ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ. ನಾಡಿನ ಕೋಟಿ ಕೋಟಿ ಶ್ರೀಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡ ಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಠಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಕನ್ನಡ ವಿಶ್ವವಿದ್ಯಾಲಯ ಇದುವರಗೆ ಸಂಶೋಧನೆ ಕಣ್ಣು ತೆಗೆಯದ ಮೆದುಳು ಬಹುಮಟ್ಟಿಗೆ ತನ್ನ ಚೌಕಟ್ಟಿನಲ್ಲಿ ಚಿಂತಿಸದ ಕೆಲವು ವಿಶಿಷ್ಟ ವಿಷಯಗಳನ್ನು ಆಯ್ದು, ಆ ಬಗ್ಗೆ ನಾಡಿನ ಹಲವು ಭಾಗಗಳಲ್ಲಿ ವಿಚಾರ ಸಂಕಿರಣಗಳನ್ನು ನಡೆಸುವ ಪದ್ಧತಿಯನ್ನು ಆರಂಭಿಸಿದೆ. ಇಂತಹ ವಿಚಾರ ಸಂಕಿರಣಗಳಲ್ಲಿ ಸಂಬಂಧಿಸಿದ ವಿಷಯತಜ್ಞರು ಭಾಗವಹಿಸಿ ತಮ್ಮ ಹರಿತವಾದ ವಿಚಾರ ಧಾರೆಯಿಂದ, ಸಂಶೋಧನಾಧಾರಿತವಾದ ವಿಷಯ ಮಂಡನೆಯಿಂದ, ಅವುಗಳ ವಿವಿಧ ಮುಖಗಳನ್ನು ಕುರಿತ ಸೂಕ್ಷ್ಮ ಚರ್ಚೆಯಿಂದ ವಿಷಯದ ಹಲವು ಹೊಸ ಮಗ್ಗಲುಗಳನ್ನು ಅನಾವರಣ ಮಾಡುತ್ತಾರೆ, ಹೊಸ ಚರ್ಚೆಗೆ ಗ್ರಾಸ ಒದಗಿಸುತ್ತಾರೆ. ಇಂತಹ ಉಪನ್ಯಾಸಗಳು, ಚರ್ಚೆಗಳು, ಆವಿಯಾಗಿ ಹೋಗಬಾರದೆಂಬ ಉದ್ದೇಶದಿಂದ ಅವುಗಳನ್ನು ಸಂಗ್ರಹಿಸಿ, ಸಂಕಲಿಸಿ, ಸಂಪಾದಿಸಿ ಪ್ರಕಟಿಸುವ ಉದ್ದೇಶವನ್ನು ವಿಶ್ವವಿದ್ಯಾಲಯ ಹೊಂದಿದೆ. ಈ ದಿಶೆಯಲ್ಲಿ ಇದೊಂದು ಮುಖ್ಯ ಪ್ರಯತ್ನ.

ಕರ್ನಾಟಕದ ಸುದೀರ್ಘವಾದ ಮತ್ತು ವೈವಿಧ್ಯಮಯವಾದ ಇತಿಹಾಸದ ಬಗ್ಗೆ ಸಾಕಷ್ಟು ಅಧ್ಯಯನಗಳು, ಸಂಶೋಧನೆಗಳು ನಡೆದಿವೆ, ಪುಸ್ತಕಗಳು ಪ್ರಕಟವಾಗಿವೆ. ಆದರೆ ಧಾಡಸಿ ಇತಿಹಾಸ ಚಿಂತನೆ ಮತ್ತು ಧಾಟು ವಿಚಾರಗಳ ಫಲವಾಗಿ ಎಷ್ಟೋ ಅರಸು ಮನೆತನಗಳು ಚರ್ಚೆಯ ಹಾಗೂ ಅಧ್ಯಯನದ ಕಣ್ಣಿಗೆ ಬೀಳದೆ ಸುಪ್ತವಾಗಿಯೇ ಉಳಿದುಬಿಟ್ಟಿವೆ. ಹೀಗೆ ವಿದ್ವಾಂಸರ ಅವಜ್ಞೆಗೆ ಗುರಿಯಾಗಿ ನಿಜವಾದ ನೆಲೆಯನ್ನು ಮತ್ತು ಪ್ರಚಾರವನ್ನು ಕಾಣದ ಕೆಲವು ಅರಸು ಮನೆತನಗಳ ಬಗ್ಗೆ ಕೂಲಂಕಷವಾಗಿ, ಆಳವಾಗಿ ಸಂಶೋಧನೆಯನ್ನು ಕೈಗೊಂಡು ಅವುಗಳ ಫಲಿತಗಳನ್ನು ಸೂಕ್ಷ್ಮವಾಗಿ ಚಿಂತನೆಗೆ ಮತ್ತು ವಿಶ್ಲೇಷಣೆಗೆ ಒಳಗು ಮಾಡುವುದರ ಮೂಲಕ ಅವುಗಳ ಮುಸುಕನ್ನು ತೆಗೆದು ಬೆಳಕಿಗೆ ಒಡ್ಡಿ ಕರ್ನಾಟಕದ ಇತಿಹಾಸ ಜಗತ್ತಿನಲ್ಲಿ ಅವುಗಳಿಗೆ ನಿರ್ದಿಷ್ಟವಾದ ಒಂದು ಚೌಕಟ್ಟನ್ನು ಮತ್ತು ಸ್ಥಾನವನ್ನು ನಿರ್ಮಿಸಿಕೊಡುವ ಪ್ರಯತ್ನವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮಲೆನಾಡಿನ ಅರಸು ಮನೆತನಗಳ ಬಗ್ಗೆ ಕಳೆದ ವರ್ಷ ಶಿವಮೊಗ್ಗದಲ್ಲಿ ನಮ್ಮ ವಿಶ್ವವಿದ್ಯಾಲಯ ಮತ್ತು ಇತಿಹಾಸ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ವಿಚಾರಸಂಕಿರಣದಲ್ಲಿ ಮಂಡಿಸಲಾರದ ಪ್ರಬಂಧಗಳನ್ನು ಈ ಮೂಲಕ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಇತಿಹಾಸ ಸಂಶೋಧನೆಯಲ್ಲಿ ವಿಶಿಷ್ಟವಾದ ಸತ್ಯನಿಷ್ಠೆ, ಅಧ್ಯಯನಶೀಲತೆ, ವಿಶ್ಲೇಷಣಾ ಸಾಮರ್ಥ್ಯಗಳನ್ನು ಪಡೆದಿರುವ ೧೭ ಜನ ವಿದ್ವಾಂಸರು ಬಹುಮಟ್ಟಿಗೆ ಇತಿಹಾಸದ ಪುಟಗಳಲ್ಲಿ ಮಿನುಗದ ೧೫ ಅರಸು ಮನೆತನಗಳನ್ನು ಕುರಿತು ಸಂಗ್ರಹಿಸಿದ ಮಾಹಿತಿ ಮತ್ತು ನಡೆಸಿದ ಚಿಂತನೆ ಈ ಪುಟಗಳಲ್ಲಿ ಬಿಚ್ಚಿಕೊಂಡಿವೆ. ಇವುಗಳಲ್ಲದೇ ರಾಜ್ಯ ಸಂಸ್ಕೃತಿಯ ನಿರ್ಮಾಣ ಮತ್ತು ಪ್ರಾದೇಶಿಕ ಕಿರು ಅರಸು ಮನೆತನಗಳ ಅಧ್ಯಯನದ ಪ್ರಸ್ತುತತೆ ಎಂಬ ಮೊದಲನೇ ಮತ್ತು ಕೊನೆಯ ಪ್ರಬಂಧಗಳು ಇಡೀ ವಿಚಾರಸಂಕಿರಣಕ್ಕೆ ಅಚ್ಚುಕಟ್ಟಾದ ತಾತ್ವಿಕ ಚೌಕಟ್ಟೊಂದನ್ನು ನಿರ್ಮಿಸಿವೆ. ಈ ಎಲ್ಲಾ ಲೇಖನಗಳು ಅಭ್ಯಾಸಪೂರ್ಣವಾಗಿದ್ದು, ಪ್ರಾದೇಶಿಕ ಇತಿಹಾಸದ ಸ್ವರೂಪ ಮತ್ತು ವೈಶಿಷ್ಟ್ಯಗಳನ್ನು ಸೂಕ್ಷ್ಮವಾಗಿ ಬಿಚ್ಚಿಡುವ ಮೂಲಕ ಪ್ರಸಿದ್ಧ ಆಳರಸರ ಚರಿತ್ರೆಯ ಕಣ್ಣು ಕೋರೈಸುವ ಬೆಳಕಿನಲ್ಲಿ ಇತಿಹಾಸಪ್ರಿಯರ ಕಣ್ಮರೆಯಾಗಿರುವ ಕಿರು ಅರಸುಗಳ ವೈಶಿಷ್ಟ್ಯ ಮತ್ತು ಪಾತ್ರವನ್ನು ಓದುಗರ ಮುಂದಿಟ್ಟು ಹೊಸ ಚಿಂತನೆಗೆ ದಾರಿ ಮಾಡಿಕೊಡುತ್ತವೆ ಎಂದು ನಾನು ನಂಬಿದ್ದೇನೆ. ಇಂತಹದೊಂದು ಅಪರೂಪದ ವಿಚಾರ ಸಂಕಿರಣವನ್ನು ನಡೆಸಿದ ಮತ್ತು ಈ ಸಂಕಿರಣದ ಸಂಪ್ರಬಂಧಗಳನ್ನು ಅಚ್ಚುಕಟ್ಟಾಗಿ ಸಂಪಾದಿಸಿಕೊಟ್ಟ ಡಾ. ರಾಜಾರಾಮ ಹೆಗಡೆ ಹಾಗೂ ಪ್ರೊ. ಅಶೋಕ ಶೆಟ್ಟರ್ ಅವರನ್ನು ನಾನು ಅಭಿನಂದಿಸುತ್ತೇನೆ.

ಡಾ. ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಗಳು