳನ್ನೊಳಗೊಂಡಿವೆ. ಹೆಚ್ಚಿನ ಅವಶೇಷಗಳು ರಾಷ್ಟ್ರಕೂಟಕಾಲದ ಶೈಲಿಯನ್ನೇ ಹೊಂದಿವೆ.

ಸಂಕ್ಷಿಪ್ತ ಪ್ರಯೋಗಗಳ ವಿಸ್ತೃತ ರೂಪ

ಎ.ಇಂ – ಎಪಿಗ್ರಾಯಾ ಇಂಡಿಯಾ
ಸೌ.ಇಂ.ಇ – ಸೌತ್ ಇಂಡಿಯನ್ ಇನ್ಸ್‌ಕ್ರಿಪ್ಷನ್ಸ್‌
ಎ.ಕ. – ಎಪಿಗ್ರಾಫಿಯಾ ಕರ್ನಾಟಿಕಾ (ರೈಸ್ ಬಿ.ಎಲ್.ಸಂಪಾದಿತ)
ಕ.ಇಂ. – ಕರ್ನಾಟಕ ಇನ್ಸ್‌ಕ್ರಿಪ್ಷನ್ಸ್, ಧಾರವಾಡ.
ಧಾ.ಜಿ.ಶಾ.ಸೂ – ಧಾರವಾಡ ಜಿಲ್ಲಾ ಶಾಸನ ಸೂಚಿ (ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ)
ಕ ರಿ ಇ ಪಿ ಆರ್ ಕನ್ನಡ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಪ್ರೊಗ್ರೆಸ್ ರಿಪ್ರೋರ್ಟ್ಸ್

ಕೃತಜ್ಞತೆಗಳು: ಡಾ. ರಾಜಾರಾಂ ಹೆಗಡೆ, ಡಾ. ರಘುನಾಥ ಭಟ್ಟ, ಡಾ. ಸುಂದರ, ಕೆಳದಿ ಸಂಶೋಧನಾ ಕೇಂದ್ರದ ಸ್ನೇಹಿತರು ಹಾಗೂ ಗುಂಡಾಜೋಯ್ಸ್‌ರು, ಧಾರವಾಡ ಕನ್ನಡ ಸಂಶೋಧನಾ ಸಂಸ್ಥೆಯ ಗ್ರಂಥಾಲಯ ಸಿಬ್ಬಂದಿ. ಸ್ಥಳ ಅಧ್ಯಯನದಲ್ಲಿ ಸಹಕರಿಸಿದ ಹೆಚ್.ಎಂ., ಶಾಸನ ವ್ಯಾಸಂಗಕ್ಕೆ ನೆರವಾದ ಶ್ರೀಮತಿ ನಂದಾ ಹಾಗೂ ಸ್ನೇಹಿತ ವರ್ಗದವರಿಗೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಎ.ಇಂ. XI. ದೇವಗೇರಿ ಶಾಸನ, ಪು.ಸಂ.೭ ರಿಂದ ಕ್ರಿ.ಶ.೯೫೮.

[2]ಎ.ಕ. VIII ನಂ. ೪೭೯. ಹೆಚ್ಚೆ, ಸೊರಬ, ಶಿವಮೊಗ್ಗ ಕ್ರಿ.ಶ.೯೭೦.

[3]ಅದೇ ನಂ.೧೮೪, ಕುಪ್ಪೆಗಡ್ಡೆ, ಕ್ರಿ.ಶ. ೧೦೩೩.

[4]ಅದೇ, ನಂ.೬೧. ಗುಡವಿ, ಕ್ರಿ.ಶ. ೧೦೩೨.

[5]ಅದೇ, ನಂ.೧೮೪. ಕುಪ್ಪಗಡ್ಡೆ, ಕ್ರಿ.ಶ.೧೦೩೩

[6]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೯೩, ಉಕ್ಕುಂದ, ರಾಣೆಬೆನ್ನೂರು, ಧಾರವಾಡ. ಕ್ರಿ.ಶ. ೧೦೮೮.

[7]ಎ.ಕ. VII ನಂ. ೭೧. ಓಟೂರು, ಸೊರಬ, ಶಿವಮೊಗ್ಗ, ಕ್ರಿ.ಶ.೯೩೮.

[8]ಅದೇ, ನಂ.೧೮೪, ಕುಪ್ಪಗಡ್ಡೆ, ಕ್ರಿ.ಶ. ೧೦೩೩.

[9]ಅದೇ, ನಂ.೨೧೬ ಕೆರೆಹಳ್ಳಿ, ಕ್ರಿ.ಶ. ೯೦೩.

[10]ಅದೇ, ನಂ.೫೦೦. ಬೇಲನೂರು, ಕ್ರಿ.ಶ. ೧೦೫೭.

[11]ಅದೇ, ನಂ.೧೮೪. ಕಪ್ಪಗಡ್ಡೆ, ಕ್ರಿ.ಶ. ೧೦೩೩.

[12]ಸೌ.ಇಂ.ಇ. ನಂ.-೧೮ ಶಾಸನ ಸಂಖ್ಯೆ – ೯೩, ಉಕ್ಕುಂದ, ರಾಣೆಬೆನ್ನೂರು, ಧಾರವಾಡ. ಕ್ರಿ.ಶ. ಸಂ. ೧೦೮೮.

[13]ಎ.ಕ. VIII ನಂ. ೭೧. ಓಟೂರು, ಸೊರಬ ಶಿವಮೊಗ್ಗ. ಕ್ರಿ.ಶ. ೯೩೯.

[14]ಅದೇ ನಂ. ೪೭೬. ಹೆಚ್ಚೆ, ಸೊರಬ, ಶಿವಮೊಗ್ಗ, ಕ್ರಿ.ಶ. ೯೩೯.

[15]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೩೮, ಕದರ ಮಂಡಲಗಿ, ರಾಣೆಬೆನ್ನೂರು, ಧಾರವಾಡ.೯-೧೦ ಕ್ರಿ.ಶ.

[16]ಎ.ಕ. VIII ನಂ. ೬೦ ರಿಂದ ೬೪, ಗುಡವಿ, ಸೊರಬ, ಶಿವಮೊಗ್ಗ. ಕ್ರಿಶ.೧೦೩೨.

[17]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೯೩, ಉಕ್ಕುಂದ, ರಾಣೆಬೆನ್ನೂರು, ಧಾರವಾಡ. ಕ್ರಿ.ಶ. ೧೦೮೮.

[18]ಎ.ಕ. VIII ನಂ. ೭೦. ಓಟೂರು ಸೊರಬ, ಶಿವಮೊಗ್ಗ, ಕ್ರಿ.ಶ. ೯೩೮.

[19]ಅದೇ ನಂ.೪೭೬, ಹೆಚ್ಚೆ, ಕ್ರಿ.ಶ. ೯೩೯.

[20]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೯೩, ಉಕ್ಕುಂದ, ರಾಣೆಬೆನ್ನೂರು, ಧಾರವಾಡ. ಕ್ರಿ.ಶ. ೧೦೮೮.

[21]ಅದೇ ಶಾ.ಸಂ.೩೮. ಕದರ ಮಂಡಲಗಿ, ಕ್ರಿ.ಶ. ೯-೧೦.

[22]ಎ.ಕ. VIII ನಂ. ೫೦೧. ಕಿರುಗುಣಿಸೆ, ಸೊರಬ, ಶಿವಮೊಗ್ಗ ಕ್ರಿ.ಶ. ೯೫೮.

[23]ಅದೇ, ನಂ. ೫೦೦, ಚೀಲನೂರು, ಕ್ರಿ.ಶ. ೧೦೫೭.

[24]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೩೮, ಕದರಮಂಡಲಗಿ, ರಾಣೇಬೇನ್ನೂರು, ಧಾರವಾಡ. ಕ್ರಿ.ಶ.೯-೧೦.

[25]ಅದೇ ಶಾ.ಸಂ.೯೩. ಉಕ್ಕುಂದ, ಕ್ರಿ.ಶ. ೧೦೮೮.

[26]ಎ.ಕ.VIII ನಂ. ೭೦, ಓಟೂರು ಸೊರಬ, ಶಿವಮೊಗ್ಗ ಕ್ರಿ.ಶ. ೯೩೮.

[27]ಅದೇ, ನಂ. ೪೭೬. ಹೆಚ್ಚೆ, ಕ್ರಿ.ಶ. ೯೩೯.

[28]ಅದೇ, ನಂ. ೧೮೪. ಕುಪ್ಪಗಡ್ಡೆ, ಕ್ರಿ.ಶ. ೧೦೩೩.

[29]ಅದೇ, ನಂ. ೪೭೪. ಕಕ್ಕರಸಿ, ಕ್ರಿ.ಶ. ೯೫೪.

[30]ಅದೇ, ನಂ.

[31]ಎ.ಕ. VIII ನಂ. ೨೧೬. ಕೆರೆಹಳ್ಳಿ, ಸೊರಬ, ಶಿವಮೊಗ್ಗ, ಕ್ರಿ.ಶ. ೯೦೩.

[32]ಅದೇ ನಂ. ೪೭೪. ಕಕ್ಕರ, ಕ್ರಿ.ಶ. ೯೫೪.

[33]ಅದೇ ನಂ. ೪೭೯. ಹೆಚ್ಚೆ, ಕ್ರಿ.ಶ. ೯೭೨.

[34]ಅದೇ ನಂ. ೮೭೮. ಕ್ರಿ.ಶ. ೧೧೯೮.

[35]ಅದೇ ನಂ. ೪೭೬. ಕ್ರಿ.ಶ. ೧೧೯೮.

[36]ಅದೇ ನಂ. ೧೮೪ ಕುಪ್ಪಗಡ್ಡೆ, ಕ್ರಿ.ಶ. ೧೦೩೩.

[37]ಅ ಸುಂದರ – ಶಿವಮೊಗ್ಗ ಜಿಲ್ಲಾ ದರ್ಶನ ಪು.ಸಂ. ೫೬.

[38]ಅದೇ ಪು.ಸಂ. ೫೭.

[39]ಎ.ಕ. VIII ನಂ. ೭೦. ಓಟೂರು, ಸೊರಬ, ಶಿವಮೊಗ್ಗ. ಕ್ರಿ.ಶ.೯೩೮

[40]ಅದೇ ನಂ.೨೧೬. ಕೆರೆಹಳ್ಳಿ, ಕ್ರಿ.ಶ. ೯೦೩.

[41]ಅದೇ ನಂ.೪೭೬ ಹೆಚ್ಚೆ, ಕ್ರಿ.ಶ. ೯೩೯.

[42]ಅದೇ ನಂ. ೪೭೪. ಕಕ್ಕರಸಿ, ಕ್ರಿ.ಶ.೯೫೪.

[43]ಅದೇ ನಂ.೪೭೪. ಕಕ್ಕರಸಿ, ಕ್ರಿ.ಶ. ೯೫೪.

[44]ಅದೇ ನಂ. ೬೦ ರಿಂದ ೬೪. ಗುಡವಿ, ಕ್ರಿ.ಶ. ೧೦೩೨.

[45]ಅದೇ ನಂ. ೫೦೦, ಬೇಲನೂರು, ಕ್ರಿ.ಶ. ೧೦೫೭.