ಇನ್ನೂ ಬೈಗಾಗಿರಲಿಲ್ಲ: ಮಲೆನೆತ್ತಗೆ ಮೂರು ನಾಲ್ಕು ಮಾರು ಮೇಲೆಯ ಎತ್ತರದಲ್ಲಿತ್ತು ಹೊತ್ತು, ಹಿಂದಿನ ದಿನದ ಮಳೆಯಲ್ಲಿ ತೊಯ್ದು ತೊಳೆದು ಕಾಡಿನ ಹಸುರಿನ ಪ್ರಭಾವದಿಂದ ಎಂದಿಗಿಂತಲೂ ತಂಪಾಗಿ ಬೀಸತೊಡಗಿತ್ತು ಮೆಲುಗಾಳಿ.

ಸುದೀರ್ಘವಾದ ಗದ್ದೆಕೋಗಿನ ಒಡ್ಡಿನ ಪಕ್ಕದಲ್ಲಿ, ಕಾಡಿನ ಅಂಚಿನಲ್ಲಿ, ಬೆಟ್ಟಳ್ಳಿಯ ಕಡೆಗೆ ಹೋಗುತ್ತಿದ್ದ ಕಾಲುದಾರಿಯಲ್ಲಿ, ಅಲ್ಲಿ ಇಲ್ಲಿ ಮೂಸುತ್ತಾ, ಒಮ್ಮೊಮ್ಮೆ ಹಿಂಗಾಲೊಂದನ್ನು ತುಸು ಎತ್ತಿ ಕುಕ್ಕೋಟ ಓಡುತ್ತಾ, ಏತಕ್ಕೊ ಏನೊ ತಾನು ಮೂಸಿ  ಆರಿಸಿದ ಅಲ್ಲೊಂದು ಇಲ್ಲೊಂದು ಪೊದೆಗೋ ಮರದ ತುಂಡಿಗೋ ಕಲ್ಲಿಗೋ ಕಾಲೆತ್ತಿ ಅಭಿಷೇಕಮಾಡುತ್ತಾ ಹೋಗುತ್ತಿದ್ದ ಹುಲಿಯ, ಆಗಾಗ ನಿಂತು ಹಿಂದಕ್ಕೆ ನೋಡಿ, ತನ್ನ ಯಜಮಾನ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂಬುದನ್ನು ಪ್ರತ್ಯಕ್ಷ ಪ್ರಮಾಣದಿಂದ ಗೊತ್ತುಮಾಡಿಕೊಂಡು, ಬೆಟ್ಟಳ್ಳಿಯ ಕಡೆಗೆ ಸಾಗುತ್ತಿತ್ತು. ಹುಲಿಯನ ದೃಷ್ಟಿಯಿಂದಲೆ ಹೇಳುವುದಾದರೆ, ಅದು ಸಾಗುತ್ತಿದ್ದುದು ಬೆಟ್ಟಳ್ಳಿ ಜಮಿನುದಾರರು ಕಲ್ಲಯ್ಯಗೌಡರ ಮನೆಗಲ್ಲ, ಅಲ್ಲಿಂದ ತುಸು ದೂರದಲ್ಲಿಯೇ ಇದ್ದ ಬೆಟ್ಟಳ್ಳಿಯ ಹೊಲೆಗೇರಿಗೆ.

ಹುಲಿಯನಿಗೆ ಬೆಟ್ಟಳ್ಳಿಯ ದಾರಿ ಮತ್ತು ಹೊಲೆಗೇರಿಗಳು ಮಾತ್ರವಲ್ಲ ಅಲ್ಲಿಯ ಸುತ್ತಮುತ್ತಣ ಪ್ರದೇಶವೆಲ್ಲ ಪರಿಚಯದ್ದೆ ಆಗಿತ್ತು. ಗುತ್ತಿಯ ಸವಾರಿ ಬೆಟ್ಟಳ್ಳಿ ಹೊಲೆಗೇರಿಗೆ ಸಿಂಬಾವಿಯಿಂದ ದಯಮಾಡಿಸಿದಾಗಲೆಲ್ಲ, ನಾಲ್ಕೈದು ವರ್ಷಗಳಿಂದಲೂ, ಅದು ಅವನನ್ನು ಬಿಡದೆ ಹಿಂಬಾಲಿಸುತ್ತಿತ್ತು, ಸ್ವಾಮಿಭಕ್ತನಾದ ಅಂಗರಕ್ಷಕನಂತೆ. ಬೇರೆ ಕಡೆಗಳಿಗೆ ತಾನು ಹೋದಾಗ ಅಲ್ಲಿಯ ನಾಯಿಗಳ ದೆಸೆಯಿಂದ ಗುಲ್ಲೋಗುಲ್ಲು ಏಳುವಂತೆ ಬೆಟ್ಟಳ್ಳಿ ಹೊಲಗೇರಿಯಲ್ಲಿ ಆಗುತ್ತಿರಲಿಲ್ಲ. ಬೆಟ್ಟಳ್ಳಿ ಹೊಲೆಗೇರಿಯ ನಾಯಿಗಳೆಲ್ಲ, ಹಿಂದೆ ವೈಸ್ ರಾಯನ್ನು ಕಂಡ ದೇಶೀಯ ರಾಜುರುಗಳಂತೆ, ಹುಲಿಯನ್ನು ಕಂಡೊಡನೆ ಬಾಲ ಮುದುರಿ, ತಮ್ಮ ವಿನಯ ವಿಧೇಯತೆಗಳನ್ನು ಪ್ರದರ್ಶಿಸಿ, ಒಳಗೊಳಗೆ ಹೆದರಿದರೂ ಹರ್ಷಾತಿರೇಕಕ್ಕೆಂಬಂತೆ ಬಿರುಸಿನಿಂದಲೆ ಬಾಲವಳ್ಳಾಡಿಸಿ, ಲಿಂಗ ಭೇದಾನುಗುಣವಾಗಿ ನೆಕ್ಕುವ ಅಥವಾ ನೆಕ್ಕಿಸಿಕೊಳ್ಳುವ ಕ್ರಿಯಾರೂಪದ ಕಪ್ಪಕಾಣಿಕೆಗಳನ್ನೂ ತಪ್ಪದೆ ಸಲ್ಲಿಸುತ್ತಿದ್ದುವು. ಆದ್ದರಿಂದ ಹುಲಿಯನಿಗೆ ಬೆಟ್ಟಳ್ಳಿ ಹೊಲೆಗೇರಿಗೆ ಹೋಗುವುದೆಂದರೆ ಖುಷಿ, ಸಂಭ್ರಮ, ಗುತ್ತಿಗೆಂತೊ ಅಂತೆ!

ಆದರೆ ಇಂದೇಕೆ ಯಜಮಾನ ಬೇಗ ಬೇಗ ಬರುತ್ತಿಲ್ಲ? ಏನಾದರೂ ದೀರ್ಘಾಲೋಚನೆ ಇರಬಹುದೆ? ಇರಬಹುದು! ಆದರೆ ಇನ್ನೂ ಒಂದು ವಿಶೇಷ ಸಂಗತಿ, ಹುಲಿಯ ಗಮನಿಸಿದ್ದು: ಹಿಂದಿನಂತಲ್ಲದೆ ಇಂದು ದಾರಿ ನಿರ್ಜನವಾಗಿದೆ ಅನೇಕರು ಬೆಟ್ಟಳ್ಳಿಗೆ ಅಭಿಮುಖವಾಗಿ ಹೋಗುತ್ತಿದ್ದಾರೆ. ಗುತ್ತಿ ಅವರನ್ನು ಸಂಧಿಸಿದಂತೆಲ್ಲ ಮಾತಿನಲ್ಲಿ ಸಿಕ್ಕಿಕೊಂಡು ನಿಧಾನವಾಗಿ ನಡೆಯಬೇಕಾಗಿದೆ, ಅನಿವಾರ್ಯವಾಗಿ. ಹುಲಿಯನಿಗೆ ಮನುಷ್ಯರ ಮಾತು ಗೊತ್ತಿದ್ದರೆ ಅದರ ಕಿವಿಗೆ ಬೀಳುತ್ತಿದ್ದುದು ಈ ಶಬ್ದ ಸಮೂಹ: ಬೀಸೆಕಲ್ಲು ಸವಾರಿ, ತೀರ್ಥಳ್ಳಿ, ಪಾದ್ರಿ, ಕಿಲಸ್ತರ ಜಾತಿ, ದ್ಯಾವೇಗೌಡ್ರು ಇತ್ಯಾದಿ.

ಹುಲಿಯ ನೋಡುತ್ತದೆ ಆ ಸುಪರಿಚಿತ ಅರೆಕಲ್ಲು ಬಳಿಸಾರುತ್ತಿದೆ. ಆ ಅರೆಕಲ್ಲಿನ ಹತ್ತಿರವೆ ಹೊಲೆಗೇರಿಗೆ ಅಗಚುವ ದಾರಿ. ತಾನು ಆ ದಾರಿಯಲ್ಲಿ ಹೋಗುವಾಗಲೂ ಬರುವಾಗಲೂ ಯಾವಾಗಲೂ ತಪ್ಪದೆ ಒದ್ದೆ ಮಾಡುತ್ತಿದ್ದ ಅರೆಕಲ್ಲಿನ ಮೇಲೆ ಎದ್ದಂತೆ ಕಾಣಿಸುತ್ತಿರುವ ಕಲ್ಲುಗುಂಡೂ ತೋರುತ್ತಿದೆ. ಅದರ ಪಕ್ಕದಲ್ಲಿಯೆ ಕಲ್ಲುಸಂಧಿಯಲ್ಲಿ ಬೆಳೆಯಲಾರದ ಬೆಳೆದು ಗುಜ್ಜಾಗಿರುವ ಕಾರೆಯ ಮಟ್ಟೂ ಇದೆ.

ಹುಲಿಯ ಕಾರೆಮಟ್ಟಿನ ಅರೆಕಲ್ಲುಗುಂಡಿಗೆ ಕಾಲೆತ್ತಿ ಅಭಿಷೇಕ ಮಾಡುವ ತನ್ನ ಸಂಪ್ರದಾಯದ ಕರ್ತವ್ಯವನ್ನು ಪೂರೈಸಿ, ಹೊಲೆಗೇರಿಗೆ ಹೋಗುವ ದಾಯಿಲ್ಲಿಯ ಸ್ವಲ್ಪ ದೂರ ಮುಂದುವರಿದು, ನಿಂತು, ಹಿಂದಿರುಗಿ ನೋಡಿತು: ಇದೇನು? ಯಜಮಾನ ತಾನು ಬಂದ ದಾರಿಯಲ್ಲಿ ಬರದೆ ಬೆಟ್ಟಳ್ಳಿ ಗೌಡರ ಮನೆಯ ಕಡೆಗೆ ಹೋಗುವ ದಾರಿಯಲ್ಲಿ ಇತರರೊಡನೆ ಹರಟುತ್ತಾ ಮುಂಬರಿಯುತ್ತಿದ್ದಾನೆ. ಯಜಮಾನನಿಗೆ ಅವನ ತಪ್ಪನ್ನು ತಿಳಿಸಿಕೊಡುವ ಉದ್ದೇಶದಿಂದಲೊ ಏನೊ ಅವನತ್ತ ಮುಖ ಮಾಡಿ, ಒಂದೆರಡು ಸಾರಿ, ತಾನು ಕಾಡಿನಲ್ಲಿ ಹಂದಿಗಿಂದಿ ತಡೆದಾಗ ಬೇಟೆಗಾರರನ್ನು ಎಚ್ಚರಿಸಿ ಅವರಿಗೆ ತಿಳುವಳಿಕೆ ಕೊಡವ ಸಲುವಾಗಿಯೆ ಕೂಗುವ ರೀತಿಯಲ್ಲಿ ಕೂಗಿತು. ಆದರೆ ಗುತ್ತಿ ತಿರುಗಿಯೂ ನೋಡಲಿಲ್ಲ. ಹುಲಿಯನ ಮನಸ್ಸು ಒಂದು ಕ್ಷಣ ಇಬ್ಬಗೆಯಾಯಿತು: ಯಜಮಾನನನ್ನು ಅನುಸರಿಸುವುದೆ? ಹೊಲೆಗೇರಿಗೆ ಹೋಗುವುದೆ? ಕಡೆಗೆ ಹೊಲಗೇರಿಯ ಆಕರ್ಷಣೆಯ ಸುಮನೋಹರವಾಗಿ, ಅತ್ತಕಡೆಯ ಓಡಿತು.

ಕಿಲಸ್ತರ ಪಾದ್ರಿ ಜೀವರತ್ನಯ್ಯನ ‘ಬೀಸೆಕಲ್ಲಿನ ಸವಾರಿ’ ಮತ್ತು ಆತ ಬೆಟ್ಟಳ್ಳಿ ಕಲ್ಲಯ್ಯಗೌಡರ ಹಿರಿಯ ಮಗ ದೇವಯ್ಯಗೌಡರಿಗೂ ಅದನ್ನು ಕಲಿಸುವ ಅದ್ಭುತದ ವೈಖರಿ-ಎರಡೂ ಗುತ್ತಿಯ ಮನಸ್ಸನ್ನು ಆಕರ್ಷಿಸಿದ್ದರೂ, ಅವನು ಮೂದಲು ಹೊಲೆಗೇರಿಗೆ ಹೋಗಿ, ಅನಂತರವೆ ಬೆಟ್ಟಳ್ಳಿ ಹಕ್ಕಲಿಗೆ ಹೋಗುವುದು ಎಂದು ನಿಶ್ಚಯಿಸಿದ್ದನು. ಆದರೆ ದಾರಿಯಲ್ಲಿ ಹಳೆಮನೆ ಹೊಲೆಯರ ಕೆಲವರೂ ಕೋಣೂರಿನ ಗಟ್ಟದವರಲ್ಲಿ ಕೆಲವರೂ ಸಿಕ್ಕಿದ್ದರಿಂದ ಮಾತು ಮಾತಾಡುತ್ತಾ, ಸಂಗದ ಹೊನಲಿಗೆ ಸಿಕ್ಕಿದವನಂತೆ, ಹೊಲೆಗೇರಿಗೆ ಅಗಚುವೆಡೆ ಮರೆತು ಬೆಟ್ಟಳ್ಳಿ ಮನೆಗೆ ಹೋಗುವ ದಾರಿಯಲ್ಲಿ ಸಂಗಾತಿಗಳ ಜೊತೆ ಮುಂಬರಿದಿದ್ದನು, ಹುಲಿಯ ಬೊಗಳಿದ್ದನ್ನೂ ಆಲಿಸಿಯೂ ಆಲಿಸದವನಂತೆ, ಸಂವಾದಾಸಕ್ತನಾಗಿ:

“ಬೀಸೆಕಲ್ಲಿನ ಮೇಲೆ ಹ್ಯಾಂಗೋ ಸವಾರಿ ಮಾಡಾದೂ?”

“ಆ ಪಾದ್ರಿಗೆ ಏನೋ ಹಸುರು ಗೊತ್ತಿರಬೈದೊ!”

“ಮತ್ತೆ? ಹಸರು ಗೊತ್ತಿರೋಕೆ, ಸಣ್ಣಗೌಡರ ಮ್ಯಾಲೆ ಮಂಕುಬೂದಿ ಎರಚಿ, ಕಿಲಸ್ತರ ಜಾತಿಗೆ ಸೇರಿಸೋಕೆ ಮಾಡ್ಯಾನಂತೆ!”

“ಬೀಸೆಕಲ್ಲು ಮ್ಯಾಲೆ ಹತ್ತಿ ಕೂತ್ಗೂತಾನಂತೆ. ಗೂಟ ಹಿಡಿದು ನಾವೆಲ್ಲ ಬೀಸೋ ಹಾಂಗೆ ಗಿರ್ರನೆ ‘ತಿರುಗಿಸ್ತಾನಂತೆ. ಬೀಸೆಕಲ್ಲು ಅನಾಮತ್ತು ಮೇಲೆದ್ದು ಎಲ್ಲಿಗಂದ್ರೆ ಅಲ್ಲಿಗೆ ಕಣ್ಣುಮುಚ್ಚಿ ಬಿಡೋದರ ಒಳಗೆ ಹೋಗ್ತದಂತೆ”.

“ಅಂತೂ ನಮ್ಮ ಬೆಟ್ಟಳ್ಳಿ ಒಡೇರು ಏನಾರೂ ಒಂದು ಹೊಸ ಹೊಸದು ಮಾಡ್ತಾನೆ ಇರತಾರೆ! ಈ ಪಾಸಲೆಗೆಲ್ಲ ಅವರೇ ಮೊದೂಲು ಗಾಡಿ ತರಿಸ್ದೋರು. ಒಂದು ಕುದುರೆ ಬ್ಯಾರೆ ತರ್ಸಿದ್ರು….ಅದು ಅಲ್ಲೆಲ್ಲೂ ತ್ವಾಟದ ಅಗಳಿಗೆ ಬಿದ್ದು ಸೊಂಟ ಮುರುಕೊಂಡು ಸತ್ತುಹೋತಂತೆ….!”

“ಆ ಗಾಡಿ ಬರೀ ಬಂಡಿ ಚಕ್ಕಡಿ ಅಲ್ಲ ಕಣೋ; ಕಮಾನು ಗಾಡಿ! ಎಂಥ ಮಳೆ ಇರಲಿ, ಬಿಸ್ಲು ಇರಲಿ, ಒಳಗೆ ಕೂತ್ರೆ ಮನೇಲಿ ದಿಂಬು ಒರಗಿಕೊಂಡು ಕೂತ್ಹಾಂಗೆ ಇರ್ತದೆ…”

“ನೀನೇನು ಗಾಡೀಲಿ ಕೂತ್ಹಾಂಗೆ ಮಾತಾಡ್ತೀಯಲ್ಲಾ?”

“ಅವತ್ತೊಂದು ತೀರ್ಥಳ್ಳಿಗೆ ಹೋಗ್ತಿದ್ರು. ಮೇಗ್ರಳ್ಳಿ ಹತ್ತಿರ, ಹಳೇ ಹೆದ್ದಾರಿ ಇನ್ನೂ ದುರಸ್ತಾಗಿರಲಿಲ್ಲ, ಗಾಡಿ ಚಕ್ರ ಕಣಿಗೆ ಬಿದ್ದು, ನಾವೆಲ್ಲ ದಾರೀಲಿ ಹೋಗೋರು ಚಕ್ರಕ್ಕೆ ಕೈಕೊಟ್ಟು ಎತ್ತಿ, ನೂಕಿ, ದಾರೀಗ ತರಬೇಕಾಯ್ತು ಆವಾಗ್ಲೆ ನಾನು ಒಳಗೆಲ್ಲ ಹಣಕಿ ನೋಡ್ದೆ! ಹ್ಹಿಹ್ಹಿಹ್ಹಿ! ಕೈಹಾಕಿ ಮುಟ್ಟಿಯೂ ನೋಡಿಬಿಟ್ಟೆ! ದಿಂಬುಹಾಕಿದ್ಹಾಂಗೆ ಮೆತ್ತೆ ಹಾಕಿದ್ರೋ ಒರಗಿಕೊಳ್ಳಾಕ್ಕೆ….!”

“ಎತ್ತಿನ ಕೊಳ್ಳೀಗೆ ಗಂಟೆಸರ ಹಾಕಿರ್ತಾರೊ; ಗಾಡಿ ಬರ್ತಿದ್ರೆ ಏಸು ಪಸಂದಾಗಿರ್ತದೆ? ಗೈಲ್, ಗೈಲ್, ಗೈಲ್, ಗೈಲ್ ಅಂತಾ!”

“ಕೋಡಿಗೂ ಫಳಾ ಫಳಾ ಹೊಳೆಯೇ ಹಿತ್ತಾಳೆ ಕುಂಚ ಹಾಕಿ, ಬಣ್ಣದ ಕುಚ್ಚು ನೇತು ಬಿಟ್ಟಿರುತ್ತಾರೊ!….. “

“ಅಲ್ಲಾ…. ಅದೆಲ್ಲಾ ಸರಿ. ಆದರೆ ಗಾಡಿ ಹೊಡೆಯೋಕೆ ಆ ಬಚ್ಚನ್ನ ಇಟ್ಕೊಂಡಿದಾರಂತಲ್ಲೋ? ಗೌಡರ ಮನೇಲಿ ಹೊಲೇರನ್ನ ಒಳಂಗಳಕ್ಕೆ ಕಾಲಿಡೋಕೆ ಬಿಡಾದಿಲ್ಲ. ಅಂತಲ್ಲಿ ಇವರು ಅವನ್ನ ಗಾಡಿ ಹೊಡಿಯೋಕೆ ಇಟ್ಟುಕೊಂಡೂ, ಅವನ ಕೈಲಿ ಮುಟ್ಟಿಸ್ಕೊಂಡೂ….ಥೂ ಥೂ ಥೂ ಕಿಲಸ್ತರು ಮಾಡಿದ್ಹಾಂಗೆ ಮಾಡ್ತೀದಾರಲ್ಲೋ….”

“ಅದೆಲ್ಲ ಆ ಪಾದ್ರಿ ಹಾಕಿರೋ ಮಂಕುಬೂದಿ ದೆಸೆ ಕಾಣೋ! ಅವರನ್ನ ತೀರ್ಥಳ್ಳಿ ಪ್ಯಾಟೆಗೆ, ಶಿಮೂಗ್ಗಾ ಷಹರಿಗೆ ಕರಕೊಂಡು ಹೋಗಿ, ಕುಣಿಸಿ, ಆ ಯೂರೋಫೇನ್ ಬಿಳಿದೊರೆ ಪಾದ್ರಿ ಇದಾನಂತಲ್ಲಾ ಅವನ ಹತ್ರಾನು ಬೋದ್ನೆ ಮಾಡ್ಸಿ, ಕುಡಿಸಿ, ಕುಣಿಸಿ, ಅವರ ಬುದ್ಧೀನೆ ಕೆಡಿಸಿಬಿಟ್ಟಿದಾನಂತೆ….”

“ಸೈ ಬಿಡು, ಅದಕ್ಕೇ ಮತ್ತೆ? ಅವರ ಮನೆ ದೇವರ ತುಳಿಸಿಕಟ್ಟೇನೆ ಕಿತ್ತುಹಾಕಾದಕ್ಕೆ ಹಾರೆ ಸಮೆಗೋಲು ತಗೊಂಡು ಹೋಗಿದ್ರಂತೆ! ದೊಡ್ಡಗೌಡ್ರು `ನಿನ್ನ ಗುಂಡಿನಾಗೆ ಹೊಡೆದುಬಿಡ್ತೀನಿ’ ಅಂತ ಹೆದರಿಸಿ ತಡೆದರಂತೆ….!”

“ಪಾಪ, ಅವರ ಹೆಂಡ್ತೀನೂ ಅಳ್ತಳ್ತಾ ಬಂದು ಗಂಡನ್ನ ಕಾಲು ಹಿಡ್ಕೊಂಡರಂತೆ, ತುಳಸಿಕಲ್ಲು ಒಡೆದು ಹಾಕಬ್ಯಾಡಿ ಅಂತಾ!”

“ಯಾರು ಅಂತೀಯಾ ಅವರ ಹೆಂಡತಿ? ನಮ್ಮ ಕೋಣೂರು ಸಣ್ಣಗೌಡ್ರು ಮುಕುಂದಯ್ಯ ಇದ್ದಾರಲ್ಲ ಅವರ ಅಕ್ಕ, ಖಾಸಾ ಅಕ್ಕ!”

“ಗಂಡ ಜಾತಿಗೆ ಸೇರಿದ ಮೇಲೆ ಹೆಂಡ್ತೀನೂ ಕಿಲಸ್ತರೆ ಆದ್ಹಾಂಗೆ ಆಯ್ತಲ್ಲಾ!”

“ಅದ್ಯಾಕೆ ಹಾಂಗೆ? ಇವರೇನು ಹೋಗಿ ಆ ಪಾದ್ರಿಹತ್ರ ತೀರ್ಥ ತಗೊಂಡು ಜಾತಿ ಕೆಡಸಿಕೊಳ್ತಾರೇನು….?”

“ಹೆಂಡ್ತೀನೂ ತಮ್ಮ ಜೊತೇಲಿ ಕಿಲಸ್ತರ ಜಾತಿಗೆ ಸೇರಿದ ಇದ್ರೆ, ಅವರು ಕಿಲಸ್ತರವಳನ್ನೆ ಒಬ್ಬಳನ್ನ ಮದುವೆ ಆಗ್ತಾರಂತೆ!…”

“ಅದೇ ಅಂತೆ ಕಣೊ, ಕುಶಾಮತ್ತು! ಆ ಪಾದ್ರಿಗೆ ಎಂಟೋ ಹತ್ತೊ ಜನ, ಒಂದು ಹಿಂಡೇ, ಹೆಣ್ಣು ಮಕ್ಕಳು ಅವೆಯಂತೊ! ಅದೂ ದಿಂಡೇ ದಿಂಡೇಹೆಣ್ಗಳಂತೆ! ಈ ಗೌಡ್ರನ್ನ ಕರಕೊಂಡು ಹೋಗಿ, ಅವರ ಕೈಲಿ ಊಟಗೀಟ ಹಾಕ್ಸಿ, ಮೆಹನತ್ತ ಮಾಡಿದಾನಂತೆ. ಅದೂ ಒಂದು ಕತೇನೆ ಆಗಿಬಿಟ್ಟದಂತೆ!….”

“ಅಂತೂ ಒಳ್ಳೆ ಕಿಸಾಗೊಳ್ಳೀನೆ ಆಗ್ಯದೆ ಅನ್ನು! ಪಾಪ, ಆ ಕೋಣೂರು ಅಮ್ಮಗೆ ಒಂದೊ ಎಲ್ಡೋ ವರ್ಷದ ಒಂದು ಮಗು ಬ್ಯಾರೆ ಅದೆ ಕಣೋ!”

“ಗಂಡೋ? ಹೆಣ್ಣೊ? “

“ಗಂಡೋ!”

“ಮೊಮ್ಮಗನ್ನ ಎಲ್ಲಿ ಬಿಟ್ಟಾರು ನಮ್ಮ ದೊಡ್ಡಗೌಡ್ರ? ಆ ಪಾದ್ರೀನ ಸೀಳಿಸೀಳಿ ಹಾಕ್ಬಿಟ್ಟಾರು!… “

“ಓಹೋಹೋ! ಏನು ಗಲಾಟೆ ಕೇಳಿಸ್ತಾ ಇದೆಯೋ ಹಕ್ಕಲಾಗೆ? ಆಗ್ಲೆ ಬೀಸೆಕಲ್ಲು ಸವಾರಿ ನೋಡಾಕೆ ಜನ ಗೇರೈಸಿಬಿಟ್ಟದೆ ಅಂತಾ ಕಾಣ್ತದೆ. “

ಗುತ್ತಿ ಸಂಗಾತಿಗಳೊಡನೆ ಬೆಟ್ಟಳ್ಳಿ ಹಕ್ಕಲನ್ನು ತಲುಪಿದಾಗ ಇನ್ನೂ `ಬೀಸೆಕಲ್ಲು ಸವಾರಿ’  ಪ್ರಾರಂಭವಾಗಿರಲಿಲ್ಲ. ಆದರೆ ಸಮೀಪದ ಹಳ್ಳಿ ಮನೆಗಳ ಆಳುಕಾಳು, ಮಕ್ಕಳೂ ಮರಿಗಳೆಲ್ಲ ಸೋಜಿಗೆ ನೋಡುವ ಕಾತರದಿಂದ ಪ್ರೇರಿತರಾಗಿ, ಹೊತ್ತಿಗೆ ಮೊದಲೆ ನೆರೆದಿದ್ದುದರಿಂದ  ಸಂತೆ ಜಾತ್ರೆಗಳಲ್ಲಾಗುವಂತೆ ಸದ್ದು ಮೊಳಗತೊಡಗಿತ್ತು.

ತೀರ್ಥಹಳ್ಳಿಯ ಪಾದ್ರಿ ಜೀವರತ್ನಯ್ಯ ಉತ್ಸಾಹೀ ಯುವಕನಾಗಿದ್ದ ಬೆಟ್ಟಳ್ಳಿ ದೇವಯ್ಯನಿಗೆ ಬೈಸಿಕಲ್ಲು ಕಲಿಸಲು ಮಾತುಕೊಟ್ಟಿದ್ದು ವಾರತ್ತೆ ವಿವಿಧ ರೂಪ ಧರಿಸಿ, ಸುತ್ತಮುತ್ತಣ ಹಳ್ಳಿಗಳಲ್ಲಿ ಹಬ್ಬಿ, ಬೆಟ್ಟಳ್ಳಿಯ ಹಕ್ಕಲಿಗೆ ಜನರನ್ನು ಆಕರ್ಷಿತ್ತು. ಎತ್ತಿನಗಾಡಿಯೇ ಅಪೂರ್ವವೂ ಆಶ್ಚರ್ಯಕರವೂ ಆಗಿದ್ದ ಈ ಕಾಲದ ಹಳ್ಳಿಗರಿಗೆ ಬೈಸಿಕಲ್ ಎಂಬ ವಿದೇಶೀಯ ಪದವೂ ಆ ಹೆಸರಿನ ವಸ್ತುವೂ ಅದರ ಸವಾರಿಯೂ ಒಂದು ಅದ್ಭುತವಾದ ಅತೀಂದ್ರಿಯ ವ್ಯಾಪಾರಸದೃಶವಾಗಿದ್ದುದರಲ್ಲಿ ಆಶ್ವರ್ಯ ವೇನಿಲ್ಲ. ಬೈಸಿಕಲ್ ಎಂಬ ಪದ ಸರಿಯಾಗಿ ಉಚ್ಛಾರಣ ಮಾಡಲಾರದ ಹಳ್ಳಿಗರ ಬಾಯಲ್ಲಿ ತಮಗೆ ಚೆನ್ನಾಗಿ ಪರಿಚಯವಿದ್ದು ದಿನಬಳಕೆಯಲ್ಲಿದ್ದ `ಬೀಸೆಕಲ್ಲು’ ಎಂಬ ಪದಕ್ಕೆ ಮತಾಂತರವಾಗಿತ್ತು. ಬೈಸಿಕಲ್ ಎಂಬ ವಸ್ತುವನ್ನು ಕಂಡರಿಯಲಿಲ್ಲವಾದ್ದರಿಂದಲೂ ಬೀಸೆಕಲ್ಲನ್ನು ಹುಟ್ಟಿದಂದಿನಿಂದಲೂ ಕಂಡಿದ್ದರಾದ್ದರಿಂದಲೂ ಬೈಸಿಕಲ್ ಸವಾರಿಯನ್ನು ಬೀಸೆಕಲ್ಲಿನ ಸವಾರಿ ಎಂದು ಕರೆದು, ಪಾದ್ರಿ ಬೀಸೆಕಲ್ಲಿನ ಮೇಲೆ ಸವಾರಿ ಮಾಡುತ್ತಾನೆಂದೂ ದೇವಯ್ಯಗೌಡರಿಗೂ ಅದನ್ನು ಹೇಳಿ ಕೊಡುತ್ತಾನೆಂದೂ ವದಂತಿ ಹಬ್ಬಿತ್ತು. ಜನರ ಕಲ್ಪನೆಯಲ್ಲಿ ಕುದುರೆಯ ಮೇಲೆಯೋ ಜಮಖಾನೆಯ ಮೇಲೆಯೋ ಕುಳಿತು ಆಕಾಶದಲ್ಲಿ ಸಂಚಾರ ಮಾಡುವಂತೆ, ಪಾದ್ರಿ ಬೀಸೆಕಲ್ಲಿನ ಮೇಲೆ ಕುಳಿತು ಮಂತ್ರಶಕ್ತಿಯಿಂದ ಸಂಚರಿಸುತ್ತಾನೆ ಎಂಬು ಚಿತ್ರಿಸಿಕೊಂಡಿದ್ದರು.

ಇದ್ದಕ್ಕಿದ್ದಂತೆ ಜನರ ಗುಜುಗುಜು ಇಳಿದ ಹಾಗಾಯಿತು. ಅಲ್ಲಿ ಇಲ್ಲಿ ಗುಸುಗುಸು ಮಾತು ಮೂದಲಾಯಿತು. ನೋಡುತ್ತಿದ್ದಂತೆ ಪೊದೆಗಳ ನಡುವಣಿಂದ ಪಾದ್ರಿ ಜೀವರತ್ನಯ್ಯನೂ ಬೆಟ್ಟಳ್ಳಿ ದೇವಯ್ಯನೂ ಕಾಣಿಸಿಕೊಂಡು ಹಕ್ಕಲ ಕಡೆಗೆ ಬಂದರು. ಇದ್ದಲಿನಷ್ಟು ಕರ್ರ‍ಗಿದ್ದು ಪಾದ್ರಿ ಮಲ್ಲಿಗೆ ಹೂವಿನಂತಹ ಬಿಳಿಯ ಬಟ್ಟೆಗಳನ್ನು ಧರಿಸಿದ್ದನು. ಒಂದು ಅಂಚಿಲ್ಲದ ಬಿಳಿಯ ರುಮಾಲು ತಲೆಯನ್ನಲಂಕರಿಸಿತ್ತು. ಗುಂಡಿ ಹಾಕದೆ ತೆರೆದಿದ್ದ ಬಿಳಿಯ ಕೋಟಿನ ಒಳಗೆ ಧರಿಸಿದ್ದ ಶರಟಿನ ಗುಂಡಿಗಳನ್ನು ಬಿಸಿಲಿಗೆ ಹೊಳೆಯುತ್ತಿದ್ದುವು. ಉತ್ತರೀಯವೊಂದು, ಅದೂ ಬಿಳಿಯದೆ, ಕೊರಳನ್ನು ಸುತ್ತಿ, ಬೆನ್ನ ಮೇಲೊಂದು ತುದಿಯಾಗಿಯೂ ಎದೆಯ ಮೇಲೊಂದು ತದಿಯಾಗಿಯೂ ಮೆರೆಯುತ್ತಿತ್ತು. ಹಳ್ಳಿಗರ ಬೆರಗಿಗೆ ಕಾರಣವಾಗಿದ್ದು ಗಡಿಯಾಋದ ಸರಪಣಿ ಕೋಟಿನ ಗಡಿಯಾರದ ಜೇಬಿನಿಂದ ಇಳಿಬಿದ್ದಿತ್ತು. ಒಂದು ತೆಳ್ಳನೆಯ ಬಿಳಿಯ ಪಂಚೆಯನ್ನು ಕಚ್ಚೆ ಹಾಕಿ ಉಟ್ಟಿದ್ದನು. ಮೆಟ್ಟುಗಳನ್ನೇ, ಅಪರೂಪವಾಗಿ, ಯಜಮಾನ ಗೌಡರುಗಳ ಕಾಲಿನಲ್ಲಿ ಮಾತ್ರ ನೋಡುತ್ತಿದ್ದ ಹಳ್ಳಿಗರ ಕುತೂಹಲ ಗೌರವಕ್ಕೆ ತಿರುಗುವಂತೆ ಕಾಳಿಗೆ ಬೂಟೀಸು ಹಾಕಿದ್ದನ್ನು. ತೆಳ್ಳಗೆ ಎತ್ತರವಾಗಿದ್ದ ಆ ವ್ಯಕ್ತಿಯನ್ನು ನೋಡಿ ಅವರ ಜಾತಿ ನೀತಿ ಮತ್ತು ಅವನು ಮಾಡುತ್ತಿದ್ದನೆಂದು  ಹೇಳಲಾಗುತ್ತಿದ್ದ ಮತಾಂತರದ ಹಾವಳಿ ಇವುಗಳಿಂದ ಅವನ ವಿಚಾರದಲ್ಲಿ ಅತ್ಯಂತ ತಿರಸ್ಕಾರದ ಭಾವನೆ ಇದ್ದವರೂ ಕೂಡ ತುಸು ಹೆಡೆ ಮುಚ್ಚುವಂತಾದರು.

ಪಾದ್ರಿಯ ಪಕ್ಕದಲ್ಲಿದ್ದ ದೇವಯ್ಯ ಮೈಕಟ್ಟಿನಲ್ಲಿ ಪಾದ್ರಿಗಿಂತಲೂ ಒಂದು ಕೈ ಮೇಲಾಗಿದ್ದನು. ಬಣ್ಣದಲ್ಲಿಯೂ ಪಾದ್ರಿ ಯಾವ ಪ್ರಮಾಣದಲ್ಲಿ ಕಪ್ಪಾಗಿದ್ದನೋ ಅದೇ ಪ್ರಮಾಣದಲ್ಲಿ ಅವನು ಕೆಂಪಗಿದ್ದನು. ಆ ಬಣ್ಣ ಮತ್ತು ಮೈಕಟ್ಟು ಅವರ ಮನೆತನದ ಲಕ್ಷಣಗಳಾಗಿದ್ದುವು. ಉಡುಪು ಅಲಂಕಾರಗಳಲ್ಲಿ ಅವನ ಗೌಡತನ ತುಸುತುಸುವೆ ಕಿಲಸ್ತರತನಕ್ಕೆ ತಿರುಗಲು ಶುರುವಾಗಿತ್ತು. ಅವನು ತಲೆಗೆ ಯಾವ ಉಡುಪನ್ನೂ ಹಾಕಿರಲಿಲ್ಲ. ಕ್ರಾಪು ಬಿಟ್ಟಿದ್ದನು. ಗೀರಿನ ಶರಟು, ಕರಿಯ ಕೋಟು ಹಾಕಿ, ಕೆಂಪಂಚಿನ ಕಚ್ಚೆಪಂಚೆ ಉಟ್ಟು ಸಾಧಾರಣವಾಗಿ ಅತ್ತಕಡೆ ಬಳಕೆಯಲ್ಲಿ ಕನ್ನಡ ಜಿಲ್ಲೆಯವಲ್ಲದ, ಶಿವಮೂಗ್ಗಾದ ಕಡೆಯಿಂದ ಆಮದಾದ, ಬಯಲು ಸೀಮೆಯ ಮೆಟ್ಟುಗಳನ್ನು ಹಾಕಿದ್ದನು. ಆದರೆ ಕಿವಿಗಳಲ್ಲಿ ಇನ್ನೂ ಒಂಟಿಗಳು ಮಾಯವಾಗಿರಲಿಲ್ಲ: ಹುಟ್ಟಿನಲ್ಲಿ ಆತನು ಗೌಡರ ಕುಲಕ್ಕೆ ಸೇರಿದವನು ಎಂಬುದಕ್ಕೆ ಅವು ಮಾತ್ರವೆ ಸಾಕ್ಷಿಯಾಗಿದ್ದುವು!

`ಹಕ್ಕಲು’ ಕಾಡು ವಿರಳವಾಗುತ್ತಾ ಬಂದಿದ್ದ ಅದರಂಚಿನ ಭಾಗವಾಗಿತ್ತೆ ಹೊರತು `ಬಯಲು’ ಆಗಿರಲಿಲ್ಲ. ಅದರ ನಡುನಡುವೆ ದೂರ ದೂರದಲ್ಲಿ ಹುಳಿಚೊಪ್ಪಿನ ಪೊದೆಗಳೂ ಬೆಮ್ಮಾರಲ ಮಟ್ಟುಗಳೂ ಅರಮರಲ ಗಿಜರುಗಳೂ ಇದ್ದುವು. ಅದು ಧನಗಳು ಮೇಯುವ ಕಾವಲಾಗಿಯೂ ಕರುಗಳ `ಒಳಕಡೆ’ ಯಾಗಿಯೂ ಉಪಯೋಗದಲ್ಲಿತ್ತು. ಬಯಲು ಸೀಮೆಯಲ್ಲಿ `ಬಯಲು’ ಎಂದು ಕರೆಸಿಕೊಳ್ಳುವಂತಹ ಜಾಗ ಮಲೆನಾಡಿನಲ್ಲಿ ಪ್ರಾಯಶಃ ಇಲ್ಲವೆ ಇಲ್ಲ. ಏಕೆಂದರೆ ಅಂತಹ ಸಮತಟ್ಟಿನ ಪ್ರದೇಶವೆ ಅಲ್ಲಿ ದುರ್ಲಭ. ಆದ್ದರಿಂದಲೆ ಪಾದ್ರಿ ಬೈಸಿಕಲ್ಲನ್ನು ತಾನೆ ನೂಕಿಕೊಂಡೊ ಹತ್ತಿಕೊಂಡೊ ಬರುವುದಕ್ಕೆ ಬದಲಾಗಿ, ಅದನ್ನು ಹೊತ್ತು ತರುವಂತೆ ಗಾಡಿ ಹೊಡೆಯುವ ಬಚ್ಚನಿಗೆ ಆಜ್ಞೆಮಾಡಿ ಬಂದಿದ್ದನು. ಪಾದ್ರಿಯಿಂದಲೂ ಪಾದ್ರಿಯ ಪ್ರಭಾವಕ್ಕೊಳಗಾಗಿದ್ದ ಸಣ್ಣಗೌಡರಿಂದಲೂ ಆಗ ತಾನೆ ನವನಾಗರಿಕತೆಗೆ ಪ್ರವೇಶದೀಕ್ಷೆ  ಪಡೆಯುತ್ತಿದ್ದೇನೆಂದು ಭಾವಿಸಿಕೊಂಡು, ತನ್ನ ಕೇರಿಯವರನ್ನೂ ಇತರ ಆಳುಕಾಳುಗಳನ್ನೂ ತಿರಸ್ಕಾರಭಾವದಿಂದ ನೋಡತ್ತಾ ಅವರ ದ್ವೇಷಾಸೂಯೆಗಳಿಗೂ ಪಕ್ಕಾಗಿದ್ದ ಬಚ್ಚ ತುಂಬ ಸಂತೋಷ ಹೆಮ್ಮೆಗಳಿಂದ ಬೈಸಿಕಲ್ಲನ್ನು ಹೊರುವ ಕೆಲಸಕ್ಕೆ ಒಪ್ಪಿದ್ದನು: ಅಂತಹ ಪಳಪಳ ಹೊಳೆಯುವ, ಕೈ ತೊಳೆದುಕೊಂಡೆ ಮುಟ್ಟಬೇಕು ಎಂಬಷ್ಟು ರಮ್ಯವಾಗಿರುವ, ಅದುವರೆಗೂ ಅಲ್ಲಿ ಯಾರೂ ಕಾಣದಿರುವ ಹೊಸ ವಾಹನವನ್ನು ಹೊರುವ ಅರ್ಹತೆ ತನ್ನಂತಹ ಮುಂದುವರಿದವರಿಗಲ್ಲದೆ ಇನ್ನಾರಿಗೆ ಸಲ್ಲುತ್ತದೆ? ಆದರೂ ಅದನ್ನು ಎತ್ತಿಕೊಳಲು ಕೈ ಹಾಕುವ ಮುನ್ನ ಅವನಲ್ಲಿ ಭಯ ಸಂಚಾರವಾಯಿತು! ಅದನ್ನು ಯಾವ ಭಾಗದಲ್ಲಿ ಹೇಗೆ ಎತ್ತಬೇಕು ಎನ್ನುವುದು ಅವನಿಗೆ ಸಮಸ್ಯೆಯೆ ಆಗಿಬಿಟ್ಟಿತು. ಒಮ್ಮೆ ಹಿಡಿದೆತ್ತಲು ಪ್ರಯತ್ನಿಸಿದಾಗ ಹಠತ್ತಾನೆ ಟ್ರಿಣ್ ಟ್ರಿಣ್ ಸದ್ದಾಗಿ, ಹೆದರಿ, ಅದನ್ನು ಬಿಟ್ಟು ದೂರ ಸರಿದು ನಿಂತನು! ಇನ್ನೊಮ್ಮೆ ಚಕ್ರ ತಿರುಗಿ ಕೈ ಬೆರಳು ಸಿಕ್ಕಿತು! ಮತ್ತೊಮ್ಮೆ ಅದರ ಕಾಲುಸರಪಣಿಯ ಮುಳ್ಳಿಗೆ ಬಟ್ಟೆ ಸಿಕ್ಕಿ ಹರಿದೆಹೋಯಿತು! ಅಯ್ಯೋ ಗ್ರಹಚಾರವೆ! ಹೆಬ್ಬುಬ್ಬೆಗೆ ಎತ್ತಿಕೊಂಡು ಬರುತ್ತೇನೆ ಎಂದು ಒಪ್ಪಿಕೊಂಡದ್ದೇನೊ ಅಯಿತು! ಈಗೇನು ಮಾಡುವುದು?

ಎಷ್ಟು ಹೊತ್ತಾದರೂ ಬೈಸಿಕಲ್ ಹೊತ್ತ ಬಚ್ಚ ಕಾಣದಿರಲು, ದೇವಯ್ಯನೆ ಒಬ್ಬ ಆಳಿನೊಡನೆ ಮನೆಗೆ ಓಡಿ ಬಂದನು. ನೋಡುತ್ತಾನೆ: ಬಚ್ಚ ಇನ್ನೂ, ದೇವತೆಯ ಬಳಿ ಆರಾಧಕನಂತೆ, ದೂರನಿಂತು ಯಂತ್ರಾವಲೋಕನದಲ್ಲಿಯೆ ಮಗ್ನನಾಗಿದ್ದಾನೆ!

“ಏನು ನೋಡ್ತಾ ನಿಂತೀಯ, ಬೆಪ್ಪುಮುಂಡೇದೆ?” ಎಂದು ಬೈದು, ತಾನು ಕರೆತಂದ ಆಳನ್ನೂ ಬಚ್ಚನಿಗೆ ನೆರವಾಗಲು ಹೇಳಿ, ಅದನ್ನು ಹೇಗೆ ಎಲ್ಲಿ ಹಿಡಿದೆತ್ತಬೇಕೆಂಬುದನ್ನೂ ಹೇಳಿಕೊಟ್ಟು, ದೇವಯ್ಯ ಗೌಡರು ಅದನ್ನು ಹಕ್ಕಲಿಗೆ ಹೊರಸಿಕೊಂಡು ಬಂದರು!

ದೇವಯ್ಯಗೌಡರ ಹಿಂದೆ ಬೈಸಿಕಲ್ಲನ್ನು ಹೊತ್ತ ಇಬ್ಬರು ಆಳುಗಳು ಬರುತ್ತಿದ್ದುದನ್ನು ಕಂಡು ಹಕ್ಕಲಿಗೆ ಹಕ್ಕಲೆ ಏದುಸಿರಾಗಿ ನೋಡಿತು. ಪ್ರಶಂಸಾರೂಪದ ನಿರಾಶಾರೂಪದ ಆಶ್ಚರ್ಯರೂಪದ ತಾತ್ಸಾರರೂಪದ ನಾನಾ ವ್ಯಾಖ್ಯಾನಗಳೂ ಗುಜಿಗುಜಿಸತೊಡಗಿದುವು:

“ಬಂತೋ! ಬಂತೋ! ಬೀಸೆಕಲ್ಲು!”

“ಅದೆಂಥಾ ಬೀಸೆಕಲ್ಲೊ? ಪಳಪಳ  ಹೊಳೀತಿದೆಯಲ್ಲೊ?”

“ಅಯ್ಯೋ, ಬೀಸೆಕಲ್ಲಿಗೆ ಎರಡು ಹೋಳಿರ್ತವೆ. ಇದಕ್ಕೆ ಎರಡು ಚಕ್ರ ಇದ್ದ್ಹಾಂಗಿದೆಯಲ್ಲೋ!”

“ಏ ಬೀಸೆಕಲ್ಲಲ್ಲೋ! ಬೈಸಿಕಲ್ಲಂತೋ!”

“ನೋಡ್ನೋಡು, ಕೆಳಗೆ ಇಳಿಸ್ತಾರೆ…. ನೋಡಿದ್ಯಾ?ಈಗ ಹ್ಯಾಂಗೆ ಹಿಡುಕೊಂಡಾನೆ!…. “

“ಅಲ್ಲೋ, ಗಾಡೀಲಿ ಇದ್ದ್ಹಾಂಗೆ ಒಂದರ ಒತ್ತಿನಲ್ಲಿ ಒಂದು ಚಕ್ರ ಇರಾದುಬಿಟ್ಟು ಒಂದರ ಹಿಂದೆ ಒಂದು ಚಕ್ರ  ಇರಾದುಬಿಟ್ಟು ಒಂದರ ಹಿಂದೆ ಒಂದು ಚಕ್ರ ಇದ್ರೆ, ಹೆಂಗೆ ನಡೀತದ್ಯೋ ಹತ್ತಿದ್ರೆ ನಿಲ್ಲೋದು ಹ್ಯಾಂಗೋ? ಮಗ್ಲೀಗೆ ಮಗುಚಿಕೊಳ್ತದೆ, ನೋಡ್ತಿರು!”

“ಹ್ಹಿಹ್ಹಿಹ್ಹಿ! ಅದೇನ ಟ್ರಿಣ್ ಟ್ರಿಣ್ ಟ್ರಿಣ್ ಟ್ರಿಣ್ ಅಂತದೆ?”

“ದಾರಿ ಬಿಡ್ಸಾಕೆ ಗಂಟೆ ಬಾರಿಸೋದು ಕಣೋ!”

“ಹಂಗಾರೆ, ಟ್ರಿಣ್ ಟ್ರಿಣ್ ಮಾಡ್ತಾ ಇದ್ರೆ, ಅದರಷ್ಟಕ್ಕದೇ ದಾರಿ ಆಗ್ತಾ ಹೋಗ್ತದಾ?”

“ಅಲೇಲೇಲೇಲೇ! ಅವನ್ನೋಡೋ ಆ ಬಚ್ಚನ್ನ! ಹೊಲೇರ ಕುರುದೆಗೆ ಏನು ದೌಲತ್ತು ಬಂದುಬಿಟ್ಟಾದೆ?….ತಲೀಗ ಕೆಂಪುವಸ್ತ್ರೇನು? ಅಂಗಿ ಏನು? ಹ್ಹಹ್ಹಹ್ಹ! ಪಂಚೆ ಮೂಣಕಾಲು ದಾಟೇ ಬಿಟ್ಟದಲ್ಲೋ!”

“ಮತ್ತೇನಂತಾ ಮಾಡೀಯಾ? ನಾಡ್ದೋ ಆಚೆನಾಡ್ದೋ ಮದುವಣಿಗ ಆಗೋನು? ದೊಡ್ಡಬೀರನ ಮಗಳು ತಿಮ್ಮಮ್ಮನ ಮಗ್ಗಲಾಗೆ….”

“ಅಗೊಳ್ಳೊ! ಅಗೊಳ್ಳೊ! ಹತ್ತೇಬಿಟ್ಟ ಪಾದ್ರಿ!”

ಆಶ್ಚರ್ಯ ಆನಂದ ಉತ್ಸಾಹ ಉಕ್ಕಿದಂತಾಗಿ ಸುತ್ತಣ ಕಾಡು ಮರುದನಿಕೊಡುವಂತೆ ಗೆಲ್ಲುಲಿ ಎದ್ದಿತು. ರುಮಾಲು ಕೋಟುಗಳನ್ನು ತೆಗೆದಿಟ್ಟು, ಬೈಸಿಕಲ್ ಕಚ್ಚೆ ಬಿಗಿದು, ಬೂಟೀಸನ್ನು ತೆಗೆಯದೆಯೆ ಜೀವರತ್ನಯ್ಯ, ಹಕ್ಕಲಿನ ಒರಟೊರಟು ನೆಲದಲ್ಲಿಯೆ ಒಂದೆರಡು ಸುತ್ತು ತಿರುಗಿ ಬೈಸಿಕಲ್ಲಿನಿಂದ ಇಳಿದನು. ಹಕ್ಕಲಿನ ಅಂಚಿನಲ್ಲಿ ಸುತ್ತಿದ್ದ ಅಡವಿಗೆ ಒತ್ತಿ ನಿಂತಿದ್ದ ಜನಸಮೂಹ, ಸುತ್ತನಾಲ್ಕು ದಿಕ್ಕಿನಿಂದಲೂ, ಪಾದ್ರಿ ಹಿಡಿದಿದ್ದ ಬೈಸಿಕಲ್ಲಿನ ಬಳಿಗೆ ನುಗ್ಗಿತು. ಆ ನೂಕುನುಗ್ಗಲಿನಲ್ಲಿ ಮುಟ್ಟಬಹುದಾದವರು ಮುಟ್ಟಬಾರದವರು ಎಂಬ ಭೇದಭಾವಕ್ಕೆ ರಿಯಾಯಿತಿ ಒದಗಿದಂತಾಗಿ, ಪಾದ್ರಿಯ ವೃತ್ತಿಬುದ್ದಿ ತನಗೆ ತಾನೆ ಹೇಳಿಕೊಂಡಿತು: ಮತಪ್ರಚಾರಕ್ಕೆ ಬೈಬಲ್ಲು ಏಸುಕ್ತಿಸ್ತನಿಗಿಂತಲೂ ಬೈಸಿಕಲ್ಲೆ ಹೆಚ್ಚು ಪ್ರಭಾವ ಶಾಲಿ!

ಗುತ್ತಿ ಬೈಸಿಕಲ್ಲಿನ ಚಕ್ರದ ಟಯರನ್ನು ಹೆದರಿಹೆದರಿ ಮುಟ್ಟಿನೋಡಿ, ಗಾಡಿ ಚಕ್ರಕ್ಕಿರುವಂತೆ ಅದಕ್ಕೆ ಕಬ್ಭಿಣದ ಹಳಿ ಇಲ್ಲದೆ ಏನೊ ಮೆತ್ತಗಿರುವಂತಿರುವ ಕರಿವಸ್ತು ಸುತ್ತಿರುವುದನ್ನು ನೋಡಿ, ಸೋಜಿಗೆ ಪಡುತ್ತಿದ್ದನು. `ಕಾಳಿಂಗನ ಹಾಂವು ಸುತ್ತಿದ ಹಾಂಗಿದೆಯಲ್ಲಾ! ‘ ಎಂದುಕೊಳ್ಳುತ್ತಿರುವಷ್ಟರಲ್ಲಿಯೆ, ಯಾರೊ ಹಿಂದಿನಿಂದ ನುಗ್ಗಿದವರು ಅವನ ಹಿಮ್ಮಡಿಯನ್ನು ಬಲವಾಗಿ ಮೆಟ್ಟಿಬಿಟ್ಟರು.

“ಯಾವನೊ ಅದು? ನಿಂಗೇನು ಮುಖದ ಮೇಲೆ ಕಣ್ಣದೆಯೋ ಇಲ್ಲೋ?” ಎಂದು ರೇಗಿ, ತಿರುಗಿ ನೋಡಿದ ಗುತ್ತಿಯ ಮೋರೆ, ಕೋಪ ಮುದ್ರೆಯನ್ನು ತಟಕ್ಕನೆ ತ್ಯಜಿಸಿ, ಪರಿಚಿತವಾದ ಸ್ನೇಹಮುಖವನ್ನು ಗುರುತಿಸಿದಂತೆ ಮುಗುಳುನಗುತ್ತಾ “ ಅಯ್ಯೋ! ನೀನೇನು? ನಾನು ಯಾರೋ ಅಂತಾ ಮಾಡಿದ್ದೆ!” ಎಂದನು.

ಅದಕ್ಕೆ ಉತ್ತರವಾಗಿ ಐತ ಪಿಚ್ಚನೆ ಹಲ್ಲು ಬಿಡುತ್ತಾ “ ನಾನೂ ಒಂದು ಚೂರು ಮುಟ್ಟಿ ನೋಡ್ತೀನೋ!” ಎಂದು ಅಂಗಲಾಚಲು, ಗುತ್ತಿ, ಅವನಿಗೂ ಸ್ಪಲ್ಪ ಜಾಗ ಬಿಟ್ಟುಕೊಟ್ಟನು.

ಐತ ಆ ಬೈಸಿಕಲ್ಲಿನ ನಾನಾ ಭಾಗಗಳನ್ನು, ತಾನು ಮದುವೆಯಾದ ಮೊದಲಲ್ಲಿ ಪೀಂಚಲುವಿನ ಕೋಮಲವಾದ ಅಂಗೋಪಾಂಗಗಳನ್ನು ಏಕಾಂತದಲ್ಲಿ ಸ್ಪರ್ಶಿಸಿ ಸುಖಿಸಿದಂತೆ, ಮುಟ್ಟಿ ಮುಟ್ಟಿ ನೋಡಿ, ತೃಪ್ತಿಯ ಅತಿಶಯಕ್ಕೆಂಬಂತೆ, ನಿಡಿದಾಗಿ ಉಸಿರೆಳೆದುಕೊಂಡು ಸುಯ್ದನು.

ಗುತ್ತಿ ನೋಡುತ್ತಾನೆ, ತನ್ನ ಹೆಗಲ ಮೇಲುಗಡೆಯಿಂದ ಇನ್ನೂ ಒಂದು ಕೈ, ಚಾಚಿ, ಬೈಸಿಕಲ್ಲನ್ನು ಮುಟ್ಟಲು ಪ್ರಯತ್ನಿಸುತ್ತಿದೆ: ತಿರುಗಿ ನೋಡಿದರೆ, ಸೇರೆಗಾರ ಚೀಂಕ್ರ! ತಲೆಬಾಚಿ, ಮಂಡೆಕಟ್ಟಿ, ಹೂ ಸಿಕ್ಕಿಸಿ ಕೊಂಡಿದ್ದಾನೆ! ಎಲೆಯಡಿಕೆ ಹಾಕಿ ತುಟಿ ರಂಗಾಗಿದೆ!

ಅಷ್ಟರಲ್ಲಿ ಪಾದ್ರಿ ದೇವಯ್ಯಗೆ ಬೈಸಿಕಲ್ಲು ಸವಾರಿ ಕಲಿಸಲಿಕ್ಕಾಗಿ ಜನರನ್ನೆಲ್ಲ ದೂರ ಹೋಗ ಹೇಳಿದನು. ಆದರೆ ಅವರಿನ್ನೂ ಬೈಸಿಕಲ್ಲನನ್ನು ಮುಟ್ಟಿನೋಡಿ ತಣಿದಂತೆ ತೋರದಿರಲು, ಹಠಾತ್ತನೆ ಎರಡು ಮೂರು ನಿಮಿಷ ಬಿಡದೆ ಬೆಲ್ ಬಾರಿಸಿಬಿಟ್ಟನು! ಜನ ಹೆದರಿ, ಬೆದರೆ, ಹಿಗ್ಗಿ, ನುಗ್ಗಿ, ಒಂದೇ ಏಟಿಗೆ ಹಿಮ್ಮೆಟ್ಟಿ ಓಡಿಬಿಟ್ಟರು ಹಕ್ಕಲಿನ ಅಂಚಿಗೆ!

ಸರಿ, ಶುರುವಾಯ್ತು ಅಭ್ಯಾಸ!

ಬಚ್ಚ ಒಂದು ಕಡೆ, ಪಾದ್ರಿ ಒಂದು ಕಡೆ, ಹ್ಯಾಂಡ್ಲ್ ಹಿಡಿದುಕೊಂಡರು. ದೇವಯ್ಯ ಬೈಸಿಕಲ್ ಕಚ್ಚೆ ಹಾಕಿ, ಕೋಟು ಬಿಚ್ಚಿಟ್ಟು, ಮೆಟ್ಟುಗಳನ್ನು ಕಳಚಿಟ್ಟು. ಪಾದ್ರಿಯ ನಿರ್ದೇಶನದಂತೆ ಪೆಡ್ಲಿನ ಬುಡಕ್ಕೆ ಕಾಲಿಟ್ಟು, ತನ್ನ ಭಾರವನ್ನೆಲ್ಲ ಎತ್ತಿ ಸೀಟಿನ ಮೇಲೆ ಕೂತನು. ಅವನ ಭಾರ ತುಯ್ದ  ಹೊಡೆತಕ್ಕೆ ಬಚ್ಚನ ಕೈ ಹೊಂಗಿ, ಬೈಸಿಕಲ್ ಅವನತ್ತ ಬಾಗಿ, ಬೀಳುವುದರಲ್ಲಿತ್ತು. ಪಾದ್ರಿ ಬಲವಾಗಿ ಎಳೆದು ನಿಲ್ಲಿಸಿ, ಬಚ್ಚನಿಗೆ ಎಚ್ಚರಿಕೆ ಹೇಳಿದನು. ಆದರೆ ಸೀಟಿನ ಮೇಲೆ, ಶೂಲದ ಮೇಲೆಯೊ ಎಂಬಂತೆ, ಕೂತಿದ್ದ ದೇವಯ್ಯಗೌಡರ ಬೃಹತ್ಕಾಯ ಅತ್ತಿತ್ತ ಹೊಂಗಿದುದನ್ನು ಕಂಡ ಜನ `ಹಿಹ್ಹಿಹ್ಹಿ’ `ಹ್ಹೊಹ್ಹೊಹ್ಹೊ’  `ಅಹ್ಹಹ್ಹ’ ಎಂದು ಅಟ್ಟಹಾಸಮಾಡಿ, ನಕ್ಕು, ಕೈಚಪ್ಪಾಳೆ ತಟ್ಟಿತು! ಮೂದಲೆ ತುಸು ದಿಗಿಲುಗೊಂಡು ವಿಲಕ್ಷಣಭಾವವನ್ನು ಅನುಭವಿಸುತ್ತಿದ್ದ ದೇವಯ್ಯನಿಗೆ ಅವಮಾನವಾದಂತಾಗಿ ಸಿಟ್ಟುಬಂದಿತು. ಬರಿಯ ಉದ್ವೇಗದಿಂದಲೆ ಆಯಾಸಗೊಂಡಂತೆ ಅವನ ಮುಖದ ಮೇಲೆ ಬೆವರಿಳಿಯತೊಡಗತ್ತು. ಅವನ ಇಚ್ಛೆಯಂತೆ ಅಂಚಿನಲ್ಲಿ ನೆರೆದಿದ್ದ ಜನರಿಗೆ ಪಾದ್ರಿ ಸಂದೇಶ ಕಳಿಸಿದನು: ಗೌಡರು ಗಾಬರಿಯಾಗ್ತಾರೆ; ಯಾರೂ ಕೂಗಬಾರದು, ನಗಬಾರದು, ನಿಃಶಬ್ದವಾಗಿರಬೇಕು ಎಂದು:ಒಡನೆಯೆ ಎಲ್ಲ ಮನುಷ್ಯ ಸದ್ದೂ ಅಡಗಿತು. ಪೊದೆಗಳಲ್ಲಿ ಪಿಕಳಾರಗಳು ಕೂಗುತ್ತಿದ್ದುದೂ, ಹಾರಿ ಹೋಗುತ್ತಿದ್ದ ಗಿಳಿ ಕಾಮಳ್ಳಿಗಳ ಹಿಂಡು ಉಲಿಯುತ್ತಿದ್ದುದೂ, ಮಿಂಚುಳ್ಳಿಯೊಂದು ಮೀಮೀಮೀ ಎಂದು ಕರೆಯುತ್ತಿದ್ದುದೂ ಕೇಳಿಸಿತು.

ಹಕ್ಕಲಿನ ಅಸಮ ನೆಲದಲ್ಲಿ ಬಚ್ಚನೂ ಪಾದ್ರಿಯೂ ಬೈಸಿಕಲ್ಲನ್ನು ತಳ್ಳುತ್ತಿದ್ದರು, ಕಷ್ಟಪಟ್ಟು, ಎಚ್ಚರಿಕೆಯಿಂದ. ಪೆಡ್ಲುಗಳ ಮೇಲೆ ಕಾಲಿಟ್ಟು, ಅವು ಚಲಿಸಿದಂತೆಲ್ಲಾ ಅನೈಚ್ಛಿಕವಾಗಿಯೆ ದೇವಯ್ಯನ ಕಾಲು, ಮೇಲೆ ಕೆಳಗಿ ಹೋಗಿಬರುತ್ತಿದ್ದುವು. ಆದರೆ ತುಸು ಇಳಿಜಾರು ಇದ್ದ ಒಂದೆಡೆ, ಪಾದ್ರಿಯ ನಿರ್ದೇಶನದಂತೆ, ಬಚ್ಚ ಕೈಬಿಟ್ಟೊಡನೆ, ಪಾದ್ರಿಯ ಆತುಕೊಳ್ಳುವ ಪ್ರಯತ್ನವೂ ವಿಫಲವಾಗಿ, ದೇವಯ್ಯನ ಭಾರಕ್ಕೆ ಬೈಸಿಕಲ್ಲು ಮುಂದಕ್ಕೆ ತುಸುದೂರ ವೇಗವಾಗಿ ಉರುಳಿ, ನೆರೆದವರೆಲ್ಲ ಹೋ ಹೋ ಹೋ ಎಂದು ಬೊಬ್ಬೆಯಿಡುತ್ತಿದ್ದಂತೆಯೆ ಒಂದು ಅರಮರಲ ಮಟ್ಟಿನೊಳಕ್ಕೆ ನುಗ್ಗಿಬಿಟ್ಟಿತು! ದೇವಯ್ಯ ಮುಳ್ಳಿನ ಮೇಲೆ ಮುಖ ಅಡಿಯಾಗಿ ಮುಂದಕ್ಕೆ ಬಿದ್ದು, ಮುಳ್ಳುಗೀರಿದ ಗಾಯಗಳು ಕೆನ್ನೆ, ಗಲ್ಲ, ಮೂಗಿನ ಮೇಲೆ ಕೆಂಪಗೆ ಕಾಣಿಸಿಕೊಂಡುವು. ನುಗ್ಗಿ ಬಂದ ಜನರನ್ನೆಲ್ಲ ಹಿಂದಕ್ಕೆ ಅಟ್ಟಿ, ಪಾದ್ರಿ ಬಚ್ಚನೊಬ್ಬನ ನೆರವಿನಿಂದಲೆ ಬೈಸಿಕಲ್ಲನ್ನೂ ದೇವಯ್ಯನನ್ನೂ ಮುಳ್ಳಿನ ಮಟ್ಟಿನಿಂದ ಹಿಂದಕ್ಕೆಳೆದು ಎತ್ತಿ ನಿಲ್ಲಿಸಿದನು.

“ಏ ಬಚ್ಚ, ಒಂದು ಬಿದಿರುಗಳು ತಗೊಂಡು ಬಾರ”.

ದೇವಯ್ಯನ ಆಜ್ಞೆಯಂತೆ ಏಳೆಂಟು ಮಾರು ಉದ್ದದ ಒಂದು ಗಳುವನ್ನು ತಂದು ಬೈಸಿಕಲ್ಲಿನ ಹ್ಯಾಂಡ್ಲಿಗೆ ಜೋಡಿಸಿ, ಬಳ್ಳಿಗಳಿಂದ ಬಿಗಿದು ಸುತ್ತಿದರು. ದೂರನಿಂತು ನೋಡುತ್ತಿದ್ದವರಲ್ಲಿ ಐದಾರು ಆಳುಗಳನ್ನೂ ಬಳಿಗೆ ಕರೆದರು. ತಿಮ್ಮಿಯ ಅಪ್ಪ ದೊಡ್ಡಬೀರನಾದಿಯಾಗಿ ನಾ ಮುಂದೆ ತಾ ಮುಂದೆ ಎಂದು ತವಕಿಸಿ ಬಂದವರನ್ನು, ಗಾಡಿಯ ನೊಗಕ್ಕೆ ಎತ್ತು ಕಟ್ಟುವಂತೆ, ಆ ಕಡೆ ಮೂವರನ್ನೂ ಈ ಕಡೆ ಮೂವರನ್ನೂ ಗಳುವಿಗೆ ಕೈಗೂಡುವಂತೆ ಮಾಡಿದರು. ಅತ್ತಿತ್ತ ಅಳ್ಳಾಡದೆ ನೆಟ್ಟಗೆ ನಿಂತ ಬೈಸಿಕಲ್ಲಿನ ಸೀಟಿಗೆ ದೇವಯ್ಯ ಧೈರ್ಯವಾಗಿ ಹತ್ತಿ ಕೂತನು. ಗಳು ಹಿಡಿದವರು ಬೈಸಿಕಲ್ಲನ್ನು ಎಳೆದುಕೊಂಡು ಹೊರಟರು. ಗಳುವಿಗೆ ಭದ್ರವಾಗಿ ಕಟ್ಟಿದ್ದ ಹ್ಯಾಂಡ್ಲ್ ತಿರುಗುವ ಸಂಭವವೇ ಇರಲಿಲ್ಲ. ಅದು ಗಳು ಹಿಡಿದವರ ವಶವಾಗಿ ಅವರು ಎಳೆದಷ್ಟೆ ವೇಗದಲ್ಲಿ, ಅವರು ಎಳೆದತ್ತ ಹೋಗುತ್ತಿತ್ತೇ ವಿನಾ ದೇವಯ್ಯನ ವಶದಲ್ಲಿರಲಿಲ್ಲ. ಆದರೆ ಬೈಸಿಕಲ್ಲು ಹೊಂಗುವ ಅಥವಾ ಬೀಳುವ ಭಯ ಒಂದಿನಿತೂ ಇರದ ಅವನು ದಂಡಿಗೆಯ ಮೇಲೆ ಕುಳಿತಂತೆ ಖುಷಿಯಾಗಿ ಸವಾರಿ ಮಾಡುತ್ತಿದ್ದನು. ಆದರೆ ಪಾದ್ರಿಗೆ ಗೊತ್ತಿತ್ತು: ಅದರ ಪ್ರಯೋಜನ ಬರಿಯ ನಲಿಯುವಿಕೆಯಾಗಿತ್ತೆ ಹೊರತು ಕಲಿಯುವಿಕೆ ಆಗಿರಲಿಲ್ಲ!

ಗುತ್ತಿ ನೋಡಿದ, ಬೆಟ್ಟಳ್ಳಿ ಹೊಲಗೇರಿಯ ಜನರಲ್ಲಿ ಮುಕ್ಕಾಲು ಪಾಲು ಹಕ್ಕಲಿನಲ್ಲಿ ನೆರೆದಿತ್ತು, ಹೆಂಗಸರೂ ಮಕ್ಕಳೂ ಸೇರಿ. ತಿಮ್ಮಿಯನ್ನು ಮದುವೆಯಾಗಲಿರುವ ಬಚ್ಚನಂತೂ ಕಾರ್ಯಕಲಾಪದ ಕೇಂದ್ರದಲ್ಲಿಯೆ ಇದ್ದನು. ತಿಮ್ಮಿಯ ಅಪ್ಪ ದೊಡ್ಡಬೀರನೂ ಬೈಸಿಕಲ್ ನೊಗಕ್ಕೆ ಹೆಗಲು ಕೊಟ್ಟಿದ್ದನು. ಹೆಂಗಸರ ಗುಂಪಿನಲ್ಲಿ ತಿಮ್ಮಿಯಾಗಲಿ, ತಿಮ್ಮಿಯ ತಾಯಿ ಸೇಸಿಯಾಗಲಿ ಕಾಣಿಸಲಿಲ್ಲ. ತಾನು ಬಂದ ಕೆಲಸಕ್ಕೆ ಆ ಬೈಸಿಕಲ್ ಸವಾರಿಯು ಅಭ್ಯಾಸವು ದೇವರೇ ಒದಗಿಸಿಕೊಟ್ಟು ಸದವಕಾಶದಂತೆ ಭಾಸವಾಯಿತು ಗುತ್ತಿಗೆ. ತನ್ನ ಸಮೀಪದಲ್ಲಿಯೆ ನಿಂತು ತದೇಕಚಿತ್ತದಿಂದ ಬೈಸಿಕಲ್ ಮೆರವಣಿಗೆಯನ್ನು ಈಕ್ಷಿಸುತ್ತಿದ್ದ ಐತನ ಹೆಗಲಮೇಲೆ ಕೈಯಿಟ್ಟು, ಕಣ್ಣು ಮಿಟಿಕಿನಿಂದಲೆ ಅವನನ್ನು ಪಕ್ಕಕ್ಕೆ ಕರೆದು, ಪಿಸುಮಾತಿನಲ್ಲಿ ಹೇಳಿದನು:

“ನಂಗೆ ಸ್ವಲ್ಪ ಕೆಲಸ ಇದೆಯೊ. ನಾ ಹೋಗ್ತೀನಿ, ಹಳೆಮನೆ ದೊಡ್ಡ ಹೆಗ್ದೇರು `ಹೋಗ್ತಾ ಕೋಣೂರಿ ಮೇಲಾಸಿ ಹೋಗಿ, ಐಗಳನ್ನು ನಾ ಬರಾಕೆ ಹೇಳ್ದೆ ಅಂತ ಹೇಳು’ ಅಂದಿದ್ರು. ನನಗೆ ಕೋಣೂರಿನ ಹೋಗಾಕೇ ಆಗ್ಲಿಲ್ಲ. ಹೂವಳ್ಳಿ ಮೇಲಾಸಿ ಬಂದ್ಬಿಟ್ಟೆ. ನೀನು ಹೋದವನೆ ಐಗಳಿಗೆ ಹೇಳ್ತೀಯಾ?’

ಐತ `ಆಗಲಿ’ ಎಂದು ತಲೆಯಲ್ಲಾಡಿಸಿ ಬೈಸಿಕಲ್ ಸರ್ಕಸ್ಸಿಗೆ ಅವಸರದಿಂದ ಹಿಂದಿರುಗುವುದರೊಳಗೆ ಗುತ್ತಿ ಮತ್ತೆ ವ್ಯಂಗ್ಯವಾಗಿ ನಕ್ಕು “ನಿನ್ನ ಹೆಂಡತಿ ಬರಲಿಲ್ಲೇನೊ? ನೀ ಒಬ್ಬನೇ ಬಂದುಬಿಟ್ಟೀಯಲ್ಲಾ!” ಎಂದನು.

ಐತನು ನಗೆಯಾಡುತ್ತಲೇ “ಬಾ ಅಂತ ಕರೆದ. ಇಲಿಕಿವಿಸೊಪ್ಪು ಕುಯ್ತೀನಿ ಅಂತ ಹೋದ್ಲು ಅವಳಿಗೆ ದಿನಾ ಹೊತಾರೆ, ವಾಕರಿಕೆ ಆದ್ಹಂಗಾಗಿ, ವಾಂತಿ ಆಗ್ತದಂತೆ! ಅದಕ್ಕೇ ಕಣ್ಣಾಪಂಡಿತರು ಹೇಳಿದ್ರು, ಇಲಿಕಿವಿ ಸೊಪ್ಪಿನ ಹಸಾಳೆ ಮಾಡಿಕೊಂಢು ಕುಡಿಯಾಕೆ!!” ಎನ್ನುತ್ತಾ ಓಡಿದನು, ಇದ್ದಕ್ಕಿದಂತೆ ಸದ್ದು ಹೊನಲುಕ್ಕಿದ್ದ ಹಕ್ಕಲೆಡೆಗೆ.

ಕೋಲಾಹಲಕ್ಕೆ ಕಾರಣವಾಗಿದ್ದು, ದೊಡ್ಡಬೀರನು ಮುಗ್ಗರಿಸಿ ಬಿದ್ದದ್ದ! ಬೈಸಿಕಲ್ ನೊಗಕ್ಕೆ ತೋಳುಕೊಟ್ಟಿದ್ದ ಆರು ಜನರನ್ನೂ ಓಡಲು ಹೇಳಿದನು ಪಾದ್ರಿ. ಏಕೆಂದರೆ ಬೈಸಿಕಲ್ ಸ್ವಲ್ಪವಾದರೂ ವೇಗವಾಗಿ ಚಲಿಸಿದಿದ್ದರೆ ದೇವಯ್ಯ ಪೆಡ್ಲು ಹೊಡೆಯುವುದನ್ನಾದರೂ ಕಲಿಯುವುದು ಹೇಗೆ? ಆರು ಜನರೂ ಓಡತೊಗಿದ್ದರು. ಜನರು ಚಪ್ಪಾಳೆ ಹೊಡೆದು ಶ್ಲಾಘಿಸಿ ಪ್ರೋತ್ಸಾಹಿಸಿದ್ದರು. ಅಷ್ಟರಲ್ಲಿ ಕೊರಕಲೊಂದನ್ನು ಎಡವಿದ ಮುದುಕ ದೊಡ್ಡಬೀರ ಮುಗ್ಗರಿಸಿ ಬಿದ್ದ, ಬಿದ್ದವನು ಬಿದಿರು ಗಳುವನ್ನೂ ಬಿಡಲಿಲ್ಲ. ಜೋತಾಡುತ್ತಲೆ ಒಂದು ಮಾರು ಮುಂದಕ್ಕೆ ಸರಿದು ದೊಪ್ಪನೆ ಉರುಳಿದ್ದನು. ಉತ್ಸಾಹದಿಂದ ಕೂಗುತ್ತಿದ್ದ ಜನಕ್ಕೆ ಪರಿಹಾಸ್ಯ ಕಾರಣವೂ ದೊರೆತಂತಾಗಿ ಕೋಲಾಹಲವೆದ್ದಿತ್ತು. ಐತನು ಓಡಿ ಜನಜಂಗುಳಿಗೆ ಸೇರುವಷ್ಟರಲ್ಲಿ ದೇವಯ್ಯನೂ ಬೈಸಿಕಲ್ಲಿಂದ ಇಳಿದು, ದೊಡ್ಡಬೀರನ ಶುಶ್ರೂಷೆಗೆ ಪ್ರಾರಂಭವಾಗಿತ್ತು.

ಹೊತ್ತು ಆಗಲೆ ಇಳಿಯತೊಡಗಿ ಕುಂದದ ಹೆಗ್ಗುಡ್ಡದ ನೆತ್ತಿಯ ನೆರಳು ಕಣಿವೆಯ ಕಾಡುಗಳು ಮೇಲೆ ಬಿದ್ದಿತ್ತು. ಹಿಂದಿನ ದಿನದ ಹೆಮ್ಮಳೆಯಲ್ಲಿ ತೊಯ್ದ ಕಾಡಿನ ಹಸುರು ಅಲ್ಲಲ್ಲಿ ಕೆಂಬಿಸಿಲಿನ ರಂಗಿನಲ್ಲಿ ಸುಮನೋಹರವಾಗಿ ಮನಮೋಹಿಸುವಂತಿತ್ತು. ಹಗಲಿಗೂ ಇರುಳಿಗೂ ನಡುವಣ ಸಂಧಿಸಮಯದ ಸೌಂದರ್ಯಶಾಂತಿ ಮಲೆನಾಡನ್ನು ಅಪ್ಪಿಕೊಂಡಂತಿತ್ತು. ಕತ್ತಲೆ ದಟ್ಟಯಿಸುವುದರೊಳಗೆ ತಮ್ಮ ತಮ್ಮ ಮನೆಗಳನ್ನು ಸೇರಿಕೊಳ್ಳುವ ಸಲುವಾಗಿ ದೂರದ ಹಳ್ಳಿಗಳಿಂದ ಬಂದಿದ್ದವರೆಲ್ಲ ಹೊರತೊಡಗಿದರು.

ಸಮಯ ಸಂದರ್ಭ ದೊರೆತಾಗಲೆಲ್ಲ ತನ್ನ ಮತದ ಧಾರ್ಮಿಕತೆಯನ್ನು ಅನ್ಯಮತಸ್ಥರ ಮನಸ್ಸಿನ ಮೇಲೆ ಮುದ್ರಿಸುವ ಕುಶಲತೆಯನ್ನು ಚೆನ್ನಾಗಿ ಪ್ರಯೋಗಿಸಲು ಕಲಿತಿದ್ದ ಪಾದ್ರಿ ಜನರನ್ನು ಉದ್ದೇಶಿ, ಮುಖ್ಯವಾಗಿ ದೇವಯ್ಯನನ್ನು ಕುರಿತೆ ಹೇಳುತ್ತಿರುವಂತೆ, ಭಾವಪೂರ್ಣಧ್ವನಿಯಿಂದ, ಸೃಷ್ಟಿಸೌಂದರ್ಯವನ್ನು ವೀಕ್ಷಿಸುತ್ತಾ “ ಗೌಡರೆ, ದೇವರ ಸೃಷ್ಟಿ ಎಷ್ಟು ಸುಂದರ! ಈ ಸ್ಥಳ ಮತ್ತು ಸಮಯ ಎರಡೂ ಪ್ರಶಸ್ತವಾಗಿವೆ, ಪ್ರಾರ್ಥನೆಗೆ! ದಯಾಮಯನಾದ ಭಗವಂತನಿಗೆ ಪ್ರಾರ್ಥನೆ ಸಲ್ಲಿಸೋಣ!” ಎಂದು ಮೊಳಕಾಲೂರಿ ಕೈಮುಗಿದುಕೊಂಡು ಅರೆಗಣ್ಣಾಗಿ ಕುಳಿತೇಬಿಟ್ಟನು.

“ಮತ್ತೆ ಎಂಥದನ್ನೋ ಸುರುಮಾಡಿದ್ನಲ್ಲೋ ಈ ಪಾದ್ರಿ!” ಎಂದು ತನ್ನ ಟೀಕೆ ತಿರಸ್ಕಾರಗಳನ್ನು ಪ್ರಕಟಿಸುತ್ತಾ ಹಳೆಮನೆಯ ಹೊಲೆಯರ ಮಂಜ ತನ್ನ ಕೇರಿಯವರನ್ನು ಕರೆದುಕೊಂಡು ಹೊರಟನು.

“ಅಯ್ಯೋ ನಮ್ಮ ಬೆಟ್ಟಳ್ಳಿ ಸಣ್ಣಗೌಡರೂ ಮಂಡೀ ಊರೇಬಿಟ್ರಲ್ಲೋ!” ಎಂದು ಚೀಂಕ್ರ ಐತನನ್ನೂ ಕರೆದುಕೊಂಡು ಹೊರಡುತ್ತಿರಲು, ಪಾದ್ರಿ ರಾಗಧ್ವನಿ ಕೇಳಿಸಿತು:

“ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಲಿ! ನಿನ್ನ ರಾಜ್ಯವು ಬರಲಿ!….”

“ಇದು ಎಂಥಾದ್ದೋ ಇವರು ಹೇಳುವುದು? ಕಾಡಿಗೆ ಕೈಮುಗಿದು! ಒಂದು ದೇವರಿಲ್ಲ! ಒಂದು ಗುಡಿಯಿಲ್ಲ! ನಮ್ಮ ಪೆರಡೂರು ಮೇಳದವರು ಇದಕ್ಕಿಂತಲೂ  ಚೆನ್ನಾಗಿ ಹೇಳುತ್ತಾರಲ್ಹಾ ಭಾಗವತರಾಟದಲ್ಲಿ? ಈ ಗೌಡರಿಗೆ ಯಾಕೆ ಈ ಹುಚ್ಚು, ಆ ಪಾದ್ರೀನ ಕಟ್ಟಿಕೊಂಡು?” ಕನ್ನಡ ಜಿಲ್ಲೆಯ ಸೆಟ್ಟರಾಳೊಬ್ಬನು ನಕ್ಕು ನುಡಿದುದನ್ನು ಕೇಳಿ,

ಐತ, ಹೊಟ್ಟೆಹಿಡಿದುಕೊಂಡು ನಗುತ್ತಾ, ಚೀಂಕ್ರನಿಗೆ ತೊರಿಸಿದನು: “ ಅಲ್ಲಿ ನೊಡೋ! ನೋಡೋ! ಆ ಹೊಲೆಯ ಬಚ್ಚನೂ ಮಂಡಿಊರಿ ಕೂತುಬಿಟ್ಟಿದ್ದಾನಲ್ಲೋ! ಹಿಹ್ಹಿಹ್ಹಿಹ್ಹಿ!”

“ಮಂಡಿನಾರೂ ಊರಿಲಿ, ಕುಂಡಿನಾರೂ ಊರಿಲಿ! ನೀ ಬಾ, ಹೋಗುವ ನಾವು! ಕಪ್ಪಾಗ್ತಾ ಇದೆ; ಆರ್ಲೂ ಮೂಡಿ ಆಯಿತ್ತು!”

ಐತ ನೋಡುತ್ತಾನೆ: ಹೌದು! ಕುಂದದ ಗುಡ್ಡದ ಮೇಲೆ ಹೊಂಬಣ್ಣದ ಪಶ್ಷಿಮ ಆಕಾಶದಲ್ಲಿ ಬೆಳ್ಳಿ ಆಗಲೆ ಮೂಡಿಬಿಟ್ಟಿತ್ತು!