ಇಲ್ಲಿ ಪ್ರಸ್ತಾವಿಸಲ್ಪಡುತ್ತಿರುವ ಹೆಚ್ಚೆ ಅರಸರದು ಮೂಲತಃ ಸಾಮಂತ ಮನೆತನ. ಶಾಸನಗಳು ಇವರನ್ನು ಸಾಮಂತಾಧಿಪತಿಗಳೆಂದೇ ಕರೆದಿವೆ. ಇವರು ಮಾಟೂರ ವಂಶಕ್ಕೆ ಸೇರಿದವರು. ಕೆಲವು ಸಂಶೋಧನಾ ಗ್ರಂಥಗಳು ಇವರನ್ನು ಹೆಸರಿಸಿವೇ ಹೊರತು, ಇವರ ಕುರಿತು ಪೂರ್ಣ ಪ್ರಮಾಣದ ಅಧ್ಯಯನಗಳು ಆಗಿಲ್ಲ. ಹಾಗಾಗಿ ಪ್ರಸ್ತುತ ಅಧ್ಯಯನವನ್ನು ಶಾಸನಗಳ ವಿವರಗಳನ್ನಾಧರಿಸಿಯೇ ಮಾಡಲಾಗಿದೆ.

ಶಾಸನ ಅಧ್ಯಯನದ ನಂತರ ಶಾಸನಗಳಲ್ಲಿ ಸೂಚಿಸಿದ ಹಲವಾರು ಪ್ರದೇಶಗಳ ಪರಿವೀಕ್ಷಣೆ ನಡೆಸಿ, ಕಂಡಂತಹ ಅವಶೇಷಗಳನ್ನು ಕೂಲಂಕಷವಾಗಿ ಅಭ್ಯಸಿಸಲಾಗಿದೆ. ಸ್ಥೂಲವಾಗಿ ಈ ಸಾಮಂತ ಮನೆತನವನ್ನು ರಾಜಕೀಯ, ಧಾರ್ಮಿಕ, ಸಾಮಾಜಿಕ ಸಂದರ್ಭಾನುಸಾರ ಚರ್ಚಿಸಲಾಗಿದೆ. ಅರಸರುಗಳನ್ನು ಅವರ ವಂಶಾವಳಿಯ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಗುರುತಿಸಿ ಅವರ ಪ್ರಮುಖ ಶಾಸನಗಳನ್ನು ಉಲ್ಲೇಖಿಸಲಾಗಿದೆ.

ವಂಶ, ವಂಶಾವಳಿ, ಬಿರುದು ಇತ್ಯಾದಿ

ಈಗಾಗಲೇ ಹೇಳಿದಂತೆ ಇವರದು ಮಾಟೂರ ವಂಶ. ‘ಮಾಟೂರ’ ಎಂಬುದು ಒಂದು ಊರಿನ ಹೆಸರಾದರೂ ಅದು ಯಾವ ಊರು ಎಂಬುದು ಸ್ಪಷ್ಟವಾಗಿಲ್ಲ. ಎಡೆನಾಡಿನಲ್ಲಿ ‘ಓಟೂರು’ ಎಂಬ ಹೆಸರಿ ಊರು ಇದೆ. ಮಾಟೂರಿಗೂ ಓಟೂರಿಗೂ ಯಾವುದೇ ರೀತಿಯ ಸಂಬಂಧವಿದ್ದಂತೆ ತೋರುವುದಿಲ್ಲ. ಅದೇ ರೀತಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನಲ್ಲಿ ‘ಮಾಂಟೂರು’ ಎಂಬ ಊರಿದೆ. ಇವ್ಯಾವೂ ಈ ಮಾಟೂರಿಗೆ ಸಂಬಂಧಿಸಿದಂತೆ ತೋರುವುದಿಲ್ಲ. ಇವರ ಶಾಸನಗಳು ಇವನ್ನು ಸೂಚಿಸುವ ಮುನ್ನ ‘…… ಸಮಧಿಗತ, ಪಂಚ ಮಹಾಶಬ್ಧ ಮಹಾ ಸಾಮಂತಾಧಿಪತಿ ತ್ರಿಕುಂದ ಪುರವರೇಶ್ವರ, ಬ್ರಹ್ಮಕ್ಷತ್ರಿಯ, ಮಾಟೂರ ವಂಶೋದ್ಭವ, ನಂದನವನಚ್ಛತ್ರಾವತಾರ, ಹಯ ಲಾಂಛನ, ದರ್ಪಣಧ್ವಜ ವಿರಾಜಮಾನ….’ ಎಂದು ನಂತರ ವೈಯಕ್ತಿಕ ಬಿರುದು, ಅರಸನ ಹೆಸರು ಉಕ್ತವಾಗಿರುತ್ತದೆ.

ಇವರ ಆರಾಧ್ಯದೈವ ‘ತ್ರಿಕುಂದ’ದ ಪುರವರೇಶ್ವರ. ಈ ತ್ರಿಕುಂದವನ್ನು ನಾವಿಲ್ಲಿ ‘ಮುಗುಂದ’ ಎಂದು ಭಾವಿಸಲು ಕೆಲ ಆಧಾರಗಳಿವೆ. ಈ ಮುಗುಂದವನ್ನು ಶಾಸನಗಳು ‘ಮೂರ್ಕುಂದ’ ಎಂದಿವೆ. ‘ಉಕ್ಕುಂದ’ವನ್ನು ‘ಒರ್ಕುಂದ’ವೆಂದಿದೆ. ಇಲ್ಲಿ ತ್ರಿ=ಮೂರು, ಮು, ಮೂ>ಮನ್, ಮುಪ್‌, ಮುಮ್‌, ಮುಯ್‌, ಮೂರು ಎಂಬ ನಾಮಪದಕ್ಕೆ ಬರುವ ಆದೇಶ ರೂಪ, ಕುಂದ, ಗುಂದ=ಬೆಟ್ಟಗುಡ್ಡ ಎಂದಾಗುತ್ತದೆ. ಹೀಗೆ ಮೂ+ಗುನ್ದ, ಮೂರು ಕುಂದ, ತ್ರಿ+ಕುಂದ ಇವೆಲ್ಲವೂ ಮುಗುನ್ದವಾಗುವ ಸಾಧ್ಯತೆಯಿದೆ. ಹಾಗಾಗಿ ನಾವು ಇವರ ಆರಾಧ್ಯ ದೈವ ಈ ಮುಗುಂದದ ಈಶ್ವರನೆಂತಲೂ, ಇವರು ಶೈವಾರಾಧಕರು ಎಂತಲೂ ಗುರುತಿಸಬಹುದು. ಇಂದಿನ ಚಿನ್ನಮುಳುಗುಂದವೇ ಅಂದಿನ ಮುಗುನ್ದ.

ಶಾಸನಗಳು ಇವರನ್ನು ‘ಬ್ರಹ್ಮಕ್ಷತ್ರಿಯ’ರೆಂದೇ ಉಲ್ಲೇಖಿಸಿವೆ. ಡಾ. ಭಂಡಾರ್ಕರರು ಈ ಮಾಟೂರ ವಂಶದವರು ಬ್ರಾಹ್ಮಣ ಮತ್ತು ಕ್ಷತ್ರಿಯ ಮೂಲದಿಂದ ಬಂದವರು ಎನ್ನುತ್ತಾರೆ.

[1] ಉಕ್ಕುಂದದ ಶಾಸನ[2], ಕುಪ್ಪಗಡ್ಡೆ ಶಾಸನ[3], ಹಾಗೂ ಚೀಲನೂರು[4] ಶಾಸನಗಳು ಇವರನ್ನು ‘ಅಹಿಚ್ಛತ್ರಾವತಾರ’ ಎಂದು ಕರೆದಿವೆ. ಅಂದರೆ ಇವರು ಅಹಿಚ್ಛತ್ರದ ಕಡೆಯಿಂದ ಬಂದವರೆ? ಕದಂಬರು ಈ ಭಾಗಕ್ಕೆ ಅಹಿಚ್ಛತ್ರದ ಕಡೆಯಿಂದ ಬ್ರಾಹ್ಮಣರನ್ನು ಕರೆತಂದ ಶಾಸನೋಲ್ಲೇಖವನ್ನು ಇಲ್ಲಿ ಗಮನಿಸಬಹುದು. ಇವರದು ನಂದನವನಚ್ಛತ್ರ, ಹಯಲಾಂಛನ, ದರ್ಪಣಧ್ವಜ, ರಾಜ ಚಿಹ್ನೆಗಳು. ಕುಪ್ಪಗಡ್ಡೆಯ ಶಾಸನವೊಂದರಲ್ಲಿ ‘ದರ್ಪಣ ಧ್ವಜ’ದ ಚಿಹ್ನೆಯೂ ಮೂಡಿ ಬಂದಿದೆ. ‘ಎಪಿಗ್ರಾಫಿಯ ಇಂಡಿಕಾದ ಸಂಪಾದಕರು ಮಾಟೂರ ವಂಶದ ಬಗ್ಗೆ ಪ್ರಸ್ತಾಪಿಸುತ್ತಾ ಈ ದರ್ಪಣ ಧ್ವಜದ ಚಿಹ್ನೆ ಪಲ್ಲವಮಲ್ಲ ನಂದಿವರ್ಮ’ನು ನವಿಲು ಗರಿಗಳಿಂದ ರಚಿಸಿದ ದರ್ಪಣ ಧ್ವಜವನ್ನು ‘ಸಾಬಾರ’ ದೊರೆ ಉದಯನಿಗೆ ಕೊಟ್ಟಿದ್ದನ್ನ ‘ಉದಯೆಂದಿರಂ ಶಾಸನ’ದಲ್ಲಿ ಗುರಿತಿಸಿದ್ದಾರೆ.[5] ಈ ‘ಸಾಬಾರ’ ಮಾಟೂರ ಅರಸರ ಪ್ರಾದೇಶಿಕ ವ್ಯಾಪ್ತಿಯಲ್ಲಿ ಬರುವ ಒಂದು ಹಳ್ಳಿಯೇ ಎಂಬುದನ್ನೂ ಸಂಶೋಧಿಸಬೇಕಾಗಿದೆ. ಪ್ರಸ್ತುತ ಈ ಊರು ಸೊರಬ ತಾಲ್ಲೂಕಿನಲ್ಲಿದೆ.

ಸುಮಾರು ೨೪ ಶಾಸನಗಳು ಇವರಿಗೆ ಸಂಬಂಧಿಸಿವೆ. ಅದರಲ್ಲಿ ಕ್ರಿ.ಶ. ೧೦೧೭ರ ಕನವಳ್ಳಿ ಶಾಸನ[6] ಈ ವಂಶದ ಅಸ್ಪಷ್ಟ ವಂಶಾವಳಿಯನ್ನು ನೀಡಿದೆ. ಈ ಶಾಸನ ಮೊದಲನೆಯದಾಗಿ ‘ದೋಸಿ’ ಎಂಬಾತನ್ನು ಉಲ್ಲೇಖಿಸಿದೆ. ಇವರ ನಂತರ ‘ಸಿನ್ಧ’ನನ್ನು ಸಿನ್ಧನ ನಂತರ ಶಾಂತಿವರ್ಮನನ್ನು ಮುಂದೆ ಪಯ್ವರ, ಸಿರಿಯಾಗರನನ್ನು ಉಲ್ಲೇಖಿಸಿದೆ. ಇಲ್ಲಿ ಪಯ್ವರ ಮತ್ತು ಚಾರಕಬ್ಬೆ ಪುತ್ರ ಸಿರಿಯಾಗರ ಎಂಬುದನ್ನು ಬಿಟ್ಟರೆ ಇನ್ನುಳಿದವರ ನಡುವಿನ ಸಂಬಂಧ ಯಾವ ಸ್ವರೂಪದ್ದು ಎಂಬುದು ಅಸ್ಪಷ್ಟವಾಗಿದೆ. ಆದರೆ ಇಲ್ಲಿ ದೋಸಿ, ಸಿನ್ದರನ್ನು ಮೂಲ ಪುರುಷರೆಂದು ಭಾವಿಸಿ, ವಂಶಾವಳಿಯಲ್ಲಿ ಅವರಿಬ್ಬರನ್ನು ಕ್ರಮವಾಗಿ ಗುರುತಿಸಲಾಗಿದೆ. ಈ ವಂಶದ ಮೂಲಿಗ ಈ ‘ದೋಸಿ’ಯೆಂದು ಸದ್ಯಕ್ಕೆ ಗುರುತಿಸಿಕೊಳ್ಳುವುದು ಸೂಕ್ತವೂ ಆಗಿದೆ. ಕ್ರಿ.ಶ. ೮ನೇ ಶತಮಾನದ ಶಾಸನವೊಂದರಲ್ಲಿ[7] ದೋಸಿ ಎಂಬಾತ ಬಾದಾಮಿ ಚಾಲುಕ್ಯ ಕಾಲದಲ್ಲಿ ಮಾಂಡಳೀಕನಾಗಿದ್ದು, ಮುಗುನ್ದ ಮಾಟೂರ ಅರಸರ ಆಡಳಿತ ವ್ಯಾಪ್ತಿಯಲ್ಲಿದ್ದುದನ್ನು ಗಮನಿಸಬೇಕು. ಆದರೆ ಈ ದೋಸಿಯನ್ನು ನೇಗಿನಹಾಳರವರು ಸೇನಾವರರ ಅರಸ ಎಂದು ಗುರುತಿಸಿದ್ದಾರೆ.[8] ದೋಸಿಯ ನಂತರ ಬರುವ ಸಿನ್ದನ ಕುರಿತು ಶಾಸನಗಳು ದೊರೆತಿಲ್ಲ. ಆದರೆ ನಂತರ ಬರುವ ಶಾಂತಿವರ್ಮನನ್ನು ಕ್ರಿ.ಶ. ೯೫೮ರ ದೇವಗೆರೆ ಶಾಸನ ಮೊದಲ ಬಾರಿಗೆ ಗುರುತಿಸಿದೆ. ದೇವಗೆರೆ ಶಾಸನದ ನಂತರ ಈತನ ಕುರಿತು ಕ್ರಿ.ಶ. ೯೯೧ರ ತನಕ ಕೆಲವು ಶಾಸನಗಳು ದೊರೆತಿವೆ. ಕನವಳ್ಳಿ ಶಾಸನದಲ್ಲಿ ಗುರುತಿಸಲಾದ ಪಯ್ವರನ ಕುರಿತು ಶಾಸನಗಳು ಲಭಿಸಿಲ್ಲ. ಬಿ.ಆರ್. ಗೋಪಾಲರು ಈತನನ್ನು ಹೆಸರಿಸಿದ್ದಾರಷ್ಟೆ.[9]ಶಾಸನಕಾರರು ಈತನನ್ನು ಪಯ್ಪರಸ ಎಂದು ಕರೆದಿದ್ದಾರೆ, ಆದರೆ ಶಾಸನಗಳು ಸ್ಪಷ್ಟವಾಗಿ ‘ಪಯ್ಪರ’ ಎಂದೇ ಕರೆದಿವೆ. ಇನ್ನೊಬ್ಬ ಪಯ್ಪರಸನ ಉಲ್ಲೇಖ ಕ್ರಿ.ಶ. ೧೦೬೮ರ ಶಾಸನದಲ್ಲಿ ದೊರೆಯುತ್ತದಾದರೂ ಆತ ಈ ವಂಶದವನಲ್ಲ.[10] ಸಿರಿಯಾಗರನು ಕನವಳ್ಳಿ ಶಾಸನದಲ್ಲಿ ಅಲ್ಲದೆ ಕ್ರಿ.ಶ. ೧೦೮೮ರ ಉಕ್ಕುಂದದ ಶಾಸನದಲ್ಲಿಯೂ ಹೆಸರಿಲ್ಪಟ್ಟಿದ್ದಾನೆ.[11]ಹೀಗಾಗಿ ಸಿರಿಯಾಗರನ ಕಾಲವನ್ನು ಕ್ರಿ.ಶ. ೧೦೧೭ ರಿಂದ ಕ್ರಿ.ಶ. ೧೦೮೮ರವರೆಗೆ ಎಂದಿಟ್ಟುಕೊಳ್ಳಬಹುದು. ಕ್ರಿ.ಶ. ೧೦೮೮ರ ಅದೇ ಶಾಸನ ಈ ವಂಶದ ವಿಜಯಾದಿತ್ಯನನ್ನು ಮಾಂಡಳೀಕ ಪದವಿಗೇರಿಸಿದೆ. ಇವಿಷ್ಟು ಉಲ್ಲೇಖ ಬೆಳ್ಹುಗೆ ಭಾಗದ ಶಾಸನಗಳಲ್ಲಿ ಲಭ್ಯವಾದುದು. ಇತ್ತ ಬನವಾಸಿ ೧೨೦೦೦ದ ಉಪ ವಿಭಾಗವಾದ ಎಡೆನಾಡು ಎಪ್ಪತ್ತು ಪ್ರದೇಶದಲ್ಲಿ ನಮಗೆ ಮೊದಲನೆಯದಾಗಿ ಕ್ರಿ.ಶ. ೯೦೩ರ ಕೆರೆಹಳ್ಳಿ ಶಾಸನ ‘ಪ್ರಿಯಗಾರ’ನನ್ನು ಹೆಸರಿಸಿದ್ದನ್ನು ನೋಡಬಹುದು.[12]ನಂತರ ಕ್ರಿ.ಶ. ೯೩೮ರ ಶಾಸನವೊಂದರಲ್ಲಿ ಇದೇ ವಂಶದ ‘ಮಾಚಿ’ಯ ಉಲ್ಲೇಖ ದೊರೆಯುತ್ತದೆ.[13] ಇದಕ್ಕೂ ಮುನ್ನ ಈತ ಹಿರೇಕೆರೂರ ಭಾಗದ ಅರಳೀಕಟ್ಟೆ ಗ್ರಾಮದ ಕ್ರಿ.ಶ. ೯೩೧ರ ಶಾಸನದಲ್ಲಿ ಕಂಡುಬರುತ್ತಾನೆ.[14] ಈತನ ಕುರಿತು ಕ್ರಿ.ಶ. ೯೫೮ರ ತನಕ ಉಲ್ಲೇಖವಿದೆ.[15] ಕ್ರಿ.ಶ. ೯೫೮ರ ದೇವಗೆರೆ ಶಾಸನದಲ್ಲಿ ಕಂಡು ಬಂದ ಶಾಂತಿವರ್ಮ ಈ ಎಡೆನಾಡ ಭಾಗದ ಕ್ರಿ.ಶ. ೯೭೨ರ ಒಂದು ಶಾಸನದಲ್ಲಿ ಕಂಡು ಬರುತ್ತಾನೆ.[16] ಈತ ಕ್ರಿ.ಶ. ೯೯೧ರ ತನಕ ಆಳ್ವಿಕೆ ನಡೆಸಿದಂತೆ ಕಂಡು ಬರುತ್ತಿದೆ.[17] ಮುಂದೆ ಎಡೆನಾಡ ಭಾಗದಲ್ಲಿ ಕ್ರಿ.ಶ. ೯೯೨ ರಿಂದ ಕ್ರಿ.ಶ. ೧೦೩೧ರವರೆಗೆ ಇವರ ಕುರಿತು ಉಲ್ಲೇಖಗಳು ದೊರೆಯುತ್ತಿಲ್ಲವಾದರೂ, ಬೆಳ್ಹುಗೆ ಪ್ರದೇಶದ ಕನವಳ್ಳಿ ಶಾಸನ ಈ ನಡುವಿನ ಅವಧಿಯಲ್ಲಿಯೂ ಅವರ ಅಸ್ತಿತ್ವವನ್ನು ಸ್ಪಷ್ಟಪಡಿಸಿದೆ.[18]ಕ್ರಿ.ಶ. ೧೦೩೨ರ ಶಾಸನಗಳು ಈ ವಂಶದ ಮದೇವೂರ ಸಾಂತಯ್ಯನನ್ನು ಉಲ್ಲೇಖಿಸಿದೆ.[19] ಇಲ್ಲಿ ಈತನಿಗೆ ‘ಮದೇವೂರು’ ಹೇಗೆ ಸೇರಿಕೊಂಡಿದೆ ಸ್ಪಷ್ಟವಾಗುವುದಿಲ್ಲವಾದರೂ ಬಹುಶಃ ಈ ವಂಶದ ಎರಡು ಕವಲುಗಳು ಆಡಳಿತಾತ್ಮಕ ಅಥವಾ ಕೌಟುಂಬಿಕ ಸ್ಥಾನಮಾನದ ಜವಾಬ್ದಾರಿ ಹಂಚಿಕೆ ದೃಷ್ಟಿಯಿಂದ ಬೆಳ್ಹುಗೆ ಹಾಗೂ ಎಡೆನಾಡನ್ನು ಆಳಿದಂತೆ ಕಂಡು ಬರುತ್ತದೆ. ಸೊರಬ ತಾಲ್ಲೂಕಿನ ಕ್ರಿ.ಶ. ೯೭೯ರ ಶಾಸನವೊಂದು ಮಾದೆಯೂರ ಶಾಂತಿವರ್ಮನನ್ನು ಉಲ್ಲೇಖಿಸಿದೆ.[20]ಧಾರವಾಡ ಜಿಲ್ಲೆಯ ಕ್ರಿ.ಶ. ೮ನೇ ಶತಮಾನದ ಶಾಸನವೊಂದು ಮಾದೆಯೂರು ಮಾರನನ್ನೂ ಉಲ್ಲೇಖಿಸಿದೆ.[21] ಆದರೆ ಇವರಾರೂ ಮಾಟೂರ ವಂಶಸ್ಥರಲ್ಲ. ಕ್ರಿ.ಶ. ೧೦೩೨ರ ಒಂದು ತೃಟಿತ ಶಾಸನ ಆಲಯ್ಯನನ್ನು ಉಲ್ಲೇಖಿಸಿದೆ.[22] ಬಿ.ಎಲ್.ರೈಸ್‌ರು ಈ ಶಾಸನವನ್ನು ಆಲಯ್ಯನದ್ದೆಂದು ಗುರುತಿಸಿದ್ದಾರೆ.[23] ಸೊರಬ ತಾಲ್ಲೂಕು – ಕುಪ್ಪಗಡ್ಡೆಯ ಶಾಸನದ ಕಾಲಮಾನದಲ್ಲಿ ಸ್ವಲ್ಪ ವ್ಯತ್ಯಯ ವಿರುವಂತಿದೆ.[24] ಇಲ್ಲಿ ಆಲಯ್ಯ ಹಾಗೂ ಆತನ ಮಗ ಜಯಸಿಂಘನ ಉಲ್ಲೇಖವಿದೆ. ಮುಂದೆ ಕ್ರಿ.ಶ. ೧೦೫೭ರ ಚೀಲನೂರು ಶಾಸನ ಈ ವಂಶದ ಸತ್ಯಾಶ್ರಯನನ್ನು ಮಹಾ ಮಾಂಡಳೀಕ ಎಂದಿದೆ.[25] ಹೀಗೆ ಈ ಎಲ್ಲ ಶಾಸನಗಳ ಆಧಾರಗಳಿಂದ ಈವರೆಗೆ ಒಟ್ಟು ೧೨ ಜನ ಮಹಾ ಸಾಮಂತಾಧಿಕಾರಿಗಳನ್ನೂ, ಇಬ್ಬರು ಮಹಾ ಮಾಂಡಳಿಕರನ್ನು ಗುರುತಿಸಲಾಗಿದ್ದು, ಸಿರಿಯಾಗರನು ಪಯ್ವರನ ಮಗ ಹಾಗೂ ಜಯಸಿಂಘನು ಆಲಯ್ಯನ ಮಗ ಎಂಬುದಷ್ಟೇ ಸ್ಪಷ್ಟವಾಗಿದೆ. ಬೆಳ್ಹುಗೆ ಭಾಗದ ಕ್ರಿ.ಶ. ೧೨ನೇ ಶತಮಾನದ ಶಾಸನಗಳು ಈ ವಂಶದ ಮಾಂಡಳೀಕರನ್ನು ಉಲ್ಲೇಖಿಸಿವೆಯಾದರೂ ಹೆಸರು ತೃಟಿತಗೊಂಡಿದೆ.[26] ಒಟ್ಟಾರೆ ನಾವು ಈ ಆಧಾರದಿಂದ ಇವರ ಅಧಿಕಾರ ಕಾಲಾವಧಿಯನ್ನು ಕ್ರಿ.ಶ. ೯ನೇ ಶತಮಾನದಿಂದ ೧೨ನೇ ಶತಮಾನದವರೆಗೆ ಗುರುತಿಸಲು ಸಾಧ್ಯವಾಗಿದೆ. ಇವರು ರಾಷ್ಟ್ರಕೂಟ ಹಾಗೂ ಕಲ್ಯಾಣಿ ಚಾಲುಕ್ಯರ ಮುಖ್ಯ ಅಧಿಕಾರಿಗಳು ಎಂಬುದು ಸ್ಪಷ್ಟವಾಗುತ್ತದೆ.

ಮಾಟೂರ ಅರಸರ ವಂಶಾವಳಿ ವಿವರ

ದೋಸಿ –> ಸಿನ್ಧ –> ಪ್ರಿಯಾಗರ –> ಮಾಚಿ –> ಶಾಂತಿವರ್ಮ
  |
ಪಯ್ವರ
|
ಸಿರಿಯಾಗರ
|
ಸಾಂತಯ್ಯ
|
ಆಲಯ್ಯ-ಜಯಸಿಂಘ
|
ಸತ್ಯಾಶ್ರಯ
|
ವಿಜಯಾದಿತ್ಯ

ಹಲವಾರು ಮೂಲಗಳಿಂದ ಈ ವಂಶಾವಳಿಯನ್ನು ಗುರುತಿಸಲಾಗಿದ್ದು ಕ್ರಿ.ಶ. ೧೦೧೭ರ ಒಂದು ಶಾಸನ ಸೂಚಿಸಿದ ಈ ವಂಶದ ದೋಸಿ ಹಾಗೂ ಸಿನ್ಧನನ್ನು ಶಾಸನಾಧಾರದ ಕೊರತೆಯಿಂದ ಇಲ್ಲಿ ಪ್ರಸ್ತಾಪಿಸುತ್ತಿಲ್ಲ. ಕ್ರಿ.ಶ. ೯೦೩ರ ಕೆರೆಹಳ್ಳಿ ಶಾಸನವೇ ಮೊದಲಿಗೆ ಈ ವಂಶದ ಪ್ರಿಯಾಗರನನ್ನು ಹೆಸರಿಸಿದೆ.

ಪ್ರಿಯಾಗರ : ಕ್ರಿ.ಶ. ೯೦೩ರ ಶಾಸನದನ್ವಯ ಈತ ಎಡೆನಾಡನ್ನಾಳುತ್ತಿದ್ದುದು ಸ್ಪಷ್ಟವಾಗಿದೆ. ಈ ಸಮಯದಲ್ಲಿ ಇದೇ ಗ್ರಾಮದ ಬೀರನೆಂಬುವವನು ಈ ಶಾಸನವನ್ನು ಇರಿಸಿದಂತಿದೆ. ಈತನ ತಂದೆ ಇಲ್ಲಿಯೇ ಒಂದು ಕೆರೆ ಹಾಗೂ ದೇಗುಲ ನಿರ್ಮಿಸಿದ್ದನ್ನು ಶಾಸನವೆಂದು ಪರಿಗಣಿಸಬೇಕಾಗಿದೆ. ಪ್ರಸ್ತುತ ಇದೊಂದು ವೀರಗಲ್ಲು. ತನ್ನ ತಂದೆ ಗುಲಗಣ್ನನ ನೆನಪಿಗಾಗಿ ಮಗ ಬೀರ ಶಾಸನ ಬರೆಸಿದಂತಿದೆ. ಈ ಪ್ರಿಯಾಗರನ ಕುರಿತು ಮತ್ತೆಲ್ಲೂ ಉಲ್ಲೇಖ ದೊರೆಯುತ್ತಿಲ್ಲ. ಹಾಗೆಯೇ ಕ್ರಿ.ಶ. ೯೩೮ರ ತನಕ ಎಡೆನಾಡ ಭಾಗದಲ್ಲಿ ರಾಷ್ಟ್ರಕೂಟ ಕಾಲದ ಶಾಸನಗಳು ದೊರೆಯುತ್ತಿಲ್ಲ. ಕ್ರಿ.ಶ. ೯೦೩ಕ್ಕೂ ಮೊದಲೂ ಕೂಡ ಈ ಭಾಗದಲ್ಲಿ ರಾಷ್ಟ್ರಕೂಟರ ಶಾಸನಗಳು ಕಂಡುಬರುತ್ತಿಲ್ಲ.

ಮಾಚಿ ಅರಸ : ಕ್ರಿ.ಶ. ೯೦೪ ರಿಂದ ೯೩೦ ರವರೆಗೆ ಮಾಟೂರ ಅರಸರ ಕುರಿತು ಯಾವುದೇ ಶಾಸನಗಳು ಕಂಡು ಬರುವುದಿಲ್ಲ. ಕ್ರಿ.ಶ. ೯೩೧ರಲ್ಲಿ ಅರಳೀಕಟ್ಟೆಯ ತೃಟಿತ, ರಾಷ್ಟ್ರಕೂಟ ನಾಲ್ಕನೆಯ ಗೋವಿಂದನ ಕಾಲದ ಶಾಸನವೊಂದು ಈ ವಂಶದ ಮಾಚಿಯನ್ನು, ಹೆಸರಿಸಿದೆ.[27] ಇಲ್ಲಿನದೇ ಇನ್ನೂ ಒಂದು ಇದೇ ಕಾಲದ ಶಾಸನ ಮಾಟೂರ ಹೆಸರನ್ನಷ್ಟೇ ಹೊಂದಿದೆ.[28]ಈ ಶಾಸನ ಕೂಡ ಇವನಿಗೇ ಸಂಬಂಧಿಸಿದ್ದು ಎಂದು ಊಹಿಸಬಹುದು. ತರುವಾಯ ಆರು ವರುಷಗಳ ನಂತರ ಎಡೆನಾಡು-೭೦ರ ಭಾಗದ ಶಾಸನಗಳಲ್ಲಿ ಈತ ಉಲ್ಲೇಖಗೊಳ್ಳುತ್ತಾನೆ. ಓಟೂರಿನ ಒಂದು ಶಾಸನ ರಾಷ್ಟ್ರಕೂಟ ಕನ್ನರ ದೇವನ ಕಾಲದ್ದು. ಚಿಕ್ಕಯ್ಯ ಬನವಾಸಿಯನ್ನು, ಈ ಮಾಚಿಯರಸ ಎಡೆನಾಡನ್ನು ಆಳುತ್ತಿದ್ದುದು ಇಲ್ಲಿ ಸ್ಪಷ್ಟವಾಗಿದೆ.[29]ಇಲ್ಲಿ ಈತನನ್ನು ‘ಅಕಳಂಕನೀಳ, ಕಾರ್ಯದಿಲೀಪ, ವಿಜಯಲಕ್ಷ್ಮಿ ವಲ್ಲಭ’ ಎಂದೆಲ್ಲ ಬಿರದನ್ನಿತ್ತು ಸ್ತುತಿಸಿದೆ. ಈ ಶಾಸನವು ಊರ್ಗಾವುಂಡ ನಾಕಿಮಯ್ಯ ಹಾಗೂ ಆತನ ಕುಟುಂಬದವರು ದೇಗುಲ, ಬಾವಿ, ಮಂಟಪ ನಿರ್ಮಿಸಿದ್ದನ್ನೂ, ಇವರೇ ಶೈವಗುರು ಈಶ್ವರಯ್ಯನ ಕಾಲು ತೊಳೆದು ಭೂದಾನ ಬಿಟ್ಟಂತೆ ಹೇಳಲಾಗಿದೆ. ಕ್ರಿ.ಶ. ೯೩೯ರ ಹೆಚ್ಚೆ ಶಾಸನದಲ್ಲಿ ಮತ್ತೆ ಮಾಚಿ ಅರಸ ಕಾಣಿಸಿಕೊಳ್ಳುತ್ತಾನೆ. ಇಲ್ಲಿ ‘……. ಮಾಚಿಗಂ ಪೊxxxಸಿಯೊಳ್ ಸುಖ ಸಂಕಥಾ ವಿನೋದಂ……’ ಎಂದಿದೆ. ಇದನ್ನು ‘ಪೊನವಾಸಿ’ ಎಂದು ಪೂರ್ಣಗೊಳಿಸಬೇಕು ಎನಿಸುತ್ತದೆ. ಶಾಸನ ವಿಷಯ ಇಲ್ಲಿನ ಶ್ರೀಕಂಠ ದೇವರ ನೈವೇದ್ಯಕ್ಕಾಗಿ ಸಜ್ಜೆಗದ್ದೆ ಬಿಟ್ಟದ್ದು, ದೇವರ ಅಂಗಭೋಗ, ರಂಗಭೋಗ, ಚೈತ್ರ ಪವಿತ್ರಾದಿ, ತಪೋಧನರ ಆಹಾರ, ದೇಗುಲದ ಜೀರ್ಣೋದ್ಧಾರಕ್ಕಾಗಿ ಎಡೆನಾಡಿನ ಕುಳುಗ ಗ್ರಾಮವನ್ನು ಮಾಚಿಗ ಮತ್ತು ಬನವಾಗಿ ಮಂಡಲೇಶ್ವರ ಚಟ್ಟಯ್ಯನು ಇದ್ದು ರುದ್ರಶಕ್ತಿ-ಮುನಿಗಳ ಸನ್ನಿಧಿಯಲ್ಲಿ ದಾನ ನೀಡಿದ ಉಲ್ಲೇಖವಿದೆ.[30] ಕ್ರಿ.ಶ. ೯೪೦ರ ಎರಡು ಶಾಸನಗಳನ್ನು ಬಿ.ಎಲ್. ರೈಸರೂ ಮಾಚಿಯದು ಎಂದಿದ್ದಾರೆ. ಈ ಶಾಸನದಲ್ಲಿ ಬಹುಷಃ ಮಾಚಿಗಂ ಬದಲಿಗೆ ಮಲ್ಲಿಗಂ ಎಂದು ಅಚ್ಚಾದಂತೆ ಕಾಣುತ್ತದೆ.[31] ರೈಸರು ಮಾಚಿಗನನ್ನು ಪೆಲ್ದಸೆಯಲ್ಲಿದ್ದು ಬನವಾಸಿ ೧೨೦೦೦ ಆಳುತ್ತಿದ್ದ ಎಂದಿದ್ದಾರೆ. ಈ ಪೆಲ್ದಸೆ, ಹೆದ್ದಸೆ ಈಗಿನ ಹೆಚ್ಚೆ. ಇವು ರಾಷ್ಟ್ರಕೂಟರ ಕನ್ನರ ದೇವನ ಕಾಲದ ಶಾಸನಗಳು. ಇಲ್ಲಿ ಬಿಂಕೆಯ ನಾಡನ್ನಾಳುತ್ತಿದ್ದುದು, ಚಟ್ಟಯ್ಯ ನಾಳ್ಗಾವುಂಡನಾಗಿದ್ದನ್ನೂ ಸೂಚಿಸಿದೆ. ಕ್ರಿ.ಶ. ೯೫೪ರ ಶಾಸನ ಕೂಡ ಕನ್ನರ ದೇವನ ಕಾಲದ್ದು-ಇಲ್ಲಿ ಮಾಚಿಗ ಎಡೆನಾಡಿನಲ್ಲಿದ್ದು ಬನವಾಸಿ ಪ್ರಾಂತ್ಯದ ಅರಸುಗೈಯ್ಯುತ್ತಿರೆ ಎಂದಿದೆ.[32] ಕಕ್ಕರಶಿ ಗ್ರಾಮದ ವೋಜಿಗ ನೆಂಬಾತ ಇಲ್ಲಿನ ಶೈವ ದೇಗುಲವೊಂದಕ್ಕೆ ತನ್ನ ವಂಶದವರು ಕಟ್ಟಿಸಿದ ಕೆರೆಯ ಕೆಳಗಿನ ಜಮೀನನ್ನು ಬಿಟ್ಟಂತೆಯೂ, ಮಹಾಜನರಿಗಾಗಿ ಮುಟ್ಟಗುಪ್ಪೆ ಗ್ರಾಮವನ್ನು ಬಿಟ್ಟಂತೆಯೂ ಉಲ್ಲೇಖವಿದೆ. ನಂತರ ಕ್ರಿ.ಶ. ೯೫೮ರ ಕಿರುಗುಣಿಸೆ ಗ್ರಾಮದ ಶಾಸನದಲ್ಲಿ ಮಾಚಿಗ ಎಡೆನಾಡು – ೭೦ಕ್ಕೆ ಅರಸುಗೆಯ್ಯೆ ಎಂದಿದೆ. ಇಲ್ಲಿ ಈತನ ಕುಟುಂಬ, ವಂಶದ ಹೆಸರನ್ನೂ ಪ್ರಸ್ತಾಪಿಸಿಲ್ಲ. ಈ ಹೊತ್ತಿಗೆ ಎಡೆನಾಡು ಭಾಗದ ಅಧಿಕಾರಿ ಇವನೇ ಆಗಿದ್ದರಿಂದ ಈ ಶಾಸನವನ್ನು ಮಾಟೂರ ಮಾಚಿಗನದೆಂದೇ ಭಾವಿಸಲಾಗಿದೆ. ಈ ಶಾಸನದಲ್ಲಿ ಬಿಯಳಮ್ಮನ ಮಗ ‘ಪಡೆವಳ’ ಅಂಗನನ್ನು ಹೆಸರಿಸಿ ಆತ ‘ಎಲಸೆ’ಯನ್ನು ಗೋಸಹಸ್ರವಿರಿಸಿ ಕೊಟ್ಟಂತೆ ದಾಖಲಿಸಿದೆ. ಎಲಸಿ ಈ ಹೊತ್ತಿಗೆ ದೊಡ್ಡ ಅಗ್ರಹಾರವಾಗಿದ್ದ ದಾಖಲೆಯಿದೆ. ಈ ಕುರುಗುಣಿಸೆ ಭಾಗದಲ್ಲಿ ಇನ್ನೂ ಕೆಲ ‘ಪಡೆವಳ’ರಿದ್ದ ಬಗ್ಗೆ ಕ್ರಿ.ಶ. ೧೦೫೭ರ ಶಾಸನವೊಂದು ಉಲ್ಲೇಖಿಸಿದೆ.[33] ಎಪಿಗ್ರಾಫಿಯಾ ಇಂಡಿಕಾದಲ್ಲಿ ಕೂಡ ಈ ಮಾಚಿಯನ್ನು ಹೆಸರಿಸಲಾಗಿದೆ.[34]ಎಡೆನಾಡಿನ ಕೆಲವು ಮಾಟೂರ ವಂಶೀಯರ ಶಾಸನಗಳನ್ನು ಗಮನಿಸಿ ಈ ಮಾಚಿ ಕೆಲ ಸಮಯ ಹೆದ್ದಸೆಯಲ್ಲಿದ್ದ ಎಂದಿದ್ದಾರೆ. ‘……the sphere of this government is not Stated….’ ಎಂತಲೂ ಹೇಳಲಾಗಿದೆ. ಇವನ ನಂತರ ಬರುವ ಶಾಂತಿವರ್ಮನ ಆಡಳಿತದಲ್ಲಿ ಕೆಲ ಕಾಲ ಎಡೆನಾಡಿಗೆ ಈ ಮಾಚಿಗ ಅಧಿಕಾರಿಯಾಗಿರಬಹುದೆಂದು ಹೇಳಲಾಗಿದೆ. ಇದಕ್ಕೆ ಕಾರಣ ಸೌತ್ ಇಂಡಿಯನ್ ಇನ್ಸ್‌ಕ್ರಿಪ್ಷ್‌ನ್‌VIII ನಂ.೩೦೫ರ ಶಾಸನದ ತಪ್ಪಾದ ಕಾಲ ನಿರ್ಧಾರವನ್ನು ಕ್ರಿ.ಶ. ೯೫೮ ಎಂದು ತಿದ್ದಿಕೊಂಡಿದ್ದು. ಇಲ್ಲಿಯೇ ಈತನನ್ನು ರಾಷ್ಟ್ರಕೂಟರ ಜವಾಬ್ದಾರಿಯುತ ಅಧಿಕಾರಿಯೆಂದು ಗುರುತಿಸಲಾಗಿದೆ.[35] ಮೋರೇಸರು ಇದೇ ಮಾಚಿಗನನ್ನು ನಾರಕ್ಕಿ ಅರಸ ಎಂದಿದ್ದಾರೆ.[36] ಆದರೆ ಇದಕ್ಕೆ ಏನು ಮೂಲ ಎಂಬುದು ಸ್ಪಷ್ಟವಾಗಿಲ್ಲ. ಇಲ್ಲಿ ಈ ಮಾಚಿಗ ಆರು ವರ್ಷಗಳಷ್ಟು ಕಾಲ ಈ ಬನವಾಸಿ ಭಾಗದಲ್ಲಿ ಅಧಿಕಾರಿಯಾಗಿದ್ದ ಎಂದಿದ್ದಾರೆ. ಶಾಸನಗಳು ಕ್ರಿ.ಶ. ೯೩೧ರಿಂದ ಕ್ರಿ.ಶ. ೯೫೮ರ ತನಕ ಮಾಚಿಗನನ್ನು ಉಲ್ಲೇಖಿಸಿವೆ.

ಶಾಂತಿವರ್ಮ : ಮಾಚಿಗನ ನಂತರ ಅಥವಾ ಮಾಚಿಗನ ಕಾಲಕ್ಕೇ ಈತ ಎಡೆನಾಡ ಭಾಗದ ಮುಖ್ಯ ಆಡಳಿತಗಾರನಾಗಿ ಅಧಿಕಾರ ವಹಿಸಿಕೊಂಡಂತೆ ಕಂಡು ಬರುತ್ತದೆ. ಈತ ರಾಷ್ಟ್ರಕೂಟ ಹಾಗೂ ಕಲ್ಯಾಣಿ ಚಾಲುಕ್ಯರ ಅಧಿಕಾರಿಯಾಗಿದ್ದಕ್ಕೆ ಶಾಸನಗಳು ಆಧಾರವಾಗಿವೆ. ಇವನ ಕುರಿತು ಮೊದಲ ಶಾಸನ ದೇವಗೇರಿ ಗ್ರಾಮದ್ದು.[37] ಈ ದೇವಗೇರಿ ಶಾಸನದ ಕಾಲಮಾನದಲ್ಲಿ ತಪ್ಪಾಗಿದ್ದುದನ್ನೂ ಶಾಸನ ತಜ್ಞರು ಗುರುತಿಸಿದ್ದಾರೆ. ಇದು ‘ಸಕ ೫೨೨ ಕಾಳಯುಕ್ತ, ಮಾರ್ಗಶಿರ ಶು. ೭ ಸೋಮವಾರ ಎಂದು ಉಲ್ಲೇಖವಾಗಿದೆ. ಡಾ. ಫ್ಲೀಟ್‌ಕ್ರಿ.ಶ. ೬೦೦ ನವೆಂಬರ್ ೧೩, ಭಾನುವಾರ ಬರುತ್ತದೆ, ಸೋಮವಾರ ಅಲ್ಲ ಎಂದಿದ್ದನ್ನು, ಸೌತ್ ಇಂಡಿಯನ್‌ಇನ್ಸ್‌ಕ್ರಿಷ್ಷನ್‌ನಲ್ಲೂ ಉಲ್ಲೇಖಿಸಿದ್ದಾರೆ.[38] ಇದರ ಪಠ್ಯ ಎಪಿಗ್ರಾಫಿಯಾ ಇಂಡಿಕಾ XIದಲ್ಲಿ ಪ್ರಕಟವಾಗಿದ್ದು, ಇದರ ನಿರ್ದಿಷ್ಟ ಕಾಲಮಾನದ ಬಗ್ಗೆ ಚರ್ಚಿಸಲಾಗಿದೆ. ಇಲ್ಲಿ ಇದರ ಕಾಲಮಾನ ಕ್ರಿ.ಶ. ೯೫೮ ನವೆಂಬರ್ ೧೫, ಸೋಮವಾರ ಎಂದಿದೆ.[39] ಈ ಆಧಾರದನ್ವಯ ಶಾಂತಿವರ್ಮನು ಕ್ರಿ.ಶ. ೯೫೮ ರಲ್ಲಿ ಆಳ್ವಿಕೆ ನಡೆಸುತ್ತಿದ್ದುದು ಸ್ಪಷ್ಟವಾಗಿದೆ. ಇದು ಶಾಂತಿವರ್ಮನ ಮೊದಲ ಶಾಸನ. ಇಲ್ಲಿ ಈತ ಬನವಾಸಿ ಪನ್ನಿರ್ಚ್ಛಾಸಿರದ ಆಳ್ವಿಕೆ ನಡೆಸುತ್ತಿದ್ದುದರ ಉಲ್ಲೇಖವಿದೆ. ಈ ಶಾಸನದಲ್ಲಿ ಭೂತವೊಂದಕ್ಕೆ ಎಡೆ ನೀಡಿದ ಪ್ರಸಂಗ ಚಿತ್ರಿತವಾಗಿದೆ. ಶಾಂತಿವರ್ಮನು ಸಂಚಾರದಲ್ಲಿದ್ದ ಸಮಯದಲ್ಲಿ ‘ಪಲರೂರು’ ಎಂಬ ಗ್ರಾಮದಲ್ಲಿ ಬೀಡುಬಿಟ್ಟಿರುತ್ತಾನೆ. ಆಗ ತನ್ನ ಸೈನ್ಯದ ಆನೆ ಕುದುರೆಗಳಿಗಾಗಿ ಮೇವನ್ನು ಆ ಊರಿನ ಮಹಾಜನರಲ್ಲಿ ಕೇಳುತ್ತಾನೆ. ಆಗ ಮಹಾಜನರು ಮೇವು ತರಲು ‘ಅಲ್ಲಗುಂದ’ ನೆಂಬಾತನಿಗೆ ತಿಳಿಸುತ್ತಾರೆ. ಆಗ ಆತ ಮೇವಿನ ಚಾಗೆಯಲ್ಲಿರುವ ಒಂದು ಭೂತಕ್ಕೆ ಬೇಯಿಸಿದ ಅಕ್ಕಿಯನ್ನು ನೀಡಿದರೆ ತಾನು ಹುಲ್ಲು ತರಲು ಸಾಧ್ಯವೆಂದಾಗ, ಶಾಂತಿವರ್ಮನು ಒಪ್ಪಿ ಬೇಯಿಸಿದ ಅಕ್ಕಿಯನ್ನು ಒದಗಿಸುತ್ತಾನೆ.

ಶಾಂತಿವರ್ಮನ ಕುರಿತು ಎಪಿಗ್ರಾಫಿ ಇಂಡಿಕಾದಲ್ಲಿ ಚರ್ಚಿಸಲಾಗಿದೆ. ಇಲ್ಲಿ ಎಡೆನಾಡಿನ ಶಾಂತಿವರ್ಮ ಹಾಗೂ ಮಾಚಿಗನ ಶಾಸನ ಗಮನಿಸಿ (೯೫೮-೫೯A.D.) “Tells us that a certain Machiga was then governing the edenadu seventy. He may have been some junior member of the family, perhaps holding office under Santivarma. But there is nothing in the record to mark him as such” ಎನ್ನಲಾಗಿದೆ. ಇಲ್ಲೇ ಶ್ರವಣಬೆಳಗೊಳದ ಗಂಗ ಮಾರಸಿಂಹ (ಕ್ರಿ.ಶ. ೯೬೩-೯೭೪) ಬನವಾಸಿಯನ್ನು ಆಕ್ರಮಿಸಿದಾಗ ಇಲ್ಲಿಯ ಮಾಟೂರ ವಂಶದವನೊಬ್ಬನಿಗೆ, ತನಗೆ ವಿಧೇಯನಾಗಿರುವಂತೆ ಒತ್ತಡ ತಂದಿದ್ದನ್ನು ಉಲ್ಲೇಖಿಸಿ, ಆತ ಶಾಂತಿವರ್ಮನಿರಬಹುದೇ ಎಂಬುದಾಗಿ ಚರ್ಚಿಸಲಾಗಿದೆ.[40]

ಡಾ. ಬಿ.ಆರ್‌. ಗೋಪಾಲರು ಶಾಂತಿವರ್ಮ ಕಲ್ಯಾಣಿ ಚಾಲುಕ್ಯ ಎರಡನೆಯ ತೈಲನಿಗೆ ಅಧಿಕಾರಿಯಾಗಿದ್ದ ಎಂದಿದ್ದಾರೆ.[41] ಸೌತ್‌ಇಂಡಿಯನ್ ಇನ್ಸ್‌ಕ್ರಿಪ್ಷನ್‌ಸಂಪಾದಕರು, ಮಾಜಿ ಹಾಗೂ ಶಾಂತಿವರ್ಮ ರಾಷ್ಟ್ರಕೂಟರ ಅವಧಿಯಲ್ಲಿ ಜವಾಬ್ದಾರಿಯುತ ಅಧಿಕಾರಿಗಳೆಂದು ಹೇಳಿದ್ದಾರೆ.[42] ಇಲ್ಲಿಯೇ ಶಾಂತಿವರ್ಮನ ಕಾಲವನ್ನು ಕ್ರಿ.ಶ. ೯೭೨-೯೯೨ ಎನ್ನಲಾಗಿದೆ. ಆದರೆ ದೇವಗೇರಿ ಶಾಸನದ ಕಾಲವನ್ನು ಎಪಿಗ್ರಾಫಿಯಾ ಇಂಡಿಕಾದ ಸಂಪಾದಕರು ಕ್ರಿ.ಶ. ೯೫೮ ಎಂದಿರುವುದರಿಂದ ಈತನ ಕಾಲವನ್ನು ಕ್ರಿ.ಶ. ೯೫೮-೯೯೨ ಎಂದು ತಿದ್ದಿಕೊಳ್ಳಬಹುದು.[43]

ಎಡೆನಾಡ ಭಾಗದ ಹೆಚ್ಚೆಯ ಕ್ರಿ.ಶ. ೯೭೨ರ ಶಾಸನವೊಂದು ದೇವಗಿರಿ ಶಾಸನದಂತೆ ವಿಶಿಷ್ಟ ವಿಷಯವನ್ನು ಉಲ್ಲೇಖಿಸಿದೆ.[44] ಇದು ರಾಷ್ಟ್ರಕೂಟ ಕಾಲದ ಕೊನೆಯ ಅರಸನಾದ ಕರ್ಕನ-ಕೊನೆಕಾಲದ ಶಾಸನ. ಇಲ್ಲಿ ‘ಆಕಟೆ’ ಎಂಬಾತ ಶಾಂತಿವರ್ಮನಿಗೆ ಪುತ್ರ ಸಂತಾನವಾದರೆ ತನ್ನ ಶಿರವನ್ನು ಕುಂದದಬ್ಬೆಯ ಎದುರಲ್ಲಿ ಒಪ್ಪಿಸುತ್ತೇನೆಂದು, ನಂತರ ಶಾಂತಿವರ್ಮನಿಗೆ ಪುತ್ರ ಸಂತಾನವಾಗಿ ಅದೇ ರೀತಿ ವರ್ತಿಸುತ್ತಾನೆ. ಅದಕ್ಕೆ ಮೆಚ್ಚಿದ ಶಾಂತಿವರ್ಮ ಎಲಸಿಯ ಮಹಾಜನರ ಸಮ್ಮುಖದಲ್ಲಿ ಆತನ ವಂಶಕ್ಕೆ ಭೂದಾನ ನೀಡುತ್ತಾನೆ.

ಶಾಂತಿವರ್ಮ ಕ್ರಿ.ಶ. ೯೯೧ ರಲ್ಲಿ ಎಡೆನಾಡೆಪ್ಪತ್ತು, ಬೆಳ್ಹುಗೆ ಎಪ್ಪತ್ತು, ತಂದವೂರ ಹನ್ನೆರಡು, ಗೆದೆಯ ಹನ್ನೆರಡು, ಮುಗುನ್ದ ಹನ್ನೆರಡು, ಪುಲಿವಟ್ಟ ಹನ್ನೆರಡು, ಕಲ್ಪತ್ತಿ ಏಳು, ಸಾಂತಳಿಗೆ ಸಾವಿರದ ಸ್ವಾಮ್ಯ ಪಡೆದುದರ ಉಲ್ಲೇಖ ಹೆಚ್ಚೆಯ ಶಾಸನದಲ್ಲಿದೆ.[45] ಇದೇ ಶಾಸನ ಸಾಂತಳಿಗೆಯ ಬೀರ ಸಾಂತರ ಗೆದೆಯವನ್ನು ಆಕ್ರಮಿಸಿದಂತೆ, ಅದನ್ನು ಶಾಂತಿವರ್ಮ ಪುನಃ ಗೆದ್ದು ಅಲ್ಲಿನ ಗಾವುಂಡ ಜೋಗಯ್ಯನಿಗೆ ಗೈದು ಕೊಟ್ಟಂತೆ ದಾಖಲಿಸಿದೆ. ಈ ಜೋಗಯ್ಯನೂ ಬೀರಸಾನ್ತರ, ಶಾಂತಿವರ್ಮನ ಕದನದಲ್ಲಿ ಭಾಗಿಯಾಗಿದ್ದಂತೆ ಕಂಡುಬರುತ್ತದೆ. ಈತ ಹೆದ್ದಸೆಯಲ್ಲಿದ್ದುದನ್ನು ಈ ಶಾಸನ ಉಲ್ಲೇಖಿಸಿದೆ.

ಈ ಅರಸರು ಕ್ರಿ.ಶ. ೧೦೧೭ರ ಕನವಳ್ಳಿ ಶಾಸನದನ್ವಯ ಶಾಂತಿವರ್ಮನ ಕಾಲಕ್ಕೆ ಬೆಳ್ದುಗೆ ಪ್ರದೇಶವನ್ನು ಆಳಿದಂತಿದೆ.[46] ಈ ಮೊದಲು ಮಾಚಿ ಸತ್ಯಳ್ಗೆ ಭಾಗದಲ್ಲಿದ್ದುದನ್ನು ಕ್ರಿ.ಶ. ೯೩೧ರ ಶಾಸನ ಸ್ಪಷ್ಟಪಡಿಸಿದೆ.[47] ಶಾಂತಿವರ್ಮ ಕ್ರಿ.ಶ. ೯೫೮ರ ಹೊತ್ತಿಗೆ ಈ ಬೆಳ್ಹುಗೆ ಭಾಗಕ್ಕೆ ಪ್ರವೇಶಿಸಿದ್ದ,[48] ಆದಾಗ್ಯೂ ಈ ಹೊತ್ತಿಗೆ ಅವನ ಆಳ್ವಿಕೆ ಆ ಭಾಗದಲ್ಲಿ ಇದ್ದುದಕ್ಕೆ ಆಧಾರವಿಲ್ಲ. ಕ್ರಿ.ಶ. ೯೯೧ರ ಹೆಚ್ಚೆ ಶಾಸನ ಇವನ ಆಳ್ವಿಕೆಯ ಪ್ರದೇಶವನ್ನು ದಾಖಲಿಸಿದೆ.[49] ಕನವಳ್ಳಿ ಬೆಳ್ಹುಗೆ ಭಾಗದ ಮುಖ್ಯ ಗ್ರಾಮ. ಇಲ್ಲಿನ ಶಾಸನವೊಂದು ಮಾಟೂರ ವಂಶದ ಐದು ಮಂದಿ ಅರಸರನ್ನು ಹೆಸರಿಸಿದೆ. ಈ ಶಾಸನ ಸಿರಿಯಾಗರನ ಕಾಲದ್ದು.[50] ಇಲ್ಲಿ ಶಾಂತಿವರ್ಮನನ್ನು ಉಲ್ಲೇಖಿಸುವ ಮೊದಲು ‘………. ಸಿನ್ಧನಖಿಳೋರ್ವಿ ತಳದೊಳ್ ಶಾಂತಿವರ್ಮನಾತನ ತನಯಂ ಖ್ಯಾತಿ xxxx……….’ ಎಂದು, ಮುಂದೆ ಪಯ್ವರನ ಉಲ್ಲೇಖ ಬರುತ್ತದೆ. ಈ ತೃಟಿತ ಸಾಲ ಸಿಂಧನ ಮಗ ಶಾಂತಿವರ್ಮನೆಂದೋ, ಶಾಂತಿವರ್ಮನ ಮಗ ಪಯ್ವರನೆಂದೋ ಹೇಳಲು ಹೊರಟಂತಿದೆ ಅಥವಾ ಸಿಂಧನ ನಂತರ ಈ ವಂಶದ ಶಾಂತಿವರ್ಮ ತನ್ನ ಮೂಲಿಗರ ಆಳ್ವಿಕೆಯ ಪ್ರದೇಶವನ್ನು ಆಳಿಕೊಂಡು ಬಂದಂತೆಯೂ ಉಲ್ಲೇಖವಿರಬಹುದು.

ಈ ಎಲ್ಲ ಶಾಸನಗಳನ್ವಯ ಶಾಂತಿವರ್ಮ ಮಾಟೂರ ಅರಸರುಗಳಲ್ಲಿಯೇ ಬಲಿಷ್ಠ ನೆನಿಸುತ್ತಾನೆ. ಈತ ಸುದೀರ್ಘ ೨೬ ವರ್ಷಗಳಷ್ಟು ಕಾಲ ರಾಜ್ಯಭಾರ ಮಾಡಿದಂತೆ ಕಂಡುಬರುತ್ತದೆ. ಶಾಸನಗಳು ಈತನನ್ನು ‘ವೈರಿ ಮಾರ್ತಾಂಡ, ವಿಕ್ರಮ ಸಿಂಘ, ಸುಭಟ ಚೂಡಾಮಣಿ, ತೇಜಾಗರ, ಸತ್ಯರತ್ನಾಗರ ಎಂದೆಲ್ಲ ಹೊಗಳಿವೆ. ಈತ ತನ್ನ ಎಡೆನಾಡ ವ್ಯಾಪ್ತಿಯ ಆಳ್ವಿಕೆಯ ಕೇಂದ್ರವನ್ನು ಹೆಚ್ಚಾಗಿ ಈ ಹೆದ್ದಸೆಯಲ್ಲೇ ಮಾಡಿಕೊಂಡಿದ್ದ ಎನಿಸುತ್ತದೆ.

 

[1]ಡಿ.ಆರ್. ಭಂಡಾರ್ಕರ್ – ಇಂಡಿಯನ್ ಎಂಟಿಕ್ಪರಿ, ೧೯೧೧ ಪು. ೩೫.

[2]ಸೌ.ಇಂ.ಇ.ನಂ.೧೮, ಶಾಸನ ಸಂಖ್ಯೆ-೯೩ ಉಕ್ಕುಂದ, ರಾಣೇಬೆನ್ನೂರು, ಧಾರವಾಡ-೧೦೮೮

[3]ಎ.ಕ. VIII ನಂ. ೧೮೪, ಕುಪ್ಪಗಡ್ಡೆ, ಸೊರಬ, ಶಿವಮೊಗ್ಗ, ಕ್ರಿ.ಶ. ೧೦೩೩.

[4]ಅದೇ. ನಂ. ೫೦೦, ಚೀಲನೂರು, ಸೊರಬ, ಶಿವಮೊಗ್ಗ ಕ್ರಿ.ಶ. ೧೦೫೭

[5]ಎ.ಇಂ. XI. ಪು.ಸಂ. ೪ ರಿಂದ

[6]ಸೌ.ಇಂ.ಇ.-೧೮, ಶಾಸನ ನಂ, ೪೩, ಕನವಳ್ಳಿ, ಹಾವೇರಿ, ಧಾರವಾಡ, ಕ್ರಿ.ಶ. ೧೦೧೭.

[7]ಧಾ.ಜಿ.ಶಾ.ಸೂ. ನಂ. ೪೦, ಚಿಕ್ಕನಂದಿಹಳ್ಳಿ, ಬ್ಯಾಡಗಿ, ಧಾರವಾಡ, ೮ನೇ ಶತಮಾನ.

[8]ನೇಗಿನಹಾಳ ಪ್ರಬಂಧಗಳು – ಹಂಪಿ ವಿಶ್ವವಿದ್ಯಾಲಯ – ಪು.ಸಂ. ೪೮೭

[9]ಡಾ. ಬಿ.ಆರ್. ಗೋಪಾಲ್. ದಿ ಚಾಲುಕ್ಯಾಸ್ ಆಫ್ ಕಲ್ಯಾಣ ಆಂಡ್ ಕಳಚೂರೀಸ್, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಪು. ೨೩೮

[10]ಸೌ.ಇಂ.ಇ. ನಂ. ೨೦ ಶಾಸನ ಸಂಖ್ಯೆ – ೪೪.

[11]ಸೌ.ಇಂ.ಇ. ನಂ. ೧೮, ಶಾಸನ ಸಂಖ್ಯೆ – ೯೩, ಉಕ್ಕುಂದ, ರಾಣೇಬೆನ್ನೂರು, ಧಾರವಾಡ ಕ್ರಿ.ಶ. ೧೦೮೮.

[12]ಎ.ಕ.VIII ನಂ. ೨೧೬, ಕೆರೆಹಳ್ಳಿ, ಸೊರಬ, ಶಿವಮೊಗ್ಗ, ಕ್ರಿ.ಶ. ೯೦೩.

[13]ಅದೇ ನಂ. ೭೦, ಓಟೂರು, ಸೊರಬ, ಶಿವಮೊಗ್ಗ, ಕ್ರಿ.ಶ. ೯೩೮.

[14]ಧಾಜಿ.ಶಾ.ಸೂ. ನಂ.೨೫ ೧೯೭೦-೭೧) ಕ್ರಿ.ಶ.೯೩೧.

[15]ಎ.ಕ.VIII ನಂ. ೫೦೧, ಕಿರುಗುಣಿಸೆ, ಸೊರಬ, ಶಿವಮೊಗ್ಗ, ಕ್ರಿಶ. ೯೫೮.

[16]ಅದೇ. ನಂ. ೪೭೯ ಹೆಚ್ಚೆ, ಸೊರಬ, ಶಿವಮೊಗ್ಗ, ಕ್ರಿಶ. ೯೭೨.

[17]ಅದೇ. ನಂ. ೪೭೭ ಹೆಚ್ಚೆ, ಸೊರಬ, ಶಿವಮೊಗ್ಗ, ಕ್ರಿಶ. ೯೯೧.

[18]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೪೩, ಕನವಳ್ಳಿ, ಹಾವೇರಿ, ಧಾರವಾಡ ಕ್ರಿ.ಶ. ೧೦೧೭

[19]ಎ.ಕ. VIII ನಂ.೬೦ ರಿಂದ ೬೪, ಗುಡವಿ, ಸೊರಬ, ಶಿವಮೊಗ್ಗ, ಕ್ರಿಶ. ೧೦೩೨.

[20]ಅದೇ. ನಂ.೫೩೦ – ಹುಣವಳ್ಳಿ, ಸೊರಬ, ಶಿವಮೊಗ್ಗ, ಕ್ರಿಶ. ೯೭೯.

[21]ಕ.ರಿ.ಇ.ಪಿ.ಆರ್. ೧೯೫೩-೫೭ ಕಛವಿ, ಹಿರೇಕೆರೂರು, ಧಾರವಾಡ ಪು. ೬೫, ಕ್ರಿಶ.೮.

[22]ಎ.ಕ.VIII ನಂ. ೧೯೧, ಸಾರೇಕೊಪ್ಪ, ಸೊರಬ, ಶಿವಮೊಗ್ಗ, ಕ್ರಿಶ. ೧೦೩೨.

[23]ಎ.ಕ.VI-VIII ಟ್ರಾನ್ಸ್‌ಲೇಶನ್ ವಿಭಾಗ, ಪು.೧೧.

[24]ಎ.ಕ.VIII, ನಂ.೧೮೪, ಕುಪ್ಪಗಡ್ಡೆ, ಸೊರಬ, ಶಿವಮೊಗ್ಗ, ಕ್ರಿಶ. ೧೦೩೩.

[25]ಅದೇ. ನಂ. ೫೦೦, ಚೀಲನೂರು –,, — ಕ್ರಿಶ. ೧೦೫೭.

[26]ಎ.ಕ. VIII ನಂ. ೨೨೦, ತಾಳಗುಪ್ಪೆ, ಸೊರಬ, ಶಿವಮೊಗ್ಗ, ಕ್ರಿಶ. ೧೧೨೭.

[27]ಧಾ.ಜಿ.ಶಾ.ಸೂ. ನಂ.೨೫(೧೯೭೦-೭೧) ಅರಳಿಕಟ್ಟೆ, ಹಿರೇಕೆರೂರು, ಧಾರವಾಡ, ಕ್ರಿ.ಶ. ೯೩೧.

[28]ಅದೇ — ನಂ. ೨೮ –, –, — (?)

[29]ಎ.ಕ. VIII ನಂ. ಓಟೂರು, ಸೊರಬ, ಶಿವಮೊಗ್ಗ, ಕ್ರಿಶ. ೯೩೮.

[30]ಅದೇ, –, — ನಂ. ೪೭೬, ಹೆಚ್ಚೆ –,, — ಕ್ರಿ.ಶ. ೯೩೯.

[31]ಎ.ಕ. V-VIII ಟ್ರಾನ್ಸಲೇಷನ್‌ವಿಭಾಗ ಪು.ಸಂ.೧೨.

[32]ಎ.ಕ.VIII ನಂ. ೪೭೪, ಕಕ್ಕರಸಿ, ಸೊರಬ, ಶಿವಮೊಗ್ಗ, ಕ್ರಿಶ. ೯೫೪.

[33]ಅದೇ- ನಂ, ೫೦೦ ಚೀಲನೂರು –,,– ಕ್ರಿ.ಶ. ೧೦೫೭

[34]ಎ.ಇಂ XI ಪು, ೫ ರಿಂದ

[35]ಅದೇ –,,– ಪು.ಸಂ. ೪, ೫ ರಿಂದ

[36]ಜಾರ್ಜ್‌ಎಂ. ಮೋರೇಸ್ – ದಿ ಕದಂಬ ಕುಲ ಬಾಂಬೆ ೧೯೩೧, ಪು.ಸಂ. ೮೭.

[37]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೩೦೫, ದೇವಗೇರಿ, ಹಾವೇರಿ, ಧಾರವಾಡ ಕ್ರಿ.ಶ. (?)

[38]ಅದೇ.

[39]ಎ.ಇಂ.XI ಪು.ಸಂ. ೪ ರಿಂದ

[40]ಅದೇ

[41]ಬಿ.ಆರ್. ಗೋಪಾಲ್-ಹಿಂದೆ ಉಲ್ಲೇಖಿಸಿದ್ದು, ಪು.ಸಂ.೮೧

[42]ಸೌ.ಇಂ.ಇ. ನಂ. ೧೮ ಪು.ಸಂ. VII ರಿಂದ

[43]ಎ.ಇಂ. XI ಪು.ಸಂ. ೫ ರಿಂದ

[44]ಎ.ಕ.VIII ನಂ. ೪೭೯, ಹೆಚ್ಚೆ,ಸೊರಬ ಶಿವಮೊಗ್ಗ ಕ್ರಿ.ಶ.೯೭೨

[45]ಅದೇ ನಂ. ೪೭೭, ಕ್ರಿ.ಶ.೯೯೧.

[46]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೪೩, ಕನವಳ್ಳಿ, ಹಾವೇರಿ ಧಾರವಾಡ ಕ್ರಿ.ಶ. ೧೦೧೭.

[47]ಧಾ.ಜಿ.ಶಾ.ಸೂ. ನಂ.೨೫, ೨೮ (೧೯೭೦-೭೧) ಅರಳಿಕಟ್ಟೆ, ಹಿರೇಕೆರೂರು, ಧಾರವಾಡ, ಕ್ರಿ.ಶ. ೯೩೧.

[48]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೩೦೫, ದೇವಗೇರಿ, ಹಾವೇರಿ, ಧಾರವಾಡ ಕ್ರಿ.ಶ.?.

[49]ಸೊರಬ, ಶಿವಮೊಗ್ಗ, ಕ್ರಿಶ.

[50]ಸೌ.ಇಂ.ಇ. ನಂ. ೧೮ ಶಾಸನ ಸಂಖ್ಯೆ – ೪೩, ಕನವಳ್ಳಿ, ಹಾವೇರಿ ಧಾರವಾಡ ಕ್ರಿ.ಶ. ೧೦೧೭.