ಗುತ್ತಿ ತನ್ನ ಕುಳ್ಳುಗಾಲುಗಳನ್ನೆ ಬೀಸಿ ಬೀಸಿ ಹಾಕುತ್ತಾ ಹೆದ್ದಾರಿಯಲ್ಲಿ ತುಸು ದೂರ ಹೋಗಿ ಪಕ್ಕನೆ ನಿಂತನು. ನೋಡುತ್ತಾನೆ ಕೋಣೂರಿಗೆ ಅಗಚುವ ಕಾಲುದಾರಿಯಿಂದ ಮುಂದೆ ನಡೆದು ಬಂದುಬಿಟ್ಟಿದ್ದಾನೆ! ‘ಹಾಳು ದಾರೀನಾ ಬಿಸಾಕ! ಇವತ್ತೇನಾಗದೆ ನನ್ನ ಕಾಲಿಗೆ?’ ಎಂದು ದಾರಿಯನ್ನೂ ತನ್ನ ಕಾಲ್ಗಳನ್ನೂ ಶಪಿಸುತ್ತಾ ಮತ್ತೆ ಹಿಂತಿರುಗಿ ನಡೆದು ಕೋಣೂರಿಗೆ ಹೋಗುವ ಕಾಲುದಾರಿ ಸೇರಿದನು. ಅವನ ನಾಯಿ ಅವನ ಹಿಂದೆ ಮುಂದೆ ಅತ್ತ ಇತ್ತ ಸುತ್ತಲೂ ಹಳುವಿನಲ್ಲಿ ನೆಲ ಮೂಸುತ್ತಾ, ಅಡ್ಡಾಡುತ್ತಾ, ಕಂಡ ಕಂಡ ಗಿಡದ ಬುಡದಲ್ಲಿ, ಹುತ್ತದ ಮೇಲೆ, ಎದ್ದುಕಾಣುವ ಕಲ್ಲುಗುಂಡುಗಳ ಮೇಲೆ ಆಗಾಗ್ಗೆ ನಿಂತು ಕಾಲೆತ್ತಿ ಪ್ರೋಕ್ಷಣೆ ಮಾಡುತ್ತಾ ಒಡೆಯನನ್ನು ಹಿಂಬಾಲಿಸುತ್ತಿತ್ತು.

ಗುತ್ತಿ ಮತ್ತೆ ಅಂತರ್ಮುಖಿಯಾಗಿ ತನ್ನ ಆಲೋಚನೆಗಳಲ್ಲಿಯೆ ಮಗ್ನನಾಗಿ ಅಭ್ಯಾಸ ಬಲದಿಂದಲೆಂಬಂತೆ ನೋಡುತ್ತಿದ್ದರೂ ಯಾವುದನ್ನೂ ಗಮನಿಸದೆ ಕಾಲುಹಾಕುತ್ತಿದ್ದನು. ಅವನು ನಡೆಯುತ್ತಿದ್ದ ದಾರಿಯ ಕಾಡು ಮೊದಮೊದಲು ತುಸು ಹೆದ್ದಳಕಲಾಗಿ ಅಷ್ಟೇನೂ ನಿಬಿಡವಾಗಿರಲಿಲ್ಲ. ಹಿಂದಿನ ರಾತ್ರಿ ಹೊಡೆದ ಮಳೆಯಲ್ಲಿ ಮಿಂದು ತೊಳೆದಂತಿದ್ದ ಪೊದೆ ಮರಗಳ ಹಸುರು, ದನಬಿಡುವ ಆ ಹೊತ್ತಿನಲ್ಲಿ ಬಿಸಿಲಿನಲ್ಲಿ, ತಂಪಾಗಿ ಮಿರುಗುತ್ತಿದ್ದುವು. ಆದರೆ ಗುತ್ತಿ ಎಂದಿನಂತೆ ಕಾಡಿನ, ಹಕ್ಕಿಯ, ಮಿಗದ ಸೊಬಗನ್ನಾಗಲಿ ವ್ಯಾಪಾರವನ್ನಾಗಲಿ ಲಕ್ಷಿಸುವ ಮನಃಸ್ಥಿತಿಯಲ್ಲಿರಲಿಲ್ಲ. ಪಿಕಳಾರಗಳ ಸಿಳ್ಳುಲಿಯಾಗಲಿ ಹೊರಸಲು ಹಕ್ಕಿಗಳ ಗುಬ್ಬಳಿಕೆಗಳಾಗಲಿ ಮರಕುಟಿಕನ ಕೊಟಾ ಕೊಟಾ ಸದ್ದಾಗಲಿ ಕಡೆಗೆ ಕಾಡುಕೋಳಿ ಹುಂಜನ ನಿಡುನೀಳ್ದ ಕೇಕೆಯಾಗಲಿ ಅವನ ಕಿವಿಗೆ ಬೀಳುತ್ತಿದ್ದರೂ ಅವನಿಗೆ ಕೇಳಿಸುತ್ತಿರಲಿಲ್ಲ; ಕಣ್ಣಿಗೆ ಬಿದ್ದರೂ ಕಾಣಿಸುತ್ತಿರಲಿಲ್ಲ.

ಬರಬರುತ್ತಾ ಮೇಲೆ  ಏರತೊಡಗಿತು. ಕಾಡು ದಟ್ಟವಾಯಿತು. ಹಕ್ಕಿಪಕ್ಷಿಗಳ ಹಾರಾಟವೂ ಉಲಿಹವೂ ವಿರಳವಾಗಿ ಕಡೆ ಕಡೆಗೆ ನಿಂತೆ ಹೋಯಿತು. ಆ ಅರಣ್ಯನಿಬಿಡತೆಯಲ್ಲಿ ಬಿಸಿಲೂ ಅಡಗಿದಂತಾಗಿ ಮರಗತ್ತಲು ಹೆಚ್ಚಾಯಿತು. ಅವನು ಕಾಡು ಭಯಂಕರವಾಗಿದ್ದ ಆ ಹುಲಿಕಲ್ಲು ಗುಡ್ಡವನ್ನೇರಿ ಇಳಿದರೆ ಆ ಕಡೆಯ ಕಣಿವೆಯಲ್ಲಿ ಕೋಣೂರ ರಂಗಪ್ಪಗೌಡರ ಮನೆ ಗದ್ದೆ ತೋಟ ಸಿಗುತ್ತಿತ್ತು.

ಆ ‘ಹುಲಿಕಲ್ಲು’ ಗುಡ್ಡದ ಕಾಡು ಆ ಕಡೆಯಲ್ಲೆಲ್ಲ ಅತ್ಯಂತ ದಡ್ಡವಾದುದೆಂದೂ ಜೀವಾದಿಗಳಿಗೆ ನೆಲೆಬೀಡೆಂದೂ ಹೆಸರುವಾಸಿಯಾಗಿತ್ತು. ಅದರ ಕಡಿಪೂ ನಿಬಿಡತೆಯೂ ಎಷ್ಟರಮಟ್ಟಿನದಾಗಿತ್ತೆಂದರೆ ‘ದೊಡ್ಡಬೇಟೆ’ಗೆ ಹೋಗುವವರು ಆ ಕಾಡಿಗೆ ಹೋಗಲು ಹಿಂಜರಿಯುತ್ತಿದ್ದರು. ಕಡಿದಾದ ದರಿಕಂದರಗಳಿಂದ ದುರ್ಗಮವಾಗಿದ್ದ ಅದನ್ನು  ಸೋವಲು ಹಳುನುಗ್ಗಲಿಕ್ಕೇ ಕನಿಷ್ಠ ಪಕ್ಷ ನೂರು ನೂರೈವತ್ತು ಜನರಾದರೂ ಬೇಕಾಗುತ್ತಿತ್ತು. ಇನ್ನಿ ಬಿಲ್ಲಿಗೆ ಕೂರಲು ಕಡಮೆ ಎಂದರೆ ಐವತ್ತು ಅರವತ್ತು ಕೋವಿಗಾರರಾದರೂ ಬೇಕಿತ್ತು. ಎಲ್ಲಿಂದ ತರುವುದು ಅಷ್ಟು ಕೋವಿಗಳನ್ನು? ಆ ನಾಡಿನಲ್ಲೆಲ್ಲ ಕೇಪಿನ ಕೋವಿ ಇಟ್ಟುಕೊಂಡವರ ಸಂಖ್ಯೆಯೆ ಬೆರಳೆಣಿಸುವಷ್ಟಿತ್ತು. ಇನ್ನುಳಿದ ಕಂಡಿಗಳಿಗೆ ಹಂದಿಬಲೆ ಮಿಗದ ಬಲೆ ಮೊಲದ ಬಲೆಗಳೆ ಗತಿ! ಅದಕ್ಕಾಗಿಯೆ ವರುಷಕ್ಕೊಮ್ಮೆಯೊ ಎರಡು ವರುಷಕ್ಕೊಮ್ಮೆಯೊ ಹುಲಿಕಲ್ಲು ಕಾಡಿಗೆ ‘ದೊಡ್ಡಬೇಟೆ’ಗೆ ಬಂದರೆ ಅದೇ ಹೆಚ್ಚು. ಬೆಟ್ಟಳ್ಳಿ ಸೇರೆಗಾರರು ಹಳೆಮನೆ ಸೇರೆಗಾರರು ತಮ್ಮ ಕಡೆಯ ಆಳುಗಳಿಗೆಲ್ಲ ಒಂದು ದಿನ ಉಳಿ ಕೊಟ್ಟು, ಅವರಿಗೆಲ್ಲ ಧೈರ್ಯ ಹೇಳಿ, ಹಳು ಹೊಡೆಯಲು ಕಳಿಸುತ್ತಿದ್ದರು. ಕೋಣೂರಿನ ಗಟ್ಟದ ತಗ್ಗಿನವರ ಬಿಡಾರಗಳಿಂದಲೂ ಸ್ವಲ್ಪ ಹಳುವಿನವರು ಒದಗುತ್ತಿದ್ದರು. ಇನ್ನು ಬೇಲರು, ಹೊಲೆಯರು, ಮಾದಿಗರು, ಕರಾದಿಯವರೂ ಆ ಸಾಹಸದಲ್ಲಿ ಭಾಗಿಯಾಗುತ್ತಿದ್ದರು. ಅಂತಹ ಸಮಯಗಳಲ್ಲಿ ಅನೇಕರಲ್ಲಿ ಜೀವದಾಸೆಯನ್ನು ಗೆಲ್ಲುತ್ತಿತ್ತು ಬಾಡಿನಾಸೆ; ಕೆಲವರು ಬೇಟೆಯ ಸಾಹಸದ ಹುಚ್ಚಿನಿಂದಲೂ ಬಂದು ಸೇರುತ್ತಿದ್ದರು. ಬತ್ತಿಕೋವಿ, ಭರ್ಜಿ, ಈಟಿ, ಉದ್ದಗತ್ತಿ, ಬಿಲ್ಲುಬಾಣಗಳ ಸಾಹಸಿಗಳೂ ಅಲ್ಪಸ್ವಲ್ಪ ಇರುತ್ತಿದ್ದರು. ಕನ್ನಡ ಜಿಲ್ಲೆಯಿಂದ ದುಡಿಮೆಗಾಗಿ ಬಂದ ಗಟ್ಟದ ತಗ್ಗಿನವರಂತೂ ತಮ್ಮ ಮಕ್ಕಳನ್ನು ಹೆದರಿಸಿ ಸುಮ್ಮನಿರುವುಸುದಕ್ಕೂ ಆ ‘ಹುಲಿಮಲೆ’ಯ ಹೆಸರನ್ನೆ ಹೆಚ್ಚಾಗಿ ಬಳಸುತ್ತಿದ್ದರು!

ಗುತ್ತಿ ‘ಬೆತ್ತದ ಸರ’ದ ಹತ್ತಿರಕ್ಕೆ ಬಂದಿದ್ದನು. ಅವನು ಹೋಗುತ್ತಿದ್ದ ಕಾಲುದಾರಿಯ ಬಲಪಕ್ಕದ ಇಳಿಜಾರಿನ ತುದಿಯೆ ‘ಬೆತ್ತದ ಸರ.’ ಬೆತ್ತದ ಹಿಂಡಿಲು, ವಾಟೆಯ ಹಿಂಡಿಲು, ಬಿದಿರ ಹಿಂಡಿಲು, ಗುರಗಿ ಹಳು ಎಲ್ಲ ಕಿಕ್ಕಿರಿದು ಬೆಳೆದಿದ್ದು, ಯಾವಾಗಲೂ ಸರಲು ನೀರು ಹರಿಯುತ್ತಿದ್ದ ತಾಣ. ಒಂದೊಂದು ಕಡೆ ಹಳುವಿನ ಸಾಂದ್ರತೆ ಪರಮಾವಧಿ ಮುಟ್ಟಿದಂತಿತ್ತು.

ಇದ್ದಕ್ಕಿದ್ದ ಹಾಗೆ ಗುತ್ತಿಯ ಅಂತರ್ಮುಖತೆಯನ್ನು ಹರಿದು ಸೀಳುವಂತೆ ಹುಲಿಯ ಬೊಗಳತೊಡಗಿತು. ಗುತ್ತಿ ತಟಕ್ಕನೆ ಎಚ್ಚತ್ತು ಸೆಟೆದು ನಿಂತು ಆಲಿಸಿದನು; ಸುತ್ತಲೂ ಕಣ್ಣಟ್ಟಿ ನೋಡಿದನು. ಆದರೆ ನಾಯಿ ಕಾಣಲಿಲ್ಲ. ಅದರ ಕರ್ಕಶವಾದ ತೀವ್ರವಾದ ಬೊಗಳು ಮಾತ್ರ ಹೊಡೆದೆಬ್ಬಿಸುವಂತೆ ಕೇಳುತ್ತಿತ್ತು. ಹುಲಿ ಕಾಡುಹಂದಿಯಂತಹ ದೊಡ್ಡ ಪ್ರಾಣಿಗಳನ್ನು ತಡೆದು ನಿಲ್ಲಿಸಿದಾಗ ಮಾತ್ರ ನಾಯಿಗಳು ಹಾಗೆ ಬೊಗಳುವುದು. ಹೆದರಿ ಓಡಿಹೋಗುವ ಮಿಗ ಬರ್ಕ ಮೊಲ ಇಂತಹ ಪ್ರಾಣಿಗಳನ್ನು ಕಂಡಾಗ ಕಂಯ್‌ ಕಂಯ್ ಕಂಯ್ ಎಂದು ಕೂಗುತ್ತಾ ಅಟ್ಟುತ್ತವೆ; ಸದ್ದೂ ಬರಬರುತ್ತಾ ದೂರವಾಗುತ್ತದೆ. ಆದರೆ ದೊಡ್ಡ ‘ಜೀವಾದಿ’ಗಳು ಹಾಗಲ್ಲ. ಒಡನೆಯೆ ಹೆದರಿ ಓಡುವುದಿಲ್ಲ ಮಲೆತೂ ನಿಲ್ಲುತ್ತವೆ. ಆಗ ಹುಲಿಯನಂತಹ ದೊಡ್ಡ ಬೇಟೆನಾಯಿಗಳು ಬೊವ್ ಬೊವ್ ವವ್ವವೌ ಎಂದು ಹೆದ್ದನಿಯಲ್ಲಿ ಕೂಗುತ್ತವೆ, ಒಂದೇ ಕಡೆ ನಿಂತು.

ಈ ಸೂಕ್ಷ್ಮವನ್ನೆಲ್ಲ ಅನುಭವದಿಂದ ಚೆನ್ನಾಗಿ ಅರಿತಿದ್ದ ಗುತ್ತಿ, ಹುಲಿಯ ಒಂಟಿಗ ಹಂದಿಯನ್ನೊ ಹುಲಿಯನ್ನೊ ಕಂಡೇ ಬೊಗಳುತ್ತಿದೆ ಎಂದು ನಿಶ್ಚಯಿಸಿದ. ಆದರೆ ಆ ದಟ್ಟವಾದ ಹಳುವಿನಲ್ಲಿ ಸದ್ದು ಯಾವ ದಿಕ್ಕಿನಿಂದ ಬರುತ್ತದೆ ಎಂದು ಸುಲಭವಾಗಿ ಗೊತ್ತಾಗುತ್ತಿರಲಿಲ್ಲ. ಅಂತೂ ದಾರಿಯಿಂದ ಕೆಳಗಡೆಯ ಬೊಗಳುತ್ತಿದೆ ಎಂದು ಅಂದಾಜು ಮಾಡಿ ಆ ಕಡೆಗೆ ಹಳುವಿನಲ್ಲಿ ನುಗ್ಗಿದ. ಅವನು ಹಾಗೆ ನುಗ್ಗಿದುದರ ಉದ್ದೇಶ ನಾಯಿಯ ರಕ್ಷಣೆಯಾಗಿತ್ತೆ ಹೊರತು ಪ್ರಾಣಿಯ ಬೇಟೆಯಾಗಿರಲಿಲ್ಲ. ಬೇಟೆಯಾಡುವುದಕ್ಕೆ ಗುತ್ತಿಯ ಕೈಲಿ ಕೋವಿಯಿತ್ತೇ? ಕತ್ತಿಯಿತ್ತೇ? ಭರ್ಜಿಯಿತ್ತೇ? ಕಡೆಗೊಂದು ಹಕ್ಕಿ ಹೊಡೆಯುವ ಚಿಟ್ಟು ಬಿಲ್ಲಾದರೂ ಇತ್ತೇ? ಕೆಚ್ಚೆದೆಯ ಹುಲಿಯ ಎಲ್ಲಿಯಾದರೂ ಒಂಟಿಗ ಹಂದಿಯ ಮೇಲೆಯೊ ಬೀಳಲು ಹೋಗಿ ತನ್ನ ಪ್ರಾಣಕ್ಕೆ ಹಾನಿ ತಂದುಕೊಂಡೀತು ಎಂದು ಹೆದರಿ ಅದನ್ನು ಅಪಾಯದಿಂದ ತಪ್ಪಿಸುವ ಸಲುವಾಗಿ ಹಿಂದಕ್ಕೆ ಕರೆಯಲೆಂದೇ ಅವನು ‘ಹುಲಿಯಾ! ಹುಲಿಯಾ! ಬಾ ಹುಲಿಯಾ! ಕ್ರೂ! ಕ್ರೂ!’ ಎಂದು ಕೂಗುತ್ತಾ ನುಗ್ಗಿ ಬೊಗಳು ಸದ್ದಿನ ಕಡೆಗೆ ಓಡಿದನು.

ಹೋಗಿ ನೋಡುತ್ತಾನೆ: ನಾಯಿಯೇನೊ ಒಂದೇ ದಿಕ್ಕಿಗೆ ನೋಡಿ ನೋಡಿ ಬೊಗಳುತ್ತಿದೆ. ಆದರೆ ಆ ದಿಕ್ಕಿನಲ್ಲಿ ಯಾವ ಜಂತುವೂ ಗುತ್ತಿಗೆ ಕಾಣಿಸುತ್ತಿಲ್ಲ. ಹಂದಿ ಹುಲಿ ಯಾವುದಾಗಿದ್ದರೂ ಗುತ್ತಿ ಹಾಗೆ ಬೊಬ್ಬೆಯಿಡುತ್ತಾ ಹತ್ತಿರಕ್ಕೆ ಬಂದಾಗ ಅಲ್ಲಿ ಎಂದಿಗೂ ನಿಲ್ಲುತ್ತಿರಲಿಲ್ಲ. ಒಂದು ವೇಳೆ ನಿಂತಿದ್ದ ಪ್ರಾಣಿ ಓಡಿಹೋಗಿದ್ದರೆ ನಾಯಿ ಅಟ್ಟದೆ ಬಿಡುತ್ತಲೂ ಇರಲಿಲ್ಲ. ಕಾಡು, ಬೇಟೆ, ಪ್ರಾಣಿಗಳ ವಿಚಾರದಲ್ಲಿ ಅನುಭವಶಾಲಿಯಾಗಿದ್ದ ಗುತ್ತಿ ನೆಲದ ಕಡೆ ನೋಡುವುದನ್ನು ಬಿಟ್ಟು, ತಲೆಯೆತ್ತಿ ದಟ್ಟೈಸಿದ್ದ ಮರಗಳ ಮೇಲೆ ನೋಡತೊಡಗಿದನು, ಕಬ್ಬೆಕ್ಕು ಎಲ್ಲಿಯಾದರೂ ಮೇಲೆ ಹತ್ತಿ ಕುಳಿತಿದೆಯೋ, ಅಥವಾ ಮುಸಿಯ ಮರದೆಲೆಗಳ ನಡುವೆ ಅಡಗಿದೆಯೋ ಎಂದು. ಹಾಗೆ ಕತ್ತೆತ್ತಿ  ಮೇಲೆ ನೋಡುತ್ತಲೆ ಮುಂದುವರಿಯುತ್ತಿರುವುದನ್ನು ನೋಡಿ ಹುಲಿಯ ಇನ್ನೂ ರಭಸದಿಂದ ಬೊಗಳತೊಡಗಿತು. ಮತ್ತು, ಅವನನ್ನೇ ತಡೆಯುವಂತೆ ಅಡ್ಡಬರತೊಡಗಿತು. ಗುತ್ತಿ ನೋಡುತ್ತಾನೆ, ನಾಯಿ ತುಸುದೂರವೆ ಹಳುವಿನಲ್ಲಿ ಬಿದ್ದಿರುವ ಒಂದು ಮರದ ದಿಮ್ಮಿಯ ಕಡೆ ನೋಡಿ ಬೊಗಳುತ್ತಿದೆ! ಹಾಗಾದರೆ ಆ ದಿಮ್ಮಿಯ ಹತ್ತಿರ ಯವುದಾದರೂ ಕಾಳಿಂಗನ ಹಾವೊ ಸರ್ಪನ ಹಾವೊ ಇರಬಹುದುದೆಂದು ಗುತ್ತಿ ನೆಲವನ್ನು ಪರೀಕ್ಷಿಸುತ್ತಾ ಮುಂದುವರಿಯುವಷ್ಟರಲ್ಲಿ ನಾಯಿ ಬೊಗಳಿ ಬೊಗಳಿ ಹಾರಿ ನೆಗೆದು ಆ ದಿಮ್ಮಿಯನ್ನು ಕಚ್ಚಿಬಿಟ್ಟಿತು! ಅಯ್ಯಯ್ಯೊ! ನೋಡುತ್ತಾನೆ: ಆ ದಿಮ್ಮಿಯೆ ಜೀವಂತ ಹೆಬ್ಬಾವು! ಚಲಿಸುತ್ತಿಲ್ಲ. ಮ ಲವೊ ಬರ್ಕವೊ ಅಥವಾ ಇನ್ನಾವ ಪ್ರಾಣಿಯನ್ನೊ ಇಡೀಯೆ ನುಂಗಿ ನಿಶ್ಚಲವಾಗಿ ಬಿದ್ದಿದೆ! ಅದರ ತಲೆ ಎಲ್ಲಿದೆಯೋ ಬಾಲವೆತ್ತಕಡೆಯೋ ಅದೂ ಗೊತ್ತಾಗುತ್ತಿರಲಿಲ್ಲ ಆ ಹಳುವಿನಲ್ಲಿ!

ಕೈಯಲ್ಲಿ ಬಗನಿದೊಣ್ಣೆ ವಿನಾ ಬೇರೆಯೇನೂ ಆಯುಧವಿಲ್ಲದ ಗುತ್ತಿ, ಇನ್ನೇನು ಒಂದು ಹೆಜ್ಜೆ ಮುಂದಿಟ್ಟಿದ್ದರೆ ಹೆಬ್ಬಾವಿನ ಮೈಮೇಲೆಯೆ ಕಾಲಿಡುತ್ತಿದ್ದವನು, ಸತ್ತೆನೊ ಕೆಟ್ಟೆನೊ ಎಂದು ಚಂಗನೆ ಹಿಂದಕ್ಕೆ ನೆಗೆದು, ದೂರ ಓಡಿ ನಿಂತು, ದೀರ್ಘವಾಗಿ ಉಸಿರುಬಿಡತೊಡಗಿದನು. ಹುಲಿಯನನ್ನು ತನ್ನ ಹತ್ತಿರಕ್ಕೆ ಹೆದರಿಸಿ ಕರೆಯತೊಡಗಿದನು. ತನ್ನ ಹತ್ತಿರವಿದ್ದ ಬಹನಿದೊಣ್ಣೆಯಿಂದ ಆ ಹೆಬ್ಬಾವಿಗೆ ತಾನು ಏನನ್ನೂ ಮಾಡಲಾರೆನೆಂದು ಗುತ್ತಿಗೆ ಗೊತ್ತಿತ್ತು. ಕೋವಿ ಇದ್ದಿದ್ದರೂ ಒಂದೆರಡು ಗುಂಡುಗಳಿಂದ ಏನೂ ಪ್ರಯೋಜನವಾಗುತ್ತಿರಲಿಲ್ಲ. ಹೀಗಿರುವಾಗ ನಾಯಿಯನ್ನು ಹೇಗಾದರೂ ತನ್ನ ಹತ್ತಿರಕ್ಕೆ ಕರೆದು, ಹಿಡಿದು, ಸುರಕ್ಷತೆಗೆ ಕೊಂಡೊಯ್ಯುವುದೊಂದೆ ದಾರಿಯಾಗಿತ್ತು ಅವನಿಗೆ.

ಬೇಗಬೇಗನೆ ಒಂದು ಬಳ್ಳಿಯನ್ನು ಉಗಿದು, ಅದರ ಎರಡು ಮೂರು ಎಳೆಯನ್ನು ಉಡಿದು ಹಗ್ಗಮಾಡಿದನು. ಅವನು ಕರೆದಂತೆಲ್ಲ ಹತ್ತಿರಕ್ಕೆ ಬಂದೂ ಮತ್ತೆ ಮತ್ತೆ ಹಾವಿನ ಬಳಿಗೆ ನುಗ್ಗುತ್ತಿದ್ದ ಹುಲಿಯನನ್ನು ಒಮ್ಮೆ ಹತ್ತಿರ ಬಂದಾಗ ಎರಡು ಕೈಯಿಂದಲೂ ಅಮರಿಹಿಡಿದು, ಕೊರಳಿಗೆ ಬಳ್ಳಿಹಗ್ಗವನ್ನು ಬಿಗಿದು, ಬರಲೊಲ್ಲದೆ ಜಗ್ಗಿ ಜಗ್ಗಿ, ಎಳೆದು ಬೊಗಳುತ್ತಿದ್ದ ಅದನ್ನು ಜಗ್ಗಿಸಿ ಎಳೆಯುತ್ತಾ ಅಲ್ಲಿಂದ ಆದಷ್ಟು ಬೇಗನೆ ಕಾಲುಕಿತ್ತು ದಾರಿಗೆ ಸೇರಿಕೊಂಡನು. ಮೈ ಬೆವರುತ್ತಿತ್ತು, ತಕ್ಕಮಟ್ಟಿಗೆ!

ಗುತ್ತಿ ಸ್ವಲ್ಪ ದೂರ ಮುಂದುವರಿದಿದ್ದನು. ಬಳ್ಳಿಹಗ್ಗದಲ್ಲಿ ಕಟ್ಟಿ ಹಿಡಿದುಕೊಂಡಿದ್ದ ಹುಲಿಯ ಅವನ ಮಗ್ಗುಲಲ್ಲಿಯೆ ಅತ್ತಿತ್ತ ನೋಡುತ್ತಾ, ಕಿವಿನಿಮಿರಿ ಆಲಿಸುತ್ತಾ, ನೆಲವನ್ನು ಮೂಸುತ್ತಾ, ಒಮ್ಮೆ ಹಿಂದೆ ಬಿದ್ದು ಒಮ್ಮೆ ಮುಂದೆ ಹೋಗಿ, ಜೋಲುನಾಲಗೆಯಿಂದ ಜೊಲ್ಲು ಸುರಿಸುತ್ತ ನಡೆಯುತ್ತಿತ್ತು. ಇದ್ದಕ್ಕಿದ್ದ ಹಾಗೆ ನಾಯಿ ಮುಂದಕ್ಕೆ ದೃಷ್ಟಿಯಟ್ಟಿ ಸಣ್ಣಗೆ ಬೊಗಳಿತು. ದಟ್ಟಕಾಡಿನ ಅಂಕುಡೊಂಕು ಕಾಲುದಾರಿಯಲ್ಲಿ ಬಹುದೂರ ನೋಡಲೂ ಸಾಧ್ಯವಿರಲಿಲ್ಲ. ಕಾಣುತ್ತಿತ್ತ ದಾರಿಯಷ್ಟರಲ್ಲಿ ಗುತ್ತಿಗೆ ಏನೂ ಕಾಣಿಸಲಿಲ್ಲ. ಆದರೆ ನಾಯಿಗೆ ವಾಸನೆಯೊ ಸದ್ದೊ ಯಾವುದೊ ಗೊತ್ತಾದಂತೆ ತೋರಿತು. ಗುತ್ತಿ ಬಿರುಬಿರನೆ ಕಾಲು ಹಾಕಿದ. ಸ್ವಲ್ಪ ದೂರ ಮುಂಬರಿಯುವುದರಲ್ಲಿ ಯಾರೊ ಇಬ್ಬರು ಹೆಂಗಸರು ಹೋಗುತ್ತಿದ್ದುದು ಕಾಣಿಸಿತು. ಹಳುವಿನ ನಡುವೆ ಇಕ್ಕಟ್ಟಾದ ಕಾಲುದಾರಿಯಲ್ಲಿ ಒಬ್ಬರ ಹಿಂದೆ ಒಬ್ಬರು ಹೋಗುತ್ತಿದ್ದುದರಿಂದ ಗುತ್ತಿಗೆ ಸರಿಯಾಗಿ ಕಾಣಿಸಿದ್ದು ಹಿಂದೆ ಹೋಗುತ್ತಿದ್ದವರು ಮಾತ್ರ.

ಕೊರಳಿಗೆ ಕಟ್ಟಿದ ವಲ್ಲಿ ಬೆನ್ನಿನ ಮೇಲೆ ಸೊಂಟದವರೆಗೂ ಬಿದ್ದಿದ್ದುದನ್ನೂ ಸ್ವಲ್ಪ ಗಿಡ್ಡಾಗಿಯೆ ಉಟ್ಟಿದ ಗೊಬ್ಬೆಸೀರೆ ಹರಡಿನ ಮೇಲಿದ್ದುದನ್ನೂ ಗಮನಿಸಿ ‘ಯಾರೊ ಹೆಗ್ಗಡಿತಮ್ಮನವರು!’ ಎಂದುಕೊಂಡನು. ಗುತ್ತಿ ಮನಸ್ಸಿನಲ್ಲಿಯೆ, ‘ಇಷ್ಟು ಹೊತಾರೆ ನೆಂಟರಮನೆಗೆ ಹೊರಟಾರಲ್ಲಪ್ಪಾ! ಇಬ್ರೆ ಹೆಂಗಸ್ರು! ಗಟ್ಟಿ ಗುಂಡಿಗೇರಿರಬೇಕು! ಈ ಹುಲಿಕಲ್ಲು ಗುಡ್ಡದ ಕಾಡಿನಗೆ!’

ನಾಯಿ ಬೊಗಳಿದ ಸದ್ದುಕೇಳಿ ಹಿಂದೆ ಹೋಗುತ್ತಿದ್ದ ಸ್ತ್ರೀ ವ್ಯಕ್ತಿ ನಿಂತು ತಿರುಗಿ ನೋಡಿದಳು. ಮುಂದೆ ಹೋಗುತ್ತಿದ್ದಾಕೆ ಯಾವುದನ್ನೂ ಗಮನಿಸದವಂತೆ ಮುಂಬರಿಯುತ್ತಲೆ ಇದ್ದಳು.

ಹಿಂದೆ ಹೋಗುತ್ತಿದ್ದ ಸ್ತ್ರಿವ್ಯಕ್ತಿ ನಿಂತು ತನ್ನ ಕಡೆಗೆ ತಿರುಗಿದೊಡನೆಯೆ, ಗುತ್ತಿಗೆ ಗುರುತುಹತ್ತಿ, ತನ್ನೊಳಗೆ ತಾನೆ ‘ಓಹೊ ಈ ಬಾವಿಕೊಪ್ಪದ ಸೀರುಡಿಕೆ ಜೋಡಿಯೊ? ನಾಗತ್ತೆ! ನಾಗಕ್ಕ! ಎಂದುಕೊಂಡು, ತನ್ನಲ್ಲಿ ಮೂಡಿಬಂದ ಲಘುತ್ವಭಾವನೆಯನ್ನು ಕೊಂಕುನಗೆಯಿಂದ ಪ್ರಕಟಿಸದೆ ಇರಲಾರದವನಾದನು. ಹೊಲೆಯನ ಹಾಸ್ಯಕ್ಕೂ ಪಕ್ಕಾಗುವಷ್ಟರಮಟ್ಟಿಗೆ ಹಬ್ಬಿತ್ತು ಅವರಿಬ್ಬರ ಕೀರ್ತಿ!

ನಾಗಣ್ಣ, ನಾಗಕ್ಕ ಮತ್ತು ನಾಗತ್ತೆಯರ ಸುದ್ದಿ ಆ ನಾಡಿನವರ ಮಾತುಕತೆಗೆ ಸ್ವಾರಸ್ಯವೀಯುವ ಉಪ್ಪಿನಕಾಯಿಯಾಗಿತ್ತು. ನಾಗಣ್ಣ ಗತಿಸಿ ನಾಲ್ಕಾರು ವರುಷಗಳಾಗಿದ್ದರೂ, ನಾಗಣ್ಣನ ಬದುಕು ನಗೆಗಿಂತಲೂ ಹೆಚ್ಚಾಗಿ ಕಣ್ಣೀರಿಗೆ ಕಾರಣವಾಗುವಂತಹುದಾಗಿದ್ದರೂ, ಜನರು ನಗೆಗೆ ನಿಜವಾಗಿ ಕಾರಣವಾಗುವಂತಹ ವರ್ತನೆ ನಾಗತ್ತೆಯದೆ ಮಾತ್ರ ಆಗಿದ್ದರೂ ನಾಗಣ್ಣ, ನಾಗಕ್ಕ, ನಾಗತ್ತೆಯರ ಮೂರು ಹೆಸರುಗಳೂ ಒಂದರೊಡನೊಂದು ಹೆಣೆದುಕೊಂಡು ಸಿಕ್ಕಾಗಿಬಿಟ್ಟಿದ್ದುವು.

ಬಾವಿಕೊಪ್ಪದ ನಾಗಣ್ಣ ‘ನಾಗತ್ತೆಯ ಎರಡನೆಯ ಗಂಡನಿಗೆ ಹುಟ್ಟಿದವನು. ನಾಗಣ್ಣನ ತಂದೆ ಬಾವಿಕೊಪ್ಪದಲ್ಲಿ ಸಿಂಬಾವಿ ಭರಮೈ ಹೆಗ್ಗಡೇರ ಗದ್ದೆತೋಟ ಮಾಡಿಕೊಂಡು ಒಕ್ಕಲಾಗಿ ತಕ್ಕಮಟ್ಟಿಗೆ ನೆಮ್ಮದಿಯಾಗಿಯೆ ಇದ್ದನು.’ ಒಂದಾದ ಮೇಲೊಂದು ಮದುವೆಯಾಗಿ ಮೂರನೆ ಹೆಂಡತಿಯ ಇತರರಂತೆಯೆ ಹೆರಿಗೆ ಸಮಯದಲ್ಲಿ, ಹಳೆಪೈಕದವಳ ಹುಳದೌಷಧವೂ ಸೂಲಗಿತ್ತಿತನವೂ ವಿಫಲವಾಗಿ, ತೀರಿಕೊಂಡ ಮೇಲೆ, ನಾಲ್ಕನೆಯ ಮದುವೆಗೆ ಸಿಂಬಾವಿ ಹೆಗ್ಗಡೆಯವರು ಸಾಲಕೊಡಲು ಒಪ್ಪದೆ ಹೋದರು. ಒಂಟಿ ಬಾಳಿಗೆ ಬೇಸತ್ತು ಅವನು ತಪಿಸುತ್ತಿದ್ದಾಗ ಈ ‘ನಾಗತ್ತೆ’ ಎಲ್ಲಿಂದಲೋ ಪ್ರತ್ಯಕ್ಷವಾದಳು! ಅವಳಿಗೂ ತನ್ನ ಗಂಡ ಸತ್ತು, ಒಂಟಿ ಬಾಳು ಬೇಸರವಾಗಿ, ಜಂಟಿಬಾಳಿಗಾಗಿ ಊರಿಂದೂರಿಗೆ ಅಲೆಯುತ್ತಿದ್ದಳಂತೆ. ಆದರೆ ಅವಳನ್ನು ಚೆನ್ನಾಗಿ ತಿಳಿದಿದ್ದ ಯಾವ ಊರಿನಲ್ಲಿಯೂ ಅವಳಿಗೆ ಜಂಟಿಬಾಳು ಗಿಟ್ಟದೆ, ಬಾವಿಕೊಪ್ಪದ ನಾಗಣ್ಣನ ತಂದೆಯ ಒಂಟಿಬಾಳಿನ ಬೇಸರಿನ ವಿಚಾರವಾಗಿ ಮಾರ್ತೆಗೇಳಿ, ಅದನ್ನು ಪರಿಹರಿಸಲು ಬಾವಿಕೊಪ್ಪಕ್ಕೆ ಬಂದಳಂತೆ. ಒಂಟಿಬಾಳು ಸಾಕಾಗಿದ್ದ ಇಬ್ಬರೂ ಜಂಟಿಬಾಳಿಗೆ ಒಪ್ಪಿ ‘ಸೀರುಡಿಕೆ’ ಮಾಡಿಕೊಂಡರು. ಆದರೆ ಎಂತಹ ಕ್ಷೇಮವನ್ನು ತೆತ್ತು ಆ ‘ಕೂಡಿಕೆ’ಯ ಸುಖದ ಬಾಳನ್ನು ಕೊಂಡುಕೊಂಡೆನೆಂಬುದು ನಾಗಣ್ಣನ ತಂದೆಗೆ ಆಮೇಲೆ ಚೆನ್ನಾಗಿ ಅನುಭವಕ್ಕೆ ಬಂತಂತೆ! ‘ನಾಗತ್ತೆ’ಯನ್ನು ಕೂಡಿಕೆ ಮಾಡಿಕೊಂಡ ಆರೇಳು ವರುಷದಲ್ಲಿಯೆ ನಾಗಣ್ಣನ ತಂದೆ ತೀರಿಕೊಂಡನು. ಆಗ ನಾಗಣ್ಣ ಸಣ್ಣ ಹುಡುಗ. ನಾಗಣ್ಣ ಹದಿನೈದು ಹದಿನಾರು ವರುಷದವನಾಗುತ್ತಿದ್ದಂತೆಯೆ ಅವನ ತಾಯಿ ಅವನಿಗೆ ಬಡ ಒಕ್ಕಲೊಬ್ಬನ ಮಗಳಾಗಿದ್ದ ನಾಗಕ್ಕನನ್ನು ತಂದುಕೊಂಡು ಸೊಸೆಯನ್ನಾಗಿ ಮಾಡಿಕೊಂಡಳು. ಅಂದಿನಿಂದ ಅವಳು ‘ನಾಗತ್ತೆ’ಯಾಗಿ ಮಗ ಮತ್ತು ಸೊಸೆ ಇಬ್ಬರನ್ನೂ ತನ್ನ ಅಧಿಕಾರದ ಮುಷ್ಟಿಯಲ್ಲಿ ಭದ್ರವಾಗಿಟ್ಟುಕೊಂಡಳು. ತಾಯಿಯ ಬಡಿತ ಮತ್ತು ದುಡಿತದ ಪರಿಣಾಮವಾಗಿಯೊ ಅಥವಾ ತನ್ನ ತಾಯಿಯಿಂದ ತನ್ನ ತಂದೆಗೆ ಅಂಟಿದ್ದ ರೋಗಕ್ಕೆ ತಾನು ಹಕ್ಕುದಾರನಾಗಿದ್ದರಿಂದಲೋ ಏನೋ ನಾಗಣ್ಣನಿಗೆ ಆರೋಗ್ಯ ಕೆಟ್ಟು, ಹೊಟ್ಟೆಯಲ್ಲಿ ಹುಣ್ಣಾಗಿ, ಗದ್ದೆ ತೋಟದ ಕೆಲಸ ಮಾಡಲಾರದೆ, ಅದನ್ನೆಲ್ಲ ಬಿಟ್ಟು, ಹೆಗ್ಗಡೇರ ಸಾಲ ತೀರಿಸಲು ಸಿಂಬಾವಿ ಮನೆಯಲ್ಲಿ ನಾಗಣ್ಣ ನಾಗಕ್ಕ ನಾಗತ್ತೆ ಮೂವರೂ ದುಡಿಮೆಯಾಳುಗಳಾಗಿ ನಿಂತರು. ಅನಾರೋಗ್ಯದ ನಿಮಿತ್ತ ಹೆಗ್ಗಡೆಯವರು ನಾಗಣ್ಣನಿಗೆ ಕಷ್ಟದ ಕೆಲಸ ಕೊಡದೆ, ಕೂತೇ ಮಾಡುವ ಕೆಲಸಗಳಿಗೆ ನೇಮಿಸಿದರು. ಬುಟ್ಟಿ ಮಾಡುವುದು, ವಾಟೆ ಬಿದಿರು ಬೆತ್ತ ಇವುಗಳ ಸಲಕು ಕೆತ್ತುವುದು, ಪುಂಡಿನಾರಿನ ಹಗ್ಗ ಹೊಸೆಯುವುದು, ಎತ್ತು ದನ ಕಟ್ಟುವ ದಾವಣಿ ತಿರುಪುವುದು ಇತ್ಯಾದಿ. ಆದರೆ ನಾಗಣ್ಣನ ಹೊಟ್ಟೆ ಹುಣ್ಣು ಯಾವ ಗಿಡಮೂಲಿಕೆಗಳಿಗೂ ಬಗ್ಗಲಿಲ್ಲ. ನಾಗಕ್ಕ ತನ್ನ ಗಂಡನನ್ನು ಬದುಕಿಸಿಕೊಳ್ಳುವ ಸಲುವಾಗ ಯಾವ ಪತಿವ್ರತೆಗೂ ಕಡಿಮೆಯಿಲ್ಲದಂತೆ ಶುಶ್ರೂಷೆ ಮಾಡಿದಳು; ಭೂತ ಜಕ್ಕಿಣಿ ಪಂಜ್ರೊಳ್ಳಿಗಳಿಗೆ ಹರಕೆ ಕೊಟ್ಟಳು; ತನ್ನ ಹತ್ತಿರ ಇದ್ದಬದ್ದ ಚೂರುಪಾರು ಬಂಗಾರವನ್ನೂ ತಿರುಪತಿ ಧರ್ಮಸ್ಥಳ ಮೊದಲಾದ ದೇವತೆಗಳಿಗೆ ಸುಳಿದಿಟ್ಟಳು. ಯಾರಿಗೂ ಕಾಣದಂತೆ ಏಕಾಂತದಲ್ಲಿ ಬಲ್ಲಂತೆ ಪ್ರಾರ್ಥಿಸಿ ಕಣ್ಣೀರಿಟ್ಟಳು. ಅಲಂಕಾರ ಬಿಟ್ಟಳು. ಊಟ ಬಿಟ್ಟಳು. ಆದರೆ ನಾಗಣ್ಣ ಹುಣ್ಣಿನ ಯಾತನೆಯಲ್ಲಿ ಒದ್ದಾಡಿಕೊಂಡು ಸಿಂಬಾವಿಗೆ  ಬಂದ ಎರಡು ವರ್ಷಗಳಲ್ಲಿಯೆ ತೀರಿಕೊಂಡನು.

ಗಂಡ ತೀರಿಕೊಂಡಂದಿನಿಂದಲೆ ಷುರುವಾಯ್ತು ನಾಗಕ್ಕಗೆ ನಾಗತ್ತೆಯ ಪೀಡೆ! ಪ್ರಾಯದ ಹುಡುಗಿ ನಾಗಕ್ಕಗೆ ತಕ್ಕಮಟ್ಟಿನ ರೂಪವೂ ಇತ್ತು. ಕಳ್ಳು ಕುಡಿದು ಕಳ್ಳಿನಲ್ಲಿಯೆ ಕೈ ತೊಳೆಯುತ್ತಿದ್ದ ಸಿಂಬಾವಿ ಭರಮೈ ಹೆಗ್ಗಡೆಯವರು ಯಾವುದೋ ಗುಟ್ಟಾದ ಕಾಯಿಲೆಯಿಂದ ನರಳುತ್ತಿದ್ದರೂ ಗಂಡನಿಲ್ಲದ ಹರೆಯದ ಹೆಣ್ಣಿನ ರೂಪವನ್ನು ತಿರಸ್ಕರಿಸುವಂತಿರಲಿಲ್ಲ. ಅಲ್ಲದೆ ತಮಗೆ ಮಕ್ಕಳಾಗಿರಲಿಲ್ಲ ಎಂಬ ನೆವದಿಂದ ಮತ್ತೊಂದು ಮದುವೆಗೆ ಬೇರೆ ಹವಣಿಸುತ್ತಿದ್ದರು. ಇದನ್ನೆಲ್ಲ ಅರಿತಿದ್ದ ನಾಗತ್ತೆ ತನ್ನ ಸೊಸೆಗೆ ಒದಗಿರುವ ಸದವಕಾಶವನ್ನು ಉಪಯೋಗಿಸಿಕೊಳ್ಳದೆ ಬಿಡಬಾರದೆಂದು ಸೂಚನೆ ಕೊಡತೊಡಗಿದಳು. ಆ ಸೂಚನೆ ಕೆಲವೊಮ್ಮೆ ಒರಟಾಗಿಯೂ ಇರುತ್ತಿತ್ತು.

ಹೇಗಾದರೂ ಸಿಂಬಾವಿ ಹೆಗ್ಗಡೇರಿಗೆ ತನ್ನ ಸೊಸೆಯನ್ನು ಕೂಡಿಕೆ ಮಾಡಿಸಿದರೆ ತನ್ನ ಸಾಲಸೂಲಗಳೆಲ್ಲ ತೀರಿಹೋಗುತ್ತವೆ ಎಂಬುದು ‘ನಾಗತ್ತೆ’ಯ ಹುನಾರು. ಒಂದು ವೇಳೆ, ಶ್ರೀಮಂತರೂ ದೊಡ್ಡ ಮನೆತನದವರೂ ಆದ ಹೆಗ್ಗಡೆಯವರಿಗೆ ಹೆಣ್ಣು ಕೊಡುವ ಸರಿಸಮಾನರು ಅನೇಕರಿದ್ದು, ತನ್ನ ಸೊಸೆಯೊಡನೆ ಸೀರುಡಿಕೆಯಂತಹ ಕೀಳು ಸಂಬಂಧಕ್ಕೆ ಅವನು ಒಪ್ಪದಿದ್ದರೂ ತನ್ನ ಸೊಸೆ ಅವದ ದೇಹಾಸಕ್ತಿಗೆ ಒಳಗಾದರೂ ಸಾಕು ತಾನು ತನ್ನ ಇಷ್ಟಾರ್ಥಗಳನ್ನೆಲ್ಲ ನೆರವೇರಿಸಿಕೊಳ್ಳುತ್ತೇನೆ ಎಂಬುದೂ ಅವಳ ಧೈರ್ಯ. ತನ್ನ ಗತಿಸಿದ ಗಂಡನನ್ನು ನೆನೆನೆನೆದು ಕೊರಗುತ್ತಿದ್ದ ನಾಗಕ್ಕಗೆ ಯಾರೊಡನೆಯೂ ಯಾವ ವಿಧವಾದ ಸಂಬಂಧದ ಆಸಕ್ತಿಯೂ ಲೇಶವೂ ಇರಲಿಲ್ಲ. ನಾಗತ್ತೆ ಅವಳ ಆ ಪತಿವ್ರತಾ ನಿಷ್ಠೆಯನ್ನು ಅಸಹ್ಯವಾದ ಮಾತುಗಳಿಂದ ಪರಿಹಾಸ್ಯಮಾಡಿ ಪ್ರಚೋದಿಸತೊಡಗಿದಳು. ಅದು ಎಷ್ಟರಮಟ್ಟಿಗೆ ಮುಂದುವರಿದು ಬಹಿರಂಗವಾಯಿತೆಂದರೆ, ನಾಗಕ್ಕನ ನಡತೆ ಸ್ವಭಾವ ವಿಧೇಯತೆ ವಿನಯ ಸಂಕೋಚ ಇವುಗಳನ್ನೆಲ್ಲ ಕಂಡು ಅವಳನ್ನು ತುಂಬ ಮೆಚ್ಚಿಕೊಂಡಿದ್ದ ಭರಮೈ ಹೆಗ್ಗಡೆಯವರ ಹೆಂಡತಿ ಜಟ್ಟಮ್ಮ ನಾಗತ್ತೆಯೊಡನೆ ನಾಗಕ್ಕನನ್ನೂ ಮನೆಬಿಟ್ಟು ಹೊರಡುವಂತೆ ಮಾಡಬೇಕಾಯಿತು.

ಸಿಂಬಾವಿ ಮನೆ ತಪ್ಪಿ ಹೊರಹೊರಟ ನಾಗತ್ತೆಯ ಕೈಯಲ್ಲಿ ನಾಗಕ್ಕ ‘ಪಂಜ್ರೊಳ್ಳಿ ಕೈಲಿ ಸಿಕ್ಕ ಜಕಣಿ’ಯಂತಾದಳು. ನಾಗಕ್ಕ ತನ್ನ ತವರನ್ನೂ ಸೇರದಂತೆ ತರತರದ ಅಶ್ಲೀಲ ದೂರುಗಳನ್ನೂ ಹಬ್ಬಿಸಿ, ನಾಗತ್ತೆ ಅವಳನ್ನು ವಿಕ್ರಯಿಸುವ ದನವನ್ನು ಗಿರಾಕಿಗಾಗಿ ಊರಿಂದೂರಿಗೆ ಸಾಗಿಸುವಂತೆ ಮನೆಯಿಂದ ಮನೆಗೆ ಕೊಂಡೊಯ್ದಳು. ನಾಗಕ್ಕನ ತವರು ಬಡ ಜಕ್ಕಲಾದುದರಿಂದಲೂ, ನಾಗಕ್ಕನ ತಂದೆ ತೀರಿಕೊಂಡು ಅಣ್ಣ ಅತ್ತಿಗೆಯರು ತಮ್ಮ ಹೊಟ್ಟಬಟ್ಟೆಗೇ ಸಾಲದೆ ಸಾಲಗಾರರಾಗಿ ಕಷ್ಟಪಡುತ್ತಲಿದ್ದುದರಿಂದಲೂ ಅವರು ಯಾರೂ ನಾಗತ್ತೆಗೆ ಎದುರಾಗಿ ನಾಗಕ್ಕನನ್ನು ರಕ್ಷಿಸುವ ಅಪಾಯವನ್ನು ಎದುರು ಹಾಕಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.

ಕೆಲವು ಕಡೆಗಳಲ್ಲಿ ನಾಗಕ್ಕನ್ನು ಸೀರುಡಿಕೆ ಮಾಡಿಕೊಳ್ಳಲು ಹೆಂಡಿರನ್ನು ಹೆರಿಗೆಗೆ ಬಲಿಕೊಟ್ಟಿದ್ದ ಗಂಡುಗಳು ಸಂತೋಷದಿಂದ ಮುಂದೆ ಬಂದಿದ್ದರು. ಆದರೆ ನಾಗಕ್ಕ ಮನೆ ಬಿಟ್ಟು ಕಾಡಿಗೆ ಓಡಿ ಅವಿತುಕೊಳ್ಳುವುದರಿಂದ ಹಿಡಿದು ಕೆರೆ ಬಾವಿ ನೇಣುಗಳವರೆಗೂ ಹೋಗಿ ಪ್ರತಿಭಟಿಸಿ ಬಲಾತ್ಕಾರದ ಮರುಮದುವೆಯಿಂದ ಪಾರಾಗಿದ್ದಳು. ಆದರೆ ನಾಗತ್ತೆ ‘ಇನ್ನೆಷ್ಟು ದಿನ ಹಾರಾಡ್ತಾಳೆ ಪರಾಯಕ್ಕೆ ಬಂದ ಹುಡುಗಿ? ನಾ ನೋಡ್ತೀನಿ’ ಎಂದು ಪ್ರಶಾಂತತೆಯಿಂದ ತನ್ನ ದೃಢಪ್ರಯತ್ನವನ್ನು ಮುಂದುವರಿಸುತ್ತಲೆ ಇದ್ದಳು.

ಈ ಕಥೆಯೆಲ್ಲ ಕಿವಿಯಿಂದ ಕಿವಿಗೆ ಬಾಯಿಂದ ಬಾಯಿಗೆ ಬಿದ್ದು, ಒಂದಕ್ಕೆ ಎರಡಾಗಿ ಎರಡಕ್ಕೆ ಮೂರಾಗಿ ಉಪ್ಪುಕಾರ ಹಚ್ಚಿದಂತಾಗಿ ಒಗ್ಗರಣೆ ಹಾಕಿದಂತಾಗಿ ರುಚಿ ರುಚಿಯಾಗಿ ಸ್ವಾರಸ್ಯವಾಗಿ ಹಬ್ಬಿದುದರಿಂದಲೆ ಗುತ್ತಿ, ತಿರುಗಿನಿಂತ ನಾಗಕ್ಕನನ್ನು ಗುರುತಿಸಿದಾಗ, ಅವಳ ವಿಚಾರದಲ್ಲಿ ಅವನಿಗೆ ಒಂದು ತರಹದ ಕರುಣೆಗೂಡಿದ ಗೌರವಭಾವನೆಯೇ ಇದ್ದಿತಾದರೂ, ಮುಂದೆ ಹೋಗುತ್ತಿದ್ದ ನಾಗತ್ತೆಯನ್ನು ಒಳಕೊಂಡ ಅವನ ಮನಸ್ಸು ಲಘುತ್ವವನ್ನನುಭವಿಸಿ ಕೊಂಕುನಗೆ ನಕ್ಕದ್ದು!

ತುಸುದೂರ ಮುಂದೆ ಹೋಗಿದ್ದ ನಾಗತ್ತೆ ತನ್ನ ಹಿಂದೆ ನಾಗಕ್ಕನ ಹೆಜ್ಜೆ ಸಪ್ಪಳ ಕೇಳದಿದ್ದುದನ್ನು ಗಮನಿಸಿ ತಿರುಗಿನೋಡಿ “ಯಾಕೇ? ನಿಂತು ಬಿಟ್ಟೇ? ನಿಂಬಳ ಹತ್‌ತ್ತವೆ, ಬಿರಬಿರನೆ ಬಾರೆ. ಹೆಂಗಾದ್ರೂ ಬ್ಯಾಗ ಗುಡ್ಡ ಹತ್ತಿ ಕಾಡು ದಾಟಿದರೆ ಸಾಕಾಗದೆ” ಎಂದು ಸೊಂಟಗೈಯಾಗಿ ನಿಂತಳು.

“ನಾಯಿ ಬೊಗಳ್ತು. ಅದಕ್ಕೆ ನೋಡ್ತಾ ನಿಂತೆ” ಎನ್ನುತ್ತಾ ನಾಗಕ್ಕ ಬಳಿಸಾರಿ “ಆ ನಾಯಿಗುತ್ತಿ ಅಂತಾ ಕಾಣ್ತದೆ, ಬರ್ತಾ ಇದಾನೆ” ಎಂದಳು.

ಅಷ್ಟರಲ್ಲಿ ಗುತ್ತಿಯೂ ಹತ್ತಿರ ಬಂದು “ದೂರ ಹೊರಟ್ಹಂಗೆ ಕಾಣ್ತದೆ ಹೆಗ್ಗಡ್ತಮ್ಮೋರು?” ಎಂದನು. ಹುಲಿಯ ಅಪರಿಚಿತರನ್ನು ಕಂಡು ಬೊಗಳುವಂತೆ ವರ್ತಿಸದೆ ಬಾಲವಲ್ಲಾಡಿಸಿ ಸಂತೋಷ ಪ್ರದರ್ಶನ ಮಾಡುತ್ತಿತ್ತು.

“ಹುಲಿಯಗೆ ಗುರುತು ಮರೆತಿಲ್ಲ!” ಎಂದಳು ನಾಗಕ್ಕ.

“ನಾಯಿ ಆದ್ರೇನಂತೆ ಅದ್ಕೂ ಬಿದ್ದಿ ಇಲ್ಲೇನು?” ಎಂದನು ಗುತ್ತಿ.

“ಹುಲಿಕಲ್‌ನೆತ್ತಿಕಾಡು ದಾಟೋದು ಹ್ಯಾಂಗಪ್ಪಾ ಅಂತಿದ್ದೆ. ನಮ್ಮನ್ನೊಂದಿಷ್ಟು ಕೋಣೂರುವರೆಗೆ ಮುಟ್ಟಿಸಿ ಹೋಗ್ತಿಯೇನೋ, ಗುತ್ತಿ?” ನಾಗತ್ತೆ ಕೇಳಿದಳು.

“ನಾನೂ ಹಳೆಮನೀಗೆ ಹೊರಟೀನಿ, ನಿಮ್ಮ ಜತೆ ಅಲ್ಲೀವರೆಗೆ ಬಂದೇ ಹೋಗ್ತೀನಿ” ಎಂದು ತೊಯ್ದ  ನೆಲದ ಕಡೆ ನೋಡಿ ಗುತ್ತಿ “ಅಯ್ಯಯ್ಯೋ! ಇಂಬಳ ಹತ್‌ತಾವೆ ಕಣೊ. ಬ್ಯಾಗ ಬ್ಯಾಗ ನಡೀರಿ. ಈ ನುಸಿ ಕಾಟ ಬ್ಯಾರೆ” ಎಂದ.  ಹೊಲೆಯನಾದವನಿಗೆ ಹಿಂದೆ ಸ್ವಲ್ಪ ದೂರದಲ್ಲಿಯೇ ಇದ್ದುಕೊಂಡು ಅನುಸರಿಸುವುದು ಮೇಲಿಜಾತಿಯವರಿಗೆ ಅವನು ತೋರಿಸಬೇಕಾದ ಮರ್ಯಾದೆಯಲ್ಲವೆ?

“ನೀನೆ ಮುಂದೆ ಹೋಗಪ್ಪ! ಹುಲಿ ಕೂತಿರ್ತದಂತೆ ಆ ಹುಲಿಕಲ್‌ ಅರೇಲಿ!” ಎಂದಳು ನಾಗತ್ತೆ.

ಗುತ್ತಿ ನಾಯಿ ಸಹಿತವಾಗಿ ದಾರಿಯಿಂದ ಅಡ್ಡಕ್ಕೆ ಹಳುವಿನಲ್ಲಿ ನುಗ್ಗಿ ಹೋಗಿ ಸ್ವಲ್ಪ ದೂರ ಮುಂದೆ ಮತ್ತೆ ಕಾಲುದಾರಿಗೆ ಸೇರಿಕೊಂಡು ನಡೆಯತೊಡಗಿದನು. ಮಡಿಲು ತುಂಬ ಏನೇನನ್ನೊ ತುಂಬಿದ್ದುದರಿಂದ ಹೊಟ್ಟೆ ಉಬ್ಬಿದಂತೆ ಕಾಣುತ್ತಿದ್ದ ನಾಗತ್ತೆ ಮೆಲ್ಲಮೆಲ್ಲಗೆ ಹೆಜ್ಜೆ ಹಾಕತೊಡಗಿ “ಸ್ವಲ್ಪ ಮೆಲ್ಲಗೆ ಕಾಲು ಹಾಕೋ” ಎಂದು ಕೂಗಿ ಹೇಳಿದಳು ಗುತ್ತಿಗೆ.

ಹುಲಿಕಲ್ಲರೆ ಹತ್ತಿರವಾದಂತೆಲ್ಲ ಮಲೆ ಕಡಿದಾಗುತ್ತಾ ಬಂದಿತು. ಹೆಮ್ಮರಗಳ ಸಾಂದ್ರತೆ ಗಾತ್ರ ಔನ್ನತ್ಯಗಳು ಹೆಚ್ಚಾಗುತ್ತಿದ್ದುವಾದರೂ ಬುಡದ ಹಳುವಿನ ಕಿಕ್ಕಿರಿಕೆ ಕಡಿಮೆಯಾಗುತ್ತಿತ್ತು. ತುರಿಚೆ ಹಳುವಿನಿಂದಲಾಗಲಿ ಎತ್ತು ಬೀಳಿನಿಂದಲಾಗಲಿ ಬಾಡು ಬೆಕ್ಕಿನ ಮುಳ್ಳುಪೊದೆಯಿಂದಾಗಲಿ ತಪ್ಪಿಸಿಕೊಳ್ಳಲು ಹೆಚ್ಚೇನೂ ಪ್ರಯತ್ನಪಡಬೇಕಾಗಿರಲಿಲ್ಲ. ಅಪರ ವಯಸ್ಸಿನ ನಾಗತ್ತೆ ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆಹಾಕುತ್ತಾ ಮಧ್ಯೆ ಮಧ್ಯೆ ನಿಂತು ಉಸ್ಸೆಂದು ನಿಡುಸುಯ್ದು ದಣಿವಾರಿಸಿಕೊಳ್ಳುತ್ತಾ ಹತ್ತುತ್ತಿದ್ದಳು. ಮೈ ಬಂದು, ಕಾಲುಗಳೂ ತೋಳುಗಳೂ ಅಸ್ವಾಭಾವಿಕವೆಂಬಷ್ಟು ದಪ್ಪದಪ್ಪವಾಗಿ ಬೆಳೆದಿದ್ದ ಆ ಹೆಂಗಸು ಒಂದೆರಡು ಕಡೆ ಜಾರಿ ಬೀಳುತ್ತಿದ್ದವಳನ್ನು ನಾಗಕ್ಕನೆ ಆತು ಹಿಡಿದಿದ್ದಳು. ಕಟ್ಟಿದ ವಲ್ಲಿಯಿಂದ ಕೊರಳ ಬೆವರನ್ನು ಒರೆಸಿಕೊಳ್ಳುತ್ತಾ “ನಾಗೂ, ಆ ಕಲ್ಲರೆವರೆಗೆ ಸೊಲ್ಪ ಕೈ ಹಿಡಿದುಕೊಳ್ತಿಯೇನೇ?” ಎಂದು ಅಂಗಲಾಚುವಂತೆ ಕೇಳಿಕೊಂಡ ಅತ್ತೆಯ ಕೈಯನ್ನು ತನ್ನ ಜುಗುಪ್ಸೆ ತೋರಗೊಡದ ರೀತಿಯಲ್ಲಿ ಆತುಕೊಂಡ ನಾಗಕ್ಕ ಮೆಲ್ಲಮೆಲ್ಲನೆ ಹತ್ತಿ ಏರಿ ಮುಂಬರಿದಳು.

“ಉಸ್‌ಸ್ಸಪ್ಪಾ! ಅಂತು ಕಲ್ಲರೆ ಬಂತಲ್ಲಾ. ಸೊಲ್ಪ ದಣಿವಾರಿಸಿಕೊಂಡು ಹೋಗಾನೇ! ಕರೆದು ಹೇಳೆ ಗುತ್ತೀಗೆ. ಮುಂದೆ ಹೋಗಿಬಿಟ್ಟಾನು!” ಎಂದು ನಾಗತ್ತೆ ವಿಸ್ತಾರವಾಗಿ ಹಾಸಿದಂತಿದ್ದ ಅರಯಮೇಲೆ ಕೂತುಬಿಟ್ಟಳು.

ನಾಗಕ್ಕ ಗುತ್ತಿಯನ್ನು ಕರೆದು ಹೇಳಬೇಕಾಗಲಿಲ್ಲ. ಅವನು ತಾನಾಗಿಯೆ, ನಾಗತ್ತೆ ಕುಳಿತುದನ್ನು ನೋಡಿ, ಹಿಂತಿರುಗಿ ಬಂದು, ಅವರಿಗೆ ಸ್ವಲ್ಪ ದೂರದಲ್ಲಿ, ತನ್ನ ಕಂಬಳಿ ಕೊಪ್ಪೆಯನ್ನು ಮಡಿಸಿ ಹಾಕಿಕೊಂಡು, ಬಗನಿ ದೊಣ್ಣೆಯನ್ನು ಟಣಕ್ಕನೆ ಅರೆಕಲ್ಲಿನ ಮೇಲೆ ಹಾಕಿ, ತನ್ನ ಕಾಲಿಗೆ ಹತ್ತಿದ್ದ ಇಂಬಳಗಳನ್ನು ಕೈಯಿಂದೆಳೆದು ಬಿಸಾಡುತ್ತಾ ಕುಳಿತನು.

ನಾಗತ್ತೆ ತನ್ನ ಮಡಿಲಿನಿಂದ ಒಂದು ಚೂರು ಹೊಗೆ ಸೊಪ್ಪನ್ನು ತೆಗೆದು ಅದರಿಂದ ತನ್ನ ಕಾಲಿಗೆ ಮೊಳಕಾಲಿನವರೆಗೂ ಹತ್ತಿದ್ದ ಇಂಬಳಗಳನ್ನು ಸುಲಭವಾಗಿ ಒರಸಿ ಒರಸಿ ಹಾಕಿದಳು. ಆಮೇಲೆ ಆ ಹೊಗೆಸೊಪ್ಪಿನ ತುಂಡನ್ನು, ತನ್ನ ಕಾಲಿಗೆ ಹತ್ತಿದ್ದ ಇಂಬಳಗಳನ್ನು ಒಂದು ಕಡ್ಡಿಯಿಂದ ತೆಗೆಯುವ ವಿಫಲ ಪ್ರಯತ್ನದಲ್ಲಿದ್ದ, ನಾಗಕ್ಕನಿಗೂ ಕೊಟ್ಟಳು. ಅವಳೂ ಬೆನ್ನು ತಿರುಗಿಸಿ ಕೂತು, ಕಚ್ಚಿದ್ದ ಇಂಬಳಗಳನ್ನೆಲ್ಲ ಸರಸರನೆ ಒರಸಿ ಹಾಕಿದಳು. ಆಮೇಲೆ ದೂರದಲ್ಲಿ ಕೂತು ಬಹುವಾಗಿ ಪ್ರಯತ್ನಿಸುತ್ತಿದ್ದ ಗುತ್ತಿಯ ಕಡೆಗೂ ನಾಗತ್ತೆಯ ಅಪ್ಪಣೆಯಂತೆ ಅದನ್ನು ಎಸೆದಳು.

ಗುತ್ತಿ ಅದನ್ನು ಹೆರಕಿಕೊಂಡು “ಹೌದು ಕಣ್ರೋ, ಇದೊಂದು ಒಳ್ಳೆ ಉಪಾಯ” ಎಂದು ಕೆಲಸಕ್ಕೆ ತೊಡಗಿದನು. ಆದರೆ ಗುತ್ತಿ ಇಂಬಳಗಳನ್ನೆಲ್ಲ ತೆಗೆದು ಹಾಕಿದ ಮೇಲೆ ಆ ಹೊಗೆ ಸೊಪ್ಪಿನ ತುಂಡನ್ನು ಬಿಸಾಡಲಿಲ್ಲ. ಅತ್ತ ಇತ್ತ ಕಳ್ಳಕಣ್ಣು ಹಾಯಿಸಿ ಮೆಲ್ಲಗೆ ಸೊಂಟಕ್ಕೆ ಸಿಕ್ಕಿಸಿಕೊಂಡನು! ಮುಂದೆ ಇಂಬಳ ಹತ್ತಿದಾಗ ಉಪಯೋಗಕ್ಕೆ ಬರಲಿ ಎಂದೊ? ಇಲ್ಲವೆ ಅವಶ್ಯಬಿದ್ದಾಗ ಎಲಡಕೆಗೇ ಬೇಕಾಗಬಹುದೆಂದೊ! ನಾಗಕ್ಕ ಅದನ್ನು ಗಮನಿಸಿ ಮುಖ ತಿರುಗಿಸಿಕೊಂಡು ನಕ್ಕದ್ದು ಅವನಿಗೆ ಗೊತ್ತಾಗಲಿಲ್ಲ.

ಅವರು ಕುಳಿತಿದ್ದ ಆ ಎತ್ತರದ ಸ್ಥಾನ ಹೆಸರುವಾಸಿಯಾಗಿತ್ತು. ಹುಲಿಕಲ್ಲು, ಹುಲಿಕಲ್ಲರೆ, ಹುಲಿಕಲ್ ನೆತ್ತಿ ಎಂದು ಮೊದಲಾಗಿ ಆ ಸ್ಥಳವನ್ನು ನಿರ್ದೇಶಿಸುತ್ತಿದ್ದರೂ ಹುಲಿಕಲ್ಲು ಗುಡ್ಡದ ನೆತ್ತಿ ಆ ಹುಲಿಕಲ್ಲರೆಗಿಂತಲೂ ಮೇಲೇರಿ ಇನ್ನ ಬಹಳ ಎತ್ತರದಲ್ಲಿ ಕೊನೆಗೊಂಡಿತ್ತು. ಇವರು ಕುಳಿತಿದ್ದ ಹುಲಿಕಲ್ಲರೆ ಆ ಮಲೆಯ ಓರೆಯ ಹೆಗಲಿನಂತಿತ್ತು. ಅಗಲವಾಗಿದ್ದ ಆ ಹಾಸುಬಂಡೆ ಸುತ್ತಲೂ ದಟ್ಟವಾದ ಅರಣ್ಯದಿಂದ ಪರಿವೃತವಾಗಿದ್ದೂ ಅದರ ಮೇಲೆ ಕುಳಿತವರಿಗೆ ಬಹುದೂರ ಕೆಳಗೆ ಕಣಿವೆಯಲ್ಲಿ ಕೋಣೂರು ಹೂವಳ್ಳಿಗಳ ಗದ್ದೆ ತೋಟಗಳೂ ಅಡವಿಯ ಅಂಚಿಗೆ ಸೇರಿಕೊಂಡಂತಿದ್ದ ಅಡಿಕೆ ಬಾಳೆ ತೋಟಗಳೂ ಸಣ್ಣಗೆ ಚಿತ್ರದಲ್ಲಿ ಬರೆದಂತೆ ಕಾಣುತ್ತಿದ್ದವು. ಹುಲಿ ಅಲ್ಲಿ ಯಾವಾಗಲೂ ಕುಳಿತು ಕಣಿವೆಯಲ್ಲಿ ದನಕರು ಮೇಯುವುದನ್ನು ಗೊತ್ತುಹಚ್ಚುತ್ತಿತ್ತೆಂದೂ, ಇಲ್ಲವೆ ಕಾಡಿನಲ್ಲಿ ತಿರುಗುವ ಮಿಗ, ಹಂದಿ, ಕಡ, ಕಾಡುಕುರಿ ಮೊದಲಾದ ಪ್ರಾಣಿಗಳಿಗಾಗಿ ಕಂಡಿ ಕಾಯುತ್ತಿತ್ತೆಂದೂ ಪ್ರತೀತಿ. ಅಲ್ಲಿ ತಿರುಗಾಡುವವರಿಗೆ ಎಷ್ಟೋಸಾರಿ ಹುಲಿ ಕಾಣಿಸಿದ್ದೂ ಉಂಟು. ಆದರೆ ಮನುಷ್ಯರ ತಂಟೆ ಬರುತ್ತಿರಲಿಲ್ಲ. ದೂರದಿಂದಲೆ ಸ್ವಲ್ಪ ಗಟ್ಟಿಯಾಗಿ ಕೆಮ್ಮುತ್ತಲೋ ಮಾತಾಡುತ್ತಲೋ ಹೋದರೆ ಹುಲಿ ಅಲ್ಲಿಂದ ಕಣ್ಮರೆಯಾಗಿಬಿಡುತ್ತದೆ. ಎಂದು ಬಲ್ಲವರು ಹೇಳುತ್ತಿದ್ದರು. ಅದಕ್ಕಾಗಿಯೆ ಆ ಹುಲಿಕಲ್ಲನ್ನು ದಾಟುವಾಗ ಒಬ್ಬನೆ ಹೋಗುತ್ತಿದ್ದರೂ ಅನೇಕರಿದ್ದಾರೆ ಎಂಬ ಭ್ರಾಂತಿಯನ್ನು ಹುಲಿಗೆ ತಂದು ಕೊಡಲೋಸುಗ ಎಂಬಂತೆ ಗಟ್ಟಿಯಾಗಿ ಮಾತಾಡುತ್ತಲೋ ಬಾಯಿ ಮಾಡುತ್ತಲೋ ದೂರದಲ್ಲಿರುವವರನ್ನು ಕರೆಯುವಂತೆ ಕಾಕು ಹಾಕುತ್ತಲೋ ಇಲ್ಲವೆ ಗಟ್ಟಿಯಾಗಿ ಪದ ಹೇಳುತ್ತಲೋ ಹೋಗುತ್ತಿದ್ದುದು ವಾಡಿಕೆ.

ಮಳೆಗಾಲದ ಮೊದಲ ಪಾದದ ಪೂರ್ವಾಹ್ನದ ಆಕಾಶದಲ್ಲಿ ಮೋಡ ವಿರಳವಾಗಿದ್ದು ಬಟ್ಟ ಬಯಲಾಗಿದ್ದ ಕಲ್ಲರೆಯ ಮೇಲೆ ಬಿಸಿಲು ಚೆನ್ನಾಗಿಯೆ ಬೀಳುತ್ತಿತ್ತು. ಆದರೆ ಕಾಡಿನ ಕಟ್ಟನೆರಳಿನ ಶೀತದಲ್ಲಿ ಅದುವರೆಗೂ ನಡೆದು ಬಂದಿದ್ದ ಅವರಿಗೆ ಅದು ಮೊದಮೊದಲು ಹಿತಕರವಾಗಿಯೆ ಇತ್ತು. ಗುತ್ತಿ ತನಗೊಂಡು ‘ಬಾಯಿಗೆ’ ಸಿಗುತ್ತದೇನೋ ಎಂದು ನಾಗತ್ತೆಯ ಮಡಿಲಿನ ಕಡೆಗೆ ನೋಡುವುದರ ಮೂಲಕ ಸೂಚನೆ ಕೊಟ್ಟರೂ ಸಫಲವಾಗದೆ ನಾಗತ್ತೆ ಸ್ವಲ್ಪಹೊತ್ತಿನಲ್ಲಿಯೆ “ಬಿಸಿಲೇರ್ತಾ ಅದೆ, ಹೋಗಾನ” ಎಂದು ಎದ್ದು ನಿಂತಳು.

ಎದ್ದುನಿಂತ ಗುತ್ತಿಗೆ ಹುಲಿಯ ಕಣ್ಮರೆಯಾದದ್ದು ಗಮನಕ್ಕೆ ಬಂದು ಸಿಳ್ಳು ಹಾಕಿ ಕರೆದನು. ಆದರೆ ಎಲ್ಲಿಯೂ ನಾಯಿಯ ಸದ್ದಾಗಲಿ ಸುಳಿವಾಗಲಿ ಕಾಣಿಸಲಿಲ್ಲ. ಗುತ್ತಿ ಹುಲಿಕಲ್ಲನ್ನು ಸಮೀಪಿಸುತ್ತಿದ್ದಾಗಲೆ ನಾಯಿಯ ಕೊರಳ ಬಳ್ಳಿಹಗ್ಗವನ್ನು ಬಿಚ್ಚಿಬಿಟ್ಟಿದ್ದನು: ಒಂದು ವೇಳೆ ಹುಲಿ ಏನಾದರೂ ಅರೆಯ ಮೇಲೆ ಕುಳಿತಿದ್ದರೆ ಮುಂದೆ ಹೋಗುವ ನಾಯಿಯನ್ನು ಕಂಡೇ ಮನುಷ್ಯರ ಆಗಮನವನ್ನು ಊಹಿಸಿ ಓಡಿಹೋಗಿ ಬಿಡಲಿ ಎಂದು! ಗುತ್ತಿಯ ಧೈರ್ಯದ ಅಂತರಾಳದಲ್ಲಿ ಎಚ್ಚರಿಕೆಯ ಪುಕ್ಕಲು ಯಾವಾಗಲೂ ಮನೆಮಾಡಿಯೆ ಇರುತ್ತಿತ್ತು!

ಕ್ರೂ ಕ್ರೂ ಕ್ರೂ ಎಂದು ಕಾಡು ಮರುದನಿ ಕೊಡುವಂತೆ ಕರೆದನು.

“ಹಡ್ಬೇಗೆ ಹುಟ್ಟಿದ್ದು ಯತ್ತಮಕ ಸತ್ತದೊ? ಎಂದು  ತನ್ನ ಸಿಟ್ಟನ್ನು ಶಪಿಸುತ್ತಾ ಕಂಬಳಿಕೊಪ್ಪೆಯನ್ನೊ ಬಗನಿದೊಣ್ಣೆನ್ನೊ ಎತ್ತಿಕೊಂಡು ಹೊರಟನು.

“ಮೂಗಾಳಿ ಹಿಡುಕೊಂಡು ಬರ್ತದೆ, ಎಲ್ಲಿಗೆ ಹೋತದೆ?” ಎಂದ ನಾಗತ್ತೆಗೆ.

ಗುತ್ತಿ ಕಾಲು ಹಾಕುತ್ತಲೆ ಹೇಳಿದ: “ಬರ್ಕನ್ನೊ ಕಣ್ಹಂದೀನೊ ಗುದ್ದಿಗೆ ಕೂಡಿಕೊಂಡು ಕಾಯ್ತಾ ಕೂತು ಬಿಡ್ತದೆ ಕಣ್ರೋ. ಅವತ್ತೊಂದು ಸಲ ಎಲ್ಡುದಿನ ಮನೆಗೆ ಬರದೆ ಹೋಯ್ತು. ನನಗೆ ಅನ್ನಾನೆ ಸೇರದೆ ಹೋಯ್ತು. ಆಮ್ಯಾಲೆ ನಾನೂ ಸಣ್ಣತಿಮ್ಮ ಹುಡುಕ್ಕೊಂಡು ಹೋಗಿ ನೋಡ್ತೀವಿ, ಒಂದು ಮರದ ಬುಡದಾಗೆ ಮೇಲೆ ನೋಡ್ತಾ ಕೂತುಬಿಟ್ಟಾದೆ. ಏಟು ಕರೆದ್ರೂ ಬರ ಒಬ್ಬದು. ಕಡೆಗೆ ನೋಡಿದ್ರೆ, ಬರ್ಕನ್ನ ಬೆರಸಿಕೊಂಡು ಹೋಗಿ ಆ ಮರದ ಒಟ್ಟೆಗೆ ಹತ್ತಿಸಿಬಿಟ್ಟದೆ! ಬಳಿಕೋಲು ಹಾಕಿ ನೋಡಿದಾಗ ಒಣೇಲಿ ಗೊತ್ತಾತು! ಹೊಗೆಹಾಲಿ, ದಸಿಗೇಲಿ ಇರ್ದು, ತೆಗೆದ್ವು. ದಿಂಡೆ ಬರ್ಕ! ಸಣ್ಣ ಸಿಮ್ಮನ ಕೈಮೇಲೆ ಇಳಿದುಬಿಟ್ಟಿತ್ತು ಅದರ ಹೊಟ್ಟೆಕಳ್ಳಿನ ರಸ ರಕ್ತ ಎಲ್ಲ! ಹಿಹ್ಹಿಹ್ಹಿ!”

ದಾರಿ ಗುಡ್ಡವಿಳಿದು ಹೋಗುತ್ತಿದ್ದುದರಿಂದ ನಾಗತ್ತೆಗೂ ಅಷ್ಟೇನು ಆಯಾಸಕರವಾಗಿರಲಿಲ್ಲ. ಕಗ್ಗಾಡಿನ ದಟ್ಟಹಳುವಿನಲ್ಲಿ ಹೋಗುತ್ತಿದ್ದಾಗ ಒಂದೆಡೆ ತುಸುದೂರದಲ್ಲಿ ಹಳುವಿನೊಳಗೆ ಏನೋ ಸದ್ದಾಯಿತು. ಮೂವರೂ ಬೆಚ್ಚಿ ನಿಂತರು.

ತಗ್ಗಿದ ದನಿಯಲ್ಲಿ ಗುತ್ತಿ “ಆ ಹೆಬ್ಬಲಸಿನ ಬುಡದಾಗೆ ಅರುಗಾಗಿ!” ಎಂದು ತಾನೂ ಒಂದು ಹೆಮ್ಮರದ ಹಿಂದೆ ಮರೆಯಾಗಿ ನಿಂತ.

ದೊಡ್ಡೋ? ಕಡವೊ? ಹಂದಿಯೊ? ಮಿಗವೊ? ಹುಲಿ ಅಟ್ಟುತ್ತಿದೆಯೋ ಅಥವಾ ಸಿಳ್ಳುನಾಯಿಗಳೋ? ಏನೇನನ್ನೊ ಊಹಿಸುತ್ತಾ ಗುತ್ತಿ ಬಿಡುಗಣ್ಣಾಗಿ ನೋಡುತ್ತಿದ್ದಂತೆಯೆ ಒಂದು ಹೋರಿ ಮಿಗ ಮರಗಳ ಸಂದಿ ಹಳುವಿನಲ್ಲಿ ಕವಣೆ ಕಲ್ಲೆಸೆದಂತೆ ಹಾದಿಬಂದು, ಇಪ್ಪತ್ತು ಮೂವತ್ತು ಮಾರುಗಳಿಗೊಂದು ನೆಗೆತ ಚಿಮ್ಮಿ, ಗುಡ್ಡದ ಉಬ್ಬಿನ ಕಡೆಗೆ ಮಿಂಚಿ ಏರಿ ಕಣ್ಮರೆಯಾಯಿತು. ಆ ಸದ್ದು ಅಡಗುವಷ್ಟರಲ್ಲಿಯೇ ನೋಡುತ್ತಾನೆ: ತನ್ನ ನಾಯಿ, ಹುಲಿಯ, ಅದನ್ನು ಬೆಂಬತ್ತಿ ಸಮವೇಗದಲ್ಲಿ ಎಂಬಂತೆ ಧಾವಿಸುತ್ತಿದೆ! ಗುತ್ತಿ ಅದನ್ನು ಕೂಗಿ ಕರೆಯಬೇಕು ಎನ್ನುವಷ್ಟರಲ್ಲಿಯೇ ನಾಯಿ ಓಡುವ ಸದ್ದು ಅಡಗಿ, ಕಾಡು ನಿಃಶಬ್ದವಾಗಿತ್ತು!

“ಆ ದೊಡ್ಡ ಜಾತಿ ನಾಯೀ ಹಣೇಬರಾನೆ ಹೀಂಗೆ. ಓಡೋ ಪರಾಣಿ ಕಂಡರೆ ಕೂಗೋದಿಲ್ಲ ಏನಿಲ್ಲ, ಅಟ್ಟಿಕೊಂಡು ಹೋಗೋದೊಂದೆ!” ಎಂದು ಗುತ್ತಿ ತನ್ನ ಮೃಗಯಾ ವಿಜ್ಞಾನದ ವಿಷಯಕವಾದ ಚಿಂತನೆಯನ್ನು ತನಗೇ ಗಟ್ಟಿಯಾಗಿ ಕೇಳಿಕೊಳ್ಳುತ್ತಾ ಮುನ್ನಡೆಯತೊಡಗಿದನು.

ಕೋಣೂರು ಸಮೀಪಿಸಿದಂತೆ ಕಾಡು ವಿರಳವಾಗತೊಡಗಿತು. ಗಿಳಿ ಹಿಂಡು, ಕಾಮಳ್ಳಿ ಹಿಂಡು, ಬಾಣವೇಗದಿಂದ ಇಂಚರದ ತನಿಮಳೆಯನ್ನೆ ಚಿಮುಕಿಸುತ್ತಾ ಹಾರಿಹೋಗಲಾರಂಭವಾಯಿತು. ಬರಬರುತ್ತಾ ಕಾಡಿನಂಚು ಹಕ್ಕಲಾಯಿತು. ಅಲ್ಲಲ್ಲಿ ಪೊದೆಗಳಲ್ಲಿ ವಿರಳ ವೃಕ್ಷಗಳಲ್ಲಿ ಪಿಕಳಾರ ಹೊರಸಲಕ್ಕಿ ಮೊದಲಾದ ದಟ್ಟ ಕಾಡಿನವಲ್ಲದ ಹಕ್ಕಿಗಳ ಸದ್ದು ಕೇಳಿಸತೊಡಗಿತು. ತುಸು ದೂರದಲ್ಲಿ ಕೋಣೂರಿನ ಅಡಕೆತೋಟ ಗದ್ದೆಬಯಲುಗಳೂ ಇಣುಕಿ ತೋರಿದುವು.

ಕಾಲು ದಾರಿ ಕವಲಿದೆಡೆ ಗುತ್ತಿ ನಿಂತನು: “ನಾನಿಲ್ಲೆ ಅಗಚ್ತೀನ್ರೋ ಹಳೆಮನೆಗೆ.”

ನಾಗತ್ತೆ ತನ್ನ ಮಡಿಲಿಗೆ ಕೈಹಾಕಿ ಒಂದು ಎಲೆ, ಒಂದು ಅಡಕೆ, ಒಂದು ತುಂಡು ಹೊಗೆಸೊಪ್ಪು ಹೊರತೆಗೆದು ‘ಕೊಳ್ಳೊ’ ಎಂದು ಒಂದು ‘ಬಾಯಿಗೆ’ ಕೊಟ್ಟಳು.

ಗುತ್ತಿ ಅಂಜಲಿಯೊಟ್ಟಿ, ಮೇಲಿಂದ ಬೀಳುವ ಆ ಇಷ್ಟವಸ್ತುವನ್ನು ಆತು ಹಿಡಿದು, ‘ಬತ್ತೀನ್ರೋ’ ಎಂದು ಬೀಳ್ಕೊಂಡು, ಹಿಂದಿರುಗಿ, ಅದುವರೆಗೆ ಹೆಂಗಸರಿಗಾಗಿ ಮೆಲ್ಲನೆ ನಡೆದ ಹೊತ್ತನ್ನು ಮತ್ತೆ ಗೆದ್ದು ಸಂಪಾದಿಸುವ ಉದ್ದೇಶದಿಂದಲೋ ಎಂಬಂತೆ, ಸರಸರನೆ ಕಾಲು ಹಾಕಿದನು.