ಪ್ರಸ್ತುತ ಗ್ರಂಥದಲ್ಲಿ ಪ್ರಕಟಿಸಲಾದ ಪ್ರಬಂಧಗಳನ್ನು ಫೆಬ್ರವರಿ ೧೨ ಮತ್ತು ೧೩, ೨೦೦೦ ದಂದು ಶಿವಮೊಗ್ಗದಲ್ಲಿ ನಡೆಸಲಾದ ‘ಮಲೆನಾಡು ಕರ್ನಾಟಕದ ಅರಸು ಮನೆತನಗಳು’ ಎಂಬ ವಿಚಾರ ಸಂಕಿರಣದಲ್ಲಿ ಮಂಡಿಸಲಾಗಿತ್ತು. ಕನ್ನಡ ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾದ ಡಾ. ಎಂ.ಎಂ. ಕಲಬುರ್ಗಿಯವರು ಈ ಕುರಿತು ವಿಶೇಷ ಆಸ್ಥೆ ವಹಿಸಿ ಮಲೆನಾಡಿನ ಪ್ರದೇಶವನ್ನಾಳಿದ ಚಿಕ್ಕ-ಪುಟ್ಟ ಅರಸು ಮನೆತನಗಳ ಕುರಿತು ವಿಚಾರ ಸಂಕಿರಣ ನಡೆಸುವ ಮೂಲ ಪ್ರೇರಣೆಯಾದರು. ಅವರ ಆಶಯದಂತೇ ಕನ್ನಡ ವಿಶ್ವವಿದ್ಯಾಲಯ ಮತ್ತು ಶಿವಮೊಗ್ಗದ ಇತಿಹಾಸ ವೇದಿಕೆ ಇವು ಜಂಟಿಯಾಗಿ ಈ ಕಾರ್ಯಕ್ರಮವನ್ನು ಸಂಘಟಿಸಿ ಈ ಗ್ರಂಥದ ಬಹುತೇಕ ಪ್ರಬಂಧಗಳು ಅದರಲ್ಲಿ ಮಂಡನೆಯಾದವು. ವಿಚಾರಸಂಕಿರಣದಲ್ಲಿ ಮಂಡಿಸದಿದ್ದ ಒಂದೆರಡು ಪ್ರಬಂಧಗಳನ್ನು ವಿಷಯದ ಸಮಗ್ರತೆಗಾಗಿ ನಂತರ ವಿದ್ವಾಂಸರದಿಂದ ತರಿಸಿಕೊಂಡೆವು.

ಈ ಗ್ರಂಥದ ವಿಷಯ ಪ್ರವೇಶಕ್ಕೂ ಪೂರ್ವದಲ್ಲಿ ಈ ಗ್ರಂಥದ ಇತಿಮಿತಿಗಳ ಕುರಿತು ಕೆಲ ಮಾತುಗಳು ಅಗತ್ಯವಾಗಿವೆ ಎಂಬುದು ನಮ್ಮ ಅನ್ನಿಸಿಕೆ. ಅವೆಂದರೆ ೧. ಮೊತ್ತ ಮೊದಲನೆಯದಾಗಿ ಇದರ ‘ಭೌಗೋಲಿಕ’ ಚೌಕಟ್ಟಿನ ಕುರಿತಾದದ್ದು. ಇಲ್ಲಿ ‘ಮಲೆನಾಡು’ ಎಂಬ ಭೂವಿಶೇಷವನ್ನು ಸೂಚಿಸಲಾಗಿದೆಯಾದರೂ, ಇಲ್ಲಿ ಮಲೆನಾಡಿನದೇ ಒಂದು ಭಾಗವಾದ ಉತ್ತರ ಕನ್ನಡದ ಘಟ್ಟದ ತಾಲ್ಲೂಕುಗಳನ್ನು ಸೇರಿಸಿಲ್ಲ. ಅದರಂತೆಯೇ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು ಜಿಲ್ಲೆಗಳ ಅರೆಮಲೆನಾಡಿನ ಭಾಗಗಳೂ ಇಲ್ಲಿ ಸೇರಿವೆ. ಒಂದೆಡೆ ಮಲೆನಾಡಿನಲ್ಲಿ ಹಾಗೂ ಮತ್ತೊಂದೆಡೆ ಅರೆಮಲೆನಾಡಿನಲ್ಲಿ ಚಾಚಿಕೊಂಡ ಅರಸೊತ್ತಿಗೆಗಳನ್ನು ಅಧ್ಯಯನ ಮಾಡುವಾಗ ಇಂಥ ಸಮಸ್ಯೆಗಳು ಬರುತ್ತವೆ. ಹಾಗೂ ಅದಕ್ಕಿಂತ ಮುಖ್ಯವಾಗಿ ಮಧ್ಯಕಾಲದಲ್ಲಿ ಇಂದು ನಾವು ಗುರುತಿಸುವ ಅರೆಮಲೆನಾಡಿನ ಬಹುತೇಕ ಭಾಗಗಳು ಮಲೆನಾಡಿನಂತೇ ಅರಣ್ಯಾವೃತವಾಗಿದ್ದವು ಹಾಗೂ ಆ ಕಾರಣದಿಂದ ಬಯಲುನಾಡಿಗಿಂತ ಮಲೆನಾಡಿನ ವೈಶಿಷ್ಟ್ಯತೆಗೇ ಹೆಚ್ಚು ಹೊಂದಿಕೊಂಡಿದ್ದವು ಎಂಬುದೂ ಗಮನಾರ್ಹ.

೨. ಎರಡನೆಯ ಸಮಸ್ಯೆ ಎಂದರೆ ‘ಅರಸು ಮನೆತನ’ ಎಂಬ ಪರಿಭಾಷೆಯ ಮಿತಿಗಳು. ಇಲ್ಲಿ ಮಂಡಿಸಲಾದ ಪ್ರತೀ ಮನೆತನವೂ ತನ್ನಷ್ಟಕ್ಕೇ ವಿಶಿಷ್ಟವಾಗಿದೆ. ಇವನ್ನೆಲ್ಲ ಒಂದೇ ವರ್ಗದಲ್ಲಿ ಸೇರಿಸುವಂತಿಲ್ಲ. ಸ್ಥೂಲವಾಗಿ ಈ ಮುಂದಿನ ಭಿನ್ನತೆಗಳನ್ನೂ ಗುರುತಿಸಬಹುದು : ಪ್ರಾರಂಭಿಕ ಮಧ್ಯಕಾಲದಿಂದ ವಿಜಯನಗರದ ಕಾಲದವರೆಗಿನ ಮನೆತನಗಳು ಹಾಗೂ ವಿಜಯನಗರಾನಂತರದ ಮನೆತನಗಳು. ಈ ಎರಡೂ ಕಾಲಘಟ್ಟಗಳಲ್ಲಿ ಮಲೆನಾಡಿನ ಭಾಗದಲ್ಲೇ ಅಭ್ಯುದಯಗೊಂಡ ಹೊಯ್ಸಳ ಮತ್ತು ಕೆಳದಿ ಸಾಮ್ರಾಜ್ಯಗಳನ್ನು ಇಲ್ಲಿ ಕೈ ಬಿಡಲಾಗಿದೆ. ಅವುಗಳ ಕುರಿತು ಸಾಕಷ್ಟು ಪ್ರಕಟಣೆಗಳು ಆಗಿರುವುದರಿಂದ ಒಂದು ಪ್ರಬಂಧದಲ್ಲಿ ಅವುಗಳ ಕುರಿತು ಒಟ್ಟಾರೆಯಾಗಿ ಬರೆಯುವುದು ಅರ್ಥಹೀನ ಎಂಬುದು ಒಂದು ಕಾರಣವಾದರೆ, ಈ ಸಂಕಲನದ ಉದ್ದೇಶಕ್ಕೆ ಅವು ಹೊಂದಲಾರವು ಎಂಬುದು ಮತ್ತೊಂದು ಕಾರಣವಾಗಿದೆ. ಇಲ್ಲಿನ ನಮ್ಮ ಉದ್ದೇಶ ಕಿರು ಅರಸು ಮನೆತನಗಳಾಗಿವೆ ಹಾಗೂ ಆ ಮೂಲಕ ಮಧ್ಯಕಾಲೀನ ರಾಜ ಪ್ರಭುತ್ವದ ಕೆಳಸ್ತರಗಳ ರಚನೆ ಹಾಗೂ ಮಹತ್ವದ ಕುರಿತು ಪರಿಶೀಲಿಸುವುದು. ಈ ಕಾರಣದಿಂದಾಗಿ ಅರಗದಲ್ಲಿ ವಿಜಯನಗರದ ಅಧಿಕಾರಿಗಳಾಗಿಯೇ ಆಳಿದ ಪ್ರಭುಗಳನ್ನು ಪರಿಗಣಿಸಲಾಗಿದೆ.

ಶಾಂತರರಂಥ ಮಹಾಮಂಡಳೇಶ್ವರ ಮನೆತನಗಳಿಂದ ಹಿಡಿದು ಉದ್ರಿ ಅರಸರಂಥ ‘ನಾಡಪ್ರಭು’ ಮನೆತನಗಳವರೆಗಾಗಲೀ, ವಿಜಯನಗರೋತ್ತರ ನಾಯಕ ಮನೆತನಗಳಾಗಲೀ, ಎಲ್ಲರನ್ನೂ ಸ್ಥಾನಿಕ ಅರಸರೆಂದು ಗ್ರಹಿಸುವ ರೂಢಿ ಇದೆ. ಇವರನ್ನೆಲ್ಲ ಇಂದಿನ ಪರಿಭಾಷೆಯಲ್ಲಿ ರಾಜ್ಯಾಧಿಕಾರಿಗಳು ಎಂದು ಗ್ರಹಿಸುವುದು ತಪ್ಪಾಗುತ್ತದೆ ಎಂಬುದಂತೂ ಸ್ಪಷ್ಟ. ಹಾಗೆಂದು ಅವರು ಸ್ವತಂತ್ರ ಅರಸರೂ ಆಗಿರಲಿಲ್ಲ. ಮಹಾಮಂಡಲೇಶ್ವರ, ಮಾಂಡಲಿಕ, ಸಾಮಂತ, ನಾಯಕ ಮುಂತಾದ ಸ್ಥಾನ ವಿಶೇಷಗಳನ್ನು ಸಾಮ್ರಾಜ್ಯಗಳಲ್ಲಿ ಅವರು ಹೊಂದಿದ್ದರು. ಆದರೆ ತಮ್ಮ ನಿರ್ದಿಷ್ಟ ಸೀಮೆಯಲ್ಲಿ ಅವರು ರಾಜರಂತೇ ಆಳ್ವಿಕೆ ನಡೆಸಿದರು. ಹಾಗಾಗಿ ಒಂದು ನಿರ್ದಿಷ್ಟವಾದ ಪ್ರದೇಶದ ಆಳ್ವಿಕೆ ಹಾಗೂ ಅಭಿವೃದ್ಧಿಯ ಇತಿಹಾಸಕ್ಕೆ ಈ ಮನೆತನಗಳೇ ಸಾಮ್ರಾಟ ಮನೆತನಗಳಿಗಿಂತ ಹೆಚ್ಚು ನಿರ್ಣಾಯಕವಾಗಿವೆ. ಸಾಮ್ರಾಜ್ಯಗಳು ಇಂಥ ಸ್ಥಾವಿಕ ಆಳುವ ಮನೆತನಗಳ ಮೂಲಕ ಸ್ಥಾನಿಕ ಸಂದರ್ಭದಲ್ಲಿ ಪ್ರವೃತ್ತಿಸಿದವು. ಈ ಕ್ರಿಯೆ ಮಧ್ಯಕಾಲದ ರಾಜ್ಯ ನಿರ್ಮಾಣದ ಇತಿಹಾಸದ ಒಂದು ಭಾಗವಾಗಿದ್ದು ಆ ಕುರಿತಾದ ವಿವರವಾದ ಚರ್ಚೆಯನ್ನು ನಾವು ಈ ಗ್ರಂಥದ ಮೊದಲ ಲೇಖನದಲ್ಲಿ ಮಾಡಿದ್ದೇವೆ. ಏಕೆಂದರೆ ಈ ಪ್ರಕ್ರಿಯೆಯ ಸ್ವರೂಪದ ಕುರಿತು ಈಗಾಗಲೇ ಅನೇಕ ಸಿದ್ಧಾಂತಗಳು, ವಾದ-ವಿವಾದಗಳೂ ಇವೆ. ಅವನ್ನೂ ಪ್ರಸ್ತುತ ಪ್ರಬಂಧಗಳ ಬೆಳಕಿನಲ್ಲಿ ಪರಾಮರ್ಶಿಸುವ ಪ್ರಯತ್ನವನ್ನು ಆ ಲೇಖನದಲ್ಲಿ ಮಾಡಿದ್ದೇವೆ.

ಸಕಾಲದಲ್ಲಿ ನಮ್ಮ ಕೋರಿಕೆಯಂತೇ ಬೇರೆ ಬೇರೆ ಮನೆತನಗಳ ಕುರಿತು ಅಧ್ಯಯನ ನಡೆಸಿ ಪ್ರಬಂಧಗಳನ್ನು ತಯಾರಿಸಿ ಮಂಡಿಸಿದ ಈ ಗ್ರಂಥದ ಎಲ್ಲ ಲೇಖಕರ ಸಹಕಾರವನ್ನೂ ನಾವು ನೆನೆಯುತ್ತೇವೆ. ಈ ಲೇಖಕರಲ್ಲಿ ಒಬ್ಬರಾದ ಡಾ. ಕೋಟೆ ಮಲ್ಲಿಕಾರ್ಜುನ ಇವರು ಅನಿರೀಕ್ಷಿತವಾಗಿ ನಮ್ಮನ್ನಗಲಿದ್ದಾರೆ. ಅವರು ಈ ವಿಚಾರ ಸಂಕಿರಣದಲ್ಲಿ ಸಕ್ರಿಯವಾಗಿ ಪಾಲುಗೊಂಡ ಇತಿಹಾಸ ವೇದಿಕೆಯ ಸದಸ್ಯರಾಗಿದ್ದರು. ಈ ಸಂದರ್ಭದಲ್ಲಿ ದುಃಖದಿಂದ ಅವರನ್ನೂ ನೆನೆಯುತ್ತೇವೆ.

‘ಮಲೆನಾಡು ಕರ್ನಾಟಕದ ಅರಸು ಮನೆತನಗಳು’ ವಿಚಾರ ಸಂಕಿರಣವನ್ನು ಸಂಘಟಿಸುವಲ್ಲಿ ಧನಸಹಾಯ ನೀಡಿ ಪ್ರಧಾನ ಪಾತ್ರವನ್ನು ವಹಿಸಿದ ಅಂದಿನ ಕುಲಪತಿಗಳಾದ ಡಾ. ಎಂ.ಎಂ. ಕಲಬುರ್ಗಿಯವರಿಗೂ, ಪ್ರೊ. ಎ.ವಿ.ನಾವಡ ಅವರಿಗೂ ನಮ್ಮ ಕೃತಜ್ಞತೆಗಳು ಹಾಗೂ ಈ ಗ್ರಂಥವು ಹೊರಬರುವುದಕ್ಕೆ ಕಾರಣರಾದ ಇಂದಿನ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡರು, ಪ್ರಸಾರಾಂಗದ ಪ್ರಕಟಣ ವಿಭಾಗದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನ ಮೂರ್ತಿ ಇವರಿಗೂ ನಾವು ಆಭಾರಿಗಳಾಗಿದ್ದೇವೆ. ಶಿವಮೊಗ್ಗದಲ್ಲಿ ಈ ವಿಚಾರ ಸಂಕಿರಣವನ್ನು ನಡೆಸುವಾಗ ಉದಾರ ಹಸ್ತದಿಂದ ಧನಸಹಾಯ ಮಾಡಿದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಸ್.ಪಿ. ಹಿರೇಮಠ ಅವರಿಗೆ ಹಾಗೂ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ ನಾವು ವಿಶೇಷವಾಗಿ ಋಣಿಗಳಾಗಿದ್ದೇವೆ. ವಿಚಾರ ಸಂಕಿರಣವನ್ನು ಸಂಘಟಿಸಿದ ಶಿವಮೊಗ್ಗದ ಇತಿಹಾಸ ವೇದಿಕೆಯ ಸದಸ್ಯರಿಗೂ ವಂದನೆಗಳು.

ಈ ಗ್ರಂಥದ ವಿನ್ಯಾಸಕ್ಕಾಗಿ ವಿಶೇಷ ಮುತುವರ್ಜಿ ವಹಿಸಿದ ಪ್ರಸಾರಾಂಗದ ಶ್ರೀ ಕೆ.ಎಲ್. ರಾಜಶೇಖರ್‌, ಹಾಗೂ ಅಂದವಾದ ಮುಖಪುಟವನ್ನು ರಚಿಸಿದ ಶ್ರೀ ಕೆ.ಕೆ.ಮಕಾಳಿ, ಇವರಿಗೂ ಅಕ್ಷರ ಜೋಡಣೆ ಮಾಡಿದ ಯಾಜಿ ದಂಪತಿಗಳಿಗೂ ಮತ್ತು ಸುಂದರವಾಗಿ ಮುದ್ರಿಸಿದ ಬೆಂಗಳೂರಿನ ಸತ್ಯಶ್ರೀ ಪ್ರಿಂಟರ್ಸ್‌ನ ಸಿಬ್ಬಂದಿ ವರ್ಗಕ್ಕೂ ನಮ್ಮ ವಂದನೆಗಳು ಸಲ್ಲುತ್ತವೆ.

ರಾಜಾರಾಮ ಹೆಗಡೆ
ಅಶೋಕ ಶೆಟ್ಟರ್‌