ನಾಗತ್ತೆ ಗುತ್ತಿಯ ಹತ್ತಿರ ತಾನು ಹೋಗುತ್ತಿರುವುದು ಕೋಣೂರಿಗೆ ಎಂಬಂತೆ ಮಾತಾಡಿದ್ದರೂ ಅವಳ ಪಯಣಕ್ಕೆ ನಿಜವಾದ ಗುರಿ ಹೂವಳ್ಳಿಯೆ ಆಗಿತ್ತು. ಕೋಣೂರಿನಲ್ಲಿ ಹಗಲೂಟ ಮುಗಿಸಿ, ಇಳಿಹಗಲಿನಲ್ಲಿ ಹೊರಟರೆ ಬೈಗಾಗುವ ಮುನ್ನ ಹೂವಳ್ಳಿಗೆ ಸೇರಬಹುದೆಂಬುದು ಅವಳ ಹರವು. ಅಲ್ಲಿ ಮುಂದೆ ನಡೆಯುವ ಕಾರ್ಯಕ್ರಮ ಅವಳಿಗೂ ಹೂವಳ್ಳಿ ವೆಂಕಟಣ್ಣನಿಗೂ ಮಾತ್ರವೆ ತಿಳಿದ ಒಳಸಂಚಾಗಿತ್ತು. ತನ್ನ ಸೊಸೆಯ ಬರಿಯ ಕಡಗದ ಕೈಗೆ ಬಳೆಯನ್ನೂ, ತೊಡಿಸಿ ಅವಳನ್ನು ಸುಮಂಗಲಿ ಮಾಡಿ ನೆಲೆಗೊಳಿಸುವ ಸಲುವಾಗಿ ನಾಗತ್ತೆ ಒಂದು ಭಯಂಕರ ವ್ಯೂಹವನ್ನೆ ಹೂಡಿದ್ದಳು. ಅಂತಹ ವ್ಯೂಹದ ವಿಚಾರವಾಗಿ ವೆಂಕಟಣ್ಣನಿಗೆ ಸ್ಪಷ್ಟ ಕಲ್ಪನೆ ಕೊಟ್ಟಿರಲಿಲ್ಲ. ವೆಂಕಟಣ್ಣನಂತಹ ‘ಪಶು’ ವಿನಂತಹ ಮನುಷ್ಯ ತಾನು ಒಡ್ಡಿದ ವ್ಯೂಹಕ್ಕೆ ಅದರ ಅರಿವಿದ್ದೂ ಕಾಲುಹಾಕಲು ಹಿಂಜರಿಯುತ್ತಾನೆಯೊ ಏನೊ ಎಂಬ ಶಂಕೆ ನಾಗತ್ತೆಯನ್ನು ಬಾಧಿಸುತ್ತಿತ್ತು. ತನ್ನ ಹುನ್ನಾರು ಗೆದ್ದರೆ ವೆಂಕ್ಟಣ್ಣನ ಬಹುದಿನದ ಇಷ್ಟಾರ್ಥ ಕೈಗೂಡಿ ಅವನಿಗೆ ಸಂತೋಷವಾಗುತ್ತದೆ. ಎನ್ನುವುದರಲ್ಲಿ ನಾಗತ್ತೆಗೆ ಸಂದೇಹವಿರಲಿಲ್ಲ. ಆದರೆ ವೆಂಕಟಣ್ಣನಂತಹ ಸಾಧಾರಣ ಮರ್ಯಾದಸ್ಥ ಗೃಹಸ್ಥ, ತನ್ನ ಸುಖಕ್ಕಾದರೂ, ನಾಗತ್ತೆಯಂತಹ ಪ್ರಚ್ಛನ್ನ ಧೂರ್ತೆ ಕೈಕೊಳ್ಳಲು ಹಿಂಜರಿಯದ ಅಪಖ್ಯಾತಿಯ ಉಪಾಯವನ್ನು ಒಪ್ಪದಿದ್ದರೆ?

ಪ್ರಾಯದ ತನ್ನ ಸೊಸೆಯ ‘ಗಂಡ ಸತ್ತ ಮುಂಡೆಯತನ’ವನ್ನು ಪರಿಹರಿಸಿ, ಅವಳನ್ನು ಉದ್ದಾರಮಾಡಲು ನಾಲ್ಕಾರು ಕಡೆಗಳಲ್ಲಿ ತಾನು ಕೈಕೊಂಡ ಪ್ರಯತ್ನಗಳೆಲ್ಲ ನಾಗಕ್ಕನ ಹಠಮಾರಿತನದಿಂದ ವ್ಯರ್ಥವಾದುದನ್ನು ಕಂಡು ನಾಗತ್ತೆ ಎಂತಹ ಮನಃಶಾಸ್ತ್ರಜ್ಞನ ಮನೋವಿಶ್ಲೇಷಣೆಯೂ ಬೆರಗಾಗುವಂತಹ ಉಪಾಯಗಳನ್ನು ಆಲೋಚಿಸಿದ್ದಳು. ಹೇಳಲಾಗಲಿ ಬರೆಯಲಾಗಲಿ ಮುದ್ರಿಸಲಾಗಲಿ ಸಾಧ್ಯವಾಗದಂತಹ ಅಶ್ಲೀಲ ಅಸಹ್ಯೋಪಾಯಗಳನ್ನು ಪ್ರಯೋಗಿಸಿದ್ದಳು. ಸೊಸೆ ಅವುಗಳೊಂದನ್ನೂ ಅರಿಯದಿದ್ದರೂ ಅತ್ತೆಗೆ ಅವು ಮೆಲ್ಲಮೆಲ್ಲನೆ ಯಶಸ್ವಿಯಾಗುವಂತೆ ತೋರಿತ್ತು.

ಹೋದವರುಷ ಸಸಿನೆಡುವ ಸಮಯದಲ್ಲಿ ಹಿಡಿದು ಗದ್ದೆಕೊಯ್ಲು ಪೂರೈಸುವವರೆಗೂ ಅತ್ತೆ ಸೊಸೆಯರಿಬ್ಬರೂ ಹೂವಳ್ಳಿ ವೆಂಕಟಣ್ಣನ ಮನೆಯಲ್ಲಿ ಅವನ ಆರಂಭದ ಕೆಲಸಕ್ಕೆ ನೆರವಾಗಿ ಬೀಡುಬಿಟ್ಟಿದ್ದರು. ಅಲ್ಲಿಯೆ ನಾಗತ್ತೆ ತನ್ನ ರಹಸ್ಯ ಪ್ರಯೋಗಗಳನ್ನು ಪ್ರಾರಂಭ ಮಾಡಿದ್ದು. ಕೋಣೂರಿನ ಕಾಗಿನಹಳ್ಳಿ ಅಮ್ಮ ಅತ್ತೆ ಸೊಸೆಯರಿಬ್ಬರನ್ನೂ ತಮ್ಮ ಮನೆಯಲ್ಲಿಯೆ ಇದ್ದುಕೊಂಡು ಸಸಿ ನೆಡುವ ಕೆಲಸ ಮಾಡುವಂತೆ ಆಹ್ವಾನಿಸಿದ್ದರೂ ನಾಗತ್ತೆ ಏನೇನೊ ಸಬೂಬು ಹೇಳಿ ಹೂವಳ್ಳಿಗೇ ಸೊಸೆಯನ್ನು ಸಾಗಿಸಿಕೊಂಡು ಹೋಗಿದ್ದಳು. ಅದಕ್ಕೆ ನಿಜವಾದ ಕಾರಣ ಬೇರೆಯಾಗಿತ್ತು. ಹೊಟ್ಟೆಬಟ್ಟೆಯ ಸುಖದ ದೃಷ್ಟಿಯಿಂದಾಗಲಿ ಕೆಲಸ ಹಗುರವಾಗಿರುವ ದೃಷ್ಟಿಯಿಂದಾಗಲಿ ಜಾಗವನ್ನು ಗೊತ್ತು ಮಾಡುವ ಪಕ್ಷದಲ್ಲಿ ನಾಗತ್ತೆ ಖಂಡಿತ ಕೋಣೂರನ್ನೆ ಆರಿಸುತ್ತಿದ್ದಳು. ಕೋಣೂರು ರಂಗಪ್ಪಗೌಡರ ಮನೆ ಹೂವಳ್ಳಿ ವೆಂಕಟ್ಟನ ಮನೆಗಿಂತ ಎಲ್ಲದರಲ್ಲಿಯೂ ದೊಡ್ಡತನದ್ದಾಗಿತ್ತು. ವೆಂಕಟಣ್ಣನಿಗೆ ತನ್ನದೇ ಆದ ಸ್ವಂತ ಜಮೀನು ಇದ್ದುದೂ ಅಷ್ಟಕ್ಕಷ್ಟೆ. ಹಳೆಮನೆ ದೊಡ್ಡ ಹೆಗ್ಗಡೆಯವರ ಗದ್ದೆಯನ್ನೂ ಬೆಟ್ಟಳ್ಳಿ ಕಲ್ಲಯ್ಯಗೌಡರ ಅಡಕೆಯ ತೋಟವನ್ನೂ ಗುತ್ತಿಗೆಗೆ ತೆಗೆದುಕೊಂಡು ಸ್ವಲ್ಪ ಹೆಚ್ಚು  ಕಡಿಮೆ ಅವರ ಒಕ್ಕಲಾಗಿಯೇ ಇದ್ದನು. ಆದರೆ ಸಜಾತಿಯವನಾಗಿ ಹೆಣ್ಣು ಕೊಟ್ಟುತಂದ ನೆಂಟಸ್ತಿಕೆಯ ಹಳೆಯ ಸಂಬಂಧದಿಂದ ಸಮಾನಸ್ಕಂಧನೆಂಬಂತೆ ನಡೆದುಕೊಳ್ಳುತ್ತಿದ್ದನು. ಆದರೆ ನಾಗತ್ತೆಗೆ ಬೇಕಾಗಿದ್ದ ಒಂದು ಸಲ್ಲಕ್ಷಣ ಕೋಣೀರು ರಂಗಪ್ಪಗೌಡರಿಗೆ ಇರಲಿಲ್ಲ. ಹೂವಳ್ಳಿ ವೆಂಕಟಣ್ಣನಿಗೆ ಹೆಂಡತಿ ತೀರಿಹೋಗಿ ಅನೇಕ ವರ್ಷಗಳಾಗಿದ್ದರೂ, ಮತ್ತೊಂದು ಮದುವೆಯಾಗಲು ಅವನು ಬಹಳ ಪ್ರಯತ್ನಪಟ್ಟಿದ್ದರೂ, ಅವನಿನ್ನೂ ಒಂಟಿಯಾಗಿಯೆ ಉಳಿದಿದ್ದ; ಅದಕ್ಕಾಗಿ ತುಂಬ ಪರಿತಪಿಸುತ್ತಲೂ ಇದ್ದ. ತನ್ನ ಮದುವೆಯ ಅನಿವಾರ್ಯ ಅವಶ್ಯಕತೆಯನ್ನು ಮನಗಾಣಿಸಲು ಅವನು ಎತ್ತುತ್ತಿದ್ದ ಸಖೇದ ಕಾರಣೋದ್ಗಾರ: ‘ಒಂದು ಗಂಜಿ ನೀರು ಮಾಡಿ ಹಾಕುವುದಕ್ಕಾದರೂ ಒಬ್ಬಳು ಇಲ್ಲದೆ ಇದ್ದರೆ ಹ್ಯಾಂಗೆ?’

‘ಗಂಜಿನೀರು’ ಮಾಡಿಹಾಕುವುದಕ್ಕೇನೂ ಜನ ಇದ್ದರು. ಚಿನ್ನಮ್ಮನ ಅಜ್ಜಿ, ವೆಂಕಟಣ್ಣನ ಅತ್ತೆ ಎಂದರೆ ಹೆಂಡತಿಯ ತಾಯಿ, ಮೊಮ್ಮಗಳ ನೆರವಿನಿಂದ ಅನ್ನ ಕಾಣಿಸುವ ಒಗತನವನ್ನು ಯಾವ ದೂರಿಗೂ ಅವಕಾಶವೊದಗದಿರುವಷ್ಟರ ಮಟ್ಟಿಗೆ ನೆರವೇರಿಸುತ್ತಿದ್ದಳು. ಮುದುಕಿ ಕೃಶಶರೀರಿಯಾಗಿದ್ದರೂ ಮೊಮ್ಮಗಳ ಮಮತೆ ಅವಳನ್ನು ಕಷ್ಟಸಹಿಷ್ಣುವನ್ನಾಗಿ ಮಾಡಿತ್ತು. ವೆಂಕಟಣ್ಣನಿಗೆ ತನ್ನ ಮಗಳನ್ನು ಕೊಡುವಾಗಲೆ ಆಕೆ ತುಂಬ ಮೀನಮೇಷ ಮಾಡಿದ್ದಳು. ತೆಳ್ಳಗೆ ಬೆಳ್ಳಗೆ ಚೆಲುವೆಯಾಗಿದ್ದ ತನ್ನ ಮಗಳಿಗೆ ವೆಂಕಟಣ್ಣನಂತಹ ರೂಕ್ಷ ವ್ಯಕ್ತಿ ತಕ್ಕ ವರನಲ್ಲವೆಂಧು ಅವಳು ಮೊದಮೊದಲು ಆ ಮದುವೆಗೆ ಒಪ್ಪಿರಲಿಲ್ಲ. ಅಲ್ಲದೆ ವೆಂಕಣ್ಣನ ಬಡತನಕ್ಕೆ ಚಿನ್ನಮ್ಮನ ತಾಯಿಯಂತಹ ಸೂಕ್ಷ್ಮ ಕಾಯದ ಸ್ಫುರದ್ರೂಪಿಣಿಯನ್ನು ಸಾಂಸಾರಿಕ ಕ್ಲೇಶ ಕಷ್ಟಗಳಿಂದ ದೂರವಿಟ್ಟು ರಕ್ಷಿಸಕೊಂಡು ಬರುವ ಶಕ್ತಿ ಇಲ್ಲವೆಂಬುದೂ ಚಿನ್ನಮ್ಮನ ಅಜ್ಜಿಗೆ ಚೆನ್ನಾಗಿ ಗೊತ್ತಿತ್ತು.  ನೀರು, ಕಟ್ಟಿಗೆ, ದರಗು, ಗೊಬ್ಬರ ಹೊರುವುದರಿಂದ ಹಿಡಿದು ಸಸಿನೆಟ್ಟಿ, ಗದ್ದೆಕೊಯ್ಲು, ಕಳೆಕೀಳುವುದು ಮೊದಲಾದ ಎಲ್ಲ ಕೆಲಸಗಳನ್ನೂ, ಮನೆಗೆಲಸದ ಜೊತೆಗೆ, ಹೂವಳ್ಳಿಗೆ ಹೋದ ಹೆಣ್ಣು ಮಾಡಬೇಕಾದುದು ಅನಿವಾರ್ಯವಾಗಿತ್ತು. ವೆಂಕಟಣ್ಣನಿಗೆ ಇಲ್ಲದಿದ್ದುದು ಆ ಆರ್ಥಿಕ ಶಕ್ತಿ ಮಾತ್ರವಲ್ಲ; ಅದಕ್ಕೆ ಬೇಕಾದ ನಯ ನಾಜೋಕಿನ ಸಂಸ್ಕೃತಿಗೂ ಅವನು ಬಹು ದೂರವಾಗಿಯೆ ಇದ್ದನು. ಚಿನ್ನಮ್ಮನ ಅಜ್ಜಿಯ ಮನೆ ಬಡ ಒಕ್ಕಲದ್ದಾಗಿದ್ದರೂ ಚಿನ್ನಮ್ಮನ ತಾಯಿಯ ರೂಪ ಶ್ರೀಮಂತರ ಆಸೆಯನ್ನೂ ಸೆಳೆದಿತ್ತು. ಹೊಸಕೇರಿ ಬಸಪ್ಪ ನಾಯಕರು  ತನ್ನ ಮಗನಿಗೆ ಅವಳನ್ನು  ತಂದುಕೊಳ್ಳುವ ಮನಸ್ಸು ಮಾಡಿ, ಬಾಯಿಬಿಟ್ಟು ಕೇಳಿಯೂ ಇದ್ದರು. ಆದರೆ ಹಳೆಮನೆಯ ಸುಬ್ಬಣ್ಣ ಹೆಗ್ಗಡೆಯವರ ಹೆಂಡತಿಯ ಮಾತ್ಸರ್ಯ ಆ ಸಂಬಂಧಕ್ಕೆ ಅಡ್ಡ ಬಂದಿತ್ತು. ಆ ಹೆಗ್ಗಡತಿ ತಮ್ಮ ಒಕ್ಕಲೊಬ್ಬಳ ಮಗಳು ಬಸಪ್ಪನಾಯಕರಂತಹ ಶ್ರೀಮಂತರ ಸೊಸೆಯಾಗುವುದನ್ನು ಸಹಿಸದೆ ಹೊಟ್ಟೆಯುರಿಯಿಂದ ಅವಳನ್ನು ವೆಂಕಟಣ್ಣನಿಗೆ ಕೊಡುವಂತೆ ಸಂಚು ಮಾಡಿದ್ದಳು. ವೆಂಕಟಣ್ಣನಿಗೆ ಮದುವೆಯಾದ ಸ್ವಲ್ಪ ಕಾಲದಲ್ಲಿಯೆ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರ ಹೆಂಡತಿ ಇದ್ದಕ್ಕಿದ್ದಹಾಗೆ ತೀರಿಕೊಂಡಾಗ ವೆಂಕಟಣ್ಣನ ಅತ್ತೆ ‘ನನ್ನ ಮಗಳನ್ನು ದೊಡ್ಡೊರ ಮನೆ ಸೇರದ ಹಾಂಗೆ ಮಾಡಿದ ಆ ಹೊಟ್ಟಿಕಿಚ್ಚಿನ ಪಾಪಕ್ಕೇ ಆ ಹೆಗ್ಗಡ್ತೀಗೆ ರಣ ಹೂಡೀತು!’ ಎಂದಿದ್ದಳಂತೆ.

ವೆಂಕಟಣ್ಣನನ್ನು  ಮದುವೆಯಾದ ಚಿನ್ನಮ್ಮನ ತಾಯಿ ವರುಷಕ್ಕೊಂದರಂತೆ ಮಕ್ಕಳನ್ನು ಹೆತ್ತು ಐದನೆಯ ಹೆರಿಗೆಯಲ್ಲಿ ತೀರಿಕೊಂಡಿದ್ದಳು. ಮೊದಲನೆಯ ಮಗು ಚಿನ್ನಮ್ಮ ವಿನಾ ಉಳಿದೆಲ್ಲಾ ಮಕ್ಕಲಳೂ ಸತ್ತುಹೋಗಿದ್ದುವು. ವೆಂಕಟಣ್ಣನಿಗೆ ಸಂಸ್ಕೃತಿಯ ಅಭಾವ ಯಾವ ಪರಿಮಾಣದಲ್ಲಿತ್ತೊ ಅದಕ್ಕೆ ಸಮಸ್ಪರ್ಧಿಯಾಗಿ ಪಶುಬಲಿಷ್ಠತೆಯಿದ್ದುದೂ ಚಿನ್ನಮ್ಮ ಬಹುಬೇಗ ತಬ್ಬಲಿಯಾಗಲು ಒಂದು ಮುಖ್ಯ ಕಾರಣವಾಗಿತ್ತು.

ಚಿನ್ನಮ್ಮ ತನ್ನ ತಾಯಿಯ ಚೆಲುವನ್ನೆಲ್ಲ ಪಡೆದು ಹುಟ್ಟಿದ್ದಳು. ಆದರೆ ಸುತ್ತಲೆಲ್ಲಿಯೂ ಅದನ್ನು ಗಮನಿಸುವ ಪ್ರಜ್ಞೆ ಇರಲಿಲ್ಲವಾದ್ದರಿಂದಲೂ, ಸುತ್ತಲೂ ದಟ್ಟಯಿಸಿದ್ದ ಸಂಸ್ಕೃತಿದಾರಿದ್ರ್ಯದ ದೆಸೆಯಿಂದಲೂ, ಅವಳು ಕಾಡುಕಾಡಾಗಿ ಕೊಳಕುಕೊಳಕಾಗಿ ಮಣ್ಣುಹಿಡಿದು ಕಾಂತಿ ಕುಂದಿದ ಚಿನ್ನದ ಸಲಾಕೆಯಂತಿದ್ದಳು. ಅವಳ ಅಜ್ಜಿ ಅವಳನ್ನು ಸ್ವಲ್ಪಕಾಲ ತನ್ನ ಮನೆಗೆ ಕರೆದೊಯ್ದು ಲಾಲನೆ ಪಾಲನೆ ಮಾಡಿದ್ದಳು. ಬಡ್ಡು ಹಿಡಿದು ಕೆದರಿದ್ದ ಕೂದಲನ್ನು ಮೀಯಿಸಿ ಎಣ್ಣೆ ಕಾಣಿಸಿ ಬಾಚಿ ಸರಿ ಮಾಡಿದ್ದಳು. ಮೂರು ಹೊತ್ತೂ ಇಳಿಯುತ್ತಿದ್ದ ಸಿಂಬಳ ಸುರುಕುತನಕ್ಕೆ ಮದ್ದು ಕೊಡಿಸಿ ಆರೈಕೆ ಮಾಡಿದ್ದಳು. ಚಳಿಜ್ವರದಿಂದ ಗಡ್ಡೆ ಬೆಳೆದು ಡೊಳ್ಳುಗೊಂಡು ಮಿರುಗುತ್ತಿದ್ದ ಹೊಟ್ಟೆ ಜಕ್ಕುವಂತೆ ಮಾಡಿ, ಬತ್ತಲೆಯನ್ನು ಪರಿಕಾರದಿಂದ ಮುಚ್ಚಿದ್ದಳು. ಕುಡಿವ ಹಾಲಿನಿಂದ ಹಿಡಿದು ಹೊರಳಾಡುತ್ತಿದ್ದ ಮಣ್ಣಿನವರೆಗೆ ಜೊಲ್ಲು ಅಂಟಾಗಿ ನಾರುತ್ತಿದ್ದ ‘ದಿಷ್ಟಿಮಣಿ’ಸರವನ್ನು ಶುಚಿಗೊಳಿಸಿ ಹಾಕಿದ್ದಳು. ಕೈಗೆ ಕಾಲಿಗೆ ಕಿವಿಗೆ ಆಗಿನ ಕಾಲದ ಅಭಿರುಚಿಗೆ ಅನುರೂಪವಾದ ಬಡತನದ ಒಡವೆಗಳನ್ನೂ ತೊಡಿಸಿದ್ದಳು. ಕಡೆಗೆ, ಮತ್ತೊಂದು ಮದುವೆ ಮಾಡಿಕೊಳ್ಳಲು ಪ್ರಯತ್ನಿಸಿ ವಿಫಲನಾಗಿದ್ದ ವೆಂಕಟಣ್ಣನು ಗಟ್ಟದತಗ್ಗಿನವರ ಬಿಡಾರಗಳಲ್ಲಿ ಇರುಳುಬೇಟೆಗೆ ಷುರುಮಾಡಿದ್ದಾನೆಂಬ ಸುದ್ದಿ ಕೇಳಿ, ಮೊಮ್ಮಗಳ ಸಲುವಗಿಯಾದರೂ ಅವನ ಮನೆಯನ್ನು ನೆಟ್ಟಗೆ ಮಾಡಬೇಕೆಂಬ ಉದ್ದೇಶದಿಂದ ಚಿನ್ನಮ್ಮನನ್ನೂ ಕರೆದುಕೊಂಡು ಬಂದು ಹೂವಳ್ಳಿಯಲ್ಲಿಯೆ ನೆಲಸಿದ್ದಳು.

ಅಜ್ಜಿಯ ಆರೈಕೆಯಲ್ಲಿ ಚಿನ್ನಮ್ಮ ಹುಲುಸಾಗಿ ಹುಲುಸಾಗಿ ಬೆಳದಿದ್ದಳು. ಆದರೆ ತನ್ನ ಸುತ್ತಮುತ್ತಲಿದ್ದ ಇತರ ಹಳ್ಳಿಯ ಹುಡುಗಿಯರಂತೆಯೆ ನಯ ನಾಜೋಕುಗಳಿಂದ ದೂರವಾಗಿ ಒರಟುಒರಟಾಗಿಯೆ ದೊಟ್ಟವಳಾಗಿದ್ದಳು. ಅಜ್ಜಿಗೆ ಮನೆಗೆಲಸದಲ್ಲಿ ನೆರವಾಗುವುದರಿಂದ ಹಿಡಿದು ಕೊಟ್ಟಿಗೆಯಿಂದ ದನ ಬಿಟ್ಟುಕೊಂಡು ಹೋಗಿ ಹಕ್ಕಲು ಬಯಲಿನಲ್ಲಿ ಗುಡ್ಡಗಾಡಿನ ಓರೆಯಲ್ಲಿ ಮೇಯಿಸುವವರೆಗೂ ಅವಳ ಕಾರ್ಯಭಾರ ವ್ಯಾಪಿಸಿತ್ತು. ಹೂವಳ್ಳಿಗೆ ಒಂದೆರಡು ಮೈಲಿಗಳೊಳಗೇ ಇರುವ ಕೋಣೂರಿನ ಮನೆಯಲ್ಲಿಯೆ ಒಂದು ಐಗಳ ಮಠ ಇದ್ದು, ಹಳೆಮನೆ ಬೆಟ್ಟಳ್ಳಿ ಕಡೆಯ ಸಮೀಪದ ಊರು ಮನೆಯ ಕೆಲವೇ ಮಕ್ಕಳು ‘ಬರಾವು’ ಕಲಿಯುತ್ತಿದ್ದರಾದರೂ, ಗಂಡು ಮಕ್ಕಳಿಗೆ ಅಪೂರ್ವವೂ ಅಸಾಧ್ಯವೂ ಅತಿ ವಿರಳವೂ ಆಗಿದ್ದ ಓದುಬರಹವನ್ನು ‘ಹೆಣ್ಣು ಹೆಂಗಸರಿಗೆ’ ಕಲಿಸಲು ಯಾರೂ ಒಪ್ಪುತ್ತಿರಲಿಲ್ಲ. ಹೆಂಗಸರು ಓದುವುದನ್ನು ಕಂಡೂ ಇರಲಿಲ್ಲ, ಕೇಳಿಯೂ ಇರಲಿಲ್ಲ. ಹೆಂಗಸರು ಓದು ಕಲಿಯುವುದು ಗಂಡಸರು ಸೀರೆಯುಡುವುದಕ್ಕಿಂತಲೂ ಹಾಸ್ಯಾಸ್ಪದವಾಗಿತ್ತು. ಒಮ್ಮೆ ಕೋಣೂರಿನ ಹುಡುಗ ಮುಕುಂದಯ್ಯ ‘ವೆಂಕ್ಟಮಾವ’ನಿಗೆ ‘ಚಿನ್ನೀನ ನಮ್ಮ ಮನೆಗೆ ಬರೆಯೋಕೆ ಕಳ್ಸಿ’ ಎಂದು ಯಾವುದೋ ಮಾತಿನ ಸಂದರ್ಭದಲ್ಲಿ ಹೇಳಿದಾಗ, ಹೂವಳ್ಳಿ ವೆಂಕಟಣ್ಣ ನಕ್ಕು ‘ಹೌದು ಕಣ್ರೋ ಅವಳಿನ್ನು ಬರಾವು ಕಲ್ತು ಮಣೆಗಾರಿಕೆ ಮಾಡೋದೊಂದು ಬಾಕಿ!’ ಎಂದು ಲೇವಡಿ ಮಾಡಿದ್ದನು.

* * *

ಮೊಮ್ಮಗಳನ್ನು ಕರೆದುಕೊಂಡು ಚಿನ್ನಮ್ಮನ ಅಜ್ಜಿ ತನ್ನ ಮನೆ ಬಿಟ್ಟು ಹೂವಳ್ಳಿಯಲ್ಲಿ ನೆಲೆಸುವುದಕ್ಕಾಗಿ ಅಲ್ಲಿಗೆ ಬಂದ ಹೊಸತರಲ್ಲಿ, ಬಾಂಧವ್ಯದ ಸಂಪ್ರದಾಯದಂತೆ ಅವರನ್ನು ಮಾತಾಡಿಸುವುದಕ್ಕಾಗಿ ಕೋಣೂರಿನ ಕಾಗಿನಹಳ್ಳಿ ಅಮ್ಮ-ದಾನಮ್ಮ ಹೆಗ್ಗಡತಿ-ತನ್ನ ಕಿರಿಮಗ (ಹತ್ತು ವರ್ಷದ ಹುಡುಗ) ಮುಕುಂದಯ್ಯನಯೊಡನೆ ಹೂವಳ್ಳಿಗೆ ಹೋಗಿದ್ದಳು. ಆರು ವರ್ಷದ ಹುಡುಗಿ ಚಿನ್ನಮ್ಮನನ್ನು ಹತ್ತಿರಕ್ಕೆ ಕರೆದು ಕೂರಿಸಿಕೊಂಡು, ತಾನು ತಂದಿದ್ದ ಕೊಬರಿ ಬೆಲ್ಲಗಳನ್ನು ಮಡಿಲಿನಿಂದ ತೆಗೆದುಕೊಡುತ್ತಾ, ಪಕ್ಕದಲ್ಲಿದ್ದ ತನ್ನ ಮಗನನ್ನು ತೋರಿಸಿ “ಇಂವ ಯಾರು? ಹೇಳು ನೋಡಾನ?” ಎಂದಾಗ, ಹುಡುಗಿ ಮುಗ್ಧ ನಯನಗಳನ್ನು ಅರಳಿಸಿ ಮೊದಮೊದಲು ಬೆಪ್ಪಾಗಿ ನೋಡುತ್ತಿದ್ದವಳು, ಕ್ರಮೇಣ ಗುರುತು ಹಿಡಿದವಳಂತೆ ಬಾಯಿ ತೆರೆದು ಮುಗುಳುನಗೆ ಬೀರಿ, ಕೊನೆಗೆ ನಾಚಿ ತಲೆಬಾಗಿ, ಕೇಳಿಸಿತೋ ಕೇಳಿಸಲಿಲ್ಲವೊ ಎನ್ನುವಂತೆ ಮೆಲ್ಲಗೆ “ಅವರು”! ಎಂದಿದ್ದಳು.

“ಅವರು ಅಂದರೆ? ಅವರು ಯಾರು ಅಂತಲೇ ನಾನು ಕೇಳಿದ್ದು.” ಎಂದು ಕಾಗನಹಳ್ಳಿ ಅಮ್ಮ ವಿನೋದವಾಡಿ ಮುದ್ದುಮಾಡಲು ಚಿನ್ನಮ್ಮ ಮತ್ತೆ ಮೊದಲು ಹೇಳಿದ್ದಂತೆಯೇ “ಅವರು!” ಎಂದಳು.

ಆಗ ನಡುವೆ ಬಾಯಿ ಹಾಕಿದ ಚಿನ್ನಮ್ಮನ ಅಜ್ಜಿ ನಗುತ್ತಾ “ಅಯ್ಯೊ, ಮಗುವೇ, ಬಿರುಗಾಗದೆ ಮಾಡ್ತೀಯಲ್ಲೇ! ‘ಅವರು ‘ಅವರು’ ಅಂದರೆ? ಅಂವ ನಿನ್ನ ಬಾವ ಕಣೇ” ಎಂದಿದ್ದಳು.

ಅಜ್ಜಿ ಹಾಗೆಂದೊಡನೆಯೆ ಹುಡುಗಿ ಮತ್ತೆ ತಲೆ ಎತ್ತಿ, ತುಸು ನಾಚಿದಂತೆ ನಗುತ್ತಾ, ತನ್ನನ್ನೆ ನೋಡುತ್ತಿದ್ದ ಮುಕುಂದನನ್ನು ಕಣ್ಣಿಗೆ ಕಣ್ಣಿಟ್ಟು ನೋಡಿ, ಆಗತಾನೆ ‘ಕಂಡು’ ಮತ್ತೆ ಈಗತಾನೆ ತಟಕ್ಕನೆ ಸಂಪೂರ್ಣವಾಗಿ ಅಳಿಸಿ ಹೋಗಿದ್ದುದ್ದನ್ನು ಮತ್ತೊಮ್ಮೆ ನೆನೆಯಲು ಪ್ರಯತ್ನಿಸಿ ಸೋತಂತೆ, ಮುಗ್ಧಳಾಗಿ ನಗುತ್ತಾ ತನ್ನ ಅಜ್ಜಿ ಹೇಳಿಕೊಟ್ಟದ್ದನ್ನು ಕೋಣೂರು ಅತ್ತೆಮ್ಮನಿಗೆ ಒಪ್ಪಿಸುವಂತೆ “ಬಾಆಆವ!” ಎಂದಿದ್ದಳು, ಕೀಚಲು ಧ್ವನಿಯಲ್ಲಿ, ದೀರ್ಘವಾಗಿ!.

ಅಲ್ಲಿಗೆ ಪೂರೈಸಿತ್ತು, ಅಂದು ಹೂವಳ್ಳಿಯ ಆ ಮಾಣಿಗೆ ಒಳಗೆ ನಡೆದಿದ್ದ ಮುಗ್ಧ ಘಟನೆ. ಚಿನ್ನಮ್ಮನ ಅಜ್ಜಿಯಾಗಲಿ ಕೋಣೂರಿನ ಕಾಗಿನಹಳ್ಳಿ ಅಮ್ಮನಾಗಲಿ ಹುಡುಗಿ ‘ಅವರು!’ ‘ಅವರು!’ ಎಂದು ಹೇಳಿದ್ದ ಆ ಉತ್ತರ ರೂಪದ ಮಾತಿನಲ್ಲಿ ಯಾವ ವಿಶೇಷವನ್ನೂ ಕಂಡಿರಲಿಲ್ಲ. ಅವನು ಆ ಉತ್ತರದಲ್ಲಿ ಚಿಕ್ಕಮಕ್ಕಳ ತೊದಲುನುಡಿಯ ಪರಿಹಾಸ್ಯವನ್ನಲ್ಲದೆ ಬೇರೆ ಏನನ್ನೂ ಗಮನಿಸಿರಲಿಲ್ಲ. ಗಮನಿಸುವುದಕ್ಕೆ ತಾನೆ ಅಲ್ಲಿ ಏನಿತ್ತು? ಚಿನ್ನಮ್ಮ ತನ್ನ ಅಜ್ಜಿಯ ಸಲಹೆಯನ್ನು ಸಂಪೂರ್ಣವಾಗಿ ಅನುಮೋದಿಸಿದವಳಂತೆ ‘ಬಾಆಆವ’! ಎಂದವಳೆ, ಅತ್ತೆಮ್ಮ ಕೊಟ್ಟಿದ್ದ ಕೊಬರಿ ಬೆಲ್ಲಗಳ ಯೋಗಕ್ಷೇಮ ವಿಚಾರಣೆಗೆ ತೊಡಗಿದ್ದಳು! ಮುಕುಂದ ಸ್ವಲ್ಪ ಹೊತ್ತು ಕುಳಿತಿದ್ದು, ದೊಡ್ಡವರು ಆಡಿಕೊಳ್ಳುತ್ತಿದ್ದ ಸಂವಾದಕ್ಕೆ ಬೇಸರಗೊಂಡು ಆಕಳಿಸಿ ಮೇಲೆದ್ದು, ಕಣ್ಣು ಸನ್ನೆಯಿಂದಲೆ ತನ್ನ ಹೊಸ ಪರಿಚಯದ ‘ಚಿನ್ನಿಗೆ’ ತನ್ನನ್ನು ಹಿಂಬಾಲಿಸುವಂತೆ ಸೂಚನೆ ಕೊಟ್ಟು, ಹೊರ ಅಂಗಳಕ್ಕೆ ಹೋಗಿದ್ದನು. ಕೊಬರಿ ಬೆಲ್ಲದ ಲಾಲಾಜಲ ಮಿಶ್ರವಾದ ಅಂಟುರುಚಿಯನ್ನು ನಾಲಗೆಗೆಂತೋ ಅಂತೆ ತುಟಿ ಕೆನ್ನೆ ಗಲ್ಲಗಳಿಗೂ ಹಂಚುತ್ತಾ, ಚಿನ್ನಮ್ಮನೂ ಎದ್ದು ಮುಕುಂದ ಬಾವನನ್ನು ಅನುಸರಿಸಿದ್ದಳು, ಸದೆಯ ನಡುವೆ ಸೆಗಣಿಗುಪ್ಪೆಯನ್ನು ಕೆದರಿ ಕೆದರಿ ತನ್ನ ಹೂಮರಿಗಳಿಗೆ ಹುಳುವುಣಿಸಿ ಆಡುತ್ತಿದ್ದ ಹೇಟೆಯನ್ನು ಮಾತನಾಡಿಸುವುದಕ್ಕಾಗಿ!

ಆದರೆ ಆ ಘಟನೆ ವಾಸ್ತವವಾಗಿ ಮುಗ್ಧವಾದದ್ದಾಗಿರಲಿಲ್ಲ. ಅಲ್ಲಿದ್ದವರ ಪ್ರಜ್ಞೆಗೆ ಅದು ಸಂಪೂರ್ಣವಾಗಿ ಅಗೋಚರವಾಗಿದ್ದರೂ ಅದ್ಭುತದ ಭೂಮಿಕೆಗೆ ಸೇರಿದುದಾಗಿತ್ತು. ಕಾಗಿನಹಳ್ಳಿ ಅಮ್ಮ ‘ಇಂವ ಯಾರು? ಹೇಳು, ನೋಡಾನ?’ ಎಂದು ಮುದ್ದಿಗಾಗಿ ಪ್ರಶ್ನಿಸಿದಾಗ ಚಿನ್ನಮ್ಮ ಮುಕುಂದಯ್ಯನನ್ನು ನೋಡತೊಡಗಿದ್ದಳು. ಮಕ್ಕಳಿಬ್ಬರ ಕಣ್ಣುಗಳೂ ಸಂಧಿಸಿದೊಡನೆಯೆ ಆ ಒಂದು ಕ್ಷಣದಲ್ಲಿ ಒಂದು ಅತೀಂದ್ರಿಯ ವ್ಯಾಪಾರ ನಡೆದಿತ್ತು: ಚಿಕ್ಕ ಮಗು ಚಿನ್ನಮ್ಮ ಹುಡುಗ ಮುಕುಂದಯ್ಯನಲ್ಲಿ ತನ್ನ ಹಿಂದಿನ ಜನ್ಮದ ಗಂಡನನ್ನು ಕಂಡಿದ್ದಳು! ಆ ಅನುಭವ ನೆನಪಿನ ರೂಪದ್ದಾಗಿಯೂ ಇರಲಿಲ್ಲ, ಅದೊಂದು ಕಾಣುವಿಕೆಯಾಗಿತ್ತು. ಆ ಒಂದು ಕ್ಷಣದರ್ಶನದಲ್ಲಿ ಚಿನ್ನಮ್ಮ ತಾನೂ ಮುಕುಂದಯ್ಯನೂ ತಮ್ಮ ಹಿಂದಣ ಜನ್ಮದಲ್ಲಿ ದಂಪತಿಗಳಾಗಿದ್ದುದನ್ನು ‘ಆಗಿ’ ‘ಅನುಭವಿಸಿ’ ‘ಕಂಡಿದ್ದಳು!’ ಅವಳು ಆಲೋಚಿಸಿ ಹೇಳಿರಲಿಲ್ಲ; ನೆನೆದೂ ಹೇಳಿರಲಿಲ್ಲ; ಅಪರೋಕ್ಷವಾಗಿ ಆಗಿ ಕಾಣುತ್ತಿದ್ದುದನ್ನೆ ‘ಅವರು!’ ಎಂದು ಉತ್ತರವಾಗಿ ಹೇಳಿದ್ದಳು. ಅಲ್ಲಿ ‘ಅವರು! ಅವರು! ಅಂದರೆ? ಅಂವ ನಿನ್ನ ಬಾವ ಕಣೇ!’ ಎಂದ ಮೇಲೆ, ಹುಡುಗಿ ಮತ್ತೆ ತಲೆಯೆತ್ತಿ ನೋಡಿದಾಗ ಅಲ್ಲಿ ಬೇರೆ ಏನೂ ಇರಲಿಲ್ಲ, ಯಾರೂ ಇರಲಿಲ್ಲ. ಕೋಣೂರಿನ ಅತ್ತೆಮ್ಮನ ಮಗ ಪುಟ್ಟ ಹುಡುಗ ಮುಕುಂದಯ್ಯ ಮಾತ್ರ ಇದ್ದ. ತುಸು ನಾಚಿದಂತೆ ತನ್ನನ್ನೆ ನೋಡುತ್ತಾ ಮುಗುಳು ನಗುತ್ತಿದ್ದ: ಒಂದು ಕ್ಷಣಕ್ಕೆ ಮುಂಚೆ ಸ್ಪಷ್ಟವಾಗಿ ಕಂಡದ್ದು, ಆಗ ‘ಕಂಡಿದ್ದೆ’ ಎಂಬ ಅರಿವಾಗಲಿ ನೆನಪಾಗಲಿ ಲವಲೇಶವೂ ಉಳಿಯದಂತೆ ಅಳಿಸಿ ಹೋಗಿತ್ತು. ಅದು ಎಂದೆಂದೂ ನಡೆಯದೆಯೆ ಇದ್ದಿದ್ದರೆ ಹೇಗೆ ಇರುತ್ತಿತ್ತೊ ಹಾಗೆ ಇತ್ತು. ಒಂದು ಕ್ಷಣಮಾತ್ರಕ್ಕೆ ಈ ಜನ್ಮದ ಮಾಯೆಯ ತೆರೆ ಎದ್ದು ಬಿದ್ದಂತಾಗಿತ್ತು. ಒಂದರೆ ಕ್ಷಣದಲ್ಲಿ ಹಿಂದಿನ ಜನ್ಮದ  ಯಾವ ಚಿತ್ರವೊ ಸಂದರ್ಭವೊ ಸನ್ನಿವೇಶವೊ ಘಟನೆಯೊ ಸ್ಮೃತಿಯೊ ಮಿಂಚಿಣುಕಿ ವಿಸ್ಮೃತಿಯ ಕಗ್ಗತ್ತಲೆಯ ಪಾತಾಳ ಪ್ರವೇಶ ಮಾಡಿದಂತಾಗಿತ್ತು.

ತನ್ನ ಓರಗೆಯ ಸಂಗಾತಿಗಳಿಲ್ಲದೆ ದೊಡ್ಡವರೊಡನೆಯ ಒಂಟಿಯೆಂಬಂತೆ ಬೆಳೆಯುತ್ತಿದ್ದ ಚಿನ್ನಿಗೆ ಮುಂಕುಂದ ಒಂದು ಅಲಭ್ಯವೂ ಅಪೂರ್ವವೂ ಆಗ ಅನರ್ಘ್ಯ ವಸ್ತುವಾಗಿ ಕಂಡನು. ಆದರೆ ನಿತ್ಯವೂ ನಾಲ್ಕಾರು ಒಡನಾಡಿಗಳೊಡನೆ ಐಗಳ ಮಠದಲ್ಲಿಯೊ ದನ ಮೇಯಿಸುವ ಹಕ್ಕಲಲ್ಲಿಯೊ ಗದ್ದೆಯಲ್ಲಿಯೊ ತೋಟದಲ್ಲಿಯೊ ಕೆಲಸದ ಆಳುಗಳೊಡನೆಯೊ ಇರುತ್ತಿದ್ದ ಮುಕುಂದನಿಗೆ ಚಿನ್ನಮ್ಮನಲ್ಲಿ ಯಾವ ರೀತಿಯ ಕುತೂಹಲವಾಗಲಿ ಆಸಕ್ತಿಯಾಗಲಿ ಹುಟ್ಟಲಿಲ್ಲ. ನೆಂಟರ ಮನೆಗೆ ಬಂದಾಗ ನೆಂಟರ ಮಕ್ಕಳೊಡನೆ ದಾಕ್ಷಿಣ್ಯದಿಂದ ವರ್ತಿಸುವಂತೆ ಮಾತ್ರ ನಡೆದುಕೊಂಡಿದ್ದನು. ಸ್ವಲ್ಪ ಪ್ರಯತ್ನದಿಂದಲೆ ನಡೆದುಕೊಂಡಿದ್ದನು:

ಹೊರ ಅಂಗಳಕ್ಕೆ ತನ್ನನ್ನು ಹಿಂಬಾಲಿಸಿ ಬಂದ ಚಿನ್ನಿ ತನ್ನ ಬಾಯಲ್ಲಿದ್ದ ಕೊಬ್ಬರಿ ಬೆಲ್ಲವನ್ನು ತಿಂದು ಪೂರೈಸಿ, ತುಟಿ ಮೂಗು ಗಲ್ಲಗಳಿಗೆ ಹಿಡಿದ್ದುದನ್ನು ಒರೆಸಿಕೊಳ್ಳಲು ಪರಿಕಾರದ ಮುಂಭಾಗದ ತುದಿಯನ್ನು, ಸ್ವಲ್ಪ ಹೆಚ್ಚಾಗಿಯೆ, ಅಶ್ಲೀಲದ ಮಟ್ಟದವರೆಗೂ, ಎತ್ತಿದಾಗ ತುಸು ಡೊಳ್ಳೇರಿದ್ದ ಹೊಟ್ಟೆಯನ್ನೂ ತೊಡೆಗಳನ್ನೂ ಕಂಡು ಮುಕುಂದನು ಜಿಗುಪ್ಸೆಪಟ್ಟು ಮುಖ ತಿರುಗಿಸಿ ‘ಇಸ್ಸಿ ಎಂಥ ಹುಡುಗಿಯಪ್ಪಾ!’ ಎಂದುಕೊಂಡಿದ್ದನು ಮನಸ್ಸಿನಲ್ಲಿಯೆ. ತಾನು ತಮ್ಮ ಮನೆಯಲ್ಲಿರುವಾಗ ಸೊಂಟದ ಉಡಿದಾರಕ್ಕೆ ನೇತು ಹಾಕಿ ಕಟ್ಟಿದ್ದ ಲಂಗೋಟಿಯೊಂದು ವಿನಾ ಬೆತ್ತಲೆಯಾಗಿಯೆ ಇರುತ್ತಿದ್ದುದನ್ನು ಅವನು ಅಶ್ಲೀಲವೆಂದು ಭಾವಿಸಿರಲಿಲ್ಲ. ‘ಗಂಡು ಹುಡುಗರು’ ಸಾಮಾನ್ಯವಾಗಿ ಇರುತ್ತಿದ್ದುದೇ ಹಾಗೆ. ಆದರೆ ‘ಹೆಣ್ಣು ಹುಡುಗರು’?

ಅಲ್ಲಿ ಮೇಯುತ್ತಿದ್ದ ಹೇಟೆ ಮತ್ತು ಹೂಮರಿಗಳ ವಿಚಾರವಾಗಿ ಮುಕುಂದ ಬಾವನಿಗೆ ತಿಳಿಸಲು ಕಾತರೆಯಾಗಿ ಚಿನ್ನಿ ಅಕ್ಕರೆಯ ತೊದಲು ನುಡಿಯಲ್ಲಿ ‘ಮತ್ತೆ…. ಮತ್ತೆ….ಬಾವ…. ಈ ಹ್ಯಾಂಟೆ ಸುಬ್ಬಿ ಸರಿಪಾಲಿಗೆ ಸಾಕಿದ್ದು…. ನೋಡು…. ನೋಡು…. ನೋಡೀ ಮರಿ…. ಆ ಅರಿಸಿನ ಬಣ್ಣದ್ದು ಇದೆಯಲ್ಲಾ ಅದು…. ಆ ಕೊಕ್ಕಿನ ಹತ್ತಿರ ಕೆಂಪಗಿದೆಯಲ್ಲಾ  ಅದು… ಅದು…. ನನಗಂತೆ! ಹೌದು, ಬಾವ, ನನಗಂತೆ!’ ಎನ್ನುತ್ತಾ ಬಾವನ ಗಮನವನ್ನು ಸಂಪೂರ್ಣವಾಗಿ ಸೆಳೆಯುವ ಉದ್ದೇಶದಿಂದ ಅವನ ಅಂಗಿಯ ತೋಳನ್ನು ಹಿಡಿದು ಎಳೆಯುತ್ತಿದ್ದಾಗ ಮುಕುಂದನಿಗೆ ದಾಕ್ಷಿಣ್ಯದ ಸಂಯಮವೂ ತಪ್ಪಿಹೋಗಿ ‘ಅಂಗೀ ಎಳೀ ಬೇಡೇ!’ ಎಂದು ಬಿಡಿಸಿಕೊಂಡಿದ್ದನು.

ಅವನ ಅಂಗಿ ಅಷ್ಟು ಅಮೂಲ್ಯವಾದುದಾಗಿತ್ತು! ಆದರೆ ವಾಸ್ತವವಾಗಿ ಅವನ ಅಂಗಿ ಹೊಸತೂ ಆಗಿರಲಿಲ್ಲ. ಸೊಗಸಿನದೂ ಆಗಿರಲಿಲ್ಲ. ಕಸೆಕಟ್ಟುವುದಕ್ಕೆ ಬದಲಾಗಿ ಗುಂಡಿ ಹಾಕಿತ್ತು ಅಷ್ಟೆ. ಅದರಲ್ಲಿಯೂ ಇರಬೇಕಾದ ಎಲ್ಲಾ ಗುಂಡಿಗಳೂ ಇರಲೂ ಇಲ್ಲ. ಆದ್ದರಿಂದ ಅವನು ಬಾಗಿದಾಗ ಮತ್ತು ಅತ್ತಿತ್ತ ಚಲಿಸಿದಾಗ, ಅಂಗಿಗೂ ಮೈಗೂ ನಡುವೆ ಯಾವ ಉಡುಪೂ ಇಲ್ಲ ಎಂಬುದನ್ನು ನೇರವಾಗಿ ಘೋಷಿಸುವಂತೆ, ಹೊಟ್ಟೆಯ ಸಾಕ್ಷಾತ್ತಾಗಿ ಪ್ರತ್ಯಕ್ಷವಾಗುತ್ತಿತ್ತು…. ಚಿನ್ನಿ ಮುಟ್ಟಿದ ಮಾತ್ರದಿಂದಲೆ ಮೈಲಿಗೆಯಾಗುವಷ್ಟು ಮಡಿಯೂ ಅದಕ್ಕಿರಲಿಲ್ಲ. ಅವನು ಉಟ್ಟಿದ್ದೂ ಒಂದು ಮುಂಡು ಪಂಚೆ; ಅವನ ಮೊಣಕಾಲಿಗಿಂತ ಒಂದು ಅಂಗುಲ ಕೆಳಗಿತ್ತೊ ಏನೊ? ಅದನ್ನು ಅಡ್ಡಪಂಚೆಯನ್ನಾಗಿ ಸುತ್ತಿದ್ದರಿಂದ ಅದು ಆಗಾಗ ಆಯ ತಪ್ಪಿ, ಆಕಳಿಸಿ ಬಾಯಿತೆರೆದಂತಾಗಿ, ಅವನು ಒಳಗೆ ಕಟ್ಟಿದ್ದ ಕೌಪೀನವನ್ನು, ಅದರ ಅಂತಸ್ಥ ಸಮೇತ, ಸಂದೇಹಕ್ಕೆ ಆಸ್ಪದವಿಲ್ಲದಂತೆ ಪ್ರದರ್ಶಿಸುತ್ತಿದ್ದು. ಚಿನ್ನಿ ಪರಿಕಾರ ಎತ್ತಿದ್ದರಿಂದ ಏನೇನು ಅನಾಹುತವಾಯಿತೆಂದು ಭಾವಿಸಿ ಮುಖ ತಿರುಗಿಸಿದ್ದನೊ ಅಂತಹ ಅನಾಹುತ ಇವನ ಪ್ರಯತ್ನವಿಲ್ಲದೆಯೇ ಆಗಾಗ ನಡೆದು ಹೋಗುತ್ತಿದ್ದುದನ್ನು ಗಮನಿಸುವ ಪ್ರಜ್ಞೆ ಚಿನ್ನಿಗೆ ಇರಲಿಲ್ಲವಾದ್ದರಿಂದ ಮುಕುಂದಯ್ಯ ತಾನು ಮರ್ಯಾದಸ್ತ ಎಂದು ಭಾವಿಸಲು ಅನುಕೂಲವಾಗಿತ್ತು.

ಮುಕುಂದ ಅನಾಸಕ್ತಿ ತೋಡಿದಷ್ಟೂ ಚಿನ್ನಿಗೆ ಅವನಲ್ಲಿ ಆಸಕ್ತಿ ಹೆಚ್ಚುತ್ತಿತ್ತು. ಅವನು ಉದಾಸೀನನಾಗುತ್ತಿದ್ದುದನ್ನು ಇವಳು ಗಮನಕ್ಕೆ ಸ್ಪಲ್ಪವೂ ತೆಗೆದುಕೊಳ್ಳಲಾರದವಳಾಗಿದ್ದಳು. ಅವನ ತಿರಸ್ಕಾರದ ಮಾತುಗಳನ್ನೂ ಅಂಗ ಭಂಗಿಯನ್ನೂ ಇವಳು ಅವನ ಆದರದ ಚರ್ಯೆಗಳೆಂದೇ ತಿಳಿದು ನಡೆಯತೊಡಗಿದಳು. ಅವನು ಹೋದಲ್ಲಿ ಹೋದಳು; ನಿಂತಲ್ಲಿ ನಿಂತಳು; ಕುಳಿತಲ್ಲಿ ಅವನ ಪಕ್ಕದಲ್ಲಿಯೆ ಮೈ ಮುಟ್ಟುವಂತೆ ಕುಳಿತಳು. ಅವನು ತುಸುದೂರ ಸರಿದರೂ ಇವಳೂ ಸರಿದಳು ಹತ್ತಿರಕ್ಕೆ! ಕಡೆಗೆ, ಮುಕುಂದ ‘ಬೆಪ್ಪು ಹುಡುಗಿ’ ಎಂದುಕೊಂಡು ಅವಳನ್ನು ಸಹಿಸಿಯೆ ಸೋಲಬೇಕಾಯಿತು.

ಆ ದಿನ ರಾತ್ರಿ ಚಿನ್ನಮ್ಮ ಹಟತೊಟ್ಟು ತನ್ನ ಅಜ್ಜಿಗೂ ಕಾಗಿನಹಳ್ಳಿ ಅಮ್ಮಗೂ ನಡುವೆ ಮುಕುಂದನ ಒತ್ತಿನಲ್ಲಿಯೆ ಮಲಗಿದಳು. ಬೆಳಗಾದೊಡನೆಯೆ ತನಗಿಂತಲೂ ಮೊದಲೆ ಎದ್ದು ಹೋಗಿದ್ದ ಮುಕುಂದನನ್ನು ಅರಸಿ ಅಳತೊಡಗಿದ್ದಳು. ಮುಕುಂದ ತನ್ನ ಅಮ್ಮನೊಡನೆ ಕೋಣೂರಿಗೆ ಹೊರಟು ನಿಂತಾಗಲಂತೂ ‘ನಾನೂ ಬತ್ತೀನಿ’ ಎಂದು ಬಿಕ್ಕಿ ಬಿಕ್ಕಿ ಅತ್ತು ರಂಪಮಾಡಿದ್ದಳು. ಅವಳನ್ನು ಸಮಾಧಾನ ಮಾಡಬೇಕಾದರೆ ಅಜ್ಜಿಗೆ ಹರ್ಮಾಗಾಲವಾಗಿತ್ತು. ‘ನಾಳೆ ನಿನ್ನ ಅಪ್ಪಯ್ಯನ್ನ ಕೇಳಿ, ನಾನೂ ನೀನೂ ಮುಕುಂದ ಬಾವನ ಮನೆಗೆ ಹೋಗಾನ…. ನಿನ್ನ ಅಪ್ಪಯ್ಯನ ಕೇಳದ ನೀ ಹೋದ್ರೆ, ನಿನ್ನ ಚಮಡ ಸುಲದು ಬಿಡ್ತಾನೆ’ ಎಂದೆಲ್ಲಾ ಹೇಳ, ಹೆದರಿಸಿ, ಆಸೆ ತೋರಿಸಿ ಮೊಮ್ಮಗಳನ್ನು ಸುಮ್ಮನಿರಿಸಿದ್ದಳು.

ಮುಕುಂದ ಬಂದು ಹೋದಮೇಲೆ ಚಿನ್ನಮ್ಮ ದಿನವೂ ಅಜ್ಜಿಯನ್ನು ಕೇಳತೊಡಗಿದಳು, ‘ಯಾವತ್ತು ಹೋಗಾದು?’ ‘ಯಾವತ್ತು ಹೋಗಾದು?’ ಎಂದು. ಮೊದಮೊದಲು ಅಜ್ಜಿ ‘ನಾಳೆ ಹೋಗಾನ’ ‘ಇನ್ನೊಂದೆರಡು ದಿನದಲ್ಲಿ ಹೋಗಾನ’ ಎಂದೆಲ್ಲ ನೆವ ಹೇಳಿ ದಿನ ತಳ್ಳಿದಳು. ಕಡೆಗೊಂದು ದಿನ ತಾಳ್ಮೆ ತಪ್ಪಿ ‘ಏ ಸುಮ್ಮನಿರೆ! ಬಾಳ ದಿನ ಬಿಟ್ಟಿದ್ದೋರು ಗಂಡನ ಮನೆಗೆ ಹೋಗಾಕೆ ಗ್ವಾಗರೆಯೋ ಹಾಂಗೆ ಮಾಡ್ತೀಯಲ್ಲ! ನಿನ್ನೇನು ಅವಂಗೆ ಮದೇ ಮಾಡಿ ಕೊಟ್ಟಾರಾ?’ ಎಂದು ಸಿಡುಕಿದಳು. ಹುಡುಗಿಗೆ ಅಜ್ಜಿಯ ಮಾತಿನ ಅರ್ಥವಾಗದಿದ್ದರೂ ಏನೋ ಭಾಸವಾದ ಹಾಗಾಗಿ, ಅಜ್ಜಿಗೆ ಸಿಟ್ಟು ಬಂದಿದೆ ಎಂದು ಸುಮ್ಮನಾಗಿದ್ದಳು.

ಒಂದೆರಡು ದಿನದ ಮೇಲೆ ಅಜ್ಜಿ ಊಟಮಾಡಿ, ಜಗಲಿಯ ಕೆಸರ್ಹಲಗೆಯ ಮೇಲೆ ಎಲೆಯಡಿಕೆ ಬುಟ್ಟಿ ಇಟ್ಟುಕೊಂಡು, ಅಡಕ್ಕತ್ತರಿಯಿಂದ ಅಡಕೆ ಚೂರು ಮಾಡುತ್ತಿದ್ದಾಗ, ಚಿನ್ನಿ ಪಕ್ಕದಲ್ಲಿ ಕೂತು ಬುಟ್ಟಿಯಿಂದ ಸುಣ್ಣದ ಡಬ್ಬಿಯನ್ನು ತೆಗೆದು ಎಲೆಗೆ ಸುಣ್ಣ  ಹಚ್ಚಲು ಶುರುಮಾಡುತ್ತಿದ್ದಳು. ‘ಅಯ್ಯಯ್ಯೋ ಸುಣ್ಣ ಸುಡ್ತದೆ ಕಣೇ! ಸುಮ್ಮನಿರಬಾರ್ದೇನೆ?’ ಎಂದು ಅದನ್ನು ಕಸಿದಿಟ್ಟು ‘ನಿನ್ನ ಉಪಟಳ ಹೆಚ್ಚಾಯ್ತು’ ಎಂದಳು.

ಚಿನ್ನಮ್ಮ ಸ್ವಲ್ಪ ಹೊತ್ತು ಸುಮ್ಮನೆ ಕೂತಳು. ಏನನ್ನೊ ದೀರ್ಘವಾಗಿ ಆಲೋಚಿಸುವವರಂತೆ. ಮತ್ತೆ ಕರೆದಳು.

“ಅಜ್ಜೀ.”

“ಏಣೇ” ಎಲೆಅಡಿಕೆ ಜಗಿಯುತ್ತಿದ್ದ ಅಜ್ಜಿ ಕೇಳಿದಳು.

“ಮತ್ತೇ…ಮತ್ತೇ….ಮತ್ತೇ….”

“ಎಂಥದೇ ಮತ್ತೇ ಮತ್ತೇ ಮತ್ತೇ?

“ಯಾವಾಗ ಮದೇ ಮಾಡಿ ಕೊಡ್ತೀಯ, ಅಜ್ಜಿ?”

“ಯಾರಿಗೇ ಮದೇ ಮಾಡಾದು?”

“ಮತ್ತೆ ಮನ್ನೆ ನೀನೆ ಹೇಳ್ದೇ!”

“ಏನು ಹೇಳಿದ್ನೇ?”

“ಮತ್ತೆ…. ನನ್ನ…. ನನ್ನ ಮದೇ ಮಾಡಿ ಕೊಡ್ತೀನಿ ಅಂದೇ, ಅವರ ಮನೀಗೆ ಹೋಗಾಕೆ?”

“ಥೂ ನಿನ್ನ! ಹಾಂಗೆಲ್ಲಾ ಹೇಳಬ್ಯಾಡೇ! ಅಯ್ಯೋ ನಿನ್ನ ಬಿರುಗು ಮಗಳೇ….! ಅವರ ಮನೀಗೆ ಹೋಗಾಕೆ ನಿನ್ನ ಮದೇ ಬೇರೆ ಆಗಬೇಕಾ?”

ಮುದುಕಿ ಕಿಸಕ್ಕನೆ ನಕ್ಕ ಹೊಡೆತಕ್ಕೆ ಎಲೆಯಡಿಕೆಯ ಕೆಂಪು ಉಗುಳು ಹಾಕಿ ಚಿನ್ನಮ್ಮನ ಮುಖಕ್ಕೂ ಸಿಡಿಯಿತು. ಅಜ್ಜಿ ಒಡನೆಯ ಅಮಂಗಳ ಪರಿಹಾರಾರ್ಥವಾಗಿ ‘ಒಳ್ತು! ಒಳ್ತು! ಎಂದು ತನ್ನ ಸೀರೆ ಸೆರಗಿನಿಂದ ಮೊಮ್ಮಗಳ ಮೋರೆಯನ್ನು ಒರಸಿ ಮುದ್ದಿಸಿದ್ದಳು.

ಅಂತೂ ಕೊನೆಗೆ ಒಂದು ದಿನ ಅಪರಾಹ್ನ ಅಜ್ಜಿ ಮೊಮ್ಮಗಳ ನೆತ್ತಿಗೆ ಹರಳೆಣ್ಣೆ ಹಾಕಿ, ತಲೆಬಾಚಿ, ಮೋಟು ಜಡೆ ಹಾಕಿ, ಗೊರಟೆ ಹೂ ಕಟ್ಟಿ ಮುಡಿಸಿ, ಇದ್ದುದರಲ್ಲಿ ಒಂದು ಅಚ್ಚುಕಟ್ಟಿನ ಪರಿಕಾರ ಹಾಕಿ, ನೆಂಟರ ಮನೆಗೆ ಅವಳನ್ನು ಕರೆದುಕೊಂಡು ಹೋಗಲು ಸಿದ್ಧಮಾಡಿದಳು. ಚಿನ್ನಮ್ಮನ ಹೃದಯ ಹಿಗ್ಗನ್ನು ಅಳೆಯುವವರಾರು? ಅಜ್ಜಿ ಬಿಸಿಲಿಳಿದ ಮೇಳೆ ಹೊರಡೋಣ ಎಂದಿದ್ದಳು. ಚಿನ್ನಮ್ಮ ಗಳಿಗೆಗಳಿಗೆಗೂ ಅಜ್ಜಿಯ ಬಳಿಗೋಡಿ ‘ಬಿಸಿಲಿಳಿದಾಯ್ತಅಜ್ಜೀ!’ ಎನ್ನುತ್ತಿದ್ದಳು. ಮುದುಕಿ ಹೊರಗೆ ನೋಡಿ “ಏ, ಇನ್ನೂ ಇಳಿಲಿಲ್ಲ ಕಣೇ? ಮಾಡಿನ ನೆಳ್ಳು  ತುಳಸೀಕಟ್ಟೆ ದಾಟಿ, ತೆಣೇ ಹತ್ರ ಬಂದ ಮ್ಯಾಲೆ ಹೊರಡಾನೆ” ಎಂದಿದ್ದಳು. ಚಿನ್ನಮ್ಮ ತೆಣೆಯ ಮೇಲೆ ಕೂತುಕೊಂಡು ಮಾಡಿನ ನೆರಳು ತುಳಸಿಯ ಕಟ್ಟೆಯನ್ನು ದಾಟಿ ತೆಣೆಯ ಹತ್ತಿರಕ್ಕೆ ಬರುವುದನ್ನೇ ಕಾಯುತ್ತಾ ಕುಳಿತಳು” ಏನು ನಿಧಾನ ಈ ನೆರಳಿನ ಚಲನೆ! ಸ್ವಲ್ಪ ಬೇಗ ಬೇಗ ಬರಬಾರದೇ? ನೆರಳನ್ನು ಸ್ವಲ್ಪ ಎಳೆದು ತೆಣೆ ಹತ್ತಿರಕ್ಕೆ ಸರಿಸೋಣವೇ ಎನ್ನಿಸಿತು ಅವಳಿಗೆ. ಆದರೆ ಅದನ್ನು ಎಲ್ಲಿಂದ ಹಿಡಿದು ಎಳೆಯಬೇಕೋ ಗೊತ್ತಾಗಲಿಲ್ಲ ಅವಳಿಗೆ.

ಕಡೆಗೆ ಕಾದು ಕಾದು ಸಾಕಾಗಿ, ಓಡಿ ಬಂದು “ಅಜ್ಜೀ, ಅಜ್ಜೀ, ನೆಳ್ಳು ತೆಣೇನೆಲ್ಲಾ ದಾಟಿ ಬಂದು ಬಿಡ್ತು!” ಎಂದು ಕೂಗಿಕೊಂಡಳು.

ಅಜ್ಜಿ ನಗುತ್ತಾ “ಹಂಗಾರೆ ಬಂದುಬಿಟ್ಟೆ. ಹೊಗಾನ ನಡಿ” ಎಂದಳು. ನರಳು ತುಳಸೀಕಟ್ಟೆಯನ್ನೇನೋ ದಾಟಿತ್ತು. ಆದರೆ ತೆಣೆಯ ಹತ್ತಿರಕ್ಕೆ ಬರಬೇಕಾದರೆ ಇನ್ನೂ ಅರ್ಧಗಂಟೆಯಾದರೂ ಬೇಕಾಗಿತ್ತು.

ಅದನ್ನು ನೋಡಿ ಹೊರಡಲನುವಾಗಿ ಬಂದ ಅಜ್ಜಿ “ಎಲ್ಲೇ? ಸುಳ್ಳೇ ಹೇಳ್ತೀಯಲ್ಲಾ! ತೆಣೆಹತ್ರಾನೆ ಬಂದಿಲ್ಲ ಇನ್ನೂ!” ಎಂದಳು.

“ಆವಾಗ ಬಂದಿತ್ತು, ಅಜ್ಜೀ! ಇವಾಗ ಮತ್ತೆ ಹಿಂದೆ ಬಂದದೆ ಕಳ್ಳ ನೆಳ್ಳು!” ಎಂದಳು ಮೊಮ್ಮಗಳು. ಅಂತೂ, ಕೊನೆಗೂ, ನೆರಳು ತೆಣೆಯ ಹತ್ತಿರಕ್ಕೆ ಬರುವ ಖಗೋಲ ಭೂಗೋಲದ ಮಹದ್ ಘಟನೆಗೆ ಕಾಯದೆ, ಅಜ್ಜಿ ಮೊಮ್ಮಗಳಿಬ್ಬರೂ ಹೂವಳ್ಳಿಯಿಂದ ಕೋಣೂರಿಗೆ ಹೋಗುವ ಕಾಲುಹಾದಿ ಹಿಡಿದಿದ್ದರು.

* * *

“ಅಜ್ಜೀ, ನೀನೇನು ಮೆಲ್ಲಗೆ ನಡೀತೀಯಾ?…. ಬಿರಬಿರನೆ ಬಾ!”

“ಯಾಕೇ ಹಂಗ ಓಡ್ತೀಯೇ? ಏನು ಅವಸರಾನೆ ನಿಂಗೆ?”

“ಕತ್ತಲಾಗಿಬಿಟ್ಟರೆ?”

“ಕತ್ತಲೂ ಆಗಾದಿಲ್ಲ ಗುತ್ತಲೂ ಆಗಾದಿಲ್ಲ! ಮೆಲ್ಲಗೆ ನಡಿ! ಎಡವಿ ಗಿಡವಿ ಬಿದ್ದೀಯ. ಹಾದಿ ನೋಡ್ಕಂಡ ನಡಿ. ಮುಳ್‌ಗಿಳ್ ಮುಟ್ಟೀಯ?”

“ನಾ ಮುಂದೆ ಹೋಗ್ತಾ ಇರ್ತೀನಿ, ನೀ ಮೆಲ್ಲಗೆ ಬಾ!”

“ಬ್ಯಾಡಾ ಕಣೇ, ದಾರೀ ತಪ್ಪಿ ಕಾಡುಹಾದಿ ಹಿಡ್ದೀಯಾ?”

“ಏನಿಲ್ಲ: ನಂಗೊತ್ತು ಹಾದಿ!”

“ನಿಂಗೆ ಹೆಂಗೆ ಗೊತ್ತೇ ಆ ಹಾದಿ? ನಿಲ್ತೀಯೊ ಇಲ್ಲೊ?”

“ನಾನು ಅವ್ವನ ಜೊತೇಲಿ ಹೋಗಿದ್ದೆ.”

“ಸುಳ್ಳು ಬುರುಕಿ! ನಿನ್ನ ಅವ್ವಗೆ ಹಾಂಗೆಲ್ಲ ನೆಂಟರ ಮನೆಗೆ ಹೋಗೋ ಪುಣ್ಯ ಎಲ್ಲಿತ್ತೇ?” ಎಂದಳು ಮುದುಕಿ ನಿಟ್ಟುಸಿರು ಬಿಟ್ಟು “ತವರು ಮನೆಗೆ ಹೋಗಾಕೇ ನಿನ್ನ ಅಪ್ಪ ಬಿಡ್ತಿರಲಿಲ್ಲ. ಇನ್ನು ನೆಂಟರ ಮನೆಗೆ ಹೋಗಿದ್ಲಂತೆ, ಇವಳು, ಅವ್ವನ ಜೊತೇಲಿ?”

ಅಜ್ಜಿಯ ಅಳುದನಿಗೇಳಿ ಮೊಮ್ಮಗಳು ನಿಂತು ಹಿಂತಿರುಗಿ ನೋಡುತ್ತಾಳೆ: ಅಜ್ಜಿಯ ಕಣ್ಣೀರು ಅವಳ ಸುಕ್ಕುಗೆನ್ನೆಗಳ ಮೇಲೆ ಹರಿಯುತ್ತಿದೆ!

ಚಿನ್ನಮ್ಮ ಓಡಿಹೋಗಿ ಅಜ್ಜಿಯ ಸೊಂಟ ತಬ್ಬಿಕೊಂಡು  “ನಾನು ಮುಂದೆ ಹೋಗಾದಿಲ್ಲ, ಅಜ್ಜಿ, ಅಳಬ್ಯಾಡ” ಎಂದು ತಾನೂ ಬಿಕ್ಕತೊಡಗಿದಳು.

“ಅಳಬ್ಯಾಡ, ನನ್ನ ಕಂದ. ನೀನ್ಯಾಕೆ ಅಳ್ತೀಯ? ಬಾಳದೆ ಹೋದ ನಿನ್ನ ಅವ್ವನ ನೆನಪಾಯ್ತು. ಅದ್ಕೇ ಕಣ್ಣೀರು ಬಂತು.”

ಮೊಮ್ಮಗಳು ಅಜ್ಜಿಯ ಪಕ್ಕದಲ್ಲಿಯೆ ಮೆಲ್ಲಗೆ ನಡೆದಳು. ಸ್ವಲ್ಪ ದೂರ ಕಾಡಿನ ನಡುವೆ ಕುರುಚಲು ಹಳುವಿನ ಕಾಲುದಾರಿಯಲ್ಲಿ  ಹೋಗಿದ್ದರು. ಒಂಡೆದೆ ಕವಲಾಗಿದ್ದಲ್ಲಿ ಮುದುಕಿ ಬಲಗಡೆಯ ಸೀಳಿನಲ್ಲಿ ನಡೆಯತೊಡಗಿದ್ದಳು. ಚಿನ್ನಿ “ಅದಲ್ಲಾ, ಅಜ್ಜಿ, ಇಲ್ಲಿ ಬಾ” ಎಂದು ಎಡಗಡೆ ಸೀಳನ್ನು ತೋರಿಸಿದಳು.

ಮುದುಕಿ ಎಚ್ಚತ್ತವಳಂತೆ ನಿಂತು, ನೋಡಿ, ಮೊಮ್ಮಗಳನ್ನು ಮೆಚ್ಚುತ್ತಾ “ಹೌದೆ ಸೈ, ಏನೋ ಯೋಚ್ನೆ ಮಾಡ್ತಿದ್ದೆ ಕಣೇ. ಮರವು ಬಂದುಬಿಡ್ತು. ಅದೂ-ಹಾಡ್ಯಕ್ಕೆ ಹೋಗೋ ದಾರಿ. ದನ ಕಾಯೋರು, ಸೌದೆ ತರೋರು, ದರಗು ಹೊರೋರು ಹೋಗೀ ಬಂದು ಆಗ್ಯದೆ” ಎಂದು ತಿರುಗಿ ಬಂದು ಮೊಮ್ಮಗಳನ್ನು ಕೂಡಿಕೊಂಡಳು. ಎಂದೂ ಅಲ್ಲಿ ತಿರುಗಾಡದಿದ್ದ ಆ ಚಿಕ್ಕ ಹುಡುಗಿಗೆ ದಾರಿಯ ಸರಿ ತಪ್ಪು ಹೇಗೆ ಗೊತ್ತಾಯಿತು ಎಂಬ ಆಲೋಚನೆಯಾಗಲಿ ಪ್ರಶ್ನೆಯಾಗಲಿ ಮುದುಕಿಯ ತಲೆಗೆ ಹೊಳೆಯಲೆ ಇಲ್ಲ.

ಹೊತ್ತು ಆಗಲೆ ಪಡುವಣದ ಕಾಡುಮಲೆಗಳ ನೆತ್ತಿಯಾಚೆ ಇಳಿದಿತ್ತು. ಬೈಗುಗೆಂಪು ಮುಂಗಷ್ಟಿಗೆ ತಿರುಗುತ್ತಿತ್ತು. ಗೂಡಿಗೆ ಗೊತ್ತಿಗೆ ಹಾರಿ ಹೋಗುವ ಹಕ್ಕಿಗಳ ಹಾರಿಂಚರ ಅಡಗತೊಡಗಿತ್ತು. ಗುರಗಿ ಹಳುವಿನಲ್ಲಿ ಜೀರುಂಡೆಗಳ ಜೀರು ಜೀರು ಜೀರೆಂಬ ಕರ್ಕಶ ಧ್ವನಿಗೆ ಪೀಠಿಕೆಯಾಗಿತ್ತು. ಪಶ್ಚಿಮದ ಆಕಾಶದಲ್ಲಿ ಬೆಳ್ಳಿಗೆ ಅಗಲೆ ಹೊಳಪು ಬಂದಿತ್ತು.

ಕೋಣೂರಿನ ಮನೆಗೆ ಸಮೀಪದಲ್ಲಿರುವ ಮಕ್ಕಿಗದ್ದೆಯ ಅಂಚಿನದಾರಿಗೆ ಇವರು ಇಳಿಯುತ್ತಿದ್ದಾಗ ಒಡ್ಡಿಯ ಕೋಳಿಗಳ ಕೂಗೂ ನಾಯಿಗಳ ಬೊಗಳೂ ಮಲೆಯ ಹಳ್ಳಿಯ ಒಂಟೆ ಮನೆಗೆ ಸಹಜವಾದ ಇತರ ಮಾನವ ಮತ್ತು ಪ್ರಾಣಿಗಳು ಸದ್ದೂ ಕೇಳಿಸಿತು. ಆನಂತ ಕುತೂಹಲಗಳಿಂದ ಹಿಗ್ಗಿದ ಚಿನ್ನಮ್ಮ ತನಗೆ ತಾನೆ ಎಂಬಂತೆ ಗಟ್ಟಿಯಾಗಿಯೆ “ಹೋ, ಬಂತಲ್ಲಾ ನಮ್ಮನೆ”! ಎಂದಳು.

“ನಿನ್ನ ಮನೆಯೇನೇ? ನಿನ್ನ ಮುಕುಂದ ಬಾವನ ಮನೆ ಕಣೇ!” ಎಂದು ತಿದ್ದಿದಳು ಅಜ್ಜಿ.

ತಪ್ಪೊಪ್ಪಿಕೊಂಡು ತಿದ್ದಿಕೊಳ್ಳುವಂತೆ ಚಿನ್ನಮ್ಮ “ಹೌದು, ಇದೇ ಮುಕುಂದ ಬಾವನ ಮನೆ!” ಎಂದಳು, ಹಿಂದೆ ಎಂದೋ ನೋಡಿದ್ದನ್ನು ಬಹುಕಾಲದ ಮೇಲೆ ಮತ್ತೆ ಗುರುತಿಸುವವಳಂತೆ!”.

* * *

ಅಂದಿನಿಂದ ತಿಂಗಳು ಎರಡು ತಿಂಗಳಿಗಾದರೂ ಒಮ್ಮೆ ಚಿನ್ನಮ್ಮ ಅಜ್ಜಿಯನ್ನು ಕಾಡಿಸಿ ಕೋಣೂರಿಗೆ ಹೋಗಿಬರತೊಡಗಿದಳು. ಮುಕುಂದಯ್ಯನೂ ತನ್ನ ತಾಯೊಯೊಡನಾಗಲಿ, ಅತ್ತಿಗೆಯೊಡನಾಗಲಿ, ಅಪೂರ್ವವಾಗಿ ಅಣ್ಣನೊಡಲಾಗಲಿ, ಆಗಾಗ ಹೂವಳ್ಳಿ ಹೋಗಿ ಒಂದೆರಡು ದಿನ ಇದ್ದು ಬರುತ್ತಿದ್ದನು.

ಚಿನ್ನಮ್ಮ ಒಂದೊಂದು ಸಲವೂ ಕೋಣೂರಿಗೆ ಬಂದಾಗಲೆಲ್ಲಾ  ಮುಕುಂದ ಬಾವನೊಡನೆ ಏನಾದರೂ ಹೊಸ ಅನುಭವದಲ್ಲಿ ಅಥವಾ ಹೊಸ ಸಾಹಸದಲ್ಲಿ ಬಾಗಿಯಾಗುತ್ತಿದ್ದಳು. ಅವಳು ಆ ಮನೆಗೂ ಅದರ ಸುತ್ತಣ ಸ್ಥಾನಗಳಿಗೂ, ಮೊದಲನೆಯ ಸಾರಿ ಬಂದಾಗಲೆ, ಪರಿಚಿತಳೆಂಬಂತೆ ಹೊಂದಿಕೊಂಡು ಸಲೀಸಾಗಿ ತಿರುಗಾಡುತ್ತಿದ್ದುದನ್ನು ಕಂಡು ಹಿರಿಯರೂ ಆಶ್ಚರ್ಯಪಟ್ಟಿದ್ದರು. ‘ಚುರುಕು ಹುಡುಗಿ’ ‘ಚಾಲೂಕಿನ ಹುಡುಗಿ’ ‘ಧೈರ್ಯಗಾರ್ತಿ’ ಎಂದೆಲ್ಲ ಪ್ರಶಂಸಿಸಿದ್ದರು.

ಮೊದಮೊದಲು ಮುಕುಂದಯ್ಯ ಐಗಳ ಮಠದಲ್ಲಿ ತನ್ನೊಡನೆ ಕಲಿಯುತ್ತಿದ್ದ ಇತರ ಗಂಡು ಮಕ್ಕಳ ಮುಂದೆ ಚಿನ್ನಿಯನ್ನು ಆಟಕ್ಕೆ ಸೇರಿಸಿ ಕೊಳ್ಳಲು ಹಿಂಜರಿಯುತ್ತಿದ್ದನು. ಆದರೆ ಚಿನ್ನಿಯೆ ಮುಂದುವರಿದು ಅವನ ಲಜ್ಜಾ ದಾಕ್ಷಿಣ್ಯಗಳನ್ನೆಲ್ಲ ತೊಡೆದುಹಾಕಿದ್ದಳು. ಬರಬರುತ್ತಾ ಅವಳು ಹುಡುಗಿ ಎಂಬ ಭೇದಭಾವವನ್ನೆ ಮರೆತು ಹೋದಂತೆ ವರ್ತಿಸಿ ದೊಡ್ಡವರಿಂದ ಬಯ್ಯಿಸಿಕೊಂಡಿದ್ದನು.

ಒಮ್ಮೆ ಮನೆಗೆ ಸಮೀಪದಲ್ಲಿ ಹರಿಯುತ್ತಿದ್ದ ಕೋಡ್ಲು ಹಳ್ಳದ ಗುಂಡಿಯಲ್ಲಿ, ಒಂದು ಹಲಗೆ ತೆಪ್ಪ ಮಾಡಿ, ಚಿನ್ನಿಯನ್ನೂ ಹತ್ತುವಂತೆ ಧೈರ್ಯ ಹೇಳಿ ಪ್ರೇರೇಪಿಸಿದ್ದನು. ಆದರೆ ಗಳುವಿನ ಹುಟ್ಟಿನಿಂದ ಹಲಗೆಯನ್ನು ದಡದಿಂದ ತಳ್ಳಿ ತುಸು ದೂರ ಹೋಗುವುದರೊಳಗಾಗಿ ಹಲಗೆ ತಲೆಕೆಳಗಾಗಿತ್ತು. ಅಲ್ಲಿಯೆ ದನ ಬಿಟ್ಟುಕೊಂಡಿದ್ದ ಬೈರ ಓಡಿಬಂದು ನೀರಿಗಿಳಿದು ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದನು.

ಆದರೆ ಚಿನ್ನಮ್ಮನ ಪರಿಕಾರವೆಲ್ಲ ಒದ್ದೆಯ ಮುದ್ದೆಯಾಗಿ, ಮೂಗಿಗೂ ನೀರು ನುಗ್ಗಿತ್ತು. ಈಜಲು ಬರುತ್ತಿದ್ದ ಮುಕುಂದ ಮತ್ತು ಅವನ ಜೊತೆಗಾರರು ತಮ್ಮ ಬಟ್ಟೆಗಳನ್ನೆಲ್ಲ ದಡದಮೇಲಿಟ್ಟು ಕೌಪೀನ ಮಾತ್ರ ಧಾರಿಗಳಾಗಿದ್ದುದರಿಂದ ಬಿಸಿಲಿನಲ್ಲಿ  ಮೈ ಆರಿಸಿಕೊಂಡು ಬಟ್ಟೆ ಹಾಕಿಕೊಂಡಿದ್ದರು. ಅವರು ಅಂತಹ ಅನಾಹುತದಲ್ಲಿ ಭಾಗಿಯಾಗಿದ್ದರು ಎಂದು ಯಾರಿಗೂ ಗೊತ್ತಾಗುವಂತಿರಲಿಲ್ಲ. ಆದರೆ ಚಿನ್ನಮ್ಮನ ಅವಸ್ಥೆ ದಾರುಣವಾಗಿತ್ತು.  ಪರಿಕಾರ ಬಿಚ್ಚಿ ಬಿಸಿಲಿಗೆ ಹರಡಿದರೆ ಬತ್ತಲೆ ಇರುವುದು ಹೇಗೆ? ಅವರೆಲ್ಲರೂ ಇರುವಾಗ? ಬಿಚ್ಚಿ ಹರಡಿದ್ದರೆ, ಚಳಿಗೆ ನಡ ನಡ ನಡುಗಬೇಕಿತ್ತು. ಇನ್ನು ಶೀತ ಜ್ವರ ಬೇರೆ ಬಂದು ದೊಡ್ಡ ಪುಕಾರಾಗುತ್ತಿತ್ತು. ಮನೆಗೆ ಓಡಿ ಹೋಗಿ ಬೇರೆ ಪರಿಕಾರ ತರಬಹುದಿತ್ತು. ಆದರೆ ಅವಿವೇಕ ಎಲ್ಲರಿಗೂ ಗೊತ್ತಾಗಿ ತಕ್ಕ ಶಾಸ್ತಿಯಾಗದೆ ಇರುತ್ತಿರಲಿಲ್ಲ. ಕಡೆಗೆ ಮುಕುಂದನೇ ಉಪಾಯ ಕಂಡುಹಿಡಿದಿದ್ದನು. ಎಲ್ಲಾ ಹುಡುಗರನ್ನೂ ಬೇರೆ ಕಡೆಗೆ ಕಳಿಸಿ, ಬೈರನಿಗೂ ದೂರ ಹಕ್ಕಲಿಗೆ ದನ ಹೊಡೆದುಕೊಂಡು ಹೋಗಲಿ ಹೇಳಿ, ಬಿಸಿಲು ಚೆನ್ನಾಗಿ ಕಾಯುತ್ತಿದ್ದ ಒಂದು ದೊಡ್ಡ ಪೊದೆಯ ಹಿಂದಣ ಬಯಲು ಸ್ಥಳಕ್ಕೆ ಅವಳನ್ನು ಕರೆದೊಯ್ದು, ತಾನು ಅಲ್ಲಿಯೆ ಆಚೆ, ಚಿನ್ನಮ್ಮನ ಮಾನಕ್ಕೆ ಅಪಚಾರವಾಗದಷ್ಟು ದೂರದಲ್ಲಿ, ಮರೆಯಲ್ಲಿ ಇರುವುದಾಗಿಯೂ, ಚಿನ್ನಮ್ಮ ಏಕಾಂತದಲ್ಲಿ ಪರಿಕಾರ ಬಿಚ್ಚಿ ಹಿಂಡಿ ಹರಡಿ, ಚಳಿಯಾಗದಂತೆಬ ಸಿಲು ಕಾಯಿಸುತ್ತಿದ್ದು, ಒಣಗಿದ ಮೇಲೆ ಅದನ್ನು ಹಾಕಿಕೊಂಡು ತನ್ನನ್ನು ಕರೆಯುವಂತೆಯೂ ಸಲಹೆಕೊಟ್ಟು ಸ್ವಲ್ಪ ದೂರ ಹೋಗಿ, ಒಂದು ಅರಮರಲು ಮಟ್ಟಿನ ಹಿಂದೆ ಕುಳಿತುಕೊಂಡನು.

ಚಿನ್ನಮ್ಮ ಬಾವ ಹೇಳಿದಂತೆ ಮಾಡ, ಬಿಸಿಲು ಕಾಯಿಸುತ್ತಾ ಕುಳಿತಿದ್ದಳು.

ಮಧ್ಯಾಹ್ನದ ಬಿಸಿಲಲ್ಲಿ ಕಾಡೆಲ್ಲ ನಿಃಶಬ್ದವಾಗಿತ್ತು. ಒಂದೆರಡು ಪಿಕಳಾರಗಳು ಇಲಾತಿ ಸೀಗೆಯ ಪೊದೆಯಲ್ಲಿ ಆಗಾಗ ಉಲಿಯುತ್ತಿದ್ದುದೂ ನಿಃಶಬ್ದತೆಯನ್ನು ಹೆಚ್ಚಿಸುವಂತಿತ್ತು. ಗಾಳಿಯ ಸುಳಿವೂ ಅಡಗಿದಂತಿತ್ತು. ಅದು ಬರಿಯ ನಿಃಶಬ್ದತೆ ಆಗಿರದೆ ಅರಣ್ಯದ ಉದ್ದೇಶಪೂರ್ವಕವಾದ ಮೌನವೊ ಎಂಬಂತಿತ್ತು. ತಾನು ಬತ್ತಲೆ ಕುಳಿತಿದ್ದುದನ್ನು ಕಂಡು ಯಾರೊ ಕಿಸಕ್ಕನೆ ಉಕ್ಕಿಬಂದ ನಗುವನ್ನು ತಡೆ ಹಿಡಿದು ಕೊಂಡಿದ್ದಂತೆ ತೋರಿತು ಚಿನ್ನಮ್ಮಗೆ. ಆ ಮೌನಕ್ಕೆ ಕಿವಿಕೊಟ್ಟಳು. ಕಾಡೆಲ್ಲ ಬಿಮ್ಮ್‌ ಎನ್ನುತ್ತಿತ್ತು. ಏನೋ ಹೆದರಿಕೆಯಾಗತೊಡಗಿತು. ಮುಕುಂದಬಾವ ಎಲ್ಲಿಯಾದರೂ ಹೋಗಿಬಿಟ್ಟರೆ! ಹೋಗಿಯೇ ಬಿಟ್ಟಿದ್ದಾನೆಯೊ ಏನೋ? ಹೋಗಿಯೇ ಬಿಟ್ಟಿರಬೇಕು! ಚಿನ್ನಮ್ಮ ಕೂಗಿಕೊಳ್ಳಬೇಕು ಅನ್ನಿಸಿತು. ಚಿಃ ಅಲ್ಲಿಯೆ ಇದ್ದರೆ? ಏನೆಂದುಕೊಂಡಾನು? ಹಾಗೆಯೆ ಎದೆ ಗಟ್ಟಿ ಮಾಡಿಕೊಂಡು ತುಸು ಹೊತ್ತು ಕಳೆದಳು. ಆದರೆ ತಡೆಯಲಾಗಲಿಲ್ಲ.  ಹೆದರಿಕೆ! ನೋಡೋಣ ಎಂದು ಮೆಲ್ಲಕೆ ಕರೆದಳು.

“ಬಾವಾ!”

“ಇಲ್ಲೇ ಇದ್ದೀನೇ! ಬಟ್ಟೆ ಆರ್ತೇನು? ಹಾಕಿಕೊಂಡೆಯಾ?”

“ಇಲ್ಲ. ಇದ್ದೀಯೋ ಇಲ್ಲೋ ಅಂತ ಕರೆದೆ.”

ಮತ್ತೆ ತುಸು ಹೊತ್ತು ನಿಃಶಬ್ದ, ಮೌನ. ಪೊದೆಯಲ್ಲಿ ಏನೊ ಸರ ಸರ ತರಗೆಲೆಗಳ ಮೇಲೆ ಹರಿದಂತೆ ಸದ್ದಾಯಿತು. ಚಿನ್ನಮ್ಮಗೆ ಗಾಬರಿಯಾಯಿತು. ಎದ್ದು ಓಡಿಬಿಡುವಷ್ಟು ಮನಸ್ಸಾಯಿತು. ಕುಳಿತಲ್ಲಿಂದಲೆ ಬಗ್ಗಿ ನೋಡಿದಳು. ಪೊದೆಗಳ ತಳದಲ್ಲಿ ಏನೂ ಕಾಣಿಸಲಿಲ್ಲ. ಹಾವೇ ಇರಬೇಕು; ಅಲ್ಲವೇ? ಅಥವಾ ಹುಲಿಗಿಲಿಯೋ? ಹೊಂಚು ಹಾಕಿ ದನ ಹಿಡಿಯುವುದಂತೆ! ಆ ಯೋಚನೆ ಬಂದಿತೊ ಇಲ್ಲವೊ ಚಿನ್ನಮ್ಮ ಎದ್ದು ನಿಂತಳು. ಸುತ್ತಲೂ ಪೊದೆಗಳ ಹಸುರಲ್ಲದೆ ಬೇರೆ ಯಾರೂ ಕಾಣಿಸಲಿಲ್ಲ. ಅಷ್ಟರಲ್ಲಿ ಓತಿಯೊ ಹಾವುರಾಣಿಯೊ ಗುಡ್ಡದ ಕಪ್ಪೆಯೊ ಅಥವಾ ಯಾವುದಾದರೂ ನೆಲದ ಮೇಲೆ ಓಡಾಡುವ ಹಕ್ಕಿಯೊ ಸರಸರನೆ ಪೊದೆಯಲ್ಲಿ ಓಡಿದಂತಾಯಿತು. ಚಿನ್ನಮ್ಮ ಸ್ವಲ್ಪ ಗಟ್ಟಿಯಾಗಿಯೆ ‘ಬಾವ! ಬಾವ!’ ಎಂದು ಕೂಗಿ ಕರೆದೇ ಬಿಟ್ಟಳು. ಮುಕುಂದ ಪರಿಕಾರ ಒಣಗಿ ಅದನ್ನು ಹಾಕಿಕೊಂಡೇ ಕರೆಯುತ್ತಿರಬೇಕೆಂದು ಭಾವಿಸಿ, ತುಸು ದಿಗ್ಗನೆ ಎದ್ದು ಓಡಿಯೆ ಬಂದನು.

ನೋಡುತ್ತಾನೆ, ಚಿನ್ನಿ ಬತ್ತಲೆ ನಿಂತಿದ್ದಾಳೆ! ಕಡೆಗೆ ಕುಳಿತೂ ಇಲ್ಲ! ತುಂಬ ಅವಮಾನವಾದಂತಾಗಿ ಮುಖ ತಿರುಗಿಸಿ ನಿಂತು “ಯಾಕೇ ಕರೆದಿದ್ದು, ಪರಿಕಾರ ಒಣಗಾಕೆ ಮುಂಚೆ?” ಎಂದು ಸಿಡುಕಿದನು.

ಚಿನ್ನಿ ಬಿಡಿಬಿಡಿ ಅಕ್ಷರದಲ್ಲಿ ನಿಡುಸ್ವರದಿಂದ ನಾಚುವ ಭಂಗಿಯಲ್ಲಿ ಹೇಳಿದಳು: “ಎಂತದೋ ಸರಸರ ಅನ್ತು, ಮಟ್ಟಿನಲ್ಲಿ. ನಂಗೆ ಹೆದರಿಕೆ ಆಗ್ತದೆ. ಅದ್ಕೇ ಕರೆದೆ…. ನಿಮ್ಮನ್ನ ಬನ್ನಿ ಅಂತಾ ಯಾರು ಹೇಳ್ದೋರು?” ಬಹುವಚನ ಬೇರೆ, ಸಾಲದ್ದಕ್ಕೆ!

ಕೊನೆಯ ಪ್ರಶ್ನೆಗೆ ಮುಕುಂದಯ್ಯ ಸ್ವಲ್ಪ ಕಕ್ಕಾಬಿಕ್ಕಿಯಾಗಿ, ಮತ್ತೆ ತಪ್ಪನ್ನು ತಿದ್ದಿಕೊಳ್ಳುವಂತೆ, ಮೊದಲಿದ್ದ ಜಾಗಕ್ಕೆ ಹೋಗಲು ತಿರುಗಿದನು.

“ಹೋಗಬ್ಯಾಡ, ಇಲ್ಲೇ ಇರು. ನಾನು ಕೂತುಕೊಂಡೇ ಇರ್ತೀನಿ” ಎಂದು ಚಿನ್ನಮ್ಮ, ತಪ್ಪಿ ನಡೆದು ಹೋದುದನ್ನು ಸರಿಪಡಿಸುವಂತೆ, ಮೊಕಾಲುಗಳನ್ನು ಎದೆಗೆ ಅವುಚಿಕೊಂಡು ಮುದುರಿ ಕತಳು. ಇನ್ನೇನು ಮಾಡಲೂ ದಿಕ್ಕು ತೋಚದೆ ಮುಕುಂದಯ್ಯ ಮುಖ ಅತ್ತಕಡೆ ತಿರುಗಿಸಿಕೊಂಡು ಅಲ್ಲಿಯೆ ಕುಳಿತುಬಿಟ್ಟನು.

* * *

ಆದರೆ ಇವರು ಮಾಡಿದ್ದೊಂದೂ ಪ್ರಯೋಜನಕ್ಕೆ ಬರಲಿಲ್ಲ. ಬೈಗಿನ ಹೊತ್ತು ಕರೆಯುವ ಹಟ್ಟಿಗೆ ದನಕಟ್ಟಲು ಹೋಗಿದ್ದ ಬೈರ ಇವರ ಗುಟ್ಟೆಲ್ಲವನ್ನೂ ಬಹಿರಂಗಪಡಿಸಿಬಿಟ್ಟಿದ್ದ; ಇನ್ನೂ ಸ್ವಲ್ಪ ಉಪ್ಪುಕಾರ ಹಚ್ಚಿ, ಸಾಹಸದಲ್ಲಿ ತಾನು ವಹಿಸಿದ್ದ ಪಾತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ದೊರೆಯುವಂತೆ: ತತ್ಫಲವಾಗಿ ಆವೊತ್ತಿನ ಬತ್ತಡ ಪಡಿಯಲ್ಲಿ ಮತ್ತು ಎಲೆಅಡಿಕೆ ಹೊಗೆಸೊಪ್ಪಿನ ಪರಿಮಾಣದಲ್ಲಿ ತಕ್ಕಮಟ್ಟಿನ ವೃದ್ಧಿ ತಲೆದೋರಿತ್ತು. ಅವನ ಪಾಲೇನೊ ಅವನಿಗೆ  ದಕ್ಕಿತ್ತು: ಇವರಿಗೆ ಮಾತ್ರ ತಮ್ಮ ಪಾಲಿಂದ ತಪ್ಪಿಸಿಕೊಳ್ಳಲಾಗಿರಲಿಲ್ಲ!

ಮುಕುಂದಯ್ಯ ದೊಡ್ಡವನಾದಂತೆಲ್ಲಾ ಇವರ ಸಾಹಸದ ಸ್ವರೂಪಗಳೂ ಬದಲಾಯಿಸಿದ್ದವು. ಹಕ್ಕಿಗೂಡು ಕಂಡುಹಿಡಿಯುವುದು, ಜೇನು ಕೀಳುವುದು, ಗಾಳ ಹಾಕಿ ಮೀನು ಹಿಡಿಯುವುದು, ಹೊಂಡ ತೊಣಕುವುದು, ಸೆಬೆ ಒಡ್ಡಿ ಕಾಡುಕೋಳಿ, ಚಿಟ್ಟುಕೋಳ ಹಿಡಿಯುವುದು ಇತ್ಯಾದಿ ಇತ್ಯಾದಿ.

ಒಮ್ಮೆ ಕೆಲವು ವರುಷಗಳ ಅನಂತರ ಇದ್ದಕ್ಕಿದ್ದಂತೆ ಒಂದು ದಿನ ಅಜ್ಜಿ ಚಿನ್ನಮ್ಮನಿಗೆ ಪರಿಕಾರ ಬಿಡಿಸಿ ಕಿರಿಗೆ ಉಡಿಸಿದ್ದಳು. ಚಿನ್ನಮ್ಮಗೆ ಏನೊ ಒಂದು ತರಹದ ಕಿನಸಿಗೆಯಾಗಿ ಒಂದೆರಡು ಸಾರಿ ಕಿರಿಗೆಯಿಂದ ಪರಿಕಾರಕ್ಕೆ ಪುನಃ ದಾಟಿದ್ದಳು. ಆದರೆ ಅಜ್ಜಿ ನಾನಿನ್ನು ಚಿಕ್ಕಹುಡುಗಿಯಲ್ಲ, ಸಣ್ಣ ಹೆಂಗಸು ಎಂಬ ವಿಚಾರವನ್ನು ಸೂಕ್ಷ್ಮವಾಗಿ ತಿಳಿಸಿದ್ದಳು; ತನ್ನ ಅಂಗೋಪಾಂಗಗಳ ರಚನೆಯಲ್ಲಿಯೂ ಮನೋಭಾವಗಳಲ್ಲಿಯೂ ವ್ಯತ್ಯಾಸಗಳಾಗುತ್ತಿದ್ದುದನ್ನು ಚಿನ್ನಮ್ಮ ಗಮನಿಸಿ, ಹರ್ಷಿಸಿಯೂ ಇದ್ದಳು. ಅಲ್ಲದೆ ಮುಕುಂದಬಾವನಲ್ಲಿಯೂ ಬದಲಾವಣೆಗಳನ್ನು ಗಮನಿಸಿದ್ದಳು, ದೇಹದ ಮೇಲೆ ಕಾಣುವ ವ್ಯತ್ಯಾಸಗಳಿಂದ ಮಾತ್ರವಲ್ಲದೆ ತನ್ನ ಪರವಾದ ಭಾವಭಂಗಿಗಳಲ್ಲಿಯೂ! ಇವಳ ಕೈ ಅನಿಚ್ಛೆಯಾಗಿಯೆ ಗೊಬ್ಬೆಯ ಸೆರಗನ್ನು, ಅದು ಸರಿಯಾಗಿದ್ದರೂ, ಪದೇ ಪದೇ  ಸರಿಮಾಡಿಕೊಳ್ಳಲು ಕಲಿತಿತ್ತು. ಅವನ ಮೋರೆಯ ಮೇಲೆ, ಅದರಲ್ಲಿಯೂ ತುಟಿಯ ಮೆಲು ಭಾಗದಲ್ಲಿ ತುಪ್ಪುಳುಗೂದಲು ಕರಿಯ ಗೆರೆಗಳು ಮೊಳೆಯತೊಡಗಿ ಮುಖಕ್ಕೊಂದು ಮುಗ್ಧ ಮನೋಹರತೆಯನ್ನುಂಟುಮಾಡಿದ್ದುವು. ಅವರೀಗ ಮೊದಲಿನಂತೆ ಒಬ್ಬರನ್ನೊಬ್ಬರು ಮುಟ್ಟಲು ಸಂಕೋಚಪಡುತ್ತಿದ್ದರು. ಹೆಚ್ಚು ಹೊತ್ತು ಸಮೀಪಸ್ಥರಾಗಿರಲೂ ಏನೋ ಅಳುಕಿನಿಂದ ಹಿಂಜರಿಯುತ್ತಿದ್ದರು. ತಾವಿಬ್ಬರೇ ಇದ್ದಾಗ ಯಾರಾದರೂ ನೋಡಿಯಾರೆಂಬ ಗೋಪನಬುದ್ದಿ ಪ್ರಬುದ್ಧವಾಗಿತ್ತು. ಇಬ್ಬರೇ ಇದ್ದಾಗ ಒಬ್ಬರನ್ನೊಬ್ಬರು ಕಣ್ಣಿಗೆ ಕಣ್ಣಿಟ್ಟು ದೃಷ್ಟಿಸಲೂ ಅಂಜಿಕೆಯಾಗತೊಡಗಿತ್ತು. ಮೈಯಲ್ಲಿ ಒಬ್ಬರಿಂದೊಬ್ಬರು ದಿನದಿನಕ್ಕೂ ದೂರ ದೂರ ಹೋಗುತ್ತಿದ್ದರೂ ಮನಸ್ಸಿನಲ್ಲಿ ಹತ್ತಿರ ಹತ್ತಿರವಾಗುತ್ತಿದ್ದಂತೆ ಇಬ್ಬರಿಗೂ ಅನಿಸಿತ್ತು. ಆಗೊಮ್ಮೆ ಈಗೊಮ್ಮೆ ಯಾವಾಗಲಾದರೂ ಇಬ್ಬರ ಕಣ್ಣುಗಳೂ ಸಂಧಿಸಿದಾಗ ಬಾಯಿಂದಾಡಿ ಏಳಲಾರದ, ಮತ್ತು ಅವರಿದ್ದ ಸಮಾಜದ ಪರಿಸ್ಥಿತಿಯಲ್ಲಿ ಎಂದೂ ಹೇಳಬಾರದ ಪ್ರಣಯ ಸಂವಾದ ನಡೆದು ಹೋಗುತ್ತಿತ್ತು. ಒಂದೆರಡು ಸಾರಿ ಮುಕುಂದಯ್ಯ ಏನನ್ನೊ ಹೇಳಬೇಕೆಂದು ಬಾಯೆತ್ತಿ, ತುಟಿ ನಡುಗಿ, ಇದ್ದಕ್ಕಿದ್ದಂತೆ ಮಾತು ತೊದಲಿದಂತಾಗಿ, ಇನ್ನೇನನ್ನೊ ಅಪ್ರಕೃತವನ್ನು ಆಡಿ ಮಾತು ಮುಗಿಸುತ್ತಿದ್ದನು. ಆದರೆ ಇಂಗಿತಜ್ಞೆಯಾಗಿದ್ದ ಚಿನ್ನಮ್ಮ ಅವನ ಅತ್ಯಂತ ಅಪ್ರಕೃತ ತೊದಲಿನಲ್ಲಿಯೂ ಅಂತಃಕರಣದ ಸುಪ್ರಕೃತವನ್ನು ಚೆನ್ನಾಗಿ ಗ್ರಹಿಸಿದ್ದಳು. ಅಂತೂ ಅವರಿಬ್ಬರಿಗೂ ತಮ್ಮಿಬ್ಬರ ಋಣಾನುಬಂಧದ ವಿಷಯದಲ್ಲಿ ಅವಾಗ್ರೂಪದ ಒಂದು ಅಲ್ತ್ರಿಣತ ಒಪ್ಪಂತವಾಗಿತ್ತು. ಅದು ಅತ್ಯಂತ ರಹಸ್ಯವಾದುದೆಂದು ಅವರಿಬ್ಬರೂ ಭಾವಿಸಿದ್ದರೂ ಸ್ವಲ್ಪ ಹೆಚ್ಚು ಕಡಿಮೆ ಎಲ್ಲರಿಗೂ, ರಹಸ್ಯವಾಗಿಯೆ, ತಿಳಿದಿದ್ದ ಅಂಶವಾಗಿತ್ತು! ಚಿನ್ನಮ್ಮನ ಅಜ್ಜಿ ಮೊದಲುಗೊಂಡು ಮುಕುಂದಯ್ಯನ ಅವ್ವ ಅತ್ತಿಗೆಯರೂ ಅವರನ್ನು ಆ “ಯಾರಿಗೂ ತಿಳಿಯದ ರಹಸ್ಯ”ದ ವಿಚಾರವಾಗಿ ವಿನೋದಕ್ಕಾಗಿ ಪರಿಹಾಸ್ಯಮಾಡಿಯೂ ಇದ್ದರು. ಆದರೆ….?

* * *

ಈಗ ಚಿನ್ನಮ್ಮ ತರುಣಿ: ಮದುವೆಗೆ ಬರುತ್ತಿರುವ ಹೂವಳ್ಳಿಯ ಹೆಣ್ಣು. ಮುಕುಂದಯ್ಯ ಯಾವುದಾದರೂ ಹೆಣ್ಣಿಗೆ ತಾಳಿಕಟ್ಟಲು ಸಿದ್ಧನಾಗುತ್ತಿರುವ ತರುಣ: ಕೋಣೂರಿನ ಗಂಡು.

ಹೋದ ವರುಷ ನಾಗಕ್ಕ ಮತ್ತು ಅವಳ ಅತ್ತೆ ಹೂವಳ್ಳಿಯಲ್ಲಿ ಸಸಿನೆಟ್ಟಿಯಿಂದ ಹಿಡಿದು ಗದ್ದೆಕೊಯ್ಲು ಮುಗಿಯುವವರೆಗೂ ಇದ್ದುದಕ್ಕೆ ನಾಗತ್ತೆಯ ಮೂಲೋದ್ದೇಶ ತನ್ನ ಸೊಸೆ ನಾಗಕ್ಕನ ಮನಸ್ಸನ್ನು ವೆಂಕಟಣ್ಣನ ಪರವಾಗಿ ಹಣ್ಣು ಮಾಡುವುದೇ ಆಗಿತ್ತು. ಅದಕ್ಕಾಗಿ ಅವಳು ಯಾರೊಬ್ಬರಿಗೂ ಸುಳುವು ಸಿಗದಂತೆ ಅನೇಕ ವಾಮಾಚಾರದ ಉಪಾಯಗಳನ್ನು ಕೈಗೊಂಡು ನೆರವೇರಿಸಿದ್ದಳು: ಒಬ್ಬರ ಎಂಜಲನ್ನು ಇನ್ನೊಬ್ಬರಿಗೆ ತಿನ್ನಿಸುವಂತಹ ಸಾಧಾರಣ ಹೀನವಾದ ಉಪಾಯದಿಂದ ಹಿಡಿದು ಮಲಮೂತ್ರ ಲಿಂಗಯೋನಿ ಸಂಬಂಧಿಗಳಾದ ಅತ್ಯಂತ ಅಶ್ಲೀಲ ಅವಾಚ್ಯ ಹೀನೋಪಾಯಗಳವರೆಗೂ! ತನ್ನ ಸೊಸೆ ಬೇರೆ ಯಾರ ಮನೆಯಲ್ಲಿಯೂ ಹೊಂದಿಕೊಳ್ಳದಿದ್ದ ಪ್ರಮಾಣದಲ್ಲಿ ಹೂವಳ್ಳಿ ಮನೆಗೆ ಹೊಂದಿಕೊಂಡಿದ್ದನ್ನು ಗಮನಿಸಿ ತನ್ನ ವಾಮಾಚಾರೋಪಾಯವೇ ಆ ಯಶಸ್ಸಿಗೆ ಮುಖ್ಯ ಕಾರಣವೆಂದು ನಿರ್ಣಯಿಸಿದ್ದಳು. ನಾಗಕ್ಕ ಇತರರ ಮನೆಗಳಲ್ಲಿ ಸಿಡುಕಿದಂತೆ ಸಿಡುಕಿರಲಿಲ್ಲ. ಒಳಗಿನ ಕೆಲಸವನ್ನಾಗಲಿ ಹೊರಗಿನ ಕೆಲಸವನ್ನಾಗಲಿ ಚಿನ್ನಮ್ಮನನೊಡಗೂಡಿ ತಾನೂ ಆ ಮನೆಯವಳೇ ಎಂಬ ಶ್ರದ್ಧೆಯಿಂದ ಮಾಡಿದುದನ್ನು ನೋಡಿ, ನಾಗತ್ತೆಗೆ ಆಶ್ಚರ್ಯಕ್ಕಿಂತಲೂ ಹೆಚ್ಚಾಗಿ ದಿಗ್ವಿಜಯ ಪಡೆದಷ್ಟು ಆನಂದವಾಗಿತ್ತು. ಸೊಸೆ ಹಿಂದೆಂದೂ ಗಂಡ ತೀರಿಕೊಂಡ ಮೇಲೆ ಅಷ್ಟು ಪ್ರಸನ್ನತೆಯಿಂದ ಮಧುರಭಾಷಿಣಿಯಾಗಿದ್ದುದನ್ನು ನಾಗತ್ತೆ ಕಂಡಿರಲಿಲ್ಲ. ವೆಂಕಟಣ್ಣನೊಡನೆಯೂ, ಚಿನ್ನಮ್ಮನ ತಂದೆ ಎಂಬ ಕಾರಣದಿಂದ, ಮರ್ಯಾದೆಯಿಂದಲೇ ಆತ್ಮಗೌರವಕ್ಕೆ ಚ್ಯುತಿ ಬಾರದಷ್ಟು ಸಲುಗೆಯಿಂದ ನಡೆದುಕೊಂಡಿದ್ದಳು. ಆದರೆ ಸೊಸೆಯ ಪರಿವರ್ತನೆಗೆ ಏಕಮಾತ್ರ ಪ್ರಧಾನ ಕಾರಣ, ನಾಗತ್ತೆ ಊಹಿಸಿದಂತೆ, ವಾಮಾಚಾರವೂ ಆಗಿರಲಿಲ್ಲ, ವೆಂಕಟಣ್ಣನೂ ಆಗಿರಲಿಲ್ಲ. ವೆಂಕಟಣ್ಣನ ಮಗಳು ಚಿನ್ನಮ್ಮನ ಸೌಜನ್ಯ,ಸ ನೇಹ, ವಿಶ್ವಾಸ, ಅನುಂಕಪೆ, ಸೋದರೀ ಸದೃಶ ವಾತ್ಸಲ್ಯ ಇತ್ಯಾದಿಗಳೆಲ್ಲ ಒಂದು ಗೂಡಿ ನಾಗಕ್ಕನ ಹೃದಯವನ್ನು ಸೂರೆಗೊಂಡಿದ್ದವು. ಅವಳಿಗೆ ಗದ್ದೆಕೊಯ್ಲು ಮುಗಿದ ಮೇಲೆಯೂ ಅಲ್ಲಿಂದ ಹೊರಡುವುದಕ್ಕೆ ಮನಸ್ಸಿರಲಿಲ್ಲ. ಚಿನ್ನಮ್ಮನೂ “ನಾಗಕ್ಕಯ್ಯ, ಇನ್ನೊಂದೆರಡು ದಿನ ಇದ್ದು ಹೋಗು” ಎಂದು ಮುದ್ದಿನಿಂದಲೆ ಆಹ್ವಾನಿಸಿದ್ದಳು.

ಅದೇ ಕಾರಣವಾಗಿತ್ತು, ಈಗಲೂ, ನಾಗಕ್ಕ ನಾಗತ್ತೆಯೊಡನೆ ಹೂವಳ್ಳಿಗೆ ಸಂತೋಷದಿಂದ ಹೊರಟಿದ್ದುದಕ್ಕೆ. ಆದರೆ ಸೊಸೆಯ ಆ ಸರಳ ಸಂತೋಷಕ್ಕೆ ನಾಗತ್ತೆಯ ವ್ಯಾಖ್ಯಾನ ಸ್ವರೂಪವೆ ಬೇರೆಯ ತರಹದ್ದಾಗಿತ್ತು.