೧೮೯೩ ನೆಯ ಇಸವಿ ಸೆಪ್ಟೆಂಬರು ೧೧ನೆಯ ತೇದಿ ಸೋಮವಾರ ತೀರ್ಥಹಳ್ಳಿಯ ಪಾದ್ರಿ ಅಥವಾ ಉಪದೇಶಿ ಜೀವರತ್ನಯ್ಯ ಕಾಡುದಾಟಿ, ಆಗತಾನೆ ಕಳೆಕಿತ್ತು ತೆವರು ಕುಯ್ಲಾಗಿದ್ದ ಗದ್ದೆಕೋಗಿನ ಅಂಚುಗಳನ್ನು ಹತ್ತಿ ಹಾರಿ, ತೋಟದ ಬೇಲಿಯ ತಡಬೆಯನ್ನು ಎಚ್ಚರಿಕೆಯಿಂದ ಏರಿ ಇಳಿದು, ಅಡಕೆ ಮರದ ಸಾರದ ಮೇಲೆ ಅಡೆಹಳ್ಳವನ್ನು ಉತ್ತರಿಸಿ, ಮನೆಯೆಡೆಯ ಕಣದ ಬೇಲಿಯೊಡ್ಡಿಗೆ ಹಾಕಿದ್ದ ಉಣುಗೋಲನ್ನು ಸರಿಸಿ, ಸಿಂಧುವಳ್ಳಿ ಮನೆಗೆ ಪ್ರವೇಶಿಸಿದಂದು ತಾನು ಎಂತಹ ಲೋಕಪ್ರಸಿದ್ಧವಾಗಲಿರುವ ಜಗದ್ ಭವ್ಯ ಮಹದ್‌ಘಟನೆಯೊಂದರೊಡನೆ ಪ್ರತಿಸ್ಪರ್ಧಿಯಾಗಿದ್ದೇನೆ ಎಂಬುದನ್ನು ಅರಿತಿರಲಿಲ್ಲ: ಆ ದಿನವೆ ಕ್ರೈಸ್ತಮತ ಶ್ರದ್ಧೆಯ ಮತ್ತು ಮಿಶನರಿ ಮತಾಂಧತೆಯ ಶಕ್ತಿ ಕೇಂದ್ರವಾಗಿದ್ದ ಅಮೆರಿಕಾ ದೇಶದ ಚಿಕಾಗೊ ನಗರದಲ್ಲಿ ನೆರೆದಿದ್ದ ಸರ್ವಧರ್ಮಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂಧರ್ಮದ ಮತ್ತು ವೇದಾಂತ ದರ್ಶನದ ಮಹೋನ್ನತಿಯನ್ನೂ ವಿಶ್ವ ವೈಶಾಲ್ಯವನ್ನೂ ತಮ್ಮ ಸಿಂಹಕಂಠದಿಂದ ಘೋಷಿಸಿದ್ದರು! ಅದನ್ನು ಆಲಿಸಿದ್ದ ಅನ್ಯಧರ್ಮೀಯ ವಿದ್ವಜ್ಜನಸಮೂಹವು ಆನಂದೋನ್ಮತ್ತವಾಗಿ ಜಯಘೋಷ ಮಾಡಿತ್ತು! ಹಿಂದೂಧರ್ಮ ಮತ್ತು ವೇದಾಂತ ದರ್ಶನದ ದಿಗ್ವಿಜಯಧ್ವಜ ಗಗನಚುಂಬಿಯಾಗಿ ಏರಿ ಹಾರಿ ಲೋಕಲೋಚನಗಳನ್ನೆ ಬೆರಗುಗೊಳಿಸಿತ್ತು! ವಿಂಧ್ಯ ಹಿಮಾಚಲ ಸಹ್ಯಾದ್ರಿಗಳಲ್ಲಿಯೂ ಆ ದಿವ್ಯಧ್ವನಿ ಅನುಕರಣಿತವಾಗಿತ್ತು!

ಆಗಿತ್ತೆ? ಎಲ್ಲಿ ಆಗಿತ್ತು? ಹಾಗಿದ್ದರೆ ಉಪದೇಶಿ ಜೀವರತ್ನಯ್ಯ ಸಿಂಧುವಳ್ಳಿ ಚಿನ್ನಪ್ಪಗೌಡರನ್ನು ಕಿಲಸ್ತರ ಜಾತಿಗೆ ಸೇರಿಸಲು ಎಂದಿಗಾದರೂ ಸಾಧ್ಯವಾಗುತ್ತಿತ್ತೇ? ನಿಜ, ಅವರಿನ್ನೂ ಸೇರಿರಲಿಲ್ಲ: ಆದರೆ, ದೀವದಾನೆ ಕಾಡಾನೆಯನ್ನು ಆಕರ್ಷಿಸಿ ಖೆಡ್ಡಾಕ್ಕೆ ಕೆಡಹಲು ಪ್ರಯತ್ನಿಸುವಂತೆ, ಪಾದ್ರಿ ಜೀವರತ್ನಯ್ಯ ಚಿನ್ನಪ್ಪನ ಕಾಲಡಿಯ ಕುರುಡು ಆಚಾರ ಮತ್ತು ಮೂಢ ನಂಬಿಕೆಗಳ ಭೂಮಿಯನ್ನು ಸಡಿಲಗೊಳಿಸಿ, ಅಗೆದು ತೆಗೆದು, ಕ್ರೈಸ್ತ ಮತದ ಖೆಡ್ಡಾಕಂದಕವನ್ನು ಮೆಲ್ಲಗೆ ನಿರ್ಮಿಸುತ್ತಿದ್ದನು.

ಅತ್ತ ಉತ್ತರಾರ್ಧಗೋಲದ ಬಹುದೂರ ಸಾಗರದಾಚೆಯ ಒಂದು ಆಧುನಿಕ ನಾಗರಿಕತೆಯ ಮತ್ತು ವೈಜ್ಞಾನಿಕ ಪ್ರಗತಿಯ ಶ್ರೀಮಂತ ದೇಶದಲ್ಲಿ ಪ್ರಪ್ರಾಚೀನ ಭಾರತ ಸಂಸ್ಕೃತಿಯ ಸರ್ವೋತ್ತಮ ಪ್ರತಿನಿಧಿಯೊಬ್ಬನು ವೇದಾಂತ ದರ್ಶನದ ಮೇಲೆ ನಿಂತಿರುವ ಸನಾತನ ಹಿಂದೂಧರ್ಮದ ಸರ್ವೋತ್ಕ್ರಷ್ಟತೆಯನ್ನು  ಅಧಿಕಾರವಾಣಿಯಿಂದ ಪ್ರಸಾರ ಮಾಡುತ್ತಿದ್ದಾಗಲೆ, ಅದನ್ನೆಲ್ಲ ಸದ್ದುಗದ್ದಲವಿಲ್ಲದೆ ಮೂದಲಿಸುವಂತೆ, ಯಃಕಶ್ಚಿತ ಪಾದ್ರಿಯೊಬ್ಬನು – ಅದರಲ್ಲಿಯೂ ನೇಟಿವ್ ಪಾದ್ರಿ – ಘೋರಾರಣ್ಯ ಮಯವಾದ ಸಹ್ಯಾದ್ರಿ ಶ್ರೇಣಿಯ ಮಲೆನಾಡಿನ ಕೊಂಪೆಯ ಅಜ್ಜ ಬೇಸಾಯಗಾರನೊಬ್ಬನಿಗೆ ಹಿಂದೂಧರ್ಮದ ಅನಾಚಾರ, ಅವಿವೇಕ, ಸಂಕುಚಿತ ಮನೋಭಾವ, ಜಾತಿ ಮತ ಪಕ್ಷಪಾತ, ಬ್ರಾಹ್ಮಣರ ತಿರಸ್ಕಾರ, ಶೂದ್ರರ ದೈನ್ಯ, ಅಧೋಗತಿ, ಕಲ್ಲು ಮಣ್ಣು ಪರೋಪಕಾರ, ಪರಾನುಕಂಪನ ನೀತಿ, ತ್ಯಾಗ, ಭಕ್ತಿ, ಉದ್ದಾರಕ ಸಾಮರ್ಥ್ಯ ಇತ್ಯಾದಿಗಳನ್ನೂ – ಕುರಿತು ಮನಮುಟ್ಟುವಂತೆ ಉಪದೇಶ ಮಾಡುತ್ತಿದ್ದನು, ಗೌಡನ ಮನೆಯ ಚಾವಡಿಯಲ್ಲಿಯೆ ಕುಳಿತು, ಅವನ ಗದ್ದೆ, ತೋಟ, ಅಂಗಳದ ತೊಳಸಿಕಟ್ಟೆಯ ದೇವರು ಮತ್ತು ಎದುರಿಗೇ ಕಾಣುತ್ತಿದ್ದ ಭೂತದ ಬನ – ಇವುಗಳ ಇದಿರಿನಲ್ಲಿಯೆ!

ಅಮೆರಿಕಾದ ಚಿಕಾಗೊ ಬಹುದೂರದಲ್ಲಿದ್ದಿರಬಹುದು? ವಿವೇಕಾನಂದರ ಉತ್ತಾಲ ಧ್ವನಿ ಮಲೆನಾಡಿನ ಕೊಂಪೆಗೆ ಮುಟ್ಟದಿದ್ದಿರಬಹುದು? ಆದರೆ ಸಮೀಪದಲ್ಲಿಯೆ ಇದ್ದುವಲ್ಲ – ಶೃಂಗೇರಿ, ಧರ್ಮಸ್ಥಳ, ಉಡುಪಿ ಇತ್ಯಾದಿ ಪವಿತ್ರಕ್ಷೇತ್ರಗಳ ಗುರುಪೀಠಗಳು? ಅವೇನು ಮಾಡುತ್ತಿದ್ದವು? ಅದ್ವೈತ ತತ್ವದಿಂದ ಬೌದ್ಧಧರ್ಮವನ್ನೆ ಭರತವರ್ಷದಿಂದ ಅಟ್ಟಿ ವೈದಿಕ ಧರ್ಮಸ್ಥಾಪನೆ ಮಾಡಿದನೆಂದು ಹೇಳಲಾಗುತ್ತಿರುವ ಆಚಾರ್ಯ ಶಂಕರನ ಮೂಲ ಪೀಠದಲ್ಲಿ ವಿರಾಜಮಾನರಾಗಿದ್ದ ಸನ್ಯಾಸಿವರೇಣ್ಯರು ಏನು ಮಾಡುತ್ತಿದ್ದರು?

ಅಜ್ಞರೂ ಮೌಢ್ಯಾಂಧರೂ ಆಗಿದ್ದ ಶೂದ್ರವರ್ಗದ ಸಾಮಾನ್ಯ ಜನರಿಂದ ಪಾದ ಪೂಜೆ ಮಾಡಿಸಿಕೊಳ್ಳುತ್ತಿದ್ದರು; ಅಡ್ಡಪಲ್ಲಕ್ಕಿ ಸೇವೆ ಸಲ್ಲಿಸಿಕೊಳ್ಳುತ್ತಿದ್ದರು; ದಾನ, ದಕ್ಷಿಣೆ, ಸಾಷ್ಟಾಂಗ ನಮಸ್ಕಾರಗಳನ್ನೂ ಸ್ವೀಕರಿಸುತ್ತಿದ್ದರು. ಆಶೀರ್ವಾದ ಮಾಡುತ್ತಿದ್ದರು! ತಮ್ಮ ತಮ್ಮ ಪಂಗಡಕ್ಕೆ ಸೇರಿದ ಬ್ರಾಹ್ಮಣೋತ್ತಮರಿಗೆ, ಭೂಸುರರಿಗೆ, ಸಮಾರಾಧನೆ ಮಾಡಿಸಿ ಹೊಟ್ಟೆ ತುಂಬಿಸುತ್ತಿದ್ದರು. ಬಹುಶಃ ಶಾಸ್ತ್ರಕ್ಕಾಗಿ, ತಮ್ಮ ವರ್ಗಕ್ಕೆ ಸೇರಿದ ವಿದ್ವಾಂಸರನ್ನು ನೆರಪಿ ವಾಕ್ಯಾರ್ಥ ಏರ್ಪಡಿಸುತ್ತಿದ್ದರೂ ಇರಬಹುದು. ಶೂದ್ರರು ವೇದೋಪನಿಷತ್ತುಗಳನ್ನು ಓದುವುದಿರಲಿ, ಕೇಳಿದರೂ ಅವರ ಕಿವಿಗೆ ಸೀಸ ಕರಗಿಸಿ ಹೊಯ್ಯುವ ನರಕ ಶಿಕ್ಷೆಯನ್ನು ವಿಧಿಸಿ, ಅದಕ್ಕೆ ಮನುಧರ್ಮಶಾಸ್ತ್ರವೆಂದು ಹೆಸರಿಟ್ಟವರು ಶೂದ್ರರಿಗೆ ವೇದಾಂತಬೋಧನೆ ಮಾಡುವ ಪಾಪಕ್ಕೆ ಏಕೆ ಪಕ್ಕಾಗುತ್ತಾರೆ?

ಕಾವಲಿಲ್ಲದ ಕೋಟೆಗೆ ನುಗ್ಗಲು ಶತ್ರುವಿಗೆ ಸೈನ್ಯ ಬೇಕೆ? ರಕ್ಷಕರಿಲ್ಲದ ದುರ್ಗವನ್ನು ಗೆಲ್ಲಲು ನಿಪುಣ ಸೈನಿಕನೊಬ್ಬನಾದರೂ ಸಾಕು! ತಮ್ಮ ಧರ್ಮದ ವಿಚಾರವಾದ ಯಾವ ಬುದ್ಧಿಪೂರ್ವಕ ಜ್ಞಾನವೂ ಇಲ್ಲದೆ, ಪರಂಪರಾಗತವಾದ ಅಂಧ ವಿಚಾರ ಸಮೂಹಗಳನ್ನೆ ತತ್ವಗಳೆಂದು ನಂಬಿ, ಆಲೋಚನಾಶಕ್ತಿ ಲವಲೇಶವೂ ಇಲ್ಲದಿದ್ದವರನ್ನು, ಜಡಬುದ್ಧಿಗಳನ್ನು, ಮತಾಂತರಗೊಳಿಸುವುದು ಸುಲಭವಲ್ಲ; ಆದರೆ ಜಡಬುದ್ಧಿಗಳಾಗದೆ ತುಸು ಮಟ್ಟಿಗೆ ಜಾಗ್ರತಮತಿಗಳಾಗಿಯೂ ತಮ್ಮ ಮತ ಧರ್ಮದ ಸನಾತನ ಮೂಲ ತತ್ವಗಳನ್ನರಿಯದವರ ನಂಬಿಕೆಗಳನ್ನು ಅಲ್ಲಾಡಿಸುವುದು ಅಷ್ಟೇನು ಕಷ್ಟವಲ್ಲ. ಪಾದ್ರಿ ಜೀವರತ್ನಯ್ಯ ಮಲೆನಾಡಿನ ಗೌಡರುಗಳಲ್ಲಿ ಅಂಥವರನ್ನೆ ಪತ್ತೆಹಚ್ಚಿ ತನ್ನ ಕೆಲಸಕ್ಕೆ ಕೈ ಹಾಕಿದ್ದನು. ಸಿಂಧುವಳ್ಳಿ ಚಿನ್ನಪ್ಪನೆ ಪಾದ್ರಿಯ ಮೊತ್ತಮೊದಲನೆಯ ಬೇಟೆಯಾಗಿದ್ದನು.

ಈ ಕಥೆ ನಡೆಯುತ್ತಿದ್ದ ಕಾಲಕ್ಕೆ ಸುಮಾರು ಎರಡು ಮೂರು ವರ್ಷಗಳ ಹಿಂದೆ, ಅಂದರೆ ಸ್ವಾಮಿ ವಿವೇಕಾನಂದರು ಭರತಖಂಡಕ್ಕೆ ಹಿಂದಿರುಗಿ ಕೊಲಂಬೊ ಇಂದ ಅಲ್ಮೋರದವರೆಗೂ ಭಾಷಣಯಾತ್ರೆ ಮಾಡಿ, ರಾಷ್ಟ್ರದ ಕುಂಡಲಿನೀ ಶಕ್ತಿಯನ್ನ ಉದ್ಬೋಧನಗೊಳಿಸಿದ ಕಾಲಕ್ಕೂ ನಾಲ್ಕಾರು ವರ್ಷಗಳ ಪೂರ್ವದಲ್ಲಿ ಇರಬಹುದು ಒಂದು ದಿನ ಬೈಗಿನ ಹೊತ್ತಿನಲ್ಲಿ ಬೆಟ್ಟಳ್ಳಿ ದೇವಯ್ಯ ಗದ್ದೆ ಕೆಲಸದ ಮೇಲ್ವಿಚಾರಣೆ ಮುಗಿಸಿ, ಆಳುಗಳಿಗೆ ಬತ್ತ, ಉಂಡಿಗೆ, ಎಲಡಿಕೆ, ಹೊಗೆಸೊಪ್ಪು, ಉಪ್ಪು, ಮೆಣಸಿನಕಾಯಿಗಳನ್ನು ಪಡಿಕೊಡಲು ಅವರೊಡನೆ ಮನೆಗೆ ಹಿಂದಿರುಗುತ್ತಿದ್ದಾಗ, ಯಾರೊ ಇಬ್ಬರು, ಹಕ್ಕಲ ಕಡೆಯಿಂದ ಇಳಿಯುವ ಕಾಲುದಾರಿಯಲ್ಲಿ, ಮನೆಯ ಕಡೆಗೆ ಬರುತ್ತಿದ್ದನ್ನು ಕಂಡು, ನಿಂತು, ನೋಡತೊಡಗಿದನು.

ಅವರು ಸ್ವಲ್ಪ ಸಮೀಪಿಸಿದಾಗ ಮುಂದೆ ಬರುತ್ತಿದ್ದವನು ಸಿಂಧುವಳ್ಳಿ ಚಿನ್ನಪ್ಪನೆಂದು ಗುರುತುಹಿಡಿದನು. ಹತ್ತಿರದ ನಂಟನಾಗಿ ಬಾಲ್ಯದಿಂದಲೂ ಸುಪರಿಚಿತನಾಗಿದ್ದ ಅವನು ಫಕ್ಕನೆ ಗುರುತುಸಿಗದಷ್ಟು ಮಟ್ಟಿಗೆ ವೇಷ ಭೂಷಣಗಳಲ್ಲಿ ಬದಲಾವಣೆ ಹೊಂದಿದ್ದನು. ಬೆಳ್ಳಗೆ ಮಡಿಯಾಗಿದ್ದ ಪಂಚೆ ಕಚ್ಚೆ ಹಾಕಿದ್ದನು. ಆಗತಾನೆ ಪೇಟೆಗಳಲ್ಲಿ ರೂಢಿಗೆ ಬರುತ್ತಿದ್ದ ಬನೀನು ತೊಟ್ಟು, ‘ಅಂಗಿಕೋಟು’ ಹಾಕಿದ್ದನು. ಕಾಲಿಗೆ ಶಿವಮೊಗ್ಗದ ಕಡೆಯ ಮೆಟ್ಟು ಹಾಕಿದ್ದನು. ಆದರೆ ಎಲ್ಲಕಿಂತಲೂ ಹೆಚ್ಚಾಗಿ ಕ್ರಾಂತಿಕಾರಕವಾಗಿ ಕಂಡಿದ್ದೆಂದರೆ, ಲಾಳಾಕಾರವಾಗಿ ಮುಂದಲೆ ಚೌರ ಮಾಡಿಸಿ ಕಟ್ಟಿರುತ್ತಿದ್ದ ಜುಟ್ಟಿಗೆ ಬದಲಾಗಿ ಬಿಟ್ಟಿದ್ದ ‘ಕಿರಾಪು’! ಹಣೆಯಂತೂ ಸಾಬರ ಹಣೆಯ ಹಾಗೆ ಬೋಳಾಗಿ, ಹಿಂದೆ, ಅನಿವಾರ್ಯವಾಗಿ, ಊಟ ಪೂರೈಸಿದ್ದಕ್ಕೆ ಚಿಹ್ನೆಯಾಗಿರುತ್ತಿದ್ದ ಕೆಂಪುನಾಮವೂ ಇರಲಿಲ್ಲ! ಕಿವಿಗಳಲ್ಲಿರುತ್ತಿದ್ದ ಒಂಟಿಗಳೂ ಗೈರುಹಾಜರಾಗಿದ್ದವು!

ಚಿನ್ನಪ್ಪ ತನ್ನೊಡನೆ ಬರುತ್ತಿದ್ದವರನ್ನು ಪರಿಚಯ ಮಾಡಿಕೊಟ್ಟನು: “ಇವರು ಜೀವರತ್ನಯ್ಯ, ತೀರ್ಥಹಳ್ಳಿಯ ಪಾದ್ರಿಗಳು! ‘ಉಪದೇಶಿ’ ಅನ್ನುತ್ತಾರೆ!”

ಸಿಂಧುವಳ್ಳಿ ಚಿನ್ನಪ್ಪನನ್ನು ದೀವದಾನೆಯನ್ನಾಗಿ ಪಳಗಿಸಿಕೊಂಡ ಮೇಲೆ ಅವನ ಮುಖಾಂತರವಾಗಿ ಪಾದ್ರಿ ಇತರ ದೊಡ್ಡ ದೊಡ್ಡ ಗೌಡರ ಮನೆಗಳಿಗೆ ಹೋಗಿ ಅವರ ಪರಿಚಯ ಸ್ನೇಹಗಳನ್ನು ಸಂಪಾದಿಸತೊಡಗಿದ್ದನು. ಆ ಸ್ನೇಹಕ್ಕೆ ಪ್ರತಿರೂಪವಾಗಿಯೆ ಪಾದ್ರಿಯಿಂದ ಅನಕ್ಷರರಾದ ಗೌಡರುಗಳಿಗೆ ಒದಗುತ್ತಿದ್ದ ಸಹಾಯವೆಂದರೆ, ಹಳೆಯ ರಾಜ್ಯಗಳಳಿದು ಬ್ರಿಟಿಷ್ ಚಕ್ರಾಧಿಪತ್ಯ ಸುಭದ್ರವಾಗಿ ಕಾಲೂರುತ್ತಿದ್ದ ಆ ಕಾಲದಲ್ಲಿ ಹೊಸ ಕಾನೂನುಗಳು ಹೊಸ ಹೆಸರಿನ ಅಧಿಕಾರಿಗಳು ಹೊಸ ಹೊಸ ರೂಲೀಸುಗಳು ಜಾರಿಗೆ ಬರುತ್ತಿದ್ದುದರಿಂದ ತಕ್ಕಮಟ್ಟಿಗೆ ಇಂಗ್ಲೀಷ್ ತಿಳಿದಿದ್ದ ಆ ಪಾದ್ರಿ ಸರಕಾರದ ವ್ಯವಹಾರಗಳಲ್ಲಿ ಅವರಿಗೆ ನೀಡುತ್ತಿದ್ದ ನೆರವು. ಹಳ್ಳಿಯವರು ತೀರ್ಥಹಳ್ಳಿಗೆ ಹೋದಾಗ ಆಸ್ಪತ್ರೆ, ಡಾಕ್ಟರು, ಅಮಲ್ದಾರರು, ಪೋಲಿಸಿನವರು, ಪೋಸ್ಟಾಫೀಸು, ಕಾಫಿ, ಹೋಟೆಲ್, ಇಸ್ಕೂಲು ಮುಂತಾದ ತಾವು ಹಿಂದೆಂದೂ ಕೇಳದಿದ್ದ ಭಾಷೆಯ ಹೆಸರುಗಳಿಗೇ ದಿಗಿಲುಪಟ್ಟುಕೊಳ್ಳುತ್ತಿದ್ದಾಗ, ಪಾದ್ರಿಯಿಂದ ಅವರಿಗೆ ತುಂಬಾ ಉಪಕಾರವಾಗುತ್ತಿತ್ತು. ಆ ಅನೂಕೂಲಕ್ಕಾಗಿ ಅವರು ಪಾದ್ರಿಯ  ನಿಂದನಾತ್ಮಕವೂ ಆಗಿದ್ದ ಉಪದೇಶವನ್ನೆಲ್ಲ ನಗೆಮೊಗದಿಂದ ಲಘುವಾಗೆಣಿಸಿ ಸಹಿಸಿಕೊಂಡು ಹೋಗುತ್ತಿದ್ದರು. ಪಾದ್ರಿಯೂ ವಯಸ್ಸಾದ ದೊಡ್ಡವರ ಆ ರೀತಿಯ ಅಲಕ್ಷವನ್ನೂ ಮನಸ್ಸಿಗೆ ಹಾಕಿಕೊಳ್ಳುತ್ತಿರಲಿಲ್ಲ, ಏಕೆಂದರೆ, ಅವನಿಗೆ ಗೊತ್ತಿತ್ತು, ತರುಣರು ತನ್ನ ಪ್ರಭಾವಕ್ಕೆ ಕ್ರಮೇಣ ಒಳಗಾಗುತ್ತಾರೆ ಎಂಬ ಸತ್ಯ ಸಂಗತಿ.

ಆ ದಿನ ರಾತ್ರಿ ಊಟದ ಸಮಯ ಬಂದಾಗಲಂತೂ ಬೆಟ್ಟಳ್ಳಿಯ ಮನೆಯಲ್ಲಿ ಒಂದು ಕ್ರಾಂತಿಯ ವಾತಾವರಣವೆ ಏರ್ಪಟ್ಟಿತ್ತು. ಮುಂಡಿಗೆಯ ಮರೆಯಲ್ಲಿ, ಬಾಗಿಲುಸಂದಿಯಲ್ಲಿ, ಅಡಿಗೆಮನೆಯಲ್ಲಿ, ಕೋಣೆಗಳಲ್ಲಿ ಎಲ್ಲೆಲ್ಲಿಯೂ ಗುಸುಗುಸು, ಏನೊ ಅನಿಶ್ಚಯ, ಗಡಿಬಿಡಿ: ರಾಜಕೀಯ ಮಹಾ ಕ್ರಾಂತಿಯ ದಿನದಂದು ಆ ರಾಜ್ಯದ ರಾಜಧಾನಿಯಲ್ಲಿ ನಡೆಯಬಹುದಾದ ಉದ್ವಿಗ್ನ ಪರಿಸ್ಥಿತಿಯಂತೆ!

ಪಾದ್ರಿಯ ಜೊತೆ ಜಗಲಿಯಲ್ಲಿ ಯಜಮಾನರು ಕಲ್ಲಯ್ಯಗೌಡರ ಸಂಗಡ ಅದೂ ಇದು ಮಾತನಾಡುತ್ತಾ ಕುಳಿತಿದ್ದ ಚಿನ್ನಪ್ಪನನ್ನು ಎಕ್ಕಟಿ ಕರೆದು ದೇವಯ್ಯ “ಈಗ ಏನು ಮಾಡೋದೋ?” ಎಂದು ಕೇಳಿದನು.

“ಯಾಕೆ? ಏನು ಸಮಾಚಾರ?” ಪಾದ್ರಿಯನ್ನು ಎಲ್ಲಿ ಕೂರಿಸಿ ಊಟಕ್ಕೆ ಹಾಕುವುದು ಎಂಬ ವಿಚಾರವಾಗಿಯೆ ದೇವಯ್ಯನ ಪ್ರಶ್ನೆ ಎಂದು ಗೊತ್ತಾಗಿದ್ದರೂ ಕೇಳಿದ್ದನು ಚಿನ್ನಪ್ಪ.

“ಅವರಿಗೆ ಎಲ್ಲಿ ಬಳ್ಳೆ ಹಾಕಾದು ಅಂತ ಕೇಳ್ತಾರೆ ಒಳಗೆ.”

“ಯಾಕೆ? ನಮ್ಮ ಜೊತೇಲಿ ಕೂರ್ಲಿ!”

“ಥೂ ಥೂ ಥೂ ಥೂ! ಹೊಲೇರಿಗಿಂತಲೂ ಅತ್ತತ್ತ, ಆ ಕಿಲಸ್ತರನ್ನ ಒಳಗೆ ಕೂರಿಸೋದೆ ಸೈ? ಏನೋ ಬಟ್ಟೆಬರಿ ಹಾಕ್ಕೊಂಡು ಬಂದನಲ್ಲಾ ಅಂತ ಜಗಲಿ ಹತ್ತಿಸಿದ್ದು!”

“ಮತ್ತೆಲ್ಲಿ ಕೂರಿಸ್ತಾರಂತೆ?”

“ಹಿತ್ತಲು ಕಡೇಲಿ ಕೂರಿಸಾನ ಅಂತಾ ಹೇಳ್ತಾರೆ ಒಳಗೆ.”

“ಹಳೇಪೈಕದವರನ್ನು ಕೂರಿಸೋ ಜಾಗದಲ್ಲಿ?”

“ಹ್ಞೂ!”

“ಏನೋ, ದೇವಯ್ಯ, ನಿನಗೆ ಸ್ವಲ್ಪಾನೂ ದಾಕ್ಷಿಣ್ಯ ಇಲ್ಲ? ಅಮಲ್ದಾರರು ಇನಿಸ್ಪೆಕ್ಟರು ಡಾಕ್ಟರು ಎಲ್ಲ ಅವರನ್ನ ತಮ್ಮ ಪಂಕ್ತೀಲೆ ಕೂರಿಸಿಕೊಂಡು ಊಟ ಮಾಡ್ತಾರೆ; ನಿಮ್ಮ ಮನೇಲಿ ಆ ಗೊಚ್ಚೆವಾಸನೆ ಹಿತ್ತಲು ಕಡೇಲಿ ಬಳ್ಳೆ ಹಾಕಾನ ಅಂತೀಯಲ್ಲಾ!”

“ಕೆಳಜಗಲೀಲಾದ್ರೂ ಹಾಕೋಕೆ ಒಪ್ತಾರಾ? ಕೇಳಿಕೊಂಡು ಬರ್ತೀನಿ” ಎಂದು ದೇವಯ್ಯ ಒಳಗೆ ಹೋಗಿ ಬಂದು “ಏನೇನೊ ಮಾಡಿ ಒಪ್ಪಸ್ದೆ, ಮಾರಾಯ, ಅದಕ್ಕೂ ಬಹಳ ಕಷ್ಟಾನೆ ಆಯ್ತು. ನಮ್ಮ ಅವ್ವ ‘ಮೇಲುಪ್ಪರಿಗೇಲಿ ತಿರಪತಿ ಕಾಣ್ಕೆ ಅದೆ. ಜಗಲೀಲಿ ಧರ್ಮಸ್ಥಳದ್ದು ಪ್ರಸಾದ ಕಟ್ಟಿದೆ. ಮನೇಗೆ ಮುಟ್ಟುಚಿಟ್ಟಾದ್ರೆ ಅಣ್ಣಪ್ಪ ದೇವರು ನಮ್ಮ ಮನೆತನಾನೆ ಅಳಿಸಿಬಿಡ್ತಾನೆ’ ಅಂತಾ ಏನೇನೂ ಹೇಳ್ತು” ಎಂದವನು ಕಿಸಕ್ಕನೆ ನಕ್ಕು, ನಿಧಾನವಾಗಿ ವ್ಯಂಗ್ಯಧ್ವನಿಯಿಂದ “ಅಷ್ಟೇ ಅಲ್ಲ; ನಿನಗೂ ಆಯ್ತು, ಸಮಾ!” ಎಂದನು.

“ಏನು ಮಾರಾಯಾ?”

“ಆಮೇಲೆ ಹೇಳ್ತೀನಿ, ಬಾ, ಬಳ್ಳೆಹಾಕಿ ಕಾಯ್ತಿದಾರೆ.”

ಸಮಸ್ಯೆ ಅಲ್ಲಿಗೇ ಮುಗಿಯಲಿಲ್ಲ.

ದೇವಯ್ಯನ ತಾಯಿಗೂ ಅವನ ಹೆಂಡತಿಗೂ ಕೆಲವು ವಿವರಗಳ ವಿಚಾರದಲ್ಲಿ ಬಹಳ ಜಿಜ್ಞಾಸೆ ನಡೆಯಿತು. ಊಟಹಾಕುವ ಜಾಗ ನಿರ್ಣಯವಾದ ಮೇಲೆ ಅಡಿಗೆಯ ಆಳೊಬ್ಬನ ಕೈಲಿ ಒಂದು ಮಣೆ ಕೊಟ್ಟು ಕೆಳಜಗಲಿಯ ಮೂಲೆಯಲ್ಲಿ ಅದನ್ನು ಹಾಕಿಸಿದರು. ಆದರ ಸಮೀಪದಲ್ಲಿ ಕವುಚಿಹಾಕಿದ ಒಂದು ಸಿದ್ದೆಯ ಮೇಲೆ ಚಿಮಣಿದೀಪ ಇಡಿಸಿದರು. ಬಾಳೆಎಲೆ ಆರಿಸುವಾಗ ಒಂದು ಸಣ್ಣ ವಿಚಾರಗೋಷ್ಠಿಯೆ ನಡೆಯಿತು. ಕೀತು ಹಾಕುವುದೋ? ಕುಡಿ ಹಾಕುವುದೊ? ಕಂಡು ಹಾಕುವುದೋ? ಕೀತು ಸಣ್ಣದಾಗುತ್ತದೆ; ಕುಡಿಯನ್ನೆ ಹಾಕಿದರಾಯಿತು ಎಂದಳು ದೇವಯ್ಯನ ತಾಯಿ. ಆದರೆ ದೇವಯ್ಯನ ಹೆಂಡತಿ “ಬ್ಯಾಡ, ಅತ್ತೆಮ್ಮ, ಒಂದು ಕಂಡು ಹಾಕಿದರೆ ಆಯಿತು” ಎಂದಳು. ಪಾದ್ರಿಯ ಯೋಗ್ಯತೆಗೆ ಕುಡಿಬಾಳೆಲೆಯ ಸ್ಥಾನಮಾನಗಳು ಮೀರಿದ್ದು ಎಂಬುದು ಅವಳ ಒಳ ಇಂಗಿತವಾಗಿತ್ತು. ಪಾಪ! ಇನ್ನು ಎರಡು ವರ್ಷಗಳ ಒಳಗಾಗಿ, ತನ್ನಿಂದ ತನ್ನ ಗಂಡನನ್ನೆ ಅಪಹರಿಸುವ ಪ್ರಯತ್ನದಲ್ಲಿ, ಪಾದ್ರಿ ತನಗೆ ಎಂತಹ ಸಂಕಟ ತಂದೊಡ್ಡುತ್ತಾನೆ ಎಂಬ ಭವಿಷ್ಯತ್ತು ಅವಳಿಗೆ ಆಗ ಗೊತ್ತಾಗಿದ್ದರೆ, ಆ ವಿಪತ್ತನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಳೇನೊ, ಕುಡಿಬಳ್ಳಿಯ ಗೌರವವನ್ನೆ ತೋರಿ?

ಬಡಿಸುವ ಸಮಯದಲ್ಲಂತೂ ಒಂದು ವಿಷಯ ಪರಿಸ್ಥಿತಿಯೆ ಒದಗಿತ್ತು. ಮನೆಯ ಹೆಂಗಸರು, ಪಾದ್ರಿಯಿರಲಿ ಚಕ್ರವರ್ತಿಯೆ ಊಟಕ್ಕೆ ಬಂದಿದ್ದರೂ, ಕೀಳು ಜಾತಿಯವರಿಗೆ ಕೈಯಾರೆ  ಅನ್ನ ಇಕ್ಕುವ ಸಂಭವವೆ ಇರಲಿಲ್ಲವಷ್ಟೆ! ಆದರೆ ಆಳುಗಳೂ ಕಿಲಸ್ತರವನಿಗೆ ಕೈಯಾರ ಅನ್ನ ಇಕ್ಕುವ ಸಂಭವವೆ ಇರಲಿಲ್ಲವಷ್ಟೆ! ಆದರೆ ಆಳುಗಳೂ ಕಿಲಸ್ತರವನಿಗೆ ಕೈಯಾರೆ ಬಡಿಸಲು ಒಪ್ಪಲಿಲ್ಲ. ‘ದನಾ ತಿನ್ನುವ ಕೀಳುಜಾತಿಗೆ ಕೈಯಿಂದಲೆ ಅನ್ನ ಇಕ್ಕಿ ಅವರ ಎಂಜಲಿನಿಂದ ಮೈಲಿಗೆಯಾಯಿತೆಂದರೆ ಜಾತಿಯವರಾರೂ ತಮ್ಮನ್ನು ಒಳಕ್ಕೆ ಸೇರಿಸುವುದಿಲ್ಲ’ ಎಂದು ಬಿಟ್ಟರು. ಕಡೆಗೆ, ಹೊಲೆಯರು ಹಟ್ಟರಿಗೆ ಎಲೆಗೆ ಬಡಿಸುವುದನೆಲ್ಲ ಬಡಿಸಿ ಆ ಎಲೆಯನ್ನೆ ಒಂದು ಮೊರದದಲ್ಲಿಟ್ಟು ಕೊಡುವಂತೆ, ಪಾದ್ರಿಗೂ ಮಾಡಿದರು. ನೀರು ಕುಡಿಯಲು ಕಂಚು ತಾಮ್ರದ ಲೋಟಗಳನ್ನೆ ಎಚ್ಚರಿಕೆಯಿಂದ ಆರಿಸಿಬಿಟ್ಟರು. ಏಕೆಂದರೆ ಅವನ್ನು ಬೆಂಕಿಯಲ್ಲಿ ಸುಟ್ಟು, ಸಗಣಿ ನೀರಿನಲ್ಲಿ  ಅದ್ದಿಟ್ಟು, ಮಡಿಮಾಡಿಕೊಳ್ಳಬಹುದು ಎಂದು. ಊಟಮಾಡಿದ ಮೇಲೆ ಪಾದ್ರಿಯ ಎಲೆಯನ್ನು ತೆಗೆದು ಗೋಮಯ ಹಾಕುವಂತೆಯೂ ಮಾಡಿದ್ದರು.

ಹೀಗೆ ಪ್ರಾರಂಭವಾಗಿತ್ತು, ಎರಡು ವರ್ಷಗಳ ಹಿಂದೆ, ಪಾದ್ರಿ ಜೀವರತ್ನಯ್ಯನ ಮೊದಲನೆಯ ಭೇಟಿ, ಬೆಟ್ಟಳ್ಳಿ ಮನೆಗೆ. ಇದಾದ ಮೇಲೆ ಕೆಲವು ದಿನಗಳಲ್ಲಿ ಯಜಮಾನರು ಕಲ್ಲಯ್ಯಗೌಡರು ತಮ್ಮ ಹಿರಿಯ ಮಗ ದೇವಯ್ಯನೊಡನೆ ತೀರ್ಥಹಳ್ಳಿಗೆ ಕಛೇರಿಯ ಕೆಲಸಕ್ಕಾಗಿ ಹೋಗಿದ್ದರು. ಆಗ ಜೀವರತ್ನಯ್ಯ ಅಧಿಕಾರಿಗಳನ್ನೂ ಕರಣಿಕ ವರ್ಗದವರನ್ನೂ ತಾನೆ ಕಂಡು ಗೌಡರ ಕೆಲಸ ಬೇಗ ಮುಗಿಯುವಂತೆ ಮಾಡಿದ್ದನು. ಅಲ್ಲದೆ ತಂದೆ ಮಕ್ಕಳಿಬ್ಬರನ್ನೂ ಆಸ್ಪತ್ರೆಯ ಹೆಸರು ಹೊತ್ತಿದ್ದ ಒಂದು ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅವರ ಮನೆಯ ಹೆಂಗಸರಿಗೆಂದು ಔಷಧಗಳನ್ನೂ ಕೊಡಿಸಿದ್ದನು.

ಬೆಟ್ಟಳ್ಳಿಗೆ ಬರುತ್ತಾ ಹೋಗುತ್ತಾ ಪರಿಚಯ ಸ್ನೇಹಕ್ಕೂ ವಿಶ್ವಾಸಕ್ಕೂ ತಿರುಗಿತು. ದೇವಯ್ಯನ ಮುಖಾಂತರ ಪಾದ್ರಿ ಕೋಣೂರು ಹಳೆಮನೆಗಳಿಗೂ ಭೇಟಿಯಿತ್ತನು.  ಹಳೆಮನೆಗೆ ಹೋಗಿದ್ದಾಗಲೆ ಅವನಿಗೆ ಗೊತ್ತಾಗಿದ್ದು, ಸುಬ್ಬಣ್ಣ ಹೆಗ್ಗಡೆಯವರ ದೊಡ್ಡ ಮಗ, ದೊಡ್ಡಣ್ಣ ಹೆಗ್ಗಡೆ, ತಿರುಪತಿಗೆ ಹೋಗಿದ್ದವನು ಹಿಂತಿರುಗಿ ಬಂದಿರಲಿಲ್ಲ ಎಂದು. ದಾರಿಯಲ್ಲಿಯೆ ವಾಂತಿ ಭೇದಿ ರೋಗವಾಗಿ ಸತ್ತುಹೋದನೆಂದು ಕೆಲವರೂ; ಸತ್ತಿರಲಿಲ್ಲ, ಪ್ರಜ್ಞೆ ತಪ್ಪಿದ್ದವನನ್ನು ಸತ್ತನೆಂದು ಭಾವಿಸಿ ರೋಗಕ್ಕೆ ಹೆದರಿ ಬಿಟ್ಟು ಬಂದರೆಂದು ಕೆಲವರೂ;  ಪ್ರಜ್ಞೆಯಿಲ್ಲದೆ ಬಿದ್ದಿದ್ದವನನ್ನು ಕಂಡು ಯಾರೊ ಸನ್ನೇಸಿಗಳೊ ಬೈರಾಗಿಗಳೊ ಮದ್ದುಕೊಟ್ಟು ಬದುಕಿಸಿ ತಮ್ಮೊಡನೆ ಕರೆದೊಯ್ದರೆಂದು ಕೆಲವರೂ; ಯಾವುದೊ ಜಾತ್ರೆಯಲ್ಲಿ ಗಡ್ಡಬಿಟ್ಟು ಬೈರಾಗಿಗಳೊಡನೆ ಇದ್ದ ಅವನನ್ನು ಕಂಡೆವೆಂದೂ ಮತ್ತೆ ಕೆಲವರೂ; ನಿಜವೊ? ಸುಳ್ಳೊ? ಊಹಿಸಿಯೊ? ಕತೆಕಟ್ಟಿಯೊ? ನಾನಾ ರೀತಿಯಾಗಿ ವದಂತಿ ಹಬ್ಬಿಸಿದ್ದರು. ಅದನ್ನು ಕೇಳಿ ಪಾದ್ರಿಗೆ ನಿಜವಾಗಿಯೂ ಹೃದಯ  ಮರುಗಿತ್ತು. ಅದರಲ್ಲಿಯೂ ಅವನು ದೊಡ್ಡಣ್ಣ ಹೆಗ್ಗಡೆಯ ಹೆಂಡತಿ ‘ಹುಚ್ಚು ಹೆಗ್ಗಡಿತಿ’ ಯನ್ನು ಕಂಡು ಮಾತನಾಡಿಸಿದ ಮೇಲಂತೂ ದೊಡ್ಡಣ್ಣ ಹೆಗ್ಗಡೆ ಬದುಕಿದ್ದರೆ ಅವನನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಿ ಕರತರಲೆಬೇಕೆಂದು ತನ್ನ ಕ್ರೈಸ್ತ ಸೌಜನ್ಯಯವನ್ನು ಮಿಶನರಿ ಉತ್ಸಾಹದಿಂದ ಮರೆದಿದ್ದನು. ಆ ಒಂದು ಘಟನೆಯಿಂದಲೆ ಪಾದ್ರಿಯ ವಿಚಾರವಾಗಿದ್ದ ಅನೇಕರ ಸಂಶಯ ಮತ್ತು ದುರಭಿಪ್ರಾಯ ಬದಲಾವಣೆ ಹೊಂದಿತ್ತು.

ದೇವಯ್ಯ ತೀರ್ಥಹಳ್ಳಿಗೆ ಹೋಗಿ ಬಂದಾಗಲೆಲ್ಲ ಏನಾದರೊಂದು ರೀತಿ ಸುಧಾರಿಸಿಯೆ ಬರುತ್ತಿದ್ದನು. ಬಟ್ಟೆಬರೆಗಳಿಗೆ ಅದು ಸೀಮಿತವಾಗಿದ್ದಾಗ ಅವನ ತಾಯಿ ಮತ್ತು ಅವನ ಹೆಂಡತಿ ನಗೆಬೀರಿ ಮೆಚ್ಚಿಗೆ ತೋರಿದ್ದರು. ಹೊಸಹೊಸ ಸಾಮಾನು ತಂದಾಗಲೂ ಯಜಮಾನರು ಹಣದ ದುಂದುಗಾರಿಕೆಯ ವಿಚಾರವಾಗಿ ಭರ್ತ್ಸನೆ ಮಾಡಿದ್ದುಂಟು. ಆದರೆ ಅವನು ಜಗಲಿಯಲ್ಲಿ ತೂಗುಹಾಕಲು ಒಂದು ದೊಡ್ಡ ಗಡಿಯಾರ ತಂದಾಗ, ಆ ನವನಾಗರಿಕತೆಯ ವಸ್ತುವಿಗೆ ಎಲ್ಲರೂ ಅಚ್ಚರಿವೋಗಿ ಬೆರಗಾಗಿದ್ದರು. ಅಂಗಳದ ನೆಳಲನ್ನು ನೋಡಿ ಕಾಲನಿರ್ಣಯಮಾಡಿ ಆಳುಗಳನ್ನು ಬೆಳಿಗ್ಗೆ ಮಧ್ಯಾಹ್ನ ಕೆಲಸಕ್ಕೆ ಕರೆಯುವ ಸಂದಿಗ್ಧತೆ ತಪ್ಪಿತಲ್ಲಾ ಎಂದು ಸಂತೋಷಪಟ್ಟಿದ್ದರು ಕಲ್ಲಯ್ಯಗೌಡರು. ತಾಯಿಗೂ ಮತ್ತು ಹೆಂಡತಿಗೂ ತನ್ನ ಮಗ ಮತ್ತು ಗಂಡ ಎಷ್ಟು ಚೆನ್ನಾಗಿ ಕಾಣಿಸುತ್ತಾನೆ ಹೊಸ ರೀತಿಯ ಹೊಸ ಬಟ್ಟೆ ಹಾಕಿಕೊಂಡು ಎಂದು ಆನಂದವಾಗಿತ್ತು. ಆದರೆ ದೇವಯ್ಯನಲ್ಲಿ ಹೊರನೋಟಕ್ಕೆ ಆಗುತ್ತಿದ್ದ ಬದಲಾವಣೆಗಳಿಗಿಂತಲೂ ಗುರುತರವಾದ ಆಂತರಿಕ ಪರಿವರ್ತನೆಗಳು ನಡೆಯುತ್ತಿದ್ದುವು ಎಂಬುದನ್ನು ಅವರು ಯಾರು ಅರಿಯಲಿಲ್ಲ. ಒಂದು ದಿನ ಅವನು ತೀರ್ಥಹಳ್ಳಿಯಿಂದ ಹಿಂತಿರುಗಿದಾಗ ಜುಟ್ಟು ಬೋಳಿಸಿ ಕಿರಾಪು ಬಿಟ್ಟಿದ್ದನ್ನು ಕಂಡಾಗಲೆ ಅವರಿಗೆ ಹೊರಗಣ ಪರಿವರ್ತನೆಯೂ ಭಯಂಕರವಾಗಿ ಕಾಣಿಸಿದ್ದು!

“ಅಪ್ಪ ಅವ್ವ ಸಾಯೋತನಕ ಕಾಯೋಕಾಗಲಿಲ್ಲವೇನೋ, ಮಗನೆ?” ಎಂದು ತಾಯಿ ಅತ್ತುಕರೆದು ಅನ್ನ ನೀರು ಬಿಟ್ಟಿದ್ದಳು. ಅಪ್ಪ ಅವ್ವ ಸತ್ತಾಗ ಮಾತ್ರ ತಲೆಬೋಳಿಸುತ್ತಿದ್ದುದು ಆಚಾರವಾಗಿತ್ತು. ಈಗ ಕಾರ್ಯವೆ ನಡೆದುಹೋಗಿದ್ದುದರಿಂದ ಇನ್ನೇನು ಕಾರಣವೂ ನಡೆಯುವುದಕ್ಕೆಂದೇ ಮುನ್‌ಸೂಚಕವಾಗಿ ವಿಧಿ ದೇವಯ್ಯನ ಕೈಲಿ ಆ ಅಧರ್ಮಕಾರ್ಯ ಮಾಡಿಸದೆ ಎಂದು ಭೀತರಾಗಿದ್ದರು.

ದೇವಯ್ಯನ ಹೆಂಡತಿಯೂ ಗಂಡನಿಂದ ಆಗಬಾರದ ಅಮಂಗಳ ಕಾರ್ಯ ಆಗಿಹೋಯಿತಲ್ಲಾ ಎಂದು ಕೋಣೆಬಾಗಿಲು ಹಾಕಿಕೊಂಡು ರೋದಿಸಿ, ದೇವರಿಗೆ ತಪ್ಪುಗಾಣಿಕೆ ಕಟ್ಟಿದ್ದಳು. ಆದರೆ ದಿನಕಳೆದಂತೆಲ್ಲಾ ಅವಳಿಗೆ ಜುಟ್ಟಿಗಿಂತಲೂ ಕ್ರಾಪೇ ತನ್ನ ಗಂಡನಿಗೆ ಲಕ್ಷಣವಾಗಿ ಕಾಣುವಂತೆ ತೋರಿತ್ತು!

ಕ್ರಮೇಣ ದೇವಯ್ಯ ಮಿಂದು, ಉಣ್ಣುವುದಕ್ಕೆ ಹೋಗುವ ಮೊದಲು, ಹಣೆಗೆ ನಾಮ ಇಟ್ಟುಕೊಳ್ಳುವುದನ್ನು ಬಿಟ್ಟಿದ್ದನ್ನೂ, ತುಳಸಿ ಕಟ್ಟೆಗೆ ಸುತ್ತುಬರುವುದೆ ಮೊದಲಾದ ಧಾರ್ಮಿಕಾಚಾರಗಳನ್ನು ತ್ಯಜಿಸಿದ್ದನ್ನೂ, ದೆಯ್ಯ ದ್ಯಾವರು ಸತ್ಯನಾರಾಯಣವ್ರತ ಇವುಗಳನ್ನೆಲ್ಲ ಹೀಯಾಳಿಸತೊಡಗಿದ್ದನ್ನೂ ತಂದೆ ತಾಯಿ ಹೆಂಡತಿಯರಲ್ಲದೆ ನೆಂಟರೂ ಆಳುಕಾಳುಗಳೂ ಗಮನಿಸಿ, ಪಾದ್ರಿ ಮಂಕುಬೂದಿ ಹಾಕಿರಬೇಕೆಂದೂ ಭಾವಿಸಿದ್ದರು. ಕಡೆಕಡೆಗೆ ದೇವಯ್ಯ ಎಲ್ಲ ಆಚಾರವಿಚಾರಗಳಲ್ಲಿಯೂ ವೇಷಭೂಷಣಗಳಲ್ಲಿಯೂ ಸಿಂಧುವಳ್ಳಿ ಚಿನ್ನಪ್ಪನ ಪ್ರತಿಬಿಂಬವೆ ಆಗಿಬಿಟ್ಟಿದ್ದನು.

ಒಂದು ದಿನ ಅವನು ತನ್ನ ಮತಸುಧಾರಣಾ ಕಾರ್ಯದಲ್ಲಿ ಬಹಳ ಮುಂದುವರೆದು ತನ್ನ ಹೆಂಡತಿಯೊಡನೆ ತಮ್ಮ ಕೋಣೆಯಲ್ಲಿ ತುಂಬ ಒರಟಾಗಿ ವರ್ತಿಸಿದ್ದನು:

ದೇವಮ್ಮ (ದೇವಯ್ಯನ ಹೆಂಡತಿಯ ಹುಟ್ಟು ಹೆಸರು ಅವಳ ತವರುಮನೆ ಕೋಣೂರಿನಲ್ಲಿ ಆಕೆಯ ತಂದೆ, ತಾಯಿ, ಅಣ್ಣ ಮೊದಲಾದ ದೊಡ್ಡವರೆಲ್ಲ ಅವಳನ್ನು ಮುದ್ದಿದಾಗಿ ‘ಪುಟ್ಟಕ್ಕ’ ಎಂದೇ ಕರೆಯುತ್ತಿದ್ದರು. ಅವಳ ತಮ್ಮ ಮುಕುಂದಮ್ಮ ‘ಅಕ್ಕಯ್ಯ’ ಎಂದು ಕರೆಯುವುದನ್ನು ಅನುಕರಿಸಿ ಚಿಕ್ಕವರೆಲ್ಲರೂ ‘ಅಕ್ಕಯ್ಯ’ ಎಂದೆ ಹೆಸರಿಸುವುದು ವಾಡಿಕೆಯಾಗಿತ್ತು. ಆದರೆ ಗಂಡನಮನೆಯ ಬೆಟ್ಟಳ್ಳಿಯಲ್ಲಿ ಆಳುಕಾಳುಗಳೆಲ್ಲರೂ ಅವಳನ್ನು ಗೌರವದಿಂದ ‘ಕೋಣೂರಮ್ಮ’ ಎಂದು ಕರೆಯುತ್ತಿದ್ದರು.) ನಾಗಂದಿಗೆಯಿಂದ ನಾಗಂದಿಗೆಗೆ ಅಡ್ಡಲಾಗಿ ಹಾಕಿದ್ದ ಬಿದಿರ ಗಳುವಿಗೆ ತೂಗುಹಾಕಿದ್ದ ನೇಣುಗಳ ಮೇಲೆ  ನೇತಾಡುತ್ತಿದ್ದ ತೊಟ್ಟಿಲಲ್ಲಿ ಮಲಗಿದ್ದ ತನ್ನ ಐದು ತಿಂಗಳ ‘ಬಾಲೆ’ಯನ್ನು ಮಲಗಿಸುತ್ತಿದ್ದಳು. ಬಾಯಿ ಯಾಂತ್ರಿಕವಾಗಿ ಎಂಬಂತೆ ಏನೋ ಹಾಡನ್ನು ಬಹು ಮೆಲ್ಲಗೆ ಗುನುಗುತ್ತಿತ್ತು. ತೊಟ್ಟಿಲನ್ನು ತೂಗುವ ‘ಗಿರಕ್ ಗಿರಕ್ ಗಿರಕ್’ ಸದ್ದು ಕೋಣೆಯ ನಿಃಶಬ್ದತೆಗೆ ಪೋಷಕವಾಗಿತ್ತು. ಆ ಕೋಣೆಗಿದ್ದ ಎರಡು ಚಿಕ್ಕ ಬೆಳಕಂಡಿಯಲ್ಲಿ ಮೂರು ರೆಕ್ಕೆಗಳನ್ನು ಸಂಪೂರ್ಣವಾಗಿ ಮುಚ್ಚಿದ್ದು, ಮತ್ತೂ ಒಂದನ್ನೂ ಮುಕ್ಕಾಲು ಮುಚ್ಚಿದ್ದುದರಿಂದ ಪದಾರ್ಥಗಳ ಹೊರ ಆಕಾರ ಕಾಣುವಷ್ಟರ ಮಟ್ಟಿಗೆ ಹೌದೊ ಅಲ್ಲವೊ ಎನ್ನುವಷ್ಟು ಬೆಳಕು ಪ್ರವೇಶಿಸುತ್ತಿತ್ತು. ಕಣ್ಣಿಗೆ ತಂಪಾಗಿತ್ತು, ಒಳಗಿದ್ದ ಕತ್ತಲೆ. ಹೊರಗಿದ್ದ ನಡುಹಗಲಿನ ಸುಡು ಬಿಸಿಲಿನ ಮುಂದೆ ಆ ಕೋಣೆ ಸುಖ ಶೀತಲ ಶಾಂತಿಧಾಮದಂತಿತ್ತು.

ದೇವಮ್ಮ ಹೆರಿಗೆಯಾದ ಮೇಲೆ ತವರುಮನೆಯಿಂದ ಬಂದು ಒಂದು ತಿಂಗಳಾಗಿತ್ತು. ಅದು ಚೊಚ್ಚಲ ಹೆರಿಗೆಯಾಗಿದ್ದರೂ ಅವಳು ಶಿಶುಜನನ ಕಾಲದಲ್ಲಿ ತುಂಬ ಕಷ್ಟಪಡಬೇಕಾಗಿಬಂದುದರಿಂದ ಇನ್ನೂ ನಿಃಶಕ್ತಳಾಗಿಯೆ ಇದ್ದಳು. ಸಹಜವಾಗಿದ್ದ ಅವಳ ಚೆಲುವು ಸುಕ್ಕಿಹೋಗಿತ್ತು. ಆದರೆ ಅವಳ ಪ್ರಾಣದೊಂದನ್ನೂ ಮನಸ್ಸಿಗೆ ಹಾಕಿಕೊಂಡಿರಲಿಲ್ಲ. ತೊಟ್ಟಿಲಲ್ಲಿ ಮಲಗಿದ್ದ ‘ಚೆಲುವಯ್ಯ’ – ಜೋಯಿಸರು ಜಾತಕ ಬರೆದು, ಹೆಸರು ಚಕಾರದಿಂದ ಪ್ರಾರಂಭವಾಗತಕ್ಕದ್ದು ಎಂದು ‘ಚಿನ್ನಪ್ಪ’ ಎಂಬುದನ್ನು ಸೂಚಿಸಿದ್ದರೂ ಸಿಂಧುವಳ್ಳಿ ಚಿನ್ನಪ್ಪನನ್ನು ನೆನಪಿಗೆ ತರುವ ಅದು ಅಮಂಗಳಕರವೆಂದು ನಿರ್ಣಯಿಸಿ ದೇವಮ್ಮ ಮತ್ತು ಅವಳ ಅತ್ತೆ, ದೇವಯ್ಯನ ಮಾತನ್ನು ತಿರಸ್ಕರಿಸಿ, ‘ಚೆಲುವಯ್ಯ’ ಎಂಬ ಹೆಸರಿನಿಂದಲೆ ಕರೆಯತೊಡಗಿದ್ದರು – ಅವಳ ಕಷ್ಟಸಂಕಟಗಳನ್ನೆಲ್ಲ ನುಂಗಿನೊಣೆವ ಪರಮಾನಂದ ಮೂರ್ತಿಯಾಗಿದ್ದನು. ತೂಗುವುದನ್ನು ನಿಲ್ಲಿಸಿ ನೋಡಿದಳು: ‘ಬಾಲೆ’ ನಿದ್ದೆಯ ಮುದ್ದೆಯಾಗಿತ್ತು!

ಇನ್ನೇನು ಮಧ್ಯಾಹ್ನ ವಿಶ್ರಾಂತಿಗಾಗಿ ಅವಳೂ ತೊಟ್ಟಿಲ ಪಕ್ಕದಲ್ಲಿಯೆ ನೆಲದಮೇಲೆ ಹಾಸಿದ್ದ ಹಾಸಗೆಯ ಮೇಲೆ ಮಗ್ಗುಲಾಗಲು ಹವಣಿಸುತ್ತಿದ್ದಳು. ಗಿರಕ್ಕನೆ ಸದ್ದಾಗಿ ಬಾಗಿಲು ತೆರೆಯಿತು. ದೇವಯ್ಯ ಮೆಲ್ಲನೆ ಒಳಗೆ ಬಂದನು. ಬಂದವನು, ಕೋಣೆಯ ಒಳಗೆ ಇದ್ದ ನಿಃಬ್ದತೆಯನ್ನೂ ಹಗಲುಗತ್ತಲೆಯನ್ನೂ ಧೂಪದ ಪರಿಮಳವನ್ನೂ ನಿಷ್ಕ್ರಿಯಾ ಪ್ರಶಾಂತಿಯನ್ನು ಆಸ್ವಾಧಿಸುವಂತೆ ಬಾಗಿಲ ಬಳಿ ನಿಂತು ಮೆಲ್ಲನೆ ಬಾಗಿಲು ಹಾಕಿದನು. ಬೆಳಕಿನಿಂದ ಬಂದಿದ್ದ ಅವನಿಗೆ ಸ್ವಲ್ಪ ಹೊತ್ತು ಒಳಗೆ ಏನೂ ಕಾಣಿಸಿರಲಿಲ್ಲ. ಕಣ್ಣು ಒಳಗಿನ ಬೆಳಕಿಗೆ ಹೊಂದಿಕೊಂಡಮೇಲೆ ತೊಟ್ಟಿಲು, ಅದರ ಪಕ್ಕದಲ್ಲಿ ಹಾಸಗೆಯಲ್ಲಿ ಕುಳಿತಿದ್ದ ಅವನ ಕೃಶಾಂಗಿ, ಅದಕ್ಕೆ ತುಸುದೂರದಲ್ಲಿಯೆ ಮೂಲೆಯಲ್ಲಿದ್ದ ದೊಡ್ಡ ಮಂಚ – ಎಲ್ಲ ಕ್ರಮೇಣ ದೃಷ್ಟಿಗೆ ಸ್ವಪ್ನವತ್ತಾಗಿ ಮೂಡಿದ್ದುವು.

“ಯಾಕೆ? ಬೆಳಕಂಡಿ ಬಾಗಿಲನ್ನೆಲ್ಲ ಹಾಕಿಬಿಟ್ಟೀಯಾ? ಒಂದು ಚೂರು ಗಾಳಿ ಬೆಳಕು ಓಡ್ಯಾಡಬಾರದೇನೇ?” ಎಂದು ಕಿಟಕಿ ಬಾಗಿಲುಗಳನ್ನು ತೆರೆಯತೊಡಗಿದನು.

“ಬಾಲೆಗೆ ಗಾಳಿ ಸೋಂಕು ಆಗ್ತದಂತೆ, ತೆಗೀಬ್ಯಾಡಿ. ರಣಬಿಸಿಲು ಬೇರೆ; ಕೆಟ್ಟ ಕೆಟ್ಟ ದೆಯ್ಯಗಿಯ್ಯ ಓಡಾಡ್ತವಂತೆ… ಥ್ಚು! ಹೇಳಿದ್ದೊಂದೂ ಗೊತ್ತಾಗಾದಿಲ್ಲ ನಿಮಗೆ. ಮಲಗಿದ್ದ ಬಾಲೇನೂ ಎಬ್ಬಿಸ್ತೀರಿ ಈಗ… ನಿಮಗೆ ಹಿಡಿದಿದ್ದೇ ಹಟ!” ಎಂದು ತೊಟ್ಟಿಲ ಹಗ್ಗಕ್ಕೆ ಒಂದು ಅರಿವೆಯ ತುಂಡನ್ನು ಅಡ್ಡಕಟ್ಟಿದ್ದಳು, ಮಗುವಿಗೆ ಬೆಳಕಿನ ಝಳ ಬೀಳದ ಹಾಗೆ.

ಬೆಳಕಂಡಿಯ ಬಾಗಿಲುಗಳನ್ನೆಲ್ಲ ತೆರೆದು ತಿರುಗಿದವನು ತೊಟ್ಟಿಲ ಹಗ್ಗ ಕಟ್ಟಿದ್ದ ಗಳುವಿಗೆ ಬಟ್ಟೆಸುತ್ತಿ ನೇತುಹಾಕಿದ್ದ ಕುಂಕುಮಾಂಕಿತವಾದ ತೆಂಗಿನಕಾಯನ್ನು ನೋಡಿ “ಇದೇನು ಇದು?” ಎಂದು ತಿರಸ್ಕಾರಪೂರ್ವಕವಾಗಿ ಕೇಳಿದನು.

ಅದೇನು ಎಂಬುದು ಅವನಿಗೂ ಗೊತ್ತಿದ್ದ ವಿಚಾರವೆ ಆಗಿತ್ತು. ಆದರೆ ಅವನು ನಿನ್ನೆ ತಾನೆ ತೀರ್ಥಹಳ್ಳಿಯಿಂದ ಹಿಂದಿರುಗಿದ್ದನು. ಪಾದ್ರಿಯ ಉಪದೇಶದ ಆವೇಶ ಇನ್ನೂ ಬಿಸಿಬಿಸಿಯಾಗಿಯೆ ಇತ್ತು. ಜೀವರತ್ನಯ್ಯ ಗೌಡ ಜನಾಂಗದಲ್ಲಿದ್ದ ಮೂಢಾಚಾರ ಮತ್ತು ಮೂಢನಂಬಿಕೆಗಳನ್ನು ಅಪಹಾಸ್ಯಮಾಡಿ ಖಂಡಿಸಿದ್ದ ಗಾಯದ ನೆತ್ತರು ಇನ್ನೂ ಹಸಿವಾಗಿಯೆ ಇತ್ತು. ಅದಕ್ಕಾಗಿ ತನ್ನ ಮತ್ತು ತನ್ನ ಜಾತಿಯವರ ವಿಚಾರವಾಗಿ ದೇವಯ್ಯನಿಗೆ ಜುಗುಪ್ಸೆ ಹುಟ್ಟಿತ್ತು; ತುಂಬ ಅವಮಾನಕ್ಕೆ ಗುರಿಯಾಗಿತ್ತು ಅವನ ಮನಸ್ಸು. ಅದರ ಪ್ರಭಾವವೆ ಆ ಪ್ರಶ್ನೆಯ ಧ್ವನಿಗೂ ಅದರ ಕರ್ಕಶಕ್ಕೂ ಕಾರಣವಾಗಿತ್ತು.

“ಕಲ್ಲೂರು ದೋಯಿಸರು ಹೆಸರು ಇಟ್ಟುಕೊಡಾಕೆ ಬಂದಿದ್ದಾಗ, ಬಾಲೆಗೆ ಜಕಣಿ ಪಂಜ್ರೋಳ್ಳಿ ಕಾಟ ಕೊಟ್ಟಾವು ಅಂತಾ, ಮಂತ್ರಿಸಿಕೊಟ್ಟಿದ್ರು…” ದೇವಮ್ಮ ಪೂರೈಸಿರಲಿಲ್ಲ.

“ಇದು?” ತೊಟ್ಟಿಲ ಹಗ್ಗಕ್ಕೆ ನೇತುಬಿದ್ದಿದ್ದ ಮತ್ತೆರಡು ವಸ್ತುವಿನೆಡೆಗೆ ಕೈತೋರಿ ಕೇಳಿದನು.

“ಕಣ್ಣಾಪಂಡಿತರ ಅಂತ್ರ.”

“ಇವೆಲ್ಲ ಏನು?” ಇನ್ನೂ ಕೆಲವು ಚಿಕ್ಕಚಿಕ್ಕ ಗಂಟುಗಳ ಕಡೆ ಕೈಮಾಡಿ ಪ್ರಶ್ನಿಸಿದನು.

“ದೇವರು ದಿಂಡರಿಗೆ ಹೇಳಿಕೊಂಡು ಕಾಣಿಕೆ ಕಟ್ಟಿದ್ದು.”

“ನಿನಗೇನು ಬೇರೆ ಕಸುಬಿಲ್ಲೇನು?…”

“ಅವೆಲ್ಲ ನಿಮಗ್ಯಾಕೆ? ಗಂಡಸ್ರಿಗೆ?…”

ದೇವಯ್ಯನ ರೀತಿಯಿಂದಲೂ ಧ್ವನಿಯಿಂದಲೂ ತನ್ನ ಗಂಡನ ಉದ್ದೇಶ ಒಳ್ಳೆಯದಲ್ಲ ಎಂಬುದೇನೂ ದೇವಮ್ಮಗೆ ಗೊತ್ತಾಗಿತ್ತು. ಆದರೆ ಮುಂದೆ ನಡೆದದ್ದಕ್ಕೆ ಅವಳ ಚೇತನ ಸಿದ್ಧವಾಗಿರಲಿಲ್ಲ. ಹಿಂದೆಲ್ಲ ಮೂದಲಿಸುತ್ತಿದ್ದಂತೆಯೊ ಬೈಯುತ್ತಿದ್ದಂತೆಯೊ ಇವತ್ತೂ ಮಾಡಬಹುದೆಂದು ಬಗೆದಿದ್ದಳು. ಆದರೆ ದೇವಯ್ಯ ಮೈಮೇಲೆ ಬಂದವನಂತೆ ಸರಸರಸರನೆ ತೆಂಗಿನಕಾಯಿ ಅಂತ್ರ ಕಾಣಿಕೆಗಳನ್ನೆಲ್ಲ ಕಿತ್ತು ಕಸದ ಮೂಲೆಗೆ ಎಸೆದುಬಿಟ್ಟನು: “ಅಯ್ಯೋ!” ಎಂದು ತತ್ತರಿಸುತ್ತ ತಡೆಯಲು ಎದ್ದಿದ್ದ ಬಾಣಂತಿ ಅವನ ಕೈಯ ನೂಕಿಗೆ ಸಿಕ್ಕಿ ಹಾಸಗೆಯ ಮೇಲೆ ಕುಸಿದು ಬಿಕ್ಕಿಬಿಕ್ಕಿ ಗೊಣಗಿಕೊಳ್ಳುತ್ತಾ  ಹೋಗಿ ಮಂಚದ ಮೇಲೆ ಮಲಗಿಕೊಂಡನು. ಅದೃಷ್ಟವಶಾತ್ ಮಗುವಿನ ನಿದ್ದೆಗೆ ಭಂಗ ಬಂದಿರಲಿಲ್ಲ.

ಮಂಚದ ಮೇಲೆ ಮಲಗಿಕೊಂಡ ದೇವಯ್ಯನ ಕಿವಿಗೆ, – ಆ ಕೋಣೆ ಅಷ್ಟು ನಿಃಶಬ್ದವಾಗಿತ್ತು, –  ತನ್ನ ಹೆಂಡತಿ ಬಿಕ್ಕಿಬಿಕ್ಕಿ ಸುಯ್ದು ಅಳುವ ಸದ್ದು, ತನ್ನ ಅಂತಃಪ್ರಜ್ಞೆಯ  ಭರ್ತ್ಸನೆಯೊ ಎನ್ನುವಂತೆ, ಕೇಳಿಸತೊಡಗಿ ಅವನ ಮನಸ್ಸನ್ನು ಕಲಕಿತು. ಶುದ್ಧ ವಿಚಾರ ದೃಷ್ಟಿಯಿಂದ ತಾನು ಮಾಡಿದುದು ತಪ್ಪಿಲ್ಲ ಎಂದು ಬುದ್ದಿ ವಾದಿಸುತ್ತಿದ್ದರೂ ಅವನ ಹೃದಯದಲ್ಲಿ ಏನೊ ಮರುಕ ತಲೆಹಾಕಿತ್ತು. ಚೆಲುವೆಯಾಗಿದ್ದ ತನ್ನ ಹೆಂಡತಿಯನ್ನು ಅವನು ಮದುವೆಯಾ ದಂದಿನಿಂದಲೂ ತುಂಬ ಮೋಹದಿಂದ ಪ್ರೀತಿಸಿದ್ದನು. ಅವಳೂ ತನ್ನ ಗಂಡನನ್ನು ಇನ್ನಿಲ್ಲವೆಂಬಂತೆ ಮುದ್ದಿಸಿದ್ದಳು;  ದೇವರೆಂಬಂತೆ ಗೌರವಿಸಿದ್ದಳು. ಪಾದ್ರಿಯ ಪ್ರಭಾವಕ್ಕೆ ತಾನು ಒಳಗಾಗುವವರೆಗೂ ಅವರಿಬ್ಬರಲ್ಲಿ ಎಷ್ಟು ಹೊಂದಾಣಿಕೆಯಿತ್ತೆಂದರೆ ಅದನ್ನು ಕಂಡು ಅತ್ತೆಗೂ ಒಮ್ಮೊಮ್ಮೆ ಕರುಬು ಮೂಡಿತ್ತು. ಈಗ ಈ ಸ್ಥಿತಿಗೆ ಬಂದಿದೆಯಲ್ಲಾ? ತನ್ನಗಾದರೂ ಏನು ತಪ್ಪು? ಮಗುವಿನ ಜ್ವರಕ್ಕೆ ಔಷಧಿ ಕೊಟ್ಟು ಗುಣಪಡಿಸುವುದಕ್ಕೆ ಬದಲು ತಾಯಿತಿ ಕಟ್ಟಿದ್ದನ್ನು ಕಿತ್ತುಹಾಕಿದ್ದು ತಪ್ಪೇ? ದಿಷ್ಟಿಮಣಿಯ ಹೆಸರಿನಲ್ಲಿ ಕೂಸಿನ ಕೊರಳಿಗೆ ನಾಣ್ಯ ರೂಪಾಯಿಗಳ ಭಾರವಾದ ಸರವನ್ನು ಹಾಕಿ, ಅದಕ್ಕೆ ಜೊಲ್ಲಿನವಾಸನೆ, ಕಕ್ಕು, ಹೇಲು, ಉಚ್ಚಿ, ಮಣ್ಣು, ಕೊಳೆ ಎಲ್ಲಾ ಹಿಡಿದು ಅಸಹ್ಯವಾಗಿದ್ದುದನ್ನು ತೆಗೆದೆಸೆದದ್ದು ತಪ್ಪೇ? ಧರ್ಮದ ಹೆಸರಿನಲ್ಲಿ ಆರೋಗ್ಯ ಮತ್ತು ನೈರ್ಮಲ್ಯಗಳನ್ನು ನಿರ್ಲಕ್ಷಿಸಿದ್ದನ್ನು ಖಂಡಿಸಿದ್ದು ತಪ್ಪೇ? ಕಲ್ಲು ಮಣ್ಣನ್ನು ದೇವರೆಂದು ನಂಬಿ, ಪೂಜಿಸಿ, ಹಾಳಾಗಿ ಹೋಗುತ್ತಿದ್ದಾರಲ್ಲಾ ಎಂದು ತುಳಸಿಯ ಕಲ್ಲನ್ನು ಕಿತ್ತುಹಾಕಲು ಹೋಗಿದ್ದು? ಸ್ವಲ್ಪ ತಪ್ಪರಿಬಹುದು! ಆದರೆ ಆ ಜೋಯಿಸ ಇವರಿಂದ ಸತ್ಯನಾರಾಯಣ ವ್ರತ ಮಾಡಿಸಿ, ಸುಳ್ಳುಸುಳ್ಳು ಕಟ್ಟು ಕಥೆಗಳನ್ನು ಪುರಾಣ ಎಂದು ಹೇಳಿ, ತನ್ನವರಿಗೆ ಸಂತರ್ಪಣೆಮಾಡಿಸಿ, ಇವರಿಗೆ ದಾರಿ ತಪ್ಪಿಸುವುದಲ್ಲದೆ ದಿಕ್ಕನ್ನೂ ತಪ್ಪಿಸುತ್ತಿದ್ದನಲ್ಲಾ ಅದನ್ನು ತಡೆದಿದ್ದು ತಪ್ಪೇ? ಆ ಹಳೆಮನೆ ಶಂಕರ ಹೆಗ್ಗಡೆಯ ಕುಟುಂಬವೆ ಹಾಳಾಗುವಂತಾಗಿದೆಯಲ್ಲಾ! ಪಾದ್ರಿ ಹೇಳುತ್ತಾರೆ: ಅವನ ಹೆಂಡತಿಗೆ ಕ್ಷಯ ಇರಬೇಕು. ಮಕ್ಕಳಿಗೂ ತಗುಲಿದೆಯೊ ಏನೊ? ಹೀಗೇ ಸುಮ್ಮನೆ ಬಿಟ್ಟರೆ ಮನೆಯವರೆಲ್ಲರೂ ಆ ಸಾಂಕ್ರಾಮಿಕ ರೋಗದಿಂದ ನರಳಿ ಸಾಯುತ್ತಾರಂತೆ. ಅಷ್ಟೆ ಅಲ್ಲಂತೆ; ಕಡೆಗೆ ಅವರ ಮನೇಲಿ ಊಟಮಾಡಿದವರಿಗೂ ಆ ಪಾತ್ರೆ ಪರಟಿ ಎಂಜಲಿನ ಮುಖಾಂತರ ಕ್ಷಯ ತಗುಲಲಿ ಅದು ಹರಡುತ್ತದಂತೆ. ಆದರೆ ಆ ಬೆಪ್ಪು, ಶಂಕರ ಹೆಗ್ಗಡೆ, ಮೂರುಹೊತ್ತೂ ಪೂಜೆಯಂತೆ, ದೆಯ್ಯದ್ಯಾವರುಗಳಿಗೆ ಹರಕೆಯಂತೆ, ಧರ್ಮಸ್ಥಳದಲ್ಲಿ  ಅವನ ಮೇಲೆ ಹುಯ್ಯಲು ಕೊಟ್ಟಿದ್ದಾರಂತೆ, – ಅಂತಾ, ಏನೇನೋ ನಂಬಿಕೊಂಡು, ಆ ಜೋಯಿಸರು, ಈ ಬಟ್ಟರು, ಆ ಗಣಮಗ, ಈ ಸುಡುಗಾಡು ಹಟ್ಟವರು – ಅವರನ್ನೆಲ್ಲ ಕರೆಸಿ, ಏನೇನೋ ಮಾಡಿಸಿ, ತಾನೂ ದಾರಿ ತಪ್ಪಿ, ಇತರರನ್ನೂ ದಿಕ್ಕುತಪ್ಪಿಸುತ್ತಿದ್ದಾನಲ್ಲಾ – ಇದನ್ನೆಲ್ಲಾ ತಿದ್ದಬಾರದೆ? – ಇವಳಿಗೆ ಹೇಳಿದರೆ ಸ್ವಲ್ಪವೂ ಗೊತ್ತಾಗುವುದಿಲ್ಲ. ಸುಮ್ಮನೆ ಅಳುವುದು, ಕಾಲು ಹಿಡಿದುಕೊಳ್ಳುವುದು, ಎರಡೇ ಗೊತ್ತು!…

ಆಲೋಚನೆಗಳ ಪೀಡನೆಗೆ ಸಿಕ್ಕಿದ್ದ ದೇವಯ್ಯ ಮೆಲ್ಲಗೆ ಹೆಂಡತಿಯ ಕಡೆಗೆ ನೋಡಿದನು. ಅವಳು ಮಲಗಿರಲಿಲ್ಲ. ಆದರೆ ಅಳುವುದನ್ನು ನಿಲ್ಲಿಸಿದಂತೆ ತೋರಿತು. ತೊಟ್ಟಿಲಲ್ಲಿ ಮಲಗಿದ್ದ ‘ಚೆಲುವಯ್ಯ’ ನನ್ನೆ  ನೋಡುತ್ತಿದ್ದಳು, ಆ ಸಂತೋಷದಲ್ಲಿ ಈ ದುಃಖವೆಲ್ಲ ಕೊಚ್ಚಿಹೋಯಿತೊ ಎನ್ನುವಂತೆ! ಹಾಗೆಯೆ ಮೆಲ್ಲನೆ ಎದ್ದು, ಬಾಗಿಲು ಸಂದಿಯ ಕಸದ ಮೂಲೆಗೆ ನಡೆದು, ಬಾಗಿ, ತನ್ನ ಗಂಡ ಎಸೆದಿದ್ದ ತೆಂಗಿನಕಾಯಿ. ಅಂತ್ರ, ಕಾಣಿಕೆಗಳನ್ನೆಲ್ಲ ಎತ್ತಿ ಹಣೆಗೆ ಮುಟ್ಟಿಸಿಕೊಂಡು, ಅವನ್ನೆಲ್ಲ ಗೋಡೆಯ ಗೂಡಿನಲ್ಲಿಟ್ಟು ಬಾಗಿಲು ಮುಚ್ಚಿ, ಮತ್ತೆ ಬಂದು ಹಾಸಗೆಯ ಮೇಲೆ ಕುಳಿತಳು.

“ಮಲಕ್ಕೊಳ್ಳೊದಿಲ್ಲೇನೆ?” ದೇವಯ್ಯನ ಧ್ವನಿ ಮೃದುವಾಗಿತ್ತು.

ದೇವಮ್ಮ ಮಗುವಿನ ಕಡೆ ನೋಡುತ್ತಿದ್ದಳು ತುಸು ತಿರುಗಿ ತಲೆಬಾಗಿದಳು: ಆದರೆ ಮಲಗಲಿಲ್ಲ. ಅವಳೂ ಅಷ್ಟು ಪ್ರೀತಿ ತೋರುತ್ತಿದ್ದ ತನ್ನ ಗಂಡ ಹೀಗಾಗಿ ಬಿಟ್ಟಿದ್ದರಲ್ಲಾ ಆ ಪಾದ್ರಿಯ ದೆಸೆಯಿಂದ ಎಂದು ಚಿಂತಿಸುತ್ತಾ, ಏನು ಮಾಡಿದರೆ ಇವರ ಮನಸ್ಸನ್ನು ಮತ್ತೆ ತಾನು ಗೆಲ್ಲಬಹುದು ಎಂದು ಹರುವು ನೆನೆಯುತ್ತಿದ್ದಳು. ಕೋಣೂರು ಮುಕುಂದಯ್ಯ ಗೌಡರ ಅಕ್ಕನಲ್ಲಿ ತಮ್ಮನ ಕೆಲವು ಧೀರ ಲಕ್ಷಣಗಳಿದ್ದು ಸಮಯ ಬಂದಾಗ ಅವಳನ್ನು ಕೈ ಬಿಡುತ್ತಿರಲಿಲ್ಲ.

“ಏನು? ಬಿಸಿಲು ಝಳ ಹೆಚ್ಚಾಯಿತೆ?” ಮತ್ತೆ ಉಪಚರಿಸುವ ಕೆಳದನಿಯಲ್ಲಿ ಪ್ರಶ್ನೆ ಹಾಕಿದ ದೇವಯ್ಯ ಮಂಚದಿಂದೆದ್ದು ಬೆಳಕಂಡಿಗಳ ಬಳಿಗೆ ಹೋಗಿ, ತಾನೆ ಸ್ವಲ್ಪ ಹೊತ್ತಿಗೆ ಮೊದಲು ತೆರೆದಿದ್ದ ಗವಾಕ್ಷದ ರೆಕ್ಕೆಗಳನ್ನು ಮುಚ್ಚಿದನು. ಕೋಣೆಯಲ್ಲಿ ಮೊದಲು ಇದ್ದಂತಹ ತಂಪಾದ ಕರ್ವೆಳಗು ಕವಿದು ಕಣ್ಣಿಗೆ ಹಿತವಾಯಿತು. ದೇವಯ್ಯ ಹಿಂತಿರುಗಿ ಬಂದು ಮಂಚದ ಮೇಲೆ ಮತ್ತೆ ಕಾಲುಚಾಚಿದನು.

“ಇನ್ನೆಷ್ಟು ದಿವಸ ನೆಲದ ಮೇಲೆ ಹಾಸಿಗೆ?” ಮತ್ತೆ ದೇವಯ್ಯ ಅಕ್ಕರೆಯ ದನಿಯಲ್ಲಿ ಕೇಳಿದನು.

ಕೋಣೆಯಲ್ಲಿ ಮೊದಲಿನ ಬೆಳಕು ಇದ್ದಿದ್ದರೆ, ದೇವಯ್ಯನಿಗೆ ಕಾಣಿಸುತ್ತಿತ್ತು, ಬಿಳಿಚಿದ್ದ ಹೆಂಡತಿಯ ಮುಖಕ್ಕೆ ನಸುಗೆಂಪೇರಿ ತುಟಿಯ ತುದಿಗಳಲ್ಲಿ ಕಿರುನಗೆಯ  ಮೊಗ್ಗೆ ಮಲರುತ್ತಿದ್ದುದು! ಆದರೂ ಅದನ್ನು ಗಂಡನಿಗೆ ತೋರಗೊಡಲು ನಾಚಿ ‘ಚೆಲುವಯ್ಯ’ನ ತಾಯಿ ಮೊಗದಿರುಹಿದ್ದಳು. ಅವಳಿಗೆ ಆ ಪ್ರಶ್ನೆಯ ಅರ್ಥ, ಧ್ವನಿ, ಉದ್ದೇಶ ಎಲ್ಲ ಚೆನ್ನಾಗಿ ಗೊತ್ತಾಗಿತ್ತು. ಮಂಚದ ಮೇಲೆ ತನ್ನ ಮಗ್ಗುಲಲ್ಲಿಯೆ ಮಲಗಬೇಕೆಂದು ಅನೇಕ ರೀತಿಗಳಲ್ಲಿ ದೇವಯ್ಯ ಹೆಂಡತಿಗೆ ಸೂಚನೆಯೀಯುತ್ತಲೆ ಇದ್ದನು.

“ಏನು? ಮಾತೇ ಆಡಾದಿಲ್ಲಾ? ನನ್ನ ಮೇಲೆ ಸಿಟ್ಟೇ?” ಈ ಸಾರಿ ದೇವಯ್ಯನ ಧ್ವನಿಯಲ್ಲಿ ದೈನ್ಯದ ಮತ್ತು ಶರಣಾಗತಿಯ ಭಂಗಿ ಎದ್ದು ಕಾಣುವಂತಿತ್ತು.

“ಅಮ್ಮ ಹೇಳಿದಾರೆ, ಮುಂದಿನ ಅಮಾಸೆ ಕಳೆದ ಮೇಲೆ, ಕಲ್ಲೂರು ಗಣಪನಿಗೆ ಹೇಳಿಕೊಂಡಿದಾರಂತೆ, ಅಲ್ಲಿಗೆ ಹೋಗಿ ಪೂಜೆಮಾಡಿಸಿಕೊಂಡು ಬರಬೇಕಂತೆ,…. ಆಮೇಲೆ”… ಎಂದು ಅರ್ಧಕ್ಕೇ ಇಂಗಿತವಾಗಿ ಮಾತು ನಿಲ್ಲಿಸಿದ್ದಳು ದೇವಮ್ಮ.

ದೇವಯ್ಯನಿಗೆ, ಮತ್ತೆ, ಕಡಲೆ ತಿನ್ನುವಾಗ ಕಲ್ಲು ಅಗಿದ ಹಾಗೆ ಆಗಿತ್ತು! ‘ಅಂತೂ ಸುಖ ಇಲ್ಲ, ಈ ದೇವರು ದಿಂಡಿರುಗಳಿಂದ!’ ಎಂದುಕೊಂಡಿತು ಅವನ ಮನಸ್ಸು. ಅವನ ಆತುರತೆಯ ತೇರಿನ ಗಾಲಿಗೆ ಬಲವಾದ ಪೆಟ್ಟೆಮಣೆ ಹಾಕಿದಂತಾಗಿತ್ತು ಹೆಂಡತಿಯ ಹೇಳಿಕೆ. ಅವನ ಹುಡುಗುಬುದ್ದಿಗೆ ಹೇಗೆ ಗೊತ್ತಾಗಬೇಕು, ತನ್ನ ಬಾಣಂತಿ ಹೆಂಡತಿಯ ಆರೋಗ್ಯ ರಕ್ಷಣೆಯ ಸಲುವಾಗಿಯೆ ಅವನ ಅಮ್ಮ ಈ ಪೂಜೆ ಆ ವ್ರತ ಇತ್ಯಾದಿ ಧಾರ್ಮಿಕ ಪ್ರತಿಮೆಗಳ ರೂಪದಿಂದ ಅವನ ವಿವೇಕದೂರವಾದ ಆತುರತೆಗೆ ಮೂಗುದಾರ ಹಾಕುತ್ತಿದ್ದಾರೆ ಎಂದು? ಯಾವುದನ್ನು ನೇರವಾಗಿ ಹೇಳಬಾರದೊ, ಹೇಳಿದರೆ ಪರಿಣಾಮಕಾರಿಯಾಗುವುದಿಲ್ಲವೊ ಅದನ್ನು ಅನ್ಯ ವಿಧಾನಗಳಿಮದ ಸಾಧಿಸುತ್ತದೆ ಸಮಾಜದ ಸೌಜನ್ಯ, ದಾಕ್ಷಿಣ್ಯ ಮತ್ತು ಸಭ್ಯತೆ.

“ಮೇಲಕ್ಕೆ ಬರ್ತಿಯಾ?” ಗಂಡನ ಧ್ವನಿಯಲ್ಲಿ ಯಾಚನೆ ಇತ್ತು.

ಅದನ್ನು ಗುರುತಿಸಿ ದೇವಮ್ಮಗೆ ಎದ್ದು ಹೋಗಬೇಕೆಂದು ಮನಸ್ಸಾಯಿತು. ಆದರೆ ತಡೆದಳು. ಕೂಸಿನ ಲಾಲನೆಪಾಲನೆಯಲ್ಲಿ ಮಗ್ನಳಾಗಿ ತನ್ನ ಸ್ವಂತ ಸೀರೆ ಬಟ್ಟೆಯ ಶೌಚ ಸೌಂದರ್ಯಗಳ ವಿಚಾರವನ್ನೆ ಅವಳು ಎಷ್ಟೋ ಕಾಲದಿಂದ ಮರೆತುಬಿಟ್ಟಳು. ಈಗಲೂ ಒಂದು ಬಡ್ಡು ಸೀರೆಯನ್ನೆ ಉಟ್ಟಿದ್ದಳು. ಅದರಲ್ಲಿ ಚೆಲುವಯ್ಯನ ಜೊಲ್ಲುಗಿಲ್ಲು ಎಲ್ಲದರ ವಾಸನೆಯೂ ಇತ್ತು. ತನ್ನ ಗಂಡನಿರುವ ಸದ್ಯದ ಮನಃಸ್ಥಿತಿಯಲ್ಲಿ ಅವರಿಗೆ ಜುಗುಪ್ಸೆ ಬರುವಂತಾದರೆ?

ತುಸು ತಲೆ ಎತ್ತಿ ಮಂಚದಕಡೆ ನೋಡುತ್ತಾ ಹೇಳಿದಳು: “ನನ್ನ ಬಟ್ಟೆ ಕೊಳಕಾಗದೆ….”

“ಆದರೆ ಆಗಲಿ, ಬಾ.”

ದೇವಮ್ಮ ಎದ್ದು ತೊಟ್ಟಲನ್ನು ಬಳಸಿ ಹೋಗಿ ಮಂಚದ ಪಕ್ಕದಲ್ಲಿ ತುಂಬ ಸಂಕೋಚದಿಂದ ನಿಂತಳು. ಮಲಗಿದ್ದ ದೇವಯ್ಯ ಅವಳ ಕೈ ಹಿಡಿದು ಪಕ್ಕದಲ್ಲಿ ಕೂರುವಂತೆ ಮಾಡಿದನು. ಸ್ವಲ್ಪ ಹೊತ್ತು ಯಾರೂ ಮಾತಾಡಲಿಲ್ಲ ಗಂಡ ಮಾತನಾಡಿದ ಮೇಲೆಯೆ ತಾನು ಮಾತನಾಡುವುದೆಂದು ದೇವಮ್ಮ ನಿರ್ಧರಿಸಿದ್ದಳು. ದೇವಯ್ಯ ಹೆಂಡತಿಯ ಕಡೆ ನೋಡುತ್ತಾ ಸ್ವಲ್ಪ ಕಾದನು. ಅವನಿಗೆ ಅನುಭವದಿಂದ ಗೊತ್ತಿತ್ತು, ತನ್ನ ಹೆಂಡತಿ ಮಾತು ಪ್ರಾರಂಭಿಸುವುದು ಹರ್ಮಾಗಾಲ ಎಂದು. ಅವನೇ ಪ್ರಾರಂಭಿಸಿದನು:

“ಬಹಳ ಬಡಕಲಾಗಿಬಿಟ್ಟಿದ್ದೀಯ! ಮುಖ ಎಲ್ಲ ಬಿಳಚಿಕೊಂಡು ಹೋಗಿದೆ!” ಆ ನಸುಗತ್ತುಲಲ್ಲಿ ಅದು ಕಾಣಿಸುತ್ತಿರಲಿಲ್ಲ, ಬೆಳಕಿನಲ್ಲಿ ಕಂಡದ್ದನ್ನೆ ಕುರಿತು ಹೇಳಿದನು ದೇವಯ್ಯ. ಅವಳು ಏನನ್ನೂ ಹೇಳಲಿಲ್ಲ; ತನ್ನ ಕೈ ಹಿಡಿದಿದ್ದ ಗಂಡನ ಕೈಯನ್ನೆ ನೋಡುತ್ತಿದ್ದಳು.

“ನಿನ್ನ ಮುಂಗೈಗೆ ಹಚ್ಚಿಕುಚ್ಚಿಸಿಕೊಳ್ಳದಿದ್ದರೆ ಎಷ್ಟು ಚೆನ್ನಾಗಿ ಕಾಣ್ತಿತ್ತು?”

“ಅದು ಶಿವನ ಜಡೆ! ಮುತ್ತೈದೆಗೆ ಮಂಗಳವಂತೆ…” ನಾಚಿನಾಚಿ ಹೇಳಿದ್ದಳು ದೇವಮ್ಮ.

“ಅದೆಲ್ಲ ಬರೀ ಕಂದಾಚಾರ! ಆ ಪಾದ್ರೀ ಹೆಂಡತಿ ಮಕ್ಕಳು ಯಾರೂ ಕುಚ್ಚಿಸಿಕೊಂಡಿಲ್ಲ. ಎಲ್ಲ ಚೆಂದಾಗಿದಾರಲ್ಲ!….”

ಅದಕ್ಕೇನೂ ಉತ್ತರ ಹೇಳದೆ ನೀಡಿದಾಗಿ ಸುಯ್ದಳು ದೇವಮ್ಮ. ಆ ಪಾದ್ರಿ, ಅವನ ಹೆಂಡತಿ ಮಕ್ಕಳು, ಅವನ ವಿಷಯ ಬಂದರೆ ಸಾಕು, ದೇವಮ್ಮನಿಗೆ ಹಾವುಮೆಟ್ಟಿದ ಹಾಗೆ ಆಗುತ್ತಿತ್ತು.

“ನಮ್ಮ ತರಾ ಗೊಬ್ಬೆ ಕಟ್ಟಿ, ಸೀರೆ ಉಡಾಕಿಂತ ಆ ಪಾದ್ರೀ ಮನೇರು ಉಡಾಹಂಗೆ ಉಟ್ಟರೆ ಚೆಂದಾಗಿರ್ತದೆ” ಒತ್ತಿ ಹೇಳಿದನು ಮತ್ತೆ ದೇವಯ್ಯ.

“ಅದೇ ಬಿರಾಂಬ್ರ ಉಡಿಗೆ?”

“ನೋಡು. ಆ ಪಾದ್ರೀ ಹೆಂಡತಿ ಮಕ್ಕಳು ಬ್ರಾಂಬ್ರ ಹಾಂಗೇನೂ ಅಲ್ಲ. ಗಂಡಸರ ಸಂಗಡ ಸಲೀಸು ಮಾತು ಕತೆ ಆಡ್ತಾರೆ; ಕೂತ್ಗೂತಾರೆ! ನಗ್ತಾರೆ; ಹಾಸ್ಯಮಾಡ್ತಾರೆ! ನಿಮ್ಮ ಹಾಮಗೆ ತಿಂಗಳಿಗೆ ಮೂರುದಿನ ‘ಹೊರಗೆ’ ಅಂತಾ, ಹಿತ್ತಲು ಕಡೇಲೋ ಮುರಿನ ಒಲೆ ಹತ್ರಾನೋ ರಾತ್ರಿಯೆಲ್ಲ ಬಿದ್ದುಕೊಳ್ಳೂದು ಇಲ್ಲ…”

“ಕಿಲಸ್ತರಾದ ಮಾತ್ರಕ್ಕೆ ಅವರೇನು ಮುಟ್ಟಾಗೋದಿಲ್ಲೇನು?” ಸವಾಲು ಹಾಕಿದಂತೆ ಪ್ರಶ್ನಿಸಿದ್ದಳು, ತುಸು ಚಕಿತೆಯಾಗಿಯೆ, ದೇವಮ್ಮ.

“ಹೆಂಗಸರು ಅಂದಮೇಲೆ ಮುಟ್ಟಾಗ್ದೆ ಇರ್ತಾರೇನು? ನಿಮ್ಮ ಹಾಂಗೆ ಶಾಸ್ತ್ರಗೀಸ್ತ್ರ ಅಂತಾ ಹೊರಗೆ ಕೂರೋದಿಲ್ಲ. ನಮ್ಮ ಹೆಂಗಸ್ರು ಹಿತ್ತಲು ಕಡೇಲಿ, ಅಲ್ಲಿ ಇಲ್ಲಿ ಎಲ್ಲಾದರಲ್ಲಿ, ಕಂಬಳಿಚಾಪೆ ಹಾಕಿಕೊಂಡು ಬಿದ್ದುಕೊಳ್ತಾರೆ ಅಂತ ಕೇಳಿ, ಅವರು ದಿಗಿಲು ಬಿದ್ದ್ರು! ಮುಚ್ಚು ಮರೆ ಬಾಗಿಲು ಗೀಗಿಲು ಏನೂ ಇಲ್ಲದೆ ರಾತ್ರಿ ಕಾಲದಲ್ಲೂ ಹಾಂಗೆ ಮಲಗಿಕೊಳ್ಳೋದು ಉಂಟೇ ಎಂದು!…

“ಇಸ್ಸಿ! ಥೂ! ಹೊಲೇರಿಗಿಂತಾ ಅತ್ತತ್ತ ಆ ಕಿಲಸ್ತರು! ನಮ್ಮ ಮುಕುಂದ ಹೇಳ್ತಿದ್ದ, ‘ಬೆಟ್ಟಳ್ಳಿ ಬಾವ ಆ ಪಾದ್ರೀನೆ ದೊಡ್ಡ ಪಮಡಿತ ಅಂತ ತಿಳುಕೊಂಡಾನೆ. ಕಲ್ಲೂರು ಗಣಪತಿ ದೇವಸ್ಥಾನದ ಹತ್ರ ಹೊಳೇದಂಡೆ ಮಂಟ ಪದಾಗೆ ಒಬ್ಬ ಗಡ್ಡದಯ್ಯ ಬಂದಿದಾನಂತೆ, ಈ ಪರ್ಪಂಚದಾಗೆ ಇರೋದೆಲ್ಲ ಅವನಿಗೆ ಗೊತ್ತಂತೆ. ಅವನ ಮುಂದೆ ಈ ಪಾದ್ರಿ ಸಿಂಹದ ಮುಂದೆ ಸಿಂಗಳೀಕ! ನಮ್ಮ ಬಾವ ಒಂದು ಸಾರಿ ಹೋಗಿ ಅವನ ಹತ್ರ ಮಾತಾಡಿ ಬರ್ಲಿ. ಗೊತ್ತಾಗ್ತದೆ,’ ಅಂತಾ.”

“ಯಾರು? ನಿನ್ನ ತಮ್ಮನಾ? ಅಂವ ಬಿಡು, ಆ ಐಗಳ ಸಂಗಡ ಏನೇನೋ ಪುರಾಣ ಓದ್ತಾ ಬಾಯಿಗೆ ಬಂದಹಾಂಗೆ ಮಾತಾಡ್ತಾನೆ.”

“ಅಂದ್ರೆ? ನಿಮ್ಮ ಪಾದ್ರಿ ಹೇಳೋದು ಮಾತ್ರ ಸತ್ಯ; ಬಾಕಿದ್ದೋರು ಹೇಳೋದೆಲ್ಲ ಸುಳ್ಳೋ…? ಅದಕ್ಕೇ ಅಂತಾ ಕಾಣ್ತದೆ. ಯಾರ್ಯಾರೊ ಏನೇನೋ ಆಡಿಕೊಳ್ಳೋದು, ನಿಮ್ಮ ಸುದ್ದಿ!”

“ಏನು ಆಡಿಕೊಳ್ಳೋದು?”

“ಪಾದ್ರಿ ನಿಮ್ಮನ್ನೂ ಜಾತಿಗೆ ಸೇರಿಸ್ತಾನೆ ಅಂತಾ.”

“ಈ ಮೂಢ ಜಾತೀಲಿ ಇರೋಕಿಂತ ಅವರ ಜಾತಿಗೆ ಸೇರೋದೆ ವಾಸಿ ಅಂತ ಕಾಣ್ತದೆ….”

“ನಮ್ಮನ್ನ ಬಾವಿಗೋ ಕೆರೆಗೋ ತಳ್ಳಿ ಆಮ್ಯಾಲೆ ಏನು ಬೇಕಾದ್ರೂ ಮಾಡಿ!….”

ದೇವಮ್ಮನ ಕಂಠ ಗದ್ಗದವಾಗಿ, ಮಾತು ಬಿಕ್ಕಳಿಸುತ್ತಿತ್ತು. ಸೆರಗಿನಿಂದ ಬಲಗೈಯಲ್ಲಿ ಕಣ್ಣೊರಸಿಕೊಂಡಳು. ಅವಳ ಎಡಗೈಯನ್ನು ಹಿಡಿದುಕೊಂಡಿದ್ದ ದೇವಯ್ಯ ಅದನ್ನು ಸವರುತ್ತಾ “ಹುಚ್ಚಿಕಣೇ ನೀನು, ಬರೀ ಹುಚ್ಚಿ, ಅವರಿವ್ರು ಹೇಳ್ತಾರೆ ಅಂತಾ ನೀನ್ಯಾಕೆ ಅಳೋದು?…. ಆಗಲಿ, ನಿನ್ನ ತಮ್ಮ ಹೇಳಿದ್ನೂ ಮಾಡೇಬಿಡ್ತೀನಿ…. ಯಾವತ್ತಾದರೂ ಒಂದು ದಿವಸ ನೋಡ್ತೀನಿ ಆ ಗಡ್ಡದಯ್ಯನ್ನ. ಅಳಬೇಡ, ಮಾರಾಯ್ತಿ…”

“ಗಣಪನ ಪೂಜೆಗೆ ಹೋಗ್ತೀವಲ್ಲಾ? ಕಲ್ಲೂರು ದೇವಸ್ಥಾನಕ್ಕೆ? ಆವಾಗ್ಲೆ ಬನ್ನಿ, ನಮ್ಮ ಸಂಗಾಡಾನೆ ಮುಕುಂದನೂ ಬರ್ತಾನಂತೆ!”