ಗೊಗ್ಗಿಗ / ಗೋವಿಂದದೇವ / ನನ್ನಿಶಾನ್ತರ ೨. ಶಾಂತರಾದಿತ್ಯ : ಸಾಂತರರ ನಾಡು ಮತ್ತೊಂದು ಬಾರಿಗೆ ತನ್ನ ಆಳ್ವಿಕೆಯ ಉತ್ತುಂಗ ದಿನಗಳನ್ನು ಕಂಡಿದ್ದು ಈ ಎರಡನೆಯ ನನ್ನಿಶಾನ್ತರನ ಕಾಲದಲ್ಲಿ. ಇವನು ಸಾಂತಳಿಗೆ ನಾಡಿನ ಗಡಿಯನ್ನು ವಿಸ್ತರಿಸಿದಂತೆ ಕಂಡು ಬರುತ್ತದೆ. ಹಾಗೆಯೇ ಅವರ ಶಾಸನಗಳಲ್ಲಿ ಪರಾಯತ್ತವಾದ ಸಾಂತಳಿಗೆಯನ್ನು ಸ್ವಾಯತ್ತ ಮಾಡಿದನೆಂದು ತಿಳಿಸುತ್ತದೆ.[1]ಇವನ ಸಾಹಸವನ್ನು ಮೆಚ್ಚಿದ ಚಾಳುಕ್ಯ ಚಕ್ರವರ್ತಿಯಾದ ಆರನೆಯ ವಿಕ್ರಮಾದಿತ್ಯನು (ಕ್ರಿ.ಶ. ೧೦೭೬-೧೧೨೬) ತನ್ನ ಅರ್ಧಾಸನವಾದ ಲೋಹ ಸಿಂಹಾಸನದಲ್ಲಿ ಕೂಡಿಸಿಕೊಂಡನೆಂದು ಶಾನಸಗಳಿಂದ ತಿಳಿದು ಬರುತ್ತದೆ.[2]

ಮೂರನೆಯ ವಿಕ್ರಮಶಾನ್ತರ (ಸು.ಕ್ರಿ.ಶ. ೧೦೭೭-೮೭) : ಎರಡನೆಯ ನನ್ನಿಶಾನ್ತರನ ನಂತರ ಪಟ್ಟಕ್ಕೆ ಬಂದವನು ಒಡ್ಡುಗ ಅಥವಾ ಮೂರನೆಯ ವಿಕ್ರಮ ಶಾಂತರ.[3]ಅಧಿಕಾರಕ್ಕೆ ಬರುವ ಪೂರ್ವದಲ್ಲಿ ತನ್ನ ಅಣ್ಣಂದಿರಿಗೆ ವಿಧೇಯನಾಗಿದ್ದ ಇವನು ನಂತರ ತನ್ನ ಸಾಮ್ರಾಟನಾದ ವಿಕ್ರಮಾಂಕನ ನಾಮಾಂಕಿತವನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡು ವಿಕ್ರಮ ಶಾನ್ತರನಾದನು. ಇವನೂ ಸಹ ತನ್ನ ಆಳ್ವಿಕೆಯ ಕಾಲದಲ್ಲಿ ಪಂಚಬಸದಿ ಗಾಗಿ ಮಾಡಿದ ದಾನದ ವಿವರಗಳು ಹೊಂಬುಜದ ಶಾಸನಗಳಿಂದ ತಿಳಿದುಬರುತ್ತವೆ. ಹಾಗೆಯೇ ಈ ವಿಕ್ರಮ ಶಾನ್ತರನು ಪಂಚಬಸದಿಯ ಮಾದರಿಯ ಇನ್ನೊಂದು ಬಸದಿಯನ್ನು ಆನಂದೂರಿನಲ್ಲಿ ಕಟ್ಟಿಸಿದ್ದಾಗಿ ತಿಳಿದು ಬರುತ್ತದೆ.

ತ್ರಿಭುವನಮಲ್ಲ ಶಾನ್ತರದೇವ : (ಸು.ಕ್ರಿ.ಶ. ೧೦೯೦-೧೧೩೦) ಇವನು ವಿಕ್ರಮ ಶಾನ್ತರನ ಮಗನು. ಇವನು ಚಾಳುಕ್ಯ ರಾಜ ಇಮ್ಮಡಿ ತ್ರಿಭುವನ ಮಲ್ಲದೇವ ಪೆರ್ಮಾಡಿ (ವಿಕ್ರಮಾದಿತ್ಯ ೧೦೭೬-೧೧೨೬) ಯ ಮಹಾಮಂಡೇಳ್ವರನಾಗಿದ್ದನು. ಹಾಗಾಗಿ ತನ್ನ ಹೆಸರನ್ನು ತ್ರಿಭುವಮಲ್ಲ ಶಾಂತರ ಎಂದು ಕರೆದುಕೊಂಡಿದ್ದಾನೆ. ದಾನಶಾಲೆಯ ಶಾಸನದ ಪ್ರಕಾರ ಕ್ರಿ.ಶ. ೧೧೦೩ ರಲ್ಲಿ ಸೋಮಗ್ರಹಣದಂದು ಜಿನಬಿಂಬ ಪ್ರತಿಷ್ಟೆಯನ್ನು ಮಾಡಿ ಒಂದು ಬಸದಿಯನ್ನು ಕಟ್ಟಿಸಿ ಅದಕ್ಕೆ ಬಿಟ್ಟ ದಾನದ ವಿವರಗಳು ಕಂಡು ಬರುತ್ತವೆ. ಅಂತೆಯೇ ಆ ಬಸದಿಯ ಖಂಡ ಸ್ಫುಟಿತ ನವಕರ್ಮ ಆಹಾರ ದಾನಕ್ಕೆ, ದೇವರ ಅಷ್ಟವಿಧಾರ್ಚನೆಗಾಗಿ ಊರೊಳು ಸೇಸೆ, ಬಿರ್ದು, ಬೀಯ, ದೇವಿದೆರೆ, ಅಡಿಗಚ್ಚು, ಕಾಣಿಕೆ, ಕಯ್ಗಾಣಿಕೆ, ಹಾಲಾವು, ಹಬ್ಬದ ಬಿಯ್ಯ, ಕುಮಾರ ಗದ್ಯಾಣಂ ಮೊದಲಾಗಿ ಧಾರಾ ಪೂರ್ವಕಂ ಸರ್ವಭಾದಾ ಪರಿಹಾರವಾಗಿ ಮಾಡಿಬಿಟ್ಟರು.[4] ಇವನಿಗೆ ಜಗದೇಕ ದಾನಿ ಎಂಬ ಬಿರುದು ಇದ್ದುದು ಕಂಡು ಬರುತ್ತದೆ. ಹಾಗೆಯೇ ಹೊಂಬುಜದ ಇನ್ನೊಂದು ಶಾಸನದಲ್ಲಿ ಅವನಿಗೆ ರಾಯ ಝಳಪ್ಪ ಎಂಬ ಬಿರುದು ಕಂಡು ಬಂದಿದೆ. ಇದು ಚಾಳುಕ್ಯ ಚಕ್ರವರ್ತಿ ವಿಕ್ರಮಾಂಕನಿಗಿದ್ದ ಬಿರುದು.[5]

ವಿಕ್ರಮಶಾನ್ತರ : (೧೧೪೭-೫೬) ತ್ರಿಭುವನಮಲ್ಲಶಾನ್ತರ ಹಾಗೂ ಚಟ್ಟಲದೇವಿಯ ಮಗನೇ ಈ ನಾಲ್ಕನೇ ಶಾನ್ತರ. ಇವನು ಸಹ ಸಾಂತಳಿಗೆ ಸಾಯಿರ ನಾಡನ್ನು ಏಕಸ್ವಾಮ್ಯವನ್ನಾಗಿ ಮಾಡಿ ಆಳ್ವಿಕೆ ಮಾಡಿದಂತೆ ಶಾಸನಗಳಿಂದ ತಿಳಿದುಬರುತ್ತದೆ. ಇವನ ಅಕ್ಕನಾದ ಪಂಪಾದೇವಿಯು ಮಹಾ ಜಿನಭಕ್ತೆ ಯಾಗಿದ್ದು ಅವಳು ನೂತನ ಅತ್ತಿಮಬ್ಬೆ ಎಂದು ಕರೆಯಲ್ಪಟ್ಟಿದ್ದಾಳೆ. ವಿಕ್ರಮ ಸಾನ್ತರ ಪಂಪಾದೇವಿ ಹಾಗೂ ಅವಳ ಮಗಳಾದ ಬಾಚಲದೇವಿ ಸೇರಿ ಪಂಚ ಬಸದಿಗೆ ಬಡಗಣ ಪಟ್ಟಸಾಲೆಯನ್ನು ಮಾಡಿಸಿ ಅದರ ಪ್ರತಿಷ್ಠಾಪನೆಯನ್ನು ಮಾಡಿದರೆಂದು ತಿಳಿದು ಬರುತ್ತದೆ.

ಈ ವಿಕ್ರಮ ಶಾನ್ತರಿಗೆ ಮೂರು ಜನ ಮಕ್ಕಳು. ಅ) ತ್ರಿಭುವನಮಲ್ಲಸಾನ್ತರ ಅಥವಾ ವೀರ ಸಾನ್ತರ ಅಥವಾ ರಾಯತೈಲಪ. ಆ) ಗೋವಿಂದ ಅಥವಾ ಮೂರನೇಯ ರಾಯಸಾನ್ತರ, ಇ) ಬೊಪ್ಪುಗ.

ಎ.ಕ. ೮ನೇ ಸಂಪುಟ (ಸಾಗರ)ದ ೮೦ನೇ ಶಾಸನದ ಪ್ರಕಾರ ತ್ರಿಭುವನಮಲ್ಲ ಶಾನ್ತರದೇವ ಹಾಗೂ ಮೂರನೇ ರಾಯಶಾನ್ತರ ಇಬ್ಬರನ್ನು ಜಂಟಿಯಾಗಿಸಿ ಒಂದೇ ಪ್ರಶಸ್ತಿ ವಾಚನದಲ್ಲಿ ಸೇರಿಸಿದ್ದನ್ನು ನೋಡಿದರೆ (ಸಾಲು ೭-೧೨) ಇವರಿಬ್ಬರೂ ಮಹಾಮಂಡಳೇಶ್ವರರಾಗಿ ಒಟ್ಟಾಗಿ ಆಳ್ವಿಕೆ ಮಾಡಿದಂತೆ ಕಂಡುಬರುತ್ತದೆ.

ಇಮ್ಮಡಿ ತ್ರಿಭುವನಮಲ್ಲ ವೀರ ಶಾನ್ತರದೇವ : (ಸು.ಕ್ರಿ.ಶ. ೧೧೫೭-೧೧೯೪) ಇವನನ್ನು ಸಹ ಶಾಸನಗಳು ಮಹಾಮಂಡಳೇಶ್ವರ, ಉತ್ತರ ಮಧುರಾಧೀಶ್ವರ ಶಾನ್ತರಾದಿತ್ಯ ಎಂದು ಕರೆದಿವೆ. ಅವನ ಶಾಸನಗಳಿಂದ ನಮಗೆ ತಿಳಿದು ಬರುವ ಪ್ರಮುಖ ಅಂಶವೇನೆಂದರೆ ಅವನ ಕಾಲದಲ್ಲಿ ಹೊಸಗುಂದದ ಬೀರರಸನು ಒಬ್ಬ ಪ್ರಮುಖ ಸಾಮಂತನಾಗಿದ್ದನು.

ಅಂತೆಯೇ ಸಾಗರದ ಶಾಸನ ಸಂಖ್ಯೆ (ಎ.ಕ.೮) ೬೭ರಲ್ಲಿ ಈ ವೀರಶಾನ್ತರನಿಗೂ ಹಾಗೂ ಅವನ ಅಧೀನದಲ್ಲಿದ್ದ ಹೊಸಗುಂದದ ಬೀರರಸನಿಗೂ ನಡೆದ ಯುದ್ಧದ ಘಟನೆಯೊಂದು ತಿಳಿದುಬರುತ್ತದೆ. ಈ ಯುದ್ಧದಲ್ಲಿ ವೀರಶಾಂತರ ದೇವನಿಗೆ ಸಹಾಯಕರಾದವರು ಹಿರಿಯ ದಂಡನಾಯಕ ಬನವಾಸಿ ಪಿನ್ನಿಚ್ಛಾಸಿರದ ಅರಳಯ್ಯ ಹಾಗೂ ಪದ್ಧಯ್ಯ, ಹೊಂಬುಜದ ಸಿಂಗಿದೇವ ಮುಂತಾದವರು. ಆದರೆ ಶಾಸನದಲ್ಲಿ ತಿಳಿದು ಬರುವ ಇನ್ನೊಂದು ಪ್ರಮುಖ ಅಂಶವೇನೆಂದರೆ ಕಳಚೂರಿಯ ರಾಜನಾದ ಬಿಜ್ಜಳದೇವನು ಕಲ್ಯಾಣಿಯನ್ನು ಆಳುತ್ತಿರಬೇಕಾದರೆ ಎಂದಿದೆ. ಆದರೆ ಶಾಸನದಲ್ಲಿ ಈ ಯುದ್ಧವು ನಡೆದ ಕಾಲವನ್ನು ತಿಳಿಸಿಲ್ಲವಾದ್ದರಿಂದ ಈ ಘಟನೆಯ ಕಾಲವನ್ನು ಅರ್ಥೈಸಲು ಕಷ್ಟಸಾಧ್ಯವಾಗಿದೆ.[6]

ಈ ವೀರಶಾಂತರನು ಮುಂದೆ ಉದ್ಧರೆಯ ಜಂಬೂರು ಠಾಣೆಯನ್ನು ಮುತ್ತಿ ಹೋರಾಡಿದಾಗ ಅವನ ಕಡೆಯವನಾದ ಅನ್ನದಾನಿ ಬೂವಣನು ಹೋರಾಡುತ್ತ ಮರಣ ಹೊಂದಿದ ವಿಷಯವನ್ನು ಶಾಸನಗಳು ತಿಳಿಸುತ್ತವೆ.

ಅಂತೆಯೇ ಶಾಸನ ನಂ.೬೬ ಸಾಗರ ತಾಲ್ಲೂಕಿನ ಶಾಸನದಲ್ಲಿ (ಎ.ಕ.೮) ಈ ವೀರ ಶಾಸ್ತರನು ಸಾಂತಳಿಗೆ ಸಾಯಿರವನ್ನು ಆಳುತ್ತಿದ್ದಾಗ. ಅವನ ಅಧೀನನಾದ ಬೀರರಸನ ಅಳಿಯನಾದ ತೈಲರಸನು ಹರತಾಳು-೧೨, ಕಾದವಳಿಗೆ-೧೨, ಕಟ್ಟಗೆಹಳ್ಳಿ, ನಾಡವಳ್ಳಿ ಮತ್ತು ನೆಲ್ಲವಾಡಿ ಇವನ್ನು ಆಳುತ್ತಿದ್ದಾಗ ನಡೆದ ಇನ್ನೊಂದು ಪ್ರಮುಖ ಘಟನೆಯ ಬಗ್ಗೆ ಬೆಳಕನ್ನು ಬೀರುತ್ತದೆ. ಈ ಶಾಸನದಲ್ಲಿ ಬೆಳೆಗೌಡ ಎಂಬ ವೀರನು ತನ್ನಹಿರಿಯ ಹರಕಲು ಹಳ್ಳಿಯ ದನಗಳನ್ನು ಶತ್ರುಗಳಿಂದ ರಕ್ಷಿಸುತ್ತಾ ಪ್ರಾಣವನ್ನು ನೀಗಿದ ವಿಷಯವನ್ನು ಇದು ತಿಳಿಸುತ್ತದೆ. ವೀರ ಶಾನ್ತರ ದೇವನ ಆಳ್ವಿಕೆಯನ್ನು ತಿಳಿಸುವ ಕಟ್ಟಕಡೆಯ ಶಾಸನವು ಇದಾಗಿದೆ.[7]

ಒಟ್ಟಿನಲ್ಲಿ ೧೨ನೇ ಶತಮಾನದ ಕೊನೆಯ ಭಾಗದಲ್ಲಿ ಹುಂಚದ ಸಾಂತರರ ಆಳ್ವಿಕೆಯು ಕುಸಿಯತೊಡಗಿತು. ಸಾಂತರ ರಾಜರು ದುರ್ಬಲರಾದ ಹಾಗೇ ಅವರ ಅಧಿಕಾರದಲ್ಲಿದ್ದ ಅನೇಕ ಪ್ರದೇಶಗಳನ್ನು ಬೇರೆ ಬೇರೆ ಸಾಮಂತರಾಜರು ವಶಮಾಡಿಕೊಳ್ಳುವ ಯತ್ನ ಮಾಡತೊಡಗಿದರು.[8] ಇದನ್ನು ತಡೆಯುವ ಯತ್ನವನ್ನು ಸಾಂತರರು ಮಾಡಿದರಾದರೂ ತಮ್ಮ ಪ್ರದೇಶದ ಗಡಿಗಳನ್ನು ರಕ್ಷಿಸಿಕೊಳ್ಳಲು ಹೊಂಬುಜದ ಸಾಂತರರಿಗೆ ಸಾಧ್ಯವಾಗದೇ ಹೋಯಿತು. ಕೊನೆಯ ಹಂತದಲ್ಲಿ ಹೊಯ್ಸಳ ವಿಷ್ಣುವರ್ಧನನು ಸಾಂತರರ ಅರಸ ಜಗದೇವನ ಪಡೆಯನ್ನು ಹೊಡೆದೋಡಿಸಿ ಸಾಂತಳಿಗೆಯ ಪೂರ್ವದ ಕಡೆ ಅನೇಕ ಪ್ರಾಂತ್ಯಗಳನ್ನು ತನ್ನ ರಾಜ್ಯಕ್ಕೆ ಸೇರಿಸಿ ಕೊಂಡನು.[9]

ಹಾನುಗಲ್ಲಿನ ಕದಂಬರು ಸು. (ಕ್ರಿ.ಶ. ೧೧೨೦-೧೧೩೦ ರವರೆಗೆ) ಸಾಂತಳಿಗೆಯ ಕೆಲವು ಭಾಗಗಳನ್ನು ವಶಪಡಿಸಿಕೊಂಡಂತೆ ಕಂಡುಬರುತ್ತದೆ. ನಂತರ ೧೧೨೪-೬೫ ರ ಸುಮಾರಿಗೆ ಕಳಚೂರಿನ ಬಿಜ್ಜಳನ ಮಹಾಮಂಡಳೇಶ್ವರನಾದ ಬೆಳಗುತ್ತಿ ಕುಲದ ಈಶ್ವರದೇವ ಸಿಂಧನು ಬನವಾಸಿ ಹಾಗೂ ಸಾಂತಳಿಗೆಯ ಉತ್ತರಕ್ಕಿದ್ದ ಕೆಲವು ಭಾಗಗಳನ್ನು ಆಳುತ್ತಿದ್ದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಹೊಂಬುಜದ ಜಗದೇವರಸನಿಗೂ ಹಾಗೂ ಈಶ್ವರ ದೇವನಿಗೂ ಕದನವಾಗಿ ಜಗದೇವರಸನು ತನ್ನ ಸಾಂತಳಿಗೆ ನಾಡಿನ ಅನೇಕ ಭಾಗಗಳನ್ನು ಕಳೆದುಕೊಂಡನು. ಹೀಗೆ ಕದಂಬ ಹಾಗೂ ಸಿಂದರೂ ಸಾಂತರರಿಗೆ ವೈರಿಗಳಾದಾಗ ಕೊನಿಗೆ ಸಾಂತರರು ಹೊಯ್ಸಳ ರಾಜರಿಗೆ ಶರಣು ಹೋದಂತೆ ಕಂಡುಬರುತ್ತದೆ. ಹೀಗಾಗಿ ಸಾಂತರರು ನಂತರದಲ್ಲಿ ತಮ್ಮನ್ನು ತಾವು ಹೊಯ್ಸಳರ ಬಿರುದುಗಳಿಂದ ಗುರುತಿಸಿಕೊಂಡಿದ್ದಾರೆ. ಉದಾ: ಸಾಂತರರ ಜಗದೇವರಸನು ತನ್ನನ್ನು ಜಗದೇಕ ಹೊಯ್ಸಳ ಸಾಂತರ ಮಾರದೇವ ಎಂದು ಕರೆದುಕೊಂಡನು.

ಒಟ್ಟಿನಲ್ಲಿ ಸಾಂತರರು ತಮ್ಮ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದುದರಿಂದ ಅವರಿಗೆ ಸಾಂತಳೀಗೆ ಸಾಯಿರದ ಮೇಲೆ ಪ್ರಭುತ್ವವನ್ನು ಸಂಪಾದಿಸಲು ಆಗದೇ ಹೋದಾಗ, ಅವರು ತಮ್ಮ ರಾಜಧಾನಿಯನ್ನು ಮಲೆನಾಡಿನ ಹೊಂಬುಜದಿಂದ ಘಟ್ಟದ ಕೆಳಗಿನ ಕಳಸಕ್ಕೆ ಬದಲಾಯಿಸಿದಂತೆ ಕಂಡುಬರುತ್ತದೆ.

ಸೇತುವಿನಿಂದ ಆಳ್ವಿಕೆ ಮಾಡಿದ ಸಾಂತರರು

ಸುಮಾರು ಹನ್ನೆರಡನೆ ಶತಮಾನದ ಉತ್ತರಾರ್ಧದಿಂದ ನಮಗೆ ಸಾಂತರರನ್ನು ಕುರಿತು ಹೆಚ್ಚಿನ ಮಾಹಿತಿ ದೊರೆಯುವುದು ಅವರ ಮೊದಲ ರಾಜಧಾನಿಯಾದ ಹೊಂಬುಜದಿಂದಲ್ಲ. ಯಾಕೆಂದರೆ ಮೇಲೆ ವಿವರಿಸಿದ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಸಾಂತರರು ತಮ್ಮ ನೆಲೆವೀಡನ್ನು ಹೋಂಬುಜದಿಂದ ಸೇತುವಿಗೆ, ನಂತರ ಕಳಸಕ್ಕೆ ಬದಲಾವಣೆ ಮಾಡಿದಂತೆ ಶಾಸನಗಳಿಂದ ಕಂಡುಬರುತ್ತದೆ. ಹಾಗೆಯೇ ಇಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೇನೆಂದರೆ ಸೇತುವಿನಲ್ಲಿ ಶಾಸನಗಳು ಜಿನಸ್ತುತಿಯನ್ನು ಹೊರತುಪಡಿಸಿ ಶಿವಸ್ತುತಿಯಿಂದ ಪ್ರಾರಂಭವಾಗುತ್ತವೆ. ಆದರೆ ತಮ್ಮ ವಂಶದ ಬಗ್ಗೆ ಗುರುತಿಸುತ್ತ ಈ ರಾಜರೂ ಸಹ ತಮ್ಮನ್ನು ತಾವೇ ಉಗ್ರವಂಶದವರೆಂದೂ ಪಟ್ಟಿ ಪೊಂಬುಚ್ಚದ ಪುರವರೇಶ್ವರರು ಅಂತಲೂ ಕರೆದುಕೊಂಡಿದ್ದಾರೆ.

ಸೇತುವಿನಿಂದ ಕಂಡುಬರುವ ಸಾಂತರರ ಹೊಸ ಪರಂಪರೆಯನ್ನು ಸೂಚಿಸುವ ಪ್ರಮುಖ ಶಾಸನ ಬಳ್ಳಿಗಾವೆಯ ಶಾಸನ (ಶಿಕಾರಿಪುರ /೧೦೩/(ಎ.ಕ.) ಕ್ರಿ.ಶ. ೧೧೪೯ ರ ಸುಮಾರಿಗೆ). ಈ ಶಾಸನದಲ್ಲಿ ನಮಗೆ ಕಂಡುಬರುವ ಪ್ರಮುಖ ಹೆಸರು ಅಮ್ಮಣ ಎಂದು. ಅವನ ಇನ್ನೊಂದು ಹೆಸರು ಸಿಂಗಿದೇವ ಎಂದು ತಿಳಿದುಬರುತ್ತದೆ. ಸಿಂಗಿದೇವನ ಮಗನಾದ ಜಗದೇವರಸನ ಉಲ್ಲೇಖವು ಈ ಶಾಸನದಿಂದ ತಿಳಿದುಬರುತ್ತದೆ.

ಅಂದರೆ ಹೊಂಬುಜದ ರಾಜನಾದ ವಿಕ್ರಮ ಶಾನ್ತರಿಗೆ ಇಬ್ಬರು ಪತ್ನಿಯರಿದ್ದು ಅವರಲ್ಲಿ ಮೊದಲನೆಯವರು ಚಟ್ಟಲದೇವಿ. ಅವಳಿಗೆ ಈಗಾಗಲೇ ಹಿಂದೆ ತಿಳಿಸಿದಂತೆ ಮೂರು ಜನ ಗಂಡು ಮಕ್ಕಳು. ಅವರಲ್ಲಿ ತ್ರಿಭುವನಮಲ್ಲವೀರಶಾನ್ತರದೇವನು ಸಾಂತರರ ಕೊನೆಯ ಪ್ರಮುಖ ರಾಜನಾಗಿದ್ದು ಅವನ ಆಳ್ವಿಕೆಯವರೆಗೂ ಹೊಂಬುಜವು ಅವರ ರಾಜಧಾನಿಯಾಗಿತ್ತು. ಈ ವಿಕ್ರಮ ಶಾನ್ತರನ ಇನ್ನೊಬ್ಬ ಪತ್ನಿಯಾದ ತುಳವಳದೇವಿಯಿಂದ ಜನಿಸಿದ ಮಗನೇ ಸಿಂಗಿನ್ರಪಾಳ (ಸಿಂಗಿದೇವ). ಅಂದರೆ ವಿಕ್ರಮ ಶಾನ್ತರನ ಮಕ್ಕಳ ಆಳ್ವಿಕೆಯ ಕಾಲದಲ್ಲಿ ಅವನ ಎರಡನೆಯ ಹೆಂಡತಿಯ ಮಗನಾದ ಸಿಂಗಿದೇವನಿಂದ ಸೇತುವಿನಲ್ಲಿ ಸಾಂತರರ ವಂಶ ಮುಂದುವರೆದಂತೆ ಕಂಡುಬರುತ್ತದೆ.

ಸೇತು ಎಂಬುದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕರೂರು ಹಾಗೂ ಪಟಗುಪ್ಪೆ ಗ್ರಾಮಗಳ ನಡುವೆ ಇದ್ದ ಊರು. ಇದು ಶರಾವತಿ ನದಿಯ ದಡದ ಮೇಲಿದ್ದು ಇದು ಇಂದು ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಮುಳಗಡೆ ಆಗಿರುವ ಪ್ರದೇಶವಾಗಿದೆ. ಹಾಗಾಗಿ ಈ ಸೇತುವಿನಿಂದ ಆಳ್ವಿಕೆ ಮಾಡಿದ ಅರಸರನ್ನು ಹಾಗೂ ಅವರ ಸಾಧನೆಗಳನ್ನು ಅರಿಯಲು ನಮಗೆ ಯಾವುದೇ ಪ್ರಾಕ್ತಾನಾಧಾರಗಳು ದೊರೆಯುವುದಿಲ್ಲ.

ಮೇಲೆ ತಿಳಿಸಿದಂತೆ ಸಿಂಗಿದೇವನ ಮಗನಾದ ಜಗದೇವರಸನ ಬಗ್ಗೆ ಕೆಲವೊಂದು ಶಾಸನಗಳು ಮಾಹಿತಿಯನ್ನು ನೀಡುತ್ತವೆ. ಈ ಜಗದೇವರಸನು ಬರೀ ಸಾಂತಳಿಗೆ ಸಾಯಿರ ಮಾತ್ರವಲ್ಲ ಬನವಾಸಿ ಪನ್ನಿಛ್ಛಾರಿರವನ್ನು ಆಳುತ್ತಿದ್ದನೆಂದು ತಿಳಿಯುತ್ತದೆ. ಅಂದರೆ ಕದಂಬ ಹಾಗೂ ಸಾಂತರರ ನಡುವೆ ಯುದ್ಧಗಳಿಂದ ಈ ಜಗದೇವರಸನು ಬನವಾಸಿಯ ಅನೇಕ ಪ್ರಾಂತ್ಯಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿರಬಹುದು. ಉದಾ: ಸು.ಕ್ರಿ.ಶ. ೧೧೬೩ರ ಶಾಸನವೊಂದರಲ್ಲಿ (ಎ.ಕ.೮ ಸೊರಬ ೧೭೭), ಕದಂಬ ಕೀರ್ತಿವರ್ಮ ಜಗದೇಕ ಅರಸನ ಮೇಲೆ ಧಾಳಿ ಮಾಡಿ ಅಂಧಾಸುರ ಕೋಟೆಯನ್ನು ಮುತ್ತಿದ ವಿಷಯ ತಿಳಿಯುತ್ತದೆ. ಈ ಜಗದೇಕನ ನಂತರ ಉಲ್ಲೇಖ ಕಂಡುಬರುವುದು ಅವನ ತಮ್ಮನಾದ ಸಿಂಗಿದೇವ ಎಂಬುವನ ಬಗ್ಗೆ. ಆದರೆ ಈ ಸಿಂಗಿದೇವನು ಯಾರು ಎಂದು ಗುರುತಿಸುವುದು ಬಹಳ ಕಷ್ಟಕರವಾಗಿದೆ. ಯಾಕೆಂದರೆ ಬೇರೆ ಬೇರೆ ಕಾಲ ಘಟ್ಟಗಳಲ್ಲಿ ಸಿಂಗಿದೇವ ಎಂಬ ಹೆಸರಿನ ರಾಜರು ಉಲ್ಲೇಖಿತರಾಗಿದ್ದಾರೆ. ಆದರೆ ಶಿಕಾರಿಪುರ ಹಾಗೂ ಬಳ್ಳಿಗಾವೆಯ ಶಾಸನದಲ್ಲಿ ಬರುವ ಸಿಂಗಿದೇವನೇ ಜಗದೇವರಸನ ತಮ್ಮನಾಗಿರಬೇಕೆಂದು ಹಾಗೂ ಈ ಎರಡೂ ಶಾಸನಗಳಲ್ಲಿ ಅವನನ್ನು ಸಾಂತಳಿಗೆಯ ರಾಜ ಎಂದು ಕರೆದಿರುವುದರಿಂದ ಅವನ ಕಾಲವನ್ನು ಸುಮಾರು ಕ್ರಿ.ಶ. ೧೧೪೯-೯೦ ಎಂದು ಗುರುತಿಸಲಾಗಿದೆ.

ಒಟ್ಟಿನಲ್ಲಿ ತೈಲಪನಿಂದ ಪ್ರಾರಂಭವಾಗಿ, ಬೊಮ್ಮರಸನವರೆಗೂ ಕೆಲವೊಂದು ರಾಜರುಗಳ ಬಗ್ಗೆ ಮಾತ್ರ ನಮಗೆ ಮಾಹಿತಿ ದೊರೆಯುತ್ತದೆ. ಆ ನಂತರ ಸೇತುವಿನಿಂದ ಬೇರೆ ಯಾವುದೇ ಮಾಹಿತಿಗಳು ನಮಗೆ ಲಭ್ಯವಿಲ್ಲ.

ಸಾಂತಳಿಗೆ ಸಾಯಿರದ ಆಡಳಿತ ಪದ್ಧತಿ

ಸಾಂತರರು ತಮ್ಮ ಆಳ್ವಿಕೆಯ ಪೂರ್ವಕಾಲದಲ್ಲಿ ಪ್ರಮುಖ ಸಾಮ್ರಾಜ್ಯಗಳ ಅಧೀನದಲ್ಲಿ ಮಹಾಮಂಡಳೇಶ್ವರರಾಗಿ ಮಾತ್ರ ಆಳ್ವಿಕೆ ಮಾಡಿರುವುದು ಕಂಡುಬರುತ್ತದೆ. ಉದಾ: ಪ್ರಾರಂಭದಲ್ಲಿ ಇವರು ರಾಷ್ಟ್ರಕೂಟ ಮಾಂಡಲೀಕರಾಗಿದ್ದು ನಂತರದ ಕಾಲದಲ್ಲಿ ಅವರು ಕಲ್ಯಾಣಿ ಚಾಳುಕ್ಯರ ಮಹಾಮಂಡಳೇಶ್ವರರಾಗಿ ಸಾಂತಳಿಗೆ ಸಾಯಿರದ ಭಾಗವನ್ನು ಆಳಿರುವುದು ಶಾಸನಗಳಲ್ಲಿ ತಿಳಿದುಬರುವ ವಿಷಯವಾಗಿದೆ. ಇವರ ಆಡಳಿತ ಪದ್ಧತಿಯು ಪ್ರಾಯಶಃ ತಮ್ಮ ಸಾಮ್ರಾಟರ ಆಡಳಿತ ಪದ್ಧತಿಯ ಸ್ವರೂಪದ್ದೇ ಆಗಿರಬಹುದೆಂದು ಊಹಿಸಲು ಅವಕಾಶವಿದೆ. ಹಾಗೆಯೇ ಅವರ ಕಾಲದ ಶಾಸನಗಳು ಅವರ ಆಡಳಿತ ಪದ್ಧತಿಯನ್ನು ಕುರಿತು ಯಾವುದೇ ನೇರವಾದ ಬೆಳಕನ್ನು ಬೀರಿಲ್ಲದಿರುವ ಕಾರಣ ಅವರ ಶಾಸನಗಳಲ್ಲಿ ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಗಿನಂತೆ ಅವರ ಆಡಳಿತ ಪದ್ಧತಿ ಇದ್ದಿರಬಹುದೆಂದು ತಿಳಿಯಲಾಗಿದೆ.

ಸಾಂತಳಿಗೆ ಸಾಯಿರವು ಒಂದು ಸಾವಿರ ಹಳ್ಳಿಗಳುಳ್ಳ ಆಡಳಿತ ಘಟಕವಾಗಿದ್ದು ಸುಮಾರು ೮ ರಿಂದ ೧೨ನೇ ಶತಮಾನದವರೆಗೂ ಸಾಂತರರ ಆಳ್ವಿಕೆಗೊಳಪಟ್ಟ ಪ್ರದೇಶವಾಗಿತ್ತು. ಈ ಸಾಂತಳಿಗೆ ಸಾಯಿರಕ್ಕೆ ಹೊಂಬುಜವು ರಾಜಧಾನಿಯಾಗಿತ್ತು. ಇಲ್ಲಿಂದಲೇ ಈ ಸಾಂತರ ರಾಜರು ಅದರ ರಾಜ್ಯದ ಆಡಳಿತವನ್ನು ನಿರ್ವಹಿಸುತ್ತಿದ್ದರು. ಈ ಸಾಂತಳಿಗೆ ಪ್ರದೇಶವನ್ನು ತಮ್ಮ ಸೀಮಿತ ಭೌಗೋಳಿಕ ವ್ಯಾಪ್ತಿಯಲ್ಲಿ ಅನೇಕ ನಾಡುಗಳನ್ನಾಗಿ ಆಡಳಿತ ದೃಷ್ಟಿಯಿಂದ ವಿಂಗಡಿಸಲಾಗಿತ್ತು. ಉದಾ: ರಾವನದೊಳಗಣ ನಾಡು, ಹೊಂಬುಜ ನಾಡು, ಕಲ್ಲೂರು ನಾಡು, ಕುಕ್ಕಸ ನಾಡು, ಬಲಕ ನಾಡು, ಎಡೆನಾಡು, ಜಂಬೂರು, ಜಿಡವಳ್ಳಿ ಮುಂತಾದವು. ಈ ಆಡಳಿತಕ್ಕೆ ನಾಗವುಂಡರನ್ನು ನೇಮಕ ಮಾಡಿರುವಂತೆ ತಿಳಿದು ಬರುತ್ತದೆ.

ನಾಡಿನ ನಂತರದಲ್ಲಿ ಬರುವ ಘಟಕಗಳನ್ನು ಊರು ಎಂದು ಕರೆಯುತ್ತಿದ್ದರು. ಈ ಪ್ರದೇಶದ ಸಾಮಾನ್ಯ ಆಡಳಿತವನ್ನು ಊರು ಗೌಡ ಅಥವಾ ಪೆರ್ಗಡೆಗಳು ನೋಡಿಕೊಳ್ಳುತ್ತಿದ್ದರು.

ಗ್ರಾಮ ಅಥವಾ ಹಳ್ಳಿಗಳು ಅವರ ಆಡಳಿತ ವ್ಯವಸ್ಥೆಯ ಅತ್ಯಂತ ಸಣ್ಣ ಘಟಕಗಳಾಗಿದ್ದವು. ಹಳ್ಳಿಯ ಆಡಳಿತವು ಹಳ್ಳಿಯ ಮಹಾಜನರು ಅಥವಾ ಗಾವುಂಡರ ಅಧೀನದಲ್ಲಿ ಇರುತ್ತಿತ್ತು.

ಒಟ್ಟಿನಲ್ಲಿ ಸಾಂತರರ ಕಾಲದ ಶಾಸನಗಳನ್ನು ಅಭ್ಯಸಿಸಿದಾಗ ಅನೇಕ ಅಧಿಕಾರಿ ವರ್ಗದವರ ಉಲ್ಲೇಖಗಳು ಕಂಡುಬರುತ್ತವೆ. ಅವು ಯಾವುವೆಂದರೆ ಸಂಧಿ ವಿಗ್ರಹಿ, ಸೇನಭೋವ, ದಂಡಾಧಿಪತಿ, ಸಚಿವಾಧಿಕಾರಿ, ಪಟ್ಟಸಾಹಣಿ, ಪೆರ್ಗಡೆ ಮುಂತಾದವು. ಅಂತೆಯೇ ಆಡಳಿತದ ಹಾಗೂ ಭೌಗೋಳಿಕ ನೆಲೆಗಳನ್ನು ಸುಭದ್ರವಾಗಿರಿಸಲು, ಸೈನ್ಯವು ಅತ್ಯಗತ್ಯವಾಗಿದ್ದು ಸಾಂತರರು ಸಹ ಕಾಲಾಳು, ಕುದುರೆ, ಆನೆಗಳಿಂದ ಕೂಡಿದ ಸೈನ್ಯವನ್ನು ಹೊಂದಿದ್ದರು.

ಆರ್ಥಿಕ ಪರಿಸ್ಥಿತಿ : ವ್ಯವಸಾಯ ಹಾಗೂ ವಾಣಿಜ್ಯ

ಸಾಂತರರು ಆಳ್ವಿಕೆ ಮಾಡಿದ ಸಾಂತಳಿಗೆ ಸಾಯಿರವು ಅತ್ಯಂತ ದಟ್ಟವಾದ ಮಲೆನಾಡು ಅರಣ್ಯ ಪ್ರದೇಶದ ಭಾಗವಾಗಿತ್ತು. ಈ ಪ್ರದೇಶದ ನೆಲ, ಜಲ, ಹಾಗೂ ಪರಿಸರದ ಮೇಲೆ ಬೆಳಕು ಬೀರುವಂತಹ ಒಂದು ಶಾಸನವು ದೊರೆತಿದೆ. ಇದು ಸಾಂತರರ ಕಾಲಕ್ಕೆ ಅಥವಾ ಅವರ ಆಳ್ವಿಕೆಯ ಕಾಲದಲ್ಲಿ ಹೊರಡಿಸಿದ ಶಾಸನವಲ್ಲ. ಇದು ಸಾಗರ ೧೫೯ನೇ ಶಾಸನ. ಇದರ ಕಾಲ ಸುಮಾರು ೧೧೫೯. ಹಾಗೆಯೇ ಸಾಗರ ೧೦೯ (ಇವರೆಡು ಎ.ಕ. ೮ ರಲ್ಲಿವೆ).

ಬಿಜ್ಜರಸ ಮಹಾಮಂಡಳೇಶ್ವರನ ತಮ್ಮನಾದ ಮಹಾಮಂಡಳೇಶ್ವರ ಗೋನರಸನು ಸಾಂತಳಿಗೆ ನಾಡನ್ನು ಅಂಧಾಸುರ ಪನ್ನೆರಡು ಕೋಟೆಯ ಬೀಡಿನಿಂದ ಆಳುತ್ತಿದ್ದ ಸಂದರ್ಭದಲ್ಲಿ ಈ ಶಾಸನಗಳು ರಚಿತವಾಗಿವೆ.

೧೧೫೯ರ ಶಾಸನದ ಮಧ್ಯಭಾಗದಲ್ಲಿ ಬರುವ ವಾಕ್ಯಗಳ ಸಾರಾಂಶ ಈ ರೀತಿಯಾಗಿದೆ. ಜಗತ್ತು ಎಂಬ ಹೆಂಗಸಿನ ನಗುಮುಖವೆಂಬ ಹಾಗೇ ಸಾಂತಳಿಗೆ ಸಾಸಿರ ನಾಡಿತ್ತು. ಕಿತ್ತಳೆ, ಬಾಳೆ, ತೆಂಗು ಫಲಗಳಿಂದ ಕೂಡಿದ ಈ ನಾಡನ್ನು (ಗೋನರಸ) ನೃಪನು ಪಡೆದನು. ಈ ನಾಡಿನ ಬೆಳೆಯನ್ನು ಹೇಳುವುದಾದಲ್ಲಿ ಕಬ್ಬು ಭತ್ತ, ವೀಳೆಯ, ಅಡಿಕೆ, ತೆಂಗು, ಮಾವು, ಮೆಣಸು, ಇವು ಮುಖ್ಯ ದೊಡ್ಡ ಬೆಳೆಗಳು. ಇದಲ್ಲದೆ ಕಾಡಿನಲ್ಲಿ ಕೋಡಿರುವ ಆನೆಗಳುಂಟು. ಅರಿಶಿನ, ಏಲಕ್ಕಿ, ಮುಡಿವಾಳ, ಲಾಮಂಚಾದಿ ಸುಗಂಧ ಬೀರುವ ಬೇರುಗಳು ಇಲ್ಲಿ ಬೆಳೆಯುತ್ತಿದ್ದು, ಈ ಪ್ರದೇಶದಲ್ಲಿ ಬರ ಎಂಬುದು ಸ್ವಲ್ಪವೂ ಇರಲಿಲ್ಲ. ಈ ನಾಡಿನಲ್ಲಿ ಮಳೆಗಾಲದಲ್ಲಿಯಲ್ಲದೇ ಉಳಿದ ಕಾಲದಲ್ಲಿ ಕೂಡ ಬೆಟ್ಟದ ಝರಿ ನೀರುಣಿಸುತ್ತದೆ ಎಂದ ಮೇಲೆ ಸಾಂತಳಿಗೆ ನಾಡಿನಲ್ಲಿ ಕ್ಷಾಮವಿಲ್ಲ. ಹಾಗೆಯೇ ಈ ಪ್ರದೇಶದಲ್ಲಿ ಕೇದಗೆ, ಸಂಪಿಗೆ, ಸುರಹೊನ್ನೆ, ಪಾದರಿ, ಬಕುಳ, ಲವಂಗ, ಜಾಜಿ, ಈ ಮೊದಲಾದ ಅನೇಕ ಬಗೆಯ ಹೂಗಳ ತೋಟಗಳು ಕಂಡುಬರುತ್ತದೆ.

ಹಾಗೆಯೇ ಸಾಂತಳಿಗೆ ನಾಡಿನಲ್ಲಿ ತಾಮರೆ ಕೊಳಗಳು ಕಂಡುಬರುತ್ತಿದ್ದವು. ಇಲ್ಲಿ ಪ್ರಣವ ಜೀಜಾಕ್ಷರ ಓಂಕಾರ ಪಠಣ, ವೇದಶಾಸ್ತ್ರ ಅಧ್ಯಯನಗಳಲ್ಲಿ ತೊಡಗಿಸಿಕೊಂಡ ಅನೇಕ ಬ್ರಾಹ್ಮಣರು ಇದ್ದರು. ಹೀಗೆ ಮುಂದುವರೆದು ಅನೇಕ ವಿಷಯಗಳನ್ನು ಚರ್ಚಿಸುತ್ತಾ ಈ ಶಾಸನವು ಸಾಂತಳಿಗೆ ನಾಡನ್ನು ಸುಂದರವಾಗಿ ವರ್ಣಿಸುತ್ತದೆ.

ಇಲ್ಲಿ ಹಬ್ಬಿಕೊಂಡು ಉದ್ದಕ್ಕೆ ಚಾಚಿಕೊಂಡ ಕಂಪು ತುಂಬಿದ ಭತ್ತದ ತೆನೆಗಳಿಗೆ ಹೆಚ್ಚಾಗಿ ಮುತ್ತಿ ಮುದ್ದಿಸುವ ದುಂಬಿಗಳ ತಂಡ, ತೆನೆಗಳನ್ನು ತಿನ್ನುತ್ತ ಕೂಗುವ ಕೋಗಿಲೆಗಳ ಗುಂಪು, ಹೂಬಿಟ್ಟ ಬಳ್ಳಿಗಳು, ಬಗೆಬಗೆಯ ಕಾಡು ಇವೆಲ್ಲ ಸೇರಿದ ಈ ಸಾಂತರ ನಾಡಿನೊಳಗೆ ಅನೇಕ ಅಗ್ರಹಾರ, ದೇವಾಲಯ, ಜಿನಗೇಹಗಳನ್ನು ಗೋನರಸನು ಕಟ್ಟಿಸಿದನು. ಹಾಗೂ ಇವನು ಇಟ್ಟಿಗೆಗಳನ್ನು ಬಳಸಿ ಕೆರೆಗಳನ್ನು ಕಟ್ಟಿಸಿದನೆಂದು ಸಹ ಶಾಸನಗಳು ತಿಳಿಸುತ್ತವೆ.

ಸಾಂತರರ ಕಾಲದಲ್ಲಿ ವ್ಯವಸಾಯದ ಹಾಗೂ ಇತರೆ ಅನುಕೂಲಗಳಿಗಾಗಿ ಆಗಿನ ಕಾಲದ ರಾಜರು, ಮಂತ್ರಿಗಳು, ವರ್ತಕರೂ, ಹಳ್ಳಿಯ ಮಹಾಜನಗಳು ಮುಂತಾದವರು ಅನೇಕ ಕೆರೆ ಕಾಲುವೆಗಳನ್ನು ತೋಡಿಸುತ್ತಿದ್ದುದರ ಅನೇಕ ಉಲ್ಲೇಖಗಳು ಶಾಸನಗಳಿಂದ ತಿಳಿದುಬರುತ್ತವೆ. ಉದಾ: ಚಾಗಿ ಸಾಂತರನು ಚಾಗಿ ಕೆರೆಯನ್ನು ಕಟ್ಟಿಸಿದನೆಂದು ಉಲ್ಲೇಖವಿದೆ.[10]ಈ ಸಾಂತರಸನ ಮಹಾಮಾತ್ಯನಾದ ಪೆರ್ಗಡೆ ಹುಳಿಯಮ್ಮನು ತಾಳಗುಂದದಲ್ಲಿ ಕೆರೆಯನ್ನು ಕಟ್ಟಿಸಿದ ಉಲ್ಲೇಖವಿದೆ.[11]

ಸಾಂತರರ ಕಾಲದಲ್ಲಿ ಪಂಚಬಸದಿಯ ನಿರ್ಮಾಣವನ್ನು ಕೈಗೊಂಡ ಚಟ್ಟಲದೇವಿಯು ಅನೇಕ ಕೆರೆ ಕಾಲುವೆಗಳನ್ನು ತೋಡಿಸಿದುದರ ಉಲ್ಲೇಖ ನಗರ-೩೫ನೇ ಶಾಸನದಲ್ಲಿ ಕಂಡುಬರುತ್ತದೆ.[12]

ಹಾಗೆಯೇ ವರ್ತಕರಲ್ಲಿ ಪ್ರಮುಖನಾದ ಪಟ್ಟಣ ಸ್ವಾಮಿ ನೊಕ್ಕಯ್ಯ ಶೆಟ್ಟಿ ಅನೇಕ ಕೆರೆಗಳನ್ನು ಕಟ್ಟಿಸಿ ಹಾಗೂ ಕೆಲವೊಂದು ಹಳೆಯ ಕೆರೆಗಳನ್ನು ದುರಸ್ತಿ ಮಾಡಿಸಿದುದರ ಉಲ್ಲೇಖ ಅನೇಕ ಶಾಸನಗಳಿಂದ ತಿಳಿದು ಬರುತ್ತದೆ. ಉದಾ: ಶಕ ವರುಷ ೯೮೪ರಲ್ಲಿ ಅವನು ತನ್ನ ರಾಜನಿಗೆ ನೂರು ಗದ್ಯಾಣ ಹೊನ್ನನ್ನು ಪಾದಪೂಜೆಯಾಗಿ ಸಲ್ಲಿಸಿ ವುಗುರೆ ಎಂಬ ಕೆರೆಯನ್ನು ಬಿಡಿಸಿ ಅದನ್ನು ಸಾವಳಂಗದ ಪಾಗಿಮಾದ ಕೆರೆಗೆ ಸೇರಿಸಿದ. ಹಾಗೆಯೇ ಇದೇ ಶಾಸನದಲ್ಲಿ ಶಾಂತಗೆರೆ, ಮೊಳಕೆರೆ, ಪಟ್ಟಣಸ್ವಾಮಿ ಕೆರೆಗಳನ್ನು ಕಟ್ಟಿಸಿದ ಉಲ್ಲೇಖವು ಕಂಡು ಬರುತ್ತದೆ.[13]

ಒಟ್ಟಿನಲ್ಲಿ ಇವರ ಆರ್ಥಿ ಕ ವ್ಯವಸ್ಥೆಯು ಪ್ರಮುಖವಾಗಿ ವ್ಯವಸಾಯೋತ್ಪನ್ನವನ್ನು ಆಧರಿಸಿತ್ತು. ಅರಣ್ಯ ಪ್ರದೇಶವನ್ನು ಕತ್ತರಿಸಿ ಹೊಸ ಜಾಗವನ್ನು ವ್ಯವಸಾಯ ಯೋಗ್ಯವನ್ನಾಗಿ ಪರಿವರ್ತಿಸುವುದು ಸುಲಭದ ಕೆಲಸವೇನಾಗಿರಲಿಲ್ಲ. ಆದರೂ ವ್ಯವಸಾಯಕ್ಕೆ ಹೆಚ್ಚಿನ ಗಮನವನ್ನು ನೀಡಲು ಹಾಗೂ ಪ್ರೋತ್ಸಾಹಿಸಲು ಹೊಸ ವ್ಯವಸಾಯ ಭೂಮಿಗಳ ಮೇಲೆ ಕೆಲವೊಂದು ಕಂದಾಯಗಳನ್ನು ಮನ್ನಾ ಮಾಡುತ್ತಿದ್ದುದನ್ನು ಶಾಸನಗಳು ಉಲ್ಲೇಖಿಸುತ್ತವೆ.

ಶಾಸನಗಳ ಆಧಾರದ ಮೇಲೆ ಭೂಮಿಯ ಅನೇಕ ವಿಧಗಳನ್ನು ತಿಳಿಯಲು ಸಹಾಯಕವಾಗಿದೆ. ಉದಾ: ಗದ್ದೆ, ಹೊಲ, ಬೆದ್ದಲು, ಕಾನು, ತೋಟ ಮುಂತಾದವು. ಅದರಲ್ಲೂ ಈ ಪ್ರದೇಶದಲ್ಲಿ ಭತ್ತ ಬೆಳೆಯುವ ಗದ್ದೆ, ಕಬ್ಬಿನತೋಟ, ಹೂವಿನ ತೋಟದ ಅನೇಕ ಉಲ್ಲೇಖಗಳು ಇವೆ.

ಆದರೆ ಭೂ ಮಾಪನದ ಬಗ್ಗೆ ಬೆಳಕನ್ನು ಚೆಲ್ಲುವಂತಹ ಯಾವುದೇ ನಿಖರವಾದ ವಿಷಯ ತಿಳಿದು ಬರುವುದಿಲ್ಲ. ಶಾಸನಗಳ ಆಧಾರದ ಮೇಲೆ ಭತ್ತವನ್ನು ಖಂಡುಗದಲ್ಲಿ ಅಳೆಯುತ್ತಿದ್ದರು ಎಂದು ತಿಳಿದು ಬರುತ್ತದೆ. ಅದರಂತೆ ಭೂಮಿಯನ್ನು ಕಂಬ, ಹಾಗೂ ಗಳೆಗಳೆಂಬ ಮಾಪನಗಳಿಂದ ಅಳೆದು ನಿಗಧಿಗೊಳಿಸುತ್ತಿದ್ದರು. ಮತ್ತರು, ಗಣಿಗನ ಮತ್ತರು ಮೊದಲಾದ ಹೊಲ ತೋಟಗಳ ವ್ಯಾಪ್ತಿಯನ್ನು ಸೂಚಿಸುವ ಪದಗಳ ಬಳಕೆಯೂ ಶಾಸನದಲ್ಲಿ ಇದೆ.

ಕಂದಾಯ ವ್ಯವಸ್ಥೆ

ಇವರ ಕಾಲದ ಕಂದಾಯ ವ್ಯವಸ್ಥೆಯನ್ನು ಅರಿಯಲು ನಾವು ಶಾಸನಗಳ ಮೊರೆ ಹೋಗಬೇಕಾಗಿದೆ. ಅಂತೆಯೇ ಅವರ ಶಾಸನಗಳಲ್ಲಿ ಕಂಡು ಬರುವ ಕೆಲವೊಂದು ತೆರಿಗೆಗಳ ಉಲ್ಲೇಖ ಈ ರೀತಿಯದಾಗಿದೆ. ದೇವಿದೆರೆ, ಅಡಿಗರ್ಚು, ಕಾಣಿಕೆ, ಸೇಸೆ, ಬೀಯ, ಬಿರ್ದು, ಕುಮಾರ ಗದ್ಯಾಣ, ಕಿರುದೆರೆ, ಕಿರುಕುಳಾಯ, ಸಾಮ್ಯ, ಸೆಲ್ಲೆ ಮೊದಲಾದವು.

ಈ ತೆರಿಗೆಗಳ ವಿವರಗಳು ನಮಗೆ ಅವರು ದೇವಲಾಯ ಅಥವಾ ಜಿನಾಲಯಗಳನ್ನು ಕಟ್ಟಿಸಿ ಅದಕ್ಕೆ ಮಾಡಿದ ಭೂದಾನಗಳಲ್ಲಿ ಅಥವಾ ನಾಡಿನ ರಕ್ಷಣೆಗಾಗಿ ಹೋರಾಡುತ್ತ ಮಡಿದ ವೀರರ ಕುಟುಂಬದವರಿಗಾಗಲೀ, ಅಥವಾ ಗೋಗ್ರಹಣವನ್ನು ತಪ್ಪಿಸುತ್ತ ಮಡಿದ ಶೂರರಿಗಾಗಿ ನೀಡಿದ ಭೂದಾನ ವಿವರಗಳಲ್ಲಿ ಸಿಗುತ್ತವೆ. ಈ ಮೇಲೆ ಹೇಳಿರುವ ಎಲ್ಲಾ ಅಥವಾ ಕೆಲವೊಂದು ತೆರಿಗೆಗಳನ್ನು ಮನ್ನಾ ಮಾಡಿರುವ ಉಲ್ಲೇಖಗಳು ಇಲ್ಲಿ ಕಂಡು ಬರುತ್ತದೆ.

ಉದಾಹರಣೆಗೆ ಪಂಚ ಬಸದಿಗೆ ಕೆಸರುಕಲ್ಲನ್ನು ಇಡಿಸಿದ ಚಟ್ಟಲದೇವಿ ಹಾಗೂ ಅವಳು ಸಾಕಿದ ನಾಲ್ವರು ರಾಜಕುಮಾರರು ಜೊತೆಗೂಡಿ ತಮ್ಮ ಗುರುಗಳಾದ ಕಮಳಭದ್ರ ದೇವರ ಕಾಲು ತೊಳೆದು ಮಾಡಿದ ದಾನದ ವಿವರ ಇಂತಿದೆ.

“ರಾವಣನಾಡೊಳಗಣ ಅಗ್ರಹಾರ, ಆನಂದೂರು, ಕಲ್ಲೂರು ನಾಡೊಳಗಣ ಆನೆಗೋಡು ಸಮೀಪದ ಮಡಂಬಹಳ್ಳಿಯು, ಪೊಂಬುಚ್ಚ ನಾಡೊಳಗಣ ಹಾಲಂದೂರು ಮುಂತಾದವನ್ನು ಬಸದಿಗಾಗಿ ದಾನ ಮಾಡಿ ಅದಕ್ಕೆ ದೇವಿದೆರೆ, ಅಡಿಗರ್ಚು ಕಾಣಿಕೆ, ಸೇಸೆ, ಬಿರ್ದು, ಬೀಯ ಮೊದಲಾಗೆ ಕುಮಾರ ಗದ್ಯಾಣ, ಕಿರುತೆರೆ ಕಿರುಕಳಾಯಂ ಸಾಮ್ಯಂ ಸೆಲ್ಗೆ ಮೊದಲಾದ ತೆರಿಗೆಗಳ ಸರ್ವಭಾದಾ ಪರಿಹಾರವನ್ನು ಮಾಡಿದರು.”[14]

ಆದರೆ ಇವರ ಕಾಲದ ವ್ಯಾಪಾರ ಹಾಗೂ ವಾಣಿಜ್ಯ ವ್ಯವಸ್ಥೆಯ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಸಾಂತಳಿಗೆ ಸಾಯಿರನಾಡು ಅತ್ಯಂತ ಪ್ರಮುಖ ವ್ಯಾಪಾರ ಕೇಂದ್ರವಾಗಿರಬಹುದೆಂದು ಊಹಿಸಲು ಅಡ್ಡಿಯಿಲ್ಲ. ಸಾಂತರರ ರಾಜಧಾನಿಯು ದಟ್ಟ ಮಲೆನಾಡಿನ ಪ್ರದೇಶದಲ್ಲಿ ಇದ್ದು, ಅದು ತನ್ನ ಸುತ್ತಮುತ್ತಲಿನ ಅನೇಕ ರಾಜಮನೆತನಗಳೊಂದಿಗೆ ಹಾಗೂ ಕರಾವಳಿಯ ರಾಜರುಗಳೊಂದಿಗೆ ವ್ಯಾಪಾರ ಮಾಡುತ್ತಿದ್ದಿರಬಹುದು. ಅಂತೆಯೇ ಅವರ ಶಾಸನಗಳಲ್ಲಿ ಕಂಡು ಬರುವ ಪ್ರಮುಖ ವರ್ತಕರ ಹಾಗೂ ಅವರು ಕಟ್ಟಿಸಿದ ಅನೇಕ ದೇವಾಲಯ, ಜಿನಗೇಹ, ಕೆರೆಗಳ ಉಲ್ಲೇಖವನ್ನು ಗಮನಿಸಿದಾಗ ಅವರುಗಳು ಶ್ರೀಮಂತ ವರ್ತಕರಾಗಿದ್ದರೆಂದು ತಿಳಿದು ಬರುತ್ತದೆ. ಉದಾ: ಪಟ್ಟಣ ಸ್ವಾಮಿ ನೊಕ್ಕಯ್ಯಶೆಟ್ಟಿ ಅವನ ಮಗನಾದ ಮಲ್ಲಿನಾಥ, ನಾಗಿಶೆಟ್ಟಿ, ಪಟ್ಟಣ ಸ್ವಾಮಿ ಹನುಮಂತಶೆಟ್ಟಿ ಮುಂತಾದವರು. ಆದರೆ ಸಾಂತರರ ಕಾಲದ ವ್ಯಾಪಾರ ಮಾರ್ಗಗಳನ್ನು ಕುರಿತು ಇನ್ನೂ ಹೆಚ್ಚಿನ ಸಂಶೋಧನೆಯನ್ನು ಮಾಡಬೇಕಾಗಿದೆ. ವ್ಯಾಪಾರಿ ಸರಕುಗಳಾಗಿ ಸಾಮಾನ್ಯವಾಗಿ ಅಲ್ಲಿ ಬೆಳೆಯುವ ಭತ್ತ, ಕಬ್ಬು, ಮೆಣಸು ಹಾಗೂ ಅರಣ್ಯದ ಉತ್ಪನ್ನಗಳು ಈ ಒಳನಾಡಿನಿಂದ ಹೊರನಾಡಿಗೆ ಹೋಗುತ್ತಿದ್ದವೆಂದು ಊಹಿಸಬೇಕಾಗಿದೆ. ಆದರೆ ಈಗಾಗಲೇ ತಿಳಿಸಿದಂತೆ ಈ ವಿಷಯಗಳ ಬಗ್ಗೆ ಯಾವುದೇ ಶಾಸನಗಳು ಹೆಚ್ಚಿನ ಬೆಳಕನ್ನು ಚೆಲ್ಲುವುದಿಲ್ಲ. ಅಂತೆಯೇ ಅವರ ಕಾಲದಲ್ಲಿ ಅವರದೇ ಆದ ಯಾವುದೇ ವಿಶೇಷ ನಾಣ್ಯ ಚಲಾವಣೆ ಕಂಡು ಬರುವುದಿಲ್ಲಿ. ಆದರೆ ಶಾಸನದಲ್ಲಿ ಪದೇ ಪದೇ ಗದ್ಯಾಣ, ಹೊನ್ನು ಎಂಬ ಉಲ್ಲೇಖಗಳು ಬರುತ್ತವೆ.

ಧರ್ಮ

ಸಾಂತರರು ತಮ್ಮ ಆಳ್ವಿಕೆಯ ಕಾಲದಲ್ಲಿ ಸಕಲ ಧರ್ಮಗಳಿಗೂ ಆಶ್ರಯದಾತರಾಗಿದ್ದುದು ಅವರ ಶಾಸನಗಳ ಅಧ್ಯಯನದಿಂದ ತಿಳಿದುಬರುತ್ತದೆ. ಅಂತೆಯೇ ತಮ್ಮ ಆಳ್ವಿಕೆಯ ಕಾಲದಲ್ಲಿ ರಾಜರು ಅನೇಕ ದೇವಾಲಯಗಳನ್ನು, ಬಸದಿಗಳನ್ನು ಕಟ್ಟಿಸಿರುವುದು ಹಾಗೂ ಈಗಾಗಲೇ ಇದ್ದ ದೇವಾಲಯಗಳ ಜೀರ್ಣೋದ್ಧಾರ ಮಾಡಿದುದರ ಉಲ್ಲೇಖಗಳು ನಮಗೆ ಸಿಗುತ್ತವೆ.

ಸಾಂತರರು ಮೂಲತಃ ಜೈನ ಮತಾವಲಂಬಿಗಳಾಗಿದ್ದರು. ನಂತರದಲ್ಲಿ ಅಂದರೆ ಸುಮಾರು ೧೨ನೇ ಶತಮಾನದಲ್ಲಿ ಶೈವ ಧರ್ಮಕ್ಕೆ ಮತಾಂತರ ಹೊಂದಿದ್ದರಂದು ಕೆಲವೊಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದರೂ ಸಹ ಇದರ ಬಗ್ಗೆ ಇನ್ನೂ ಚರ್ಚೆಗಳಿಗೆ ಅವಕಾಶಗಳಿವೆ.

ಸಾಂತರರು ಜೈನಧರ್ಮದ ಅಭ್ಯುದಯಕ್ಕೆ ಈ ಪ್ರಾಂತದಲ್ಲಿ ವಿಶೇಷವಾಗಿ ಶ್ರಮಿಸಿದ್ದು ಕಂಡುಬರುತ್ತದೆ. ಅವರ ಹೆಚ್ಚಿನ ಶಾಸನಗಳು ‘ಶ್ರೀ ಮತ್ಪರಮ ಗಂಭೀರ ಸ್ಯಾದ್ವಾದಾಮೋಘ ಲಾಂಛನಂ ಜೀಯಾ ತ್ರೈಳೋಕ್ಯನಾಥಸ್ಯ ಶಾಸನಂ ಜಿನಶಾಸನಂ’ ಎಂಬ ಜಿನಸ್ತುತಿಯ ಸಂಸ್ಕೃತ ಶ್ಲೋಕದಿಂದ ಆರಂಭವಾಗುವವು.

 

[1]ಅದೆ ನಗರ ೩೬

[2]ಅದೇ

[3]ಅದೇ ನಗರ ೩೫

[4]ಅದೇ ತೀರ್ಥಹಳ್ಳಿ ೧೯೨

[5]ನಾಗರಾಜಯ್ಯ ಹಂಪ ಸಾಂತರರು ಒಂದು ಅಧ್ಯಯನ, ಸಿದ್ಧಾಂತ ಕೀರ್ತಿ ಗ್ರಂಥ ಮಾಲೆ, ಹುಂಚಮಠ ಪು. ೭೭

[6]ಎ.ಕ. ಸಂ.೮ ಪು ೪೫

[7]ಮೈಸೂರು ಆರ್ಕಿಯಲಾಜಿಕಲ್ ರಿಪೋರ್ಟ್ ೧೯೩೦ ಶಾಸನ ಸಂಖ್ಯೆ ನಗರ ೬೩, ಪು. ೨೨೩

[8]ದೇಸಾಯಿ ದಿನಕರ ದಿ ಮಹಾಮಂಡಲೇಶ್ವರಾಸ್ ಆಫ್ ದಿ ಚಾಲುಕ್ಯಾಸ್ ಆಫ್ ಕಲ್ಯಾಣಿ ೧೯೫೧

[9]ಎ.ಕ. ಸಂ. ೮, ನಗರ ೬೬ ಕ್ರಿ.ಶ. ೧೧೨೫.

[10]ಅದೇ ಸಂ. ೮, ನಗರ ೩೫, ಪು ೨೫೯

[11]ಅದೆ ಸಂ. ೭ ಶಿಕಾರಿಪುರ ೧೯೪

[12]ಅದೇ ಸಂ. ೮ ನಗರ ೩೫

[13]ಅದೇ ಪು. ೩೭೮

[14]ಅದೇ ನಮರ ೩೫, ೩೬