ಕಲ್ಲೂರು ‘ಗಡ್ಡದಯ್ಯ’ ಯಾರು? ಏನು? ಎಂತು? ಯಾರಿಗೊಬ್ಬರಿಗೂ ಸರಿಯಾಗಿ ಗೊತ್ತಿರಲಿಲ್ಲ. ಸಂನ್ಯಾಸಿ, ಬೈರಾಗಿ, ಗೋಸಾಯಿ ಎಂಬ ಇತರ ಹೆಸರುಗಳಿಂದಲೂ ಅವನನ್ನು ಕರೆಯುತ್ತಿದ್ದರು, ತುಸು ಮೇಲ್ವರ್ಗದ ಜನರು. ಆದರೆ ಸಾಮಾನ್ಯರು ಅವನನ್ನು ಅವನನ್ನು ಕರೆಯುತ್ತಿದ್ದರು. ‘ಗಡ್ಡ ದಯ್ಯ’ ಎಂದೇ.

ಆತನ ವಿಚಾರವಾದ ಅನೇಕ ಊಹಾಪೋಹಗಳು ಮಾತ್ರ ಗಾಳಿಸುದ್ದಿಗಳಾಗಿ ಹಬ್ಬಿದ್ದುವು.

ಕೆಲವರು ಅವನು ತಲೆ ಮರೆಸಿಕೊಂಡಿರುವ ರಾಜಮನೆತನದವನು ಎಂದು ಹೇಳುತ್ತಿದ್ದರು. ಬಹುಶಃ ಆತನ ಆಳುತನ, ಮೈಕಟ್ಟು, ಎತ್ತರ, ನಯನಕಾಂತಿ, ವದನತೇಜಸ್ಸು, ವ್ಯಕ್ತಿಭಂಗಿ ಇವುಗಳನ್ನು ಗಮನಿಸಿದರೆ ಹಾಗೆ ಯೇ ಕಾಣುತ್ತಿತ್ತು. ಸೀಪಾಯಿದಂಗೆ ಎಂದು ವಿದೇಶೀಯ ಆಕ್ರಮಣಕಾರರು ಕರೆದ ಭಾರತದ ಪ್ರಪ್ರಥಮ ಸ್ವಾಂತಂತ್ರ್ಯ ಸಂಗ್ರಾಮಾನಾಂತರ ರಾಷ್ಟ್ರದ ಅನೇಕ ಎಡೆಗಳಲ್ಲಿ ಬ್ರಿಟಿಷರಿಂದ ಪಾರಾಗುವ ಪ್ರಯತ್ನಗಳು ನಡೆದುವು. ಆ ಪ್ರಯತ್ನದಲ್ಲಿ ಅನೇಕ ದೊಡ್ಡ ಸಣ್ಣ ರಾಜರುಗಳೂ ಪಾಳೆಪಟ್ಟುಗಳು ಪಾಲುಗೊಂಡು, ವಿದೇಶಿಯರ ರಾಜತಂತ್ರಕ್ಕೆ ಬಲಿಯಾದುವು. ಆ ಪಾಳೆಯಗಾರರು ಮತ್ತು ರಾಜಮನೆತನದವರಲ್ಲಿ ಶತ್ರುವಿಗೆ ಶರಣಾಗತವಾದ ಮತ್ತು ಸೆರೆಸಿಕ್ಕದ ಬಹುಮಂದಿ ನಾನಾ ರೀತಿಗಳಲ್ಲಿ ತಲೆಮರಿಸಿಕೊಂಡರು. ಹಾಗೆ ಅಡಗುವ ತಂತ್ರಗಳಲ್ಲಿ  ಸನ್ಯಾಂಸಿ ಬೈರಾಗಿ ಗೋಸಾಯಿಗಳ ವೇಷದಲ್ಲಿ ಅವರ ಗುಂಪುಗಳಲ್ಲಿ ಸೇರಿಯೋ ಬಿಡಿಯಾಗಿಯೋ ಇದ್ದುಬಿಡುತ್ತಿದ್ದುದೂ ಒಂದಾಗಿತ್ತು. ಕೆಲವರಲ್ಲಿ ‘ಗಡದ್ದಯ್ಯ’ನೂ ಅಂತಹನೊಬ್ಬನು ಎಂಬ ಪ್ರತೀತಿ ಹರಡಿತ್ತು.

ಮತ್ತೆ ಕೆಲವರು ಅವನನ್ನು ಯಾವುದೋ ಗುರುಪೀಠದ ಜಗದ್ಗುರುವಾಗಿದ್ದು, ಅದಕ್ಕೆ ಬೇಸತ್ತು ತ್ಯಜಿಸಿಬಂದವನು ಎಂದು ಹೇಳುತ್ತಿದ್ದರು. ತ್ಯಜಿಸಿ ಬಂದದ್ದಕ್ಕೂ ಪರಸ್ಪರ ವಿರುದ್ದವಾದ ಕಾರಣಗಳನ್ನು ಕೊಡುತ್ತಿದ್ದರು. ನೀತಿಭ್ರಷ್ಟನಾದುದರಿಂದ ಓಡಿಸಲ್ಪಟ್ಟವನು ಎಂದು ಕೆಲವರು ಹೇಳಿದರೆ, ಸುತ್ತಮುತ್ತಲಿದ್ದ ನೀತಿಭ್ರಷ್ಟರನ್ನು ತಡೆಗಟ್ಟಲಾರದೆ, ಸಹಿಸಲಾರದೆ, ಅವರಿಂದ ಪಾರಾಗಿ ಬಂದವನು ಎಂದು ಇತರರು ಹೇಳುತ್ತಿದ್ದರು.

ಯಾವುದೋ ಕೊಲೆಯಲ್ಲಿ ಪಾತ್ರವಹಿಸಿ ತಲೆತಪ್ಪಿಕೊಂಡು ಬಂದಿರಬೇಕು ಎಂಬುದು ಮಂಜಭಟ್ಟರ ಊಹೆಯಾಗಿತ್ತು. ಅವನೆಂದಿಗೂ ಬ್ರಾಹ್ಮಣನಾಗಿರಲಾರ ಎಂಬುದೂ ಅವರ ಮತ್ತೊಂದು ಸಿದ್ಧಾಂತವಾಗಿತ್ತು. ಏಕೆಂದರೆ ಅವನಲ್ಲಿ ಬ್ರಾಹ್ಮಣದ ಬಹಿರ್ಲಾಂಛನಗಳಾವುವೂ ಇರಲಿಲ್ಲ.

ಅವನ ವಿಚಾರವಾಗಿ ಎಂತೊ ಅಂತೆಯೆ ಅವನ ಶಕ್ತಿ, ಮಹಾತ್ಮೆ, ದೌರ್ಜನ್ಯ, ದೌಷ್ಟ್ಯ, ದಯೆ, ದೈನ್ಯ, ಅನುಕಂಪೆ, ಉಪಕಾರ, ಕ್ರೌರ್ಯ, ಕಠೋರತೆ ಇತ್ಯಾದಿಗಳನ್ನು ಕುರಿತೂ ಪರಸ್ಪರ ವಿರುದ್ಧವಾದ ನಾನಾ ರೀತಿಯ ವದಂತಿಗಳು ಹಬ್ಬಿದ್ದುವು. ಕೆಲವರು, ಹುಟ್ಟಿನಿಂದಲೆ ಪ್ರಶಾಂತ ಸ್ವಭಾವದವರು, ಅವನನ್ನು ಮಹಾಯೋಗಿಶ್ವರನೆಂದೂ ಅಷ್ಟಸಿದ್ಧಿಗಳನ್ನೂ ಪಡೆದಿರುವ ಶಾಪಾನುಗ್ರಹ ಸಮರ್ಥನೆಂದೂ ವರ್ಣಿಸಿದರೆ; ಮತ್ತೆ ಕೆಲವರು ಜನ್ಮತಃ ನಿಂದಾಸ್ವಭಾವದವರು, ಅವನೊಬ್ಬ ಮಾಂತ್ರಿಕನೆಂದೂ, ದೆವ್ವ ಪಿಶಾಚಿಗಳನ್ನು ದುರ್ಮಂತ್ರದಿಂದ ವಶಪಡಿಸಿಕೊಂಡಿರುವನೆಂದೂ, ತನಗಿರುವ ಅದೃಶ್ಯವಾಗುವ ಶಕ್ತಿಯಿಂದ ಲಕ್ಷಣವಾಗಿರುವ ಹೆಣ್ಣುಗಳಿರುವಲ್ಲಿಗೆ ಪ್ರವೇಶಿಸಿ ಅವರ ಮಾನಾಪಹರಣ ಮಾಡುತ್ತಾನೆಂದೂ, ದುಃಶಕ್ತಿಗಳ ಸಹಾಯದಿಂದ ಪದಾರ್ಥಗಳನ್ನು ಕದ್ದು ತರಿಸಿ, ಜನರನ್ನು ದಂಗುಬಡಿಸಿ, ಅವರನ್ನು ಅವರರಿಯದಂತೆಯೆ ದೋಚುತ್ತಾನೆಂದೂ ಮಕ್ಕಳೊಡನೆ ಮಾತ್ರ ನೆಗಮಾತಾಡಿ ಅವರಿಗೆ ತಿನ್ನಲು ಹಣ್ಣು ಹಂಪಲುಗಳನ್ನು ಸೃಷ್ಟಿಸಿಯೆ ಕೊಡುತ್ತಾನೆಂದೂ ಮತ್ತೊಂದು ವದಂತಿ. ಅವನು ಕಲ್ಲೂರಿನ ಮನೆಗಳಲ್ಲಿ ಬ್ರಾಹ್ಮಣ ಶೂದ್ರರೆಂಬ ಭೇದವಿಲ್ಲದೆ ಅನನ್ ಭಿಕ್ಷೆ ಎತ್ತುತ್ತಿದ್ದುದು ಆಗೊಮ್ಮೆ ಈಗೊಮ್ಮೆ ಕಣ್ಣಿಗೆ ಬೀಳುತ್ತಿತ್ತದರೂ ಅದನ್ನು ತಾನು ಊಟ ಮಾಡದೆ ದನ ಕಾಯುವವರಿಗೋ ಹೊಳೆಯ ಮೀನುಗಳಿಗೊ ಬೀದಿ ನಾಯಿಗಳಿಗೋ ಹಾಕುತ್ತಿದ್ದನೆಂಬುದು ಅನೇಕರ ನಂಬುಗೆಯಾಗಿತ್ತು. ವಾಸ್ತವವಾಗಿ ಅವನು ತನಗೆ ಬೇಕಾದುದನ್ನೆಲ್ಲ ತನ್ನ ಯೋಗಶಕ್ತಿಯಿಂದಲೆ ಸೃಷ್ಟಿಸಿಕೊಂಡು ಭಕ್ಷಿಸುತ್ತಿದ್ದನಂತೆ! ತಾನಾರು ಏನು ಎಂಬ ಗುಟ್ಟು ಜನರಿಗೆ ತಿಳಿಯದಿರಲಿ ಎಂದೇ ಅವನು ಸಾಮಾನ್ಯನಂತೆ ತೋರಿಸಿಕೊಳ್ಳುವ ಸಲುವಾಗಿಯೆ ಅನ್ನ ಭಿಕ್ಷೆ ಎತ್ತುತ್ತಿದ್ದನಂತೆ!

ಇಂತಹ ಚಿತ್ರವಿಚಿತ್ರವಾದ ವದಂತಿಗಳನ್ನೆಲ್ಲ ಕೇಳಿದ್ದುದರಿಂದಲೆ ದೇವಯ್ಯ ಮುಕುಂದಯ್ಯ ಇಬ್ಬರೂ ತುಸು ಎಚ್ಚರಿಕೆಯಿಂದಲೆ, ಎದೆಡವ ಗುಟ್ಟುತಲೆ, ಕಲ್ಲು ಮಂಟಪದ ಸಮೀಪಕ್ಕೆ ಹೋಗಿದ್ದರು.

ಮುಂಗಾರಿನ ಮೊದಲ ಮಳೆಗಳಿಂದ ತುಸುವೆ ತುಂಬಿ ಬಂಡೆ ಗಳೆಡೆಯಡೆ ಹರಿಯುತ್ತಿದ್ದ ಹೊಳೆಯ ನೀರಿನ, ಮತ್ತು ಪಕ್ಕದಲ್ಲಿದ್ದ ಒಂದು ಮಹಾ ಅಶ್ವತ್ಥವೃಕ್ಷದ ಪರ್ಣಕೋಟಿಯ ಮರ್ಮರನಾದ ವಿನಾ ಸಂಪೂರ್ಣ ನಿಃಶಬ್ದವಾಗಿದ್ದ ಕಲ್ಲುಮಂಟಪ ನಿರ್ಜನವೂ ಆಗಿದ್ದಂತೆ ಭಾಸವಾಯಿತು, ಮೊದಲ ನೋಟಕ್ಕೆ ಬರಿಗಾಲಿನಲ್ಲಿದ್ದ ಮುಕುಂದಯ್ಯ ಮೆಟ್ಟು ಹಾಕಿಕೊಂಡಿದ್ದ ದೇವಯ್ಯನ ಕಡೆ ನೋಡಿ ಸನ್ನೆ ಮಾಡಲು ಅವನು ಮೆಟ್ಟುಗಳನ್ನು ಹಾಕಿಕೊಂಡಿದ್ದ ದೇವಯ್ಯನ ಕಡೆ ನೋಡಿ ಸನ್ನೆ ಮಾಡಲು ಅವನು ಮೆಟ್ಟುಗಳನ್ನು ಒಂದು ಮೆಟ್ಟಿನ ಬುಡದಲ್ಲಿ ಕಳಚಿಬಿಟ್ಟು ಹಿಂಬಾಲಿಸಿದನು. ನಿತ್ಯವೂ ಊದಿನಕಡ್ಡಿ ಹೊತ್ತಿಸುವ ಪ್ರದೇಶದಲ್ಲಿ ಸರ್ವದಾ ಎಂಬಂತೆ ಹೊಮ್ಮುತ್ತಿರುವ ಒಂದು ಪರಿಮಳ ಪವಿತ್ರತೆ ಮಂಟಪವನ್ನೆಲ್ಲ ವ್ಯಾಪಿಸಿತ್ತು. ಸಾಮಾನ್ಯವಾಗಿ ಊರಿನ ಸಮೀಪದಲ್ಲರಿವ ಹೊಳೆಯ ದಂಡೆಯ ಕಲ್ಲುಮಂಟಪಗಳಂತಲ್ಲದೆ ಆ ಮಂಟಪ ನಿರ್ಮಲವಾಗಿ ಕಾನಿಸಿತು. ಮಂಟಪದ ಒಂದು ಮೂಲೆಯಲ್ಲಿ ಕಾಷಾಯಧಾರಿಯಾಗಿದ್ದ ಒಬ್ಬ ಮನುಷ್ಯ ಮೃಗಚರ್ಮಾಸನದ ಮೇಲೆ ಧ್ಯಾನಸ್ಥನಾಗಿದ್ದಂತೆ ನಿಶ್ಚಲಭಂಗಿಯಲ್ಲಿ ನಿಮೀಲಿತ ನೇತ್ರನಾಗಿ ಕಾಣಿಸಿಕೊಂಡನು. ಮುಕುಂದಯ್ಯ ತೀರ ಬಳಿಸಾರದೆ ಸ್ವಲ್ಪ ದೂರದಲ್ಲಿಯೆ ನಿಂತು ದೀರ್ಘದಂಡ ಪ್ರಣಾಮ ಮಾಡಿದನು. ದೇವಯ್ಯನಿಗೂ ಹಾಗೆಯೆ ಅಡ್ಡಬೀಳುವ ಮನಸ್ಸಾದರೂ, ಅತೀ ಭಾವಪ್ರದರ್ಶನವು ಆತ್ಮಗೌರವಕ್ಕೆ ಹಾನಿಕರವೆಂಬ ಅಹಂತಾಪ್ರತಿಷ್ಠಿತನಾಗಿ, ನಿತಂತೆಯೆ ಕೈಮುಗಿದು ನಮಸ್ಕಾರ ಮಾಡಿದನು. ಒಬ್ಬನು ಅಡ್ಡಬಿದ್ದುದನ್ನಾಗಲಿ ಮತ್ತೊಬ್ಬನು ನಿಂತೇ ಕೈಮುಗಿದುದನ್ನಾಗಲಿ ಗಮನಿಸಿದಂತೆ ತೋರಲಿಲ್ಲ ಆ ‘ಗಡ್ಡದಯ್ಯ’ ಒಂದೆರಡು ನಿಮಿಷಗಳು ಹಾಗೆಯೆ ನಿಂತಿದ್ದು ಇಬ್ಬರೂ ಸದ್ದುಮಾಡದೆ ಕಲ್ಲುನೆಲದ ಮೇಲೆ ಚಕ್ಕಾಲುಬಕ್ಕಾಲು ಹಾಕಿ ಕೂತುಕೊಂಡರು.

ಹೆಚ್ಚು ಊರು ಸುತ್ತಿ, ಆಗತಾನೆ ಮಲೆನಡಿಗೆ ಪ್ರವೇಶಿಸಿದ ಪಾಶ್ಚಾತ್ಯ ನಾಗರಿಕತೆಯ ಮುಂಚೂಣಿಯಲ್ಲಿದ್ದ ಕ್ರೈಸ್ತ ಪಾದ್ರಿಗಳ ಸಂಗ ಮತ್ತು ಪ್ರಭಾವದಿಂದ ಹೊಸ ಹೊಸ ತರಹದ ಜನರ ವೇಷಭೂಷಣಗಳ ಪರಿಚಯವಿದ್ದ ದೇವಯ್ಯನಾಗಲಿ; ತನ್ನ ಒಂದೆ ಮನೆ ಹಳ್ಳಿಯ ಮತ್ತು ಅದರ ಸುತ್ತ ಮುತ್ತ ಇದ್ದ ಅಂತಹವೇ ಆದ ಹಳ್ಳಿಗಳ, ಅಥವಾ ಹೆಚ್ಚು ಎಂದರೆ, ಮೇಗರವಳ್ಳಿ, ಆಗುಂಬೆ ಮತ್ತು ತೀರ್ಥಹಳ್ಳಿಯಂತಹ ಕಿರಿಊರು ಕಿರುಪೇಟೆಗಳ ಪರಿಚಯ ಮಾತ್ರವಿದ್ದ ಮುಕುಂದಯ್ಯನಾಗಲಿ ಹಿಂದೆಲ್ಲ ಕಂಡಿದ್ದ ಯಾವ ಸನ್ಯಾಂಸಿ, ಬೈರಾಗಿ, ಗೋಸಾಯಿಯಂತೆಯೂ ಇರಲಿಲ್ಲ. ಅವರ ಮುಂದೆ ಪದ್ಮಾಸನಸ್ಥನಾಗಿ ಕಣ್ಣುಮುಚ್ಚಿ ಕುಳಿತಿದ್ದ ಆ ‘ಗಡ್ಡದ್ದಯ್ಯ’ ಆತನ ಕೆದರುಗೂದಲು, ಗಡ್ಡ, ಮೀಸೆ, ಮುಖ, ಮೈ, ಬಟ್ಟೆ ಎಲ್ಲವೂ ಆ ಮಂಟಪದಂತೆಯೆ ಶುಚಿರ್ಭೂತನಾಗಿ, ಶುಭ್ರವಾಗಿ, ನೈರ್ಮಲ್ಯ ವಾತಾವರಣವನ್ನು ಹೊರಸೂಸುತ್ತಿದ್ದವು. ತುಸು ತಿರಸ್ಕಾರಭಾವನೆಯಿಂದಲೆ ಅಲ್ಲಿಗೆ ಬಂದಿದ್ದ ದೇವಯ್ಯನಂತೂ ಆ ನೈರ್ಮಲ್ಯಕ್ಕೆ ಮನಸೋತನು. ಹಿಂದೆ ಅವನು ನೋಡಿದ್ದ ಸಂನ್ಯಾಸಿ ಬೈರಾಗಿ ಗೋಸಾಯಿಗಳೆಲ್ಲ ಶುಚಿಯಾಗಿರುವ ಸಭ್ಯರು ಯಾರೂ ಬಳಿಸಾರದಷ್ಟು ಗಲೀಜಾಗಿರುತ್ತಿದ್ದರು.

ನೋಡುವುದಕ್ಕೆ ಗಡ್ಡದಯ್ಯ ವಯಸ್ಸಾದವನಂತೆ ಕಾಣುತ್ತಿರಲಿಲ್ಲ, ದೇವಯ್ಯನಷ್ಟೆ ವಯಸ್ಸಾದಂತೆ ತೋರುತ್ತಿದ್ದನು. ತುಂಬ ಮೋಟಾಗಿದ್ದ ಆತನ ಗಡ್ಡವಾಗಲಿ ಕುಡಿಮೀಸೆಯಾಗಲಿ ಕ್ಷೌರಭಾವವನ್ನು ಸೂಚಿಸುತ್ತಿದ್ದುವೆ ಹೊರತು ದಾಡಿ ಬಿಟ್ಟ ಭಾವವನ್ನು ಮನಸ್ಸಿಗೆ ತರುತ್ತಿರಲಿಲ್ಲ. ಅವನ ಗಡ್ಡ, ಮೀಸೆ ಮತ್ತು ತಲೆಕೂದಲುಗಳ ಮಿಂಚುಗಪ್ಪಿನ ಹಿನ್ನಲೆಯಲ್ಲಿ ಮುಖದ ಮೈಬಣ್ಣ ಹೊಂಗಾಂತಿಯನ್ನು ಮನಸ್ಸಿಗೆ ತರುವ ಹಾಗಿತ್ತು. ಅವನು ಹಾಕಿಕೊಂಡಿದ್ದ ನೀಳವಾದ ‘ಕಪನಿ’ ಕುಳಿತಿದ್ದ ಅವನ ಮೈಯೆಲ್ಲವನ್ನೂ ಮುಚ್ಚಿತ್ತಾದರೂ ಆ ಮೈಕಟ್ಟಿನ ದೃಢ ಧೀರ ಬಲಿಷ್ಠ ಭಂಗಿಯನ್ನು ಮರೆ ಮಾಡಲು ಸಮರ್ಥವಾಗಿರಲಿಲ್ಲ. ಮೆಚ್ಚಿ ನೋಡುತ್ತ ಕುಳಿತಿದ್ದ ಅವರಿಗಿಬ್ಬರಿಗೂ ಆದ ಮತ್ತೊಂದು ಆಶ್ಚರ್ಯವೆಂದರೆ ಈ ಕಾಷಾಯಧಾರಿಯಲ್ಲಿ, ಸಾಧಾರಣವಾಗಿ ಅಂತಹ ಇತರರೆಲ್ಲರಲ್ಲಿಯೂ ತಪ್ಪದೆ ಇರುವಂತೆ, ಯಾವ ಭಸ್ಮಾವಲೇಪನವಾಗಲಿ ರುದ್ರಾಕ್ಷಿ ಸರವಾಗಲಿ ಗಾಂಜಾ ಸೇಯುವ ಗುಡಿಗುಡಿಯಂತಹ ಸಕಲಕರಣೆಗಳಾಗಲಿ ಕಂಡುಬರದಿದ್ದುದು. ಮತ್ತೂ, ಆತನ ಪಕ್ಕದಲ್ಲಿ ದೇವಯ್ಯ ರೆವಡೆಂಡ್ ಲೇಕಹಿಲ್ ದೊಡ್ಡಪಾದ್ರಿಗಳ ಹತ್ತಿರ ನೋಡಿದ್ದಂಥ, ಹೊಳೆವ ಅಚ್ಚಕ್ಷರದ ರಟ್ಟಿನ, ಒಂದೆರಡು ದಪ್ಪದಪ್ಪ ಪುಸ್ತಕಗಳಿದ್ದುದು! ಆ ಅಕ್ಷರಗಳು ಇಂಗ್ಲೀಷು ಎಂಬುದೂ ದೇವಯ್ಯಗೆ ಗೊತ್ತಾಗಿ, ಮುಕುಂದಯ್ಯನ ಕಿವಿಯಲ್ಲಿ ಏನನ್ನೊ ಪಿಸುಗುಟ್ಟಿದುದೆ ಕಾರಣವಾಯಿತೊ ಏನೋ ಎಂಬಂತೆ ಸಂನ್ಯಾಸಿ ಕಣ್ಣು ತೆರೆದು ಅವರನ್ನು ನೋಡಿದನು.

ಮುಕುಂದಯ್ಯ ದೇವಯ್ಯ ಇಬ್ಬರೂ ತೆಕ್ಕನೆ ಚಕಿರಾದಂತೆ ಬೆರಗುಸಿರೆಳೆದುಕೊಂಡರು, ಹಾಗಿತ್ತು ಆ ಕಣ್ಣಕಾಂತಿ! ಮೊದಲೆ ತೇಜಃಪುಂಜವಾಗಿ ಕಾಣಿಸುತ್ತಿದ್ದ ಮುಖ ಮಂಡಲ ಆ ಸುವಿಶಾಲ ನೇತ್ರದ್ವಯದ ದೃಷ್ಟಿದೀಪ್ತಿಗೆ ಇನ್ನಷ್ಟು ಭವ್ಯಸುಂದರವಾಯ್ತು;

ಇಬ್ಬರು ಅನೈಚ್ಛಿಕವೆಂಬಂತೆ ಮತ್ತೊಮ್ಮೆ ಕೈಮುಗಿದರು!

ತನ್ನ ವೈಯಕ್ತಿಕ ಸಮಸ್ಯೆಗಳಿಗೆ ಗಡ್ಡದಯ್ಯನಿಂದ ಏನಾದರೂ ಪರಿಹಾರ ದೊರೆಯಬಹುದೆಂದು ಪ್ರಶ್ನೆ ಕೇಳಲು ಕಾತರನಾಗಿ ಬಂದಿದ್ದ ಮುಕುಂದಯ್ಯ ತಾನು ಹಿಂದೆಂದೂ ನೋಡದೆ ಇದ್ದಂತಹ ಇಂತಹ ವಿಶೇಷ ರೂಪದ ಮತ್ತ ರೀತಿಯ ಸನ್ಯಾಸಿಗೆ ಅಂತಹ ಪ್ರಶ್ನೆಗಳನ್ನು ಹೇಗೆ ಹಾಕುವುದೆಂದು ನಾಚಿ ಹೆದರಿ ತನ್ನೊಳಗೆ ತಾನೆ ಸೆಡೆತುಕೊಳ್ಳುವಂತೆ ಮಾತನಾಡಲಾರದೆ ಕುಳಿತುಬಿಟ್ಟನು. ಮುಕುಂದಯ್ಯನಿಗೋಸ್ಕರವಾಗಿಯೆ ಅವನೊಡನೆ ಬಂದಿದ್ದ ದೆವಯ್ಯ, ಸ್ವಲ್ಪ ಹೊತ್ತು ಕಾದು ನೋಡಿ, ಮುಕುಂದಯ್ಯನ ಕಡೆ ಅರ್ಥಪೂರ್ಣವಾಗಿ ಮತ್ತೆ ಮತ್ತೆ ನೋಡಿದನು. ಅವನು ಬಾಯಿ ತೆರೆಯದಿದ್ದುದನ್ನು ಕಂಡು ತಾಣೆ ಮಾತಿಗೆ ಮೊದಲು ಮಾಡಿದನು; ಕ್ರೈಸ್ತ ಉಪದೇಶಿ ಮತ್ತು ಪಾದ್ರಿಗಳೊಡನೆ ಚರ್ಚೆ ನಡೆಸಿ ಅಭ್ಯಾಸವಿದ್ದ ಅವನು ತನ್ನ ಯಾವ ಕೌಟುಂಬಿಕ ಅಥವಾ ವೈಯಕ್ತಿಕ ಸಮಸ್ಯೆಗಳನ್ನೂ ಪ್ರಸ್ತಾಪಿಸದೆ ಹಿಂದೂಮತ, ಜಾತಿಪದ್ಧತಿ, ಬ್ರಾಹ್ಮಣರಿಂದ ಬ್ರಾಹ್ಮಣೇತರಿಗೆ ಆಗುತ್ತಿರುವ ಅನ್ಯಾಯ, ಹಿಂದೂ ದೇವರುಗಳಲ್ಲಿ ಕಂಡುಬರುವ ಅನೈತಿಕ ವ್ಯಾಪಾರ, ಕ್ರೈಸ್ತಮತ ಪ್ರಚಾರ, ಕ್ರೈಸ್ತರು ಕೈಗೊಳ್ಳುತ್ತಿರುವ ಉದ್ದಾರ ಕಾರ್ಯ -ಇತ್ಯಾದಿಗಳನ್ನೆ ಕುರಿತು ಪ್ರಶ್ನೆ ಕೇಳಿದನು.

ಸಂನ್ಯಾಸಿ ತುಂಬ ಸಂತೋಷದಿಂದಲೆ ಉತ್ತರ ಹೇಳಿದನು. ಆತನ ಧ್ವನಿ ಅಸಾಧಾರಣ ಗಂಭೀರವಾಗಿತ್ತು; ಆಲಿಸುವುದಕ್ಕೆ ಹಿತವೂ ಆಗಿತ್ತು. ಆತನು ಆಡುತ್ತಿದ್ದ ಸ್ಪಷ್ಟವೂ ಸ್ವಚ್ಛವೂ ಆಗಿದ್ದ ಗ್ರಂಥಭಾಷೆಯಿಂದ ಅವನ ಹುಟ್ಟುನುಡಿ ಕನ್ನಡವಾಗಿರಲಿಕ್ಕಿಲ್ಲ ಎಂಬಂತೆ ತೋರುತ್ತಿತ್ತು. ಕನ್ನಡಿಗರಲ್ಲದವರು ಬಹುಕಾಲ ಕನ್ನಡನಾಡಿನಲ್ಲಿದ್ದು ಕಲಿತ ಭಾಷೆಯಂತಿತ್ತು. ಆತನು ಆಡುತ್ತಿದ್ದ ಮಾತು. ಅಲ್ಲದೆ ಸಂಸ್ಕೃತ ಭೂಯಿಷ್ಠವಾಗಿ ಆಲಿಸುತ್ತಿದ್ದವರ ಯೋಗ್ಯತೆಗೆ ಮೀರಿ ಬಹು ಎತ್ತರದಲ್ಲಿಯೆ ಚರಿಸುವಂತಿತ್ತು. ಆದರೆ ಪಾದ್ರಿಯ ಉಪದೇಶಗಳನ್ನು ಕೇಳಿದ್ದ ದೇವಯ್ಯನಿಗೆ ತಾನು ಈಗ ಆಲಿಸುತ್ತಿದ್ದ ಈ ವಾಣಿಯ ಸ್ವರೂಪವೆ ಬೇರೆಯ ಅಂತಸ್ತಿನದು ಎಂದು ವೇದ್ಯವಾಯಿತು. ಇದರ ಧೀರತೆ, ದಿವ್ಯತೆ, ಬವ್ಯತೆ, ವಸ್ತು, ವಿನ್ಯಾಸಗಳಿಗೂ ಪಾದ್ರಿಯ ಉಪದೇಶಕ್ಕೂ ಒಡ್ಡರ ಬಂಡಿಗೂ ದೇವರ ತೇರಿಗೂ ಇರುವ ಅಂತರವಿತ್ತು.

ಸಂನ್ಯಾಸಿ ಹಿಂದೂಮತ, ಜಾತಿಭೇದ, ಮತಾಚಾರಮೌಢ್ಯ, ಬ್ರಾಹ್ಮಣ ಪುರೋಹಿತವರ್ಗದವರಿಂದ ಇತರರಿಗೆ ಆಗುತ್ತಿರುವ ಅನ್ಯಾಯ ಮತ್ತು ಅಪಚಾರ ಅವುಗಳನ್ನು ಕುರಿತ ದೇವಯ್ಯನ ಖಂಡನೆ ಮತ್ತು ಟೀಕೆಗಳಲ್ಲಿ ಬಹುಭಾಗವನ್ನು ಒಪ್ಪಿಕೊಂಡದ್ದು ಮಾತ್ರವಲ್ಲದೆ ದೇವಯ್ಯನಿಗಿಂತಲೂ ಸಮರ್ಥವಾಘಿ ಸ್ವಾರಸ್ಯಕರವಾಗಿ ನಿದರ್ಶನಪೂರ್ವಕವಾಗಿ ಅವುಗಳನ್ನು ವಿಸ್ತರಿಸಿದ್ದನು. ಆತನ ತೀಕ್ಷ್ಣ ವಿಡಂಬನೆಗೂ ನಿಶಿತ ಹಾಸ್ಯಕ್ಕೂ ವಶರಾಗಿ ದೇವಯ್ಯ ಮುಕುಂದಯ್ಯ ಇಬ್ಬರೂ ಒಮ್ಮೊಮ್ಮೆ ಬಿದ್ದುಬಿದ್ದು ನಕ್ಕೂ ಇದ್ದರು. ಆದರೆ ಯಾವಾಗ ವೇದಾಂತ ತತ್ವಗಳನ್ನು ಆಧರಿಸಿ, ಹಿಂದೂ ಧರ್ಮದ ಮತ್ತು ಭಾರತೀಯ ದೃಷ್ಟಿಯ ಸಮರ್ಥನೆಗೆ ಕೈಹಾಕಿದನೋ ಆಗ ಶ್ರೋತೃಗಳಿಬ್ಬರೂ ಒಂದು ಭೂಮಾನುಭೂತಿಯ ಅನುಭವದಲ್ಲಿ ಡಂಗಾಗಿ ಹೋಗಿದ್ದರು. ಹಿಂದೂಗಳಾಗಿದ್ದ ಅವರು ಮಹೋನ್ನತ ದಿವ್ಯ ದರ್ಶನದ ಆಸ್ತಿಗೆ ಹಕ್ಕುದಾರರಾಗಿದ್ದಾರೆ ಎಂಬುದನ್ನು ಆತನು ವಿವರಿಸಿದಾಗ ಆ ಮಂಟಪದಲ್ಲಿ ಒಂದು ದಿವ್ಯ ಆರಾಧನೆಯ ಸಾನ್ನಿಧ್ಯವೆ ಸೃಷ್ಟಿಯಾಗಿತ್ತು! ಅದರಲ್ಲಿಯೂ ಆತನು ಚಿಕಾಗೊ ಸರ್ವಧರ್ಮ ಸಮ್ಮೇಲನದಲ್ಲಿ ಅಂದಿಗೆ ಮೂರೇ ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದ ಎಂಬ್ಬೊಬ್ಬ ಸಂನ್ಯಾಸಿ ಹಿಂದೂ ಧರ್ಮದ ಮೇಲ್ಮೆಯ ವಿಚಾರವಾಗಿ ಉಪನ್ಯಾಸಮಾಡಿ, ಲೋಕವೆಲ್ಲ ಬೆರಗಾಗುವಂತೆ ದಿಗ್ವಿಜಯಿಯಾಗಿರುವ ಸಂಗತಿಯನ್ನು ರೋಮಾಂಚನ ಕಾರಿಯಾದ ಭಾಷಾರೀತಿಯಿಂದ ವರ್ಣೀಸಿದಾಗಂತೂ ದೇವಯ್ಯನಿಗೆ ಕುಳಿತುಕೊಳ್ಳಲಾಗಲಿಲ್ಲ; ಎದ್ದುನಿಂತು ಕುಣಿದಾಡಬೇಕೆಂಬ ಮನಸ್ಸನ್ನು ಹೇಗೊ ತಡೆದುಕೊಂಡನು.

ಸಂನ್ಯಾಸಿ ಮತ್ತೂ ಹೇಳಿದನು; “ಆ ಸ್ವಾಮಿ ವಿವೇಕಾನಂದರು ಇಂಡಿಯಾಕ್ಕೆ ಬರುವ ದಾರಿಯಲ್ಲಿದ್ದಾರೆ. ಬಂದಮೇಲೆ ಭರತಖಂಡವನ್ನೆಲ್ಲ ಸಂಚರಿಸಿ, ಬೋಧಿಸಿ, ಭಾಷಣಮಾಡಿ ಹೊಸದೊಂದು ಯುಗಶಕ್ತಿಯನ್ನೆ ಉದ್ಭೋಧನಗೊಳಿಸುತ್ತಾರೆ. ಹಿಂದೂಧರ್ಮವು ಬ್ರಾಹ್ಮಣ ಪುರೋಹಿತರಿಂದ ಪಾರಾಗಿ, ಕ್ರೈಸ್ತಾದಿ ಮತಪ್ರಚಾರಣೆಗೆ ದುರ್ಗಮವಗಿ, ತನ್ನ ವೇದೋಪನಿಷತ್ತಿನ ಶುದ್ಧ ವೇದಾಂತ ದರ್ಶನದಲ್ಲಿ ಪ್ರತಿಷ್ಠಿತವಾಗುವ ಕಾಲ ಸಮೀಪಿಸುತ್ತಿದೆ. ಅದಕ್ಕಾಗಿ ನಾನೂ, ನನ್ನಂತಹ ಇತರ ಕೆಲವರೂ, ದೇಶದಾದ್ಯಂತ ಸಂಚರಿಸಿ, ಸ್ಥಳೀಯ ದೇವತಾಶಕ್ತಿಗಳನ್ನು ಎಚ್ಚರಿಸುತ್ತಿದ್ದೇವೆ. ನಾನು ಸ್ವಾಮಿ ವಿವೇಕಾನಂದರು ಕೊಲಂಬೋ ನಗರಕ್ಕೆ ಬರುವಷ್ಟರಲ್ಲಿ ಈ ಕರ್ತವ್ಯವನ್ನು ಮುಗಿಸಿ, ಅವರನ್ನು ಎದುರುಗೊಂಡು ಸ್ವಾಗತಿಸಲು ಅಲ್ಲಿಗೆ ಹೊಗುವ ಹಾದಿಯಲ್ಲಿದ್ದೇನೆ.”

ಮುಕುಂದಯ್ಯ ದೇವಯ್ಯರಿಗೆ ಸಂನ್ಯಾಸಿ ಹೇಳಿದುದರಲ್ಲಿ ಮುಕ್ಕಾಲು ಮೂರು ವೀಸ ಬುದ್ಧಿ ಗಮ್ಯವಾಗಲಿಲ್ಲ; ಆದರೂ ಅದರ ತಾತ್ಸಾರವು ಭಾವಗೋಚರವಾಗಿ ಅವರು ಒಂದು ಹೊಸ ಜನ್ಮಕ್ಕೆ ಹುಟ್ಟಿಬಂದತಾಗಿತ್ತು. ಆ ಮಲೆನಾಡಿನ ಕೊಂಪೆಯ ಕಾಡಿಗೆ ಆಗ ಹೊರಲೋಕದ ಸುದ್ದಿ ಸಂಪರ್ಕವೆ ಇರಲಿಲ್ಲ. ಪತ್ರಿಕೆಗಳೂ ಇರಲಿಲ್ಲ; ಬೆಂಗಳೂರು ಮೈಸೂರುಗಳಲ್ಲಿ ಆಗ ತಾನೆ ಕನ್ನಡದಲ್ಲಿ ಹೊರಡಲು ಶುರುವಾಗಿದ್ದ ಪತ್ರಿಕೆಗಳೂ ಅಂಚೆಯ ಅಭಾವದಿಂದಾಗಿ ಇನ್ನೂ ಬರತೊಡಗಿರಲಿಲ್ಲ. ಪಾದ್ರಿ ಪ್ರವೇಶಿಸಿದ ಹಳ್ಳಿಯ ಒಂದೆರಡು ಮನೆಗಳಿಗೆ ಆಗಾಗ ತಿಂಗಳುಗಟ್ಟಲೆ ಹಳೆಯವಾಗಿದ್ದ ಮಿಶನರಿ ಪತ್ರಕೆಗಳು ಬಂದರೂ ಅವನ್ನು ಒದುತ್ತಿದ್ದುದೂ ಅಷ್ಟಕಷ್ಟೆ. ಹೀಗಿರಲು ಸಂನ್ಯಾಸಿ ಹೇಳಿದ್ದ ವಿದೇಶದ ಹೆಸರುಗಳೂ ವಿದೇಶದ ನಗರಗಳ ಹೆಸರುಗಳೂ ವಿವೇಕಾನಂದರ ಹೆಸರೂ ಉಪನಿಶತ್ತು ವೇದಾಂತ ಮುಂತಾದ ಹೆಸರುಗಳೂ ಎಷ್ಟರ ಮಟ್ಟಿಗೆ ತಾನೆ ಅರ್ಥವತ್ತಾದಾವು? ಅದರಲ್ಲಿಯೂ ಸಂನ್ಯಾಸಿ ‘ಸ್ಥಳೀಯ ದೇವಾಶಕ್ತಿಗಳನ್ನೂ ಎಚ್ಚರಿಸುತ್ತಿದ್ದೇವೆ.’ ಎಂದಾಗ, ಸುತಾರಾಂ ಭಾವವಾಗದ ದೇವಯ್ಯನು ಮುಕುಂದಯ್ಯನ ಕಡೆ ತಿರುಗಿನೋಡಿ, ಒಳಗೊಳಗೆ ನಕ್ಕು ಸಂದೇಹಗರಸ್ತನಾಗಿದ್ದನು. ಸಂನ್ಯಾಸಿಯಂತೂ ತನ್ನ ವಿಚಾರವಾಗಿ ದೇವಯ್ಯ ಹಾಕಿದ್ದ ಪ್ರಶ್ನೆಗಳಿಗೆಲ್ಲ ಯವ ಉತ್ತರವನ್ನೂ ಕೊಡದೆ ಮುಗುಳುನಕ್ಕಿದ್ದನಷ್ಟೆ!….

ಇವರಿಗಾಗಿ ಹುಡುಕಿ ಹುಡುಕಿ ಹೊಳೆದಂಡೆಯಿಂದ ಕೂಗುತ್ತಿದ್ದ ಬಚ್ಚನ ಕರೆ ಕೇಳಿಸಿದಾಗ ಮುಕುಂದಯ್ಯನು ದೇವಯ್ಯನ ಕಿವಿಯಲ್ಲಿ ಏನನ್ನೊ ಉಸುರಿದನು. ದೇವಯ್ಯ ಎದ್ದು ನಿಂತು, ಬಗ್ಗಿ ನಮಸ್ಕಾರ ಮಾಡಿ, ಮತ್ತೊಮ್ಮೆ ದರ್ಶನ ತೆಗೆದುಕೊಳ್ಳುತ್ತೇನೆ ಎಂದು ಹೇಳಿ, ಗೌರವ ಪ್ರದರ್ಶನಕ್ಕಾಗಿ ಹಿಂದು ಹಿಂದಕ್ಕೆ ತುಸು ನಡೆದು, ಆಮೇಲೆ ತಿರುಗಿಕೊಂಡು ಹೊರಟುಹೋದನು.

ದೇವಯ್ಯ ಹೋದಮೇಲೆ ತಾನೊಬ್ಬನೆಯೆ ಆದ ಮುಕುಂದಯ್ಯನಿಗೆ ಸಂನ್ಯಾಸಿಯ ಸಾನ್ನಿಧ್ಯದ ಮಹತ್ತು ಭಾರತರವಾದಂತಾಯ್ತು! ತನ್ನ ವೈಯಕ್ತಿಕ ಜೀವನದ ಸಮಸ್ಯೆಗಳಿಗೆ ‘ಗಡದ್ದಯ್ಯ’ನಿಂದ ಏನಾದರೂ ಸಹಾಯಪಡೆಯಲೆಂದೇ ಅವನು ಆವೊತ್ತು ಅಲ್ಲಿಗೆ ಬಂದಿದ್ದನು. ಅದಕ್ಕಾಗಿಯೆ ದೇಯಯ್ಯನನ್ನು ಕಳುಹಿಸಿ ತಾನೊಬ್ಬನೆ ಉಳಿದುಕೊಂಡಿದ್ದನು. ಆದರೆ ಭಾಯಿಂದ ಮಾತು ಹೊರಡದಾಯ್ತು! ಸುಮ್ಮನೆ ಕೈ ಜೋಡಿಸಿಕೊಂಡು ಸನ್ಯಾಸಿಯ ಪಾದಗಳ ಕಡೆ ನೋಡುತ್ತಾ ಕುಳಿತುಬಿಟ್ಟನು!

ಸಂನ್ಯಾಸಿಯೆ ಮಾತನಾಡಿಸಿದನು:

“ಏನೋ ಆರ್ತಿಯಲ್ಲಿ ಸಿಕ್ಕಿದಿರಲ್ಲವೆ ನೀವು?”

ಅರ್ಥವಾಗದಿದ್ದರೂ ಭಾವವಾಯಿತು; ಆದರೂ ಮುಕುಂದಯ್ಯ ಮಾತಾಡಲಿಲ್ಲ. ಅವನ ಕಣ್ಣಿಂದ ನೀರು ತೊಟ್ಟಿಕ್ಕಿತು!

ಸಂನ್ಯಾಸಿ ತುಸು ಹೊತ್ತು ಕಣ್ಣುಮುಚ್ಚಿಕೊಂಡು ಕುಳಿತಿದ್ದು, ಮತ್ತೆ ಕಣ್ಮೆರೆದು ಕರುಣಾಪೂರ್ಣಧ್ವನಿಯಿಂದ ಹೇಳಿದನು; “ಹೋದ ಜನ್ಮದಲ್ಲಿ ನೀವಿಬ್ಬರೂ ದಂಪತಿಗಳಾಗಿದ್ದಿರಿ. ಈ ಜನ್ಮದಲ್ಲಿಯೂ ಅದು ಮುಂದುವರಿದು ಸಾರ್ಥಕಗೊಳ್ಳುತ್ತದೆ. ಅದಕ್ಕಾಗಿ ನೀವು ದುಃಖಿಸಬೇಕಾಗಿಲ್ಲ. ನಿಮ್ಮ ಧರ್ಮ ಕರ್ಮ ನೀವು ಮಾಡುತ್ತಾ ಹೋಗಿ.”

“ಅವಳ ಲಗ್ನ ಇನ್ನೊಬ್ಬರೊಡನೆ ಆಗುವುದು ನಿಶ್ಚಯವಾಗಿದೆ. ತಮ್ಮ ಅನುಗ್ರಹಕ್ಕೆ ಪಾತ್ರನಾಗಿ ನನ್ನ ಇಷ್ಟಾರ್ಥ ನೆರವೇರಿಸಿಕೊಳ್ಳುವುದಕ್ಕಾಗಿ ಬಂದೆ.” ಮುಕುಂದಯ್ಯನ ಭಾಷೆ ಸಾನ್ನಿಧ್ಯಪ್ರಭಾವದಿಂದ ಏರಿ ನಡೆಯುತ್ತಿತ್ತು. ಅವನಿಗೆ ಸಂನ್ಯಾಸಿಯ ಸರ್ವಜ್ಞ ಸಾಮರ್ಥ್ಯದ ವಿಷಯದಲ್ಲಿ ಸಂದೇಹ ಮೂಡಲೂ ಇಲ್ಲ; ಸಮರ್ಥನೆ ಬೇಕೂ ಆಗಿರಲಿಲ್ಲ.ಆರ್ತನಾಗಿದ್ದ ಅವನ ಮನಸ್ಸು ಅದನ್ನು ಎಂದೋ ಒಪ್ಪಿಕೊಂಡುಬಿಟ್ಟಿತ್ತು.

ಸಂನ್ಯಾಸಿ ಮಾತನಾಡಲಿಲ್ಲ. ಸುಮ್ಮನೆ ಮುಗುಳುನಕ್ಕನಷ್ಟೆ. ಆದರೆ ಆ ಮುಗುಳುನಗೆಯಲ್ಲಿ ಎಂತಹ ಅಧಿಕಾರ ಮುದ್ರೆಯಿತ್ತು ಎಂದರೆ; ತಾನು ಹೇಳಿದ ಮೇಲೆ ಆಗಿಹೋಯ್ತು ಎಂಬ ದೃಢನಿಶ್ಚಯ ಭಾವ!

ಮುಕುಂದಯ್ಯ ತನ್ನ ಹಳೆಮನೆಯ ಬಾವ ದೊಡ್ಡಣ್ಣ ಹೆಗ್ಗಡೆಗೆ ಸಂಭವಿಸಸಿರುವ ದುರ್ಗತಿಯನ್ನು ವಿಸ್ಕೃತಿಯನ್ನು ಕುರಿತು ಅರಿಕಮಾಡಿಕೊಂಡು, ಆತನಿಗೆ ಪುನಃ ಸ್ಮರಣೆಯುಂಟಾಗಿ, ಮನೆಗೆ ಮರಳುವಂತೆ ಆಶೀರ್ವಾದ ಮಾಡಬೇಕೆಂದು ಕೇಳಿಕೊಂಡಾಗ ಸಂನ್ಯಾಸಿ ಕಣ್ಣುಮುಚ್ಚಿಕೊಂಡೆ ಎಲ್ಲವನ್ನೂ ಆಲಿಸಿದ್ದನು.

ಸ್ವಲ್ಪ ಹೊತ್ತಿನ ಮೇಲೆ ಧೀರ್ಘವಾಗಿ ಸುಯ್ದು ಕಣ್ಣೆರೆದನು;

“ಆತ ತಿರುಪತಿಯಲ್ಲಿಯ ಏಳೆಂಟು ವರ್ಷಗಳ ಪೂರ್ವದಲ್ಲಿಯೆ ಗತಿಸಿದ್ದಾನಲ್ಲಾ? ಮತ್ತೆ ಏಕೆ ಆ ಚಿಂತೆ?

“ಹಾಗೆಯೆ ಕೆಲವರು ಭಾವಿಸಿದ್ದರು. ಆದರೆ ಅವರು ಬದುಕಿದ್ದಾರೆ. ಗೋಸಾಯಿಗಳ ಜೊತೆ ಇದ್ದರು. ಈಗ ತೀರ್ಥಹಳ್ಳಿಯಲ್ಲಿ ಪೋಲೀಸರ ವಶದಲ್ಲಿ ಇದ್ದಾರೆ. ವೈದ್ಯರು ನೋಡಿಕೊಳ್ಳುತ್ತಾರೆ. ಅವರಿಗೆ ತಾನು ಯಾರು ಏನು ಎಂಬುದೆಲ್ಲ ಮರೆತುಹೋಗಿಬಿಟ್ಟಿದೆಯಂತೆ. ತನ್ನವರು ಯಾರೂ ಗುರುತಿಸಲು ಸಾಧ್ಯವಾಗಿಲ್ಲವೆಂಬಂತೆ. ಮೊನ್ನೆ ಅವರನ್ನು ಚೆನ್ನಾಗಿ ತಿಳಿದಿದ್ದ ನಮ್ಮ ಒಬ್ಬರು ಐಗಳು ಅಲ್ಲಿಗೆ ಹೊಗಿ ನೋಡಿಕೊಂಡೂ ಬಂದಿದ್ದಾರೆ. ನಮ್ಮ ಭಾವನೇ ಹೌದೆಂದೂ ನೇಕ ಚಿಹ್ನೆಗಳಿಂದ ಅವರು ಗುರುತಿಸಿದ್ದಾರೆ. ಹುಲಿಯಿಂದಾಗಿದ್ದ ಒಂದು ಗಾಯದ ಕಲೆಯಂತೂ ಚೆನ್ನಾಗಿ ಗುರುತು ಸಿಕ್ಕುವಂತಿದೆಯಂತೆ…. ನನ್ನ ಅಕ್ಕ ಏಳೆಂಟು ವರ್ಷಗಲಿಂದ ಕೊರಗುತ್ತಿದ್ದಾರೆ….”

ಸಂನ್ಯಾಸಿ ಇದ್ದಕ್ಕಿದ್ದಂತೆ ತನ್ನ ಕೈಯತ್ತಿ ಯಾವುದೋ ಭಾಷೆಯಲ್ಲ ಏನನ್ನೋ ಹೇಳಿದನೋ? ಹೇಳಿಕೊಂಡನೋ? ಮುಕುಂದಯ್ಯ ಮಾತು ನಿಲ್ಲಿಸಿ ಸುಮ್ಮನಾಗಿಬಿಟ್ಟನು.

“ನಾನು ಈಗ ನಿಮಗೆ ಹೇಳುವುದನ್ನು ನೀವು ಎಂದೂ ಯಾರಿಗೂ ಯಾವ ಸಂದರ್ಭದಲ್ಲಿಯೂ ಹೇಳದೆ ಇರುವುದಾದರೆ ನಿಮಗೆ, ಮನುಷ್ಯ ಸಾಮಾನ್ಯರಿಗೆ ಹೇಳಬಾರದ ಮತ್ತು ಹೇಳಿದರೂ ಅರ್ಥವಾಗಲಾರದ, ಕೆಲವು ರಹಸ್ಯಗಳನ್ನು ತಿಳಿಸುತ್ತೇನೆ; ನಿಮ್ಮ ಸಮಾಧಾನಕ್ಕಾಗಿ ಮತ್ತು ನಿಮಗೆ ಅರಿಯಲಸಾದ್ಯವಾದ ಒಂದು ಕಾರಣಕ್ಕಾಗಿ….”

“ಆಗಲಿ. ತಮ್ಮ ಅಪ್ಪಣೆ ಹಾಗಿರುವುದಾದರೆ ಅದನ್ನು ತಪಪ್ದೆ ಪಾಲಿಸುತ್ತೇನೆ.” ಕುತೂಹಲಾಗ್ನಿ ಕರಳಿ ಮಾತುಕೊಟ್ಟನು ಮುಕುಂದಯ್ಯ, ದೂರದಿಂದಲೆ ಸಂನ್ಯಾಸಿಯ ಪಾದದತ್ತ ಕೈಮುಗಿದು.

“ಎಂತಹ ಕಠಿಣಪ್ರಸಂಗ ಒದಗಿದರೂ ನಿಮ್ಮ ವಚನಪಾಲನೆಗೆ ಭಂಗ ಬರದಿರಲಿ. ನೀವೀಗ ನನ್ನಿಂದ ಕೇಳುವುದರ ಸತ್ಯತೆಯನ್ನು ನಿಮ್ಮ ಜನ್ಮದಲ್ಲಿಯೆ ಕಾಣುವಿರಿ. ನಾನು ಇದನ್ನೆಲ್ಲ ನಿಮಗೆ ಹೇಳುತ್ತಿರುವುದಕ್ಕೂ ಒಂದು ಕಾರಣವಿದೆ. ನಾನು ನಿಮಗೆ ಆಗ ತಿಳಿಸಿದೆನಲ್ಲಾ ಆ ಸ್ವಾಮಿ ವಿವೇಕಾನಂದರಿಮದ ಜಾಗ್ರತವಾಗುವ ಯುಗಧರ್ಮ ಶಕ್ತಿಗೆ ಸೇವೆ ಸಲ್ಲಿಸುವ ಚೇತನಗಳು ನಮ್ಮ ಸಂತಾನರಲ್ಲಿ ಮುಂದೆ ಸಂಭವಿಸಲಿವೆ! ಒಂದು ರೀತಿಯಿಂದ ಕೆಲವಾಗಲೆ ಸಂಭವಿಸಿಯೂ ಆಗಿದೆ!….

ತನಗೆ ಗ್ರಾಹ್ಯವಾಗದ ಯಾವುದೋ ಒಂದು ಅನ್ಯಲೋಕದಲ್ಲಿ ಸಂಚರಿಸುತ್ತಿರುವಂತೆ ಮುಕುಂದಯ್ಯ ಬೆರಗುಹೊಡೆದು ಆಲಿಸತೊಡಗಿದನು, ತನ್ನ ಗ್ರಾಮಿಣ ಬುದ್ದಿಯನ್ನು ಆದಷ್ಟು ಏಕಾಗ್ರತೆಗೊಳಿಸಿ ಗ್ರಹಿಸಲು ಪ್ರಯತ್ನಿಸುವವನಂತೆ.

“ತೀರ್ಥಹಳ್ಳಿಯಲ್ಲಿ ಇರುವುದೇನೋ ನಿಮ್ಮ ಬಾವನಾಗಿದ್ದವರ ಶರೀರವೆ! ಆದರೆ ಅವರೊಳಗಿರುವುದು ಅವರ ಜೀವವಲ್ಲ. ಅವರ ಮರಣ ಸಮಯದಲ್ಲಿ ಅಲ್ಲಿಯೆ ಅಕಾಲ ಮೃತ್ಯುವಿಗೆ ತುತ್ತಾಗಿದ್ದು ಇನ್ನೂ ಸಮೆಯಿಸುವ ಕರ್ಮವಿದ್ದ ಒಬ್ಬ ಬೈರಾಗಿಯ ಜೀವ ಅದನ್ನು ಅಕ್ರಮಿಸಿದೆ. ಅದು ಇಂದೋ ನಾಳೆಯೋ ತನ್ನ ಪ್ರಾರಬ್ಧ ಮುಗಿದೊಡನೆಯೆ ಆ ಶರೀರವನ್ನು ತ್ಯಜಿಸುತ್ತದೆ…. ಇದೆಲ್ಲ ತಿಳಿಯದೆ ಇದ್ದಿದ್ದರೆ ನೀವು ಹೇಗೆ ವರ್ತಿಸುತ್ತಿದ್ದಿರೋ ಹಾಗೆಯೇ ವರ್ತಿಸಬೇಕು; ಗೊತ್ತಾಯಿತೆ? ನಿಮ್ಮ ಈ ಜ್ಞಾನವೆಲ್ಲ ಸಾಕ್ಷೀಪ್ರಜ್ಞೆಯಾಗಿಯೆ ಉಳಿಯಬೇಕು. ಭಗವಂತನಿಗೆ ಪ್ರಾರ್ಥನೆ ಸಲ್ಲಿಸುವುದೊಂದಲ್ಲದೆ ಬೇರೆ ಯಾವ ಕ್ರಿಯೆಯೂ ಕರ್ಮವೂ ನಿಮ್ಮ ಜ್ಞಾನದ ಫಲವಾಗಿ ನಿಮ್ಮಿಂದ ಹೊಮ್ಮಬಾರದು. ನೀವು ಈ ವಿಚಾರದಲ್ಲಿ ಅತ್ಯಂತ ನಿಸ್ಸಂಗತ್ವವನ್ನು ಸಾಧಿಸಬೇಕು. ಇಲ್ಲದಿದ್ದರೆ ಅನಗತ್ಯವಾದ ಕ್ಲೇಶ ಕಷ್ಟ ಜಟಿಲತೆಗಳಿಗೆ ಕಾರಣರಾಗುತ್ತೀರಿ…. ತಿರುಪತಿಗೆ ಹೋಗಿದ್ದ ಆ ನಿಮ್ಮ ಬಾವ ಆಗಲೆ ಇಲ್ಲಿ ಜನ್ಮವೆತ್ತಿದ್ದಾರೆ…. “ಕ್ಷೌರದ ಅಲಗಿನ ಮೇಲೆ ನಿಂತದ್ದ ಮುಕುಂದಯ್ಯನ ಕುತೂಹಲವನ್ನು ಗಮನಿಸಿ ಸಂನ್ಯಾಸಿ ಹೇಳಿದನು; “ಇದಕ್ಕೆಲ್ಲ ಅಷ್ಟೊಂದು ವಿಸಮಯ ಏಕೆ? ಇದೆಲ್ಲ ನಿತ್ಯವೂ ಸೂಕ್ಷ್ಮ ಲೋಕಗಳಲ್ಲಿ ನಡೆಯುತ್ತಿರುವ ಸಾಮಾನ್ಯ ವ್ಯಾಪಾರ…. ನಿಮ್ಮ ಜೊತೆಯಲ್ಲಿ ಬಂದಿದ್ದು ಈಗ ತಾನೆ ಹೊರಟು ಹೋದರಲ್ಲಾ ಅವರ ಮಗನಾಗಿ!….”

ಮುಕುಂದಯ್ಯನಿಗೆ ತಡೆಯಲಾಗಲಿಲ್ಲ; “ಅವರು ನಮ್ಮ ಪುಟ್ಟಕ್ಕನ ಗಂಡ?” ಎಂದು ಏಕೊ ಏನೊ ತೊದಲಿಬಿಟ್ಟನು.

ಸಂನ್ಯಾಸಿ ಚಿಕ್ಕ ಹುಡುಗನ ಬೆಕ್ಕಸಕ್ಕೆ ದೊಡ್ಡವರು ನಗುವಂತೆ ನಕ್ಕು ಮುಂದುವರಿಸಿದನು; “ತಿರುಪತಿಯಲ್ಲಿ ತೀರಿಕೊಂಡ ನಿಮ್ಮ ಬಾವನ ಸಹಧರ್ಮಿಣಿ, ನೀವು ಈ ಜನ್ಮದಲ್ಲಿ ಮದುವೆಯಾಗಬೇಕೆಂದಿರುವ ನಿಮ್ಮ ಪೂರ್ವಜನ್ಮದ ಪತ್ನಿಯಲ್ಲಿಯೆ, ನಿಮ್ಮ ಮಗಳಾಗಿ ಹುಟ್ಟಿ, ತನ್ನ ಹಿಂದಿನ ಜನ್ಮದ ಗಂಡನನ್ನೇ ಮದುವೆಯಾಗುತ್ತಾಳೆ!….

ಭಾವಾವೇಶದಲ್ಲಿ ಮುಕುಂದಯ್ಯನಿಗೆ ಮೆದುಳೆಲ್ಲ ಆವಿಯಾಗಿ ಬಿಟ್ಟಿತೊ ಎನ್ನುವಂತಾಗಿತ್ತು. ಆದರೂ ಧೈರ್ಯಮಾಡಿ ಹೇಳಿಯೆ ಬಿಟ್ಟನು: “ನಮ್ಮ ದೊಡ್ಡ ಅಕ್ಕ ಇನ್ನೂ ಬದುಕಿದ್ದಾರೆ. ಇವತ್ತಿನ ಸತ್ಯನಾರಾಯಣ ವ್ರತಕ್ಕಾಗಿ ದೇವಸ್ಥಾನಕ್ಕೆ ಬಂದಿದ್ದಾರೆ. ಅಲ್ಲಿ ಅವರಿಗೆ ಏನೊ ಮೈಮೇಲೆ ಬಂದುಬಿಟ್ಟಂತಾಗಿ ದೇವರಿಗೆ ಮೊರೆಯಿಟ್ಟರು!….”

“ಬದುಕಿರುವವರೂ ಸಾಯುತ್ತಾರೆ; ಸತ್ತವರು ಮತ್ತೆ ಹುಟ್ಟುತ್ತಾರೆ. ಹೀಗೆ ಸಾಗುತ್ತಿದೆ ಭಗವಂತನ ಲೀಲೆ!….ನೀವಿನ್ನು ಹೊರಡಿ. ನಿಮಗಾಗಿ ಕಾಯುತ್ತಿದ್ದಾರೆ. ನಿಮಗೆ ದೇವರು ಒಳ್ಳೆಯದು ಮಾಡಲಿ!” ಎಂದು ಸಂವಾದವನ್ನು ಸಟಕ್ಕನೆ ತುಂಡುಗಡಿದು ಸಂನ್ಯಾಸಿ ಎದ್ದು ನಿಂತನು. ಇನ್ನೂ ಏನೇನನ್ನೋ ಕೇಳಬೇಕೆಂದಿದ್ದ ಮುಕುಂದಯ್ಯ ಅತ್ಯಂತ ಭಕ್ತಿಭಾವದಿಂದ ಆತನ ಪಾದತಲದಲ್ಲಿ ಅಡ್ಡಬಿದ್ದು, ಎದ್ದುನಿಂತು, ಏನಾದರೂ ಪ್ರಸಾದ ಕೊಡಬಹುದೇ ಎಂದು ಒಂದು ಕ್ಷಣ ನಿರೀಕ್ಷಿಸಿ, ಅಂತಹ ಸೂಚನೆ ಏನೂ ಕಾಣದಿರಲು ಅಲ್ಲಿಂದ ಹೊರಟನು.

ಆಗತಾನೆ ಉದಯವಾದಂತೆ ತೋರಿತು. ಅವನಿಗೆ ಹೊರಗಡೆಯ ಪ್ರಪಂಚ! ಅದೇ ಹೊಳೆ, ಅದೇ ಹೊಳೆಯ ದಂಡೆ, ಅದೇ ಅಶ್ವತ್ಥವೃಕ್ಷ, ಅದೇ ಅರಳೀಕಟ್ಟೆ, ಅದೇ ಕಲ್ಲೂರು ದೇವಸ್ಥಾನ, ಅದೇ ಮನೆಗಳು-ಆದರೆ ಮುಕುಂದಯ್ಯನಿಗೆ ಇನ್ನೆಂದಿಗೂ ಆ ಪ್ರಪಂಚ ಮೊದಲಿನ ಪ್ರಪಂಚವಾಗಿರಲು ಸಾಧ್ಯವಿರಲಿಲ್ಲ. ತನ್ನಲ್ಲಿ ಉನ್ಮೇಷಿತವಾದ ನವೋತ್ಥಾನವನ್ನು ಸಾಧಾರಣತೆಯ ಸೋಗಿನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಹುದುಗಿಸಿಕೊಂಡು ದೇವಸ್ಥಾನಕ್ಕೆ ಹೋದನು.

ಬ್ರಾಹ್ಮಣರ ಅನ್ನಸಂತರ್ಪಣೆ ಮುಗಿದು, ಶೂದ್ರರ ಊಟ ಪ್ರಾರಂಭವಾಗಿತ್ತು. ತನಗೆ ಏನೊಂದೂ ವಿಶೇಷ ಸಂಭವಿಸದವನಂತೆ ಹೋಗಿ ಪಂಕ್ತಿಯಲ್ಲಿ ಕುಳಿತುಕೊಂಡನು. ಹಾರುವರು ಹಾಕಿದ ಊಟದ ಸವಿಗೆ ಕಾಡು ಧರ್ಮು ತಿಮ್ಮು ಏನೇನೊ ಮಾತಾಡಿಕೊಳ್ಳುತ್ತಾ ನಗುತ್ತಾ ಉತ್ಸಾಹದಿಂದ ಉಣ್ಣುತ್ತಿದ್ದರು. ಆ ಹುಡುಗರ ಕಡೆ ನೋಡುತ್ತಾ ಮುಕುಂದಯ್ಯ ‘ಇವರಲ್ಲಿ ಯಾರು ಯಾರಾಗಿರಬಹುದು?’ ಎಂದುಕೊಂಡನು. ಪ್ರಪಂಚವನ್ನೆಂತೊ ಅಂತೆ ಆ ಮಕ್ಕಳನ್ನೂ ಅವನು ಹಿಂದೆ ನೊಡುತ್ತಿದ್ದಂತೆ ನೋಡಲು ಸಾದ್ಯವಾಗಲೆ ಇಲ್ಲ. ಕಣ್ಣು ಹೊರಳಿಸಿ ತನ್ನ ಹಳೆಯಮನೆಯ ಅಕ್ಕಯ್ಯ, ರಂಗಮ್ಮ ಹೆಗ್ಗಡತಿಯವರು, ಕೂತಿದ್ದ ದಿಕ್ಕಿಗೆ ನೋಡಿದನು. ಚೆಲುವಯ್ಯ ಕಣ್ಣಿಗೆ ಬಿದ್ದನು. ಅದೊಂದು ಅದ್ಭುತ ನಾಟಕದ ಲೀಲಾದೃಶ್ಯವಾಗಿ ತೋರಿ, ಮುಕುಂದಯ್ಯನ ಮುಖ ಭಾವದಿಂದ ಕೆಂಪಾಯಿತು; ತೊಟ್ಟಿಕ್ಕುವ ಅಶ್ರುವನ್ನು ಅಂಗಿತೋಳಿನಿಂದ ಒರಸಿಕೊಂಡು, ಪಂಚೆಯ ಅಂಚಿನಿಂದ ಮೂಗನ್ನು ಶುಚಿಮಾಡಿ, ಭಾವಗೋಪನಕ್ಕಾಗಿ ಬಗ್ಗಿ ಉಣತೊಡಗಿದನು.