ಭಾರತದ ಇತಿಹಾಸದಲ್ಲಿ ಅನೇಕ ದೊಡ್ಡ ರಾಜ್ಯ ಸಾಮ್ರಾಜ್ಯಗಳು ಆಳ್ವಿಕೆ ನಡೆಸಿ ನಂತರ ಪತನ ಹೊಂದಿರುವವು. ಹಾಗೆಯೇ ಅನೇಕ ಸಾಮಂತರು, ಪಾಳೇಗಾರರು, ರಾಜರು, ಮಾಂಡಲೀಕರು, ಮಹಾಮಂಡಳೇಶ್ವರರು ಈ ದೊಡ್ಡರಾಜ ಮನೆತನಗಳಿಗೆ ಆಧೀನವಾಗಿ ತಮ್ಮ ತಮ್ಮ ಪ್ರದೇಶಗಳಲ್ಲಿ ಆಳ್ವಿಕೆ ಮಾಡಿದ್ದಾರೆ. ಇಂತಹ ಸಣ್ಣ ಪುಟ್ಟ ಪ್ರಭುತ್ವಗಳ ಬಗ್ಗೆ ಬಹಳ ಮುತುವರ್ಜಿಯಿಂದ ಅಭ್ಯಾಸ ಮಾಡಬೇಕಾಗಿದೆ. ಏಕೆಂದರೆ ಈ ಮಾಂಡಲೀಕರು, ಸಾಮಂತರು, ಪಾಳೇಗಾರರು ತಮ್ಮದೇ ಪಾತ್ರವನ್ನು ರಾಜಕೀಯ ಕ್ಷೇತ್ರದಲ್ಲಿ ನಿರ್ವಹಿಸುವುದರೊಂದಿಗೆ ಆಯಾ ಪ್ರದೇಶ ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ವಾಸ್ತುಶಿಲ್ಪಗಳ ಕ್ಷೇತ್ರದಲ್ಲಿಯೂ ತಮ್ಮ ಪ್ರಭಾವವನ್ನು ಬೀರಿದ್ದಾರೆ. ಇತಿಹಾಸದ ಸರಿಯಾದ ಅಭ್ಯಾಸಕ್ಕೆ ಈ ಹಿನ್ನೆಲೆಯ ಅರಿವು ಅಗತ್ಯ. ಈ ಸಣ್ಣ ಪುಟ್ಟ ರಾಜರು ಸರಿಯಾದ ಅವಕಾಶ ಸಿಕ್ಕದಂಥ ಪಕ್ಷದಲ್ಲಿ, ಅಂದರೆ ತಮ್ಮನ್ನು ಆಳುವ ಅರಸರ ಪ್ರಾಬಲ್ಯ ಕಡಿಮೆಯಾದರೆ ಸ್ವತಃ ತಾವು ಸ್ವತಂತ್ರರಾಗುವ ಪ್ರಯತ್ನ ಮಾಡಬಹುದಿತ್ತು. ಇಲ್ಲವೆಂದರೆ ತಮ್ಮ ನಿಷ್ಠೆಯನ್ನು ಪ್ರಬಲರಾದ ಬೇರೆ ರಾಜಮನೆತನಕ್ಕೆ ವ್ಯಕ್ತಪಡಿಸಿ ಇರಬೇಕಿತ್ತು. ಸಂಪನ್ಮೂಲಗಳ ಮಿತಿಗಳು ಹಾಗೂ ಅಕ್ಕಪಕ್ಕದಲ್ಲಿರುತ್ತಿದ್ದ ಅನೇಕ ಪಾಳೇಗಾರರು ಹಾಗೂ ರಾಜರುಗಳ ಮಧ್ಯ ಇರುತ್ತಿದ್ದ ವೈರತ್ವದಿಂದ ಹೆಚ್ಚಿನ ಸಣ್ಣ ರಾಜರುಗಳಿಗೆ ಸ್ವತಂತ್ರ ರಾಜಮನೆತನಗಳಾಗಿ ಆಳ್ವಿಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಅನೇಕ ಅರಸುಮನೆತನಗಳು ನಮಗೆ ಎಲ್ಲಾ ಪ್ರದೇಶಗಳಲ್ಲೂ ಕಂಡುಬರುತ್ತಿದ್ದು ಅದು ಮಲೆನಾಡಿನ ಪ್ರಾಂತ್ಯದಲ್ಲೂ ಕಾಲದಿಂದ ಕಾಲಕ್ಕೆ ಕಂಡುಬರುತ್ತದೆ.

ಇಂತಹ ಸಣ್ಣ ಪುಟ್ಟ ರಾಜರು ಭೌಗೋಳಿಕವಾಗಿ ತಮ್ಮ ಎಲ್ಲೆಗಳನ್ನು ಹೆಚ್ಚು ವಿಸ್ತರಿಸಲು ಆಗದೇ ಹೆಚ್ಚಿನ ಸಂದರ್ಭದಲ್ಲಿ ಆಧೀನವಾಗೆ ಉಳಿದುದರಿಂದ ಅವರನ್ನು ಸ್ಥಾನಿಕ ಅರಸರು ಎಂದು ಗುರುತಿಸಲಾಗುತ್ತದೆ.

ಸ್ಥಾನಿಕ ಅರಸರ ಇತಿಹಾಸವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದರೆ ಅವರು ಹೇಗೆ ತಮ್ಮ ಅಳರಸರ ಅಭ್ಯುದಯಕ್ಕೆ ಅಥವಾ ಅವನತಿಗೆ ಕಾರಣರಾಗುತ್ತಿದ್ದರೆಂದು ತಿಳಿಯುತ್ತದೆ. ತಮ್ಮ ನಿರ್ದಿಷ್ಟ ಭೌಗೋಳಿಕ ವಲಯದ ಒಡನಾಟ ಈ ಸ್ಥಾನಿಕರಿಗೆ ನಿಕಟವಾಗಿ ಇದ್ದುದರಿಂದ ಯುದ್ಧದ ಸಂದರ್ಭದಲ್ಲಿ ಆಯಕಟ್ಟಿನ ಪ್ರದೇಶಗಳ ಬಳಿಯಲ್ಲಿ ತಮ್ಮ ಸಾಮ್ರಾಟರಿಗೆ ನೆರವಾಗುತ್ತಿದ್ದರು. ಆರ್ಥಿಕ ಅಭಿವೃದ್ಧಿ, ಸಾಂಸ್ಕೃತಿಕ ಉತ್ಕರ್ಷ, ಸ್ಥಾನಿಕ ಪ್ರಾಂತ್ಯದ ಮುಖ್ಯ ಅಂಶವಾಗಿದ್ದಾಗ ಅದು ಸಾಮ್ರಾಟರ ಸ್ಥಿತಿಯನ್ನು ಉತ್ತಮಪಡಿಸುತ್ತಿತ್ತು. ಈ ನಿಟ್ಟಿನಲ್ಲಿ ಹೊಂಬುಜದ ಸಾಂತರರ ಇತಿಹಾಸ ಅಧ್ಯಯನ ಸ್ವಾಗತಾರ್ಹ.

ಸಾಂತರರ ಆಡಳಿತದ ಪ್ರದೇಶದ ವ್ಯಾಪ್ತಿ

ಇಂದು ಸಣ್ಣ ಗ್ರಾಮವಾಗಿರುವ ಹುಂಚ ಅಥವಾ ಹೊಂಬುಜ ಶಿವಮೊಗ್ಗ ನಗರದಿಂದ ಆಗ್ನೇಯ ದಿಕ್ಕಿಗೆ ಸುಮಾರು ೬೦ ಕಿ.ಮಿ. ಮತ್ತು ಹೊಸನಗರದಿಂದ ಪೂರ್ವಕ್ಕೆ ಸುಮಾರು ೨೧ ಕಿ.ಮೀ. ದೂರದಲ್ಲಿದೆ.[1] ಇದೊಂದು ಪ್ರಮುಖ ಜೈನ ಕೇಂದ್ರವಾಗಿದ್ದು ದಿಗಂಬರ ಪಂಥಕ್ಕೆ ಸೇರಿದುದಾಗಿದೆ. ಪದ್ಮಾವತೀ ಅಮ್ಮನವರು ಇಲ್ಲಿಯ ಪ್ರಮುಖ ದೇವತೆ. ನವರಾತ್ರಿ ಹಬ್ಬ ಹಾಗೂ ಶ್ರುತ ಪಂಚಮಿಯನ್ನು ಬಹಳ ವೈಭವದಿಂದ ಇಲ್ಲಿ ಆಚರಿಸುತ್ತಾರೆ.

ಸುಮಾರು ೮ನೇ ಶತಮಾನದಲ್ಲಿ ಹುಂಚವು ಮಲೆನಾಡಿನ ಒಂದು ಮಾಂಡಲೀಕರ ವಂಶದ ರಾಜಧಾನಿಯಾಗಿತ್ತು. ಅವರನ್ನೇ ಇತಿಹಾಸದಲ್ಲಿ ನಾವು ಸಾಂತರರು ಎಂದು ಗುರುತಿಸುತ್ತೇವೆ. ಹಾಗೆಯೇ ಅವರು ಆಳ್ವಿಕೆ ಮಾಡಿದ ಪ್ರದೇಶ ಘಟಕ ಸಾಂತಳಿಗೆ ಸಾಯಿರ ಎಂದು ಗುರುತಿಸಲ್ಪಟ್ಟಿದೆ. ಈ ಸಾಂತರರು ಸುಮಾರು ೪೦೦ ವರ್ಷಗಳ ದೀರ್ಘ ಆಳ್ವಿಕೆಯನ್ನು ಈ ಪ್ರದೇಶದಲ್ಲಿ ನಡೆಸಿದರೂ ಅವರ ಇತಿಹಾಸವನ್ನು ಅರಿಯಲು ನಮಗೆ ಇರುವ ಮಾಹಿತಿಗಳು ಬಹಳ ಕಡಿಮೆ ಎಂದೇ ಹೇಳಬೇಕಾಗುತ್ತದೆ. ಅವರ ರಾಜ್ಯದ ಗಡಿ ಇಂದಿನ ಶಿವಮೊಗ್ಗ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗಳಿಷ್ಟೇ ಸೀಮಿತವಾದ ಮನೆತನ ಇದಾಗಿತ್ತು. ಹಾಗೂ ಅವರ ದೀರ್ಘ ಆಳ್ವಿಕೆಯ ಕಾಲದಲ್ಲಿ ಅವರು ಅನೇಕ ಸಲ ತಮ್ಮ ರಾಜಧಾನಿಯನ್ನು ಬದಲಾಯಿಸಬೇಕಾಗಿ ಬಂದುದು ಶಾಸನಗಳ ಅಧ್ಯಯನದಿಂದ ನಮಗೆ ತಿಳಿದು ಬರುತ್ತದೆ. ಆದರೆ ನಾನು ಇಲ್ಲಿ ಹುಂಚದ ಸಾಂತರರನ್ನು ಮಾತ್ರ ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ. ತಮ್ಮ ದೀರ್ಘ ಆಳ್ವಿಕೆಯ ಕಾಲದಲ್ಲಿ ಸಾಂತರರು ಬರೀ ಮಹಾಮಂಡೇಳ್ವರ ಸ್ಥಾನಕ್ಕೆ ಮಾತ್ರ ಏರಲು ಸಾಧ್ಯವಾಯಿತು. ಸುಮಾರು ೮ನೇ ಶತಮಾನದಿಂದ ರಾಷ್ಟ್ರಕೂಟರ, ಕಲ್ಯಾಣಿ ಚಾಲುಕ್ಯರ ಹಾಗೂ ನಂತರ ಹೊಯ್ಸಳರ ಆಧೀನದಲ್ಲಿ ಇವರು ಆಳ್ವಿಕೆ ಮಾಡಿದುದು ಶಾಸನಗಳಿಂದ ತಿಳಿದುಬರುತ್ತದೆ. ಆದರೆ ಸಾಂತರರು ಇಲ್ಲಿ ತಮ್ಮ ರಾಜ್ಯವನ್ನು ಸ್ಥಾಪಿಸುವ ಪೂರ್ವದಲ್ಲಿ ಈ ಮಲೆನಾಡಿನ ಬಹಳ ಭಾಗವು ಅಳುಪರ ಅಧೀನದಲ್ಲಿದ್ದಂತೆ ಕಂಡುಬರುತ್ತದೆ. ಈ ಸಾಂತರರು ಮೂಲತಃ ಜೈನಧರ್ಮಕ್ಕೆ ಸೇರಿದವರಾಗಿದ್ದು ಜೈನಧರ್ಮದ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡಿದವರಾಗಿದ್ದಾರೆ.

ಹೊಂಬುಜದ ಸಾಂತರರನ್ನು ಕುರಿತು ಇಲ್ಲಿಯವರಿಗೆ ನಡೆದಿರುವ ಅಧ್ಯಯನ

ಸಾಂತರರನ್ನು ಕುರಿತು ಮೊಟ್ಟಮೊದಲು ಕೆಲಸ ಮಾಡಿರುವವರು ಶ್ರೀ ಬೆಂಜಮಿನ್ ಲೂಯಿಸ ರೈಸರವರು. ಇವರು ಪ್ರಕಟಿಸಿರುವ ಎಫಿಗ್ರಾಫಿಯ ಕರ್ನಾಟಕ ಸಂಪುಟಗಳಲ್ಲಿ ೬.೭.೮ನೇಯ ಸಂಪುಟಗಳಲ್ಲಿ ಸಾಂತರರ ಶಾಸನಗಳು ಪ್ರಕಟವಾಗಿದ್ದು ಈ ಸಂಪುಟಗಳ ಪ್ರಾಸ್ತಾವಿಕ ಅಧ್ಯಾಯದಲ್ಲಿ ಸಾಂತರ ವಂಶ ಹಾಗೂ ರಾಜರ ಬಗ್ಗೆ ದೀರ್ಘವಾದ ವಿವರಣೆಯನ್ನು ನಾವು ಕಾಣುತ್ತೇವೆ.

ನಂತರ ಬಿ.ಎ. ಸಾಲೆತ್ತೊರೆ ತಮ್ಮ ಗ್ರಂಥಗಳಾವ ಮಿಡಿವೇಲ್ ಜೈನಿಸಮ್ (೧೯೩೮) ಕನ್ನಡ ನಾಡಿನ ಚರಿತ್ರೆ ಸಂಪುಟ ೧ (೧೯೪೧) ಹಾಗೂ ಎನ್ಶಿಯಂಟ್ ಕರ್ನಾಟಕದ ಸಂಪುಟ-೨. ಇವುಗಳಲ್ಲಿ ಸಾಂತರರನ್ನು ಕುರಿತು ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ.

ತದನಂತರ ನಮಗೆ ಸಾಂತರರ ಕುರಿತು ತಿಳಿದು ಬರುವುದು ಮೈಸೂರು ಪ್ರಾಕ್ತನ ಇಲಾಖೆಯ ೧೯೨೯, ೧೯೩೦, ೧೯೩೧ನೇ ಇಸ್ವಿಯ ವಾರ್ಷಿಕ ವರದಿಗಳಲ್ಲಿ. ಇದರಲ್ಲಿ ಬಿ.ಎಲ್. ರೈಸ್ ರವರ ನಂತರ ಬೆಳಕಿಗೆ ಬಂದ ಅನೇಕ ಹೊಸ ಶಾಸನಗಳು ಪ್ರಕಟವಾಗಿದೆ.

ಕರ್ನಾಟಕದ ಚರಿತ್ರೆಯನ್ನು ಕುರಿತು ಸಾಕಷ್ಟು ಅಧ್ಯಯನಗಳನ್ನು ನಡೆಸಿರುವ ಎಂ.ಹೆಚ್. ಕೃಷ್ಣ, ಬಿ.ಆರ್. ಗೋಪಾಲ್, ಕೆ.ವಿ. ರಮೇಶ, ಎಂ.ವಿ. ಕೃಷ್ಣರಾವ್ ಮೊದಲಾದವರ ಕೆಲ ಲೇಖನಗಳು ಸಾಂತರರನ್ನು ಕುರಿತು ಅಧ್ಯಯನ ನಡೆಸಲು ಪೂರಕ ಸಾಮಗ್ರಿಗಳಾಗಿವೆ.

ನಂತರ ಜಗನ್ನಾಥ ಶಾಸ್ತ್ರಿಗಳ ಕೆಲವೊಂದು ಲೇಖನಗಳು ಪ್ರಕಟಗೊಂಡಿವೆ. ಎಂ.ಎ. ಢಾಕಿ ಅವರು ಸಾಂತರರ ಕಾಲದ ಕಲೆ ಹಾಗೂ ವಾಸ್ತುಶಿಲ್ಪಗಳ ಕುರಿತು ಲೇಖನಗಳನ್ನು ಪ್ರಕಟಿಸಿದ್ದಾರೆ. ಸೌತ್ ಇಂಡಿಯನ್ ಇನ್ಸ್ಕ್ರಿಪಶನ್ ಸಂಪುಟಗಳಲ್ಲೂ ಸಾಂತರರ ಕೆಲವೊಂದು ಶಾಸನಗಳು ಪ್ರಕಟವಾಗಿವೆ.

ಇತ್ತೀಚಿನ ವರ್ಷಗಳಲ್ಲಿ ಡಾ. ಹಂ.ಪ.ನಾಗರಾಜಯ್ಯ ಅವರು ಬರೆದಿರುವ ಸಾಂತರರು ಒಂದು ಅಧ್ಯಯನ, ಹೊಂಬುಜ ಶಾಸನಗಳು ಹಾಗೂ ಸಚಿತ್ರ ಹೊಂಬುಜ, ಈ ಪುಸ್ತಕಗಳು ಸಾಂತರರ ಇತಿಹಾಸದ ಮೇಲೆ ಬೆಳಕು ಬೀರುವಂತಹ ಪ್ರಮುಖ ಪುಸ್ತಕಗಳಾಗಿವೆ.

ಸಾಂತರರ ಅಧ್ಯಯನದ ಆಕರಗಳು

ಈ ಸಾಂತರರ ಹಾಗೂ ಅವರ ಕಾಲ ಮತ್ತು ಪ್ರದೇಶದ ಇತಿಹಾಸ ತಿಳಿಯಲು ನಮಗಿರುವ ಮೂಲ ಆಕರಗಳಲ್ಲಿ ಪ್ರಾಕ್ತನ ಶಾಸ್ತ್ರಾಧಾರಗಳು ಪ್ರಮುಖವಾಗಿವೆ. ಸಾಂತರರು ತಮ್ಮ ಆಳ್ವಿಕೆಯ ಕಾಲದಲ್ಲಿ ಅನೇಕ ಶಿಲಾ ಹಾಗೂ ತಾವ್ರ ಶಾಸನಗಳನ್ನು ಹೊರಡಿಸಿದ್ದು ಈ ಶಾಸನಗಳು ಹೆಚ್ಚಾಗಿ ಕನ್ನಡ ಲಿಪಿಯಲ್ಲಿದ್ದು ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿವೆ. ಇದರೊಂದಿಗೆ ಅವರ ಕಾಲದಲ್ಲಿ ಕಟ್ಟಲ್ಪಟ್ಟಿರುವ ಅನೇಕ ಜೈನ ಹಾಗೂ ಜೈನೇತರ ವಾಸ್ತುಶಿಲ್ಪವು ನಮಗೆ ಅವರ ಇತಿಹಾಸವನ್ನು ತಿಳಿಯಲು ಸಹಾಯಕವಾಗಿದೆ.

ಇವರ ಕಾಲದ ಸಾಹಿತ್ಯಾಧಾರಗಳು ನಮಗೆ ಇಲ್ಲಿಯವರೆಗೂ ಕಂಡು ಬಂದಿಲ್ಲವಾದರೂ ೧೭ನೇ ಶತಮಾನದ ಒಬ್ಬ ಕವಿಯಾದ ಪದ್ಮನಾಭ ಕವಿಯ ಜಿನದತ್ತರಾಯ ಚರಿತೆ ಎಂಬ ಸಾಂಗತ್ಯ ಕಾವ್ಯವು ಪ್ರಮುಖ ಆಕರವಾಗಿದೆ. ಈ ಕಾವ್ಯ ಗ್ರಂಥವು ಅಲ್ಲಿಯ ಸ್ಥಳ ಪುರಾಣ, ಜಿನದತ್ತರ ಪೂರ್ವ ಚರಿತೆ ಹಾಗೂ ಹೊಂಬುಜದ ಪ್ರಮುಖ ದೇವತೆಯಾದ ಪದ್ಮಾವತಿ ದೇವಿಯನ್ನು ಕುರಿತು ಸಾಕಷ್ಟು ವಿಷಯಗಳನ್ನು ತಿಳಿಸುತ್ತದೆ. ಏನಿದ್ದರೂ ಸಾಂತರರನ್ನು ಕುರಿತು ಅರಿಯಲು ಇಂದಿಗೂ ನಾವು ಶಾಸನಗಳ ಮೊರೆ ಹೋಗಬೇಕಾಗಿದೆ.

ಸಾಂತರರ ಮೂಲ

ಸಾಂತರರ ಇತಿಹಾಸದ ಆರಂಭ ಸುಮಾರು ೮ನೇ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಸಾಂತರರು ತಮ್ಮ ಪ್ರಭುತ್ವವನ್ನು ಸ್ಥಾಪಿಸಿದ ನಂತರ ಸಾಂತಳಿಗೆ ಸಾಯಿರ ಎಂಬ ಆಡಳಿತ ಘಟಕವಾಗಿ ನಿರೂಪಿಸಲ್ಪಟ್ಟ ಪ್ರದೇಶ ೧೨ನೇ ಶತಮಾನದವರೆಗೂ ಸಾಂತಳಿಗೆ ಸಾಯಿರ ಎಂದೇ ಪ್ರಚಲಿತದಲ್ಲಿತ್ತು.[2]

ಈ ಸಾಂತರರ ವಂಶದ ಕುರಿತು ಹೆಚ್ಚಿನ ಮಾಹಿತಿಯನ್ನು ನಾವು ಜೈನ ಪುರಾಣಗಳಿಂದಲೂ ಜೈನ ಮಹಾಭಾರತದಿಂದಲೂ ಅರಿಯಬಹುದಾಗಿದೆ. ಅದರಂತೆ ೨೩ನೇ ತೀರ್ಥಂಕರರಾದ ಪಾರ್ಶ್ವನಾಥರು ಉಗ್ರವಂಶದವರಾಗಿದ್ದು, ಹುಂಚದ ಸಾಂತರರು ತಮ್ಮನ್ನು ಸಹ ಇದೇ ಉಗ್ರವಂಶದವರೆಂದು ಗುರುತಿಸಿಕೊಳ್ಳುತ್ತಾರೆ. ಇದನ್ನು ದೃಢಪಡಿಸಲು ಇಂದಿಗೂ ಸಹ ಹುಂಚ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪಾರ್ಶ್ವನಾಥ ಬಸದಿಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇದು ಅವರ ವಂಶದ ಮೂಲದ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲುವಂತಹದಾಗಿದೆ. ಇಂದಿನವರೆಗೂ ಪಾರ್ಶ್ವನಾಥರ ಯಕ್ಷಿಯಾದ ಪದ್ಮಾವತಿ ದೇವಿಯು ಈ ಹುಂಚದ ಪ್ರಮುಖ ದೇವತೆಯಾಗಿ ಪೂಜಿಸಲ್ಪಡುತ್ತಿದ್ದಾಳೆ.

ಈ ಸಾಂತರರು ತಮ್ಮ ಮೂಲ ಸ್ಥಾನವನ್ನು ಹಾಗೂ ತಮ್ಮ ವಂಶದ ಮೂಲ ಪುರುಷನನ್ನು ಉತ್ತರ ಮಧುರದಿಂದ ಬಂದವರೆಂದು ಕರೆದುಕೊಂಡಿದ್ದಾರೆ. ಉದಾ: ೧೦೭೭ರ ಹುಂಚದ ಶಾಸನದಲ್ಲಿ ಕೆಲವೊಂದು ಪ್ರಾರಂಭಿಕ ಸಾಲುಗಳು ಈ ರೀತಿಯಲ್ಲಿವೆ: ‘ಸಮಧಿಗತ ಪಂಚಮಹಾಸಬ್ದ ಮಹಾಮಂಡಳೇಶ್ವರನುತ್ತರ ಮಧುರಾದೀಶ್ವರಂ ಪಟ್ಟಿ ಪೊಂಬುಚ್ಚ ಪುರವರೇಶ್ವರಂ, ಮಹೋಗ್ರ ವಂಸಲಲಾಮಂ ಪದ್ಮಾವತೀ ಲಬ್ದವರ ಪ್ರಸಾದಾಸಾದಿತ.[3]

ಈ ಉತ್ತರ ಮಥುರಾದೀಶ್ವರರಾದ ಹಾಗೂ ಮಹೋಗ್ರವಂಶದಲ್ಲಿ ಜನಿಸಿದ ರಾಹ ಅಥವಾ ರಾಳನೆಂಬವನು ಇವರ ಮೂಲ ಪುರುಷನೆಂದು ಅವರ ಶಾಸನಗಳು ಗುರುತಿಸುತ್ತವೆ. ಅಂತೆಯೇ ಅವರ ಶಾಸನಗಳಲ್ಲಿ ಈ ರಾಹನು ಕುರುಕ್ಷೇತ್ರ ಯುದ್ಧದಲ್ಲಿ ಹೋರಾಡಿದಾಗ ಅವನ ಶೌರ್ಯವನ್ನು ಮೆಚ್ಚಿ ನಾರಾಯಣನು ಅವನಿಗೆ ಏಕಶಂಖವನ್ನು ವಾನರ ಧ್ವಜವನ್ನು ಕೊಟ್ಟನೆಂದು ಶಾಸನಗಳು ಉಲ್ಲೇಖಿಸುತ್ತವೆ.[4] ನಂತರ ಅವರ ಶಾಸನದಲ್ಲಿ ಕಂಡುಬರುವ ಪ್ರಮುಖ ರಾಜ ಜಿನದತ್ತ. ಈ ಜಿನದತ್ತನೇ ಉತ್ತರದಿಂದ ದಕ್ಷಿಣಕ್ಕೆ ಬಂದು ಇಲ್ಲಿದ್ದ ಕೆಲವು ರಾಕ್ಷಸರನ್ನು ಸಂಹಾರ ಮಾಡಿದುದರಿಂದ ಅದನ್ನು ಮೆಚ್ಚಿ ಲೊಕ್ಕಿಯಬ್ಬೆ ಅಥವ ಪದ್ಮಾವತೀ ದೇವಿಯೂ ಅವನಿಗೆ ಸಿಂಹ ಲಾಂಛನವನ್ನು ಕೊಟ್ಟಳೆಂದು ಶಾಸನಗಳು ಉಲ್ಲೇಖಿಸುತ್ತವೆ.

ಧ್ವಜ ಹಾಗೂ ಲಾಂಛನ : ಸಾಂತರರ ಧ್ವಜ ಹಾಗೂ ಲಾಂಛನವನ್ನು ಒಳಗೊಂಡ ಯಾವುದೇ ನಾಣ್ಯ, ವಾಸ್ತುಶಿಲ್ಪ, ಇಲ್ಲಿಯವರೆಗೂ ಕಂಡುಬಂದಿಲ್ಲ. ಅಂದರೆ ಅವರ ಧ್ವಜ ಹಾಗೂ ಲಾಂಛನಗಳನ್ನು ತಿಳಿಯಲು ನಮಗೆ ಶಾಸನಾಧಾರಗಳೇ ಮುಖ್ಯವಾಗಿವೆ. ಆ ಶಾಸನಗಳ ಆಧಾರದ ಮೇಲೆ ಅವರ ಧ್ವಜವು ವಾನರ ಧ್ವಜವಾಗಿತ್ತು ಹಾಗೂ ಮೃಗಲಾಂಛನವನ್ನು ಹೊಂದಿದ್ದರೆಂದು ತಿಳಿದು ಬರುತ್ತದೆ.

ಸಾಂತರರ ನೆಲೆ ವೀಡುಗಳು

ಶಾಸನಗಳ ಆಧಾರದ ಮೇಲೆ ನಮಗೆ ತಿಳಿದು ಬರುವ ಪ್ರಮುಖ ಅಂಶವೇನೆಂದರೆ ಪಟ್ಟಿಪೊಂಬುರ್ಚವು ಅವರ ಮೊದಲ ರಾಜಧಾನಿಯಾಗಿದ್ದು ಅದು ಅವರ ಮೂಲ ಪುರುಷನಾದ ಜಿನದತ್ತನಿಗೆ ಲೊಕ್ಕಿಯೊಬ್ಬೆ ಕರುಣಿಸಿದ ಸ್ಥಳವಾಗಿತ್ತು. ಅವರ ರಾಜಧಾನಿಯಾದ ಪೊಂಬುಜವನ್ನ ಶಾಸನಗಳು ಹೊಂಬುಜ, ಪೊಂಬುಚ, ಪಟ್ಟಿಪೊಂಬುರ್ಚ್ಚ ಇತ್ಯಾದಿಯಾಗಿ ಕರೆದಿವೆ.

ನಂತರ ಅವರ ನೆಲೆವೀಡು ಸೇತು ಎಂಬಲ್ಲಿಗೆ ಸ್ಥಳಾಂತರಗೊಂಡು, ಆನಂತರ ಅವಧಿಯಲ್ಲಿ ಅವರು ಮಲೆನಾಡನ್ನು ಬಿಟ್ಟು ಸುಮಾರು ೧೨ನೇ ಶತಮಾನದ ಹೊತ್ತಿಗೆ ಕಳಸ ಹಾಗೂ ಕಾರ್ಕಳಕ್ಕೆ ಹೋದ ವಿವರಗಳು ಅವರ ಶಾಸನಗಳಿಂದ ತಿಳಿಯುತ್ತದೆ.

ವಂಶಾವಳಿ

ಸಾಂತರರ ವಂಶಾವಳಿಯನ್ನು ಅರಿಯಲು ನಮಗಿರುವ ಒಂದೇ ಒಂದು ಪ್ರಮುಖ ಆಕರವೆಂದರೆ ಅವರ ಕಾಲದ ಶಾಸನಗಳು. ಅದರಂತೆ ಸುಮಾರು ಕ್ರಿ.ಶ. ೭ನೇ ಶತಮಾನದಲ್ಲಿ ಪೊಂಬುರ್ಚವನ್ನು ಚಿತ್ರವಾಹನ ಎಂಬ ಅರಸನು ಆಳುತ್ತಿದ್ದನೆಂದು ತಿಳಿದು ಬರುತ್ತದೆ. ಅವನ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶವು ಆಳುಪರ ವಶದಲ್ಲಿದ್ದಿರಬೇಕು.[5]ಸುಮಾರು ೮ನೇ ಶತಮಾನದ ಹೊತ್ತಿಗೆ ಪೊಂಬುಚ್ಚವು ಒಂದು ಪಟ್ಟಣ ಪ್ರದೇಶವಾಗಿ ರೂಪಗೊಂಡಿದ್ದು, ಸುಮಾರು ೯ನೇ ಶತಮಾನಕ್ಕೆ ಕಾಲಿಡುವ ಹೊತ್ತಿಗೆ ನಮಗೆ ಸಾಂತರ ಅರಸರ ವಂಶಾವಳಿಯನ್ನು ತಿಳಿಸುವ ಅನೇಕ ಶಾಸನಗಳು ಕಂಡುಬರುತ್ತವೆ. ಹಾಗೆಯೇ ಶಾಸನಗಳಲ್ಲಿ ಅವರು ಈಗಾಗಲೇ ಮೇಲೆ ತಿಳಿಸಿರುವಂತೆ ಪೊಂಬುರ್ಚ ಪುರವರಾಧೀಶ್ವರ ಎಂದು ಕರೆದುಕೊಂಡಿದ್ದಾರೆ.[6]

ಆದರೆ ಸಾಂತರರು ಅವರ ಆರಂಭಿಕ ವಂಶಾವಳಿಯನ್ನು ರೂಪಿಸುವಾಗ ಐತಿಹಾಸಿಕ ಅಂಶಗಳೊಂದಿಗೆ ಬಹಳಷ್ಟು ಪುರಾಣ ದಂತಕಥೆಗಳು ತಳಕು ಹಾಕಿಕೊಂಡಿರುವುದು ಕಂಡುಬರುತ್ತದೆ. ಈ ಶಾಸನಗಳ ಆಧಾರದ ಮೇಲೆ ಜಿನದತ್ತನು ಸಾಂತರರ ವಂಶದ ಸ್ಥಾಪಕನೆಂದು ತಿಳಿದುಬರುತ್ತದೆ. ಹಾಗೆಯೇ ಜಿನದತ್ತನ ಪೂರ್ವಜರ ಬಗ್ಗೆ ತಿಳಿಸುತ್ತ ಶಾಸನಗಳು ರಾಹ, ಸಹಕಾರ ಇವರನ್ನು ಹೆಸರಿಸುತ್ತವೆ. ಸಹಕಾರ ಹಾಗೂ ಅವನ ಪತ್ನಿಯಾದ ಕೇಯಾಲ ದೇವಿಯ ಸುತನೇ ಜಿನದತ್ತನೆಂದು ಹಾಗೆಯೇ ಈ ಜಿನದತ್ತನೇ ದಕ್ಷಿಣಾಭಿಮುಖವಾಗಿ ಬಂದವನೆಂದು ಶಾಸನಗಳಿಂದ ತಿಳಿಯಬಹುದಾಗಿದೆ.

ಜಿನದತ್ತನು ದಕ್ಷಿಣಾಭಿಮುಖವಾಗಿ ಬರಲು ಕಾರಣವೂ ಕುತೂಹಲಕಾರಿಯಾಗಿದೆ. ಅವನ ತಂದೆಯಾದ ಸಹಕಾರನು ಮನುಷ್ಯ ಮಾಂಸ ಭಕ್ತಿಸುವ ಕಾರ್ಯದಲ್ಲಿ ತೊಡಗಿದುದರಿಂದ ಅವರ ನಡತೆಗೆ ಬೇಸತ್ತು ಜಿನದತ್ತನು ತನ್ನ ರಾಜ್ಯವನ್ನು ತ್ಯಜಿಸಿ ದಕ್ಷಿಣಾಭಿಮುಖವಾಗಿ ಬರುವಾಗ ಸಿಂಹರಥನೆಂಬ ರಾಕ್ಷಸನನ್ನು ಕೊಂದುದರಿಂದ ಅದನ್ನು ಮೆಚ್ಚಿದ ಲೊಕ್ಕಿಯಬ್ಬೆ ಅವನಿಗೆ ಸಿಂಹಲಾಂಛನವನ್ನು ನೀಡಿದಳು ಎಂದು ಶಾಸನಗಳು ತಿಳಿಸುತ್ತವೆ. ನಂತರ ಅವನು ಅಂದಾಸುರನೆಂಬ ರಾಕ್ಷಸನನನ್ನು ಸೋಲಿಸಿ ಕುಂದದ ಕೋಟೆಯಲ್ಲಿದ್ದ ಕರ ಹಾಗೂ ಕರದೂಷಣವನ್ನು ವಿಮುಕ್ತಿಗೊಳಿಸಿದಾಗ ಅದನ್ನು ಮೆಚ್ಚಿದ ಪದ್ಮಾವತೀ ದೇವಿಯು ಈ ಭಾಗವನ್ನು ರಾಜಧಾನಿಯನ್ನಾಗಿ ಮಾಡುವಂತೆ ಹರಸಿ ತಾನು ಅಲ್ಲಿರುವ ಲೊಕ್ಕಿ ಮರಕದಲ್ಲಿ ನೆಲೆ ನಿಂತಳೆಂದು ಹಾಗೆಯೇ ಲೊಕ್ಕಿಯಬ್ಬೆ ಎಂಬ ಎರಡನೇ ಹೆಸರನ್ನು ಪಡೆದಳೆಂದು ಶಾಸನಗಳು ತಿಳಿಸುತ್ತವೆ.[7]

ಹೀಗೆ ಈ ಅಧ್ಯಯನದಿಂದ ಪೊಂಬುರ್ಚ ಪ್ರದೇಶವು ಅತ್ಯಂತ ದುರ್ಗಮವಾಗಿದ್ದು, ಈ ಪ್ರದೇಶದಲ್ಲಿ ಮೊಟ್ಟ ಮೊದಲನೇ ಬಾರಿಗೆ ರಾಜಕೀಯ ವ್ಯವಸ್ಥೆಯ ನಿರ್ಮಾಣ ಆದಂತಹ ಐತಿಹಾಸಿಕ ಘಟನೆಯನ್ನು ಊಹಿಸಬಹುದು. ಆದರೆ ಇಲ್ಲಿಯವರೆಗೂ ಜಿನದತ್ತನ ಐತಿಹಾಸಿಕ ಘಟನೆಯನ್ನು ಊಹಿಸಬಹುದು. ಆದರೆ ಇಲ್ಲಿಯವರೆಗು ಜಿನದತ್ತನ ಐತಿಹಾಸಿಕತೆಯನ್ನು ರುಜುವಾತು ಪಡಿಸಲಾಗಿಲ್ಲ.

ದಾನಶಾಲೆ ಶಾಸನಗಳಲ್ಲಿ ತಿಳಿಸಿರುವಂತೆ ಜಿನದತ್ತನು ಪೊಂಬುಚ್ಚದಲ್ಲಿ ರಾಜ್ಯವನ್ನು ಸ್ಥಾಪಿಸಿದ ನಂತರ ಸಾನ್ತರನೆಂದು ಎರಡನೇ ಹೆಸರನ್ನು ಪಡೆದುದರಿಂದ ಅವನ ವಂಶಕ್ಕೆ ಸಾಂತರ ವಂಶವೆಂದು ಅಥವಾ ಸಾಂತರನ್ವಯ ಎಂದು ಹೆಸರಾಯಿತು.[8]

ಜಿನದತ್ತನ ನಂತರ ಹಲವು ಅರಸರು ಆಳಿದ ನಂತರ ಆಳ್ವಿಕೆಗೆ ಬಂದವರು ಶ್ರೀಕೇಸಿ ಹಾಗೂ ಜಯಕೇಶಿ. ನಂತರ ರಣಕೇಸಿಯ ಆಳ್ವಿಕೆಯ ನಂತರ ಹಲವರು ಆಳಿದ ಮೇಲೆ ಆಳ್ವಿಕೆಗೆ ಬಂದವನು ಜಗೇಸಿ. ಇವನು ರಾಷ್ಟ್ರಕೂಟ ಅಮೋಘ ವರ್ಷನ ಕಾಲದವನು.[9]ಇವನ ನಂತರ ಆಳ್ವಿಕೆಗೆ ಬಂದವನು ಸಾಂತರರ ಒಬ್ಬ ಪ್ರಮುಖ ರಾಜನಾದ ತೊಲಾಪುರುಷ ವಿಕ್ರಮ ಸಾನ್ತರ. ಇವನ ಕಾಲ ಸುಮಾರು ಕ್ರಿ.ಶ. ೮೯೫-೯೩೫, ಇವನ ಪತ್ನಿ ಲಕ್ಷ್ಮೀದೇವಿ, ಅವಲು ಬನವಾಸಿಯ ಕಾಮದೇವನ ಮಗಳು. ಇವರ ಮಗ ಚಾಗಿ ಸಾನ್ತರ.

ಚಾಗಿಸಾನ್ತರ ಹಾಗೂ ಏಂಜಲದೇವಿಯ ಮಗನು ಒಂದನೆಯ ವೀರಶಾಂತರ, ಇವನ ಪತ್ನಿ ಜಾಕಲದೇವಿ, ಇವಳು ಅದೆಯೂರ ಶಾಂತಿವರ್ಮನ ಮಗಳು. ಇವರ ಮಕ್ಕಳು ಕನ್ನಡ ಶಾನ್ತರ ಹಾಗೂ ಕಾಮದೇವ. ಕಾಮದೇವ ಹಾಗೂ ಚಂದಲದೇವಿಯ ಮಗನೇ ತ್ಯಾಗಿಶಾನ್ತರ. ತ್ಯಾಗಿಶಾನ್ತರನ ಪತ್ನಿ ನಾಗಲಾದೇವಿ. ಇವಳು ಕದಂಬ ಹರಿವರ್ಮನ ಮಗಳು. ನಂತರ ಆಳ್ವಿಕೆ ನಡೆಸಿದವನು ಒಂದನೇಯ ನನ್ನಿಶಾನ್ತರ. ಇವನ ಕಾಲ ಸುಮಾರು ೯ನೇ ಶತಮಾನ. ಇವನ ಹೆಂಡತಿ ಸಿರಿಯಾದೇವಿ, ಪಲಸಿಗೆ ನಾಡಿನ ಅರಿಕೇಸರಿಯ ಮಗಳು. ಇವರ ಪುತ್ರ ರಾಯಶಾನ್ತರ. ಇವನ ಪತ್ನಿ ಅಕ್ಕಾದೇವಿ. ಇವರ ಮಗ ಚಿಕ್ಕವೀರ ಶಾನ್ತರ ಹಾಗೂ ಇವನ ಪತ್ನಿ ಬಿಜ್ಜಲದೇವಿ. ಇವರ ಪುತ್ರ ಅಮ್ಮಣ್ಣದೇವ ಹಾಗೂ ಇವನ ಪತ್ನಿ ಹೋಚಲದೇವಿ. ಇವರ ಮಕ್ಕಳು ಬೀರಬ್ಬರಸಿ ಮತ್ತು ತೈಲಪದೇವ. ತೈಲಪನಿಗೆ ಇಬ್ಬರು ಪತ್ನಿಯರು. ಕೇಳೆಯಬ್ಬರಸಿ ಹಾಗೂ ಮಾಂಕಬ್ಬರಸಿ. ಇವರ ಮಗ ಬೀರದೇವ ಹಾಗೂ ಇವನ ಪತ್ನಿ ಬೀರಲ ಮಹಾದೇವಿ. ಈ ಬೀರದೇವನ ಇನ್ನೊಂದು ಹೆಸರು ತ್ರೈಳೋಕ್ಯಮಲ್ಲ ವೀರ ಶಾನ್ತರ ಅಥವಾ ರಾಯಶಾನ್ತರ. ಈ ವೀರ ಶಾನ್ತರನ ಕಾಲದಿಂದ ಇವರು ರಾಷ್ಟ್ರಕೂಟರ ಆಧೀನದಿಂದ ಹೊರಬಂದು, ಚಾಳುಕ್ಯ ಸಾಮ್ರಾಜ್ಯದ ಸಾಮ್ರಾಟನಾದ ತೈಲಪದೇವನ ಮಾಂಡಲಿಕರಾದರೆಂದು ತಿಳಿದು ಬರುತ್ತದೆ.

ರಾಜ್ಯದ ಗಡಿಗಳು

ಅವರ ಶಾಸನಗಳ ಆಧಾರದ ಮೇಲೆ ನಾವು ಸಾಂತರ ರಾಜ್ಯದ ಮೇರೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಅಂದರೆ ಸಾಂತಳಿಗೆ ಅಥವಾ ಸಾಂತರ ನಾಡು ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಕುಂದಾದ್ರಿಯವರೆಗೂ, ತೆಂಕಣಕ್ಕೆ ಮೂಡಿಗೆರೆ ತಾಲ್ಲೂಕು ಕಳಸದವರೆಗೂ, ಪಡುವಣದತ್ತ ಸಾಗರ ತಾಲ್ಲೂಕು ಗೋವರ್ಧನಗಿರಿಯವರೆಗೂ ಹಬ್ಬಿತ್ತು.[10]

ಸಾಂತರರ ಕೆಲವು ಪ್ರಮುಖ ಅರಸರು

ಮೊದಲನೆಯ ವಿಕ್ರಮ ಸಾಂತರ : ಕ್ರಿ.ಶ. ೮೯೫-೯೩೫ ಸಾಂತರರ ಸರಿಯಾದ ಅಥವಾ ಕ್ರಮಬದ್ಧವಾದ ವಂಶಾವಳಿಯು ಪ್ರಾರಂಭವಾಗುವುದೇ ಮೊದಲನೆಯ ವಿಕ್ರಮ ಸಾಂತರನಿಂದ. ಇವನ ಕಾಲದಲ್ಲಿ ಹೊರಡಿಸಿರುವ ಅನೇಕ ಶಾಸನಗಳು ಅವನು ಹಿರಣ್ಯಗರ್ಭ ಮಹಾದಾನಗಳನ್ನು ಮಾಡಿದವನೆಂದು, ಅನೇಕ ಶತ್ರು ಅರಸರನ್ನು ಕೊಂದು ಸಾಂತಳಿಗೆ ಸಾಯಿರದ ಮೇರೆಗಳನ್ನು ಬಲಪಡಿಸಿ ಅದನ್ನು ಏಕಛತ್ರವನ್ನಾಗಿ ಮಾಡಿದನೆಂದು ತಿಳಿಸುತ್ತದೆ.[11]ಹಾಗೆಯೇ ಶಾಸನಗಳು ಕಂದುಕಾಚಾರ್ಯ, ದಾನ ವಿನೋದ, ಛಲದಂಕರಾಮ ಮುಂತಾದ ಬಿರುದುಗಳಿಂದ ಅವನನ್ನು ಗುರುತಿಸುತ್ತವೆ. ಶಾಸನದಲ್ಲಿ ಇರುವಂತೆ ಅವನ ಕಾಲದಲ್ಲಿ ಸಾಂತರರ ರಾಜ್ಯದ ಮೇರೆ ಈ ರೀತಿಯಾಗಿತ್ತು. ತೆಂಕಣದಲ್ಲಿ ಸೂಲದ ಹೊಳೆ, ಪಡುವಣದತ್ತ ತವನಸಿ (ತವನಂದಿ) ಮತ್ತು ಬಡಗಣಕ್ಕೆ ಬಂದಗೆ (ಬಂದಗದ್ದೆ) ಹಾಗೂ ಶಾಸನಗಳು ಪೂರ್ವದ ಮೇರೆಯನ್ನು ತಿಳಿಸಿಲ್ಲ.[12]

ಅವನ ಪತ್ನಿಯಾದ ಲಕ್ಷ್ಮಿದೇವಿಯು ಬನವಾಸಿಯ ಅರಸನಾದ ಕಾಮದೇವನ ಮಗಳು. ಶಿಕಾರಿಪುರದ ಹಾಗೂ ಹುಂಚದ ಶಾಸನಗಳಿಂದ ಈ ವಿಕ್ರಮ ಸಾಂತರನು ಉಗ್ರವಂಶದ ಶ್ರೇಷ್ಠನೂ, ತೊಲಾಪುರುಷ ವಿಕ್ರಮ ಸಾಂತರನು ಆದ ಇವನು ಕ್ರಿ.ಶ. ೮೯೮ ರಲ್ಲಿ ಒಂದುಕಲ್ಲು ಬಸದಿಯನ್ನು ಮಾಡಿಸಿದನೆಂದು ತಿಳಿದು ಬರುತ್ತದೆ.[13] ಹಾಗೆಯೇ ಮುಂದುವರೆದು ಅವನು ಆ ಬಸದಿಗಾಗಿ ಬಿಟ್ಟ ದಾನದ ವಿವರಗಳನ್ನು ಶಾಸನವು ತಿಳಿಸುತ್ತದೆ. ಈ ವಿಕ್ರಮ ಸಾನ್ತರನು ತನ್ನ ತೂಕದ ಚಿನ್ನವನ್ನು ತೂಗಿ ದಾನ ಮಾಡಿದುದರಿಂದ ಆತನಿಗೆ ತೊಲಾಪುರುಷ ವಿಕ್ರಮ ಶಾನ್ತರ ಎಂದು ಹೆಸರು ಬಂದಿತು. ಹಾಗೆಯೇ ಶಾಸನದಲ್ಲಿ ಅವನಿಗೆ ಪರ ಚಕ್ರಗಣ್ಯಂ, ಕಾರ್ಮುಕರಾಮ ಎಂಬಿತರ ಬಿರುದುಗಳು ಕಂಡು ಬರುತ್ತವೆ.

ಶಿಕಾರಿಪುರದ ೨೮೪ನೇ ಶಾಸನದ ಪ್ರಕಾರ ಈ ವಿಕ್ರಮ ಸಾಂತನು ರಾಷ್ಟ್ರಕೂಟ ಇಮ್ಮಡಿ ಕೃಷ್ಣವಲ್ಲಭನ (ಕ್ರಿ.ಶ. ೮೭೮-೯೧೪) ಸಾಮಂತನಾಗಿದ್ದನೆಂದು ತಿಳಿದು ಬರುತ್ತದೆ. ಕ್ರಿ.ಶ. ೯ನೇ ಶತನಾಮದ ಕೊನೆಯ ಹೊತ್ತಿಗೆ ಈತನು ಸಾಂತರ ನಾಡಿಗೆ ಸ್ಪಷ್ಟ ಮೇರೆಗಳನ್ನು ಕೊಟ್ಟನಲ್ಲದೆ, ಬನವಾಸಿಯ ರಾಜನೊಡನೆ ವೈವಾಹಿಕ ಸಂಬಂಧಗಳ ಮೂಲಕ ಸಖ್ಯ ಬೆಳೆಸಿಕೊಂಡಿದ್ದನು. ಒಟ್ಟಿನಲ್ಲಿ ಸಾಂತಳಿಗೆ ಸಾಯಿರವನ್ನು ಏಕಛತ್ರದಿಂದ ಸಾಂತರ ನಾಡನ್ನಾಗಿ ಮಾಡಿ ಆಳ್ವಿಕೆ ಮಾಡಿದವರಲ್ಲಿ ವಿಕ್ರಮ ಸಾಂತರನು ಮೊದಲನೆಯವನಾಗಿದ್ದಾನೆ.

ಕ್ರಿ.ಶ. ಸುಮಾರು ೮೫೭ರ ಕಾಲದ ಹೊನ್ನಾಳಿ ಶಾಸನದಲ್ಲಿ ಛಲದಂಕ ರಾಮ ಶಾನ್ತರನ ವಿಚಾರ ತಿಳಿದು ಬಂದಿದ್ದು ಆ ಶಾಸನದಲ್ಲಿ ಅವನು ಸಾಂತಳಿಗೆ ಸಾಯಿರದ ಜೊತೆಗೆ ಬನವಾಸಿ ನಾಡನ್ನು ಆಳ್ವಿಕೆ ಮಾಡುತ್ತಿದ್ದಂತೆ ಕಂಡುಬರುತ್ತದೆ.[14]ಆಗ ಅಲ್ಲಿ ನಡೆದ ಒಂದು ಕಾಳಗದಲ್ಲಿ ರಟ್ಟಪಳ್ಳಿಯ ಪೊಲಗನು ಧೈರ್ಯದಿಂದ ಹೋರಾಟಿ ಮಡಿದನೆಂದು ತಿಳಿದುಬರುತ್ತದೆ. ಆದರೆ ಈ ಹೋರಾಟದ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರೆಯುವುದಿಲ್ಲ.

ಮೊದಲನೆಯ ವಿಕ್ರಮ ಸಾಂತರನ ನಂತರ ಮತ್ತೊಮ್ಮೆ ಸಾಂತರರ ಆಳ್ವಿಕೆಯ ಬಗ್ಗೆ ಬೆಳಕು ಚೆಲ್ಲುವಂತಹ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಅವರ ನಂತರದ ಶಾಸನಗಳಲ್ಲಿ ಚಾಗಿ ಸಾಂತರ, ವೀರ ಶಾನ್ತರ, ಕನ್ನರ, ಕಾಮದೇವ, ತ್ಯಾಗಿಶಾನ್ತರ, ನನ್ನಿಶಾನ್ತರ ರಾಯಶಾನ್ತರ, ಚಕ್ರವೀರಶಾನ್ತರ ಎಂಬ ಹೆಸರುಗಳು ಕಂಡು ಬಂದಿದ್ದರೂ ಅವರ ಆಳ್ವಿಕೆಯ ಅಥವಾ ಇತರೇ ವಿವರಗಳು ನಮಗೆ ಏನೂ ದೊರೆಯುವುದಿಲ್ಲ.

ಎರಡನೆಯ ವಿಕ್ರಮಶಾನ್ತರ : ಇವನ ಆಳ್ವಿಕೆಯ ಕಾಲದಲ್ಲಿ ಸಾಂತರರು ತಮ್ಮ ವಿಧೇಯತೆಯನ್ನು ರಾಷ್ಟ್ರಕೂಟರಿಂದ ಚಾಳುಕ್ಯರ ಕಡೆಗೆ ವಾಲಿಸಿದ್ದುದು ಕಂಡುಬರುತ್ತದೆ. ಆದರೆ ಈ ಎರಡನೆಯ ವಿಕ್ರಮ ಸಾಂತರನ ಆಳ್ವಿಕೆಯ ಕಾಲ ಬಹಳ ಕಡಿಮೆ ಅವಧಿಯದಾಗಿದೆ.

ನನ್ನಿಶಾನ್ತರ : ಇವನ ಇನ್ನೊಂದು ಹೆಸರು ಅಣ್ಣಲದೇವ. ಇವನು ಚಾಳುಕ್ಯ ಜಗದೇಕಮಲ್ಲ ಜಯಸಿಂಹ ದೇವನ ಕಾಲಕ್ಕೆ ಸೇರಿದವನಾಗಿದ್ದು ಅವನ ಮಾಂಡಲೀಕನಾಗಿದ್ದನು. ಇವನನ್ನು ಕುರಿತು ಖಚಿತ ಮಾಹಿತಿ ನಮಗೆ ಶಿಕಾರಿಪುರದ ಶಾಸನದಿಂದ ತಿಳಿದು ಬರುತ್ತದೆ.[15]ಈ ಶಾಸನದಲ್ಲಿ ಅಣ್ಣಲ ದೇವನನ್ನು ಪಟ್ಟಿ ಪೊಂಬುಚ್ಚ ಪುರವರೇಶ್ವರಂ, ವಿಪುಲ ತುಲಾ ಪುರುಷ ಹಿರಣ್ಯ ಗರ್ಭತ್ರಯೊದ್ಯಾಧಿಕದಾನ ಮಾಡಿದವನೆಂದು, ಮೃಗಲಾಂಛನವನ್ನು ಹೊಂದಿದವನೆಂದೂ ಉಲ್ಲೇಖಿಸಲಾಗಿದೆ. ಹಾಗೆಯೇ ಅವನು ತ್ಯಾಗರ್ತಿಯ ಹಿರಿಯ ಬ್ರಾಹ್ಮಣ ಮಾಧವಯ್ಯನ ದೇಗುಲದ ನಾರಾಯಣದೇವರ ದೇವಭೋಗಕ್ಕೆ ಧಾರಾಪೂರ್ವಕವಾಗಿ ಬಿಟ್ಟ ದಾನದ ವಿವರಗಳು ಸಹ ಕಂಡು ಬರುತ್ತವೆ.

ಆದರೆ ಗಮನಿಸಬೇಕಾದ ಒಂದು ಅಂಶವೇನೆಂದರೆ ಈ ನನ್ನಿ ಶಾನ್ತರ ಹಾಗೂ ಅವನಿಗಿಂತ ಮೊದಲೇ ಆಳ್ವಿಕೆ ನಡೆಸಿದ ಎರಡನೆಯ ವಿಕ್ರಮ ಶಾನ್ತರ ಇಬ್ಬರೂ ಚಾಳುಕ್ಯ ಕಾಲದವರಾಗಿದ್ದು ಅವರಿಬ್ಬರೂ ಯಾವುದೇ ಚಾಳುಕ್ಯ ಬಿರುದುಗಳನ್ನು ಪಡೆದಿಲ್ಲದಿರುವುದು ಕುತೂಹಲಕಾರಿಯಾಗಿದೆ.[16]ಈ ನನ್ನಿ ಶಾನ್ತರನ ಪತ್ನಿ ಹೊಚಲದೇವಿ. ಅವರಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು, ಅವರ ಮಗ ತೈಲಪದೇವ. ಈ ತೈಲಪದೇವನು ಅಳುಪ ಹಾಗೂ ಗಂಗರ ವಂಶದೊಡನೆ ವೈವಾಹಿಕ ನೆಂಟಸ್ತಿಕೆ ಬೆಳೆಸಿದನು.

ಈ ತೈಲಪದೇವ ಹಾಗೂ ಕೆಳೆಯಬ್ಬರಸಿಗೆ ಜನಿಸಿದ ಮಗನೇ ಸಾಂತರರ ಅತ್ಯಂತ ಪ್ರಮುಖ ರಾಜನಾದ ಬೀರದೇವ.

ಬೀರದೇವ : ತ್ರೈಳೋಕ್ಯಮಲ್ಲವೀರಶಾನ್ತರ ಬೀರದೇವ : (ಸು.೧೦೫೦/೧೦೭೭) ಇವನನ್ನು ಶಾಸನದಲ್ಲಿ ಬೀರುಗ, ಬೀರದೇವ, ಬೀರಶಾನ್ತರ ಎಂಬ ವಿವಿಧ ಹೆಸರಿನಿಂದ ಕರೆಯಲಾಗಿದೆ. ಈತನ ಪತ್ನಿ ಬೀರಲದೇವಿ, ಬೀರದೇವನು ಚಾಳುಕ್ಯ ಚಕ್ರವರ್ತಿ ತ್ರೈಳೋಕ್ಯ ಮಲ್ಲದೇವನ ಮಹಾಮಂಡಳೇಶ್ವರನು. (೧೦೪೨-೧೦೬೮). ಈ ವೀರ ಶಾನ್ತರನನ್ನು ಶಾಸನಗಳು ಉತ್ತರ ಮಧುರಾಧೀಶ್ವರ, ಪಟ್ಟಿ ಪೊಂಬುರ್ಚ ಪುರವರೇಶ್ವರ, ಮಹೋಗ್ರ ವಂಡಲರಾಮ, ಪದ್ಮಾವತೀವರಲಬ್ದ ಪ್ರಸಾದಿತ, ವಿಪುಳ ತುಲಾಪುರುಷ, ಮಹಾದಾನ, ಹಿರಣ್ಯ ಗರ್ಭತ್ರಯಾಧಿಕ ದಾನಂ……… ಇತ್ಯಾದಿಯಾಗಿ ವರ್ಣಿಸಿವೆ.[17]

ಹಾಗೆಯೇ ಈ ಶಾಸನದಲ್ಲಿ ತನ್ನ ರಾಜಧಾನಿಯಾದ ಹೊಂಬುಜದಲ್ಲಿ ಒಂದು ಭುಜಭಳ ಶಾನ್ತರ ಜಿನಾಲಯವನ್ನು ಕಟ್ಟಿಸಿದುದರ ಉಲ್ಲೇಖ ಹಾಗೂ ಈ ಜಿನಾಲಯವನ್ನು ತನ್ನ ಗುರುಗಳಾದ ಕನಕನಂದಿ ದೇವರಿಗೆ ಧಾರಾಪೂರ್ವಕವಾಗಿ ದಾನ ಮಾಡಿದ ವಿವರಗಳು ಸಹ ಕಂಡು ಬರುತ್ತವೆ. ಅಂತೆಯೇ ಶಾಸನಗಳು ವೀರಶಾಂತರನು ಯುದ್ಧ ರಂಗದಲ್ಲಿ ಆಡಳಿತ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ನೈಪುಣ್ಯ ಹೊಂದಿದವನೆಂದು ತಿಳಿಯಪಡಿಸುತ್ತವೆ. ಇವನು ತನ್ನ ಸಮಕಾಲೀನ ಮುಖ್ಯ ಅರಸರ ಜೊತೆ ವೈವಾಹಿಕ ಸಂಬಂಧಗಳನ್ನು ಬಲಪಡಿಸಿದನು. ಇವನ ಪತ್ನಿಯರಾದ ಬಿಜ್ಜಲದೇವಿ ನೊಳಂಬ ನರಸಿಂಗದೇವನ ಪುತ್ರಿ. ಹಾಗೆಯೇ ಅಚಲದೇವಿ, ವೀರ ಮಹಾದೇವಿ ಮತ್ತು ಚಾಗಲದೇವಿಯರು ಇವನ ಇತರ ಪತ್ನಿಯರು.

ಈ ವೀರಶಾನ್ತರ ಹಾಗೂ ವೀರ ಮಹಾದೇವಿಗೆ ಜನಿಸಿದವರು ನಾಲ್ಕು ಜನ ಮಕ್ಕಳು. ಅವರುಗಳು ಯಾರೆಂದರೆ ಭುಜಬಳ ಶಾನ್ತರ, ನನ್ನಿಶಾನ್ತರ, ಗೋವಿಂದದೇವ ಹಾಗೂ ವಿಕ್ರಮ ಶಾನ್ತರ.

ಭುಜಬಳಶಾನ್ತರ ಸು.ಕ್ರಿ.ಶ. ೧೦೭೦-೭೬ : ಇವನು ಸಹ ಸಾಂತಳಿಗೆಯನ್ನು ಏಕಛತ್ರವನ್ನಾಗಿ ಆಳಿದನೆಂದು ಶಾಸನಗಳು ತಿಳಿಸುತ್ತವೆ. ಹಾಗೆಯೇ ಇವನು ಚಾಳುಕ್ಯ ಚಕ್ರವರ್ತಿ ತ್ರೈಳೋಕ್ಯಮಲ್ಲನಿಗೆ ವಿಧೇಯತೆಯ ಸಂಕೇತವಾಗಿ ತನ್ನನ್ನು ತ್ರೈಳೋಕ್ಯಮಲ್ಲ, ಭುಜಬಳ ಶಾನ್ತರ ಎಂದು ಕರೆದುಕೊಂಡನು. ಇವನು ತನ್ನ ತಮ್ಮಂದಿರೊಂದಿಗೆ ಸೇರಿ ತಮ್ಮ ದೊಡ್ಡಮ್ಮ ಚಟ್ಟಲದೆವಿ ಕಟ್ಟಿಸಿದ ಪಂಚಬಸದಿಗೆ ಮಾಡಿದ ಅನೇಕ ದಾನದ ವಿವರಗಳನ್ನು ಶಾಸನವು ನೀಡುತ್ತದೆ. ಅಂತೆಯೇ ಈ ಭುಜಭಲ ಶಾನ್ತರು ಸಾಂತಳಿಗೆಯನ್ನು ನಿರಂಕುಶವಾಗಿ ಆಳುತ್ತಿದ್ದನೆಂದು ಶಾಸನಗಳು ತಿಳಿಸುತ್ತವೆ.

 

[1]ಕನಾಟಕ ರಾಜ್ಯ ಗೆಝಟಿಯರ್ ಶಿವಮೊಗ್ಗ ಜಿಲ್ಲೆ.

[2]ಅನೇಕ ಶಾಸನಗಳಲ್ಲಿ ಸಾಂತರರು ಆಳಿದ ಪ್ರದೇಶವನ್ನು ಸಾನ್ತಳಿಗೆ ಸಾಯಿರ ಎಂದು ಕರೆಯಲಾಗಿದೆ. ನೋಡಿ ಬಿ.ಎಲ್.ರೈಸ್ (ಸಂ) ಎಪಿಗ್ರಾಫಿಯಾ ಕರ್ನಾಟಕ (ವಿ.ಕ) ೧೯೦೪ ಸಂಪುಟ ೮ ರಲ್ಲಿನ ಶಾಸನಗಳು

[3]ಅದೇ ನಗರ ೩೫, ಕಾಲ ಕ್ರಿ.ಶ. ೧೦೭೭

[4]ಅದೇ ನಗರ ೩೫

[5]ಎ.ಕ.ಸಂ. ೬, ಕೊಪ್ಪ ೩೭, ಕ್ರಿ.ಶ. ಸುಮಾರು ೬೭೫

[6]ಎ.ಕ.ಸಂ. ೮, ನಗರ ೨೨ ಸು.ಕ್ರಿ.ಶ. ೯೦೦; ೩೫ ಕ್ರಿ.ಶ. ೧೦೭೭

[7]ಅದೇ ನಗರ ೩೫, ಕ್ರಿ.ಶ. ೧೦೭೭

[8]ಅದೇ ತೀರ್ಥಹಳ್ಳಿ (ದಾನಶಾಲೆ) ಸಂ. ೧೯೭ ಪು. ೬೮೬

[9]ಎ.ಕ.ಸಂ.೭, ಶಿಕಾರಿಪುರ ೨೮೩ ಸು.ಕ್ರಿ.ಶ. ೮೩೦

[10]ಎ.ಕ. ಸಂ. ೬ ಮುನ್ನುಡಿ ಪು. ೧೦

[11]ಅದೇ

[12]ಎ.ಕ. ಸಂ. ೮, ನಗರ ೩೫

[13]ಎ.ಕ. ಸಂ. ೭, ಶಿಕಾರಿಪುರ ೩೫ ಹಾಗೂ ಎ.ಕ. ಸಂ. ೮, ನಗರ ೬೦

[14]ಎ.ಕ. ಸಂ. ೭, ಹೊನ್ನಾಳಿ ೨೩, ಪು ೩೭೯

[15]ಅದೇ ಶಿಕಾರಿಪುರ ೫೩ ಕ್ರಿ.ಶ. ೧೦೨೭

[16]ಅಂದರೆ ಈ ಇಬ್ಬರೂ ರಾಷ್ಟ್ರಕೂಟರಿಂದ ಹೊರಬಂದು ಸ್ವತಂತ್ರವಗಿ ತಮ್ಮ ರಾಷ್ಟ್ರವನ್ನು ಆಳಿರಬಹುದೆಂಬ ಊಹೆಗೆ ಅವಕಾಶವಿದೆ.

[17]ಎ.ಕ. ೮ ನಗರ ೫೮ ಕ್ರಿ.ಶ. ೧೦೬೨