ತಾನು ಬಿಡಾರಕ್ಕೆ ಅಷ್ಟು ಹೊತ್ತಾಗಿ ಬಂದದ್ದು ಏಕೆ ಎಂದು ಪೀಂಚಲು ತನ್ನ ಗಂಡ ಐತನಿಗೆ ಒಪ್ಪಿಸಿದ್ದ ವರದಿಯಲ್ಲಿ ನಿಜ ಸುಳ್ಳು ಎರಡೂ ಹೆಣೆದುಕೊಂಡಿದ್ದುವು. ನಿಜಾಂಶವೆ ಅರೆಗಿಂತಲೂ ಮಿಗಿಲಾಗಿತ್ತು ಎನ್ನಬಹುದಾಗಿದ್ದರೂ ಗೋಪ್ಯರಕ್ಷಣೆಯಲ್ಲಿಸುಳ್ಳಿನ ಅಂಶದ ಕೈಯೆ ಮೇಲಾಗಿತ್ತು ಮುಕೊಂದಯ್ಯನಿಗೆ ಮಾತುಕೊಟ್ಟಿದ್ದಂತೆ ಪೀಂಚಲು ತನ್ನ ಗಂಡನ ಬಾಲಕ ಸಹಜವಾದ ಬಾಯಾಳಿತನಕ್ಕೆ ಅಂಜಿ ಕೆಲವು ಸಂಗತಿಗಳನ್ನು ಮರೆಮಾಚಿದ್ದಳು.

ಅವಳು ತಿಳಿಸಿದ್ದಂತೆ, ಮುಕುಂದಯ್ಯನ ಅತ್ತಿಗೆ ಹೆತ್ತ ಕಾರಣಕ್ಕಾಗಿ ನಾಗತ್ತೆ ಕೋಣೂರಿನಲ್ಲಿಯೆ ಉಳಿದಿರಲಿಲ್ಲ. ನಾಗತ್ತೆ ನಾಗಕ್ಕ ಇಬ್ಬರೂ ಸಾಯಂಕಾಲ ಹೂವಳ್ಳಿಗೆ  ಹೋಗುತ್ತಿದ್ದ  ಪೀಂಚಲು ಅವರಿಬ್ಬರನ್ನೂ ದಾರಿಯಲ್ಲಿ ಸಂಧಿಸಿದ್ದಳಷ್ಟೆ.

ಕಾಗಿನಹಳ್ಳಿ ಅಮ್ಮ ಅವರ ಹೆಸರು ದಾನಮ್ಮ ಎಂದಿದ್ದರೂ ಎಲ್ಲರೂ ಅವರನ್ನು ಅವರ ತವರೂರಿನ ಹೆಸರಿನಿಂದಲೆ ಕರೆಯುತ್ತಿದ್ದದು ಆನಾಡಿನ ರೂಢಿ-ನಾಗತ್ತೆಯನ್ನು ಒಂದೆರಡು ದಿನ ಇದ್ದು ಹೋಗಿ ಎಂದು ಕೇಳಿಕೊಂಡಿದ್ದೇನೊ ನಿಜವೆ. ಆದರೆ ನಾಗತ್ತೆಗೆ ಆ ಸಾಯಾಂಕಾಲವೆ ತಾನೂ ತನ್ನ ಸೊಸೆಯೂ ಹೂವಳ್ಳಿಯಲ್ಲಿ ಇರಲೇಬೇಕಾಗಿತ್ತು. ಅಲ್ಲಿ ನಡೆಯುತ್ತಿದ್ದ ದೆಯ್ಯದ ಹರಕೆಯಲ್ಲಿ ಅತ್ತೆ ಸೊಸೆಯರಿಬ್ಬರೂ ವಹಿಸಬೇಕಾಗಿದ್ದ ಪಾತ್ರ  ಗುರುತರವಾದುದಾಗಿತ್ತು. ವಾಸ್ತವಾಂಶವೆಂದರೆ ಆ ಅತ್ತೆ ಸೊಸೆಯರ ಸಲುವಾಗಿಯೆ ಹೂವಳ್ಳಿಯ ವೆಂಕಟಪ್ಪನಾಯಕರು ದೆಯ್ಯದ ಹರಕೆಯ ಸೀಗಿನಿಂದ ಔತಣದ ಏರ್ಪಾಡು ಮಾಡಿದ್ದರು.

ಆದರೆ ಆ ದೆಯ್ಯದ  ಹರಕೆಗೆ ಹತ್ತಿರದ ಸಂಬಂಧಿಗಳ ಮನೆಗಳನ್ನೆ ‘ಕರೆ’ದಿರಲಿಲ್ಲ. ಹರಕೆಗೆಂದು ಕಡಿಯಲು, ಹಳೆಮನೆಗೆ ಖುದ್ದು ವೆಂಕಟಪ್ಪನಾಯಕರೆ ಹೋಗಿ, ಹಂದಿಯನ್ನು ಹೊರಿಸಿಕೊಂಡು ಬಂದಿದ್ದರೂ ಸೋಗೆಯ ಮನೆವರಿಗಾಗಲಿ ಹೆಂಚಿನಮನೆಯವರಿಗಾಗಲಿ ಆ ವಿಷಯವನ್ನೆ ತಿಳಿಸಿರಲಿಲ್ಲ. ಇನ್ನು ಕರೆಯುವುದು ಎಲ್ಲಿಂದ ಬಂತು? ಕೋಣೂರು, ಬೆಟ್ಟಳ್ಳಿ, ಸಿಂಬಾವಿ, ಕಾಗಿನಹಳ್ಳಿ, ಬಾವಿಕೊಪ್ಪದ ಮನೆಗಳಿಗೂ ‘ಕರೆ’ ಕಳಿಸಿರಲಿಲ್ಲ. ಆದರೆ ಹೂವಳ್ಳಿಯ ಹತ್ತಿರವೆ ಸುತ್ತಮುತ್ತ ಇದ್ದ ನಾಲ್ಕಾರು ಗೇಣಿಗುತ್ತಿಗೆ  ಮಾಡುವ ಸಣ್ಣ ಪುಟ್ಟ ಒಕ್ಕಲುಗಳಿಗೆ ಮಾತ್ರ ಹರಕೆಗೆ ಬರಲು ಹೇಳಿದ್ದರು. ಹಂದಿಯ ಹಸಿಗೆ ಮಾಡಿದ ಹಳೆಪೈಕದವರಂತೂ ಅನಿವಾರ್ಯ ಅತಿಥಿಗಳಷ್ಷೆ! ಇನ್ನು, ಬಡು ಬಿದ್ದಲ್ಲಿ ಹದ್ದು ಕಾಗೆ ಹಾರಾಡಿಯೆ ಹಾರಾಡುವಂತೆ, ಹಳೆಮನೆಯ ಹೊಲೆಯರು, ಬೆಟ್ಟಳ್ಳಿ ಬೇಲರು, ಕೋಣೂರಿನ ಗಟ್ಟದವರು ಎಡಗೈಯವರು ಬಲಗೈಯವರು ಅವರೂ ಅಂತಾ ಹತ್ತಾರು ಜನ ಸೇರಿ ದೆಯ್ಯದ ಹರಕೆಯ ಗಲಾಟೆಗೆ ನೆರೆ ಬಂದಹಾಗಿತ್ತು.

ಯಾರ ಅಪ್ರಯತ್ನ ಗಮನಕ್ಕಾದರೂ ಬರುವಂತಿದ್ದ ಇನ್ನೊಂದು ವಿಷಯವೆಂದರೆ, ವೆಂಕಟಣ್ಣ ಧರಿಸಿದ್ದ ಬಟ್ಟೆಬರೆ. ಆ ದಿನ ಬೆಳಗ್ಗೆ ಹಳೆಮನೆಯಲ್ಲಿ ‘ಕುಂಟನ ಹುಣ್ಣಿನ ಹೂವಳ್ಳಿ ವೆಂಕಣ್ಣ’ ನಾಗಿದ್ದವನು ಅಂದೆ ಸಾಯಂಕಾಲ ಹೂವಳ್ಳಿಯಲ್ಲಿ ವೇಷಭೂಷಣ ಧರಿಸಿ ‘ಯಜಮಾನರು ವೆಂಕಪ್ಪನಾಯಕರು’ ಆಗಿಬಿಟ್ಟಿದ್ದನು! ಹೆಮ್ಮೀಸೆಯ, ಬೃಹದ್ಗಾತ್ರದ, ದೀರ್ಘೋನ್ನತ ‘ಸೈಂಧವ’ ವ್ಯಕ್ತಿ ಶರಟಿನಂತಹ  ಒಂದು ಹೊಸ ಒಳಂಗಿ ಹಾಕಿಕೊಂಡು, ಮೊಣಕಾಲಿನ ಕೆಳಗೆ ತುಸುವೆ ನೇತಾಡುವಂತೆ ಕೆಂಪಂಚಿನ ಒಂದು ಹೊಸ ಪಂಚೆಯನ್ನು ಕತ್ತರಿಹಾಕಿ ಕಚ್ಚೆ ಉಟ್ಟಿದ್ದನು. ಕೈಗೆ ಚಿನ್ನದ ಕಡಗ, ಬೆರಳಿಗೆ ಹರಳುಂಗುರ, ಕಿವಿಗೆ ಹರಳೊಂಟಿ ಅಲಂಕಾರವಾಗಿದ್ದುವು. ಹಣೆಗೆ ಅತ್ತಿತ್ತ ಬಿಳಿಯ ನಾಮಗಳೂ, ನಡುವೆ ಕೆಂಪು ನಾಮವೂ ಏರಿ, ನಾಯಕರ ವೀರ ವೈಷ್ಣವತ್ವನ್ನು ಸಾರುತ್ತಿದ್ದವು. ಹಂದಿ ತಿನ್ನುವುದಕ್ಕಾಗಲಿ, ಕಳ್ಳು ಹೆಂಡ ಸಾರಾಯಿ ಕುಡಿಯುವುದಕ್ಕಾಗಲಿ, ಆ ವೈಷ್ಣವತ್ವದಿಂದ ಯಾವ ಅಎಚಣೆಯೂ ಇದಲಿಲ್ಲ. ಆ ದೃಷ್ಟಿಯಿಂದ ವೆಂಕಪ್ಪನಾಯಕರನ್ನು ವಾಮಾಚಾರ ತಾಂತ್ರಿಕ ಶಾಕ್ತರೂ ಮಿರಿಸುತ್ತಿರಲಿಲ್ಲ ಎನ್ನಬಹುದು!

ಹಂದಿಯ ಹಸಿಗೆಗಾಗಿ ಬಂದು, ಔತಣಕ್ಕಾಗಿ ಕಾಯುತ್ತಾ ಕುಳಿತು, ಎಲೆಯಡಿಕೆ ಹಾಕಿ ಕಾಲ ನೂಂಕುತ್ತಿದ್ದ ಹಳೆಪೈಕದವರಲ್ಲಿ ಒಬ್ಬ ವೆಂಕಟಣ್ಣನ  ಆ ‘ದರೋಬಸ್ತ’ನ್ನು ನಿರ್ದೇಶಿಸಿ ಪಕ್ಕದವನನ್ನು ಕೇಳಿದನು “ಏನೋ ಇವತ್ತು ನಾಯಕರು ಒಳ್ಳೇ ಮದೋಳಿಗನ ಹಾಂಗೆ ಬಟ್ಟೆಗಿಟ್ಟೆ ಹಾಕಿಕೊಂಡಿದ್ದಾರಲ್ಲಾ?”

ಪಕ್ಕದವನು ಹುಳ್ಳಗೆ ಮುಸುಗುನಗೆ ನಕ್ಕು, ಕಣ್ಣುಮಿಟುಕಿಸಿದ: “ ಮತ್ತೆ? ಒಂದು ತರದಾಗೆ ಮದೋಳಿಗನೆ!”

“ಹಾಂಗಂದ್ರೆ?”

ಇನ್ನೊಬ್ಬ ಅವನ ಕಿವಿಯ ಹತ್ತಿರ ಪಿಸುಗುಟ್ಟಿದ್ದನು: “ಏನೇನೋ ಹೇಳ್ತಾರಪ್ಪಾ! ಆ ಬಾವಿಕೊಪ್ಪದ ನಾಗಹೆಗ್ಗಡ್ತಮ್ಮನ ಸೊಸೆ ನಾಗಕ್ಕನ್ನ ಇವರು ಕೂಡಿಕೆ ಮಾಡಿಕೊಳ್ತಾರೆ ಅಂತಾ.”

“ಹೌದ್ಹೌದು; ಬೈಗು ಬೈಗು ಆಗ್ತಿದ್ಹಾಂಗೆ ಸೊಸೇನ ಕರಕೊಂಡು ಬಂದಿದ್ದನ್ನ ನೋಡ್ದೆ ಅತ್ತೆ.”

“ಯಾರೋ? ಆ ಬಿಲ್ಲೋರ ಹುಡುಗಿ ಐತನ ಹೆಂಡ್ತಿ ಸಂಗಡ ಮಾತಾಡ್ತಾ ಬಂದ್ರಲ್ಲಾ ಅವರೇನೊ?”

“ಅವರೇ ಕಣೋ, ಆ ನಾಯಕರ ಮಗಳು ಚಿನ್ನಕ್ಕೋರ್ನ ಗಲ್ಲಮುಟ್ಟಿ ನಟಿಗೆ ತೆಗೆದ್ರಲ್ಲಾ ಅವರೇ!”

“ಆಗ್ಲೆ ಏನು ಅಕ್ಕರೆ, ಮಗಳಮೇಲೆ? ಇನ್ನೂ ಚಿಕ್ಕಮ್ಮ ಆಗಾಕೆ ಮೊದ್ಲೆ?”

ನಾಗತ್ತೆ ಮತ್ತು ವೆಂಕಟಣ್ಣ ಇಬ್ಬರೂ ಸೇರಿ ತಮಗಿಬ್ಬರಿಗಲ್ಲದೆ ಜಗತ್ತಿನಲ್ಲಿ ಇನ್ನಾರಿಗೂ ಗೊತ್ತಾಗಬಾರದು ಎಂದು ಮಾಡಿದ್ದ ಮಸಲತ್ತು, ಅದು ಹೇಗೊ ಎಂತೊ, ಗುಸುಗುಸು ಕಿವಿಮಾತಾಗಿ ಅನೇಕರ ಗೋಪ್ಯ ಸಂವಾದ ವಿಷಯವಾಗಿಬಿಟ್ಟಿತ್ತು. ಆದರೆ ಯಾರೊಬ್ಬರೂ ಬಾಯಿಬಿಟ್ಟು ಆಡುತ್ತಿರಲಿಲ್ಲ. ಎಲ್ಲರ ಕಣ್ಣನೊಳಗೂ ಏನೊ ಒಂದು ಸಂಚಿನಂತೆ ಮಿಂಚುತಿತ್ತೆ ಹೊರತೂ ಯಾರಲ್ಲಿಯೂ ಅದು ಸುಸ್ಪಷ್ಟತೆ ಪಡೆದಿರಲಿಲ್ಲ. ಅದದರ ಸುಳಿವನ್ನು ಒಂದಿನಿಂತೂ ಅರಿಯದೆ ಸಂಪೂರ್ಣ ಮುಗ್ಧರಾಗಿದ್ದವರೆಂದದರೆ ಇಬ್ಬರೆ: ಚಿನ್ನಮ್ಮ ಮತ್ತು ನಾಗಕ್ಕ: ಕೂಡಿಕೆಯಾಗುವವನ ಮಗಳು ಮತ್ತು ಕೂಡಿಕೆಯಾಗಲಿರುವ ಹೆಣ್ಣು!

ಹೋದ ವರುಷ ಗದ್ದೆಕುಯ್ಲು ಅಡಕೆಸುಲಿತಗಳ ಸಮಯದಲ್ಲಿ ವೆಂಕಟಣ್ಣನಿಗೆ ನೆರವಾಗುವ ನೆವದಲ್ಲಿ ನಾಗುತ್ತೆ ತನ್ನ ಸೊಸೆಯನ್ನು ವೆಂಕಟಣ್ಣನ ಪರಿಚಯಕ್ಕೆ  ತಕ್ಕಮಟ್ಟಿಗೆ ಪಳಗಿಸಿದ್ದೇನೆ ಎಂದು ಭಾವಿಸಿದ್ದಳು. ನಾಗಕ್ಕನೂ ಸಂತೋಷ ಚಿತ್ತೆಯಾಗಿ  ಎಲ್ಲರೊಡನೊ ವ್ಯವಹರಿಸಿದ್ದಳು. ಅದಕ್ಕೆ  ಮುಖ್ಯಕಾರಣ ವೆಂಕಟಣ್ಣನಾಗಿರಲಿಲ್ಲ, ಅವನ ಮಗಳು ಚಿನ್ನಮ್ಮನಾಗಿದ್ದಳು. ನಾಗಕ್ಕ ಚಿನ್ನಮ್ಮರಲ್ಲಿ, ಜನ್ಮಾಂತರದ ಪ್ರೀತಿ ಸಂಬಂಧವೊ ಎಂಬಂತೆ, ಇನ್ನಿಲ್ಲದ ಅಕ್ಕರೆ ಬೆಳೆದಿತ್ತು. ಒಟ್ಟಿಗೆ ಮಲಗಿ, ಒಟ್ಟಿಗೆ ಎದ್ದು, ಒಟ್ಟಿಗೆ ಉಂಡು, ಒಟ್ಟಿಗೆ ತಿರುಗಿ, ಒಟ್ಟಿಗೆ ಮಾತಾಡಿ, ಒಟ್ಟಿಗೆಕೆಲಸಮಾಡಿ, ಒಡಹುಟ್ಟುಗಳಿಗೂ ಅಸಾಧ್ಯವೆಂವಂತೆ ಒಬ್ಬರನ್ನೊಬ್ಬರು ಸೆಟ್ಟುಹಾಕಿಕೊಂಡಿದ್ದರು. ಒಂದು ಕಾರಣಕ್ಕಾಗಿ ಚಿನ್ನಮ್ಮನ ಅಜ್ಜಿಗೂ ಮತ್ತೊಂದು  ಕಾರಣಕ್ಕಾಗಿ  ಚಿನ್ನಮ್ಮನ ತಂದೆಗೂ ಅವರಿಬ್ಬರ ಪರಸ್ಪರ ಮೈತ್ರಿ  ಅಚ್ಚುಮೆಚ್ಚಾಗಿತ್ತು ಆದ್ದರಿಂದ ಅಜ್ಜಿ ಅಪ್ಪಯ್ಯ ಸಂವರ್ಧನೆಯಲ್ಲಿ. ವೆಂಕಟಣ್ಣ ತನ್ನ ಸಾಲವನ್ನೂ ಲೆಕ್ಕಿಸದೆ, ಒಡವೆ ವಸ್ತುಗಳನ್ನು ತಂದುಕೊಡುವಾಗಲೆಲ್ಲ ಮಗಳಿಗೆ ಕೊಟ್ಟಂತೆಯೆ ನಾಗಕ್ಕಗೂ ಕೊಟ್ಟಿದ್ದನು, ಒಮ್ಮೊಮ್ಮೆ ನಾಗಕ್ಕಗೂ ತುಂಬ ಸಂಕೋಚವಾಗುಷ್ಟರ ಮಟ್ಟಿಗೆ! ಬೇಡ  ಎಂದರೆ ಯಾರ  ಮನಸ್ಸಿಗೆ ನೋವಾಗುವುದೋ ಎಂದು ಅಳುಕಿ, ಆ ಒಡವೆ  ವಸ್ತುಗಳಲ್ಲಿ ಕೆಲವನ್ನು, ತನ್ನ ಬಳಿ ಅದನ್ನೆಲ್ಲ ಭದ್ರವಾಗಿ ಇಡಲು ಪಿಟಾರಿ ಇಲ್ಲ ಎಂಬ ನೆವ ಹೇಳಿ, ಚಿನ್ನಮ್ಮನ ಸಂದುಕದ ಅರೆ ಪಾಲು ಜಾಗ ನಾಗಕ್ಕನದೇ ಆಗಿಬಿಟ್ಟಿತ್ತು.

ವೆಂಕಟಣ್ಣ ಯಾವಯಾವ ಕಡೆಗಳಿಂದ ತನಗೆ ಸಾಲ ದೊರೆಯಬಹುದೊ ಆ ಎಲ್ಲ ಕಡೆಗಳಿಂದಲೂ ಸಾಲ ತಂದೂ ಅವನಿಗೆ ಸಾಲ ಎಷ್ಟಿದೆ ಎಂಬುದೂ ಗೊತ್ತಿರಲಿಲ್ಲ. ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಲ್ಲಿ, ಬೆಟ್ಟಳ್ಳಿ ಕಲ್ಲಯ್ಯಗೌಡರಲ್ಲಿ, ಕಲ್ಲೂರು ಮಂಜಭಟ್ಟರಲ್ಲಿ, ಸಿಂಬಾವಿ ಭರಮೈಯ ಹೆಗ್ಗಡೆಯವರಲ್ಲಿ, ಅಲ್ಲದೆ ಸ್ವಲ್ಪ ಸ್ವಲ್ಪ ಎಂದು ಸಣ್ಣಪುಟ್ಟ ಗೇಣಿದಾರರಲ್ಲಿಯೂ ಸಾಲ ತೆಗೆದಿದ್ದನು. ಪಿತ್ರಾರ್ಜಿತವಾಗಿ ಬಂದಿದ್ದ ಚಿರ ಸ್ವತ್ತುಗಳೆಲ್ಲ ದೀಡಾಗಿದ್ದವು. ಕೆಲವು ಸಾರಿ ಒಂದೇ ತೋಟವನ್ನೊ ಗದ್ದೆಯನ್ನೊ ಇಬ್ಬರಿಗೂ ಬರೆದುಕೊಡುವುದಕ್ಕೂ ಹೇಸಿರಲಿಲ್ಲ ಅದನ್ನೇನು ಮನಃಪೂರ್ವಕವಾಗಿ ವ್ಯೂಹಪ್ರಕಾರ ವಂಚನೆಮಾಡಬೇಕೆಂದು ಮಾಡಿರಲಿಲ್ಲ. ಅವನಿಗೆ ಗೊತ್ತಿದ್ದರೆ ತಾನೆ ಯಾರುಯಾರಿಗೆ ಯಾವಯಾವ ಜಮೀನು ದೀಡುಮಾಡಿದ್ದೇನೆ ಎಂಬುದು?

ದುರ್ಗದ ಪಾಳೆಯಗಾರರಲ್ಲಿ ದಂಡನಾಯಕರಾಗಿದ್ದರೆ  ವಂಶದವನು ಎಂಬ ಆ ಹಳೆಯ ನೆನಪಿಗೆ  ಗೌರವಕ್ಕಾಗಿ ಅನೇಕರು ಸಾಲಕೊಟ್ಟಿದ್ದರು, ಇವತ್ತಲ್ಲಾ ನಾಳೆ ಅದನ್ನು ಬಡ್ಡಿಯೊಡನೆ ತೀರಿಸುತ್ತಾನೆ ಎಂಬ ಧೈರ್ಯದಿಂದ, ಆದರೆ ಕಲ್ಲೂರು ಸಾಹುಕಾರ ಮಂಜಭಟ್ಟರಂತಹ ಬುದ್ಧಿವಂತ ಬ್ರಾಹ್ಮಣರು  ಜಮೀನನ್ನು  ಲಪಟಾಯಿಸಿಕೊಳ್ಳುವುದಕ್ಕೆ ಒಂದು  ನೆವವಾದರೂ ಇರಲಿ ಎಂದೇ ಮಂದಬುದ್ಧಿಯ ಗಡರು ನಾಯಕರು ಹೆಗ್ಗಡೆಗಳಿಗೆ  ಸಾಲಕೊಡುತ್ತಿದ್ದರು. ಹಾಗಲ್ಲದಿದ್ದಲ್ಲಿ, ಕಲ್ಲೂರು ದೇವಸ್ಥಾನಕ್ಕೆ ದೊಡ್ಡ ಜಮೀನುದಾರನೂ ಶ್ರೀಮಂತನೂ ಎಂದು ಹೆಸರು  ಪಡೆಯಲು ಹೇಗೆ ಸಾದ್ಯವಾಗುತ್ತಿತ್ತು? ತೊಟ್ಟು ಜನಿವಾರ, ಉಟ್ಟ ಪಾಣಿಪಂಚೆ, ಬಹುಶಃ ಕೈಲೊಂದು ಪಂಚಪಾತ್ರೆ-ಇಷ್ಟೆ ಆಸ್ತಿಯಾಗಿ ಬಂದಿದ್ದ  ಬಡ ಹಾರುವನು ಈಗ ದೊಡ್ಡಚೌಕಿಮನೆಯ ಯಜಮಾನನಾಗಿ ದರ್ಬಾರು ನಡೆಸಲು ಹೇಗೆ ಸಾಧ್ಯವಾಗುತಿತ್ತು? ಗೌಡ ಹೆಗ್ಗಡೆ ನಾಯಕರುಗಳನ್ನೆಲ್ಲ ತನ್ನ ಮನೆಯ ಅಂಗಳದ  ಕೆಳಜಗಲಿಯಲ್ಲಿ ನಿಲ್ಲಿಸಿಯೊ ನೆಲದಮೇಲೆ ಜೂರಿಸಿಯೊ ಅಥವಾ ಹೆಚ್ಚು ಎಂದರೆ ಚಾಪೆಯ ದಾಕ್ಷಿಣ್ಯಕ್ಕೆ ಏರಿಸಿಯೊ ಆಜ್ಙೆಮಾಡಿ, ತಪ್ಪಿದರೆ ಶಿಕ್ಷೆ ವಿಧಿಸುತ್ತೇನೆ ಎಂದು ಗರ್ಜಿಸಲು ಹೇಗೆ ಸಾಧ್ಯವಾಗುತಿತ್ತು? ಮೊದಮೊದಲು ‘ಏನು ವೆಂಕಟಪ್ಪನಾಯಕರೆ?’ ಎಂದು ಸಂಬೋಧಿಸುತ್ತಿದ್ದವನು ಬರಬರುತ್ತಾ ‘ಏನು ವೆಂಕಟಣ್ಣ?’ ಎಂದು ಸಲಿಗೆಯಿಂದ ಕರೆಯುವಂತಾಗಿ ಈಗ ‘ಏನು ಬಂದೆಯೊ, ಎಂಕ್ಟ?’ ಎಂದು ಪ್ರಶ್ನಿಸಲು ಹೇಗೆ ಸಾಧ್ಯವಾಗುತಿತ್ತು? ಅಷ್ಟಾದರೂ ಆ ಬೃಹದ್‌ ಗಾತ್ರದ ದಂಡನಾಯಕರೂ ವಂಶಸ್ಥನಿಗೆ ಅದೊಂದೂ ಅರ್ಥವಾಗುತ್ತಿರಲಿಲ್ಲವೋ? ಅಥವಾ ಅರ್ಥವಾದರೂ ಅವರ ಸಾಲಗಾರನಾಗಿ ಇನ್ನೂ ಸಾಲ ಬೇಡುವ ದೈನ್ಯಕ್ಕೆವಶನಾಗಿ, ತನ್ನ ಚೈತನ್ಯದ ಪೌರುಷತ್ವವನ್ನೆ ಕಳೆದು ಕೊಂಡಿದ್ದನೋ? ಹಲ್ಲು ಕಿರಿದು, ಬೆಪ್ಪುನಗೆ ನಕ್ಕು, ಸೊಂಟ ಬಗ್ಗಿಸಿ, ಕೈಮುಗಿದು, “ಏನೂ ಇಲ್ಲ, ಭಟ್ಟರೆ; ಸುಮ್ಮನೆ ಹಾಂಗೆ ತಿರುಗಾಡ್ತಾ ಬಂದೆ?” ಎಂದು ರಾಗವಾಗಿ, ಬೇಸರ ತರುವಷ್ಟರಮಟ್ಟಿಗೆ ನಿಧಾನವಾಗಿ, ಮೂರ್ಖ ಉತ್ತರ ಕೊಡುವುದು ರೂಢಿಯಾಗಿ ಹೋಗಿತ್ತು ಹೂವಳ್ಳಿ ವೆಂಕಟಣ್ಣಗೆ.

ಈ ಸಾರಿಯೂ ಅಂತರಂಗದಲ್ಲಿ ಕೂಡಿಕೆಯಾಗಿ ಬಹಿರಂಗದಲ್ಲಿ ದೆಯ್ಯದ ಹರಕೆಯ ರೂಪುವೆತ್ತಿದ್ದ ಆ ‘ವಿಶೇಷ’ಕ್ಕೆ ಕಲ್ಲೂರು ಮಂಜಭಟ್ಟರಿಂದಲೆ ಸಾಲ ತಂದಿದ್ದನು. ಆದರೆ ಈ ಸಾರಿ ನಾಗಕ್ಕನನ್ನು ಸೀರುಡಿಕೆ ಮಾಡಿಕೊಳ್ಳುವ ಮೋಹವೇಗದ ಪ್ರವಾಹಕ್ಕೆ ಸಿಕ್ಕಿ ಪಿತ್ರಾಜಿತ ಆಸ್ತಿಯನ್ನೆಲ್ಲ ತೇಲಿಬಿಟ್ಟಿದ್ದನು. ಅದುವರೆಗೆ ಸ್ವಂತ ಗದ್ದೆ ತೋಟಗಳನ್ನು ಸಾಗುವಳೆ ಹೆಸರಿಗಾದರೂ ಜಮೀನುದಾರನಾಗಿದ್ದವನು ಈಗ ಕಲ್ಲೂರು ಸಾಹುಕಾರ ಮಂಜಭಟ್ಟರ ಒಕ್ಕಲ ಸ್ಥಾನಕ್ಕೆ ಇಳಿದಿದ್ದನು. ಆದರೆ ಈ ವಿಷಯವನ್ನು ಭಟ್ಟರೂ ನಾಯಕರೂ ಒಟ್ಟಾಗಿಯೆ ಗುಟ್ಟಾಗಿಟ್ಟಿದ್ದರು, ವೆಂಕಟಣ್ಣನಿಗೆ ಸಾಲಕ್ಕೊಟ್ಟಿದ್ದ ಇತರರಿಗೆ ಯಾರಿಗೂ ತಿಳಿಯದಿರಲಿ ಎಂದು.

ಹೆಂಡತಿ ಸತ್ತು ಇಷ್ಟು ವರ್ಷಗಳಾದಮೇಲೆ, ಅನೇಕ ಕಡೆಗಳಲ್ಲಿ ತನ್ನನ್ನು ಕೂಡಿಕೆ ಮಾಡಿಕೊಡಲು ತನ್ನ ಅತ್ತೆ ಮಾಡಿದ್ದ ಪ್ರಯತ್ನಗಳನ್ನೆಲ್ಲ ವಿಫಲಗೊಳಿಸಿದ್ದ ಹೆಣ್ಣನ್ನು, ಆಸ್ತಿಯನ್ನೆಲ್ಲ ಬೆಲೆತೆತ್ತು, ಸೀರುಡಿಕೆಯಾಗಲು ಕಾತರನಾದದ್ದು ಏಕೆ?- ಎಂದು ಯಾರಾದರೂ ಕೇಳಿದ್ದರೆ, ಬಹುಶಃ ವೆಂಕಟಣ್ಣ ಹೇಳುತ್ತಿದ್ದ ‘ಗಂಡು ಸಂತಾನಕ್ಕಾಗಿ!’ ‘ಮದುವೆಯ ವಯಸ್ಸಿಗೆ ಬಂದ ಹೆಣ್ಣುಮಗಳು ಚಿನ್ನಮ್ಮ ಇದ್ದಾಳೆ. ಯಾರಾದರೂ ಒಬ್ಬ ಯೋಗ್ಯ ಹುಡುಗನನ್ನು ಮನೆ ಅಳಿಯತನಕ್ಕೆ ತಂದು, ಮಗಳನ್ನು ಅವನಿಗೆ ಮದುವೆಮಾಡಿದರೆ  ಆಗದೇ?’ ಎಂದೇನೂ ಕೆಲವರು ಸಲಹೆ  ಮಾಡಿದ್ದರು. ಆದರೆ ಅದು ತನ್ನ ಸ್ವಂತ ಸುಖಕ್ಕೆ ಸಾಧನವಾದೀತೆ? ಸೀರುಡಿಕೆಯಾಗಿ ಗಂಡು ಮಗುವನ್ನು ಪಡೆದರೆ ಎರಡೂ ಕೈಗೂಡುವುದಿಲ್ಲವೆ: ಸ್ವಂತ ಸುಖ ಮತ್ತು ವಂಶೋದ್ಧಾರ? ಅದೂ ಅಲ್ಲದೆ, ‘ಮನೇ ಅಳಿಯ ಮನೇ ತೊಳಿಯ!’ ಗಾದೆ ಬೇರೆ ಇದೆಯಲ್ಲ?

ಆದರೆ ಈಗ ಆದದ್ದು-ಮೂಗು ತೆತ್ತು ಕನ್ನಡಿ ಕೊಂಡಂತೆ. ವೆಂಕಟಣ್ಣ ಪಡೆಯಬಹುದಾದ ಪುತ್ರಸಂತಾನಕ್ಕೆ ಲಭಿಸಲಿರುವ ಆಸ್ತಿ ಎರಡೆ: ದಾರಿದ್ಯ್ರ ಮತ್ತು ಸಾಲ!

ಬೈಗಾದ ಹಾಗೆಲ್ಲ  ಆ ದಿನ ವೆಂಟಕಣ್ಣನಿಗೆ ಏನೋ ಆನಂದದ ನಿರೀಕ್ಷೆ. ನಾಗತ್ತೆ ಮತ್ತು ನಾಗಕ್ಕ, ದೆಯ್ಯದ ಹರಕೆಗೆ ಬರುವ ಇತರ ನೆಂಟರಂತೆ, ಬರುವುದನ್ನೆ ಕಾಯುತ್ತಿದ್ದ. ಆದರೆ ಬೈಗು ಕಪ್ಪಾಗತೊಡಗಿದ್ದರೂ ಅವರು ಇನ್ನೂ ಬರದಿದ್ದುದನ್ನು ಕಂಡು ಅವನಿಗೆ ದಿಗಿಲುಬಡಿದಂತಾಯಿತು. ಇತರ ನೆಂಟರೂಡನೆ ಮಾತುಕತೆ ಆಡುತ್ತಿದ್ದರೂ ಯಾವುದಾದರೂ ನೆವದಿಂದ ಮತ್ತೆ ಮತ್ತೆ ಹೆಬ್ಬಾಗಿಲಿಗೆ ಹೋಗಿ ನೋಡಿ, ಮನೆಗೆ ಬಂದ ನೆಂಟತಿಯರಿಗೆ ಉಡುಗೂರೆಯಾಗಿ ಕೂಡಲು ತಂದಿದ್ದ ಸೀರೆಗಳ ವಿಚಾರ ಸಲಹೆ ಕೂಡುವ ನೆವದಿಂದ ನಾಗತ್ತೆ ನಾಗಕ್ಕರು  ಬಂದರೇ ಇಲ್ಲವೇ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದನು. ಕಡೆಗೊಮ್ಮೆ ಅವನೇ ಕಂಡನು, ಕವಿಯುತ್ತಿದ್ದ ಕಪ್ಪಿನಲ್ಲಿ ಮಸುಗು ಮಸುಗಾಗಿ ಬರುತ್ತಿದ್ದ  ಮೂವರು ಸ್ತ್ರೀ ಆಕೃತಿಗಳನ್ನು: ಅವರು ಹತ್ತಿರಕ್ಕೆ ಬಂದಾಗ ನಾಗತ್ತೆ ನಾಗಕ್ಕರನ್ನು ಗುರುತಿಸಿ, ಸಂಪ್ರದಾಯದಂತೆ “ಬಂದ್ರೇ? ಒಳಗೆ ಹೋಗಿ!….ಕೈಕಾಲು ತೊಳಕೊಳ್ಳಾಕೆ ನೀರು ಕೊಡೊ, ಏ ರಾಮ!” ಎಂದು ಅದಕ್ಕಾಗಿ ನಿಂತಿದ್ದ ಆಳಿಗೆ ಕೂಗಿ ಹೇಳಿದನು ಸಂಭ್ರಮ ಸ್ವರದಲ್ಲಿ.

ಗಟ್ಟದ ತಗ್ಗಿನವರಂತೆ ಸೀರೆಯುಟ್ಟು, ನಾಗತ್ತೆ ನಾಗಕ್ಕರೊಡನೆ ಒಳಗೆಹೋಗದೆ ಅಲ್ಲಿಯೆ ನಿಂತಿದ್ದ ಮೂರನೆಯ ಸ್ತ್ರೀ ಆಕೃತಿಗೆ “ಯಾರೆ ನೀನು? ಮುಟ್ಟಾಳೇನೆ?….ಹಳೆಪಕದವಳೊ ಸೆಟ್ಟರವಳೊ?… ಸೆಟ್ಟರವಳಾದರೆ ಹೋಗು ಒಳಗೆ” ಎಂದು  ಹರ್ಷ ಚಿತ್ತನಾಗಿದ್ದ ವೆಂಕಟಣ್ಣ ಆದರಪೂರ್ವಕವಾಗಿಯೆ ಹೇಳಿದನು.

ಆ   ಆಕೃತಿ “ನಾನು…. ನಾನು ….” ಎಂದು ತಡೆತಡೆದು, ಏನು ಹೇಳಬೇಕೆಂಬುದನ್ನು ಯೋಚಿಸಿದರೂ ಅದು ಸರಿಯಾಗಿ ಹೊಳೆಯದೆ “ಪೀಂಚಲು!” ಎಂದಿತು.

ವೆಂಕಟಣ್ಣ ಅದನ್ನು ಕೇಳಿ ನಕ್ಕು “ಪೀಂಚಲು! ಎಂಥದೇ ಅದು ಪೀಂಚಲು?” ಎಂದು ಕೇಳಿದನು.

“ನನ್ನ ಹೆಸರು, ಅಯ್ಯಾ!” ಪೀಂಚಲು ತಲೆಬಾಗಿ ನೆಲ ನೋಡುತ್ತಿದ್ದಳು.

“ಸೈ ಬಿಡು! ಪೀಂಚಲು? ಒಳ್ಳೆ ಹೆಸರೇ!” ಎಂದು ಹಾಸ್ಯವಾಡಿ “ಎಲ್ಲಿಯವಳೇ ನೀನು? ಯಾತರವಳೆ?… ಅವರ ಸಂಗಡ ಬಂದವಳೇನೇ?”

“ನಾನು ಬಿಲ್ಲವರೋಳು…. ಕೋಣೂರಿನಿಂದ ಬಂದೀನಿ…. ಸಣ್ಣಗೌಡ್ರು….” ಎಂದುವಳು, ತಟಕ್ಕನೆ ನಾಲಗೆ ಕಚ್ಚಿಕೊಂಡು, ಮಾತು ನಿಲ್ಲಿಸಿದಳು. ಬೆಳಕಿನಲ್ಲಾಗಿದ್ದರೆ ಅವಳ ಮುಖಭಂಗಿ ಅವಳಿಗೆ ದ್ರೋಹವೆಸಗುತ್ತಿತ್ತೋ ಏನೊ? ಆದರೆ ರಾತ್ರಿಯ ರಕ್ಷೆ ಕವಿದಿತ್ತು.

“ಯಾರೇ ಮುಕುಂದನೇನೆ? ಎನಾದ್ರೂ ಹೇಳಿ ಕಳ್ಸಿದಾನೊ? ಕೊಟ್ಟು ಕಳ್ಸಿದಾನೊ?…”

“ಅಲ್ಲಾ ಆ….ದೊಡ್ಡಮ್ಮ ಚಿನ್ನಕ್ಕಗೇನೋ” ಎಂದವಳು ಮಾತು ನಿಲ್ಲಿಸಿಯೆಬಿಟ್ಟಳು. ವೆಂಕಟಣ್ಣ ಏನು ಕೇಳಿದರೂ ತುಟಿಪಿಟಕ್ಕೆನ್ನದೆ ಹೋದಳು.

“ಅಯ್ಯೋ ಹಾಳು ಹುಡುಗೀ!… ಹಿತ್ತಲು ಕಡೆಗೆ ಹೋಗಿ ಕೇಳು, ನಿನ್ನ ಚಿನ್ನಕ್ಕ ಸಿಕ್ತಾರೆ” ಎಂದು ಹೇಳಿ, ವೆಂಕಟಣ್ಣ ಒಳಜಗಲಿಗೆ   ಹೋದನು.

ಪೀಂಚಲು ಕಣ, ಕರೆಹಟ್ಟಿ, ಸದೆಕೊಟ್ಟಿಗೆಗಳನ್ನು ಬಳಸಿ ಹಿತ್ತಲು ಕಡೆಯ ಬಾಗಿಲಿಗೆ ಹೋದಳು. ಒಳಗೆ ಹಿಲಾಲು ದೀಪಬೆಳಕಿನಲ್ಲಿ ಹಿಟ್ಟು ಕುಟ್ಟುವವರು, ಕಡಬು ಮಾಡುವವರು, ಮಾಂಸ ಬೇಯಿಸುವವರು, ಬಳ್ಳೆ ಬಾಡಿಸುವವರು, ಹೆಂಡ ಗಾಳಿಸುವವರು, ಕಳ್ಳು ಕಾಯಿಸುವವರು, ಕರೆಯುವ, ಮಾತನಾಡುವ ಕೂಗುವ, ಬೈಯುವ, ಗದ್ದಲವೋ ಗದ್ದಲದ ನಡುವೆ ಕೆಲಸಗಳಲ್ಲಿ ತೊಡಗಿದ್ದುದು ಕಂಡುಬಂದಿತು. ಹುರಿದ ಮತ್ತು ಬೇಯಿಸಿದ ಮಾಂಸದ ವಾಸನೆ ಕೆಳ್ಳುಹೆಂಡದ ಕಂಪಿನೊಡನೆ ಬೆರೆತು ಅವಳ ಮೂಗಿಗೆ ಹಿತಕರವಾಗಿತ್ತು.

ಸ್ವಲ್ಪಹೊತ್ತು ಕಾದು, ಸಮಯನೋಡಿ, ತನ್ನ ಸಮೀಪಕ್ಕೆ ಬಂದ ಸುಬ್ಬಿಯನ್ನು ಕೂಗಿ ಕರೆದು, ಚಿನ್ನಮ್ಮಗೆ ತಾನು ಬಂದಿರುವುದನ್ನು ಹೇಳಿ ಕಳಿಸಿದಳು. ಒಳಗೆ ಚಿನ್ನಮ್ಮ ತನ್ನ ಕೋಣೆಯಲ್ಲಿ ತಾನೂ ಸೀರೆ ಉಟ್ಟು, ನಾಗಕ್ಕಗೂ ಹೊಸ ಸೀರೆ ಉಡಿಸುವ ಪ್ರಯತ್ನದಲ್ಲಿದ್ದಳು. ತೆರೆದಿದ್ದ ಸಂದುಕದ ಪಕ್ಕದಲ್ಲಿಯೆ ಇಬ್ಬರ ನಿಂತಿದ್ದರು. ಚಿನ್ನಮ್ಮ ಹಣತೆಯನ್ನು ಸಂದುಕದ ಒಳಗೆ  ಬೆಳಕುಬೀಳುವಂತೆ ಮತ್ತೆ ಮತ್ತೆ ಎತ್ತಿ ಹಿಡಿಯುತ್ತಾ ಒಂದೊಂದೆ ಸೀರೆಯನ್ನು ಎತ್ತಿ ಎತ್ತಿ ತೋರಿಸುತ್ತಿದ್ದಳು. ನಾಗಕ್ಕ ‘ನಾಳೆ ಉಟ್ಟುಕೊಳ್ತೀನಕ್ಕಾ, ಇವತ್ತು ಬ್ಯಾಡ” ಎನ್ನುತ್ತಿದ್ದಳು. ಅರಲ್ಲಿ ಸುಬ್ಬಿ ಬಂದು ಪೀಂಚಲು ಬಂದಿದ್ದುದನ್ನು ತಿಳಿಸಿದಳು. ನಾಗಕ್ಕ “ಹೌದು ಕಣೇ, ನಂಗೆ  ಮರಹೋಯ್ತು ನಿಂಗೆ ಹೇಳಕ್ಕೆ. ನಮ್ಮ ಸಂಗಾಡನೆ ಬಂದ್ಲು, ದಾರೀಲಿ ಸಿಕ್ಕಿ” ಎಂದುಳು. “ಹಾಂಗಾರೆ ಈಗ ಬಂದುಬಿಡ್ತೀನಿ. ನೀ ಉಟ್ಟುಕೊಳ್ತಿರು ಸೀರೇನ.” ಎಂದು ಹೇಳಿ ಚಿನ್ನಮ್ಮ ಓಡಿದಳು, ಹಿತ್ತಲು ಕಡೆಯ ಬಾಗಿಲಿಗೆ.

ಕೆಲಸಮಾಡುತ್ತಿದ್ದರೂ ಅವಳನ್ನು ಕಂಡು ಬೇಗಬೇಗನೆ ಸರಿದು ದಾರಿ ಬಿಡುತ್ತಿದ್ದು ಜನಗಳ ನಡುನಡುವೆ ನುಸಿದು ಅವಸರ ಅವಸರವಾಗಿ ತನ್ನ ಕಡೆಗೆ ಬರುತ್ತಿದ್ದ ಚಿನ್ನಮ್ಮನನ್ನು ದೊರದಿಂದಲೂ ನೋಡುತ್ತಾ ಪೀಂಚಲು ಹಿಗ್ಗಿ ಹಲ್ಲುಬಿಡುತ್ತಾ ನಿಂತಿದ್ದಳು. ಬಾಲ್ಯದಿಂದಲೂ ಪರಿಚಿತೆಯಾಗಿ, ಕೋಣೂರಿಗೆ ಬಂದಾಗಲೆಲ್ಲಾ ಮುಕುಂದಯ್ಯನೊಡನೆ ತಾನೂ ಐತನೂ ಗದ್ದೆ ತೋಟ ಕಾಡುಗಳಲ್ಲಿ ತಿರುಗುತ್ತಿದ್ದಾಗಲೆಲ್ಲ  ತಮ್ಮೊಡನೆ ಸರಿಸಮನಾಗಿ ಸಾಹಸಗಳಲ್ಲಿ ಭಾಗಿಯಾಗುತ್ತಿದ್ದ ‘ಚಿನ್ನಕ್ಕ’ನನ್ನು ಕಂಡು, ಏನು ಹೇಳುವುದಕ್ಕೂ ತೋರದ ಸಂತಸದಿಂದ ಪೀಂಚಲು ಕಣ್ಣರಳಿಸಿ ಹಲ್ಲುಬಿಟ್ಟು, ನಗುತ್ತಾ ನಿಂತಿದ್ದಳು. ಆ ಸಂತೋಷದಲ್ಲಿ ನೂರಾರು ನೆನಪುಗಳು ಹಾಸುಹೊಕ್ಕಾಗಿದ್ದುವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಚಿನ್ನಮ್ಮನೂ ಅವಳನ್ನು ಸ್ವಾಗತಿಸುವಂತೆ ಹಸನ್ಮುಖಿಯಾಗಿ, ತಾನೇ ಮೊದಲು ಮಾತನಾಡಿಸಿದಳು:

“ಏನೇ ಪೀಂಚಿಲಿ, ಎಷ್ಟು ಹೊತ್ತಾಯ್ತೆ ಬಂದು?…. ಐತ ಎಲ್ಲೇ…. ಮುಂಚೆ ಕಡೆ ಅಂಗಳದಾಗೆ ಇದಾನಾ? ಕರೆಯೆ ಅಂವನ್ನೊ!”

ತನ್ನನ್ನು ಬಿಟ್ಟು ತನ್ನ ಗಂಡ ಒಂದು ಕ್ಷಣವೊ ಇರುವುದಿಲ್ಲ ಎಂಬ ಪ್ರತೀತಯನ್ನು ನೆನಪಿಗೆ ತಂದುಕೊಡುವ ಆ ಪ್ರಶ್ನೆಮಾಲಿಕೆಗೆ ನಾಚಿಕೆ ಪಟ್ಟುಕೊಂಡು ತುಟಿ ಹಿಳಯಿಸಿ ನಗುತ್ತಾ ಪೀಂಚಲು ಹೇಳಿದಳು: “ಇಲ್ಲ, ಚನ್ನಕ್ಕ, ಅವರು ಬರಲಿಲ್ಲ. ನಾನೊಬ್ಬಳ ಬಂದೆ…. ಅವರು ಬೆಟ್ಟಳ್ಳಿಗೆ ಪಾದ್ರೀ ಬೀಸೆಕಲ್ಲು ಸವಾರಿ ನೋಡಾಕೆ ಹೋದ್ರು.”

ಅವಳು ತನ್ನ ಗಂಡನನ್ನು ಕುರಿತು ಪ್ರಯೋಗಿಸಿದೆ ಆ ಬಹು  ವಚನವನ್ನು ಗ್ರಹಿಸಿ, ಇಂಗಿತವಾಗಿ ನಗೆಬೀರಿ ಚಿನ್ನಮ್ಮ ವಿನೋದವಾಡಿದಳು: “ನೀ ಎಷ್ಟು ಬದಲಾಯಿಸಿ ಬಿಟ್ಟಿದ್ದೀಯೆ, ಪೀಂಚಲಿ? ಗುಂಡುಗುಂಡಗೆ ಆಗಿಬಿಟ್ಟಿದ್ದೀಯಾ!”….

“ನೀವೂ ಎಷ್ಟು ಚಂದಾಗಿ ಕಾಣ್ತೀರಿ?ಎಷ್ಟು ದೊಡ್ಡಕ್ಕೆ ಆಗಿಬಿಟ್ಟೀರಿ!”

ತಾಯಿಯ ಬಣ್ಣ ಚೆಲುವುಗಳನ್ನೂ ತಂದೆಯ ದೇಹದಾರ್ಢ್ಯವನ್ನೂ ತಾರುಣ್ಯೋಚಿತ ಪ್ರಮಾಣದಲ್ಲಿ ಪಡೆದು ಶೋಭಿಸುತ್ತಿದ್ದಳು ಚಿನ್ನಮ್ಮ-ಎಂಬುದನ್ನು ತನ್ನ ರೊಕ್ಷ ರೀತಿಯಲ್ಲಿ ಹೇಳಿದ್ದಳು ಪೀಂಚಲು.

ಅವಳು ಗಟ್ಟದ ಕೆಳಗಿನವರು ಕಟ್ಟುವ ರೀತಿಯಲ್ಲಿ ಕಟ್ಟಿದ್ದ ತನ್ನ ಸೊಂಟದ ಮಡಿಲಿನಿಂದ ಏನೋ ಒಂದು  ಹಸುರೆಲೆಯ ಪೊಟ್ಟಣವನ್ನು ತೆಗೆದು ನೀಡಿದಳು.

“ಏನೇ ಅದು?” ಚಿನ್ನಮ್ಮನ ದನಿಯಲ್ಲಿ ರಹಸ್ಯದೊಡನೆ ಕುತೂಹಲ ಸ್ಪರ್ಧಿಸುವಂತಿತ್ತು.

“ಕಲ್ಲು ಸಂಪಗೆ ಹಣ್ಣು!”

“ಯಾರು ಕೊಟ್ಟಿದ್ದೆ?” ತನಗೆ ಬೇಕಾಗಿದ್ದವರ ಹೆಸರರು ಹೇಳಿಯೆ ಹೇಳುತ್ತಾಳೆ ಪೀಂಚಲು ಎಂದು ಹಾರೈಸಿ ನಿರೀಕ್ಷಿಸಿದ್ದಳು ಚಿನ್ನಮ್ಮ.

ಅದನ್ನರಿತ ಪೀಂಚಲು ಹುಳ್ಳುಗೆ  ನಗುತ್ತಾ “ ನಾನೆ ತಂದಿದ್ದು” ಎಂದಳು.

“ಗಾಳಿಗೆ ಬಬಿದ್ದಿದ್ದನ್ನ ಹೆರಕಿಕೊಂಡು ಬಂದ್ಯಾ?”

“ಇಲ್ಲ, ಕುಯ್ದಿದ್ದು. “

“ಮರಾ ಹತ್ತಿ?”

“ಹ್ಞೂ!” ಪೀಂಚಲು ಸ್ವರದಲ್ಲಿ ಸವಾಲಿತ್ತು.

“ಈಗಲೂ ನೀ ಮರ ಹತ್ತುತ್ತೀಯೇನೆ?”

“ಹತ್ತಬಾರದೇನು?”

“ಥೂ! ಮದುವೆ ಆದಮೇಲೂ ಹತ್ತಿದರೆ, ದಿಂಡೆಬಸವಿ ಅನ್ನುತ್ತಾರಲ್ಲೇ!”

“ನಾ ಯಾಕೆ ಹತ್ತಲಿ? ಹತ್ತೋರು ಹತ್ತಿ ಕುಯ್ದಿದ್ದು!”

“ಹಾಂಗನ್ನು ಮತ್ತೆ…. ಐತ ಕುಯ್ದಿದ್ದು?”

“ಅಲ್ಲ; ನನ್ನನ್ನ ನಿಮ್ಮ  ಹತ್ರಕ್ಕೆ ಯಾರು ಕಳಿಸಿದಾರೋ ಅವರೇ ಕುಯ್ದಿದ್ದು!” ರಾಗಪೂರ್ಣವಾಗಿತ್ತು ಪೀಂಚಲು ವಾಣಿ.

“ನೀನು ಬಹಳ ಕಿಲಾಡಿ ಕಣೇ!”

“ಯಾಕೆ? ನೀವು ಅವರ  ಹೆಸರು ಹೇಳಿ, ಕೇಳಬಾರದಾ!”

ಹೆಸರು ಹೇಳಿದರೆ ಏನು ಮಹಾ ಎಂದು ಪೀಂಚಲುಗೆ ತನ್ನ ನಿರ್ಲಕ್ಷತೆಯನ್ನು ಪ್ರದರ್ಶಿಸಿ ಅವಳನ್ನು ಪರಾಭವಗೊಳಿಸುವ ಠೀವಿಯಿಂದ ಚಿನ್ನಮ್ಮ ಕೇಳಿಯೆಬಿಟ್ಟಳು “ಮುಕುಂದಬಾವನೇನೆ?

“ಹ್ಕಿಕ್ಹಿಕ್ಹಿಕ್ಹಿ!”  ಪೀಂಚಲು ನಕ್ಕಳಲ್ಲದೆ ಬೇರೆ ಏನನ್ನೂ ಹೇಳದೆ, ಪೊಟ್ಟಣವನ್ನ  ಚಿನ್ನಮ್ಮನ  ಒತ್ತಿಕೊಟ್ಟಳು. ಚಿನ್ನಮ್ಮ ಆ ಅಲ್ಪವನ್ನೂ ಅತ್ಯಂತ ಮಮತೆಯಿಂದ ಅಂಜಲಿಬದ್ದಳಾಗಿ ತೆಗೆದುಕೊಂಡು ತನ್ನ ಮಡಿಲಲ್ಲಿ ಅವಿಸಿಟ್ಟುಕೊಂಡಳು.

“ನಿಂಗೊಂದು ಸೀರೆ ತಂದುಕೊಂಡ್ತೀನೆ. ಇಲ್ಲೇ ಕತ್ತಲೆ ಮರೇಲಿ ಉಟ್ಟಕೊ. ಆಮ್ಯಾಲೆ ಅವುಂತ್ಲ ಉಂಡುಕೊಂಡು ಹೋಗಬದೌಂತೆ….”

“ಇಲ್ಲ, ಚಿನ್ನಕ್ಕಾ” ಗಂಭೀರವಾಣಿಯಿಂದ ಹೇಳುತ್ತಿದ್ದಳು ಪೀಂಚಲು “ನಾ ಈಗಲೆ ಹೋಗಬೇಕು; ಅವರು-ಅವರು ಬೆಟ್ಟಳ್ಳಿಯಿಂದ ಬರಾದರೊಳಗೇ ನಾ ಬಿಡಾರದಾಗಿರಬೇಕು… “

“ಯಾಕೆ? ಏನವಸರಾನೆ ನಿನಗೆ? ಗಂಡನಂತೆ ಹೆಂಡತಿ ಆಗಿಬಿಟ್ಟಿದ್ದೀಯಲ್ಲಾ!…”

“ನಾ ಅವರಿಗೆ ಹೇಳಿಬಂದಿಲ್ಲ.”

“ಕದ್ದು ಬಂದೀಯೇನೆ?…”

“ಹ್ಞೂ! ಕದ್ದೇಬಂದೀನಿ!…”

ಪೀಂಚಲು ಧ್ವನಿ ರಹಸ್ಯಮಯವಾಗಿದ್ದುದನ್ನೂ ಅವಳ ಕಣ್ಣಿನ ಇಂಗಿತ ಭಂಗಿಯನ್ನೂ ಗಮನಿಸಿ, ಕಾತರೆಯಾಗಿ “ಏನೆ ಅದು?” ಎಂದಳು ಚಿನ್ನಮ್ಮ.

ಅಲ್ಲಿ ನಡೆಯುತ್ತಿದ್ದ ಗಲಾಟೆಯಲ್ಲಿ ಇವರ ಸಂವಾದ ಯಾರಿಗೂ ಕೇಳಿಸುತ್ತಿರಲಿಲ್ಲ; ಯಾರೂ ಇವರನ್ನು ಗಮನಿಸುತ್ತಲೂ ಇರಲಿಲ್ಲ. ಆದರೂ ಪೀಂಚಲು ಸುತ್ತಮುತ್ತ ಕಳ್ಳಕಣ್ಣು ಹಾಯಿಸಿದಳು. ಚಿನ್ನಮ್ಮನನ್ನು ತಾನು ಮುಟ್ಟಬಾರದು ಎಂಬುದನ್ನು ಮರೆತುಬಿಟ್ಟು ಅವಳ ಕೈಹಿಡಿದು ಪಕ್ಕಕ್ಕೆ ಬೆಳಕಿನಿಂದ ಕತ್ತಲೆಗೆ ಎಳೆದಳು. ಕತ್ತಲೆಯಲ್ಲಿ ಇಬ್ಬರೂ ಮರೆಯಾದ ಮೇಲೆ ಕಿವಿಯಲ್ಲಿ ಪಿಸುಗುಟ್ಟಿದಳು.

ಹಠಾತ್ತನೆ ಮೈಮೇಲೆ ಬಿಸಿನೀರು ಚೆಲ್ಲಿದಂತಾಯ್ತು ಚಿನ್ನಮ್ಮಗೆ. ಏನು ಉತ್ತರ ಹೇಳಬೇಕೊ ತಿಳಿಯದೆ ಪ್ರಜ್ಞೆ ತುಸು ತತ್ತರಿಸಿದಂತಾಯಿತು. ಮತ್ತೆ ನಿತ್ತರಿಸಿ “ನಾಳೆ ಬೇಡ ಅಂತಾ ಹೇಳು. ಎಂತಿದ್ದರೂ ಅಕ್ಕಯ್ಯನ ಬಾಲೆ ತೊಟ್ಟಿಲಿಗೆ ಹಾಕೋ ಮನೆಗೆ ನಾನು ಬಂದೇ ಬರ್ತಿನಲ್ಲಾ?” ಗದ್ಗದವಾಗತೊಡಗಿದ್ದ ದನಿಯಿಂದ ಮತ್ತೆ ಮುಂದುವರೆಸಿದಳು “ಹಾಂಗಾದ್ರೆ ಈಗ್ಲೇ ತಂದುಕೊಡ್ತೀನಿ, ಇಲ್ಲೇ ನಿಂತಿರು.” ಮತ್ತೆ ನಿಡಿದಾಗಿ ಸುಯ್ದಳು, ಪೀಂಚಲು ಕೈಯ್ಯನ್ನು ಬಲವಾಗಿ ಒತ್ತಿ ಹಿಡಿದು, “ಪೀಂಚಲಿ, ಏನು ಮಾಡಾನೇ”

ಮುಳುಗುವವನು ತನ್ನನ್ನು ರಕ್ಷಿಸು ಎಂದು ಹುಲ್ಲು ಕಡ್ಡಿಯನ್ನೂ ಅಪ್ಪಿಕೊಳ್ಳುವಂತೆ. ತನ್ನಂತಹ ಅಲ್ಪೆಯ ಸಲಹೆಯನ್ನೂ ಕೇಳುವ ಸ್ಥಿತಿಗಿಳಿದಿದ್ದ ಹೂವಳ್ಳಿ ವೆಂಕಪ್ಪನಾಯಕರ ಹಿರಿಯ ಮಗಳಿಗೆ, – ಸಮಯಸ್ಪೂರ್ತಿಯ ಮಹಿಮೆಯೋ ಏನೋ? ಪೀಂಚಲು ದೃಢವಾಣಿಯಿಂದ ಧೈರ್ಯ ಹೇಳಿಯೆಬಿಟ್ಟಳು: “ನೋಡಾನ ಬಿಡಿ, ಚಿನ್ನಕ್ಕಾ; ಹೆದರಬ್ಯಾಡಿ, ದೇವರಿದ್ದಾನೆ! ಅಲ್ಲಿಗೂ ಬಂದರೆ, ನಾವೆಲ್ಲ ಇಲ್ಲೇನು?”

ಚಿನ್ನಮ್ಮ ತನ್ನ ಉದ್ವೇಗವನ್ನು ಯಾರಿಗೂ ಅನುಮಾನ ಬರದ ರೀತಿಯಲ್ಲಿ ಮರೆಮಾಚಿಕೊಂಡು ಒಳಗೆ ಹೋದಳು. ತುಸು ಹೊತ್ತಿನೊಳಗೆ ಒಂದು ಹೊಸ ಸೀರೆಯನ್ನೂ, ಕಡುಬು ತುಂಡು ಹಾಕಿದ್ದ ಒಂದು ಗುಂಡಾಲವನ್ನೂ, ಹೋಳಿಗೆ ಸುತ್ತಿದ್ದ ಒಂದು ಬಳ್ಳೆಕೀತಿನ ಪೊಟ್ಟಣವನ್ನೂ ತಂದಿತ್ತಳು. ಅದನ್ನೆಲ್ಲ ತೆಗೆದುಕೊಂಡು ಪೀಂಚಲು ಬೇಗ ಬೇಗನೆ ಸರಿದು ಕತ್ತಲೆಯಲ್ಲಿ ಕರಗಿಹೋದಳು.

ಚಿನ್ನಮ್ಮ ತನ್ನ ಕೋಣೆಗೆ ಹಿಂದಕ್ಕೆ ಹೋಗಿ ನೋಡುತ್ತಾಳೆ, ನಾಗಕ್ಕ ಹೊಸಸೀರೆ ಉಟ್ಟುಕೊಂಡಿಲ್ಲ; ಸಂದೂಕವನ್ನೂ ಮುಚ್ಚಿ ಅದರ ಮೇಲೆ ಕೂತಿದ್ದಾಳೆ, ಕಾಲು ಇಳಿಬಿಟ್ಟುಕೊಂಡು. ಚಿನ್ನಮ್ಮನನ್ನು ನೋಡಿದೊಡನೆ ನಾಗಕ್ಕಗೆ ಏನೊ ಅನುಮಾನವಾದಂತಾಗಿ “ಯಾಕೆ, ಚಿನ್ನಮ್ಮ, ಏನೋ ಒಂದು ತರಾ ಮಾಡಿಕೊಂಡೀಯಲ್ಲಾ ಮಖವಾನ?” ಎಂದು ಕೇಳಿ, ತಟಕ್ಕನೆ ಎದ್ದುನಿಂತು ಹತ್ತಿರಕ್ಕೆ ಬಂದಳು.

“ಮತ್ತೆ? ನೀನು ಸೀರೆ ಉಟ್ಟುಕೋ ಅಂದರೆ ಬ್ಯಾಡ ಅಂತಿದ್ದೀಯಲ್ಲಾ?” ಎಂದಾಡಿ ಚಿನ್ನಮ್ಮ ದಿಕ್ಕುತಪ್ಪಿಸಿಯೆಬಿಟ್ಟಳು ನಾಗಕ್ಕಗೆ.

“ಅಯ್ಯೋ, ಪುಣ್ಯಾತಗಿತ್ತಿ, ಅದಕ್ಕೆ ಯಾಕೆ ಅಳುಮಾರೆ ಮಾಡಿಕೊಂಡೀಯಾ?” ಎಂದವಳೆ ಸಂದುಕಿದ ಬಾಗಿಲು ತೆರೆದು, ಚಿನ್ನಮ್ಮ ತನಗಾಗಿ ಅರಿಸಿದ್ದ ಹೊಸ ಸೀರೆಯನ್ನು, ಅಲ್ಲಿಯೆ ಮೂಲೆಯಲ್ಲಿ, ಅವಳೆದುರಿಗೇ ಉಡತೊಡದಿದಳು, ಬಾಗಿಲ ತಾಳ ಭದ್ರವಾಗಿ ಹಾಕಿದೆಯೆ ಎಂಬುದನ್ನು ನೀಡಿಕೊಂಡು…

ನಡು ರಾತ್ರಿಯ ಹೊತ್ತಿಗೆ ದೆಯ್ಯದ ಹರಕೆಯ ಅಡಾವುಡಿಯೆಲ್ಲ ಪೂರೈಸಿ, ಹೊರಗಿನಿಂದ ಬಂದಿದ್ದ ಆಳುಕಾಳುಗಳೆಲ್ಲ ತಿಂದು, ಕುಡಿದು, ತಣಿದು ತೇಗುತ್ತಾ ಹೊರಟು ಹೋದರು, “ನಮ್ಮ ನಾಯಕರನ್ನು ಬಿಟ್ಟರೆ ಇಲ್ಲ” ಎಂದು ತಮ್ಮ ತಮ್ಮೊಳಗೆ ಮೆಚ್ಚುಗೆಯ ಮಾತಾಡಿಕೊಳ್ಳುತ್ತಾ. ಎಂತಹ ಉಸುಬಿನ ಹುಸಿ ತಳಹದಿಯ ಮೇಲೆ ನಾಯಕರ ಔದಾರ್ಯಗೋಪುರ ತತ್ತರಿಸುತ್ತ ನಿಂತಿತ್ತು ಎಂಬುದು ಅವರಿಗೇನು ಗೊತ್ತು?

ಹರಕೆಗೆಂದು ಬಂದಿದ್ದ ಕೆಳವರ್ಗದ ನೆಂಟರೆಲ್ಲರೂ ಒಬ್ಬಿಬ್ಬರು ‘ಗಿರಾಸ್ತರು’ ವಿನಾ ಎಲ್ಲರೂ ಹೋರಟುಹೋಗಿದ್ದರೂ; ‘ಗರ್ತೇರು’ ಮಾತ್ರ, ನಾಲ್ಕಾರು ದೂರುದೂರುಗಳ ಹತ್ತಿರದ ಸಂಬಂಧಿಗಳು, ನಾಳೆ ಬೆಳಿಗ್ಗೆ ಹೊರಡುವ ನಿರ್ಣಯ ಮಾಡಿ ಉಳಿದುಕೊಂಡಿದ್ದರು. ಅವರಲ್ಲಿ ಕೆಲವರಿಗೆ ಆಗಲೆ ಔತಣದ ಪರಿಣಾಮ ತೋರತೊಡಗಿದ್ದರಿಂದ ರಾತ್ರಿ ಹೊರಕಡೆಗೆ ಹೋಗಲು ಅನುಕೂಲವಾಗುವಂತೆಯೂ ತೋರತೊಡಗಿದ್ದರಿಂದ ರಾತ್ರಿ ಹೊರಕಡೆಗೆ ಹೋಗಲು ಅನುಕೂಲವಾಗುವಂತೆಯೂ ಮತ್ತೆ ಮತ್ತೆ ಎದ್ದು ವಾಂತಿ ಮಾಡಲು ಹೆಚ್ಚು ಶ್ರಮವಾಗದಂತೆಯೂ ಹಿತ್ತಲು ಕಡೆಗೆ ಹತ್ತಿರದ ಗೃಹಭಾಗದಲ್ಲಿಯೆ ಮಲಗಲು ಸ್ಥಳಾವಕಾಶ ಕಲ್ಪಿಸಿದ್ದರು.

ಪೀಂಚಲು ಸಂಗಡ ಮಾತಾಡಿ ಬಂದ ಮೇಲೆ ಚಿನ್ನಮ್ಮನ ರೀತಿಯಲ್ಲಿ ಏನೊ ಬದಲಾವಣೆಯಾಗಿದ್ದುದನ್ನು ನಾಗಕ್ಕ ಗಮನಿಸಿದ್ದಳು. ಚಿನ್ನಮ್ಮ ಹೇಳಿದಂತೆಲ್ಲ ಮಾಡಿ, ಅವಳ ಮನಸ್ಸನ್ನು ಮೊದಲಿನ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದ್ದಳು. ಆದರೂ ಅವಲು ಆಗಾಗ ದೀರ್ಘ ಮೌನಿಯಾಗುತ್ತಲೊ, ಬಹಿರ್ವ್ಯಾಪಾರಗಳಲ್ಲಿ ತೊಡಗಿರುವಾಗಲೂ ತಪ್ಪಿ, ತಡವಿ, ತೊದಲಿ, ತನ್ನ ಅಂತರ್ಮುಖಿತ್ವದ ಗುಟ್ಟು ಬಿಟ್ಟುಕೊಡುತ್ತಲೊ ಇರುತ್ತಿದ್ದದನ್ನು ನೋಡಿದ್ದಳು. ಮಲಗಿಕೊಳ್ಳಲು ಹೋಗುವ ಸಮಯ ಬಂದಾಗ, ಚಿನ್ನಮ್ಮ ಎಂದಿನಂತೆ ತನ್ನ ಅಜ್ಜಿಯ ಸಂಗಡ ಮಲಗಲು ಅವಳ ಕೋಣೆಗೆ ಹೊರಟಳು. ನಾಗಕ್ಕ ತಾನೂ ಚಿಕ್ಕಮ್ಮನೂ ಒಟ್ಟಿಗೆ ಚಿನ್ನಮ್ಮನ ಕೋಣೆಯಲ್ಲಿಯೆ ಮಲಗುವ ಸೂಚನೆಯನ್ನೂ ಮುಂದಿಟ್ಟಾಗ ಅವಳು ಎಂದಿನಂತೆ ಯಾವ ಉತ್ಸಾಹವನ್ನೂ ತೋರಿಸದೆ ಉದಾಸಭಾವದಿಂದ “ಅಲ್ಲಿ ಬ್ಯಾರೆ ಯಾರಿಗೊ ನೆಂಟರಮ್ಮೋರಿಗೆ ಹಾಸಗೆ ಹಾಸಿಕೊಟ್ಟಾರೆ ಕಣೇ. ನಾನು ಇವತ್ತು ಅಜ್ಜಿ ಹತ್ರಾನೆ ಮನಗ್ತೀನಿ. ನಿಂಗೂ ನಾಗತ್ತೆಗೂ ಓ ಅಲ್ಲಿ ಕೆಳಗಿನ ದೊಡ್ಡ ಕೋಣೇಲಿ ಹಾಸಿದ್ದಾರೆ” ಎಂದು ಹೇಳಿದಳು.

ಚಿನ್ನಮ್ಮ ಮಲಗಲು ಹೋದ ಮೇಲೆ ನಾಗಕ್ಕ ತನ್ನ ಅತ್ತೆಯನ್ನು ನಿರೀಕ್ಷಿಸುತ್ತಾ ಕಾಯತೊಡಗಿದಳು. ಮನೆ ಒಟ್ಟಿನಲ್ಲಿ ನಿಃಶಬ್ದವಾಗಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಗೊರಕೆ ಹೊಡೆಯುವ ಸದ್ದೂ ಕೇಳಿಸತೊಡಗಿತ್ತು. ಹಿತ್ತಲು ಕಡೆ ಬಾಗಿಲಾಚೆ ಯಾರೋ ವಾಂತಿ ಮಾಡಿದ ಸದ್ದು ಒಮ್ಮೆ ಕೇಳಿಸಿತ್ತು. ಮನೆಯ ಹಿಂದಣ ಗುಡ್ಡದ ಕಾಡಿನಲ್ಲಿ ಒಂದು ಕಡವೋ ಕಾಡುಕುರಿಯೋ, ನಾಯಿ ಬೊಗಳಿದಂತೆ, ಆದರೆ ಕೋವಿಯ ಈಡು ಹೊಡೆದಂತೆ ಗಟ್ಟಿಯಾಗಿ, ಅರಚಿದ್ದೂ ಕೇಳಿಸಿತ್ತು. ಸಮಾರಾಧನೆಯ ಎಂಜಲೆಲೆಗಳಿಗೆ ನೆರೆದಿದ್ದ ಮೂಳು ಕುನ್ನಿಗಳ ಕಚ್ಚಾಟವೊ ಆಗಾಗ್ಗೆ ಕಿವಿಗೆ ಬರುತ್ತಿತ್ತು.

ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಮಾಡದೆ ಇರುವುದು ಬಹಳ ಕಾಲದಿಂದ ಅಭ್ಯಾಸವಾಗಿದ್ದ ನಾಗಕ್ಕನಿಗೆ ಇವತ್ತು ಏಕೋ ಬಹಳ ತೂಕಡಿಕೆ; ಕಣ್ಣು ಪ್ರಯತ್ನಪೂರ್ವಕವಾಗಿ ತೆರೆದಷ್ಟೂ ಮುಚ್ಚಿಕೊಳ್ಳುತ್ತಿತ್ತು. ಕಡೆ ಕಡೆಗೆ ಅಲ್ಲಿಯೆ ಮಲಗಿಕೊಂಡುಬಿಡಲೇ ಎನ್ನಿಸತೊಡಗಿತ್ತು. ಅತ್ತೆ ಎಲ್ಲಿಗೆ ಹೋದಳು? ಯಾರ ಹತ್ತಿರ ಏನು ಹರಟೆ ಪಂಚಾಯಿತಿ ಮಾಡುತ್ತಿದ್ದಾಳೆ? ಅದೇಕೆ ಇಷ್ಟು ತೂಕಡಿಕೆ? ಯಾವತ್ತು ಇಲ್ಲದ್ದು? ಬಹುಶಃ ಆ ದಿನ ಬೆಳಿಗ್ಗೆ ಮುಂಚೆಯಿಂದಲೂ ನಡೆದೂ ನಡೆದೂ, ಗುಡ್ಡವೇರಿ ಕಣಿವೆಯಿಳಿದು ಕಾಡುದಾಟಿ ಬಂದಿದ್ದ ಬಳಲಿಕೆಯ ಕಾರಣವಾಗಿರ ಬಹುದಲ್ಲವೆ? ಅವಳು ಕಳ್ಳು ಹೆಂಡಗಳನ್ನೂ ಕಡುಬು ತುಂಡಿನ ಜೊತೆ ಚೆನ್ನಾಗಿಯೆ ಕುಡಿದಿದ್ದಳು. ತನ್ನ ಅತ್ತೆ ಬೇರೆ ತನ್ನ ಪಕ್ಕದಲ್ಲಿ ಕುಳಿತುಕೊಂಡು ನಂಟರಿಗೆ ಉಪಚಾರ ಮಾಡುವಂತೆ ತನಗೆ ಬೇಡವೆಂದರೂ ಕಳ್ಳು ಹೆಂಡಗಳನ್ನು ದೊನ್ನೆಗೆ ಬೊಗಿಸಿದ್ದಳು. ಅವಳೂ, ಅಳತೆ ಮೀರಿಯೆ ಎಂದು ತೋರುತ್ತದೆ, ಕುಡಿದಿದ್ದಳು. ಇಲ್ಲದಿದ್ದರೆ ಇಂತಹ ತೂಕಡಿಕೆ,  ಇಂತಹ ನಿದ್ದೆ ಎಲ್ಲಿಂದ ಬರಬೇಕು?

“ನಾಗೂ, ಮನಗಾಕ್ಕೆ ಬರಾದಿಲ್ಲೇನೆ?” ಎಂದು ತನ್ನ ಬಳಿಯೆ ನಿಂತು ನಾಗತ್ತೆ ಕರೆದಾಗಲೆ ಬೆಚ್ಚಿಬಿದ್ದು ಎಚ್ಚೆತ್ತುಕೊಂಡು ಎದ್ದು ನಿಂತಳು.

“ಎಚ್ಚರ ಮಾಡಿಕೊಳ್ಳೆ. ಹೊಂಗಿಬಿದ್ದೀಯಾ? ಬಾ!”

ನಾಗತ್ತೆಯ ಹಿಂದೆ ಹೋಗಿ ಒಂದು ದೊಡ್ಡ ಕೋಣೆಯಲ್ಲಿ ಹಾಸಿದ್ದ ಹಾಸಗೆಯ ಮೇಲೆ ಮಗ್ಗುಲಾಗಿದ್ದಳೊ ಇಲ್ಲವೊ ಗಾಢ ನಿದ್ರೆಗೆ ಅದ್ದಿಹೋಗಿದ್ದಳು ನಾಗಕ್ಕ. ಬಾಗಿಲು ಮುಚ್ಚಿ, ತಾಳ ಹಾಕಿಕೊಂಡು ಬಂದು, ದೀಪ ಆರಿಸಿ ನಾಗಕ್ಕನ ಒತ್ತಿನಲ್ಲಯೆ ಮಲಗಿದಳು ನಾಗತ್ತೆ.

ಮಲಗುವ ಮುನ್ನ ನಾಗಕ್ಕನ ಪ್ರಜ್ಞೆ ಎಂದಿನಂತೆ ಎಚ್ಚತ್ತಿದ್ದರೆ, ಅವಳಿಗೆ ಅಚ್ಚರಿಯಾಗುತಿತ್ತು, ತನಗಾಗಿ ಹಾಸಿದ್ದ ಹಾಸಗೆಯನ್ನು ನೋಡಿ! ಒಂದು ಚಾಪೆ, ಒಂದು ಕಂಬಳಿ, ಹೆಚ್ಚು ಎಂದರೆ ಒಂದು ಸಣ್ಣ ಜಮಖಾನ, ಇಷ್ಟರ ಮಿತಿಗೆ ಹಿಂದೆಂದೂ ಮೀರಿರಲಿಲ್ಲ ತನಗೆ ಮಲಗಲು ಒದಗುತ್ತಿದ್ದ ಹಾಸಗೆಯ ವೈಭವ. ಇವತ್ತು ದಪ್ಪನೆಯ ಹತ್ತಿಯ ತಡಿಯಮೇಲೆ ಬಿಳಿಯ ಮಗ್ಗುಲುಹಾಸಗೆ ಹಾಸಿತ್ತು. ಕಂಬಳಿಗೆ ಬದಲಾಗಿ ಒಂದು  ಶಾಲು ಇತ್ತು. ಮೃದುವಾಗಿ ಶುಚಿಯಾಗಿದ್ದ ತಲೆದಿಂಬು ಬೇರೆ!

ನಾಗತ್ತೆಗೆ ಇನ್ನೂ ನಿದ್ದೆ ಬಂದಿರಲಿಲ್ಲ. ಬೇಗ ನಿದ್ದೆ  ಬರುವಂತಹ ಮನಃಸ್ಥಿತಿಯಲ್ಲಿಯೂ ಅವಳು ಇರಲಿಲ್ಲ. ತಾನು ಹೂಡಿದ್ದ ಸಂಚಿನ ಸಫಲತೆಗಾಗಿ ಅವಳ ಜೀವ ಕಾತರಿಸಿತ್ತು. ಅಷ್ಟರಲ್ಲಿ, ಮುಚ್ಚಿ ತಾಳಹಾಕಿ ಭದ್ರಮಾಡಿದ್ದ  ಬಾಗಿಲಮೇಲೆ ಆಚೆಕಡೆಯಿಂದ ಯಾರೋ ಕೈ ಆಡಿಸಿದ ಸದ್ದಾಯಿತು. ಅವಳೂ ಅದನ್ನೆ  ನಿರೀಕ್ಷಿಸುತ್ತಿದ್ದಳು; ಆದರೆ ಅಷ್ಟು ಬೇಗನೆ ಅಲ್ಲ! ವೆಂಕಪ್ಪನಾಯಕರ ಕಾಮಾತುರತೆ ಪ್ರಕಟವಾಗಿದ್ದ ಆ ಅಶ್ಲೀಲ ತರಾತುರಿಗೆ ನಾಗತ್ತೆಯೂ ಸಿಡುಕಿದಳು “ಈ ಎಂಕಟಣ್ಣಗೆ ಏನು ಅವಸರಾನೊ? ಒಂದು ಗಂಟೆನಾದ್ರೂ ಬಿಟ್ಟು ಬಾ ಅಂದೀನಿ! ಅಷ್ಟರಲ್ಲಿಯೆ ಓಡಿ ಬಂದಾನೆ?”

“ನಾಗೂ, ನಾಗೂ, ನಿದ್ದೆ ಬಂತೇನೆ?” ಮೆಲ್ಲಗೆ ಕರೆದಳು. ಸೊಸೆಯ ಉಸಿರಾಟದಿಂದಲೆ ಅವಳಿಗೆ ಗೊತ್ತಾಯಿತು, ತಾನು ಕಳ್ಳಿನಲ್ಲಿ ಹಾಕಿಕೊಟ್ಟಿದ್ದ ಮದ್ದು ಚೆನ್ನಾಗಿ ಕೆಲಸಮಾಡುತ್ತಿದೆ ಎಂದು. ಮೈಯ ಮುಟ್ಟಿ ಅಲುಗಾಡಿಸಿಯೂ ನೋಡಿ ಖಾತ್ರಿ ಮಾಡಿಕೊಂಡಳು. ಒಂದು ಗಂಟೆಯಾದರೂ ತಾನೂ ಆ ಮೆತ್ತನೆಯ ಹಾಸಗೆಯಲ್ಲಿ ಪವಡಿಸುತ್ತೇನೆ ಎಂದು ಹಾರೈಸಿದ್ದಳು. ಅದಕ್ಕೂ ಭಂಗಬಂದಿತ್ತು! “ ಎಷ್ಟು ಬೇಗ ಬಂದು ಬಿಟ್ಟಿದಾನೆ ಈ ಎಂಕಟಣ್ಣ?”

ಕತ್ತಲೆ, ಕಗ್ಗತ್ತಲೆ, ಕವಿದಿತ್ತು ಕೋಣೆಯಲ್ಲಿ. ನಾಗತ್ತೆ ಎದ್ದಳು. ಕೈ ಅಂದಾಜಿನಿಂದಲೆ ತೆಡುವುತ್ತಾ ಬಾಗಿಲೆಡೆಗೆ ಬಂದು, ಸದ್ದಾಗದಂತೆ ತಾಳ ತೆಗೆದಳು. ಬಾಗಿಲು ಮೆಲ್ಲನೆ ಅರೆ ತೆರೆಯಿತು. ಏನೋ ಪಿಸುಮಾತು! ನಾಗತ್ತೆ ಹೊರಕ್ಕೆ ಹೋದಳು! ವೆಂಕಟಣ್ಣ ಒಳಗೆ ಹೋಗಿ ಸದ್ದಾಗದಂತೆ ಬಾಗಿಲು ಮುಚ್ಚಿ, ತಾಳ ಹಾಕಿಕೊಂಡನು!

ಆ ಇರುಳು ಎಂತಹ ಮಧುರಾನುಭವದ ಎಂತಹ ಸವಿಗನಸು ಬಿತ್ತೊ ನಾಗಕ್ಕಗೆ!