ಯಾವ ದಿನ ಅರುಣೋದಯಕ್ಕೆ ಮುನ್ನ, ಹುಲಿಕಲ್ಲು ನೆತ್ತಿಯ ಕಲ್ಲುಮಂಟಪದಲ್ಲಿ ಆ ಇರುಳನ್ನು ಕಳೆದಿದ್ದ ಗುತ್ತಿ, ತಾನು ಹಾರಿಸಿಕೊಂಡು ಬಂದ ತಿಮ್ಮಿಯೊಡನೆ ಕಾಡಿನ ಕಳ್ಳದಾರಿಯಲ್ಲಿ ನಡೆದು ಹಾರಿಸಿಕೊಂಡು ಬಂದ ಹುಡುಗಿ ತಿಮ್ಮೊಯೊಡನೆ ಕಾಡಿನ ಕಳ್ಳದಾರಿಯಲ್ಲಿ ನಡೆದು ಸಿಂಬಾವಿಯ ತಮ್ಮ ಕೇರಿಯನ್ನು ಗುಪ್ತವಾಗಿ ಸೇರಲು ಯೋಚಿಸಿ, ಗುಡ್ಡವಿಳಿಯತೊಡಗಿದ್ದನೋ ಅದೇ ದಿನ ಅದೇ ಹೊತ್ತಿನಲ್ಲಿ ಸಿಂಬಾವಿಯ ದೊಡ್ಡ ಚೌಕಿಮನೆಯ ಒಂದು ಕಗ್ಗತ್ತಲೆ ಕವಿದಿದ್ದ ಕೋಣೆಯಲ್ಲಿ ಮಲಗಿದ್ದ ಭರಮೈಹೆಗ್ಗಡೆಯವರು ನಿದ್ದೆಯಿಲ್ಲದೆ ಹೊರಳಿ ಗುತ್ತಿಯನ್ನೆ ನೆನೆಯುತ್ತಿದ್ದರು. ತಾವು ಬರೆದು ಅವನ ಕೈಯಲ್ಲಿ ಕಳುಹಿಸಿದ್ದ ಕಾಗದಕ್ಕೆ ಏನು ಉತ್ತರ ಬರುತ್ತದೆಯೋ ಎಂದು ಕಾತರರಾಗಿದ್ದರು. ತಮ್ಮ ಹೆಂಡತಿ ಜಟ್ಟಮ್ಮನ ಅನುರೋಧದಿಂದಾಗಿ ಹಳೆಮನೆಗೆ ಹೆಣ್ಣು ಕೊಟ್ಟು ಹೆಣ್ಣು ತರುವ ಆಲೋಚನೆಯನ್ನು ಕೈಬಿಟ್ಟಿದ್ದರು. ಆದರೆ ಹೂವಳ್ಳಿ ವೆಂಕಟಪ್ಪ ನಾಯಕರ ಮಗಳನ್ನು ತಮಗೆ ಮದುವೆ ಮಾಡಿಕೊಡುವಂತೆ ಅವರನ್ನು ಒಪ್ಪಿಸುವ ಭಾರವನ್ನು ಸುಬ್ಬಣ್ಣಹೆಗ್ಗಡೆಯವರ ಮೇಲೆಯೆ ಹಾಕಿದ್ದರು.

ಭರಮೈಹೆಗ್ಗಡೆಯವರು ಮಲಗಿದ್ದ ಮಂಚ ಇಬ್ಬರೂ ಆರಾಮವಾಗಿ ಮಲಗುವಷ್ಟು ಅಗಲವಾಗಿದ್ದರೂ, ಅವರು ತಡಿ ದಂಪತಿಗಳಿಗಾಗಿಯೆ ರಚಿತವಾಗಿದ್ದು ವಿಶಾಲವಾಗಿದ್ದರೂ, ಮಂಚದ ಮೇಲೆ ಅವರೊಬ್ಬರೇ ಮಲಗಿ ಹೊರಳುತ್ತಿದ್ದರು. ಅವರ ಹೆಂಡತಿ ಕೋಣೆಯಲ್ಲಿ ಮಲಗಿರಲಿಲ್ಲ ಎಂದಲ್ಲ. ಜಟ್ಟಮ್ಮ ಅಲ್ಲಿಯೆ ಮಲಗಿದ್ದರು ಕೆಳಗೆ ಮೆಲದಮೇಲೆ, ಒಂದು ಚಾಪೆಕಂಬಳಿ ಹಾಸಿಕೊಂಡು. ನಿನ್ನೆ ಬೈಗು ಅವರಿಗೂ ಅವರ ನಾದಿನಿ ಲಕ್ಕಮ್ಮಗೂ ನಡೆದಿದ್ದ ಜಗಳದಲ್ಲಿ ಭರಮೈಹೆಗ್ಗಡೆ ತಂಗಿಯ ಪರ ವಹಿಸಿದ್ದರ ಅಥವಾ ವಹಿಸಿದ್ದರೆಂದು ಜಟ್ಟಮ್ಮ ಭಾವಿಸಿದ್ದುದರ ಪರಿಣಾಮವಾಗಿ!

ನಾಡಿಗೆಲ್ಲ ಬೆಳಕು ಬಿಟ್ಟಿದ್ದರೂ ಸಿಂಬಾವಿಗೆ ಇನ್ನೂ ಬೆಳಕು ಬಿಟ್ಟಿರಲಿಲ್ಲ. ಆ ಮನೆಗೆ ಮುಟ್ಟಿಕೊಂಡಂತೆಯೆ ಕಾಡುತುಂಬಿದ್ದ ಗುಡ್ಡವೊಂದು ಅರ್ಧ ಆಕಾಶದವರೆಗೂ ಎದ್ದು ನಿಂತು ಸುತ್ತುವರಿದಂತಿತ್ತು. ಸೂರ್ಯ ಸಿಂಬಾವಿ ಮನೆಗೆ ಪೂರ್ವ ದಿಕ್ಕಿನಲ್ಲಿ ಕಾಣಿಸಿಕೊಳ್ಳಬೇಕಾದರೆ ಗುಡ್ಡವೇರಿ ಬಹುದೂರ ಬರಬೇಕಾಗಿತ್ತು.

ಆದರೆ ಜಟ್ಟಮ್ಮ ಬೆಳಕಿಗಾಗಿ ಕಾಯಲಿಲ್ಲ. ಕೋಳಿ ಕೂಗಿದ್ದೆ ಅವರಿಗೆ ಸಾಕಾಗಿ, ಚಾಪೆಯಿಂದೆದ್ದು ದಿನನಿತ್ಯದ ಮನೆಕೆಲಸ ಪ್ರಾರಂಭಿಸಲು ಅಡುಗೆಮನೆ ಕಡೆಗೆ ಹೋದರು. ಕಡಗ ಬಳೆಗಳ ಕಿಣಿಕಿಣಿ ಸ್ದಿಗೆ ಆ ಕಡೆ ತಿರುಗಿ, ಮೆಲ್ಲನೆ ಬಾಗಿಲು ತರೆದು ಅವರು ಹೋದದ್ದನ್ನು ಹೆಗ್ಗಡೆ ನೋಡಿದ್ದರು. ಅಷ್ಟೆ ಅಲ್ಲ, ಸಣ್ಣದನಿಯಲ್ಲಿ ಹೆದರಿ ಹೆದರಿ ಹೆಸರು ಹಿಡಿದೂ ಕರೆದಿದ್ದರು ‘ಜಟ್ಟೂ!’ ಎಂದು. ಆದರೆ ಅವರು ತುಸುವೂ ನಿಲ್ಲದೆಯೆ, ಹಿಂದಿರುಗಿಯೂ ನೋಡದೆ, ಹೆಗ್ಗಡೆ ಸಂಕಟವುಕ್ಕುವಂತೆ ಮಾಡಿದ್ದರು.

ಜಟ್ಟಮ್ಮ ಹೋಗುವಾಗ ಆ ಕೋಣೆಗಿದ್ದ ಒಂದೇ ಬಾಗಿಲನ್ನು ಹಾಕಿಕೊಳ್ಳದೆ ಹಾರುಹೊಡೆದೆ ಹೋಗಿದ್ದರು. ಅದರ ಮೂಲಕ ಹೌದೊ ಅಲ್ಲೊ ಎನ್ನುವಷ್ಟು ಬೆಳಕು, ಕತ್ತಲೆಗೆ ಸೋತು ಕರಿಚಿಕೊಂಡಿದ್ದ ಬೆಳಕು, ಪ್ರವೇಶಿಸಿತ್ತು. ಕತ್ತಲೆಗೆ ತುಂಬ ಅಭ್ಯಾಸವಾಗಿದ್ದ ಹೆಗ್ಗಡೆಯ ಕಣ್ಣಿಗೆ ಆ ಬೆಳಕಿನ ನೇಸಲಿನಲ್ಲಿ ಕೋಣೆಯಲ್ಲಿದ್ದ ಪರಿಚಿತ ವಸ್ತುಗಳು ಆಕಾರಮಾತ್ರವಾಗಿ ಕಾಣತೊಡಗಿದ್ದುವು: ಜಿಡ್ಡು ಹಿಡಿದ ಹಿತ್ತಾಳೆಯ ದೀಪದ ಕಂಬದ ಮೇಲೆ, ಅರೆ ಉರಿದು ಆರಿಸಿದ್ದ ಬತ್ತಿಯ, ಹರಳೆಣ್ಣೆಯ ಕರಿಹಣತೆ: ಮೂಲೆಯಲ್ಲಿ ಜಟ್ಟಮ್ಮನ ಬೆಲೆಯುಳ್ಳ ಸೀರೆ ಬಟ್ಟೆ ಒಡವೆಗಳನ್ನೆಲ್ಲ ಗರ್ಭದಲ್ಲಿ ಅಡಗಿಸಿಕೊಂಡಿದ್ದ ಒಂದು ದೊಡ್ಡ ಸಂದೂಕ; ಅದೇ ಮೂಲೆಯಲ್ಲಿ ಸಂದುಕದ ಹಿಂದೆ ಎರಡು ಗೋಡೆಗಳು ಸೇರುವೆಡೆ, ಹತ್ತೆ ಕೆಳಗಾಗಿ ಒರಗಿಸಿಟ್ಟಿದ್ದ ಜೋಡುನಳಿಕೆಯ ಕೇಪಿನ ಕೋವಿ; ಎಲ್ಲಕ್ಕೂ ಹೆಚ್ಚಾಗಿ ಮನೋವೇದಕವಾಗಿ, ತೊಟ್ಟಿಲನ್ನು ತೂಗುಹಾಕುವುದಕ್ಕಾಗಿ ನಾಗಬಂದಿಗೆಯಿಂದ ನಾಗಂದಿಗೆಗೆ ಅಡ್ಡಲಾಗಿ ಹಾಕಿದ್ದ ನಿಡಿದಾದ ಬಲಿಷ್ಠವಾದ ಹೆಬ್ಬಿದಿರಿನ ಗಳು, ಮತ್ತು ಅದಕ್ಕೆ ನೇಲು ಬೀಳುವಂತೆ ಹಾಕಿದ್ದು, ಉಪಯೋಗವಿಲ್ಲದಿದ್ದುದರಿಂದ ಬಹಳ ಕಾಲದಿಂದಲೂ ಗಳುವಿಗೆ ಸುತ್ತಿದ್ದ ತೊಟ್ಟಿಲ ಹಗ್ಗ!

ವಸ್ತುವಿನಿಂದ ವಸ್ತುವಿಗೆ ನಿರ್ಲಕ್ಷವಾಗಿ ಅಲೆದೆಲೆದು ಹೋಗುತ್ತಿದ್ದ ಹೆಗ್ಗಡೆಯ  ಕಣ್ಣು ಆ ಗಳುವನ್ನೂ ಅದಕ್ಕೆ ಸುತ್ತಿದ್ದ ಹಗ್ಗವನ್ನೂ ತಲುಪಿದೊಡನೆ ಮುಗ್ಗುರಿಸಿದಮತೆ, ಯಾರೊ ಹಿಡಿದಲುಬಿನಂತೆ, ಫಕ್ಕನೆ ನಿಂತುಬಿಟ್ಟಿತು! ತೊಟ್ಟಿಲ ನೇಣು ಸುತ್ತಿದ್ದ ಆಗಳು ಅವರನ್ನು ತಮ್ಮ ಬದುಕಿನ ಸಮಸ್ಯೆಯ ಕೇಂದ್ರಕ್ಕೆ ಕರೆತಂದು ಬಿಟ್ಟಿತ್ತು!

ಆ ನೇಣಿಗೆ ಒಮ್ಮೆಯಾದರೂ ತೊಟ್ಟಿಲನ್ನು ಹೊರುವ ಭಾಗ್ಯ ಒದಗಿರಲಿಲ್ಲ; ಆ ಗಳುವಿಗೆ ಒಮ್ಮೆಯಾದರೂ ಅಳುವ ಕಂದನ ಹೊತ್ತು ತೂಗುವ ಮಧುರ ಭಾರವನ್ನು ಸವಿಯುವ ಯೋಗ ಒದಗಿರಲಿಲ್ಲ. ಅದು ತನ್ನ ಹೆಂಡತಿಯ ಬಂಜೆತನದ ಪ್ರತೀಕವಾಗಿ ತೋರುತ್ತಿತ್ತು ಹೆಗ್ಗಡೆಗೆ. ವಂಶೋದ್ಧಾರಕನಾದ ಕುಮಾರನೊಬ್ಬನನ್ನು ಪಡೆಯುವ ನೆವವೊಡ್ಡಿ ಹೆಗ್ಗಡೆ ಮತ್ತೊಂದು ಮದುವೆಯಾಗುವ ಪ್ರಸ್ತಾಪವೆತ್ತಿದ್ದಾಗ ಅವರ ಹೆಂಡತಿ ಜಟ್ಟಮ್ಮ ಆ ತೊಟ್ಟಿಲ ಹಗ್ಗದಿಂದಲೇ ಅದೇ ಗಳುವಿಗೆ ನೇಣುಹಾಕಿಕೊಳ್ಳುತ್ತೇನೆ ಎಂದು ಹೆದರಿಸಿದ್ದ ಭಯಂಕರ ಪ್ರಸಂಗವಂತೂ ಮರೆಯುವಂತಿರಲಿಲ್ಲ. ಮದುವೆಯಾದ ಮೊದಲ ದಿನಗಳಲ್ಲಿ ಅತ್ಯಂತ ಸವಿಯ ಮತ್ತು ಸುಖದ ಅನುಭವಗಳಿಗೆ ಆಕರವಾಗಿದ್ದ ಆ ಕೋಣೆ ಬರಬರುತ್ತಾ ಹೆದರಿಕೆಯ ಹೆಗ್ಗವಿಯಾಗಿಬಿಟ್ಟಿತ್ತು.

ಸಾಧಾರಣವಾಗಿ ಬಿಸಿಲು ಇಣುಕುವವರೆಗೂ ಮಲಗಿರುತ್ತಿದ್ದ ಭರಮೈಹೆಗ್ಗಡೆಗೆ ಆವೊತ್ತು ಇನ್ನು ಮುಂದೆ ಮಲಗಲಾಗಲಿಲ್ಲ. ಕೋಣೆಯಲ್ಲಿ ಕತ್ತಲೆ ತುಂಬಿದ್ದಂತೆಯೆ, ಹೊದೆದಿದ್ದ ಶಾಲನ್ನು ಕೆಲಕ್ಕೆ ಸರಿಸಿ, ಎದ್ದು ಕುಳಿತರು ಮಂಚದಮೇಲೆ, ಕಾಲು ಇಳಿಬಿಟ್ಟುಕೊಂಡು. ಸೊಂಟದ ಉಡಿದಾರಕ್ಕೆ ಕಟ್ಟಿದ್ದ ಲಂಗೋಟಿ ವಿನಾ ಸಂಪೂರ್ಣ ನಗ್ನರಾಗಿದ್ದ ಅವರು ಕೈನೀಡಿ ತಡಕಿದರು, ರಾತ್ರಿ ಮಲಗುವಾಗ ಬಿಚ್ಚಿ ತಲೆದಿಸಿ ಇಟ್ಟಿದ್ದ ಅಡ್ಡಪಂಚೆಗಾಗಿ. ಕತ್ತಲೆಯಿದ್ದರೂ ಕಣ್ಣಂದಾಜಿನಿಂದಲೆ ಅದನ್ನು ಹೆಗಲಮೇಲೆ ಹಾಕಿಕೊಂಡು ಎದ್ದುನಿಂತರು. ತಮ್ಮ ದೇಹವೆ ತಮಗೆ ಕಾಣದಷ್ಟು ಕಪ್ಪು ಕವಿದಿತ್ತಾದರೂ ಹೆಗ್ಗಡೆ ಸ್ವಾಭಾವಿಕವಾದ ಸಂಕೋಚವನ್ನನುಭವಿಸಿ ಸುತ್ತಲೂ ಕಳ್ಳನೋಟ ಬೀರಿ, ನಾಗಂದಿಗೆಗೆ ಕೈಹಾಕಿ ಏನೋ ಔಷಧಿಯ ಡಬ್ಬಿಯನ್ನು ತೆಗೆದುಕೊಂಡು, ಕೌಪೀನವನ್ನು ಸಡಿಲಿಸಿ ಬಿಚ್ಚಿ, ಕೈಯ ಅಂದಾಜಿನಿಂದಲೆ ಮರ್ಮಸ್ಥಾನದ ವ್ರಣಗಳಿಗೆ ಮದ್ದು ಲೇಪಿಸಿಕೊಂಡರು. ಮತ್ತೆ ಲಂಗೋಟಿ ಕಟ್ಟಿಕೊಂಡು, ಹೆಗಲಮೇಲಿದ್ದ ಅಡ್ಡಪಂಚೆ ಸುತ್ತಿಕೊಂಡು, ಹಾಸಗೆಯ ಮೇಲಿದ್ದ ಶಾಲನ್ನೇತ್ತಿ ಹೊದೆದು, ಕೋಣೆಯ ಬಾಗಿಲಿಗೆ ಬಂದು ಅಂಗಳದ ಕಡೆ ನೋಡುತ್ತಾ ನಿಂತರು. ಅಂಗಳದಲ್ಲಿದ್ದ ಕಲ್ಲಿನ ತುಳಸಿಕಟ್ಟೆಗೆ ಅನೈಚ್ಚಿಕವಾಗಿಯೊ ಎಂಬಂತೆ. ಬರಿಯ ಅಭ್ಯಾಸದ ಯಾಂತ್ರಿಕ ಚಲನೆಯ ಭಂಗಿಯಿಂದ ಕೈಮುಗಿದು, ಕೆಮ್ಮುತ್ತಾ ಜಗಲಿಗೆ ನಡೆದರು.

ಅಡುಗೆ ಮನೆಯ ದಿಕ್ಕಿನಿಂದ ಮಜ್ಜಿಗೆ ಕಡೆಯುತ್ತಿದ್ದ ಕಡಗೋಲಿನ ಸದ್ದು ಕೇಳಿಬರುತ್ತಿತ್ತು. ಮನೆಗೆ ಅಂಟಿಕೊಂಡಿದ್ದ ದನದಕೊಟ್ಟಿಗೆಯಿಂದ ಕೋಡುಗಳ ಸದ್ದೂ, ಗೊರಸುಗಳ ಸದ್ದೂ, ಕರುಗಳು ಕರೆಯುವ ಅಂಬಾ ಸದ್ದೂ, ತಾಯಿಹಸುಗಳ ಉತ್ತರಧ್ವನಿನಿರೂಪದ ಹಂಬಾ ಸದ್ದೂ ಕೇಳಿಸುತ್ತಿತ್ತು. ಕೋಳಿಒಡ್ಡಿಯಿಂದ, ಆಗತಾನೆ ಬೆಳಕು ಬಿಡುತ್ತಿರುವುದನ್ನು ಕಂಡು, ಹೊರಗೆ ಹಾರಲು ಕಾತರವಾಗಿ ತರತರದ ಉಲಿಹಗಳನ್ನು  ಬೀರುತ್ತಿದ್ದ ಹೇಟೆ ಹುಂಜ ಸಳುಗ ಮರಿಗಳ ಸದ್ದೂ ಆ ದೊಡ್ಡಮನೆಯ ಒಳಗಣ ಬಿಮ್ಮೆಂಬ ನಿಃಶಬ್ದತೆಯನ್ನು ಹಿತಕರವಾಗಿ ಭಂಗಿಸಿತ್ತು. ನಿತ್ಯಪರಿಚಿತವಾದ ಆ ನಾದಸಮೂಹವನ್ನು ಆಲಿಸಿದರೂ ಲಕ್ಷಿಸಿದ ಉದಾಸೀನತೆಯಿಂದ ಹೆಗ್ಗಡೆ ಬಚ್ಚಲು ಮನೆಯ ಕಡೆಗೆ ಹೋದರು.

ಸ್ವಲ್ಪ ಹೊತ್ತಿನ ಮೇಲೆ ಜಗಲಿಗೆ ಹಿಂದಿರುಗಿದವರು ತಾವು ಅನೇಕ ವರ್ಷಗಳಿಂದ ನಿತ್ಯವೂ ತಪ್ಪದೆ ಕೂರುತ್ತಿದ್ದ ಜಾಗದಲ್ಲಿ ಕೂತು, ಮುಂಡಿಗೆಗೆ ಬೆನ್ನೊರಗಿ, ಶಾಲುಗೂಡಾದರು:

“ದೊಳ್ಳಾ! ಏ ದೊಳ್ಳಾ!”

ಹೆಗ್ಗಡೆ ಕರೆದುದಕ್ಕೆ ದೊಳ್ಳ ಓಕೊಳ್ಳಲಿಲ್ಲ. ಆದರೆ ಅಡುಗೆಮನಿಯಿಂದ ಬಂದು ಬಾಗಿಲಲ್ಲಿ ಇಣುಕಿದ ತರುಣಿ ಲಕ್ಕಮ್ಮ “ಅಂವ ಹಟ್ಟೀಲಿ ಮುರು ಹಾಕ್ತಾ ಇದಾನೆ, ಅಣ್ಣಯ್ಯ ಕರೀಬೇಕೇನು?” ಎಂದು ಕೇಳಿದಳು.

“ಆ ಹಳೇಪೈಕದ ಬುಲ್ಡ ಬಂದನೇನು ನೋಡ್ತೀಯಾ, ತಂಗಿ?”

“ಹ್ಞೂ ಬಂದಿದ್ದ. ತಂದುಕೊಟ್ಟು ಹೋಗ್ಯಾನೆ. ತರಲೇನು?”

“ತ” ಬಾರಕ್ಕ, ಒಂದು ಚೂರು. ಹಾಳುಹೊಟ್ಟೇಲೇ ಕುಡೀಬೇಕು ಅಂತಾರೆ ಹೇಳ್ಯಾರೆ ಪಂಡಿತ್ರು.”

ಧರ್ಮಸ್ಥಳಕ್ಕೆ ಯಾತ್ರೆ ಹೋಗಿದ್ದಾಗ ಕನ್ನಡ ಜಿಲ್ಲೆಯಲ್ಲಿ ಆಡಿದ ಆಟಗಳ ಪರಿಣಾಮವಾಗಿ ಹೆಗ್ಗಡೆಯವರಿಗೆ ಮರ್ಮಪ್ರಾಪ್ತವಾಗಿತ್ತು. ಕಣ್ಣಾಪಂಡಿತರು ಮದ್ದುಕೊಟ್ಟು ಬೆಳಿಗ್ಗೆ ಆಗತಾನೆ ಇಳಿಸಿದ  ತೆಂಗಿನ ಕಳ್ಳನ್ನು ಕುಡಿಯಬೇಕೆಂದು ಪಥ್ಯ ವಿಧಿಸಿದ್ದರು. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಹಾಗಾಗಿತ್ತು ಭರಮೈಹೆಗ್ಗಡೆಯವರಿಗೆ. ಮೊದಲೆ ಕಳ್ಳು ಹೆಂಡ ಸಾರಾಯಿಗಳಲ್ಲಿ ಮುಳುಗಿ ಏರುತ್ತಿದ್ದವರಿಗೆ ವೈದ್ಯರು ವಿಧಿಸಿದ್ದ ಪಥ್ಯದ ದೆಸೆಯಿಂದ ರೋಗವೂ ಆಸ್ವಾದ್ಯವಾಗಿಯೆ ಸಂಭವಿಸಿತ್ತು. ಆದರೆ ಪಥ್ಯದಲ್ಲಿ ಆಗುತ್ತಿದ್ದದ್ದು ಒಂದೇ ವ್ಯತ್ಯಾಸ: ಕಳ್ಳು ಆಗತಾನೆ ಇಳಿಸಿದ್ದಾಗಿರಬೇಕು ಎಂಬ ನಿಯಮವನ್ನು ಪರಿಪಾಲಿಸುವುರಲ್ಲಿ ಹಳೇ ಪೈಕದ ಬುರುಡ ಅಷ್ಟೇನೂ ನಿಷ್ಠಾವಂತನಾಗಿರಲಿಲ್ಲ. ಒಂದೆರಡು ಸಾರಿ ಅವನು  ಆ ನಿಷ್ಟೆಯನ್ನು ಪರಿಪಾಲಿಸಿ ಹೆಗ್ಗಡೆಯವರ ಕೈಯಲ್ಲಿ ಏಟು ತಿನ್ನುವುದೊಂದೆ ಬಾಕಿಯಾಗಿತ್ತು. “ಇದೇನು ಕಳ್ಳೊ? ನೀರೊ? ನಿನ್ನ ಹಲ್ಲು ಹೊಟ್ಟಗೆ ಹೋಗೋ ಹಾಗೆ ಹೊಡೆದುಬಿಡ್ತೀನಿ, ನೋಡು, ಕಳ್ಳಲೌಡಿ ಮಗನೆ!” ಎಂದು ರೇಗಿದ್ದರು. ಆಮೇಲೆ ಅವನು ಒಡೆಯರ ಬಾಯಿರುಚಿಗೆ ಇಷ್ಟವಾದ ಬಲಿಷ್ಠವಾದ ಮದ್ಯವನ್ನೆ ಒದಗಿಸತೊಡಗಿದ್ದನು.

ತುಂಬ ತುಂಬಿದ್ದ ಮೊಗೆಯಲ್ಲಿ ಲಕ್ಕಮ್ಮ ಹೊರಲಾರದೆ ಹೊತ್ತು ತಂದದ್ದು ಆ ಬಲಿಷ್ಠ ಮದ್ಯವನ್ನೆ!

“ನೀನೆ ಯಾಕೆ ಹೊತ್ತುಕೊಂಡು ಬಂದ್ಯೇ? ಮಂಜ ಇರಲಿಲ್ಲೇನೆ?”

“ಅತ್ತಿಗಮ್ಮ ಬಿಡಬೇಕಾಯ್ತಲ್ಲಾ ಅವನ್ನ?” ಮೇಲುಸಿರೆಳೆಯುತ್ತಲೆ ಹೇಳಿದಳು ಲಕ್ಕಮ್ಮ, ಆಪಾದನೆಯ ಧ್ವನಿಯಲ್ಲಿ.

“ಏನು ಮಾಡ್ತಿದಾನ್ಯೆ ಅವನು?”

“ಮಜ್ಜಿಗೆ ಕಡೀತಿದಾನೆ!”

“ಅವಳು ಏನು ಮಾಡ್ತಿದ್ದಾಳೋ?” ಸಿಡುಕಿ ಕೇಳಿದರು ಹೆಗ್ಗಡೆ.

“ರೊಟ್ಟಿ ಮಾಡ್ತಿದಾರೆ.”

ತಂಗಿ ಸೀರೆಯನ್ನು ಎತ್ತಿಕಟ್ಟಿದ್ದ ಭಂಗಿಯನ್ನು ನೋಡಿ ಹೆಗ್ಗಡೆ “ನೀನೇನು ಹಾಲು ಕರ್ಯಾಕೆ ಹಟ್ಟಿಕಡೆ ಹೊರಟ್ಹಾಂಗದೆ?” ಎಂದರು.

“ದಿನಾ ಮತ್ಯಾರು ಕರೆಯೋರು? ನಾನೆ!”

“ಆ ಗಲ್ಟ ಅಲ್ಲಿಟ್ಟು ಹೋಗು. ನಾ ಬೊಗಿಸಿಕೊಳ್ತೀನಿ.”

ಲಕ್ಕಮ್ಮ ಕಳ್ಳು ಕುಡಿಯುವುದಕ್ಕಾಗಿಯೆ ತಯಾರಾಗಿ ನುಣ್ಣಗೆ ಮಾಡಿದ್ದ ಕರಟವನ್ನು ಮೊಗೆಯ ಬಾಯಿಂದ ತೆಗೆದು ಕೆಳಗಿಟ್ಟು, ಹಾಲು ಕರೆಯಲು ಹಟ್ಟಿಗೆ ಹೋದಳು. ಹೆಗ್ಗಡೆ ಕಳ್ಳು ಬೊಗ್ಗಿಸಿಕೊಂಡು, ಕಳ್ಳಿನಲ್ಲಿಯೆ ಕೈತೊಳೆದು, ಬಾಯಿ ಮುಕ್ಕಳಿಸಿ ಅಂಗಳಕ್ಕೆ ಉಗುಳಿ, ನಿಧಾನವಾಗಿ ಸವಿದು ಸವಿದು ಕುಡಿಯತೊಡಗಿದರು. ಕಳ್ಳಿನ ಕೆಂಪು ಸುತ್ತಲೂ ವ್ಯಾಪಿಸತೊಡಗಿತು.

ಸೂರ್ಯ ಮನೆಯ ಮುಂದಣ ಮಲೆಯ ನೆತ್ತಿಗೇರಿ ಕಾಣಿಸಿಕೊಂಡ ಸ್ವಲ್ಪ ಹೊತ್ತಿನಲ್ಲಿಯೆ, ಹೆಗ್ಗಡೆ ಮರಾಟಿ ಮಂಜನನ್ನು ಕೂಗಿಹೇಳಿದರು, “ಆ ದೊಳ್ಳಗೆ ಹೇಳೋ, ಹೊಲೇರ ಕೇರಿಗೆ ಹೋಗಿ, ಗುತ್ತಿ ಬಂದನೇನು ಕೇಳಿಕೊಂಡು ಬರಲಿ.” ಸುಮಾರು ಒಂದು ಗಂಟೆ ಕಳೆದ ಮೇಲೆ ದೊಳ್ಳ ಹೆಬ್ಬಾಗಿಲಲ್ಲಿ ಕಾಣಿಸಿಕೊಂಡು ಬಿಜಿಲು ಬಿಜಿಲು ಮಾತಿನಲ್ಲಿ “ಅಂವಿನ್ನೂ ಬಂದಿಲ್ಲಂತೆ” ಎಂದನು.

“ಇಷ್ಟೊತ್ತು ಬೇಕಾಯ್ತೇನೊ ನಿಂಗೆ, ಹೊಲೇರ ಬಿಡಾರಕ್ಕೆ ಹೋಗಿಬರಾಕೆ?” ಗದರಿಸಿದರು ಹೆಗ್ಗಡೆ.

“ಅಗೋಡಿಗೆ ದನಾ ನುಗ್ಗಿದ್ವು. ಅಟ್ಟಿ ಬಂದೆ.” ದೊಳ್ಳ ಸುಳ್ಳೆ ಹೇಳಿದನು.

“ಮನೆಹಾಳು ಮುಂಡೆಗಂಡರು!” ಹೆಗ್ಗಡೆ ಆಶೀವರ್ದಿಸಿ ಕಳ್ಳಿಗೆ ಕೈಹಾಕಿದರು.

* * *

ದೊಳ್ಳ ಒಡೆಯರ ಅಪ್ಪಣೆಯಂತೆ ಹೊಲೆಯರ ಬಿಡಾರಕ್ಕೆ ಹೋಗಿ ಗುತ್ತಿ ಹಿಂದಿರುಗಿದ್ದಾನೆಯೆ ಇಲ್ಲವೆ ಎಂಬುದನ್ನು ವಿಚಾರಿಸುತ್ತಿದ್ದ ಸಮಯದಲ್ಲಿ, ಗುತ್ತಿ ತಿಮ್ಮಿಯನ್ನು ಹತ್ತಿರದ ಕಾಡಿನಲ್ಲಿ ಮರೆಯಾಗಿ ಕುಳ್ಳಿರಲು ಹೇಳಿ, ತನ್ನ ನಾಯಿ ಹುಲಿಯನನ್ನು ಮೆಲ್ಲಗೆ ಎತ್ತಿ ತಂದು ಲಕ್ಕುಂದದ ಹಳೆಪೈಕದ ಸೇಸನಾಯ್ಕನ ಮನೆಯ ಹಿತ್ತಲು ಕಡೆಯಲ್ಲಿ ಕಾಡಿಯ ಸಹಾಯದಿಂದ ಔಷಧೋಪಚಾರದ ಶುಶ್ರೂಷೆಯಲ್ಲಿ ತನ್ಮಯರಾಗಿದ್ದನು.

ಆವೊತ್ತು ಹೊತ್ತಾರೆ ಹುಲಿಕಲ್ಲು ನೆತ್ತಿಯಲ್ಲಿ ಕುರ್ಕನೊಡನೆ ಹೋರಾಡಿ ಗಾಯಗೊಂಡಿದ್ದ ಹುಲಿಯ ಮೊದಮೊದಲು ಗುತ್ತಿ ತಿಮ್ಮಿಯರ ಹಿಂದೆ ಮುಂದೆ ಅತ್ತ ಇತ್ತ ಹಳುವಿನಲ್ಲಿ ಓಡಿಯಾಡುತ್ತಾ ಬರುತ್ತಿತ್ತು. ಸ್ವಲ್ಪದೂರ ಹೋಗುವುದರಲ್ಲಿ ಅತ್ತ ಇತ್ತ ಓಡಿಯಾಡುವುದನ್ನು ನಿಲ್ಲಿಸಿ ಅವರ ಹಿಂದೆಯೆ ಬರತೊಡಗಿತ್ತು. ಆಗಲೆ ಗುತ್ತಿಗೆ ಅನುಮಾನವಾಗಿ, ನಾಯಿಯನ್ನು ಹತ್ತಿರಕ್ಕೆ ಕರೆದು, ತಲೆ ತಟ್ಟಿ ಮುದ್ದುಕಮಾಡಿ ಹುರಿದುಂಬಿಸಿದ್ದನು. ನಾಯಿ ಕುಂಟುತ್ತಾ ಮೆಲ್ಲಗೆ ನಡೆಯುತ್ತಿತ್ತು.

ಕಾಡಿನಲ್ಲಿ ಇನ್ನೂ ಸ್ವಲ್ಪದೂರ ನಡೆದಮೇಲೆ ಒಂದು ಕಡೆ ಹಂದಿಯ ಹಿಂಡು ಅಡ್ಡಹಾಯಿತು. ಹಳುವಿನಲ್ಲಿ ಒಂದು ಮೊಲ, ಒಂದು ಬರ್ಕ, ಒಂದು ಚಿಟ್ಟುಗೋಳಿ, ಒಂದು ಉಡ, ಕಡೆಗೆ ಒಂದು ಓತಿ ಇಂತಹ ಅಲ್ಪ ಮತ್ತು ಅತ್ಯಲ್ಪ ಪ್ರಾಣಿಗಳೂ ಸುಳಿದರೆ ಸಾಕು ಅತ್ಯುತ್ಸಾಹದಿಂದ ನುಗ್ಗಿ ಅಟ್ಟಿಕೊಂಡು ಹೋಗುತ್ತಿದ್ದ ಬೇಟೆನಾಯಿ ಹುಲಿಯ ಈಗ ದೊಡ್ಡ ಹಂದಿಯ ಹಿಂಡೇ ಅಡ್ಡ ಹಾಯ್ದರೂ ಅಟ್ಟದೆ ಬೊಗಳದೆ ತಲೆ ಜೋಲು ಹಾಕಿ ತಮ್ಮ ಹಿಂದೆ ಮೆಲ್ಲಗೆ ಕುಂಟುತ್ತಾ ಬರುತ್ತಿದ್ದುದನ್ನು ಗಮನಿಸಿ ಗುತ್ತಿಗೆ ಜೀವವೆ ಹಾರಿಹೋದಂತಾಯಿತು!

ಸಂಕಟದ ಧ್ವನಿಯಿಂದ “ಅಯ್ಯೋ, ತಿಮ್ಮಿ, ಏನಾಯ್ತು ನಾಯಿಗೆ?” ಎಂದು ಹಿಂದಕ್ಕೆ ಓಡಿ ಬಂದು ಹುಲಿಯನ ಪಕ್ಕದಲ್ಲಿ ಕೂತು ಪರಿಶೀಲಿಸತೊಡಗಿದನು.

ಚಿರತೆಯ ಕೂರುಗುರುಗಳಿಂದ ಆಗಿದ್ದ ಗಾಯಗಳಿಂದ ನೆತ್ತರು ಸೋರಿ ಆ ಕರಿಯ ಬಣ್ಣದ ನಾಯಿಯ ಮೈಯೆಲ್ಲಾ ಕೆಂಪಗಾದಂತಿತ್ತು. ಜೊತೆಗೆ ಒಂದು ಉಗುರೋ ಹಲ್ಲೋ ತಾಗಿ ಒಂದು ಕಣ್ಣೂ ಊದಿಕೊಂಡು ರಕ್ತಮಿಶ್ರವಾದ ನೀರು ಇಳಿಯುತ್ತಿತ್ತು. ಗುತ್ತಿ ಮುಟ್ಟಿದೊಡನೆ ನಾಯಿ ನೋವಿಗೆ ನರಳಿತು. ಅದರ ಕಣ್ಣಿನ ನೋಟವಂತೂ ಗುತ್ತಿಯ ಕರುಳಿಗೆ ಇರಿದಂತಾಯಿತು. ಯಾರ ಮೇಲೋ ಏಕೋ ದುಃಖಮಿಶ್ರವಾದ ಮಹಾಸಿಟ್ಟು ಉಕ್ಕಿದಂತಾಯಿತು, ತನ್ನ ನಚ್ಚಿನ ನಾಯಿಗೆ ಆ ಗತಿ ಒದಗಿದುದಕ್ಕಾಗಿ!

ಭಾವಾಂಧನಾಗಿ ಗುತ್ತಿ ತಿಮ್ಮಿಯ ಕಡೆಗೆ ತಿರುಗಿ “ಸನಿಮುಂಡೆ, ನಿನ್ನ ದೆಸಿಂದ  ನನ್ನ ನಾಯಿನೂ ಹೋಯ್ತಲ್ಲೇ! ಯಾವ ಇಸಗಳಿಗೇಲಿ ಹುಟ್ಟಿದ್ಯೋ ನೀನು, ಹುಲಿಯನ ತಿನ್ನಾಕೆ!” ಎಂದು ಸಿಡುಕಿದನು. ಅವನ ಕಣ್ಣು ಆಗಲೆ ನೀರು ತುಂಬಿಕೊಂಡಿತ್ತು.

ತಿಮ್ಮಿಗೆ ಏನೂ ತೋಚಲಿಲ್ಲ, ತಾನು ಏನು ತಪ್ಪು ಮಾಡಿದುದಕ್ಕಾಗಿ ಬಾವ ಬಯ್ಯುತ್ತಿದ್ದಾನೆ ಎಂದು. ನಿಂದೆಯ ಆಘಾತಕ್ಕೆ ಮೊದಲು ತಟಕ್ಕನೆ ಬೆಪ್ಪುಬೆರಗಾದಳು. ಒಡನೆಯೆ, ಬಂಡೆಯಬೆಟ್ಟ ದನಿಗೆ ಮರುದನಿಕೊಡುವಂತೆ, ನಿಸರ್ಗ ಸಹಜವಾದ ಪ್ರತಿಕ್ರಿಯೆಯಿಂದಲೂ ಎಂಬಂತೆ ಪಡಿನುಡಿದೆಬಿಟ್ಟಳು: “ನಾನ್ಯಾಕೆ ಆದೇನು ಸನಿಮುಂಡೆ? ಬೇಕಾದರೆ ನೀನೆ ಆಗು ಸನಿಮುಂಡೆ ಗಂಡ!”

ಸನ್ನಿವೇಶ ಲಘುತರವಾಗಿದ್ದು, ಇಬ್ಬರೂ ಧ್ವನಿಗ್ರಹಣಶಕ್ತಿಯುಳ್ಳವರಾಗಿದ್ದರೆ, ಚೆನ್ನಾಗಿ ನಗಬಹುದಾಗಿತ್ತೊ ಏನೊ? ಆದರೆ ಗುತ್ತಿ ತಲೆಯೆತ್ತಿ ತಿಮ್ಮಿಯ ಮುನಿದ ಮೋರೆಯನ್ನು ದುರುದುರು ನೋಡುತ್ತಾ “ನೋಡೂ, ತಿಮ್ಮಿ, ಹುಡುಗಾಟಿಕೆ ಮಾಡಬ್ಯಾಡ. ನಂಗೆ ಸಿಟ್ಟು ಬಂದ್ರೆ ನಿನ್ನ….” ಮಾತನ್ನು ಅರ್ಧಕ್ಕೆ ತಡೆದು ನಾಯಿಯ ಕಡೆತಿರುಗಿದನು.

ತಿಮ್ಮಿಗೆ ಆಗಲೆ ಅಳುಬರುವಂತಾಗಿತ್ತು. ಬಾವನ ಮುನಿದ ಮುಖ, ಇರಿವ ದೃಷ್ಟಿ, ಹಲ್ಲುಮಟ್ಟೆಕಚ್ಚಿದ್ದ ತುಟಿಗಳನ್ನು ಕಂಡು ಹೆದರಿಕೆಯೆ ಆಯಿತು. ಅದರಲ್ಲಿಯೂ ಕಗ್ಗಾಡು; ಕೂಗಿಕೊಂಡರೂ ನೆರವಿಗೆ ಬರಲು ಬೇರೆ ಯಾರೂ ಇಲ್ಲ; ಗುತ್ತಿಯ ದೊಣ್ಣೆ ಕತ್ತಿಗಳೂ ಆ ಸಂದರ್ಭದಲ್ಲಿ ಭಯಂಕರವಾಗಿಯೆ ಕಂಡುವು! ಅವನು ‘ನಂಗೆ ಸಿಟ್ಟು ಬಂದ್ರೆ ನಿನ್ನ….’ ಎಂದು ನಿಲ್ಲಿಸಿದ್ದರೂ ಅವಳು ತನ್ನ ಮನದಲ್ಲಿಯೆ ‘ಕಡಿದು ತುಂಡು ಮಾಡಿಬಿಡ್ತೀನಿ!’ ಎಂದು ವಾಕ್ಯವನ್ನು ಪೂರೈಸಿಕೊಂಡು, ಬಿಕ್ಕಿಬಿಕ್ಕಿ ಅಳತೊಡಗಿದಳು.

“ಯಾಕೇ ಅಳ್ತೀಯಾ? ಯಾರು ಸತ್ರೂ ಅಂತಾನೆ?” ಗುತ್ತಿಯ ಸಿಟ್ಟು ಬೆರಸಿದ ತಪ್ಪೊಪ್ಪಿಗೆಯ ದನಿ ಕೇಳಿತು?”

“ಮತ್ತೆ? ಒಬ್ಬಳ್ನೇ ಕಾಡಿಗೆ ಕರಕೊಂಡು ಬಂದು, ಕತ್ತರ್ಸಿ ಹಾಕ್ತೀನಿ ಅಂತೀಯಲ್ಲಾ?”

ಗುತ್ತಿಗೆ ಒಳಗೊಳಗೇ ನಗೆ ತಡೆಯಲಾಗಲಿಲ್ಲ. ಆದರೆ ನಕ್ಕರೆ ಸದರ ಕೊಟ್ಟ ಹಾಗಾಗುತ್ತದೆ ಎಂದು ತಲೆಯೆತ್ತದೆ “ ಕತ್ತರ್ಸಿ ಹಾಕ್ತೀನಿ ಅಂತಾ ಯಾವಾಗ್ಲೆ ಹೇಳ್ದೆ? ಸುಳ್ಳಿ!” ಎನ್ನುತ್ತಾ ಹುಲಿಯನ ಮೆಯ್ಯ ಗಾಯದ ಪರಿಶೀಲನೆಯನ್ನೆ ಮುಂದುವರಿಸಿದನು.

ಬಾವ ಮೃದುವಾಗುತ್ತಿದ್ದುದನ್ನು ಅರಿತು, ತಿಮ್ಮಿ ಮತ್ತೂ ಗಟ್ಟಿಯಾಗಿ ಬಿಕ್ಕಿ ಅಳುತ್ತಾ “ನೀನು ಹೇಳ್ನಿಲ್ಲಾ? ಕಡಿದುಹಾಕಿಬಿಡ್ತೀನಿ ಅಂತಾ?…. ಊ, ಊ, ಊ…. ನಾ ಹೇಳ್ತೀನಿ ಅತ್ತೆಮ್ಮನ ಹತ್ರ…. ಊ, ಊ,ಊ….”

“ಅಯ್ಯೋ ನಿನ್ನಾ! ಒಳ್ಳೆ ಗಿರಾಚಾರ ಆಯ್ತಲ್ಲಾ! ಸುಮ್ನೆ ಸಿಟ್ಟಿಗೆ ಹೇಳಿದ್ನೇ ಬದ್ದಾ ಅಂದುಕೊಂಡು ರಂಪಾ ಮಾಡ್ತೀಯಲ್ಲೇ! ಹ್ಹಿಹ್ಹಿಹ್ಹಿಹ್ಹಿ! ಪುಣ್ಯಾತಗಿತ್ತೀ, ತೆಪ್ಪಾಯ್ತು ಅಂತೀನೆ, ಸುಮ್ಮಕಿರು.” ಎನ್ನುತ್ತಾ ಗುತ್ತಿ ತಲೆಯೆತ್ತಿ, ದೂರ ನಿಂತಿದ್ದ ತಿಮ್ಮಿಯ ಮುಖವನ್ನು ನಗೆಗೂಡಿ ನೋಡಿ “ಅಲ್ಲೇ? ಏನೋ ಒಂದು ಮದೇಮಾಡಿಕೊಳ್ಳಾನ, ಒಳ್ಳೆ ಚೆಲುವಿ ಹೆಣ್ತಿ ಆಗ್ತಾಳೆ ಅಂತಾ ಹಾರಿಸಿಕೊಂಡು ಬಂದ್ರೆ, ಕಾಡಿಗೆ ಕರಕೊಂಡು ಬಂದು ಕತ್ತರ್ಸಿ ಹಾಕ್ತೀನಿ ಅಂತಾ ಹೇಳ್ದೆ ಅಂತೀಯಲ್ಲಾ? ನೀನೊಂದು ಮೂಳಿ, ಬಿಡು! ತಮಾಸೆಗಿಮಾಸೆ ಒಂದೂ ಅರ್ತಾನೆ ಆಗಾದಿಲ್ಲ ನಿಂಗೆ…. ಹೋಗ್ಲಿ, ಬಾ ಇಲ್ಲಿ, ನನ್ನ ದೊಣ್ಣೆ, ಕತ್ತಿ, ಕಂಬ್ಳಿ ಹಿಡ್ಕಾ. ನಾ ನಾಯಿನ ಎತ್ಕೊಂಡಾರು ಬರ್ತಿನಿ.”

“ಆಗ ಮಾತ್ರ ಉರಿಮಾರೆ ಮಾಡಿಕೊಂಡಿದ್ದೀ? ಈಗ ನಗ್ನೆಗ್ತಾ ಮಾತಾಡ್ತೀಯ! ನಂಗೆ ಅರ್ಥಾಗದಿಲ್ಲೇನು ನಿನ್ನ ತಮಾಸೆ?” ಎಂದು ಮೂದಲಿಸುವಂತೆ ನುಡಿದು, ತಿಮ್ಮಿ ಗುತ್ತಿಯ ದೊಣ್ಣೆ ಕತ್ತಿಕಂಬಳಿಗಳನ್ನು ಎತ್ತಿ ಹೊತ್ತುಕೊಂಡಳು.

ಗುತ್ತಿ ನಾಯಿಯ ಕುತ್ತಿಗೆಗೆ ಒಂದು ಕೈ, ಬಾಲದ ಹಿಂದಕ್ಕೆ ಒಂದು ಕೈ ಕೊಟ್ಟು ಅದನ್ನೆತ್ತಿ ಎದೆಗವಿಚಿಕೊಂಡು ಹೊರಟನು. ಹುಲಿಯನನ್ನು ಹೊತ್ತುಕೊಂಡು ಹೋಗುವುದು ಗುತ್ತಿಯಂಥ ಬಲಿಷ್ಠನಿಗೂ ಸುಲಭವಾಗಿರಲಿಲ್ಲ. ಕಾಡಿನಲ್ಲಿ ಅಲ್ಲಲ್ಲಿ ಇಳಿಸಿ, ದಣಿವಾರಿಸಿಕೊಂಡು, ದಾರಿಗೆ ಸರಲು ಅಡ್ಡ ಬಂದೆಡೆಯಲ್ಲೆಲ್ಲ ಅದಕ್ಕೆ ನೀರು ಕುಡಿಸಿ, ತಲೆಗೂ ಸ್ವಲ್ಪ ನೀರು ಚಿಮುಕಿಸಿ ತಟ್ಟಿ, ತಣ್ಣಗೆ ಮಾಡಿ, ಲಕ್ಕುಂದದ ಸಮೀಪಕ್ಕೆ ಬಂದರು.

ಉಂಡು ತಿಂದು ಕುಡಿದು, ಒಡವೆ ವಸ್ತ್ರ ತೊಟ್ಟು ಉಟ್ಟು, ಮನೆಯಲ್ಲಿ ಸುಖವಾಗಿ ಮೆರೆಯುತ್ತಿರಬಹುದಾಗಿದ್ದ ಮದುಮಗಳು ತಿಮ್ಮಿಗೆ ನಾಯಿ ಹೊತ್ತ ಬಾವನ ಹಿಂದೆ ಅವನ ಕತ್ತಿ ದೊಣ್ಣೆ ಕಂಬಳಿ ಹೊತ್ತುಕೊಂಡು ಮಲೆಗಳಲ್ಲಿ ಅಲೆಯುವ ಪ್ರಣಯಸಾಹಸ ಪ್ರಾರಂಭದಲ್ಲಿಯೆ ಒಗರಾಗತೊಡಗಿತ್ತು. ಅದರ ಜೊತೆಗೆ ಅವರು ಲಕ್ಕುಂದದ ಹಳೆಪೈಕದ ಸೇಸನಾಯ್ಕರ ಮನೆಯ ಸಮೀಪದ ಕಾಡಿಗೆ ಬಂದಾಗ ಗುತ್ತಿ “ತಿಮ್ಮಿ, ನೀನಿಲ್ಲೆ ಹುಳುವಿನಾಗೆ ಅಡಗಿಕೊಂಡಿರು. ನಾ ಸೇಸನಾಯ್ಕರ ಮನೆಗೆ ಹೋಗಿ ಹುಲಿಯಗೆ ಒಂದೀಟು ಗಂಜಿ ಗಿಂಜಿ ಹಾಕಿಸಿ, ಮದ್ದುಗಿದ್ದು ಮಾಡಿ, ಹುಸಾರು ಮಾಡಿಕೊಂಡು ಬತ್ತೀನಿ. ಒಬ್ಬಳೆ ಅಂತಾ ನೀ ಏನೂ ಹೆದರಬ್ಯಾಡ. ಹೊಗೆ ಕಾಣ್ತದೆ ನೋಡು…. “ಇಲ್ಲೆ ಅದೆ ಅವರ ಮನೆ… ನಾಯಿ ಕೂಗಾದು ಕೇಳಿಸ್ತದೆ ನೋಡು…. ಕೇಳಿದ್ಯಾ? ಕೋಳಿ ಕೂಗಾದೂ ಕೇಳಿಸ್ತದೆ!” ಎಂದಾಗ ತಿಮ್ಮಿಯ ಹೃದಯದಲ್ಲಿ ಸಿಟ್ಟೂ ಎಣೆಯಾಡಿದುವು.

“ಅಡಗಿಕೊಂಡರಾಕೆ ನಾ ಏನೂ ಕದ್ದುಕೊಂಡು ಬಂದಿಲ್ಲ! ನಾನೂ ಬತ್ತೀನಿ. ನಿನ್ನ ಸೇಸನಾಯ್ಕರು, ಸೇಸನಾಯ್ಕರ ಮನೆ, ನಾ ಕಾಣದಿದ್ದಲ್ಲ! ನಂಟರ ಮನೆಗೆ ಕರಕೊಂಡು ಹೋಗ್ತಿದ್ದೀನಿ ಅಂತ ಹೇಳು, ಕೇಳಿದ್ರೆ. ನಿನ್ನ ಸ್ವಾದರತ್ತೆ ಮಗಳಲ್ಲೇನು ನಾನು?…. ನಾ ಒಬ್ಬಳೆ ಇಲ್ಲಿರಾಕೆ ಹೆದರಿಕೆ.”

ತಾನು ಚಿಕ್ಕಂದಿನಿಂದಲೂ ಅರಿತಿದ್ದ ಹುಡುಗಿ ಎಷ್ಟು ಬದಲಾಯಿಸಿದ್ದಾಳೆಂದು ಗುತ್ತಿಗೆ ಆಶ್ಚರ್ಯವಾಯಿತು, ತಿಮ್ಮಿಯ ಮಾತು ಕೇಳಿ, ತಲೆಯೆತ್ತಿ, ನೋಟನೆಟ್ಟು ನೋಡಿದನು ಅವಳ ಕಡೆ. ಅವಳು ಚಿಕ್ಕ ಹುಡುಗಿಯಲ್ಲ ತರುಣಿ ಎಂಬುದನ್ನು ಸಾರುವಂತಿತ್ತು ಅವಳ ಸರ್ವಾಂಗ ಭಂಗಿ. ‘ನಾನು ಇವಳಿಗೆ ಅಧೀನವಾಗದಿದ್ದರೆ ಇವಳು ನನಗೆ ಅಧೀನವಾಗುವ ಚೇತನವಲ್ಲ’ ಎಂಬರ್ಥದ ಒಂದು ಭಾವಸಂಚಾರವಾಗಿ ಗುತ್ತಿ ಬೇಡಿಕೊಳ್ಳುವ ದನಿಯಲ್ಲಿ “ನಿಂಗಿಲ್ಲಿ ಹೆದರಿಕೆ ಆದರೆ ಅವರ ಮನೆ ಹತ್ರಕ್ಕೇ ಬಾ. ಆದರೆ, ತಿಮ್ಮಿ, ನಾವು ರಾತಾರಾತ್ರಿ ಓಡಿ ಬಂದೀವಿ. ನಮ್ಮನ್ನ ಹುಡುಕಕ್ಕೆ ಗೌಡರು ಜನಾ ಅಟ್ಟದೆ ಬಿಡ್ತಾರೇನು? ಪೋಲೀಸರಿಗೂ ಹೇಳಿದ್ರೂ ಹೇಳಿದ್ರೇ! ನಾವೆಲ್ಲಾರು ಸಿಕ್ಕಿಬಿದ್ರೆ ಚಮಡಾ ಸುಲ್ದು ಬಿಡ್ತಾರೆ. ನಂದಂತೂ ಇರಲಿ ಬಿಡು; ನಿನ್ನೂ ಹೊಡೆದೂ ಬಡಿದೂ ಎಳೆಕೊಂಡು ಹೋಗಿ ಆ ಕಿಲಸ್ತರ ಬಚ್ಚಗೆ ಗಂಟುಹಾಕದೆ ಬಿಡಾದಿಲ್ಲ! ಎನು? ಗೊತ್ತಾತೇನು ನಾ ಹೇಳಿದ್ದು?”

ಗುತ್ತಿ ವರ್ಣಿಸಿದ್ದನ್ನು ಕೇಳಿ, ತಿಮ್ಮಿ ಹೌಹಾರಿ ಸಂಪೂರ್ಣ ಶರಣಾದಳು: “ನೀ ಹೇಳ್ದ್ಹಾಂಗೆ ಕೇಳ್ತೀನಿ, ಬಾವ!” ಎಂದು ಅಳುದನಿಯಲ್ಲಿ ಮುಂದುವರಿದಳು: ನನ್ನ ಎಲಕೊಂಡು ಹೋಗಿ ಆ…. ಆ ಸುಡುಗಾಡು ಮುಂಡೆ ಮಗನಿಗೆ..” ಮುಂದೆ ಬಾಯಿಬಿಟ್ಟು ಹೇಳಲಾರದೆ ಬಿಕ್ಕತೊಡಗಿದಳು.

“ನಿಂಗ್ಯಾಕೆ ಆ ಹೆದರಿಕೆ? ನಾ ಇದ್ದೀನಿ!” ಗುತ್ತಿ ಧೈರ್ಯ ಹೇಳಿ, ಸೇಸನಾಯಕನ ಮನೆಯ ಕೊಟ್ಟಿಗೆಯವರೆಗೂ ಅವಳನ್ನು ಕರೆದೊಯ್ದು, ಅಲ್ಲಿ ಒಂದು ಮಟ್ಟಿನ ಹಿಂದೆ ಕುಳಿತಿರುವಂತೆ ಹೇಳಿ, ತಾನು ಹುಲಿಯನೊಡನೆ ಮನೆಯ ಕಡೆಗೆ ಹೋದನು.

ನಾಯಿಗಳು ಬೊಗಳಿ ಗಲಾಟೆ ಮಾಡಿದ್ದನ್ನು ಕೇಳಿ, ಕಾಡಿ ಬಾಗಿಲಲ್ಲಿ ಇಣುಕಿದಳು ಹುಲಿಯನ್ನು ಹೊತ್ತು ಬರುತ್ತಿದ್ದ ಗುತ್ತಿಯನ್ನು ಗುರುತಿಸಿ ಬೆರಗಾದಳು. ದಾರಿಯಲ್ಲಿ ಬರುತ್ತಿದ್ದಾಗ ಹುಲಿಯ ಒಂದು ಕುರ್ಕನನ್ನು ಅಟ್ಟಿಸಿಕೊಂಡು ಹೋಗಿ ಅದರ ಮೇಲೆ ಬಿದ್ದಿತೆಂದೂ, ಅದಕ್ಕೂ ಇದಕ್ಕೂ ಜಟಾಪಟಿಯಾಗಿ ಹುಲಿಯ ಗಾಯಗೊಂಡಿತೆಂದೂ ಗುತ್ತಿ ಕತೆ ಹೇಳಿದ ಮೇಲೆ, ಕಾಡಿ ಅರಸಿನ ಕಾಡುಜೀರಿಗೆ ಅರೆದು ಕುದಿಸಿ, ಗಾಯಗಳಿಗೆ ಹೆಚ್ಚುವಂತೆ ಮದ್ದು ಮಾಡಿಕೊಟ್ಟು “ಕುರ್ಕನ ಉಗುರಿನ ನಂಜು ಹೊಡೀತದೆ ಕಣೋ?” ಎಂದು ಭರವಸೆ ನೀಡಿದಳು. ಆ ಮೇಲೆ ಸ್ವಲ್ಪ ಗಂಜಿಯನ್ನೂ ತಂದು ಕುಡಿಸಲು ಕೊಟ್ಟಳು. ಗಂಜಿ ಹೊಟ್ಟೆಗೆ ಹೋದಮೇಲೆ ಹುಲಿಯ ನಿಜವಾಗಿಯೂ ಸ್ವಲ್ಪ ಹುಷಾರಾಗಿ ಎದ್ದು ನಿಂತಿತು. ಗಾಯಕ್ಕೆ ಹಚ್ಚಿದ ಮದ್ದಿನ ಉರಿಯನ್ನು ತಾಳಲಾರದೆ ಅದು ಮೈನೆಕ್ಕಿಕೊಳ್ಳಲು ಪ್ರಯತ್ನಿಸಿದಾಗ ಗುತ್ತಿ ಒಂದು ಏಟುಕೊಟ್ಟು ಸುಮ್ಮನಿರಿಸಿದನು. ಕೊನೆಯದಾಗಿ, ಕಾಡಿ ಇನ್ನೂ ಒಂದು ಉಪಾಯ ಸೂಚಿಸಿದಳು, ಸ್ವಲ್ಪ ಹೆಂಡ ಕುಡಿಸಿದರೆ, ಹುಮ್ಮಸ್ಸು ಬಂದ ಹಾಗಾಗಿ, ಲಕ್ಕುಂದದಿಂದ ಸಿಂಬಾವಿಯವರೆಗೂ ನಾಯಿಯನ್ನು ಹೊರುವ ತೊಂದರೆ ತಪ್ಪುತ್ತದೆ ಎಂದು. ಗುತ್ತಿಗೂ ಹುಲಿಯನನ್ನು ಹೊತ್ತು ಸಾಕಾಗಿತ್ತು. ಅದನ್ನು ಲಕ್ಕುಂದದಲ್ಲಿಯೆ ಕಾಡಿಯ ಬಳಿ ಶುಶ್ರೂಸೆಗೆ ಬಿಟ್ಟು ಹೋಗುವ ಆಲೋಚನೆಯನ್ನೂ ಮಾಡಿದ್ದನು. ಆದ್ದರಿಂದ, ನಾಯಿ ನಡದೇ ಸಿಂಬಾವಿಗೆ ತನ್ನೊಡನೆ ಬರುವಂತಾದರೆ ಆಗಲಿ ಎಂದು, ಕಾಡಿ ಕೊಟ್ಟ ಹೆಂಡವನ್ನೂ ಕುಡಿಸಿದನು. ಹುಲಿಯನೂ ತನಗೆ ಪೂರ್ವಾಭ್ಯಾಸವಿದ್ದಿತೊ ಎಂಬಂತೆ ಲೊಚಗುಟ್ಟುತ್ತ ಮದ್ಯಪಾನ ಮಾಡಿತು.

ಹೆಂಡ ಕುಡಿಸಿದ ಮೇಲೆ ಒಂದು ಪವಾಡವೆ ನಡೆದುಹೋಯಿತು. ಹುಲಿಯ ತುಂಬ ಚಟುವಟಿಕೆಯಾಯಿತು. ಗುತ್ತಿ ಸಂತೋಷಾತಿಶಯದಿಂದ “ಗೆದ್ದೆ ಕಣ್ರೋ! ನಿಮ್ಮ ಹಸ್ತಗುಣ!…. ನಾ ಬತ್ತೀನ್ರೋ, ಕಾಡಮ್ಮ.” ಎಂದು ತನ್ನ ರೀತಿಯಲ್ಲಿ ವಂದಾನರ್ಪಣೆ ಮಾಡಿ ಬೀಳ್ಕೊಂಡನು, ತನ್ನೊಡನೆ ಚಟುವಟಿಕೆಯಿಂದ ನಡೆದು ಬರುತ್ತಿದ್ದ ಹುಲಿಯನನ್ನು ಕೂಡಿ.

ಹುಲಿಯನನ್ನು ಮೆಲ್ಲಗೆ ನಡೆಸಿಕೊಂಡು ತಿಮ್ಮಿಯೊಡನೆ ಗುತ್ತಿ ಸಿಂಬಾವಿಯ ಹೊಲೆಗೇರಿಯ ತಮ್ಮ ಬಿಡಾರವನ್ನು ಪ್ರವೇಶಿಸಿದಾಗ ಆಗಲೆ ಬಿಸಿಲೇರಿತ್ತು. ಅವನ ತಾಯಿ ಗಿಡ್ಡಿಗೆ ಅನಿರೀಕ್ಷಿತವಾಗಿ ನೆಂಟರ ಮನೆಗೆ ಆಗಮಿಸಿದ್ದ ತನ್ನ ಸೋದರ ಸೊಸೆಯನ್ನು ಕಂಡು ಸಂತೋಷವಾದರೂ ಸ್ವಲ್ಪ ಸೋಜಿಗವೂ ಆಯಿತು. “ಏನೋ? ತಿಮ್ಮಿ ಒಬ್ಬಳೆ ಬಂದಿದಾಳೇನೋ ನಿನ್ನ ಸಂಗಡ?” ಎಂದು ತಾಯಿ ಕೇಳಿದ ಪ್ರಶ್ನೆಯ ಧ್ವನಿಯನ್ನರಿತ ಗುತ್ತಿ ಅವಳ ಕಿವಿಯಲ್ಲಿ ಪಿಸು ಮಾತಾಡಿದಮೇಲೆ, ಗಿಡ್ಡಿ ತುಸು ಭೀತಳಾದರೂ ಅದನ್ನು ತೋರಗೊಡಲಿಲ್ಲ.

ಗುತ್ತಿಯ ಅಪ್ಪ ಕರಿಸಿದ್ದ ಮನೆಯಲ್ಲಿರಲಿಲ್ಲ; ಕೆಲಸಕ್ಕೆ ಹೋಗಿದ್ದನು.

“ಅಯ್ಯ ಹೇಳಿ ಕಳಿಸಿದ್ದ್ರೋ, ದೊಳ್ಳಯ್ಯನ ಕೈಲಿ, ನೀ ಬಂದಿಯೋ ಇಲ್ಲೋ ಕೇಳಿಕೊಂಡು ಬಾ ಅಂತ. ಯಾಕೋ ಏನೊ? ಗೊತ್ತಿಲ್ಲ. ಬ್ಯಾಗ ಮನೀಗೆ ಹೋಗಿ ಅವರನ್ನ ನೋಡು.

ತಾಯಿ ತಿಳಿಸಿದೊಡನೆಯ ಗುತ್ತಿ ಅವಸರವಸರವಾಗಿ ‘ಬಿಡಾರ’ದಿಂದ ‘ಮನೆ’ಗೆ ಓಡಿದನು. ಅವನಿಗೆ ಭರಮೈಹೆಗ್ಗಡೆಯವರ ಮನೋಧರ್ಮದ ಉಗ್ರಪರಿಚಯ ಚೆನ್ನಾಗಿಯೆ ಇತ್ತು.

ಹಿಂದಿನ ದಿನವೆ ಕಾಗದಕ್ಕೆ ಉತ್ತರ ತೆಗೆದುಕೊಂಡು ಬರಬೇಕಾಗಿದ್ದ ಗುತ್ತಿ ಒಂದು ದಿನ ತಡವಾಗಿ ಬಂದದ್ದು ಮಾತ್ರವಲ್ಲದೆ ಹೊತ್ತಾಗಿಯೂ ಬಂದದ್ದಕ್ಕೆ ಭರಮೈಹೆಗ್ಗಡೆ ಅವನನ್ನು ಅವರ ಬೈಗುಳದ ನಿಭಂಟಿನಿಂದ ಆಯ್ದು ತೆಗೆದ ಪದಗಳನ್ನೆಲ್ಲ ಪ್ರಯೋಗಿಸಿ ಚೆನ್ನಾಗಿ ತರಾಟೆಗೆ ತೆಗೆದುಕೊಂಡರು. ಗುತ್ತಿ ಹಳೆಮನೆ ದೊಡ್ಡ ಹೆಗ್ಗಡೆಯವರು ಕಾಗದ ಕೊಡಲಿಲ್ಲವೆಂದೂ, ಕೊಟ್ಟಿದ್ದರೆ ಆವತ್ತೆ ಹೊರಟು ಬರುತ್ತಿದ್ದೆನೆಂದೂ, ತಾನು ಹೊತ್ತಾಗಿ ಬಂದುದಕ್ಕೆ ಕಾರಣ ಹೇಳಲು ಹೋಗಿ ಮತ್ತಷ್ಟು ಅನ್ನಿಸಿಕೊಂಡನು.

“ಮತ್ಯಾಕೆ ನಿಂತಿರೋದು? ಹೋಗಬಹುದು ತಳವಾರರ ಸವಾರಿ!” ಮಾತು ಮುಗಿಸಿದ ಮೇಲೆ ಹೆಗ್ಗಡೆಯವರು ತಲೆಬಗ್ಗಿಸಿ ಏನೊ ಲೆಕ್ಕ ಬರೆಯುತ್ತಿದ್ದವರು ಮತ್ತೆ ತಲೆಯೆತ್ತಿ ನೋಡಿ, ಇನ್ನೂ ನಿಂತೇ ಇದ್ದ ಗುತ್ತಿಗೆ ವ್ಯಂಗ್ಯವಾಗಿ ಭರ್ತ್ಸನೆ ಮಾಡುವಂತೆ ಹೇಳಿದರು.

ಆದರೂ ಗುತ್ತಿ ಹಂದದೆ ನೆಲ ನೋಡುತ್ತಾ ನಿಂತನು.

ತಾನು ಒಡೆಯರ ಅನುಮತಿಯಿಲ್ಲದೆ ಮಾಡಿದ್ದ ಸಾಹಸವನ್ನು ಅವರಿಗೆ ತಿಳಿಸಲೋ ಬೇಡವೊ? ತಿಳಿಸಿದರೆ ಏನು ಹೇಳುತ್ತಾರೊ? ಇಂದಾಗಲಿ ನಾಳೆಯಾಗಲಿ, ತಾನಾಗಲಿ ತನ್ನ ತಂದೆಯಾಗಲಿ, ಒಡೆಯರಿಗೆ ವಿಷಯವನ್ನು ತಿಳಿಸಿಯೆ ತೀರಬೇಕಾಗುತ್ತದೆ. ಏಕೆಂದರೆ ಅವರ ಒಪ್ಪಿಗೆ, ಬೆಂಬಲ, ಧನ ಸಹಾಯ, ಕಡೆಗೆ ಜನಸಹಾಯ ಇವುಗಳಿಲ್ಲದೆ ಬೆಟ್ಟಳ್ಳಿ ಕಲ್ಲಯ್ಯಗೌಡರಂಥವರಿಂದ ಅವರ  ಜೀತದಾಳೊಬ್ಬಳನ್ನು ದಕ್ಕಿಸಿಕೊಳ್ಳುವುದು ಅಸಾಧ್ಯ. ಆದರೆ ಅವಳನ್ನು ಹಾರಿಸಿಕೊಂಡು ಬರುವ ಮುನ್ನವೆ ಒಡೆಯರಿಗೆ ಒಂದು ಮಾತು ತಿಳಿಸಿದ್ದರೆ ಅದರ ಹೊಣೆಗಾರಿಕೆಯ ಬಹುಪಾಲು ಅವರದ್ದೆ ಆಗಿರುತ್ತಿತ್ತು. ಈಗ ಒಡೆಯರಿಗಂತೂ ಇರಲಿ, ತನ್ನ ಸ್ವಂತ ತಾಯಿ ತಂದೆಯರಿಗೇ ಗೊತ್ತಿಲ್ಲದ ರೀತಿಯಲ್ಲಿ ಕೆಲಸಮಾಡಿಬಿಟ್ಟದ್ದೇನೆ!…. ಆಲೋಚಿಸಿದಷ್ಟು ಆಳವಾಗಿ ತೋರ ತೊಡಗಿತ್ತು, ತಾನು ಹಾಯಲು ಇಳಿದಿದ್ದ ಹೊಳೆ. ಆದ್ದರಿಂದಲೆ ಒಡೆಯರ ಮೂದಲಿಕೆಯ ಉಕ್ತಿಗೆ ಯಾವ ಪ್ರತಿಕ್ರಿಯೆಯನ್ನೂ ತೋರಲಾರದೆ ಗುತ್ತಿ ಹಂದದೆ ನೆಲ ನೋಡುತ್ತಾ ನಿಂತದ್ದು.

ಹೆಗ್ಗಡೆ ಮತ್ತೊಮ್ಮೆ ತಲೆಯೆತ್ತಿ “ಯಾಕೋ? ಕಲ್ಲು ನಿಂತ್ಹಾಂಗೆ ನಿಂತೀಯ? ಮತ್ತೂ ಏನಾದ್ರೂ ಬೇಕೋ? ಕನಾತಿ? ಬರಿ ಬಾಯಲ್ಲಿ ಬೈದಿದ್ದು ಸಾಲದು ಅಂತಾ ಕಾಣ್ತದೆ!” ಎಂದು ಗದರಿಸಿದರು.

“ನಿಮ್ಮ ಹತ್ರ ಒಂದು ಇಸಿಯ ಕೇಳಾನ ಅಂತಾ….” ಎಂದು ಗುತ್ತಿ ಕಿವಿಯ ಹಿಂದೆ ತಲೆ ಕರೆದುಕೊಳ್ಳುತ್ತಾ ಮುಖವೆತ್ತಿದನು.

“ಏನೋ ಅದು? ಬೊಗಳೋ?”

“ನನ್ನ…. ಸ್ವಾದರ ಮಾವನ ಮಗಳು ತಿಮ್ಮೀನ….” ತಲೆ ಕೆರೆದುಕೊಳ್ಳುತ್ತಾ ಇದ್ದಬಿದ್ದ ಹಲ್ಲುಗಳನ್ನೆಲ್ಲಾ ಪ್ರದರ್ಶಿಸುತ್ತಾ ಗುತ್ತಿ ಇನ್ನೂ ಮುಂದುವರಿಯುವಷ್ಟರಲ್ಲಿ ಭರಮೈಹೆಗ್ಗಡೆ ಕೈಯಲ್ಲಿ ಹಿಡಿದಿದ್ದ ಲೆಕ್ಕದ ಪುಸ್ತಕವನ್ನು ದೂರ ನೂಕಿ, ತಾಟಸ್ಥ್ಯವನ್ನೆಲ್ಲ ಆಚೆಗೆ ತಳ್ಳಿ:

“ನಿನಗೇನು ಸೊಕ್ಕೇನೊ? ತಲೆಗಿಲೆ ಕೆಟ್ಟಿದೆಯೋ? ಅವರ ಸಾಲಾನೆಲ್ಲ ತೀರಿಸಿ, ಅವಳಿಗೆ ಅಷ್ಟೊಂದು ತೆರಾ ಕೊಟ್ಟು, ನಾ ನಿನಗೆ ಮದೇಮಾಡ್ಸಿ, ನನ್ನ ಮನೇ ಹಾಳು ಮಾಡಿಕೊಳ್ಳಲೇನೊ? ನಿನಗೆ, ನಿನ್ನ ಅಪ್ಪಗೆ, ಕೊಟ್ಟ ಸಾಲಾನೇ ಕುತ್ತರ ಬೆಳೆದ್ಹಾಂಗೆ ಬೆಳೆದು ನಿಂತದೆ! ಅದನ್ನೇ ನೀವು ತೀರಿಸಾದು ಯಾವಾಗಲೋ?…. ಹೇಳ್ತೀನಿ, ನೋಡು. ನಿಂಗೆ ಅವಳನ್ನ ಮದೇ ಮಾಡಿಕೊಳ್ಳಲೇಬೇಕು ಅಂತಾ ಅಷ್ಟೊಂದು ತೆವಲು ಹತ್ತಿದ್ರೆ, ಬೆಟ್ಟಳ್ಳಿ ಗೌಡ್ರಿಂದಲೆ ಸಾಲಾ ತಗೊಂಡು, ನನ್ನ ಸಾಲಾನೆಲ್ಲ ತೀರ್ಸಿ, ಅವರ ಕೇರೀಗೇ ಹೋಗಿ, ಅವಳನ್ನೇ ಮದೇ ಮಾಡಿಕೊಂಡು ಸುಕಾಗಿರು! ಯಾರು ಬ್ಯಾಡ ಅಂತಾರೆ?” ಎಂದು, ಮಳೆ ಹೊಯ್ದಂತೆ ಮಾತಾಡಿ, ಸಿಟ್ಟಿಗೆ ಮೈಕೆರೆದುಕೊಳ್ಳುವಂತೆ, ಶಾಲಿನೊಳಗೆ ಕೈಹಾಕಿಕೊಂಡು ತುರಿಗಜ್ಜಿಯ ದೇಹಭಾಗಗಳನ್ನು ಪರಪರನೆ ತುರಿಸಿಕೊಳ್ಳಲಾರಂಭಿಸಿದರು.

ಗುತ್ತಿ ಒಡೆಯರಿಂದ ಬೇರೆ ರೀತಿಯ ಮಾತನ್ನು ನಿರೀಕ್ಷಿಸಿದರು. ಒಡೆಯರಿಗೆ ದುಡಿಯಲು ಮತ್ತೊಂದು ಹೆಣ್ಣಾಳು ದೊರೆಯುವುದರಿಂದ ತನ್ನ ಪ್ರಯತ್ನಕ್ಕೆ ಪ್ರೋತ್ಸಾಹ ಲಭಿಸುತ್ತದೆ ಎಂದು ಹಾರೈಸಿದ್ದನು. ಅಲ್ಲದೆ ಆಳುಗಳ ವಿಚಾರಕ್ಕಾಗಿಯೆ ಹಿಂದಿನಿಂದಲೂ ಸಿಂಬಾವಿಗೂ ಬೆಟ್ಟಳ್ಳಿಗೂ ಒಂದು ಸ್ಪರ್ಧಾ ಮನೋಭಾವ ಬೆಳೆದು, ಕೆಲವೊಮ್ಮೆ ಮನಸ್ತಾಪಕ್ಕೂ ಜಗಳಕ್ಕೂ ಕೂಡ ಕಾರಣವಾಗಿತ್ತುಬಿಟ್ಟಿತ್ತು. ನನ್ನ ತಂದೆ ಕರಿಸಿದ್ದಗೆ ಬೆಟ್ಟಳ್ಳಿ ಕೇರಿಯ ದೊಡ್ಡಬೀರನ ತಂಗಿ ಗಿಡ್ಡಿಯನ್ನು ತಂದಾಗಲೆ ಬೆಟ್ಟಳ್ಳಿ ಕಲ್ಲಯ್ಯಗೌಡರಿಗೂ ಭರಮೈಹೆಗ್ಗಡೆಯ ತಂದೆ ಸಿಂಬಾವಿಯ ದಿವಂಗತ ದುಗ್ಗಣ್ಣಹೆಗ್ಗಡೆಯವರಿಗೂ ಹೊಡೆದಾಟವಾಗುವುದರಲ್ಲಿತ್ತಂತೆ ಎಂಬುದು ಬಿದ್ದಿತ್ತು ಗುತ್ತಿಯ ಕಿವಿಗೆ, ಪೂರ್ವೇತಿಹಾಸರೂಪದಲ್ಲಿ. ಆಗ ಕಲ್ಲೂರು ಸಾಹುಕಾರ ಮಂಭಟ್ಟರ ಮಧ್ಯಸ್ತಿಕೆಯಲ್ಲಿ ಪಂಚಾಯಿತಿ ನಡೆದು, ಸಿಂಭಾವಿಯಕೇರಿಯ ಗುತ್ತಿಯ ಅಪ್ಪ ಕರಿಸಿದ್ದನ ತಂಗಿ ಸೇಸಿಯನ್ನು ಬೆಟ್ಟಳ್ಳಿ ಕೇರಿಯ ತಿಮ್ಮಿಯ ಅಪ್ಪ ದೊಡ್ಡಬೀರನಿಗೆ ಮದುವೆ ಮಾಡಿಸಿ, ಆಳಿಗೆ ಆಳು ಬದಲು ಬಂದು ತುಂಬಿಕೊಳ್ಳುವಂತೆ ಮಾಡಿ, ಎರಡು ಮನೆತನಗಳಿಗೂ ರಾಜಿ ಮಾಡಿಸಿದ್ದರಂತೆ. ಎರಡು ಮನೆತನಗಳೂ ಅಂತಹ ಜಗಳಗಳೂ ಅಂತಹ ರಾಜಿಗಳೂ ಅನೇಕ ಸಾರಿ  ಅನೇಕ ಕಾರಣಗಳಿಗಾಗಿ ನಡೆದಿದ್ದುವು. ಎರಡು, ಮನೆತನಗಳಿಗೂ ಪರಸ್ಪರ ನೆಂಟಸ್ತಿಗೆ, ಹೋಗಿ ಬರುವುದು, ಮಾತುಕತೆ ಎಂದಿನಂತೆ ನಡೆದುಕೊಂಡೇ ಬರುತ್ತಿದ್ದರೂ ಅದೆಲ್ಲ ಮೇಲುಮೇಲಿನ ವಿಷಯವಾಗಿತ್ತು; ಒಳಗೊಳಗೆ, ಅಂತರಂಗದಲ್ಲಿ, ಪರಸ್ಪರ ಸ್ಪರ್ಧಾಭಾವವೂ ಪ್ರತಿಷ್ಠೆಯ ಪೈಪೋಟಿಯೂ ಗವೆಯುತ್ತಿತ್ತು. ಒಡೆಯರ ಕೋಪೋಕ್ತಿಯ ಹೊಗೆಯ ಆ ಹಳೇಯ ಜಿದ್ದಿನ ಕಿಡಿಗಳೆ ಆಡುತ್ತಿದ್ದುವು ಎಂಬುದನ್ನು ಗುತ್ತಿ ಗ್ರಹಿಸಲಿಲ್ಲ. ಜೊತೆಗೆ, ತಮ್ಮ ಸ್ವಂತ ಮದುವೆಯ ಸಮಸ್ಯೆಯೆ ದಿನದಿನಕ್ಕೂ ಹೆಚ್ಚು ಹೆಚ್ಚು ಕಗ್ಗಂಟಾಗುತ್ತಿದ್ದು, ಅನಿಶ್ಚಯ ಪರಿಸ್ಥಿತಿಯಲ್ಲಿರುವಾಗ ಈ ಹಾಳು ಹೊಲೆಯ ತನ್ನ ಮದುವೆಯ ಕೆಂಜಿಗೆ ಹಿಂಡಿಲನ್ನು ಕಡಿದು ನನ್ನ ಮೇಲೆ ತಳ್ಳುತ್ತಿದ್ದಾನಲ್ಲಾ ಎಂಬ ಮದುವೆಯ ಕೆಂಜಿಗೆ ಹಿಂಡಿಲನ್ನು ಕಡಿದು ತನ್ನ ಮೇಲೆ ತಳ್ಳುತ್ತಿದ್ದಾನಲ್ಲಾ ಎಂಬ ಸಿಡುಕೂ ಅವರ ಸಿಟ್ಟಿನ ನುಡಿಗಳಿಗೆ ಕಾರಣವಾಗಿತ್ತು.

ಗುತ್ತಿಗೆ ತಟಕ್ಕನೆ ದಿಕ್ಕುಗೆಟ್ಟಂತಾಯಿತು. ಒಡೆಯರ ಬಲದ ಮತ್ತು ಬೆಂಬಲದ ಧೈರ್ಯದಿಂದ ಯಾವ ಸಾಹಸಕ್ಕೆ ಕೈಹಾಕಿದ್ದನೊ, ಯಾವ ಸಾಹಸವನ್ನು ಕೆಚ್ಚಿನಿಂದಲೂ ಹಿಗ್ಗಿನಿಂದಲೂ ಸಾಧಿಸಿಯೆ  ಬಿಟ್ಟಿದ್ದನೊ ಅದು ಈಗ ಅವಿವೇಕಸಾಹಸದಂತೆ ಅಪಾಯಕಾರಿ ತೋರತೊಡಗಿ, ಅವನ ಪ್ರಾಣದಲ್ಲಿ ಒಂದು ಅವ್ಯಕ್ತ ಭಯಸಂಚಾರವಾಯಿತು; ಮೂಕ ದುಃಖವೂ ಉಕ್ಕಿ ಬಂತು. ತಿಮ್ಮಿಯನ್ನು ತಾನು ರಾತ್ರಾರಾತ್ರಿ ಹಾರಿಸಿಕೊಂಡು ಬಂದಿದ್ದೇನೆ ಎಂಬುದನ್ನು ಆಗಲೆ ಒಡೆಯರಿಗೆ ತಿಳಿಸುವುದಾಗಿರಲಿಲ್ಲ ಅವನ ಇರಾದೆ. ಆದರೆ ಅವಳನ್ನು ಹಾರಿಸಿಕೊಂಡು ಬಂದು ತಾನು ಮದುವೆಯಾಗುವುದಕ್ಕೆ ಒಡೆಯರ ಅನುಮತಿಯನ್ನು ಮೊದಲು ಪಡೆದು ಆಮೇಲೆ ತಕ್ಕ ಸಮಯದಲ್ಲಿ ಹಾರಿಸಿಕೊಂಡು ಬಂದೆ ಎಂದು ಹೇಳುವುದು ಅವನ ಇಚ್ಛೆಯಾಗಿತ್ತು. ಆದರೆ ಈಗ? ಹಾರಿಸಿಕೊಂಡು ಬರುವುದಕ್ಕೆ ಅನುಮತಿ ನೀಡುವುದಿರಲಿ; ಬೆಟ್ಟಳ್ಳಿಗೌಡರಿಂದ ಹಣ ಪಡೆದು, ತಮ್ಮ ಸಾಲ ತೀರಿಸಿ, ನೀನೆ ಅಲ್ಲಿಗೆ ಹೋಗಿ, ಅವಳನ್ನು ಮದುವೆಯಾಗಿ, ಅವರ ಜೀತದಾಳಾಗಿ ಸುಖವಾಗಿರು – ಎನ್ನುತ್ತಿದ್ದಾರೆ! ಬಚ್ಚನಿಗೇ ಅವಳನ್ನು ಮದುವೆ ಮಾಡಬೇಕೆಂದು ಹಟತೊಟ್ಟಿರುವ ಗೌಡರು, ‘ನನ್ನ ಅಪ್ಪನಿಗೆ ನಾ ಹುಟ್ಟಿದ್ದರೆ’ ಎಂದೆಲ್ಲ ಏನೇನೋ ಆಣೆ ಭಾಷೆ ಹಾಕಿ ಪ್ರತಿಜ್ಞೆ ಮಾಡಿರುವ ಗೌಡರು, ನಾನು ಸಿಕ್ಕರೆ ನನ್ನನ್ನು ಜೀವಸಹಿತ ಬಿಟ್ಟಾರೆಯೆ? ನನ್ನ ಒಡೆಯರ ಬಲ ಮತ್ತು ಬೆಂಬಲ ದೊರೆಯದಿದ್ದರೆ ನಾನು ಕೆಟ್ಟೆ; ಬದುಕ ಬೇಕಾದರೆ ಊರು ಬಿಟ್ಟು ಕಾಡು ಸೇರುವುದೊಂದೇ ದಾರಿ;  ಇಲ್ಲದಿದ್ದರೆ ದೇಶಾಂತರ ಹೊಗಬೇಕು – ಈ ರೀತಿಯ ತರತರದ ಭಾವನೆ ಮತ್ತು ಆಲೋಚನೆಗಳ ಆವರ್ತಗರ್ತಕ್ಕೆ ಸಿಕ್ಕಿದಂತಾಗಿದ್ದ ಗುತ್ತಿಯ ಮನಸ್ಸು ತತ್ತರಿಸಿ, ಶರಣಾಗತಿಯ ಕೊಟ್ಟಕೊನೆಯ ಆಶ್ರಯವನ್ನು ನಿಶ್ಚಯಿಸಿತು.

ಹೆಗ್ಗಡೆ ಇನ್ನೂ ಕಜ್ಜಿ ತುರಿಸಿ ಮುಗಿಸಿರಲಿಲ್ಲ. ತುರಿಗಜ್ಜಿಯ ಹಣೆಯ ಬರಹವೆ ಹಾಗೆ! ಒಂದು ಕಡೆ ತುರಿಕೆ ಶುರುವಾಯಿತು ಅಂದರೆ ಅದನ್ನು ತುರಿಸಿತುರಿಸಿ ನವೆಯನ್ನು ಸಮಾಧಾನ ಸ್ಥಿತಿಗೆ ತರುವಷ್ಟರಲ್ಲಿಯೆ ಅದರ ಪಕ್ಕದ ಸೀಮೆಯಲ್ಲಿ ಆಂದೋಳನಕ್ಕೆ ಪ್ರಾರಂಭ! ಹರಿತವಾದ ಉಗುರಿನ ಕೈಬೆರಳುಗಳನ್ನು ಅಲ್ಲಿಗೆ ಕಳಿಸಿ ಆ ಕ್ರಾಂತಿಯನ್ನು ಹತ್ತಿಕ್ಕುವುದೆ ತಡ ಆ ಸ್ಥಳಕ್ಕೆ ಸ್ವಲ್ಪವೂ ಸಂಬಂಧವಿಲ್ಲದ ಇರುವ ತೊಡೆಯ ಸಂಧಿಯ ದೂರ ಪ್ರಾಂತದಲ್ಲಿ ಗಲಭೆ ಷುರು! ಹಾಳು ತುರಿಗಜ್ಜಿ! ಹೆಗ್ಗಡೆಗೆ ಸೇರಿದ್ದ ದೇಹಚಕ್ರಾಧಿಪತ್ಯವೆಲ್ಲ ತುರಿಗಜ್ಜಿಯ ಕ್ಷೋಭೆಗೆ ಒಳಗಾಗಿದ್ದುದರಿಂದ ಅವರು ಇನ್ನೂ ಕಜ್ಜಿ ತುರಿಸಿ ಪೂರೈಸಿರಲಿಲ್ಲ! ನೋಡುತ್ತಾರೆ: ಗುತ್ತಿ ಮೈಮೇಲೆ ಬಂದವನಂತೆ ಮುಖ ಊದಿಸಿ ಕೆಂಪಗೆ ಮಾಡಿಕೊಂಡು, ಕಣ್ಣೀರು ಸುರಿಸುತ್ತಾ, ಕೈ ಕೈ ಮುಗಿಯುತ್ತಾ, ಸೊಂಟ ಬಗ್ಗಿ ಮುಂಬರಿದು, ತೆಣೆಯ ಕೆಳಗೆ ಅಂಗಳದಲ್ಲಿ, ಹೆಗ್ಗಡೆಯವರಿಗೆ ನೇರ ಇದಿರಿನಲ್ಲಿ, ಬಡಿಗೆ ಬೀಳುವಂತೆ ಬೀಳುತ್ತಾ “ಅಯ್ಯಾ, ನಿಮ್ಮ ದಮ್ಮಯ್ಯ, ನನ್ನ ಕೈಬಿಡಬ್ಯಾಡಿ. ಸಾಯೋವರೆಗೂ ನಿಮ್ಮ ಗುಲಾಮನಾಗಿ ದುಡಿದು ರುಣ ತೀರಿಸ್ತೀನಿ “ ಎಂದು ಗದ್ಗದಿಸುತ್ತಾ ಉದ್ದಂಡ ನಮಸ್ಕಾರ ಮಾಡಿದ್ದಾನೆ!

ಹೆಗ್ಗಡೆಗೆ ಮೈಮೇಲೆ ಬಿಸಿನೀರು ಚೆಲ್ಲಿದಂತಾಯ್ತು. ದೈನಂದಿನ ತಟಸ್ಥಭಾವದಲ್ಲಿದ್ದ ಅವರ ಚೇತನ ಮಿಂಚನ ಚಾಟಿಗೆಂಬಂತೆ ತನ್ನ ಉದಾಸೀನವನ್ನೆಲ್ಲಾ ಕೊಡಹಿ ತಳ್ಳಿ ಎಚ್ಚರಗೊಂಡಿತು. ಗುತ್ತಿಯ ಅನಿರೀಕ್ಷಿತ ವರ್ತನೆ ಅವರ ಮನಸ್ಸನ್ನು ಹೆಡೆಯೆತ್ತಿ ನಿಲ್ಲಿಸಿತು. ಅದುವರೆಗೂ ಎಷ್ಟೆ ತುರಿಸಿಕೊಂಡರೂ ಶಮನಗೊಳ್ಳದೆ ಹತೋಟಿಗೆ ಬರದಿದ್ದ ತುರಿಗಜ್ಜಿಯ ಕೆರೆತವೂ ತಟಕ್ಕನೆ ನಿಂತು, ಅವರ ಪ್ರಜ್ಞಾಸೀಮೆಯಿಂದಲೆ ಗಡಿಪಾರಾಗಿ ಹೋಯಿತು. ಅಂಗಳದ ಮಣ್ಣಿನಲ್ಲಿ ಅಡ್ಡಬಿದ್ದು, ಎದ್ದುನಿಂತು, ಕೈಮುಗಿದುಕೊಂಡು ಅಂಗಲಾಚುತ್ತಿದ್ದ ಗುತ್ತಿಯನ್ನು ಎವೆಯಿಕ್ಕದೆ ನೋಡುತ್ತಾ ಅವನ ಮಾತಿಗೆ ಕಿವಿಹೊಟ್ಟರು:

“ನಾನೊಂದು ನಿಮ್ಮ ಕಾಲ ಕಸ! ಸಾಯೋವರೆಗೂ ನಿಮ್ಮ ಗುಲಾಮನಾಗಿ ದುಡಿದು ರುಣ ತೀರಿಸ್ತೀನಿ! ಅಯ್ಯಾ, ನಾನೇನು ನನಗಾಗಿ ಮಾಡಿದ್ದಲ್ಲ. ನಮ್ಮ ಧಣೀರ ಮಾನಮರ್ವಾದೆ ಕಾಪಾಡಕ್ಕಾಗಿ ನಾನು ಹಾಂಗೆ ಮಾಡಿದ್ದು….”

“ಏನು ಮಾಡಿದೆಯೋ ನೀನು?” ಒಡೆಯರ ಪ್ರಶ್ನೆಯನ್ನು ಗಮನಿಸದವನಂತೆ ಮುಂಬರಿದನು ಗುತ್ತಿ.

“ಆ ಲುಚ್ಚ! ಆ ನೀಚ! ಆ ಹೊಲೇರ ಕುರುದೆ! ಆ ಬಚ್ಛ, ಅಂವ ಮೂರುಕಾಸಿನ ಮನುಷ್ಯ. ನನ್ನ ಒಡೇರನ್ನ ನನ್ನ ಮುಂದೆ “ಅವನು ಇವನು ನೀನು ತಾನು” ಅಂತಾ ಮಾತಾಡಬೈದೇನು? ಹೇಳಿ! ನೀವೇ ಹೇಳಿ! ಅದಕ್ಕೆ ನಾನು ಮಾಡಿದ್ದು ಹಾಂಗೆ!….”

“ಏನು ಮಾಡಿದ್ದೊ? ಬಿಡಿಸಿ ಹೇಳೊ ಸರಿಯಾಗಿ.” ಹೆಗ್ಗಡೆಯ ಧ್ವನಿ ಮೃದುತರವಾಗಿ ಸಹಾನುಭೂತಿಸೂಚಕವಾಗಿತ್ತು. ಅದನ್ನು ಗ್ರಹಿಸಿದ ಗುತ್ತಿ ನಡೆದದ್ದೆಲ್ಲವನ್ನು ತನಗೆ ಪ್ರತಿಕೂಲವಾಗುವಂತಃ ಅಂಶಗಳನ್ನೆಲ್ಲ ತ್ಯಜಿಸಿಯೊ ತೇಲಿಸಿಯೊ ಭಾವಪೂರ್ಣವಾಗಿ  ವರದಿ ಮಾಡಿದನು. ಬೆಟ್ಟಳ್ಳಿಗೌಡರ ಪ್ರತಿಜ್ಞೆಯ ವಿಚಾರವಾಗಿ ಹೇಳುವಾಗ ಸಿಂಬಾವಿ ಹೆಗ್ಗಡೆಯವರಿಗೆ ಅವಮಾನಕರವಾಗಿ ಅವರನ್ನು ಕೆರಳಿಸುವಂತಹ ಅಲ್ಪಸ್ವಲ್ಪ ನಿಂದಾಂಶವನ್ನು ಸೇರಿಸಲು ಮರೆಯಲಿಲ್ಲ.

ಆಲಿಸುತ್ತಾ ಆಲಿಸುತ್ತಾ ಹೆಗ್ಗಡೆಯ ಹೃದಯದಲ್ಲಿ ಮನೆತನದ ರಚ್ಚು ಉಸಿರಾಡಿತು. ಹಲ್ಲು ಬಿಗಿದು ತುಟಿಗಚ್ಚಿತು.

“ಏನೋ? ನಿಜ ಹೇಳ್ತಿದ್ದಿಯೇನೋ?” ಹೆಗ್ಗಡೆಯ ಗಡಸುದನಿ.

“ಧರ್ಮಸ್ಥಳದ ದೇವರಾಣೆಗೂ! ನಾ ಹೇಳಿದ್ದು ಸುಳ್ಳಾಗಿದ್ರೆ ನನ್ನ ನಾಲಿಗೆ ಬಿದ್ದೇ ಹೋಗ್ಲಿ!”

“ಆ ಹುಡುಗಿ ಅದರ ಒಪ್ಪಗೆಯಿಂದಲೆ ನಿನ್ನ ಸಂಗಡ ಬಂತೇನೊ?”

“ಹೌದು, ನನ್ನೊಡೆಯಾ. ಅದು, ಅದರ ಅವ್ವ, ಇಬ್ಬರಿಗೂ ಒಪ್ಪಿಗೆ. ತಿಮ್ಮಿಯಂತೂ ಆ ಬಚ್ಛನ್ನ ಬಾಯಿಗೆ ಬಂದ್ಹಂಗೆ ಬೈತದೆ! ಅದರ ಅಪ್ಪನೂ ಕಿಲಸ್ತರ ಜಾತಿಗೆ ಸೇರೋ ಜಾತಿಕೆಟ್ಟಂವಗೆ ಕೊಡಾಕೆ ಒಪ್ಪಿಲ್ಲವಂತೆ. ಆದ್ರೆ ಗೌಡರ ಹೆದರಿಕೆಗೆ ಹ್ಞೂ ಅಂದಿದ್ನಂತೆ. ನಾ ಕಾಣಾದೆ ತಡ, ಅತ್ತೆ “ಅಪ್ಪಾ, ಹೆಂಗಾದ್ರೂ ಮಾಡಿ ನನ್ನ ಹುಡುಗೀನ ಬದುಕ್ಸು” ಅಂತ ಹೇಳಿ ನನ್ನ ಸಂಗಡ ರಾತಾರಾತ್ರಿ ಕಳ್ಸಿಕೊಟ್ಟು, ಬ್ಯಾರೆ ಯಾರಿಗೂ ಗೊತ್ತಿಲ್ದಂಗೆ. ನಂದೇನೂ ತಪ್ಪಿಲ್ಲ, ನನ್ನೊಡೆಯಾ!”

ಸೊಂಟಬಾಗಿ, ಕೈಮುಗಿದು, ದೀನವದನನಾಗಿ ನಿಂತಿದ್ದ ಸುದೃಢಕಾಯದ ತಮ್ಮ ಕುಳ್ಳಬಂಟನನ್ನು ಕೃಪಾದೃಷ್ಟಿಯಿಂದ ಸ್ವಲ್ಪ ಹೊತ್ತು ನೋಡುತ್ತಿದ್ದು ಭರಮೈಹೆಗ್ಗಡೆ ಏನೇನನ್ನೊ ಮನಸ್ಸಿನಲ್ಲಿ ನಿಶ್ಚಯಿಸಿ ಹೇಳಿದರು: “ನಿನ್ನ ಅಪ್ಪನ್ನ ಬಂದು ನನ್ನ ನೋಡಾಕೆ ಹೇಳೊ, ಹೋಗೋ!”

ಗುತ್ತಿ ಹರ್ಷಮುಖಿಯಾಗಿ, ಕೇರಿಯ ಕಡೆ ತಿರುಗುವುದಕ್ಕೆ ಬದಲು, ಜಟ್ಟಮ್ಮ ಹೆಗ್ಗಡತಿಯವರನ್ನು ಕಂಡು ಹೋಗಲು ಹಿತ್ತಲು ಕಡೆ ಬಾಗಿಲಿಗೆ ಹೋದನು: ತವರು ಮನೆಯ ಇಷ್ಟವಾರ್ತೆಗಳನ್ನೆ ಹೇಳಿ ಮನಸ್ಸು ಸಂತೋಪಡಿಸಿದರೆ ‘ಹೆಗ್ಗಡ್ತಮ್ಮೋರು’ ಏನಾದರೂ ‘ಬಾಯಿಗೆ ಕೊಡದೆ’ ಇರುತ್ತಾರೆಯೆ?